ಶಾಂತಿನಾಥ ದೇಸಾಯಿ ಅವರು ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು ಎಂಬುದು ಈಗಾಗಲೇ ವಿಮರ್ಶಕರು ಮತ್ತು ಓದುಗರು ಒಪ್ಪಿಕೊಂಡಿರುವ ನಿರ್ವಿವಾದ ಸಂಗತಿ. ಅವರ ಕಥೆಗಳ ಬಗ್ಗೆ ಆಗಲೇ ತಕ್ಕಮಟ್ಟಿನ ಚರ್ಚೆ ನಡೆದಿದೆ. ಬಹಳ ಹಿಂದೆಯೇ ನಾನು ಅವರ ಕತೆಗಳ ಹಿಂದಿರುವ, ಸಾಂಪ್ರದಾಯಿಕ ನೈತಿಕ ಕ್ಷಿತಿಜವನ್ನು ವಿಸ್ತರಿಸುವ ಮುಖ್ಯ ಕಾಳಜಿಯನ್ನು ಗುರುತಿಸಿದ್ದೆ (ಗಿರಡ್ಡಿ, ೧೯೭೮:೫೬;೫೭). ರಹಮತ್ ತರೀಕರೆಯವರು ದೇಸಾಯಿಯವರನ್ನು ಆಧುನಿಕತೆಯನ್ನು ಆರಾಧಿಸುವ ಕಥನಕಾರ ಎಂದು ಕರೆದಿದ್ದಾರೆ (೨೦೦೦). ಜೆ.ಎಸ್. ಆಮೂರ ಅವರು ದೇಸಾಯಿಯವರ ಎಲ್ಲ ಕಥೆಗಳನ್ನು ವಿಶ್ಲೇಷಿಸಿ ಚರ್ಚಿಸಿದ್ದಾರೆ (೨೦೦೦: ೭೦-೧೦೭). ‘ಕ್ಷಿತಿಜ’ ವಂತೂ ಅವರ ಬಹುಚರ್ಚಿತವಾದ ಕಥೆ. ಆದರೂ ವಿಮರ್ಶೆಯಲ್ಲಿ ಹೇಳಬೇಕಾದ ಮಾತುಗಳು ಇನ್ನೂ ಉಳಿದೇ ಇರುತ್ತವೆ.

ದೇಸಾಯಿಯವರ ಎಲ್ಲ ಬರವಣಿಗೆಯ ಹಿಂದೆ ಕೆಲಸ ಮಾಡುತ್ತಿರುವುದು ಅಸ್ತಿತ್ವವಾದಿ ಚಿಂತನೆ. ಇದು ನವ್ಯ ಸಾಹಿತ್ಯದ ಪ್ರಧಾನ ಚಿಂತನಕ್ರಮವೇ ಆಗಿತ್ತು. ನವೋದಯ ಕಾಲದಲ್ಲಿ ಪ್ರಧಾನ ಚಿಂತನಕ್ರಮವಾಗಿದ್ದ ಮಾನವತಾವಾದ ಮನುಷ್ಯನನ್ನು ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿಟ್ಟು ನೋಡಿದರೆ, ಅಸ್ತಿತ್ವವಾದ ಅವನನ್ನು ಸಾಮಾಜಿಕ ಆವರಣದಿಂದ ಬೇರ್ಪಡಿಸಿ ಏಕಾಂಗಿಯನ್ನಾಗಿ ನೋಡುತ್ತದೆ. ಹಾಗಾಗಿ ಏಕಾಂಗಿತನ, ಪರದೇಸಿತನ, ಸಂವಹನ ಸಾಧ್ಯವಾಗದ ರೀತಿ, ಸಂಬಂಧಗಳು ಮುದಿರು ಬೀಳುವ ಸ್ಥಿತಿ ಇಲ್ಲಿ ಮತ್ತೆಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ಹಾಗೆ ಹೇಳಿದರೂ ಸಾಮಾಜಿಕ ಪರಿಸರ ಇದ್ದೇ ಇರುತ್ತದೆ. ಅದರಿಂದ ಬೇರ್ಪಡಿಸಿದರೆ ಮನುಷ್ಯನನ್ನು ನಿಲ್ಲಿಸುವುದಾದರೂ ಎಲ್ಲಿ? ದೇಸಾಯಿಯವರು ಅಸ್ತಿತ್ವವಾದಿ ಕಲ್ಪನೆಯನ್ನು ಒಪ್ಪಿಕೊಂಡು ಬರೆದರೂ, ಅವರ ಕತೆಗಳಲ್ಲಿ ಸಮಸ್ಯೆಗಳು ಉದ್ಭವಿಸುವುದು ವಿಶಿಷ್ಟ ಸಾಮಾಜಿಕ ರಚನೆಗಳಲ್ಲಿ – ಎಂಬುದನ್ನು ಗಮನಿಸಬೇಕು. ಸುಶಿಕ್ಷಿತ ಮಧ್ಯಮ ವರ್ಗದ ವ್ಯಕ್ತಿಗಳು, ಹಳ್ಳಿಗಾಡಿನ ಸರಂಜಾಮಿ ವ್ಯವಸ್ಥೆಯಲ್ಲಿ ಬಾಳಿದವರು, ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವವರು- ಇವರೆಲ್ಲ ತಮ್ಮ ಸಾಮಾಜಿಕ ಬದುಕಿಗೆ ಅಂಟಿಕೊಂಡವರು. ಅಲ್ಲಿಂದಲೇ ಅವರ ಸಮಸ್ಯೆಗಳು ಹುಟ್ಟಿಕೊಂಡರೂ ದೇಸಾಯಿಯವರ ಕತೆಗಳಲ್ಲಿ ಆ ಸಾಮಾಜಿಕ ಪರಿಸರ ಸಮಸ್ಯೆಗಳ ಪರಿಹಾರದಲ್ಲಿ ಭಾಗವಹಿಸುವುದಿಲ್ಲ. ಕೊನೆಯ ನಿರ್ಣಯ ವೈಯಕ್ತಿಕವಾಗಿಯೇ ಉಳಿಯುತ್ತದೆ. ಸಮಸ್ಯೆಗಳ ಪರಿಹಾರಕ್ಕಾಗಿ ಸಮಾಜದ ರಚನೆಯನ್ನೇ ಬದಲಿಸಬೇಕೆಂಬ ಹಟ ಇಲ್ಲಿ ಕಾಣುವುದಿಲ್ಲ. ‘ಕ್ಷಿತಿಜ’ದ ಮಂದಾಕಿನಿ ದೊಡ್ಡ ನಗರವೊಂದರಲ್ಲಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ, ಸುಶಿಕ್ಷಿತ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ, ಮಧ್ಯವಯಸ್ಸನ್ನು ಸಮೀಪಿಸುತ್ತಿರುವ ಹೆಣ್ಣುಮಗಳು. ಮನೆಯಲ್ಲಿ ಹಿರಿಯ ಮಗಳಾಗಿ, ನೌಕರಿ ಮಾಡಿ ಮನೆತನ ನಡೆಸುವ, ತಮ್ಮಂದಿರಿಗೆ ವಿದ್ಯಾಭ್ಯಾಸ ಮಾಡಿಸಿ ದಾರಿಗೆ ಹಚ್ಚುವ ಜವಾಬ್ದಾರಿ ಅವಳ ಮೇಲೆ ಇದೆ. ಇಂಥ ಸ್ಥಿತಿಯಲ್ಲಿ ಅವಳು ಮದುವೆಯಾಗುವ ವಯಸ್ಸೂ ಸಾಧ್ಯತೆಗಳೂ ಜಾರಿಹೋಗುತ್ತಿದೆ. ಬದುಕಿನಲ್ಲಿ ಏನೆಲ್ಲ ಕಳೆದುಕೊಂಡು ಏಕಾಂಗಿಯಾಗುರುವ ಅವಳ ಅವಸ್ಥೆಗೆ ಇಂಥ ಸಾಮಾಜಿಕ-ಕೌಟುಂಬಿಕ ಹಿನ್ನೆಲೆಯ ಕಾರಣವಿದೆ. ‘ತೃಪ್ತ’ ಕತೆಯ ನಾಯಕ ತನ್ನ ಹೆಂಡತಿಯ ಬಗ್ಗೆ ಸಂಶಯ ಪಡುವುದಕ್ಕೆ ಅವಳು ಕೆಲಸ ಮಾಡುತ್ತಿರುವ ಕಾರ್ಪೊರೇಟ್ ಜಗತ್ತೇ ಕಾರಣವಾಗಿದೆ. ಅಂಥಲ್ಲಿ ಮೇಲಿನ ಅಧಿಕಾರಿಗಳು ತಮ್ಮ ಕೈಕೆಳಗಿನ ಹೆಂಗಸರೊಂದಿಗೆ ನಡೆದುಕೊಳ್ಳುವ ರೀತಿಯ ಹಿನ್ನೆಲೆ ಇದೆ. ಹೀಗೆ ಸಮಸ್ಯೆಗಳ ಮೂಲ ಅವರವರ ಸಾಮಾಜಿಕ ಪರಿಸರದಲ್ಲೇ ಇದ್ದರೂ, ಅವರು ತೆಗೆದುಕೊಳ್ಳುವ ಕೊನೆಯ ನಿರ್ಣಯ ಮಾತ್ರ ವೈಯಕ್ತಿಕ ನೆಲೆಯಲ್ಲೇ ಉಳಿಯುವುದನ್ನು ಗಮನಿಸಬಹುದು.

