೧೩

ಕೊನೆಯದಾಗಿ, ಬೇಂದ್ರೆಯವರು ಅತ್ಯಂತ ಜನಪ್ರಿಯವಾದ ‘ಹುಬ್ಬಳ್ಳಿಯಾಂವಾ’ (“ಸಖೀಗೀತ”) ಎಂಬ ಹಾಡೊಂದನ್ನು ಪರಿಶೀಲಿಸಿ ನೋಡಬಹುದು.

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರ ಸರತಿ ಬಂದ ಹೋದಾಂವಾ |||

ಎಂದು ಆರಂಭವಾಗುವ ಈ ಕವಿತೆ ಮೊದಲ ಎರಡು ಸಾಲುಗಳಲ್ಲಿಯೇ ತನ್ನ ಧಾಟಿ, ಪಲ್ಲವಿ ಮತ್ತು ಆಡುಮಾತಿನ ಬಳಕೆಯಿಂದಾಗಿ ಇದೊಂದು ಹಾಡು, ಅದರಲ್ಲೂ ವಿಶೇಷವಾಗಿ ತತ್ವಪದಗಳ ರೀತಿಯದು ಎಂದು ಸೂಚಿಸುತ್ತದೆ. ಕವಿತೆಯ ನಾಯಕನಾದ ತರುಣ ಪ್ರಿಯಕರನ ರೂಪ ಮುಂದಿನ ನುಡಿಗಳಲ್ಲಿ ಹಲವು ವಿವರಗಳಿಂದ ತುಂಬಿಕೊಳ್ಳುತ್ತದೆ. ಅವನು-

ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂ ಮೀಸಿ ತೀಡಿಕೋತ ಉಬ್ಬ ಹಾರಿಸಾಂವಾ

ಇವು ಉತ್ತರ ಕರ್ನಾಟಕದ ಒಂದು ಕಾಲದ ಪೌರುಷದ ಲಕ್ಷಣಗಳು. ಅವನ ಚೇಷ್ಟೆಗಳು ಅಷ್ಟೇ ವಿವರವಾಗಿ ಬಂದಿವೆ:

ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾs ಹಾಡಾಂವಾ || ಇನ್ನೂ ಯಾಕ

***

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರ ಇದ್ದುಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈ ಮಾಡಿದರ ಹಿಡs ಬಿಡಾಂವಾ || ಇನ್ನೂ ಯಾಕ

ಅವಳೆಂದರೆ ಅವನಿಗೆ ಬಹಳ ಪ್ರೀತಿ. ಪ್ರೀತಿಯನ್ನು ತೋರಿಸುವ ಅವನ ರೀತಿಗಳೂ ಹಲವು. ತರತರದ ಪ್ರೀತಿಯ ಮಾತುಗಳಿಂದ ಆತ ಅವಳನ್ನು ರಮಿಸುತ್ತಾನೆ. ರಸಿಕನಾಗಿ ಅವಳೊಡನೆ ಆಟವಾಡುತ್ತಾನೆ.

ಚಹಾದ ಜೋಡಿ ಚಾಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿಸಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀ ಹಾಂಗ ಎದ್ಯಾಗ ನಟ್ಟಾಂವಾ || ಇನ್ನೂ ಯಾಕ

ಅವನು ಹುಟ್ಟಾ ನಗೀಕ್ಯಾದಿಗಿ ಮುಡಿಸಿಕೊಂಡ ನಗೆಮುಖದ ಚೆಲುವ. ಅವನು ಕಣ್ಣಿನಲ್ಲಿಯ ಗೊಂಬೆಯಂತೆ ಅವಳ ಎದೆಯಲ್ಲಿ ಗಟ್ಟಿಯಾಗಿ ನಟ್ಟುಬಿಟ್ಟಿದ್ದಾನೆ. ಅವನ ಪ್ರೀತಿ ಈ ಜನ್ಮಕ್ಕೆ ಸೀಮಿತವಾದದ್ದಲ್ಲ –

ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ || ಇನ್ನೂ ಯಾಕ

‘ಗೆಣೆಯಾ’ ಎಂದರೆ ಉತ್ತರ ಕರ್ನಾಟಕದ ದೇಸಿಯಲ್ಲಿ ‘ಗೆಳೆಯ’ ಎಂಬ ಅರ್ಥದೊಂದಿಗೆ ‘ಮಿಂಡ’, ‘ಪ್ರಿಯಕರ’ ಎಂಬ ಇನ್ನೊಂದು ಅರ್ಥವೂ ಇದೆ. ‘ಗೆಣತಿ’ ಎಂದರೆ ‘ಗೆಳತಿ’ಯೂ ಹೌದು. ಆದರೆ ‘ಮೈ ಮೇಲಿನ ಕಲೆ’, ‘ಕಪ್ಪು ಮಚ್ಚೆ’ ಎಂಬ ಅರ್ಥವೂ ಅದಕ್ಕಿದೆ. ಎಂದರೆ ಅದು ಜನ್ಮದೊಂದಿಗೇ ಬಂದ ಗೆಳೆತನ ಎಂದೂ ಆಗುತ್ತದೆ. ಆದ್ದರಿಂದಲೇ ಅವನು ಜನ್ಮಾಂತರದ ಪ್ರೀತಿಯ ಮಾತುಗಳನ್ನಾಡುತ್ತಾನೆ.

ಹಾಡಿನ ನಾಯಕಿ ಒಬ್ಬ ‘ಜೋಗತಿ’; ಎಲ್ಲಮ್ಮಂಥ ದೇವರಿಗೆ ಮೀಸಲಾದವಳು:

 ತಾಳೀ ಮಣಿಗೆ ಬ್ಯಾಳೀ ಮಣಿ ನಿನಗ ಬೇಕೇನಂದಾಂವಾ
ಬಂಗಾರಹುಡಿಲೇ ಭಂಡಾರಾನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನs ಅಂದಾಂವಾ || ಇನ್ನೂ ಯಾಕ

ತಾಳೀಮಣಿ, ಬ್ಯಾಳೀ ಮಣಿ ಜೋಗತಿಯವರಿಗೆ ಸಂಬಂಧಿಸಿದ ವಸ್ತುಗಳು. ಭಂಡಾರವಂತೂ ಎಲ್ಲಮ್ಮನಿಗೆ ಮತ್ತು ಆಕೆಯ ಭಕ್ತರಿಗೆ ಧರಿಸಿಕೊಳ್ಳಲು ಬೇಕಾದ ಹಳದಿ ಬಣ್ಣದ ಒಂದು ಮುಖ್ಯ ವಸ್ತು. ಅವಳಲ್ಲಿಯ ಭಂಡಾರ ತೀರಿದರೆ ಆಕೆ ಮತ್ತೆ ಅದನ್ನು ಕೊಂಡು ತರಬೇಕಾಗಿಲ್ಲ. ಈ ಪ್ರಿಯಕರನೇ ಭಂಡಾರದ ಬದಲು ಬಂಗಾರದ ಹುಡಿಯಿಂದ ಅದನ್ನು ತುಂಬಿಸುವದಾಗಿ ಆಶ್ವಾಸನೆ ಕೊಟ್ಟಿದ್ದಾನೆ.

