ನವ್ಯರು ಕೂಡ ಆಧುನಿಕತೆಯನ್ನು ಸಾರಾಸಗಟಾಗಿ ಸ್ವೀಕರಿಸಲಿಲ್ಲ. ಆಧುನಿಕತೆಯ ಪರಿಣಾಮವಾಗಿ ಹುಟ್ಟಿಕೊಂಡ ಮನುಷ್ಯ ಸಂಬಂಧಗಳ ಬಿಕ್ಕಟ್ಟು, ಏಕಾಕಿತನ, ಪರಕೀಯತೆ, ಕೌಟುಂಬಿಕ ಕರ್ಷಣ, ಅನಾಥ ಪ್ರಜ್ಞೆ, ಸಂವಹನದ ತೊಡಕು, ನೈತಿಕ ಜವಾಬ್ದಾರಿ ಇತ್ಯಾದಿಗಳನ್ನು ಅವರು ಸರಿಯಾಗಿ ಗುರುತಿಸಿದ್ದರು. ಇವುಗಳನ್ನು ಅವರು ಸಮಸ್ಯೆಗಳೆಂದೇ ಗ್ರಹಿಸಿದ್ದರೇ ಹೊರತು, ವೈಭವೀಕರಿಸಲಿಲ್ಲ. ಅದಕ್ಕಾಗಿಯೇ ಇಲ್ಲಿ ದುರಂತಗಳು ಹೆಚ್ಚು ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂಬ ಆತಂಕ, ಶಾಂತಿನಾಥ ದೇಸಾಯಿಯಂಥವರು ಆಧುನಿಕತೆಯ ಪರವಾಗಿ ಕಂಡರೂ, ಅವರು ವೈಯಕ್ತಿಕ ನೈತಿಕ ಜವಾಬ್ದಾರಿಗೆ ಬದ್ಧರಾಗಿದ್ದರು. ದೈಹಿಕ ಸಂಬಂಧಗಳನ್ನು ಮುಕ್ತ ಮನಸ್ಸಿನಿಂದ ನೋಡಬೇಕೆಂಬುದು ಅವರ ಆಶಯವಾಗಿತ್ತೇ ಹೊರತು, ಮುಕ್ತ ಲೈಂಗಿಕತೆಯನ್ನೇನೂ ಅವರು ಪುರಸ್ಕರಿಸಲಿಲ್ಲ. ಜೊತೆಗೆ, ನವ್ಯ ಕಾದಂಬರಿಕಾರರು ಆಧುನಿಕತೆ ಹೊಸದಾಗಿ ಸೇರಿಸಿದ ಅನಿಷ್ಟ ಪರಿಣಾಮಗಳ ಬಗ್ಗೆ ಜಾಗೃತವಾಗಿದ್ದರು. ಅದು ಒದಗಿದ ಸೌಲಭ್ಯ, ಸ್ವಾತಂತ್ರ್ಯಗಳಂತೆ ಅದರ ಕರಾಳ ಮುಖವನ್ನೂ ಕಂಡಿದ್ದರು. ಲಂಕೇಶರ “ಬಿರುದು” (೧೯೬೭) ಕಾದಂಬರಿಯಲ್ಲಿ ಹಳ್ಳಿಗಾಡಿನಿಂದ ಬಂದ ಮುಗ್ಧ ಯುವಕನನ್ನು ನಗರದ ಆಧುನಿಕತೆ ಭಯಂಕರ ದುಃಸ್ವಪ್ನವಾಗಿ ಕಾಡುತ್ತದೆ. ಗಿರಿಯವರ “ಗತಿ, ಸ್ಥಿತಿ” (೧೯೭೧) ಯದೂ nightmarish ಅನುಭವವೇ. ಯಶವಂತ ಚಿತ್ತಾಲರ “ಶಿಕಾರಿ” (೧೯೭೯) ಆಧುನಿಕತೆ ಸೃಷ್ಟಿಸಿರುವ ಕಾರ್ಪೋರೇಟ್ ಜಗತ್ತಿನ ನಿರ್ದಯ ಆಕ್ರಮಕ ಸ್ವರೂಪವನ್ನೂ, ಅದು ವ್ಯಕ್ತಿಯನ್ನು ನಿಸ್ಸಹಾಯಕನನ್ನಾಗಿ ಮಾಡಿ ವ್ಯವಸ್ಥಿತವಾಗಿ ಬೇಟೆಯಾಡುವುದನ್ನೂ ಪರಿಣಾಮಕಾರಿಯಾಗಿ ಚಿತ್ರಿಸುವ ಕಾದಂಬರಿ, ದೇಸಾಯರ “ವಿಕ್ಷೇಪ” (೧೯೭೧) ಆಧುನಿಕತೆ ಮನುಷ್ಯ ಸಂಬಂಧಗಳ ನಡುವೆ ಹುಟ್ಟಿಸಿದ ಬಿರುಕನ್ನು ಚಿತ್ರಿಸಿದರೆ. “ಓಂ ನಮೋ” (೧೯೯೮) ಜೈನ ಧರ್ಮವನ್ನು ಆಧುನಿಕತೆಯ ಪರಿಪ್ರೇಕ್ಷ್ಯದಲ್ಲಿಟ್ಟು ನೋಡುತ್ತದೆ.

ಆಧುನಿಕತೆಯ ಆಗಮನದಿಂದ ಭಾರತದ ಗ್ರಾಮೀಣ ಸಮಾಜವ್ಯವಸ್ಥೆ ತೀವ್ರ ಬದಲಾವಣೆಗೆ ಒಳಗಾಗತೊಡಗಿರುವ ಚಿತ್ರಗಳನ್ನು ಪಂಥಭೇದವಿಲ್ಲದೆ ಅನೇಕ ಕಾದಂಬರಿಕಾರರು ಕೊಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ ಈ ಬದಲಾವಣೆಗಳಿಂದ ಒಳಿತಿಗಿಂತ ಕೆಡುಕೇ ಹೆಚ್ಚಾದಂತೆ ಅವರ ನಿಲುವುಗಳಿವೆ. ರಾವಬಹಾದ್ದೂರರ “ಗ್ರಾಮಾಯಣ” (೧೯೫೭), ಚಂದ್ರಶೇಖರ ಕಂಬಾರರ “ಕರಿಮಾಯಿ” (೧೯೭೮), ಪೂರ್ಣಚಂದ್ರ ತೇಜಸ್ವಿಯವರ “ಜುಗಾರಿಕ್ರಾಸ್” (೧೯೯೪), ಶಿವರಾಮಕಾರಂತರ “ಚೋಮನ ದುಡಿ”, ಕುವೆಂಪು ಅವರ “ಕಾನೂರು ಹೆಗ್ಗಡತಿ” (೧೯೩೬), ಮಾಸ್ತಿಯವರ “ಚಿಕ್ಕವೀರರಾಜೇಂದ್ರ”, (೧೯೫೬), ಭೈರಪ್ಪನವರ “ವಂಶವೃಕ್ಷ” (೧೯೫೬) ಮೊದಲಾದ ಕಾದಂಬರಿಗಳನ್ನು ಹೆಸರಿಸಬಹುದು.

ನಂತರ ಬಂದ ಬಂಡಾಯ ಸಾಹಿತ್ಯ ಶೋಷಣೆಯ ಮುಖ್ಯ ವಸ್ತುವಿಗೆ ಮರಳಿ ಬಂತು. ಬಂಡಾಯ ಸಂಘಟನೆಯೊಂದಿಗೆ ಗುರುತಿಸಿಕೊಂಡ ಅನೇಕ ಜನ ಲೇಖಕರು ಶೋಷಣೆಯ ಹಲವಾರು ಚಿತ್ರಗಳನ್ನು ಕೊಟ್ಟಿದ್ದಾರೆ. ಅಂಥ ಚಿತ್ರಗಳಲ್ಲಿ ಮೇಲುವರ್ಗದ ಜನ ಕೆಳವರ್ಗ-ಕೆಳಜಾತಿಗಳನ್ನು ದಮನ ಮಾಡುವ ಕಥೆಗಳಿವೆ. ಮುಖ್ಯವಾಗಿ ಇದು ಆರ್ಥಿಕ ಶೋಷಣೆ, ಅನುಷಂಗಿಕವಾಗಿ ಲೈಂಗಿಕ ಶೋಷಣೆಯೂ ಹೌದು. ಅವರು ಚಿತ್ರಿಸಿರುವ ಬದುಕು, ಸಾಮಾಜಿಕ ಅನ್ಯಾಯ, ಆರ್ಥಿಕ ಅಮಾನತೆ, ಮೇಲೆವರ್ಗದವರ ದೌರ್ಜನ್ಯ, ಜಾತಿಯ ಅವಮಾನ, ದಲಿತರ ಬವಣೆ-ಇವೆಲ್ಲ ವಾಸ್ತವಗಳೇ. ಅವರ ಸಿಟ್ಟು ಪ್ರಾಮಾಣಿಕವಾದದ್ದು ಎಂಬುದೂ ನಿಜ. ಆದರೆ ಅವರು ಕೊಡುವ ಚಿತ್ರಗಳು ಮೇಲು ಮೇಲಿನ ಸಂಗತಿಗಳಿಗೆ, ನಮಗೀಗಾಗಲೇ ಗೊತ್ತಿರುವ ವಿಷಯಗಳಿಗೆ ಸೀಮಿತವಾಗಿವೆ. ಸಾಮಾಜಿಕ ವ್ಯವಸ್ಥೆಯ ಬಗೆಗಿನ ನಮ್ಮ ಅರಿವನ್ನು ಹರಿತಗೊಳಿಸುವಷ್ಟು, ಸೂಕ್ಷ್ಮಗೊಳಿಸುವಷ್ಟು ಶಕ್ತಿಯುತವಾಗಿಲ್ಲ. ಸಂಗತಿಗಳ ಹಿಂದೆ ಸಂಕೀರ್ಣ ರಾಜಕೀಯ ಒಳಸುಳಿವುಗಳನ್ನು ಅವು ಹಿಡಿಯುವುದಿಲ್ಲ. ನವ್ಯದ ಸೂಕ್ಷ್ಮ ಬರವಣಿಗೆಯ ವಿರುದ್ಧ ನಿಲುವು ತಳೆದ ಅವರು ಜನಸಾಮಾನ್ಯರಿಗೆ ಅರ್ಥವಾಗಬೇಕೆಂಬ ಉದ್ದೇಶದಿಂದ ಸಂಕೀರ್ಣತೆ, ಕಲೆಗಾರಿಗೆ, ಧ್ವನಿಸೂಕ್ಷ್ಮತೆಗಳನ್ನು ಕೈಬಿಟ್ಟು ವಾಸ್ತವವಾದದ ವಾಚ್ಯಕ್ಕೆ ಇಳಿದರು. ‘ಧ್ವನಿ’ ಎಂದರೆ ‘ಅಬ್ಬರ’ ಎಂದು ತಿಳಿದುಕೊಂಡರು. ಸಂಘರ್ಷವನ್ನು ಕಪ್ಪು-ಬಿಳುಪಿನ ನೆಲೆಯಲ್ಲಿ ನಿಲ್ಲಿಸಿ ಸಮಸ್ಯೆಗಳನ್ನು ಸರಳೀಕರಿಸಿದರು. ಈ ಚಿತ್ರಗಳು ಯಾಂತ್ರಿಕವಾಗಿ ಒಂದರ ನಂತರ ಒಂದು ಉದಾಹರಣೆಗಳನ್ನು ಬೆಳೆಸುತ್ತ ಹೋದವು. ಹೀಗಾಗಿ ಶೋಷಣೆಯ ಪರಿಚಿತ ರೂಪಗಳೇ ಮತ್ತೆಮತ್ತೆ ಕಾಣಿಸಿಕೊಳ್ಳುತ್ತ ಹೋದವೇ ಹೊರತು, ಶೋಷಣೆಯ ಆಳ, ಒಳಸುಳಿ, ಅನೂಹ್ಯ ಮುಖಗಳು ಅನಾವರಣಗೊಳ್ಳಲಿಲ್ಲ. ಪರಿಣಾಮವಾಗಿ, ಈ ಚಿತ್ರಗಳಿಗೆ ಕಾಡುವ ಗುಣ ಇಲ್ಲ. ನವೋದಯದ ಕಾಲದ ಕಾರಂತರು ಸೃಷ್ಟಿಸಿದ ಚೋಮನಂಥ ಇನ್ನೊಂದು ಪ್ರಭಾವಶಾಲಿ ರೂಪಕಪಾತ್ರ (Archetype)ಕೂಡ ಈ ಕಾಲದಲ್ಲಿ ಹುಟ್ಟಲಿಲ್ಲವೆಂಬುದು ಗಮನಿಸಬೇಕಾದ ವಿಷಯ. ತುಳಿತಕ್ಕೊಳಗಾದವರ ನೋವನ್ನು ತುಳಿತಕ್ಕೊಳಗಾದವರು ಮಾತ್ರ ನೈಜವಾಗಿ ಚಿತ್ರಿಸಬಲ್ಲರೆಂಬ ವಾದವನ್ನು ಅಸಂಬದ್ಧ ಅತಿಗೆ ಒಯ್ದವರು ಈ ಬಗ್ಗೆ ಯೋಚಿಸಬೇಕು.

