ಶಿವರಾಮ ಕಾರಂತರು ಬರೆದದ್ದು ಒಟ್ಟು ೪೧೫ ಪುಸ್ತಕಗಳನ್ನು. ಈ ಪುಸ್ತಕಗಳ ವಿಷಯವೈವಿಧ್ಯವನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ನಾಟಕ, ಜಾನಪದ, ಶಿಲ್ಪ, ವಿಜ್ಞಾನ, ಮನೋವಿಜ್ಞಾನ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಪರಿಸರವಿಜ್ಞಾನ, ಸಿನಿಮಾ, ರಾಜಕೀಯ ಇತ್ಯಾದಿಗಳೆಲ್ಲ ಅವರ ಬರವಣಿಗೆಯ ಅಳವಿನಲ್ಲಿ ಬರುತ್ತವೆ. ಯಾವುದೇ ವಿಷಯವನ್ನು ಕುರಿತು ಬರೆಯುವುದಕ್ಕೂ ಅವರು ಹಿಂದೆ-ಮುಂದೆ ನೋಡಲಿಲ್ಲ. ಮೈಸೂರಿನ ವಯಸ್ಕರ ಶಿಕ್ಷಣ ಸಮಿತಿಗಾಗಿ ಅವರು “ಕೋಳಿ ಸಾಕಣೆ” ಯನ್ನು ಕುರಿತು ಕೂಡ ಒಂದು ಪುಸ್ತಕ ಬರೆದುಕೊಟ್ಟಿದ್ದಾರೆ.

ಕೇವಲ ಬರವಣಿಗೆಗೆ ಅವರ ಆಸಕ್ತಿಗಳು ಸೀಮಿತವಾಗಿರಲಿಲ್ಲ ಎಂಬುದು ಕೂಡ ಬಹಳ ಮುಖ್ಯವಾದ ವಿಚಾರ. ಚಿಕ್ಕಮಕ್ಕಳಿಗಾಗಿ ತಮ್ಮದೇ ಕಲ್ಪನೆಯ ಶಾಲೆಯೊಂದನ್ನು ಅವರು ನಡೆಸಿದರು. ಮಕ್ಕಳಿಗಾಗಿ ಒಳ್ಳೆಯ ಕಟ್ಟಿಗೆಯ ಆಟಿಗೆಗಳನ್ನು ತಯಾರಿಸುವ ತರಬೇತಿ ಶಿಬಿರವನ್ನು ನಡೆಸಿದರು. ಯಕ್ಷಗಾನದ ಹೊಸ ರೂಪವನ್ನು ತಯಾರಿಸಿ ತಾವೇ ಅದಕ್ಕೆ ತರಬೇತಿ ಕೊಟ್ಟರು. ಹಾಡಿದರು, ಕುಣಿದರು, ಚಿತ್ರ ಬಿಡಿಸಿದರು, ಪರಿಸರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸ್ವಾತಂತ್ರ್ಯ ಚಳವಳಿಗೂ ಧುಮುಕಿದರು. ರಾಜಕೀಯದಲ್ಲೂ ಕೈಯಾಡಿಸಿದರು. ಸಮಾಜಸುಧಾರಣೆಯ ಯೋಜನೆಗಳನ್ನು ನಡೆಸಿದರು. ಅಚ್ಚುಕೂಟವನ್ನು ನಡೆಸಿದರು.

ಅವರ ಮುಖ್ಯ ಆಸಕ್ತಿ ಎನ್ನಬಹುದಾದ ಸಾಹಿತ್ಯದಲ್ಲೂ ಅವರು ಸಾಧಿಸಿದ ವೈವಿಧ್ಯ ಅಚ್ಚರಿಗೊಳಿಸುವಂಥದು. ಕಾವ್ಯ, ನಾಟಕ, ಸಣ್ಣಕಥೆ, ಹರಟೆ, ಪ್ರಬಂಧ, ಜೀವನಚರಿತ್ರೆ, ವೈಚಾರಿಕ ಸಾಹಿತ್ಯ, ಪ್ರವಾಸ ಸಾಹಿತ್ಯ, ಆತ್ಮಕಥೆ, ಚಿತ್ರಕಲೆ, ಶಿಲ್ಪಕಲೆ, ಯಕ್ಷಗಾನ, ಶಬ್ದಕೋಶ, ವಿಶ್ವಕೋಶ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಅನುವಾದ, ಸಂಪಾದನೆ ಮತ್ತು ಮುಖ್ಯವಾಗಿ ಕಾದಂಬರಿ- ಹೀಗೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಅವರು ಕೃತಿ ರಚಿಸಿದ್ದಾರೆ.

ಬಹುಶಃ ಇಂಥ ದೈತ್ಯಪ್ರತಿಭೆಗಳನ್ನು ರೆನೇಜಾನ್ಸ್ ಕಾಲದಲ್ಲಿ ಮಾತ್ರ ಕಾಣಬಹುದೆಂದು ತೋರುತ್ತದೆ. ನಮ್ಮ ನವೋದಯ ಕಾಲದ ಪ್ರಮುಖ ಲೇಖಕರೆಲ್ಲ ಇಂಥ ಬಹುಮುಖ ಪ್ರತಿಭೆಯನ್ನು ಮೆರೆದವರು. ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ, ಶ್ರೀರಂಗ, ಡಿವಿಜಿ. ಪು.ತಿ.ನ. ಮೊದಲಾದವರೆಲ್ಲ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಯಶಸ್ಸು ಸಾಧಿಸಿದವರು. ಕನ್ನಡ ಸಾಹಿತ್ಯ ಆಧುನಿಕವಾಗತೊಡಗಿದ ಸಂಧಿಕಾಲದಲ್ಲಿ ಅದು ಮೈತುಂಬಿ ಬೆಳೆಯುವುದಕ್ಕೆ ಏನೇನು ಬೇಕೋ ಅದನ್ನೆಲ್ಲ ಪೂರೈಸಿಕೊಡಬೇಕೆಂಬ ಛಲದಿಂದ ಇವರು ಬರವಣಿಗೆ ನಡೆಸಿದರು. ಅವರಲ್ಲಿ ಕಾರಂತರದು ಎಲ್ಲರಿಗಿಂತ ಒಂದು ಕೈ ಮಿಗಿಲು. ಕಲೆ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅವರು ರಚಿಸಿದರು. ಅಪಾರವಾದ ಶ್ರಮ, ವೇಳೆ ಮತ್ತು ಓದು ಬಯಸುವ ಕೋಶಗಳನ್ನೂ ಏಕಾಂಗಿಯಾಗಿ ತಯಾರಿಸಿದರು.

ಇಷ್ಟೆಲ್ಲ, ಪರಸ್ಪರ ಸಂಬಂಧವಿಲ್ಲದಂತೆ ಕಾಣುವ ಆಸಕ್ತಿಗಳನ್ನೂ, ವೈವಿಧ್ಯವನ್ನೂ ಹೊಂದಿದ ಲೇಖಕನ ಎಲ್ಲ ಬರವಣಿಗೆಯನ್ನೂ ಹಿಡಿದಿರುವ ಕೇಂದ್ರೀಕೃತ ದೃಷ್ಟಿಕೋನ ಬಂದಿದೆಯೆ? ಇದ್ದರೆ ಅದೇನು? ಎಂಬುವುದು ಮುಖ್ಯವಾದ ಪ್ರಶ್ನೆಗಳು. ಉದಾಹರಣೆಗೆ, ವಿಜ್ಞಾನದಲ್ಲಿ ಅವರು ಹೊಂದಿರುವ ಆಸಕ್ತಿಗೂ ಅವರ ಸೃಜನಶೀಲ ಬರವಣಿಗೆಯಲ್ಲಿ ಬಹಳ ಮುಖ್ಯವಾದ ಕಾದಂಬರಿಗಳಿಗೂ ಇರುವ ಸಂಬಂಧ ಎಂಥದು? “ಸಾಹಿತಿ ಆಗಬೇಕೆಂದು ಬಯಸುವ ವ್ಯಕ್ತಿ ತನ್ನ ಮನಸ್ಸಿನ ಕದವನ್ನು ಯಾತಕ್ಕೂ ಮುಚ್ಚುವಂತಿಲ್ಲ. ಎಲ್ಲ ಬಗೆಯ ಜ್ಞಾನಕ್ಕೂ ಎಲ್ಲ ತರದ ಸಂವೇದನೆಗಳಿಗೂ ಆತನು ತನ್ನ ಮನಸ್ಸನ್ನು ತೆರೆದುಕೊಂಡು, ಬದುಕನ್ನು ಅರ್ಥಮಾಡಿಕೊಳ್ಳುವ ಉದ್ದೇಶ ಉಳ್ಳವನಾಗಬೇಕು” ಎಂದು ಕಾರಂತರೇ ಒಂದೆಡೆ ಹೇಳಿದ್ದಾರೆ. ಬದುಕನ್ನು ಅರ್ಥಮಾಡಿಕೊಳ್ಳುವುದಕ್ಕೆ ಇವೆಲ್ಲ ಬೇಕೆಂದು ಒಪ್ಪಿಕೊಂಡರೂ, ಅವೆಲ್ಲ ತಿಳುವಳಿಕೆಗಳು ಏಕತ್ರಗೊಂಡು ಒಂದು ಅಖಂಡ ಆಸಕ್ತಿಯಾಗುವುದು, ಒಂದು ಅಖಂಡ ಜೀವನದೃಷ್ಟಿಯಾಗುವುದು ಹೇಗೆ?