ಇಂಥ ಪ್ರಿಯಕರನನು ಕಳೆದುಕೊಂಡು ಆಕೆ ಹುಚ್ಚಿಯಾಗಿದ್ದಾಳೆ. ಅವನನ್ನು ಹುಡುಕಿಕೊಂಡು ಬೀದಿ ಬೀದಿ ತಿರುಗುತ್ತಿದ್ದಾಳೆ. ಕಂಡಕಂಡವರನ್ನು ಆರ್ತವಾಗಿ ಕೇಳುತ್ತಿದ್ದಾಳೆ:

 ಯಲ್ಲಿ! ಮಲ್ಲಿ! ಪಾರೀ ! ತಾರೀ! ನೋಡೀರೆನ್ರವ್ವಾ?
ನಿಂಗೀ! ಸಂಗೀ! ಸಾವಂತರೀ! ಎಲ್ಲ್ಹಾನ ನನ್ನಾಂವಾ?
ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀವಾ
ಹಾದೀ ಬೀದೀ ಹುಡುಕತ್ಯೆತ್ರೆ, ಬಿಟ್ಟ ಎಲ್ಲ ಹ್ಯಾಂವಾ || ಇನ್ನೂ ಯಾಕ

ಈ ಆರ್ತ ಹುಡುಕಾಟ ನುಡಿಗೊಮ್ಮೆ ಪುನರಾವರ್ತಿತವಾಗುವ “ಇನ್ನೂ ಯಾರ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ” ಎಂಬ ಪಲ್ಲವಿಯಾಗಿ ಇನ್ನಷ್ಟು ಆರ್ತವಾಗುತ್ತದೆ.

ಈ ಹಾಡಿನ ನಾಯಕನಾದ ತರುಣ ಪ್ರಿಯಕರನ ಚಿತ್ರ ಎಷ್ಟು ಚಿತ್ರವತ್ತಾಗಿದೆಯೆಂದರೆ, ಇಂಥ ಒಬ್ಬ ರಸಿಕ ತರುಣ ನಿಜವಾಗಿಯೂ ಇದ್ದಾನೆ ಎಂದುಕೊಂಡವರಿದ್ದಾರೆ. ಧಾರವಾಡದ ಪೇಟೆಯಲ್ಲಿ ಪ್ರಿಯಕರನಿಂದ ತಿರಸ್ಕೃತಳಾಗಿ ಹುಚ್ಚು ಹಿಡಿದು, ಈ ಹಾಡಿನ ಪಲ್ಲವಿಯನ್ನು ಹಾಡಿಕೊಳ್ಳುತ್ತ ತಿರುಗಾಡುತ್ತಿದ್ದ ಹೆಂಗಸೊಬ್ಬಳನ್ನು ೧೯೫೮ರವರೆಗೂ ಕಣ್ಣಾರೆ ಕಂಡವರಿದ್ದಾರೆ. ಆಕೆಯ ಮನಃಸ್ಥಿತಿಯನ್ನು ಕುರಿತೇ ಬರೆದ ಹಾಡು ಇದು. “ಪ್ರಣಯಭಂಗದಿಂದ ಹುಚ್ಚುಹಿಡಿದ ಸೂಳೆಯೊಬ್ಬಳು ತನ್ನ ಉನ್ಮಾದದಲ್ಲಿ ಈ ಹಾಡನ್ನು ಹೇಳುತ್ತಾಳೆ” ಎಂದು ಭಾವ ಸಂದರ್ಭಸೂಚಿ ಹೇಳುತ್ತದೆ. ಇದು “ಪಂಜು” ಎಂಬ ಬೇಂದ್ರೆಯವರ ಅಲಿಖಿತ ನಾಟಕದ ಹಾಡು ಎಂದು ತಿಳಿದುಬರುತ್ತದೆ. ಇಂಥ ಅನೇಕ ಸಾಮಾನ್ಯ ಸಂಗತಿಗಳು ಬೇಂದ್ರೆಯವರ ಕವಿತೆಗಳಿಗೆ ಕಾರ‍ಣವಾದದ್ದಿದೆ. ಅವರ ಪ್ರಸಿದ್ಧ ಕವಿತೆ ‘ಕುಣಿಯೋಣು ಬಾರs’ (“ಗರಿ”)ಕ್ಕೆ ಪ್ರೇರಣೆ ದೊರೆಯಿತೆಂದು ಹೇಳಲಾಗುವ ಸಂದರ್ಭ ಮೋಜಿನದಾಗಿದೆ. ಒಂದು ಮುಂಜಾನೆ ಹೆಂಡತಿಯೊಡನೆ ಜಗಳವಾಗಿ ಹೊರಗೆ ಬಂದಾಗ ಅಂಗಳದಲ್ಲಿ ಗಂಡು-ಹೆಣ್ಣು ಕಾಗೆಗಳೆರಡು ಕುಣಿದು ಕುಪ್ಪಳಿಸುತ್ತ ಸರಸವಾಡುವದನ್ನು ನೋಡಿ, ತಾನೂ ತನ್ನ ಹೆಂಡತಿಯೊಂದಿಗೆ ಇಂಥ ಕುಣಿತದಲ್ಲಿ ಭಾಗವಹಿಸಬೇಕೆಂಬ ಕಲ್ಪನೆ ಮೂಡಿ, ಸಖಿಗೆ ಕುಣಿಯುವ ಕರೆ ಕೊಡುವ ಕವಿತೆಯಾಗಿ ಅದು ಮೂಡಿ ಬಂದಿತಂತೆ. “ಆ ಕಾಗಿ! ಯಾಕಾಗಿ! ಕುಣಿಯೋದು ಬೇಕಾಗಿ!” ಎಂಬ ಸಾಲುಗಳಲ್ಲಿ ಕಾಗೆಗಳ ಪ್ರಸ್ತಾಪವೂ ಇದೆ. ಆದರೆ ಕವಿತೆ ಮುಟ್ಟುವ ಸ್ತರವೇ ಬೇರೆ. “ಇರಲಾರೆನೇಕಾಕಿ” ಎಂಬ ಮಾತಿನಲ್ಲಿ ಪ್ರರಬ್ರಹ್ಮನೇ ಒಂಟಿಯಾಗಿ ಇರಲು ಬೇಸತ್ತು, ತನ್ನ ಸಂಗಾತಕ್ಕಾಗಿ ಸೃಷ್ಟಿಯನ್ನು ನಿರ್ಮಿಸಿದ “ಏಕಾಕೀನ ರಮತೇ” ಎಂಬ ಉಪನಿಷತ್ತಿನ ಪ್ರತಿಧ್ವನಿ ಬರುತ್ತದೆ. “ಹದಿನಾಲ್ಕು ಲೋಕಕ್ಕ ಚಿಮ್ಮಲಿ ಈ ಸುಖ” ಎನ್ನುವಲ್ಲಿ Cosmis danceದ ಭವ್ಯ ಕಲ್ಪನೆಯವರೆಗೂ ಕವಿತೆ ಬೆಳೆಯುತ್ತದೆ. ಹೀಗೆ, ಕವಿತೆಗೆ ಪ್ರೇರಣೆ ನೀಡಿದ ಸಂದರ್ಭ ಒಂದು ನೆವ ಮಾತ್ರ. ಅರ್ಥ ಅಲ್ಲಿಗೇ ನಿಲ್ಲಬೇಕಾಗಿಲ್ಲ.

