ಅಲ್ಲಿ ಒಂದನ್ನೂ ಬಿಡದೆ ಎಲ್ಲವನ್ನೂ ಸಾವಕಾಶದಿಂದ ನೋಡಲು ನಮಗೆ ಕಾಲವಿಲ್ಲದಿದ್ದುದರಿಂದ ಶೀಘ್ರವಾಗಿ ನಡೆದೆವು. ಸ್ವಲ್ಪದೂರದಲ್ಲಿಯೇ ಒಂದು  ದೊಡ್ಡ ದೇವಸ್ಥಾನ. ಅದೇ ವಿಟ್ಠಲಸ್ವಾಮಿಯ ಗುಡಿಯೆಂದು ತಿಳಿಯಿತು. ಹೊರಗಡೆ ಎತ್ತರವಾದ ಪೌಳಿಗೋಡೆಯ ಪ್ರಕಾರ ; ಅದನ್ನು ಕಟ್ಟಲು ಉಪಯೋಗಿಸುರುವ ೨೦ – ೩೦ ಅಡಿ ಉದ್ದ, ೪-೫ ಅಡಿ ದಪ್ಪ ನಯವಾದ ಕಲ್ಲುಚಪ್ಪಡಿಗಳನ್ನು ಬಿಟ್ಟರೆ, ಹಂಪೆಗೆ ಅತಿ ಸಾಮಾನ್ಯ ವಾದ ಗೋಡೆ. ನನಗೆ ದೇವಸ್ಥಾನದ ವಿಚಾರ ಹೆಚ್ಚಾಗಿ ತಿಳಿಯದು. ಎಲ್ಲರೂ  ‘ವಿಟ್ಠಲಸ್ವಾಮಿ ಗುಡಿ, ವಿಟ್ಠಲಸ್ವಾಮಿ ಗುಡಿ’ ಎಂದು ಹೇಳುತ್ತಿದ್ದುದನ್ನು ಮಾತ್ರ ಕೇಳಿದ್ದೆ. ಹೊರಪ್ರಾಕಾರವನ್ನು ನೋಡಿದವನು, ‘ಇಷ್ಟೆಯೆ? ಇಲಿಯನ್ನು ಹುಲಿಯೆಂದು ಕರೆದು ಹೋ ಎನ್ನುವುದೇ ನಮ್ಮ ಜನದ ಸ್ವಭಾವ. ಅಸ್ತಿಭಾರವಿಲ್ಲದ ಅತ್ಯುಕ್ತಿ ನಮ್ಮ ರಾಷ್ಟ್ರಕ್ಕೇ ಬಂದುದು’ ಎಂದುಕೊಂಡೆ. ಆದರೆ ಒಳಗಡೆ ಹೋದಮೇಲೆ ನನ್ನ ಈ ಭಾವನೆ ತಪ್ಪೆಂದು ಮನಗಂಡೆನು. ನಾವು ಹೊರಟ ದಾರಿಯಿಂದ ಗುಡಿಗೆ ಪ್ರವೇಶ ತೆಂಕಣದ್ವಾರದಿಂದ. ಚೆನ್ನಯ್ಯನು ಬಾಗಿಲಲ್ಲಿ ಜಗುಲಿಯ ಮೇಲೆ ಹುಳಿಮಾವಿನಕಾಯಿಗಳನ್ನು ತಿನ್ನುತ್ತ ಕುಳಿತುಕೊಂಡನು. ನಾವು ದೇವಸ್ಥಾನದ ಒಳಪ್ರಾಂಗಣವನ್ನು ಹೊಕ್ಕೊಡನೆಯೆ ಹೆಗಲ ಮೇಲಿದ್ದ ಜಂಖಾನವನ್ನು ಹಾಸಿ ಮಲಗಿದನು. ಅವನು ತಿಂದು ಉಳಿಸಿದ್ದುದನ್ನು ತಿನ್ನಲು ಒಂದು ತಂಡ ಕಪಿಗಳು ಬಂದು ಅವನ ಸುತ್ತಲೂ ಕೀಚುಗುಟ್ಟುತ್ತ, ಗೊರ್ರೆನ್ನುತ್ತ, ಹುಲ್ಲುಮಸೆಯುತ್ತ, ಕಾದಾಡುತ್ತ ಕುಳಿತವು. ಅವನೂ ಅವುಗಳಿಗೆ ಒಂದೊಂದು ಚೂರನ್ನು ಎಸೆಯುತ್ತ, ಅತಿ ಹತ್ತಿರ ಬಂದಾಗ ಕೈಯಿಂದಲೂ ಕೋಲಿಂದಲೂ ಆಗಾಗ ಬೆದರಿಸುತ್ತ, ಚೆದರಿಸುತ್ತ ಅವುಗಳೊಡನೆ ಆಟವಾಡುತ್ತ ಕುಳಿತನು. ಅನಿಗೇನು? ಎಲ್ಲಿದ್ದರೆ ಅದೇ ಮನೆ- ಅವನ ಆಯುಧ ಆ ದೊಣ್ಣೆ ಆ ಹರಕು ಜಂಖಾನವೇ ಸರ್ವಸ್ವ ಆಸ್ತಿ. ಅವನ್ನು ಬಿಟ್ಟರೆ, ಪ್ರಪಂಚದಲ್ಲಿ ತನ್ನದೆನ್ನುವ ಬೇರೊಂದು ವಸ್ತು ಇಲ್ಲ. ‘ಪಾಪ! ತುಂಬ ಆಯಾಸಪಟ್ಟಿದ್ದಾರೆ. ಹಾಗೇ ಸ್ವಲ್ಪಹೊತ್ತು ಉರುಟಿಕೊಂಡಿರಲಿ’ ಎಂದರು ಯಜಮಾನರು. ನಮಗೂ ಹಾಗೆಯೇ ಅನ್ನಿಸಿತು. ಈ ದೇವಸ್ಥಾನಲ್ಲಿ ನೋಡಬೇಕಾದುದು ಮುಖ್ಯವಾಗಿ ಮೂರು; ಮುಖದ ಮಹಾಮಂಟಪ; ಪಕ್ಕದಲ್ಲಿನ ದೇವರ ಕಲ್ಯಾಣಮಂಟಪ; ಎದುರಿನಲ್ಲಿ ಸಣ್ಣ ಕಲ್ಲುರಥ. ಪ್ರಾಕಾರ ಒಳಗಡೆ ಅನೇಕ ಶಿಲಾಶಾಸನಗಳಿವೆ. ಪ್ರಾಕ್ತನ ವಿಚಾರಕರು ಈ ಶಾಸನಗಳನ್ನು ಓದಿ ಚಾರಿತ್ರಿಕ ವಿಷಯಗಳನ್ನು ವಿಮರ್ಶೆಮಾಡಿ ತಿಳಿದುಕೊಳ್ಳಬಹುದು.

ದೇವಸ್ಥಾನವನ್ನು ಪ್ರದಕ್ಷಿಣೆ ಮಾಡಿಕೊಂಡು ಮುಖ ಭಾಗಕ್ಕೆ ಬಂದು ನಿಂತರೆ ಅದೇನು ಚಿತ್ರಕೃತಿಯ ಸಂವಿಧಾನ! ಏನು ಶಿಲ್ಪಕಲಾಕೌಶಲ್ಯ! ದ್ರಾವಿಡ ಶೈಲಿಯ ವಾಸ್ತುರಚನೆಯಲ್ಲಿ ಈ ತೆರನಾದ ಇನ್ನೊಂದು ಶಿಲ್ಪ ಕೃತಿಯಿಲ್ಲವೆಂದು ಹೇಳಿದರೆ ಅತಿಶಯೋಕ್ತಿಯಾಗದು. ಮಹಾಮಂಟಪಕ್ಕೆ ಹತ್ತಿಹೋಗಲು ಮಾಡಿರುವ ಮೆಟ್ಟಿಲುಗಳ ಎರಡು ಕಡೆಗಳಲ್ಲೂ ಸುಂದರವಾಗಿ ಕೆತ್ತಿ ಮಾಡಿದ, ಸರ್ವಾಲಂಕಾರಭೂಷಿತಳಾಗಿ ಮುಂಗಾಲುಗಳೆತ್ತಿ ನಿಂತಿರುವ ಮದಗಜಗಳು. ಹಂಪೆಯಲ್ಲಿನ ಸರ್ವತ್ರ ಶಿಥಿಲಸ್ಥಿತಿ ಈ ಆನೆಗಳಿಗೂ ಬಂದಿದೆ. ಅವುಗಳ ಮುಖದಿಂದ ಸೊಂಡಿಲು ಕತ್ತರಿಸಿಹೋಗಿವೆ. ಮೇಲೆ ಹತ್ತಿಹೋಗಿ ನೋಡಿದರೆ ಸುತ್ತಲೂ ಸಾಲುಗಂಬಗಳು; ಎಲ್ಲವೂ ಒಂದೇ ಸಮನಾಗಿ ಸೌಂದರ್ಯೈಕ ದೃಷ್ಟಿಯಿಂದ ಮಾಡಿದವು. ಗರ್ಭಗುಡಿಯ ಬಾಗಿಲವರೆಗೆ ವಿಶಾಲವಾದ ಸ್ತಂಭಮಾರ್ಗ, ಅವುಗಳ ಆಚೆಯಲ್ಲಿ ಉಪ -ಕಂಬಸಾಲುಗಳು; ಮಧ್ಯೆ ಉಪರಂಗ. ಪ್ರತಿಯೊಂದು ಕಂಬದಲ್ಲಿಯೂ ಶರಭ ಸಾಳ್ವಗಳ ಮೇಲೆ ಕುಳಿತ ಪಹರೆಯವರು. ಮೇಲ್ಗಡೆ ಪಟ್ಟಿಕೆಗಳಲ್ಲಿ ಸುತ್ತಲೂ ಚಿತ್ರ ಕೆಲಸ. ರಾಮಾಯಣ ಮಹಾಭಾರತಗಳಲ್ಲಿನ ಘಟನಾವಳಿಗೆ ಸಂಬಂಧಪಟ್ಟವು. ನಾನು ಈವರೆಗೆ ನೋಡಿದ ನಾಟಕಶಾಲೆಗಳಲ್ಲಿನ ಯಾವ ಪಲಗದ ಪರದೆಯೂ ಇಷ್ಟು ಮನೋಹರವಾಗಿ, ಹೃದಯಾ ಪಹಾರಕವಾಗಿ ಇದ್ದುದನ್ನು ನೋಡಿರಲಿಲ್ಲ. ಅಲ್ಲಿಯೇ ಒಂದು ಕಡೆಯಿಂದ ಇನ್ನೊಂದು ಕಡೆಗೆ, ಒಂದು ಮೂಲೆಯಿಂದ ಇನ್ನೊಂದಕ್ಕೆ ಹೋಗಿ ಆ ಸೊಬಗನ್ನೇ ಅನುಭವಿಸುತ್ತಿರ ಬೇಕೆಂದು ಆಸೆ. ಉಳಿದವರು ಕಲ್ಯಾಣಮಂಟಪದ ಕಡೆ ಹೊರಟರು. ‘ಸಾಕಪ್ಪ ಬನ್ನಿ’ ಎಂದು ಕೂಗಿದರು. ‘ಬಂದೆ’ ಎಂದು ಹೇಳಿ ಕಳ್ಳತಪ್ಪಿಸಿಕೊಂಡು ಅವರಿಂದ ಮರೆಯಾಗಿ ಅಲ್ಲಿ ಇನ್ನೂ ಸ್ವಲ್ಪಹೊತ್ತು ಸುಳಿದಾಡಿದೆ.

ಇಲ್ಲಿ ಇಷ್ಟು ಶೃಂಗಾರವೇತಕ್ಕೆ? ಎಂದು ಒಂದು ಸಲ ಪ್ರಶ್ನೆ ಬಂತು. ದೇವರು ಇಷ್ಟು ಸೌಂದರ್ಯವನ್ನು ಒಂದೇ ಕಡೆ ರಾಶಿಹಾಕಿ ಮಿಕ್ಕ ಭಾಗಗಳಿಗೆ ಬಡತನವನ್ನೇಕೆ ಕೊಟ್ಟನೊ! ಅವನಿಗೂ ಹೀಗೆ ಪಕ್ಷಪಾತ ಬುದ್ದಿ ಬಂದಮೇಲೆ ಸಾಮಾನ್ಯರು ನಿಷ್ಪಕ್ಷಪಾತಿಗಳಲ್ಲವೆಂದು ಅವರನ್ನು ಏಕೆ ಆಕ್ಷೇಪಿಸಬೇಕು? ಎಂದುಕೊಂಡೆ. ಇಷ್ಟು ಸುಂದರವಾದ ಕಟ್ಟಡಕ್ಕೆ ಈ ದುಃಸ್ಥಿತಿ ಏಕೆ ಬರಬೇಕು, ಏನು ವಿಧಿಲೇಖವೂ! ಎಂದು ಇನ್ನೊಂದು ಸಲ ತೋರಿತು. ಈ ಸೌಂದರ್ಯಕ್ಕೆ ಸಾಫಲ್ಯವೇ ಇಲ್ಲವೇನು? ಇಲ್ಲಿ ದೇವತಾವಿಗ್ರಹವಿಲ್ಲ. ಇಷ್ಟು ಸೊಗಸಾದ ಕಟ್ಟಡವು ತನ್ನಂಥವನಿಗೆ ತಕ್ಕುದಲ್ಲವೆಂದೂ, ಇಂಥ ಶೃಂಗಾರದ ನೆಲೆ ತನ್ನ ಯೋಗ್ಯತೆಗೆ ತಡೆಯದೆಂದೂ, ಮೀರಿದುದೆಂದೂ, ಹೇಳಿ ವಿಟ್ಠಲಸ್ವಾಮಿಯು ಹಂಪೆಗೆ ಬಾರದೆ ಪಂಢರ ಪುರದ ತನ್ನ ಹಳೆಯ ಬಡಮಂದಿರದಲ್ಲೆ ನಿಂತುಬಿಟ್ಟಿರುವಲ್ಲಿ, ಈ ಸೌಂದರ್ಯಕ್ಕೆ ಪವಿತ್ರತೆ ಹೇಗೆ ಬರಬೇಕು? ದೇವರ ವಾಸವಿಲ್ಲದ ದೇವಸ್ಥಾನ ಮಂಗಳಸ್ಥಾನವೆಂತಾದೀತು? ಎಂದು ತೋರಿತು. ಉತ್ತರಕ್ಷಣದಲ್ಲಿಯೇ, ಛೆ! ಸೌಂದರ್ಯವೇ ಭಗವಂತನ ಪ್ರತಿರೂಪ; ಅದಕ್ಕೆ ಇತರ ಕರಣಗಳಿಂದ ಸಿದ್ದಿ ಬರಬೇಕಾದ ಆವಶ್ಯಕತೆಯೇನಿದೆ? ಎಂದೂ ವಿಧವಿಧವಾಗಿ ಮನಸ್ಸು ಭ್ರಮಿಸತೊಡಗಿತು. ಅಥವಾ ತಮ್ಮ ಕುಶಲತೆಯ ವಿಷಯದಲ್ಲಿ ಅಹಂಕಾರಪಟ್ಟು, ಹೆಮ್ಮೆ ಬುದ್ದಿಯಿಂದಿರುವ ಈ ವಿಜಯನಗರದ ಅರಸರ ಸಮೀಪದಲ್ಲಿ ನಾನೇಕೆ ವಾಸಮಾಡಬೇಕು? ಅವರ ಉಚ್ಛ್ರಾಯದ ಉಪ್ಪರಿಗೆಗೆ ನಾನೇಕೆ ಸೋಪಾನ ಕಟ್ಟಿಕೊಡಬೇಕು? ಇದು ನನ್ನವರ ಸ್ಮಾರ್ತಸಾಮ್ರಾಜ್ಯ, ನಿಜ. ಆದರೆ ನಮ್ಮವರೆಂದು ಮರೆತವರನ್ನು ಶಿಕ್ಷಿಸದೆ ಬಿಡುವುದು ಯೋಗ್ಯವೆ? ಎಂದು, ದೂರದಿಂದ ಅವರ ಕರ್ಮಗಳನ್ನು ಸುಮಾರು ಅರ್ಧಶತಮಾನದವರೆಗೆ ನೋಡಿ ತಡೆಯಲಾರದ ಕೋಪದಿಂದ ತಾನಾಗಿ ಕರುಣೆಯಿಂದಿತ್ತ ಆ ಸಾಮ್ರಾಜ್ಯವನ್ನು ನಾಶಮಾಡಿದನೇನೋ! ಎಂದೂ ಭಾವನೆ ಬಂದಿತು. ಭಾವನೆಗಳು ಹಾಗಿರಲಿ, ಆ ಸೌಂದರ್ಯವನ್ನು ನೋಡಿದರೆ – ಶಾಂತಂ ಪಾಪಂ – ಅಮಂಗಳವನ್ನು ನುಡಿಯಬಾರದು – ಅದು ಸಾಧ್ವಿಯ ಸಾತ್ವಿಕ ಸೌಂದರ್ಯದಂತೆ ಕಳೆಗೊಂಡಿರಲಿಲ್ಲ. ಅತುಳ ಲಾವಣ್ಯಮಯಿಯಾಗಿ, ಹಾವಭಾವವಿಲಾಸಗಳಿಂದ ಲೋಕವನ್ನು ಬೆರಗುಮಾಡಿ ಸೋಲಿಸುವ ನಾರಿಯ ಅಥವಾ ಚಿರವೈಧ್ಯವ್ಯ ಪರಿಣತವಾಗಿ ವ್ಯರ್ಥವಾದ ಸೌಂದರ್ಯದಂತೆ ತೋರ ತೊಡಗಿತು. ಇನ್ನು ಒಬ್ಬನೇ ಅಲ್ಲಿರಲು ಸಾಧ್ಯವಾಗದೆ ಹೋಯಿತು. ಅಪವಿತ್ರ ಭಾವನೆಗಳನ್ನು ದೂರಮಾಡಲು ಸಂಗಡಿಗರಿದ್ದಲ್ಲಿಗೆ ಹೊರಟೆನು.

