“ಕಿಷ್ಕಿಂದೆ” ಸಂಕಲನದಲ್ಲಿ (೧೯೫೮) ಇನ್ನೊಂದು ‘ಪ್ರಾರ್ಥನೆ’ ಸಿಗುತ್ತದೆ:

ನೂರು ಭಂಡರ ಸೊಕ್ಕು
ಮೆಟ್ಟಿ ಮುರಿದೊಗೆವ ಛಲ
ನೂರು ದುಡಿಯುವ ಕೈಗೆ
ಕೆಲಸ ಒದಗಿಸುವ ಬಲ
ಪುಣ್ಯ ಭಾಗ್ಯ ನನ್ನದಿರಲಿ.

ಬಡತನದ ರೋದನಕೆ ಕಿವುಡಾಗದಿರಲಿ ಕಿವಿ
ಬಿರುಸಾಗದಿರಲೆನ್ನ ಕರುಳು ಎಂದೂ
ನರಿಯಣ್ಣರಿಗೆ ಇಂಗು ಹಾಕಿ ಕಳುಹುವ ಯುಕ್ತಿ
ಭೋಳೆತನದಲಿ ಕರಗದಿರಲಿ ಮುಂದೂ

ಬಿಸಿರಕ್ತ ತುಂಬುವದು ಹೇಡಿಗಳ ನಾಳದಲಿ
(
ಹೆಣ ಪೆಚ್ಚುಮೊಗ ಮಾಡೆ ಬಿಗಿವುದು ಕಪಾಳದಲಿ)
ಸೋತ ಎತ್ತಿನ ಗಾಡಿ ಗಾಲಿ ನೂಕಿ
ಪಂಜರದ ಹಕ್ಕಿಗಳ ಹೊರಗೆ ಹಾಕಿ
ಬಾಳುವಾ ಪುಣ್ಯ ನನ್ನದಿರಲಿ.

ಒಗ್ಗಿರುವ ರಂಗದಲಿ ಹಿಗ್ಗಿನಲಿ ದುಡಿಯುವಾ
ದುಡಿಯುತಿರುವಾಗಲೇ ನಗುನಗುತ ಮಡಿಯುವಾ
ಪುಣ್ಯ ಭಾಗ್ಯ ನನ್ನದಿರಲಿ.

ಇಲ್ಲಿ ದೇವರೂ ಇಲ್ಲ, ದಿಂಡರೂ ಇಲ್ಲ. ಇದೆಂಥಾ ಪ್ರಾರ್ಥನೆ? ಇದು ಕೇವಲ ಸದಾಶಯ. ಯಾವದೇ ನಾಸ್ತಿಕ ಪ್ರಗತಿಶೀಲ ಕವಿ ಬರೆಯಬಹುದಾದ ಕವಿತೆ ಇದು. ಇದರಲ್ಲಿ ವಿಡಂಬನೆಯ ಕೊಂಕು ಇಲ್ಲ. ‘ಪುಣ್ಯ’ ಎಂಬ ಶಬ್ದ ತನ್ನ ಧಾರ್ಮಿಕತೆಯ ಕವಚ ಕಳೆದುಕೊಂಡು ಹೊಸ ಅರ್ಥ ಪಡೆದಿದೆ.

