ಹಂಪೆ ಪುಣ್ಯಕ್ಷೇತ್ರ;  ಇಂಥ ಪುಣ್ಯಸ್ಥಳದಲ್ಲಿ ಇಷ್ಟು ಚೇಳು ಮೊಂಡರಕಪ್ಪೆಗಳು ಏಕಿವೆಯೊ ಆ ಪಂಪಾಪತಿಗೇ ಗೊತ್ತು. ಮೊಳದುದ್ದ ಮೊಂಡರಕಪ್ಪೆ, ಗೇಣುದ್ದ ಚೇಳುಗಳೆ? ಈ ಜನರಿಗೆ ಭಯವೇ ಇಲ್ಲವೇನೊ? ಅವರಿಗಂತೂ ಅದು ಸಾಮಾನ್ಯವಾಗಿ ಹೋಗಿದೆ. ಹೊಸದಾಗಿ ಅಲ್ಲಿಗೆ ಆ ದಿನ ತಾನೆ ಹೋಗಿದ್ದ ನಮಗೆ ಮೈಯೆಲ್ಲ ಬೈರಿಗೆ ಹಿಡಿದಂತೆ ಆಗಿತ್ತು. ಏಕಪ್ಪ ಇಲ್ಲಿಗೆ ಬಂದೆವು? ಕಾಮಲಾಪುರದ ಬಂಗಲೆಯಲ್ಲಿ ಇಳಿದುಕೊಂಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಅನಿಷ್ಟವೇನಾದರೂ ಸಂಭವಿಸಿದರೆ ಗತಿಯೇನು? ಇವನನ್ನು ಬೇರೆ ಜೊತೆಯಲ್ಲಿ ಕರೆದುಕೊಂಡು ಬಂದೆವಲ್ಲ ಎಂದು ನನ್ನ ಜೊತೆಯವರು ಪಶ್ಚಾತ್ತಾಪ ಪಡುವುದಕ್ಕೆ ಆರಂಭಿಸಿದ್ದರು. ಅಲ್ಲಿದ್ದವರು, ‘ಭಯವಿಲ್ಲ ಸ್ವಾಮಿ; ಒಂದೇ ಮನಸ್ಸಿನಲ್ಲಿ ಮಲಗಿಕೊಳ್ಳಿ; ಪಂಪಪ್ಪನ್ನ ನಂಬಿ  ನಿದ್ದೆ;   ಹೋಗಿ ಅವು ಏನು ಮಾಡುತಾವೆ?’  ಎಂದರು. ನಮಗೆ ಧೈರ್ಯವಿಲ್ಲ, ಜೀವದಲ್ಲಿ ಜೀವವಿಲ್ಲ. ಇಳಿದುಕೊಂಡಿದ್ದ ಚಿಕ್ಕ ಮನೆಯಿಂದ ಹಾಸುಗೆ ಬಟ್ಟೆಗಳನ್ನೆಲ್ಲ ಹೊರಗೆ ತೆಗೆದುಹಾಕಿ, ಬಟ್ಟೆಬಟ್ಟೆಯನ್ನೂ ಕೋಟುಗಳ ಜೇಬು ಗಳನ್ನೂ ರುಮಾಲುಗಳ ಸಂದಿಪದರಗಳನ್ನೂ ಮಡಿಪೆಟ್ಟಿಗೆ ಪಾರಾಯಣ ಪುಸ್ತಕಗಳ ಚೀಲವನ್ನೂ ಒಂದೊಂದನ್ನಾಗಿ ಕೊಡವಿ, ಒದರಿ, ಚೇಳು ಹಾವುಗಳಾವುವೂ ಇಲ್ಲವೆಂದು ನಿಶ್ಚಯ ಮಾಡಿಕೊಂಡು, ಎಲ್ಲವನ್ನೂ ಹೊತ್ತುಕೊಂಡು ದೇವಸ್ಥಾನದ ಒಳಮಂಟಪಕ್ಕೆ ತೆಗೆದುಕೊಂಡು ಹೋಗಿ, ದೊಡ್ಡದೊಂದು ದೀಪದ ಬೆಳಕಿನಲ್ಲಿ ಒಬ್ಬರು ಕಾವಲು ಕುಳಿತೆವು. ಎದೆಯಲ್ಲಿ ಪುಕಪುಕ ಭಯ. ದೀಪವಿದೆ?  