ವಿ.ಜಿ. ಭಟ್ಟರ ಕಾವ್ಯವನ್ನು ಕುರಿತು ಈಗಾಗಲೇ ತಕ್ಕ ಮಟ್ಟಿನ ವಿಮರ್ಶೆ ಬಂದಿದೆ. ಎಲ್ಲ ವಿಮರ್ಶೆಯ ಗಮನವನ್ನು ಪ್ರಮುಖವಾಗಿ ಸೆಳೆದಿರುವುದು ಅವರ ಕಾವ್ಯಜೀವನದಲ್ಲಾದ ಮಹತ್ವದ ಬದಲಾವಣೆ. ಈ ಬದಲಾವಣೆಯಲ್ಲಿ ನಿರ್ದಿಷ್ಟ ಹಂತಗಳು ಎಷ್ಟು, ಯಾವವು ಎಂಬುದರ ಬಗ್ಗೆ ವಿಮರ್ಶಕರಲ್ಲಿ ಸಹಮತವಿಲ್ಲದಿದ್ದರೂ, ಬದಲಾವಣೆ ಆಗಿರುವುದರ ಬಗ್ಗೆ ಮಾತ್ರ ಭಿನ್ನಾಭಿಪ್ರಾಯವಿಲ್ಲ.

ಸಿ.ವಿ. ವೇಣುಗೋಪಾಲ ಅವರ ಭಟ್ಟರ ಕಾವ್ಯದಲ್ಲಿ ಎರಡು ಹಂತಗಳನ್ನು ಗುರುತಿಸಿದ್ದಾರೆ (೧೯೮೯ : ೧೮೫). ಎಚ್.ಆರ್. ಅಮರನಾಥ ಅವರು ಮೂರು ಹಂತಗಳನ್ನು ಗುರುತಿಸಿದ್ದಾರೆ (೧೯೯೩). ಇದನ್ನು ಒಪ್ಪದ ಟಿ.ಜಿ. ಭಟ್ಟರು, ತಮ್ಮ ಕವನ ಸಂಕಲನಗಳ ಮುನ್ನುಡಿಗಳಲ್ಲಿ ವಿ.ಜಿ. ಭಟ್ಟರೇ ಹೇಳಿಕೊಂಡಿರುವ ಮಾತುಗಳನ್ನು ಆಧರಿಸಿ ಐದು ಹಂತಗಳನ್ನು ಗುರುತಿಸಿದ್ದಾರೆ (೧೯೯೩ : ೩೫). ಈ ಹಂತಗಳ ಕಾಲಾವಧಿಗಳ ಆದಿ-ಅಂತ್ಯಗಳ ಬಗೆಗಾಗಲಿ, ಅವುಗಳಿಗೆ ಕೊಡಬಹುದಾದ ಹೆಸರುಗಳ ಬಗೆಗಾಗಲಿ ವಿಮರ್ಶಕರಲ್ಲಿ ಸಹಮತವಿಲ್ಲ.

ಭಟ್ಟರ ಮೊದಲ ಹಂತದ ಕಾವ್ಯವನ್ನು ಬೇಂದ್ರೆಯವರು ‘ವಿಕೃತಿ’ ಎಂದು ಕರೆದಿದ್ದಾರೆ (೧೯೫೧). ಕೀರ್ತಿನಾಥ ಕುರ್ತಕೋಟಿಯವರೂ ಅದನ್ನು ಅನುಮೋದಿಸಿದ್ದಾರೆ (೧೯೬೨ : ೮೫). ಅಮರನಾಥರು ಈ ಅಭಿಪ್ರಾಯವನ್ನು ಒಪ್ಪದೇ, ಇದನ್ನು ‘ವಿದೂಷಕತ್ವದ ಹಂತ’ ಎಂದು ಕರೆದಿದ್ದಾರೆ (೧೯೯೩ :೬). ಆದರೆ ಇದೂ ಕೂಡ ಕುರ್ತಕೋಟಿಯವರು ಸೂಚಿಸಿರುವ ಹೆಸರೇ (೧೯೬೨ : ೮೫). ಭಟ್ಟರಿಗೆ ಈ ಎರಡು ಹೆಸರುಗಳೂ ಒಪ್ಪಿಗೆಯಾಗಿಲ್ಲ (೧೯೯೩ :೪೩). ನಿರಂಜನ (೧೯೮೫) ಮತ್ತು ಗೌರೀಶ ಕಾಯ್ಕಿಣಿಯವರು (೧೯೯೫ : ೨೪೦) ಈ ಹಂತದ ಭಟ್ಟರ ಕಾವ್ಯವನ್ನು ‘ವಿಕಟಕವಿತ್ವ’ ಎಂದು ವರ್ಣಿಸಿದ್ದಾರೆ. ವಿಡಂಬನಾತ್ಮಕ, ವಾಸ್ತ್ರವವಾದಿ, ಪ್ರತಿಕ್ರಿಯಾತ್ಮಕ, ತುಂಟ, ಅಣುಕು ಪ್ರಧಾನ, ತರ್ಕಪ್ರಧಾನ ಎಂದೂ ಇದನ್ನು ವರ್ಣಿಸಲಾಗಿದೆ. “ಪಲಾಯನ” (೧೯೪೬)ದಿಂದ “ಕಾವ್ಯ ವೇದನೆ” (೧೯೫೧)ಯ ವರೆಗಿನ ಕಾಲಾವಧಿಯನ್ನು ಮೊದಲ ಹಂತ ಎನ್ನಬಹುದು. ಭಟ್ಟರ ಕಾವ್ಯದಲ್ಲಿ ಎರಡೇ ಹಂತಗಳನ್ನು ಗುರುತಿಸುವ ವೇಣುಗೋಪಾಲರು ಇದನ್ನು ೧೯೮೩ರ ವರೆಗೂ ಒಯ್ಯುತ್ತಾರೆ (೧೯೮೯:೧೮೬).

ನಡುವಿನ ಹಂತವನ್ನು ಅಮರನಾಥರು ‘ಜಿಜ್ಞಾಸುವಿನದು’ ಎನ್ನುತ್ತಾರೆ (೧೯೯೩;೧೨). ಜೀವನದ ಬಗ್ಗೆ ಭಟ್ಟರು ಗಂಭೀರ ಚಿಂತನೆ ನಡೆಸಿದ ಈ ಹಂತದ ಕಾವ್ಯಕ್ಕೆ ಹೆಚ್ಚಿನ ಹೆಸರುಗಳು ಬಂದಿಲ್ಲ. ಕಾರಣವೆಂದರೆ ಈ ಹಂತವನ್ನು ಬೇರೆ ವಿಮರ್ಶಕರು ಅಷ್ಟಾಗಿ ಗಮನಿಸಿಲ್ಲ. “ಮೂರ್ತಿ” ಸಂಕಲನ ಪ್ರಕಟವಾದ ೧೯೬೪ರಿಂದ “ಉತ್ತರ ಕಾಂಡ” ರಚನೆಯಾದ ೧೯೭೬ರ (ಪ್ರಕಟವಾದದ್ದು ೧೯೮೪) ವರೆಗೆ ಈ ಕಾಲಾವಧಿಯನ್ನು ಅಮರನಾಥರು ಗುರುತಿಸುತ್ತಾರೆ (೧೯೯೩ : ೧೬). ಕುರ್ತಕೋಟಿಯವರ ಪ್ರಕಾರ ಈ ಹಂತ “ಅರಣ್ಯರೋದನ” (೧೯೫೭) ದಿಂದ “ಜಡಿಮಳೆ” (೧೯೯೫೮)ಯ ವರೆಗೆ. ಮೂರನೆಯ ಹಂತವನ್ನು ಅವರು “ಮೂರ್ತಿ” (೧೯೬೪) ಸಂಕಲನದಿಂದಲೇ ಗುರುತಿಸುತ್ತಾರೆ.

ಅಮರನಾಥರ ಅಭಿಪ್ರಾಯದಲ್ಲಿ ಭಟ್ಟರ ಕಾವ್ಯದ ಮೂರನೆಯ ಹಂತ ೧೯೮೫ರಲ್ಲಿ ಪ್ರಕಟವಾದ “ಧ್ಯಾನಪೀಠ”ದಿಂದ ಆರಂಭವಾಗುತ್ತದೆ. ಈ ಹಂತವನ್ನು ಅವರು ‘ಅವಧೂತನದು’ ಎನ್ನುತ್ತಾರೆ (೧೯೯೩;೧೭). ಈ ಹಂತದ ಕಾವ್ಯವನ್ನು ನಿರಂಜನರು ‘ದಾರ್ಶನಿಕ ಕಾವ್ಯ’ ಎಂದು ಕರೆದಿದ್ದಾರೆ (೧೯೮೫), ವಿ.ಕೃ. ಗೋಕಾಕರು ಅದನ್ನು ‘ಅನುಭಾವ ಕಾವ್ಯ’ ಎಂದು ಹೆಸರಿಸಿದ್ದಾರೆ (೧೯೮೫). ‘ಚಿಂತನಪ್ರಧಾನ ಕಾವ್ಯ’ ಎಂದೂ ಇದನ್ನು ವರ್ಣಿಸಬಹುದು. ‘ಆಧ್ಯಾತ್ಮಿಕ ಕಾವ್ಯ’ ಎಂದೂ ಆದೀತು.

