ಕರ್ನಾಟಕದ ಇತಿಹಾಸದಲ್ಲಿಯೇ ಹನ್ನೆರಡನೆಯ ಶತಮಾನದಲ್ಲಿ ನಡೆದ ವೀರಶೈವ ಕ್ರಾಂತಿ ಅತ್ಯಂತ ವಿಶಿಷ್ಟವಾದದ್ದು. ಕನ್ನಡ ಭಾಷೆಯಲ್ಲಿಯೇ ಮೊದಲ ಬಾರಿಗೆ ಒಂದು ಧಾರ್ಮಿಕ ಕ್ರಾಂತಿ ನಡೆಯಿತು. ಅದು ಕೇವಲ ಧಾರ್ಮಿಕ ಸ್ವರೂಪದ್ದಾಗಿರದೆ, ಸಾಮಾಜಿಕ ಆಯಾಮವನ್ನೂ ಒಳಗೊಂಡಿತ್ತು. ತನ್ನ ನೂತನ ಧರ್ಮಕ್ಕಾಗಿ ಒಂದು ವಿಶಿಷ್ಟ ಅಧಿಕೃತ ಧಾರ್ಮಿಕ ಗ್ರಂಥಗಳನ್ನು ರೂಪಿಸಿಕೊಳ್ಳುವ ಸಾಂಪ್ರದಾಯಿಕ ಮಾದರಿಯನ್ನು ಬಿಟ್ಟುಕೊಟ್ಟು ಮುಕ್ತವಾದ ವೈಚಾರಿಕತೆಯನ್ನೊಳಗೊಂಡ ವಚನಗಳನ್ನು ಕನ್ನಡ ಭಾಷೆಯಲ್ಲಿ ಸೃಷ್ಟಿಸುವ ಹೊಸ ಮಾದರಿಯೊಂದನ್ನು ರೂಪಿಸಿಕೊಂಡಿತು. ಸಮಾಜದ ಅನೇಕ ಸ್ತರಗಳಿಂದ ಬಂದಿದ್ದ ಅನೇಕ ಪ್ರತಿಭಾವಂತರು, ವಿಚಾರಶೀಲರು ತಮ್ಮ ವಿಚಾರಗಳನ್ನು, ಅನುಭವಗಳನ್ನು, ಕನಸುಗಳನ್ನು, ಭಾವನೆಗಳನ್ನು, ತಳಮಳಗಳನ್ನು ಭಕ್ತಿಯನ್ನು, ಅನುಭಾವಗಳನ್ನು ವಚನಗಳ ಮೂಲಕ ಕನ್ನಡದಲ್ಲಿ ಪ್ರಕಟಿಸಿದರು. ಆ ವಿಚಾರ ಮತ್ತು ಕನಸುಗಳನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರುವ ಪ್ರಯೋಗ ಮಾಡಿದರು. ಕಲ್ಯಾಣದಲ್ಲಿ ನಡೆಯುತ್ತಿದ್ದ ಈ ಕೆಲಸ ಎಷ್ಟು ಪ್ರಖರವಾಗಿತ್ತೆಂದರೆ, ಸಂವಹನ ಮಾಧ್ಯಮಗಳ ಅನುಕೂಲಗಳಿಲ್ಲದ ಅಂದಿನ ದಿನಗಳಲ್ಲೂ ಅದರ ಕೀರ್ತಿ ಭಾರತದ ದೂರದೂರದ ಮೂಲೆಗಳನ್ನೂ ತಲುಪಿತು. ಅದರಿಂದ ಆಕರ್ಷಿತರಾದ ಅನೇಕ ಜನ ಕಲ್ಯಾಣವನ್ನು ಹುಡುಕಿಕೊಂಡು ಬಂದರು. ಕಾಶ್ಮೀರದಿಂದ, ಗುಜರಾತಿನಿಂದ ತಮಿಳುನಾಡು-ಆಂಧ್ರಗಳಿಂದ ಬಂದ ಈ ಜನ ಕನ್ನಡವನ್ನು ಕಲಿತರು. ಕನ್ನಡ ಮಾತೃಭಾಷೆಯಾಗಿದ್ದವರ ಜೊತೆಗೆ ಹೊಯ್‌ಕಯ್ಯಾಗಿ ಕನ್ನಡದಲ್ಲಿ ವಚನಗಳನ್ನು ರಚಿಸಿದರು. ಕನ್ನಡ ಭಾಷೆ ಅಪಾರವಾಗಿ ತನ್ನ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತು. ಇದರಿಂದ ಕಲಿಯಬಹುದಾದ ಒಂದು ಮುಖ್ಯ ಪಾಠವೆಂದರೆ, ಕನ್ನಡ ಜನ ಒಂದು ಜನಾಂಗವಾಗಿ ದೊಡ್ಡದಾಗಿ ಬೆಳೆಯದೆ, ಕನ್ನಡ ಭಾಷೆಯಲ್ಲಿಯೇ ಅದರ ದೊಡ್ಡಸ್ತಿಕೆ ಪ್ರಕಟವಾಗದೆ, ಕನ್ನಡ ಭಾಷೆ ದೊಡ್ಡದಾಗುವುದಿಲ್ಲ. ಕನ್ನಡ ಜನಾಂಗ ದೊಡ್ಡದಾಗಿ ಬೆಳೆದರೆ-ಕನ್ನಡದ ಮೂಲಕವಾಗಿಯೇ ಬೆಳೆದರೆ-ಕನ್ನಡ ತಾನಾಗಿ ದೊಡ್ಡದಾಗಿ ಬೆಳೆಯುತ್ತದೆ. ಜನಾಂಗವನ್ನು ಬೇರ್ಪಡಿಸಿ ಭಾಷೆಯನ್ನು ಮಾತ್ರ ಬೆಳೆಸಲು ಆಗುವುದಿಲ್ಲ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬಂಗಾಲಿ ಮತ್ತು ಮರಾಠಿ ಭಾಷೆಗಳು ಗಳಿಸಿಕೊಂಡ ಪ್ರತಿಷ್ಠೆ ಈ ಮಾತನ್ನು ಇನ್ನಷ್ಟು ಬಲಪಡಿಸುತ್ತದೆ.

ಹೀಗೆ ಅತ್ಯಂತ ಆಶಾದಾಯಕವಾಗಿ, ಉಜ್ವಲವಾಗಿ ಆರಂಭವಾದ ಕಲ್ಯಾಣದ ಕ್ರಾಂತಿ ಕೆಲವೇ ವರ್ಷಗಳಲ್ಲಿ – ಅದರ ಆಶಯಗಳು ಸರಿಯಾಗಿ ಕೃತಿಗಿಳಿಯುವ ಮೊದಲೇ – ದೊಡ್ಡ ಆಘಾತಕ್ಕೆ ಒಳಗಾಯಿತು. ಬಿಜ್ಜಳನ ಸಾವಿನ ನಂತರ ಹುಟ್ಟಿದ ಅರಾಜಕತೆ, ಹಿಂಸೆಗಳಿಂದಾಗಿ ಶರಣರು ಕಲ್ಯಾಣವನ್ನು ತೊರೆದು ಚೆಲ್ಲಾಪಿಲ್ಲಿಯಾದರು. ಅವರು ರಚಿಸಿ ಸಂಗ್ರಹಿಸಿಟ್ಟುಕೊಂಡಿದ್ದ ಅಪಾರವಾದ ವಚನಗಳ ರಾಶಿಯ ಬಹಳಷ್ಟು ಭಾಗ ನಾಶವಾಯಿತು. ಅಳಿದುಳಿದ ವಚನಗಳನ್ನು ಕಟ್ಟಿಕೊಂಡು, ಶರಣರು ಎತ್ತೆತ್ತಲೋ ಹೋಗಿ ತಲೆಮರೆಸಿಕೊಂಡರು. ಈ ಆಘಾತದಿಂದ ಚೇತರಿಸಿಕೊಳ್ಳಲು ವೀರಶೈವ ಧರ್ಮಕ್ಕೆ ಇನ್ನೂರು ವರ್ಷಗಳೇ ಬೇಕಾದವು. ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ, ಹದಿನಾಲ್ಕನೆಯ ಶತಮಾನದ ಕೊನೆಯಲ್ಲಿ ಮತ್ತು ಹದಿನೈದನೆಯ ಶತಮಾನದ ಆರಂಭದಲ್ಲಿ ಇಂಥ ಚೇತರಿಕೆಯ ಕೆಲಸಗಳು ಆರಂಭವಾದವು.

ಇಂಥ ಸಂದರ್ಭದಲ್ಲಿ ಮೊಟ್ಟಮೊದಲಿಗೆ ತನ್ನ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದ ವೀರಶೈವ ಧರ್ಮಕ್ಕೆ ಆತ್ಮವಿಶ್ವಾಸವನ್ನು ತುಂಬಬೇಕಾಗಿತ್ತು. ಲಕ್ಕಣ್ಣದಂಡೇಶನಂಥವರು ನೀಡಿದ ಆಶ್ರಯ ಅದಕ್ಕೆ ಸಹಾಯ ಮಾಡಿತು. ವೀರಶೈವ ಧರ್ಮದ ಪ್ರಚಾರ ಮತ್ತು ಪ್ರಸಾರದ ಕೆಲಸ ಆರಂಭವಾಯಿತು. ಈ ಕೆಲಸಕ್ಕಾಗಿ ವಿವಿಧ ಉದ್ದೇಶಗಳನ್ನು ಹೊಂದಿದ ಕಾರ್ಯಕರ್ತರ ಒಂದು ದೊಡ್ಡ ಪಡೆಯೇ ನಿರ್ಮಾಣವಾಯಿತು. ಈ ಕಾರ್ಯಕರ್ತರೇ ವಿರಕ್ತ ದೀಕ್ಷೆ ಪಡೆದ ಸ್ವಾಮಿಗಳಾಗಿ ನಾಡಿನಲ್ಲೆಲ್ಲ ಹಂಚಿಹೋಗಿ ಮಠಗಳನ್ನು ಸ್ಥಾಪಿಸಿದರು. ಈ ಸ್ವಾಮಿಗಳಿಗೆ ಧರ್ಮಕ್ಕೆ ಸಂಬಂಧಿಸಿದ ಪ್ರಚಾರ ಸಾಮಗ್ರಿಯನ್ನು ತಯಾರಿಸಿ ಒದಗಿಸುವ ಅವಶ್ಯಕತೆ ಒದಗಿತು.