ವಿಶೇಷವೆಂದರೆ, ಈ ಸಂಕಲನದಲ್ಲಿ ಭಟ್ಟರು ತಮ್ಮ ವಿಡಂಬನೆಯ ಶಸ್ತ್ರಾಸ್ತ್ರಗಳನ್ನು ಆಗಾಗ ಮುಚ್ಚಿಟ್ಟು, ಸನ್ನಿವೇಶಗಳಿಗೆ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ಇಷ್ಟು ಹೆಚ್ಚಿನ ಸಂಖ್ಯೆಯ ಆರ್ದ್ರಭಾವದ ಕವಿತೆಗಳನ್ನು ಭಟ್ಟರು ಹಿಂದೆ ಬರೆದಿರಲಿಲ್ಲ, ಮುಂದೆಯೂ ಬರೆಯಲಿಲ್ಲ. “ಇವರ ಸಾಂಸಾರಿಕ ಪದ್ಯಗಳು ಮತ್ತು ತುಂಟ ಪ್ರೇಮಗೀತೆಗಳನ್ನು ಓದಿದವರಿಗೆ ಎರಡರಲ್ಲೂ ಕಂಡುಬರುವ ಭ್ರಮೆಯಿಲ್ಲದ ಕಾಳಜಿ ಮತ್ತು ಭಾವಾಡಂಭರವಿಲ್ಲದ ಅನುಕಂಪೆ, ಎಚ್ಚರಗಳು ಹೇಗೆ ಭಟ್ಟರಿಗೆ ದೊಡ್ಡ ಕವಿಯ ಸಿದ್ಧತೆ ಇದೆಯೆಂದು ತೋರುತವೆ” ಎಂಬ ಲಂಕೇಶರ ಅಭಿಪ್ರಾಯ (೧೯೭೦ :xviii) ಇಂಥ ಕವಿತೆಗಳಿಗೆ ಸರಿಯಾಗಿ ಹೊಂದುತ್ತದೆ. ಆದರೂ ಮುಚ್ಚಿಟ್ಟ ಅವರ ವಿಡಂಬನೆಯ ಶಸ್ತ್ರ ಆಗಾಗ ಕೊಸರಿಕೊಂಡು ಬಂದು ಹೊರಗೆ ಹಣಿಕೆ ಹಾಕುವುದನ್ನು ಬಿಟ್ಟಿಲ್ಲ. ಉದಾಹರಣೆಗೆ ‘ಭೃಗು’, ‘ವಾತ್ಸಲ್ಯ’, ‘ಉಪಕಾರ’ದಂಥ ಚುಟುಕುಗಳೂ ಇವೆ. ವಿಡಂಬನೆಯಿಂದ ಪಾರಾಗಬೇಕೆಂಬ ಅಪೇಕ್ಷೆಯೇನೋ ಭಟ್ಟರಿಗಿದೆ. “ವಿಡಂಬನಕಾರನು ಕೊನೆಯವರೆಗೂ ವಿಡಂಬನಕಾರನಾಗಿಯೇ ಉಳಿದರೆ ಹುದುಲಲ್ಲಿ ಹುಗಿದು ಬಿದ್ದವನಂತೇ ಎಂದು ನನಗೆ ಈಗ ಅನಿಸುತ್ತದೆ. ಸಮಾಜದ ಅಂಕು ಡೊಂಕುಗಳನ್ನು ತನ್ನ ವಕ್ರದೃಷ್ಟಿಯ ಕಾಜಿನಲ್ಲಿ ತೋರಿಸುವುದು ಸ್ಥಾಯಿಯಾಗಿ ಬಿಟ್ಟರೆ ಕಾಮಳೆ ರೋಗವೇ ಬಂದು ಬಿಡಬಹುದು. ವಿಡಂಬನೆಯಿಂದ’ ಪಾರಾಗದಿದ್ದರೆ ಲೇಖಕನ ನರನಾಡಿಯೆಲ್ಲಾ ವಿಷಪೂರಿತವಾಗುವ ಬೆದರಿಕೆ ಇದೆ… ಸಾಹಿತ್ಯದ ವಿವಿಧ ಆಯಾಮಗಳ ದರ್ಶನಕ್ಕೆ, ಅನುಭವಕ್ಕೆ ವಿಡಂಬನೆಯನ್ನು ದಾಟಿ ಹೋಗುವುದಂತೂ ಅಗತ್ಯ” ಎಂದು ಭಟ್ಟರೇ ಒಂದೆಡೆ ಹೇಳಿದ್ದಾರೆ (೧೯೮೭: ೩೭-೩೮). ಆದರೆ ಭಟ್ಟರು ವಿಡಂಬನೆಯನ್ನು ಬಿಡಬೇಕೆಂದರೂ ವಿಡಂಬನೆ ಅವರನ್ನು ಬಿಡಲು ತಯಾರಿಲ್ಲ.

‘ಕಿಷ್ಕಿಂದೆ’ ಎಂಬ ಶೀರ್ಷಿಕಾ ಕವಿತೆಯಲ್ಲಿ ಭಟ್ಟರು ತಾವಿದ್ದ ಬಾಡಿಗೆಮನೆಯ ಸ್ಥಿತಿಯನ್ನು ವಿಡಂಬಿಸುತ್ತಲೇ, ಕವಿತೆಯ ಉದ್ದಕ್ಕೂ ಬಳಸುವ ಆಸ್ತಿಕ ಪ್ರತಿಮೆಗಳು ಈ ಹಂತದ ಕಾವ್ಯದ ಅಭ್ಯಾಸದ ದೃಷ್ಟಿಯಿಂದ ಬಹಳ ಮಹತ್ವದವಾಗಿವೆ. ಇಲ್ಲಿ ಉಪ್ಪು ಗಂಜಿಯೂ ‘ಅಮೃತಸಮಾನ’ವಾಗುತ್ತದೆ. ಎರಡು ವರ್ಷಕ್ಕೊಂದು ಮಗುವನ್ನು “ಕಳುಹಿದ ನಮ್ಮನು ಆಡಿಸಲೆಂದು” (ಯಾರು ಕಳಿಸಿದ್ದು?). ಅಸ್ತವ್ಯಸ್ತವಾಗಿ ಮಲಗಿಕೊಂಡ ನಾಲ್ವರು ಮಕ್ಕಳು “ಗಣಪತಿ ಮಂಡಲ ಸ್ವಸ್ತಿಕದಂತೆ” ಕಾಣುತ್ತಾರೆ. ಗೋಡೆಯ ಮಾಡದಲ್ಲಿಯ ದೇವರ ಪೀಠದ ಮುಂದೆ ಹೆಂಡತಿ ಹಚ್ಚಿಟ್ಟ ಊದಬತ್ತಿಯ ಪರಿಮಳದಂತೆ ಕಿಷ್ಕಿಂದೆಯಲ್ಲಿ ಆನಂದ ತುಂಬುತ್ತದೆ – “ಯಾವುದೊ ಕರುಣೆಯ ಕೃಪೆಯಿಂದ”. (ಈ ಕರುಣೆ ಯಾವುದೆ? ಕೃಪೆ ಬಂದದ್ದು ಎಲ್ಲಿಂದ, ಯಾರಿಂದ?) ಕವಿತೆ ಮುಕ್ತಾಯವಾಗುವುದು ಹೀಗೆ:

ಸಂಧಿಕಾಲ ಕೈ
ಜೋಡಿಸಿ ನಿಂತೆ
ನಿನ್ನದು ಜೀಯಾ
ಮುಂದಿನ ಚಿಂತೆ
ಏನೊ ಹಲುಬಿದೆ ತೊದಲಿಸಿದೆ.