ಹಾಗೆ ನೋಡಿದರೆ, ಬಂಡಾಯದಂತೆ ವಸ್ತುವಿನ ಕಚ್ಚಾತನವನ್ನೇ ನೆಚ್ಚಿಕೊಂಡು ಬರೆದ ದಲಿತ ಆತ್ಮಕಥೆಗಳೇ ನಮ್ಮನ್ನು ಹೆಚ್ಚಾಗಿ ತಟ್ಟುತ್ತವೆ. ಅಲ್ಲಿ ಸಾಹಿತ್ಯಪ್ರಕಾರದ ಕಟ್ಟುನಿಟ್ಟಿನ ನಿಯಮಗಳಿಲ್ಲ. ಧ್ವನಿಯೂ ಕಡಿಮೆ. ಬರವಣಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಪಡೆದದ್ದಲ್ಲ. ಆದರೂ ತಮ್ಮ ಗಟ್ಟಿಯಾದ, ನೈಜವಾದ, ಕಚ್ಚಾ ಅನುಭವಗಳಿಂದಲೇ ಅವು ನಮ್ಮನ್ನು ಕಲಕುತ್ತವೆ. ಯೋಚನೆಗೆ ಹಚ್ಚುತ್ತವೆ. ಈ ದಿಕ್ಕಿನಲ್ಲಿ ಮರಾಠಿ ದಲಿತ ಆತ್ಮಕಥೆಗಳು ಸಾಧಿಸಿದ ಯಶಸ್ಸು ಇನ್ನೂ ಕನ್ನಡದಲ್ಲಿ ಸಾಧ್ಯವಾಗಿಲ್ಲ. ತಮ್ಮ ವಿಶಿಷ್ಟ ಅನುಭವದ ಅಭಿವ್ಯಕ್ತಿಗಳಾಗಿ ಮರಾಠಿ ದಲಿತರು ‘ಆತ್ಮಕಥೆ’ ಎಂಬ ಸಾಹಿತ್ಯ ಪ್ರಕಾರವನ್ನು ವಿಶಿಷ್ಟವಾಗಿ ಬಳಸಿಕೊಂಡಂತೆ ನಮ್ಮ ದಲಿತರು ಮಾಡಲಿಲ್ಲ. ಈಗಾಗಲೇ ಬಂದಿರುವ ಆರೆಂಟು ದಲಿತ ಆತ್ಮಕಥೆಗಳು ವೈಯಕ್ತಿಕವಾಗಿ ಗಮನ ಸೆಳೆದಿದ್ದರೂ, ಒಟ್ಟಾಗಿ ಅವು ಒಂದು ಹೊಸ ಅಭಿವ್ಯಕ್ತಿ ಮಾರ್ಗವನ್ನು (Trend) ಹಾಕಿಕೊಟ್ಟಿಲ್ಲ.

ಕಾದಂಬರಿಯಲ್ಲಿ ದೇವನೂರ ಮಹಾದೇವರು ಸಾಧಿಸಿದ ಯಶಸ್ಸು ಮಾತ್ರ ಗಮನಾರ್ಹವಾದದ್ದು. ತಮ್ಮ “ದ್ಯಾವನೂರು” (೧೯೭೩) ಸಂಕಲನದ ಕತೆಗಳಲ್ಲಿ ದೇವನೂರರು ನವ್ಯದ ಮುಖ್ಯ ಮಾರ್ಗದಲ್ಲಿಯೇ ಒಂದು ಕಿರುದಾರಿಯನ್ನು ಹುಡುಕಿಕೊಂಡು ದಲಿತ ಅನುಭವಗಳಿಗೆ ಸೂಕ್ಷ್ಮ ಅಭಿವ್ಯಕ್ತಿ ಕೊಡಲು ಯತ್ನಿಸಿದರು. ಮುಂದೆ “ಒಡಲಾಳ”ದಲ್ಲಿ (೧೯೭೮) ನವ್ಯ ಮಾರ್ಗಗಳನ್ನು ಬಿಟ್ಟುಕೊಟ್ಟು ವಾಸ್ತವ ಚಿತ್ರಣಕ್ಕೆ ಕೈಹಾಕಿದರು. “ಕುಸುಮಬಾಲೆ”ಯಲ್ಲಿ (೧೯೮೮) ವಾಸ್ತವದ ಹಾದಿಯನ್ನೂ ಬಿಟ್ಟು, ದೇಶೀ ಕಥನ ಪರಂಪರೆಯ ಆಧಾರದಿಂದ ರೂಪಿಸಿಕೊಂಡ ವಾಸ್ತವದಾಚೆಯ ಕಥನತಂತ್ರ, ಭಾಷೆ, ಶೈಲಿಗಳನ್ನು ಬಳಸಿದರು. ಅವರ ಎಲ್ಲ ಕಥೆ-ಕಾದಂಬರಿಗಳಲ್ಲಿ ಆಧುನಿಕತೆ ತಂದ ಹೊಸ ಬದಲಾವಣೆ, ತಳಮಳ, ಪರಿಣಾಮ, ಎಚ್ಚರಗಳಿವೆ. ‘ಡಾಂಬರು ಬಂದುದು’ ಕತೆಯಲ್ಲಿಯ ಡಾಂಬರು, “ಒಡಲಾಳ”ದ ಪೋಲಿಸರು, “ಕುಸುಮಬಾಲೆ”ಯ ದಸಂಸದ ಸುಶಿಕ್ಷಿತ ಯುವಕರು ಆಧುನಿಕತೆಯ ವಿವಿಧ ರೂಪಗಳನ್ನು ಸೂಚಿಸುತ್ತಾರೆ. ಬಂಡಾಯದವರಿಗಿಂತ ಯಶಸ್ವಿಯಾಗಿದ್ದಾರೆ. ಅವರ ಬರವಣಿಗೆಯ ಕಲಿಗಾರಿಕೆಯಂತೂ ಯಾವ ಬಂಡಾಯ ಲೇಖಕನಲ್ಲೂ ಕಾಣದಂಥದು.

ಬಂಡಾಯದ ಲೇಖಕರು ತಮ್ಮಲ್ಲಿ ಸಾಕಷ್ಟು ನೈಜ ಅನುಭವ, ಘೋಷಿತ ಪ್ರಗತಿಪರ ವಿಚಾರಗಳಿದ್ದೂ ಚೋಮನಂಥ ಒಂದು ಸಮರ್ಥ ಪ್ರಾತಿನಿಧಿಕ ರೂಪಕವನ್ನು ಸೃಷ್ಟಿಸಲಿಲ್ಲ ಎಂದೆ. ಆದರೆ ದೇವನೂರು ಮಹಾದೇವರು “ಒಡಲಾಳ”ದ ಸಾಕವ್ವನಂಥ ದಲಿತ ಲೋಕದ ಹೊಸ ರೂಪಕವೊಂದನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೋಮ ಒಂದು ಗಂಭೀರ ಪಾತ್ರವಾದ ಸಾಕವ್ವ ಒಂದು ಬಗೆಯ ಕಾಮಿಕ್ ಪಾತ್ರ. ಮಿಖಾಯಿಲ್ ಬಾಖ್ತಿನ್ನನ ಪರಿಭಾಷೆಯಲ್ಲಿ ಅದು ಒಂದು ಧೂರ್ತ ಪಾತ್ರ (Trickster). ಇಂಥ ಜನ ಪರಂಪರಾಗತ ಸಮಾಜ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾದವರು. ಬದುಕುವದಕ್ಕೂ ಅವಕಾಶವಿಲ್ಲದಂತೆ ಮೂಲೆಗೆ ಒತ್ತಲ್ಪಟ್ಟವರು. ಈ ಸಮಾಜವನ್ನು ನೇರವಾಗಿ ಎದುರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ಬದುಕುವುದಕ್ಕಾಗಿ ಅನೇಕ ಬಗೆಯ ಯುಕ್ತಿ, ತಂತ್ರ, ಚಮತ್ಕಾರ, ಕಪಟತನ, ಸುಳ್ಳು, ಕಳವು ಮೊದಲಾದ ಉಪಾಯಗಳನ್ನು ಬಳಸುತ್ತಾರೆ. ಬಾಖ್ತಿನ್ ಹೇಳುವಂತೆ, ಅವರಿಗೆ ಎಲ್ಲವನ್ನೂ ಅಪಹಾಸ್ಯ ಮಾಡುವ, ದೊಡ್ಡವರೆನಿಸಿಕೊಂಡವರನ್ನು ಒಯ್ಯುವ ಹಕ್ಕು ಇರುತ್ತದೆ. ಆದಿಮ ಕೋಪದಿಂದ ವ್ಯಂಗ್ಯವಾಗಿ ಮಾತಾಡಲು, ಇತರರ ಮೇಲೆ ಕೂಗಾಡಲು ಅವಕಾಶವಿದೆ. ಸಾಕವ್ವ ಈ ವರ್ಣನೆಗೆ ಸಹಜವಾಗಿ ಹೊಂದಿಕೊಳ್ಳುತ್ತಾಳೆ. ಜೊತೆಗೆ, ತನ್ನ ವಿಚಿತ್ರ ತರ್ಕ, ಕೂಗಾಟದಿಂದ ಹಾಸ್ಯಾಸ್ಪದಳೂ ಆಗುತ್ತಾಳೆ. ಆದರೆ ಒಳಗೆ ಗಟ್ಟಿಯಾಗಿ ಬದುಕುವ ಛಲವನ್ನು, ಸಮಾಜವನ್ನು ಎದುರಿಸಿ ನಿಲ್ಲುವ ಧೈರ್ಯವನ್ನು ತೋರಿಸುತ್ತಾಳೆ.

