ಗೀತೆಗಳು ನನ್ನ ಮೊದಲ ಭಾವಗೀತೆಗಳ ಪುಸ್ತಕವಾಗಿ ಅಚ್ಚಾಗುವ ಮುಂಚೆಯೇ ಮೊದಲ ಗದ್ಯಪುಸ್ತಕ ಪಂಪಾಯಾತ್ರೆ ಪ್ರಕಟವಾಯಿತು. ಮೊದಲು ಪ್ರಬುದ್ಧ ಕರ್ಣಾಟಕ ನಾಲ್ಕು ಸಂಚಿಕೆಗಳಲ್ಲಿ ಭಾಗಶಃ ಪ್ರಕಾಶಗೊಂಡಿತು. ಒಂದೇ ಸಾಲುಸಂಚಿಕೆಗಳಲ್ಲಿ ಶ್ರೀ ಮಾಸ್ತಿಯವರ ಸುಬ್ಬಣ್ಣವೂ ಇದೂ ಅಚ್ಚಾದುದು ನನ್ನ ಅತಿಶಯ ಹಿಗ್ಗಿಗೆ ಕಾರಣವಾಗಿತ್ತು. ಸುಬ್ಬಣ್ಣದಂಥ ಪುಸ್ತಕ ಕನ್ನಡ ಕಥಾಪ್ರಪಂಚಕ್ಕೆ ಹಿರಿದು. ಅದರ ಅಡಕ, ಕಲಾವಿಚಕ್ಷಣೆ, ಮಾನವಜೀವನದ ಆಳದಲ್ಲಿ ಕಾರ್ಯ ಮಾಡುವ ಪ್ರವೃತ್ತಿಗಳ ಅಂತರ್ದೃಷ್ಟಿ, ಆಗ್ಗೆ ಅಷ್ಟೇನೂ ಹಿಂದಿನ ಕಾಲದ್ದಲ್ಲದ ಮೈಸೂರಿನ ಗೃಹಜೀವನ, ಅದರ ರಾಗರಂಜನೆ, ಕಲ್ಲಿನ ಹಾಗಿದ್ದ ಒಂದು ಜೀವ ಹೇಗೆ ಮೃದುವಾಗಿ ತನ್ನ ಬಗೆಯ ಸಿದ್ದಿಯನ್ನೂ ಪರಿಣಾಮ ರಮಣೀಯತೆಯನ್ನೂ ಪಡೆಯಿತು ಎಂಬ ಚಿತ್ರ ಸ್ವಲ್ಪ ಅವಕಾಶದಲ್ಲಿ ತುಂಬಿಕೊಂಡು ಅಲ್ಲಿ ರೂಪಗೊಂಡ ಹಾಗೆ ನಮ್ಮ ಕಡೆಯ ಇತರ ಯಾವ ಕಥೆಗಳಲ್ಲಿಯೂ ಆಗಿರಲಿಲ್ಲ. ಅದರ ಜೊತೆಯಲ್ಲಿ ಈ ಯಾತ್ರೆ ಪ್ರಕಟಗೊಂಡುದು ನನಗೆ ತುಂಬಾ ಅಭಿಮಾನದ ಸಂಗತಿ, – ಎಂದಿಗೂ.