ಈ ನೆಮ್ಮದಿಯ ಹಿಂದೆ ಯಾವುದೋ ಕರುಣೆಯ ಕೃಪೆ ಇದೆ ಎಂದು ಭಟ್ಟರ ಒಳಮನಸ್ಸಿಗೆ ಅನಿಸಿದರೂ ಅದನ್ನು ಎಚ್ಚರದಲ್ಲಿ ಒಪ್ಪಿಕೊಳ್ಳಲು ಅವರ ಹೊರಮನಸ್ಸು ಇನ್ನೂ ಹಿಂದೇಟು ಹಾಕುತ್ತಿರುವಂತಿದೆ. ಅದಕ್ಕಾಗಿಯೇ ಆ ಅನಿಸಿಕೆಯನ್ನು ಏನೋ ಹಲುಬುವಿಕೆ, ತೊದಲಿಕೆ ಎಂದು ಅಲ್ಲಗಳೆಯಲು ಯತ್ನಿಸುತ್ತಿದೆ.

ಆದರೂ ‘ಹಿಂದೆ-ಮುಂದೆ’, ‘ಉಗಿ’ ಮೊದಲಾದ ಕವಿತೆಗಳಲ್ಲಿ ಮೊದಲಿನ ನಾಸ್ತಿಕತೆಯ ಬಿರುಸು ಕಡಿಮೆಯಾಗುತ್ತ. “ಮಸ-ಮಸಕಾ”ಗಿ ಹೊಸ “ಅರಿವಿನ ನಸುಕ್ಕು” ಮೂಡತೊಡಗಿದಂತೆ ಕಾಣುತ್ತದೆ. “ಬ್ರಾಹ್ಮಣ ಜನ್ಮದಿ ಹುಟ್ಟಿದ ನಿಮಗೆ| ಇಲ್ಲವು ಜುಟ್ಟವು ಜನಿವಾರ” ಎಂದು ಛೇಡಿಸುವ ಹೆಂಡತಿಗೆ ಭಟ್ಟರು ಕೊಡುವ ಉತ್ತರ –

ನಾನು ಜಪತಪವ ಮಾಡೆನುಯೆಂದು
ನೀನು ತಿಳಿಯುವದು ತಪ್ಪು
ಅವುಗಳ ವಿವರವ ಕೊಡುವೆನು ಬರಲಿ
ನಮ್ಮಿಬ್ಬರಿಗೂ ಮುಪ್ಪು
(‘ಬ್ರಾಹ್ಮಣ ಜನ್ಮದಿ…’)

ಹಾರಿಕೆಯ, ವಿಡಂಬನೆಯ ರೀತಿಯದೆಂಬಂತೆ ಕಂಡರೂ, ಮುಂದೆ ಅದೇ ನಿಜವಾದುದು ಮುಂಗಾಣ್ಕೆಕ್ಯ ಹಿನ್ನೆಲೆಯಲ್ಲಿ ಇದು ಒಂದು ವ್ಯಂಗ್ಯವಾಗಿ ನಿಲ್ಲುತ್ತದೆ. ಮುಪ್ಪಿನಲ್ಲಿ ಎಲ್ಲರೂ ದೇವರ ಕಡೆಗೆ ತಿರುಗುತ್ತಾರೆಂದು ಹಂಗಿಸುವ ಭಟ್ಟರಿಗೂ ಮುಂದೆ ಅದೇ ಗತಿ ಬರಲಿದೆ.

‘ಕಿಷ್ಕಿಂದೆ’ (೧೯೫೮) ಮತ್ತು “ಮೂರ್ತಿ” (೧೯೬೪) ಸಂಕಲನಗಳ ನಡುವೆ ಮತ್ತೆ ಆರು ವರ್ಷಗಳ ಅಂತರವಿದೆ. ಈ ನಡುವೆ ಭಟ್ಟರ ಬದುಕನ್ನು ತಲ್ಲಣಗೊಳಿಸಿದ ಯಾವದೋ ಅನುಭವ ಆಗಿದೆ:

 ನನ್ನ ಹಿಡಿದು ಹಿಚುಕ ಬರುವ
s ಭದ್ರ ಮುಷ್ಟಿಯೇ
ನಿನ್ನ ಕರುಣೆ ಇಷ್ಟೆಯೇ?
         (‘ಸಾಧನೆ’)

ಆದರೂ ಭಟ್ಟರು ತಮ್ಮ ಆತ್ಮವಿಶ್ವಾಸವನ್ನೇನೂ ಕಳೆದುಕೊಳ್ಳುವುದಿಲ್ಲ. ದೈವ ತೋರಿಸಿದ ಹಾದಿಯಲ್ಲಲ್ಲ. ತಾನು ರೂಪಿಸಿಕೊಂಡ ಬದುಕಿನ ಹಾದಿಯಲ್ಲಿಯೇ ನಡೆಯಬೇಕೆಂಬ ಛಲ ಹಾಗೇ ಇದೆ:

 ನನಗು ಒಂದು ರೇಖೆಯುಂಟು
ಬರೆದ ಕೈಯೆ ಅಳಿಸದು
ಪಥದಲಿ ನಾ ನಡೆದಿರೆ
ಬೆನ್ನಿನಲ್ಲಿ ತಿವಿಯಲೆಂದು
ಕಟುಕರನ್ನು ಕಳಿಸದು.
       (‘ಸಾಧನೆ’)

ಎಂಬ ಭರವಸೆ ಇದೆ. ಆದರೆ ಅದೂ ನಂಬಿಕೆಯ ಪರಿಣಾಮವಾಗಿಯೇ ಬಂದದ್ದು.

