“ಉತ್ಥಾನ” (೧೯೯೨) ಕೂಡ ಇದೇ ಕಾಲಾವಧಿಯಲ್ಲಿ ರಚನೆಯಾದ ಸಂಕಲನ. ಇದರಲ್ಲೂ ಪ್ರಾರ್ಥನೆಯ ಸ್ವರೂಪವನ್ನು ಕುರಿತಂತೆ ಸ್ವಲ್ಪ ದೀರ್ಘವಾದ ಕವಿತೆಯೊಂದಿದೆ:

ಜಡತ್ವದಲಿ ಹಿಡಿಸಿಟ್ಟಿದೆ ಜೀವದ
ಜಗ್ಗಿಸಿ ವಸ್ತುವಿನಂತೆ ನೆಲ
ತಿಳಿಯದೆ ಹೋಯಿತು: ಪ್ರಾರ್ಥನೆಯಲ್ಲಿದೆ
ಮೇಲಕೇರಿಸುವ ಸೂಕ್ಷ್ಮ ಬಲ

ಕಾರ್ಯಾರಂಭಕೆ ಪ್ರಾರ್ಥನೆ ಮೊದಲಿಗೆ
ಮಾಡುವ ಪದ್ಧತಿ ಇದಕೇನೇ
ಧರ್ಮದ ತಿರುಳನು ತುಸುವಾದರು ತಿಳಿ
ಪರಿವರ್ತಿಸುವುದು ಬದುಕೇನೇ
ಸಂಪ್ರದಾಯಗಳನೆಲ್ಲ ಹಳಿಯದಿರು
ಹಳೆಯದಲ್ಲವೂ ಬರಡೆಂದು

***

 ಹಳಬರು ಗಳಿಸಿದ ಅನುಭವಗಳನೂ
ಪರಮರ್ಶಿಸಿಯೇ ತಿಳಿಯುತಿರು
ಸನಾತನವು ಇದೆ ನಿತ್ಯನೂತನವು
ನಿಂದೆಯಲೇ ದಿನ ಕಳೆಯದಿರು.
       (‘ಪ್ರಾರ್ಥನೆ‘)

ಇದು ಆತ್ಮನಿವೇದನೆಯೋ, ಪರೋಪದೇಶವೋ? ಎರಡೂ ಇದ್ದೀತು. ಭಟ್ಟರು ಈಗಾಗಲೇ ಈ ನಿಲುವಿಗೆ ಬಂದಾಗಿದೆ. ಉಳಿದವರೂ ಬರಬೇಕೆಂದು ಅವರ ಅಪೇಕ್ಷೆ. ಇಲ್ಲಿ ಹಳಬರು ಗಳಿಸಿದ ಅನುಭವವನ್ನು ಪರಾಮರ್ಶಿಸಿ ಒಪ್ಪಬೇಕೆಂಬ ಎಚ್ಚರವೊಂದನ್ನು ಬಿಟ್ಟರೆ, ಭಟ್ಟರಲ್ಲಿ ಆದ ಬದಲಾವಣೆ ಆಶ್ಚರ್ಯವನ್ನುಂಟು ಮಾಡುತ್ತದೆ. ಅದು ಯಾವ ಮಟ್ಟಕ್ಕೆ ಏರುತ್ತದೆ ಅಥವಾ ಇಳಿಯುತ್ತದೆ ಎಂದರೆ ಸಂಪ್ರದಾಯಗಳ ಸಮರ್ಥನೆಗೂ ನಿಲ್ಲುತ್ತದೆ!

“ಪ್ರಾರ್ಥನೆ (ಅಂತಿಮ)” (೧೯೯೨) ಕೂಡ ಇದೇ ಅವಧಿಗೆ ಸೇರಿದ್ದು. ಅವರ ಈ ಕೊನೆಯ ಕವನಸಂಕಲನದ ಹೆಸರೇ “ಪ್ರಾರ್ಥನೆ” ಎಂದಿರುವುದು ಒಂದು ದೃಷ್ಟಿಯಿಂದ ಅರ್ಥಪೂರ್ಣವಾಗಿದೆ. (ಭಟ್ಟರು ಇದನ್ನು “ಶಬ್ದವಲ್ಲರಿ” ಎಂದು ಕರೆದಿದ್ದರಂತೆ. ಪ್ರಕಾಶಕರಾದ ಅವರ ಮಗ ರಘುವೀರ ಭಟ್ಟರು ಅದನ್ನು ಬದಲಿಸಿದ್ದಾರೆ.) ಆದರೆ ಈ ಸಂಕಲನದಲ್ಲಿರುವ ಎಲ್ಲ ಪದ್ಯಗಳ ಕೇಂದ್ರ ಆಶಯವೆಂದು ಅದನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಬೇರೆಬೇರೆ ಮೂಡು-ಆಶಯಗಳಿಗೆ ಸೇರುವ ವೈವಿಧ್ಯಮಯ ವಿಷಯ ಕುರಿತ ಪದ್ಯಗಳು, ಚುಟುಕಗಳು ಇದರಲ್ಲಿ ಸೇರಿವೆ. ಇದರಲ್ಲೂ ನಾಲ್ಕು ‘ಪ್ರಾರ್ಥನೆ’ ಹೆಸರಿನ ಕವಿತೆಗಳಿವೆ. ಈ ಅವಧಿಯಲ್ಲಿ ಪ್ರಾರ್ಥನೆಯನ್ನು ಕುರಿತು ಗಂಭೀರವಾಗಿ ಬರೆದು ಬರೆದು ಭಟ್ಟರಿಗೆ ಸಾಕಾಗಿರಬೇಕು. ಅವರ ಕಾವ್ಯದ ಒಂದು ಪ್ರಮುಖ ಧಾರೆಯಾದ ಚುಟುಕತ್ವ ಈ ಅವಧಿಯಲ್ಲೂ ಸಾಕಷ್ಟು ಜಾಗೃತವಾಗಿಯೇ ಇದೆ. ಅಲ್ಲಿ ಗಂಭೀರ ವಿಷಯಗಳನ್ನು ಕೂಡ ಚಮತ್ಕಾರದಿಂದ ನೋಡಿ ನಗುವ ಕೆಲಸ ನಡೆದೇ ಇದೆ. ಅವರ ವಿಡಂಬಕ ಪ್ರತಿಭೆಯ ಕೈ ಚುಟುಚುಟು ಎಂದಿರಬೇಕು. ಅದಕ್ಕಾಗಿಯೇ ‘ಹೀಗೂ ಒಂದು ಪ್ರಾರ್ಥನೆ’ ಎಂಬ ಕವಿತೆಯನ್ನು ಬರೆದಂತಿದೆ:

ಸಕಲ ಸಂಪದವ, ಸುಖವ ಕರುಣಿಸೋ
ಪೂಜಿಸುವೆನು ಪ್ರತಿ ದಿನಾ
ಅನಾಥ, ದುರ್ಬಲ, ಅತಿ ದೀನನು
ಬದುಕಲಾರೆ ನಿನ ಕೃಪೆಯ ವಿನಾ

ಮಗನಿಗೆ ಒಳ್ಳೆಯ ನೌಕರಿ, ಮಗಳಿಗೆ
ಸುರೂಪಿ ವರ ಸಿರಿವಂತ
ತ್ವರಿತದಿ ದೊರೆಯಲಿ ಕಣ್ತೆರೆ ದೊರೆಯೇ
ಜಗಚ್ಚಾಲಕಾ ಭಗವಂತಾ

ಈತನ ಪ್ರಾರ್ಥನೆ ಆರಾಧನೆಗಳ
ಸ್ವೀಕರಿಸೋ ಶ್ರೀ ಹರಿಯೇ
ನಾನು ಕೊಂಡಿರುವ ಲಾಟ್ರಿ ಟಿಕೀಟಿನ
ನಂಬರು ನೆನಪಿಡು ಸರಿಯೇ

ಲಕ್ಷದ ಕಡೆ ಇಡು ಲಕ್ಷ್ಯವ ಲಕ್ಷ್ಮೀ
ಪತಿಯೇ ಕಿಂಚಿತು ಪಾಲು
ವಂಚನೆಯಿಲ್ಲದೆ ಹಂಚುವೆ ನಿನಗೂ
ಆರ್ತನ ಮೊರೆಯನು ಕೇಳು

ನನ್ನ ಬೇಡಿಕೆಯ ಮನ್ನಿಸು ದೇವನೆ
ನೈವೇದ್ಯಗಳನು ಸಲ್ಲಿಸುವೆ
ಕರುಣಿಸದಿದ್ದರೆ ನಾಳೆಯಿಂದಲೇ
ಪೂಜ ಪ್ರಾರ್ಥನೆ ನಿಲ್ಲಿಸುವೆ

ಈ ಹೊತ್ತಿಗೆ ಪ್ರಾರ್ಥನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ ಭಟ್ಟರಿಗೆ ನೇರವಾಗಿ, ತಮ್ಮ ದೃಷ್ಟಿ-ದನಿಗಳಲ್ಲಿಯೇ ಇಂಥ ಕವಿತೆಯನ್ನು ಬರೆಯಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಬೇರೊಂದು ನಿವೇದಕ ಪಾತ್ರವನ್ನು ಸೃಷ್ಟಿಸಿಕೊಂಡು, ದೇವರು-ಮನುಷ್ಯರ ನಡುವಿನ ಸಂಬಂಧವನ್ನು ವ್ಯಾಪಾರದ ಮಟ್ಟಕ್ಕಿಳಿಸಿದ, ಆ ಮೂಲಕ ಪ್ರಾರ್ಥನೆಯ ಪಾವಿತ್ರ್ಯವನ್ನು ಹಸಗೆಡಿಸಿದ ದೃಷ್ಟಿಕೋನವನ್ನು ಹಾಸ್ಯಾಸ್ಪದಗೊಳಿಸಿ ವಿಡಂಬಿಸಿದ್ದಾರೆ. ಇದ್ದಕ್ಕಿದ್ದ ಹಾಗೆ “ಕಾವ್ಯವೇದನೆ”ಯ ಕವಿತೆಯೊಂದನ್ನು ತಪ್ಪಿಸಿಕೊಂಡು ಬಂದು ಇಲ್ಲಿ ಸೇರಿದೆ ಎನ್ನುವಂತಿಲ್ಲ. ಈ ಸಂಕಲನದಲ್ಲಿ ಇಂಥ ಕವಿತೆ ಇದೊಂದೇ ಅಲ್ಲ. ಈಗಲೂ ಅವರು ಇಂಥ ಪದ್ಯಗಳನ್ನು ಬರೆಯುವ ಲವಲವಿಕೆ, ಚತುರತೆಗಳನ್ನು ಉಳಿಸಿಕೊಂಡಿದ್ದಾರೆಂಬುದೇ ವಿಶೇಷ:

ಕೆಲವರ ಮಟ್ಟಿಗೆ ಆಗಿದೆ ಮೆಟ್ಟಲು
ಅಧಿಕಾರದಿ ಮೇಲೇರಲಿಕೆ
ಅವರ ಪತ್ನಿಯರ ಚೆಲುವು ಚಾಲಾಕು
ತಮ್ಮ ಘನತೆಯನು ಸಾರಲಿಕೆ
      (‘ಕೆಲವರ ಮಟ್ಟಿಗೆ’)

ಇದು ಶುದ್ಧ ಸಾಮಾಜಿಕ ವಿಡಂಬನೆ. “ಭಟ್ಟರ ಕಾವ್ಯ ಸಾಮಾಜಿಕತೆಯ ಕಪಿಮುಷ್ಟಿಯಿಂದ ಎಂದೋ ಪಾರಾಗಿದೆ” (ಅಮರನಾಥ, ೧೯೯೩:೩೬) ಎಂದು ತೀರ್ಮಾನಿಸುವುದಕ್ಕೆ ಯಾವ ಕಾರಣವೂ ಇಲ್ಲ. ಅದರ ಅವಶ್ಯಕತೆಯೂ ಇಲ್ಲ.