ಇದು ಇದರ ಐದನೆಯ ಆವೃತ್ತಿ. ಹೊಸದಾಗಿ ಯಾವುದನ್ನೂ ಸೇರಿಸ ಹೋಗಿಲ್ಲ. ಅಲ್ಲಿ ಇಲ್ಲಿ ಒಂದೆರಡು ಮಾತೊ ಶಬ್ದರೂಪವೊ ಮಾರ್ಪಟ್ಟಿರಬಹುದು. ಐವತ್ತ ಐದು ವರ್ಷಗಳ ಹಿಂದೆ ನಾನು ಬರೆಯತೊಡಗಿದ ಮುಂಚುಮುಂಚೆಯ ಕಾಲದಲ್ಲಿ ಇದ್ದ ಶೈಲಿಯದು. ಮನಸ್ಸು ಇನ್ನೂ ಒಂದು ಪಾಕಕ್ಕೆ ಬರಲು ಪ್ರಯತ್ನಿಸುತ್ತಿತ್ತು. ಪಾಕವೊ: ನಿಂತ ಕಲ್ಲಾದ ಸ್ಥಿತಿ ಅಲ್ಲ; ಆಜೀವ ಕಾಲ ನಡೆವುದು. ಆದರೂ ಆಗ ಇನ್ನೂ ಸಿದ್ಧತೆಯ ಅಥವಾ ಅಭ್ಯಾಸದ, ಆರಂಭದ ಕಾಲ. ಅದಕ್ಕೆ ನನ್ನ ಸ್ನೇಹಿತರು ಆಧಾರವಾದುದರಿಂದ ಆ ಸನ್ನಿವೇಶ ಅಸಾಧಾರಣವಾಯಿತು. ಅವರ ಸಾಹಚರ್ಯ, ಸ್ಥಳದ ಹಿರಿಮೆ, ಅದರ ಚರಿತ್ರೆಯ ಆಳದಲ್ಲಿ ಹುದುಗಿರುವ ರಾಮಾಯಣ ಕಾಲದ, ವಿಜಯನಗರ ಕಾಲದ ಮತ್ತು ಕಲೆಯ ಇತಿಹಾಸದ ಸಾಂಗತ್ಯ ಅದಕ್ಕೆ ಒಂದು ವಿಶೇಷ ಮೆರುಗನ್ನು ಕೊಟ್ಟಿತು. ಈಗ ಇಂಥುದನ್ನು ಬರೆಯಬಲ್ಲೆನೆಂಬ ಧೈರ್ಯ ನನಗಿಲ್ಲ. ಆದರೂ ಇಲ್ಲಿನ ವಾಕ್ಯರಚನೆಯಲ್ಲಿ ಪದಪ್ರಯೋಗ ದಲ್ಲಿ ಇನ್ನಷ್ಟು ನುಣುಪನ್ನೊ ಸಾಂಗತ್ಯ ಸಾಂತತ್ಯಗಳನ್ನೊ ಭಾವಪ್ರಕಾಶನ ಮಾಡುವುದರಲ್ಲಿ ಇನ್ನಷ್ಟು ಸೂಕ್ಷ್ಮವನ್ನೊ ತರಬಹುದಾಗಿತ್ತೆನ್ನಿಸುತ್ತದೆ. ಹೇಗೇ ಆಗಲಿ, ಇದು ಇನ್ನೊಂದು ಸಲ ಅಚ್ಚು ಕಾಣುತ್ತಿದೆ.

ಯಾತ್ರೆಯಲ್ಲಿ ನನ್ನನ್ನು ನಡಸಿಕೊಂಡು ಹಿರಿಯರೆಲ್ಲರೂ ತೀರಿಕೊಂಡಿದ್ದಾರೆ. ಸ್ವಲ್ಪ ಅಲ್ಲಿ ಇಲ್ಲಿ ಏರುಪೇರು ಮಾಡಿದರೆ: ರಾಯರು ಡಿ.ವಿ. ಗುಂಡಪ್ಪನವರು; ಯಜಮಾನರು ಬೆಳ್ಳಾವೆ ವೆಂಕಟನಾರಾಯಣಪ್ಪನವರು; ವೆಂಕಟೇಶಯ್ಯನವರು ಎಂದರೆ ಟಿ. ಎಸ್. ವೆಂಕಣ್ಣಯ್ಯನವರು; ಮೂರ್ತಿ ಎಂದರೆ ಎಂ.