ಈ ಮೂರು ಹಂತಗಳಲ್ಲಿ ಭಟ್ಟರ ಕಾವ್ಯ ಮತ್ತು ಮನೋಧರ್ಮದಲ್ಲಿ ಆದ ಬದಲಾವಣೆಗಳು ಇಂಗ್ಲಿಷ್ ಕವಿ. ಟಿ.ಎಸ್.ಎಲಿಯಟ್‌ನ ಕಾವ್ಯದಲ್ಲಾದ ಬದಲಾವಣೆಗಳನ್ನು ನೆನಪಿಗೆ ತರುತ್ತವೆ. ನಂಬಿಕೆ ಕಳೆದುಕೊಂಡು, ಕೇಂದ್ರ ಅರ್ಥವಿಲ್ಲದ ಜೀವನದ ದುರಂತವನ್ನು ಚಿತ್ರಿಸುವ ಅವನ ಮೊದಲ ಹಂತದ ಕಾವ್ಯದ ಅತ್ಯಂತ ಶಕ್ತಿಶಾಲಿಯಾದ ಅಭಿವ್ಯಕ್ತಿ ಅವನ “ಬಂಜರು ಭೂಮಿ” (The Waste Land). ಎರಡನೆಯ ಹಂತದ ಕಾವ್ಯದಲ್ಲಿ ವರ್ತಮಾನದ ಆತಂಕ-ಭಯ-ಅರಾಜಕತೆಗಳಿಗೆ ಪರಿಹಾರವಾಗಿ ಒಂದು ದೃಢವಾದ ನಂಬಿಕೆ ಬೇಕು ಎಂಬ ಸಕಾರಾತ್ಮಕ ನಿಲುವು ಕಾಣುತ್ತದೆ. ಸಾಂಪ್ರದಾಯಿಕ ಕ್ರಿಶ್ಚನ್ ಧರ್ಮದ ಶ್ರದ್ಧೆಯಲ್ಲಿ ಎಲಿಯಟ್ ಈ ನಂಬಿಕೆಯನ್ನು ಕಂಡುಕೊಳ್ಳುತ್ತಾನೆ. “ಭಸ್ಮ ಬುಧವಾರ” (Ash Wednesday) ಎಂಬ ಕವಿತೆಯಲ್ಲಿ ಕ್ರಿಶ್ಚನ್ ಧರ್ಮದ ಆಚರಣೆಯೊಂದನ್ನು ಕೇಂದ್ರ ಸಂಕೇತವಾಗಿ ಇರಿಸಿಕೊಂಡು ಆತಂಕ-ಅನಿಶ್ಚಿತತೆ-ತೊಳಲಾಟಗಳಿಂದ ‘ಪ್ರಾರ್ಥನೆ’ಯ ಸ್ಥಿತಿಗೆ ತಲುಪುತ್ತಾನೆ. ಮೂರನೆಯ ಹಂತದ ಕಾವ್ಯ ಒಂದು ಕೇಂದ್ರಶ್ರದ್ಧೆಯನ್ನು ಕಂಡುಕೊಂಡ ಬಳಿಕ ಬರುವ ಶಾಂತಿ-ಸಮಾಧಾನ-ಚಿಂತನ-ಧ್ಯಾನಗಳ ಮೂಲಕ ಬದುಕಿನ ಮೂಲಭೂತ ವಿಷಯಗಳ ಬಗ್ಗೆ ನಡೆಸುವ ಚಿಂತನವಾಗಿದೆ. ಈ ಹಂತದ ಕಾವ್ಯದ ಶ್ರೇಷ್ಠ ಅಭಿವ್ಯಕ್ತಿ “ನಾಲ್ಕು ಚತುಷ್ಕಗಳು” (Four Quartets) ಎಲಿಯಟ್‌ನ ಕಾವ್ಯದ ಈ ಮೂರು ಹಂತಗಳನ್ನು ಅವನಿಗೆ ಅತ್ಯಂತ ದೊಡ್ಡ ಆದರ್ಶ ಮಾದರಿಯಾಗಿದ್ದ ಡಾಂಟೆ ಕವಿಯ “ಡಿವೈನ್ ಕಾಮಿಡಿ”ಯ ಮೂರು ಭಾಗಗಳಾದ ‘ಇನ್‌ಫರ್ನೊ’, ‘ಪರ್ಗೆಟೋರಿಯೊ’, ‘ಪ್ಯಾರಡಿಸೊ’ಗಳಿಗೆ ಕ್ರಮವಾಗಿ ಹೋಲಿಸಲಾಗಿದೆ.

ಎಲಿಯಟ್‌ನ ಕಾವ್ಯದ ಹಂತಗಳನ್ನು ವಿ.ಜಿ. ಭಟ್ಟರ ಕಾವ್ಯದ ಹಂತಗಳಿಗೆ ಯಥಾವತ್ತಾಗಿ ಹೋಲಿಸಲು ಆಗುವುದಿಲ್ಲ. ವಿಶೇಷವಾಗಿ ಮೊದಲ ಹಂತದ ಕಾವ್ಯದಲ್ಲಿ ಇಬ್ಬರೂ ಬೇರೆಬೇರೆ ದಿಕ್ಕುಗಳಲ್ಲಿದ್ದಾರೆ. ಎಲಿಯಟ್‌ನಿಗೆ ಈ ಜಗತ್ತಿನ ದುಃಖ-ಆತಂಕ-ಭಯ-ಅರಾಜಕತೆಗಳಿಗೆ ನಂಬಿಕೆ ಇಲ್ಲದಿರುವುದೇ ಕಾರಣವೆಂಬ ಸ್ಪಷ್ಟ ಅರಿವಿದೆ. ಅಂಥದೊಂದು ನಂಬಿಕೆ ಇಲ್ಲದಿರುವುದು ಭಟ್ಟರಿಗೆ ಒಂದು ಕೊರತೆಯಾಗಿ ಕಾಣುವುದಿಲ್ಲ. ಅಷ್ಟೇ ಅಲ್ಲ, ನಂಬಿಕೆ ಇಲ್ಲದಿರುವ ಸ್ಥಿತಿಯನ್ನೇ ಉತ್ಸಾಹದಿಂದ ವೈಭವೀಕರಿಸುತ್ತಾರೆ ಮತ್ತು ತಾರ್ಕಿಕ ಪಟ್ಟುಗಳ ಮೂಲಕ ನಂಬಿಕೆಯ ಲೇವಡಿಯನ್ನು ಮಾಡುತ್ತಾರೆ. ಅವರಿಗೆ ದೇವರ ಅಸ್ತಿತ್ವದಲ್ಲಿ ನಂಬಿಕೆಯೇ ಇಲ್ಲ. ಆತ್ಮ ಕಿಟ್ಟೆಲ್ ಕೋಶದ ನೂರಾ ಐವತ್ಮೂರನೆ ಪುಟದಲ್ಲಿ ಮಾತ್ರ ಸಿಗುವ ಒಂದು ಶಬ್ದವಷ್ಟೆ (‘ಆತ್ಮಶೋಧನೆ’ : “ಕಾವ್ಯ ವೇದನೆ”). ಇಲ್ಲಿ ದೇವರೂ ಇಲ್ಲ, ಆತ್ಮವೂ ಎಲ್ಲ. ಆದರೆ ಈ ಬದುಕು ಮತ್ತು ಸುತ್ತಲಿನ ಸಮಾಜದಲ್ಲಿ ಕಾಣಿಸುವ ಓರೆಕೋರೆಗಳ ಬಗೆಗೆ ಭಟ್ಟರಿಗೆ ಅಸಹನೆ ಇದೆ. ಅಂಥ ಹುಳುಕು-ಹುಣ್ಣುಗಳನ್ನು ಚುಚ್ಚಿ, ಕೆರೆದು ವ್ಯಂಗ್ಯ ಲೇವಡಿ ಕಟಕಿಗಳ ಮೂಲಕ ಟೀಕಿಸುತ್ತಾರೆ, ಜೊತೆಗೆ ಬದುಕಿನ ಬಗ್ಗೆ ಗೌರವವೂ ಇದೆ. ಎಲಿಯಟ್‌ನ ಕಾವ್ಯದಲ್ಲಿ ‘ವಿಕಟಕವಿತ್ವ’ವನ್ನು ನಾವು ಕಾಣಲಾರೆವು.