ಜಡೆಗಟ್ಟಿಸಿದರೆ ಕೂದಲ ತಲೆಯಲಿ
ಬೆಳೆಯಿಸಬಹುದೋ ಹೇನ
ಕೂದಲು ಸೀಳುವ ಅದ್ಭುತ ಕಲೆಯೇ
ಆಗಿದೆ ತತ್ವಜ್ಞಾನ

ಜುಟ್ಟವ ಹಿಡಿದೇ ಟ್ಟೀ ಕುಳಿತರೆ
ಮಡದಿಯು ತಪ್ಪದು ಧ್ಯಾನ
ತಲೆಯ ಕೂದಲನು ಬೋಳಿಸಿಕೊಳುವುದೆ
ಸನ್ಯಾಸಕೆ ಶುಭ ಯಾನ
     (‘ಕೂದಲು’)

ಇಲ್ಲಿ ಹಾಸ್ಯ-ಗಾಂಭೀರ್ಯಗಳು ಕೈ ಕೈ ಕೂಡಿಸಿ ಹೊಸ ರೀತಿಯ ಹಸ್ತಾಂದೋಲನ ಮಾಡಿಕೊಂಡಿವೆ. ಇದು ಮೊದಲಿನ ಭಟ್ಟರ ಮತ್ತು ಈಚಿನ ಭಟ್ಟರ ಅನುಸಂಧಾನದಲ್ಲಿ ಮೂಡಿದ ಹೊಸ ಹದ. ಆದರೂ ಒಂದು ಬಗೆಯ ಸಂದಿಗ್ಧತೆ ಇಲ್ಲಿಯೂ ಕೆಲಸ ಮಾಡುತ್ತಿರುವಂತಿದೆ. ಇದಕ್ಕೆ ಮುಖ್ಯ ಕಾರಣ ಭಟ್ಟರು ಗಾಂಭೀರ್ಯ-ವ್ಯಂಗ್ಯ ಹಾಸ್ಯಗಳನ್ನು ಒಟ್ಟಿಗೆ ಬಳಸುವುದು. ಜಡೆಗಟ್ಟಿಸುವ ಬಾಹ್ಯ ಆಚಾರ ಸತ್ಯವನ್ನು ತಲುಪುವುದಿಲ್ಲ ಎಂಬುದು ನಿಜ. ಅದನ್ನು ಭಟ್ಟರು ತಮ್ಮ ಸಹಜ ಶೈಲಿಯಲ್ಲಿ ವಿಡಂಭಿಸುತ್ತಾರೆ. ಜಡೆಗಟ್ಟಿಸುವುದರಿಂದ ಹೇನುಗಳನ್ನು ಮಾತ್ರ ಬೆಳೆಸಬಹುದೆಂಬುದರಲ್ಲಿ ಭಟ್ಟರ ವಿಡಂಬನೆಯ ಅತ್ಯುತ್ತಮ ಮಾದರಿ ಸಿಗುತ್ತದೆ. ಆದರೆ “ಕೂದಲು ಸೀಳುವ ಅದ್ಭುತ ಕಲೆಯೇ ಆಗಿದೆ ತತ್ವಜ್ಞಾನ” ಎಂಬುದು ಗಂಭೀರವಾದ ಹೇಳಿಕೆಯೋ, ಅಥವಾ ವ್ಯಂಗ್ಯ ವಿಡಂಬನೆಯೋ? ಆ ಮಾತಿನಲ್ಲಿ ನಿಜವೂ ಅಡಕವಾಗಿದೆ. ಜೊತೆಗೆ “ಕೂದಲು ಸೀಳುವ” ಮಾತು ಮತ್ತು “ಅದ್ಭುತ” ಎಂಬಲ್ಲಿಯ ಅತಿಶಯೋಕ್ತಿ ವ್ಯಂಗ್ಯವನ್ನು ಸೂಚಿಸುತ್ತವೆ. ತತ್ವಜ್ಞಾನ “ಕೂದಲು ಸೀಳುವ”ಕೆಲಸ ಮಾಡುತ್ತದೆಂಬುದು ಸತ್ಯವಾದರೂ, ಅದು ನಮ್ಮ ಭಾಷೆಯಲ್ಲಿ ಸಕಾರಾತ್ಮಕ ಅರ್ಥದಲ್ಲಿ ಬಳಕೆಯಾಗುವುದಿಲ್ಲ ಎಂಬುದನ್ನು ನೆನಪಿಡಬೇಕು. ಹಾಗೆಯೇ. “ತಲೆಯ ಕೂದಲನು ಬೋಳಿಸಿಕೊಳ್ಳುವುದೆ ಸನ್ಯಾಸಕೆ ಶುಭ ಯಾನ” ಎಂಬ ಮಾತನ್ನು ನೋಡಿ. ಬದುಕಿನ ಎಲ್ಲ ಗೊಂದಲ-ಜಂಜಾಟಗಳಿಂದ ಮುಕ್ತವಾಗಲು ಇದೇ ಸರಿಯಾದ ಹಾದಿ ಎನ್ನುವಂತೆ, ಒಂದು ಪರಿಹಾರವಾಗಿ ಈ ಮಾತು ಬಂದಂತಿದೆ. ಆದರೆ ಕೂದಲು ಬೋಳಿಸಿಕೊಳ್ಳುವುದೂ ಒಂದು ಪರಿಹಾರವಾಗಿ ಈ ಮಾತು ಬಂದಂತಿದೆ. ಆದರೆ ಕೂದಲು ಬೋಳಿಸಿಕೊಳ್ಳುವುದೂ ಒಂದು ಬಾಹ್ಯ ಆಚಾರವಾಗಬಹುದಲ್ಲವೆ? ಆಗ ಜಡೆಗಟ್ಟಿಸಿಕೊಳ್ಳುವುದಕ್ಕೂ ಕೂದಲು ಬೋಳಿಸಿಕೊಳ್ಳುವುದಕ್ಕೂ ಏನು ವ್ಯತ್ಯಾಸ? ಇಲ್ಲೂ ವ್ಯಂಗ್ಯವಿದೆಯೆ? ಇಂಥ ಸಂದಿಗ್ಧತೆಗಳು ಭಟ್ಟರ ಈ ಅವಧಿಯ ಕಾವ್ಯದಲ್ಲಿ ಮತ್ತೆಮತ್ತೆ ಕಾಲಿಗೆ ತೊಡಕುತ್ತವೆ. “ನವ್ಯದ ದುರೂಹತೆ…. ಭಟ್ಟರ ಭಟ್ಟಿಯಲ್ಲಿ ಇಳಿದೇ ಇಲ್ಲ” ಎನ್ನುತ್ತಾರೆ ಗೌರೀಶ ಕಾಯ್ಕಿಣಿ (೧೯೯೫:೨೪೩). ನವ್ಯರ ದುರೂಹತೆ ಇಲ್ಲದಿರಬಹುದು; ಆದರೆ ನವ್ಯರ ಅರ್ಥಸಂದಿಗ್ಧತೆ (ambiguity) ಇದ್ದೇ ಇದೆ. ಇದನ್ನು ambivalence ಎಂದೂ ಗುರುತಿಸಬಹುದು. ಭಟ್ಟರ ಕಾವ್ಯದ ಅರ್ಥ ಸರಳ, ನೇರ, ಪಾರದರ್ಶಕ, ಸ್ಪಷ್ಟ ಎಂಬಂಥ ಅಭಿಪ್ರಾಯಗಳು ಮೂಡಿರುವುದಕ್ಕೆ ಅವರ ಪ್ರಾಸಬದ್ಧವಾದ, ಕುದುರೆಯ ನಡಿಗೆಯ, ವೇಗವಾಗಿ ಓಡಿಸಿಕೊಂಡು ಹೋಗುವ ಕಾವ್ಯಲಯವೇ ಕಾರಣವಾಗಿರಬಹುದು. ಇದರಿಂದಾಗಿಯೇ ಅವರ ಕವಿತೆಗಳನ್ನು ನಿಕಟ ವಿಶ್ಲೇಷಣೆಗೆ ಒಳಪಡಿಸುವ ಅವಶ್ಯಕತೆ ವಿಮರ್ಶಕರಿಗೆ ಕಂಡಂತಿಲ್ಲ. ಇಂಥ ವಿಶ್ಲೇಷಣೆಯಿಂದ ಮಾತ್ರ ಕಾವ್ಯದ ಸೂಕ್ಷ್ಮಗಳು, ಅಂತರ್ವಿರೋಧಗಳು, ಸಂಕೋಚಗಳು, ಸಮತೋಲನಗಳು ಕಂಡಾವು.