ಅಸ್ತಿತ್ವವಾದದ ಜೊತೆಗೆ ಮಾರ್ಕ್ಸ್‌ವಾದವನ್ನೂ ಒಳಗೊಳ್ಳುವುದು ತಮಗೆ ಇಷ್ಟ ಎಂದು ದೇಸಾಯಿಯವರು ಒಂದೆಡೆಗೆ ಹೇಳಿಕೊಂಡಿದ್ದಾರೆ (೧೯೮೯:೪). ತಮ್ಮ ವಿಮರ್ಶೆಯ ದೃಷ್ಟಿಯನ್ನು ಕುರಿತು ಅವರು ಈ ಮಾತುಗಳನ್ನು ಹೇಳಿಕೊಂಡಿದ್ದರೂ, ಅದು ಅವರ ಸೃಜನಶೀಲ ಬರವಣಿಗೆಗೂ ಅನ್ವಯಿಸುತ್ತದೆ. ಅಸ್ತಿತ್ವವಾದಕ್ಕೆ ಮಾರ್ಕ್ಸ್‌ವಾದವನ್ನು ಜೋಡಿಸಿಕೊಳ್ಳಬೇಕೆಂದು ಆಲೋಚಿಸುವವರಿಗೆ ಫ್ರೆಂಚ್ ಲೇಖಕ ಜಾನ್ ಪಾಲ್ ಸಾರ್ತ್ರನದೇ ಮೇಲ್ಪಂಕ್ತಿ. ಆದರೆ ಇವೆರಡೂ ಚಿಂತನೆಗಳಲ್ಲಿ ಮೂಲಭೂತವಾದ ವೈರುಧ್ಯವಿದೆ. ಅಸ್ತಿತ್ವವಾದವು ಮನುಷ್ಯನ ಸ್ಥಿತಿ ಎಂದಿಗೂ ಹೀಗೆಯೇ ಇರುವಂಥದು, ಅದನ್ನು ಬದಲಿಸಲಿಕ್ಕಾಗುವುದಿಲ್ಲ ಎಂದು ಗ್ರಹಿಸುತ್ತದೆ. ಆದರೆ ಮಾರ್ಕ್ಸ್‌ವಾದ ಗತಿಶೀಲತೆಯಲ್ಲಿ ನಂಬಿಕೆಯುಳ್ಳದ್ದು. ಮನುಷ್ಯ ಸಮಾಜವನ್ನು ಮೂಲಭೂತವಾಗಿ ಬದಲಿಸಬಹುದು ಮತ್ತು ಬದಲಿಸಬೇಕೆಂದು ಆಗ್ರಹಿಸುತ್ತದೆ. ಇವೆರಡೂ ಕೂಡಿ ಹೋಗುವುದಾದರೂ ಹೇಗೆ? ಅಂಥ ಬದಲಾವಣೆಯ ಕಡೆಗಿನ ತುಡಿತ ದೇಸಾಯಿಯವರ ಕತೆಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ‘ಭರಮ್ಯಾ ಹೋಗಿ ನಿಖಿಲನಾದದ್ದು’ ಕತೆಯಲ್ಲಿಯ ಭರಮ್ಯಾನ ಬಂಡಾಯ ಅವನು ಬೆಳೆದು ಬಂದ ಸಮಾಜದ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಅವನ ವೈಯಕ್ತಿಕ ಸ್ಥಿತಿಯನ್ನೂ ಕೂಡ ಬದಲಿಸುವುದಿಲ್ಲ. ಒಂದು ರೀತಿಯಲ್ಲಿ ಮಾರ್ಕ್ಸ್‌ವಾದಕ್ಕಿಂತ ದೇಸಾಯಿಯವರನ್ನು ಹೆಚ್ಚಾಗಿ ಆಕರ್ಷಿಸಿದ್ದು ಎಂ.ಎನ್. ರಾಯ್ ಅವರ ರಾಡಿಕಲ್ ಹ್ಯೂಮನಿಜಂ. ತಾರುಣ್ಯದ ಕಾಲದಲ್ಲಿ ಅವರು ರಾಯಿಜಿಂನ ಪ್ರಭಾವಕ್ಕೊಳಗಾಗಿ ಅದರ ಕ್ರಿಯಾಶೀಲ ಕಾರ್ಯಕರ್ತರಾಗಿದ್ದರು. ಆದರೂ ಅವರು ಶುದ್ಧ ಚಿಂತೆನೆಯೊಂದಿಗೇ ಕಡೆಯವರೆಗೆ ಗಟ್ಟಿಯಾಗಿ ನಿಂತುಕೊಂಡರು.