ಅವರೆಲ್ಲರೂ ಕಲ್ಯಾಣಮಂಟಪವನ್ನು ಸೇರಿ ಅದನ್ನು ಪ್ರಶಂಸೆಮಾಡುತ್ತಾ ಮಂಟಪದ ಮಧ್ಯದಲ್ಲಿ ಕುಳಿತಿದ್ದರು. ಆ ಮಂಟಪವನ್ನು ನೋಡಿದೆ. ಮನಸ್ಸು ಪರವಶವಾದಂತಾಯಿತು. ಅದರ ಚಂದ ದೇವಸ್ಥಾನದ ಮಹಾಮಂಟಪದ ಮೋಹನತೆಯನ್ನು ಕೀಳುಮಾಡಿ ಲಜ್ಜೆಗೊಳಿಸುವಂತಹುದು. ಅಲ್ಲಿಯೂ ಹೀಗೇ. ಕಂಬಸಾಲುಗಳು; ವಿಶಾಲವಾದ ಮಧ್ಯರಂಗ, ಅಕ್ಕಪಕ್ಕಗಳಲ್ಲಿ ನಾಲ್ಕುಕಡೆ ಉಪರಂಗಗಳು; ಒಂದೊಂದು ಕಂಬವೂ ಒಂದೊಂದೇ ಕಲ್ಲಿನಿಂದ ಕಡೆದು ಕೆತ್ತಿ ಮಾಡಿದಂತಹುದು. ನಿಲುಗಂಬದ ಅಡಿಯ ಭಾಗದಲ್ಲಿ ಒಳಮುಖನಾಗಿ ಸಿಂಹಜಾತಿಯ ಮೃಗಗಳು; ಮಧ್ಯದಲ್ಲಿ ಪೀಠದಮೇಲೆ ಹೊರಮುಖನಾಗಿ ನಾಲ್ಕೈದು ಶಿಲಾದಂಡಗಳು; ಒಳಭಾಗದಲ್ಲಿ ಶರಭಾರೂಢರಾದ ಸವಾರರು. ಮಂಟಪದ ನಾಲ್ಕು ಕಡೆಯೂ ಹೀಗೆಯೇ. ವಿಧವಿಧವಾದ ನಯಗೆಲಸಗಳಿಂದ, ಶಿಲ್ಪಾಭರಣಚಮತ್ಕೃತಿಗಳಿಂದ ಕೆತ್ತಿ ಸಿಂಗರಿಸಲ್ಪಟ್ಟಿರುವ ಕಂಬ, ವೇದಿಕೆ. ಮೇಲ್ಗಡೆ ಮಾಳಿಗೆಯ ಮೂಲೆವಾಟಗಳಲ್ಲಿ ಲೋವೆಕಲ್ಗಳ ಮೇಲೆ ಪಕ್ಷಿಯ ರೆಕ್ಕೆಗಳಂತೆ ಶಿಲ್ಪಕೆಲಸ; ಲೋವೆಯ ಕೆಳಗೆ ಲಾಂದರಗಳನ್ನು ತಗುಲಿಹಾಕುವುದಕ್ಕಾಗಿ ಮಾಡಿದ ಕಲ್ಲ ಉಂಗುರಗಳು. ಉತ್ತಮವಾದ ಸಹಜ ಸೌಂದರ್ಯ ವನ್ನು ವೃದ್ದಿಮಾಡಲು ಅಂಗಾಂಗಗಳಿಗನುಗುಣವಾದ ಉಡುಗೆತೊಡುಗೆಗಳನ್ನು ಹಾಕಿ ಅಲಂಕರಿಸುವಂತೆ – ಮಂಟಪದ ಒಳಮಾಳಿಗೆಯ ಪ್ರತಿಭಾಗವೂ ಸ್ಫುಟವಾಗಿ ಕಂಡು ಶೋಭಿಸುವಂತೆ – ಹಸುರು, ನೀಲಿ, ಗುಲಾಬಿ, ಕೆಂಪು ಮುಂತಾದ ಬಣ್ಣಗಳಿಂದ ಅವನ್ನು ಹೆಚ್ಚು ಉಜ್ವಲವಾಗಿ ಕಾಂತಿಯುತವಾಗಿ ಮಾಡಿದ್ದಾರೆ. ಭವ್ಯಗಾನವೊಂದು ಘನೀಭೂತವಾಗಿ ಶಿಲಾಕೃತಿಯಾಗಿ ಪರಿಣಮಿಸಿದಂತೆ ಇಲ್ಲಿನ ನೋಟ. ಆ ರಾಜರ ಕಲಾಭಿರುಚಿ, ಅಲಂಕಾರ ದೃಷ್ಟಿ, ರಸಿಕತೆ ಇವುಗಳನ್ನು ಏನೆಂದು ಹೇಳೋಣ! ಆ ಚಿತ್ರಗಾರರು ಶಿಲ್ಪಿಗಳು ತಾನೇ ಎಂಥವರು! ಯಾವ ಚಕ್ರವರ್ತಿಯ ವಿವಾಹಮಂಟಪ ಈ ತೆರನಾದ ಶಿಲ್ಪಕೌಶಲವನ್ನು ತೋರಿಸಬಲ್ಲುದು! ಕಲ್ಯಾಣಮಂಟಪವೆಂದರೆ ಇದಕ್ಕಲ್ಲವೆ ಆ ಹೆಸರು ಸಲ್ಲತಕ್ಕದ್ದು? ಎಂದುಕೊಂಡೆ. ಆ ಅರಸರ ವೈಭವವೂ ಮೈಯುಬ್ಬೂ ಎಂಥವಾಗಿದ್ದಿರಬೇಕು? ಪಂಪಾಪತಿಯ ದೇವಸ್ಥಾನದ ಮೇಲೆ ಬೆಳ್ಳಿಚಿನ್ನಗಳ ತಗಡುಗಳಿಂದ ಹೊದ್ದಿಕೆಗಳನ್ನು ಮಾಡಿಸಿ ಅದನ್ನು ಕಾಪಾಡುತ್ತಿದ್ದರಂತಲ್ಲ! ತಾವು ಮಾಡಿದ ಪ್ರತಿಯೊಂದು ಕೆಲಸವೂ ಚಿರಯಶಸ್ವಿಯಾಗಿ, ಆಚಂದ್ರಾರ್ಕವಾಗಿ ನಿಲ್ಲಲೆಂದು ಜಗತ್ತನ್ನು ಅಚ್ಚರಿಗೊಳಿಸಲು ಮಾಡಿದಂತಹುದು; ಎಷ್ಟು ಅಲ್ಪ ಅವಧಿಯಲ್ಲಿ ಎಷ್ಟು ಮಹತ್ಕಾರ್ಯ ಸಾಧನೆಗಳು! ಯಶೋಹೀನರಾಗಿ ಅನಾಮಧೇಯ ರಾಗಿ ಒಂದು ಶತಮಾನಕಾಲ ಬದುಕಿ ಕ್ರಿಮಿಗಳಂತೆ ಜೀವಿಸಿದ್ದು ತಾವು ದೀರ್ಘ ಜೀವಿಗಳೆನ್ನಿಸಿಕೊಳ್ಳುವುದಕ್ಕಿಂತ ಪ್ರಚಂಡ ಸತ್ತ್ವಶಾಲಿಗಳಾಗಿ, ಕೀರ್ತಿಮಹಿಮಾನ್ವಿತರಾಗಿ ನಾಲ್ಕುದಿನ ಬಾಳಿಹೋಗುವುದು ಘನತರವಾದದ್ದಲ್ಲವೆ? ಎನ್ನಿಸಿತು. ಬರಿಯ ಆಯುಷ್ಯಕ್ಕೆ ಮಡ್ಡಿ ಜನರು ಏಕೆ ಆಶೆಪಡುವರೊ! ಆಯುಷ್ಯ ವಿಷಯದಲ್ಲಿ ನಮ್ಮ ಭಾವನೆ ಹಾಗಾಗಿ ಹೋದರೆ ನಮಗಿಂತಲೂ ಶತಾಧಿಕವಾಗಿ – ಶತಸಹಸ್ರಾಧಿಕವಾಗಿ – ಇರುವ ಆ ಕಲ್ಲುಬಂಡೆಗಳು ಶ್ರೇಷ್ಠವಾದುವಲ್ಲವೆ?

ಅದು ಹೋಗಲಿ – ಯಾವ ಚಿತ್ರಗಾರನು ತನ್ನ ಚಿತ್ರಗಳನ್ನು ಇಷ್ಟು ಉಜ್ವಲವಾಗಿ, ಸುಂದರವಾಗಿ, ಸಜೀವವಾಗಿ ಚಿತ್ರಿಸಬಲ್ಲನೊ ನಾನರಿಯೆ. ಸಂಧ್ಯಾರುಣರಾಗಗಳಿಂದ ಬಣ್ಣ ಗೊಂಡು ವಿಧವಿಧವಾಗಿ ಕಾಂತಿ ಪಡೆದು ಕ್ಷಣಕ್ಷಣಕ್ಕೂ ಹೊಸ ಶೃಂಗಾರಗಳನ್ನು ತೋರಿಸಿ ಮೋಹಿಸುವ ಮುಗಿಲಿನ ಶ್ರೇಣಿಗಳು ಒಂದೊಂದೂ ತಮ್ಮಷ್ಟಕ್ಕೆ ತಾವೆ ಕೂಡಿಬಂದು ಈ ರೀತಿಯಲ್ಲಿ ಆಕಾರ ತಾಳಿ, ಘನಿಷ್ಠವಾಗಿ ಇಲ್ಲಿ ಊರಿ ನಿಂತುಬಿಟ್ಟಿರುವಂತೆ ಈ ಮಂಟಪ ಶೋಭಿಸುವುದಲ್ಲ! ಒರಟಾದ, ಜಡವಾದ ಕಲ್ಲಿಗೆ ಹೀಗೆ ಜೀವಕಳೆ ತುಂಬುವವನು ಸೃಷ್ಟಿಕರ್ತನಿಗೆ ಸಮಾನನಲ್ಲವೇ! ಇಹದಲ್ಲಿ ಸೃಷ್ಟಿಕರ್ತನೆಂಬುವವನಾರಾದರೂ ಇರುವ ನಾದರೆ, ಅಂಥವನು ಕಲಾನಿಪುಣನೆಂದೂ, ಆ ಕೆಲಸವು ಕವಿ, ಚಿತ್ರಕ, ಶಿಲ್ಪಿ, ಗಾಯಕ ಇವರುಗಳಿಗಲ್ಲದೆ ಇತರಿಗೆ ಸಾಧ್ಯವಾಗದೆಂದೂ ತಮ್ಮ ತಮ್ಮ ಇಲಾಖೆಗಳಲ್ಲಿ ಅವರು ಸರ್ವನಿಯಾಮಕರೆಂದೂ ಅವರು ಶ್ರೇಷ್ಠರಾದರೆ ನಿಜವಾಗಿಯೂ ಬ್ರಹ್ಮರೇ ಎಂದೂ ಎನ್ನಿಸಿತು.

ಯಜಮಾನರೂ ರಾಯರೂ ಗಡಿಯಾರ ತೆಗೆದು ನೋಡಿದರು. ನಾಲ್ಕೂ ಕಾಲು ಗಂಟೆಯಾಗಿತ್ತು. ‘ಹಿಂದಿರುಗಿ ಬರುವುದು ಬಹಳ ಹೊತ್ತಾಗಿ, ಕತ್ತಲಾಗಿಹೋಗುತ್ತೆ;  ನಡೆಯಿರಪ್ಪ, ಹೆಜ್ಜೆಹಾಕಿ’- ಎಂದರು. ಚೆನ್ನಯ್ಯನೂ ‘ಹೊರಡೋಣ ಸ್ವಾಮಿ’ ಎಂದ. ಮೂರ್ತಿ ಸ್ವರೂಪದಲ್ಲಿ ಅಲ್ಲಿ ವಾಸಮಾಡಿಕೊಂಡಿರದಿದ್ದರೂ ಅಲ್ಲೇ ಎಲ್ಲೆಲ್ಲಿಯೂ ಅಡಗಿ ಆ ಕಲ್ಲುಕಟ್ಟಡಕ್ಕೆ ಜೀವವನ್ನಿತ್ತಿರುವ ಆ ಸೌಂದರ್ಯಮೂರ್ತಿಯಿಂದ ಅಪ್ಪಣೆ ಪಡೆದು ಮುಂದೆ ಹೊರಟೆವು.