ಕೊನೆಯದಾಗಿ ಭಟ್ಟರ ಅಂತಿಮ ‘ಪ್ರಾರ್ಥನೆ’:

ಒಂದೇ ಪ್ರಾರ್ಥನೆ ಪ್ರಭುವೇ ಲಾಲಿಸು
ಲಾಲಿಸಿದರೆ ಮಾತ್ರಾ ಸಾಲದು, ಪರಿಪಾಲಿಸು
ಒಂದೇ ತುತ್ತನು ಸರೀ ಜಗಿದು ನುಂಗುವ ಮುಂಚೇ
ಇನ್ನೊಂದನು ನಾ ಬಾಯಿಗೆ ತುರುಕಿಸದಂತೇ
ನೋಡಿಕೋ ಕಾಪಾಡಿಕೋ *

ಒಂದೇ ದಿನ ಒಂದೇ ಮನೆಯಿಂದಾಮಂತ್ರಣ
ಊಟಕೆ ಬರದಂತೇ*[1] ಇಡು ನಿಯಂತ್ರಣ

ಉಂಡ ಮೇಲೆ ಮೂರ್ಸಂಜೆಯವರೆಗೂ
ಗೊರೆಯಿಸದಿರು ದೊರೆಯೇ

ರಾತ್ರೆಯಂತೂ ಗಾಢ ನಿದ್ರೆ, ಹಗಲೂ ಮಂಪರು
ಕಣ್ಣೆದುರಿಗೆ ಎಂದೋ ಎಲ್ಲೋ ಮನ ಸೆಳೆ ಝಂಪರು

ಸಮಯವೆ ಸಿಗದೋ ನಿನ್ನ ಮಹಿಮೆಯ
ಕೊಂಡಾಡುವ ಭಜನೆಯ ಬರೆಯೆ

ತವ ಚಿತ್ತಂ ಮಮ ಕೃತ್ಯಂ
ಆಗಿರುವಂತೇ ಕರುಣಿಸು ಜಗದೀಶಾ
ಸಾಕೋ ನನಗೊಂದೇ ಅನ್ನಕೋಶಾ

ಸಂಜೆ ಮಲಗಿದವ ಮರುದಿನ ಏಳದಂತೇ
ಒಯ್ದುಕೋ, ಹಾರಿದ ಶ್ವಾಸವ ಯಾರೂ ಕೇಳದಂತೇ
ಜಗದೋದ್ಧಾರಕಾ ಜಾಣಾ
ಮುಂದೆಂದೂ ಕರುಣಿಸದಿರು ಪ್ರಾಣಾ

ಇಲ್ಲಿಯೂ ಗಾಂಭೀರ್ಯ ಮತ್ತು ವ್ಯಂಗ್ಯ ಹಾಸ್ಯಗಳನ್ನು ಕವಿತೆ ಒಟ್ಟೊಟ್ಟಿಗೆ ಬಳಸುತ್ತಿದೆ. ಜಗದೀಶನನ್ನು ಹೊಗಳಿ ಪುಸಲಾಯಿಸುವ ದನಿ ಒಂದು ಎಳೆಯಾಗಿ ಬಂದರೆ, ತನ್ನ ಬಗ್ಗೇ ಆತ್ಮವ್ಯಂಗ್ಯದ ಇನ್ನೊಂದು ಎಳೆಯೂ ಇದೆ. ಒಂದು ತುತ್ತನ್ನು ಜಿಗಿದು ನುಂಗುವ ಮೊದಲೇ ಇನ್ನೊಂದು ತುತ್ತನ್ನು ‘ತುರುಕಿ’ಕೊಳ್ಳುವುದು, ಎಂದೋ ಎಲ್ಲೋ ಮನ ಸೆಳೆ ‘ಝಂಪರು’ ಕಣ್ಣೆದುರಿಗೆ ಬರುವುದು, ಪುನರ್ಜನ್ಮವನ್ನು ‘ಕರುಣಿಸು’ವ ದೇವರ ಹುನ್ನಾರವನ್ನು ವಿರೋಧಿಸುವುದು-ಎಲ್ಲಾ ಒಂದರೊಳಗೊಂದು ಸೇರಿಯೇ ಬರುತ್ತವೆ. ಆದರೆ ಪ್ರಾರ್ಥನೆಯ ಹಿಂದಿನ ಉದ್ದೇಶದ ಗಾಂಭೀರ್ಯಕ್ಕೇನೂ ಅದರಿಂದ ಚ್ಯುತಿ ಬಂದಿಲ್ಲ. ತನ್ನ ಚಿತ್ತ ಭಟ್ಟರ ಕೃತ್ಯವಾಗುವಂತೆ ಜಗದೀಶ ಕರುಣಿಸಬೇಕಾಗಿದೆ. ಆದರೆ ಭಟ್ಟರದೂ ಒಂದು ಚಿತ್ತ ಗಟ್ಟಿಯಾಗಿಯೇ ಇದ್ದು, ಅದನ್ನು ಕೃತ್ಯವಾಗುವಂತೆ ಕರುಣಿಸುವುದೂ ಅವನ ಹೊಣೆಯೇ ಆಗಿದೆ. ಇಲ್ಲಿ ‘ಪ್ರಾರ್ಥನೆ’ ಯನ್ನು ‘ಭಜನೆ’ ಎಂದು ಕರೆಯುವಲ್ಲಿಯ ವ್ಯಂಗ್ಯ (?) ವನ್ನೂ ನೋಡಬಹುದು.

