ಆಧುನಿಕತೆಯನ್ನು ಕುರಿತು ಮಾತಾಡುವಾಗ ಮೊದಲನೆಯದಾಗಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ‘ಆಧುನಿಕತೆ’ ಮತ್ತು ‘ನವ್ಯತೆ’ – ಎರಡು ತೀರಾ ಭಿನ್ನ ಅರ್ಥ ಕೊಡುವ ಪರಿಕಲ್ಪನೆಗಳು. ಇಂಗ್ಲೀಷಿನ ‘Modernity’ ಎಂಬುದನ್ನು ಆಧುನಿಕತೆ ಎಂದೂ, ‘Modernism’ ಎಂಬುದನ್ನು ‘ನವ್ಯತೆ’ ಎಂದೂ ನಾವೂ ಸಾಂಸ್ಕೃತಿಕ ಸಂಕಥನದಲ್ಲಿ ಬಳಸುತ್ತಿದ್ದೇವೆ. ಇಂಗ್ಲೀಷಿನ ‘Modernity’ ಮತ್ತು ‘ Modernism’ ಎಂಬ ಎರಡೂ ಶಬ್ದಗಳು ‘Modern’ ಎಂಬ ಒಂದೇ ಮೂಲದಿಂದ ಬಂದಿರುವುದರಿಂದ ಅವುಗಳ ಅರ್ಥದಲ್ಲಿ ಸ್ವಲ್ಪ ಗೊಂದಲವಾಗಿದೆ. ಆದರೂ ಅವುಗಳಿಗೆ ಪ್ರಚಲಿತ ಸಂಕಥನಗಳು (Discourses) ಬೇರೆಬೇರೆ ಅರ್ಥಗಳನ್ನು ಆರೋಪಿಸಿವೆ. ಈಗ ‘Modernity, ‘Modernisation’, ಎಂಬ ಶಬ್ದಗಳನ್ನು ‘ಆಧುನಿಕತೆ’ ಎಂದೂ, ‘Modernism’, ‘Modernist’ ಎಂಬ ಶಬ್ದಗಳನ್ನು ‘ನವ್ಯತೆ’, ‘ನವ್ಯ’ ಎಂದೂ ಕನ್ನಡದಲ್ಲಿ ಬಳಸುತ್ತಿದ್ದೇವೆ. ಇವುಗಳ ನಡುವೆ ‘Contemporary’ ಎಂಬ ಇನ್ನೊಂದು ಶಬ್ದ ‘ಸಮಕಾಲೀನ’ ಎಂಬ ಅರ್ಥದಲ್ಲಿ ಸೇರಿಕೊಂಡು ಅದೂ ಸ್ವಲ್ಪ ಗೊಂದಲವನ್ನು ಹೆಚ್ಚಿಸಿದೆ. ಈ ಶಬ್ದ ಆಧುನಿಕತೆ ಮತ್ತು ನವ್ಯತೆಗಳಿಗಿಂತ ಭಿನ್ನವಾಗಿದೆ. ಹಾಗೆ ಅದಕ್ಕೆ ಪಾರಿಭಾಷಿಕ ಶಬ್ಧವಾಗಿ ವಿಶೇಷ ಅರ್ಥವಿಲ್ಲ. ಸಮಕಾಲೀನವಾಗಿದ್ದೂ, ಆಧುನಿಕ ಅಥವಾ ನವ್ಯವಾಗಿರದೆ ಇರಬಹುದಾದ ಸಾಧ್ಯತೆ ಇದೆ. ‘ನವ್ಯತೆ’ ಎಂಬುದು ಒಂದು ವಿಶಿಷ್ಟ Creed, ತತ್ವಪ್ರಣಾಲಿ, ಜೀವನದೃಷ್ಟಿ, ಶೈಲಿ, ‘ಆಧುನಿಕತೆ’ಯ ವಿಶಾಲ ಪರಿಪ್ರೇಕ್ಷ್ಯದಲ್ಲಿ ‘ನವ್ಯತೆ’ ಅದರ ಒಂದು ಅಂಶ ಎಂದು ಪರಿಗಣಿಸಬಹುದು.

ಆಧುನಿಕತೆ, ಆಧುನೀಕರಣ ಮೊದಲು ಆರಂಭವಾದದ್ದು ಪಶ್ಚಿಮದ ದೇಶಗಳಲ್ಲಿ, ಆದರೆ ಅದು ಆರಂಭವಾದದ್ದು ಯಾವಾಗ ಎಂದು ಖಚಿತವಾಗಿ ಹೇಳುವುದು ಕಷ್ಟ. ಪ್ರಚಲಿತ ಸಂಪ್ರದಾಯಕ್ಕೆ ಬದಲಾಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯನ್ನೆಲ್ಲ ಆಧುನಿಕ-ಮಾಡರ್ನ್ ಎಂದು ಕರೆದಿರುವ ಅನೇಕ ಉದಾಹರಣೆಗಳು ಸಿಗುತ್ತವೆ. ಎಲಿಜಬೀಥನ್ ಸಾಹಿತ್ಯಕ್ಕಿಂತ ಭಿನ್ನವಾಗಿ ರಚನೆಯಾದ ತನ್ನ ಕಾಲದ ೧೭ನೇ ಶತಮಾನದ ಇಂಗ್ಲಿಷ್ ಸಾಹಿತ್ಯವನ್ನು ಡ್ರೈವನ್ ಎಂಬ ವಿಮರ್ಶಕ ‘ಮಾಡರ್ನ್’ ಎಂದು ವರ್ಣಿಸಿದ್ದ, ರಾಣಿ ಎಲಿಜಬೆಥಳ ಕಾಲದವರೂ ತಾವು ‘ಆಧುನಿಕ’ರೆಂದು ಭಾವಿಸಿದ್ದರು.

ಆದರೆ, ಇಂದು ನಾವು ಯಾವುದನ್ನೂ ‘ಆಧುನಿಕತೆ’ – ‘Modernity’ ಎಂದು ಕರೆಯುತ್ತಿದ್ದೇವೋ ಅದಕ್ಕೊಂದು ವಿಶಿಷ್ಟ ಪಾರಿಭಾಷಿಕ ಅರ್ಥವಿದೆ. ಆ ಅರ್ಥದಲ್ಲಿ ಪಶ್ಚಿಮದ ಆಧುನಿಕತೆಯ ಇತಿಹಾಸದಲ್ಲಿ ಎರಡು ಮುಖ್ಯ ಹಂತಗಳನ್ನು ಗುರುತಿಸಲಾಗುತ್ತಿದೆ.

ಮೊದಲನೆಯದು, ೧೫ನೇ ಶತಮಾನದಲ್ಲಿ ಮಧ್ಯಯುಗದ ಯುರೋಪಿನಲ್ಲಿ ಆರಂಭವಾದ ರೆನೇಜಾನ್ಸ್- ಪುನರುಜ್ಜೀವನದ ಕಾಲ. ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳ ಸಂಪರ್ಕದಲ್ಲಿ ಯುರೋಪಿನ ದೇಶಗಳು ತಮ್ಮ ಸಾಂಪ್ರದಾಯಿಕ ಜಡತೆಯನ್ನು ಕೊಡವಿಕೊಂಡು ಹೊಸ ನಾಗರಿಕತೆಯನ್ನು ಪ್ರವೇಶಿಸಿದವು. ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳಾದವು. ಜೀವನದೃಷ್ಟಿಯನ್ನು ಪ್ರಭಾವಿಸಿದ ವೈಜ್ಞಾನಿಕ ಸಂಶೋಧನೆಗಳು ಆರಂಭವಾದವು. ಕೋಪರ್ನಿಕಸ್‌ನ ಸಂಶೋಧನೆಗಳು ಭೂಮಿಯ ಬದಲು ಸೂರ್ಯನನ್ನು ವಿಶ್ವವ್ಯವಸ್ಥೆಯ ಕೇಂದ್ರವೆಂದು ತೋರಿಸಿಕೊಟ್ಟದ್ದು ಇದೇ ಕಾಲದಲ್ಲಿ. ಮುಂದೆ ೧೬ನೆ ಶತಮಾನದ ಗೆಲಿಲಿಯ್ ದೂರದರ್ಶಕದಂಥ ಹೊಸ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಕೋಪರ್ನಿಕಸ್‌ನ ಶೋಧನೆಗಳನ್ನು ದೃಢಪಡಿಸಿದ. ಭೂಮಿಯ ಸುತ್ತ ಸೂರ್ಯ ತಿರುಗುತ್ತಾನೆಂಬ ಕ್ರೈಸ್ತ ಧರ್ಮದ ನಂಬಿಕೆಗೆ ಈ ಸಂಶೋಧನೆ ವಿರುದ್ಧವಾಗಿತ್ತು. ಆ ಕಾರಣಕ್ಕಾಗಿ ಗೆಲಿಲಿಯೊನಿಗೆ ತೊಂದರೆಯಾಯಿತೆಂಬುದು ನಿಜ. ಆದರೆ ಮುಖ್ಯವಾದ ವಿಷಯವೆಂದರೆ, ಈ ಸಂಶೋಧನೆಗಳೂ ದೈವಶ್ರದ್ಧೆ-ಧರ್ಮಶ್ರದ್ಧೆಗಳನ್ನು ನಾಶಪಡಿಸಲಿಲ್ಲ. ಈ ಆಧುನಿಕತೆ ದೇವರ ಅಸ್ತಿತ್ವವನ್ನು ಒಪ್ಪಿಕೊಂಡೇ ಬೆಳೆಯಿತು. ಹಾಗಾಗಿ ಇದು ವಿಶೇಷ ಸಮಸ್ಯೆಯನ್ನೇನೂ ಒಡ್ಡಲಿಲ್ಲ.