ಇಂಥ ಪ್ರಚಾರಸಾಮಗ್ರಿಯನ್ನು ತಯಾರಿಸಲು ವಚನಗಳನ್ನು ಬಿಟ್ಟು ಬೇರೆ ಯಾವ ಆಧಾರ ಸಾಮಗ್ರಿಯೂ ಇರಲಿಲ್ಲ. ಈ ಉದ್ದೇಶಕ್ಕಾಗಿ, ಮೊದಲಿಗೆ ಯಾವುದೇ ಒಂದು ನಿರ್ದಿಷ್ಟ ಸೈದ್ಧಾಂತಿಕ ಯೋಜನೆಯನ್ನು ಅನುಸರಿಸಿ ಶಿಸ್ತುಬದ್ಧವಾಗಿ ರಚನೆಯಾಗದಿದ್ದುದರಿಂದ, ಬಿಡಿಬಿಡಿಯಾಗಿ ಸ್ವತಂತ್ರವಾಗಿದ್ದ ವಚನಗಳನ್ನು ವೀರಶೈವ ಧರ್ಮದ ಮುಖ್ಯ ತತ್ವವಾದ ಷಟ್‌ಸ್ಥಲದ ಆಧಾರದ ಮೇಲೆ ವರ್ಗೀಕರಿಸಬೇಕಾಯಿತು. ಷಟ್‌ಸ್ಥಲ ಸಿದ್ಧಾಂತವನ್ನು ಇನ್ನಷ್ಟು ಪರಿಷ್ಕರಿಸಿ ವಚನಗಳನ್ನು ಮತ್ತೆ ಬೇರೆಬೇರೆ ರೀತಿಯಿಂದ ವಿಭಜಿಸಬೇಕಾಯಿತು. ವೀರಶೈವ ಧರ್ಮದ ಈ ಪುನರುಜ್ಜೀವನದ ಕಾಲದಲ್ಲಿ ಧಾರ್ಮಿಕ ಅಪೇಕ್ಷೆಗಳೇ ಪ್ರಧಾನವಾಗಿ ಕೆಲಸ ಮಾಡಿದ್ದು ಸಹಜವೇ ಆಗಿತ್ತು. ಅಂತೆಯೇ ಆ ಕಾಲದ ಧಾರ್ಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅನೇಕ ಧಾರ್ಮಿಕ ಗ್ರಂಥಗಳು ನಿರ್ಮಾಣವಾದವು. ವಚನಗಳನ್ನೇ ಆಧಾರವಾಗಿಟ್ಟುಕೊಂಡು ಈ ಎಲ್ಲ ಕೃತಿಗಳು ನಿರ್ಮಾಣವಾಗಿದ್ದರೂ, ವಚನಗಳು ತಮ್ಮ ಸ್ವಭಾವ ಸಹಜ ಮುಕ್ತತೆ, ವೈವಿಧ್ಯ, ವಿಚಾರಸಂಕೀರ್ಣತೆಯಿಂದಾಗಿ ಇಡಿಯಾಗಿ, ಕೇವಲ ಧಾರ್ಮಿಕ ಪಠ್ಯವನ್ನು ಕಟ್ಟಿಕೊಡಲು ನಿರಾಕರಿಸಿದಂತೆ ಕಾಣುತ್ತದೆ. ಕೇವಲ ಧಾರ್ಮಿಕ ದೃಷ್ಟಿಯಿಂದ ನೋಡಿದ್ದರಿಂದ ಅನೇಕ ಸಾಮಾಜಿಕ ಕಳಕಳಿಯ ವಚನಗಳು ಹೊರಗೇ ಉಳಿದಂತೆ, ಉಪೇಕ್ಷೆಗೊಳಗಾದಂತೆ ಕಾಣುತ್ತದೆ.

“ಶೂನ್ಯ ಸಂಪಾದನೆ” ಹುಟ್ಟಿಕೊಂಡದ್ದು ಇದೇ ಅವಧಿಯಲ್ಲಿ ಮತ್ತು ಇಂಥದೇ ಒತ್ತಡದಲ್ಲಿ. ಸಾಮಾನ್ಯವಾಗಿ ಎಲ್ಲ ಧರ್ಮಗಳಿಗೂ ಇರುವಂತೆ ವೀರಶೈವ ಧರ್ಮಕ್ಕೆ ಸರ್ವರಿಗೂ ಒಪ್ಪಿಗೆಯಾಗುವ ಧರ್ಮಗ್ರಂಥ ಒಂದಿಲ್ಲ; ಅದು ಇರಬೇಕಾದದ್ದು ಅವಶ್ಯ; ವಚನಗಳ ಆಧಾರದ ಮೇಲೆಯೇ ಅಂಥದೊಂದು ಪ್ರಮಾಣಗ್ರಂಥ ನಿರ್ಮಾಣವಾಗಬೇಕು – ಇದು ಅ ಕಾಲದ ಮುಖ್ಯ ಅಪೇಕ್ಷೆಯಾಗಿರುವಂತೆ ಕಾಣುತ್ತದೆ. ಈ ಅಪೇಕ್ಷೆಯನ್ನು ಈಡೇರಿಸುವ ಸಾಹಸಕ್ಕೆ ಶಿವಗಣಪ್ರಸಾದಿ ಮಹಾದೇವಯ್ಯ ಕೈಹಾಕಿದ.

ಈ ಸಂದರ್ಭದಲ್ಲಿಯೇ ಗಮನಿಸಬೇಕಾದ ಒಂದು ಮುಖ್ಯ ಸಂಗತಿಯೆಂದರೆ, ಅಂಥದೊಂದು ಪ್ರಮಾಣಗ್ರಂಥ ಹನ್ನೆರಡನೆಯ ಶತಮಾನಕ್ಕೂ ಮೊದಲೇ ಇತ್ತೆಂದು ಕೆಲವರು ವಾದಿಸುತ್ತಿದ್ದಾರೆ. ಅದು, ಸಂಸ್ಕೃತದಲ್ಲಿ ರಚಿತವಾಗಿರುವ “ಸಿದ್ಧಾಂತ ಶಿಖಾಮಣಿ”. ಈ ಗ್ರಂಥದಲ್ಲಿ ವೀರಶೈವ ಧರ್ಮದ ಷಟ್‌ಸ್ಥಲ ಮೊದಲಾದ ಎಲ್ಲ ಮುಖ್ಯ ತತ್ವಗಳ ವಿವೇಚನೆ ಇದೆಯೆಂದೂ, ಬಸವಣ್ಣ ಮೊದಲಾದವರು ಈ ಗ್ರಂಥದಿಂದಲೇ ತಮ್ಮ ವೀರಶೈವ ದರ್ಶನವನ್ನು ಪಡೆದುಕೊಂಡರೆಂದೂ ಒಂದು ವಾದ ಇದೆ. ಈ ವಾದವನ್ನು ವಿರೋಧಿಸುವವರು “ಸಿದ್ಧಾಂತ ಶಿಖಾಮಣಿ” ಬಸವಣ್ಣನವರಿಗಿಂತ ಮುಂಚಿನದೆಂಬುದನ್ನು ಒಪ್ಪುವುದಿಲ್ಲ. ಈ ಕೃತಿಯು ರಚನೆಯಾದ ನಿರ್ದಿಷ್ಟ ಕಾಲ ಯಾವುದೆಂದು ಖಚಿತವಾಗಿ ನಿರ್ಣಯಿಸಲು ಸಾಧ್ಯವಾಗಿಲ್ಲ. ಇಂಥದೊಂದು ಗ್ರಂಥ ಮೊದಲೇ ಇದ್ದಿದ್ದರೆ ಹನ್ನೆರಡನೆ ಶತಮಾನದ ವಚನಕಾರರು ಇದರ ಬಗ್ಗೆ ಯಾವ ಪ್ರಸ್ತಾಪವನ್ನೂ ಯಾಕೆ ಮಾಡುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ವಚನಕಾರರಲ್ಲಿ ಅನೇಕರಿಗೆ ಸಂಸ್ಕೃತಜ್ಞಾನವಿತ್ತು. ಬಸವಣ್ಣ ಮೊದಲಾದವರು ಆಗಾಗ ಸಂಸ್ಕೃತ ವಾಕ್ಯಗಳನ್ನು ಉಪನಿಷತ್ ಮೊದಲಾದ ಮೂಲಗಳಿಂದ ಉದ್ಧರಿಸಿ ತಮ್ಮ ವಾದಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರು ಯಾರೂ “ಸಿದ್ಧಾಂತ ಶಿಖಾಮಣಿ”ಯಿಂದ ಉದ್ಧರಿಸುವುದಿಲ್ಲ. ಇಂಥದೊಂದು ಗ್ರಂಥ ಮೊದಲೇ ಇದ್ದಿದ್ದಾದರೆ, ವೀರಶೈವ ಧರ್ಮದ ಪುನರುತ್ಥಾನ ಕಾಲದಲ್ಲಿಯಾದರೂ ಅದನ್ನು ಕನ್ನಡಕ್ಕೆ ಅನುವಾದಿಸುವ, ಸಂಕ್ಷೇಪಿಸುವ, ವಿವರಿಸುವ ಕೆಲಸ ನಡೆಯಬಹುದಾಗಿತ್ತು. ಏನಿದ್ದರೂ, ವೀರಶೈವ ಧರ್ಮಕ್ಕೆ ಅಧಿಕೃತ ಪ್ರಮಾಣಗ್ರಂಥ ಇಲ್ಲ ಎಂಬ ಕೊರಗಾದರೂ ಇರುತ್ತಿರಲಿಲ್ಲ. ಅಂಥದೊಂದು ಗ್ರಂಥ ಇಲ್ಲವೆಂಬ ಅನಿಸಿಕೆಯಿಂದಾಗಿಯೇ ಮುಂದಿನ ಗ್ರಂಥಗಳು ಅಂಥ ಪ್ರಯತ್ನ ಮಾಡುತ್ತ ಹೋದವು. ಇರಲಿ ಈಗ ಶಿವಗಣಪ್ರಸಾದಿ ಮಹಾದೇವಯ್ಯನಿಗೆ ತಿರುಗಿ ಬರೋಣ.