ಈ ಹಾಡು ಮೊದಲು ಪ್ರಕಟವಾದಾಗ, ಜನಪ್ರಿಯತೆ ಗಳಿಸಿದಂತೆ, ಮಡಿವಂತರ ಆಕ್ಷೇಪಣೆಗೂ ಗುರಿಯಾಯಿತು. ಅಶ್ಲೀಲವೆಂದು ಅನೇಕರು ಬೇಂದ್ರೆಯವರನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ. ಅಶ್ಲೀಲವೆಂಬ ಕಾರಣಕ್ಕಾಗಿ ಇದನ್ನು ಕೆಲವು ವರ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತೆಂದೂ, ಒಂದು ಸಲ ಹುಡುಗಿಯರು ಹುಬ್ಬಳಿಯ ಸಿದ್ಧಾರೂಢ ಮಠದಲ್ಲಿ ಹಾಡಿದ ಮೇಲೆ ಮುಟ್ಟುಗೋಲನ್ನೂ ಹಿಂತೆಗೆದುಕೊಳ್ಳಲಾಯಿತೆಂದೂ ವಾಮನ ಬೇಂದ್ರೆಯವರು ಹೇಳುತ್ತಾರೆ. ಅನುಭಾವಿ ಸಿದ್ಧಾರೂಢರ ಮಠದಲ್ಲಿ ಇದಕ್ಕೆ ಅಶ್ಲೀಲತೆಯಿಂದ ಮುಕ್ತಿ ದೊರೆತು, ಗಂಭೀರ ಅರ್ಥದ ಸಾಧ್ಯತೆ ಹೊಳೆದದ್ದು ಅರ್ಥಪೂರ್ಣವಾಗಿದೆ.

ಇಂಥ ಹಾಡನ್ನು ಅನುಭಾವ ಪರಂಪರೆಯ ಹಿನ್ನಲೆಯಲ್ಲಿ ಇಟ್ಟು ನೋಡಿದಾಗ ಏನಾಗುತ್ತದೆ? ಇದೊಂದು ಕುತೂಹಲದ ಪ್ರಶ್ನೆ. “ಈ ಕವಿತೆಯ ಧ್ವನಿಪೂರ್ಣತೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಅದು ಇನ್ನೂ ಹೆಚ್ಚಿನ ಮಟ್ಟದ ನಿರ್ಮಿತೆ”ಯೆಂದು ಕಾಣಬಹುದೆಂದು ಮುಗಳಿಯವರು ಒಂದು ಅಸ್ಪಷ್ಟ ಸೂಚನೆಯನ್ನು ಬಿಟ್ಟಿದ್ದಾರೆ. (೧೯೮೯:೩೩). ಆದರೆ ಅದೇನೆಂದು ಹೇಳಿಲ್ಲ. ಇದನ್ನೊಂದು ಅನುಭಾವ ಕವಿತೆಯಾಗಿ ಪರಿಗಣಿಸಬಹುದೆಂಬುದಕ್ಕೆ ಕವಿತೆಯಲ್ಲಿಯೇ ಕೆಲವು ಅಂತರ್‌ಪಠ್ಯೀಯ ಸೂಚನೆಗಳು ಸಿಗುತ್ತವೆ.