ಪಂಪಾಪತಿಯ ಅತಿನಿಕಟ ಸಾನ್ನಿಧ್ಯದಲ್ಲಿದ್ದೇವೆ; ಅವನು ನಡಸಿದಂತಾಗಲಿ ಎಂದು ಸಮಾಧಾನವನ್ನೂ ಧೈರ್ಯವನ್ನೂ ಹೇಳಿಕೊಂಡು ಮಲಗಬಾರದೆ? ಉಹುಂ. ಬಾಯಿ ಧೈರ್ಯ ಹೇಳುತ್ತಿದ್ದರೂ ಮನಸ್ಸು ಕೇಳಬೇಕಲ್ಲ. ಎಲ್ಲರೂ ಊಟಮಾಡಿ ಹಾಸುಗೆಗಳನ್ನು ಒಬ್ಬರ ಪಕ್ಕದಲ್ಲಿ ಒಬ್ಬರು  ಒತ್ತಾಗಿ ಹಾಸಿ ಮಲಗಿಕೊಂಡೆವು. ನಡುನಡುವೆ ಹೆಚ್ಚಾಗಿ ಜಾಗ ಬಿಡಕೂಡದೆಂದು ಕರಾರು ನಡೆಯಿತು. ಒಪ್ಪಂದದ ಮೇರೆಗೆ ಒತ್ತೊತ್ತಾಗಿ ಮಲಗಿದೆವು. ನಮ್ಮ ಐವರ ತಲೆ ಭಾಗಗಳಿಗೆ ನಡುವೆ ದೀಪವೊಂದು ಉರಿಯುತ್ತಿತ್ತು. ಅದು ಹಾಗೆಯೇ ರಾತ್ರಿಯೆಲ್ಲ ಉರಿಯುತ್ತಿರಬೇಕೆಂದು ನಿರ್ಣಯವಾಗಿತ್ತು. ಪಂಪಾಪತಿ ವಿರೂಪಾಕ್ಷೇಶ್ವರನ ದಿವ್ಯ ಸನ್ನಿಧಿಯಲ್ಲಿ ಕೂಡ ಅಷ್ಟು ಪ್ರಕಾಶಮಾನವಾದ ‘ಅಖಂಡ’ ದೀಪವಿತ್ತೋ ಇಲ್ಲವೊ ತಿಳಿಯದು. ಮೊದಲೆ ಎಚ್ಚರದಿಂದ ಇರಬೇಕೆಂದೂ ಅಕಸ್ಮಾತ್ ಅನಿಷ್ಟ ಸಂಭವಿಸಿದರೆ ಏನು ಮಾಡಬೇಕೆಂದೂ ನಾವಂತೂ ಪರತ್ತುಗಳನ್ನು ಮಾಡಿಕೊಂಡೇ ಇದ್ದೆವಲ್ಲ. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಕದಲುಮೆದಲದೆ, ಮುತ್ತಿಬರುವ ವಿಷಪ್ರಾಣಿಗಳ ಯೋಚನೆಯನ್ನು ಮನಸ್ಸಿನಿಂದ ಸರ್ವಪ್ರಯತ್ನದಿಂದಲೂ ದೂರ ಮಾಡುತ್ತ, ಸುಮಾರು ಕಾಲುಗಂಟೆಯ ಕಾಲ ಹಾಗೆಯೇ ಕಳೆದೆವು. ತಟ್ಟನೆ ಮೂರ್ತಿಗಳು ಅಂಬಿನಂತೆ ಮೇಲಕ್ಕೆಗರಿ ನಿಂತು ಷರಟು ಪಂಚೆಗಳನ್ನು ಕೊಡವಿಕೊಂಡರು. ಹಾಸುಗೆ ಬಟ್ಟೆಗಳನ್ನು ಕಾಲಿನಿಂದ ಒದ್ದು, ಚೆಲ್ಲಾಡಿ ನಮ್ಮ ಕಡೆ ಬಂದು ಎಲ್ಲರನ್ನೂ ಎಬ್ಬಿಸಿಬಿಟ್ಟರು. ‘ಏಳ್ರಿ, ಏನೋ ಮೇಲೆ ಬಿತ್ತು; ಹರಿದುಹೋಯಿತು; ಮೈಯೆಲ್ಲ ತಣ್ಣಗಾದಂತಾಯಿತು ’ ಎಂದರು.  