ವಚನಗಳನ್ನು ರಚಿಸಿದವರು ಸಮಾಜದ ಬೇರೆಬೇರೆ ಸ್ತರಗಳಿಂದ ಬಂದವರು. ಬೇರೆಬೇರೆ ವಿಚಾರಧಾರೆಗಳಿಗೆ ಸೇರಿದವರು. ಅವರಲ್ಲಿ ಪರಸ್ಪರ ವಿರುದ್ಧ ಅಭಿಪ್ರಾಯಗಳೂ ಇದ್ದವು. ವೀರಶೈವ ಧರ್ಮಕ್ಕೆ ಸಿದ್ಧಾಂತಗಳನ್ನು, ಆಚರಣೆಗಳನ್ನು ರೂಪಿಸುವ ಪ್ರಯತ್ನ ಒಂದೆಡೆ ನಡೆದಿದ್ದರೆ, ಪಕ್ಕದಲ್ಲಿಯೇ ಅವುಗಳನ್ನು ಪ್ರಶ್ನಿಸಿದವರೂ ಇದ್ದರು. “ಶೂನ್ಯ ಸಂಪಾದನೆ”ಯಲ್ಲಿ ಬರುವ ಸಿದ್ಧಾರಾಮನ ಲಿಂಗದೀಕ್ಷೆಯ ಪ್ರಸಂಗ ಇದಕ್ಕೊಂದು ಮಹತ್ವದ ಉದಾಹರಣೆ. ಕೆಲವು ಶರಣರು ಸಿದ್ಧರಾಮನಿಗೆ ಲಿಂಗದೀಕ್ಷೆ ಅಗತ್ಯವೆಂದು ವಾದಿಸಿದರೆ ಅಲ್ಲಮ ಅದನ್ನು ತಿರಸ್ಕರಿಸುತ್ತಾನೆ. ವಚನಗಳಲ್ಲಿ ಕಾಣುವ ಇಂಥ ಭಿನ್ನಾಭಿಪ್ರಾಯಗಳನ್ನೆಲ್ಲ ಬಗೆಹರಿಸಿ ಸರ್ವಸಮ್ಮತವಾಗುವಂತೆ ಅವುಗಳನ್ನು ಸಂಯೋಜಿಸುವ ದೊಡ್ಡ ಜವಾಬ್ದಾರಿ ಇತ್ತು. ಇಂಥ ಸಂದೇಹ, ಪ್ರಶ್ನೆ, ಭಿನ್ನಾಭಿಪ್ರಾಯಗಳನ್ನೆಲ್ಲ ಸಮರ್ಥವಾಗಿ ಉತ್ತರಿಸಿ, ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡಬಲ್ಲ ಮತ್ತು ಎಲ್ಲರ ಗೌರವಾದರಗಳಿಗೆ ಪಾತ್ರವಾದ ಒಂದು ಘನ ವ್ಯಕ್ತಿತ್ವ ಬೇಕಾಗಿತ್ತು. ಮಹಾಜ್ಞಾನಿಯಾದ ಅಲ್ಲಮನೇ ಅದಕ್ಕೆ ಯೋಗ್ಯವಾದ ವ್ಯಕ್ತಿಯೆಂದು ಮಹಾದೇವಯ್ಯನಿಗೆ ಅನಿಸಿತು.

ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ’ ಎಂಬುದೊಂದು ಇತ್ತೆಂದೂ, ಅಲ್ಲಿ ಶರಣರು ಸೇರಿ ಅನುಭಾವಗೋಷ್ಠಿಗಳನ್ನು ನಡೆಸುತ್ತಿದ್ದರೆಂದೂ, ಅಲ್ಲಿ ಅನೇಕ ಬಗೆಯ ಪ್ರಶ್ನೆ-ಉತ್ತರ-ಪ್ರತ್ಯುತ್ತರ-ಭಿನ್ನಾಭಿಪ್ರಾಯ ಮಂಡನೆ ಇತ್ಯಾದಿಗಳನ್ನು ಒಳಗೊಂಡ ಸಂವಾದಗಳು ನಡೆಯುತ್ತಿದ್ದವೆಂದೂ ಪ್ರತೀತಿ ಇತ್ತು. ಇಂಥ ಸಂವಾದಗಳ ಮೂಲಕವಾಗಿಯೇ ಪರಸ್ಪರ ವಿರುದ್ಧ ಅಭಿಪ್ರಾಯಗಳನ್ನು ಒಳಗೊಂಡು, ಅವುಗಳಿಗೆ ಪರಿಹಾರ ಸೂಚಿಸಲು ಸಾಧ್ಯವೆಂದೂ ಮಹಾದೇವಯ್ಯ ಕಂಡುಕೊಂಡ. ಕೆಲವು ವಚನಗಳು ಪ್ರಶ್ನೋತ್ತರ ರೀತಿಯಲ್ಲೇ ಇರುವುದೂ ಅವನ ಗ್ರಹಿಕೆಗೆ ಬಂತು. ಈ ಸೂಚನೆಗಳನ್ನೇ ಬೆಳೆಸಿ ಅಲ್ಲಮನೊಂದಿಗೆ ಮುಕ್ತಾಯ, ಸಿದ್ಧರಾಮ, ಗೋರಕ್ಷ, ಮಹಾದೇವಿ ಮೊದಲಾದವರಿಗೆ ಮುಖಾಮುಖಿಯನ್ನು ಏರ್ಪಡಿಸುವ ತಂತ್ರವೊಂದನ್ನು ರೂಪಿಸಿಕೊಂಡ. ವೀರಶೈವ ಧರ್ಮದ ತತ್ವಗಳನ್ನು ಹಿನ್ನೆಲೆಗಿರಿಸಿಕೊಂಡು, ತನಗೆ ಅನುಕೂಲವಾದ ವಚನಗಳನ್ನು ಆರಿಸಿಕೊಂಡು, ಅನುಕೂಲವಿಲ್ಲದವನ್ನು, ಕೈಬಿಟ್ಟು, ಅಗತ್ಯ ಬಿದ್ದಲ್ಲಿ ಹೊಸದನ್ನು ಸೇರಿಸಿಕೊಂಡು, ಕೆಲವು ನಾಟಕೀಯ ಸಂದರ್ಭಗಳನ್ನು ಸೃಷ್ಟಿಸಿಕೊಂಡು, ಅವುಗಳಿಗೆ ಪೂರ್ವಾಪರ ಸಂದರ್ಭಗಳನ್ನು ಕೊಟ್ಟು, ಈವರೆಗೆ ಸಿದ್ಧವಾಗಿದ್ದ ವೀರಶೈವ ಧಾರ್ಮಿಕ ಗ್ರಂಥಗಳಿಗಿಂತ ಭಿನ್ನವಾದ ಕೃತಿಯೊಂದನ್ನು ರಚಿಸಿದ. ವೀರಶೈವ ಧರ್ಮದ ಅತ್ಯಂತಿಕವಾದ ಸಾಧನೆ-ಶೂನ್ಯದ ಸಂಪಾದನೆ; ಅದನ್ನು ಸಂದೇಹಾತೀತವಾಗಿ ಅವನ ಮಾತಿಗೆ ತೂಕವಿದೆ. ಅವನು ಕೊಡುವ ತೀರ್ಪು ಅಂತಿಮವೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮಹಾದೇವಯ್ಯ ಅಲ್ಲಮನನ್ನೇ ನಾಯಕನನ್ನಾಗಿ ಇರಿಸಿಕೊಂಡು ಶರಣರಲ್ಲಿ ಮುಖ್ಯರಾದವರಲ್ಲಿ ಹೆಚ್ಚಿನವರೆಲ್ಲಾ ಬರುವಂತೆ ತನ್ನ ಕೃತಿಯನ್ನು ರೂಪಿಸಿದ. ಇದರಿಂದಾಗಿ ಅವನ ಕೃತಿಯಲ್ಲಿ ವಾದ-ವಿವಾದಗಳು ನಡೆಯುತ್ತವೆ; ಎಲ್ಲ ಭಿನ್ನಾಭಿಪ್ರಾಯಗಳ ಅಭಿವ್ಯಕ್ತಿಗೂ ಅವಕಾಶ ಸಿಗುತ್ತದೆ; ಭಿನ್ನಾಭಿಪ್ರಾಯಗಳಿಗೆ ಸರಿಯಾದ ಉತ್ತರಗಳೂ ಸಿಗುತ್ತವೆ. ಕೊನೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡುತ್ತದೆ.

ಇಂಥ ಕೃತಿಯ ಹಿಂದೆ, ವೀರಶೈವ/ಲಿಂಗಾಯಿತ ಧರ್ಮಕ್ಕೆ ಅಧಿಕೃತವಾದ ಧರ್ಮಗ್ರಂಥವೊಂದನ್ನು ರೂಪಿಸಬೇಕಾದ ಉದ್ದೇಶ ಬಹಳ ಸ್ಪಷ್ಟವಾಗಿಯೇ ಇದೆ. ಅಷ್ಟೇ ಅಲ್ಲ. “ಶೂನ್ಯಸಂಪಾದನೆ”ಯ ಮೂಲಕ ಅಂಥ ಉದ್ದೇಶ ಈಡೇರಿದೆ ಎಂಬ ಆತ್ಮವಿಶ್ವಾಸವೂ ಇದೆ:

ಇದು ಪರಮಗುರು ವೀರಶೈವ ಸಿದ್ಧಾಂತ ತತ್ವಜ್ಞಾನ, ಇದು ವೀರಶೈವಾಚಾರ ಪ್ರತಿಷ್ಠಾಪನಾಚಾರ್ಯ, ಇದು ದಿವ್ಯ ವೇದಾಂತ ಶಿರೋಮಣಿ, ಇದು ಸಮಸ್ತ ಶಾಸ್ತ್ರ ಮುಖ್ಯ ಮುಖದರ್ಪಣ, ಇದು ಮಹಾಜ್ಞಾನವರ್ಧನ ಪರಮಾನುಭವ ಸಂಬೋಧೆ, ಇದು ಸರ್ವಾಚಾರಸಂಪನ್ನ ಸಮಾರೂಢ ಸಂಗ್ರಹ, ಇದು ಪರಮ ರಾಜಯೋಗ ಸಾಧ್ಯ ಸನ್ನಿಧಾನ, ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ರಸಾಮೃತ ಪ್ರಸನ್ನ ಪ್ರಸಾದ, ಇದು ಅಜ್ಞಾನತಿಮಿರಾಂಜನ ತಂತ್ರಮಪ್ಪ ಪ್ರಭುದೇವರ ಶೂನ್ಯಸಂಪಾದನೆಯ ಮಹಾಪ್ರಸಂಗಂ…. (ಬಸವ ರಾಜು, ೧೯೬೯:೨೫೨).

ಎಂದು ಮಹಾದೇವಯ್ಯ ತನ್ನ ಕೃತಿಯ ಕೊನೆಯಲ್ಲಿ ಮಾಡಿರುವ ಪೋಷಣೆ ಇದನ್ನು ಸಾರಿ ಹೇಳುತ್ತದೆ. ಒಂದು ಪ್ರಮಾಣಗ್ರಂಥ ಆಗಲೇ ಅಸ್ತಿತ್ವದಲ್ಲಿದ್ದರೆ, “ಶೂನ್ಯಸಂಪಾದನೆ”ಯನ್ನು “ಇದು ಪರಮಗುರು ವೀರಶೈವಾಚಾರ ಪ್ರತಿಷ್ಠಾಪನಾಚಾರ್ಯ” ಎಂದು ಹೇಳಿಕೊಳ್ಳುವ ಅಗತ್ಯ ಇರಲಿಲ್ಲ. ಮೂಲ ಸಂಸ್ಕೃತ ಗ್ರಂಥವನ್ನೇ (“ಸಿದ್ಧಾಂತ ಶಿಖಾಮಣಿ”) ಆಧಾರವಾಗಿ ಇರಿಸಿಕೊಳ್ಳಬಹುದಾಗಿತ್ತು. ಹೆಚ್ಚೆಂದರೆ ಅದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದಾಗಿತ್ತು. ಅಂಥದೊಂದು ಮೂಲ ಧಾರ್ಮಿಕ ಗ್ರಂಥ ಇದ್ದ ಬಗ್ಗೆ ವಚನಕಾರರಲ್ಲಾಗಲಿ, ಸಂಗೋಪನಯುಗದ ಪಂಡಿತರಲ್ಲಾಗಲಿ ಯಾವ ಸೂಚನೆಯೂ ದೊರೆಯುವುದಿಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಅಲಕ್ಷಿಸುವ ಕಾರ‍ಣವೂ ಇರಲಿಲ್ಲ. ಇಂಥ ಗ್ರಂಥಗಳಲ್ಲಿ “ಶೂನ್ಯಸಂಪಾದನೆ”ಯೇ ಮೊದಲಿನದು ಎಂಬ ಉತ್ಸಾಹ, ಆತ್ಮವಿಶ್ವಾಸ ಮಹಾದೇವಯ್ಯನ ಮಾತುಗಳಲ್ಲಿ ಕಾಣುತ್ತದೆ. ಸಂಗೋಪನಯುಗದ ವೀರಶೈವ ಪಂಡಿತರಲ್ಲಿ ಅನೇಕರು ಬೇರೆಬೇರೆ ಶೈವಪಂಥಗಳಿಂದ ಬಂದವರು. ಶೈವಸಿದ್ಧಾಂತವನ್ನು ಆಧರಿಸಿದ “ಸಿದ್ಧಾಂತ ಶಿಖಾಮಣಿ”ಯನ್ನು ಅವರು ಅಲಕ್ಷಿಸುವುದು ಸಾಧ್ಯವೇ ಇರಲಿಲ್ಲ.