ಆರ್. ಶ್ರೀನಿವಾಸಮೂರ್ತಿ. ಆ ಎಲ್ಲರ ಲಕ್ಷಣಗಳೂ ಇಲ್ಲಿ ಕಾಣುತ್ತವೆಯೆಂದಲ್ಲ; ಇಲ್ಲಿ ಕಾಣುವುದೆಲ್ಲ ಪೂರ್ತಿ ಅವರು ಎಂದೂ ಅಲ್ಲ. ಒಟ್ಟಿನಲ್ಲಿ ಜೊತೆಯ ಯಾತ್ರಿಕರು ಇವರು. ಬೆಳಗಾವಿ ಸಾಹಿತ್ಯ ಸಮ್ಮೇಳನ (೧೯೨೫) ಮುಗಿದ ಕೂಡಲೆ ನಾವು ಕೈಗೊಂಡದ್ದು ಈ ಯಾತ್ರೆ ಎಂದು ತಿಳಿಸಿದ್ದೇನೆ. ಯಜಮಾನರು, ರಾಯರು ವಿಜಯನಗರದ ಜೀರ್ಣೋದ್ಧಾರ ಸಂಸ್ಥೆಯ ಸಮಿತಿಗಳಲ್ಲಿ ಕಾರ್ಯಕ್ರಮಗಳನ್ನು ನಡಸಿದವರು. ಆ ಸಾಮ್ರಾಜ್ಯದ ಭಕ್ತಿ ಎಷ್ಟೊ, ಅದರ ಸ್ಥಾಪನೆಗೆ ಸ್ಫೂರ್ತಿಕೊಟ್ಟ ವಿದ್ಯಾರಣ್ಯರಲ್ಲಿ ಅಷ್ಟೇ ಭಕ್ತಿ ಶ್ರದ್ಧೆ ಉಳ್ಳವರು. ವೆಂಕಟೇಶಯ್ಯನವರ ಮನಸ್ಸು ಬಾಯಲ್ಲಿ ಹೆಚ್ಚಾಗಿ ಏನನ್ನೂ ನುಡಿಯದು. ಅದರೂ ಅಂಥ ಭಕ್ತಿಗೌರವಗಳಲ್ಲಿ ನಿರಂತರವಾಗಿ ಲೀನವಾಗಿದ್ದುದು. ಮೂರ್ತಿ ವಯಸ್ಸಿನಲ್ಲಿ ನನಗೆ ಹೆಚ್ಚು ಹತ್ತಿರದವರು. ಆದರೂ ೭-೮ ವರ್ಷ ದೊಡ್ಡವರು. ಸರ್ಕಾರದ ವಿದ್ಯಾ ಇಲಾಖೆಯಲ್ಲಿ ಇನ್ಸ್‌ಪೆಕ್ಟರಾಗಿಯೋ ಅಥವಾ ಒಂದು ಡಿಸ್ಟ್ರಿಕ್ಟ್ ಟ್ರೈನಿಂಗ್ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿಯೊ ಇದ್ದವರು. ಕನ್ನಡ ಸಾಹಿತ್ಯದ ಹತ್ತಾರು ಮಹಾಕಾವ್ಯಗಳನ್ನು – ನಿಜವಾದ ಮಹಾಕಾವ್ಯಗಳನ್ನು-ವಾಚೋವಿಧೇಯ ವಾಗಿ ಉಳಿಸಿಕೊಂಡಿದ್ದವರೂ ನಿಃಸ್ಪೃಹರಾದ, ಪ್ರಾಮಾಣಿಕರಾದ ವಿದ್ಯಾಧಿಕಾರಿಗಳೂ ಬೋಧಕರು ಆಗಿದ್ದವರು. ಒಬ್ಬೊಬ್ಬರೂ ಜೀವದ ತತ್ತ್ವ ಸಾಧನೆಯಲ್ಲಿ, ಚಾರಿತ್ರದಲ್ಲಿ ತಮ್ಮ ತಮ್ಮ ರೀತಿಯಲ್ಲಿ ಮೇಲ್ಮಟ್ಟವನ್ನು ಸಾಧಿಸಿದ್ದವರು. ನಿಂತಲ್ಲಿ ಷಟ್‌ಸ್ಥಲವ ಕಾಂಬರಯ್ಯ ಎಂಬ ಒಂದು ಮಾತು ವಚನಧರ್ಮಸಾಧಕರಲ್ಲಿ ಒಂದು ದೊಡ್ಡ ಸ್ಥಿತಿಯನ್ನು ನಿರ್ದೇಶಿಸುವ ಮಾತು. ನಾನು ಕಂಡಂತೆ ಈ ನಾಲ್ವರೂ ಆ ಛಾತಿಯವರು. ಹಾಗೆ ಅಂದುಕೊಳ್ಳಬಲ್ಲ ಹೆಚ್ಚು ಮಂದಿಯನ್ನು ನಾನು ಕಂಡಿಲ್ಲ. ಈ ನಾಲ್ವರಲ್ಲಿ ನಾನು ಕಪಟ ಕಂಡಿಲ್ಲ. ನನ್ನ ಬದುಕಿನ ದಾರಿಯಲ್ಲಿ ಬೆಳಕು ಹಾಯಿಸಿದ ಹಲವು ಮಹನೀಯರು ಬೇರೆ ಬೇರೆ ಬಗೆಯ ಸಿದ್ದಿಗಳನ್ನು ಪಡೆದು ನನಗೆ ಮಾರ್ಗದರ್ಶನ ಮಾಡಿದರು. ಈ ನಾಲ್ವರಲ್ಲಿ ಕೆಲವರ ಪರಿಚಯವನ್ನು ಸ್ಥೂಲವಾಗಿ ಮಾಡಿಕೊಡಲು ಬೇರೆ ಕಡೆ ಯತ್ನಿಸಿದ್ದೇನೆ.

ಬೆಳಗಾವಿಯಿಂದ ಹೊರಟು ಪುನಃ ಬೆಂಗಳೂರಿಗೆ ಹಿಂತಿರುಗುವವರೆಗೂ ಇವರ ಸಾನ್ನಿಧ್ಯ, ಸಾಹಚರ್ಯ, ಪ್ರೀತಿ, ಮನೋವಿಲಾಸ, ಇವರ ಮಟ್ಟದಲ್ಲಿನ ಮಾತುಕತೆ, ಅಭಿಪ್ರಾಯ ವಿನಿಮಯ, ಅನುಭವಗಳ ಶೋಧನೆ ಹೇಗೆ ನಡೆಯುತ್ತಿದ್ದಿತೆಂಬುದನ್ನು ನಾನು ಬಲ್ಲೆ. ಅದೊಂದು ಅಮೃತಸಂಚಯ. ಆಗ ನನಗಿನ್ನೂ ೨೭ರ ವಯಸ್ಸು. ಆ ಎಳವಿನಲ್ಲಿ ಎಷ್ಟು ಸಂಸ್ಕಾರ ದೊರೆಯಬಹುದೊ ಅಷ್ಟನ್ನು ಮಾತ್ರ ಪಡೆಯಬಹುದಾಗಿತ್ತು. ಈಗ ಅಂಥುದು ದೊರೆತರೆ ಭಾಗ್ಯವಾದೀತು. ಆ ದಿವಸಗಳನ್ನು ಪುನಃ ಎಲ್ಲಿ ತರಲಿ? ಅವನ್ನು ನೆನಸಿಕೊಂಡು ಪುನಃ ಅವಕ್ಕೆ ಕಾಣಿಕೆ ಕೊಡುವ ಇನ್ನೊಂದು ಅವಕಾಶ ದೊರೆತುದಕ್ಕಾಗಿ ನಾನು ನನ್ನ ಭಾಗ್ಯವನ್ನು ನಡಸುತ್ತಿರುವ ಶಕ್ತಿಗಳಿಗೆ ಕೃತಜ್ಞನಾಗಿದ್ದೇನೆ.

