ಮಾನವ ಸಂಘ ಜೀವಿ ಹಾಗೂ ಸಮಾಜ ಜೀವಿಯಾಗಿದ್ದು ಜೀವನ ಪರ್ಯಂತ ಅನುಭವಗಳ ಮೂಲಕ ಶಿಕ್ಷಣ ಪಡೆಯುತ್ತಿರುತ್ತಾನೆ. ಹಾಗಾಗಿ ಪ್ರವಾಸ ಕಾರ್ಯಕ್ರಮ ಬಹಳ ಪ್ರಾಮುಖ್ಯತೆ ಪಡೆದಿದೆ. ದೇಶಸುತ್ತಿ ಕಲಿ, ಕೋಶ ಓದಿ ಕಲಿ ಎಂಬಂತೆ, ಮಕ್ಕಳು ಪ್ರವಾಸದ ಮೂಲಕ ನೋಡಿ ಕಲಿಯುವ ಅನುಭವ ಕಲಿಕೆಗೆ ಪೂರಕವಾಗಿದೆ.

 • ವೈವಿಧ್ಯಮಯ ಜನಜೀವನ, ಶಿಲ್ಪಕಲೆ, ಐತಿಹಾಸಿಕ ಕಟ್ಟಡಗಳ ಬಗ್ಗೆ ಧನಾತ್ಮಕ ಮನೋಭಾವನೆಗಳ ಬೆಳೆಸುವುದು.
 • ವಿವಿಧ ಪ್ರದೇಶಗಳ ಸಂಸ್ಕೃತಿ ಹಾಗೂ ಪರಂಪರೆಗಳ ಪರಿಚಯ ಮಾಡಿಕೊಂಡು ಅವುಗಳನ್ನು ಗೌರವಿಸುವುದು.
 • ಸಹಬಾಳ್ವೆ ಹಾಗೂ ಸಹಭಾಗಿತ್ವದ ಮಹತ್ವದೊಂದಿಗೆ ವಾಸ್ತವ ಜೀವನ ಕುರಿತ ಮನೋಭಾವನೆಯಲ್ಲಿ ಬದಲಾವಣೆ ಉಂಟು ಮಾಡುವುದು.
 • ಇತರೆ ಧರ್ಮ, ಜಾತಿ ಹಾಗೂ ಪ್ರಾಂತ್ಯದ ಜನರೊಂದಿಗೆ ಸಂವೇದನೆ ಮತ್ತು ಸಹಕಾರ ಮನೋಭಾವನೆ ಬೆಳೆಸುವುದು
 • ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಜ್ಞಾನವನ್ನು ಬೆಳೆಸುವುದು.
 •  ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸುವುದು.
 • ಮಕ್ಕಳು ಶಾಲೆಯತ್ತ ಹೆಚ್ಚು ಆಕರ್ಷಿತರಾಗಿ ಹಿರಿಯ ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.
 • ವಿದ್ಯಾರ್ಥಿಗಳಲ್ಲಿ ವೀಕ್ಷಣೆ, ಮೌಖಿಕ ಹಾಗೂ ಲಿಖಿತ ಕೌಶಲಗಳ ಸಂವರ್ಧನೆ ಮಾಡುವುದು.
 • ಮಕ್ಕಳಲ್ಲಿ ಕೀಳರಿಮೆ ಹೋಗಲಾಡಿಸುವುದು. ಆತ್ಮವಿಶ್ವಾಸವನ್ನು ಬೆಳೆಸುವುದು.
 • ಪಠ್ಯಪುಸ್ತಕದಲ್ಲಿನ ಮಾಹಿತಿ ಹಾಗೂ ಹೊರ ಪ್ರಪಂಚದ ವಾಸ್ತವ್ಯದ ನಡುವೆ ಇರುವ ಅಂತರವನ್ನು ಅರ್ಥೈಸಿ ಕೊಳ್ಳುವಂತೆ ಮಾಡುವುದು.
 • ಕಲಿಕೆಯನ್ನು ಶಾಶ್ವತಗೊಳಿಸಲು  ಸ್ವತಂತ್ರ ವಾತಾವರಣವನ್ನು ಸೃಷ್ಟಿಸಿ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು.

ಮಕ್ಕಳಲ್ಲಿ ಸಮಾಜಸೇವೆ ಭಾವೈಕ್ಯತೆ, ರಾಷ್ಟ್ರ ಪ್ರೇಮ ಮುಂತಾದ ಸದ್ಗುಣಗಳನ್ನು ಬೆಳೆಸುವುದು.