ಅಧಿಕಾರಿಯ ಜೋಡಿನ ಸಪ್ಪಳವನ್ನು ಕೇಳಿ ತೂಕಡಿಸುವ ಗುಮಾಸ್ತರು ಬೆಚ್ಚಿಬಿದ್ದು ಏಳುವಂತೆ ಎಲ್ಲರೂ ಎದ್ದು, ಬಟ್ಟೆಗಳಿಂದ ದೂರ ಸರಿದು ನಿಂತೆವು. ದೀಪವನ್ನು ಮೇಲೆತ್ತಿ ಒಬ್ಬರು ಹಿಡಿದುಕೊಂಡರು. ನಾವು ಮೂವರು ಸುಮ್ಮನೆ ಕಕ್ಕಾಬಿಕ್ಕಿಯಾಗಿ ನೋಡುತ್ತ ಕಿಂಕರ್ತವ್ಯಮೂಢರಾಗಿ ನಿಂತೆವು;  ನನ್ನ ಮೈಗೂದಲು ನಿಮಿರಿನಿಂತವು; ಯಜಮಾನರು ಹತ್ತಿರವಿದ್ದ ಒಂದು ಗುಜ್ಜುಗೋಲನ್ನು ಹಿಡಿದುಕೊಂಡು ಬಂದರು. ಅದೇನೊ ಎಲ್ಲಿ ಹೋಯಿತೊ ಎಂದು ನಾಲ್ಕೂ ಕಡೆ ಹುಡುಕುವುದಕ್ಕೆ ಮೊದಲಾಯಿತು. ಯಾರಿಗೂ ಹಾಸುಗೆಗಳ ಹತ್ತಿರ ಹೋಗಿ ಅವನ್ನು ಮುಟ್ಟುವುದಕ್ಕೆ ಮಾತ್ರ ಧೈರ್ಯ ಇಲ್ಲ. ಯಜಮಾನರೇ ಮುಂದೆ ಬಂದರು. ‘ಬೇಡಿ ಸಾರ್, ಸ್ವಲ್ಪ ತಾಳಿ, ಏನೊ – ಹೇಗೊ’ ಎಂದು ನಾವು ನಾಲ್ವರೂ ಹೇಳಲು ಅವರು ಹಿಂದೆ ಸರಿದು ನಿಲ್ಲಬೇಕಾಯಿತು. ನಮ್ಮ ಈ ದುಃಸ್ಥಿತಿಯ ಹುಚ್ಚುಸಂಭ್ರಮವನ್ನು ದೂರದಿಂದ ನೋಡಿದ ಬೈರಾಗಿ ಚೆನ್ನಯ್ಯನು ಅಲ್ಲಿಗೆ ಬಂದು ಎಲ್ಲವನ್ನೂ ಹುಡುಕಿದನು. ಎಲ್ಲಿಯೂ ಯಾವುದೂ ಕಾಣಲಿಲ್ಲ. ಹಾಸುಗೆಗಳನ್ನೆಲ್ಲ ಪುನಃ ಕೊಡವಲು, ಕತ್ತಲೆಯಲ್ಲಿ ಜಾಗ್ರತೆ ಜಾಗ್ರತೆಯಾಗಿ ನನ್ನ ಕಡೆಗೇ ಹರಿದು ಕಪ್ಪಗೆ ಬರುತ್ತಿರುವ ಪ್ರಾಣಿಯೊಂದು ಕಾಣಿಸಿತು. ಚೆನ್ನಯ್ಯನು ನೋಡಿದನು. ಚೇಳೂ ಅಲ್ಲ, ಹಾವೂ ಅಲ್ಲ;   ‘ಏನು ಸ್ವಾಮಿ ನಿಮಗೇಕೆ ಇಷ್ಟು ಗಾಬರಿ?  