ಭಟ್ಟರ ಉಳಿದ ಸಂಕಲನಗಳಿಗಿಂತ ಭಿನ್ನವಾದ, ನಂಬಿಕೆ – ಅಪನಂಬಿಕೆಗಳ ನಡುವೆ ಹೊಯ್ದಾಡುವ ಕವಿತೆಗಳು “ಮೂರ್ತಿ” ಸಂಕಲನದಲ್ಲಿವೆ. ಇದೇ ಅವಧಿಯಲ್ಲೇ ದಿವ್ಯಾಂಶವೊಂದು ಬಂದು ಸೋಂಕಿದ ಅನುಭವ ಭಟ್ಟರಿಗಾಯಿತಂತೆ:

ಧೇನಿಸಿದೆ ದಿವ್ಯಾಂಶ ಸೋಂಕಿತ್ತು ಬಂದು
ಮಂತ್ರದೇಹದ ಮೂರ್ತಿ ಹೃದಯದಲಿ ನಿಂತು
ಅರ್ಧ ಆಯುಷ್ಯವೇ ಸವೆದ ಮೇಲಿನ ಮಾತು
ಈಗಾದರೂ ಆಯ್ತು ಪಾವನವು ಜಂತು!
(‘ಸೋಂಕಿತ್ತು ದಿವ್ಯಾಂಶ’)

ಈ ಹೊಸ ಅನುಭವ ಅವರಿಗೆ ಹೊಸ ಜನ್ಮ ಕೊಟ್ಟಿತು. ಶಿವ ಕನಸಿನಲ್ಲಿ ಬಂದು ವರ ಕೇಳಲು ಹೇಳಿದರೆ ಭಟ್ಟರು ಅವನಲ್ಲಿ ಮಾಡುವ ಪ್ರಾರ್ಥನೆ ಹೀಗಿದೆ:

ನನಗೇನು ಬೇಕು ನನಗೆಷ್ಟು ಸಾಕು
ಎಲ್ಲೆಲ್ಲಿ ಯಾವ ಹೊತ್ತು
ಎಂಬೆಲ್ಲ ವಿಷಯ ನನಗಿಂತ ಚೆನ್ನ
ನಿನಗೇನೆ ಶಿವನೆ ಗೊತ್ತು

ಕೊಡಲು ನೀನು ಬಲು ಗಟ್ಟಿ! ಅದಕ್ಕೆ ನಾ
ನಾಗಬೇಕು ತಕ್ಕ
ನಾ ಪಡೆದುದಕ್ಕೆ ಒಪ್ಪಿಸಲೇ ಬೇಕು
ನಯಪೈಸ ಪೂರ ಲೆಕ್ಕ

ಭಟ್ಟರು ಮತ್ತೆ ಕೇಳುತ್ತಾರೆ:

 “ಕೃಪೆಯ ಪಾತ್ರತೆಯ ಕಾಯ್ದುಕೊಳ್ಳೆ ಕೊನೆ
ತನಕ ಶಕ್ತಿ ನೀಡು
ಪಡೆದ ಮೇಲೆ ತಪ್ಪಿ ಕೊಡ ಕೆಡು
ಕೆಸಗದಂತೆ ನೋಡು
      (‘ಕೃಪೆ’)

ಇದು ಪ್ರಾರ್ಥನೆಯೇನೋ ನಿಜ. ಶಿವನಲ್ಲಿ ಕೇಳಿಕೊಂಡದ್ದೂ ನಿಜ. ಆದರೆ ಇದು ಕನಸಿನಲ್ಲಿ ನಡೆದದ್ದು. ಭಟ್ಟರ ಮನಃಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರೂ, ದೇವರನ್ನು ಅವರಿನ್ನೂ ನೇರವಾಗಿ, ಎಚ್ಚರದಲ್ಲಿ ಎದುರಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ದೈವಕೃಪೆ ಬಂದರೂ ಅದನ್ನು ವರವೆಂದು ತೆಗೆದುಕೊಳ್ಳಲು ಅವರು ತಯಾರಿಲ್ಲ. ಆ ಕೃಪೆಗೆ ತಾನು ಅರ್ಹನಾಗಬೇಕು, ಕೃಪೆಯನ್ನು ಸಾಲವೆಂದು ಪರಿಗಣಿಸಬೇಕು ಮತ್ತು ಈ ಸಾಲವನ್ನು ಚುಕ್ತಾ ಮಾಡಬೇಕು – ಎಂಬುದನ್ನು ಅವರು ಕನಸಿನಲ್ಲಿಯೂ ಮರೆಯುವುದಿಲ್ಲ.

“ಮೂರ್ತಿ” ಸಂಕಲನದ ಒಂದು ‘ಪ್ರಾರ್ಥನೆ’ ಹೀಗಿದೆ:

 ಮನಸು ಮಾಡಿ ಒಳಿತು ಗೈ
ಆಗದಿದ್ದರಿಲ್ಲವಂತೆ
ಸುಮ್ಮನಿದ್ದರೂನು ಸೈ
ಪುಣ್ಯವಂತನೆನುವೆನಯ್ಯ
ಕೆಡುಕಿಗೆ ಮುಂದಾಗದಿರಲು
ನಿನ್ನ ಶಕ್ತಿವಂತ ಕೈ

ಇಲ್ಲಿಯ ಪ್ರಾರ್ಥನೆ ಯಾರಿಗೆ ಸಲ್ಲಿಸಿದ್ದು? ದೇವರಿಗೋ, ಅಥವಾ ತನಗೆ ತಾನೇ ಹೇಳಿಕೊಂಡದ್ದೋ? ಎರಡೂ ಆಗುವಂತೆ ಸಂಭೋದನೆ ಸಂದಿಗ್ಧವಾಗಿದೆ. ಕವಿತೆಯ ಕೊನೆಯ ನುಡಿಯಲ್ಲಿ ಭಗವಾನ್ ಬರುತ್ತಾನೆ. ಆದರೆ ಈ ಭಗವಾನ ದೇವರಲ್ಲ, ಭಗವಾನ್ ಎನಿಸಿದ ರಮಣ ಮಹರ್ಷಿ:

 ನಮೋ ನಮೋ ಶ್ರೀ ರಮಣಗೆ
ಭಗವಾನ್ ಎನಿಸಿದ  ‘ಬೆಪ್ಪಗೆ

ರಮಣ ಮಹರ್ಷಿ ಭಗವಾನ್ ನಿಜ. ಆತ ತೆಪ್ಪಗೆ ಬದುಕುವದೂ ಒಂದು ಕಲೆ ಎಂದು ತೋರಿಸಿದವನು. ಆದರೆ ಲೋಕದ ಕಣ್ಣಲ್ಲಿ ಆತನೊಬ್ಬ ‘ಬೆಪ್ಪ’! ಭಟ್ಟರ ತುಂಟತನ ಎಲ್ಲಿಗೂ ಹೋಗದು. ಪರೋಕ್ಷಕ್ಕಾಗಿಯಾದರೂ ಅದು ಹಣಿಕಿ ಹಾಕುತ್ತಲೇ ಇರುತ್ತದೆ.

“ಆತ್ಮಗೀತೆ”ಗೆ (೧೯೭೦) ಬರುವ ಹೊತ್ತಿಗೆ ಮತ್ತೆ ಆರು ವರ್ಷಗಳು ಉರುಳಿವೆ. “ಮೂರ್ತಿ”ಯ ಮೂಡು ಇನ್ನೂ ಮುಂದುವರಿದಿದೆ ಎಂದು ಸೂಚಿಸಲು ಅಲ್ಲಿಯ ಕೊನೆಯ ಕವಿತೆಯಾದ ‘ಆತ್ಮಗೀತೆ’ ಇಲ್ಲಿಯ ಸಂಕಲನದ ಶೀರ್ಷಿಕಾ ಕವಿತೆಯಾಗಿ “ಆತ್ಮಗೀತೆ”ಯ ಮೊದಲಿಗೆ ಬಂದಿದೆ. ಈ ಸಂಕಲನದಲ್ಲಿ ದೇವರು ಮೂರ್ತವಾಗಿ, ಹೆಸರುಗೊಂಡು ಬರುತ್ತಾನೆ. ಹಾಗೆಯೇ ಜೀವದ ಅಸಹಾಯ ತೊಳಲಾಟವನ್ನು ಕುರಿತ ಕವಿತೆಗಳು ಇಲ್ಲಿ ಹೆಚ್ಚು ಬಂದಿವೆ.

ಈ ಸಂಕಲನದಲ್ಲಿ ನಾಲ್ಕು ‘ಪ್ರಾರ್ಥನೆ’ಗಳಿವೆ. ಇಲ್ಲಿ ಬೇಡಿಕೆಗಳಿವೆ, ಕೋರಿಕೆಗಳಿವೆ. ಆದರೆ ಇವೆಂಥ ಕೋರಿಕೆಗಳು? –

 ನನ್ನ ಹಾದಿಯ ತುಳಿವ ಶಕ್ತಿ ನನಗಿರಲಿ
ತುಳಸಿ ನೋಡುವ ಕರುಣೆ ನಿನಗು ಇರಲಿ
       (‘ಪ್ರಾರ್ಥನೆ-೧’)

ತಮ್ಮ ದಾರಿಯಲ್ಲೇ ತಾವು ಹೋಗುವ ಭಟ್ಟರ ನಿರ್ಧಾರ ಹಾಗೆಯೇ ಇದೆ. ಅದೇ ದಾರಿಯನ್ನೇ ತುಳಿದು ಹೋಗುವಂತೆ ನೋಡಿಕೊಳ್ಳುವ ಕೆಲಸ ಮಾತ್ರ ದೇವರದು! ಅಥವಾ ‘ತುಳಸಿ’ ಎಂಬ ಶಬ್ದಕ್ಕೆ ಭಟ್ಟರು ಇನ್ನೊಂದು ವಿಪರೀತ ಅರ್ಥವನ್ನೂ ಕೊಟ್ಟು ವ್ಯಂಗ್ಯವಾಡುತ್ತಿದ್ದಾರೊ? ಇರಲಿಕ್ಕಿಲ್ಲ. ಆದರೂ ಭಟ್ಟರ ವಿಷಯದಲ್ಲಿ ಹಾಗೆ ಖಚಿತವಾಗಿ ಹೇಳಲು ಬರುವುದಿಲ್ಲ. ಇನ್ನೊಂದು ಪ್ರಾರ್ಥನೆ ಹೀಗೆ ಮುಗಿಯುತ್ತದೆ:

ನನಗಿರಲಿ ಬಂದದ್ದು ಹಿಡಿದು ನೂಕುವ ಮುಷ್ಟಿ
ಇದ್ದುದನು ಇದ್ದಂತೆ ಕಾಂಬ ದೃಷ್ಟಿ
ನಿನ್ನಿಚ್ಛೆಯಂತೆಯೇ ನಡೆಸಿಕೊಡು. ನಡೆದಿರಲಿ
ಕಲಸುಮೇಲೋಗರದ ನಿನ್ನ ಸೃಷ್ಟಿ.
(‘ಪ್ರಾರ್ಥನೆ-೨’)