ಮನೆತನದಿಂದ ದೇಸಾಯಿಯವರು ಜೈನ ದಿಗಂಬರ ಪಂಥಕ್ಕೆ ಸೇರಿದವರಾಗಿದ್ದರು. ಆದರೆ ಜೈನ ಧರ್ಮದ ತತ್ವಗಳಲ್ಲಾಗಲಿ, ಆಚರಣೆಗಳಲ್ಲಾಗಲಿ ಅವರಿಗೆ ಆಸಕ್ತಿ ಇರಲಿಲ್ಲ. ಅದರ ಬಗ್ಗೆ ಗಂಭೀರವಾಗಿ ಓದಿಕೊಂಡದ್ದು “ಓಂ ನಮೋ” ಕಾದಂಬರಿಯನ್ನು ಬರೆಯುವ ಸಂದರ್ಭದಲ್ಲಿ, ಆದರೂ ಹುಟ್ಟಿ ಬೆಳೆದ ಸಂಸ್ಕೃತಿಯಿಂದ ಜೈನ ಧರ್ಮದ ಸಾಮಾನ್ಯ ತತ್ವಗಳ ಪರಿಚಯ ಅವರಿಗೆ ಇದ್ದಿರಲೇಬೇಕು. ಅಂಥ ತತ್ವಗಳಲ್ಲಿ ‘ಅನೇಕಾಂತವಾದ’ ಮತ್ತು ಅದರ ಭಾಗವಾದ ‘ಸ್ಯಾದ್ ವಾದ’ಗಳು ಅವರಿಗೆ ಪರಿಚಯವಿರಬೇಕು. ‘ಈ ಲೋಕದ ಸಂಕೀರ್ಣ ವಾಸ್ತವವನ್ನು ಅನೇಕ ದೃಷ್ಟಿಗಳಿಂದ ನೋಡಬಹುದು ಮತ್ತು ಆ ಎಲ್ಲ ದೃಷ್ಟಿಗಳೂ ಸತ್ಯವೇ’ – ಎಂದು ಅನೇಕಾಂತವಾದ ಸತ್ಯದ ಬಹುಮುಖ್ಯತ್ವವನ್ನು ವಿವರಿಸುತ್ತದೆ. ಇದರ ಪ್ರಕಾರ ಸತ್ಯ ಎನ್ನುವುದು ಒಂದೇ ಅಲ್ಲ. ಹಲವು ಇದಕ್ಕೆ ಪೂರಕವಾಗಿ, ‘ಎಲ್ಲ ಸತ್ಯಗಳೂ ಅಂಶಿಕ ಸತ್ಯಗಳು, ಪೂರ್ಣಸತ್ಯಗಳಿಲ್ಲ’ – ಎಂದು ಸ್ಯಾದ್‌ ವಾದ ಹೇಳುತ್ತದೆ. ಇದರ ಪ್ರಕಾರ ಸತ್ಯ ಹಾಗೂ ಇರಬಹುದು. ಹೀಗೂ ಇರಬಹುದು. ಈ ತತ್ವಗಳು ಅಸ್ತಿತ್ವವಾದದ ನಿಲುವನ್ನೇ ಬಲಪಡಿಸುವಂತಿದೆ. ಸತ್ಯಕ್ಕೆ ವಿವಿಧ ಮುಖಗಳಿರುವುದರಿಂದಲೇ, ಮತ್ತು ಅವೆಲ್ಲ ಆಂಶಿಕವಾಗಿ ಮಾತ್ರ ನಿಜವಿರುವುದರಿಂದಲೇ ಯಾವುದು ಸತ್ಯ, ಯಾವುದು ಅಲ್ಲ; ಯಾವುದು ನಿಜವಾದ ಮೌಲ್ಯ, ಯಾವುದು ಅಲ್ಲ – ಎಂಬುದಕ್ಕೆ ಖಚಿತವಾದ ಉತ್ತರವಿಲ್ಲದೆ ತೊಳಲಾಟ ಆರಂಭವಾಗುತ್ತದೆ. ಈ ತೊಳಲಾಟವೇ ಅಸ್ತಿತ್ವವಾದಿ ಎದೆಗುದಿಯಾಗಿ, ಆತಂಕವಾಗಿ (Angst) ಕಾಡುತ್ತದೆ. “ನಾನು ಹೇಳುವುದು ನನಗೆ ಗೊತ್ತಿದ್ದ, ನಾನು ಊಹಿಸಿದ್ದ, ನಾನು ಗ್ರಹಿಸಿದ್ದ, ನಾನು ಕಟ್ಟಿದ್ದ ಅರ್ಧಮರ್ಧ ಸತ್ಯ -ಎಲ್ಲರ ಸತ್ಯವೂ ಹೀಗೆ ಇರುತ್ತದೆಯಾದ್ದರಿಂದ ನನಗೆ ನಾನು ಹೇಳುತ್ತಿರುವುದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ” ಎನ್ನುತ್ತಾನೆ ‘ಪ್ರತಿಕೃತಿ’ ಕತೆಯ ನಾಯಕ ಜೋಶಿ. ದೇಸಾಯಿಯವರದು ಜೀವನದ ಬಗ್ಗೆ ಮೂಲಭೂತವಾಗಿ ಇಂಥ ನಿಲುವು. ಅಂತೆಯೇ ಅವರ ಕಥಾನಾಯಕರಿಗೆ ಖಚಿತವಾದ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಅವರ ಸಮಸ್ಯೆಗಳಿಗೆ ಖಚಿತ ಪರಿಹಾರವೂ ಇರುವುದಿಲ್ಲ. ಅದಕ್ಕಾಗಿಯೇ ಸತ್ಯದ ಬಹುಮುಖತ್ವವನ್ನು ಅನ್ವೇಷಿಸಲು ದೇಸಾಯಿಯವರು ಒಂದೇ ಸಮಸ್ಯೆಯನ್ನು ಬೇರೆಬೇರೆ ಕತೆಗಳಲ್ಲಿ ಬೇರೆಬೇರೆ ರೀತಿಯಲ್ಲಿ ನಿರ್ವಹಿಸುತ್ತಾರೆ. ‘ಚಂದೂ’ ಕತೆಯ ಚಂದೂ ಮತ್ತು ‘ಶಿವೂ ಬಂಡಾಯ’ದ ಶಿವೂ ಎದುರಿಸುವ ಸಮಸ್ಯೆಗಳು ಒಂದೇ ಆಗಿದ್ದರೂ, ಅವರ ಪ್ರಬುದ್ಧತೆಯಲ್ಲಿ ಅಂತರವಿರುವುದರಿಂದ ಅವರು ಪಡೆಯುವ ಅರ್ಥ ಮತ್ತು ತೋರಿಸುವ ಪ್ರತಿಕ್ರಿಯೆ ಭಿನ್ನವಾಗಿದೆ. ‘ಭರಮ್ಯಾ ಹೋಗಿ ನಿಖಿಲನಾದದ್ದು’ ಮತ್ತು ‘ಎಲ್ಲಾದರು’ ಇರು ಎಂತಾದರು ಇರು’ ಕತೆಗಳ ನಾಯಕರ ಸಮಸ್ಯೆಗಳೂ ಒಂದೇ; ಪ್ರತಿಕ್ರಿಯೆಯ ರೀತಿ ಮಾತ್ರ ಬೇರೆ. ‘ನಾನಾನ ತೀರ್ಥಯಾತ್ರೆ’ ಮತ್ತು ‘ದಂಡೆ’ ಕತೆಗಳ ನಾಯಕರು ಒಂದೇ ಸ್ಥಿತಿಯಲ್ಲಿದ್ದಾರೆ; ಆದರೆ ನಾನು ಮನೆಗೆ ಹೋಗಬೇಕೆಂದವನು ಸಮುದ್ರಕ್ಕೆ ಹೋಗಿ ಸಾವು ಕಂಡರೆ, ‘ದಂಡೆ’ಯ ನಾಯಕ ಸಾಯಬೇಕೆಂದು ಹೋದವನು ತಿರುಗಿ ಮನೆಗೆ ಬರುತ್ತಾನೆ. ‘ಜವಾಬ್ದಾರಿ’ ಮತ್ತು ‘ಇಲಿಗಳು’ ಕತೆಗಳೂ ಪರಸ್ಪರ ವಿರುದ್ಧವಾಗಿವೆ. ‘ನೀಚ’ ಮತ್ತು ‘ಸಹೋದರ’ ಕತೆಗಳ ಹೋಲಿಕೆಯೂ ಕುತೂಹಲಕರವಾಗಿದೆ. ಹೀಗೆ ಸತ್ಯದ ಬಹುಮುಖತ್ವವನ್ನು ಗುರುತಿಸಿದ್ದರಿಂದ ಅನ್ವೇಷಣೆಯ ಹಲವು ದಾರಿಗಳು ದೇಸಾಯಿವರಿಗೆ ತೆರೆದುಕೊಂಡವು.

ಅದೇ ಕಾರ‍ಣಕ್ಕಾಗಿಯೇ ದೇಸಾಯಿಯವರು ತಮ್ಮ ಪಾತ್ರಗಳು ತೆಗೆದುಕೊಳ್ಳುವ ನಿರ್ಣಯಗಳ ಬಗೆಗಾಗಲಿ, ಅವುಗಳ ವರ್ತನೆಗಳ ಬಗೆಗಾಗಲಿ – ಯಾವುದೇ ನೈತಿಕ ನಿರ್ಣಯವನ್ನು ಕೊಡದೆ, ತಟಸ್ಥವಾಗಿ ಉಳಿಯುತ್ತಾರೆ. ಬದುಕನ್ನು ಅರ್ಥಪೂರ್ಣವಾಗಿ, ಸಂಪೂರ್ಣವಾಗಿ ಅನುಭವಿಸಬೇಕು ಎನ್ನುವುದು ಅವರ ಮುಖ್ಯ ಕಾಳಜಿ. ಹೀಗೆ ಅನುಭವಿಸುವುದಕ್ಕೆ ಅಡ್ಡಿಯಾಗುವ ಎಲ್ಲವನ್ನೂ ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ರೀತಿಯಲ್ಲಿ ಅವರ ಪಾತ್ರಗಳು ಉದ್ದೇಶಪೂರ್ವಕ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಮೀರುತ್ತವೆ. ಅವರ ಬಹುಪಾಲು ಕತೆಗಳು ಗಂಡು-ಹೆಣ್ಣಿನ ಸಂಕೀರ್ಣ ಸಂಬಂಧಗಳನ್ನು ಕುರಿತೇ ಇರುವುದರಿಂದ ಈ ಮೀರುವಿಕೆ ಲೈಂಗಿಕ ಸಂಬಂಧಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದೆ. ಗಂಡು-ಹೆಣ್ಣಿನ ಸಂಬಂಧದ ಪ್ರಶ್ನೆ ಒಂದು ಅಕ್ಷಯವಾದ ಗಣಿ, ಶತಮಾನಗಳ ಉದ್ದಕ್ಕೂ ಸಾಹಿತಿಗಳು ಅದನ್ನು ಅಗೆಯುತ್ತಲೇ ಇದ್ದರೂ ಅದರ ನಿಗೂಢತೆ ಇನ್ನೂ ಹೆಚ್ಚಾಗುತ್ತಲೇ ಇದೆ. ದೇಸಾಯಿಯವರು ಈ ಸಮಸ್ಯೆಯನ್ನು ಹಲವು ದಿಕ್ಕುಗಳಿಂದ ಶೋಧಿಸಲು ಯತ್ನಿಸಿದ್ದಾರೆ. ಇದು ಕೇವಲ ನವ್ಯ ಕತೆಗಳ ಗುಂಗಾದ ‘ಕಾಮ’ ಎಂದು ಕೈತೊಳೆದುಕೊಂಡರೆ ಈ ಕತೆಗಳಿಗೆ ದೊಡ್ಡ ಅನ್ಯಾಯ ಮಾಡಿದಂತೆ. ಅದು ದೇಸಾಯರ ಕತೆಗಳಲ್ಲಿ ಬದುಕಿನ ಅರ್ಥದ ಅನ್ವೇಷಣೆಯ ಒಂದು ಮುಖ್ಯ ನೆಲೆ; ಒಂದು ಕ್ಷಣದ ಅನುಭವದಲ್ಲಿ ಬದುಕಿನ ಅರ್ಥವನ್ನು ಹೊಸದಾಗಿ ಕಂಡುಕೊಳ್ಳುವ ಯತ್ನ. ಈ ಪ್ರಯತ್ನಗಳು ಬಹಳಷ್ಟು ಸಲ ಸಂಪ್ರದಾಯದ ಕಟ್ಟುಪಾಡುಗಳನ್ನು, ದಾಂಪತ್ಯದ ರೂಢಿಗತ ಆದರ್ಶಗಳನ್ನು ಮೀರಿ ಹೋಗುತ್ತವೆ. ಹೀಗೆ ಮೀರಿಹೋಗುವ ಮೀಟುಗೋಲಾಗಿ ಲೈಂಗಿಕತೆ ದೇಸಾಯರ ಕತೆಗಳಲ್ಲಿ ಕೆಲಸ ಮಾಡುತ್ತದೆ. ‘ರಾಕ್ಷಸ’ ಇಂಥ ಒಂದು ಪ್ರಾತಿನಿಧಿಕ ಕತೆ. ‘ಕ್ಷಿತಿಜ’ದ ಮಂದಾಕಿನಿ ಕೂಡ ಸಾಂಪ್ರದಾಯಿಕ ಚೌಕಟ್ಟನ್ನು ಮೀರುವ ಪ್ರಯತ್ನದಲ್ಲಿದ್ದಾಳೆ. ‘ಪ್ರತಿಕೃತಿ’ಯ ರತ್ನಾಳ ಅವಸ್ಥೆಯೂ ಅದೇ. ಪ್ರತ್ಯಕ್ಷ ಹಾದರ ಮಾಡದಿದ್ದರೂ ಮಾನಸಿಕ ಹಾದರ ಮಾಡುವ ‘ಬೇಸರ’, ‘ಹೊಸಿತಿಲದಾಚೆಗೆ’ ಕತೆಗಳ ನಾಯಕಿಯರ ಇದ್ದಾರೆ, ‘ಅಂತರ’, ‘ಸೋದರ’, ‘ಹುಚ್ಚ’. ‘ನೀಚ’. ‘ಜವಾಬ್ದಾರಿ’, ‘ತೃಪ್ತ’ ಕತೆಗಳಲ್ಲೂ ಈ ಸಮಸ್ಯೆಯ ಬೇರೆಬೇರೆ ಜಟಿಲ ಮುಖಗಳು ಅನಾವರಣಗೊಂಡಿವೆ. ಅಂಥ ಸಂದರ್ಭಗಳಲ್ಲಿ ದೇಸಾಯಿಯವರು ಆ ಪಾತ್ರಗಳ ನೈತಿಕತೆಯನ್ನು ಪ್ರಶ್ನಿಸುವುದಿಲ್ಲ. ಒಂದು ಬಗೆಯ ಆ-ನೈತಿಕ (Amoral) ವೆನ್ನಬಹುದಾದ ನಿಲುವಿನಿಂದಲೇ ತಮ್ಮ ಪಾತ್ರಗಳನ್ನು ನೋಡುತ್ತಾರೆ. ಇಲ್ಲಿ ನೈತಿಕತೆಯ ಪ್ರಶ್ನೆಗಿಂತ, ಆ ಪಾತ್ರಗಳು ಮಾಡಿಕೊಳ್ಳುವ ಆಯ್ಕೆ ಮತ್ತು ಅದರ ಸಂಕೀರ್ಣ ಹಾಗೂ ನಿಗೂಢ ಮಾನಸಿಕ ಸ್ಥಿತಿ ಅವರಿಗೆ ಮಹತ್ವದವಾಗಿ ಕಾಣುತ್ತವೆ.