ಧರ್ಮಗ್ರಂಥಗಳು ರಚನೆಯಾಗುವುದು ಸಾಮಾನ್ಯವಾಗಿ ಧರ್ಮಸಂಸ್ಥಾಪಕರಾದ ಪ್ರವಾದಿಗಳಿಂದ ಮತ್ತು ಆತನ ಬೋಧನೆಗಳನ್ನು ಪ್ರತ್ಯಕ್ಷವಾಗಿ ಕೇಳಿ, ವ್ಯವಸ್ಥಿತವಾಗಿ ಕ್ರೋಡೀಕರಿಸುವ ಅತಿ ನಿಕಟ ಶಿಷ್ಯರಿಂದ. ಅನಂತರ ಹುಟ್ಟುವ ಗ್ರಂಥಗಳು ಮೂಲ ಗ್ರಂಥದ ಕೇವಲ ವಿಶ್ಲೇಷಣಾತ್ಮಕ ಅನುಬಂಧಗಳು. ಕಾಲಾಂತರದಲ್ಲಿ ವಿಶ್ಲೇಷಣೆಗಳು ಬದಲಾಗುತ್ತ ಹೋಗುತ್ತವೆ. ಆದರೆ ಮೂಲಗ್ರಂಥ ಎಂದೂ ಬದಲಾಗುವುದಿಲ್ಲ. ಸಹಜವಾಗಿಯೇ ಮಹಾದೇವಯ್ಯನಿಗೆ ಒಂದು ಧರ್ಮಗ್ರಂಥವನ್ನು ರಚಿಸುವ ಅರ್ಹತೆಗಳು ಇರಲಿಲ್ಲ. ಅವನು ಧರ್ಮಸಂಸ್ಥಾಪಕನೂ ಅಲ್ಲ. ಪ್ರವಾದಿಯ ನೇರ ಶಿಷ್ಯನೂ ಅಲ್ಲ. ಹೋಗಲಿ ಎಂದರೆ, ಅವನು ಒಂದು ಧರ್ಮದ ಅನುಯಾಯಿಗಳೆಲ್ಲರಿಗೆ ಒಪ್ಪಿಗೆಯಾಗಬಹುದಾದ ಅಧಿಕಾರಸ್ಥಾನದಲ್ಲಿದ್ದವನೂ ಅಲ್ಲ.

ಸಹಜವಾಗಿಯೇ, ಮಹದೇವಯ್ಯನಿಗೆ ತಾನು ವೈಯಕ್ತಿಕ ನೆಲೆಯಲ್ಲಿ ರಚಿಸಿದ ವಿಭಿನ್ನ ರೀತಿಯ ಕೃತಿ ವೀರಶೈವದ ಧಾರ್ಮಿಕ ಪಠ್ಯವಾಗಿ ಎಲ್ಲರಿಗೂ ಒಪ್ಪಿಗೆಯಾಗುತ್ತದೋ ಇಲ್ಲವೊ ಎಂಬ ಅನುಮಾನವಿತ್ತು, ಹಿಂಜರಿಕೆಯೂ ಇತ್ತು, ಅದರಿಂದಾಗಿ, “ಇಲ್ಲಿ ವಚನಕ್ರಮ ಸೇರುವ ತಪ್ಪುಳ್ಳಡೆ ನಿಮ್ಮ ಪರಮ ಜ್ಞಾನದಿಂ ತಿದ್ದಿ ಈ ವಚನಾನುಭಾವ ಪ್ರಸಂಗಮಂ ಮಾಡಿ ಸುಖಿಸುವುದು” ಎಂದು ವಿನಯದಿಂದ ಕೇಳಿಕೊಳ್ಳುತ್ತಾನೆ. ಎಂದರೆ, ವೈಯಕ್ತಿಕವಾಗಿ ರಚನೆಯಾದ ಒಂದು ಕೃತಿ ಧರ್ಮಗ್ರಂಥವೆಂದು ಸ್ವೀಕೃತವಾಗುವಲ್ಲಿ ಇರುವ ಕಷ್ಟದ ಅರುವು ಮಹಾದೇವಯ್ಯನಿಗಿತ್ತು. ಧರ್ಮಸಂಸ್ಥಾಪಕನಲ್ಲದ, ಧರ್ಮಪೀಠದ ಪ್ರಭಾವಿ ಗುರುವಲ್ಲದ ಒಬ್ಬ ಸಾಮಾನ್ಯ ರಚಿಸಿದ ಕೃತಿಗೆ ಇರುವ ಮಿತಿಗಳ ಅರಿವೂ ಅವನಿಗಿತ್ತು.

ಮಹಾದೇವಯ್ಯ “ಶೂನ್ಯಸಂಪಾದನೆ”ಯನ್ನು ರಚಿಸುವುದರಲ್ಲಿ ಮಾಡಿದ ಕೆಲಸ ಬಹಳ ದೊಡ್ಡದು. ಅದು ಕೇವಲ ಪಾಂಡಿತ್ಯದ ಕೆಲಸವಲ್ಲ. ಅದರ ಜೊತೆಗೆ ಅಗಾಧ ಪ್ರತಿಭೆಯೂ ಸೇರಿಕೊಂಡಿದೆ. ಸುಲಭವಾಗಿ ವರ್ಗೀಕರಣಕ್ಕೆ ಒಗ್ಗಲಾರದ ಸಾವಿರಾರು ವಚನಗಳು ಆತನ ಮುಂದಿದ್ದವು. ಅವುಗಳನ್ನು ಕೆಲವು ಪ್ರಸಂಗಗಳ ಹಿನ್ನೆಲೆಯಲ್ಲಿ ಪ್ರಶ್ನೆ-ಉತ್ತರ-ಪ್ರತ್ಯುತ್ತರ ಕ್ರಮದಲ್ಲಿ ಹೊಂದಿಸಬಹುದೆಂದು ಮಹಾದೇವಯ್ಯನ ಪ್ರತಿಭೆಗೆ ಹೊಳೆದದ್ದು ಒಂದು ದಿವ್ಯ ಸೃಜನಶೀಲ ಕ್ಷಣದಲ್ಲಿ. ಅವನು ಸ್ವತಂತ್ರವಾಗಿ ಬರೆದ ವರ್ಣನೆಗಳಲ್ಲೂ ಅವನ ಸೃಜನಶೀಲತೆಯ ಉಜ್ವಲ ಉದಾಹರಣೆಗಳು ಸಿಗುತ್ತವೆ. ಸಿದ್ಧರಾಮನ ಹಣೆಗಣ್ಣಿನಿಂದ ಹೊರಟ ಅಗ್ನಿಯನ್ನು ಅಲ್ಲಮ ತನ್ನ ಪ್ರಳಯಾಗ್ನಿಯ ಮೂಲಕ ಎದುರಿಸಿದ ಚಿತ್ರ, ಬಸವಣ್ಣನ ಮಹಾಮನೆಯಲ್ಲಿ ಅಲ್ಲಮ ಶರಣರೊಂದಿಗೆ ಪ್ರವೇಶ ಮಾಡುವ ಚಿತ್ರ, ಮರಳ ಶಂಕರದೇವ ಪ್ರಸಾದದ ರಾಶಿಯಿಂದ ಮೇಲೆದ್ದ ಚಿತ್ರ. ಶರಣರು ಕಲ್ಯಾಣದಿಂದ ನಿರೂಪಣೆ ತೆಗೆದುಕೊಳ್ಳುವ ಚಿತ್ರ-ಇಂಥ ಹಲವಾರು ಪ್ರಸಂಗಗಳಲ್ಲಿ ಆತನ ಸೃಜನಶೀಲ ಪ್ರತಿಭೆಯ ಉಜ್ವಲ ಸೆಳಕುಗಳು ಸಿಗುತ್ತವೆ. ಆತ ಪ್ರತಿಯೊಂದು ಸಂಪಾದನೆಗೂ ಸೃಷ್ಟಿಸಿಕೊಂಡಿರುವ ನಾಟಕೀಯ ಚೌಕಟ್ಟಿನ ತಂತ್ರವಂತೂ ಹೊಚ್ಚಹೊಸದಾದುದು.