ಪ್ರವಾಸದ ಸ್ಥಳಗಳ ಆಯ್ಕೆ :

 • ಐತಿಹಾಸಿಕ, ಧಾರ್ಮಿಕ, ಸಾಮಾಜಿಕ, ನೈಸರ್ಗಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಮಹತ್ವದ ಜಿಲ್ಲೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳು,
 • ಮಕ್ಕಳಿಗೆ ಹೊಸ ಅನುಭವವನ್ನು ನೀಡುವ ಜಿಲ್ಲೆಯಲ್ಲಿನ ವಿವಿಧ ಪ್ರದೇಶಗಳ ಪರಿಚಯ.ಪ್ರವಾಸದ ಮುಖ್ಯಾಂಶಗಳು :
 • ಎರಡು ದಿನ ಹಾಗೂ ಒಂದು ರಾತ್ರಿಯ ಉಚಿತ ಪ್ರವಾಸ.
 • ಉತ್ತಮವಾದ ಊಟ, ಕಾಫಿ, ತಿಂಡಿ, ವಸತಿ ಇತ್ಯಾದಿ.
 • ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ ಉಚಿತ ಪ್ರವೇಶ ವ್ಯವಸ್ಥೆ.
 • ಪ್ರತಿ ತಂಡಕ್ಕೆ ಅನುಭವಿ ಮಾರ್ಗದರ್ಶಿ ಶಿಕ್ಷಕ ಮತ್ತು ಶಿಕ್ಷಕಿಯರ ನೇಮಕ.
 • ಪ್ರಥಮ ಚಿಕಿತ್ಸೆ ಸೌಲಭ್ಯ.
 • ಪ್ರವಾಸದ ಅವಧಿಯಲ್ಲಿ ತಾಲ್ಲೂಕು, ಹೋಬಳಿ ಮತ್ತು ಹಳ್ಳಿಗಳ ಮಾಹಿತಿ ಕೇಂದ್ರಗಳ ಭೇಟಿ.
 • ಪ್ರತಿ ತಂಡದ ಮೌಲ್ಯಮಾಪನ ಮತ್ತು ದಾಖಲೀಕರಣ.
 • ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ.

ಪ್ರವಾಸದ ಅವಧಿಯಲ್ಲಿ ಪಾಲಿಸಬೇಕಾದ ಅಂಶಗಳು :

 • ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಸುತ್ತಲಿನ ಪರಿಸರವನ್ನು ವೀಕ್ಷಿಸಬೇಕು.
 • ವಿವಿಧ ಸ್ಥಳಗಳಲ್ಲಿ ಜನರ ಭಾಷೆ, ಧರಿಸುವ ಉಡುಪು, ಗುಣ-ನಡತೆ, ಆದರ-ಸತ್ಕಾರಗಳು, ಜೀವನ ಶೈಲಿ, ತಿಂಡಿ-ತಿನಿಸುಗಳಲ್ಲಿ ಇರುವ ವೈವಿಧ್ಯತೆಗಳನ್ನು ಗಮನಿಸಬೇಕು.
 • ವೇಳಾಪಟ್ಟಿಯಂತೆ, ವಿದ್ಯಾರ್ಥಿ ಗುಂಪಿನ ನಾಯಕರು, ಪ್ರವಾಸಿ ಮಾರ್ಗದರ್ಶಕರು ಹಾಗೂ ಶಿಕ್ಷಕರು ನೀಡುವ ಸೂಚನೆಯಂತೆ ಸಮಯ ಪಾಲನೆ ಮಾಡಬೇಕು.
 • ಬಸ್ಸಿನಿಂದ ಇಳಿದು ಸ್ಥಳಗಳ ವೀಕ್ಷಣೆಗೆ ಸಾಲಾಗಿ ಸಾಗಬೇಕು.
 • ಪ್ರತಿ ದಿನದ ದಿನಚರಿಯನ್ನು ಬರೆಯುವುದು.
 • ನೀರು ಅಥವಾ ಇಳಿಜಾರು ಸ್ಥಳಕ್ಕೆ ಭೇಟಿ ನೀಡಿದಾಗ ಶಿಕ್ಷಕರು ನೀಡುವ ಸೂಚನೆಗಳನ್ನು ಪಾಲಿಸಿ ಎಚ್ಚರದಿಂದಿರಬೇಕು.
 • ನಿಮ್ಮ ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಎಲ್ಲಾ ಸಮಯದಲ್ಲೂ ಶಿಸ್ತು ಮತ್ತು ಸಭ್ಯತೆಯಿಂದ ನಡೆದುಕೊಳ್ಳಬೇಕು.