ಇತರ ದೇವಸ್ಥಾನಗಳ ಮುಂಭಾಗದಲ್ಲಿರುವಂತೆಯೇ ಇಲ್ಲಿಯೂ ತೇರು ಬೀದಿ; ನಾಲ್ಕೂ ಕಡೆ ದೇವಸ್ಥಾನಗಳು ಈಗ ಅವೆಲ್ಲ ಭೂಶಾಯಿತವಾಗಿವೆ. ಅಲ್ಲಿನ ದೇವರುಗಳ ಕೈ ಒಂದು ಕಡೆ, ಕಾಲೊಂದುಕಡೆ, ರುಂಡಮುಂಡಗಳು ಬೇರೆ ಬೇರೆ ಕಡೆ; ಕಣ್ಣೊಂದು ಕಡೆ ಕಣ್ಣಿನ ಹೊಳಪೊಂದು ಕಡೆ; ಹೀಗೆ ತಮ್ಮ ಅವಯುವ ಭಾಗಗಳನ್ನೂ ಕಳೆಗಳನ್ನೂ ಕಳೆದುಕೊಂಡು ವಿಗ್ರಹಗಳು ಭಿನ್ನವಾಗಿ ಎಲ್ಲೆಲ್ಲಿಯೂ ಬಿದ್ದಿವೆ. ಅವುಗಳ ಮೇಲ್ಗಡೆ ಪೊದೆಗಳೂ ಮುಳ್ಳು ಗಿಡಗಳೂ ಕ್ರೂರವಾಗಿ ಹಬ್ಬಿವೆ. ಕ್ರೂರತರವಾದ ಮುಳ್ಳುಹಂದಿಗಳು ಯಥೇಷ್ಟವಾಗಿ ಅವುಗಳೊಳಗೆ ವಾಸಮಾಡಿಕೊಂಡಿರಬೇಕು. ಅವುಗಳ ಹಂದಿ ಮೂತಿಯೂ ಕಿಸುಗಣ್ಣೂ ಪರಕೆಮೈಯೂ ಭಯಂಕರವಾದ ತಮ್ಮ ರೂಪವನ್ನು ಆಗಿಂದಾಗ್ಗೆ ಹೊರದೋರಿಸಿಕೊಳ್ಳುತ್ತ ಆ ಸ್ಥಾನದಲ್ಲಿ ಶಾಶ್ವತವಾಗಿ ತಾವು ವಸತಿ ಕಲ್ಪಿಸಿಕೊಂಡಿರುವೆವೆಂದು ಸಾರುವಂತೆ ಕಾಣುವುವು; ‘ಈ ಪ್ರದೇಶವೆಲ್ಲ ಈಗ ನಮಗೆ ಸೇರಿದುದು; ಇಲ್ಲಿಗೆ ಬರುವ ಜನರು ನೀವು ಜೋಕೆಯಿಂದಿರ ಬೇಕು’ ಎಂದು ಹೇಳುವಂತೆ – ತಮ್ಮ ಪ್ರಾಬಲ್ಯದ ಗಡಿಗಳನ್ನು ಸೂಚಿಸಲೊ ಎಂಬಂತೆ – ನಾಲ್ಕಾರು ಮಾರುಗಳ ದೂರ ಮೊನಚಾದ ತಮ್ಮ ಮುಳ್ಗರಿಗಳನ್ನು ಎಸೆದಿವೆ. ಕ್ರೂರತಮವಾಗಿ, ಪಾಳುದೇವತೆ ಎಲ್ಲೆಲ್ಲಿಯೂ ವಿಕಟಹಾಸದಿಂದ ತನ್ನ ಪ್ರಭಾವವೆಂಥ ದೆಂಬುದನ್ನು ಬಿರ‌್ರನೆ ಬೀಸುವ ಉರಿಗಾಳಿಗೆ ಚೀರಿಹೇಳಿ ಆ ಪ್ರದೇಶವನ್ನು ಸ್ಮಶಾನವನ್ನಾಗಿ ಮಾಡಿದೆ. ಶ್ಮಶಾನವಲ್ಲದೆ ಮತ್ತೇನು? ರಕ್ತ, ಮಾಂಸ, ರಸ, ರಾಗ, ಬಣ್ಣ, ಕಾಂತಿಗಳಿಂದ ಪರಿಪುಷ್ಟರಾದ ಯುವಕ ಯುವತಿಯರು ನಗುನಗುತ್ತ ಸರಸವಾಡುತ್ತಿದ್ದ ಸುಖಭೂಮಿಯಲ್ಲಿ ಈಗ ವಿಷಧರಸರ್ಪಗಳು, ಮುಳ್ಳುಹಂದಿಗಳು, ಕಳ್ಳಕಾಕರು; ಎಲ್ಲಿ ಹೂದೋಟಗಳ ಪರಿಮಳವನ್ನು ಹೊತ್ತುಕೊಂಡು ತಣ್ಣಗೆ ತಂಗಾಳಿ ಬೀಸುತ್ತಿತ್ತೊ ಅಲ್ಲಿ ಈಗ ದಾರುಣ ಉರಿಗಾಳಿ. ಪ್ರಪಂಚದ ಚಕ್ರಾಧಿಪತಿಗಳ ಸಂದಣಿಯಲ್ಲಿ ಎಲ್ಲ ಅಂಶಗಳಲ್ಲಿಯೂ ಸಮ ತೂಗಲು ಅರ್ಹರಾಗಿದ್ದ ಸಮ್ರಾಟರು ಆಳುತ್ತಿದ್ದ ಆ ಪ್ರದೇಶದಲ್ಲಿ ಮುಳ್ಳುಪೊದೆ; ಅವರ ದರ್ಪಪೌರುಷಗಳು ಪ್ರತಿಧ್ವನಿತವಾಗುತ್ತಿದ್ದ ಅರಮನೆಗಳಲ್ಲಿ ನರಿ ಗೂಗೆಗಳ ಕರ್ಕಶಧ್ವನಿ; ಪಾಳುದೇವತೆಯ ಕುಹಕದ ಅಟ್ಟಹಾಸ. ಅತ್ಯುತ್ತಮ ಸೌಂದರ್ಯ ಕಾಂತಿಯಿಂದ ಬೆಳಗುತ್ತಿದ್ದ ಮಂಟಪ, ಗುಡಿ, ಪ್ರಾಸಾದ, ಅರಮನೆ ಇವುಗಳಿದ್ದ ಕಡೆ ಪದಚ್ಯುತವಾದ ದೇವತಾ ವಿಗ್ರಹಗಳು; ಒಡೆದು ಬಿದ್ದಿರುವ, ಇನ್ನೂ ಬೀಳುತ್ತಲೇ ಇರುವ ಕಟ್ಟಡಗಳು; ತಮಗೆ ಬಂದಿರುವ ದುರ್ಗತಿಯಾದರೂ ಎಂಥದೆಂಬುದನ್ನು ನೋಡಿ ಜನರು ನೀತಿಗೊಳ್ಳಲೆಂದು ರಾಶಿರಾಶಿಯಾಗಿ ಭೂಶ್ಲಿಷ್ಟವಾದ – ಬರಿಯ ಕಲ್ಲುಗುಪ್ಪೆಗಳಂತಿರುವ – ಕಂಬ, ವೇದಿಕೆ, ಸೂರುಗಲ್ಲು. ವಿಜಯನಗರ ದ್ವಂಸವಾದುದಂತೂ ಹಾಗಿರಲಿ ಆ ರಾಜರ ಇಂದ್ರಸದೃಶವಾದ ವೈಭವಗಳೂ ಉಚ್ಛ್ರಾಯಾಭಿಲಾಷೆಗಳೂ ಮಹಾಸನ್ನಾಹಗಳೂ ಕಾರ್ಯಮುಖೇನ ಅಮರತ್ವವನ್ನು ಪಡೆಯಬೇಕೆಂದು ಅವರು ಮಾಡಿದ ಅದ್ಭುತ ಪ್ರಯತ್ನಗಳೂ ಒಟ್ಟಿಗೆ ಇಲ್ಲಿ ನಾಶಪಡೆದು, ಅವರ ವೈಭವರಂಗವನ್ನು ಈಗ ಮಹಾಸ್ಮಶಾನವನ್ನಾಗಿ ಮಾಡಿದೆ.

ಹೆಜ್ಜೆ ಬೇಗಬೇಗನೇ ಹಾಕಬೇಕೆಂದು ಅಪ್ಪಣೆಯಾಯಿತು – ಹಾಕಿದೆವು. ಸ್ವಲ್ಪ ಕಾಲದಲ್ಲೇ ಕಮಲಾಪುರದಿಂದ ಆನೆಗೊಂದಿಗೆ ಹೋಗುವ ರಸ್ತೆ. ಇನ್ನು ಅದನ್ನು ಹಿಡಿದು ಎಡಕ್ಕೆ ಹೋಗಬೇಕು. ಆನೆಗೊಂದಿ ನದಿಯ ಆಚೆಯ ಭಾಗದಲ್ಲಿ; ನಮ್ಮ ಕಡೆಯಿಂದ ಆಚೆಗೆ ಹರಿಗೋಲುಗಳಲ್ಲಿ ದಾಟಿಹೋಗಬೇಕು. ಹರಿಗೋಲೂ ಅಂಬಿಗರೂ ಸಿದ್ಧವಾಗಿದ್ದರು. ಅವುಗಳಲ್ಲಿ ಒಂದನ್ನು ಹತ್ತಿ ಒಳಗೆ ಸುತ್ತಲೂ ಕುಳಿತೆವು. ಅಂಬಿಗನು ಹುಟ್ಟು ಹಾಕಲು ಜಲ್ಲೆ ಹಿಡಿದುಕೊಂಡು ಮೆಲ್ಲಮೆಲ್ಲನೆ ಅದನ್ನು ನಡೆಸುತ್ತ ಬಂದನು. ನಮ್ಮಂತೆಯೇ ಬಲಗುಂದುತ್ತ ಸೂರ್ಯದೇವನೂ ಅಸ್ತಮಾನಕ್ಕೆ ಪ್ರಯಾಣ ಮಾಡುತ್ತಿದ್ದನು. ಮಧ್ಯಾಹ್ನದ ಪ್ರಕಾಶವಿಲ್ಲ;  ಉರಿತೇಜವಿಲ್ಲ. ಅವನ ಬೆಳಕು ನಿಡಿದಾಗಿ ಬೀಳುತ್ತಿರುವ ಪ್ರದೇಶವನ್ನು ಬಿಟ್ಟರೆ ಉಳಿದ ಕಡೆಗಳಲ್ಲೆಲ್ಲ ಬೆಟ್ಟಗಳೂ ಬೆಟ್ಟಸಾಲುಗಳೂ ತಿಳಿನೆಳಲಿನ ಜವನಿಕೆಯೊಂದ ರಿಂದ ಸ್ವಲ್ಪಸ್ವಲ್ಪವಾಗಿ ಮುಚ್ಚಿಹೋಗುತ್ತಿದ್ದುವೊ ಎನ್ನುವಹಾಗಿತ್ತು. ಎರಡೂ ಕಡೆಯ ಬೆಟ್ಟಗಳಲ್ಲಿ ದಾರಿಮಾಡಿಕೊಂಡು ತೆಳ್ಳಗೆ ಬೆಳ್ಳಗೆ ಎಷ್ಟು ಯುಗಗಳಿಂದಲೋ ಇದೇ ರೀತಿ ಹರಿದುಬರುತ್ತ, ಎಲ್ಲಿಯೋ ಹುಟ್ಟಿ ಹೇಗೆಹೇಗೋ ಹರಿದು, ಎಲ್ಲಿನ ಯಾವುದನ್ನೋ ಅರಸಿಕೊಂಡು ಹೋಗುತ್ತಿರುವ ಮಂದಗಾಮಿನೀ ನದಿ; ಅದರ ಸಮಕಾಲೀನರಾಗಿ ಇಲ್ಲವೆ ಇನ್ನೂ ಪುರಾತನರಾಗಿ ಒಂದೇ ವಿಧವಾದ ವೃತ್ತಿ ಪ್ರವೃತ್ತಿ, ಮೋಹ, ದ್ವೇಷ, ಅಸೂಯೆ ಮೊದಲಾದ ಮೂಲಸ್ವಭಾವಗಳನ್ನು ವ್ಯಕ್ತಗೊಳಿಸುತ್ತ ಜೀವನ ಪ್ರಯಾಣಮಾಡುತ್ತಿರುವ ಮನುಷ್ಯರಾದ ನಾವು ನಮ್ಮ ಸ್ವಭಾವ ಅನುಕೂಲ ಉಪಯೋಗಗಳಿಗೆ ತೋರಿದಂತೆ ನಾವೇ ನಿರ್ಮಾಣ ಮಾಡಿಕೊಂಡು, ಹತ್ತಾರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿರುವ, ಹರಿಗೋಲುಗಳ ಮೇಲೆ ನದಿ ದಾಟುವ ಪದ್ಧತಿ;- ಇವೆಲ್ಲವನ್ನೂ ನೋಡಿ ನದಿ ಸಂಸಾರವಾಹಿನಿ ಯೆಂದೂ, ನಾವೆಲ್ಲ ಸಣ್ಣ ಸಣ್ಣ ಕೆಲಸಗಳಿಗಾಗಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ, ಯಾವುವೊ ದೋಣಿಗಳ ಸಹಾಯದಿಂದ ಪ್ರತಿನಿಮಿಷವೂ ಹಾಯುತ್ತಿರುವೆವೆಂದೂ, ನೇರವಾಗಿ ಸಮುದ್ರದತ್ತ ಹೋಗದೆ ಪ್ರಯಾಣ ಮುಂದೆ ಸಾಗದೆ, ಪ್ರಯಾಣದ ಚಿಂತೆ ಕೂಡ ಇಲ್ಲದೆ, ಅಲ್ಲಿ ಇಲ್ಲಿ ಕಾಲಕಳೆಯುತ್ತ, ಅನುಕೂಲವಿದ್ದ ಕಡೆ ಮಾತ್ರ ಬಾಗುತ್ತ ಸುಳಿಯುತ್ತಿರುವೆವೆಂದೂ ತೋರಿಬಂತು.

ಇದನ್ನು ಓದುವ ನೀವು ನಗಬಹುದು; ಇವನ ಕಲೆಯ ಕೀಲುಗಳು ಸಡಿಲ ಬಿದ್ದಿರುವುವೆಂದೂ ಅನುಮಾನಿಸಬಹುದು; ನಿಮ್ಮನ್ನು ಆಕ್ಷೇಪಿಸುವ ಅಧಿಕಾರ ನನಗಿಲ್ಲ. ಆದರೂ ಆ ಸ್ಥಳಕ್ಕೆ ಹೋಗಿ ನಿಂತು ನೀವೂ ನನ್ನ ಹಾಗೆಯ ಮನಸೋತು ದಗ್ಧಚಿತ್ತರಾಗಿ ನೋಡುತ್ತಿದ್ದರೆ ನಿಮ್ಮ ಮೆದುಳ ಕೀಲುಗಳ ಬಿಗಿಗೂ ಹೀಗೆಯೇ ಊನ ಬರುತ್ತೆಂದೇ ನನ್ನ ಅಭಿಪ್ರಾಯ. ಅಲ್ಲಿ ಸುತ್ತಲೂ ಎಲ್ಲಿಯಾದರೂ ಯಾವ ವಸ್ತುವನ್ನಾದರೂ ನೋಡಿ. ಒಂದು ದೃಷ್ಟಿಯಿಂದಲ್ಲದಿದ್ದರೆ ಇನ್ನೊಂದು ವಿಧದಲ್ಲಿ ಅನನ್ಯಸಾಮಾನ್ಯವಾಗಿ ಮಹತ್ತರವಾಗಿ ರುವುವೇ ಹೊರತು ಸಾಧಾರಣವಾಗಿ ಕಾಣಲೇ ಕಾಣವು. ಕೋಟಿಕೊತ್ತಲ, ಶಿಥಿಲವಾದ ಅರಮನೆ ಶಿಬಿರ, ವಿಗ್ರಹ ದೇವಸ್ಥಾನ, ಲಾಯ, ಉಗ್ರಾಣ, ಕಟ್ಟೆ ತೊಟ್ಟಿ, ವಿಹಾರ ಓಲಗಸ್ಥಾನ ಇವುಗಳ ದೃಶ್ಯವನ್ನು ನೋಡಿದ ಕೂಡಲೆ – ಪೂರ್ವದ ಮಹತ್ವವನ್ನು ಕಳೆದುಕೊಂಡು ಈಗ ವೈಧವ್ಯವನ್ನು – ಅದೇ ಮಾತು ಪುನಃ – ಅನುಭವಿಸುತ್ತಿರುವ ಶ್ರೀಮಂತ ರಮಣಿಯೊಬ್ಬಳಂತೆ ಕಾಣುವುವೇ ಹೊರತಾಗಿ ನಾಡಾಡಿಯಾಗಿ ಕಾಣವು. ಖಿನ್ನಳಾಗಿ ಅಧೋಮುಖಿಯಾಗಿ, ಉದಾಸೀನತೆಯಿಂದ ಮಲಿನಳಾಗಿ, ಕಾಂತಿ ಹೀನಳಾಗಿ – ಆದರೂ ದೀನತಾಲೇಶವಿಲ್ಲದೆ – ಒಬ್ಬರ ಅವಲಂಬನ ಸಹಾಯಗಳನ್ನು ಬೇಡದೆ, ಸಗರ್ವದಿಂದ ತನ್ನ ಕರ್ಮಫಲವನ್ನು ಅನುಭವಿಸುತ್ತಿರುವಂತೆ ಇರುವುದನ್ನು ಈ ದೂರದಿಂದ, ನಾನ್ನೂರು ವರ್ಷಗಳು ಕಳೆದು ಹೋದ ಮೇಲೆ ಒಂದೆರಡು ದಿನ ಮಾತ್ರ ಅಲ್ಲಿ ನೋಡುವುದಕ್ಕೆ ಹೋಗಿದ್ದ ನಮಗೇ ಕಣ್ಣೀರು ಉಕ್ಕಿ ಹರಿದುಬಂದು, ದುಃಖಾಗ್ನಿಯಿಂದ ಹೃದಯ ಸುಟ್ಟು ಹೀರಿಹೋಗುತ್ತಿರುವಲ್ಲಿ ಅದನ್ನು ದಿನದಿನವೂ ಸ್ವಂತದೇಹದಲ್ಲಿ ಅನುಭವಿಸುತ್ತಿರುವ ವಿಜಯನಗರದ ಸಾಮ್ರಾಜ್ಯ ಲಕ್ಷ್ಮಿಯ ಅಪಾವಸ್ಥೆಯನ್ನು ಏನೆಂದು ಹೇಳೋಣ! ಕಾಲದ ಚಕ್ರಪರಿವರ್ತನದಲ್ಲಿ ಆಕೆಯ ಅದೃಷ್ಟಪಂಕ್ತಿಯ ಅರಗಳು ಯಾವ ರೀತಿಯಲ್ಲಿ ಪರಿಭ್ರಮಿಸಿ ಕಳಚಿ ಹೊರಗೆ ಬಿದ್ದವೊ ಓದಿ ತಿಳಿದುಕೊಂಡಿರುವ ನಮಗೆ, ಈ ದೃಶ್ಯವನ್ನು ನೋಡುತ್ತಲೆ ಯಾವ ವಿಧವಾದ ಮಾನಸಿಕ ಪರಿಣಾಮಗಳು ಉಂಟಾಗುವುವೊ ಅದರ ವಾಸ್ತವತೆಯನ್ನು ಇತರರಿಗೆ ಹೇಗೆ ವ್ಯಕ್ತಪಡಿಸುವುದು? ಗತವೈಭವದ ನೆನಪು ದುಸ್ಸಹವಾದ ವಿಷದುರಿಯಂತೆ ಆಕೆಯ ದೇಹವನ್ನು ಸುತ್ತಿ, ಅದನ್ನು ಒಂದೇ ಬಾರಿಗೆ ಭಸ್ಮಮಾಡಿಬಿಡದೆ ಸಂತತವಾಗಿ ಉರಿಸುತ್ತಿದೆಯೆಂದರೆ ಅದನ್ನು ಬಾಯರಿಯದ ಸಾಮಾನ್ಯೋಕ್ತಿಯೆಂದು ಹೇಳಬಹುದು.