ಆಧುನಿಕತೆಯ ಎರಡನೆಯ ಹಂತ ಆರಂಭವಾದದ್ದು ೧೯ನೆ ಶತಮಾನದ ದ್ವಿತೀಯಾರ್ಧ ಮತ್ತು ೧೦ನೆ ಶತಮಾನದ ಆರಂಭದಲ್ಲಿ. ಇದು ಪಶ್ಚಿಮದ ದೇಶಗಳ ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಜೀವನ ವ್ಯವಸ್ಥೆಯನ್ನೆಲ್ಲಾ ಪ್ರಭಾವಿಸಿತು.

ಮುಖ್ಯವಾಗಿ ಆರ್ಥಿಕ ಮತ್ತು ಔದ್ಯೋಗಿಕ ವಲಯಗಳಲ್ಲಿ ಬೃಹತ್ ಯಂತ್ರಗಳ ಆವಿಷ್ಕಾರದಿಂದ ದೊಡ್ಡ ಪ್ರಮಾಣದಲ್ಲಿ ಔದ್ಯೋಗೀಕರಣ ಆರಂಭವಾಯಿತು. ಅದರ ಪರಿಣಾಮವಾಗಿ ಜಮೀಂದಾರಿ ವ್ಯವಸ್ಥೆಯನ್ನು ಹಿಂದೆ ಸರಿಸಿ ಬಂಡವಾಳಶಾಹಿ ವ್ಯವಸ್ಥೆ ಹುಟ್ಟಿಕೊಂಡಿತು. ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನೂ, ಕಾರ್ಖಾನೆಗಳನ್ನೂ ಆರಂಭಿಸಲು ದೊಡ್ಡ ಬಂಡವಾಳ ಬೇಕಾಯಿತು. ಯಂತ್ರಗಳೊಂದಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ದೊಡ್ಡ ಸಂಖ್ಯೆಯಲ್ಲಿ ಕೂಲಿಕಾರರು ಬೇಕಾದರು. ಗ್ರಾಮೀಣ ಉದ್ಯೋಗಗಳು ನಾಶವಾಗಿ, ಜನ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರತೊಡಗಿದರು. ಉತ್ಪಾದನೆಯಾದ ಸರಕುಗಳನ್ನು ಮಾರಾಟ ಮಾಡಲು ಹೊಸಹೊಸ ಮಾರುಕಟ್ಟೆಗಳನ್ನು ಹಿಡಿದುಕೊಳ್ಳಲು ಪೈಪೋಟಿ ಆರಂಭವಾಗಿ, ಸಾಮ್ರಾಜ್ಯಶಾಹಿ ಮಹಾತ್ವಾಕಾಂಕ್ಷೆಗಳು ಬೆಳೆದು ವಸಾಹತೀಕರಣಕ್ಕೆ ದಾರಿಯಾಯಿತು. ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಕ್ರಮೇಣ ಇಡೀ ದೇಶವನ್ನೇ ಆಕ್ರಮಿಸಿಕೊಂಡ ಇತಿಹಾಸ ಈಗ ಹಳೆಯ ವಿಷಯ. ಎಂದರೆ, ಸಾಮ್ರಾಜ್ಯಶಾಹಿಯ ಉದಯ ಮತ್ತು ಬೆಳವಣಿಗೆಗಳಿಗೆ ಆಧುನಿಕತೆಯೇ ಕಾರ‍ಣವಾಗಿತ್ತೆಂಬುದನ್ನು ಮರೆಯುವಂತಿಲ್ಲ. ಹೀಗೆ, ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಗಳು ಔದ್ಯೋಗೀಕರಣದ- ಆ ಮೂಲಕ ಆಧುನಿಕತೆಯ- ಪರಿಣಾಮಗಳೇ ಆಗಿವೆ.

ರಾಜಕೀಯ ವಲಯದಲ್ಲಿ ರಾಜಸತ್ತೆಯ ವಿರುದ್ಧ ಸಂಘಟಿತ ಹೋರಾಟಗಳು ನಡೆದವು. ಫ್ರಾನ್ಸಿನ ರಾಜ್ಯಕ್ರಾಂತಿ, ರಷ್ಯಾದ ಕಮ್ಯೂನಿಸ್ಟ್ ಕ್ರಾಂತಿಗಳು ಈ ಹೋರಾಟದ ದೊಡ್ಡ ಉದಾಹರಣೆಗಳು. ಪ್ರಜಾಪ್ರಭುತ್ವದ ಕಲ್ಪನೆ ಹುಟ್ಟಿ ಬೆಳೆದದ್ದು ಇದರ ಪರಿಣಾಮವಾಗಿ. ಪ್ರಜಾಪ್ರಭುತ್ವವೇ ಆಧುನಿಕತೆಯ ಪ್ರಸಾರಕ್ಕೆ ತಕ್ಕ ರಾಜ್ಯವ್ಯವಸ್ಥೆ ಎಂಬ ಅಭಿಪ್ರಾಯ ಬೆಳೆಯಿತು. ಆದರೆ ಬೇರೆ ರಾಜಕೀಯ ವ್ಯವಸ್ಥೆಗಳೂ ಆಧುನಿಕತೆಯೊಂದಿಗೆ ಹೊಂದಿಕೊಂಡು ಹೋಗಬಲ್ಲವೆಂದು ಕೆಲವು ಉದಾಹರಣೆಗಳು ಸೂಚಿಸುತ್ತವೆ.

ಸಾಮಾಜಿಕ ವಲಯದಲ್ಲಿ ನಡೆದ ಮುಖ್ಯ ಬೆಳವಣಿಗೆಯೆಂದರೆ, ಮಧ್ಯಮ ವರ್ಗದ ಉದಯ. ಔದ್ಯೋಗೀಕರಣದ ಫಲವಾಗಿ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾದ ವಸ್ತುಗಳನ್ನು ಮಾರಾಟ ಮಾಡಲು ವ್ಯಾಪಾರಿಗಳ ದೊಡ್ಡ ಜಾಲವೇ ನಿರ್ಮಾಣವಾಯಿತು. ಹೊಸದಾಗಿ ಶ್ರೀಮಂತರಾದ ಈ ಜನರ ಆಶೆ-ಆಕಾಂಕ್ಷೆಗಳನ್ನು ಈಡೇರಿಸಲು ಆಗ ಇದ್ದ ವ್ಯವಸ್ಥೆಯಲ್ಲಿ ಸಾಕಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಯಿತು. ಮೇಲ್ವರ್ಗದ ಜನರಿಗಿಂತ ಸಂಖ್ಯೆಯಲ್ಲಿ ಇವರು ಹೆಚ್ಚುತ್ತ ಹೋಗಿ, ಅವರ ಆಶೋತ್ತರಗಳು ಅಲಕ್ಷಿಸಲಾರದಷ್ಟು ಮಹತ್ವ ಪಡೆದವು. ವ್ಯಕ್ತಿಸ್ವಾತಂತ್ರ್ಯ ಹೊಸ ಮೌಲ್ಯವಾಗಿ ಹೊರಹೊಮ್ಮಿತು.

ಧಾರ್ಮಿಕ ವಲಯದಲ್ಲಿ ದೇವರಿಲ್ಲದ ವಿಶ್ವದ ಕಲ್ಪನೆ ಬಲಗೊಂಡದ್ದೂ ಇದೇ ಅವಧಿಯಲ್ಲಿ. ವೈಜ್ಞಾನಿಕ ದೃಷ್ಟಿಕೋನವೇ ಏಕೈಕ ಸಾಧನವೆಂಬ ನಂಬಿಕೆ ಬೆಳೆಯಿತು. ಎಲ್ಲವನ್ನೂ ತರ್ಕದ ಮೂಲಕವೇ ಸಾಧಿಸಬೇಕು. ಪ್ರಯೋಗಜನ್ಯ ತಿಳುವಳಿಕೆಯನ್ನಷ್ಟೇ ನಂಬಬೇಕು- ಎಂಬ ವಾದಗಳು ಬಲ ಪಡೆದವು. ಇವುಗಳ ಆಚೆಗಿನ ಧರ್ಮ, ದೇವರುಗಳ ಬಗ್ಗೆ ಸಂದೇಹಗಳೆದ್ದವು. ಮನುಷ್ಯನೇ ದೇವರ ಅತ್ಯಂತ ಶ್ರೇಷ್ಟ ಸೃಷ್ಟಿ ಎಂಬ ಕ್ರಿಶ್ಚನ್ ಧರ್ಮದ ನಂಬಿಕೆಯನ್ನು ಡಾರ್ವಿನ್ನನ ವಿಕಾಸ  ಅಲ್ಲಾಡಿಸಿಬಿಟ್ಟಿತು. ಇದನ್ನು ಬಲಪಡಿಸುವ ಹಾಗೆ ನೀಚೆಯಂಥ ತತ್ವಜ್ಞಾನಿಗಳು ‘ದೇವರು ಸತ್ತಿದ್ದಾನೆ’ ಎಂದು ಘಂಟಾಘೋಷವಾಗಿ ಸಾರಿಬಿಟ್ಟರು. ದೇವರಲ್ಲಿಯ ನಂಬಿಕೆಯನ್ನು ತೆಗೆದು ಹಾಕಿದ ಈ ಆಧುನಿಕತೆ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿತು.