ಈ ಬಗ್ಗೆ ಗೋಪಾಲಕೃಷ್ಣ ಅಡಿಗರು ಒಂದು ಸಂದೇಹವನ್ನು ವ್ಯಕ್ತಪಡಿಸಿದ್ದಾರೆ: “ಅವರ (ಕಾರಂತರ) ಆಸಕ್ತಿಗಳು ಅನೇಕ, ಯಕ್ಷಗಾನ, ಚಿತ್ರಕಲೆ, ಚಲನಚಿತ್ರ ನಿರ್ಮಾಣ, ಬಾಲಶಿಕ್ಷಣ, ಮುದ್ರಣ, ಸಮಾಜಸುಧಾರಣೆ, ಚಿಂತನೆ, ಕೋಶರಚನೆ, ಗ್ರಂಥಸಂಪಾದನೆ ಇತ್ಯಾದಿ. ಈ ಎಲ್ಲದರಲ್ಲಿಯೂ ಅವರ ಶಕ್ತಿಯ ವ್ಯಯ ಬೇರೆಬೇರೆಯಾಗಿ ಆಗುತ್ತ ಬಂದಿದೆ. ಎಂದರೆ ಇಷ್ಟು ಬಗೆಯ ಆಸಕ್ತಿಗಳು ಇರಬಾರದೆಂದು ಅರ್ಥವಲ್ಲ. ಆಸಕ್ತಿಗಳು ಎಷ್ಟು ಹೆಚ್ಚೋ ಕೃತಿಯ ಮೌಲ್ಯವೂ ಅಷ್ಟೇ ಹೆಚ್ಚು. ಈ ಎಲ್ಲಾ ಆಸಕ್ತಿಗಳನ್ನೂ ಏಕಾತ್ರಗೊಳಿಸಬಲ್ಲ, ಏಕಾತ್ರಗೊಳಿಸಬಲ್ಲ ಅತ್ಯುತ್ತಮ ಬಗೆಯ ಪ್ರತಿಭೆ ಕೆಲಸ ಮಾತ್ರ ಕೃತಿರಚನೆಯ ಕಾಲದಲ್ಲಿ ಇಲ್ಲಿ ನಡೆಯುವುದಿಲ್ಲ. ಏಕಕಾಲಕ್ಕೆ ಈ ಎಲ್ಲವುಗಳ ಉಪಯೋಗವಾಗುವಂತೆ ಕಾರಂತರಿಂದ ಕಾದಂಬರಿಗಳ ರಚನೆ ಆಗಲಿಲ್ಲ ಎಂಬುದು ಈ ಮಾತಿನ ಅರ್ಥ. ಹಾಗೆ ಆಗದಿದ್ದುದರಿಂದ ಇವರ ಕಾದಂಬರಿಗಳೆಲ್ಲವೂ ಅವರ ತುಂಬು ಬದುಕಿನ ಒಂದೊಂದು ಅಂಶವನ್ನು ಚಿತ್ರಿಸುತ್ತವಲ್ಲದೇ ಅವರ ಸಮಗ್ರತೆಯನ್ನಲ್ಲ” (ಹರಿದಾಸಭಟ್ಟ. ೧೯೬೯:೪೭೫). ಈ ಮಾತನ್ನು ಒಪ್ಪುವುದು ಕಷ್ಟ.

ಕಾರಂತರ ಸಮಗ್ರವಾದ ಜೀವನದೃಷ್ಟಿ ರೂಪಿತವಾಗಿರುವುದೇ ವೈವಿಧ್ಯಪೂರ್ಣವಾದ ಆಸಕ್ತಿಗಳ ಆಧಾರದಿಂದ. ಉದಾಹರಣೆಗೆ, ವಿಜ್ಞಾನ, ಪರಿಸರ, ರಾಜಕೀಯಗಳಲ್ಲಿ ಅವರು ತಳೆದಿದ್ದ ಆಸಕ್ತಿಯನ್ನು ಅವರ ಜೀವನದೃಷ್ಟಿಯಿಂದ ಬೇರ್ಪಡಿಸಲು ಆಗುವುದಿಲ್ಲ. ಒಬ್ಬ ಮೇಜರ್ ಲೇಖಕನಲ್ಲಿ ಇರಬೇಕಾದ ಸಮಗ್ರ ಜೀವನದೃಷ್ಟಿ ಕಾರಂತರ ಬರವಣಿಗೆಯ ಹಿಂದೆ ಖಂಡಿತವಾಗಿ ಇದೆ. ಇಂಥ ದೃಷ್ಟಿಸಮಗ್ರತೆ, ವೈವಿಧ್ಯದ ನಡುವೆಯೂ ಇರುವ ಕೇಂದ್ರ ಕಾಳಜಿಗಳು ಒಂದೇ ಕೃತಿಯಲ್ಲಿ ಪ್ರಕಟವಾಗಬೇಕೆಂದು ಆಗ್ರಹಿಸುವುದು ಅಷ್ಟು ಸರಿಯಾದ ತೀರ್ಮಾನವಲ್ಲ. ಹಾಗಿದ್ದ ಪಕ್ಷದಲ್ಲಿ ಒಬ್ಬ ಲೇಖಕ ಒಂದು ಕಾದಂಬರಿಯನ್ನು ಬರೆದರೆ ಅವನ ಬಂಡವಾಳವೆಲ್ಲ ತೀರಿಹೋಗುತ್ತದೆ; ಉಳಿದ ಕಾದಂಬರಿಗಳು ಅದರ ಪುನರಾವರ್ತನೆಯಾಗುತ್ತವೆ. ಒಬ್ಬ ಕವಿಯ ಎಲ್ಲ ಕವಿತೆಗಳನ್ನು ಸೇರಿಸಿ ಒಂದು ಕವಿತೆಯಾಗಿ ನೋಡುವಂತೆ, ಒಬ್ಬ ಕಾದಂಬರಿಕಾರನ ಎಲ್ಲ ಕಾದಂಬರಿಗಳನ್ನೂ ಸೇರಿಸಿ ಒಂದು ಕಾದಂಬರಿಯಂತೆ ನೋಡುವುದು ಸರಿಯಾದ ಕ್ರಮವಾದೀತು. ಆಗ ಒಂದು ಕಾದಂಬರಿ ಇನ್ನೊಂದರ ವಿಸ್ತಾರವಾಗಿ, ಇನ್ನೊಂದಕ್ಕೆ ಪೂರಕವಾಗಿ, ತಿದ್ದುಪಡಿಯಾಗಿ, ಬದಲಾವಣೆಯಾಗಿ, ಬೆಳವಣಿಗೆಯಾಗಿ ಒಂದು ಅಖಂಡ ಕೃತಿಸರಣಿ ನಮಗೆ ಅಭ್ಯಾಸಕ್ಕೆ ಒದಗುತ್ತದೆ.

ಕಾರಂತರ ಇಂಥ ವೈವಿಧ್ಯಪೂರ್ಣವಾದ ಸಾಹಿತ್ಯವನ್ನು, ಅದರಲ್ಲೂ ಮುಖ್ಯವಾಗಿ ಅವರ ಕಾದಂಬರಿಗಳನ್ನು ಅಭ್ಯಾಸ ಮಾಡಲು ಅನುಕೂಲವಾಗುವ ಮತ್ತು ಪರಸ್ಪರ ಪೂರಕವಾದ ಮೂರು ಮುಖ್ಯ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಲಿದ್ದೇನೆ.