ದೇಸಾಯಿಯವರ ಎಲ್ಲ ಮುಖ್ಯ ಕತೆಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಒಂದು ಸಾಮಾನ್ಯ ಸೂತ್ರವನ್ನು ನಿರೂಪಿಸುವುದಾದರೆ, ಅವರ ಎಲ್ಲ ನಾಯಕ – ನಾಯಕಿಯರು ಬದುಕಿನ ಸ್ಥಗಿತ, ಅರ್ಥ ಕಳೆದುಕೊಂಡು ಅಸಹನೀಯವಾದ ನೆಲೆಯಿಂದ ‘ಬಿಡುಗಡೆ’ ಪಡೆಯುವುದರ ಕಡೆಗೆ ತುಡಿಯುವ ವಸ್ತುವೇ ಅವರ ಕತೆಗಳ ಮುಖ್ಯ ಕೇಂದ್ರವಾಗಿದೆ – ಎಂದು ಹೇಳಬಹುದು ‘ಕ್ಷಿತಿಜ’, ‘ನಾನಾನ ತೀರ್ಥಯಾತ್ರೆ’, ‘ದಂಡೆ’, ‘ಬೇಸರ’, ‘ರಾಕ್ಷಸ’, ‘ಭರಮ್ಯಾ ಹೋಗಿ ನಿಖಿಲನಾದದ್ದು’, ‘ಹೀರೊ’, ‘ವಿಯೋಗ’, ‘ಬಿಡುಗಡೆ’, ‘ಯಾಕೆ?’ ‘ಕೂರ್ಮಾವತಾರ’ – ಹೀಗೆ ಹಲವಾರು ಕತೆಗಳಲ್ಲಿ ಈ ವಸ್ತು ಮತ್ತೆಮತ್ತೆ ಭಿನ್ನಭಿನ್ನ ರೀತಿಯಲ್ಲಿ, ಭಿನ್ನಭಿನ್ನ ದೃಷ್ಟಿಕೋನಗಳಿಂದ ನಿರೂಪಿತವಾಗಿದೆ. ಬದುಕು ಅರ್ಥ ಕಳೆದುಕೊಂಡು ಮರಗಟ್ಟಿದ ಸ್ಥಿತಿಯನ್ನು ಗುರುತಿಸಿಕೊಳ್ಳುವಷ್ಟು ಈ ಪಾತ್ರಗಳು ಪ್ರಬುದ್ಧವಾಗಿವೆ. ನಂತರ ಆ ಸ್ಥಿತಿಯಿಂದ ಹೊರಬರಲು ಪ್ರಯತ್ನಿಸುವಷ್ಟು ಶಕ್ತವಾಗಿವೆ. ಅವರು ತಮ್ಮ ಪ್ರಯತ್ನದಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸ್ಥಗಿತ ಸ್ಥಿತಿಯಿಂದ ಹೊರಬರುವ ನಿರ್ಣಾಯಕ ಕ್ಷಣದಲ್ಲಿ ಅವರು ದಿಟ್ಟವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರ ಪರಿಣಾಮಗಳು ಎಷ್ಟೇ ಸಂದಿಗ್ಧವಾದರೂ ಅವರು ಹಿಂಜರಿಯುವುದಿಲ್ಲ. ಇಲ್ಲಿಯೂ ಕೂಡ, ಹೆಚ್ಚಿನ ಕತೆಗಳಲ್ಲಿ ದಾಂಪತ್ಯವೇ ಓರೆಗಲ್ಲಾಗುತ್ತದೆ. ನೀರಸ ದೈನಿಕಗಳಲ್ಲಿ, ಪರಸ್ಪರ ಪ್ರೀತಿಯ ಸಾಯುವಿಕೆಯಲ್ಲಿ, ವ್ಯಕ್ತಿತ್ವದ ನಾಶದಲ್ಲಿ, ಹೊಂದಾಣಿಕೆಯ ಅಭಾವದಲ್ಲಿ ನಿರಂತರ ಜೇಲಾಗುವ ಬದುಕಿನಿಂದ ಪಾರಾಗಿ, ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆಂಬ ನಿರ್ಧಾರವೇ ಇಲ್ಲಿ ಮುಖ್ಯವಾಗುತ್ತದೆ. ಹಾಗೆ ಹೊಸ ಬದುಕನ್ನು ಕಟ್ಟಿಕೊಂಡರೋ ಇಲ್ಲವೋ- ಎಂಬುದನ್ನು ಮಾತ್ರ ಕತೆಗಳು ಸಂದಿಗ್ಧದಲ್ಲಿ ಬಿಡುತ್ತವೆ.

ಈ ವಿಷಯದಲ್ಲಿ ದೇಸಾಯರ ಕತೆಗಳಲ್ಲಿ ಗಂಡು – ಹೆಣ್ಣು ಎಂಬ ಭೇದವಿಲ್ಲ. ಗಂಡು ಪಾತ್ರಗಳಂತೆ ಹೆಣ್ಣು ಪಾತ್ರಗಳೂ ಅಷ್ಟೇ ಮುಖ್ಯವಾಗಿವೆ. ಒಂದು ರೀತಿಯಿಂದ ನೋಡಿದರೆ, ದಾಂಪತ್ಯದ ಚೌಕಟ್ಟನ್ನೂ ಮುರಿದು ಹೊರಗೆ ಬರುವುದು ಗಂಡಿಗಿಂತ ಹೆಣ್ಣಿಗೆ ಹೆಚ್ಚು ಆತಂಕದ ವಿಷಯ. ಆರ್ಥಿಕ ಬಲವಿಲ್ಲದಿದ್ದಾಗ ಹೆಣ್ಣಿಗೆ ಇಂಥ ನಿರ್ಣಯ ಸುಲಭವಲ್ಲ. ಆದರೂ ಅವರು ಧೈರ್ಯದಿಂದ ಹೊರಬರುತ್ತಾರೆ. “ನೀವು ನನಗೆ ಬೇಕಾಗಿಲ್ಲ – ನನ್ನ -ನಿನ್ನ ಸಂಬಂಧದಲ್ಲಿ ಅರ್ಥವಿಲ್ಲ- ಅರ್ಥವಿಲ್ಲ-ಯಾಕೆ ಯಾಕೆ ಅಂತ ಮತ್ತೆ ಮತ್ತೆ ಕೇಳಬ್ಯಾಡಿರಿ ಪ್ಲೀಜ್ -ನನಗ ಬಿಟ್ಟು ಬಿಡಿರಿ- ನನಗ ಈ ಬಂಧನದ ನರಕವಾಸ ಸಾಕಾಗೇದ- ಇನ್ನು ಎಷ್ಟಂತ ಸಹನ ಮಾಡೋದು -ದೇವರೇ, ನನ್ನ ಬಿಡುಗಡೆ ಮಾಡು” ಎನ್ನುವ ‘ಯಾಕೆ?’ ಕತೆಯ ಪ್ರಮೀಳಾನ ಆರ್ತ ಮೊರೆ ಪ್ರಾತಿನಿಧಿವಾದದ್ದು. ಇಂಥ ಸ್ಥಿತಿಗೆ ಕಾರ‍ಣವಾಗುವ ಸಂಗತಿಗಳು ಎಷ್ಟೋ ಸಲ ತರ್ಕಕ್ಕೂ ನಿಲುಕುವುದಿಲ್ಲ. ಗಂಡುಹೆಣ್ಣಿನ ಸಂಬಂಧಿಗಳ ರಹಸ್ಯವೇ ಅದು. ಅಮೃತಮತಿಯ ಸಮಸ್ಯೆಯಿಂದ ಬಿಡುಗಡೆಯೇ ಇಲ್ಲವೆಂದು ಕಾಣುತ್ತದೆ.