ಭಾರತದಲ್ಲಿ ಕಾಲೂರಿದ ಬ್ರಿಟಿಷ್ ಸಾಮ್ರಾಜ್ಯ, ಸಾಮ್ರಾಜ್ಯಶಾಹಿ ಮಾಡುವ ಎಲ್ಲವನ್ನೂ ಇಲ್ಲಿ ಮಾಡಿತು. ತನ್ನದೇ ಆದ ಆಡಳಿತ, ನ್ಯಾಯ, ಶಿಕ್ಷಣ ಪದ್ಧತಿಗಳನ್ನು ಭಾರತದ ಮೇಲೆ ಹೇರಿತು. ತನ್ನ ವಿಚಾರಪ್ರಣಾಲಿ, ತತ್ವಜ್ಞಾನಗಳನ್ನು ಇಲ್ಲಿ ಪ್ರಸಾರ ಮಾಡಿತು. ತನ್ನ ಜೀವನವಿಧಾನ, ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿಗಳೆಲ್ಲವನ್ನೂ ಆದರ್ಶವಾಗಿ ಬಿಂಬಿಸಿತು. ತನ್ನದೆಲ್ಲವೂ ಶ್ರೇಷ್ಠ ಎಂಬ ದುರಹಂಕಾರಿ ನಂಬಿಕೆಯಿಂದ ಭಾರತೀಯರಿಗೆ ಕಲಿಸಿತು. ಭಾರತ ಒಂದು ಅನಾಗರಿಕ ಸ್ಥಿತಿಯಲ್ಲಿರುವ ದೇಶವೆಂದು ಗಟ್ಟಿಯಾಗಿ ನಂಬಿಕೊಂಡು, ಅದನ್ನು ಸುಸಂಸ್ಕೃತಗೊಳಿಸುವುದು ತನ್ನ ಕರ್ತವ್ಯವೆಂದು ಭಾವಿಸಿತು.

ಹಲವು ಶತಮಾನಗಳಿಂದ ಸ್ಥಗಿತವಾದಂತಿದ್ದ, ಅಥವಾ ಬದಲಾವಣೆಗಾಗಿ ಕಾಯುತ್ತಿದ್ದಂತಿದ್ದ ಭಾರತೀಯ ಸಮಾಜ ಅನೇಕ ವಿಷಯಗಳಲ್ಲಿ ತನಗಿಂತ ಬಹಳ ಭಿನ್ನವಾಗಿದ್ದ ಪರಕೀಯ ವ್ಯವಸ್ಥೆಯೊಂದರ ತೀವ್ರ ಪ್ರಭಾವಕ್ಕೆ ಒಳಗಾಯಿತು. ಈ ಪ್ರಭಾವ ಮುಖ್ಯವಾಗಿ ಆಧುನೀಕರಣದ ರೂಪದಲ್ಲಿ ಬಂತು. ರಾಜಕೀಯ, ಸಾಮ್ರಾಜ್ಯ ವ್ಯವಸ್ಥೆ, ಶಿಕ್ಷಣ, ಸಂಸ್ಕೃತಿ, ನ್ಯಾಯಪದ್ಧತಿ, ಆಡಳಿತ, ವ್ಯಾಪಾರ, ಉದ್ಯೋಗ, ವೈದ್ಯಪದ್ದತಿ, ವೈಚಾರಿಕತೆ, ಕಲೆಗಳು – ಹೀಗೆ ಎಲ್ಲ ವಲಯಗಳಿಗೂ ಆಧುನಿಕತೆ ಪ್ರವೇಶಿಸಿತು. ಇಲ್ಲಿ ಆಧುನಿಕತೆ ಎಂದರೆ ಇಂಗ್ಲೆಂಡಿನ ಮೂಲಕ ಪಶ್ಚಿಮದ ಅನುಕರಣೆಯಾಗಿತ್ತು. ಹಾಗಾಗಿ ಆಧುನೀಕರಣವೆಂದರೆ ಪಶ್ಚಿಮೀಕರಣವೇ ಆಗಿತ್ತು.

ಯೂರೋಪಿನಲ್ಲಿ ಆಧುನಿಕತೆ ಪ್ರವೇಶಿಸಿದಾಗ ಅಲ್ಲಿಯ ಸಮಾಜದಲ್ಲೂ ಕ್ರಾಂತಿಕಾರಿ ಬದಲಾವಣೆಗಳಾಗಿದ್ದವು. ಆದರೆ ಆಧುನಿಕತೆ ಬೆಳೆದು ಬೇರೂರಲು ಅಲ್ಲಿ ಸಾಕಷ್ಟು ಕಾಲಾವಕಾಶವಿದ್ದುದರಿಂದ ಆ ಸಮಾಜಗಳಿಗೆ ಆಧುನಿಕತೆಯೊಂದಿಗೆ ಹೊಂದಿಕೊಳ್ಳುವುದು ಕ್ರಮೇಣ ಸುಲಭವಾಯಿತು. ಆದರೆ ಭಾರತದಲ್ಲಿ ಆಧುನಿಕತೆ ಅಂದದ್ದು ಬಹಳ ಕ್ಷಿಪ್ರವಾಗಿ, ಹೊಂದಿಕೊಳ್ಳಲು ಸಮಯವೇ ಇರಲಿಲ್ಲ. ಅಲ್ಲದೆ, ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಇನ್ನೊಂದು ಅತ್ಯಂತ ಭಿನ್ನವಾದ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕಾದ ಪ್ರಕ್ರಿಯೆಯಲ್ಲಿ ಅದಕ್ಕೆ ಸರಿಯಾದ ತರಬೇತಿ ಸಿಕ್ಕಲಿಲ್ಲ. ಯುರೋಪಿನಲ್ಲಿ ಆಧುನಿಕತೆ ಐತಿಹಾಸಿಕದ ಬೆಳವಣಿಗೆಯಾಗಿ ಬಂತು. ಮತ್ತು ಅದು ಅಲ್ಲಿಯ ಸಮಾಜಗಳೇ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಯಸಿ ರೂಪಿಸಿಕೊಂಡದ್ದಾಗಿತ್ತು. ಆದರೆ ಭಾರತದಲ್ಲಿ ಅದು ಹೊರಗಿನಿಂದ ಒತ್ತಾಯದಿಂದ ಹೇರಿದ್ದಾಗಿತ್ತು. ನಮ್ಮ ಅಗತ್ಯಗಳನ್ನು ಅದು ಗಮನದಲ್ಲಿ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಭಾರತೀಯ ಸಮಾಜ ಆಧುನಿಕತೆಯೊಂದಿಗೆ ಹೊಂದಿಕೊಳ್ಳಲು ಸಾಕಷ್ಟು ತಡಬಡಾಯಿಸಬೇಕಾಯಿತು.

ಒಂದು ಮಾತು ಮಾತ್ರ ನಿಜ. ಭಾರತಕ್ಕೆ ಬಂದ ಆಧುನಿಕತೆ ಪಶ್ಚಿಮದ ಆಧುನಿಕತೆಗಿಂತ ಬಹಳ ಸಂಕೀರ್ಣವಾಗಿತ್ತು ಮತ್ತು ವೈವಿಧ್ಯಮಯವಾಗಿತ್ತು. ಅದನ್ನು ಉಪಕಾರಿ ಅಥವಾ ಅಪಕಾರಿ ಎಂದು ಏಕಮುಖಿಯಾಗಿ ನಿರ್ಣಯಿಸುವುದು ಸಾಧ್ಯವೇ ಇಲ್ಲ. ಅನೇಕ ಸಂದರ್ಭಗಳಲ್ಲಿ ಅದು ಉಪಕಾರಿಯಾಗಿತ್ತು; ಕೆಲವು ಸಂದರ್ಭಗಳಲ್ಲಿ ನಿರಪಾಯಕಾರಿಯಾಗಿತ್ತು; ಇನ್ನು ಕೆಲವು ಸಂದರ್ಭಗಳಲ್ಲಿ ಅಪಕಾರಿಯಾಗಿತ್ತು.

ಭಾರತದಲ್ಲಿ ಆಧುನಿಕತೆಯ ಮೂಲ ಪೂರ್ವ – ಪಶ್ಚಿಮಗಳ ಮುಖಾಮುಖಿಯಲ್ಲಿದೆ. ಆದರೆ ಈ ಮುಖಾಮುಖಿ ಎರಡು ಸಮಾನ ಸಮಾಜಗಳ ನಡುವೆ ನಡೆದದ್ದಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿ. ಮುಖ್ಯ ಭಿನ್ನತೆಯೆಂದರೆ, ಇಂಗ್ಲಂಡ್ ಆಳುವ ಸಾಮ್ರಾಜ್ಯವಾಗಿತ್ತು, ಭಾರತ ಆಳಿಸಿಕೊಳ್ಳುವ ಗುಲಾಮ ದೇಶವಾಗಿತ್ತು. ಈ ಕಾರಣದಿಂದಾಗಿಯೇ, ಆಧುನಿಕತೆಯ ಲಕ್ಷಣಗಳಾದ ವೈಜ್ಞಾನಿಕ ದೃಷ್ಟಿಕೋನ, ತಾರ್ಕಿಕ ಯೋಚನಾಕ್ರಮ, ಔದ್ಯೋಗೀಕರಣ, ನಗರೀಕರಣ, ರಾಜಕೀಯ ವ್ಯವಸ್ಥೆ, ಬಂಡವಾಳಶಾಹಿಯ ಉದಯ, ಕೂಲಿಕಾರರ ಸಂಘಟಿತ ಹೋರಾಟ ಇತ್ಯಾದಿಗಳೊಂದಿಗೆ ಪಶ್ಚಿಮದ ಆಧುನಿಕತೆಯಲ್ಲಿಲ್ಲದ ಕೆಲವು ಬೆಳವಣಿಗೆಗಳು ಭಾರತದಲ್ಲಿ ಕಾಣಿಸಿಕೊಂಡವು.