ಜೇಡರ ಹುಳ ಬಂದರೆ ಹೀಗೆ ಹುಚ್ಚು ಕುಣಿತ ಷುರುಮಾಡಿದ್ದೀರಲ್ಲ’ ಎಂದು ಚಪ್ಪಾಳೆ ಹೊಡೆದುಕೊಂಡು ಮೊಳಕಾಲು ಬಡಿದುಕೊಂಡು ನಗುವುದಕ್ಕೆ ಪ್ರಾರಂಭಿಸಿದನು. ಬೇರೊಂದು ಸಮಯದಲ್ಲಿ ಯಾರಾದರೂ ಈ ರೀತಿ ಮಾತನಾಡಿದ್ದರೆ ಅವರಿಗೆ ಗ್ರಹಚಾರ ಬಿಡಿಸುತ್ತಿದ್ದೆವು. ಇತರರಿಗೆ ಗ್ರಹಚಾರ ಬಿಡಿಸುವ ವಿಷಯದಲ್ಲಿ ನಮ್ಮಲ್ಲಿ ಯಾರಿಗೆ ಯಾರೂ ಕಡಿಮೆ ಯಾದವರಲ್ಲ. ಬಂದ ಕೋಪವನ್ನು ನುಂಗಿಕೊಂಡು ಅವನ ಜೊತೆಯಲ್ಲಿ ವೀರಾಳುಗಳು ನಾವೂ ನಗುತ್ತ ನಿಂತೆವು. ರಾಯರು ಇದ್ದವರು, ‘ಮೂರ್ತಿ, ಒಳ್ಳೆಯ ಕೆಲಸ ಕೊಟ್ಟಿರಿ ಕಾಣ್ರಿ;  ಎಂಥ ದಿಗಲು ಹಚ್ಚಿಬಿಟ್ಟಿರಿ’ ಎಂದರು. ಮೂರ್ತಿಗಳು ‘ನಾನೇನು ಸಾರ್ ಮಾಡಲಿ; ಏನೋ ಮೇಲೆ ಬಿತ್ತು; ಎಷ್ಟೋ ಹೊತ್ತು ನೋಡೋಣ ಎಂದು ಸುಮ್ಮನೆ ಇದ್ದೆ; ಮುಲಮುಲ ಎಂದು ಮೈಮೇಲೆ ಹರಿಯಿತು. ಆಮೇಲೆ ಇದೇನು ಬಂತಪ್ಪ ಗ್ರಹಚಾರ ಇಲ್ಲಿ ಮಲಗಿದ್ದರೂ ಎಂದುಕೊಂಡವನು ಎದ್ದುಬಿಟ್ಟೆ. ಜೇಡರ ಹುಳು ಆಗೋ ಹೊತ್ತಿಗೆ ಸರಿಹೋಯಿತು! ಇನ್ನೇನಾದರೂ ಆಗಿದ್ದಿದ್ದರೆ? ಈ ಹುಳು ತಾನೆ ನೋಡಿ ಸಾರ್, ಅಷ್ಟು ದೊಡ್ಡದನ್ನು ಎಲ್ಲಿಯೂ ನೋಡಿಲ್ಲ  ನಾನು’  ಎಂದರು. ಯಜಮಾನರು ‘ಎಲ್ಲರೂ ಸರಿಯೆ ಬಿಡಿ, ಅಸಹಾಯಶೂರರು. ನಮಗೆಲ್ಲ ಇಷ್ಟು ಧೈರ್ಯ ಇರುವ ಹೊತ್ತಿಗೇ ನಮ್ಮ ದೇಶೋದ್ಧಾರಕಾರ್ಯ ಈ ಗತಿಗೆ ಬಂದದ್ದು’ ಇತ್ಯಾದಿಯಾಗಿ ಒಂದು ದೊಡ್ಡ ಉಪನ್ಯಾಸ ವನ್ನು ಕೊಟ್ಟರು. ಇಷ್ಟಾದ ಮೇಲೂ ನಮ್ಮ ಕಷ್ಟ ನಿವಾರಣೆಯಾಗಲಿಲ್ಲ;  ನಮ್ಮ ಪಿರಿಕಿತನ ದೂರವಾಗಲಿಲ್ಲ.