ಆದರೆ ಒಂದು ಕೃತಿ ಧರ್ಮಗ್ರಂಥವೆಂದು ಸ್ವೀಕೃತವಾಗುವುದಕ್ಕೆ ಸೃಜನಶೀಲ ಪ್ರತಿಭೆ ಅಷ್ಟು ಮುಖ್ಯವಾಗುವುದಿಲ್ಲ. ಒಂದು ಧರ್ಮದ ತತ್ವ-ಸಿದ್ಧಾಂತಗಳು ಮತ್ತು ಆಚರಣೆಗಳು ಸಮರ್ಪಕವಾಗಿ, ಸಂಪೂರ್ಣವಾಗಿ ಅದರಲ್ಲಿ ನಿರೂಪಣೆಯಾಗಿರಬೇಕಾಗುತ್ತದೆ. ಮಹಾದೇವಯ್ಯನ “ಶೂನ್ಯಸಂಪಾದನೆ”ಯಲ್ಲಿ ಈ ವಿಷಯದಲ್ಲಿ ಕೆಲವು ಲೋಪಗಳಿದ್ದವು. ಆಚರಣೆಗಳಿಗೆ ಸಂಬಂಧಿಸಿದಂತೆ, ಮಹಾದೇವಯ್ಯನ ಕೃತಿಯಲ್ಲಿ ಸಿದ್ಧರಾಮನಿಗೆ ಲಿಂಗದೀಕ್ಷೆ ಆಗುವುದಿಲ್ಲ. “ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೆ?” ಎಂದ ಪ್ರಭುವಿನ ಮಾತನ್ನು ಒಪ್ಪಿಕೊಂಡ ಶರಣರು ಸುಮ್ಮನಾಗುತ್ತಾರೆ. ಆದರೆ ಹೀಗೆ ವಿನಾಯಿತಿ ಕೊಡುತ್ತ ಹೋದರೆ ಲಿಂಗದೀಕ್ಷೆಯ ಗತಿಯೇನು? ಇದು ಇತರ ಪಂಡಿತರಿಗೆ ಹಿಡಿಸಲಿಲ್ಲ. ಬಸವಣ್ಣ ಪ್ರತಿಪಾದಿಸಿದ ಕಾಯಕ, ಪ್ರಸಾದ, ಸಮಾನತೆ ಇತ್ಯಾದಿ ಸಾಮಾಜಿಕ ತತ್ವಗಳಿಗೆ ಮಹಾದೇವಯ್ಯನ ಕೃತಿಯಲ್ಲಿ ಸರಿಯಾದ ಪ್ರಾತಿನಿಧ್ಯ ಸಿಗಲಿಲ್ಲ. ಕೃತಿಯ ಕೊನೆಯ ಭಾಗಗಳಲ್ಲಿ ಬಸವಣ್ಣನಿಗೆ ತಕ್ಕಮಟ್ಟಿನ ಪ್ರಾಧಾನ್ಯ ಸಿಕ್ಕರೂ ಅಲ್ಲಮನೇ ಕೃತಿಯ ನಾಯಕನಾಗಿ ಬಿಡುತ್ತಾನೆ.

ಈ ಕೆಲವು ಅಂಶಗಳು ಅನೇಕರಿಗೆ ಹಿಡಿಸಲಿಲ್ಲ. ಕೆಲವು ವಿಷಯಗಳ ಬಗ್ಗೆ ತೀವ್ರ ವಿರೋಧಗಳು ಬಂದವು. ಹಾಗಾಗಿ “ಶೂನ್ಯಸಂಪಾದನೆ” ವೀರಶೈವ ಧರ್ಮದ ಅಧಿಕೃತ ಧರ್ಮಗ್ರಂಥವೆಂದು ಸ್ವೀಕೃತವಾಗಲಿಲ್ಲ. ಒಂದು ವೇಳೆ, ತಮ್ಮ ಅಧಿಕಾರವಾಣಿಯಿಂದ, ಸಿದ್ಧರಾಮನಂಥವರಿಗೆ ಲಿಂಗದೀಕ್ಷೆ ಅವಶ್ಯವಿಲ್ಲ ಎಂದು ಅದರಲ್ಲಿ ಹೇಳಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಬರುತ್ತಿರಲಿಲ್ಲ. ಆದರೆ ಮಹಾದೇವಯ್ಯ ಬಸವಣ್ಣನಲ್ಲ. ಆದ್ದರಿಂದ ಹಲಗೆಯಾರ್ಯನಂಥವರು ಈ ಕ್ರಮವನ್ನು ಪ್ರಶ್ನಿಸಿದರು. ಹಲಗೆಯಾರ್ಯ ಮಹಾದೇವಯ್ಯನ “ಶೂನ್ಯಸಂಪಾದನೆ”ಯಲ್ಲಿ ಅನೇಕ ತಿದ್ದುಪಡಿಗಳನ್ನು ಸೇರಿಸಿ, ಪರಿಷ್ಕರಿಸಿ, ಇನ್ನೊಂದು “ಶೂನ್ಯಸಂಪಾದನೆ”ಯನ್ನು ರಚಿಸಿದ. ಆತ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಿದ್ದ: ೧. ಸಿದ್ದರಾಮನಿಗೆ ಲಿಂಗದೀಕ್ಷೆಯಾಗಿತ್ತೆಂದು ಸಿದ್ಧಮಾಡಲು ಹಲವಾರು ಹೊಸ ವಚನಗಳನ್ನು ಸೇರಿಸಿದ: ೨.ಶರಣರ ಸಾಮಾಜಿಕ ನಿಲುವುಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನುಲಿಯ ಚಂದ್ರಯ್ಯನ ಪ್ರಸಂಗವನ್ನು ಹೊಸದಾಗಿ ರಚಿಸಿ ಕಾಯಕ ಸಿದ್ಧಾಂತಕ್ಕೆ ಪ್ರಾತಿನಿಧ್ಯ ಒದಗಿಸಿದ; ೩. ಮಹಾದೇವಯ್ಯನ ನಿರೂಪಣಾ ತಂತ್ರವನ್ನು ಇನ್ನಷ್ಟು ಪರಿಷ್ಕರಿಸಿದ; ೪. ಮಹಾದೇವಿಯಕ್ಕ-ಕಿನ್ನರ ಬ್ರಹ್ಮಯ್ಯರ ಪ್ರಸಂಗವನ್ನು ಅತಿಗೆ ಒಯ್ದು ಬೆಳೆಸಿದ.

ಈ ಬದಲಾವಣೆಗಳ ಆತುರದ ಹಿಂದೆ, “ಶೂನ್ಯಸಂಪಾದನೆ” ಒಂದು ಧಾರ್ಮಿಕ ಆಧಾರಗ್ರಂಥವಾಗಿ ಸ್ವೀಕೃತವಾಗಬೇಕೆಂಬ ಒತ್ತಾಸೆ ಇದೆ. ಆದ್ದರಿಂದಲೇ ಅದರಲ್ಲಿ ತಪ್ಪು ಸಂಗತಿಗಳು ಸೇರಿಕೊಳ್ಳಬಾರದೆಂಬ ಎಚ್ಚರವಿದೆ. ಆದರೆ ಹಲಗೆಯಾರ್ಯನೂ ಮಹಾದೇವಯ್ಯನಂತೆ ಒಬ್ಬ ಸಾಮಾನ್ಯ ಮನುಷ್ಯನೇ ಅಲ್ಲವೆ? ಅವನ ಗ್ರಂಥವೂ ಅಧಿಕೃತ ಧರ್ಮಗ್ರಂಥವೆಂದು ಸ್ವೀಕೃತವಾಗಲಿಲ್ಲ. ಅದರಲ್ಲಿಯೂ ಕೆಲವು ಲೋಪದೋಷಗಳು ಕಂಡವು. ಮಹಾದೇವಯ್ಯ-ಹಲಗೆಯಾರ್ಯರಿಬ್ಬರೂ ಹರಿಹರನನ್ನು ಅನುಸರಿಸಿ, ಅಲ್ಲಮ-ಬಸವಣ್ಣ-ಅಕ್ಕಮಹಾದೇವಿ ಮೊದಲಾದ ಶರಣರು ಶಾಪಗ್ರಸ್ತರಾಗಿ ಭೂಮಿಗೆ ಬಂದರೆಂದು ಆವಾನಾನೊಬ್ಬನು ನುಡಿವುತ್ತಿದಾನು; ಅವನು ಇಪ್ಪತ್ತೆಂಟು ಕೋಟಿ ನರಕದಲ್ಲಿ ರವಿ ಶಶಿಯುಳ್ಳನ್ನೆಬ್ಬರ ನರಕವನನುಭಸಿಸುತ್ತಿಪ್ಪನು” ಎಂದು ಗುಮ್ಮಳಾಪುರದ ಸಿದ್ಧಲಿಂಗನಿಗೆ ವಿಪರೀತ ಸಿಟ್ಟು ಬಂತು. ಕೃತಿಯಲ್ಲಿ ಬಸವಣ್ಣ ಮತ್ತು ಆತನ ಸಾಮಾಜಿಕ ತತ್ವಗಳಿಗೆ ಇನ್ನಷ್ಟು ಪ್ರಾತಿನಿದ್ಯ ಸಿಗಬೇಕೆಂದು ಅವನಿಗನಿಸಿತು. ಅಕ್ಕಮಹಾದೇವಿ-ಕಿನ್ನರ ಬ್ರಹ್ಮಯ್ಯನ ಪ್ರಸಂಗವನ್ನು ಹಲಗೆಯಾರ್ಯ ಅತಿಗೆ ಒಯ್ದದೂ ಅವನಿಗೆ ಹಿಡಿಸಲಿಲ್ಲ. ಅವನು “ಶೂನ್ಯಸಂಪಾದನೆ”ಯನ್ನು ಮತ್ತೆ ಪರಿಷ್ಕರಿಸಿ ಶರಣರ ಶಾಪಪ್ರಸಂಗಗಳನ್ನು ತಿದ್ದಿದ. ಆಯ್ದಕ್ಕಿ ಮಾದಯ್ಯ ಮತ್ತು ಗೋರಕ್ಷರಿಗೆ ಸಂಬಂಧಿಸಿದ ಎರಡು ಹೊಸ ಸಂಪಾದನೆಗಳನ್ನು ಸೇರಿಸಿದ. ಅಕ್ಕಮಹಾದೇವಿ-ಕಿನ್ನರ ಬ್ರಹ್ಮಯ್ಯರ ಪ್ರಸಂಗದ ‘ಅತಿ’ಯೆನಿಸಿದ ಭಾಗವನ್ನು ತೇಲಿಸಿ ಬರೆದ.

ಸಿದ್ಧಲಿಂಗಯತಿಯ ಈ ಸಂಪಾದನೆಯಾದರೂ ವೀರಶೈವ ಧರ್ಮಗ್ರಂಥವೆಂದು ಸ್ವೀಕೃತವಾಯಿತೆ-ಎಂದರೆ ಇದೂ ಆಗಲಿಲ್ಲ. ಮುಂದೆ ಬಂದ ಗೂಳೂರು ಸಿದ್ಧರೀರಣ್ಣ “ಶೂನ್ಯಸಂಪಾದನೆ”ಯನ್ನು ಮೂರನೆಯ ಬಾರಿ ಪರಿಷ್ಕರಿಸಿದ. ಮೋಳಿಗೆಯ ಮಾರಯ್ಯ ಮತ್ತು ಘಾಟ್ಟಿವಾಳಯ್ಯರ ಎರಡು ಹೊಸ ಸಂಪಾದನೆಗಳನ್ನು ಇವನು ಸೇರಿಸಿದ. ಇಲ್ಲಿಯೂ ಬಸವಣ್ಣನಿಗೆ ಹೆಚ್ಚಿನ ಪಾತಿನಿಧ್ಯ ಒದಗಿಸುವ ಪ್ರಯತ್ನ ಕಾಣುತ್ತದೆ. ಕೊನೆಯದಾದ ಈ ಕೃತಿಗಾದರೂ ಧರ್ಮಗ್ರಂಥವೆಂಬ ಮನ್ನಣೆ ಸಿಕ್ಕಿತೆ-ಎಂದರೆ ಹಾಗೇನೂ ಆಗಲಿಲ್ಲ.