೧. ಅನುಭಾವ ಕಾವ್ಯದಲ್ಲಿ ಮತ್ತು ಮಧುರಾಭಕ್ತಿಯಲ್ಲಿ ‘ಶರಣಗತಿ-ಲಿಂಗಪತಿ’ ಎಂಬ ಪರಿಕಲ್ಪನೆ ಸಾಕಷ್ಟು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ವಚನಗಳಲ್ಲಿ ಮತ್ತು ತತ್ವಪದಗಳಲ್ಲಿ ಇದನ್ನು ಧಾರಾಳವಾಗಿ ನೋಡಬಹುದು. ‘ಹುಬ್ಬಳಿಯಾಂವಾ’ ಕವಿತೆಯ ನಾಯಕ – ನಾಯಕಿಯರನ್ನು ಆ ಪರಿಕಲ್ಪನೆಯಲ್ಲಿ ನೋಡುವದು ಸಾಧ್ಯವಿದೆ. ಹಾಗಿದ್ದರೆ ಅವನು ಹುಬ್ಬಳ್ಳಿಯವನೇಕೆ? ಅವನ ಉಡಿಗೆ-ತೊಡಿಗೆ, ಹಾವಭಾವಗಳಿಗೆ ಅದೇ ನಿರ್ದಿಷ್ಟ ಚಹರೆಗಳೇಕೆ? ಇದಕ್ಕೆ ವಿಶೇಷ ಅರ್ಥವೇನೂ ಇರಬೇಕಾಗಿಲ್ಲ. ಈ ಬದುಕೆಂಬ ಸಂತೆ ಶರೀಫರ ಹಾಡಿನಲ್ಲಿ ‘ಹುಲಗೂರ ಸಂತೆ’ಯಾಗುತ್ತದೆ. ಅನುಭಾವದ ಕೂಡ ಹುಬ್ಬಳಿಯ ಮಾಟ ಪಡೆಯುತ್ತದೆ. ಇವೆಲ್ಲ ಅಮೂರ್ತಗಳಿಗೆ ನಾಮ-ರೂಪಗಳನ್ನು ಕೊಡುವ, ಅನುಭಾವವನ್ನು ಲೌಕಿಕದ ಸ್ಥಳೀಯ ಬದುಕಿಗೆ ಎಳೆದುಕೊಳ್ಳುವ ವಿಧಾನಗಳು; ಸಾಮಾನ್ಯ ದೈನಿಕಗಳಲ್ಲೇ ಅನುಭಾವದ ದರ್ಶನ ಮಾಡಿಸುವ ಪರಿಗಳು.

೨. ಹೀಗೆ ಅನುಭಾವ ಪರಂಪರೆಯಲ್ಲಿ ಈ ಕವಿತೆಯನ್ನು ಇಟ್ಟು ನೋಡಿದಾಗ ಇಂಥ ಹಲವು ಉದಾಹರಣೆಗಳು ನೆನಪಿಗೆ ಬರುತ್ತವೆ. ಮುಖ್ಯವಾಗಿ ಅಕ್ಕನ ವಚನಗಳು ಮತ್ತು ಮಧುಚೆನ್ನರ ‘ನನ್ನ ನಲ್ಲ’ ಕವಿತೆ. ಆಗ ಹೋಲಿಕೆಗಳು ಬೇರೆ ಅರ್ಥ ಕೊಡಲು ಸಾಧ್ಯ.

೩. ಹಾಡಿನ ನಾಯಕಿ ಒಬ್ಬ ‘ಜೋಗತಿ’; ಕಸಬೆಯಲ್ಲ, ಬಸವಿಯಲ್ಲ, ದೇವರಿಗೆ ಅರ್ಪಿಸಿಕೊಂಡವಳು. ‘ಜೋಗತಿ’ ಎಂಬ ಶಬ್ದವನ್ನು ಬೇಂದ್ರೆಯವರು ‘ಯೋಗಿಣಿ’ ಎಂಬ ಅರ್ಥದಲ್ಲಿ ಬಳಸಿರುವಂತಿದೆ. ಯಾಕೆಂದರೆ ಭೂಮಿತಾಯಿಯನ್ನು ಕೂಡ “ಹೂವ ಹಡಲಿಗೆಯನು ಹೊತ್ತ” ಜೋಗತಿ ಎಂದವರು ವರ್ಣಿಸಿದ್ದಾರೆ.

೪. ಈ ಹಾಡಿನಲ್ಲಿ ಬರುವ ನಾಯಕ ಸೆಟ್ಟರ ಹುಡುಗನಾಗಿರುವರು ಏಕೆ? ಇದೂ ಕೂಡ ನಾಮ-ರೂಪಗಳನ್ನು ಕೊಡುವ ಒಂದು ವಿಧಾನವಷ್ಟೇ ಆಗಿದೆಯೆ? ಬಸವಣ್ಣನವರ ಒಂದು ವಚನದಲ್ಲಿ “ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ” ಎಂದು ದೇವರನ್ನು ಸೆಟ್ಟಿಯಾಗಿ ಕಲ್ಪಿಸಿಕೊಂಡ ಚಿತ್ರ ಬರುತ್ತದೆ. ಈ ಸೆಟ್ಟಿಗೂ ಬೇಂದ್ರೆಯವರ ಸೆಟ್ಟರ ಹುಡುಗನಿಗೂ ಸಂಬಂಧವಿರಬಹುದೆ?

೫. ಹಾಡಿನ ನಾಯಕಿ ನಾಯಕನನ್ನು ನೆನಪಿಸಿಕೊಳ್ಳುವ ರೀತಿಯಲ್ಲಿ ಮತ್ತು ಕಾಣುವ ರೂಪ- ಹಾವ – ಭಾವಗಳ ಚಿತ್ರವತ್ತಾದ ವಿವರಗಳಲ್ಲಿ ಮತ್ತು ಅಕ್ಕಮಹಾದೇವಿ ಚಿನ್ನಮಲ್ಲಿಕಾರ್ಜುನನನ್ನು ಕನಸಿನಲ್ಲಿ ಕಾಣುವ ರೀತಿಯಲ್ಲಿ ಹೋಲಿಕೆಯಿದೆ:

ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದು ಕನಸ ಕಂಡೆ.
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ.
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ.
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.
ಚೆನ್ನಮಲ್ಲಿಕಾರ್ಜುನಯ್ಯನ ಕಂಡು ಕಣ್ಣೆರೆದೆನು.

ನಾಯಕರನ್ನು ಕಾಣಬೇಕೆಂಬ ಹಂಬಲದ ಸ್ಥಿತಿ ಇಬ್ಬರಲ್ಲೂ ಒಂದೇ ಆಗಿದೆ.

೬. ಸತಿಪತಿ ಭಾವದ ವಚನಗಳಲ್ಲಿ ಕಾಣುವ ಪತಿಯ ಸೆಡವಿನ ಸ್ವಭಾವ, ಚೇಷ್ಟೆಗಳು ಇಲ್ಲಿಯ ಹಾಡಿನ ನಾಯಕನನ್ನು ನೆನಪಿಸುತ್ತವೆ.