ಮನುಜ ಅವರ “ಮಾಗಿ” (೧೯೮೭) ಮತ್ತು “ಸೂರಪ್ಪ” (೨೦೦೬) ಕಾದಂಬರಿಗಳು ದಲಿತರಲ್ಲಿಯೂ ಇರುವ ಘನತೆ ಆತ್ಮಗೌರವಗಳ ಬಗೆಗಿನ ಕಾಳಜಿಗಳನ್ನು ಎತ್ತಿತೋರಿಸುತ್ತವೆ. ಗೀತಾ ನಾಗಭೂಷಣರ “ಬದುಕು” (೨೦೦೧), ಮಲ್ಲಿಕಾರ್ಜುನ ಹಿರೇಮಠರ “ಹವನ” (೨೦೦೧) ದಲಿತ ಲೋಕದ ಅನೇಕ ವಿವರಗಳನ್ನು ಕೊಡುವುದರ ಜೊತೆಗೆ, ಅಲ್ಲಿಯ ಇರುವ ಮಾನವೀಯ ರಾಗ-ದ್ವೇಷಗಳ, ಅದಮ್ಯ ಪ್ರೀತಿಯ ಕಥೆ ಹೇಳುತ್ತವೆ. ಎಲ್ಲ ಕಡೆಗೂ ಆಧುನಿಕತೆಯ ಪ್ರವೇಶದ ಎಳೆ ಇದ್ದೇ ಇದೆ.

ಸಾಂಪ್ರದಾಯಿಕ ಊಳಿಗಮಾನ್ಯ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ದಮನಕ್ಕೊಳಗಾಗಿದ್ದ ದಲಿತರಿಗೆ ಆಧುನಿಕತೆ ಅನೇಕ ರೀತಿಯಲ್ಲಿ ಒಂದು ವರವಾಗಿ, ಬಿಡುಗಡೆಯ ಮಾಧ್ಯಮವಾಗಿ ಕಂಡದ್ದು ಸಹಜವೇ ಆಗಿದೆ. ಔದ್ಯೋಗಿಕರಣ, ನಗರವಾಸ, ಸರಕಾರಿ ಶಾಲಾ ಶಿಕ್ಷಣ, ರೈಲು, ಬಸ್ಸು, ಹೋಟೇಲು, ಸರಕಾರಿ ನೌಕರಿ, ಪ್ರಜಾಪಭುತ್ವ, ಬ್ರಿಟಿಷ್ ನ್ಯಾಯಪದ್ಧತಿ, ಮೀಸಲಾತಿ ಇತ್ಯಾದಿಗಳೆಲ್ಲ ಜಾತಿಪದ್ದತಿ, ಅಸ್ಪೃಶ್ಯತೆಗಳನ್ನು ಮುರಿದು ಹಾಕುವ ಸಾಧನೆಗಳಾಗಿ ಒದಗಿಬಂದದ್ದು ಆಧುನಿಕತೆಯಿಂದಾಗಿ ಎಂಬುದರಲ್ಲಿ ಸಂಶಯವಿಲ್ಲ. ಹಳ್ಳಿಗಳ ನರಕಸದೃಶ್ಯ ಬದುಕಿನಿಂದ ಪಾರಾಗಿ ಹೊರಬರುವುದಕ್ಕೆ ಆಧುನಿಕತೆ ಅವರಿಗೆ ಬಹಳಷ್ಟು ಸಹಾಯ ಮಾಡಿದೆ. ಹೀಗಾಗಿ ಆಧುನಿಕತೆಯ ಅಪಾಯಗಳು ಅವರ ಅರಿವಿಗೆ ಅಷ್ಟಾಗಿ ಬಂದಿಲ್ಲ. “ಹವನ” ಕಾದಂಬರಿ ಲಂಬಾಣಿ ಕುಟುಂಬವೊಂದರ ಎಡಬಿಡಂಗಿ ಅವಸ್ಥೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಸುಶಿಕ್ಷಿತನಾಗಿ ನೌಕರಿಗೆ ಸೇರುವ ಲಂಬಾಣಿ ಯುವಕ ತನ್ನ ತಂದೆ-ತಾಯಿಗಳ ಸಾಂಪ್ರದಾಯಿಕತೆಗೆ ಹೊಂದಿಕೊಳ್ಳದೆ ಚಡಪಡಿಸಿದರೆ, ತಂದೆ-ತಾಯಿಗಳು ಆಧುನಿಕತೆಯೊಂದಿಗೆ ಹೊಂದಿಕೊಳ್ಳಲಾರದೆ ಚಡಪಡಿಸುತ್ತಾರೆ. ನಮ್ಮ ಊರಿನ ಸುಶಿಕಷಕ್ಷಿತ ದಲಿತ ಯುವಕನೊಬ್ಬ ಧಾರವಾಡದ ನಮ್ಮ ಮನೆಗೆ ಬಂದರೆ ಯಾವ ಮುಜುಗರವೂ ಇಲ್ಲದೆ ಅವನನ್ನು ಮನೆಯ ಡ್ರಾಯಿಂಗ್ ರೂಮಿನ ಸೋಫಾದ ಮೇಲೆ ಕೂಡಿಸಬಹುದು. ತಾನು ಕುಡಿಯಲು ಬಳಸಿದ ಕಪ್ಪು-ಬಸಿಗಳನ್ನು ಅವನು ಯಾವ ಹಿಂಜರಿಕೆಯೂ ಇಲ್ಲದೆ ಹಾಗೆಯೇ ಇಟ್ಟುಹೋಗಬಹುದು. ಅದೇ, ನಮ್ಮ ಹಳ್ಳಿಯ ಸಂಪ್ರದಾಯಸ್ಥ ಮನೆಯಲ್ಲಿ ಇದನ್ನು ಸುಲಭವಾಗಿ ಊಹಿಸುವುದು ಇವತ್ತಿಗೂ ಸಾಧ್ಯವಿಲ್ಲ. ಅದು ಇಬ್ಬರಿಗೂ ಮುಜುಗರಕ್ಕೆ ಕಾರ‍ಣವಾಗುತ್ತದೆ. ಇಂಥ ಅನೇಕ ಕಾರಣಗಳಿಗಾಗಿ ದಲಿತರು ಆಧುನಿಕತೆಯನ್ನು ಮತ್ತು ಅದರ ಉತ್ಪನ್ನಗಳಾದ ನಗರಗಳನ್ನು ಸ್ವಾಗತಿಸಿದರೆ ಆಶ್ಚರ್ಯವಿಲ್ಲ.

ಇದರ ನಂತರ ಬಂದದ್ದು Post-modernism, ಇದನ್ನು ‘ನವ್ಯೋತ್ತರ’ ಎಂದು ಕರೆಯಬೇಕೊ, ‘ಆಧುನಿಕೋತ್ತರ’ ಎಂದು ಕರೆಯಬೇಕೊ ಎಂಬುದರ ಬಗ್ಗೆ ಸ್ವಲ್ಪ ಗೊಂದಲವಿತ್ತು. ಇದು ಕೇವಲ ನವ್ಯತೆಗೆ ಸಂಬಂಧಿಸಿದ ವಿಷಯವಲ್ಲ. ಆಧುನಿಕತೆ ಬಂದ ನಂತರದ ಪರಿಣಾಮಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿ ರೂಪಿಸಿದ ಚಿಂತನೆಗಳನ್ನು ಇದು ಪ್ರತಿನಿಧಿಸುತ್ತದೆ ಮತ್ತು ಸಾಹಿತ್ಯವನ್ನು ಒಳಗೊಂಡು ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ನೈತಿಕ ಮೊದಲಾದ ಇಲ್ಲ ಸಂಕಥನಗಳಿಗೂ ಸರಿಯಾಗಿ ಒದಗಿಬರುವುದರಿಂದ ‘ಆಧುನಿಕೋತ್ತರ’ ಎಂಬ ಶಬ್ದವೇ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಹಾಗೆಂದು, ಆ ಶಬ್ದ ಸೂಚಿಸುವಂತೆ ‘ಆಧುನಿಕತೆ’ಯ ಹಂತ ಮುಗಿದು ಇನ್ನೊಂದು ಆರಂಭವಾಗಿದೆಯೆಂದೇನೂ ಅರ್ಥವಲ್ಲ. ನಾವಿನ್ನೂ ಆಧುನಿಕತೆಯ ಹೊಸ ಹೊಸ ರೂಪಗಳನ್ನು ಎದುರಿಸುತ್ತಲೇ ಇದ್ದೇವೆ. ಆಧುನಿಕೋತ್ತರ ಚಿಂತನೆಗಳು ಆಧುನಿಕತೆಯ ಪರಿಣಾಮಗಳನ್ನು ಗುರುತಿಸುವ, ಅದರ ದುಷ್ಪರಿಣಾಮಗಳನ್ನು ಎದುರಿಸುವ ಮಾರ್ಗಗಳ ಶೋಧನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿವೆ. ಅದಕ್ಕಾಗಿಯೇ ಇದನ್ನು ‘Trans-modernism’ ಎಂದು ಕರೆಯಬೇಕೆಂದು ಕೆಲವರು ಸೂಚಿಸಿದ್ದಾರೆ.