ಎಲ್ಲಕ್ಕೂ ಮೂಲಭೂತವಾದ ಸಂಗತಿಯೆಂದರೆ ವಸಾಹತುಶಾಹಿಯ ಹಾಜರಿ. ಅದು ಆಳುವ ಮತ್ತು ಆಳಿಸಿಕೊಳ್ಳುವ ಜನರ ನಡುವೆ ಎಲ್ಲದರಲ್ಲಿಯೂ ತಾರತಮ್ಯ ಭಾವವನ್ನು ಹುಟ್ಟಿಸುತ್ತದೆ. ಆಳುವವರದೆಲ್ಲವೂ ಶ್ರೇಷ್ಠ, ಆಳಿಸಿಕೊಳ್ಳುವವರು ಅನಾಗರಿಕ. ಈ ಭಾವನೆಯನ್ನು ಆಳುವವರು ಹುಟ್ಟಿಸುತ್ತಾರೆ, ಆಳಿಸಿಕೊಳ್ಳುವವರು ಅದನ್ನು ನಂಬುತ್ತಾರೆ. ಇದಕ್ಕೆ ವಿರುದ್ಧವಾಗಿ, ಭಾರತದಂಥ ತಮ್ಮದೇ ಆದ ದೀರ್ಘ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ದೇಶಗಳು ತಮ್ಮದೇ ಶ್ರೇಷ್ಠ, ಆಳುವವರದಲ್ಲ ಎಂದು ಹೆಮ್ಮೆಯನ್ನು ಬೆಳೆಸಿಕೊಂಡು ಪಶ್ಚಿಮಕ್ಕೆ ಎದುರಾಗಿ ನಿಲ್ಲುತ್ತವೆ. ಇವೆರಡೂ ವಸಾಹತುಶಾಹಿ ಹುಟ್ಟುಹಾಕುವ ಅನಾರೋಗ್ಯಕರ ಮನಃಸ್ಥಿತಿಗಳು. ಇಂಥಲ್ಲಿ ಸಮಾನಸ್ಕಂದರಲ್ಲಿ ನಡೆಯುವ ಮುಕ್ತ ಕೊಡುಕೊಳ್ಳುವಿಕೆ ಇರುವುದಿಲ್ಲ. ಇದು ಸಂಸ್ಕೃತಿಗಳ ಒಂದು ಇನ್ನೊಂದರಿಂದ ಕಲಿಯುವುದನ್ನು ತಡೆಯುತ್ತದೆ. ಒಂದು ಕಡೆ, ಆಳಿಸಿಕೊಳ್ಳುವ ಸಮಾಜಗಳು ತಮ್ಮಲ್ಲಿಯ ಮೌಲಿಕವಾದ ಎಷ್ಟೋ ಸಂಗತಿಗಳನ್ನು ಕೈಬಿಟ್ಟು ಆಳುವ ಸಮಾಜಗಳ ಅಂಧಾನುಕರೆಣೆಗಿಳಿಯುತ್ತವೆ. ಇನ್ನೊಂದು ಕಡೆ, ಒಪ್ಪಿಕೊಳ್ಳಬೇಕಾದ ಅನೇಕ ಸಂಗತಿಗಳನ್ನು ತಿರಸ್ಕರಿಸಿ, ಮೂಲಭೂತವಾದಕ್ಕೆ ಪಕ್ಕಾಗುತ್ತವೆ. ಆಳುವ ಸಂಸ್ಕೃತಿಗಳು ಸಹ ತಮ್ಮ ಶ್ರೇಷ್ಠತೆಯ ಭ್ರಮೆಯಲ್ಲಿ ಆಳಿಸಿಕೊಳ್ಳುವ ಸಮಾಜ-ಸಂಸ್ಕೃತಿಗಳಿಂದ ಕಲಿಯಲು ಹಿಂಜರಿಯುತ್ತವೆ. ತೀರ ಇತ್ತೀಚಿನ ಆಧುನಿಕೋತ್ತರ ಸಿದ್ಧಾಂತಗಳು ಇದನ್ನು ಒಪ್ಪುವುದಿಲ್ಲ. ಎರಡೂ ಕಡೆ ಪರೋಕ್ಷವಾಗಿಯೊ ಪ್ರತ್ಯಕ್ಷವಾಗಿಯೊ ಅನುಸಂಧಾನಗಳು ನಡೆಯುತ್ತವೆಂದು ಅವುಗಳ ವಾದವಾಗಿದೆ. ಆಳಿಸಿಕೊಳ್ಳುವ ಸಮಾಜಗಳು ಸ್ವೀಕಾರದಲ್ಲಿ ಬಹಳ ಹುಷಾರಾಗಿ ತಮಗೆ ಬೇಡವಾದದ್ದನ್ನು ಬಿಟ್ಟು, ಅಗತ್ಯವಿದ್ದದ್ದನ್ನು ಮಾತ್ರ ಆರಿಸಿಕೊಂಡು, ತೆಗೆದುಕೊಂಡದ್ದಕ್ಕೆ ದೇಶೀ ದೀಕ್ಷೆಯನ್ನು ಕೊಟ್ಟು ಬಳಸಿಕೊಳ್ಳುತ್ತವೆಂದೂ, ಆಳುವ ಸಂಸ್ಕೃತಿಗಳೂ ಆಳಿಸಿಕೊಳ್ಳುವ ಸಂಸ್ಕೃತಿಗಳಿಂದ ಪ್ರಭಾವಿತವಾಗುತ್ತವೆಂದೂ ಈ ಸಿದ್ಧಾಂತಗಳ ನಿಲುವಾಗಿದೆ. ಆದರೆ ಪೂರ್ವ ಮತ್ತು ಪಶ್ಚಿಮಗಳು ಪರಸ್ಪರ ಕೊಟ್ಟಿದ್ದೆಷ್ಟು. ತೆಗೆದುಕೊಂಡದೆಷ್ಟು ಎಂದು ಲೆಕ್ಕ ಹಾಕಿದರೆ, ಪೂರ್ವವೇ ದೊಡ್ಡ ಸಾಲಗಾರನಾಗುತ್ತದೆಂದು ಕಾಣುತ್ತದೆ. ಇದರಿಂದ ಹಾನಿಯಾಗಿದ್ದರೆ ಅದು ಪೂರ್ವಕ್ಕಲ್ಲ, ಪಶ್ಚಿಮಕ್ಕೆ ಎಂದು ಸಮಾಧಾನ ಹೇಳುವವರೂ ಇದ್ದಾರೆ.

ಭಾರತದಲ್ಲಿ ಬಹಳ ಮುಖ್ಯವಾದ ಬದಲಾವಣೆ ಕಾಣಿಸಿಕೊಂಡದ್ದು ಇಂಗ್ಲೆಂಡಿನ ಮಾದರಿಯ ಆಧುನಿಕ ಶಿಕ್ಷಣದ ಮೂಲಕ. ನಮ್ಮಲ್ಲಿ ಆರಂಭವಾದ ಆಧುನಿಕತೆಗೆ ಈ ಶಿಕ್ಷಣ ವೈಚಾರಿಕ ತಳಹದಿಯನ್ನು ಮತ್ತು ಸಮರ್ಥನೆಗಳನ್ನು ಒದಗಿಸಿತು. ಆ ಮೂಲಕವೇ ಪಶ್ಚಿಮದ ಸಾಹಿತ್ಯ, ವೈದ್ಯಪದ್ಧತಿ, ಇತಿಹಾಸ, ವಿಜ್ಞಾನ, ಅರ್ಥಶಾಸ್ತ್ರ, ಆಡಳಿತ ಪದ್ಧತಿ, ನ್ಯಾಯಶಾಸ್ತ್ರ, ತತ್ವಶಾಸ್ತ್ರ ಮೊದಲಾದವುಗಳನ್ನು ಕಲಿಸಿ, ಆಚರಣೆಯಲ್ಲಿ ತರುವ ಕೆಲಸ ನಡೆಯಿತು.