ನವ್ಯ ಕತೆಗಳಲ್ಲಿ ಹೆಣ್ಣು, ಗಂಡಿನ ಕೈಯಲ್ಲಿಯ ಪ್ರಯೋಗವಸ್ತುವಾಗಿ ಅಂಚಿಗೆ ಸರಿಯುತ್ತಾಳೆಂಬ ಆಪಾದನೆ ಇದೆಯಷ್ಟೆ? ದೇಸಾಯಿಯವರ ಕತೆಗಳು ಅದಕ್ಕೆ ದೊಡ್ಡ ಅಪವಾದ. ಹೆಣ್ಣು ಸದಾ ಅವರ ಕತೆಗಳ ಕೇಂದ್ರದಲ್ಲೇ ಇದ್ದಾಳೆ. ಹೆಣ್ಣಿನ ವ್ಯಕ್ತಿಸ್ವಾತಂತ್ರ್ಯಕ್ಕೆ ಅವರು ಗೌರವ ಕೊಡುತ್ತಾರೆ. ಗಂಡು-ಹೆಣ್ಣಿನ ಸಂಬಂಧಗಳನ್ನು ಚಿತ್ರಿಸುವಾಗ ದೇಸಾಯಿಯವರು ಎರಡೂ ಪಕ್ಷಗಳಿಂದ ಸಮಸ್ಯೆಯನ್ನು ನೋಡಲು ಪ್ರಯತ್ನಿಸುತ್ತಾರೆ. ಸಾಧ್ಯವಾದಷ್ಟೂ ಎರಡು ದೃಷ್ಟಿಕೋನಗಳಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತಾರೆ. ತಾಂತ್ರಿಕ ಕಾರಣಗಳಿಂದಾಗಿ ಒಂದೇ ಕತೆಯಲ್ಲಿ ಇದು ಸಾಧ್ಯವಾಗದಿದ್ದರೆ ಮತ್ತೊಂದು ಕತೆಯಲ್ಲಿ ಒದಗಿಸುತ್ತಾರೆ. ಅಂತೆಯೇ, ಅವರ ಎಲ್ಲ ಕತೆಗಳನ್ನೂ ಒಟ್ಟಿಗೆ ಓದಬೇಕು.

ದೇಸಾಯರ ಅನೇಕ ಕತೆಗಳಲ್ಲಿ ಮುಖ್ಯ ಪಾತ್ರ ಹೆಣ್ಣು. ದಾಂಪತ್ಯದ ಕಟ್ಟುಗಳನ್ನು ಒಡೆಯುವುದರಲ್ಲಿ ಅವಳದೇ ಮೊದಲ ಹೆಜ್ಜೆ. ಇಂಥ ಸಂದರ್ಭಗಳಲ್ಲಿ ಗಂಡಿನ ನಡತೆಗೆ ಸಾಮಾಜಿಕವಾಗಿ ಅಂಥ ವಿರೋಧ ಇರುವುದಿಲ್ಲ. ಬದಲಾಗಿ ಸಮಾಜ ಅದನ್ನು ‘ರಸಿಕತೆ’ ಎಂದು ಮೆಚ್ಚಿಗೆಯಿಂದಲೇ ಸ್ವೀಕರಿಸುತ್ತದೆ. ಸಮರ್ಥಿಸುತ್ತದೆ ಕೂಡಾ. ಆದರೆ, ಅದೇ ಹೆಣ್ಣು ಹಾಗೆ ವರ್ತಿಸಿದಾಗ ವಿಷಯ ಒಮ್ಮೆಲೆ ಗಂಭೀರವಾಗಿ ಬಿಡುತ್ತದೆ. ಅವಳ ವ್ಯಕ್ತಿತ್ವಕ್ಕೆ ಅದೊಂದು ಕಳಂಕವಾಗುತ್ತದೆ. ಹೆಣ್ಣಿನ ಹೆಜ್ಜೆ ‘ತಪ್ಪು ಹೆಜ್ಜೆ’ಯಾಗುತ್ತದೆ. ಅವಳ ಇಂಥ ನಡತೆಗೆ ‘ಹಾದರ’, ‘ವ್ಯಭಿಚಾರ’ ಎಂಬ ಶಬ್ಧಗಳಿರುವಂತೆ ಗಂಡಿನ ನಡತೆಗೆ ಹೀನಾರ್ಥದ ಶಬ್ದಗಳೇ ಇಲ್ಲ. ಪುರುಷಪ್ರಧಾನ ಸಂಸ್ಕೃತಿಯಲ್ಲಿ ಇದು ಸಹಜವೇ ಆಗಿದೆ. ಅಂತೆಯೇ ಲೈಂಗಿಕ ವಿಷಯದಲ್ಲಿ ದಾಂಪತ್ಯದ ಹೊರಗೆ ಕಾಲಿಡಲು ಹೆಣ್ಣಿಗೆ ಅಪಾರ ಧೈರ್ಯ ಬೇಕಾಗುತ್ತದೆ. ದೇಸಾಯಿಯವರ ಸ್ತ್ರೀ ಪಾತ್ರಗಳಿಗೆ ಅಂಥ ಧೈರ್ಯ ಇದೆ. ಸ್ವತಂತ್ರ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂಬ ಮಹಾತ್ವಾಕಾಂಕ್ಷೆ ಇದೆ. ಅದಕ್ಕಾಗಿ ತೆರಬೇಕಾದ ಬೆಲೆಯ ಅರಿವೂ ಇದೆ. ಹೀಗೆ ದಾಂಪತ್ಯದ ಮತ್ತು ಲೈಂಗಿಕತೆಯ ಕಟ್ಟುಪಾಡುಗಳನ್ನು ಮೀರುವುದರಲ್ಲೇ ಅವುಗಳ ನಿಜವಾದ ಸತ್ವಪರೀಕ್ಷೆ ಇರುವುದರಿಂದ ದೇಸಾಯಿಯವರು ಅದನ್ನೇ ಪ್ರಮುಖ ಒರೆಗಲ್ಲನಾಗಿ ತಮ್ಮ ಕತೆಗಳಲ್ಲಿ ಬಳಸಿಕೊಂಡಿದ್ದಾರೆ. ಈ ಹೆಜ್ಜೆಯ ನಂತರ ಅವರ ಭವಿಷ್ಯದ ಬದುಕು ಅನಿಶ್ಚಿತವಾಗಿ ಬಿಡುವ ಭಯವಿದ್ದರೂ ಅವರು ಹಿಂಜರಿಯುವುದಿಲ್ಲ. ಅರ್ಥಹೀನತೆಯ ನರಕದಿಂದ ಪಾರಾಗುವುದು ಅವರಿಗೆ ಅಷ್ಟು ತುರ್ತಿನ ಅಗತ್ಯವಾಗಿದೆ. ಹೆಣ್ಣಿನ ಇಂಥ ನಿರ್ಧಾರಗಳ ಹಿಂದಿನ ಮಾನಸಿಕ ಒತ್ತಡಗಳನ್ನು ದೇಸಾಯಿಯವರು ಸಹಾನುಭೂತಿಯಿಂದಲೇ ಚಿತ್ರಿಸುತ್ತಾರೆ. ಈ ವಿಷಯದಲ್ಲಿ ಗಂಡಿಗಿಂತ ಹೆಣ್ಣಿಗಿರುವ ಹೆಚ್ಚಿನ ಆತಂಕ-ಜವಾಬ್ದಾರಿಗಳನ್ನು ಗುರುತಿಸುತ್ತಾರೆ.