ನದಿಯ ಹೊರದಡವನ್ನು ಸೇರಿದುದಾಯಿತು. ಉದ್ದಕ್ಕೆ ಹೊರಟೆವು. ಆನೆಗೊಂದಿ ಸಂಸ್ಥಾನವನ್ನು ಹೊಕ್ಕು ಮುಂದೆ ನಡೆದೆವು. ನಾವು ಹಿಂದೆ ಬಿಟ್ಟುಬಂದ ಆ ಹಾಳು ಸಾಮ್ರಾಜ್ಯಕ್ಕೂ ಈ ಜೀವಂತ ಸಂಸ್ಥಾನಕ್ಕೂ ಎಲ್ಲಿನ ಹೋಲಿಕೆ? ಇಲ್ಲಿ ಜನರು ವಾಸವಾಗಿದ್ದಾರೆ ; ಮನೆ, ಬೀದಿ, ದೇವಸ್ಥಾನ, ಅಂಗಡಿ, ಹೊಲ, ಗದ್ದೆ ಎಲ್ಲ ಇವೆ. ಇದೂ ಒಂದು ರಾಜನಗರ. ರಾಜನೊಬ್ಬನು ಇಲ್ಲಿ ಅಧಿಕಾರಿ. ಆದರೆ ಆವೂರನ್ನು ದಾಟಿ ಹೋಗುತ್ತಿರುವಲ್ಲಿ ನಮಗೆ ಇವಾವುದೂ ಜೀವಂತವಾಗಿರುವಂತೆ ಕಾಣಬರಲಿಲ್ಲ. ಸ್ವಪ್ನಪ್ರವಾಹದಲ್ಲಿ ಹರಿದುಹೋಗುತ್ತಿರುವ ಜಲವಾಹಿನಿಯಂತೆ ನಮ್ಮ ಅಂತರಂಗವೂ ಅದರ ಭಾವನೆಗಳೂ ಬೇರೆ ಕಡೆಗೆ ಹರಿದುಹೋಗುತ್ತಿದ್ದುವು. ಹೊರಗಣ ಜಗತ್ತಿನ ವ್ಯಾಪಾರಗಳಲ್ಲಿ ನಮ್ಮ ಮನಸ್ಸು ಆಸಕ್ತಿ ತೋರಿಸಲಿಲ್ಲ. ಒಟ್ಟಿಗೆ ನಮ್ಮ ಪಾಲಿಗೆ ಪ್ರಪಂಚವೆಲ್ಲ ಶೂನ್ಯವಾಗಿ ಭಗ್ನವಾಗಿ ವಿಜಯನಗರದಂತೆ ಆಗಿ ಮುರಿದಿತ್ತು. ಕೂಲಿಹೋದ ಆ ಸೌಂದರ್ಯ ಸಾಮ್ರಾಜ್ಯದ ಪಾಳೇ ಸತ್ಯ, ಈ ಜೀವಂತ ಸಂಸ್ಥಾನ ಮಿಥ್ಯ – ನಾವೂ ಆ ಶೂನ್ಯ ಜಗತ್ತೂ ಪರಸ್ಪರ ಪ್ರೇಮಾಭಿಲಾಷಿಗಳು; ಇತರ ವಿಶ್ವಾಸ ಬಂಧಗಳಿಗೆ ಸಿಕ್ಕದೆ ಅನುರಕ್ತರಾಗಿ ಆ ಪ್ರೇಮಸಾಧನೆಯಲ್ಲೇ ಮಗ್ನರಾಗಿರುವವರು ಎಂಬುದು ಸ್ಥಿರಪಡುವಂತೆ ನಮ್ಮ ಮನಸ್ಸಿನಿದಿರಿಗೆ ಶಿಥಿಲ ಸೌಂದರ್ಯದ ಚಿತ್ರವೊಂದು ಮಾತ್ರ ಕಾಣುತ್ತಿತ್ತು. ಊರನ್ನು ಬಿಟ್ಟು ಮುಂದೆ ಮುಂದೆ ಜಾಗ್ರತೆಯಾಗಿ ಹೊರಟೆವು. ರಾಜಪಥ ಕೃಶವಾಯಿತು. ಎರಡು ಕಡೆಗಳಲ್ಲೂ ಎತ್ತರವಾದ ಬೆಟ್ಟಗಳು; ಒಂದು ಬೆಟ್ಟದ ಮೇಲೂ ಹೆಚ್ಚಾಗಿ ಹಸುರಿಲ್ಲ ; ಕೇವಲ ಸಣ್ಣ ದೊಡ್ಡ ಕಲ್ಲುಗುಂಡುಗಳು. ಅಪರೂಪವಾಗಿ ದೂರ ದೂರದಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣ ಮರ. ದುಂಡುಕಬ್ಬಿನ ತೋಟಗಳು. ತಪ್ಪಲುಗಳಲ್ಲಿ ಎಲ್ಲಿಂದಲೊ ಭೂಮಿಯೊಳಗಿನಿಂದಲೇ ಸದ್ದಿಲ್ಲದೆ ಹರಿದುಬಂದು ತೋಟಗಳ ಪಕ್ಕದಲ್ಲಿ ಕಾಲುವೆ ಹರಿಯುತ್ತಿರುವ ತುಂಗಭದ್ರೆಯ ನೀರು. ಅಂಗುಳು ಒಣಗಿಹೋಗುತ್ತಿದ್ದರೂ ಆ ನೀರನ್ನು ಕುಡಿಯಕೂಡದೆಂದು ಮನಸ್ಸು. ಪಂಪಾಸರಸ್ಸಿನ ‘ಪಾವನ ಸ್ಫಟಿಕೋದಕವು’ ಅನತಿದೂರ ದಲ್ಲಿಯೆ ಇರುತ್ತಿರುವಲ್ಲಿ ಈ ನೀರನ್ನು ಕುಡಿಯಲು ಮನಸ್ಸು ಹೇಗೆತಾನೆ ಬಂದೀತು? ಉತ್ತಮ ವಸ್ತುಗಳು ದೊರಕುವುವೆಂದು ನಿರ್ಧಾರವಾಗಿ ಮನಸ್ಸಿಗೆ ತಿಳಿದಿದ್ದರೆ ಸಾಮಾನ್ಯ ವಸ್ತುಗಳನ್ನು ಕಂಡರೆ ನಮಗೆ ಅಲಕ್ಷ್ಯ, ತಿರಸ್ಕಾರ. ಪ್ರಪಂಚವೇ ಹೀಗೆ.

ಇಲ್ಲಿಯೇ ಎಲ್ಲಿಯೊ ರಾಮದರುಶನ ಸುಧಾರಸ ಪಾನಕ್ಕಾಗಿ ಚಕೋರಿಯಂತೆ ಕಾದಿದ್ದ ಪೂಜ್ಯಳಾದ ಶಬರಿಯ ಆಶ್ರಮ. ಆಕೆ ಗುರು ಮತಂಗರ ಆಜ್ಞೆಯಂತೆ ರಾಮನು ಬರುವವರೆಗೂ ಕಾದಿದ್ದು ಆತನ ಪರಿಚಾರಿಕೆಯಾಗಿ ಶ್ರಮಿಸಿ ಚಿರಜೀವಿಸಿದಳು. ಆತನ ಸಂದರುಶನಕ್ಕಾಗಿ ವರ್ಷಾಂತರಗಳು ಕಾದುಕೊಂಡಿದ್ದು, ಹೃದಯದಲ್ಲಿ ಆತನ ಮೂರ್ತಿಯನ್ನು ಕಲ್ಪಿಸಿ, ಕಣ್ಗಳಿಂದ ಸರ್ವದಾ ಅವನನ್ನೇ ನೋಡುತ್ತ, ಕೈಗೆಟುಕಿದ ಪ್ರತಿಯೊಂದು ತನಿವಣ್ಣನ್ನೂ ಕಿತ್ತು ಶೇಖರಿಸಿಟ್ಟು, ಕೈಗೆ ಸಿಕ್ಕಿದ ಪ್ರತಿಯೊಂದು ಹೂವರಳನ್ನೂ ಪೂಜೆಗೆಂದು ಅಣಿಮಾಡಿಟ್ಟು, ನಿಮಿನಿಮಿಷವೂ ಅವನು ಬರುವನೆಂದು ನಿರೀಕ್ಷಿಸಿಕೊಂಡು, ಗಾಳಿಯ ಪ್ರಭಾವದಿಂದ ತರಗೆಲೆಯೊಂದು ಮೆಲ್ಲನೆ ಮರಮರ ಶಬ್ದ ಮಾಡಿದರೆ ಅದು ತನ್ನ ಉಪಾಸನಾದೇವನ ಕಾಲಸಪ್ಪಳವೆಂದು ಭ್ರಮಿಸಿ ಹೊರಗೆ ನೋಡುತ್ತ ಕಾದು ವೃದ್ಧೆಯಾಗಿದ್ದ ಸ್ಥಾನ. ಮುಂದೆ ವಾಲಿ ಸುಗ್ರೀವರು ಕಿಷ್ಕಿಂಧೆಗಾಗಿ ಹೋರಾಡಿದ ಪ್ರದೇಶಗಳು. ಈ ಗುಂಡುಗಳೇ ಅವರ ಶಿಲಾಯುಧಗಳು. ಎಡದಲ್ಲಿನ ಈ ಬೆಟ್ಟದ ಡೊಗರೇ ವಾಲಿಯ ಭಂಡಾರ. ತನ್ನ ನಾಲ್ವರ ನಚ್ಚಿನ ಗೆಳೆಯರೊಡನೆ ಸುರಕ್ಷಿತವಾಗಿದ್ದ ಋಷ್ಯಮೂಕದ ಮರೆ; ಇವು ಅವರು ಆಗಾಗ್ಗೆ ಹೊರಕ್ಕೆ ಬಂದು ಕೂಡುತ್ತಿದ್ದ ಸ್ಥಳಗಳು. ಇಲ್ಲಿಯೇ ಎಲ್ಲಿಯೋ ಸೀತಾದೇವಿ ತನ್ನ ಒಡವೆಗಳನ್ನು ಗಂಟುಕಟ್ಟಿ ಬೀಳುಹಾಕಿದ್ದು; ಈ ದಾರಿಯಲ್ಲಿ ತಾನು ಹೋಗೆನೆಂಬ ಗುರುತು ರಾಮನಿಗೆ ತಿಳಿದುಬರಲೆಂದು ಅಗೋ ಅದು ಸುಗ್ರೀವನ ರಾಜಕಾರ್ಯಸ್ಥಾನ, ಮುಂದೆ ಇಲ್ಲಿಯೆ ಅಣ್ಣ ತಮ್ಮಂದಿರು ಘೋರವಾದ ಯುದ್ಧಮಾಡಿ ಕಪಿರಕ್ತದ ಕಾಲುವೆಗಳನ್ನು ಸುರಿಸಿದುದು. ಹೀಗೇ ರಾಮಲಕ್ಷ್ಮಣರು ಸೀತಾವಿಯೋಗದಿಂದ ಬಾಡಿ ಬಳಲಿ ಪಂಪಾಸರಸ್ಸಿಗೆ ನಡೆದುಹೋಗಿದ್ದುದು …ಎದುರಿಗೆ ಈಚಲ ಮರಗಳು, ತಾಳೆಯ ಮರಗಳು, ಕಬ್ಬಿನ ತೋಟಗಳು; ದಟ್ಟವಾಗಿ ಬೆಳೆದಿರುವ ಹೊಂಗೆಯ ಮರಗಳು. ಬಿಸಿಲು ಕಡಮೆಯಾದ ಹಾಗೆಲ್ಲ ಸುತ್ತಣ ಆವರಣದಲ್ಲಿ ನಿರಾರ್ದ್ರತೆ ಹೋಗಿ ಸಣ್ಣಗೆ ಮೆಲ್ಲಗೆ ಎಳಗಾಳಿ ಮೊದಮೊದಲು ಸುಳಿದಾಡುತ್ತ ಬಂದಿತು. ಆಮೇಲೆ ಇನ್ನೂ ಸ್ವಲ್ಪ ವೇಗವಾಗಿ ಸಂಚರಿಸುತ್ತ ಹೊಂಗೆಯ ಎಲೆಗಳನ್ನು ಹೊಕ್ಕು, ಹೂಗಳ ಜೊಂಪೆಗಳನ್ನು ತೊನೆಯಿಸಿ, ಅವುಗಳ ಪರಾಗವನ್ನು ಸೂರೆಗೊಂಡು ಸುವಾಸಿತವಾಗಿ ಆಪ್ಯಾಯಕರವಾಗಿ ಬಂದಿತು. ನಾಲ್ಕಾರು ಹೆಂಡದ ಗಾಡಿಗಳು, ಕಬ್ಬಿನ ಕಂತೆಗಳು; ಅರ್ಧಮತ್ತವಾದ ಕಣ್ಗೆಂಪಿನಿಂದಲೂ ಅಸ್ಥಿಮಿತ ಪದಗತಿಯಿಂದಲೂ ನಡೆದುಬರುತ್ತಿರುವ ಮನುಷ್ಯ ಮೂರ್ತಿಗಳು. ಕಬ್ಬಿನ ತುಂಡುಗಳನ್ನು ಹಲ್ಲಿನಿಂದ ಸೀಳಿ ಸವಿಯುವುದಕ್ಕೆ ಹೊರಟು ಈ ರಸ ನಾಲಗೆಗೆ ಇಳಿಯುವುದಕ್ಕೆ ಮುಂಚೆಯೇ ಬಾಯಿಚಪ್ಪರಿಸಿ ಹಾಡುಗಳನ್ನು ಹೇಳಿಕೊಳ್ಳುತ್ತ, ಕೇಕೆಹಾಕುತ್ತ, ಒಬ್ಬರ ತಲೆಯನ್ನು ಇನ್ನೊಬ್ಬರ ತಲೆಯ ಕಡೆಗೆ ತೂಗಿ ಓರೆ ನೋಡುತ್ತ ಬರುತ್ತಿರುವ ನರನಾರಿಯರು. ಅವರಂತೆಯೇ ಅರ್ಧಪ್ರಮತ್ತವಾಗಿ, ಹೃದಯದಲ್ಲಿ ಉಕ್ಕಿಬರುವ ಯಾವುದೊ ಒಂದು ಭಾವವನ್ನು ಇಂಚರದಿಂದ ವ್ಯಕ್ತಪಡಿಸುತ್ತ ಸಂಗಡಿಗರನ್ನು ಕೂಗುತ್ತ ಪ್ರತ್ಯುತ್ತರ ಹೇಳುತ್ತಿರುವ ಕೋಗಿಲೆಗಳು; ಸಮೀಪದ ಶೀತಲಜಲಾಶಯದಿಂದ ಹೊರಟು, ಬಂಧುಮಿತ್ರರೆಲ್ಲರೂ ಒಟ್ಟುಗೂಡಿ, ನಿಜ ನಿವಾಸವಾವುದಕ್ಕೊ ವಿಶ್ರಾಂತಿಗಾಗಿ ಹೊರಟು, ಕ್ಷಣ ಕ್ಷಣಕ್ಕೂ ಬೇರೆಬೇರೆ ಸಾಲ್ಗಟ್ಟಿಕೊಂಡು, ಮೇಲಿನ ನೀಲಾಕಾಶವನ್ನು ಚಿಮ್ಮಿಕೊಂಡು ಸಪ್ಪಳವಿಲ್ಲದೆ ನಿದ್ರಿಸುವಂತಿ ರುವ ರೆಕ್ಕೆಗಳನ್ನು ಹಾರಿಸುತ್ತ ಮುಗಿಲುಯಾನ ಮಾಡುತ್ತಿರುವ ಕ್ರೌಂಚ, ಬಲಾಕ ಪಂಕ್ತಿಗಳು – ಇವೇ ಮೊದಲಾದುವನ್ನು ನೋಡಿ ಹೃದಯದಲ್ಲಿ ಉಕ್ತಿ ಶಕ್ತಿಗೆ ಮೀರಿದ ಸಂತೋಷ ಉದಯಿಸಿತು. ಪಕ್ಷಿಪರಮೆಗಳ ನುಣ್ಚರದಿಂದ ನಿಬಿಡವಾದ ಈ ತೆರನಾದ ಪ್ರಕೃತಿಯ ಏಕಾಂತ ನಮ್ಮನ್ನು ಜಯಿಸಿ ವಶಮಾಡಿಕೊಂಡಿತು. ಮುಂದೆ ಒಂದು ಸಣ್ಣ ಕಲ್ಲುಸೇತುವೆ ಎಡಕ್ಕೆ ಸ್ವಲ್ಪ ತಿರುಗಿದರೆ ಅಲ್ಲಿಯೇ ಎದುರಿಗೆ, ಅಂಜನಾಪರ್ವತದ ತಪ್ಪಲಲ್ಲಿ, ತಿಳಿ ಹಸಿರಿನ ಮೃದು ಚೌಕಟ್ಟಿನಲ್ಲಿ ನೆಲಸಿರುವ ಪ್ರಶಾಂತ ಪಂಪಾಸರಸ್ಸು!