. “ಯಲ್ಲಿ ! ಮಲ್ಲಿ ! ಪಾರೀ ! ತಾರೀ ! ನೋಡೀರೇನ್ರವ್ವಾ ?
|
ನಿಂಗೀ ! ಸಂಗೀ ! ಸಾವಂತರೀ ! ಎಲ್ಲ್ಹಾನ ನನ್ನಾಂವಾ?”

ಎಂದು ಆರ್ತವಾಗಿ ಕಂಡ-ಕಂಡವರನ್ನು ಅಂಗಲಾಚಿ ಕೇಳುವ ರೀತಿ ಮಹಾದೇವಿಯಕ್ಕನ “ಚಿಲಿಮಿಲಿಯೆಂದೋದುವ ಗಿಳಿಗಳಿರಾ, ನೀವು ಕಾಣಿರೀ, ನೀವು ಕಾಣಿರೇ” ಎಂಬ ವಚನವನ್ನು ಮತ್ತು –

ಅಳಿಸಂಕುಳವೇ, ಮಾಮರನೇ, ಬೆಳದಿಂಗಳೇ, ಕೋಗಿಲೆಯೇ,
ನಿಮ್ಮೆಲ್ಲರನು ಒಂದು ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡರೆ
ಕರೆದು ತೋರಿರೇ!

ಎಂಬ ಇನ್ನೊಂದು ವಚನವನ್ನು ದಟ್ಟವಾಗಿ ನೆನಪಿಸುವದಿಲ್ಲವೆ?

೮. ‘ಹುಬ್ಬಳ್ಳಿಯಾಂವಾ’ ಹಾಡಿನ ಧಾಟಿಯಲ್ಲೇ ಇರುವ ಒಂದು ಜಾನಪದ ಹಾಡನ್ನು ಸುಮತೀಂದ್ರ ನಾಡಿಗರು ತೋರಿಸಿದ್ದಾರೆ (೧೯೯೪ : ೩೯):

ಯಾಕ ಬರಲಿಲ್ಲವ್ವಾ, ತಂಗಿ ನಾಗಲಿಂಗಜ್ಜಾ
ಕಲವಿಕದೊಳಗ ಬರತೀನಂತ ಹೇಳಿ ಹೋಗಿದ್ದಾ ||||

ಇದು ನವಲಗುಂದದ ಅನುಭಾವಿ ನಾಗಲಿಂಗಪ್ಪನನ್ನು ಕುರಿತ ಹಾಡು. ಈ ಹಾಡಿನಿಂದ ಬೇಂದ್ರೆಯವರು ಸ್ಪೂರ್ತಿ ಪಡೆದರೋ, ಅಥವಾ ಬೇಂದ್ರೆಯವರ ಹಾಡೇ ಈ ಜನಪದ ಹಾಡಿಗೆ ಸ್ಪೂರ್ತಿ ಕೊಟ್ಟಿತೋ ಹೇಳುವದು ಕಷ್ಟ ಎಂದಿದ್ದಾರೆ ನಾಡಿಗರು. ಆದರೆ ಈ ಎರಡೂ ಹಾಡುಗಳ ನಡುವೆ ಅನುಭಾವದ ಸಂಬಂಧವಿರುವದನ್ನು ಗುರುತಿಸುವದೇನೂ ಕಷ್ಟವಲ್ಲ. ಎರಡೂ ಲೌಕಿಕವನ್ನು ಅನುಭಾವವಾಗಿ ಭಾಷಾಂತರಿಸುವ ಪ್ರಯತ್ನಗಳಾಗಿವೆ. ಮೂಲತಃ ‘ಹುಬ್ಬಳಿಯಾಂವಾ’ ಒಂದು ‘ಹಾಡು’ ಎಂಬುದೇ ಗಮನಿಸಬೇಕಾದ ಮುಖ್ಯಸಂಗತಿಯಾಗಿದೆ. ಆ ಮೂಲಕ ಕನ್ನಡದ ತತ್ವಪದಗಳ ರಚನೆ, ವಸ್ತು, ಲಯ, ಭಾಷೆ, ರೀತಿಗಳನ್ನು ಅದು ನೆನಪಿಗೆ ತರುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಇದು ತತ್ವಪದಗಳ ಪರಂಪರೆಗೆ ಸೇರುವ ಕವಿತೆಯಾಗಿದೆ.