ಅನೇಕ ಸಂದರ್ಭಗಳಲ್ಲಿ ದೇಸಾಯಿಯರ ಸ್ತ್ರೀ ಪಾತ್ರಗಳೇ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ‘ರಾಕ್ಷಸ’ ಕತೆಯ ನಾಯಕಿ, ‘ಏಕಾಂಗಿ’ಯ ಆ‍ಯ್‌ನ್, ‘ಗಂಡಾ ಸತ್ತ ಮೇಲೆ’ಯ ವಿಜಯಾಬಾಯಿ, ‘ಯಥಾ ಕಾಷ್ಠಯಾಂಚ ಕಾಷ್ಥಯಾಂಚ’ದ ಶಾರದಾಬಾಯಿ ಇಂಥ ಆಕ್ರಮಣಕಾರಿ ಪಾತ್ರಗಳು. ಈ ಪಾತ್ರಗಳು ಇಡುವ ದಿಟ್ಟು ಹೆಜ್ಜೆಗಳನ್ನು ದೇಸಾಯಿಯವರು ಸಕಾರಾತ್ಮಕವಾಗಿಯೇ ನೋಡುತ್ತಾರೆಂಬುದು ಬಹಳ ಮಹತ್ವದ ಮಾತು. ಬದುಕಿನ ಅರ್ಥವನ್ನು ಶೋಧಿಸುವ ಹಕ್ಕು ಮತ್ತು ತುರ್ತು ಗಂಡಿನಷ್ಟೇ ಹೆಣ್ಣಿಗೂ ಇದೆ. ಗಂಡು ಸಿಡಿಯುವಂತೆ ಹೆಣ್ಣೂ ಸಿಡಿಯುತ್ತಾಳೆ. ‘ಬಿಡುಗಡೆ’ ಕತೆಯಲ್ಲಿ ಹೊರಗೆ ಹೋಗುವವನು ಗಂಡಾದರೂ, ಬಿಡುಗಡೆ ಸಿಗುವುದು ಹೆಣ್ಣಿಗೆ, ಕೆಲವು ಸಲ ಹೀಗೆ ಸಿಡಿಯುವ ಹಂತದವರೆಗೆ ಹೋಗಿ, ಮತ್ತೇನೋ ಸಂಭವಿಸಿ, ಯಥಾಸ್ಥಿತಿಗೆ ಮರಳುವ ‘ಅಂಟಿದ ನಂಟು’, ‘ತೃಪ್ತ’ದಂಥ ಕತೆಗಳನ್ನೂ ದೇಸಾಯಿ ಬರೆದಿದ್ದಾರೆ. ಗ್ರಾಮೀಣ ಸರಂಜಾಮಿ ವ್ಯವಸ್ಥೆಯಲ್ಲಿ, ಗಂಡು-ಹೆಣ್ಣಿನ ನಡುವಿನ ಆರ್ಥಿಕ ತಾರತಮ್ಯದಲ್ಲಿ ಶೋಷಣೆಗೊಳಗಾಗುವ ಹೆಣ್ಣುಗಳೂ ಅವರ ಕತೆಗಳಲ್ಲಿವೆ. ಸ್ತ್ರೀವಾದಿ ದೃಷ್ಟಿಕೋನಗಳಿಂದ ಅಭ್ಯಾಸ ಮಾಡಲು ದೇಸಾಯಿಯವರ ಕತೆಗಳಲ್ಲಿ ಸಾಕಾಷ್ಟು ಸಾಮಗ್ರಿ ಸಿಗುತ್ತದೆ.

ದೇಸಾಯಿಯವರ ಕತೆಗಳಲ್ಲಿ ಹೀಗೆ ಸ್ಥಗಿತ ಸ್ಥಿತಿಯಿಂದ ಬಿಡುಗಡೆ ಪಡೆಯುವ ಸಾಂಪ್ರದಾಯಿಕ ನೈತಿಕ ಚೌಕಟ್ಟನ್ನು ಮೀರುವ ಸನ್ನಿವೇಶಗಳು ಸಂಭವಿಸುವುದು ಬಹುತೇಕ ನಗರ ಪ್ರದೇಶಗಳಲ್ಲಿ, ಸುಶಿಕ್ಷಿತ ಮಧ್ಯಮ ವರ್ಗದಲ್ಲಿ. ವ್ಯಕ್ತಿಯನ್ನು ತನ್ನಷ್ಟಕ್ಕೆ ಬಿಡುವ, ಇನ್ನೊಬ್ಬರ ಬದುಕಿನಲ್ಲಿ ತಲೆಹಾಕದ ಇಂಥ ಪರಿಸರದಲ್ಲಿ ಈ ಮೀರುವ ಕ್ರಿಯೆ ಸ್ವಲ್ಪ ಮಟ್ಟಿಗೆ ಸುಲಭವಾಗುತ್ತದೆ, ಸರಳವೂ ಆಗುತ್ತದೆ. ಗಂಡು-ಹೆಣ್ಣಿನ ಈ ಸಂಬಂಧಗಳಲ್ಲಿ ಜಾತಿ ಯಾವ ಪಾತ್ರವನ್ನೂ ವಹಿಸುವುದಿಲ್ಲ-ಎಂಬುದು ಕುತೂಹಲದ ವಿಷಯ. ಸಮಸ್ಯೆಯಿಂದ ಹುಟ್ಟುವ ಮಾನಸಿಕ ತಳಮಳವನ್ನು ದೇಸಾಯರು ಸರಿಯಾಗಿಯೇ ಗುರುತಿಸುತ್ತಾರೆ. ತರೀಕೆರೆಯವರು ಗಮನಿಸಿರುವಂತೆ, ಗ್ರಾಮೀಣ ಪರಿಸರದಲ್ಲಿ, ವಿಶೇಷವಾಗಿ ಜಾತಿವ್ಯವಸ್ಥೆಯ ಸಂದರ್ಭದಲ್ಲಿ ಇಂಥ ನಿರ್ಣಯಗಳು ಸುಲಭವಾಗಿರುವುದಿಲ್ಲ (೨೦೦೦). ಇದಕ್ಕೆ ಅವಿಭಕ್ತ ಕುಟುಂಬದ ಪರಿಸರವನ್ನೂ ಸೇರಿಸಬೇಕು. ಆಗ ಸಮಸ್ಯೆಗಳು ಕೇವಲ ವೈಯಕ್ತಿಕವಾಗಿ ಉಳಿಯುವುದಿಲ್ಲ. ಅವುಗಳಿಗೆ ದೂರಗಾಮಿಯಾದ ಪರಿಣಾಮಗಳಿರುತ್ತವೆ; ಸಾಮಾಜಿಕ ವಿರೋಧಗಳಿರುತ್ತವೆ, ಕೌಟುಂಬಿಕ ತಿರಸ್ಕಾರಗಳಿರುತ್ತವೆ. ಅಲ್ಲಿ ಅವುಗಳನ್ನೆಲ್ಲ ಮೀರಿ ಬದುಕುವುದು ಕಷ್ಟ. ದೇಸಾಯಿಯವರ ಕತೆಗಳಲ್ಲಿ ಮೀರುವಿಕೆಯನ್ನು ಈ ಸಂಕೀರ್ಣತೆ ತಟ್ಟುವುದಿಲ್ಲ. ಇಲ್ಲಿ ಸಮಸ್ಯೆಗಳನ್ನು ಹುಟ್ಟುಕಾಕುವುದು ಸಮಾಜವೇ ಆದರೂ, ವ್ಯಕ್ತಿಗಳ ನಡುವಿನ ಸಂಬಂಧಗಳು ವೈಯಕ್ತಿಕ ನೆಲೆಯಲ್ಲೇ ನಿರ್ಣಯವಾಗುತ್ತವೆ. ಇಂಥ ನಿರ್ಣಯಗಳಲ್ಲಿ ಸಮಾಜ ಯಾವ ಪಾತ್ರವನ್ನೂ ವಹಿಸದೆ ತಟಸ್ಥವಾಗಿ ಉಳಿಯುತ್ತದೆ. ಅಡ್ಡಿಯನ್ನಂತೂ ಒಡ್ಡುವುದೇ ಇಲ್ಲ. ಅಂಥ ಸಂದರ್ಭಗಳಲ್ಲಿ ಯಾವ ಪಾತ್ರವೂ ಸಮಾಜದ ಬಗ್ಗೆ, ಜನರು ಏನಾದರೆಂಬ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ಮುಖ್ಯವಾದ ಮಾತೆಂದರೆ, ಅದರ ಬಗ್ಗೆ ಯೋಚನೆ ಮಾಡುವ ಅಗತ್ಯವೇ ಬೀಳುವುದಿಲ್ಲ. ಅಷ್ಟರ ಮಟ್ಟಿಗೆ ಸಮಾಜದ ಅಸ್ತಿತ್ವ ಇಲ್ಲಿ ಗೌಣವಾಗಿದೆ. ಹೀಗೆ ನಿರ್ಣಯಗಳು ಅ-ನೈತಿಕವಾಗಿರುವಂತೆ ಅ-ಸಾಮಾಜಿಕವೂ ಆಗಿವೆ.