ಆ ದಿವ್ಯ ಸರಸ್ಸನ್ನು ಕಂಡಕೂಡಲೆ ಮನಸ್ಸಿನ ಎಲ್ಲ ಅಲ್ಪಬಾವನೆಗಳೂ ದೇಹದ ಎಲ್ಲ ತಾಪಗಳೂ ಮಾಯಾವಾದುವು. ಪೂರ್ಣವಾಹಿನೀ ನದಿಯನ್ನು ನೋಡಿದರೆ ಒಂದು ವಿಧವಾದ ಗಾಂಭೀರ್ಯ ತೋರುವುದು. ಪ್ರಕಾಂಡ ಸಮುದ್ರವನ್ನು ನೋಡಿದರೆ ಅನಂತರ ವಿಸ್ತಾರವಾಗಿ ವೈಭವದಿಂದ ಮೆರೆಯುವ ಸ್ವಾತಂತ್ರ್ಯ ಮಹಾಮೂರ್ತಿಯೊಂದನ್ನು ಕಂಡಂತಾಗುವುದು. ಅಗಾಧವಾಗಿ, ಆನೆಗಳಂತೆ ಮೇಲೆದ್ದು ಬರುವ ಅದರ ಮಾಲೆಯಲೆಗಳನ್ನೂ ಕಬಂಧನು ವರ್ಣಿಸಿದ್ದುದು ಏನೂ ಅತಿಶಯವಲ್ಲ; ಅವು ಉರುಳಿ ಹೊರಳಿ ಒಂದರೊಡನೊಂದು ಹೋರಾಡುತ್ತ ನೊರೆಯ ಸೇರೆಗಳನ್ನೆತ್ತಿ ಎಸೆಯುತ್ತ ಬರುವುದನ್ನು ನೋಡಿದರೆ ಉನ್ಮಾದ ಕೋಲಾಹಲವೊಂದರ ಅನುಭವವಾಗುವುದು. ನೂರಾರು ಅಡಿಗಳ ಮೇಲಿಂದ ಕೆಳಕ್ಕೆ ದುಮ್ಮಿಕ್ಕುತ್ತಿರುವ ಜಲಪಾತಗಳನ್ನು ನೋಡಿದರೆ, ಪ್ರಕೃತಿಯ ರೌದ್ರದ ಒಂದು ಮುಖ ಕಣ್ಗಾಣುವುದು. ಇಲ್ಲಿ ಈ ಸರಸ್ಸನ್ನು ನೋಡಿದರೆ ಆ ವಿಧವಾದ ಭಾವಗಳಾವುವೂ ಬಾರವು. ಇಲ್ಲಿ ವಿಶೇಷ ವೈಶಾಲ್ಯವಿಲ್ಲ. ಯಾವೊಂದು ವಿಧವಾದ ತಳಮಳವೂ ಇಲ್ಲ.

 ಪದ್ಮಗಂಧಿ ಶಿವಂ ವಾರಿ ಸ್ವಾದು ಶೀತಂ ಅನಾಮಯಂ|

 ಉದ್ಧೈತ್ಯ ಸತತಾ ಕ್ಲಿಷ್ಟಂ ರೌಪ್ಯಸ್ಫಾಟಿಕ ಸನ್ನಭಂ||

ನೀರು ತುಂಬಿದಾಗ ಇದರ ಸುತ್ತಳತೆ ಒಂದೆರಡು ಮೈಲಿಗೆ ಮೇಲಿರದು. ಮೂರು ಕಡೆ ಯಾರೊ ಪುಣ್ಯಾತ್ಮರು ಸೋಪಾನ ಕಟ್ಟಿದ್ದಾರೆ. ದಂಡೆಯ ಮೇಲೆ ಸಾಲಿಗೆ ಹೂ ಗಿಡಗಳು: ಗೋರಂಟಿ, ಮಲ್ಲಿಗೆ ಪಾರಿಜಾತ ಮುಂತಾದುವು. ಪಕ್ಕದಲ್ಲಿ ಸೀತಾದೇವಿಯ ದೇವಾಲಯ ವೊಂದು. ಉತ್ತರಪ್ರದೇಶದಿಂದ ಯಾತ್ರೆಬಂದು ಈ ದೇವಾಲಯದಲ್ಲಿ ವಾಸಮಾಡಿಕೊಂಡು ಇಲ್ಲಿಯ ರಾಜನ ಆಶ್ರಯದಲ್ಲಿ, ದೇವಿಯ ಸನ್ನಿಧಿಯಲ್ಲಿ ನೆಲಸಿರುವ ನಾಲ್ಕು ಐದು ಜನ ಬೈರಾಗಿಗಳು. ಅವರೇ ಸರಸ್ಸಿನ ರಕ್ಷಸುಗಳು – ಅದಕ್ಕೆ ಕಾವಲಾಗಿ ಅಲ್ಲಿ ಕೊಳೆಯಾಗದಿರುವಂತೆ ಅದನ್ನು ನೋಡಿಕೊಂಡಿರುವವರು. ಸರೋವರದ ಸುತ್ತಲೂ ಹೊರಗೆ ಬೆಟ್ಟಗಳು. ಉತ್ತರಕ್ಕೆ ಅಂಜನಾಪರ್ವತ. ಇನ್ನು ಮೂರು ಕಡೆಯೂ ಬೇರೆ ಪರ್ವತಗಳ ಸಾನು ಪ್ರದೇಶ ಈ ಸರಸ್ಸಿನವರಿಗೂ ಇಳಿದುಬಂದಿದೆ. ಕಾಲದ ಆದಿಯಿಂದಲೂ ಇಲ್ಲೇ ಹೀಗೇ ಒಂದರ ಸಂಖ್ಯದಲ್ಲೊಂದು ಬೆಳೆದು ಏಕಾಂತರಂಗದಿಂದ ಕಾಲಕಳೆಯುತ್ತಿರುವ ಚಿರಂಜೀವಿಗಳು ಇವು. ಯುಗಗಳೂ ಮನ್ವಂತರಗಳೂ ಕಳೆದುಹೋದಾಗ್ಗೂ ತಮ್ಮ ಸ್ಥಿತಿಯನ್ನು ಸ್ವಲ್ಪವೂ ಬದಲಾಯಿಸದೆ, ಚಪಲರಾಗಿ, ಚಂಚಲರಾಗಿ, ಇಲ್ಲದುದಕ್ಕೂ ಆಗದುದದಕ್ಕೂ ಕೊರಗಿ ಕ್ಲೇಶಪಡುತ್ತಿರುವ ಅಲ್ಪಾಯು ಮನುಷ್ಯರನ್ನು ಗಣನೆಗೆ ತಾರದೆ, ಸರ್ವಥಾ ಅವರಿಗೆ ಅಸದೃಶ ವಾಗಿದೆ.

ಎಲ್ಲೆಲ್ಲಿಯೂ ನಿಶ್ಶಬ್ದ. ಆದರೆ ಆ ನಿಶ್ಶಬ್ದತೆಯು ಯಾವ ನಿರ್ಜೀವ ವಸ್ತುವಿನ ಅಥವಾ ನಿದ್ರಿತ ವಸ್ತುವಿನ ನಿಶ್ಶಬ್ದತೆಯಂತೆ ಇಲ್ಲ; ಮೂಢನ ಅಥವಾ ಗರ್ವಿಯ ಮೌನದಂತೆಯೂ ಇಲ್ಲ. ಶಬ್ದಕ್ಕೆ ಇಲ್ಲಿ ಸ್ಥಳವಿಲ್ಲ, ಅವಕಾಶವಿಲ್ಲ ಅಷ್ಟೇ. ವ್ಯವಹಾರ ಪ್ರಪಂಚ ಈ ಭೂಭಾಗದ ಹೊರ ಎಲ್ಲೆಗೆ ಬಹುದೂರದಲ್ಲಿ ಎಲ್ಲಿಯೊ ಕೊನೆಗೊಂಡಂತಿದೆ. ಅದಕ್ಕೂ ಇದಕ್ಕೂ ಯಾವ ವಿಧವಾದ ಸಂಪರ್ಕವೂ ಇಲ್ಲ. ಬೆಟ್ಟಗಳು ಕೂಡ ಇಲ್ಲಿ ನಮ್ರತೆಯಿಂದ ಉಚ್ಚಮನೋಭಾವದಿಂದ ನಿರ್ಮಲಚಿತ್ತದಿಂದ ಸರಸ್ಸಿಗೆ ಮರ್ಯಾದೆಯಿತ್ತು. ಅದರ ಶಾಂತಿಯನ್ನು ಕಾಪಾಡಿಕೊಂಡು ಬಂದಿವೆ. ಸರಸ್ಸಿನ ಅಧಿದೇವತೆಗೆ ಎಲ್ಲ ಪ್ರಕಾರದಿಂದಲೂ ನೆರವು ಕಾಣಿಕೆಗಳನ್ನರ್ಪಿಸಿವೆ. ಆ ದೇವತೆಯ ಪ್ರತಿನಿಧಿಯಾಗಿ ತಡಿಯ ದೇವಾಲಯದ ಗಹ್ವರ ಪ್ರದೇಶದಿಂದ ಸೀತಾದೇವಿ ತನ್ನ ಪ್ರೇಮಾಧಿಕಾರವನ್ನು ಹೂಡಿ, ಬಾಹ್ಯಾಚರಣೆಗಳೆಲ್ಲವನ್ನೂ ವ್ಯವಸ್ಥೆ ಮಾಡಿ, ತನ್ನ ಸೇವಕರ ಮೂಲಕ, ಕಾರ್ಯಭಾರ ನಡಸುತ್ತಿದ್ದಾಳೆ. ಅವರೂ  ಅಮಾನುಷವಾದ, ಸಾಮಾನ್ಯ ಲಭ್ಯವಲ್ಲದ ಆ ಆವರಣದಲ್ಲಿ ಕಲೆತು ಒಂದಾಗಿ ಹೋಗಿದ್ದಾರೆ. ಆ ಗೋಸಾಯಿಗಳು ಸಾಕಿಕೊಂಡಿರುವ ಬೊಗಸೆಗಣ್ಣಿನ ಹರಿಣಿಯೊಂದು ಅಲ್ಲಿನ ಸಾತ್ವಿಕ ಸೌಂದರ್ಯಕ್ಕೆ ಅನುರೂಪವಾಗಿ ರಾಜಿಸುತ್ತಿದೆ. ಅನೇಕ ಶತಮಾನಗಳ ಪರ್ಯಂತ ಯೋಗನಿರತನಾಗಿ ತಪಶ್ಚರ್ಯೆಯಿಂದ ಶಾಂತಾತ್ಮವನ್ನೂ ಸಿದ್ದಿ ಯನ್ನೂ ಪಡೆದು, ಎಲ್ಲ ವ್ಯಾಮೋಹ ಮಮತೆಗಳನ್ನೂ ತೊರೆದು, ಮಲಿನವಾಗದ ತೇಜಸ್ಸಿ ನಿಂದ ಪ್ರಪಂಚವನ್ನು ಬೆಳಗಿ, ಏಕಾಗ್ರತೆಯಿಂದ ಸದಾನಂದವನ್ನು ಅನುಭವಿಸುತ್ತಿರುವ ಯೋಗಿವರ್ಯನಂತೆ ಸರಸ್ಸು ಕಾಣುತ್ತೆದೆ.

ಇಲ್ಲಿನದು ತಿಳಿಯಾಗಿ ಹೊಳೆವ ಪುಣ್ಯೋದಕ. ಶ್ರೀರಾಮಪಾನದಿಂದ ಪವಿತ್ರವಾದದ್ದು. ಕನ್ನಡಿಯಂತೆ ಶುಭ್ರತೇಜಸ್ಸಿನಿಂದ ಹೊಳೆವ ಅದರ ವಕ್ಷದಲ್ಲಿ ಅಲ್ಲಲ್ಲಿ ತಾವರೆ ನೈದಿಲೆ ಹೂಗಳು ಹಗಲೆಲ್ಲ ಅರಳಿದ್ದು ಈಗ ಅರ್ಧ ಅರ್ಧವಾಗಿ ಅವಗುಂಠಿತವಾಗುತ್ತಿರುವಂತಿವೆ. ಸುತ್ತಣ ಹೂಗಿಡಗಳೂ ಪರ್ವತಪಂಕ್ತಿಗಳೂ ತಮ್ಮ ಪ್ರತಿಬಿಂಬಗಳನ್ನು ಅದರೊಳಗೆ ಕಾಣುತ್ತ ಕೃತಕೃತ್ಯತೆಯನ್ನು ಪಡೆವಂತಿವೆ. ಉಗ್ರವಾಗಿ ಬೀಸುವ ಮಾರುತ ಕೂಡ, ಭಕ್ತಿಯಿಂದ ಮೃದುವಾಗಿ ಚಲಿಸಿ, ಸರಸ್ಸಿನ ಗೋಜಿಗೆ ಹೋಗದೆ ತನ್ನ ಸ್ವಾಚ್ಛಂದ್ಯವನ್ನು ಮರೆತು, ಮೆಲ್ಲನೆ ಸುಳಿದು ಹೋಗುತ್ತಿದೆ. ಪಕ್ಕದ ಪರ್ವತ ಶಿಖರಗಳೊಂದಿಗೆ ಎಷ್ಟೋ ಬಾರಿ ಸರಸದಿಂದ ಕ್ರೀಡಿಸಿದ್ದ ಸಿಡಿಲುಗಳೂ ದರ್ಪಾಹತವಾಗಿ ಈ ಶಾಂತಿಯಲ್ಲಿ ಲಯವಾಗಿ ಹೋಗಿರಬೇಕು. ದಿಕ್ಕುಗಳನ್ನು ತಿವಿದಳಿಸಿ ಉರಿಸಿಕೊಂಡು ಕ್ಷಣಮಾತ್ರದಲ್ಲಿ ಭೂವಲಯ ವನ್ನೇಳು ಸುತ್ತು ಸುತ್ತಿ ಭೂಮ್ಯಾಕಾಶಗಳನ್ನು ಒಂದುಮಾಡಿ ಹೊಳೆದುಹೋಗುವ ಮಿಂಚೂ ಈ ಸರಸ್ಸಿಗೆ ತನ್ನ ಕಾಂತಿಯನ್ನು ಕಾಣಿಕೆ ಕೊಟ್ಟು ಪರಾಜಯವನ್ನು ಒಪ್ಪಿಕೊಂಡು ಶಿಷ್ಯವೃತ್ತಿ ಯಾಚರಿಸಿರಬೇಕು. ಡೊಳ್ಳು ಡೋಳಿನ ಆಡಂಬರವನ್ನು ನೂರ್ಮಡಿ ಮಾಡಿ ಅಬ್ಬರಿಸುವ ಗುಡುಗುಗಳಂತೂ ಇಲ್ಲಿನವರೆಗೂ ಬರಲು ಕೂಡ ಧೈರ್ಯವಿಲ್ಲದೆ ಸದ್ದಿಲ್ಲದೆ ಕಣ್ಣಿಗೆ ಕಾಣದೆ, ಹೇಗೋ ಎತ್ತಲೋ ಅಡಗಿಹೋಗಿರಬೇಕು. ಇತ್ತಲಾಗಿ ಇವೆಲ್ಲವನ್ನೂ ನೋಡುತ್ತ, ಪುರಾತನದಿಂದ ಈ ವರೆಗಿನ ಎಲ್ಲ ವಿಧವಾದ ಕಾರ್ಯಕ್ರಮಗಳನ್ನೂ ಕಣ್ಣಾರ ಕಂಡು ಎಲ್ಲವನ್ನೂ ತಿಳಿದುಕೊಂಡಿದ್ದರೂ ಏನೂ ತಿಳಿಯದೆ ತನ್ನ ಒಳ ಆನಂದದಲ್ಲಿ ತಾನು ಮಗ್ನನಾಗಿರುವ ಸಿದ್ಧನಂತೆ ಈ ಸರಸ್ಸು ಕಾಣುತ್ತದೆ.