ಆದರೆ ಅದು ಸ್ವತಂತ್ರ ವಿಚಾರಶಕ್ತಿಯನ್ನು ಕಲಿಸಿಕೊಟ್ಟಿತೆನ್ನುವುದೂ ನಿಜ. ಅದು ನಮ್ಮ ಪಾರತಂತ್ರ್ಯದ ಅವಮಾನಕಾರಿ ಅವಸ್ಥೆಯ ಬಗ್ಗೆ ಅರಿವು ಮೂಡಿಸಿತು. ಇಂಥ ಸ್ಥಿತಿಯಿಂದ ಹೊರಗೆ ಬರಬೇಕೆಂಬ ತುಡಿತವನ್ನು ಹುಟ್ಟಿಸಿತು. ಇದರ ಮುಖ್ಯ ಪರಿಣಾಮವೆಂದರೆ, ಭಾರತ ಸಾಂಸ್ಕೃತಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಒಂದು ರಾಷ್ಟ್ರ ಎಂಬ ಹೊಸ ಕಲ್ಪನೆ ಉದಯವಾಯಿತು. ಅದು ರಾಷ್ಟ್ರೀಯತೆಯ (Nationalism) ಪರಿಕಲ್ಪನೆಗೆ ಬೀಜವಾಯಿತು. ರಾಷ್ಟ್ರವ್ಯಾಪಿಯಾದ ಸ್ವಾತಂತ್ರ್ಯದ ಆಂದೋಲನವನ್ನು ಹುಟ್ಟುಹಾಕಿತು. ಭಾರತ ಒಂದು ರಾಷ್ಟ್ರ ಎಂಬ ಕಲ್ಪನೆ ಆ ಆಂದೋಲನಕ್ಕೆ ಅಗತ್ಯವಾಗಿತ್ತು. ಹಾಗೆಯೇ ಅದರ ವಿಶಿಷ್ಟ ಅಸ್ಮಿತೆ ಕೂಡ. ಹಾಗಾಗಿ ಸ್ವಾತಂತ್ರ್ಯದ ಆಂದೋಲನ ಭಾರತೀಯ ದೇಶೀ ಪರಂಪರೆಯ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿತು. ತನ್ನ ಸಂಸ್ಕೃತಿ, ಇತಿಹಾಸಗಳ ಬಗ್ಗೆ ಭಾರತ ಅಭಿಮಾನ ತಳೆಯಿತು. ಕಾಲದ ಈ ದೂರದಿಂದ ನೋಡಿದಾಗ ಹಾಗೆ ರೂಪಿಸಿಕೊಂಡ ದೇಶೀಯತೆ ಏಕಮುಖಿಯಾಗಿತ್ತು, ಮತ್ತು ಹಿಂದೂ ವೈದಿಕ ಸಂಸ್ಕೃತಿಯನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸಲಾಯಿತು ಎಂಬುದು ಎದ್ದು ಕಾಣುತ್ತದೆ. ಹಿಂದೂ ವೈದಿಕ ಸಂಸ್ಕೃತಿಯಲ್ಲಿಯ ಹಾನಿಕಾರಕ, ಜೀವವಿರೋಧಿ, ಪ್ರತಿಗಾಮಿ ಅಂಶಗಳನ್ನು ತಿರಸ್ಕರಿಸಬೇಕೆಂಬ ಎಚ್ಚರವಿದ್ದರೂ, ಒಟ್ಟಿನಲ್ಲಿ ಭಾರತದ ಬಹುಮುಖಿ ಸಂಸ್ಕೃತಿಯ ಸ್ವರೂಪ ಅಲಕ್ಷ್ಯಕ್ಕೀಡಾಯಿತೆಂಬುದು ಸ್ಪಷ್ಟವಾಗಿಯೇ ಇದೆ. ಅದಕ್ಕಾಗಿಯೇ, ಭಾರತೀಯ ಸಂಸ್ಕೃತಿಯನ್ನು ವರ್ಣಿಸಲು ‘ವಿವಿಧತೆಯಲ್ಲಿ ಏಕತೆ’ ಎಂಬ ಸೂತ್ರಗಳು ಹುಟ್ಟಿಕೊಂಡಾವು. ಈ ಬಗೆಯ ದೃಷ್ಟಿಕೋನ ಸ್ವಾತಂತ್ರ್ಯಾಂದೋಲನದ ಕಾಲಕ್ಕೆ ಅಗತ್ಯವಾಗಿತ್ತೆಂಬುದನ್ನೂ ಮರೆಯುವಂತಿಲ್ಲ. ಆ ಕಾಲಕ್ಕೆ ಭಾರತ ತನ್ನೆಲ್ಲ ಬಹುರೂಪತ್ವವನ್ನು ಮರೆತು ಒಂದಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಎದ್ದು ನಿಲ್ಲುವುದು ಅನಿವಾರ್ಯವಾಗಿತ್ತು.

ಹೀಗೆ, ರಾಷ್ಟ್ರೀಯ ಆಂದೋಲನ ಭಾರತೀಯ ಆಧುನಿಕತೆಯ ಒಂದು ವಿಶಿಷ್ಟ ಅಂಶವೆಂಬುದು ಬಹಳ ಮುಖ್ಯವಾದ ಸಂಗತಿ. ಅದು ನಮ್ಮ ಆಧುನಿಕತೆಗೆ ಬೇರೆಯದೇ ಆದ ದಟ್ಟ ಬಣ್ಣವೊಂದನ್ನು ಬಳಿಯಿತು. ಇಲ್ಲಿಯೇ ಭಾರತೀಯ ಆಧುನಿಕತೆ ಪಶ್ಚಿಮದ ಆಧುನಿಕತೆಯಿಂದ ಭಿನ್ನವಾಗುತ್ತದೆ ಮತ್ತು ಹೆಚ್ಚು ಸಂಕೀರ್ಣವಾಗುತ್ತದೆ. ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಕುರಿತು ೩೦-೪೦ ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಇವುಗಳನ್ನು ಬರೆದವರು ಎಲ್ಲರೂ ನವೋದಯದ ಮತ್ತು ಪ್ರಗತಿಶೀಲ ಲೇಖಕರು. ಬಸವರಾಜ ಕಟ್ಟೀಮನಿಯವರ “ಸ್ವಾತಂತ್ರ್ಯದೆಡೆಗೆ” (೧೯೪೪) ಒಂದನ್ನು ಬಿಟ್ಟರೆ, ಉಳಿದ ಎಲ್ಲ ಕಾದಂಬರಿಗಳು ಪ್ರಕಟವಾದದ್ದು ಸ್ವಾತಂತ್ರ್ಯ ಸಿಕ್ಕ ನಂತರ ಹೆಚ್ಚಿನ ಕಾದಂಬರಿಗಳು ಚಳವಳಿಯ ಕ್ರಿಯಾಪ್ರಧಾನವಾದ ಹಂತಗಳ ರೋಚಕ ಚಿತ್ರಗಳನ್ನು ಕೊಡುತ್ತವೆ. ಶಿವರಾಮ ಕಾರಂತರ “ಔದಾರ್ಯದ ಉರುಳಲ್ಲಿ” (೧೯೪೭) ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರರ “ಮೆರವಣಿಗೆ” (೧೯೮೧) ಕಾದಂಬರಿಗಳು ಮಾತ್ರ ಸ್ವಾತಂತ್ರ್ಯ ಚಳವಳಿ ಹುಟ್ಟುಹಾಕಿದ ಸಾಮಾಜಿಕ ಎಚ್ಚರ, ವಿದಾಯಕ ಕಾರ್ಯಕ್ರಮಗಳನ್ನು ಗಮನಿಸುತ್ತವೆ. ಅಪರೂಪಕ್ಕೆಂಬಂತೆ, ೧೯೪೭ರ ಆಗಸ್ಟ ೧೫ರಂದೇ ಪ್ರಕಟವಾದ ಶ್ರೀರಂಗರ “ಪುರುಷಾರ್ಥ” ಮುಂಬರಲಿದ್ದ ರಾಜಕೀಯ ಅವನತಿಯ ಮುಂಗಾಣಿಕೆಯನ್ನು ಕೊಡುತ್ತದೆ. ಉಳಿದ ಕಾದಂಬರಿಗಳು ಚಳವಳಿಯ ಇನ್ನೊಂದು ಆಯಾಮವಾದ ಆಧುನಿಕತೆಯ ಸಂಕೀರ್ಣ ಪರಿಣಾಮಗಳನ್ನು ಅಷ್ಟಾಗಿ ಹಿಡಿಯುವುದಿಲ್ಲ. ತೀರ ಇತ್ತೀಚೆಗೆ ಬಂದಿರುವ ವ್ಯಾಸರಾಯ ಬಲ್ಲಾಳರ “ಹೆಜ್ಜೆ”(೨೦೦೦) ಮತ್ತು ಎಚ್.ನಾಗವೇಣಿಯರ “ಗಾಂಧಿ ಬಂದ” (೧೯೯೯) ಕಾದಂಬರಿಗಳು ಮಾತ್ರ ಇದಕ್ಕೆ ಅಪವಾದವಾಗಿವೆ. ಬಹುಶಃ ಇವುಗಳಿಗೆ ದೊರೆತಿರುವ ಕಾಲದ ಪರಿಪ್ರೇಕ್ಷ್ಯ ಈ ಎಚ್ಚರವನ್ನು ಹುಟ್ಟಿಸಿರಬಹುದು.

ಸ್ವಾತಂತ್ರ್ಯ ಚಳವಳಿ ಕೇವಲ ರಾಜಕೀಯ ಸ್ವರೂಪದ್ದಾಗಿರಲಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಜೊತೆಗೆ ಸಾಮಾಜಿಕ ಸುಧಾರಣೆಗಳೂ ಹಾಸುಹೊಕ್ಕಾಗಿ ಸೇರಿಕೊಂಡಿದ್ದವು. ಮೂಢನಂಬಿಕೆ, ಲಿಂಗತಾರತಮ್ಯ, ಸಾರ್ವತ್ರಿಕ ಶಿಕ್ಷಣ, ಅಸ್ಪೃಶ್ಯತೆ, ಜಾತೀಯತೆ, ಸಮುದ್ರಯಾನ ನಿಷೇಧ, ಬಾಲ್ಯವಿವಾಹ, ವಿಧವಾವಿವಾಹ, ವರದಕ್ಷಿಣೆ, ವೇಶ್ಯಾಸಮಸ್ಯೆ, ಅಂತರ್ಜಾತೀಯ ವಿವಾಹ, ಸತಿಪದ್ಧತಿ ಮೊದಲಾದ ಅನೇಕ ಸಮಸ್ಯೆಗಳ ಬಗ್ಗೆ ಈ ಕಾಲದಲ್ಲಿ ಹೊಸ ಅರಿವು ಮೂಡಿತು. ಈ ಅರಿವಿನ ಹಿಂದೆ ಪಶ್ಚಿಮದ ಸಮಾಜವ್ಯವಸ್ಥೆಯೊಂದಿಗೆ ಮಾಡಿಕೊಂಡ ಹೋಲಿಕೆ, ಆಧುನಿಕ ಶಿಕ್ಷಣದಿಂದ ಮೂಡಿದ ಹೊಸ ತಿಳುವಳಿಕೆ, ಗಾಂಧೀಜಿಯ ಚಿಂತನೆಗಳ ಪ್ರಭಾವ ಒಟ್ಟಿಗೆ ಕೆಲಸ ಮಾಡಿದವು. ಈಗ ಇದನ್ನು ‘ಸುಧಾರಣಾವಾದ’ ಎಂಬ ಪರಿಕಲ್ಪನೆಯ ಮೂಲಕ ವಿವರಿಸಲಾಗುತ್ತಿದೆ.