ಆದರೆ ಬರುಬರುತ್ತ ದೇಸಾಯಿಯವರ ಕತೆಗಳಲ್ಲಿ ಸಾಮಾಜಿಕತೆಯ ಅಂಶವೂ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಸೇರತೊಡಗಿದ್ದನ್ನು ಗಮನಿಸಬಹುದು. “ಪರಿವರ್ತನೆ” ಕಥಾಸಂಕಲನದ ಮೊದಲ ಮಾತುಗಳಲ್ಲಿ ಅವರೇ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಅದರೆ ಜೊತೆಗೇ- ಅವರೇ ಗಮನಿಸಿರುವಂತೆ- ವೈಯಕ್ತಿಕ ಸಂದಿಗ್ಧತೆಗಳೂ ಉಳಿದುಕೊಂಡಿವೆ. ಹಾಗೆ ನೋಡಿದರೆ, ವೈಯಕ್ತಿಕ ಸಂದಿಗ್ಧತೆಯೇ ಅವರ ಕತೆಗಳ ಸ್ಥಾಯಿ ನೆಲೆ; ಸಾಮಾಜಿಕ ಕಾಳಜಿಗಳದು ಸಂಚಾರಿ ನೆಲೆ. “ಪರಿವರ್ತನೆ” ಸಂಕಲನದ ಕತೆಗಳಲ್ಲಿ ಸಾಮಾಜಿಕ ಕಾಳಜಿಗಳು “ಹೆಚ್ಚಿನ ಪ್ರಕರ್ಷತೆಯಿಂದ ಬಂದಿವೆ” (೧೯೮೨ : ೫) ಎನಿಸುವುದಿಲ್ಲ. ಇಲ್ಲಿಯೂ ಲೈಂಗಿಕ ಸಂಬಂಧಗಳೇ ಮುಖ್ಯ ವಿಷಯವಾಗಿವೆ; ಅಸ್ತಿತ್ವವಾದಿ ಚಿಂತನೆಯೇ ಪ್ರಧಾನವಾಗಿದೆ. ಆದರೂ, ‘ಸಹೋದರ’, ‘ರಾಜಿನಾಮೆ’, ‘ಪ್ರತಿಕೃತಿ’, ‘ಐವತ್ತು ತುಂಬಿದಾಗ’, ‘ಯಶಸ್ಸಿನ ವಾಸನೆ’, ‘ಕಾಡುಕೋಣ’, ‘ಇಲಿಗಳು’- ಇಂಥ ಕತೆಗಳು ವೈಯಕ್ತಿಕ ನೆಲೆಯನ್ನು ದಾಟಿ, ಹೊರಗೆ ಬೇರೆ ಸಂಬಂಧಗಳೂ ಇವೆ, ಸಮಾಜ ಎಂಬುದೂ ಒಂದು ಇದೆ – ಎಂಬುದನ್ನು ಗಮನಿಸುತ್ತವೆ. ಲೈಂಗಿಕತೆಯಲ್ಲಿ ರಾಜಕೀಯವೂ ಸೇರಿಕೊಳ್ಳುತ್ತದೆ. ಇದಕ್ಕೆ ‘ಪ್ರತಿಕೃತಿ’ ಒಳ್ಳೆಯ ಉದಾಹರಣೆ. ಈ ಕತೆಯ ಕೆಂದ್ರದಲ್ಲಿ ಒಂದು ಲೈಂಗಿಕ ಸಂಬಂಧ ಇದ್ದರೂ, ಅದು ಸಾಮಾಜಿಕ ಸ್ವರೂಪ ಪಡೆದು, ರಾಜಕೀಯ ತಿರುವು ತೆಗೆದುಕೊಳ್ಳುತ್ತದೆ, ಮತ್ತು ರಾಜಕೀಯ ಪರಿಹಾರದಲ್ಲಿ ಮುಕ್ತಾಯವಾಗುತ್ತದೆ. ‘ಭರಮ್ಯಾ ಹೋಗಿ ನಿಖಿಲಿನಾದದ್ದು’ ಮಾತ್ರ ಸಂಪೂರ್ಣವಾಗಿ ಒಂದು ಸಾಮಾಜಿಕ ವಾಸ್ತವವನ್ನು ಚಿತ್ರಿಸುವ ಕತೆ, ಮೇಲುವರ್ಗದ ಹಿತಾಸಕ್ತಿಗಳ ವಿರುದ್ದ ಖಂಡೇಳುವ, ತಾನೂ ಅವರಂತೆ ಆಗಬೇಕೆನ್ನುವ, ಕೊನೆಗೆ ಮೇಲುವರ್ಗವನ್ನು ಧ್ವಂಸ ಮಾಡಿಬಿಡಬೇಕೆನ್ನುವ ಅವನ ಕನಸಿನ ಹಿಂದೆ, ಸುಪ್ತವಾಗಿದ್ದ ವರ್ಣದ್ವೇಷ ಸ್ಫೋಟಗೊಳ್ಳುತ್ತದೆ. ಇದನ್ನೊಂದು ಬಂಡಾಯದ ಕತೆಯನ್ನಾಗಿ ಓದಬಹುದಾದಷ್ಟು ಇದರಲ್ಲಿಯ ಸಾಮಾಜಿಕತೆ ‘ಪ್ರಕರ್ಷ’ವಾಗಿ ಪ್ರಕಟವಾಗಿದೆ, ದೇಸಾಯಿಯವರು ಬರೆದಿರುವ ೪೯ಕತೆಗಳಲ್ಲಿ ಇಂಥದು ಇನ್ನೊಂದಿಲ್ಲ – ಎಂಬುದನ್ನು ಅವಶ್ಯ ನೆನಪಿಡಬೇಕು.

ಪಾತ್ರಗಳ ವಿಶ್ಲೇಷಣೆಯಲ್ಲಿ ದೇಸಾಯಿಯವರು ಮಾನಸಶಾಸ್ತ್ರೀಯ ಒಳನೋಟಗಳನ್ನು ವಿಫಲವಾಗಿ ಬಳಸಿಕೊಂಡಿದ್ದಾರೆ. ವಿಶೇಷವಾಗಿ ಫ್ರಾಯ್ಡ್‌ನ ಸಿದ್ಧಾಂತಗಳ ಪ್ರಭಾವ ದಟ್ಟವಾಗಿಯೇ ಕಾಣುತ್ತದೆ. ಲೈಂಗಿಕ ಸಂಬಂಧಗಳನ್ನು ಕುರಿತು ಬರೆಯುವ ಯಾವ ಲೇಖಕನಿಗಾದರೂ ಫ್ರಾಯ್ಡ್‌ನಿಂದ ಬಿಡುಗಡೆ ಇಲ್ಲ. “ಮಂಜುಗಡ್ಡೆ” (೧೯೫೮) ಸಂಕಲನದ ಎಲ್ಲ ಕತೆಗಳಿಗೂ ಹಿನ್ನೆಲೆಯಾಗಿರುವುದು ಮಾನಸಶಾಸ್ತ್ರೀಯ ಆಸಕ್ತಿ. ಅದರಲ್ಲಿಯ ವಸ್ತುಗಳು ಕೂಡಾ ಮನೋವಿಜ್ಞಾನದ ಸಮಸ್ಯೆಗಳನ್ನೇ ಕುರಿತಂಥವು. ‘ಹೊಸತಿಲದಾಚೆಗೆ’ ಯೌವನಕ್ಕೆ ಕಾಲಿಡುತ್ತಿರುವ ಕಿಶೋರಿಕ್ಯ ಲೈಂಗಿಕ ಬಯಕೆಗಳ ಗೊಂದಲವನ್ನು ಚಿತ್ರಿಸುತ್ತದೆ. ‘ಚಂದೂ’ದಲ್ಲಿ ಎಳೆಯ ಹುಡುಗನೊಬ್ಬ ವಯಸ್ಕರ ಲೈಂಗಿಕ ಸಂಬಂಧವನ್ನು ನೋಡಿ ಅಸೂಯೆಯಿಂದ ಚಡಪಡಿಸುವ ಚಿತ್ರ ಇದೆ. ಮುಂದೆ ಕೂಡ ಅವರು ಇಂಥ ಕೆಲವು ಕತೆಗಳನ್ನು ಬರೆದಿದ್ದಾರೆ. ‘…..ನ್ನು ತನ್ನ ಹಿಂದೆ ಬಿಟ್ಟು ಹೋಗಿದ್ದಾಳೆ’ ‘ ಕತೆಯಲ್ಲಿ ಈಡಿಪಸ್ ಕಾಂಪ್ಲೆಕ್ಸ್‌ದ ಸೂಚನೆ ಇದೆ. ‘ಗಂಡ ಸತ್ತ ಮೇಲೆ’ ತಮ್ಮ ಅತೃಪ್ತ ಕನಸುಗಳನ್ನು ಇನ್ನೊಬ್ಬರ ಬದುಕಿನ ಮೂಲಕ ಈಡೇರಿಸಿಕೊಳ್ಳುವ ದುರಂತವನ್ನು ಚಿತ್ರಿಸುತ್ತದೆ. ‘ಮಧ್ಯಸ್ಥರು’ ಕತೆಯಲ್ಲಿ ಅಕ್ಕ-ತಮ್ಮರ ನಡುವೆ ಇದ್ದಿರಬಹುದಾದ ಇನ್ಸೆಸ್ಟ್ ಸಂಬಂಧದ ಸೂಚನೆ ಇದೆ. ‘ನೀಚ’ದಲ್ಲಿ ಮಾನಸಿಕ ಮತ್ತು ದೈಹಿಕ ಸಂಬಂಧಗಳ ನಡುವಿನ ಗೊಂದಲದ ಚಿತ್ರ ಇದೆ. ‘ಬೇಸರ’, ‘ದುಃಸ್ವಪ್ನ’, ‘ಹುಚ್ಚ’, ‘ಅಂತರ’, ‘ಸಹೋದರ’ ಮೊದಲಾದ ಈಚಿನ ಕತೆಗಳಲ್ಲಿಯೂ ದೇಸಾಯಿಯವರ ಮಾನಸಶಾಸ್ತ್ರೀಯ ಆಸಕ್ತಿಗಳು ಉಳಿದುಕೊಂಡೇ ಬಂದಿವೆ. ಆದರೆ ದೇಸಾಯಿಯವರು ಕತೆಗಾರರಾಗಿ ಪ್ರಬುದ್ಧರಾಗುತ್ತ ಬಂದ ಹಾಗೆ, ನೇರವಾಗಿ ಮಾನಸಶಾಸ್ತ್ರೀಯ ಸಮಸ್ಯೆಗಳನ್ನೇ ಚಿತ್ರಿಸುವುದನ್ನು ಕೈ ಬಿಟ್ಟು, ಅದರ ಒಳನೋಟಗಳನ್ನು ಮಾತ್ರ ಸೂಕ್ಷ್ಮವಾಗಿ ಬಳಸಿಕೊಂಡಿದ್ದಾರೆ. ಆದರೂ, ಉದ್ದಕ್ಕೂ ಎಲ್ಲ ಕತೆಗಳಲ್ಲಿ ಕಾಣುವುದು ಪಾತ್ರಗಳ ಮಾನಸಶಾಸ್ತ್ರೀಯ ವಿಶ್ಲೇಷಣೆ. ಅದಕ್ಕಾಗಿ ಪ್ರಜ್ಞಾಪ್ರವಾಹ ತಂತ್ರವನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚು ಕಡಿಮೆ ಮಾಡಿಕೊಂಡು ಬಳಸಿರುವುದರಿಂದ ಪಾತ್ರಗಳಿಗೆ ನಾಲ್ಕನೆಯ-ಮಾನಸಿಕ – ಆಯಾಮ ಬಂದಿದೆ. ಇದರಿಂದಾಗಿ, ಅವರ ಪಾತ್ರಗಳು ವಾಸ್ತವದಲ್ಲಿ ನಿಜವಾಗಿರುವಂತೆ ಒಳಗಿನಿಂದಲೂ ನಿಜವಾಗುತ್ತವೆ.