‘ಹಾಸುಗೇ ಗೀಸುಗೆ ಹಾಗೇ ಇರಲಿ, ಸಾರ್;  ನೀವು ಯಾರೂ ಏನು ಬೇಕಾದರೂ ಮಾಡಿಕೊಳ್ಳಿ, ನಾನಂತೂ ಮಲಗಿಕೊಳ್ಳುವುದಿಲ್ಲ’ ಎಂದು ವೆಂಕಟೇಶಯ್ಯನವರು ಹೇಳಿದರು.

ಯಜ- ಇನ್ನೇನು ಮಾಡುತ್ತೀರಿ, ಆದರೆ?

ವೆಂ -ಹೀಗೇ ಕೂತುಕೊಂಡೊ ನಿಂತುಕೊಂಡೊ ರಾತ್ರಿ ದಬ್ಬುತ್ತೇನೆ.

ರಾಯರು -ನನಗೂ ಹಾಗೇ ತೋರುತ್ತೆ, ಸಾರ್ ; ದೇವರು ಗೀವರು

ಎಲ್ಲ ಸಾಕು. ಚೇಳಿನ ಕೊಂಡಿಯ ದರುಶನದಿಂದಲೇ ಮುಕ್ತಿ

ಬಂದಿತು. ಬೆಳಗಾಗುತ್ತಲು ಇಲ್ಲಿಂದ ಹೊರಟು, ಊರಿಗೆ ಹೋಗಿ

ಸೇರಿಕೊಳ್ಳೋಣ; ಇಲ್ಲಿರುವುದಕ್ಕೆ ನನ್ನ ಕೈಲಿ ಸುತರಾಂ

ಆಗುವುದಿಲ್ಲ; ಮಧ್ಯಾಹ್ನ ನೋಡಿದ್ದೇ ಸಾಕು. ಈಗಲೇ ಮೂಟೆ

ಕಟ್ಟಿ ಹೋರಡು ಅಂದರೂ ನಾನು ಸಿದ್ಧ.