ಹೀಗೆ ‘ಹುಬ್ಬಳ್ಳಿಯಾಂವಾ’ ಕವಿತೆ ಅನ್ಯ ಪಠ್ಯಗಳಿಗೆ ಹಲವಾರು ಸಾಹಿತ್ಯಿಕ ಸೂಚನೆಗಳನ್ನು ಕೊಡುವ ಮೂಲಕ ಲೌಕಿಕದಂತೆ ಕಾಣುವ ಒಂದು ಅನುಭವವನ್ನು ಅನುಭಾವದ ಸ್ತರಕ್ಕೆ ಒಯ್ಯಲು ಸಾಧ್ಯವಾಗುತ್ತದೆ. ಒಂದು ಜೀವಂತ ಪರಂಪರೆಗೆ ಸೇರುವದರಿಂದ ಕವಿಗೆ ಅನೇಕ ಪ್ರಯೋಜನಗಳಿವೆ. ಮುಖ್ಯವಾಗಿ, ಪರಂಪರೆ ಕವಿಗೆ ಅವನ ಶಕ್ತಿಯು ಅಪವ್ಯಯವಾಗದಂತೆ, ಕಡಿಮೆ ಶ್ರಮದಿಂದ ಹೆಚ್ಚು ಹೇಳಲು ಸಾಧ್ಯವಾಗುವಂತೆ ನೆರವಾಗುತ್ತದೆ. ಬೇಂದ್ರೆ ಬಹಳ ದೊಡ್ಡ ಪ್ರಮಾಣದಲ್ಲಿ ಅದರ ಲಾಭ ಪಡೆದುಕೊಂಡ ಕವಿ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಬೇಂದ್ರೆಯವರ ಅನುಭಾವ ಲೌಕಿಕದ ದೈನಿಕಗಳನ್ನು ಅಲಕ್ಷಿಸುವುದಿಲ್ಲ. ಲೌಕಿಕ ಬದುಕಿನ ತೀವ್ರತೆಯಲ್ಲಿಯೇ ಅವರ ಕಾವ್ಯದಲ್ಲಿ ಅಲೌಕಿಕದ ದೀಪಗಳು ಮಸುಕಾಗುವುದಿಲ್ಲ. ಅವರ ಜೀವನಪ್ರೀತಿ ಪ್ರಶ್ನಾತೀತವಾದದ್ದು. ಈ ಬದುಕಿನ ಚೆಲುವನ್ನು, ಸುಖ-ದುಃಖಗಳನ್ನು ಅವರು ತನ್ಮಯವಾಗಿ ಅನುಭವಿಸುತ್ತಾರೆ. ಹಾಗೆಯೇ ಅಲೌಕಿಕದ ಚೆಲುವಿನಲ್ಲೂ ಅವರು ತನ್ಮಯರಾಗಬಲ್ಲರು. ಆದರಿಷ್ಟೆ, ಈ ಬದುಕಿನ ಪೂರ್ಣತೆಗಾಗಿ ಆ ಬದುಕಿನ ಅನುಭವವೂ ಅಗತ್ಯವೆಂದು ಅವರು ಭಾವಿಸುತ್ತಾರೆ. ಭೋಗ ಒಂದು ಜಗತ್ತಿನ, ಯೋಗ ಇನ್ನೊಂದು ಜಗತ್ತಿನ ಪ್ರತ್ಯೇಕ ವಸ್ತುಗಳಲ್ಲ. ಎರಡೂ ಈ ಜಗತ್ತಿನಲ್ಲಿಯೇ ಸಮನ್ವಯಗೊಳ್ಳಬೇಕಾದುವು. ಆದ್ದರಿಂದಲೇ ಈ ಜಗತ್ತು ತನ್ನ ವಿವರಗಳಲ್ಲಿ ಯಾವಾಗಲೂ ಮೇಲುಗೈಯಾಗುತ್ತದೆ. ಈ ವಿಷಯದಲ್ಲಿ ಬೇಂದ್ರೆಯವರಿಗೂ ರತ್ನಾಕರವರ್ಣಿಗೂ ಸಾಮ್ಯವಿದೆ. “ಅಲೌಕಿಕತೆ ಲೌಕಿಕದಲ್ಲೇ ಸಾಧ್ಯವಾಗಬೇಕಾದ ಅನುಭವ ವಿಶೇಷವೆನ್ನುವುದನ್ನು ರತ್ನಾಕರನಂತೆ ಇವರೂ ಅರಿತವರಾಗಿದ್ದರು” (ಕಂಬಾರ, ೧೯೭೫ :೮).

ಈ ಅನುಭಾವಕಾವ್ಯದ ಪರಂಪರೆ ಕನ್ನಡದಲ್ಲಿ ಅತ್ಯಂತ ದೀರ್ಘವಾದದ್ದು ಮತ್ತು ಶ್ರೀಮಂತವಾದದ್ದು. ಇಂದಿಗೂ ಅದು ಮುಂದುವರಿದಿದೆ. ಕುವೆಂಪು, ಪುತಿನ, ಮಾಸ್ತಿ, ಮಧುಚೆನ್ನರಂಥ ನವೋದಯದ ಕವಿಗಳು ಅದನ್ನುತಮ್ಮ ತಮ್ಮ ರೀತಿಯಲ್ಲಿ ಅಳವಡಿಸಿಕೊಂಡರು. ಇಂಥ ಕಾವ್ಯವನ್ನು ಸಂದೇಹದಿಂದಲೇ ನೋಡಿದ ನವ್ಯರೂ ಅದರಿಂದ ಪಾರಾಗಲಿಲ್ಲ. ಗೋಪಾಲಕೃಷ್ಣ ಅಡಿಗರು-

 ಯಾವ ಮೋಹನ ಮುರಲಿ ಕರೆಯಿತು ದೂರ ತೀರಕ್ಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

***

 ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?
       (‘ಮೋಹನ ಮುರಲಿ‘)

ಎಂದು ಅಯಾಚಿತವಾಗಿ, ಆಕಸ್ಮಿಕವಾಗಿ ಕಾಣಿಸಿಕೊಂಡ ದಿವ್ಯದ ಕರೆಯನ್ನು ಕೇಳಿ ತಬ್ಬಿಬ್ಬಾದರು. ‘ಚಿಂತಾಮಣಿಯಲ್ಲಿ ಕಂಡ ಮುಖ’ ತಟ್ಟನೆ ಹೊತ್ತಿಸಿದ ಒಳಗಿನ ದೀಪವನ್ನು ಕಂಡು ಚಕಿತರಾದರು. ‘ಶ್ರೀ ರಾಮನವಮಿಯ ದಿವಸ’, ‘ಕೂಪಮಂಡೂಕ’ ಈ ದಿಕ್ಕಿನಲ್ಲೇ ಚಿಂತಿಸುತ್ತವೆ. ಮಾರ್ಕ್ಸ್‌ವಾದಿ ಚಿಂತನೆಗೆ ಮನಸೋತ ಸು.ರಂ.ಯಕ್ಕುಂಡಿಯವರಿಗೆ ಮಾಧ್ವ ಚಿಂತನೆಯನ್ನೂ ಜೋಡಿಸಿಕೊಳ್ಳುವುದು ಅಗತ್ಯವಾಗಿ ಕಂಡಿತು. ದೇವರು, ಆತ್ಮ, ಅನುಭಾವಗಳನ್ನು ವಿಡಂಬಸಿ ನಗೆಚಾಟಿಗೆ ಮಾಡುತ್ತಿದ್ದ. ವ್ಹಿ.ಜಿ. ಭಟ್ಟರು ಕೊನೆಗೆ ತಿರುಗಿದ್ದು ಆಧ್ಯಾತ್ಮದತ್ತ. ಅಡಿಗರನ್ನು ಸಮ್ಮೋಹಿಸಿ ಸೆಳೆದ ದಿವ್ಯದ ಯಾಚನೆ ಅನಂತಮೂರ್ತಿಯವರನ್ನೂ ತಟ್ಟಿತು. ಚಂದ್ರಶೇಖರ ಕಂಬಾರ, ಎಚ್.ಎಸ್. ಶಿವಪ್ರಕಾಶ, ಎಸ್.ಜಿ. ಸಿದ್ಧರಾಮಯ್ಯ, ಕೆ.ಬಿ. ಸಿದ್ಧಯ್ಯ ಈ ಅನುಭಾವ ಪರಂಪರೆಯ ಅರ್ಥಪೂರ್ಣ ಮುಂದುವರಿಕೆಗೆ ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ಪಂಪನಿಂದಲೇ ಆರಂಭವಾದ ಲೌಕಿಕ-ಆಗಮಿಕ, ಮಾರ್ಗ-ದೇಸಿ ವಾಗ್ವಾದಗಳು ಇಂದಿಗೂ ಮುಂದುವರಿದಿವೆ. ಇಂದಿನ ಜಾಗತೀಕರಣದ ಆಕ್ರಮಣದ ಹಿನ್ನಲೆಯಲ್ಲಿ ಈ ವಾಗ್ವಾದಗಳಿಗೆ ಹೊಸ ತೀವ್ರತೆ, ತುರ್ತು, ಪ್ರಸ್ತುತತೆ ಬಂದಿವೆ.

