ಎಂ.ಎ. ಡಿಗ್ರಿಯ ಕೊನೆಯ ಪರೀಕ್ಷೆಗೆ ಕುಳಿತದ್ದಾಯಿತು. ಬೇಸಗೆಯ ರಜಕ್ಕೆ ಮನೆಗೆ ಆದಷ್ಟು ಬೇಗನೆ ಹಾರುವುದೆ ರೂಢಿಯಾಗಿತ್ತು. ಆದರೆ ಕನ್ನಡ ಎಂ.ಎ. ಡಿಗ್ರಿಯ ಒಂದು ಅವಶ್ಯ ಅಂಗವಾಗಿದ್ದ ಸಂಸ್ಕೃತಿ ಪ್ರವಾಸಕ್ಕೆ ಹೋಗಬೇಕಾಯಿತು.

ಏಪ್ರಿಲ್ ತಿಂಗಳಲ್ಲಿ ಆ ಪ್ರವಾಸ. ಆ ಆಯಾಸದಿಂದ ಹಿಂತಿರುಗಿದ ಮೇಲೆ ಅದನ್ನು ಕುರಿತು ‘ನಮ್ಮ ಹಂಪೆಯ ಯಾತ್ರೆ’ ಎಂದು ಒಂದು ಸುದೀರ್ಘ ಪ್ರಬಂಧವನ್ನು ಬರೆಯಲು ಉದ್ದೇಶಿಸಿ ಒಂದು ಹೊಸ ನೋಟುಬುಕ್ಕನ್ನು ಕೊಂಡು ಬರೆಯತೊಡಗಿ, ಇಪ್ಪತ್ತಾರು ಪುಟಗಳಷ್ಟನ್ನು ಮಾತ್ರ ಬರೆದು ನಿಲ್ಲಿಸಿದ್ದೇನೆ. ಅಪೂರ್ಣವಾಗಿರುವ ಆ ಪ್ರಬಂಧವನ್ನು ಒಳಕೊಂಡ ಹಸ್ತಪ್ರತಿಯ ನೋಟಬುಕ್ಕಿನ ಉಳಿದೆಲ್ಲ ಪುಟಗಳೂ ಖಾಲಿಯಾಗಿಯೆ ಇವೆ. ಪ್ರಬಂಧದ ವಿಷಯ ಬರಿಯ ರೈಲು ಪ್ರಯಾಣವೆ ಆಗಿದೆ. ಪ್ರವಾಸಿಗಳೆಲ್ಲ – ಮಾರ್ಗದರ್ಶಿ ಮುಖಂಡರು ಶ್ರೀನಿವಾಸಚಾರ್ಲು, (ಅವರು ಎಂ.ಎ. ವಿದ್ಯಾರ್ಥಿಯಲ್ಲ. ಶ್ರೀ ಅನಂತಕೃಷ್ಣ ಶರ್ಮರವರ ತಮ್ಮಂದಿರು. ಅವರು ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅವರಿಗೆ ಅತ್ತಕಡೆಯ ಪರಿಚಯ ಚೆನ್ನಾಗಿದ್ದುದರಿಂದಲೂ ಹೊಸಪೇಟೆ ಮೊದಲಾದ ಕಡೆ ಅವರ ನಂಟರಿಷ್ಟರಿದ್ದುದರಿಂದಲೂ ನಮಗೆ ನೆರವಾಗಲೊಪ್ಪಿ ಬಂದವರು.) ಡಿ.ಎಲ್. ನರಸಿಂಹಾಚಾರ್ಯ, ಕೆ. ವೆಂಕಟರಾಮಪ್ಪ, ಬಿ.ಎಸ್. ವೆಂಕಟರಾಮಯ್ಯ, ಎನ್. ಅನಂತರಂಗಾಚಾರ್, ನಂಜುಂಡಯ್ಯ, ಭೀಮಸೇನರಾವ್ (ಹೈದರಾಬಾದಿನಿಂದ ಬಂದು ನಡುವೆ ಕೂಡಿಕೊಂಡರು.) ಮತ್ತು ಇತರರು. ಹೊಸಪೇಟೆಯಲ್ಲಿ ರೈಲಿನಿಂದ ಇಳಿದು ಬಾಡಿಗೆ ಕಾರು ಹತ್ತುವವರೆಗೆ ಪ್ರಬಂಧ ಸಾಗಿ ನಿಂತುಬಿಟ್ಟಿದೆ.