ನಿರೂಪಣೆಯ ವಿಧಾನದಲ್ಲಿ ದೇಸಾಯಿಯವರು ನಡೆಸಿರುವಷ್ಟು ಪ್ರಯೋಗಗಳನ್ನು ಬಹುಶಃ ಕನ್ನಡದ ಯಾವ ಕತೆಗಾರನೂ ನಡೆಸಿಲ್ಲವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಸತ್ಯದ ಬಹುಮುಖ್ಯತ್ವವನ್ನು ಒಪ್ಪಿಕೊಂಡ ಮೇಲೆ ಅದನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುವುದು ದೇಸಾಯರಿಗೆ ಅನಿವಾರ್ಯವಾದಂತೆ ಕಾಣುತ್ತದೆ. ಒಂದೇ ವಸ್ತುವನ್ನು ಹೀಗೆ ಬೇರೆಬೇರೆ ನಿರೂಪಕರ ದೃಷ್ಟಿಗೆ ಒಡ್ಡಿ ನೋಡಿರುವ ಹಲವು ಕತೆಗಳನ್ನು ಅವರು ಬರೆದಿದ್ದಾರೆ. ನಿರೂಪಕರ ಲಿಂಗ, ವಯಸ್ಸು, ಅಂತಸ್ತು, ಪ್ರಬುದ್ಧತೆಗಳನ್ನು ಬದಲಿಸಿ, ಒಂದೇ ವಸ್ತು ಹಲವು ಬಣ್ಣ-ವಿನ್ಯಾಸಗಳನ್ನು ಪಡೆಯುವುದನ್ನು ತೋರಿಸಿದ್ದಾರೆ. ಮಗುವಿನ ದೃಷ್ಟಿಕೋನದಿಂದ ಪ್ರಬುದ್ಧರ ಜಗತ್ತನ್ನು ನೋಡುವ ‘ಚಂದೂ’ ಕನ್ನಡದಲ್ಲಿ ಈ ಬಗೆಯ ಕತೆಗಳಲ್ಲಿ ಮೊದಲನೆಯದು (೧೯೯೫೨). ಅನಂತರ ಅನಂತಮೂರ್ತಿಯವರ ಶ್ರೀಕೃಷ್ಣ ಆಲನಹಳ್ಳಿಯವರ “ಕಾಡು” (೧೯೭೨), ‘ಘಟಶ್ರಾದ್ಧ’ (೧೯೬೨), ಕೆ ಸದಾಶಿವರ ‘ರಾಮನ ಸವಾರಿ ಸಂತೆಗೆ ಹೋದದ್ದು’ (೧೯೬೪), ಮೊದಲಾದ ಪ್ರಸಿದ್ಧ ಕತೆಗಳು ಪ್ರಕಟವಾದವು. ದೇಸಾಯಿಯವರೇ ‘ದಿಗ್ಭ್ರಮೆ’, ‘ಶಿವೂನ ಬಂಡಾಯ’ದಂಥ ಈ ಬಗೆಯ ಇನ್ನಷ್ಟು ಕತೆಗಳನ್ನು ಬರೆದಿದ್ದಾರೆ. ಆದರೆ ಒಂದರಂತೆ ಇನ್ನೊಂದಿಲ್ಲ. ನೇರ ನಿರೂಪಣೆಯ ಜೊತೆಗೆ ಆತ್ಮಕಥೆ, ಪತ್ರೆ, ಡೈರಿ – ಇತ್ಯಾದಿಗಳನ್ನೂ ನಿರೂಪಣೆಗಾಗಿ ಅವರು ಬಳಸಿಕೊಂಡಿದ್ದಾರೆ. ಆದರೂ, ಒಂದು ಪಾತ್ರವನ್ನು ದೃಷ್ಟಿಕೋನದ ಕೇಂದ್ರವನ್ನಾಗಿ ಇಟ್ಟುಕೊಂಡು ಅದರ ಪ್ರಜ್ಞೆಯ ಮೂಲಕವೇ ವಸ್ತುವನ್ನು ಗ್ರಹಿಸುವುದು ಅವರಿಗೆ ಪ್ರಿಯವಾದ ನಿರೂಪಣ ತಂತ್ರವಾಗಿದೆ. ಅನಂತ ಮೂರ್ತಿಯವರ ಕತೆಗಳಲ್ಲಿ ಲೇಖಕನೇ ಪ್ರಜ್ಞೆಯ ಕೇಂದ್ರವಾದಂತೆ ದೇಸಾಯಿಯವರ ಕತೆಗಳಲ್ಲಿ ಆಗುವುದಿಲ್ಲ. ಅಷ್ಟೇ ಏಕೆ, ತೇಜಸ್ವಿಯವರು ಮಾಡಿರುವ ಇಂಥ ಅಪಾದನೆ (೧೯೭೩:vi) ಎಲ್ಲ ನವ್ಯ ಕತೆಗಳಿಗೂ ಸಾರಾಸಗಟಾಗಿ ಅನ್ವಯವಾಗುವುದಿಲ್ಲ.

ಉಲ್ಲೇಖಗಳು

೦೧.   ಆಮೂರ, ಜಿ.ಎಸ್. (೨೦೦೦) “ಶಾಂತಿನಾಥ ದೇಸಾಯಿ”, ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ.

೦೨.   ಗಿರಡ್ಡಿ ಗೋವಿಂದರಾಜ (೧೯೭೮), “ಸಣ್ಣಕತೆಯ ಹೊಸ ಒಲವುಗಳು” (ದ್ವಿ. ಆವೃತ್ತಿ), ಸಾಹಿತ್ಯ ಭಂಡಾರ, ಹುಬ್ಬಳ್ಳಿ.

೦೩.   ತರೀಕೆರೆ, ರಹಮತ್ (೨೦೦೦), ‘ದೇಸಾಯಿ: ಆಧುನಿಕತೆಯನ್ನು ಆರಾಧಿಸುವ ಕಥನಕಾರ‍’ – “ಸಂಕ್ರಮಣ” : ೩೩೧.

೦೪.   ದೇಸಾಯಿ, ಶಾಂತಿನಾಥ (೧೯೮೨), ‘ಮೂರು ಮಾತು’ – “ಪರಿವರ್ತನೆ”, ಅನನ್ಯ ಪ್ರಕಾಶನ, ಧಾರ‍ವಾಡ.

೦೫.  ದೇಸಾಯಿ ಶಾಂತಿನಾಥ (೧೯೮೯), “ಕನ್ನಡ ಕಾದಂಬರಿ ನಡೆದು ಬಂದ ರೀತಿ”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೦೬.  ಪೂರ್ಣಚಂದ್ರ ತೇಜಸ್ವಿ (೧೯೭೧) ‘ಹೊಸ ದಿಂಗಂತದೆಡೆಗೆ’ – “ಅಬಚೂರಿನ ಪೋಸ್ಟಾಫೀಸು”, ನಿರ್ಮಾಣ ಪ್ರಕಾಶನ, ಧಾರವಾಡ.

– ೨೦೦೧

* ಶಾಂತಿನಾಥ ದೇಸಾಯಿ ಅವರ ’ಸಮಗ್ರ ಕತೆಗಳು’ (ಸಪ್ನ ಬುಕ್ ಹೌಸ್, ಬೆಂಗಳೂರು ೨೦೦೧) ಸಂಪುಟಕ್ಕೆ ಬರೆದ ’ಪ್ರಸ್ತಾವನೆಯ ಒಂದು ಭಾಗ.