ಇವೆಲ್ಲ ಮೇಲುನೋಟಕ್ಕೆ ಒಡೆದು ಕಾಣುವ ಸಮಸ್ಯೆಗಳಾಗಿದ್ದವು. ಆದ್ದರಿಂದ ಸುಧಾರಣಾವಾದಿ ನಿಲುವಿನಿಂದ ಈ ಸಮಸ್ಯೆಗಳನ್ನು ಕಾದಂಬರಿಗಳಲ್ಲಿ ಚಿತ್ರಿಸುವುದು ಕಷ್ಟವಾಗಿರಲಿಲ್ಲ. ಇಲ್ಲಿ ದೃಷ್ಟಿಕೋನದ ಆಯ್ಕೆ ಸುಲಭವಾಗಿದ್ದರಿಂದಲೋ ಏನೋ, ಆರಂಭ ಕಾಲದ ಅನೇಕ ಕನ್ನಡ ಕಾದಂಬರಿಗಳು ಇಂಥ ಸಮಸ್ಯೆಗಳನ್ನು ಸಾಕಷ್ಟು ಚಿತ್ರಿಸಿವೆ. ಆದರೆ ಸಮಸ್ಯೆಗಳು ಸರಳೀಕರಣಗೊಂಡು ಸೂಕ್ಷ್ಮಗಳು ತಪ್ಪಿಸಿಕೊಂಡಿವೆ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾತ್ರ ಸಮಸ್ಯೆಗಳ ಸಂಕೀರ್ಣತೆಯ ವಾಸ್ತವ ಗ್ರಹಿಕೆ ಕಾಣುತ್ತದೆ. “ಚೋಮನ ದುಡಿ” (೧೯೩೩) ಸಾಮಾಜಿಕ ಸಮಸ್ಯೆಯ ಅಂಥ ಒಂದು ಸಂಕೀರ್ಣ ರೂಪ. ಆ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಚೋಮನ ಸಮಸ್ಯೆಗೆ ಸುಲಭ ಪರಿಹಾರವಿರಲಿಲ್ಲ. ಆಧುನಿಕತೆಯ ರೂಪದಲ್ಲಿ ಪ್ರವೇಶ ಪಡೆಯುವ ಚಹದ ತೋಟ, ಕ್ರಿಶ್ಚನ್ ಮತಾಂತರಗಳೂ ಅವನ ಹತಾಶೆಯನ್ನು ಅಪರಿಹಾರ್ಯಗೊಳಿಸುತ್ತವೆ.

ಕಾದಂಬರಿ ಪ್ರಕಾರವೇ ಆಧುನಿಕತೆಯೊಂದಿಗೆ ಹುಟ್ಟಿದ ಸಾಹಿತ್ಯ ಪ್ರಕಾರ. ಆಧುನಿಕತೆ ಹುಟ್ಟುಹಾಕಿದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದಕ್ಕಾಗಿಯೇ ರೂಪಗೊಂಡದ್ದು. ಪಶ್ಚಿಮದ ದೇಶಗಳಲ್ಲಿ ೧೮ನೆಯ ಶತಮಾನದಲ್ಲಿ ಉದಯವಾದಾಗಿನಿಂದಲೂ (ವಾಲ್ಟರ್ ಸ್ಕಾಟ್‌ನ ಐತಿಹಾಸಿಕ ಕಾದಂಬರಿಗಳ ಮುಖ್ಯ ಅಪವಾದವನ್ನು ಬಿಟ್ಟರೆ) ಕಾದಂಬರಿ ಆಧುನಿಕತೆಯೊಂದಿಗೇ ಬೆಳೆದು ಬಂದಿದೆ. ಆಧುನಿಕತೆ ಭರಾಟೆಯಲ್ಲಿ ಕಾಣಿಸಿಕೊಂಡ ೧೯ನೆ ಶತಮಾನ ಕಾದಂಬರಿಯ ಭರಾಟೆಯ ಕೆಲವೂ ಆಗಿತ್ತು. ಚಾರ್ಲ್ಸ್ ದಿಕನ್ಸ್‌ನಂಥ ಕಾದಂಬರಿಕಾರರು ಆ ಕಾಲದ ಆಧುನಿಕತೆ ಹುಟ್ಟುಹಾಕಿದ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಲು ಕಾದಂಬರಿ ಪ್ರಕಾರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಅವನ “Hard Times” ಕಾದಂಬರಿ ಈ ಕಾಲದಲ್ಲಿಯ ಪ್ರಭಾವಿ ತತ್ವವಾಗಿದ್ದ ಉಪಯುಕ್ತತವಾದದ (Utilitariansim) ಕಟು ವಿಡಂಬನೆಯಾಗಿದೆ.

೧೯ನೆ ಶತಮಾನದ ಯುರೋಪಿನಲ್ಲಿ ಕಾವ್ಯ ರೊಮ್ಯಾಂಟಿಸಿಜಂದ ಹಾದಿ ಹಿಡಿದರೆ, ಕಾದಂಬರಿ ವಾಸ್ತವವಾದದ (Realism) ಮಾರ್ಗ ಹಿಡಿಯಿತು. ಅದಕ್ಕೆ ಕಾರ‍ಣವೆಂದರೆ, ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕೆ ವಾಸ್ತವ ಶೈಲಿಯೇ ತಕ್ಕದಾಗಿತ್ತು. ವಾಸ್ತವವಾದವೂ ಆಧುನಿಕತೆಯ ಒಂದು ಉತ್ಪನ್ನವೇ ಆಗಿತ್ತು. ಮಹಾವಾಸ್ತವವಾದಿ ಕಾದಂಬರಿಯ ಮೇರುಕೃತಿಗಳು ಬಂದದ್ದು ಇದೇ ಶತಮಾನದಲ್ಲಿ. ಕನ್ನಡದಲ್ಲಿ ಗಳಗನಾಥರ ಕಾದಂಬರಿಗಳಲ್ಲಿ ಹಿಂದುತ್ವವನ್ನು, ರಾಷ್ಟ್ರೀಯತೆಯನ್ನು, ಭಾರತೀಯ ಹಾಗೂ ಕರ್ನಾಟಕದ ಇತಿಹಾಸವನ್ನು ವೈಭವೀಕರಿಸುವ ಒಂದು ಅಲೆ ಆರಂಭದಲ್ಲಿ ಕಾಣಿಸಿಕೊಂಡಿತು. ಇದು ಪರೋಕ್ಷವಾಗಿ ಭಾರತದ ಪಾರತಂತ್ರ್ಯದ ಸ್ಥಿತಿಗೆ ತೋರಿದ ಪ್ರತಿಕ್ರಿಯೇ ಆಗಿತ್ತು. ಆದ್ದರಿಂದಲೇ ಗಳಗನಾಥರ ಕಾದಂಬರಿಗಳು ಅಭೂತಪೂರ್ವ ಜನಪ್ರಿಯತೆ ಗಳಿಸಿದವು. ಉಳಿದಂತೆ ವಾಸ್ತವ ಶೈಲಿಯ ಸಾಮಾಜಿಕ ಕಾದಂಬರಿಗಳದೇ ರಾಜಮಾರ್ಗ ನಿರ್ಮಾಣವಾಯಿತು.

ವಾಸ್ತವವಾದದೊಂದಿಗೆ ಕಾಣಿಸಿಕೊಂಡ ಆಧುನಿಕತೆಯ ಇನ್ನೊಂದು ಬೆಳವಣಿಗೆ ಮಾನವತಾವಾದ (Humanism). ನವೋದಯದ ಮಹತ್ವದ ಕಾದಂಬರಿಕಾರರೆಲ್ಲ ಈ ಎರಡು ಮಾರ್ಗಗಳನ್ನು ಒಟ್ಟಿಗೆ ಹಿಡಿದರು. ಶಿವರಾಮಕಾರಂತರ ಕಾದಂಬರಿಗಳಲ್ಲಿ ಇದರ ಪರಿಣಾಮಕಾರಿ ಅಭಿವ್ಯಕ್ತಿಯನ್ನು ಕಾಣಬಹುದು. ಇದರ ಪರಿಣಾಮವಾಗಿ ವೈಜ್ಞಾನಿಕ ದೃಷ್ಟಿಕೋನ, ತಾರ್ಕಿಕ ಅಲೋಚನೆ, ಸಾಮಾನ್ಯ ಮನುಷ್ಯರಲ್ಲಿ ಆಸಕ್ತಿ, ಮನುಷ್ಯನ ಮೂಲಭೂತ ಘನತೆಯಲ್ಲಿ ನಂಬಿಕೆ, ಸಾಮಾಜಿಕ ವಿಷಮತೆಗಳ ಬಗ್ಗೆ ವಿರೋಧ, ವ್ಯಕ್ತಿಸ್ವಾತಂತ್ರ್ಯದಲ್ಲಿ ಗೌರವ, ತುಳಿತಕ್ಕೊಳಗಾದವರ ಬಗ್ಗೆ ಸಹಾನುಭೂತಿ, ಅಜ್ಞೇಯತಾವಾದ ಮೊದಲಾದವು ವ್ಯಾಪಕವಾಗಿ ಹರಡಿಕೊಂಡವು.