ಭಟ್ಟರ ಈ ಪ್ರಾರ್ಥನೆಗಳನ್ನು ಎಲಿಯಟ್‌ನ ಎರಡನೆಯ ಹಂತದ ಕಾವ್ಯದಲ್ಲಿ ಬರುವ ಪ್ರಾರ್ಥನೆಯೊಂದಿಗೆ ಹೋಲಿಸಬೇಕು. ಇದು ಎಲಿಯಟ್ ಕ್ರೈಸ್ತ ಧರ್ಮಶ್ರದ್ಧೆಗೆ ತನ್ನನ್ನು ಒಪ್ಪಿಸಿಕೊಂಡ ಕಾಲ. ಈ ಅವಧಿಯ ಮುಖ್ಯ ಕವಿತೆಯಾದ “ಆ‍ಯ್‌ಷ್ ವೆನ್ಸ್‌ಡೇ” ಯದು ನಮ್ರತೆಯ ದನಿ. ಆ‍ಯ್‌ಷ್ ವೆನ್ಸ್‌ಡೇದ ಕ್ರಿಶ್ಚನ್ ಧಾರ್ಮಿಕ ಆಚರಣೆಗೆ ಇದು ಹೊಂದುವಂತೆಯೇ ಇದೆ. ಈ ಆಚರಣೆ ಯೇಸು ಶಿಲುಬೆಗೇರಿದ ದಿನದಿಂದ ಪುನರುತ್ಥಾನಗೊಂಡ (From Crucifiction to Resurrection) ನಡುವಿನ ಅವಧಿಗೆ ಸಂಬಂಧಿಸಿದುದು. ಯೇಸು ಅನುಭವಿಸಿದ ದುಃಖಕ್ಕಾಗಿ ಎಲ್ಲರೂ ಪಶ್ಚಾತ್ತಾಪ ಪಡಬೇಕಾದ ಸಮಯ ಇದು. ಆ‍ಯ್‌ಷ್‌ವೆನ್ಸ್‌ಡೇ ಈ ಆಚರಣೆಯ ಮೊದಲ ದಿನ. ಕವಿತೆಯ ವಸ್ತು, ದೈವಿಕ ಶ್ರದ್ಧೆಯನ್ನು ಹೊಂದಿರಬೇಕೆಂಬ ಸೆಳೆತವಿದ್ದರೂ ತನ್ನ ಬಂಜೆ-ಭೌದ್ಧಿಕವಾದಲ್ಲಿ ಸಿಕ್ಕು ಹಾಗೆ ಮಾಡಲಾಗದ ಆಧುನಿಕ ಮನುಷ್ಯನ ತೊಳಲಾಟವನ್ನು ಕುರಿತದ್ದು.

Teach us to care and not to care*[2]
Teach us to sit still

ಎಂದು ನಮ್ರವಾಗಿ ಪ್ರಾರ್ಥಿಸುವ ಅವಶ್ಯಕತೆಯನ್ನು ಕವಿತೆ ಸೂಚಿಸುತ್ತದೆ.

ಕವಿತೆಯ ಕೊನೆಯ ಭಾಗ ಕ್ರೈಸ್ತ ಮತದ ತಪ್ಪೊಪ್ಪಿಗೆಯ (Confession) ವಿಧಿಯನ್ನು ನೆನಪಿಸುತ್ತದೆ. ಅದೇ ಕಾಲಕ್ಕೆ ಹೊರಗಿನ ಜಗತ್ತು ಆಕರ್ಷಕ ಆಮಿಷಗಳನ್ನು ಒಡ್ಡಿ, ಕವಿತೆಯ ನಾಯಕನ ಧ್ಯಾನವನ್ನು ಕೆಡಿಸಲು ಯತ್ನಿಸುತ್ತದೆ. ಭಟ್ಟರ ಅಂತಿಮ ‘ಪ್ರಾರ್ಥನೆ’ ಯಲ್ಲೂ ಎಲ್ಲೋ ಎಂದೋ ನೋಡಿದ ಝಂಪರು ಮನ ಸೆಳೆದು ದೇವರನ್ನು ಕೊಂಡಾಡುವ “ಭಜನೆ”ಯನ್ನು ಬರೆಯಲು ಸಮಯ ಸಿಗದಂತೆ ಮಾಡಿರುವುದನ್ನು ಇಲ್ಲಿ ನೆನೆಯಬಹುದು.

ಎಲಿಯಟ್‌ನ ಕವಿತೆಯ ಕೊನೆಯ ಭಾಗ ಪ್ರಾರ್ಥನೆಯ ಲಯ-ವಿನ್ಯಾಸಗಳಲ್ಲಿದೆ.

And let my cry come unto Thee

ಎಂಬುದು ಈ ಪ್ರಾರ್ಥನೆಯ ಸಾರ. ಒಂದು ರೀತಿಯಿಂದ ಇದು. ಕ್ರೈಸ್ತ ಸಂತ ಶಿಲುಬೆಯ ಜಾನ್ (St. John of the Cross) ಹೇಳುವ ಆತ್ಮಕ ಕಾಳರಾತ್ರಿಯ (Dark night of the soul) ಅನುಭವದಿಂದ ಹೊರಬರುವ ಅನುಭಾವದ ಅಭಿವ್ಯಕ್ತಿಯೂ ಆಗಿದೆ. ಇಲ್ಲಿ ಬರುವ ಒಂದು ಮುಖ್ಯ ಪ್ರತಿಮೆ ಡಾಂಟೆ “ಡಿವೈನ್ ಕಾಮಿಡಿ”ಯ ‘ಪರ್ತೆಟೋರಿಯೊ’ದಲ್ಲಿ ಬಳಸುವ ಸುತುಮೆಟ್ಟಿಲಿನ (Spiral Stairway) ಹಾದಿಯದು. ಅದರ ಮೊದಲ ತಿರುವಿನಲ್ಲಿ ನಿಂತ ಕವಿತೆಯ ನಾಯಕ ತಾನು ಬಿಡಲಾರದೆ ಬಿಟ್ಟು ಬಂದ ಜಗತ್ತನ್ನು ಆಶೆಯಿಂದ ತಿರುಗಿ ನೋಡುತ್ತಾನೆ. ಆ ಜಗತ್ತಿನ ಸುಖಗಳನ್ನು ತೊರೆದು ಹೋಗಲು ಅವನಿಗೆ ಮನಸ್ಸಿಲ್ಲ. ಮೆಟ್ಟಲಿನ ಹಾದಿಯನ್ನು ಏಕಾಂಕಿಯಾಗಿ ಏರಬೇಕಾದ ಭಯ ಬೇರೆ. ಈ ಹಂತದಲ್ಲಿ ಬರುವ ಪ್ರಾರ್ಥನೆಯ ಈ ಸೆಳಕುಗಳನ್ನು ನೋಡಿರಿ.