ಆದರೆ ಎರಡನೆಯ ಹಂತದ ಕಾವ್ಯದಲ್ಲಿ ಎಲಿಯಟ್ ಮತ್ತು ಭಟ್ಟರು ತಲುಪುವ ಪ್ರಾರ್ಥನೆಯ ಸ್ಥಿತಿಯಲ್ಲಿ ಆಶ್ಚರ್ಯಕರವಾದ ಹೋಲಿಕೆಯಿದೆ. ಎಲಿಯಟ್ ನಮ್ರವಾದ, ಶರಣಾಗತಿಯ, ಪ್ರಾರ್ಥನೆಯ ಆಶಯ ಮತ್ತು ಲಯಗಳನ್ನು ಬಳಸಿಕೊಳ್ಳುತ್ತಾನೆ. ಪ್ರಾರ್ಥನೆಯ ಮಹತ್ವವನ್ನು ಮನಗಾಣಿಸುತ್ತಾನೆ. ಭಟ್ಟರ ಕಾವ್ಯದಲ್ಲಿ ಮೊದಲ ಹಂತದಲ್ಲಿ ಕಾಣದಿದ್ದ ‘ಪ್ರಾರ್ಥನೆ’ಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತ, ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುತ್ತ, ಕೊನೆಕೊನೆಗೆ ಪ್ರಾರ್ಥನೆಯೇ ಅವರ ಕಾವ್ಯದ ಮುಖ್ಯ ವಸ್ತುವಾಗುತ್ತದೆ. ಅಪನಂಬಿಕೆ ಕ್ರಮೇಣ ಜಾರುತ್ತ ಮನಸ್ಸು ಸ್ವೀಕೃತಿಗೆ ತೆರೆದುಕೊಳ್ಳುತ್ತದೆ. ಅವರಲ್ಲಿ ಇದೊಂದು ಸ್ವೀಕೃತಿಗೆ ಸಿದ್ಧತೆಯ ಹಂತ. ಆದರೂ ಅವರಿಬ್ಬರ ಪ್ರಾರ್ಥನೆಗಳಲ್ಲಿ ಗುಣಾತ್ಮಕ ವ್ಯತ್ಯಾಸಗಳು ಇದ್ದೇ ಇವೆ.

ಮೂರನೆಯ ಹಂತದಲ್ಲಿ ಭಟ್ಟರ ಕಾವ್ಯದಲ್ಲಿ ಪ್ರಾರ್ಥನೆಗಳ ಸಂಖ್ಯೆ ಹೆಚ್ಚಾಗುತ್ತ ಹೋಗುತ್ತದೆ ಮತ್ತು ಎಲಿಯಟ್‌ನ ಈ ಹಂತದ ಕಾವ್ಯದಲ್ಲಿ ನಡೆಯುವಂತೆ ಭಟ್ಟರ ಕಾವ್ಯದಲ್ಲಿಯೂ ಬದುಕಿನ ಬಗ್ಗೆ, ಸೃಷ್ಟಿಯ ಬಗ್ಗೆ, ಆಧ್ಯಾತ್ಮಿಕ ಸಮಸ್ಯೆಗಳ ಬಗ್ಗೆ ವ್ಯಾಪಕ ಚಿಂತನೆ ನಡೆದಿದೆ. ಅವರ ದೈವಶ್ರದ್ಧೆ ಗಟ್ಟಿಯಾಗುತ್ತ ಹೋಗಿದೆ. ಆದರೆ ಇಲ್ಲಿಯೂ ಇವರಿಬ್ಬರ ಚಿಂತನೆಯ ಗುಣ-ಆಳ-ಗಹನತೆ-ಸ್ವಂತಿಕೆಗಳಲ್ಲಿ ಬಹಳಷ್ಟು ಅಂತರವಿದೆ. ಒಂದು ವಿಶೇಷ ಸಂಗತಿಯೆಂದರೆ, ಈ ಹಂತದ ಇಬ್ಬರ ಕಾವ್ಯವನ್ನೂ ‘ಅನುಭಾವ ಕಾವ್ಯ’ವೆಂಬ, ಅಥವಾ ಆ ಅರ್ಥಕ್ಕೆ ಸಮೀಪ ಬರುವ ಹೆಸರಿನಿಂದ ಕರೆದಿರುವದು.

ಇಂಥ ಬದಲಾವಣೆ ಅಪರೂಪದ್ದೇನೂ ಅಲ್ಲ. ಅನೇಕರ ಜೀವನದಲ್ಲಿ ಇದು ಸಂಭವಿಸುತ್ತದೆ. ಕೆಲವರಲ್ಲಿ ವಯಸ್ಸಿಗೆ ಸಹಜವಾಗಿ ಎನ್ನುವಂತೆ ಇಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಬದುಕಿನಲ್ಲಿ ಸಂಭವಿಸುವ ಆಘಾತಗಳ ಪರಿಣಾಮವಾಗಿ ಬರುತ್ತದೆ. ಮತ್ತೆ ಕೆಲವರಿಗೆ ಬಾಲ್ಯದಿಂದಲೇ ದೊರೆತ ಸಂಸ್ಕಾರದ ಫಲವಾಗಿರುತ್ತದೆ. ಕನ್ನಡ ಸಾಹಿತ್ಯದಲ್ಲಿಯೇ ಬಾಗಲೋಡಿ ದೇವರಾಯ, ವಸುದೇವ ಭೂಪಲಂ ಅವರಲ್ಲಿ ಕಾಣುವ ಒಂದು ಮಾದರಿ ಇದೆ- ಅನುಭವದ ಆಘಾತದಿಂದ ಬಂದದ್ದು. ಬೇಂದ್ರೆ, ಮಧುರಚೆನ್ನ, ಪು.ತಿ.ನ. ಅಂಥವರಲ್ಲಿ ಅದು ಪೂರ್ವಜನ್ಮದ ಸಂಸ್ಕಾರವೆಂಬಂತೆ ಕಾಣುತ್ತದೆ.

ಇಂಗ್ಲಿಷ್ ಕವಿ ಹಾಪ್‌ಕಿನ್ಸ್ ತನ್ನ ‘The Wreck of the Deutschland’ ಕವಿತೆಯಲ್ಲಿ ಹೀಗೆ ಬದಲಾವಣೆಯಾಗಿರುವ ಎರಡು ಮಾದರಿಗಳನ್ನು ಕೊಡುತ್ತಾನೆ. ಒಂದು, ಕ್ರೈಸ್ತ ಧರ್ಮದ ವಿರೋಧಿಯಾಗಿದ್ದು, ತನ್ನ ಧರ್ಮಗುರುವಿನ ಅಣತಿಯಂತೆ ಕ್ರಿಸ್ತೀಯರನ್ನು ಶಿಕ್ಷಿಸಲೆಂದು ಹೊರಟಿದ್ದ ಸಾಲ್ ಎಂಬಾತ ಸಿಡಿಲಿನಂತೆ ಎರಗಿ, ಕುರುಡನನ್ನಾಗಿಸಿ, ಕುದುರೆಯ ಮೇಲಿಂದ ಕೆಳಕ್ಕುರುಳಿಸಿದ ಬೆಳಕಿನಿಂದ ಆಘಾತಗೊಂಡು, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ, ಸಂತ ಪಾಲನಾದ ಮಾದರಿ, ಇನ್ನೊಂದು-ವಸಂತ ಮಾಸದಂತೆ ಸಹಜವಾಗಿ, ನಿಧಾನವಾಗಿ, ಕ್ರಮಕ್ರಮೇಣವಾಗಿ ಮನಃಪರಿವರ್ತನೆಯಿಂದ ಕ್ರಿಸ್ತನನ್ನು ಒಪ್ಪಿಕೊಂಡ ಸಂತ ಆಗಸ್ಟಿನ್ನನ ಮಾದರಿ.