ಇದಕ್ಕೆ ಮುಖ್ಯ ಕಾರಣವೆಂದರೆ, “ಶೂನ್ಯಸಂಪಾದನೆ”ಗೆ ಶಿವಗಣಪ್ರಸಾದಿ ಮಹಾದೇವಯ್ಯ ಅಲ್ಲಮನನ್ನು ನಾಯಕನನ್ನಾಗಿ ಆರಿಸಿಕೊಂಡದ್ದು ಮತ್ತು ನಂತರದ ಪರಿಷ್ಕರಣಕಾರರು ಅದನ್ನೇ ಅನುಸರಿಸಿದ್ದು, ಧರ್ಮಗ್ರಂಥದ ರಚನೆಯೆಂದರೆ ಒಂದು ಧರ್ಮಕ್ಕೆ, ಅದರ ಸಿದ್ಧಾಂತ-ಆಚರಣೆಗಳಿಗೆ ಸ್ಥಾವರರೂಪವನ್ನು ಕೊಡುವ ಪ್ರಯತ್ನ. ಆದರೆ ಅಲ್ಲಮ ಎಲ್ಲ ಸ್ಥಾವರ ರಚನೆಗಳನ್ನು ತಿರಸ್ಕರಿಸುವವನು. ಬಸವಣ್ಣ ಗ್ರಹಿಸಿಕೊಂಡ ರೀತಿಯಲ್ಲೂ ಸ್ಥಾವರಕ್ಕೆ ವಿರೋಧವಿದೆ. ಅಲ್ಲಮ ಮಹಾಜ್ಞಾನಿ. ಅನುಭಾವದ ಅತ್ಯಂತಿಕ ಸ್ಥಿತಿಯನ್ನು ತಲುಪಿದವನು. ಶೂನ್ಯವನ್ನು ಸಂಪಾದಿಸಿದವನು. ತನ್ನ ಪ್ರಖರವಾದ ವೈಚಾರಿಕತೆಯಿಂದ ಎಲ್ಲ ಸಂದೇಶಗಳಿಗೂ ಸಮಾಧಾನ ನೀಡಬಲ್ಲವನು. ಎಲ್ಲರೂ ಗೌರವದಿಂದ ಅವನ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆತನ ಒಲವು ಇರುವುದು ಅನುಭಾವದ ಕಡೆಗೆ. ಲೌಕಿಕದ ಕಾಳಜಿ ಅವನ ವಚನಗಳಲ್ಲಿ ಅಂತರ್ಗತವಾಗಿದ್ದರೂ ಅದನ್ನು ಮೀರಬೇಕೆನ್ನುವ ಹಂಬಲ ಅವನದು. ಸಿದ್ಧರಾಮನ ಕೆರೆ-ಕಟ್ಟೆಗಳ ಬಗೆಗೆ, ಗೋರಕ್ಷನ ಯೋಗಸಾಧನೆಯ ಬಗೆಗೆ ಅವನು ತಳೆಯುವ ನಿಲುವಿನಲ್ಲಿ ಇದನ್ನು ಕಾಣಬಹುದು. ಅವನ ಆಲೋಚನೆಗಳಿಗೆ ಒಂದು ಧಾರ್ಮಿಕ ಚೌಕಟ್ಟನ್ನು ತೊಡಿಸುವುದು ಅಸಾಧ್ಯದ ಮಾತು. ಅವನನ್ನು ನಾಯಕನನ್ನಾಗಿ ಮಾಡಿಕೊಂಡಿದ್ದರಿಂದಾಗಿ “ಶೂನ್ಯಸಂಪಾದನೆ” ಒಂದು ವಿಶಿಷ್ಟ ಅನುಭಾವ ಕೃತಿಯಾಯಿತು; ಧರ್ಮಗ್ರಂಥವಾಗಲಿಲ್ಲ. ಮುಖ್ಯವಾಗಿ ಗಮನಿಸಬೇಕಾದ ಮಾತೆಂದರೆ, ಅನುಭಾವ ಯಾವುದೇ ಧರ್ಮದ ಎಲ್ಲೆ-ಕಟ್ಟುಗಳನ್ನು ಮೀರಿದ್ದು, ಸ್ವಭಾವತಃ ಅದು ಧರ್ಮನಿರಪೇಕ್ಷ (Secular)ವಾದದ್ದು.

ಅಲ್ಲಮ ಮತ್ತು ಬಸವಣ್ಣ ಎರಡು ಭಿನ್ನ ತತ್ವಗಳನ್ನು ಪ್ರತಿನಿಧಿಸುತ್ತಾರೆ. ಒಂದು ನಿವೃತ್ತಿಯ ತತ್ವ. ಇವು ಪರಸ್ಪರ ವಿರುದ್ಧ ತತ್ವಗಳೇನೂ ಅಲ್ಲ. ಅಲ್ಲಮನಲ್ಲಿಯೂ ಪ್ರವೃತ್ತಿಯ, ಬಸವಣ್ಣನಲ್ಲೂ ನಿವೃತ್ತಿಯ ಸೆಳೆತಗಳಿವೆ. ಆದರೆ ಅವರು ಪ್ರಧಾನವಾಗಿ ನಿವೃತ್ತಿಯ ಮತ್ತು ಪ್ರವೃತ್ತಿಯ ತತ್ವಗಳನ್ನು ಸಂಕೇತಿಸುತ್ತಾರೆ. ವಾಸ್ತವವಾಗಿ ಇವೆರಡೂ ಪರಸ್ಪರ ಪೂರಕವಾದ ತತ್ವಗಳು. ಯಾವುದೇ ಒಳ್ಳೆಯ ಧರ್ಮ ತನ್ನ ಸಿದ್ಧಾಂತದಲ್ಲಿ ಇವೆರಡರ ಸಮತೋಲನವನ್ನು ಸಾಧಿಸಬೇಕು. ಅದಕ್ಕಾಗಿಯೇ ಅಲ್ಲಮ ಇಲ್ಲೆಲ್ಲೋ ಓಡಾಡಿಕೊಂಡಿದ್ದವನು ಬಸವಣ್ಣನನ್ನು ಹುಡುಕಿಕೊಂಡು ಕಲ್ಯಾಣಕ್ಕೆ ಬರುತ್ತಾನೆ. ಬಸವಣ್ಣ ಅಲ್ಲಮನಿಗಾಗಿ ಕಾಯುತ್ತ ಕುಳಿತುಕೊಂಡಿರುತ್ತಾನೆ. ಅವರಿಬ್ಬರ ಮಿಲನ ಸಾಂಕೇತಿಕವಾಗಿ ಬಹಳ ಮಹತ್ವದ ಘಟನೆ. ಆದರೆ “ಶೂನ್ಯಸಂಪಾದನೆ” ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನಿಸುತ್ತದೆ. ಅವರಿಬ್ಬರ ಭೇಟಿಯಲ್ಲಿ ನಿವೃತ್ತಿ-ಪ್ರವೃತ್ತಿಗಳು ಪರಸ್ಪರ ಪ್ರಭಾವಿಸಿ ಹೊಸದೊಂದು ದರ್ಶನ ಮೂಡಬಹುದಾಗಿತ್ತು. ಆದರೆ ಅಲ್ಲಮನ ಅನುಭಾವದ್ದೇ ಮೇಲುಗೈಯಾಗುತ್ತದೆ. ಇದನ್ನು ಸರಿಪಡಿಸಲಿಕ್ಕೆಂದೇ ಹಲಗೆಯಾರ್ಯ, ಸಿದ್ದಲಿಂಗಯತಿ ಮತ್ತು ಸಿದ್ಧವೀರಣ್ಣೊಡೆಯರು ಕಾಯಕ, ದಾಸೋಹ ಮೊದಲಾದ ತತ್ವಗಳಿಗೆ ಸಂಬಂಧಿಸಿದ ಹೊಸ ಪ್ರಸಂಗಗಳನ್ನು ಸೇರಿಸಿದರು. ಆದರೂ ಕೆಲವು ಮಹತ್ವದ ತತ್ವಗಳು ಹೊರಗೇ ಉಳಿದವು. ಹೀಗೆ ಸಾಮಾಜಿಕ ತತ್ವಗಳನ್ನು ಸೇರಿಸುತ್ತ ಹೋದಂತೆ ಬಸವಣ್ಣನ ಪಾತ್ರ ಬೆಳೆಯುತ್ತ ಹೋಯಿತು, ಅಲ್ಲಮನ ಪಾತ್ರ ಹಿಂದೆ ಸರಿಯಿತು. ಹೊಸ ಸನ್ನಿವೇಶಗಳಲ್ಲಿ ಅಲ್ಲಮ ಬರುವುದೇ ಇಲ್ಲ. ಅದರಿಂದಾಗಿ ನಿರೂಪಣೆಯ ದೃಷ್ಟಿಕೋನದ ಏಕರೂಪತೆಗೆ ಭಂಗ ಬಂದಿದೆ. “ಶೂನ್ಯಸಂಪಾದನೆ” ತನ್ನ ಮೊದಲ ಅರ್ಧದಲ್ಲಿ ರೂಪಿಸಿಕೊಂಡು ಬಂದ ಜೀವನದೃಷ್ಟಿ ಉತ್ತರಾರ್ಧದಲ್ಲಿ ಬದಲಾಗುತ್ತದೆ. ಅಲ್ಲಮ-ಬಸವಣ್ಣರ ಜೀವನದೃಷ್ಟಿಗಳಲ್ಲಿ ಸಮನ್ವಯ ಏರ್ಪಡುವುದಿಲ್ಲ. ಕೃತಿಯ ಸಂವಿಧಾನದಲ್ಲಿ ಬಿರುಕು ಹುಟ್ಟುತ್ತದೆ.

ಅಂತೂ “ಶೂನ್ಯಸಂಪಾದನೆ” ಸರ್ವಗ್ರಾಹ್ಯವಾದ ಅಧಿಕೃತ ವೀರಶೈವ/ಲಿಂಗಾಯತ ಧರ್ಮಗ್ರಂಥವಾಗಿ ಒಪ್ಪಿಗೆ ಪಡೆಯಲಿಲ್ಲ. ಆದರೂ ಅಂಥ ಒಂದು ಗ್ರಂಥದ ವೀರಶೈವಕ್ಕೆ ಬೇಕು ಎಂಬ ಭಾವನೆ ಬಲವಾಗಿಯೇ ಇದೆ. ಜನಸಾಮಾನ್ಯರಂತೆ ವೀರಶೈವ ವಿದ್ವಾಂಸರೂ ಈ ಬಗ್ಗೆ ಆಗಾಗ ಹೇಳುತ್ತಲೇ ಬಂದಿದ್ದಾರೆ. ಮುಸಲ್ಮಾನರಿಗೆ “ಕುರಾನ್” ಇರುವಂತೆ, ಕ್ರಿಶ್ಚನ್ನರಿಗೆ “ಬೈಬಲ್” ಇರುವಂತೆ ಬೌದ್ಧರಿಗೆ “ಧರ್ಮಪದ” ಇರುವಂತೆ, ವೀರಶೈವ ಧರ್ಮಕ್ಕೂ ಒಂದು ಅಧಿಕೃತ ಧರ್ಮಗ್ರಂಥವಿರಬೇಕು; ಹಾಗೆ ಇಲ್ಲದಿರುವದೊಂದು ದೊಡ್ಡ ಕೊರತೆ ಎಂಬ ಭಾವನೆ ಈ ಒತ್ತಾಯದ ಹಿಂದೆ ಇದೆ (ಕಲಬುರ್ಗಿ, ೧೯೯೫ :೫೬೫).