ದಾರಿಯಲ್ಲಿ ಆನೆಗೊಂದಿಯಲ್ಲಿ ಕಬ್ಬನ್ನೂ ಮಾವಿನಹಣ್ಣುಗಳನ್ನೂ ಕೊಂಡು ಹೋಗಿದ್ದೆವು. ಸರಸ್ಸಿನಲ್ಲಿ ಮುಖವನ್ನು ತೊಳೆದು ಅವನ್ನು ತಿಂದು ಮನಸ್ಸಿನ ದಾಹವಡಗು ವಂತೆ ನೀರು ಕುಡಿದು ಆಯಾಸವನ್ನು ಪರಿಹರಿಸಿಕೊಂಡೆವು. ಆಗಲೇ ಸಂಜೆಯಾಗಿತ್ತು. ದೂರದ ಪಶ್ಚಿಮಾಂತದಲ್ಲಿ ಕಿತ್ತಳೆ ಬಣ್ಣದ ಸೂರ್ಯನು ಮುಳುಗುವುದರಲ್ಲಿದ್ದನು. ಅವನ ಕೆಂಪುಮಿಶ್ರವಾದ ಹೊಂಬಣ್ಣದ ಕಾಂತಿ ಬೆಟ್ಟದ ಸಾನುಗಳನ್ನು ದಾಟಿಕೊಂಡು ಗಿಡದೆಲೆವೂಗಳನ್ನು ದೂರಿಕೊಂಡು ಸುತ್ತಣ ಪ್ರದೇಶವನ್ನು ಬೆಳಗುತ್ತಿತ್ತು. ಮೇಲಿನ ಮೋಡಗಳನ್ನು ಹೊಕ್ಕು ಅವನ್ನು ವಿಧವಿಧ ವರ್ಣಗಳಿಂದ ಸಿಂಗರಿಸಿತ್ತು; ಮೇಲೆ ಆಕಾಶ, ಸಂಧ್ಯಾರಾಗರಂಜಿತವಾದ ಮೋಡಗಳು; ಕೆಳಗೆ ಸರಸ್ಸು. ದೂರದ ಆಳದಲ್ಲಿ, ಅದರ ಹೃದಯದಂತರಾಂತರದಲ್ಲಿ ಆಕಾಶದ ಪೇಲವವಾದ ಆದರೂ ಸುಸ್ಪಷ್ಟ ಪ್ರತಿಬಿಂಬ; ಸುತ್ತಣ ಪ್ರಶಾಂತ ನೀರವತೆ; ಅಮಾನುಷವಾದ ಲೋಕಾತೀತವಾದ ಶಾಂತಮೂರ್ತಿಯ ಸರಸ್ಸು; ಇವುಗಳಲ್ಲಿ ನಟ್ಟ ಮನಸ್ಸು ಪ್ರಪಂಚವನ್ನು ಮರೆತುದೇನಾಶ್ಚರ್ಯ? ಎಷ್ಟು ಹೊತ್ತು ಅಲ್ಲಿ ಕುಳಿತಿದ್ದರೂ ಅದನ್ನು ಬಿಟ್ಟು ಏಳಲು ಮನಸ್ಸೇ ಬಾರದು. ಏಳದಿದ್ದರೆ? ಮಳೆ ಬರುವುದರೊಳಗಾಗಿ ಗೂಡು ಸೇರಿಕೊಳ್ಳಬೇಕು. ಏನು ಗೂಡೋ – ಏನು ಬಾಳೋ! ಗೋಸಾಯಿಗಳು ದೇವಸ್ಥಾನದೊಳಕ್ಕೆ ನಮ್ಮನ್ನು ಬರಹೇಳಿದರು. ಒಳಗೆ ಹೋಗಲು ವ್ಯವಧಾನವಿಲ್ಲ; ಅಲ್ಲದೆ ಅಲ್ಲಿ ಸೀತಾದೇವಿಯ ದರ್ಶನಮಾಡಲು ನನಗೇನೊ ಮನಸ್ಸು ಬರಲಿಲ್ಲ; ರಾವಣನು ಮೋಸದಿಂದ ಕೊಂಡೊಯ್ಯುತ್ತಿರುವಾಗ ಭೀತಿಗೊಂಡು, ನಿಡುಸುಯ್ಯತ್ತ ಆಕೆ ಕಣ್ಣೀರ ಮಳೆಯನ್ನು ಸುರಿಸಿಕೊಂಡುಹೋಗಿದ್ದ ಪ್ರದೇಶವಿದು! ದೇವಿಯ ವಿರಹದಿಂದ ಶ್ರೀರಾಮನು ಬಾಡಿ ಉನ್ಮತ್ತನಂತಾಗಿ ದುಃಖಪಟ್ಟ ಸ್ಥಳವಿದು! ಚಿರದುಃಖಿನಿಯಾದ ದೇವಿ ಪುನಃ ಈ ಜಾಗಕ್ಕೇ ಬಂದು ಪತಿಯಿಂದ ದೂರಳಾಗಿ ನೆಲಸಿ ಕಾಲಕಳೆಯುತ್ತಿದ್ದರೆ ಅದು ಆಕೆಗೆ ಹರುಷವನ್ನೆಂತು ತಂದೀತು? ಫುಲ್ಲಹಾಸ ಹೋಗಿ ಆಕೆಯ ಮೊಗದ ಮೇಲೆ ಕತ್ತಲೆ ಕವಿದಂತಿರುವ ಈ ದೇಶದಲ್ಲಿ ಆಕೆಯನ್ನು ಕಂಡು ಆನಂದಿಸುವುದು ಹೇಗೆ? ದರ್ಶನದ ಯಾತನೆಯನ್ನು ಸಹಿಸುವುದು ಹೇಗೆ? ನಾವು ಒಳಗೆ ಹೊಗಲಿಲ್ಲ. ಅವರ ಕೈಯಲ್ಲಿ ನಾಲ್ಕಾಣೆ ನಾಣ್ಯ ಹಾಕಿ ಹೊರಗಿಂದಲೇ ನಮಸ್ಕಾರ ಮಾಡಿ ಹೊರಟು ಹೋದೆವು. ಗೋಸಾಯಿಗಳು ನಮ್ಮನ್ನು ಬೈದುಕೊಂಡಿರಬೇಕು. ಬೈದುಕೊಳ್ಳಲೇಳಿ. ನಮ್ಮ ಮನಸ್ಸನ್ನು ಅವರು ಹೇಗೆ ಅರಿಯಬಲ್ಲರು.

ಬಂದ ದಾರಿ ಹಿಡಿದು ಹಿಂತಿರುಗಿದೆವು. ಆರು ಗಂಟೆಗೆ ಮೀರಿಹೋಗಿತ್ತು. ಮೇಲೆ ಆಕಾಶದಲ್ಲಿ ಕಾರ್ಮೋಡಗಳು ಹಾಕಿ ಸುತ್ತಲೂ ಕತ್ತಲು ಕವಿದಿತ್ತು. ಮರಗಿಡಗಳು ಅಲ್ಲಾಡಲು ಆರಂಭಿಸಿದವು. ನಮಗೆ ಜಾಗ್ರತೆ  ‘ಮನೆ’ಗೆ ಹೋಗಿ ಸೇರಿಕೊಳ್ಳಬೇಕೆಂಬ ಆತುರ. ಅಂಬಿನ ವೇಗದಲ್ಲಿ ಹೊರಟಿದ್ದೆವು. ಚಳಿಗಾಳಿಯೊಂದಿಗೆ ಮಳೆಯ ವಾಸನೆ ಬಂದಿತು. ಸೂಚನೆಗಳು ಭಯವನ್ನುಂಟುಮಾಡತೊಡಗಿದವು. ರಾತ್ರಿಯೆಲ್ಲ ಮಳೆ ನಿಲ್ಲದೆಯೆ ಇದ್ದರೆ ಎಲ್ಲಿ ತಂಗುವುದು? ಏನು ಮಾಡುವುದು? ಊಟ ನಿದ್ರೆಗಳಿಗೆ ಹೇಗೆ? ಹಸಿವಾದಾಗ ಮಾತ್ರವೇ ಊಟ ಮಾಡಬೇಕೆಂಬ ನಿಯಮವಿಲ್ಲದೆ ಹಸಿವೆಂಬುದನ್ನೇ ಅರಿಯದೆ ಇದ್ದ ನನ್ನಲ್ಲಿ ಕೂಡ ಕ್ಷುಧಾಗ್ನಿ ಪ್ರಜ್ವಲಿಸುತ್ತಿತ್ತು. ಭಯವನ್ನು ಮತ್ತಷ್ಟು ಹೆಚ್ಚಿಸಿ ಮಿಂಚು ಮಿಂಚಿತು; ಗುಡುಗು ಗುಡುಗಿತು. ಅವುಗಳ ಹಾವಳಿ ಅಷ್ಟಿಷ್ಟೆಂದು ಹೇಳಲು ಸಾಧ್ಯವಿಲ್ಲ. ಇನ್ನೆರಡು ಹೆಜ್ಜೆ ಮುಂದಿಡುವುದರೊಳಗಾಗಿ ಮಳೆ ಬಂದೇಬಿಟ್ಟಿತು. ಒಂದೊಂದು ಹನಿ ಒಂದೊಂದು ನೆಲ್ಲಿಯಕಾಯಿನಷ್ಟು ಗಾತ್ರ; ತಡೆಯಲಾರದಷ್ಟು ರಭಸದಲ್ಲಿ, ತೀವ್ರಧಾರೆಯಲ್ಲಿ ಬಂದಿತು. ಮಳೆಯ ಜೊತೆಗೆ ಗಾಳಿ; ಗಾಳಿಯ ಜೊತೆಗೆ ಮಳೆ. ಈ ಕೋಲಾಹಲದ ಜೊತೆಗೆ ನಮ್ಮ ಛತ್ರಿಗಳು ದುರ್ದಮನೀಯವಾಗಿ ಸ್ವತಂತ್ರ ವೃತ್ತಿಯನ್ನವಲಂಬಿಸಿದುವು. ಅವುಗಳ ಮೇಲೆ ನಮಗಿದ್ದ ಇಷ್ಟು ದಿನದ ಅಧಿಕಾರವೂ ಈಗೊಂದು ನಿಮಿಷದಲ್ಲಿ ಹಾರಿಹೋಯಿತು. ಬಹುದಿನ ಪರತಂತ್ರದಲ್ಲಿದ್ದ ಜನರು ಹೊರಗಣ ಬಲವತ್ಸಹಾಯದಿಂದ ದಂಗೆಯೆದ್ದು ಸ್ವತಂತ್ರ ಸಂಪಾದನೆಗೆ ಹೊರಟರೆ ಯಾವ ಯಾವ ವಕ್ರವೃತ್ತಿ ಚೇಷ್ಟೆಗಳನ್ನು ಮಾಡುವರೊ ಅದಕ್ಕಿಂತಲೂ ಹೆಚ್ಚಿನ ಚೇಷ್ಟೆ ಮಾಡಲಾರಂಭಿಸಿದವು. ನನ್ನ ಛತ್ರಿಯಂತೂ ಕೀಲುಗಳನ್ನು ಮೇಲುಕ್ಕೆತ್ತಿ ತಲೆಕೆಳಕಾಗಿ ನಿಂತಿತು. ಸುರಿಯುವ ಮಳೆಯಲ್ಲಿ ಈ ಉತ್ಸವ ಬೇರೆ. ಸ್ನೇಹಿತರ ಲೇವಡಿ. ನಗಿ; ಬೇಕಾದಷ್ಟು ನಗಿ! ಎಂದುಕೊಂಡೆ. ಆದರೂ ಸನ್ನಿವೇಶವನ್ನು ನೋಡಿತರೆ ಯಾರು ತಾನೆ ಬೇರೆ ರೀತಿ ಆಚರಿಸಿಯಾರು? ನಾನು ನನ್ನ ಆಗಿನ ಸ್ಥಿತಿಯನ್ನೂ ಅವರನ್ನೂ ಛತ್ರಿಯನ್ನೂ ನೋಡಿ ಸೂಕ್ಷ್ಮ ತಿಳಿದುಕೊಂಡೆ. ಅವರಿಗಿಂತಲೂ ಹೆಚ್ಚಾಗಿ ನಕ್ಕೆ. ಅಂಥ ಸಮಯದಲ್ಲಿ ಇತರರ ನಗು ಅಪಹಾಸ್ಯಗಳನ್ನು ಅಡಗಿಸುವುದಕ್ಕೆ ಅದೇ ಉತ್ತಮೋತ್ತಮ ಉಪಾಯ. ಚೆನ್ನಯ್ಯನೂ ಅವರೊಡನೆ ಸೇರಿಕೊಂಡು ‘ಹ್ಯೋ’ ಎಂದು ಷುರುಮಾಡಿದನು. ಅದನ್ನು ನೋಡಿ ಮಾತ್ರ ನನಗೆ ರೇಗಿತು.

‘ಏಕೋ, ನೀನೇಕೊ ನಗೋದು?’ ಎಂದು ಸ್ವಲ್ಪ ಗದರಿಸಿಕೊಂಡೇ ಕೇಳಿದೆ. ನನ್ನ ಆ ಗಂಭೀರ ಭೀಷಣಧ್ವನಿ ಅವನನ್ನು ಅಡಗಿಸಲಿಲ್ಲ. ಅವನಂಥವರ ಸಹವಾಸ ಬಲುಕಷ್ಟ. ‘ನಗು ಬಂದಿತು ಸ್ವಾಮಿ, ಏನು ಮಾಡೋದು?’ ಎಂದ. ಅವನಿಗೆ ಯಾವ ಯಾವ ಆತಂಕವೂ ಇಲ್ಲ. ಆಮೇಲೆ? ಆಮೇಲೆ ಮಾಡುವುದೇನು? ‘ಅಯ್ಯ ರ್ಯಾಸ್ಕಲ್’ ಎಂದು ಮನಸ್ಸಿನಲ್ಲೆ ಅಂದುಕೊಂಡು ಸುಮ್ಮನಾದೆ.

ಹತ್ತಿರದಲ್ಲಿಯೇ ಒಂದು ಹಳೆಯ ಆಲೆಯ ಮನೆ. ಅಲ್ಲಿ ನಮ್ಮಂಥವರು ಇನ್ನೂ ಅನೇಕರು ಸೇರಿದ್ದರು. ಎಲ್ಲರ ಮೈಮೇಲಿನ ಬಟ್ಟೆಗಳಿಂದಲೂ ನೀರು ಕೋಡಿ ಹರಿಯುತ್ತಿತ್ತು. ತೆಳುವಾದ ಬಟ್ಟೆಗಳನ್ನು ಹಾಕಿಕೊಂಡಿದ್ದ ನಮ್ಮವರ ಬಟ್ಟೆಗಳು ಮೈಗಳಿಗಂಟಿಕೊಂಡಿದ್ದುವು. ರೈತರ ದುಪ್ಪಟಿಗಳೂ ಯಥಾಶಕ್ತಿ ಗಂಭೀರವಾಗಿ ಶ್ರೀಮಂತ ವೃತ್ತಿಯನ್ನೇ ಅವಲಂಬಿಸಿದ್ದವು. ಕರಿಯ ಬಟ್ಟೆಗಳನ್ನು ಉಟ್ಟಿದ್ದವರ ಬಟ್ಟೆಗಳು ಮೈಗೆ ಅಂಟಿಕೊಂಡು ಮಿಂಚಿನಲ್ಲಿ ಮಿನುಗತೊಡಗಿದವು ಅಲ್ಲಲ್ಲೆ ಮೂಲೆಗಳನ್ನು ಸೇರಿಕೊಂಡಿದ್ದ ಮುದುಕರು ಮೊಳಕಾಲುಗಳ ಮೇಲೆ ತಲೆಯಿಟ್ಟು ಗಡಗಡ ನಡುಗುತ್ತಿದ್ದರು. ಕುದಿಪ್ರಾಯದವರಾದ ನಮ್ಮ ಹಲ್ಲುಗಳೂ ಚಳಿಯಿಂದ ಒಂದೊಂದು ಸಲ ಎಷ್ಟು ಹೇಳಿದರೂ ಕೇಳದೆ ಬಡಿದುಕೊಂಡು ಶಬ್ದಮಾಡು ತ್ತಿದ್ದವು. ಎರಡು ಕೋಳಿ, ನಾಲ್ಕು ಕುರಿ, ಹತ್ತು ಕಬ್ಬಿನ ಜಲ್ಲೆಗಳು, ನಮ್ಮಂಥ ಜನರು – ಅಲ್ಲಿ ಸೇರಿದ್ದವರು; ಒಟ್ಟು ದೊಡ್ಡವರು ಚಿಕ್ಕವರು, ಹೆಂಗಸರು ಗಂಡಸರು, ಹಿಂದೂ ಮುಸಲ್ಮಾನರು ಎಲ್ಲರೂ ಸೇರಿ ಹದಿನಾರು ಜನ; ಎಲ್ಲ ಕೋಮಿನವರೂ ಎಲ್ಲರ ಪ್ರತಿನಿಧಿಗೂ ಸೇರಿದ್ದಂತೆಯೇ ಆಯಿತು. ಒಟ್ಟು ಹದಿನಾರು ಜನರಿಗೆ ಅಲ್ಲಿನವರಲ್ಲದ ಅವರೊಡನೆ ಏತಕ್ಕೂ ಸ್ಪರ್ಧಿಸದ ಬ್ರಾಹ್ಮಣರು ಐವರೇ ಇದ್ದುದರಿಂದ ನಮ್ಮ ಸಂಖ್ಯೆ ಹೆಚ್ಚೆಂದು ಮೂದಲಿಸುವರು ಯಾರೂ ಇರಲಿಲ್ಲ. ಭಗವದನುಗ್ರಹ.