ಇಂದೇನೊ (೧೯೭೪) ಅದನ್ನು ಒಂದು ರಕ್ಷಿತಪ್ರದೇಶವೆಂದು ಘೋಷಿಸಿ ಪ್ರಾಚೀನ ಅವಶೇಷಗಳನ್ನೆಲ್ಲ ಅಚ್ಚುಕಟ್ಟಾಗಿ ಇಟ್ಟಿದ್ದಾರಂತೆ. ಆದರೆ ಅಂದು (೧೯೨೯) ನಾವು ಕಂಡದ್ದು ದಿಕ್ಕಿಲ್ಲದ ಅನಾಥ ಪ್ರದೇಶವೆಂಬಂತಿತ್ತು. ಹೊಲಗಳ ನಡುನಡುವೆ ಪೊದೆಗಳು ಕಿಕ್ಕಿರಿದು ಸುತ್ತುವರಿದ ಜಾಗಗಳಲ್ಲಿ ಅಲ್ಲೊಂದು ಇಲ್ಲೊಂದು ಮುರಿದ ವಿಗ್ರಹ, ಹಾಳುಬಿದ್ದ ಕಟ್ಟಡ ಪ್ರೇತವತ್ ನಿಂತಿದ್ದುವು. ಜೊತೆಗೆ ಆ ಉರಿಬಿಸಿಲ ಬೇಸಗೆಯಲ್ಲಿ ಏನನ್ನೂ ಶಾಂತವಾಗಿ ಸಮಾಧಾನದಿಂದ ನೋಡಲು ಸಾಧ್ಯವಿರಲಿಲ್ಲ. ಒಮ್ಮೆಯಂತೂ ಬಾಯಾರಿಕೆ ಹೆಚ್ಚಿ ಏನಾದರೂ ಸರಿಯೆ ಎಂಥ ನೀರಾದರೂ ಸರಿಯೆ ಸಿಕ್ಕಿದರೆ ಸಾಕು ಕುಡಿಯುತ್ತೇವೆ ಎಂದು ದೂರದಲ್ಲಿ ಹಸುರೆದ್ದು ಕಾಣುತ್ತಿದ್ದ ಒಂದು ಕಬ್ಬಿನ ಹೊಲದತ್ತ ಓಡಿದೆವು. ನೀರೇನೊ ಇತ್ತು. ಆದರೆ ಹುಳು ಮಿಜಿಮಿಜಿ ಎನ್ನುತ್ತಿತ್ತು. ಆಚಾರ‌್ಲು ಅವರು ನಮ್ಮನ್ನು ತಡೆದು ‘ಸ್ವಲ್ಪ ತಡೆಯಿರಿ. ಕುಡಿಯಬೇಡಿ. ನಾನು ನನ್ನ ವಸ್ತ್ರದಿಂದ ಸೋಸಿ ಕೊಡುತ್ತೇನೆ. ಹುಳುಗಳಾದರೂ ಹೊಟ್ಟೆಗೆ ಹೋಗದಿರಲಿ, ನೀರು ಕೆಟ್ಟದ್ದಾದರೂ!’ ಎಂದು ಅವರ ಉತ್ತರೀಯವನ್ನೆ ಸೋಸಣಿಗೆ ಮಾಡಿ ನೀರು ಹಿಂಡಿದರು, ನಮ್ಮ ಬೊಗಸೆಗಳಿಗೆ. ಆ ಕೊಳಕು ಬಗ್ಗಡದ ನೀರನ್ನೆ ಹೊಟ್ಟೆತುಂಬೆ ಕುಡಿದೆವು! ಬಟ್ಟೆಗಳನ್ನು ಒದ್ದೆ ಮಾಡಿ ತಲೆಮೇಲೆ ಹಾಕಿಕೊಂಡೆವು. ಹಾಳು ಹಂಪೆ ಎಂದು ಬೈದೆವು ಅದರ ಹೆಸರನ್ನೆ ಹಿಡಿದು!