ಆದರೆ ಹಾಗೆ ವೀರಶೈವ ಧರ್ಮಕ್ಕೆ ಧರ್ಮಗ್ರಂಥವನ್ನು ರಚಿಸುವುದೇ ಆದರೆ “ಶೂನ್ಯಸಂಪಾದನೆ”ಯೊಂದೇ ಸಾಕಾಗುವುದಿಲ್ಲ. ಅದು ವೀರಶೈವದ ಅನುಭಾವದ ಸ್ವರೂಪವನ್ನು ಪ್ರಧಾನವಾಗಿ ಚಿತ್ರಿಸುವ ಗ್ರಂಥ. ಅದರಲ್ಲಿ ಷಟ್‌ಸ್ಥಲಗಳ ಸಂಕ್ಷಿಪ್ತ ವಿವರಣೆಯನ್ನು ಬಿಟ್ಟರೆ ಅಷ್ಟಾವರಣ, ಪಂಚಾಚಾರ ಮೊದಲಾದ ಮಹತ್ವದ ವೀರಶೈವ ಧಾರ್ಮಿಕ ಪರಿಕಲ್ಪನೆಗಳ ವಿವರಣೆ ಸಿಗುವುದಿಲ್ಲ. ಹಾಗಾಗಿ ಶೂನ್ಯಸಂಪಾದನೆಕಾರರು ಹೇಳಿಕೊಂಡಂತೆ, ನಿಜವಾದ ಅರ್ಥದಲ್ಲಿ “ಇದು ಪರಮಗುರು ವೀರಶೈವ ಸಿದ್ಧಾಂತ ತತ್ವಜ್ಞಾನ, ಇದು ವೀರಶೈವಾಚಾರ ಪ್ರತಿಷ್ಠಾಪನಾಚಾರ್ಯ…” ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಆದ್ದರಿಂದ “ಶೂನ್ಯಸಂಪಾದನೆ”ಯನ್ನು ಎಷ್ಟೇ ಪರಿಷ್ಕರಿಸಿದರೂ ಅದು ಒಂದು ಸ್ವಯಂಪೂರ್ಣವಾದ ಧರ್ಮಗ್ರಂಥವಾಗದೇ ಹೋಯಿತು. ವೀರಶೈವ ಧರ್ಮದ ತಾತ್ವಿಕ ಸಿದ್ಧಾಂತಗಳನ್ನು ಕ್ರೋಡೀಕರಿಸುವುದಕ್ಕೆ ಚೆನ್ನಬಸವಣ್ಣನನ್ನು ಕೇಂದ್ರವಾಗಿ ಇಟ್ಟುಕೊಂಡು ಇನ್ನೊಂದು ಗ್ರಂಥವನ್ನೇ ರಚಿಸಬೇಕಾಗುತ್ತದೆ. ಷಟ್‌ಸ್ಥಲ, ಪಂಚಾಚಾರ, ಅಷ್ಟಾವರಣ ಇತ್ಯಾದಿಗಳನ್ನು ಕುರಿತು ಸಾಕಷ್ಟು ಚರ್ಚೆ ನಡೆದಿದೆಯಾದರೂ ಆ ಬಗ್ಗೆ ಅಧಿಕೃತ ಗ್ರಂಥವೇನೂ ಇಲ್ಲ. ಇಷ್ಟಾಗಿಯೂ ವೀರಶೈವ ಧರ್ಮ ಪ್ರತಿಪಾದಿಸಿ ಆಚರಣೆಗೆ ತಂದ ಸಾಮಾಜಿಕ ವಿಚಾರಧಾರೆ ಹೊರಗೇ ಉಳಿಯುತ್ತದೆ. ಯಾವುದೇ ಒಂದು ಧರ್ಮ ಸಮಾಜದ ಸ್ವರೂಪದ ಬಗೆಗೆ ಏನು ಹೇಳುತ್ತದೆ ಎಂಬುದು ಬಹಳ ಮುಖ್ಯವಾದ ವಿಷಯ. ಸಮಾಜಶಾಸ್ತ್ರೀಯ ಸಿದ್ಧಾಂತವಿಲ್ಲದೆ ಯಾವ ಧರ್ಮವೂ ಪೂರ್ಣವಾಗುವುದಿಲ್ಲ. ಒಂದು ಧರ್ಮದ ಪ್ರಸ್ತುತತೆ ನಿರ್ಧಾರವಾಗುವುದೇ ಅದರ ಸಮಾಜಶಾಸ್ತ್ರೀಯ ಸಿದ್ಧಾಂತಗಳ ಆಧಾರದ ಮೇಲೆ. ಅಂಥ ವೀರಶೈವ ಸಾಮಾಜಿಕ ಸಿದ್ಧಾಂತಗಳನ್ನು ರೂಪಿಸಲು ಬಸವಣ್ಣನನ್ನು ಕೇಂದ್ರವಾಗಿರಿಸಿಕೊಂಡ ಇನ್ನೊಂದು ಗ್ರಂಥದ ಅವಶ್ಯಕತೆ ಬೀಳುತ್ತದೆ. ಇವತ್ತು ಬಸವಣ್ಣ ಪ್ರತಿಪಾದಿಸಿದ ಕಾಯಕ, ದಾಸೋಹ, ಜಾತಿನಿರಸನ, ಲಿಂಗಸಮಾನತೆ, ಮೊದಲಾದ ಸಾಮಾಜಿಕ ಸಿದ್ಧಾಂತಗಳು ವೀರಶೈವ ಧರ್ಮದ ಹೊರಗೂ ವ್ಯಾಪಕವಾಗಿ ಚರ್ಚೆಯಾಗುತ್ತಿರುವುದು ಅವುಗಳ ಪ್ರಸ್ತುತತೆಗಾಗಿ; ನಮ್ಮ ಹಿಂದಿನ ಸಾಮಾಜಿಕ ತೊಳಲಾಟಗಳಿಗೆ ಅವುಗಳಲ್ಲಿ ಸಮಾಧಾನಕರ ಪರಿಹಾರಗಳಿರುವುದಕ್ಕಾಗಿ, ಬಸವಣ್ಣನನ್ನು ನಿರ್ಲಕ್ಷಿಸಿ ವೀರಶೈವ ಧರ್ಮದ ಸಿದ್ಧಾಂತಗಳನ್ನು ರೂಪಿಸುವುದು ಸಾಧ್ಯವಿಲ್ಲ. “ಶೂನ್ಯಸಂಪಾದನೆ” ಯಲ್ಲಿ ಅಲ್ಲಮನೊಡನೆ ಬಸವಣ್ಣನನ್ನೂ ಸೇರಿಸಲು ಮಾಡಿದ ಪ್ರಯತ್ನ ಅಷ್ಟೇನು ಯಶಸ್ವಿಯಾಗಿಲ್ಲ. ಬಸವಣ್ಣನನ್ನು ಇನ್ನಷ್ಟು ಬೆಳೆಸುವ ರೀತಿಯಲ್ಲಿ ಜಯಾ ರಾಜಶೇಖರ ಅವರು ಮಾಡಿರುವ ಇತ್ತೀಚಿನ ಸಂಸ್ಕರಣ “ಪ್ರಭುದೇವರ ಶೂನ್ಯ ಸಂಪಾದನೆ” (೨೦೦೩) ಜನರ ಗಮನವನ್ನೇ ಸೆಳೆದಂತಿಲ್ಲ. ಇಷ್ಟೇ ಅಲ್ಲದೆ, ಒಂದು ಧರ್ಮದ ಅನುಯಾಯಿಗಳು ಜನನ, ದೀಕ್ಷೆ, ಮದುವೆ, ಗರ್ಭಧಾರಣ, ನಾಮಕರಣ, ಸಾವು ಇತ್ಯಾದಿ ಜೀವನದ ಹಲವಾರು ಮಹತ್ವದ ಪ್ರಸಂಗಗಳಲ್ಲಿ ಅನುಸರಿಸಬೇಕಾದ ಆಚರಣೆಗಳು (Rituals) ಕೂಡ ಮುಖ್ಯವಾಗಿರುತ್ತವೆ. ಜನಸಾಮಾನ್ಯರಿಗೆ ಧರ್ಮದ ವೈಶಿಷ್ಟ್ಯಗಳು ಕಾಣುವುದು ಇಂಥ ಆಚರಣೆಗಳಲ್ಲಿ. ಅವುಗಳಿಗೆ ಧರ್ಮಗ್ರಂಥಗಳಲ್ಲಿ ಅವಕಾಶ ಕಲ್ಪಿಸಬೇಕಾಗುತ್ತದೆ. ಆದರೆ ವೀರಶೈವ ಆಚರಣೆಗಳನ್ನು ವ್ಯವಸ್ಥಿತವಾಗಿ ಕ್ರೋಡಿಕರಿಸುವ ಪ್ರಯತ್ನಗಳೇ ನಡೆದಿಲ್ಲ. ಶರಣರು ಅನೇಕ ವೈದಿಕ ಆಚರಣೆಗಳನ್ನು ತಿರಸ್ಕರಿಸಿದ್ದರೂ, ಹೊಸ ಆಚರಣೆಗಳು ಇದ್ದೇ ಇವೆ. ಇಲ್ಲವಾದರೆ. “ಶೂನ್ಯಸಂಪಾದನೆ”ಯ ಸಂದರ್ಭದಲ್ಲಿ ಸಿದ್ಧರಾಮನ ಲಿಂಗದೀಕ್ಷೆಯ ಆಚರಣೆಯ ಬಗ್ಗೆ ಇಷ್ಟೊಂದು ರಂಪ ನಡೆಯಬೇಕಾಗಿರಲಿಲ್ಲ.