ವಿ.ಜಿ. ಭಟ್ಟರಲ್ಲಿ ಆದ ಬದಲಾವಣೆ ಸಂತ ಪಾಲನ ರೀತಿಯದು. ‘ಪ್ರೇಮರಾಧನೆ’ (“ಕಾವ್ಯವೇದನೆ”)ಯ ‘ಉಪೋದ್-ಘಾತ್’ದಲ್ಲಿ ಪಾ.ವೆಂ. ಅವರು ಕರೆಯುವಂತೆ ‘ಪಾಷಂಡಿ’ಯಾಗಿದ್ದ ಭಟ್ಟರು ಬದುಕು ಕೊಟ್ಟ ಆಘಾತದಿಂದಾಗಿ ಒಮ್ಮೆಲೆ ನಂಬಿಕೆಯ ಕಡೆಗೆ ತಿರುಗಿದರು. “ಆತ್ಮಗೀತೆ”ಗೆ (೧೯೭೦) ಬರೆದ ‘ಅರಿಕೆ’ ಯಲ್ಲಿ ತಮಗಾದ ಇಂಥ ಆಘಾತದ ಬಗ್ಗೆ ಭಟ್ಟರು ಒಂದು ಸೂಚನೆ ಕೊಡುತ್ತಾರೆ: “ಕೆಲವು ವರ್ಷಗಳ ಹಿಂದೆ ವಿಷಮ ಪರಿಸ್ಥಿತಿಯಲ್ಲಿ ಸಿಕ್ಕು ತೊಳಲಾಡಿದೆ. ಮಾನಸಿಕ ವೇದನೆಯನ್ನು ಸಹಿಸುವ ಯತ್ನದಲ್ಲಿ ಏನೇನೋ ಗೊಣಗಿಕೊಂಡೆ. ಈ ಸಂಗ್ರಹದಲ್ಲಿ ಬಂದಿರುವ ಕವನಗಳು ಹೆಚ್ಚಾಗಿ ಆ ಅವಧಿಯಲ್ಲಿ ಬರೆದವುಗಳು.” ಇದರ ಹಿಂದಿನ ಏಳೆಂಟು ವರ್ಷಗಳ ಅವಧಿಯಲ್ಲಿ ಅವರು ಕವಿತೆಗಳನ್ನು ಬರೆಯಲಿಲ್ಲವೆನ್ನುವುದನ್ನು ನೆನಪಿನಲ್ಲಿಡಬೇಕು. ಆದರೆ ಇನ್ನೊಂದು ವಿಚಿತ್ರ ಸಂಗತಿಯೆಂದರೆ, ಭಟ್ಟರ ಜೀವನದಲ್ಲಿ ಮೊದಲಿನಿಂದಲೂ ಇಂಥ ಸೂಚನೆಗಳು ಕಾಣಿಸಿಕೊಂಡಿದ್ದವೆಂದು ಅವರೇ ಒಂದೆಡೆ ಹೇಳಿದ್ದಾರೆ: “ನನ್ನ ಬದುಕಿನಲ್ಲಿ-ಬಾಲ್ಯದಿಂದಲೂ-ಬಿದ್ದ ಕನಸುಗಳು, ಅವುಗಳಿಂದ ದೊರೆತ (ಸಾಂಕೇತಿಕ) ಆದೇಶ, ಅವುಗಳಿಗೆ ನಾನು ಸಮರ್ಪಿಸಿಕೊಂಡು ಬಂದ ರೀತಿಗಳನ್ನೆಲ್ಲ ವಿವರಿಸಿದ್ದಾರೆ… ನನ್ನ ಜೀವನದ ಉತ್ತರಾರ್ಧದ ಸೃಜನೆಯ ಅವ್ಯಕ್ತ ಶಕ್ತಿಯ ಸಂಚಾರ ಹೊಳೆದೀತು” (೧೯೮೭:೩೯). ಆದರೆ ಈ ಯಾವ ಸೂಚನೆಗಳೂ ಅವರ ಮೊದಲ ಹಂತದ ಕಾವ್ಯದಲ್ಲಿ ಯಾಕೆ ಕಾಣುವುದಿಲ್ಲ ಎಂಬುದು ತಿಳಿಯುವುದಿಲ್ಲ. ಅವುಗಳ ಬಗ್ಗೆ ಅವರಿಗೇ ನಂಬಿಕೆಯಾಗಲಿಲ್ಲವೇ? ಅಥವಾ ನಾಸ್ತಿಕ-ಪಾಷಂಡಿ ಇಮೇಜನ್ನು ಗಳಿಸಿಕೊಳ್ಳಬೇಕೆಂಬ ಉಮೇದಿನಲ್ಲಿ ಅದನ್ನೆಲ್ಲ ಹತ್ತಿಕ್ಕಿಕೊಂಡರೆ? ನಂತರದ ಕಾವ್ಯದಲ್ಲಿ ಮಾತ್ರ ಅಲ್ಲಲ್ಲಿ ಇದರ ಸುಳಿವುಗಳು ಫ್ಲಾಷ್ ಬ್ಯಾಕಿನಂತೆ ಕಾಣಿಸಿಕೊಳ್ಳುತ್ತದೆ.

ಅನೇಕರಲ್ಲಿ ಇಂಥ ಪರಿವರ್ತನೆಯಾಗುತ್ತದಾದರೂ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ. ನಾಸ್ತಿಕನಿಗೆ ಒಂದು ಬಗೆಯ ಕ್ರಾಂತಿಕಾರಿಯ ಪ್ರಭೆ ಇರುತ್ತದೆ. ತಾನು ನಾಸ್ತಿಕನೆಂದು ಹೇಳಿಕೊಳ್ಳುವದರಲ್ಲಿ ಹೆಮ್ಮೆ ಇರುತ್ತದೆ. ಅದನ್ನು ಕಳೆದುಕೊಳ್ಳಲು ಬಹಳ ಜನ ಇಚ್ಛಿಸುವುದಿಲ್ಲ. ಕದ್ದು ಮುಚ್ಚಿ ಅಥವಾ ಹೆಂಡತಿಯ ಬಲವಂತದ ನೆಪ ಹೇಳಿ, ಒಳಗೊಳಗೇ ಬದಲಾಗುತ್ತಾರೆ. ಜನಿವಾರವನ್ನೋ, ಗುಂಡುಗಡಿತೆಯನ್ನೋ ಹೊರಮೈಯಿಂದ ತೆಗೆದುಹಾಕಿದರೂ, ತಮ್ಮ ಮನಸ್ಸಿಗೇ ಕಟ್ಟಿಕೊಳ್ಳುತ್ತಾರೆ. ಶ್ರದ್ಧೆ, ಭಕ್ತಿಗಳು ನಾಚಿಕೆಯ ವಿಷಯವಾಗಿರುವ ಇಂದಿನ ದಿನಗಳಲ್ಲಿ ಪು.ತಿ.ನ. ಮಾಸ್ತಿಯವರಂತೆ ಢಾಳಾಗಿ ನಾಮ ಹಾಕಿಕೊಂಡು ಮನೆಯ ಹೊರಗೆ ಬರುವುದಕ್ಕೂ ಧೈರ್ಯ ಬೇಕಾಗಿದೆ.

ಆದರೆ ಮುಖ್ಯ ಪ್ರಶ್ನೆ ಎಂದರೆ, ಭಟ್ಟರಿಗಾದ ಈ ಆಘಾತದ ಅನುಭವ ಏನು? ಅದರ ಸ್ವರೂಪ ಎಂಥದು? ಜೀವವನ್ನು ಅಲ್ಲಾಡಿಸಿ, ತತ್ತೈರಿಸುವಂತೆ ಮಾಡಿದಾಗಿನ ಅನುಭವ ಎಂಥದು? ಅದರೊಂದಿಗೆ ಭಟ್ಟರು ಸೆಣಸಾಡಿದ್ದು ಹೇಗೆ? ಈ ಸಂಘರ್ಷದ ಸ್ವರೂಪವೇನು? ಅಲ್ಲಿಯವರೆಗೆ ಕಟ್ಟಿಕೊಂಡು ಬಂದಿದ್ದ ಜೀವನದೃಷ್ಟಿ ಒಮ್ಮೆಲೆ ತಲೆಕೆಳಗಾದಾಗಿನ ತೊಳಲಾಟವೇನು? ಸ್ವೀಕೃತಿಯ ಹಂತದ ಮುಜುಗರಗಳೇನು? ಇದನ್ನು ವಿ.ಜಿ. ಭಟ್ಟರ ಕಾವ್ಯ ಅನುಭವವನ್ನಾಗಿ ಕಟ್ಟಿಕೊಡುವುದಿಲ್ಲ.

ಕವಿಯಾದವನಿಗೆ ಇದೊಂದು ದೊಡ್ಡ ಸವಾಲು, ಅದನ್ನು ಕಾವ್ಯದ ವಸ್ತುವನ್ನಾಗಿ ಸ್ವೀಕರಿಸುವುದು ಕಷ್ಟದ ಕೆಲಸ. ಅದನ್ನು ಎದುರಿಸಿ, ಅದಕ್ಕೆ ತಕ್ಕ ಅಭಿವ್ಯಕ್ತಿ ಮಾರ್ಗವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಬೇಂದ್ರೆ, ಗಂಗಾಧರ ಚಿತ್ತಾಲ ಇಂಥ ಸವಾಲನ್ನು ಸಮರ್ಥವಾಗಿ ಎದುರಿಸಿದರು. ಭಟ್ಟರ ಕಾವ್ಯ ಈ ಕಾಲಾವಧಿಯಲ್ಲಿ ಮೌನವಾಗಿತ್ತು. “ಆತ್ಮಗೀತೆ”ಯ ಹೊತ್ತಿಗೆ ಅವರ ಕವಿತೆ ಮರಳಿ ಬಂದಾಗ ಆಗಲೇ ಆ ತಳಮಳದ ಕಾವು ಇಳಿದಿತ್ತು. ಆದರೂ ಈ ಅಂಕಣದಲ್ಲಿ ಆ ತಲ್ಲಣ, ವೇದನೆ, ಹೊಯ್ದಾಟಗಳನ್ನು ಅಭಿವ್ಯಕ್ತಿಸುವ ಕೆಲವು ಕವನಗಳಿವೆ. ದೇವರ ಬಗೆಗಿನ ವಿಶ್ವಾಸ-ಅವಿಶ್ವಾಸಗಳ ನಡುವಿನ ಹೊಯ್ದಾಟ-ಹಿಂಜರಿಕೆಗಳನ್ನು ಅವರ ಕಾವ್ಯದಲ್ಲಿ ಕಾಣಬಹುದು. ದೇವರನ್ನು ಒಪ್ಪಿಕೊಂಡ ಮೇಲೂ ಅವನ ಜೊತೆಗೆ ಒಂದು ಬಗೆಯ ಸಂಘರ್ಷದ ನಿಲುವನ್ನೇ ಭಟ್ಟರು ತಳೆಯುತ್ತಾರೆ.