ಅಂಥ ಒಂದು ಮುಖ್ಯವಾದ ಸಂಗತಿ ‘ಉದಾರ ಮಾನವತಾವಾದ’, ಇಪ್ಪತ್ತನೆಯ ಶತಮಾನದ ಅನೇಕರನ್ನು ಆಳವಾಗಿ ಪ್ರಭಾವಿಸಿದ ತತ್ವಜ್ಞಾನ ಇದು. ನಮ್ಮ ನವೋದಯದ ಲೇಖಕರೆಲ್ಲ ಆ ಪ್ರಭಾವಕ್ಕೆ ಒಳಗಾದವರು. ಆದರೆ ನೆನಪಿಡಬೇಕಾದ ವಿಷಯವೆಂದರೆ, ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡು ಅನುಸರಿಸಿದ ತತ್ವಜ್ಞಾನ ಆದಾಗಿರಲಿಲ್ಲ; ಹಾಗೂ ಎಲ್ಲ ಲೇಖಕರಲ್ಲೂ ಅದು ಒಂದೇ ಬಗೆಯಾದ ಅಭಿವ್ಯಕ್ತಿಯನ್ನು ಪಡೆಯಲಿಲ್ಲ. ಆದರೂ ಆ ಕಾಲದ ಗಾಳಿಯಲ್ಲಿ ಅದು ಸಹಜವಾಗಿ ತೇಲಾಡುತ್ತಿತ್ತು. ಆಧುನಿಕ ವಿದ್ಯಾಭ್ಯಾಸದೊಂದಿಗೆ ಅದು ಹೆಸರಿಲ್ಲದೆ ಸೇರಿಕೊಂಡಿತು.

ಈ ಮಾನವತಾವಾದದ ಮುಖ್ಯ ಲಕ್ಷಣಗಳನ್ನು ಸ್ಥೂಲವಾಗಿ ಗುರುತಿಸಬಹುದು. ಸ್ಥೂಲವಾಗಿ, ಏಕೆಂದರೆ, ಮಾನವತಾವಾದ ಒಂದು ತತ್ವಶಾಸ್ತ್ರದ ಖಚಿತ ಚೌಕಟ್ಟನ್ನು ಪಡೆದುಕೊಳ್ಳಲೇ ಇಲ್ಲ. ಒಂದು ಉದಾರ, ಸಹಿಷ್ಣು ದೃಷ್ಟಿಕೋನವಾಗಿ ಅದು ಹಿಗ್ಗುತ್ತ, ಬೆಳೆಯುತ್ತ, ಬದಲಾಗುತ್ತ ಹೋಯಿತು. ಅದರ ಮುಖ್ಯ ಲಕ್ಷಣಗಳು ಕೂಡ ಎಲ್ಲ ಲೇಖಕರಲ್ಲಿಯೂ ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅನೇಕ ಲೇಖಕರು ಅದರಲ್ಲಿ ತಮಗೆ ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದಾರೆ. ಕಾರಂತರಲ್ಲಿಯೂ ಇದಕ್ಕೆ ಉದಾಹರಣೆಗಳು ಸಿಗುತ್ತವೆ.

೧. ಮಾನವತಾವಾದದ್ದು ಮುಖ್ಯವಾಗಿ ಮನುಷ್ಯಕೇಂದ್ರಿತ ಚಿಂತನೆ. ಮನುಷ್ಯನೇ ಈ ವಿಶ್ವವ್ಯವಸ್ಥೆಯ ಕೇಂದ್ರ, ಉಳಿದದ್ದೆಲ್ಲ ಅವನ ಸಲುವಾಗಿ ಸೃಷ್ಟಿಯಾದದ್ದು ಎಂದು ಅದು ಭಾವಿಸುತ್ತದೆ. ಅದಕ್ಕಾಗಿಯೇ ಮನುಷ್ಯನ ಸಮಸ್ಯೆಗಳು, ಸಂಬಂಧಗಳು, ಅವನು ಇಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಮನುಷ್ಯನ ಗೌರವ, ಅವನ ಪರಿವರ್ತತೆಯ ಸಾಧ್ಯತೆಗಳು, ಅವನ ಶಕ್ತಿಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಇಲ್ಲಿ ಮುಖ್ಯವಾಗುತ್ತವೆ. ಒಟ್ಟಿನಲ್ಲಿ ಮನುಷ್ಯನೇ ಸೃಷ್ಟಿಯ ಆತ್ಯಂತಿಕ ಶಿಖರ ಎಂದು ಇದು ಭಾವಿಸುತ್ತದೆ. ಕಾರಂತರಲ್ಲಿಯೂ ಮನುಷ್ಯಜೀವನವೇ ಕಾಳಜಿಯ ಕೇಂದ್ರವಾಗಿದೆ. ಅದರ ಸಾಮಾಜಿಕ-ರಾಜಕೀಯ-ನೈತಿಕ ಕಾಳಜಿಗಳನ್ನು ಅವರ ಬರವಣಿಗೆ ಹಲವು ರೀತಿಯಿಂದ ಚಿಂತಿಸಿದೆ ಮತ್ತು ಚಿತ್ರಿಸಿದೆ. ಆದರೂ ಮನುಷ್ಯನೇ ಸೃಷ್ಟಿಯ ಕೇಂದ್ರ ಎಂದು ಅವರು ಭಾವಿಸುವುದಿಲ್ಲ. ಅವರ ಪರಿಸರ ಚಿಂತನೆ ಮತ್ತು ವಿಜ್ಞಾನದ ಅಭ್ಯಾಸ, ಮನುಷ್ಯ ಈ ಸೃಷ್ಟಿಯಲ್ಲಿ ಒಂದು ಸಣ್ಣ ಕೊಂಡಿ ಎಂಬ ಸತ್ಯವನ್ನು ತೋರಿಸಿಕೊಟ್ಟಿದೆ. ಹಲವು ಮಿಲಿಯನ್ ವರ್ಷಗಳ ಈ ವಿಶ್ವದ ವಿಕಾಸಕ್ರಮದಲ್ಲಿ ಮನುಷ್ಯನ ಸ್ಥಾನ ಏನು ಎನ್ನುವುದನ್ನು ಅವರು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದಲೇ ಈ ವಿಶ್ವದ ವ್ಯವಸ್ಥೆಯಲ್ಲಿ ಪ್ರಜ್ಞಾವಂತ ಜೀವಿಯಾಗಿ ಅವನ ಬದುಕು ಹೇಗಿರಬೇಕು. ಅವನ ಜವಾಬ್ದಾರಿಗಳೇನು ಎಂದು ಅವರು ಯೋಚಿಸುತ್ತಾರೆ.

೨. ಮಾನವತಾವಾದ ದೇವತ ಅಸ್ತಿತ್ವದಲ್ಲಿ ಅಪನಂಬಿಕೆ ಹೊಂದಿದೆ. ಕಾರಂತರಲ್ಲಿ ಈ ಅಪನಂಬಿಕೆ ಮೂಲಭೂತವಾದದ್ದು. “ಬಾಳ್ವೆಯೇ ಬೆಳಕು” ಮುಂತಾದ ಕೃತಿಗಳು ಈ ಅಪನಂಬಿಕೆಯನ್ನು ಸ್ಪಷ್ಟವಾಗಿಯೇ ಪ್ರತಿಪಾದಿಸುತ್ತವೆ. ದೇವರು ಮನುಷ್ಯ ಸೃಷ್ಟಿಸಿದ ಕಲ್ಪನೆ, ಆದ್ದರಿಂದ ಅವನು “ನಮ್ಮ ಅಳತೆಯನ್ನು ಮೀರದ ದೇವರು”. ಹೀಗೆ ದೇವರನ್ನು ನಿರಾಕರಿಸಿದ ಮೇಲೆ ಮನುಷ್ಯನ ಜವಾಬ್ದಾರಿ ಬಹಳಷ್ಟು ಹೆಚ್ಚಾಗಬೇಕಾಯಿತು. ತನ್ನ ಬದುಕಿಗೆ ದೇವರು ಜವಾಬ್ದಾರನಲ್ಲ ಎಂದಾಗ ಮನುಷ್ಯ ಆ ಜವಾಬ್ದಾರಿಯನ್ನು ತಾನೇ ಹೊರಬೇಕಾಗುತ್ತದೆ. ದೇವರ ಮೇಲೆ ಭಾರ ಹಾಕಿ ಕೈಚೆಲ್ಲಿ ಕುಳಿತುಕೊಳ್ಳುವುದರ ಬಗ್ಗೆ ಕಾರಂತರಿಗೆ ಗೌರವವಿಲ್ಲ. ತಮ್ಮ ಬದುಕಿನ ಜವಾಬ್ದಾರಿಯನ್ನು ತಾವೇ ನಿರ್ವಹಿಸುವ, ಬದುಕನ್ನು ಧೈರ್ಯದಿಂದ ಎದುರಿಸುವ ವ್ಯಕ್ತಿಗಳ ಬಗ್ಗೆ ಅವರಿಗೆ ಅಪಾರ ಗೌರವ.