Lord I am not worthy
Lord, I am not worthy

***

Our peace is His will

***

Suffer me not to be separated

ಇದು ಸಂಪೂರ್ಣ ನಂಬಿಕೆಯ, ವಿನಮ್ರತೆಯ ಪರಾಕಷ್ಟೆ, ಸಂಪೂರ್ಣ ಸಮರ್ಪಣದ ಅಭಿವ್ಯಕ್ತಿ.

ಇಂಥ ಅಭಿವ್ಯಕ್ತಿಯನ್ನು ನಾವು ವಿ.ಜಿ. ಭಟ್ಟರ ಕಾವ್ಯದಲ್ಲಿ ಕಾಣಲಾರೆವು. ಅವರ ಪ್ರಾರ್ಥನೆಗಳ ಧಾಟಿ ಇದಲ್ಲ. ಅವರ ನಂಬಿಕೆ ಸಹಜವಾಗಿ ಅರಳಿಕೊಂಡು ಬಂದ ರೀತಿಯದಾಗಿ ಕಾಣುವುದಿಲ್ಲ. ಅದೊಂದು ಬಗೆಯ unwilling acceptance, ಮನಸ್ಸಿಲ್ಲದೆ ಒಪ್ಪಿಕೊಳ್ಳಬೇಕಾಗಿ ಬಂದದ್ದು, ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಒಪ್ಪಿಕೊಂಡದ್ದು – ಎಂಬಂತೆ ಕಾಣುತ್ತದೆ. ಆದ್ದರಿಂದಲೇ ಆ ಒಪ್ಪಿಗೆಯಲ್ಲಿ ಒಂದಿಷ್ಟು ಒಗರು, ಕಹಿ, ಕೊಂಕು, ಉಳಿದುಕೊಂಡಿದೆ. ಅದು ಸಂಪೂರ್ಣ ಒಪ್ಪಿಗೆಯದಾಗಿರದೆ, ಕೆಲವು ಮಹತ್ವದ ಷರತ್ತು, ರಿಯಾಯಿತಿಗಳಿಗೆ (Reservations) ಒಳಪಟ್ಟಿದೆ.

ಬದಲಾವಣೆಯ ಹಂತದಲ್ಲಿ ವಿ.ಜಿ. ಭಟ್ಟರು ತಮ್ಮ ಮನಸ್ಸಿನ ನೆಮ್ಮದಿಗಾಗಿ ಅನೇಕ ಜನ ಚಿಂತಕರ ಬರವಣಿಗೆಗಳನ್ನು ಅಭ್ಯಾಸ ಮಾಡಿದ್ದಾರೆ. ಜಿಡ್ಡು ಕೃಷ್ಣಮೂರ್ತಿ, ರಜನೀಶ, ಸೂಫಿ ಸಂತ ಜಲಾಲುದ್ದೀನ್ ರೂಮಿ, ಜೆನ್ ಬುದ್ಧಿಜಂ, ಸೂಫ್ ಮತ, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ – ಮೊದಲಾದವರ ಓದಿನಿಂದ ಅವರು ಪ್ರಭಾವಿತರಾಗಿದ್ದಾರೆ. ಇವರಲ್ಲಿ ಅನೇಕರ ಚಿಂತನೆಗಳು, ದೃಷ್ಟಾಂತ ಕಥೆಗಳು ಪದ್ಯರೂಪ ಪಡೆದು ಅವರ ಕಾವ್ಯದಲ್ಲಿ ಬಂದಿವೆ.

ಆದರೆ ಇವರಾರನ್ನೂ ಭಟ್ಟರು ಸಂಪೂರ್ಣವಾಗಿ, ಅಥವಾ ಏಕೈಕ ಮಾದರಿ ಎಂಬಂತೆ ಒಪ್ಪಿಕೊಂಡಿಲ್ಲ. ಜೆ.ಕೆ. ರಜನೀಶರ ಚಿಂತನೆಗಳ ನಡುವೆ ಇರುವಂತೆ ಕೆಲವು ಪರಸ್ಪರ ವಿರುದ್ಧವಾದ ಚಿಂತನೆಗಳು ಇದ್ದಾಗ ಭಟ್ಟರು ತಮ್ಮ ಅಂದಿನ ಅವಸ್ಥೆಗೆ ಸರಿಯೆನಿಸಿದವುಗಳನ್ನು ತೆಗೆದುಕೊಂಡು, ವೈರುಧ್ಯಗಳನ್ನು ಅಲಕ್ಷಿಸಿ, ತಮ್ಮದೇ ಆದ ಒಂದು ಚಿಂತನೆಯನ್ನು ಕಟ್ಟಿಕೊಳ್ಳಲು ಯತ್ನಿಸಿದ್ದಾರೆ. ಉದಾಹರಣೆಗೆ, ಜಿ.ಕೆ. ಮತ್ತು ರಜನೀಶರ ಅಭಿವ್ಯಕ್ತಿ ಭಿನ್ನವೆಂದು ಕಂಡರೂ ಇಬ್ಬರೂ “ಒತ್ತಿ ಹೇಳುವುದು ಒಂದೇ: ನಿನ್ನನ್ನು ನೀನು ಮೊದಲು ಅರಿತುಕೋ” (ಭಟ್ಟ, ೧೯೮೭:೪೧). ಅದನ್ನು ಭಟ್ಟರು ಒಪ್ಪಿಕೊಳ್ಳುತ್ತಾರೆ. ಆದರೆ ರಜನೀಶರ sex to superconsiousness ನ ಸಾಂಘಿಕ ಪ್ರಯೋಗಗಳ ಬಗ್ಗೆ ಅವರಿಗೆ ಸಹಮತವಿಲ್ಲ. ಹೀಗೆ ತಮಗೆ ಬೇಕಾದುದನ್ನು ಬೇರೆಬೇರೆ ಮೂಲಗಳಿಂದ ತೆಗೆದುಕೊಂಡು, ಬೇಡವೆನಿಸಿದ್ದನ್ನು ಬಿಟ್ಟು, ತಮ್ಮ ಚಿಂತನವನ್ನು ರೂಪಿಸಿಕೊಳ್ಳುವುದು ಇಕ್ಲೆಕ್ವಿಟ್ (Eclectic) ಮಾರ್ಗದ ಲಕ್ಷಣ. ಕನ್ನಡದಲ್ಲಿ ಮಾಧ್ವ, ತತ್ವಜ್ಞಾನ ಮತ್ತು ಕಾರ್ಲ್‌ಮಾರ್ಕ್ಸ್‌ನ ಸಮಾಜವಾದಗಳನ್ನು ಜೋಡಿಸಿ ಒಪ್ಪಿಕೊಳ್ಳುವ ಸು.ರಂ. ಯಕ್ಕುಂಡಿಯವರದು ಇಂಥ ಮಾರ್ಗ. ಇದು ಎಚ್ಚರದಿಂದ, ಆಯ್ಕೆ ಮಾಡಿಕೊಂಡು ರೂಪಿಸುವ ಚಿಂತನೆ. ಭಟ್ಟರದೂ ಇಂಥ ಮಾರ್ಗ.