ನವೋದಯದ ಲೇಖಕರು ಆಧುನಿಕತೆಯನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಸ್ವೀಕರಿಸಿದರು. ಅವರು ಪಶ್ಚಿಮದ ಆಧುನಿಕತೆಗೆ ಪೂರ್ತಿಯಾಗಿ ಶರಣಾಗಲಿಲ್ಲ. ಆಧುನಿಕತೆ ಅನಿವಾರ್ಯವೆಂದು ಅವರಿಗೆ ಗೊತ್ತಿತ್ತು. ಅದು ತಂದ ವೈಚಾರಿಕ ಮತ್ತು ಲೌಕಿಕ ಲಾಭಗಳನ್ನು ಅವರು ಒಪ್ಪಿದರು. ಜೊತೆಗೆ ಭಾರತೀಯ ಪರಂಪರೆಯ ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳಬೇಕೆಂಬುದರಲ್ಲೂ ಅವರಿಗೆ ಕಾಳಜಿ ಇತ್ತು. ಕುವೆಂಪು, ಬೇಂದ್ರೆ, ಮಾಸ್ತಿ, ಪು.ತಿ.ನ. ರಂಥ ಕವಿಗಳು ಭಾರತೀಯ ಜೀವನದರ್ಶನದಲ್ಲೇ ತಮ್ಮ ನೆಲೆಗಳನ್ನು ಕಂಡುಕೊಂಡರು. ಕಾರಂತರು ತಮ್ಮ ಕಾದಂಬರಿಗಳಲ್ಲಿ ಮುದುಕಿಯರ ಒಂದು ಚಿಕ್ಕ ಜಗತ್ತನ್ನೇ ಸೃಷ್ಟಿಸಿಕೊಂಡು, ಪರಂಪರಾಗತ ಜೀವನಕ್ರಮದ ಧಾರಣಶಕ್ತಿಯ ಬಗೆಗೆ ತಮ್ಮದೇ ರೀತಿಯಲ್ಲಿ ಗೌರವ ತೋರಿಸಿದರು. ರೈತನಾಗಬೇಕೆಂಬ ಚೋಮನ ಆಶೆ ಆಧುನಿಕತೆಯ ಫಲವಾಗಿ ಬಂದದ್ದು. ಅದರ ಬಗ್ಗೆ ಕಾರಂತರ ಸಹಾನುಭೂತಿ ಇದೆ. ಆದರೆ ಆಧುನಿಕತೆಯ ಬೇರೆ ರೂಪಗಳಾದ ಚಹದ ತೋಟ ಮತ್ತು ಮತಾಂತರ ಅವನ ಬದುಕನ್ನು ದುರಂತಗೊಳಿಸುತ್ತವೆ. “ಮರಳಿ ಮಣ್ಣಿಗೆ” (೧೯೪೧) ಕಾದಂಬರಿಯ ಲಚ್ಚ ಆಧುನಿಕತೆಯ ಪ್ರಲೋಭನೆಗಳಿಗೆ ಬಲಿಯಾದರೆ, ಅವನ ಮಗ ರಾಮ ಅದೇ ಆಧುನಿಕತೆಯನ್ನು ಸದುಪಯೋಗಪಡಿಸಿಕೊಂಡು ಹೊಸ ಅರಿವನ್ನು ಪಡೆದುಕೊಳ್ಳುತ್ತಾನೆ. ಹೀಗೆ, ನವೋದಯ ಕಾದಂಬರಿ ಒಟ್ಟಿನಲ್ಲಿ ಆಧುನಿಕತೆಯ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಸಾಕಷ್ಟು ಜಾಗೃತವಾಗಿತ್ತು.

ಪ್ರಗತಿಶೀಲರೊಂದಿಗೆ ಕನ್ನಡ ಕಾದಂಬರಿ ಆಧುನಿಕತೆಯ ಇನ್ನೊಂದು ಮಗ್ಗಲಿಗೆ ಹೊರಳಿಕೊಂಡಿತು. ಆಧುನಿಕತೆಯ ಅತ್ಯಂತ ಮುಖ್ಯ ಬೆಳವಣಿಗೆಗಳಲ್ಲೊಂದಾದ ಮಾರ್ಕ್ಸ್‌ವಾದ ಪ್ರಗತಿಶೀಲ ಕಾದಂಬರಿಗಳ ವೈಚಾರಿಕತೆಯ ಬೆನ್ನೆಲುಬಾಗಿತ್ತು. ಪಶ್ಚಿಮದ ಇತಿಹಾಸ, ಸಮಾಜವ್ಯವಸ್ಥೆ ಮತ್ತು ಆರ್ಥಿಕ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಕ್ಸ್‌ ನೀಡಿದ ಹೊಸ ದರ್ಶನದ ಬೆಳಕಿನಲ್ಲಿ ಪ್ರಗತಿಶೀಲರು ಭಾರತೀಯ ಸಮಾಜವ್ಯವಸ್ಥೆಯಲ್ಲಿಯ ಅನೇಕ ಸಮಸ್ಯೆಗಳನ್ನು ಗುರುತಿಸಿ, ವಾಸ್ತವವಾದಿ ನೆಲೆಯಲ್ಲಿ ಸವಿವರವಾಗಿ ಚಿತ್ರಿಸಿದರು. ಮುಖ್ಯ ಸಮಸ್ಯೆ ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ಅದು ಹುಟ್ಟುಹಾಕಿದ ಶೋಷಣೆ, ಔದ್ಯೋಗೀಕರಣದಿಂದ ಹುಟ್ಟಿದ ಮಾಲಿಕ-ಕೂಲಿಕಾರರ ನಡುವಿನ ಸಂಬಂಧಗಳು (ಬಸವರಾಜ ಕಟ್ಟೀಮನಿಯವರ “ಜ್ವಾಲಾಮುಖಿಯ ಮೇಲೆ”: ೧೯೫೧, ವ್ಯಾಸರಾಯ ಬಲ್ಲಾಳರ “ಬಂಡಾಯ”:೧೯೮೫), ಜಮೀಂದಾರಿ ವ್ಯವಸ್ಥೆಯಲ್ಲಿಯ ಹೊಲದೊಡೆಯ – ದುಡಿಮೆಗಾರ ರೈತರ ಸಂಬಂಧಗಳು (ನಿರಂಜನರ “ಮೃತ್ಯುಂಜಯ” : ೧೯೭೬), ಜಾತಿವ್ಯವಸ್ಥೆ (ಕಟ್ಟೀಮನಿಯವರ “ಜನಿವಾರ ಮತ್ತು ಶಿವದಾರ”:೧೯೫೫), ಧಾರ್ಮಿಕ ಡಂಭಾಚಾರ (ಕಟ್ಟೀಮನಿಯವರ “ಜರತಾರಿ ಜಗದ್ಗುರು”: ೧೯೫೨ ಮತ್ತು “ಮೋಹದ ಬಲೆಯಲ್ಲಿ”: ೧೯೫೨) ವೇಶ್ಯಾಸಮಸ್ಯೆ (ಅನಕೃ ಅವರ “ನಗ್ನಸತ್ಯ” ಮಾಲಿಕೆ, ತರಾಸು ಅವರ “ಮಸಣದ ಹೂವು : ೧೯೫೩), ಅಧಿಕಾರಶಾಹಿಯ ಭ್ರಷ್ಟಾಚಾರ (ಕಟ್ಟೀಮನಿಯವರ “ನಾನು ಪೋಲೀಸನಾಗಿದ್ದೆ” : ೧೯೫೪) ಮೊದಲಾದ ವಿಶಾಲ ರೂಪದ ಸಾಮಾಜಿಕ ಸಮಸ್ಯೆಗಳು ಈ ಕಾದಂಬರಿಗಳಲ್ಲಿ ಅಭಿವ್ಯಕ್ತಿ ಪಡೆದವು. ಆದರೆ ಈ ಸಮಸ್ಯೆಗಳ ರೋಚಕ ವಿವರಗಳನ್ನು ಕೊಡುವುದರಲ್ಲಿಯೇ ಇವು ಹೆಚ್ಚಿನ ತೃಪ್ತಿ ಪಡೆದವು. ಸಮಸ್ಯೆಗಳ ಹಿಂದಿನ ಮಾನವೀಯ ಸಂಬಂಧಗಳಲ್ಲಿಯ ತೊಡಕುಗಳ ಬಗ್ಗೆ ಗಮನ ಹರಿಸಲಿಲ್ಲ. ನಿರಂಜನರ “ಮೃತ್ಯುಂಜಯ”ದಂಥ ಬಹುಚರ್ಚಿತ ಕಾದಂಬರಿಯೂ ಕೂಡ ಜಮೀಂದಾರ ಮತ್ತು ರೈತರನ್ನು ಕಪ್ಪು – ಬಿಳುಪಿನ ಬಣ್ಣಗಳಲ್ಲಿಯೇ ಚಿತ್ರಿಸುತ್ತದೆ.