ಒಂದು ಮಣ್ಣುಗದ್ದಿಗೆಯ ಮೇಲೆ ಇಬ್ಬರು ಮೂವರೂ ಕಂಬಳಿ ದುಪ್ಪಟಿಗಳನ್ನು ಹೆಗಲ ಮೇಲೆ ಹಾಕಿಕೊಂಡು ಒಂದೆರಡು ಕುಡುಗೋಲುಗಳನ್ನು ಹತ್ತಿರವಿಟ್ಟುಕೊಂಡು ಕುಳಿತಿದ್ದರು. ಅವರಲ್ಲಿ ಇಬ್ಬರು ರೆಡ್ಡಿಗಳು. ಹೊಗೆಕಡ್ಡಿಯನ್ನು ತೀಡುತ್ತ ಒಬ್ಬನು, ಹೊಗೆಸೊಪ್ಪನ್ನು ಅಗಿಯುತ್ತ ಇನ್ನೊಬ್ಬನು, ಜಡಭರತರಂತೆ ಕುಳಿತಿದ್ದರು. ಇನ್ನೊಬ್ಬನು ಸಾಬಿ. ಅವನೇ ಆ ಸಭೆಗೆ ನಾಯಕ. ಬಾಯಿತುಂಬ ಅಡಿಕೆ ಎಲೆಗಳನ್ನು ಹಾಕಿಕೊಂಡು ಅಗಿಯುತ್ತ ಆಗಾಗ್ಗೆ ಕಡ್ಡಿಪುಡಿಯನ್ನೂ, ಸುಣ್ಣಕಾಯಿಂದ ಸುಣ್ಣವನ್ನೂ ಸುಣ್ಣವನ್ನೂ ತೆಗೆದು ಸೇವಿಸುತ್ತ ತನುಗಾಂತಿಗಿಂತಲೂ ಹೆಚ್ಚು ಕರಾಳವಾದ ದೀರ್ಘವಾದ ದಾಡಿಯನ್ನು ನೀವಿಕೊಳ್ಳುತ್ತ, ಒಂದೊಂದು ಸಲ ಅದನ್ನು ಮೇಲೆತ್ತಿ ಚಪ್ಪರಿಸುತ್ತ, ಹಲ್ಲಿಗೆ ಕೈಯಿಟ್ಟು ಕಸ ತೆಗೆಯುತ್ತ, ಆಗಾಗ ಅಲ್ಲೇ ಉಗುಳುತ್ತ, ವಿಚಿತ್ರ ವಿಚಿತ್ರ ತಮಾಷೆಗಳನ್ನು ಮಾಡಿಕೊಂಡು ಕುಳಿತಿದ್ದನು. ಅವನು ಬುದ್ದಿವಂತ; ಮಳೆಗೆ ಸಿಕ್ಕಿರಲಿಲ್ಲ. ಆ ಮಾತು ಈ ಮಾತುಗಳನ್ನು ಆಡಿಯಾದ ಮೇಲೆ ಯಾರೊ ತಿಪ್ಪಾರೆಡ್ಡಿಯೆಂಬುವನನ್ನು ಆ ಹಿಂದಿನ ದಿನ ಅಲ್ಲಿ ಹೇಗೆ ‘ನರಿಕಿ’ ಹಾಕಿದರೆಂಬ ಪ್ರಸಂಗಕ್ಕೆ ಮೊದಲಾಗುವುದರೊಳಗಾಗಿ ಮಳೆಯ ಜೋರು ಸ್ವಲ್ಪ ಕಡಮೆಯಾಯಿತು. ನಾವು ಅಲ್ಲಿಂದ ಹೊರಗೆ ಹೊರಟು ದಾರಿಗೆ ಬಂದೆವು. ಹನಿಯುತ್ತ ಬಸಿಯುತ್ತ ನಡೆದೆವು. ಮುಸ್ಸಂಜೆಯ ಮಬ್ಬೂ ಮೊಡಗಳು ಮೇಲ್ಗಪ್ಪೂ ಸೇರಿ ಎಲ್ಲವೂ ಅಂಧಕಾರಮಯವಾಯಿತು. ‘ಇಷ್ಟು ಹೊತ್ತಿನ ಮೇಲೆ ಈ ಕತ್ತಲಿನಲ್ಲಿ ಇನ್ನು ಆರು ಮೈಲಿ ಯಾರಪ್ಪ ಆ ದಾರಿಯಲ್ಲಿ ನಡೆಯುವರು. ಇಲ್ಲಿಯೇ ರಾತ್ರಿಯನ್ನು ಹೇಗೋ ಹಾಗೆ ಕಳೆದು ಬೆಳಗಾಗುತ್ತಲೆ ಹೊರಡೋಣ ಬೇಕಾದರೆ’ ಎಂದರು ರಾಯರು. ಅವರಿಗೆ ದೂರ ನಡೆಯುವ ಅಭ್ಯಾಸವಿಲ್ಲ. ಬಹು ನಿಧಾನವಾಗಿ ನಡೆದು ಅಭ್ಯಾಸ. ದಾರಿಯೂ ಸ್ವಲ್ಪ ಕಷ್ಟವೇಯೇ. ಭೀತಿ ಬೇರೆ. ಆದರೆ ಒಬ್ಬರ ಮೇಲೂ ಒಂದು ಬಿಟ್ಟರೆ ಮತ್ತೊಂದು ಬಟ್ಟೆ ಇಲ್ಲ.ಇರುವುದೂ ಒದ್ದೆ. ಹೊಟ್ಟೆಯಲ್ಲಿ ‘ಅಸಾಧ್ಯ’ ಹಸಿವು. ಎಷ್ಟೇ ಹೊತ್ತಾಗಲಿ ಗೂಡು ಸೇರಿಕೊಂಡರೆ ಊಟ ಮಾಡಿ ಬೆಚ್ಚಗೆ ಅವರವರ ಹಾಸುಗೆಗಳಲ್ಲಿ ಮಲಗಬಹುದು. ರಾಯರ ಮಾತು ನಡೆ ಯಲಿಲ್ಲ. ಬಹುಜನಮತಕ್ಕೆ ಅವರೂ ತಲೆಬಾಗಿಸಬೇಕಾಯಿತು. ಸಂಸ್ಥಾನದ ರಾಜಬೀದಿ ಯಲ್ಲಿದ್ದ ಮೂರು ದೊಡ್ಡ ಅಂಗಡಿಗಳಿಗೂ ಹೋಗಿ ವಿಚಾರಿಸಿದೆವು. ಒಂದೊಂದಕ್ಕೆ ನಾಲ್ಕಾಣೆ ಕೊಡುವೆವೆಂದೆವು :- ಒಂದು ಮೇಣದ ಬತ್ತಿ ಕೂಡ ದೊರೆಯಲಿಲ್ಲ. ‘ಇನ್ನೇನು ಮಾಡುವುದು ನಡೆಯಿರು, ಜಾಗ್ರತೆ ಹೋಗೋಣ. ನದಿಯ ದಂಡೆಯಿಂದ ಅಂಬಿಗರೂ ಹೊರಟು ಹೋದಾರು’ ಎಂದರು ಯಜಮಾನರು. ಹತ್ತುಮಾರು ಹೋಗುವುದರೊಳಗಾಗಿ ಆನೆಗೊಂದಿ ರಾಜ್ಯದ ಸುಂಕದ ಅಧಿಕಾರಿಗಳು ತಮ್ಮ ದುಡ್ಡಿನ ಪೆಟ್ಟಿಗೆಯನ್ನು ಎತ್ತಿಕೊಂಡು ಎದುರಿಗೆ ಬರುತ್ತಿರುವುದು ಕಂಡಿತು. ಅವರನ್ನು ನಾನಾವಿಧವಾಗಿ ವಿನಯದಿಂದ ಬೇಡಿಕೊಂಡು ಉಪಶಾಂತಿಯನ್ನು ಮಾಡಲೊಪ್ಪಿದೆವು. ಹತ್ತು ನಿಮಿಷಗಳಲ್ಲಿ ಬರುವೆವು ನಡೆಯಿರೆಂದು ಅವರು ಊರೊಳಕ್ಕೆ ಹೋದರು. ಆದರೆ ಪಾಪ! ಏನು ತೊದರೆ ಸಂಭವಿಸಿತೊ ಪುನಃ ಬರಲಿಲ್ಲ. ಆದರೂ ನಮ್ಮ ಪ್ರಯಾಣದ ವಿಚಾರವನ್ನು ಅಧಿಕಾರಿಗಳ ತಿಳಿವಳಿಕೆಗೆ ತಂದು ಅವರ ಅನುಮತಿ ಪಡೆದಿರುವೆವಲ್ಲ ಎಂದು ಮನಸ್ಸು ನಿರ್ಮಲ ಮಾಡಿಕೊಂಡು ದಡಕ್ಕೆ ಹೋಗಿ ಸೇರಿದೆವು. ಪ್ರಯಾಣಕ್ಕೆ ಅವರಿಂದ ತೊಂದರೆಯೇನೂ ಬರುವ ಸಂಭವವಿರಲಿಲ್ಲ. ಆದರೆ ಅಂಬಿಗರಾರೂ ಅಲ್ಲಿ ಇರಲಿಲ್ಲ. ಎಲ್ಲರೂ ಆಚೆ ದಡಕ್ಕೆ ಹೊರಟುಹೋಗಿದ್ದರು. ಆಚೆ, ದೂರದಲ್ಲಿ ಅವನ ಮನೆ. ಕೆಲವರು ಬೆಂಕಿ ಹೊತ್ತಿಸಿಕೊಂಡು ತಮಟೆ ಬಡಿದುಕೊಂಡು ಕುಣಿಯುವುದಕ್ಕೆ ಆರಂಭಮಾಡಿದ್ದಂತೆ ಕಂಡುಬಂದಿತು. ಗಟ್ಟಿಯಾಗಿ ಕೂಗಿದೆವು. ಮೊದಲು ಒಬ್ಬೊಬ್ಬರಾಗಿ, ಆಮೇಲೆ ಎಲ್ಲರೂ ಒಟ್ಟಿಗೆ ಕೂಗಿದೆವು. ಗಂಟಲು ಶಕ್ತಿಯನ್ನೆಲ್ಲ ವೆಚ್ಚ ಮಾಡಿದೆವು. ಇನಾಮು ಕೊಡುತ್ತೇವಯ್ಯ ಬನ್ನಿ ಎಂದು ಕೂಗಿದೆವು. ಆ ಮೋಹಿನೀ ಮಂತ್ರದ ಉಚ್ಚಾರ ಮಾತ್ರದಿಂದಲೇ ಕೊನೆಗೆ ಹರಿಗೋಲಿನವನು ಒಬ್ಬನು ನಮ್ಮತ್ತ ಹರಿಗೋಲನ್ನು ನಡಸಿಕೊಂಡು ಬಂದು ನಮ್ಮನ್ನು ಆ ದಡಕ್ಕೆ ಸಾಗಿಸಿಕೊಂಡು ಹೋದನು. ಅಂಬಿಗನು ಆಗ ಮಾಡಿದುದು ಮಹದುಪಕಾರವೆಂದೇ ಭಾವಿಸಬೇಕು. ಆರೂವರೆ ಗಂಟೆಯಾಗಿ ಸುಂಕದ ಅಧಿಕಾರಿಗಳು ಹೊರಟುಹೋದಮೇಲೆ ಅಂಬಿಗರು ಹರಿಗೋಲು ನಡಸಕೂಡದೆಂಬುದು ಸಂಸ್ಥಾನದವರ ಕಟ್ಟಾಜ್ಞೆ. ಅವನಂತೂ ಇನಾಮಿನ ಹೆಸರು ಕೇಳಿ ಧೈರ್ಯ ಮಾಡಿದ್ದನು.

ಹರಿಗೋಲಿಳಿದು ‘ಚೆನ್ನಯ್ಯ, ಮುಂದೆ ನಡೆಯಪ್ಪ, ದಾರಿ ತೋರಿಸು’ ಎಂದು ಹೇಳಿ ಅವನನ್ನು ಹಿಂಬಾಲಿಸಿದೆವು. ಕತ್ತಲಿನಲ್ಲಿ, ಒಂದೊಂದು ಸಲ, ಮುಂದೆ ಹೋಗುತ್ತಿರುವ ಅವನಿಗೂ ದಾರಿ ಕಾಣಿಸದಾಗುತ್ತಿತ್ತು. ಆಗ ಅವನು ಸೇದುತ್ತಿದ್ದ ಬೀಡಿಯ ಬೆಳಕೇ ನಮಗೆ ಮಾರ್ಗದರ್ಶಿ. ಮನೆ ಸೇರುವ ಆತುರ;  ದಾರಿಯ ಹೆದರಿಕೆ; ಭೀರು ಮನಸ್ಸು; ಮಳೆ, ಕತ್ತಲು; ಭಯಗಳ ಉದ್ವೇಗ ಮನಸ್ಸಿನಲ್ಲಿ ಪ್ರಬಲವಾದ ಅಧಿಕಾರ ಹೂಡಿತ್ತು. ಅದೇ ದಾರಿಯಲ್ಲಿ ಎರಡು ಮೂರು ಗಂಟೆಗಳಿಗೆ ಹಿಂದೆ ತಾನೇ ಅನೇಕ ಸೌಂದರ್ಯಗಳನ್ನು ನೋಡಿಕೊಂಡು ಶ್ಲಾಘಿಸುತ್ತ, ಆನಂದಪಡುತ್ತ ಹೋಗಿದ್ದೆವು. ಐತಿಹಾಸಿಕ ಸಂಗತಿಗಳನ್ನು ನೆನಪಿಗೆ ತಂದುಕೊಳ್ಳುತ್ತ, ಅನೇಕ ಹಳೆಯ ಸನ್ನಿವೇಶಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ, ಹೆಜ್ಜೆಹೆಜ್ಜೆಗೂ ಹೊಸ ನೋಟಗಳನ್ನು ನೋಡುತ್ತ, ವ್ಯಾಖ್ಯಾನ ಮಾಡುತ್ತ, ಹೋದವರ ಸುತ್ತಲೂ ಹೊರಗೂ ಒಳಗೂ ಈಗ ಭಯ ಅಂಧಕಾರ ಇವು ಮಾತ್ರವೇ ತುಂಬಿಕೊಂಡು ಇತರ ಭಾವನೆ ಕಲ್ಪನೆಗಳೆಲ್ಲ ಎಲ್ಲಿಯೋ ಮಾಯವಾಗಿದ್ದವು. ಚೆನ್ನಯ್ಯನು ಎಷ್ಟು ಧೈರ್ಯ ಹೇಳಿದರೆ ತಾನೆ ಏನು? ಕಣ್ಣು ಕಾಣದ ದೇಶ; ಕಣ್ಣು, ಮನಸ್ಸು ಓಡದ ಸಮಯ; ಕಳ್ಳಕಾಕರ ಭೀತಿ, ಸ್ವಲ್ಪ ಆಚೆ ಈಚೆ ಸುಳಿದರೆ ಎಡವಿಬೀಳುವ, ಮೈ ತರಚಿಹೋಗುವ, ಕೈಕಾಲು ಮುರಿಯುವ ಸಂಭವ. ಮಿಂಚಿನ ಬೆಳಕು ಬೆಳಗಿದರೆ ಮಾತ್ರ ದಿಕ್ಕು ದೆಸೆ ಕಾಣುವುವು. ಆ ಬೆಳಕೋ ಎಷ್ಟು ಭಯಂಕರ! ಅಕ್ಕಪಕ್ಕದಲ್ಲಿದ್ದು ಮಿಂಚಿನಲ್ಲಿ ಬೆಳಗಿದ ಕೋಡುಗಲ್ಲುಗಳು ಕಟಬಾಯ್ಗಳನ್ನು ತೆರೆದುಕೊಂಡಿರುವ ಮೊಸಳೆಗಳಂತೆ ಕಾಣುವುವು. ಒಣಗಿ ನಿಂತಿದ್ದ ಬೋಳುಮರಗಳನ್ನು ನೋಡಿದರೆ ತೋಳುಗಳನ್ನು ಹೋರ ಚಾಚಿ ನಿಂತಿರುವ ಭೂತಗಳಂತೆ ಇರುವುವು.

‘ಇಂಥ ಸಮಯಗಳಲ್ಲಿ ಒಂದೊಂದು ಪಿಸ್ತೂಲು ಹತ್ತಿರವಿದ್ದರೆ ಎಷ್ಟೋ ಅನುಕೂಲ’ ಎಂದರು ಯಜಮಾನರು. ನಿಶ್ಚಯ; ನಮಗೆ ಪಿಸ್ತೂಲುಗಳ ಜ್ಞಾಪಕ ಬರತಕ್ಕದ್ದು ಕೂಡ ಇಂಥ ಸಮಯಗಳಲ್ಲಿಯೇ. ಆದರೆ ಪಿಸ್ತೂಲುಗಳನ್ನು ಇಟ್ಟುಕೊಳ್ಳುವುದು ಹೇಗೆ? ಅವಕ್ಕೆ ಹತ್ತಾರು ರೂಪಾಯಿಗಳನ್ನು ಖರ್ಚುಮಾಡಿ ಮೇಲೆ ಮೇಲೆ ತೋಟೆಗಳನ್ನು ಕೊಳ್ಳುತ್ತಲೇ ಇರಬೇಕು. ಅವನ್ನು ಹಿಡಿದು ಉಪಯೋಗಿಸುವ ಯೋಗ್ಯತೆ ತಾನೆ ನಮಗೆಲ್ಲರಿಗೂ ಎಲ್ಲಿಂದ ಬರಬೇಕು? ಎಲ್ಲರಿಗೂ ಲೈಸೆನ್ಸ್ ಯಾರು ಕೊಡುವವರು ? ದೇವರು ದೊಡ್ಡ ಮನಸ್ಸು ಮಾಡಿ ನಮಗೆ ಬ್ರಿಟಿಷ್ ಸರಕಾರದವರ ಆಶ್ರಯವನ್ನು ಕರುಣಿಸಿರುವುದರಿಂದ ನಮ್ಮ ದೇಶದಲ್ಲಿ ಸುಖಶಾಂತಿಗಳು ನೆಲಸಿ ನಮ್ಮ ದೇಹ ರಕ್ಷಣಾ ಕಾರ್ಯವಾದರೂ ಸರಿಯಾಗಿಯೋ ತಪ್ಪಾಗಿಯೋ ಇಷ್ಟುಮಟ್ಟಿಗಾದರೂ ನಡೆಯುತ್ತಿದೆ. ಇಲ್ಲದಿದ್ದರೆ ನಮ್ಮ ಗತಿ ಏನು? ನಮ್ಮನ್ನು ರಕ್ಷಿಸುವ ಕಾರ್ಯವು ಅವರ ತಲೆಯ ಮೇಲೆ ಬಿದ್ದಿರುವ ಭಾರ; ಅವರ ತಲೆಬುರುಡೆ ಗಳು ಗಟ್ಟಿಯಾಗಿರುವತನಕ ನಮಗೆ ಸುತಾರಾಂ ಭಯವಿಲ್ಲ. ಎಲ್ಲಿದ್ದರೂ ಎಲ್ಲಿ ಹೋದರೂ ಭಯವಿಲ್ಲ; ‘ಭಯವಿಲ್ಲ ನಡೆಯಿರಿ ಸಾರ್, ಏನು ಹೆದರಿಕೆ ಬಂದದ್ದು, ನಾವು ಆರು ಜನ ಒಟ್ಟಿಗೆ ಇದ್ದೇವೆ’ ಎಂದೆ ನಾನು.