ಆಧುನಿಕೋತ್ತರ ಚಿಂತನೆಗಳು ಆಧುನಿಕತೆಯನ್ನು ಕುರುಡಾಗಿ ಒಪ್ಪಿಕೊಳ್ಳುವುದಿಲ್ಲ ವೈಜ್ಞಾನಿಕ ದೃಷ್ಟಿಕೋನ, ತರ್ಕಬದ್ಧ ಚಿಂತನೆ, ವಾಸ್ತವತಾವಾದಗಳೇ ಎಲ್ಲ ಸಾಮಾಜಿಕ ರೋಗಗಳಿಗೂ ಮದ್ದೆಂದು ಈಗ ಅನಿಸುತ್ತಿಲ್ಲ. ಆಧುನಿಕತೆ ಈಗ ತಿರುಗಿ ಬರಲಾರದಷ್ಟು ಮುಂದೆ ಹೋಗಿ, ಬದುಕಿನ ಎಲ್ಲ ಕ್ಷೇತ್ರಗಳನ್ನೂ ಆವರಿಸಿಬಿಟ್ಟಿದೆ. ಅದು ಮನುಷ್ಯನ ಬದುಕಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದರೂ, ತನ್ನ ಹಿಂದೆ ಪರಿಹರಿಸಲು ಅಸಾಧ್ಯವಾದ ಅನೇಕ ಸಮಸ್ಯೆಗಳನ್ನು ಬಿಟ್ಟುಹೊರಟಿದೆ. ಅಂಥ ಸಮಸ್ಯೆಗಳು, ಆಧುನಿಕತೆಯ ಅಪಾಯಗಳು ಈಗ ಒಂದೊಂದಾಗಿ ಕಾಣತೊಡಗಿವೆ, ಕಣ್ಣೆದುರಿಗೇ ಬೆಳೆಯತೊಡಗಿವೆ. ಔದ್ಯೋಗೀಕರಣದಿಂದಾಗಿ ಉತ್ಪಾದನೆ ಹೆಚ್ಚಿ, ಜೀವನಾವಶ್ಯಕ ವಸ್ತುಗಳು ಎಲ್ಲರಿಗೂ ಅಗ್ಗವಾಗಿ ಸಿಗತೊಡಗಿವೆಯಾದರೂ, ಅದು ಹುಟ್ಟುಹಾಕಿದ ಗ್ರಾಮೀಣ ಕೈಗಾರಿಕೆಗಳ ನಾಶ, ಹಳ್ಳಿಗಳಲ್ಲಿಯ ನಿರುದ್ಯೋಗ, ನಗರಗಳಿಗೆ ವಲಸೆ, ನಗರಗಳಲ್ಲಿಯ ಕೊಳೆಗೇರಿಗಳ ಬೆಳವಣಿಗೆ, ಜಲಮಾಲಿನ್ಯ, ವಾಯುಮಾಲಿನ್ಯ, ಅಪಾಯಕಾರಿ ರಾಸಾಯನಿಕಗಳ ಪ್ರಸರಣ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುತ್ತಿರುವ ಮಣ್ಣಿನ ಸತ್ವನಾಶ ಇತ್ಯಾದಿ ದುಷ್ಪರಿಣಾಮಗಳು ಈಗ ಅಪಾಯದ ಮಟ್ಟ ಮುಟ್ಟಿವೆ. ಇದಕ್ಕಿಂತ ಕಡಿಮೆಯಿಲ್ಲದಂತೆ ಸುಶಿಕ್ಷಿತ ಮಧ್ಯಮ ವರ್ಗದಲ್ಲಿ ಹುಟ್ಟಿಕೊಂಡಿರುವ ಕೊಳ್ಳುಬಾಕುತನದ ಫಲಗಳಾದ ದುರಾಶೆ, ಅತೃಪ್ತಿ, ಸ್ಪರ್ಧೆ, ಅಸೂಯೆ, ಸಾಲಗಾರಿಕೆಗಳನ್ನೂ ಗಮನಿಸಬಹುದು.

ಗ್ರಾಮೀಣ ಕೈಗಾರಿಕೆಗಳಲ್ಲಿ ಪ್ರತಿಯೊಬ್ಬನೂ ಒಂದು ವಸ್ತುವನ್ನು ಪೂರ್ತಿಯಾಗಿ ತಾನೇ ತಯಾರಿಸುತ್ತಿದ್ದ. ಅದರಿಂದಾಗಿ ಆ ವಸ್ತುವಿನ ತಯಾರಿಕೆಯಲ್ಲಿ ತನ್ನ ಪ್ರತಿಭೆಯನ್ನು ಪೂರ್ತಿ ತೊಡಗಿಸಲು ಸಾಧ್ಯವಿತ್ತು. ಹಾಗೆ ತಯಾರಾದ ವಸ್ತು ತನ್ನದು, ತಾನು ಮಾಡಿದ್ದು ಎಂಬ ಹೆಮ್ಮೆ ಇರುತ್ತಿತ್ತು. ಹಳೆಯ ಕಾಲದ ಅಡಕೊತ್ತು, ವಿಭೂತಿ ಪೆಟ್ಟಿಗೆ, ಈಳಿಗೆಗಳಂಥ ಸಣ್ಣ ವಸ್ತುಗಳನ್ನೇ ನೋಡಿ ಎಷ್ಟು ಕಲಾತ್ಮಕವಾಗಿ, ವೈವಿಧ್ಯಪೂರ್ಣವಾಗಿರುತ್ತಿದ್ದವು! ಪ್ರತಿಯೊಂದರಲ್ಲೂ ತಯಾರಿಸಿದವನ ಕೈವಾಡ ಕಾಣುತ್ತಿತ್ತು. ಇವತ್ತು ಯಂತ್ರಗಳಲ್ಲಿ ತಯಾರಾಗುತ್ತಿರುವ ಸಾಮಾನುಗಳನ್ನು ಯಾವ ಕೂಲಿಕಾರನೂ ತನ್ನ ತಯಾರಿಕೆ ಎಂದು ಅಭಿಮಾನದಿಂದ ಹೇಳಿಕೊಳ್ಳಲಾರ. ಬೃಹತ್ ಯಂತ್ರಗಳ ನಡುವೆ ಮನುಷ್ಯನೂ ಒಂದು ಯಂತ್ರವಾಗಿದ್ದಾನೆ. ಅದರಲ್ಲಿ ತಯಾರಾದ ಯಾವುದೂ ಅವನದಲ್ಲ. ಮಾರ್ಕ್ಸ್ ಇದನ್ನು ‘Alenation’ ಎಂಬ ಪರಿಕಲ್ಪನೆಯಿಂದ ವಿವರಿಸಿದ್ದ.

ನಗರೀಕರಣದ ಅವ್ಯಾಹತ ಪ್ರಕ್ರಿಯೆಯಿಂದಾಗಿ ಜನ ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವುದು ಹೆಚ್ಚಾಗಿದೆ. ಒಮ್ಮೆ ನಗರಗಳಿಗೆ ಬಂದ ಸುಶಿಕ್ಷಿತರು ಹಳ್ಳಿಗೆ ತಿರುಗಿಹೋಗುವುದು ಅಪರೂಪ. ಇದರಿಂದಾಗಿ ಸುಶಿಕ್ಷಿತರ, ಪ್ರತಿಭಾವಂತರ ಪ್ರಯೋಜನ ಹಳ್ಳಿಗಳಿಗೆ ಸಿಗುವುದಿಲ್ಲ. ಹಳ್ಳಿಗಳು ಸರಿಯಾದ ರೀತಿಯಲ್ಲಿ ಅಭಿವೃದ್ಧಿಯಾಗುವುದಿಲ್ಲ. ಮತ್ತೊಂದೆಡೆ ನಗರಗಳಲ್ಲಿ ಕೊಳೆಗೇರಿಗಳು ಬೆಳೆಯುತ್ತಿವೆ. ಜನಸಂಖ್ಯೆ, ಕಾರ್ಖಾನೆ, ವಾಹನದಟ್ಟಣೆಗಳಿಂದ ನಗರಗಳು ನೆಮ್ಮದಿ, ಆರೋಗ್ಯ ಕಳೆದುಕೊಂಡಿವೆ.