ಈಗಿರುವಂತೆ, ನಂಬಿಕೆಯಿಲ್ಲದ ಮತ್ತು ನಂಬಿಕೆಯಿರುವ ಎರಡು ಸ್ಥಿತಿಗಳು ಅಭಿವ್ಯಕ್ತಿಯ ದೃಷ್ಟಿಯಿಂದ ಸಿದ್ಧಮಾರ್ಗಗಳು. ಹಾಗಾಗಿ ಅವು ಸುಲಭ ಮಾರ್ಗಗಳೂ ಹೌದು. ಎರಡಕ್ಕೂ ನಮ್ಮ ಕಾವ್ಯಪರಂಪರೆಯಲ್ಲಿ ಮಾದರಿಗಳಿವೆ. ತಳಮಳದ, ಹೊಯ್ದಾಟದ ಈ ನಡುವಿನ ಮಾರ್ಗಕ್ಕೆ ಅಂಥ ಮಾದರಿಗಳಿಲ್ಲ. ಅಂಥ ಸ್ಥಿತಿಯನ್ನು ಅನುಭವಿಸುವ ಪ್ರತಿಯೊಬ್ಬ ಕವಿಯೂ ತನ್ನದೇ ಆದ ಮಾರ್ಗವೊಂದನ್ನು ಹುಡುಕಿಕೊಳ್ಳಬೇಕಾಗುತ್ತದೆ. ಭಟ್ಟರ ಕಾವ್ಯದಲ್ಲಿ ಅಂಥ ಹೊಸ ಅಥವಾ ವಿಶಿಶ್ಟ ಅಭಿವ್ಯಕ್ತಿ ಮಾರ್ಗವನ್ನು ಹುಡುಕಿಕೊಳ್ಳುವ ಮಹಾತ್ವಾಕಾಂಕ್ಷೆ ಕಾಣುವುದಿಲ್ಲ.

ಎಲಿಯಟ್ ತನ್ನ ಮನೋಧರ್ಮ, ಜೀವನದೃಷ್ಟಿಗಳಲ್ಲಿ ಆದ ಬದಲಾವಣೆಗಳ ಮೂರು ಹಂತಗಳಿಗೆ ಮೂರು ಬೇರೆಬೇರೆಯೇ ಆದ ಅಭಿವ್ಯಕ್ತಿ ಮಾರ್ಗಗಳನ್ನು ರೂಪಿಸಿಕೊಂಡ ಅವನ “ಬಂಜರುಭೂಮಿ”ಯ ಶೈಲಿ, ಪ್ರತಿಮಾವಿಧಾನ, ರಾಚನಿಕ ತಂತ್ರ ಒಂದು ರೀತಿಯದು. “ಭಸ್ಮ ಬುಧವಾರ”ದಲ್ಲಿ ಅದು ಬದಲಾಗಿದೆ. “ನಾಲ್ಕು ಚತುಷ್ಕಗಳ” ಸಂದರ್ಭದಲ್ಲಿ ಆ ಎರಡೂ ಮಾರ್ಗಗಳನ್ನು ಕೈಬಿಟ್ಟು ಮತ್ತೊಂದು ವಿಧಾನವನ್ನು ಅವನು ರೂಪಿಸಿಕೊಂಡ. ಆದರೆ, ಕುರ್ತಕೋಟಿಯವರು ಗಮನಿಸಿರುವಂತೆ, ವಿ.ಜಿ.ಭಟ್ಟರ ಕಾವ್ಯದ ಭಾಶೆ, ಶೈಲಿ, ಛಂದಸ್ಸು, ಲಯ, ರಾಚನಿಕ ವಿನ್ಯಾಸಗಳಲ್ಲಿ ಮೊದಲಿನಿಂದ ಕೊನೆಯವರೆಗೆ ಯಾವ ಬದಲಾವಣೆಯೂ ಆಗಿಲ್ಲ (೧೯೬೪: viii). ಅವರ ಕಾವ್ಯಮಾರ್ಗಕ್ಕೆ ಈ ನಡುವಿನ ಅವಧಿಯ ತಳಮಳವನ್ನು ಹಿಡಿಯುವ ಸಾಮರ್ಥ್ಯ ಇರಲಿಲ್ಲವೇನೋ ಎಂಬ ಸಂದೇಹ ನನಗಿದೆ. ಅದಕ್ಕಾಗಿಯೇ ಆ ಅನುಭವದ ಬಗ್ಗೆ ಅವರ ಕಾವ್ಯ ಮೌನವಾಗಿರುವಂತಿದೆ.

ಇದು ವಿ.ಜಿ.ಭಟ್ಟರ ಕಾವ್ಯದ ದೊಡ್ಡ ಮಿತಿ. ಆದರೆ, ತಕ್ಷಣ ಸೇರಿಸಬೇಕಾದ ಮಾತೆಂದರೆ. ಭಟ್ಟರಿಗೆ ತಮ್ಮ ಬದುಕಿನ ಮತ್ತು ಕಾವ್ಯದ ಮಿತಿಗಳ ಬಗ್ಗೆ ಸಂಪೂರ್ಣ ಅರಿವು ಇತ್ತು. “ಮೂರ್ತಿ”(೧೯೬೪) ಸಂಕಲನದ ಕೊನೆಯಲ್ಲಿ ಸೇರಿರುವ ‘ಆತ್ಮಗೀತೆ’ ಇದನ್ನು ಸ್ಪಷ್ಟವಾಗಿ ಹೇಳುತ್ತದೆ.

ಕಂಡ ಕಡಲು ಆಕಾಶವೆಲ್ಲವನು
ತುರುಕಲಾರೆ ಕಿಸೆಗೆ
ಕನಸು ಮೌನಗಳ ಚಿತ್ರ, ಮಂತ್ರಗಳು
ಇಳಿಯಲಾರ ಮಸಿಗೆ

ನಾನು ನನ್ನ ಸಣ್ಣ ಗಡಿಗೆಯಲಿ
ಹಿಡಿಯಲಾರೆನೆಂದೂ
ಯಾಕೊ ಏನೊ ಒದ್ದಾಡುತಿರುವೆನಲ
ಹೇಗೋ ಸಿಲುಕಿಕೊಂಡು!

ಒಡೆಯ ನಗೆಯುವೆನು ಆಗ ಚುಕ್ಕೆಯಲಿ
ಸಿಲುಕಬಹುದು ಜುಟ್ಟ!
ಅಲ್ಲಿತನಕವೂ ಇರಲೆಬೇಕು ಹೀ
ಗೇನೆ ವೀಜಿ ಭಟ್ಟ.

ಬದುಕಿನಲ್ಲಿ ತನ್ನ ಅಳವಿಗೆ ಮೀರಿದ ಎಷ್ಟೋ ವಿಷಯಗಳಿವೆ; ತಾನು ಕಂಡ ಕನಸು, ಅನುಭವಿಸಿದ ಚಿತ್ರ-ಮಂತ್ರಗಳನ್ನೆಲ್ಲ ತನ್ನ ಕಾವ್ಯ ಅಭಿವ್ಯಕ್ತಿಸಲಾರದು; ಸಣ್ಣ ಗಡಿಗೆಯೊಂದರಲ್ಲಿ ಸಿಕ್ಕಿ ತಾನು ಒದ್ದಾಡುತ್ತಿದ್ದೇನೆ; ಆ ಗಡಿಗೆಯನ್ನು ಒಡೆದು ಹೊರಬರುವವರೆಗೆ ತನಗೆ ಮುಕ್ತಿಯಿಲ್ಲ ಎಂಬ ಅರಿವು ಭಟ್ಟರಿಗೆ ಚೆನ್ನಾಗಿಯೇ ಇದೆ. ಆ ಮಿತಿಗಳನ್ನು ಅರ್ಥಮಾಡಿಕೊಂಡು, ಆ ಮಿತಿಗಳಲ್ಲೇ ಸಾಧ್ಯವಿದ್ದುದನ್ನು ಮಾಡಿ ನೋಡುವ ಹಂಬಲ ಅವರ ಕಾವ್ಯದಲ್ಲಿ ಉದ್ದಕ್ಕೂ ಕಾಣುತ್ತದೆ. ಆ ಮಿತಿಗಳನ್ನು ಮೀರಿಹೋಗುವ ಸಾಧ್ಯತೆಯೂ ಇದೆ. ಅದು ಸಾಧಿಸುವವರೆಗೆ ಇದೇ ಸ್ಥಿತಿಯಲ್ಲಿಯೇ ಇರಬೇಕಾದದ್ದು ಅನಿವಾರ್ಯ ಎಂಬುದರ ಅನಿವಾರ್ಯ ಸ್ವೀಕೃತಿಯೂ (Resignation) ಇದೆ. ಕೊನೆಯ ನುಡಿಯಲ್ಲಿಯ ಜುಟ್ಟ-ಭಟ್ಟಗಳ ಪ್ರಾಸ ಕುತೂಹಲಕರವಾಗಿದೆ. ಒಂದು ಗಂಭೀರ ಅವಸ್ಥೆಯಲ್ಲಿಯೂ ಭಟ್ಟರು ಇಂಥ ಕುಚೋದ್ಯ ಮಾಡಬಲ್ಲರು, ತಮ್ಮನ್ನೇ ತಾವು ಹಾಸ್ಯ ಮಾಡಿಕೊಳ್ಳಬಲ್ಲರು ಎಂಬುದೇ ಅವರ ಕಾವ್ಯದ ಒಂದು ವಿಶೇಷ. ಇದು ಭಟ್ಟರ ಜಾಯಮಾನಕ್ಕೆ ಬಹುವಾಗಿ ಒಗ್ಗಿದ ಚುಟುಕಗಳ ಪ್ರಭಾವವಿದ್ದಿರಬೇಕು. ಚುಟುಕು ಕವಿತ್ವ ಅವರ ಕಾವ್ಯಭಿವ್ಯಕ್ತಿಯ ಮುಖ್ಯ ಲಕ್ಷಣವಾಗಿರುವಂತೆ ಅದರೆ ಮುಖ್ಯ ಮಿತಿಯೂ ಆಗಿದೆ.