೩. ದೇವರು ಇಲ್ಲವೆಂದ ಮೇಲೆ ಪರಲೋಕವೂ ಇಲ್ಲ. “ನಾನು ಬದುಕಿನ ನಾಳೆಯ ಎಂದರೆ ಪರದ ಚಿಂತೆಯನ್ನು ಹೊತ್ತವನಲ್ಲ. ಆತ್ಮ, ಪ್ರಾರಬ್ಧಕರ್ಮ, ಪರಲೋಕಗಳ ನಂಬಿಕೆಯನ್ನು ಬೆಳೆಯಿಸಿ, ಇದನ್ನು ತಾತ್ಸಾರದಿಂದ ಕಂಡವನೂ ಅಲ್ಲ; ಕಾಣುವವನೂ ಅಲ್ಲ. ಆದುದರಿಂದ ಇದೇ ನನ್ನೆಲ್ಲ ಸಾಧನೆಗಳ ರಂಗಸ್ಥಳ” ಎಂದು ಕಾರಂತರು ಒಂದೆಡೆ ಸ್ಪಷ್ಟಪಡಿಸಿದ್ದಾರೆ (೧೯೯೧). ಈ ಜಗತ್ತೇ ಮುಖ್ಯ ಎನ್ನುವ ಕಲ್ಪನೆಯಿಂದಾಗಿ, ಇದನ್ನು ಸುಧಾರಿಸಬೇಕು, ಬದುಕಲು ಯೋಗ್ಯವಾದುದನ್ನಾಗಿ ಮಾಡಬೇಕು ಎಂಬ ಕಳಕಳಿ ಅವರ ಚಿಂತನೆಯಲ್ಲಿ ಮುಖ್ಯವಾಗಿ ಕಾಣುತ್ತದೆ. ಇಂಥ ಜೀವನಾಸಕ್ತಿ, ಜೀವನಪ್ರೀತಿಗಳೇ ಅವರ ಜೀವನದೃಷ್ಟಿಯ ಮೂಲ ಸೆಲೆಗಳಾಗಿವೆ.

೪. ಇದೇ ಚಿಂತನೆಯೇ ಕಾರಂತರಲ್ಲಿ ‘ಋಣ’ದಲ್ಲಿ ಎಂಬ ಪರಿಕಲ್ಪನೆಗೆ ಕಾರಣವಾಗುತ್ತದೆ. ಈ ಬದುಕು ಸುಂದರವಾಗಬೇಕು, ಸುತ್ತಲಿನ ಜೀವನ ಉತ್ತಮವಾಗಬೇಕು. ಅದಕ್ಕಾಗಿ ನಾವು ಈ ಸಮಾಜಕ್ಕೆ ಏನಾದರೂ ಒಂದಿಷ್ಟು ಒಳ್ಳೆಯದನ್ನು ಮಾಡಲು ಯತ್ನಿಸಬೇಕು. ಈ ಬದುಕು ನಮಗೆ ಏನೋ ಒಂದಿಷ್ಟು ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ನಾವು ಅದರ ಋಣವನ್ನು ತೀರಿಸಬೇಕು. ಈ ಸಾಮಾಜಿಕ ಋಣದ ಪಶ್ನೆ ಅವರ ಬರವಣಿಗೆಯಲ್ಲಿ ಮತ್ತೆಮತ್ತೆ ಕಾಣಿಸುತ್ತದೆ.

೫. ದೇವರು ಮತ್ತು ಪರಲೋಕ ಇಲ್ಲವಾದ್ದರಿಂದ ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೆ ಇಲ್ಲಿಯೇ ನಾವೇ ಉತ್ತರಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ಅದರ ಜೊತೆಗೇ, ಜೀವನದ ಸಹಾನುಭೂತಿಪರವಾದ ತಿಳುವಳಿಕೆಗೆ, ಬದುಕಿನ ಜಟಿಲ ಸಮಸ್ಯೆಗಳಿಗೆ ಭೌತಿಕ ಉತ್ತರಗಳಿವೆ ಎಂಬ ನಂಬಿಕೆಯನ್ನು ಮಾನವತಾವಾದ ಹೊಂದಿದೆ. ಅಂತೆಯೇ ಕಾರಂತರಲ್ಲಿ ಧಾರ್ಮಿಕ ಉತ್ತರಗಳ ಹುಡುಕಾಟವಿಲ್ಲ. ಅಷ್ಟೇ ಅಲ್ಲ, ಆಧ್ಯಾತ್ಮಿಕ ಉತ್ತರಗಳ ಹುಡುಕಾಟವೂ ಇಲ್ಲ. ಕಾರ್ಯರೂಪಕ್ಕೆ ಇಳಿಸಲಾಗದ ಆದರ್ಶಗಳಲ್ಲಿಯೂ ಅವರಿಗೆ ಆಸಕ್ತಿ ಇಲ್ಲ. ಕಾಣದ ಯಾವುದೋ ಒಂದರಲ್ಲಿ ಸಮಾಧಾನವನ್ನು ಹುಡುಕುವುದಕ್ಕಿಂತ ಕಾಣುವ ಭೌತಿಕ ಜೀವನದಲ್ಲೇ ಅದನ್ನು ಹುಡುಕಬೇಕು. ಕಾರಂತರ ಕಾದಂಬರಿಗಳಲ್ಲಿ ಸಿದ್ಧಪಾತ್ರಗಳಾದ ಮುದುಕಿಯರ ಒಂದು ಪ್ರಪಂಚ ಬೇರೆಯೇ ಇದೆ. ಆದರೆ ಬದುಕಿನ ವರ್ತಮಾನದಲ್ಲಿ ಮಗ್ನವಾಗಿರುವ ‘ಆಗು’ವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಅವರ ನಾಯಕರು ಇಂಥ ಭೌತಿಕ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವವರು. ಇಂಥ ಪ್ರಯತ್ನಗಳಿಂದ ತಪ್ಪಿಸಿಕೊಂಡು ಧರ್ಮದ ಕಡೆ ಹೋಗುವವರು, ಸನ್ಯಾಸಿಗಳಾಗಿ ಬದುಕಿನ ಹೊರಗೆ ಕಾಲಿಡುವವರು ಪಲಾಯನವಾದಿಗಳಾಗುತ್ತಾರೆ.

೬. ಮಾನವತಾವಾದ ವಿಚಾರದಲ್ಲಿ ಅಪಾರ ವಿಶ್ವಾಸ ಇಟ್ಟುಕೊಳ್ಳುತ್ತದೆ. ಕನ್ನಡದ ಇತರ ನವೋದಯ ಲೇಖಕರಿಗಿಂತ ಕಾರಂತರು ವಿಜ್ಞಾನದ ಓದು ಮತ್ತು ಬರವಣಿಗೆಯಲ್ಲಿ ಹೆಚ್ಚಿನ ಕೆಲಸ ಮಾಡಿದವರು. ವೈಜ್ಞಾನಿಕ ಪ್ರಗತಿಯನ್ನು ಸ್ವಾಗತಿಸಿದವರು. ವೈಜ್ಞಾನಿಕ ಮನೋಧರ್ಮ ಅವರ ಜೀವನದೃಷ್ಟಿಯ ಒಂದು ಅವಿಭಾಜ್ಯ ಅಂಗವೇ ಆಗಿದೆ. ವೈಜ್ಞಾನಿಕ ಅವಿಷ್ಕಾರಗಳಿಂದ ದೊರೆತ ಹೊಸ ತಂತ್ರಜ್ಞಾನವನ್ನು ಅವರು ಬಳಸಿಕೊಂಡು ಮುದ್ರಣ ಉದ್ಯಮಕ್ಕೆ ಅಳವಡಿಸಿಕೊಂಡದ್ದಿದೆ. ಆದರೆ ಈ ವೈಜ್ಞಾನಿಕ ಮನೋಧರ್ಮ ಒಂದು ಇಕ್ಕಟ್ಟಿನ ಚೌಕಟ್ಟಾಗದೆ ಮಾನವೀಯ ಅನುಕಂಪ, ಪ್ರೀತಿ, ಸಹಾನುಭೂತಿಯನ್ನು ಬದುಕಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಬಳಸಿಕೊಳ್ಳುತ್ತದೆ.