ಇಲ್ಲಿ ಭಟ್ಟರು ದೇವರಿಗೆ ಬೇರೆ ಆಯ್ಕೆಯನ್ನಾದರೂ ಎಲ್ಲಿ ಬಿಟ್ಟಿದ್ದಾರೆ? ಅವನು ತನ್ನ ಇಚ್ಛೆಯಂತೆ ನಡೆಸಿಕೊಡುವುದೆಂದರೆ ಭಟ್ಟರ ಇಚ್ಛೆಯನ್ನೇ ನಡೆಸಿಕೊಡಬೇಕಾಗುತ್ತದೆ. ಮೇಲೆ ಅವನ ಸೃಷ್ಟಿ “ಕಲಲ್ಸುಮೇಲೋಗರದ ಸೃಷ್ಟಿ” ಎಂಬ ಕೊಂಡು ಬೇರೆ! ‘ಎಲ್ಲವೂ ಅವನ ಇಚ್ಛೆಯಂತೆಯೇ ನಡೆಯಲಿ’ ಎಂದು ಎಲ್ಲವನ್ನೂ ದೇವರಿಗೇ ಒಪ್ಪಿಸಿ ಕೈ ಚೆಲ್ಲಿ ಕೂಡ್ರುವ ಶರಣ್ಯಭಾವ ಇದಲ್ಲ. ಅವರ ಮನೋಧರ್ಮದ ಮೂಲ ಲಕ್ಷಣವಾದ ಎಡಸೊಕ್ಕು, ದಿಮಾಕು, ಬಿಗುಮಾನ (ಇವುಗಳಿಗೇ ‘ಸ್ವಾಭಿಮಾನ’, ‘ಆತ್ಮವಿಶ್ವಾಸ’ ಎಂಬ ಗೌರವದ ಹೆಸರು.) ಹೋಗಿಯೇ ಇಲ್ಲ. ದೇವರ ಎದುರಿಗೆ ಕೂಡ ಅದು ಬದಲಾಗುವುದಿಲ್ಲ:

ಶಿವಕರುಣೆಯಿಲ್ಲದೆಯೆ ಬದುಕಲಾರೆನುಯೆಂದು
ಜಪಿಸುವ ಅಳುಬುರುಕ ಅರೆಗಂಡು ಹೇಡಿ
ತನ್ನ ಮಕ್ಕಳು ಸದಾ ತನಗೆ ಜೋತಿರಬೇಕು
ಎಂಬ ತಂದೆಯು ಶುದ್ಧ ಮೂರ್ಖ ತಿಳಿಗೇಡಿ
      (‘ಪ್ರಾರ್ಥನೆ-೩’)

ಇಲ್ಲಿ ದೇವರಿಗೆ ಬಂದಿರುವ ಗತಿಯನ್ನು ನೋಡಬೇಕು. ಈ ಅವಧಿಯಲ್ಲಿ (ನಂತರವೂ) ಭಟ್ಟರ ಮನಸ್ಸು ‘ಬಾಗುವ’, ‘ಸೆಟೆಯುವ’ ಎರಡೂ ಅವಸ್ಥೆಗಳ ನಡುವೆ ಹೊಯ್ದಾಡುತ್ತದೆ. ಸೆಟೆದದ್ದು ಬಾಗುವುದು ಸುಲಭವಲ್ಲ. ಅಭಿಮಾನ ಅಡ್ಡಬರುತ್ತದೆ. ಅಭಿಮಾನ ಅಳಿಯದೆ ಸ್ವೀಕೃತಿ ಪೂರ್ಣವಾಗುವುದಿಲ್ಲ. ಈ ಕಷ್ಟವನ್ನು ಭಟ್ಟರ ಕಾವ್ಯ ಬಹಳ ಚೆನ್ನಾಗಿ ಅಭಿವ್ಯಕ್ತಿಸಿದೆ.

“ಮರಳಿ ಬಂದ ಕವಿತೆ”ಯಲ್ಲೂ (೧೯೮೫) ಪ್ರಾರ್ಥನೆಗಳಿವೆ. ಇಲ್ಲಿ ಪ್ರಾರ್ಥನೆಯ ಸ್ವರೂಪ, ಅರ್ಥಗಳ ಬಗೆಗೇ ತಾತ್ವಿಕ ಚಿಂತನೆ ಇದೆ:

 ಪ್ರಾರ್ಥನೆ ಎಂದರೆ ಬೇಡಿಕೆಯಲ್ಲವು
ಅದು ಪರಶಕ್ತಿಯ ನೀಡಿಕೆಯು
ಅದನು ಸ್ವೀಕರಿಸೆ ಎದೆಯ ಹದಗೊಳಿಸಿ
ಎರೆದು ಬಂದುದಲಿ ಕೂಡಿಕೆಯು

ಕೂಡಿಕೆಯೆಂದರು ಸಹ ಸರಿಯೆನಿಸದು
ಅದರಲಿ ಇದು ಸೇರ್ ಬೆರೆಯುವಿಕೆ
ಉಚ್ಚರಿಸುವ ನುಡಿ ಎಚ್ಚರದಿಂದಲಿ
ಪರಶಕ್ತಿಯ ಕರೆಯುವಿಕೆ
        (‘ಪ್ರಾರ್ಥನೆ’)