ಇದನ್ನು ‘ಅವಧೂತ ಮಾರ್ಗ’ ಎಂದು ಕರೆಯಲಿಕ್ಕಾಗುವುದಿಲ್ಲ. ಸಿದ್ಧಾರೂಢ, ರಮಣ ಮಹರ್ಷಿಗಳಂಥವರು ಅವಧೂತ ಮಾರ್ಗದ ಪ್ರತಿನಿಧಿಗಳು. ಅವರ ನಂಬಿಕೆ impulsive ಎನ್ನಬಹುದಾದ ರೀತಿಯಲ್ಲಿ ರೂಪಗೊಂಡದ್ದು. ಅದರ ಹಿಂದೆ ಯಾವ ತಾರ್ಕಿಕ ಕಾರ‍ಣಗಳೂ ಇರಬೇಕಾಗಿಲ್ಲ; ಯಾವ ವ್ಯವಸ್ಥಿತ, ಸಿದ್ಧ ತತ್ವಶಾಸ್ತ್ರವೂ ಇರುವುದಿಲ್ಲ; ಎಚ್ಚರದಿಂದ ರೂಪಿಸಿಕೊಂಡ ಚಿಂತನೆಯೂ ಇರುವುದಿಲ್ಲ. ಲೋಕದ ಕಣ್ಣಿಗೆ ಹುಚ್ಚರಂತೆ, ಬೆಪ್ಪರಂತೆ ಕಾಣುವ ಈ ಜನರ ಮಾತು, ಕಥೆ, ಚರ್ಯೆ, ಕ್ರಿಯೆಗಳು ವಿಲಕ್ಷಣವಾಗಿರುತ್ತವೆ. ಆದರೆ ಆ ವಿಲಕ್ಷಣತೆಯ ಹಿಂದೆ ಬದುಕಿನ ರಹಸ್ಯಗಳ ಬಗ್ಗೆ ಮಿಂಚುವ ಸತ್ಯಗಳಿರುತ್ತವೆ. ಜೆನ್ ಬುದ್ಧಿಜಂನಲ್ಲಿ ಇಂಥ ವಿಲಕ್ಷಣ ಕಥೆಗಳು ಇದ್ದರೂ, ಅದರ ಹಿಂದೆ ಒಂದು ನಿರ್ದಿಷ್ಟ ತತ್ವಜ್ಞಾನವಿದೆ.

ಭಟ್ಟರದು, ಈಗಾಗಲೇ ಹೇಳಿರುವಂತೆ ಎಚ್ಚರದಿಂದ ಆಯ್ಕೆ ಮಾಡಿಕೊಂಡು ರೂಪಿಸಿಕೊಂಡಿರುವ ಚಿಂತನ. ಅದು ಯಾವುದೇ ನಿರ್ದಿಷ್ಟ ಸಿದ್ಧ ತತ್ವಶಾಸ್ತ್ರದ ಶಾಖೆಗೆ ಸೇರಿದ್ದಲ್ಲವಾದರೂ ಅದಕ್ಕೊಂದು ವಿನ್ಯಾಸವಿದೆ. ಇದು ಅನುಭಾವಕ್ಕೆ ಹೆಚ್ಚು ಸಮೀಪದ್ದು ಎನ್ನಬಹುದು. ತತ್ವಶಾಸ್ತ್ರಕ್ಕಿಲ್ಲದ ನಮ್ಯತೆ ಅನುಭಾವಕ್ಕೆ ಇದೆಯೆಂಬುದಕ್ಕಾಗಿಯೇ ಭಟ್ಟರು ಅದರ ಕಡೆಗೆ ಹೆಚ್ಚು ಒಲಿದಿರಬಹುದು.

ತಮ್ಮ ಉತ್ತರಾರ್ಧ ಜೀವನದಲ್ಲಿ ತಾವು ಅನುಭಾವದತ್ತ ಸರಿಯುತ್ತಿರುವ ಅರಿವು ಭಟ್ಟರಿಗೆ ಇತ್ತು. ಆದರೆ ಅದೂ ಕೂಡ ವಿಡಂಬನೆಯಂತೆ ಇನ್ನೊಂದು ಅಪಾಯದ ಮಾರ್ಗ ಎಂದು ಅವರಿಗೆ ಅನಿಸಿತ್ತು. “ವಿಡಂಬನೆಯಿಂದ ದಾಟಿದರೆ ಅನುಭಾವಕ್ಕೆ ಏರುತ್ತೇವೆಂದು ಹೇಳಲಾಗದು… ಅನುಭಾವದ ಜಾಗದಲ್ಲಿ ಸಿಲುಕಿ ಬೀಳುವುದೂ ಅಪಾಯಕಾರಿ ಎಂದೇ ನನಗೆ ತೋರುತ್ತದೆ. ಕವಿಯು ಋಷಿಯಾದರೆ ಕಾವ್ಯವು ಶುಚಿಯಾಗಬೇಕು ಅಥವಾ ಮೌನದಲ್ಲಿ ನೆಲೆಸಬೇಕು. ಶಾಂತಿಯಲ್ಲಿ ಪ್ರತಿಷ್ಠಿತನಾದವನಿಗೆ ನವರಸವೂ ಅಷ್ಟೇ, ಷಡ್ರಸವೂ ಅಷ್ಟೇ|” (೧೯೮೭/೩೭-೩೮). ಅರ್ಥಾತ್, ಆ ಅವಸ್ಥೆಯಲ್ಲಿ ಕಾವ್ಯವೂ ಇರುವುದಿಲ್ಲ. ಬದುಕೂ ಇರುವುದಿಲ್ಲ. ಅದರಿಂದಾಗಿಯೇ ಭಟ್ಟರು ತಮ್ಮ ಕಾವ್ಯದಲ್ಲಿ ವಿಡಂಬನೆಯನ್ನು ಅನುಭಾವದಿಂದಲೂ ಅನುಭಾವವನ್ನು ವಿಡಂಬನೆಯಿಂದಲೂ ನಿಯಂತ್ರಿಸಲು ಪ್ರಯತ್ನಿಸುತ್ತಿರುವಂತಿದೆ. ಎರಡು ಅಪಾಯಗಳು ಒಂದನ್ನೊಂದು ನಿಯಂತ್ರಿಸುವಂತೆ ಮಾಡಿರುವ ಈ ಪ್ರಯತ್ನ ಕುತೂಹಲಕಾರಿಯಾಗಿದೆ, ಮತ್ತು ಭಟ್ಟರು ಕಾವ್ಯವನ್ನು ‘ಗಂಭೀರವಾಗಿ ತೆಗೆದು ಕೊಂಡದ್ದರ ನಿದರ್ಶನವಾಗಿದೆ.’