೭. ನವೋದಯದ ಒಂದು ಸಂದರ್ಭದಲ್ಲಿ ಪಂಡಿತ ತಾರಾನಾಥರ ಜೊತೆಗೆ ವಿಚಾರವಾದಿಗಳಿಂದ ತರುಣ ಲೇಖಕರ ಒಂದು ಗುಂಪು ಕಾಣಿಸಿಕೊಂಡಿತು. ಶ್ರೀರಂಗ, ಕಾರಂತ, ಕೈಲಾಸಂ, ಅನಕೃ ಮೊದಲಾದವರು ಈ ಗುಂಪಿನಲ್ಲಿದ್ದರು. ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳ ವಿರುದ್ಧ ಇವರು ದನಿ ಎತ್ತಿದರು. ಸಾಮಾಜಿಕ ಸಮಸ್ಯೆಗಳನ್ನು ಇವರು ತರ್ಕದ ಒರೆಗೆ ಹಚ್ಚಿ ನೋಡಿದರು. ಬೌದ್ಧಿಕ ಪ್ರಮಾಣಗಳಿಂದ ಜೀವನದ ನಂಬಿಕೆಗಳನ್ನು ದೃಢಪಡಿಸಿಕೊಂಡ ಈ ಲೇಖಕರು ಮೂರ್ತಿಭಂಜಕರೆಂದೂ, ಕ್ರಾಂತಿಕಾರಿಗಳೆಂದೂ, ವಿಚಾರವಾದಿಗಳೆಂದೂ ಕರೆಯಲ್ಪಟ್ಟಿದ್ದರು. ಕಾರಂತರಲ್ಲಿ ಈ ಬಗೆಯ Rational ದೃಷ್ಟಿಕೋನ, Reasoning ಅನ್ನೋ ಸಮಸ್ಯೆಗಳ ವಿಶ್ಲೇಷಣೆಗೆ ಮುಖ್ಯ ಸಾಧನವನ್ನಾಗಿ ಬಳಸಿಕೊಳ್ಳುವ ಧೋರಣೆ ಹೆಚ್ಚಾಗಿ ಕಾಣುತ್ತದೆ. ಆದರೆ ಇಲ್ಲಿಯೂ ಅದು ಇಕ್ಕಟ್ಟಿನ ಚೌಕಟ್ಟಾಗುವುದಿಲ್ಲ. ಈ ವಿಚಾರಸರಣಿಗೆ ಮಾನವೀಯ ಸ್ವರ್ಶ ಇದ್ದೇ ಇದೆ.

ಜೊತೆಗೆ, ವಿಜ್ಞಾನ ಅಥವಾ ತಾರ್ಕಿಕತೆ ಜೀವನದ ಎಲ್ಲ ಸಮಸ್ಯೆಗಳಿಗೂ ಉತ್ತರ ಕೊಡುತ್ತವೆಯೆಂದಾಗಲಿ, ತಾರ್ಕಿಕತೆಯ ಆಚೆ ಇನ್ನೇನೂ ಇಲ್ಲವೆಂದಾಗಲಿ ಕಾರಂತರು ಭಾವಿಸುವುದಿಲ್ಲ. ಅವರೇ ಹೇಳುತ್ತಾರೆ: “ಇಡೀ world ನನಗೆ ತಿಳಿಯಲಾರದ mistery ಯಿಂದಲೇ ತುಂಬಿಕೊಂಡಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ನೀವು ಅದಕ್ಕೆ ಯಾವ ಹೆಸರು ಬೇಕಾದ್ರೂ ಕೊಡಿ. ನನಗೆ ತಿಳಿಯದ್ದು ಈ ಲೋಕದಲ್ಲಿ ಎಷ್ಟಿದೆ ಅಂತಾ ಹೆಜ್ಜೆಹೆಜ್ಜೆಗೆ ನಾನು ಆಶ್ಚರ್ಯ ಪಡ್ತಾ ಇದ್ದೇನೆ… ಆಕಾಶ ಎಷ್ಟು ದೊಡ್ಡದು ಕಾಣುತ್ತೆ. ನಕ್ಷತ್ರ ಎಷ್ಟು ದೂರ ಅಂತ ಕೇಳಿದ್ರೆ ನನ್ನನ್ನ ಆ ಪ್ರಶ್ನೆಗಳೇ baffle ಮಾಡುತ್ತವೆ. ನನ್ನ limitation ತುಂಬಾ ಚೆನ್ನಾಗಿ ನನಗೆ ಗೊತ್ತಿದೆ.” (ಅನಂತಮೂರ್ತಿ, ೧೯೮೦:೬೩-೬೪). ವಿಶ್ವದ ಬಗೆಗೆ, ಬದುಕಿನ ಬಗೆಗೆ ಇಂಥ ನಮ್ರತೆ ಇರುವುದರಿಂದಲೇ ಕಾರಂತರ ವಿಚಾರವಾದ ಮಾನವೀಯವೂ ಆಗಿದೆ.

೮. ಕಾರಂತರ ವಿಚಾರವಾದವನ್ನು ಮಾನವತಾವಾದ ಹೇಗೆ ನಿಯಂತ್ರಿಸುತ್ತದೆ ಎಂದರೆ, ಅದಕ್ಕೆ ತಾನು ಮಾತ್ರ ಸರಿ ಎಂಬ ಸೊಕ್ಕು ಇಲ್ಲ. ತಮ್ಮ ನಂಬಿಕೆ, ಸಿದ್ಧಾಂತಗಳೇ ಅಂತಿವು ಎಂದು ಅವರು ಕುರುಡಾಗಿ ಭಾವಿಸುವುದಿಲ್ಲ. ಇನ್ನೊಬ್ಬರ ಸತ್ಯವೂ ಸತ್ಯವಿರಬಹುದು, ಅವರವರ ನಂಬಿಕೆಗಳು ಅವರಿಗೆ ಸರಿ, ನನಗೆ ಸರಿಯೆನಿಸಿದ ನಂಬಿಕೆಯನ್ನು ನಾನು ಪ್ರಾಮಾಣಿಕವಾಗಿ ಬಾಳಬೇಕು. ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯ ಮೇಲೆ ಸವಾರಿ ಮಾಡಬಾರದು. ಆದರಿಷ್ಟೆ. ಆ ನಂಬಿಕೆ ಪ್ರಾಮಾಣಿಕವಾಗಿರಬೇಕು ಮತ್ತು ಬದುಕನ್ನು ಋಜು ಮಾರ್ಗದಲ್ಲಿ ನಡೆಸಲು ಯೋಗ್ಯವಾಗಿರಬೇಕು. ಇಂಥ ಜೀವಪರವಾದ ಅನ್ಯ ನಂಬಿಕೆಗಳನ್ನು ಕಾರಂತರು ಗೌರವಿಸುತ್ತಾರೆ.

ಕಾರಂತರ ಕಾದಂಬರಿಗಳಲ್ಲಿ ಬರುವ ಮುದುಕಿಯರನ್ನು ಈ ದೃಷ್ಟಿಯಿಂದ ಇನ್ನೊಮ್ಮೆ ನೋಡಬೇಕು. ಕಾರಂತರೇ ಈ ಬಗ್ಗೆ ಹೇಳಿರುವ ಮಾತು ಮಹತ್ವದ್ದಾಗಿದೆ: “ನನಗಿಂತ ಭಿನ್ನಭಾವದ ಜೀವಿಗಳಿದ್ದಾರೆ, ಬದುಕ್ತಾರೆ. objective ಆಗಿ ಅವರನ್ನು ನೋಡಲಿಕ್ಕೆ ಪ್ರಯತ್ನ ಮಾಡ್ತೇನೆ. ಆಗ ನನ್ನ ಸ್ವಂತ ಬದುಕಿನಲ್ಲಿ ಒಪ್ಪದ ಅನೇಕ ವಿಚಾರಗಳನ್ನು ನಾನು ಅವರಲ್ಲಿ ಕಂಡು ಮೆಚ್ಚಬಲ್ಲೆ, ಅವರು ಪ್ರಾಮಾಣಿಕರಾಗಿದ್ದಾರೆ ಅನ್ನೋದ್ರಿಂದ. ಹಾಗಾಗಿ ಎಷ್ಟೋ ಸಾರಿ ಮುದುಕಿಯರನ್ನು ನಾನು ಕಾದಂಬರಿಯಲ್ಲಿ ತಕ್ಕೊಂಡು ಬರ್ತೇನೆ. ನನ್ನ ನಂಬಿಕೆಗಳು ಯಾವವೂ ಅವರವಲ್ಲ. ಅವರನ್ನು ಅವರ ನಿಷ್ಠೆ ತೆಗೆದುಕೊಂಡು ಹೋಗ್ತಾ ಇದೆ. ಇದೇ ನನಗೆ ಚೆಲುವು. ನನಗೆ ಆ ನಿಷ್ಠೆ ಇಲ್ಲದೇ ಇರಬಹುದು- ಈ ದೃಷ್ಟಿ. objectivity ನನ್ನದು” (ಅನಂತಮೂರ್ತಿ, ೧೯೮೦:೪೯). ಇವತ್ತು ಅವರ ನಂಬಿಕೆಗಳೂ ಪ್ರಸ್ತುತವೆಂದು ಕಾಣದಿರಬಹುದು. ಆದರೆ ಒಂದು ಕಾಲದ ಸಮಾಜ ವ್ಯವಸ್ಥೆಯನ್ನು ಅವು ಆರೋಗ್ಯ ಪೂರ್ಣವಾಗಿ ನಡೆಸಿಕೊಂಡು ಬಂದವೆಂಬುದನ್ನು ಅವರು ಮರೆಯುವುದಿಲ್ಲ. “ಅಳಿದ ಮೇಲೆ” ಕಾದಂಬರಿಯಲ್ಲಿ ಬರುವ ಎರಡು ಪ್ರಸಂಗಗಳನ್ನು ಈ ದೃಷ್ಟಿಯಿಂದ ನೋಡಬಹುದು. ಒಂದನೆಯ ಪ್ರಸಂಗ ವಿಷ್ಣುಪಂತ ಘಾಟೆಯವರಿಗೆ ಸಂಬಂಧಿಸಿದ್ದು. ಘಾಟೆಯವರ ಧಾರ್ಮಿಕ ವಿಚಾರಧಾರೆಗೂ ಯಶವಂತ ಮತ್ತು ನಿರೂಪಕ ಕಾರಂತರ ವಿಚಾರವಾದಿ ವಿಚಾರಧಾರೆಗೂ ಹೊಂದಿಕೆ ಇಲ್ಲ. ಆದರೂ ಘಾಟೆಯವರು ಬರೆದು ಮುಗಿಸಿದ್ದ ಧರ್ಮಶಾಸ್ತ್ರ ಗ್ರಂಥದ ಪ್ರಕಟಣೆಗೆ ಧನಸಹಾಯ ಮಾಡಲಾಗುತ್ತದೆ. ಘಾಟೆಯವರ ವಿಚಾರಗಳನ್ನೂ ಒಪ್ಪದಿದ್ದರೂ ಅವರ ಪ್ರಾಮಾಣಿಕತೆಯನ್ನು ಕಾರಂತರು ಮೆಚ್ಚುತ್ತಾರೆ. ಇನ್ನೊಂದು ಪ್ರಸಂಗ ಪಾರ್ವತಮ್ಮನದು. ಯಶವಂತ ಮತ್ತು ಕಾರಂತರಿಗೆ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವ್ಯವಸ್ಥೆ, ಮಾಡುತ್ತಾರೆ, ಮಾನವತಾವಾದ ಇಂಥ ಸಹಿಷ್ಣುತೆಯಲ್ಲಿ ನಂಬಿಕೆ ಇರಿಸಿದೆ.