‘ಆರು ಜನ ಇದ್ದರೂ ಒಂದೆ, ಅರುವತ್ತು ಜನ ಇದ್ದರೂ ಒಂದೆ. ನಿನ್ನೆ ರಾತ್ರಿ ನೋಡಿದಿರೂ ಇಲ್ಲವೊ!’- ಎಂದು ಉತ್ತರ ಬಂದಿತು. ನನ್ನ ಶೌರ್ಯದ ಪ್ರತಾಪ ಅಡಗಿಹೋಯಿತು. ದೊಡ್ಡವರು ಅರುವತ್ತು ವರುಷಗಳ ಅನುಭವದಿಂದ ಹೇಳುವ ಮಾತು ಅಸತ್ಯವಲ್ಲವೆಂದು ಬೇರೆ ನಮಗೆ ಸಿದ್ಧಾಂತ. ಅವರು ಹೇಳಿದ್ದೂ ನಿಶ್ಚಯವೇ.

ಮೂರ್ತಿ – ‘ಓಹೋ ಶ್ರೀಕಂಠಯ್ಯನವರೂ ನಾನೂ ಇರುವಾಗ ನಿಮಗೆಲ್ಲ ಭಯವೇಕೆ? ನನಗೆ ದೊಣ್ಣೆ, ಪಿಸ್ತೂಲ್, ಜುಜಿಟ್ಸು ಎಲ್ಲ ಅಭ್ಯಾಸವಿದೆ. ಹುಳುಹುಪ್ಪಟೆ ಏನು ಮಾಡ್ಯಾವು? ತಂಟೆಖೋರರು ಬಂದರೆ ಶ್ರೀಕಂಠಯ್ಯ ಒಬ್ಬರು ಸಾಲದೆ? ಅವತ್ತು ದೇವರಾಯನ ದುರ್ಗದ ದಾರಿಯಲ್ಲಿ ನೋಡಿದಿರೊ ಇಲ್ಲವೊ? ಹುಳುಹುಪ್ಪಟೆ ಹೆದರಿಸುವುದಕ್ಕೆ ದಾರಿಯಲ್ಲಿ ಎಲ್ಲರೂ ಕೈಚಪ್ಪಾಳೆ ಹೊಡೆದುಕೊಂಡು ಆ ರಾತ್ರಿ ಹೋದ ಹಾಗೆ ಈಗಲೂ ಹೋಗೋಣ ನಡೀರಿ’ ಎಂದು ಕೈಚಪ್ಪಾಳೆ ಹೊಡೆಯುವುದಕ್ಕೆ ಮೊದಲು ಮಾಡಿದರು.

ನನಗೆ ರೇಗಿತು; ಮೂರ್ತಿ ನನ್ನನ್ನು ಹೀಗೆ ಅಲ್ಲಗಳೆದದ್ದು ನನಗೆ ಸಹಿಸಲಿಲ್ಲ. ಧೈರ್ಯಕ್ಕೂ ಶಕ್ತಿಗೂ ಆಳು ದಪ್ಪ ದಪ್ಪಗೆ ಉದ್ದುದ್ದಕ್ಕೆ ಆಕಾರ ಇದ್ದು ನೂರ ಐವತ್ತು ಪೌಂಡು ತೂಕ ಇದ್ದು ಬಿಟ್ಟಮಾತ್ರಕ್ಕೆ ಸಾಕೆ ? ನಿಸ್ಸಾರವಾಗಿ ತೂಕವಿಲ್ಲದೆ ಹೊರಗೆ ಕಂಡಮಾತ್ರಕ್ಕೇ ನಮ್ಮಲ್ಲಿ ಧೈರ್ಯವೂ ಶಕ್ತಿಯೂ ಇರಕೂಡದೆ? ಲೇವಡಿ ಮಾಡುವುದಕ್ಕೆ ಏನು ಖರ್ಚಾಗಬೇಕು ಹೇಳಿ. ಯಾರು ಮಾಡುವುದಕ್ಕಾಗುವುದಿಲ್ಲ? ನಾಳೆ ವೈಕುಂಠದಿಂದ ವಿಷ್ಣುವೇ ಎದುರಿಗೆ ಬಂದು ನಿಂತರೂ ಅರ್ಧಗಂಟೆಯ ಕಾಲದಲ್ಲಿ ಅವನನ್ನು ಲೇವಡಿ ಮಾಡಿ ಪುನಃ ಸ್ವಸ್ಥಾನಕ್ಕೆ ಓಡಿಸಿಬಿಡುವುದು ಕಷ್ಟವೇನೊ ಮಹಾ; ನಾನು ಲೇವಡಿ ಮಾಡಲಾರೆನೊ! ಅಂದುಕೊಂಡೆ. ಒಂದು ಸಂಗತಿ ಮಾತ್ರ ಹೇಳಿಕೊಳ್ಳಲೇಬೇಕು. ಆದರೆ, ನನ್ನಲ್ಲಿ ಶಕ್ತಿ ಧೈರ್ಯಗಳಿಗೇನೂ ಕಡಮೆಯಿಲ್ಲವಾದರೂ ಅವಕ್ಕಿಂತಲೂ ಸ್ವಾಭಿಮಾನ ಹೆಚ್ಚು. ಪ್ರಪಂಚದಲ್ಲಿ ಸುಮಾರು ಎಲ್ಲರೂ ಹಾಗೆಯೇ ಎಂದು ನನ್ನ ಭಾವನೆ. ಕೆಲವರು ಅದನ್ನು ಹೊರಗೆ ತೋರಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಒಳಗೇ ದಮನ ಮಾಡಿಟ್ಟುಕೊಂಡಿರುತ್ತಾರೆ. ಇಷ್ಟೇ ಜನರಲ್ಲಿ ವ್ಯತ್ಯಾಸ. ‘ನೀನು ಹೇಡಿ’ ಎಂದು ಹೇಳಿದರೆ ಕೋಪಿಸಿಕೊಳ್ಳದ ನರಾಧಮನೂ ನೀನು ಧೀರನೆಂದರೆ ಹಿಗ್ಗದ ನರನೂ ಈ ಪ್ರಪಂಚದಲ್ಲಿ ಇಲ್ಲವೆಂದೇ ನನ್ನ ಅಭಿಪ್ರಾಯ. ಅಂತು ನಾನೇನೊ ಬಹಳ ಹುರುಡಿನಿಂದ ಮುಂದೆ ಮುಂದೆ ನಡೆಯತೊಡಗಿದೆ. ಸ್ವಲ್ಪಹೊತ್ತು ಹಾಗೆಯೇ ನಡೆದದ್ದಾಯಿತು. ಹೆಜ್ಜೆ ಮಾತ್ರ ನಿಸ್ಸಂಕೋಚ ವಾಗಿ ಹೆಚ್ಚು ಹೆಚ್ಚು ಭಾರವಾಯಿತು. ಕ್ರಮವಾಗಿ ಹಿಂದೇಟು ಹಾಕತೊಡಗಿತು. ಎಷ್ಟೋ ವಿಧವಾಗಿ ಪಾದಗಳಿಗೆ ನಾನು ಬುದ್ದಿ ಹೇಳಿಕೊಟ್ಟೆ. ಸಮಯಾಸಮಯ ಪರಿಜ್ಞಾನವಿಲ್ಲದೆ ನನ್ನನ್ನು ಅಪಮಾನಕ್ಕೆ ಗುರಿಮಾಡಿಸಬೇಕೆಂಬ ಅಭಿಲಾಷೆ ಅವಕ್ಕಿದ್ದರೆ ನಾನು ಏನನ್ನು ತಾನೆ ಮಾಡುವುದಕ್ಕಾದೀತು? ಸಾಂದ್ರವಾಗಿ ಕವಿದ ಕತ್ತಲು ಸುತ್ತಲೂ ಮುತ್ತಿದ್ದುದರಿಂದ ನನ್ನ ಆಗಿನ ದುರವಸ್ಥೆಯನ್ನು ನೋಡಿ ಯಾರೂ ನಗುವಹಾಗಿರಲಿಲ್ಲ. ಮೂರ್ತಿ ನನ್ನ ವಿಷಯಗಳಲ್ಲಿ ಬಾಯಿಗೆ ಬೀಗಹಾಕಿ ಅದನ್ನು ಬಿಗಿಹಿಡಿಯುವ ಅಭ್ಯಾಸವನ್ನೇ ಮಾಡಿದವರಲ್ಲ. ಪಾಪ, ಈ ಮನುಷ್ಯನ ಮನಸ್ಸನ್ನು ಏಕೆ ನೋಯಿಸಬೇಕೆಂದು ಲೆಕ್ಕವಿಲ್ಲ, ಕನಿಕರವಿಲ್ಲ. ‘ಎಲ್ಲರ ಜೊತೇಲೆ ಬನ್ರಿ, ಮಹಾರಾಯಾರಾ, ಸುರಕ್ಷಿತವಾಗಿ ಊರು ಸೇರಿಕೊಳ್ಳೋಣ. ಎಲ್ಲಾದರೂ ಬಿದ್ದು ಕಾಲುಗೀಲು ಮುರಿದುಕೊಂಡು ಲಂಗಡೇ ಆಗೀರಿ!’ ಎಂದರು. ಅದೇ ಸಮಯ!… ಆದರೂ ಅವರ ಉದ್ಯಮಕಂಟಕತನದ ವಿಚಾರವಾಗಿ ಅವರಿಗೆ ಕೇಳಿಸುವಂತೆ ಗೊಣಗಾಡಿಕೊಳ್ಳುತ್ತ ಎಲ್ಲರ ಜೊತೆಗೇ ನಡೆಯತೊಡಗಿದೆ. ನಮ್ಮಲ್ಲಿ ಯಾರಿಗೂ ಮಾತನಾಡಬೇಕು ಎಂದು ಕೂಡ ಅನ್ನಿಸಲಿಲ್ಲ. ಮಾತೂ ಭಾವಗಳೂ ತಾಮಸೀ ವೃತ್ತಿಯ ಮನಸ್ಸಿನ ಅರೆಮಬ್ಬಿನಲ್ಲಿ ಎಲ್ಲಿಯೊ ಅಡಗಿಹೋಗಿದ್ದುವು. ಕಣ್ಣಿಗೆ ಕಾಣದೆ, ಸುಲಭವಾಗಿ ಮನಸ್ಸಿನ ವಿಭಜನ ವಿಶ್ಲೇಷಗಳಿಗೆ ಸಿಕ್ಕದ ಯಾವುದೊ ಒಂದು ಶಕ್ತಿ ಹೃದಯವನ್ನೂ ಮನಸ್ಸನ್ನೂ ದುಸ್ಸ್ವಪ್ನಸಮಯಗಳಲ್ಲಾಗುವಂತೆ, ಮೇಲೆ ಮೇಲೆ ಅದು ಮುತ್ತಿತ್ತು.

‘ಈಗ ಎಲ್ಲಿದ್ದೇವಯ್ಯ, ಚೆನ್ನಯ್ಯ?’ ಎಂದರು ರಾಯರು. ಅವನು, ‘ಆಗ ತೊರಿಸಿದೆನಲ್ಲ ಸ್ವಾಮಿ, ಸೀತಮ್ಮನೋರು ಒಡವೆ ಬಿಸಾಕಿದ ಸ್ಥಳ ಎಂದು, ಅಲ್ಲಿಗೆ ಬಂದಿದ್ದೇವೆ’ ಎಂದನು. ತಲೆಯ ಮೇಲೆ ಮೋಡ ಗುಡುಗು ಮಿಂಚು ಇವು ತಮಗೆ ಬೇಕಾದಂತೆ ಸಂಚರಿಸುತ್ತ ಭಯಂಕರವಾಗಿದ್ದುವೆಂದು ಹಿಂದೆಯೇ ಹೇಳಿರುವೆನಷ್ಟೇ. ಈಗ ಹೃದಯವಿದ್ರಾವಕವಾಗಿ ದೇಹಪಂಜರದ ಕೀಲುಗಳು ಕಳಚಿ ಪುಡಿಪುಡಿಯಾಗುವುವು ಎಂಬಂತೆ ಎದುರಿನಿಂದ ಆರ್ಭಟಿಸಿ ಒಂದು ಸಿಡಿಲು ಸಿಡಿಯಿತು. ಮೇಲೆ ನಾವು ನಡೆದು ಹೋಗುತ್ತಿರುವಾಗ, ಕಾಲ್ಕೆಳಗಿನ ಭೂಮಿ ಕಂಪಿಸಿ ಆ ಕಂಪನ ರಭಸ ನಮ್ಮಲ್ಲರನ್ನೂ ಐವತ್ತು ಅಡಿ ಮೇಲಕ್ಕೆ ಎತ್ತಿ ಹಾಕಿ ಬಿಟ್ಟಿದ್ದರೆ ನಮ್ಮ ಆತ್ಮ ಹೇಗೆ ತಲ್ಲಣಿಸಿ ಹೋಗಬಹುದಿತ್ತೊ ಅದಕ್ಕಿಂತಲೂ ಹತ್ತರಷ್ಟು ಪ್ರಬಲವಾದ ತಲ್ಲಣ ಉಂಟಾಯಿತು. ಅದು ಸುತ್ತಲ ಪ್ರದೇಶವನ್ನು ಹತ್ತಿಸಿ ಉರಿಸಿ ತನ್ನ ವಿದ್ಯುನ್ಮೊನೆ ರೌದ್ರಗಳಿಂದ ತಿವಿದುಕೊಂಡು ಹೋಗುವುದನ್ನು ಆ ಸನ್ನಿವೇಶದಲ್ಲಿ ಅನುಭವಿಸಬೇಕು! ಅದು ಎಂಥುದೆಂಬುದು ತಿಳಿಯುವುದು. ಅದರ ಚಿತ್ರವನ್ನಾಗಲಿ ಆಗಿನ ನಮ್ಮ ಮನೋಭಾವವನ್ನಾಗಲಿ ಲೇಖನಿಯ ವರ್ಣನೆಯಿಂದ ವರ್ಣಿಸುವುದು ಹೇಗೆ ಸಾಧ್ಯ? ತಕ್ಷಣದಲ್ಲಿಯೇ ನಾಲ್ಕಾರು ಹಸಿಹಸಿರು ತಾಳೆಮರಗಳು ಭಗ್ಗನೆ ಹತ್ತಿಕೊಂಡು ಬೆಳ್ಳಗೆ ಸೂರ್ಯಕಾಂತಿಯಂತಿರುವ ಕಾಂತಿಯಿಂದ ಬೆಳಗಿ ಉರಿದುವು. ಒಂದು ನೂರು ವಾಷಿಂಗ್‌ಟನ್ ದೀಪಗಳ ಕಾಂತಿ ಒಂದೇ ದೀಪದಲ್ಲಿ ಒಮ್ಮೊನೆಯಲ್ಲಿ ಉರಿಯುತ್ತಿದ್ದರೆ ಬೆಳ್ಳುರಿ ಯಾವ ರೀತಿ ಇರಬಹುದೊ ಆ ರೀತಿ ಇತ್ತು. ಬೆಳ್ಳುರಿ ನಿಂತು, ಮೇಲಿಂದ ಕಿಡಿಗಳುದುರಿ, ಉರಿ ಕೆಂಪು ತಿರುಗುವುದಕ್ಕೆ ಹತ್ತು ನಿಮಿಷ ಕಾಲ ಹಿಡಿಯಿತು. ಅಬ್ಬಾ! ಏನು ದೃಶ್ಯ ಅದು! ಆಗ ಉಂಟಾದ ನರಗಳ ಕಂಪನ ಆಮೇಲೆ ಸುಮಾರು ಅರ್ಧಗಂಟೆಯವರಿಗೆ ನಾಳನಾಳದಲ್ಲಿಯೂ ಚರ್ಮಕೂಪಗಳಲ್ಲಿಯೂ ಸೇರಿಕೊಂಡು ಮೈಯನ್ನು ನಡುಗಿಸಿತು. ಅಂಥದನ್ನು ಹಿಂದೆ ಅನುಭವಿಸಿರಲಿಲ್ಲ.