ಪ್ರವೇಶಿಸುವ ಪ್ರಾರಂಭದಲ್ಲಿಯೇ ಅವಶೇಷರೂಪವಾಗಿ ಉಳಿದಿರುವ ಕೋಟೆಯ ಹೆಬ್ಬಾಗಿಲಲ್ಲಿ ಕಾವಲು ನಿಂತಿರುವುದು ಭೀಮನ ಪ್ರತಿಮೆಯಂತೆ! ಅವನ ಮುಖವೆಲ್ಲ ಮುಸಲ್ಮಾನರ ದಸ್ಯುತನಕ್ಕೆ ಸಿಕ್ಕಿ ಸಿಡುಬಿನ ಕಲೆಗಳಿಂದ ಕನಿಕರ ಹುಟ್ಟಿಸುವಷ್ಟು ವಿಕಾರವಾಗಿತ್ತು, ಸುತ್ತ ಹಳು ಹಬ್ಬಿ.

ಆ ದಿನವೆ (೯.೪.೧೯೨೯) ನಾವು ಉಳಿದುಕೊಂಡಲ್ಲಿ ಇದ್ದ ಒಂದು ಕೃತಕಕೊಳದ ಸೋಪಾನ ಪಂಕ್ತಿಯ ಮೇಲೆ ಕುಳಿತು ನಾನು ರಚಿಸಿದ ಒಂದು ಕವನ ‘ಹಂಪೆಯ ಭೀಮ’.

ಒಟ್ಟಿನಲ್ಲಿ ನಾವು ಕಂಡದ್ದು ಹುಳುಹಿಡಿದ ಹೆಣದಂತಿದ್ದರೂ ವಿರೂಪಾಕ್ಷ ದೇವಸ್ಥಾನ ಮತ್ತು ಮತಂಗ ಪರ್ವತದ ಪಾದವನ್ನು ತೊಳೆಯುತ್ತಾ ಹರಿಯುತ್ತಿರುವ ತುಂಗಭದ್ರೆಯ ಮಳಲದಿಣ್ಣೆಯ ಮೇಲೆ ಕುಳಿತು ಕಂಡ ದೃಶ್ಯದಂತಹುಗಳು ನಮ್ಮ ಪ್ರವಾಸದ ಹರ್ಷ ಬಿಂದುಗಳಾಗಿದ್ದವು. ಸಹ್ಯಾದ್ರಿಯ ರುದ್ರರಮಣೀಯ ಪ್ರಕೃತಿ ಸೌಂದರ್ಯದ ಮಧ್ಯೆ ಹುಟ್ಟಿ ಬೆಳೆದು ಅದನ್ನು ಹೀರಿಕೊಂಡ ಕವಿಯ ಚೇತನಕ್ಕೆ ಅಲ್ಲಿಯ ನಿಸರ್ಗ ಅಷ್ಟೇನೂ ಆಕರ್ಷಣೀಯವಾಗಿರಲಿಲ್ಲ. ಹಿಂದೆ ಇದ್ದುದರ ನೆನಪಿನಿಂದಲೇ ಅದು ನಮ್ಮ ಹೃದಯಕ್ಕೂ ಮನಕ್ಕೂ ತುಷ್ಟಿಯೊದಗಿಸಬೇಕಾಗಿತ್ತು.

ಹಂಪೆಯ ಭೀಮ

ಕೋಟೆ ಹೆಬ್ಬಾಗಿಲಲಿ ಬಿಸುಸುಯ್ವನಿವನಾರು?
ಬಲ್ಗದೆಯ ಮೆಯ್ಗಲಿಯು! ಭೀಮನೇನು?

ಕಂಬನಿಯ ಕರೆಯುತ್ತ ಮೂಕನಾಗೇಕಿಂತು
ನಿಂತಿರುವೆ, ಮಾರುತಿಯೆ? ಮಾತನಾಡು
ಬೀರಬೀರರ ಬೀರ, ಕಲ್ಲಾಗಿ ನೀನಿಂತು
ಹಾಳೂರು ಬಾಗಿಲನು ಕಾಯುತಿಹೆಯೇನು?
ಧರಣಿಪರು ಮಂತ್ರಿಗಳು ಸೈನಿಕರು ಕಬ್ಬಿಗರು
ಬಿಟ್ಟಳಿದ ಪಾಳ್ನೆಲವ ಕಾಯುತಿಹೆಯೇನು?