ಆದರೆ ಸಹಿಷ್ಣುತೆ ಎಂದರೆ, ‘ಅವನ ನಂಬಿಕೆ ಅವನಿಗೆ ಸರಿ, ನನ್ನದು ನನಗೆ ಸರಿ’ ಎನ್ನುವ ಭೋಳೇ ನಿಲುವಲ್ಲ. ಒಂದು ನಂಬಿಕೆ ಜೀವಪರವಲ್ಲ ಎಂದು ಖಾತ್ರೆಯಾದಾಗ ಅದನ್ನು ವಿರೋಧಿಸುವುದೂ ಅವಶ್ಯವಾಗುತ್ತದೆ. ಕಾರಂತರಿಗೆ ಕಮ್ಯೂನಿಜಮ್ಮಿನೊಂದಿಗೆ ಸಹಮತವಿರಲಿಲ್ಲ. ಅದೊಂದು ಜೀವವಿರೋಧಿ, ಅಪ್ರಾಮಾಣಿಕ ಸಿದ್ಧಾಂತ ಎಂದು ಅವರಿಗೆ ಅನಿಸಿತ್ತು. ಅದನ್ನು ತಮ್ಮ ಜೀವಮಾನದುದ್ದಕ್ಕೂ ವಿರೋಧಿಸಿಕೊಂಡು ಬಂದರು. ಕಮ್ಯೂನಿಜಂ ಒಂದು ಕಾಯಿಲೆ ಎಂದು ವರ್ಣಿಸಿದರು. ಪರಿಸರವಿರೋಧಿ ಚಟುವಟಿಕೆಗಳ ವಿರುದ್ಧವೂ ಅವರು ಸಮರ ಸಾರಿದ್ದರು.

ಹೀಗೆ ಕಾರಂತರ ಮಾನವತಾವಾದ ಸಂಘರ್ಷಹೀನವಾದ ಭೋಳೇತನದ್ದೇನೂ ಆಗಿರಲಿಲ್ಲ. ತಮಗೆ ಸರಿಯೆನಿಸಿದ ನಂಬಿಕೆಗಳ ಪ್ರಚಾರ ಮತ್ತು ಅನುಷ್ಠಾನದ ಜೊತೆಗೆ, ತಮಗೆ ಸರಿ ಕಾಣದ ನಂಬಿಕೆಗಳನ್ನು ಅವರು ವಿರೋಧಿಸಿಯೂ ಇದ್ದಾರೆ.

೯. ಯುರೋಪಿನ ರಿನೇಜಾನ್ಸ್ ಕಾಲದಲ್ಲಿ ಮಾಡಿದ ಕೆಲಸವನ್ನೇ ಮಾನವತಾವಾದ ಒಂದು ರೀತಿಯಲ್ಲಿ ಕನ್ನಡ ನವೋದಯದ ಸಂದರ್ಭದಲ್ಲಿಯೂ ಮಾಡಿತೆಂದು ಹೇಳಬಹುದು. ಶಿಕ್ಷಣ, ಕಲೆ, ಸಾಹಿತ್ಯ, ಸ್ನೇಹ, ಪ್ರೀತಿ, ತಾಳ್ಮೆಗಳಂಥ ಆದರ್ಶಗಳನ್ನು ಮಾನವತಾವಾದ ಪುರಸ್ಕರಿಸಿತು. ಕಾರಂತರ ಆಸಕ್ತಿಗಳು ಇವುಗಳನ್ನೆಲ್ಲ ಒಳಗೊಂಡ ವಿಜ್ಞಾನ, ಪ್ರಗತಿ, ಆಧುನಿಕತೆಗಳ ಕಡೆಗೂ ಬೆಳೆದವು. ಜಗತ್ತಿನಲ್ಲಿಯ ಅತ್ಯುತ್ತಮವಾದುದನ್ನೆಲ್ಲ ತಿಳಿದುಕೊಳ್ಳಬೇಕೆಂಬ ರಿನೇಜಾನ್ಸ್ ಯುಗದ ಹಂಬಲ ನಮ್ಮ ನವೋದಯ ಯುಗದಲ್ಲಿ ಮತ್ತು ಅದರ ಅತ್ಯುತ್ತಮ ಪ್ರತಿನಿಧಿಯಾದ ಕಾರಂತರಲ್ಲಿ ಕಾಣುತ್ತದೆ.

ಇದಕ್ಕೆ ಒಂದು ಮುಖ್ಯ ಅಪವಾದವೆಂದರೆ ತತ್ವಶಾಸ್ತ್ರ, ಧರ್ಮಶಾಸ್ತ್ರ, ಅನುಭಾವ, ಯೋಗ ಇತ್ಯಾದಿಗಳ ಬಗೆಗಿನ ಕಾರಂತರ ಅನಾಸಕ್ತಿ. ಸಾಧು ವಾಸ್ವಾನಿ, ಸ್ವಾಮಿ ರಾಮ ಮೊದಲಾದ ಯೋಗಿಗಳನ್ನೂ ದಾರ್ಶನಿಕರನ್ನೂ ಅವರು ಗೌರವದಿಂದ ಕಂಡಿದ್ದಾರೆ. ಆದರೆ ಅಂಥ ಅನುಭವಗಳನ್ನು ತಮ್ಮ ಬರವಣಿಗೆಯಲ್ಲಿ ತರಲಿಲ್ಲ. ಆ ಬಗ್ಗೆ ಅವರಿಗೆ ದೃಢವಾದ ನಂಬಿಕೆ ಹುಟ್ಟಲಿಲ್ಲವೆನ್ನುವುದು ಇದಕ್ಕೆ ಕಾರಣವಾಗಿರಬಹುದು. ಅವರ ವಿಚಾರವಾದಿ ನಿಲುವು ಮತ್ತು ವಾಸ್ತವತಾವಾದದಲ್ಲಿದ್ದ ನಂಬಿಕೆಗಳು ಈ ಅನುಭವಗಳನ್ನು ಒಪ್ಪಿಕೊಳ್ಳದೆ ಹೋಗಿರಬಹುದು.