ರಾಯರು ಸಾಯುವ ಮುನ್ನ ಹಲವಾರು ವರ್ಷಗಳು ಹಾಸಿಗೆ ಹಿಡಿದಿದ್ದರು. ಆದರೂ ದೇಹದ ಕಷ್ಟ, ಅಶಕ್ತಿಗಳು ಎಷ್ಟೇ ಅವರನ್ನು ಒತ್ತಿ ನೋವಿಗೀಡು ಮಾಡುತ್ತಿದ್ದರೂ ಅವರ ಮನಸ್ಸು, ಆಲೋಚನಾಶಕ್ತಿ, ಭೌಮವಾದ ಅದರ ನಿಲುಕು, ವಿವೇಚನಾವಿಚಕ್ಷಣತೆ ಅಚ್ಚಳಿಯದೆ ಇದ್ದವು. ಹೃದಯದಲ್ಲಿ ಸವಿಮೃದು ಹಣ್ತನ ಇನ್ನಷ್ಟು ವ್ಯಾಪಕವಾಗಿದ್ದವು. ಎಷ್ಟು ವಿವಿಧವಾಗಿ ಲೋಕದ ವಿಚಾರಗಳನ್ನೂ ಮನಸ್ಸಿನ ಕಲ್ಪನೆಗಳನ್ನೂ ಅಭಿಪ್ರಾಯ ಪ್ರಪಂಚವನ್ನೂ ಹೊಕ್ಕುತೂಗಿ ಪರಿಶೀಲಿಸಿ ತೀರ್ಮಾನಗಳಿಗೆ ಬರಬಹುದೊ ಅಷ್ಟೂ ಜಾಗೃತವಾಗಿ ಇದ್ದವು. ಇವನ್ನೆಲ್ಲ ಆವರಿಸಿಕೊಂಡು ಅವರ ಮಾನವತೆ ಹೃದಯಜ್ಞತೆ ಒಂದು ಲಘು ಹಾಸ್ಯ ಭಾವ, ಉಲ್ಲಾಸ, ಅವರ ಎಡೆಗೆ ಹೋದವರಿಗೆಲ್ಲಾ ಎಂದಿನಂತೆಯೇ ದೊರೆಯುತ್ತಿತ್ತು. ಅದನ್ನು ಅರಿತು ಹತ್ತಿರ ಜನಕ್ಕೆ ಎಷ್ಟು ಶಕ್ತಿಸಂತೋಷಗಳನ್ನು ತಂದುಕೊಡುತ್ತದೆಯೊ ಅಷ್ಟುಮಟ್ಟಿಗೆ ರಾಷ್ಟ್ರಕತನದ ಹೊಣೆಗಾರಿಕೆಯನ್ನು ನಿರ್ವಹಿಸುವ, ಈ ದೇಶದ ಹಿತವನ್ನು ಸಾಧಿಸುವ ಕ್ರಿಯಾಕಲಾಪ ಅವರವು. ಆ ಸಂಬಂಧದ ಆಲೋಚನೆಗಳು ಶುದ್ಧವಾಗುತ್ತವೆ. ಅದು ನಂದಾದೀಪವಾಗಲೆಂದು ಹಾರೈಸಿ ಈಗ ಪುನಃ ಅದಕ್ಕೆ ಕಾಣಿಕೆ ಅರ್ಪಿಸುತ್ತಿದ್ದೇನೆ.

ಸೌಹಾರ್ದದಿಂದ ಇದನ್ನು ಓದುವ ಕನ್ನಡದ ಅಭಿಮಾನಿಗಳಿಗೆ ನನ್ನ ವಂದನೆಗಳು. ಮೊದಲಿಂದ ಅನೇಕ ಮಂದಿ ಸ್ನೇಹಿತರನ್ನು ನನಗೆ ದೊರಕಿಸಿ ಕೊಟ್ಟ ಪುಸ್ತಕ ಇದು. ಆ ಸ್ನೇಹವನ್ನು ನೆನಸಿಕೊಂಡು ಅದಕ್ಕೆ ಧನ್ಯವಾದಗಳನ್ನರ್ಪಿಸುತ್ತೇನೆ.