ಈ ‘ಆತ್ಮಗೀತೆ’ ಕವಿತೆಯ ಇನ್ನೊಂದು ವಿಶೇಷವೆಂದರೆ, ಅದು “ಮೂರ್ತಿ” ಸಂಕಲನದ ಕೊನೆಯ ಪದ್ಯವಾಗಿರುವಂತೆ “ಆತ್ಮಗೀತೆ” (೧೯೭೦) ಸಂಕಲನದ ಮೊದಲ ಪದ್ಯವೂ ಆಗಿದೆ. (ಈ ಎರಡು ಸಂಕಲನಗಳ ಪ್ರಕಟಣೆಯ ನಡುವೆ ಆರು ವರ್ಷಗಳ ಅಂತರವಿರುವದನ್ನು ಇಲ್ಲಿ ಗಮನಿಸಬೇಕು.) ಆದರೆ ಅದಕ್ಕೆ ನಾಲ್ಕು ಪುಟ್ಟ ಸಾಲುಗಳು ಹೊಸದಾಗಿ ಸೇರಿಕೊಂಡಿವೆ:

ಇರಲೆಬೇಕಲ ಇರುವ
ಆಯ್ತು ಸ್ವೀಕಾರ
ಅರಿವಿಗಿದು ಶ್ರೀಕಾರ
ಆಗುಗಳ ದ್ವಾರ

ಎಲ್ಲ ಮಿತಿಗಳ ನಡುವೆ ಹಾಗೇ ಇರಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡು, ಭಟ್ಟರು ಅದನ್ನು ಒಪ್ಪಿಕೊಳ್ಳುತ್ತಾರೆ. ಈ ಸ್ವೀಕೃತಿಯೇ ಹೊಸ ಅರಿವಿನ ಆರಂಭ; ಈ ಅರಿವೇ ಹೊಸ ಆಗುಗಳಿಗೆ ಬಾಗಿಲು ತೆರೆಯುತ್ತದೆಂಬ ನಂಬಿಕೆ ಇಲ್ಲಿ ಕಾಣುತ್ತದೆ. ಇದು ವಾಸ್ತವವನ್ನು ಒಪ್ಪಿಕೊಳ್ಳುವ ನಿಷ್ಠುರ ಪ್ರಾಮಾಣಿಕತೆ, ಈ ಪ್ರಾಮಾಣಿಕತೆ ಹೊಸದಾಗ ಬಂದದ್ದಲ್ಲ; ಅವರ ಮೊದಲಿನ ಕಾವ್ಯದಲ್ಲಿದ್ದ ಪ್ರಾಮಾಣಿಕತೆಯೇ ಇಲ್ಲಿ ರೂಪಾಂತರಗೊಂಡು ಕಾಣಿಸಿಕೊಳ್ಳುತ್ತದೆ.

ಬಹಳ ಮುಖ್ಯವಾದ ವಿಷಯವೆಂದರೆ ವಿ.ಜಿ. ಭಟ್ಟರ ಮನೋಧರ್ಮ. ಅವರ ಅಪಾರ ಕಾವ್ಯರಾಶಿಯನ್ನು ಹಂತಗಳಲ್ಲಿ ವಿಂಗಡಿಸಿ ನೋಡುವುದು ಕೇವಲ ಅಭ್ಯಾಸದ ಅನುಕೂಲಕ್ಕಾಗಿ, ಅಂಥ ನಿಚ್ಚಳ ವಿಭಜನೆಗೆ ಭಟ್ಟರ ಕಾವ್ಯ ಸುಲಭವಾಗಿ ಸಿಗುವುದಿಲ್ಲ. ಆ ಹಂತಗಳಿಗೆ ಕೊಡುವ ಹೆಸರುಗಳೂ ಸರಿಯಾಗಿ ಹೊಂದುವುದಿಲ್ಲ.

ಮೊದಲ ಹಂತವೆಂದು ಗುರುತಿಸುವ ಭಟ್ಟರ ಕಾವ್ಯವನ್ನು ‘ವಿಡಂಬನ ಕಾವ್ಯ’ ಇತ್ಯಾದಿ ಹೆಸರುಗಳಿಂದ ಕರೆಯಲಾಗಿದೆಯಷ್ಟೆ? ಈ ಹಂತದಲ್ಲಿ ಭಟ್ಟರು ಕೆಲವು ಉಜ್ವಲ ವಿಡಂಬನ ಕವಿತೆಗಳನ್ನೂ ಅಣಕು ಕವಿತೆಗಳನ್ನೂ ಬರೆದಿರುವುದು ನಿಜ. “ಪಲಾಯನ”ದ ‘ನಾಡೋಜ ಪಂಪ’, “ಕಾವ್ಯವೇದನೆ”ಯ ‘ಆತ್ಮಶೋಧನೆ’, ‘ಆಶಾಗಂಗೆಗೆ’, ‘ಮಗಳನ್ನು ಗಂಡನ ಮನೆಗೆ ನೂಕುವಾಗ’ ಮೊದಲಾದ ಪ್ರಸಿದ್ಧ ಕವಿತೆಗಳು ಈ ಬಗೆಯವು. ನಾವು ಸುಮ್ಮನೆ ಒಪ್ಪಿಕೊಂಡಿರುವ ಗಂಭೀರ ಸಂಗತಿಗಳ ಹಿಂದಿನ ಹಾಸ್ಯಾಸ್ಪದವಾದ ಇನ್ನೊಂದು ಮಗ್ಗಲನ್ನು ತೋರಿಸಿ ಇವು ಕಚಗುಳಿ ಇಡುತ್ತವೆ. ಪರಿಚಿತದ ಹಿಂದಿನ ಅಪರಿಚಿತತೆಯನ್ನು ಬೆಳಕಿಗೆ ತರುತ್ತದೆ. ಸಾಮಾನ್ಯವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ರಚನೆಯಾಗುವ ಗಂಭೀರ, ಭಾವಪ್ರಧಾನ, ತನ್ಮಯತೆಯ, ಆವೇಶದ ಕಾವ್ಯದ ಹಿನ್ನೆಲೆಯಲ್ಲಿ ಇವು ತೀರ ಬೇರೆ ರೀತಿಯ, ಹೊಸ ಬಗೆಯ ಕವಿತೆಗಳಾದ್ದರಿಂದ ಸುಲಭವಾಗಿ ಎದ್ದುಕಾಣುತ್ತವೆ ಆಕರ್ಷಿಸುತ್ತವೆ. ಇಂಥವನ್ನೇ ಭಟ್ಟರ ಕಾವ್ಯದ ವಿಶಿಷ್ಟ ಉದಾಹರಣೆಗಳೆಂದೂ, ಇವೇ ಮೊದಲ ಹಂತದ ಕಾವ್ಯದ ಲಾಕ್ಷಣಿಕ ಕವಿತೆಗಳೆಂದೂ ಭಾವಿಸಿದರೆ ತಪ್ಪಾಗುತ್ತದೆ.

ಯಾಕೆಂದರೆ ಇದೇ ಅವಧಿಯಲ್ಲಿ ಭಟ್ಟರು ಅನೇಕ ಗಂಭೀರ ಕವಿತೆಗಳನ್ನೂ ಬರೆದಿದ್ದಾರೆ. ಅವರ “ರಕ್ತಾಂಜಲಿ”ಯ (೧೯೪೭) ಕವಿತೆಗಳಲ್ಲಿ ಪ್ರಗತಿಶೀಲ ಕಾವ್ಯದ ಆವೇಶ, ರೆಟರಿಕ್ಕುಗಳೆಲ್ಲ ಇವೆ. ಗಂಭೀರವಾದ, ಮಾನವೀಯತೆಯನ್ನು ಗೌರವಿಸುವ, ಅತ್ಯಂತ ಭಾವುಕವೆನ್ನಬಹುದಾದ ಕವಿತೆಗಳನ್ನೂ ಭಟ್ಟರು ಬರೆದಿದ್ದಾರೆ. “ಕಿಷ್ಕಿಂದೆ” (೧೯೫೮) ಸಂಕಲನ ಒಂದರಲ್ಲೇ ‘ಮೂರು ತಿಂಗಳ ಕಂದ’, ‘ಆಟಿಗೆ’, ‘ಮಕ್ಕಳಾಡಲಿ’, ‘ಅಪೂರ್ವ ಮುದುಕಿ’ಯಂತಹ ಅನೇಕ ಭಾವಪ್ರಾಧಾನ ಕವಿತೆಗಳಿವೆ. ತಮ್ಮ ಹೆಂಡತಿಯನ್ನು ಕುರಿತು ಬರೆದಿರುವ ಪದ್ಯಗಳಲ್ಲಿ ಭಟ್ಟರ ವಿಡಂಬನೆಯ ನೆರಳೂ ಬೀಳುವುದಿಲ್ಲ; ಬದಲಾಗಿ ಗೌರವ, ಶೃಂಗಾರಹಾಸ್ಯಗಳು ಕಾಣಿಸಿಕೊಳ್ಳುತ್ತವೆ. ಇವೂ ಕೂಡ ಭಟ್ಟರ ಕವಿತೆಗಳೇ. ಈ ಕವಿತೆಗಳು ಅವರ ವಿಡಂಬನ ಕವಿತೆಗಳಿಗಿಂತ ಕಡಿಮೆ ಚಂದದವು ಎಂದು ಹೇಳಲಿಕ್ಕೆ ಆಗುವುದಿಲ್ಲ.