ಉಲ್ಲೇಖಗಳು

೦೧.   ಅಮರನಾಥ, ಎಚ್.ಆರ್. (೧೯೯೩), ‘ವಿದೂಷಕ ಅವಧೂತನಾದ ಬಗೆ’ – “ವಿ.ಜಿ. ಭಟ್ಟರ ಸಾಹಿತ್ಯ ಸಮೀಕ್ಷೆ”, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೦೨.   ಕಾಯ್ಕಿಣಿ, ಗೌರೀಶ (೧೯೬೪). “ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ” ಸಂಪುಟ ೪ (ಸಂ.ವಿಷ್ಣು ನಾಯ್ಕ), ರಾಘವೇಂದ್ರ ಪ್ರಕಾಶನ, ಅಂಕೋಲಾ.

೦೩.   ಕುರ್ತಕೋಟಿ, ಕೀರ್ತಿನಾಥ (೧೯೬೨), “ಯುಗಧರ್ಮ ಹಾಗೂ ಸಾಹಿತ್ಯ ದರ್ಶನ”, ಮನೋಹರ ಗ್ರಂಥಮಾಲೆ, ಧಾರವಾಡ.

೦೪.   ಕುರ್ತಕೋಟಿ, ಕೀರ್ತಿನಾಥ (೧೯೬೪), “ಮೂರ್ತಿ” ಸಂಕಲನದ ಮುನ್ನುಡಿ, ಸಾಧನಾ ಪ್ರೆಸ್, ಧಾರವಾಡ.

೦೫.   ಗೋಕಾಕ, ವಿ.ಕೃ. (೧೯೮೫), “ಬಿಂದು ಬಿಂದು ಸಾರ”ದ ಕೊನೆಯಲ್ಲಿ, ರುಕ್ಮಿಣೀ ಪ್ರಕಾಶನ ಮುಂಬಯಿ.

೦೬.   ನಿರಂಜನ (೧೯೮೫), “ಸ್ವಾಗತಂ”ದ ಮೊದಲ ಮಾತು, ರುಕ್ಮಿಣೀ ಪ್ರಕಾಶನ, ಮುಂಬಯಿ.

೦೭.   ಬೇಂದ್ರೆ, ದ.ರಾ. (೧೯೫೧). “ತುಂಟನ ಪದಗಳು” ಮುನ್ನುಡಿ (ಮೊದಲ ಮುದ್ರಣ). ಪರ್ಣಕುಟಿ ಗ್ರಂಥಮಾಲೆ, ಧಾರವಾಡ.

೦೮.   ಭಟ್ಟ, ಟಿ.ಜಿ.(೧೯೯೩), ‘ತೇರಗಾಲಿಗೆ ಮೆಡಗರ : ವಿ.ಜಿ. ಭಟ್ಟರ ಕಾವ್ಯದ ಮೊದಲ ಘಟ್ಟ’ – “ವಿ.ಜಿ. ಭಟ್ಟರ ಸಾಹಿತ್ಯ ಸಮೀಕ್ಷೆ”, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೦೯.   ಭಟ್ಟ. ವಿ.ಜಿ. (೧೯೭೦), “ಆತ್ಮಗೀತೆ”ಯ ಅರಿಕೆ, ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ಬೆಂಗಳೂರು.

೧೦.   ಭಟ್ಟ, ವಿ.ಜಿ.(೧೯೮೭), ಅಮರನಾಥರಿಗೆ ನೀಡಿದ ಲಿಖಿತ ಸಂದರ್ಶನ- “ಸೃಜನವೇದಿ”, ಸಂಪುಟ ೪ : ಸಂಚಿಕೆ ೩.

೧೧.   ಲಂಕೇಶ್ ಪಿ. (೧೯೭೦), “ಅಕ್ಷರ ಹೊಸ ಕಾವ್ಯ”ದ ಪ್ರಸ್ತಾವನೆ, ಅಕ್ಷರ ಪ್ರಕಾಶನ, ಸಾಗರ.

೧೨.   ವೇಣುಗೋಪಾಲ, ಸಿ.ವಿ. (೧೯೮೯), ‘ವಿ.ಜಿ. ಭಟ್ಟರ ಕಾವ್ಯ’ – “ಆಧುನಿಕ ಕನ್ನಡ ಕಾವ್ಯ : ಉತ್ತರ ಕರ್ನಾಟಕದ ಕೊಡುಗೆ” (ಸಂ. ಗಿರಡ್ಡಿ ಗೋವಿಂದರಾಜ), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

– ೨೦೦೨

[1] ಹೋಲಿಸಿರಿ

ಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು ನುರಿಸಿ
ಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯ
ಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸುದಿದ್ದರು ಕೂಡ
ಕಲಿತಿಲ್ಲ ಎಂಬ ನೆನವೊಳಿಸು.

  • ಗೋಪಾಲಕೃಷ್ಣ ಅಡಿಗ: ;ಪ್ರಾರ್ಥನೆ

[2] ಹೋಲಿಸಿರಿ:
“ಕಲಿಸು ಬಾಗುವುದನ್ನು ಬಾಗದೆ ಸೆಟೆವುದನ್ನು” –  ಗೋಪಾಲಕೃಷ್ಣ ಅಡಿಗ: ’ಪ್ರಾರ್ಥನೆ