ನೀವು ಹೀಗೆ ಮಾಡದಿರಿ

 • ಬಸ್ಸಿನ ಕಿಟಕಿಗಳಿಂದ ತಲೆ ಅಥವಾ ಕೈಗಳನ್ನು ಹೊರ ಚಾಚಬಾರದು.
 • ಬೆಲೆ ಬಾಳುವ ವಸ್ತು/ಆಭರಣಗಳನ್ನು ಕೊಂಡೊಯ್ಯಬಾರದು.
 • ಕರಿದ ತಿಂಡಿ ತಿನಿಸುಗಳನ್ನು ತಿನ್ನಬಾರದು.
 • ನೀವು ಕೋಪ ಮಾಡಿಕೊಳ್ಳುವುದಾಗಲಿ/ತುಂಟತನವನ್ನಾಗಲಿ ಮಾಡಿಕೊಳ್ಳಬಾರದು.

ಶಿಕ್ಷಕರಿಗೆ ಮಾರ್ಗಸೂಚಿಗಳು

 • ಪ್ರವಾಸ ಕಾಲದಲ್ಲಿ ಮಗುವಿಗೆ ಕಲಿಯುವ ಅನುಭವಗಳನ್ನು ಹಾಗೂ ವಾತಾವರಣವನ್ನು ಸೃಷ್ಟಿಸಬೇಕು.
 • ಪ್ರತಿಯೊಂದು ಮಗುವನ್ನು ಸಮಾನವಾಗಿ ಕಂಡು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು.
 • ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲಿ ತೊಂದರೆಯಾಗದಂತೆ ಶಿಕ್ಷಕರು ಜವಾಬ್ದಾರಿಯನ್ನು ವಹಿಸಬೇಕು.
 • ವಿದ್ಯಾರ್ಥಿಗಳು ಬಸ್ಸಿನ ಕಿಟಕಿಗಳಿಂದ ಕೈ ಅಥವಾ ತಲೆಯನ್ನು ಹೊರಚಾಚದಂತೆ ಎಚ್ಚರಿಕೆ ವಹಿಸಬೇಕು.
 • ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಹೆಣ್ಣು ಮಕ್ಕಳ ಗುಂಪಿನ ಜವಾಬ್ದಾರಿಯನ್ನು ಶಿಕ್ಷಕಿಯರು ವಹಿಸಬೇಕು.
 • ಶುದ್ಧ ಕುಡಿಯುವ ನೀರು ಹಾಗೂ ಶುದ್ಧ ಆಹಾರವನ್ನು ಒದಗಿಸಬೇಕು
 • ನೀರು ಅಥವಾ ಇಳಿಜಾರು ಸ್ಥಳಗಳಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು.
 • ಮುಂಜಾನೆ ಸಾಮೂಹಿಕ ಪ್ರಾರ್ಥನೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
 • ಪ್ರತಿದಿನದ ದಿನಚರಿಯನ್ನು ವಿದ್ಯಾರ್ಥಿಗಳಾದಿಯಾಗಿ ಶಿಕ್ಷಕರೂ ನಿರ್ವಹಿಸಬೇಕು.
 • ವಿದ್ಯಾರ್ಥಿಗಳ ಹಾಜರಾತಿ ಮತ್ತು ಶಿಕ್ಷಕರ ವಿವರಗಳನ್ನು ಒಳಗೊಂಡಿರುವ ದಾಖಲೆಗಳನ್ನು ನಿರ್ವಹಿಸುವುದು.
 • ಯಾವುದೇ ಮಗು ಗುಂಪುನ್ನು ಬಿಟ್ಟು ಹೋಗದಂತೆ ನಿಗಾವಹಿಸಬೇಕು ಮತ್ತು ಸೂಚನೆಯನ್ನು ನೀಡಬೇಕು.ಶಿಕ್ಷಕರೆ ಹೀಗೆ ಮಾಡದಿರಿ !
 • ಶಿಕ್ಷಕರ ನಡುವೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡಬಾರದು.
 • ಬಸ್ಸಿನಲ್ಲಿ ಎಲ್ಲಾ ಶಿಕ್ಷಕರು ಒಂದೇ ಕಡೆ ಕುಳಿತುಕೊಳ್ಳಬಾರದು.

ಅನಾರೋಗ್ಯದಿಂದ ಬಳಲುವ ಮಗುವನ್ನು ಒಂಟಿಯಾಗಿ ಬಿಡಬಾರದು.