ಹಾಗೆಯೇ, ಭಟ್ಟರ ವಿಡಂಬನೆ, ತುಂಟತನ, ಹಾಸ್ಯಪ್ರವೃತ್ತಿಗಳು ಅವರ ಕಾವ್ಯದ ಮೊದಲ ಹಂತಕ್ಕಷ್ಟೇ ಸೀಮಿತವಾಗಿಲ್ಲ. ಅವರ ಕಾವ್ಯಜೀವನದ ಕೊನೆಯವರೆಗೂ ಅವು ಸಾಕಷ್ಟು ಪ್ರಖರವಾಗಿಯೇ ಉಳಿದುಕೊಂಡಿವೆ.

ಗಂಭೀರ ಮತು ತುಂಟುತನದ ಎರಡೂ ಧಾರೆಗಳು ಭಟ್ಟರ ಕಾವ್ಯದಲ್ಲಿ ಮೊದಲಿಂದ ಕೊನೆಯವರೆಗೂ ಹರಿದು ಬಂದಿವೆ – ಕೆಲವು ಸಲ ಬೇರೆಬೇರೆಯಾಗಿ, ಕೆಲವು ಸಲ ಒಟ್ಟಿಗೆ, ಮತ್ತೆ ಕೆಲವು ಸಲ ಒಂದಕ್ಕಿಂತ ಇನ್ನೊಂದು ಪ್ರಧಾನವಾಗಿ.

ಹಾಗೇಯೇ, ದೇವರನ್ನು ಒಪ್ಪಿಕೊಳ್ಳುವುದರಲ್ಲಿಯೂ ಭಟ್ಟರು ವಿಶಿಷ್ಟವಾಗಿದ್ದಾರೆ. ಅವರ ಈ ಹಂತದ ಕಾವ್ಯ ಸಿದ್ಧ ಅನುಭಾವಕಾವ್ಯದ ಮಾದರಿಯದಲ್ಲ. ದೇವರನ್ನು ಹುಡುಕುವ, ಅವನನ್ನು ಕಾಣುವುದಕ್ಕಾಗಿ ಚಡಪಡಿಸುವ, ದೇವರೊಂದಿಗೆ ಒಂದಾಗಬೇಕೆನ್ನುವ, ಅದೇ ಜೀವದ ಆತ್ಯಂತಿಕೆ ಸಾಧನೆ ಎನ್ನುವ ಮನೋಧರ್ಮ ಅವರದಲ್ಲ. ಅಥವಾ ಧಾರ್ಮಿಕ ಸ್ವರೂಪದ ಸಂಪೂರ್ಣ ಶರಣಾಗತಿಯ ರೀತಿಯೂ ಇದಲ್ಲ. ದೇವರ ಅಸ್ತಿತ್ವವನ್ನು ಒಪ್ಪಿಕೊಂಡರೂ ದೇವರೊಂದಿಗಿನ ಭಟ್ಟರ ಸಂಬಂಧ ಶರಣನ ಅಥವಾ ದಾಸನದಲ್ಲ. ಅನುಭಾವದ ಇನ್ನೊಂದು ಕವಲಾದ ನಿರೀಶ್ವರವಾದಿ ಅನುಭಾವದ ಅಭಿವ್ಯಕ್ತಿಯೂ ಇದಲ್ಲ; ಯಾಕೆಂದರೆ ಇಲ್ಲಿ ದೇವರು ಇದ್ದಾನೆ ಮತ್ತು ಅವನೊಂದಿಗೆ ಒಂದು ಬಗೆಯ ತಿಕ್ಕಾಟ ನಡೆದಿದೆ.

ದೇವರೊಂದಿಗೆ ಹೊಸದಾಗಿ ಕಂಡುಕೊಂಡ ತಮ್ಮ ಸಂಬಂಧವನ್ನು ಅಭಿವ್ಯಕ್ತಿಸುವಾಗಲೂ ಗಾಂಭೀರ್ಯದ ಜೊತೆಗೆ ಅವರು ತುಂಟತನ, ಹಾಸ್ಯಗಳ ಧಾಟಿಯನ್ನೂ ಬಳಸಬಲ್ಲರು.

ಭಟ್ಟರ ಈ ವಿಶಿಷ್ಟ ಮನೋಧರ್ಮವನ್ನು ಅರ್ಥಮಾಡಿಕೊಳ್ಳಲು ಅವರು ತಮ್ಮ ಕಾವ್ಯಜೀವನದ ವಿವಿಧ ಹಂತಗಳಲ್ಲಿ ಬರೆದ ‘ಪ್ರಾರ್ಥನೆ’ಗಳನ್ನು ಅಭ್ಯಾಸ ಮಾಡುವುದು ಒಂದು ಉಪಯುಕ್ತ ಮಾರ್ಗ ಎಂದು ನನಗನಿಸುತ್ತದೆ.

ವಿ.ಜಿ. ಭಟ್ಟರು ಬರೆದ ಕಾವ್ಯದ ಮೊತ್ತ ಅಗಾಧವಾದದ್ದು. ನಡುನಡುವೆ ಕಾವ್ಯದ ಸೆಲೆ ಬತ್ತಿ ಹೋದಂತೆ ಕಂಡರೂ, ಮತ್ತೆ ಬರವಣಿಗೆ ಆರಂಭವಾದಾಗ ಒರತೆಯ ಸೆಲೆಗೆ ಅಡ್ಡಿಯಾಗಿದ್ದ ಕಲ್ಲು ತೆರೆದುಕೊಂಡಂತೆ ಪುಂಖಾನುಪುಂಖವಾಗಿ ಅವರ ಕವಿತೆಗಳು ಸುರಿಯತೊಡಾಗುತ್ತವಂತೆ. ದೀರ್ಘ ಮೌನಗಳ ನಂತರ ಬರುವ ಅಸಂಖ್ಯ ಕವಿತೆಗಳಲ್ಲಿ ಸಹಜವಾಗಿಯೇ ವಿಷಯ-ದೃಷ್ಟಿಗಳಲ್ಲಿ ಸಾಮ್ಯ, ಪುನರಾವರ್ತನೆ, ಏಕತಾನತೆಗಳು ಕಾಣಿಸಿಕೊಂಡಿವೆ. ಒಂದು ವಸ್ತುವನ್ನು ಬೇರೆಬೇರೆ ದೃಷ್ಟಿಕೋನಗಳಿಂದ ಹೊರಳಿಸಿ ಹೊರಳಿಸಿ ನೋಡುವ ಯೋಚನಾಲಹರಿಗಳ ಸಂಕಲನಗಳಾಗಿ ಅವರ ಕವನಸಂಕಲನಗಳು ಕಾಣುತ್ತವೆ. ಅದರಿಂದಾಗಿಯೇ ಅವರ ಒಂದೊಂದು ಕವನಸಂಕಲನಕ್ಕೂ ಒಂದು ಬಗೆಯ ವಸ್ತುವಿನ ಐಕ್ಯ ಬಂದಿದೆ.