ಸೊನ್ನೆ ದಿಟ್ಟಿಯನಟ್ಟಿ ಶೂನ್ಯತರ ಶೂನ್ಯವನು
ಮನದಿ ಮರುಕವನಾಂತು ನೆನೆವೆಯೇನು?
ನೀನು ಬಾಗಿಲ ಕಾಯುತಿರ್ದೊಡಂ ಹಂಪೆಯಿದು
ಮುಸಲರಿಂ ಹಸಿಮಸಣವಾದುದೇನು?
ನಿನ್ನಣ್ಣ ಹನುಮಂತನಿಲ್ಲಿರ್ದೊಡಂ ಬಂದು
ನಿನಗೆ ನೆರವಾಗಿದನು ಪೊರೆಯಲಿಲ್ಲೇನು?

ರನ್ನ ಪಂಪರ ಮಹಾಕಾವ್ಯ ರಸರಂಗದಲಿ
ಭಾರತದ ಕೊಳುಗುಳದಿ ನಿನ್ನ ನೋಡಿಹೆನು?
ಕಂಬನಿಯ ಕರೆವ ಭೀಮನನಲ್ಲಿ ಕಂಡಿಲ್ಲ,
ಜಯಮತ್ತ ರುದ್ರ ಮಾರುತಿಯ ಕಂಡೆ!
ನಮಿಸುವ ಹಿಮಾಲಯವ ಕಂಡು ವಿಸ್ಮಿತನಾದೆ,
ಹಂಪೆಯಲಿ, ಭೀಮ, ನೀನಳುವುದನು ಕಂಡು!

ತಿರುಗುವೀ ಗದೆಯೇಕೆ ನಿಷ್ಪಂದವಾಗಿಹುದು?
ಮೈಮರೆತು ಗೋಳಿಡುತ ನೀನಾರ ನೆನೆವೆ?
ಇಲ್ಲಿಗೈತಹ ಯಾತ್ರಿಕರ ಎದೆಯ ಮೂಷೆಯಲಿ
ಹಾಳಾದ ಐಸಿರಿಯ ಕಿಚಚ ಮರುಕೊಳಿಸು!

ಅಣಕಿಸೆಮ್ಮನು, ವೀರ : ಹೆಂಬೇಡಿಗಳು ನಾವು!
ನಿನ್ನ ಗದೆಯಾಘಾತದಿಂದೆಚ್ಚರುವೆವು!
ಹೇ ವೀರಮೂರ್ತಿಯೇ, ಹಂಪೆಯೀ ಮಸಣದಲಿ
ಭೈರವಾಶ್ರುವ ಚೆಲ್ಲಿ ಮೌನದಲಿ ನಿಲ್ಲು!
ಯಾತ್ರಿಕರ ಹೃದಯದಲಿ ಕೆಚ್ಚೂರಿ, ನೆಚ್ಚೂರಿ
ಹೆಂಬೇಡಿಗಳನ್ನೆಲ್ಲ ನಿನ್ನೆಡೆಗೆ ಗೆಲ್ಲು!

                     ಕುವೆಂಪು

—-
ಆಕರ: ಕುವೆಂಪು ಎಂ.ಎ. ತರಗತಿಯಲ್ಲಿ ಓದುತ್ತಿದ್ದಾಗ (೧೯೨೯) ಸಂಸ್ಕೃತಿ ಪ್ರವಾಸಕ್ಕೆ ಹಂಪಿಗೆ ಬಂದಾಗ, ಕಂಡ ಚಿತ್ರವನ್ನು ತಮ್ಮ ‘ನೆನಪಿನ ದೋಣಿಯಲ್ಲಿ’ ನಿರೂಪಿಸಿದ್ದಾರೆ. ಆ ಸಂದರ್ಭದಲ್ಲಿ ಬರೆದ ಕವಿತೆಯೇ ‘ಹಂಪೆಯ ಭೀಮ’ (೯.೦೪.೨೯), ಸಹ್ಯಾದ್ರಿ ಪ್ರಕಾಶನ, ಮೈಸೂರು. ೧೯೮೦.