ಈ ವಾಗ್ವಾದಗಳನ್ನು ಸಮರ್ಪಕವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಬೇಂದ್ರೆಯವರ ಕಾವ್ಯ ಕೆಲವು ಮಾದರಿಗಳನ್ನು ಒದಗಿಸುತ್ತದೆ. ಆದರೆ ಈ ಮಾದರಿಗಳೇ ಎಲ್ಲರಿಗೂ ಉಪಯುಕ್ತವಾದವೆಂದು ಹೇಳಲಿಕ್ಕಾಗುವುದಿಲ್ಲ. ಯಾಕೆಂದರೆ ಬೇಂದ್ರೆಯವರದು ಸರ್ವಗ್ರಾಹಿಯಾದ ಮತ್ತು ಸರ್ವಂಕುಷವಾದ ಪ್ರತಿಭೆ. ಪರಸ್ಪರ ವಿರುದ್ಧವಾದುವನ್ನೂ ಸ್ವೀಕರಿಸಿ ಪಚನ ಮಾಡಿಕೊಳ್ಳುವ ತಾಕತ್ತು ಅದಕ್ಕಿದೆ ಮತ್ತು ಎಲ್ಲವನ್ನೂ ತನ್ನ ಒರೆಗೆ ಹಚ್ಚಿ ನೋಡುವ ಹಟವಿದೆ. ಜೊತೆಗೆ ಅನುಭವದಲ್ಲಿ ತಾದಾತ್ಮ್ಯ ಪಡೆದೂ ದೂರ ನಿಂತು ನೋಡುವ ಗುಣ ಅದಕ್ಕೆ ಸಾಧಿಸಿತ್ತು. “ಅಹಹಹಾ ಬಂತು ಶ್ರಾವಣಾ” (‘ಪ್ರತಿವರ್ಷದಂತೆ ಬಂತು ಶ್ರಾವಣಾ’ ” “ಸೂರ್ಯಪಾನ”), ಆ,ಹಾ,ಹಾ, ಮಲ್ಲಿಗೆ! ಬರುವೆನೆ ನಿನ್ನಲಿಗೆ” (‘ಮಲ್ಲಿಗೆ’ : “ಗಂಗಾವತರಣ”) ಎಂಬಂಥ ಸಹಜ ತನ್ಮಯತೆಯ ಉದ್ಗಾರಗಳನ್ನು ಇವತ್ತಿನ ಯಾವ ಕವಿಯೂ ಹೊರಡಿಸಲಾರ. ಅನುಭವವನ್ನು ಪ್ರಯೋಗಶಾಲೆಯ ಕಪ್ಪೆಯಂತೆ ಕೊಯ್ದು ನೋಡಬೇಕೆಂಬ ಮನಸ್ಸಿಗೆ, ಕವಿತೆಯೆಂದರೆ ಬುದ್ಧಿಪೂರ್ವಕವಾಗಿ ಸಿದ್ಧಾಂತವೊಂದಕ್ಕೆ ಹೊಂದಿಸಬೇಕಾದ ವಸ್ತುವೆಂಬಂತೆ ನೋಡಬೇಕೆಂಬ ಮನಸ್ಸಿಗೆ ಇದು ಕಷ್ಟಸಾಧ್ಯ.

ಪರಾಮರ್ಶನ ಸೂಚಿ

೦೧.   ಅಡಿಗ, ಗೋಪಾಲಕೃಷ್ಣ (೧೯೯೧), “ಬೇಂದ್ರೆಯವರ ಕಾವ್ಯ”, ಕನ್ನಡ ಸಂಘ, ಕ್ರೈಸ್ಟ್ ಕಾಲೇಜ, ಬೆಂಗಳೂರು.

೦೨.   ಆಮೂರ, ಜಿ.ಎಸ್. (೧೯೯೧), “ಭುವನದ ಭಾಗ್ಯ”, ಸ್ನೇಹ ಪ್ರಕಾಶನ, ಬೆಂಗಳೂರು.

೦೩.   ಆಮೂರ, ಜಿ.ಎಸ್. (೨೦೦೦), “ಬೇಂದ್ರೆ ಕಾವ್ಯದ ಪ್ರತಿಮಾ ಲೋಕ”, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೦೪.   Eliot, T.S. (1953), “Selected Prose”, Penguin Books.

೦೫.   ಕಾಯ್ಕಿಣಿ, ಗೌರೀಶ (೧೯೮೦), “ಕಂಪಿನ ಕರೆ”, ಸಮಾಜ ಪುಸ್ತಕಾಲಯ, ಧಾರವಾಡ.

೦೬.   ಕುರ್ತುಕೋಟಿ, ಕೀರ್ತಿನಾಥ (೧೯೭೫), “ಭೃಂಗದ ಬೆನೇರಿ”, ಮನೋಹರ ಗ್ರಂಥಮಾಲಾ, ಧಾರವಾಡ.

೭.      ಕುರ್ತುಕೋಟಿ, ಕೀರ್ತಿನಾಥ ಮತ್ತು ವಾಮನ ಬೇಂದ್ರೆ (೧೯೮೭), “ಶ್ರಾವಣ ಪ್ರತಿಬೆ” (“ಪುಟ ಬಂಗಾರ‍” ೫ನೆ ಸಂಪ್ಟ), ಮನೋಹರ ಗ್ರಂಥಮಾಲೆ, ಧಾರವಾಡ.