ತಮ್ಮ ಬದುಕಿನಲ್ಲಿ ಕಾಣಿಸಿಕೊಂಡ ವಿಷಮ ಪರಿಸ್ಥಿತಿಯನ್ನು ಎದುರಿಸಲು ಮತ್ತು ಬದುಕಿಗೆ ನೆಮ್ಮದಿ ತಂದುಕೊಳ್ಳಲು ಈ ಹಂತದಲ್ಲಿ ಭಟ್ಟರು ಆಶ್ರಯಿಸಿದ್ದು ಮುಖ್ಯವಾಗಿ ಎರಡು ಸಂಗತಿಗಳನ್ನು – ಸ್ವೀಕೃತಿ ಮತ್ತು ಕಾವ್ಯ. ಸ್ವೀಕೃತಿಯ ಹಿನ್ನೆಲೆ, ಮುನ್ನೆಲೆ, ಸ್ಥಿತಿ, ಸ್ವರೂಪ, ಅರ್ಥ, ಅವಶ್ಯಕತೆಗಳನ್ನು ಕುರಿತಂತೆ ಅವರು ಹಲವಾರು ಕವಿತೆಗಳನ್ನು ಬರೆದಿದ್ದಾರೆ. ಈ ಎಲ್ಲ ತೊಳಲಾಟವನ್ನು ಅಭಿವ್ಯಕ್ತಿಸಲು ಮತ್ತು ಅದರಿಂದ ಬಿಡುಗಡೆ ಪಡೆಯಲು ಕಾವ್ಯವೂ ಅವರಿಗೆ ಅನಿವಾರ್ಯವೆನಿಸಿದೆ. ಕವನ, ಕವಿತೆಗಳನ್ನು ಕುರಿತೂ ಅವರು ಹಲವಾರು ಕವಿತೆಗಳನ್ನು ಬರೆದಿದ್ದಾರೆ. (ಕವಿತೆಯನ್ನು ಕುರಿತ ಭಟ್ಟರ ಕವಿತೆಗಳ ಅಭ್ಯಾಸವೂ ಆಗಬೇಕು.) ಕವಿತೆ ನಿಂತುಹೋದಾಗ ಅದಕ್ಕಾಗಿಯೇ ಅವರಿಗೆ ಕಳವಳವಾಗುತ್ತದೆ. ದೇವನಿರುವ ಸುಳಿವು ಹತ್ತದಾಗ, ಅವನಿಗೆ ಸಲ್ಲಿಸಿದ ಪ್ರಾರ್ಥನೆ ಉತ್ತರ ಬಾರದಿದ್ದಾಗ ಭಟ್ಟರು ಕವಿತೆಗೆ ಮೊರೆಹೋಗುತ್ತಾರೆ.

ನೀ ಬಂದು ಬದುಕಿಸಿದೆ ಕವಿತೆ ನನ್ನ
ಆತ್ಮಹತ್ಯೆಗೆ ದುಡುಕಿ ಬೀಳ್ವ ಮುನ್ನ
ಸೋಲು ನೋವು ನಿರಾಶೆ ಅಪಮಾನಗಳನೆಲ್ಲ
ತೋಡಿಕೊಳ್ಳುವೆ ನಿನಗೆ ಹಾಡಿಕೊಳ್ಳುವೆನು
ಮುಂದೆ ಬದುಕಿರುವಷ್ಟು ದಿನ ಪೂಜಿಸುವೆ ನಿನ್ನ
ಕರುಣಿಸಿರು ನಿನ್ನನೇ ಬೇಡಿಕೊಳ್ಳುವೆನು
       (‘ಕವಿತೆ’ : “ಆತ್ಮಗೀತೆ”)

ಸ್ವೀಕೃತಿ ಮತ್ತು ಕಾವ್ಯಗಳ ಸಂಯುಕ್ತ ಅಭಿವ್ಯಕ್ತಿಯಾಗಿ ಭಟ್ಟರ ‘ಪ್ರಾರ್ಥನೆ’ಗಳು ಕಾಣಿಸಿಕೊಂಡಿವೆ. ಪ್ರಾರ್ಥನೆ ಅವರ ಕಾವ್ಯದಲ್ಲಿ ಮತ್ತೆಮತ್ತೆ ಕಾಣಿಸಿಕೊಳ್ಳುವ ಒಂದು ಮುಖ್ಯವಸ್ತು (Recurring Theme) ವಾಗಿದೆ. ಆ ಹೆಸರಿನ ಅನೇಕ ಕವಿತೆಗಳನ್ನು ಅವರು ಬರೆದಿದ್ದಾರೆ. ಆ ಹೆಸರಿಲ್ಲದೆ ಪ್ರಾರ್ಥನೆಯನ್ನು ಕುರಿತು ಬರೆದ ಪದ್ಯಗಳೂ ಹಲವಾರಿವೆ.

“ಪಲಾಯನ”ದಿಂದ “ಕಾವ್ಯವೇದನೆ”ಯ ವರೆಗಿನ (೧೯೪೬-೧೯೫೧) ಅವಧಿಯಲ್ಲಿ ಪ್ರಾರ್ಥನೆಯನ್ನು ಕುರಿತು ಒಂದು ಕವಿತೆಯೂ ಇಲ್ಲ. ಈ ಕಾಲಾವಧಿಯನ್ನೇ ಅವರ ಕಾವ್ಯದ ಮೊದಲ ಹಂತ ಎನ್ನುವುದಾದರೆ, ಈ ಅವಧಿಯಲ್ಲಿ ಅವರು ಪ್ರಾರ್ಥನೆ ಮಾಡಲಿಲ್ಲ. ಅರ್ಥಾತ್ ಇದು ಅವರು ಶುದ್ಧ ತರ್ಕವಾದಿ (ಇದನ್ನು ವಿತರ್ಕವಾದಿ ಎಂದೂ ಕರೆಯಬಹುದು.) ನಾಸ್ತಿಕತನದ ಕಾಲಾವಧಿ. ಇಲ್ಲಿ ದೇವರ ಸುಳಿವೇ ಇಲ್ಲ. ಇದ್ದರೂ ಅವನು ವ್ಯಂಗ್ಯ- ವಿಡಂಬನೆಗಳ ವಸ್ತು. ಉದಾಹರಣೆಗೆ “ತುಂಟನ ಪದಗಳು” (೧೯೫೧)ದಲ್ಲಿಯ ‘ದೇವರು’ ಕವಿತೆ ನೋಡಬಹುದು. ನಂಬಿಕೆಯೇ ಇಲ್ಲದ ಮೇಲೆ ಯಾರನ್ನೂ ಕುರಿತು ಪ್ರಾರ್ಥಿಸುವದು?

ವಿ.ಜಿ. ಭಟ್ಟರ ಕಾವ್ಯದಲ್ಲಿ ಮೊದಲ ಪ್ರಾರ್ಥನೆ ಕಾಣಿಸಿಕೊಳ್ಳುವುದು “ಅರಣ್ಯರೊದನ”ದಲ್ಲಿ (೧೯೫೭). ಇದನ್ನು ನಡುವಿನ ಹಂತ ಎಂದು ಗುರುತಿಸುವುದಾದರೆ ಪ್ರಾರ್ಥನೆಗಳು ಆರಂಭವಾಗುವುದು ಇಲ್ಲಿಂದ. ಈ ಸಂಕಲನದ ಮೊದಲ ಇಪ್ಪತೊಂದು ಕವಿತೆಗಳು ವನಮಹೋತ್ಸವದ ವಿಡಂಬನ ಕವಿತೆಗಳು. ಅದಕ್ಕಾಗಿಯೇ ಇದು “ಅರಣ್ಯರೋದನ”. ಈ ಕವಿತೆಗಳ ನಡುವೆಯೇ ಒಂದು ‘ಪ್ರಾರ್ಥನೆ’ ಬರುತ್ತದೆ:

ಅಮೃತ ಹಸ್ತವ ಕರುಣಿಸೋ
ಜಗದೀಶಾ
ಅಮೃತಹಸ್ತವ ಕಳುಹಿಸು

ಯಾವ ಕೈಗಳು ನೆಟ್ಟ ಗಿಡಗಳು
ಜಾವದೊಳಗೇ ಬೇರುಬಿಡುವವೊ
ಆವು ಆಡುಗಳೊಂದೂ ಮೇಯವೊ
ಯುಗದಿ ಅವು ಸಾಯವೋ
ಅಂಥಾ ಹಸ್ತವ ಕಳುಹಿಸು

ಯಾವ ಕೈಗಳು ನೆಟ್ಟ ಗಿಡಗಳು
ನೀರು ಕಾಣದೆ ಬೆಳೆದು ಫಲಗಳ
ತೂರುವವೊ ಎಣ್ಣೆಸೆಗೆ ನಿತ್ಯಾ
ಅಂಥ ಅಮೃತಹಸ್ತವ ಕಳುಹಿಸು.

ಹೀಗೇ ಮುಂದುವರಿಯುವ ಈ ಕವಿತೆಯ ದನಿ ನಿಜವಾದ ಪ್ರಾರ್ಥನೆಯದಲ್ಲ ಎಂಬುದು ಮೇಲೆಯೇ ಕಾಣುತ್ತದೆ. ಇಲ್ಲಿ ವಿಡಂಬನೆಯ ದನಿ ಗಟ್ಟಿಯಾಗಿಯೇ ಕೇಳುತ್ತದೆ. ವನಮಹೋತ್ಸವದ ಕಾಟಾಚಾರದಲ್ಲಿ ಹಚ್ಚಿದ ಗಿಡಗಳು ಚಿಗಿಯದೆ, ಚಿಗಿತರೂ ದನ-ಕರುಗಳು ತಿಂದು ಇಲ್ಲವೆ ನೀರು ಹಾಕುವವರಿಲ್ಲದೆ ಸತ್ತುಹೋಗುವುದನ್ನು ಕವಿತೆ ವಿಡಂಬಿಸುತ್ತದೆ. ಇಂಥ ಗಿಡಗಳನ್ನು ಕಾಪಾಡುವ ಅಮೃತಹಸ್ತಗಳನ್ನು ಕಳುಹಿಸುವ ದೇವರು ಎಲ್ಲಿಂದ ಬರಬೇಕು?