ಅಣೆಕಟ್ಟುಗಳ ನಿರ್ಮಾಣದಿಂದ ಸಾವಿರಾರು ಎಕರೆಗಳಷ್ಟು ಭೂಮಿ ನೀರಾವರಿಯಾಗುವ ಸಮೃದ್ಧಿಯ ಪರಿಣಾಮಗಳಷ್ಟೇ ಒಡೆದು ಕಾಣುತ್ತಿವೆಯೆ ಹೊರತು, ಅವುಗಳಿಂದ ಮುಳುಗಡೆಯಾಗುವ ಹಳ್ಳಿಗಳ ಪುನರ್ವಸತಿ, ಲಕ್ಷಾಂತರ ಜನರ ಸ್ಥಳಾಂತರ, ಅರಣ್ಯನಾಶ, ಸಾವಿರಾರು ವರ್ಷಗಳಿಂದ ನಿರ್ಧಿಷ್ಟ ಪರಿಸರಕ್ಕೆ ಹೊಂದಿಕೊಂಡಿದ್ದ ಜೀವಿಗಳ ನಾಶ, ಪರಸ್ಪರ ಅವಲಂಬಿತ ಜೀವಸರಪಳಿಯಲ್ಲಾಗುವ ಅಸಮತೋಲನ, ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕಡೆಗೆ ಅಭಿವೃದ್ಧಿಶೀಲರ ಲಕ್ಷ್ಯ ಹೋಗುವುದಿಲ್ಲ. ಸಾಹಿತ್ಯ ಇಂಥ ಗೊಂದಲದ ಪರಿಸ್ಥಿತಿಯಲ್ಲಿ ವಹಿಸಬೇಕಾದ ಪಾತ್ರವೂ ಇದೆ. ನಾ.ಡಿಸೋಜ ಅವರ “ಮುಳುಗಡೆ” ಕಾದಂಬರಿಯಲ್ಲಿ ಒಂದು ಪ್ರಸಂಗ ಬರುತ್ತದೆ. ಅಣೆಕಟ್ಟಿನ ನಿರ್ಮಾಣದಿಂದ ಕೆಲವು ಹಳ್ಳಿಗಳು ಮುಳುಗಡೆಯಾಗುತ್ತವೆ. ಅಂಥ ಒಂದು ಹಳ್ಳಿ. ಅಲ್ಲಿಯ ಎಲ್ಲ ಜನರಿಗೂ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಇನ್ನೊಂದು ಕಡೆಗೆ ಜಾಗ ಒದಗಿಸಲಾಗುತ್ತದೆ. ಹಳ್ಳಿ ಮುಳುಗುವ ಮೊದಲೇ ಅಲ್ಲಿ ಹೋಗಿ ನಿಲ್ಲಬೇಕು. ಒಂದು ಕುಟುಂಬ ಮೊದಲು ತಮ್ಮ ದನ-ಕರುಗಳನ್ನು ಆ ಹೊಸ ಜಾಗಕ್ಕೆ ಸಾಗಿಸಿ, ಕಟ್ಟಿ, ಉಳಿದ ಸಾಮಾನುಗಳನ್ನು ಸಾಗಿಸುವ ಸಲುವಾಗಿ ತಿರುಗಿ ಮೊದಲಿನ ಹಳ್ಳಿಗೆ ಬರುತ್ತದೆ. ಮರುದಿನ ಬೆಳಗಾಗಿ ಏಳುವಷ್ಟರಲ್ಲಿ ಆ ದನ-ಕರುಗಳು ಮತ್ತೆ ಅದೇ ಹಳ್ಳಿಯ ಮನೆಗೆ ಬಂದು ಕೊಟ್ಟಿಗೆಯಲ್ಲಿ ನಿಂತಿರುತ್ತವೆ. ಪಶುಗಳಿಗೂ ಕೂಡ ತಾನು ಹುಟ್ಟಿ ಬೆಳೆದ ಜಾಗದ ಬಗ್ಗೆ ಅಂಥ ಮಮಕಾರದ ಸಂಬಂಧ ಇರುತ್ತದೆ. ಮನುಷ್ಯರ ವಿಷಯ ಹೇಗಿರಬಹುದು? ಇಲ್ಲಿ ಮನೆ-ಮಾರು, ಜಮೀನು, ದೇವರು ಮನುಷ್ಯ ಸಂಬಂಧಗಳನ್ನು ಕಳೆದುಕೊಂಡು ಇನ್ನೆಲ್ಲೋ ಅಪರಿಚಿತ ಜಾಗೆಯಲ್ಲಿ ಹೊಸ ಬದುಕು ಆರಂಭಿಸಬೇಕು. ಅಲ್ಲಿಯ ಹವಮಾನ, ಭೂಗುಣಗಳಿಗೆ ತಕ್ಕುದಾದ ಹೊಸ ಒಕ್ಕಲುತನ ಪದ್ಧತಿಯನ್ನು ಕಲಿಯಬೇಕು. ಇಂಥ ಮಾನವೀಯ ಸಂದರ್ಭಗಳನ್ನು ಹಿಡಿಯುವುದರಲ್ಲಿಯೇ ಕಾದಂಬರಿಯ ಕೃತಕೃತ್ಯತೆಯಿದೆ.

ಮನುಷ್ಯನನ್ನು ಒಳಗೊಂಡಂತೆ ಪರಸ್ಪರ ಅವಲಂಬಿಸಿದ್ದ ಜೀವಸರಪಳಿ ಇಂದು ಹರಿಗಡಿದುಹೋಗಿದೆ. ಒಂದು ದಿನ ಕವಿ ಚೆನ್ನವೀರ ಕಣವಿಯವರು ‘ಧಾರವಾಡದಲ್ಲಿ ಈಚೆಗೆ ಗುಬ್ಬಿಗಳನ್ನು ನೋಡಿದ್ದೀರಾ?’ ಎಂದು ಕೇಳಿದರು. ನಾನು ಲಕ್ಷ್ಯವಹಿಸಿ ನೋಡತೊಡಗಿದೆ. ಇಲ್ಲ. ಧಾರವಾಡದಲ್ಲಿ ಈಗ ಗುಬ್ಬಿಗಳೇ ಕಾಣುತ್ತಿಲ್ಲ. ಬೆಳೆಗಳಿಗೆ ಸಿಂಪಡಿಸಿದ ರಾಸಾಯನಯುಕ್ತ ಕಾಳು ತಿಂದು ಅವು ಸತ್ತುಹೋಗಿವೆ. ಕೇರಳದ ಅರಣ್ಯಗಳಲ್ಲಿ ನಡೆದ ವಿವೇಚನಾರಹಿತ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಸವುಳಾಗಿ ನಿಷ್ಪ್ರಯೋಜಕವಾಗಿದೆ. ಕರ್ನಾಟಕದ ನೀರಾವರಿ ಪ್ರದೇಶಗಳನ್ನು ಆಕ್ರಮಿಸಿ, ಗುತ್ತಿಗೆ ಹಿಡಿದು, ವಿಪರೀತ ರಾಸಾಯನಿಕ ಗೊಬ್ಬರ ಬಳಸಿ ನಾಲ್ಕೈದು ವರ್ಷಗಳಲ್ಲಿ ಭೂಮಿಯನ್ನು ಬಂಜರು ಮಾಡಿ ಮುಂದೆ ಹೋಗುವ ಧನದಾಹಿ ಆಂಧ್ರ ರೈತರ ಉದಾಹರಣೆಗಳು ಬೇಕಾದಷ್ಟಿವೆ. ಈ ಹಾನಿಗಳನ್ನು ಸರಿಪಡಿಸುವವರು ಯಾರು? ಹೋಗಲಿ, ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಬಲ್ಲ ಕಾದಂಬರಿಕಾರರಾದರೂ ಎಲ್ಲಿದ್ದಾರೆ?

ಭಾರತದಲ್ಲಿ ವಸಾಹತುಶಾಹಿ ಮಾಡಿಹೋದ ಅನಾಹುತಗಳನ್ನು ನಾವಿನ್ನು ಸರಿಯಾಗಿ ಲೆಕ್ಕಹಾಕಿಲ್ಲ. ಎಡ್ವರ್ಡ್ ಸೈದ್ ಈ ಕುರಿತ ಸಿದ್ಧಾಂತಗಳನ್ನು ಮಂಡಿಸಿದ ಮೇಲೆ ಈ ಬಗ್ಗೆ ಸಾಕಷ್ಟು ವಿಸ್ತೃತ ಅಧ್ಯಯನಗಳು ನಡೆದಿವೆ. ಆದರೆ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾತ್ರ ನಡೆದಿಲ್ಲ. ವಸಾಹತುಶಾಹಿಯ ಮುಖ್ಯ ಪರಿಣಾಮವೆಂದರೆ, ಆಳುವ ವರ್ಗ ಸೃಷ್ಟಿಸಿದ ವಿಚಾರಪ್ರಣಾಲಿ, ಶಿಕ್ಷಣ ವ್ಯವಸ್ಥೆ, ಸಾಮಾಜಿಕ-ರಾಜಕೀಯ ಸಂಸ್ಥೆಗಳೇ ಶ್ರೇಷ್ಠ ಎಂಬ ಭಾವನೆಯನ್ನು ಅಳಿಸಿಕೊಳ್ಳುವ ವರ್ಗ ವಿವೇಚನೆಯಿಲ್ಲದೆ ಒಪ್ಪಿಕೊಳ್ಳುವುದು. ಎಲ್ಲ ದಿಕ್ಕಿನಿಂದಲೂ ಈ ಕೆಲಸ ಅತ್ಯಂತ ವ್ಯವಸ್ಥಿತವಾಗಿ ಮುಂದುವರಿದಿದೆ. ಅದರಿಂದಾಗಿ ದೇಶೀ ಚಿಂತನ ಮಾದರಿಗಳು ಅವಜ್ಞೆಗೊಳಗಾಗಿವೆ. ಇದನ್ನು Amnasia-‘ವಿಸ್ಮೃತಿ’ ಎಂಬ ಪರಿಕಲ್ಪನೆಯಿಂದ ವಿವರಿಸುವ ಯತ್ನಗಳು ಆರಂಭವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಬುಡಕಟ್ಟು ಜನಾಂಗಗಳಲ್ಲಿ ಇಂಥ ವಿಸ್ಮೃತಿ ಆಗಿಲ್ಲವೆಂಬ ಪ್ರತಿವಾದಗಳೂ ಇವೆ. ಆದರೂ ಈಗಾಗಲೇ ಆಗಿಬಿಟ್ಟಿರುವ ಹಾನಿಯೇನೂ ಕಡಿಮೆಯಾಗಿಲ್ಲ. ಅಲೋಪತಿ ವೈದ್ಯಶಾಸ್ತ್ರದ ಮುಂದೆ ಆಯರ್ವೇದ ಹಿಂದೆ ಬಿದ್ದಿದೆ. ಆಯುರ್ವೇದದಲ್ಲಿ ಪದವಿ ಪಡೆದವರಿಗೆ ತಮ್ಮ ಶಾಸ್ತ್ರದಲ್ಲಿ ತಮಗೇ ನಂಬಿಕೆಯಿಲ್ಲ. ಆಯುರ್ವೇದ ಪಧವೀಧರರು ಅಲೋಪತಿ ಪದ್ಧತಿಯನ್ನೇ ಬಳಸುತ್ತಿದ್ದಾರೆ. ಯಾಕೆಂದರೆ ಆಯುರ್ವೇದಕ್ಕೆ ಅಲೋಪತಿಯ ಪ್ರತಿಷ್ಠೆ ಇಲ್ಲ. ಮತ್ತು ಜನ ಅಲೋಪತಿ ಚಿಕಿತ್ಸೆಯನ್ನೇ ಇಷ್ಟಪಡುತ್ತಾರೆ. ಕೃಷಿ ಕಾಲೇಜಿನಿಂದ ಪದವಿ ಪಡೆವು ಬಂದವನ ಮುಂದೆ ಶತಮಾನಗಳಿಂದ ಸಂಚಿತ ಜ್ಞಾನಕ್ಕೆ ವಾರಸುದಾರನಾದ ರೈತ ಹಳ್ಳಿಗಮಾರನಾಗಿದ್ದಾನೆ. ತೇಜಸ್ವಿಯವರ “ಕರ್ವಾಲೊ” (೧೯೮೦) ಕಾದಂಬರಿ ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಪಶ್ಚಿಮದ ಉಚ್ಚ ಶಿಕ್ಷಣ ಪಡೆದು ಬಂದಿರುವ ಕರ್ವಾಲೋ ಒಬ್ಬ ಪ್ರತಿಷ್ಟಿತ ವಿಜ್ಞಾನಿ. ಜೀವಸರಪಳಿಯಲ್ಲಿ ಕಳೆದುಹೋದ ಒಂದು ಮಹತ್ವದ ಕೊಂಡಿಯಾದ (missing link) ಹಾರುವ ಓತಿಯನ್ನು ಕಂಡುಹಿಡಿಯಲು ಯತ್ನಿಸುತ್ತಿರುವ ಸಂಶೋಧಕ. ಆದರೆ ಅದನ್ನು ಅವನು ನೋಡಿಲ್ಲ. ಅದನ್ನು ನೋಡಿರುವವನು ಮತ್ತು ತೋರಿಸಬೇಕಾದವನು ಹಳ್ಳಿಗಮಾರನಾದ (village idiocy) ಮಂದಣ್ಣ. ಅದನ್ನು ನೋಡಿದ್ದರೂ ಅದರ ಮಹತ್ವವೇನೆಂದು ಅವನಿಗೆ ಗೊತ್ತಿಲ್ಲ. ಮತ್ತು ಆ ತಿಳುವಳಿಕೆಯಿಂದ ಅವನಿಗೆ ಯಾವ ಪ್ರಯೋಜನವೂ ಇಲ್ಲ. ಅವನ ಸಹಾಯದಿಂದ ಖ್ಯಾತಿ ಪಡೆಯುವವನು ಕರ್ವಾಲೋ.