ಆದರೆ ಮುಖ್ಯವಾದ ಪ್ರಶ್ನೆಯೆಂದರೆ, ವೀರಶೈವ ಧರ್ಮಕ್ಕೆ ಇಂಥ ಧರ್ಮಗ್ರಂಥ ಬೇಕೆ – ಎಂಬುದು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ವೀರಶೈವ ಧರ್ಮಕ್ಕೆ ಇಂಥ ಧರ್ಮಗ್ರಂಥದ ಅವಶ್ಯಕತೆ ಇಲ್ಲ. ಅಂಥದೊಂದು ಗ್ರಂಥದ ಅವಶ್ಯಕತೆ ಇದೆಯೆಂದು ಅನಿಸಿದ್ದರೆ ಬಸವಣ್ಣನವರ ಕಾಲಕ್ಕೆ ಇದು ನಡೆಯಬೇಕಿತ್ತು. ಆದರೆ ಬಸವಣ್ಣ ಮೊದಲಾಗಿ ಯಾವ ಶರಣರೂ ಈ ಪ್ರಯತ್ನಕ್ಕೆ ಕೈಹಾಕಲಿಲ್ಲ. ಧಾರ್ಮಿಕ ಪಠ್ಯದ ಬದಲಾಗಿ ಅವರು ಮುಕ್ತ ವಿಚಾರಗಳ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ‘ವಚನ’ ಎಂಬ ಅಚ್ಚ ಹೊಸ ಮಾದರಿಯ ರಚನೆಯನ್ನು ರೂಪಿಸಿಕೊಂಡರು. ಅಂಥ ಗ್ರಂಥದ ರಚನೆಗೆ ಬೇಕಾದ ಕಾಲಾವಕಾಶ ಅವರಿಗೆ ಸಿಗಲಿಲ್ಲವೆನ್ನುವುದು ಸರಿಯಾದ ವಿವರಣೆಯಲ್ಲ. ಧರ್ಮಗ್ರಂಥದ ರಚನೆ ಅವರ ಉದ್ದೇಶವೇ ಆಗಿರಲಿಲ್ಲ. ಧರ್ಮಗ್ರಂಥದ ಕಲ್ಪನೆ ಒಂದು ಧರ್ಮವನ್ನು ಸ್ಥಾವರಗೊಳಿಸುವ ಪ್ರಯತ್ನವಾಗಿದೆ. ಧರ್ಮಗ್ರಂಥ ಧರ್ಮಕ್ಕೆ ಉಕ್ಕಿನ ಕಟ್ಟನ್ನು ಹಾಕುತ್ತದೆ. ಅದರ ವಿಕಸನಶೀಲತೆಗೆ ತಡೆಯೊಡ್ಡುತ್ತದೆ. ಬದಲಾವಣೆಗಳನ್ನು ತಿರಸ್ಕರಿಸುತ್ತದೆ. ಬಹಳ ಮುಖ್ಯವಾಗಿ, ಧಾರ್ಮಿಕ ಮೂಲಭೂತವಾದಕ್ಕೆ ಕಾರ‍ಣವಾಗುತ್ತದೆ. ಶರಣರು ಸ್ಥಾವರದ ವಿರೋಧಿಯಾಗಿದ್ದರು, ಜಂಗಮದ ಆರಾಧಕರಾಗಿದ್ದರು ಎಂಬುದನ್ನು ಮರೆಯಬಾರದು.

ಒಂದು ಧರ್ಮಕ್ಕೆ ಧರ್ಮಗ್ರಂಥವೆಂದರೆ ಒಂದು ಸ್ವತಂತ್ರ ರಾಷ್ಟ್ರದ ಸಂವಿಧಾನವಿದ್ದಂತೆ. ಬ್ರಿಟನ್ನಿಗೆ ಲಿಖಿತ ಸಂವಿಧಾನವೇ ಇಲ್ಲ. ಆದರೂ ಅದು ಐದಾರು ನೂರು ವರ್ಷ ಕಾಲ ದೇಶವನ್ನು ರಕ್ಷಿಸಿಕೊಂಡು ಬಂದಿದೆ. ನಮ್ಮ ದೇಶಕ್ಕೆ ಲಿಖಿತ ಸಂವಿಧಾನವಿದೆ. ಆದರೂ ಐವತ್ತೇ ವರ್ಷಗಳಲ್ಲಿ ಅದು ನೂರಾರು ಬದಲಾವಣೆಗಳನ್ನು ಕಂಡಿತು. ಧರ್ಮಗ್ರಂಥಗಳನ್ನು ಹಾಗೆ ಬಹುಮತದಿಂದ ತಿದ್ದಲು ಆಗುವುದಿಲ್ಲ. ಪ್ರವಾದಿಗಳ ಮಾತುಗಳನ್ನು ಸಾಮಾನ್ಯರು ತಿದ್ದಲು ಸಾಧ್ಯವೆ? ಅದರಿಂದಾಗಿ, ಧರ್ಮಗ್ರಂಥಗಳನ್ನು ಹೊಂದಿರುವ ಕೆಲವು ಧರ್ಮಗಳು ಎಷ್ಟು ಕರ್ಮಠವಾಗಿವೆ, ಹೇಗೆ ವ್ಯಕ್ತಿಗಳ ವೈಚಾರಿಕ ಸ್ವಾತಂತ್ರ್ಯಕ್ಕೆ ಕಂಟಕವಾಗಿವೆ, ಪ್ರಗತಿ ವಿರೋಧಿಯಾಗಿವೆ ಎಂಬುದಕ್ಕೆ ನಮ್ಮ ಎದುರಿಗೆ ಸ್ಪಷ್ಟ ಉದಾಹರಣೆಗಳಿವೆ.

ಧರ್ಮಗ್ರಂಥವಿಲ್ಲದಿರುವುದು ವೀರಶೈವ ಧರ್ಮದ ದೌರ್ಬಲ್ಯ ಎಂಬ ಭಾವನೆ ಸರಿಯಾದುದಲ್ಲ. ಅದೇ ಅದರ ದೊಡ್ಡ ಶಕ್ತಿ. ಧರ್ಮಗ್ರಂಥವಿಲ್ಲದಿರುವುದರಿಂದಲೇ ಅಲ್ಲಿ ಮೂಲಭೂತವಾದಕ್ಕೆ ಅವಕಾಶವಿಲ್ಲ. ಅದು ಕಾಲಕಾಲಕ್ಕೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತ, ಬದಲಾಗುತ್ತ, ಬೆಳೆಯುತ್ತ ಬಂದಿದೆ. ಧರ್ಮಗ್ರಂಥವಿಲ್ಲದಿರುವುದು ಅದಕ್ಕೆ ಅಡಚಣೆಯಾಗಿಲ್ಲ. ಬದಲಾಗಿ ದೊಡ್ಡ ಸೌಲಭ್ಯವನ್ನೇ ಒದಗಿಸಿದೆ. ಕಾಶಿ, ಶಿವಯೋಗಮಂದಿರಗಳಂಥ ಸಂಸ್ಥೆಗಳ ಸಾಂಪ್ರದಾಯಿಕ ಸಂಸ್ಕೃತ ವಿದ್ಯಾಭ್ಯಾಸದ ಬದಲು ಆಧುನಿಕ ಶಿಕ್ಷಣ ಪಡೆದು ಬಂದ ಪ್ರಾಜ್ಞಾರು ಇತ್ತೀಚೆಗೆ ದೊಡ್ಡ ಸಂಖ್ಯೆಯಲ್ಲಿ ವೀರಶೈವ ಮಠಾಧಿಪತಿಗಳಾಗಿ ಬರತೊಡಗಿದ ಮೇಲೆ ವೀರಶೈವ ಧರ್ಮಕ್ಕೆ ಆಧುನಿಕತೆಯ ಸ್ವರೂಪ ಬರತೊಡಗಿದೆ. ಈ ಜನ ತಮ್ಮ ಕಾಲಕ್ಕೆ ಅಗತ್ಯವಾದ ರೀತಿಯಲ್ಲಿ ತಮ್ಮ ಆಧ್ಯತೆಗಳನ್ನು ಗುರುತಿಸಿಕೊಂಡು ಮುನ್ನಡೆಯಲು ಇದರಿಂದ ಸಾಧ್ಯವಾಗಿದೆ. ಶಿಕ್ಷಣ ಪ್ರಸಾರದಲ್ಲಿ, ಮೂಢನಂಬಿಕೆಗಳನ್ನು ಹೋಗಲಾಡಿಸುವುದರಲ್ಲಿ, ಜಾತ್ಯತೀತತೆಯನ್ನು ಆಚರಣೆಗೆ ತರುವುದರಲ್ಲಿ, ಗ್ರಂಥಪ್ರಕಟಣೆಯಲ್ಲಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ, ಕನ್ನಡ ಭಾಷೆ-ಸಾಹಿತ್ಯಗಳ ಅಭಿವೃದ್ಧಿಯಲ್ಲಿ, ಜನಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರಲ್ಲಿ ವೀರಶೈವ ಮಠಗಳು ತೋರಿಸಿರುವ ಕಾಳಜಿ ಉಳಿದ ಧರ್ಮಪೀಠಗಳಿಗೂ ಮಾದರಿಯಾಗಿದೆ. ಇತ್ತೀಚೆಗೆ ಪಟ್ಟಾಧಿಕಾರ ಸಮಾರಂಭವನ್ನು ‘ಸಮಾಜಸೇವಾ ದೀಕ್ಷಾ ಸಮಾರಂಭ’ ಎಂದು ಕರೆಯುತ್ತಿರುವುದು ಒಂದು ಮಹತ್ವದ ಪಲ್ಲಟವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮಗಳ ಪ್ರಯೋಜನ ಲಿಂಗಾಯಿತರಿಗಷ್ಟೇ ಸೀಮಿತವಾಗಿರದೆ, ಸಮಾಜದ ಕೆಳವರ್ಗಗಳಿಗೂ ತಲುಪಿದೆ. ೨೦ನೆ ಶತಮಾನದ ಮಧ್ಯಭಾಗದಲ್ಲಿ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ, ಪ್ರಸಾದನಿಲಯಗಳನ್ನು ನಡೆಸಿ ಶಿಕ್ಷಣ ಪ್ರಸಾರದಲ್ಲಿ ಮಠಗಳು ನಿರ್ವಹಿಸಿದ ಪಾತ್ರವಂತೂ ಚರಿತ್ರಾರ್ಹವಾದದ್ದು. ಅದರಿಂದಾಗಿ ಕೆಳವರ್ಗಗಳ ಬದುಕಿಗೆ ಬಂದ ಘನತೆ ಕ್ರಾಂತಿಕಾರಕವಾದದ್ದು. ಹಾಗೆ ನೋಡಿದರೆ ಶಿಕ್ಷಣಪ್ರಸಾರ ವೀರಶೈವ ಧರ್ಮದ ಸೈದ್ಧಾಂತಿಕ ಅಜೆಂಡಾದಲ್ಲಿ ಇರಲೇ ಇಲ್ಲ. ಅದರ ಅಗತ್ಯವನ್ನು ಅರ್ಥ ಮಾಡಿಕೊಂಡ ಮಠಾಧೀಶರೇ ಹೊಸದಾಗಿ ಇದನ್ನು ಸೇರಿಸಿಕೊಂಡರು. ವೀರಶೈವ ಧರ್ಮದ ಈ ವಿಕಸನಶೀಲತೆಯನ್ನು ಉಳಿಸಿಕೊಳ್ಳುವುದು ಅವಶ್ಯ.

* “ಶೂನ್ಯ ಸಂಪಾದನೆ: ಚಿಂತನೆ-ಮರುಚಿಂತನೆ (ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ೨೦೦೪) ಗ್ರಂಥಕ್ಕೆ ಬರೆದ ಸಂಪಾದಕೀಯದ ವಿಸ್ತೃತ ಮತ್ತು ಪರಿಷ್ಕೃತ ರೂಪ.