ನವ್ಯತೆಯೊಂದಿಗೆ ಆಧುನಿಕತೆಯ ಇನ್ನೊಂದು ಮಜಲು ಆರಂಭವಾಯಿತು. ಆಧುನಿಕ ಕಾಲದಲ್ಲಿ ಮನುಷ್ಯನ ಅಸ್ತಿತ್ವದ ಆಧ್ಯಾತ್ಮಿಕ ಸ್ವರೂಪವನ್ನು (Ontological condition of man) ವಿವರಿಸುವ ಅಸ್ತಿತ್ವವಾದಿ ಚಿಂತನೆ ನವ್ಯದೃಷ್ಟಿಯ ಹಿಂದಿನ ಮುಖ್ಯ ಪ್ರೇರಣೆಯಾಗಿತ್ತು. ನವೋದಯ ಕಾಲದ ಆಧುನಿಕತೆ ಪಶ್ಚಿಮದ ಆಧುನಿಕತೆಯಾಗಿತ್ತು. ಆಧುನಿಕತೆಯ ಅಭಿವ್ಯಕ್ತಿಗಳನ್ನು ಒಪ್ಪಿಕೊಂಡೂ ಅವುಗಳನ್ನು ದೈವದ ಅಸ್ತಿತ್ವದೊಂದಿಗೆ ಹೊಂದಿಸಿಕೊಳ್ಳಲು ಯತ್ನಿಸಿತು. ಬಹುಶಃ ಶಿವರಾಮಕಾರಂತ, ಶ್ರೀರಂಗರಂಥ ಒಬ್ಬಿಬ್ಬರನ್ನು ಬಿಟ್ಟರೆ ಉಳಿದ ಕಾದಂಬರಿಕಾರರು ಆಸ್ತಿಕರಾಗಿದ್ದರು. ಸಾಂಪ್ರದಾಯಿಕವಾಗಿ ಪೂಜೆಗೊಳ್ಳುತ್ತಿದ್ದ ಕುಂಟಿ, ಕೂರಿಗೆ, ಚಕ್ಕಡಿ, ಎತ್ತು, ತಕ್ಕಡಿಗಳಂತೆ ಆಧುನಿಕತೆ ತಂದ ಯಂತ್ರಗಳನ್ನೂ ಕೂಡ ಆ ಪಟ್ಟಿಗೆ ಸೇರಿಸಲು ರೈತಾಪಿ, ಜನಗಳು ಕೂಡ ಹಿಂದೆ-ಮುಂದೆ ನೋಡಲಿಲ್ಲ. ಹೊಸದಾಗಿ ಕಟ್ಟಿದ ಅಣೆಕಟ್ಟುಗಳನ್ನು ನೆಹರೂರಂಥವರು ‘ಆಧುನಿಕ ದೇವಾಲಯ’ಗಳೆಂದು ವರ್ಣಿಸುವಾಗ ಆಸ್ತಿಕ ಭಾಷೆಯನ್ನೇ ಬಳಸಿದರು. ಆದರೆ ಪ್ರಗತಿಶೀಲರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. (ಕಾರಂತ, ಶ್ರೀರಂಗರೂ ಕೂಡ ಪ್ರಗತಿಶೀಲರೊಂದಿಗೆ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದರು). ನಾಸ್ತಿಕ ಆಧುನಿಕತೆ ಅಲ್ಲಿ ಕಾಣಿಸಿಕೊಂಡಿತು. ಅದರ ಹಿಂದೆ ಮಾರ್ಕ್ಸ್ ಧರ್ಮವನ್ನು ಅಮಲೇರಿಸುವ ಅಫೀಮು ಎಂದು ತಿರಸ್ಕರಿಸಿದ ಕಾರಣವೂ ಇತ್ತು. ದೇವರ ಸ್ಥಾನದಲ್ಲಿ ಮಾರ್ಕ್ಸ್‌ವಾದ ಎಲ್ಲ ಸಮಸ್ಯೆಗಳಿಗೂ ಉತ್ತರವಾಗಬಲ್ಲದೆಂಬ ನಂಬಿಕೆ ಅವರಲ್ಲಿತ್ತು. ಆದರೂ ನಾಸ್ತಿಕರಾಗಿದ್ದೂ ಮಾರ್ಕ್ಸ್‌ವಾದವನ್ನು ಒಪ್ಪದ ಕಾರಂತರಂಥವರು ಒಂದೆಡೆ ಇದ್ದರೆ. ಇನ್ನೊಂದೆಡೆ ಆಸ್ತಿಕತೆಯತ್ತ ವಾಲಿದ ತರಾಸು ಅವರಂಥವರೂ ಇದ್ದರು ದೇವರೊಂದಿಗೆ, ಪ್ರಗತಿಶೀಲರು ಆಧ್ಯಾತ್ಮ-ಅನುಭಾವಗಳನ್ನೂ ದೂರವಿಟ್ಟರು. ದೇವರಿಲ್ಲವೆಂಬುದು ಕೂಡ ಅವರನ್ನು ಒಂದು ಆಧ್ಯಾತ್ಮಿಕ ಸಮಸ್ಯೆಯಾಗಿ ಕಾಡಲಿಲ್ಲ.

ನವ್ಯರಲ್ಲಿ ದೇವರಿಲ್ಲದ ವಿಶ್ವವೇ (Godless universe) ಎಲ್ಲ ತಾತ್ವಿಕತೆಯ ಆಸ್ತಿಭಾರವಾಗಿತ್ತು. ಇದು ಪಶ್ಚಿಮದ ಆಧುನಿಕತೆಯ ಎರಡನೆ ಹಂತದ ಸ್ಥಿತಿಗೆ ಸಂವಾದಿಯಾಗಿತ್ತು. ಆದರೆ ಈ ಚಿಂತನೆ ಇನ್ನೊಂದು ಬಗೆಯ ಆಧ್ಯಾತ್ಮಿಕ ತೀವ್ರತೆಯನ್ನು ಪಡೆದದ್ದು ಮಾತ್ರ ಕುತೂಹಲಕರವಾದ ಬೆಳವಣಿಗೆಯಾಗಿದೆ. ಇಲ್ಲಿ, ದೇವರಿಲ್ಲ ಎಂಬ ನಂಬಿಕೆಯೇ ಅನೇಕ ಹೊಸ ಸಮಸ್ಯೆಗಳಿಗೆ ಕಾರ‍ಣವಾಗುತ್ತದೆ. ದೇವರಿಲ್ಲ ಎಂದಾದ ಮೇಲೆ ಮನುಷ್ಯ ತನ್ನ ಜೀವನದಲ್ಲಿ ಸಂಭವಿಸುವ ಯಾವದಕ್ಕೂ ದೇವರ ಮೇಲೆ ಭಾರ ಹಾಕಲಿಕ್ಕಾಗುವುದಿಲ್ಲ. ಅದರಿಂದ ಅವನ ಸ್ವಂತದ ಜವಾಬ್ದಾರಿ ಹೆಚ್ಚಾಗುತ್ತದೆ. ತನಗೆ ಆಗುವ ಒಳಿತಿಗೂ ಕೆಡುಕಿಗೂ ಸ್ವತಃ ತಾನೇ ಜವಾಬ್ದಾರನಾಗಬೇಕಾದುದರಿಂದ ಅದು ಅವನ ವೈಯಕ್ತಿಕ ನೈತಿಕತೆಯ ಮೇಲೆ ಭಾರ ಹಾಕುತ್ತದೆ. ಇದರ ಜೊತೆಗೆ ಜೀವನದಲ್ಲಿ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಆ ಆಯ್ಕೆಗಳ ಪರಿಣಾಮಗಳ ಬಗ್ಗೆ ಯಾರನ್ನೂ ದೂಷಿಸುವಂತಿಲ್ಲ. ಆಯ್ಕೆ ಅವನೇ ಮಾಡಿಕೊಂಡದ್ದಾದ್ದರಿಂದ ಅದರ ಪರಿಣಾಮಗಳಿಗೂ ಅವನೇ ಜವಾಬ್ದಾರ. ಜೊತೆಗೆ, ಅವನು ಮಾಡಿಕೊಂಡ ಆಯ್ಕೆ ಅವನಿಗಷ್ಟೇ ಸೀಮಿತವಾಗಿ ಉಳಿಯದೆ, ಅನೇಕರ ದೈವವನ್ನೂ ನಿರ್ಣಯಿಸುವ ಭಾರಿ ಪರಿಣಾಮಗಳನ್ನೂ ಒಳಗೊಂಡಿರುವುದರಿಂದ ಅದು ಆಧ್ಯಾತ್ಮಿಕ, ನೈತಿಕ ತಳಮಳ (Angst)ಕ್ಕೆ, ಅನಂತಮೂರ್ತಿಯವರ “ಸಂಸ್ಕಾರ” (೧೯೬೫), ಶಾಂತಿನಾಥ ದೇಸಾಯಿಯವರ “ಮುಕ್ತಿ” (೧೯೬೧) ಮತ್ತು “ವಿಕ್ಷೇಪ” (೧೯೭೧), ಕುಸುಮಾಕರ ದೇವರಗೆಣ್ಣೂರರ “ನಾಲ್ಕನೆಯ ಆಯಾಮ” (೧೯೬೬), ಕಾಮರೂಪಿಯಾದ ಕಾದಂಬರಿಗಳು ಈ ತಳಮಳಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ. ಇದು ಅಸ್ತಿತ್ವವಾದಿ (Existentialist) ಚಿಂತನೆ.

ವೈಯಕ್ತಿಕ ನೈತಿಕತೆಯ ಈ ಹೊಸ ಕಲ್ಪನೆ ಸಾಮಾಜಿಕ ನೈತಿಕತೆಯ ಗ್ರಹಿಕೆಗಿಂತ ಭಿನ್ನವಾಗಿ ಕೆಲಸ ಮಾಡುವುದೂ ಇದೆ. ಶಾಂತಿನಾಥ ದೇಸಾಯಿಯವರ ಕಥೆ-ಕಾದಂಬರಿಗಳಲ್ಲಿ ಪಾತ್ರಗಳು ಮಾಡಿಕೊಳ್ಳುವ ಆಯ್ಕೆ ಒಂದು ರೀತಿಯಿಂದ ಆ-ನೈತಿಕ(a-moral) ವಾದುದು. ಸಮಾಜದ ಸಾಂಪ್ರದಾಯಿಕ ನೈತಿಕತೆಯ ಮಾನದಂಡಗಳಿಂದ ಅಂಥ ಆಯ್ಕೆಯನ್ನು ಅಳೆಯುವಂತಿಲ್ಲ. ವಿಶೇಷವಾಗಿ, ಅವರು ಚಿತ್ರಿಸುವ ಮುಕ್ತ ಮಾನವೀಯ ಸಂಬಂಧಗಳನ್ನು – ಲೈಂಗಿಕ ಸಂಬಂಧಗಳೂ ಸೇರಿದಂತೆ – ವೈಯಕ್ತಿಕ ನೈತಿಕ ಜವಾಬ್ದಾರಿಯ ನೆಲೆಯಿಂದ ನೋಡಬೇಕಾಗುತ್ತದೆ.

* ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ೨೭-೨೮ ಅಕ್ಟೋಬರ್ ೨೦೦೫ರಂದು ನಡೆಸಿದ ಆಧುನಿಕತೆಗೆ ಮತ್ತು ಕನ್ನಡ ಕಾದಂಬರಿ’ ವಿಚಾರಸಂಕಿರಣದಲ್ಲಿ ಮಾಡಿದ ಆಶಯಭಾಷಣ.