೧೦. ಮಾನವತಾವಾದ ಮನುಷ್ಯನನ್ನು ವಿಶ್ವದ ಕೇಂದ್ರದಲ್ಲಿ ಇರಿಸಿಕೊಂಡಿದ್ದರ ಜೊತೆಗೆ ಸಾಮಾನ್ಯ ಮನುಷ್ಯನಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿತು. ಇದು ಕಾದಂಬರಿಗಂತೂ ಬಹಳ ಅನುಕೂಲವಾಯಿತೆಂಬುದುದನ್ನು ಒತ್ತಿ ಹೇಳಬೇಕಾಗಿಲ್ಲ. ಹೊಸದಾಗಿ ಹುಟ್ಟಿಕೊಂಡ ಸುಶಿಕ್ಷಿತ ಮಧ್ಯಮ ವರ್ಗದ ಓದುಗರಿಗಾಗಿ ಕಾದಂಬರಿ ಮಧ್ಯಮ ವರ್ಗದ ಸಮಸ್ಯೆ, ಆಕಾಂಕ್ಷೆ, ಆದರ್ಶಗಳನ್ನು ಚಿತ್ರಿಸುವ ಅನಿವಾರ್ಯಕ್ಕೆ ಒಳಗಾಗಿತ್ತು. ಅದರ ಜೊತೆಗೆ ಸಮಾಜದ ಕೆಳವರ್ಗಗಳ ಜನರನ್ನೂ ಅದು ಕಾದಂಬರಿಯ ನಾಯಕ ಸ್ಥಾನಕ್ಕೆ ಏರಿಸಿತು. ತುಂಟರು, ಕಳ್ಳರು, ಸುಳ್ಳರು, ವ್ಯಾಪಾರಿಗಳು, ವೇಶ್ಯೆಯರು, ದುಡಿಯುವವರು ಮುಖ್ಯಪಾತ್ರಗಳಾದರು. ಚೋಮನಂಥ ಹಿಂದೂ ಸಮಾಜದ ಅತ್ಯಂತ ಕೆಳಗಿನ ಸ್ತರದಿಂದ ಬಂದ ಸಾಮಾನ್ಯ ಮನುಷ್ಯನ ಆಶೆ-ನಿರಾಶೆ-ಗೊಂದಲ-ದುರಂತಗಳೂ ಸಾಹಿತ್ಯದಲ್ಲಿ ಗೌರವದ ಸ್ಥಾನ ಪಡೆದವು.

೧೧. ಕಾರಂತರು ತಮ್ಮ ಚಿಂತನೆಯಲ್ಲಿ ಮಹತ್ವ ಕೊಡುವ ಇನ್ನೊಂದು ಅಂಶ ವ್ಯಕ್ತಿವಾದ (individualism). ಯಾರೋ ಸಿದ್ಧಪಡಿಸಿದ ಆದರ್ಶ, ಸಿದ್ಧಾಂತಗಳಿಗಿಂತ ಸ್ವಂತ ಅನುಭವದ ಮೂಲಕ ರಚಿಸಿಕೊಂಡ ಮೌಲ್ಯಗಳ ಮೇಲೆ ಅವರಿಗೆ ಹೆಚ್ಚಿನ ವಿಶ್ವಾಸ. “ಬಾಳ್ವೆಯ ಪ್ರಶ್ನೆಯು-ಒಬ್ಬರು-ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವ ಪ್ರಶ್ನೆ ಎಂದೂ ಆಗಲಾರದು. ಅನಿವಾರ್ಯವಾಗಿರುವ ಬಾಳಿನ ರೀತಿಯನ್ನು ಕಂಡರೆ-ಅದು ಬಾಳಿ, ಬದುಕಿ, ಅನುಭವಿಸಿ, ಹೋರಾಡಿ, ಪರಿಸ್ಥಿತಿಗಳಿಗೆ ಸಮನಾಗಿ ಹೊಂದಿಕೊಂಡು ಪರಿಣಾಮಗೊಳ್ಳಬೇಕಾದ ಸಮಸ್ಯೆಯೆಂದು ನಮಗೆ ಅನಿಸುತ್ತದೆ. ಅವನವನ ಜೀವನಕ್ಕೆ ಅವನವನೇ ದುಡಿದು ಉತ್ತರ ಗಳಿಸಬೇಕು. ಅದರಿಂದ ಮಾತ್ರ ಜೀವನ ಸಾರ್ಥಕ, ಹೀಗಾಗಲು, ಬಾಳ್ವೆಯನ್ನು ನಾವು ನಿರಾಕರಿಸದೆ ಮೊದಲಿಗೆ ಒಪ್ಪಬೇಕು. ತಮ್ಮ ಜೀವನದಿಂದಲೇ ‘ಜೀವನ ಏನು?’ – ಎಂದು ತಿಳಿಯಲೆತ್ನಿಸಬೇಕು. ಅರಿವುಳ್ಳ ಬದುಕು, ಸಹಾನುಭೂತಿಯುಳ್ಳ ನಡತೆ ಇವುಗಳಿಂದ ನಮ್ಮ ಬದುಕು ಅರಳಬೇಕು” ಎಂದು ಕಾರಂತರು ೧೯೪೫ರ ಹೊತ್ತಿಗೇ ಇದನ್ನು ಸ್ಪಷ್ಟಪಡಿಸಿಕೊಂಡಿದ್ದರು (೧೯೫೦:೫). ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪ್ರಾಮಾಣಿಕತೆಯ ಒರೆಗಲ್ಲಿಗೆ ತಿಕ್ಕಿ ತನ್ನ ಬದುಕನ್ನು ರೂಪಿಸಿಕೊಂಡರೆ ಅದೇ ಸಾಮಾಜಿಕ ಒಳಿತಿಗೆ ಕಾರಣವಾಗುತ್ತದೆಂದು ಅವರ ನಂಬಿಕೆಯಾಗಿತ್ತು. ಇದು ಮಾನವತಾವಾದದ ನಂಬಿಕೆಯೂ ಹೌದು.

ಹೀಗೆ ಕಾರಂತರು ಮಾನವತಾವಾದವನ್ನು, ಕೆಲವು ತಿದ್ದುಪಡಿಗಳೊಂದಿಗೆ, ತಮ್ಮ ಜೀವನದೃಷ್ಟಿಯ ಅಡಿಪಾಯವನ್ನಾಗಿ ಮಾಡಿಕೊಂಡರು.

ಕಾರಂತರ ಬರವಣಿಗೆಯ ಅಭ್ಯಾಸಕ್ಕೆ ಇನ್ನೊಂದು ಆಯಾಮವನ್ನು ಒದಗಿಸಿಕೊಡುವ ಸಂಗತಿ ಅವರ ಬರವಣಿಗೆಯ ವಸ್ತುವಿಗೆ ಸಂಬಂಧಿಸಿದ್ದು. ಸ್ಥೂಲವಾಗಿ ಇದನ್ನು ‘ಸಾಮಾಜಿಕ ಬದಲಾವಣೆ’ ಎಂದು ಗುರುತಿಸಬಹುದು. ಇದರಲ್ಲಿಯೇ ರಾಜಕೀಯ, ಹೆಣ್ಣು-ಗಂಡಿನ ಸಂಬಂಧ ಮೊದಲಾದುವನ್ನು ಸೇರಿಸಬಹುದು.

ಕಾದಂಬರಿ ಒಂದು ಸಾಹಿತ್ಯಪ್ರಕಾರವಾಗಿ ಆರಂಭದಿಂದಲೂ ಮಾಡುತ್ತ ಬಂದದ್ದು ಇದನ್ನೇ-ಸಾಮಾಜಿಕ ಬದಲಾವಣೆಯನ್ನು ಒಂದು ಜೀವನಕ್ರಮದಲ್ಲಿ ಗುರುತಿಸಿ ದಾಖಲಿಸುವ ಕೆಲಸ.

ಯಾವ ಜೀವಂತ ಸಮಾಜವೂ ನಿಂತ ನೀರಾಗಿರುವುದಿಲ್ಲ. ಒಂದು ಬಗೆಯ ಚಂಚಲ ಸ್ವರೂಪದಲ್ಲಿ ಸದಾ ಬದಲಾಗುತ್ತಿರುತ್ತದೆ ಮತ್ತು ಈ ಬದಲಾವಣೆ ಏಕಮುಖಿಯಾಗಿ, ನಿರಾತಂಕವಾಗಿ ಒಂದೇ ದಿಕ್ಕಿಗೆ ಹರಿಯುವುದಿಲ್ಲ. ಹಲವಾರು ಪರಸ್ಪರ ವಿರುದ್ಧ ಹಿತಾಸಕ್ತಿಗಳೊಂದಿಗೆ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಆ ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗುವ, ಇಲ್ಲವೆ ಮಾರಕ ಪೆಟ್ಟು ತಿಂದು ಹಿಂದೆ ಸರಿಯುವ ಎರಡು ವಿರುದ್ಧ ಪರಿಣಾಮಗಳು ಈ ಬದಲಾವಣೆಗಳಿಗಿವೆ.

ಬದಲಾವಣೆಯ ದಿಕ್ಕು ಏಕಮುಖಿಯಾಗಿಲ್ಲದಿರುವುದರಿಂದ ಮತ್ತು ಅದರ ಜೊತೆಗೆ ಇನ್ನಿತರ ಹಿರಿ-ಕಿರಿಯ ಬದಲಾವಣೆಯ ಪ್ರವಾಹಗಳೂ ಇರುವುದರಿಂದ ಅದು ನಡೆಯುತ್ತಿರುವ ಕಾಲದಲ್ಲಿ ಅದನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟ. ಆರಂಭದಲ್ಲಿಯಂತೂ ಬದಲಾವಣೆಗಳ ಸ್ವರೂಪ ಮತ್ತು ದಿಕ್ಕು-ದೆಸೆ ಅಸ್ಪಷ್ಟವಾಗಿರುವುದರಿಂದ ಅವುಗಳನ್ನು ಗುರುತಿಸುವುದು ಇನ್ನೂ ಕಷ್ಟ. ಬದಲಾವಣೆಗಳು ಕ್ರಮೇಣ ಇಡೀ ಸಮಾಜದ ಒಪ್ಪಿಗೆ ಪಡೆದುಕೊಂಡಾಗ ಅದೊಂದು ಹೊಸ ವ್ಯವಸ್ಥೆಯಾಗಿ ಸ್ಥಾಪಿತವಾಗುತ್ತದೆ.