ಪ್ರಾರ್ಥನೆಯ ಶಕ್ತಿಯನ್ನು ಉದಾಹರಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಪ್ರಯೋಗವೊಂದನ್ನು ಕುರಿತು ಭಟ್ಟರು ಬರೆದಿರುವ ಪದ್ಯ “ರಚನೆಯಿಂದ ವಿಸರ್ಜನೆಗೆ” (೧೯೮೬) ಸಂಕಲನದಲ್ಲಿದೆ. ಪ್ರಾರ್ಥನೆ ಮಾಡಿ, ಅದರ ಜಲವನ್ನು ಸಂಪ್ರೋಕ್ಷಣೆ ಮಾಡಿದಾಗ ಬೀಜವೊಂದು ತಕ್ಷಣ ಮೊಳಕೆಯೊಡೆಯಿತಂತೆ! ಹಾಗೆ ಮಾಡದ ಇನ್ನೊಂದು ಬೀಜ ಮೊಳಕೆಯೊಡೆಯಲು ಬಹಳ ದಿನ ಹಿಡಿಯಿತಂತೆ! ಪ್ರಾರ್ಥನೆಯ ಜಲವನ್ನು ಸ್ವೀಕರಿಸಿದ ಬೀಜದ ಭಾವಚಿತ್ರ ತೆಗೆದು ನೋಡಿದರೆ ಅದರಲ್ಲಿ ಸ್ವಾಮಿಯ ಕೊರಳಿನ ರುದ್ರಾಕ್ಷಿ ಮೂಡಿತ್ತಂತೆ! ಇದನ್ನು ನೋಡಿದ ವಿಜ್ಞಾನಿಗೇನೋ “ನಂಬಲು ಬಾರದ ನಗೆ” ಬರುತ್ತದೆ. ಆದರೆ ಭಟ್ಟರಿಗೆ ಬರುವುದಿಲ್ಲ:

ಪ್ರೇಮ, ಪ್ರಾರ್ಥನೆಯ ವ್ಯಾಪಕ ಶಕ್ತಿಗೆ
ಇದು ವೈಜ್ಞಾನಿಕ ಸಾಕ್ಷಿ
       (‘ಪ್ರಾರ್ಥನೆ’)

ಎಂದು ಭಟ್ಟರು ನಿಸ್ಸಂಕೋಚವಾಗಿ ಹೇಳುತ್ತಾರೆ. ಇಂಥಲ್ಲಿ ಭಟ್ಟರು “ಕಾವ್ಯವೇದನೆ”ಯ ದಿನಗಳನ್ನು ಬಹಳ ಹಿಂದೆ ಬಿಟ್ಟು ಬಂದಂತೆ ಕಾಣುತ್ತದೆ.

“ಸ್ವಾಗತಂ: (೧೯೮೫) ಸಂಕಲನದ ಪದ್ಯಗಳಿಗೆ ಹೆಸರುಗಳಿಲ್ಲ. (“ಮರಳಿ ಬಂದ ಕವಿತೆ”ಯ ಎರಡನೆಯ ಭಾಗದ ಮತ್ತು “ಬಿಂದು ಬಿಂದು ಸಾರ”ದ ಕವಿತೆಗಳಿಗೂ ಹೆಸರುಗಳಿಲ್ಲ. ಎಷ್ಟಕ್ಕಂತ ಹೆಸರು ಕೊಡುವದು!) ಆದರೆ ಇಲ್ಲಿಯೂ ಪ್ರಾರ್ಥನೆಯನ್ನು ಕುರಿತು ಪದ್ಯಗಳಿವೆ. ಒಂದೆರಡು ಉದಾಹರಣೆ:

ಆಕಾಶದ ಜತೆ ಅದು
ಪ್ರೇಮದ ಮಾತು
ಸಹಜ ನಿವೇದನೆ ಹೃದಯವೆ ಹೂತು
ಯಾವುದೆ ತರದ ನಿರೀಕ್ಷೆ
ಇರದಿರುವದೆ ನಿನ್ನ ಪರೀಕ್ಷೆ

ಉತ್ತರ ಸಿಗಲೀ ಬಿಡಲೀ
ನಿನಗೇತಕೆ ಚಿಂತೆ?
ನಿನ್ನ ಜೀವವೇ ಸ್ವಾಗತಗೈಯಲು
ನಿಂತರೆ ಸಾಕಂತೆ ()

ಇದು ಸಂಪೂರ್ಣ ಸ್ವೀಕಾರದ ಸ್ಥಿತಿಯಾಗಿರುವಂತೆ ಕಾಣುತ್ತದೆ. ಪ್ರಾರ್ಥನೆ ಎನ್ನುವುದು –

ಅಲ್ಲವು ಅದು ಪರ
ಮಾತ್ಮನ ರಂಜನ
ಇದೆ ಅದು ನಿನ್ನದೆ
ಪ್ರಾಣದ ಗುಂಜನ

ಮಾಡಲು ಬಾರದು
ಆಗುವದದುವೇ
ಪರಮಾತ್ಮನ ಜತೆ
ಆತ್ಮನ ಮದುವೆ (೧೬)

ಪ್ರೇಮವಿಲ್ಲದಾ ಪ್ರಾರ್ಥನೆ ಬರಿದೋ
ಬರಿದಾಗಿಹ ಮಟ ಮಣವು

ಪ್ರಾರ್ಥನೆಯಿಲ್ಲದ ಜೀವವ ಸೋಂಕದು
ಪರಮಾತ್ಮನ ಕಣವೂ (೩೫)

ಇಂಥಲ್ಲಿ ಭಟ್ಟರ ಕಾವ್ಯ ಅನುಭಾವ ಸ್ವರೂಪ ಪಡೆದುಕೊಳ್ಳುತ್ತದೆ. ಇದೇ ಸಂಕಲನದಲ್ಲಿ ಝೂಸ್ಯ ಎಂಬ ಸಂತನೊಬ್ಬನ ಪ್ರಾರ್ಥನೆಯ ಭಾವಾನುವಾದವನ್ನು ಭಟ್ಟರು ಸೇರಿಸಿದ್ದಾರೆ. ಇದು ಜೀವಾತ್ಮ-ಪರಮಾತ್ಮರ ಸಂಬಂಧವನ್ನು ಕುರಿತ ಪದ್ಯ:

ನಾನಿರಲಾರೆನು ಪರಮಾತ್ಮಾ
ನೀನಿಲ್ಲದ ಹೊರತು
ನೀನೂ ಇರುವದಸಾಧ್ಯವು
ನನ್ನನು ನೀ ಮರೆತು

ನೀ ನನಗೂ ನಾ ನಿನಗೂ
ಬೇಕೇ ಬೇಕು ಅಗತ್ಯಾ
ನಮ್ಮಿಬ್ಬರ ಸಂಗದಲೇ
ಇದೆ ನಿತ್ಯಾ ಸತ್ಯಾ

ನೀನಿಲ್ಲದೆ ನಾನಾಗೆನು
ನಾನಿರದೇ ನೀನು
ನಮ್ಮಿಬ್ಬರ ಮೇಳದಲೇ
ಭೂಮಿ ಬಾನು

ಈ ಹೊತ್ತಿಗೆ, ಝಾಸ್ಯನ ಈ ನಿಲುವಿಗೆ ಭಟ್ಟರೂ ಬಂದು ತಲುಪಿದ್ದಾರೆಯೆ? ಈ ಅನುವಾದದ ಹಿಂದಿನ ಆಶಯ ಒಪ್ಪಿಗೆಯದೋ, ಅಥವಾ ತನಗೆ ಸಾಧ್ಯವಾಗದಿರುವ ಒಂದು ಸ್ಥಿತಿಯನ್ನು ತನ್ನದೆಂದುಕೊಳ್ಳುವ ಪ್ರಯತ್ನವೊ? ಅಥವಾ ತಮಗೆ ಹೇಳಲು ಮುಜುಗರವಾಗುವುದನ್ನು ಝಾಸ್ಯನ ಬಾಯಲ್ಲಿ ಹೇಳಿಸುತ್ತಿದ್ದಾರೊ? ಅವರ ಸ್ವತಂತ್ರ ಕಾವ್ಯರಾಶಿಯಲ್ಲಿ ದೇವರ ಜೊತೆಗಿನ ಅವರ ಸಂಬಂಧ ಇಷ್ಟು ದೂರ ಅಥವಾ ಸಮೀಪ ಹೋಗುವುದಿಲ್ಲ. ಎಲ್ಲ ಪ್ರಾರ್ಥನೆಗಳಲ್ಲೂ ಅವನನ್ನು ದೂರದಲ್ಲಿ ನಿಲ್ಲಿಸಿ ಮಾತಾಡುತ್ತಿರುವಂತಿದೆ. ಸಂಪೂರ್ಣ ಸಮರ್ಪಣದ ಆಶಯ ಇದ್ದರೂ ಇನ್ನೇನೂ (ಅಭಿಮಾನ?) ಬಂದು ಅವರನ್ನು ಹಿಂದಕ್ಕೆ ಜಗ್ಗುತ್ತಿರುವಂತಿದೆ. ಈ ಬಗೆಯ ತೊಳಲಾಟ ಅವರ ಅನೇಕ ಕವಿತೆಗಳಲ್ಲಿ ಕಾಣುತ್ತದೆ. ಒಂದು ಕವಿತೆಯಲ್ಲಿ ಎರಡು ಹೆಜ್ಜೆ ಮುಂದೆ ಹೋದರೆನ್ನುವಷ್ಟರಲ್ಲಿ ಇನ್ನೊಂದು ಕವಿತೆಯಲ್ಲಿ ಒಂದು ಹೆಜ್ಜೆ ಹಿಂದೆ ಬಂದಿರುತ್ತಾರೆ. ಮುಂದೆ ಹೋಗಬೇಕೆನ್ನುವ ಅವರ ಪ್ರಯತ್ನದಲ್ಲಿ ಅವರ ಕಾವ್ಯದ ಲಯಗಾರಿಕೆಯೂ ಅವರೊಂದಿಗೆ ಸಹಕರಿಸುತ್ತಿಲ್ಲ. ಅವರಿಗೆ ಅತ್ಯಂತ ಪ್ರಿಯವಾಗಿರುವ ಪ್ರಾಸ (ಚುಟುಕದ ಬಳುವಳಿ), ಮೂರು, ನಾಲ್ಕು ಮಾತ್ರೆಗಳ ಕಿರುಗೆಜ್ಜೆಯ ಕುಣಿತದ ಧ್ರುತಗತಿಯ ಛಂದಸ್ಸು ಮತ್ತು ಜನ್ಮಕ್ಕೆ ಅಂಟಿಕೊಂಡಿರುವ ತುಂಟತನ ಅವರ ಉದ್ದೇಶವನ್ನು ಬುಡಮೇಲು (Sabotage) ಮಾಡುತ್ತಿರುವಂತಿದೆ. ಇವೆಲ್ಲಾ ಝಾಸ್ಮನ ಅನುವಾದದಲ್ಲೂ ಸೇರಿಕೊಂಡಿವೆ. ಕೊನೆಗೂ ಭಟ್ಟರು ತಮ್ಮ ವ್ಯಕ್ತಿತ್ವವನ್ನು ಪೂರ್ತಿ ಕರಗಿಸಿ ಬಿಡಲು ಒಪ್ಪುವುದೇ ಇಲ್ಲ ಎನಿಸುತ್ತದೆ.