ಭಾರತೀಯ ಸಮಾಜ-ಸಂಸ್ಕೃತಿಗಳನ್ನು ಅಭ್ಯಸಿಸಲೆಂದು ಪಶ್ಚಿಮದಲ್ಲಿ ‘Orientalism’ (ಭಾರತೀಯಶಾಸ್ತ್ರ) ಎಂಬ ಒಂದು ಹೊಸ ಶೈಕ್ಷಣಿಕ ಶಾಸ್ತ್ರವೇ ಆರಂಭವಾಯಿತು. ಈ ಶಾಸ್ತ್ರದ ಮುಖ್ಯ ಉದ್ದೇಶಗಳಲ್ಲಿ ಒಂದು, ಭಾರತದಲ್ಲಿ ಆಡಳಿತ ನಡೆಸಲು ನೇಮಕವಾಗಿ ಬರುತ್ತಿದ್ದ ಬ್ರಿಟಿಷ್ ಅಧಿಕಾರಿಗಳಿಗೆ, ತಾವು ಆಳುವ ಜನಾಂಗ ಎಂಥದು, ಅವರ ಸ್ವಭಾವ ಎಂಥದು, ಅವರ ನಂಬಿಕೆಗಳೇನು, ಆಚರಣೆಗಳೇನು- ಇತ್ಯಾದಿಗಳನ್ನು ಕಲಿಸುವುದಾಗಿತ್ತು. ಎಂದರೆ ಭಾರತವನ್ನು ಸರಿಯಾಗಿ ಆಳಲು, ಸಾಮ್ರಾಜ್ಯದ ಹಿಡಿತವನ್ನು ಬಲಪಡಿಸಲು ನಿರ್ಮಿಸಿ ಕೊಟ್ಟ ಶಾಸ್ತ್ರ ಅದಾಗಿತ್ತು. ಭಾರತದ ಬಗೆಗೆ ಓರಿಯಂಟಲಿಜಂ ಕಟ್ಟಿಕೊಟ್ಟ ಚಿತ್ರವೇ, ತಳೆದ ನಿಲುವುಗಳೇ ಆಡಳಿತ ವರ್ಗದ ನಿಲುವುಗಳಾದವು. ಅಷ್ಟೇ ಅಲ್ಲ, ಪಶ್ಚಿಮದ ವಿದ್ವಾಂಸರು ನಾವು ಎಂಥ ಜನಾಂಗ ಎಂದು ನಿರ್ಧರಿಸಿದರೋ ಅದನ್ನು ನಾವೂ ಒಪ್ಪಿಕೊಂಡೆವು.

ಪಶ್ಚಿಮದ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಮೇಲೆ ಹೇರಿದ ಕೂಡಲೇ ಒಂದು ಕ್ರಾಂತಿಕಾರಕವಾದ ಸಾಂಸ್ಕೃತಿಕ ಬದಲಾವಣೆ ನಡೆಯಿತು. ಅದೆಂದರೆ ಅಕ್ಷರ ಜ್ಞಾನವೇ ಸುಶಿಕ್ಷತತೆ, ಸುಸಂಸ್ಕೃತಿಗಳ ಮಾನದಂಡವಾಯಿತು. ಓದಲು ಬರೆಯಲು ಕಲಿತವರ ಸಂಖ್ಯೆಯ ಮೇಲೆಯೇ ಸಾಕ್ಷರತೆ-ಸುಸಂಸ್ಕೃತತೆಗಳ ಶೇಕಡಾವಾರು ಲೆಕ್ಕ ನಡೆಯಿತು. ಅದರಿಂದಾಗಿ, ಮೌಖಿಕ ಮಾಧ್ಯಮಗಳ ಮೂಲಕವೇ ಸಂಸ್ಕೃತಿ ಪ್ರಸಾರ ಮಾಡಿಕೊಂಡಿದ್ದ ಭಾರತ ಒಮ್ಮೆಲೆ ನಿರಕ್ಷರಿಗಳ ದೇಶವಾಗಿ ಬಿಟ್ಟಿತು. ಭಾರತದಲ್ಲಿ ಲೇಖನ ಸಂಸ್ಕೃತಿಗೆ ಮಹತ್ವವಿರಲಿಲ್ಲ. ಓದು-ಬರಹ ಬಲ್ಲವನೇ ಪಂಡಿತ ಎಂಬ ಕಲ್ಪನೆ ಇರಲಿಲ್ಲ. ವೇದಗಳನ್ನು ರಚಿಸಿದ ಋಷಿಗಳು ಅವುಗಳನ್ನು ಬರೆದಿಡಲಿಲ್ಲ. ಮೌಖಿಕವಾಗಿಯೇ, ಶ್ರುತಿ ಕೆಡದಂತೆ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸುತ್ತ ಬಂದರು. ಉದ್ಯೋಗಗಳಲ್ಲಿ ತೊಡಗಿದವರು ಪ್ರಾತ್ಯಕ್ಷಿಕೆಗಳ ಮೂಲಕವೇ ತಮ್ಮ ಮಕ್ಕಳಿಗೆ ತಮ್ಮ ಉದ್ಯೋಗಗಳನ್ನು ಕಲಿಸುತ್ತಿದ್ದರು. ಸುಗ್ಗಿಯ ನಂತರದ ದಿನಗಳಲ್ಲಿ ನಡೆಯುತ್ತಿದ್ದ ಪುರಾಣಪ್ರವಚನ, ಕೀರ್ತನೆ, ಭಜನೆ, ಯಕ್ಷಗಾನ, ಬಯಲಾಟ ಇತ್ಯಾದಿಗಳು ಸಂಸ್ಕೃತಿ ಪ್ರಸಾರ ಮಾಡುತ್ತಿದ್ದವು. ಹೀಗಾಗಿ ರಾಮಾಯಣ-ಮಹಾಭಾರತಗಳನ್ನು ಓದದೆಯೂ ಜನ ಅವುಗಳನ್ನು ಕಲಿತಿದ್ದರು. ಯಾವಾಗ ಲೇಖನ ಸಂಸ್ಕೃತಿಯೇ ಶ್ರೇಷ್ಠವೆಂಬ ಪಾಶ್ಚಾತ್ಯ ಕಲ್ಪನೆಯನ್ನು ಒಪ್ಪಿಕೊಂಡೆವೊ, ಆ ಕ್ಷಣವೇ ನಾವೆಲ್ಲ ಅಶಿಕ್ಷಿತರೂ ಅಸಂಸ್ಕೃತರೂ ಆಗಿಬಿಟ್ಟೆವು.