ಕಳೆದ ಶತಮಾನದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳು, ಒಂದು ರೀತಿಯಲ್ಲಿ ಚಲನೆಯನ್ನು ಕಳೆದುಕೊಂಡಿದ್ದ ಭಾರತೀಯ ಸಮಾಜವನ್ನು ಒಮ್ಮೆಲೆ ಅಲ್ಲಾಡಿಸಿಬಿಟ್ಟವು. ವಸಾಹತುಶಾಹಿಯ ಆಡಳಿತ, ಔದ್ಯೋಗೀಕರಣ, ಆಧುನಿಕ ಇಂಗ್ಲಿಷ್ ಶಿಕ್ಷಣ, ಸ್ವಾತಂತ್ರ್ಯ ಸಂಗ್ರಾಮ, ಮಧ್ಯಮವರ್ಗದ ಉದಯ ಮೊದಲಾದ ಕೆಲವನ್ನು ಇಲ್ಲಿ ಹೆಸರಿಸಬಹುದು. ಅದರಲ್ಲೂ ಮುಖ್ಯವಾಗಿ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳವಳಿ ಭಾರತೀಯ ಸಮಾಜದಲ್ಲಿ ಬದಲಾವಣೆಯ ಹಲವಾರು ಅಲೆಗಳನ್ನು ಎಬ್ಬಿಸಿತು. ಅದರ ಜೊತೆಗೇ ಅಸ್ಪೃಶ್ಯತಾ ನಿವಾರಣೆ, ಜಾತಿನಿರ್ಮೂಲನ, ಬಾಲ್ಯವಿವಾಹ ನಿಷೇಧ, ವಿದ್ಯಾಭ್ಯಾಸ, ಹೆಣ್ಣಿನ ಹಕ್ಕುಗಳು, ವಿಧವಾ ವಿವಾಹ, ಅಂತರ್ಜಾತಿಯ ವಿವಾಹ ಇತ್ಯಾದಿಗಳು ಸೇರಿಕೊಂಡವು.

ಆದರೆ ಚಲನೆ ಇಲ್ಲಿಯೂ ಏಕಮುಖವಾಗಿರಲಿಲ್ಲ. ಸ್ವಾತಂತ್ರ್ಯದ ಲಾಭಗಳು ಕೇವಲ ಮೇಲುಜಾತಿಯವರಿಗೆ ದಕ್ಕುವುದರಿಂದ ದಲಿತರ ಸ್ಥಿತಿ ಇನ್ನೂ ಕೆಡುತ್ತದೆಂದೂ, ಬ್ರಿಟಿಷ್ ಆಡಳಿತದಲ್ಲೇ ಅವರಿಗೆ ಅನುಕೂಲವೆಂದೂ ಅಂಬೇಡ್ಕರ್ ಅವರಿಗೆ ನ್ಯಾಯವಾಗಿಯೇ ಅನಿಸಿತ್ತು. ಸ್ವಾತಂತ್ರ್ಯದಿಂದ ಶ್ರೀಮಂತ ಮತ್ತು ವ್ಯಾಪಾರಿ ವರ್ಗಗಳ ಕೈಯಲ್ಲಿ ಅಧಿಕಾರ ಸೇರಿ ಕಾರ್ಮಿಕರ, ಭೂಹೀನರ ಶೋಷಣೆ ಇನ್ನು ಹೆಚ್ಚಾದೀತು ಎಂಬ ಸಂಶಯ ಕಮ್ಯೂನಿಸ್ಟರಿಗೆ ಇತ್ತು. ಜೊತೆಗೆ ರಾಜಕೀಯ ಮುಂದಾಳುಗಳಲ್ಲಿ ಅನೇಕರ ವರ್ತನೆಯನ್ನು ನೋಡುತ್ತಿದ್ದಂತೆ ಮುಂದೆ ಬರಲಿದ್ದ ಭ್ರಷ್ಟಾಚಾರ‍ದ ಅಗಾಧ ಸ್ವರೂಪ ಆಗಲೇ ಕಾಣತೊಡಗಿತ್ತು.

ವಸಾಹತುಶಾಹಿಯ ಸಂದರ್ಭವಂತೂ ಭಾರತೀಯ ಸಮಾಜದಲ್ಲಿ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಿಸಿತು. ಒಂದೆಡೆಗೆ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಲ್ಲಿ ಭಾರತೀಯ ಸಂಸ್ಕೃತಿಗೆ ಆತ್ಮವಿಮರ್ಶೆಯ ಅವಕಾಶ ದೊರೆತು, ಅನೇಕ ಪ್ರಗತಿಪರ ಅಂಶಗಳನ್ನು ಅದು ಅಳವಡಿಸಿಕೊಂಡಿತು. ಅತ್ಯಂತ ವ್ಯಾಪಕವಾಗಿ ಬೇರೂರಿದ ಮೌಖಿಕ ಸಂಸ್ಕೃತಿ ಲಿಖಿತ ಸಂಸ್ಕೃತಿಯಾಗಿ ತನ್ನತನವನ್ನು ಕಳೆದುಕೊಂಡು, ದೇಶೀ ನೆಲೆಗಳನ್ನು ಬತ್ತಿಸಿಕೊಂಡು ಬಿಡುತ್ತದೇನೋ ಎಂಬ ಆತಂಕವೂ ಸಹಜವಾಗಿಯೇ ಹುಟ್ಟಿಕೊಂಡಿತು. ಅದಕ್ಕಾಗಿ ಪ್ರಾಚೀನ ಭಾರತದ ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ವೈಭವೀಕರಿಸುವ ಪ್ರವೃತ್ತಿಯೂ ಆರಂಭವಾಯಿತು. ಗೋಖಲೆ, ಗಾಂಧೀಜಿ, ತಿಲಕ, ಸಾವರ್ಕರ್, ವಿವೇಕಾನಂದ, ಅಂಬೇಡ್ಕರ್ ಅವರಂತಹ ವಿಭಿನ್ನ ವಿಚಾರಧಾರೆಯ ಜನರನ್ನು ಭಾರತೀಯ ಸಮಾಜ ತನ್ನ ನಾಯಕರೆಂದು ಒಪ್ಪಿಕೊಂಡಿದ್ದರ ಹಿಂದೆ ಆ ಕಾಲದ ದ್ವಂದ್ವಗಳನ್ನು ಗುರುತಿಸಬಹುದು. ನಮ್ಮ ನವೋದಯದ ಲೇಖಕರು ಬರೆಯಲು ಆರಂಭಿಸಿದ್ದು ಇಂಥ ಗೊಂದಲದ ಸನ್ನಿವೇಶದಲ್ಲಿ.

ಯಾವುದೇ ಸಾಮಾಜಿಕ ಬದಲಾವಣೆಗೆ ಅವರದೇ ಆದ ಗತಿ (Dynamics) ಇರುತ್ತದೆ. ಅದರದೇ ಆದ ಒಂದು ಲಯ ಇರುತ್ತದೆ. ಅದರ ಲಯ-ಗತಿ-ವೇಗಗಳನ್ನು ನಿರ್ಧರಿಸುವುದು ಅಂಥ ಬದಲಾವಣೆ ಬಯಸುವ ಸಮಾಜದ ಒಟ್ಟು ಅಪೇಕ್ಷೆಯ ಒತ್ತಡ, ಅದನ್ನು ಅಲಕ್ಷಿಸಿ ಅನುಚಿತ ಅವಸರಕ್ಕೆ ನೂಕಿದರೆ ವಿರೋಧ ತೀವ್ರವಾಗುತ್ತದೆ; ಪರಿಣಾಮವಾಗಿ ಅರಾಜಕತೆ ಹುಟ್ಟುತ್ತದೆ.

* ಕರ್ನಾಟಕ ಸಾಹಿತ್ಯ ಅಕಾಡೆಮಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ೧೨-೧೩ ಅಕ್ಟೋಬರ್‌ ೨೦೦೧ರಂದು ನಡೆಸಿದ ’ಡಾ. ಶಿವರಾಮ ಕಾರಂತ: ಸಾಂಸ್ಕೃತಿಕ ಅನುಸಂಧಾನ’ ವಿಚಾರಸಂಕಿರಣದಲ್ಲಿ ಮಾಡಿದ ಆಶಯಭಾಷಣ.