೦೮. ಕೃಷ್ಣಮೂರ್ತಿ, ಎಂ.ಜಿ. (೧೯೯೪), “ಕೃತಿ ಸಂಸ್ಕೃತಿ”, ರುಜುವಾತು ಪ್ರಕಾಶನ, ಮೈಸೂರು.

೦೯.   ಕಂಬಾರ, ಚಂದ್ರಶೇಖರ (೧೯೭೫), ‘ಬೇಂದ್ರೆ ಮತ್ತು ಕನ್ನಡ ಕಾವ್ಯ’ : “ಕವಿ ಬೇಂದ್ರೆ” (ಸಂ.ಜಿ.ಎಸ್.ಶಿವರುದ್ರಪ್ಪ), ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

೧೦. ಚೆನ್ನಿ, ರಾಜೇಂದ್ರ (೧೯೮೯), “ಬೇಂದ್ರೆ ಕಾವ್ಯ : ಸಂಪ್ರದಾಯ ಮತ್ತು ಸ್ವಂತಿಕೆ”, ಕನ್ನಡ ಸಂಘ, ಕ್ರೈಸ್ಟ್‌ ಕಾಲೇಜ್, ಬೆಂಗಳೂರು.

೧೧. ದಬ್ಬೆ, ವಿಜಯಾ (೧೯೮೯), “ಬೇಂದ್ರೆ ಕಾವ್ಯದಲ್ಲಿ ಅನುಭಾವದ ಒಂದು ನಿಚ್ಚಣಿಕೆ”, ಕನ್ನಡ ಸಂಘ, ಕ್ರೈಸ್ಟ್‌ ಕಾಲೇಜ, ಬೆಂಗಳೂರು.

೧೨. ದಿವಾಣಜಿ, ವ್ಹಿ.ಎ. (೧೯೭೮), ‘ಬೇಂದ್ರೆ ಕಾವ್ಯ: ಒಂದು ಚಿಂತನ’, “ಸಾಕ್ಷಿ” – ೩೭.

೧೩. ನಾಗರಾಜ, ಡಿ.ಆರ್. (೧೯೮೭), “ಶಕ್ತಿ – ಶಾರದೆಯ ಮೇಳ”, ಅಕ್ಷರ ಪ್ರಕಾಶನ, ಹೆಗ್ಗೋಡು.

೧೪. ನಾಡಿಗ, ಸುಮತೀಂದ್ರ (೧೯೯೮), “ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು”, ಕರ್ನಾಟಕ ಬುಕ್ ಏಜನ್ಸಿ, ಬೆಂಗಳೂರು.

೧೫. ಬೇಂದ್ರೆ, ದ.ರಾ. (೧೯೪೦), “ಸಾಹಿತ್ಯ ಸಂಶೋಧನ”, ಮನೋಹರ ಗ್ರಂಥ ಪ್ರಕಾಶನ ಸಮಿತಿ, ಧಾರವಾಡ.

೧೬. ಬೇಂದ್ರೆ, ದ.ರಾ. (೧೯೬೩), ‘ನನ್ನ ನಾ ಕಂಡಂತೆ’, “ಕಸ್ತೂರಿ”, ಡಿಸೆಂಬರ್ ೧೯೬೩.

೧೭. ಬೇಂದ್ರೆ, ದ.ರಾ. (೧೯೬೮), “ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೧೮. ಬೇಂದ್ರೆ, ದ.ರಾ. (೧೯೬೯), “ವಿಚಾರ ಮಂಜರಿ”, ಗೀತಾ ಬುಕ್ ಹೌಸ್, ಮೈಸೂರು (ಪ್ರ.ಮು. ೧೯೪೫)

೧೯. ಬೇಂದ್ರೆ, ದ.ರಾ. (೧೯೭೪), “ಸಾಹಿತ್ಯದ ವಿರಟ್ ಸ್ವರೂಪ”, ಸಮಾಜ ಪುಸ್ತಕಾಲಯ, ಧಾರವಾಡ.

೨೦. ಬೇಂದ್ರೆ, ದ.ರಾ. (೧೯೯೨), “ಮಾತೆಲ್ಲ ಜ್ಯೋತಿ”, ಮಣಿಪಾಲ್ ಪ್ರಂಟರ್ಸ್ ಮತ್ತು ಪಬ್ಲಿಷರ್ಸ್, ಮಣಿಪಾಲ್.

೨೧. ಮುಗಳಿ ರಂ.ಶ್ರೀ. (೧೯೮೬), “ಬೇಂದ್ರೆ ಕಾವ್ಯ”, ಕನ್ನಡ ಸಂಘ, ಕ್ರೈಸ್ಟ್ ಕಾಲೇಜ, ಬೆಂಗಳೂರು.

೨೨. ಮೊಕಾಶಿ-ಪುಣೇಕರ, ಶಂಕರ (೧೯೬೨), “ಶ್ರೀ ಬೇಂದ್ರೆಯವರ ಕಾವ್ಯ ಮೀಮಾಂಸೆ”, ಸಮಾಜ ಪುಸ್ತಕಾಲಯ, ಧಾರವಾಡ.

೨೩. ರಾಘವೇಂದ್ರರಾವ್, ಎಚ್.ಎಸ್. (೧೯೯೫), “ಹಾಡೆ ಹಾದಿಯ ತೋರಿತು”, ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು.

೨೪. ರಾಮಚಂದ್ರನ್, ಸಿ.ಎನ್. (೨೦೦೧), ಅಪ್ರಕಟಿತ ಲೇಖನವೊಂದರಲ್ಲಿ.

೨೫. ಶ್ರೀಕಂಠಯ್ಯ, ತೀ.ನಂ. (೧೯೫೮), “ಸಮಾಲೋಕನ”, ಶಾರದಾ ಮಂದಿರ, ಮೈಸೂರು.

೨೬. ಶ್ರೀನಿವಾಸರಾಜು, ಚಿ. (ಸಂ) (೨೦೦೦), “ಬೇಂದ್ರೆ ಸಾಹಿತ್ಯ-ಒಂದು ಅಧ್ಯಯನ”, ಕನ್ನಡ ಸಂಘ ಕ್ರೈಸ್ಟ್ ಕಾಲೇಜ, ಬೆಂಗಳೂರು.

***

– ೨೦೦೨