ಪಶ್ಚಿಮದ ವಿದ್ವಾಂಸರು ಇತಿಹಾಸದ ಬಗ್ಗೆ ತಮ್ಮದೇ ಆದ ಸಿದ್ಧಾಂತಗಳನ್ನು ರೂಪಿಸಿದ್ದಾರಷ್ಟೇ? ಅವರಿಗೆ ಲಿಖಿತ ದಾಖಲೆಗಳು ಬಹಳ ಮುಖ್ಯವಾಗಿವೆ. ಪ್ರತಿಯೊಬ್ಬನೂ ಹುಟ್ಟಿದಾಗ, ಸ್ನಾತಕನಾದಾಗ, ಮದುವೆ ಆದಾಗ, ಮಕ್ಕಳಾದಾಗ, ಸತ್ತಾತ ಚರ್ಚಿನ ರಿಜಿಸ್ಟರುಗಳಲ್ಲಿ ಹೆಸರು, ತಾರೀಖು ದಾಖಲೆಯಾಗುತ್ತಿದ್ದವು. ಅವುಗಳ ಆಧಾರದಿಂದ ಅವರು ಇತಿಹಾಸವನ್ನು ದಾಖಲೆ ಸಮೇತ ಕಟ್ಟಿಕೊಂಡರು. ಭಾರತದಲ್ಲಿ ರಾಜ-ಮಹಾರಾಜರು ಬರೆಸಿದ ಶಾಸನಗಳ ಹೊರತು, ಇಂಥ ದಾಖಲೆಗಳನ್ನಿಡುವ ಪದ್ಧತಿ ಇರಲಿಲ್ಲ. ಇತಿಹಾಸದ ಬಗ್ಗೆ ಪಶ್ಚಿಮದ ಸಿದ್ಧಾಂತಗಳನ್ನು ಒಪ್ಪಿಕೊಂಡ ಕೂಡಲೇ ನಮಗೆ ಇತಿಹಾಸಪ್ರಜ್ಞೆಯೇ ಇಲ್ಲವೆಂದಾಯಿತು. ನಮ್ಮ ಹಳೆಯ ಕವಿಗಳ ವಿಷಯವನ್ನೇ ನೋಡಿದರೊ. ಯಾರ ಹುಟ್ಟಿದ-ಸತ್ತ ದಿನಗಳೂ ಗೊತ್ತಿಲ್ಲ. ಎಷ್ಟೋ ಕವಿಗಳು ಯಾವ ಶತಮಾನದಲ್ಲಿ ಬದುಕಿದ್ದರೆಂಬುದೂ ತಿಳಿಯದು. ಆದರೆ ಇತಿಹಾಸದ ಬದಲು ನಮ್ಮ ಜನರಲ್ಲಿ ಪುರಾಣ-ದಂತಕಥೆಗಳನ್ನು ಸೃಷ್ಟಿಸುವ ಸೃಜನಶೀಲ ಪ್ರತಿಭೆ ಇತ್ತು. ನಮ್ಮ ಕವಿಗಳ ಬಗ್ಗೆ ಎಷ್ಟೊಂದು ದಂತಕಥೆಗಳು ಹುಟ್ಟಿಕೊಂಡಿವೆ! ಹರಿಹರನಂಥ ಕವಿ ತನ್ನ ಸಮಕಾಲೀನ ಶರಣರ ಜೀವನವನ್ನೇ ಪುರಾಣವಾಗಿಸಿಬಿಟ್ಟ. ಇಂಗ್ಲೆಂಡಿನಲ್ಲೆ ಯಾವ ಇಂಗ್ಲಿಷ್ ಕವಿಯ ಬಗೆಗೂ ಒಂದು ಸುಂದರ ದಂತಕಥೆಯೂ ಹುಟ್ಟಲಿಲ್ಲ. ಡಬ್ಲೂ. ಬಿ. ಯೇಟ್ಸ್ ಒಂದು ಕಡೆ, ‘ಷೇಕ್‌ಸ್ಪಿಯರ್‌ನಂಥ ಒಬ್ಬ ಮಹಾಕವಿಯನ್ನಿಟ್ಟುಕೊಂಡು ಈ ಇಂಗ್ಲಿಷ್ ಜನ ಒಂದೂ ಸುಂದರ ದಂತಕಥೆಯನ್ನು ಕಟ್ಟಲಿಲ್ಲವಲ್ಲ. ಎಂಥ ದರಿದ್ರ ಪ್ರತಿಭೆಯ ಜನಾಂಗ ಇದು!’ ಎಂದು ಟೀಕೆ ಮಾಡಿದ. ಒಂದು ವೇಳೆ ಪಶ್ಚಿಮದೇ ದಂತಕಥೆಗಳನ್ನು ಕಟ್ಟುವ ಸಂಪ್ರದಾಯವನ್ನಿಟ್ಟುಕೊಂಡು, ನಾವು ದಾಖಲೆಗಳ ಬೆನ್ನು ಹತ್ತಿದ್ದರೆ ಏನಾಗುತ್ತಿತ್ತು? ಪಶ್ಚಿಮದಲ್ಲಿ ದಂತಕಥೆಗಳ ಸೃಜನಶೀಲ ಪ್ರತಿಭೆಯನ್ನು ಎತ್ತಿಹಿಡಿಯುವ ಸಿದ್ಧಾಂತಗಳು ಹುಟ್ಟಿಕೊಂಡು, ಭಾರತೀಯ ಕೇವಲ ದಾಖಲೆಗಳನ್ನಿಡುವ ದರಿದ್ರ ಪ್ರತಿಭೆಯ ಜನವೆಂದು ಹಂಗಿಸಲ್ಪಡುತ್ತಿದ್ದರು. ಆಳುವ ಜನ ಮಾಡಿದ್ದೆಲ್ಲ ಶ್ರೇಷ್ಠವಾಗಿ ಬಿಡುತ್ತದೆ. ಗುಲಾಮರಿಗೆ ತಮ್ಮ ವಿಶಿಷ್ಟ ಪ್ರತಿಭೆಯನ್ನು ಎತ್ತಿ ಹಿಡಿಯುವ ಆತ್ಮವಿಶ್ವಾಸವೇ ಉಳಿದಿರುವುದಿಲ್ಲ.

ಆಧುನಿಕತೆಯ ಇತ್ತೀಚಿನ ಹೊಸ ಬೆಳವಣಿಗೆ – ಜಾಗತೀಕರಣ. ಜಾಗತೀಕರಣ ಒಂದು ಅನಿವಾರ್ಯ ಪ್ರಕ್ರಿಯೆ ಎಂದು ಅಮೇರಿಕದಂಥ ಶ್ರೀಮಂತ ರಾಷ್ಟ್ರಗಳು ಭಾರತದಂಥ ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳನ್ನು ಒತ್ತಾಯದಿಂದ ಒಪ್ಪಿಸತೊಡಗಿವೆ. ಬಡ ದೇಶಗಳನ್ನು ಶ್ರೀಮಂತ ರಾಷ್ಟ್ರಗಳ ಮಾರುಕಟ್ಟೆಗಳನ್ನಾಗಿ ಮಾಡುವ ಹುನ್ನಾರ ಈ ಬೆಳವಣಿಗೆಯ ಹಿಂದಿದೆ. ಸೈನ್ಯದಿಂದ ಗೆಲ್ಲುವುದರ ಬದಲು ವ್ಯಾಪಾರದಿಂದ ಬಡದೇಶಗಳನ್ನು ಗೆಲ್ಲುವ ನವಸಾಮ್ರಾಜ್ಯಶಾಹಿಯ ಕುತಂತ್ರ ಇಲ್ಲಿ ಕಾಣುತ್ತಿದೆ. ಪಶ್ಚಿಮದಿಂದ ಬಂದಿರುವ ಕೋಲಾ, ಪೆಪ್ಸಿ, ಕೆಂಟಕಿ ಚಿಕನ್, ಪಿಜಾ ಈಗಾಗಲೇ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಕಟ್ಟುನಿಟ್ಟಿನ ಕಮ್ಯೂನಿಸ್ಟ್ ನಿಯಂತ್ರಣ ಹೊಂದಿರುವ ಚೀನಾದ ಮಾರುಕಟ್ಟೆ ಕೂಡ ಅದಕ್ಕೆ ಬಲಿಯಾಗಿದೆ. ಇದು ಕೇವಲ ವ್ಯಾಪಾರಕ್ಕೆ ಸೀಮಿತವಾಗಿ ಉಳಿಯದೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಆಚಾರ – ವಿಚಾರಗಳಿಗೂ ವ್ಯಾಪಿಸತೊಡಗಿದೆ. ಜಾಗತೀಕರಣದ ಭಾಷೆಯಾಗಿ ಇಂಗ್ಲಿಷ್ ಎಲ್ಲ ಭಾಷೆಗಳನ್ನು ಗುಡಿಸಿಹಾಕತೊಡಗಿದೆ. ಈ ಆಕ್ರಮಣದಲ್ಲಿ ಕನ್ನಡದಂಥ ಭಾಷೆಗಳ ಭವಿಷ್ಯವೇ ಆತಂಕಕ್ಕೀಡಾಗಿದೆ. ನಮ್ಮ ಸಂಸ್ಕೃತಿಯ ಶ್ರೀಮಂತ ವೈವಿಧ್ಯವನ್ನೆಲ್ಲಾ ನಾಶಮಾಡಿ ಪಶ್ಚಿಮದ ಏಕರೂಪತೆಗೆ ಬಗ್ಗಿಸುವ ಯತ್ನಗಳು ಏರುಮುಖದಲ್ಲಿವೆ. ಪಶ್ಚಿಮದಿಂದ ಬರುವ ಹಣಕ್ಕಾಗಿ ನಾವು ಏನು ಬೇಕಾದರೂ ಮಾಡಲಿಕ್ಕೆ ಸಿದ್ಧವಾಗಿದ್ದೇವೆ. ಆಮೇರಿಕದ ಕಚೇರಿಯ ವೇಳೆಗೆ ಹೊಂದಿಕೊಳ್ಳಲು ನಾವು ನಡುರಾತ್ರಿಯಲ್ಲಿ ನಮ್ಮ ಕಚೇರಿಗಳನ್ನು ತೆರೆದಿಟ್ಟು ಕಾಯತೊಡಗಿದ್ದೇವೆ. ಅಮೇರಿಕದವರಿಗೆ ಉಚ್ಛರಿಸಲು ಕಷ್ಟವಾಗಬಾರದೆಂದು ನಮ್ಮ ಕಾಲ್ ಸೆಂಟರಿನ ಹುಡುಗಿಯರು ಕ್ರಿಶ್ಚನ್ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಅಪಾರ ಸಂಬಳ ತರುವ ಸಾಫ್ಟ್‌ವೇರು ಉದ್ಯಮಕ್ಕೆ ಸೇರಲು ಇಂಗ್ಲೀಷೊಂದೇ ದಾರಿ ಎಂಬ ಭಾವನೆ ಬೆಳೆದಿರುವುದರಿಂದ ಕನ್ನಡದಂಥ ಭಾಷೆಗಳು ಯಾರಿಗೂ ಬೇಕಾಗಿಲ್ಲ. ಸಾಂಸ್ಕೃತಿಕ ದರ್ಶನವೇ (Vision) ಇಲ್ಲದ ನಾರಾಯಣಮೂರ್ತಿಗಳು ಇಂಗ್ಲೀಷಿನ ಪರವಾಗಿ ದೊಡ್ಡ ದನಿಯಲ್ಲಿ ಕೂಗತೊಡಗಿದ್ದಾರೆ.

ಸರ್ವಾಧಿಕಾರತ್ವದ ಬೆಳವಣಿಗೆಯೂ ಆಧುನಿಕತೆಯ ಪರಿಣಾಮವೇ ಆಗಿದೆ. ಹಿಟ್ಲರ್, ಸ್ಟ್ಯಾಲಿನ್, ಮುಸೊಲಿನಿ, ಮಾವೊ-ಒಬ್ಬೊಬ್ಬರೂ ಮಾನವೀಯತೆಯ ವಿರುದ್ದ ಎಸಗಿದ ಅಪರಾಧಗಳ ಗಾಯ ಇನ್ನೂ ಮಾಯ್ದಿಲ್ಲ. ಅಮೇರಿಕದ ಅಧ್ಯಕ್ಷ ಜಾರ್ಜ್ ಭುಷ್ ಕೂಡ ಪ್ರಜಾಪ್ರಭುತ್ವದ ಮುಖವಾಡ ತೊಟ್ಟ ಸರ್ವಾಧಿಕಾರಿಯೇ. ಶ್ರೀಮಂತಿಕೆಯ ಸೊಕ್ಕಿನಿಂದ ವಿಯಟ್ನಾಮ್, ಅಫಘಾನಿಸ್ತಾನ್, ಇರಾಕ್‌ನಂಥ ದೇಶಗಳ ಮೇಲೆ ಅಮೇರಿಕ ನಡೆಸಿದ ಬರ್ಬರ ದಾಳಿಗಳನ್ನು ಜಗತ್ತು ಸುಮ್ಮನೇ ನೋಡುತ್ತ ಕುಳಿತಿದೆ. ಇಲ್ಲಿ ಎಡ-ಬಲಗಳ ಪ್ರಶ್ನೆಯೇ ಇಲ್ಲ. ಎಲ್ಲ ಕಡೆಯಿಂದಲೂ ಅಮಾನವೀಯ ಕ್ರೌರ್ಯ, ಹಿಂಸೆ ನಡೆಯುತ್ತಿದೆ. ಇಸ್ಲಾಮಿನಂಥ ಧರ್ಮಗಳು ಕೊಡುತ್ತಿರುವ ಕುಮ್ಮಕ್ಕಿನಿಂದ ಭಯೋತ್ಪಾದಕರು, ಬುದ್ಧಿಜೀವಿಗಳು ಕೊಡುತ್ತಿರುವ ಬೆಂಬಲದಿಂದ ನಕ್ಸಲೀಯರು ತಮ್ಮ ಚಟುವಟಿಕೆಗಳನ್ನು ನಿರಾತಂಕವಾಗಿ ನಡೆಸುತ್ತಿದ್ದಾರೆ.

ಆಧುನಿಕತೆಯ ಬಗ್ಗೆ ನಮ್ಮ ನಿಲುವುಗಳಲ್ಲೇ ಒಂದು ಬಗೆಯ ಎಡಬಿಡಂಗಿತನವಿದೆ. ಆಧುನಿಕತೆ ತಂದಿರುವ ಭೌತಿಕ ಸೌಲಭ್ಯಗಳೆಲ್ಲ ನಮಗೆ ಬೇಕು. ವಿದ್ಯುತ್ತು, ನೀರಾವರಿ, ಕಂಪ್ಯೂಟರ್, ಪ್ಲಾಸ್ಟಿಕ್, ಸಿಮೆಂಟು, ರೈಲು, ಅಣೆಕಟ್ಟು, ಗ್ರೆನಾಯಿಟ್, ಕಾರ್ಖಾನೆಗಳು- ಇತ್ಯಾದಿಗಳಿಲ್ಲದೆ ನಮ್ಮ ಬದುಕು ನಡೆಯುವುದಿಲ್ಲ  ಎಂಬ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಆದರೆ ಇವುಗಳನ್ನು ಪಡೆಯಬೇಕಾದರೆ ಆಗುವ ಪರಿಸರನಾಶ, ಜನರ ಎತ್ತಂಗಡಿ, ಗ್ರಾಮೀಣ ನಿರುದ್ಯೋಗ, ನಗರಗಳಿಗೆ ವಲಸೆ-ಇಂಥವು ಬೇಡ ಎನ್ನುತ್ತಿದ್ದೇವೆ. ಸೌಲಭ್ಯಗಳು ಬೇಕಾದರೆ ಕಳೆದುಕೊಳ್ಳುವುದೂ ಇರುತ್ತದೆ. ಬುಡಕಟ್ಟು ಜನಾಂಗಗಳಿಗೆ ಆಧುನಿಕ ಶಿಕ್ಷಣ ಬೇಕೆ, ಬೇಡವೆ- ಎಂಬುದೂ ಇಂಥ ಒಂದು ಪ್ರಶ್ನೆ. ಸಮಾಜದ ಮುಖ್ಯ ಪ್ರವಾಹದಲ್ಲಿ ಅವರು ಸೇರಬೇಕೆಂದರೆ ಅವರಿಗೆ ಶಿಕ್ಷಣ ಬೇಕು; ಸುಶಿಕ್ಷಿತರಾದ ಹಾಗೆಲ್ಲ ಅವರ ಸಂಸ್ಕೃತಿ ನಾಶವಾಗುತ್ತದೆ. ಇಂಥ ಬಗೆಹರಿಸಲಾರದ ಸ್ಥಿತಿಯಲ್ಲಿ ಇಡಿಯ ದೇಶವೇ ತೊಳಲಾಡುತ್ತಿದೆ.

ಆಧುನಿಕೋತ್ತರ ಚಿಂತನೆಗಳು ಆಧುನಿಕತೆ ತಂದೊಡ್ಡಿದ ಅಪಾಯಗಳನ್ನು ಎದುರಿಸುವ ಕ್ರಮಗಳನ್ನು ಹುಡುಕತೊಡಗಿವೆ. ಆಧುನಿಕತೆಯ ಅಪಾಯಗಳ ಬಗೆಗೆ ಅರಿವು ಪಡೆದುಕೊಳ್ಳುವುದು, ಸಂದೇಹಗಳನ್ನು ವ್ಯಕ್ತಪಡಿಸುವುದು, ಅಪಾಯಕಾರಿ ಅಂಶಗಳನ್ನು ತಿರಸ್ಕರಿಸುವುದು, ಅವುಗಳನ್ನು ವಿರೋಧಿಸುವ ಕ್ರಮಗಳನ್ನು ಶೋಧಿಸುವುದು, ಪರ್ಯಾಯಗಳನ್ನು ರೂಪಿಸಿಕೊಳ್ಳುವುದು – ಹೀಗೆ ವಿವಿಧ ನೆಲೆಗಳಲ್ಲಿ ಆಧುನಿಕೋತ್ತರ ಚಿಂತನೆಗಳು ಆರಂಭವಾಗಿವೆ.

ಈ ದಿಸೆಯಲ್ಲಿ ಸಾವಿರಾರು ವರ್ಷಗಳ ಸಾಂಸ್ಕೃತಿಕ ಚಿಂತನೆಗಳಿರುವ ಭಾರತ ತನ್ನ ದೇಶೀ ಚಿಂತನಗಳನ್ನು ಇನ್ನೊಮ್ಮೆ ನೆನಪಿಸಿಕೊಳ್ಳುವ, ವಿಮರ್ಶಾತ್ಮಕವಾಗಿ ಅಭ್ಯಾಸ ಮಾಡುವ, ಇಂದಿನ ಅಗತ್ಯಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುವ, ಬೆಳೆಸುವ, ಅಗತ್ಯವಿದ್ದಲ್ಲಿ ತಿರಸ್ಕರಿಸುವ ವಿವೇಕದ ಕೆಲಸವನ್ನು ಮಾಡಬೇಕಾಗಿದೆ.

ಕನ್ನಡ ಕಾದಂಬರಿ ಆಧುನಿಕತೆಯ ಪ್ರವೇಶದಿಂದ ನಮ್ಮ ಸಾಂಪ್ರದಾಯಿಕ ಜೀವನ ವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ವಿವರವಾಗಿ ದಾಖಲಿಸಿದೆ. ಅದರ ಒಳಿತು-ಕೆಡುಕುಗಳನ್ನು ವಿಮರ್ಶಾತ್ಮಕವಾಗಿ ಚಿತ್ರಿಸಿದೆ. ಸಾಹಿತ್ಯಪ್ರಕಾರವಾಗಿ ಕಾದಂಬರಿ ಸಾಮಾಜಿಕ ಬದಲಾವಣೆಗಳನ್ನು ಚಿತ್ರಿಸುವ ಮುಖ್ಯ ಸದುದ್ದೇಶದಿಂದಲೇ ಹುಟ್ಟಿದ್ದಾದ್ದರಿಂದ ಅದು ಸಹಜವೇ ಆಗಿದೆ. ಈಗಲೂ ಆ ಕೆಲಸ ನಡೆದೇ ಇದೆ. ಅನಂತಮೂರ್ತಿಯವರ ‘ಸೂರ್ಯನ ಕುದುರೆ’ (೧೯೯೫) ಕಥೆ, “ದಿವ್ಯ” (೨೦೦೧) ಕಾದಂಬರಿಗಳಲ್ಲಿ ದೇಶೀ ಸಂಸ್ಕೃತಿಯ ಶಕ್ತಿಯನ್ನು ಮತ್ತೆ ಗುರುತಿಸಬೇಕೆನ್ನುವ ಆಶಯವಿದೆ. ವಿವೇಕ ಶಾನಭಾಗರ ‘ಹುಲಿಸವಾರಿ’ (೧೯೯೫) ಕಥೆ ಆಧುನಿಕತೆ ಒಡ್ಡಿರುವ ಸಂದಿಗ್ಧತೆಯನ್ನು, ಬಿಕ್ಕಟ್ಟನ್ನು ತೋರಿಸುತ್ತದೆ. ತೇಜಸ್ವಿಯವರ ‘ಯಂಗ್ಟನಪುಂಗಿ’ ದೇಶಿ ಅರಿವಿನ ಬಗ್ಗೆ ನಮ್ಮ ತಿಳುವಳಿಕೆಯನ್ನು ಮರುಪರೀಕ್ಷೆಗೆ ಒಳಪಡಿಸುತ್ತದೆ. ಆರ್ಯರ “ದೇಶೀ ಪರದೇಶಿ ಕಥೆಗಳು” (೧೦೦೨) ಮತ್ತು “ಹೈಬ್ರಿಡ್ ಕಥೆಗಳು” (೨೦೦೫) ಪೂರ್ವ-ಪಶ್ಚಿಮಗಳ ಮುಖಾಮುಖಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಎತ್ತಿಹೇಳುವ ನೇತ್ಯಾತ್ಮಕ ಅಂಶಗಳ ಬದಲಾಗಿ, ವಿವೇಕಪೂರ್ಣ ಅನುಸಂಧಾನದಿಂದ ಹುಟ್ಟಬಹುದಾದ ಆರೋಗ್ಯಪೂರ್ಣ ಹೊಸ ಸಮನ್ವಯದ ಸಾಧ್ಯತೆಗಳನ್ನು ತೋರಿಸುತ್ತದೆ.

ಈಗ ಕನ್ನಡ ಕಾದಂಬರಿಯ ಮುಂದೆ ಆಧುನಿಕೋತ್ತರ ಚಿಂತನೆಗಳ ಹೊಸ ಆಹ್ವಾನ ನಿಂತುಕೊಂಡಿದೆ. ಅದನ್ನು ಹೇಗೆ ನಿರ್ವಹಿಸುತ್ತದೋ ಕಾದು ನೋಡಬೇಕಾಗಿದೆ. ಒಂದೇ ಆತಂಕವೆಂದರೆ. ಕನ್ನಡ ಕಾದಂಬರಿಯ ಮಹಾನದಿ ಈಗ ಸೊರಗಿ ಕಿರುತೊರೆಯಾಗಿರುವುದು. ಇಂದಿನ ಸಮಸ್ಯೆಗಳ ಸ್ವರೂಪ ಬಹಳ ಸಂಕೀರ್ಣವಾಗಿದೆ. ಅದರ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಚಿತ್ರಿಸಬೇಕಾದರೆ ಅದು ಮತ್ತೆ ಮಹಾನದಿಯಾಗಿ ಮೈತುಂಬಿಕೊಂಡು ಹರಿಯುವುದು ಬಹಳ ಅಗತ್ಯವಾಗಿದೆ.

– ೨೦೦೬