ಆಗ ಸುಮಾರು ನಮ್ಮಲ್ಲಿ ಎಲ್ಲರಿಗೂ, ವಿಶೇಷವಾಗಿ ಐವರಲ್ಲಿ ಮೂವರಿಗೆ, ಅದೇ ಭಾವನೆ – ಒಳಗೆ ಮನಸ್ಸಿನಲ್ಲಿ;  ಆದರೆ ‘ಇಷ್ಟು ದೂರ ಬಂದು ಪಂಪಾ ಸರೋವರ, ವಿಟ್ಠಲಸ್ವಾಮಿ ಗುಡಿ, ಇವನ್ನು ನೋಡಿಕೊಂಡು ಹೋಗದಿದ್ದರೆ ಏನಪ್ಪ’ ಎಂದು ಮುಂತಾಗಿ ಮಾತು ಬೆಳೆಯಲು, ‘ಬೆಳಗಾಗಲಿ; ಯಾವುದೊಂದೂ ತೀರ್ಮಾನ ಮಾಡೋಣ, ಈಗ ಸಮಯ ಚೆನ್ನಾಗಿಲ್ಲ’ ಎಂದು ಎಲ್ಲರೂ ಮನಸ್ಸು ಬಿಗಿಹಿಡಿದು ಪುನಃ ಹಾಗೂ ಹೀಗೂ ಧೈರ್ಯಮಾಡಿ ಮಲಗಿಕೊಂಡೆವು. ಭಯದ ತೀವ್ರತೆ ಕಡಮೆಯಾಗಿ, ಅದು ಮರೆತು ಹೋಗುವಂತೆ ಏನೇನೋ ಬೇರೆ ಪ್ರಸ್ತಾಪಗಳನ್ನೆತ್ತಿ ಮಾತನಾಡುತ್ತ ಒಬ್ಬೊಬ್ಬರಾಗಿ ನಿದ್ರಾವಶರಾದೆವು. ನಾನು ಕೋಳಾಲಮ್ಮನಿಗೆ ಹರಿಸಿಕೊಂಡು ನಿರ್ಭಯದಿಂದ ನಿದ್ದೆ ಮಾಡಿದೆ. ಮಧ್ಯಾಹ್ನದ ಸುತ್ತುವಿಕೆಯಿಂದ ಆಯಾಸವಾಗಿದ್ದುದರಿಂದ ಎಲ್ಲರಿಗೂ ಚೆನ್ನಾಗಿಯೇ ನಿದ್ದೆಹತ್ತಿತೆಂದು ಹೇಳಬೇಕು. ಪಂಪಾಪತಿಯ ಅನುಗ್ರಹ; ಯಾರಿಗೂ ವಿಷದ ಬಾಲ ಕುಟುಕಲಿಲ್ಲ!

ಬೆಳಗ್ಗೆ ಏಳುವ ಹೊತ್ತಿಗೆ ಏಳು ಗಂಟೆಯ ಮೇಲಾಗಿತ್ತು. ರಾತ್ರಿಯೆಲ್ಲ ಬಲವಾಗಿ ಮಳೆ ಬಂದಿದ್ದುದರ  ಪ್ರಜ್ಞೆಯೇ ನಮ್ಮಲ್ಲಿ ಯಾರಿಗೂ ಇಲ್ಲ. ಎದ್ದವರು ಸ್ನಾನಾದಿಗಳನ್ನು ತೀರಿಸಿಕೊಂಡು ಬರೋಣವೆಂದು ನದಿಯ ಕಡೆ ಹೋಗಿ ನೋಡಿದರೆ ನದಿ ಐದಾರು ಅಡಿಗಳಷ್ಟು ಮೇಲೆ ಬಂದಿತ್ತು. ಪ್ರವಾಹ ಇನ್ನೂ ಹೆಚ್ಚುತ್ತಲೇ, ನದಿಯ ದಡ ಇನ್ನೂ ಕುಸಿದುಬೀಳುತ್ತಲೇ ಇತ್ತು. ಪ್ರವಾಹದ ಜೋರು ಜಾಸ್ತಿಯಾಗಿದ್ದುರಿಂದ ಯಾರೂ ಅಲ್ಲಿ ಸ್ನಾನ ಮಾಡದೆ, ದೇವಸ್ಥಾನದ ಒಳಗಣ ಬಾವಿಯಲ್ಲಿಯೇ ಸ್ನಾನಾಚಮನಗಳನ್ನು ತೀರಿಸಿಕೊಂಡೆವು. ಆ ನೀರು ಎಷ್ಟು ಸೊಗಸಾಗಿ ಎಷ್ಟು ಪವಿತ್ರವಾಗಿ ಇತ್ತೋ! ನಮಗೆ ನೀರು ಸೇದುವ ಕಷ್ಟ ತಪ್ಪಲೆಂದು ನಾಲ್ಕು ಐದು ಆಳುದ್ದ ಆಳದ ಬಾವಿ ನಮ್ಮ ಕೈಗೆ ಎಟಕುವಂತೆ ಮೇಲೆ ಬಂದಿತ್ತು. ಹಂಡೆಯಿಂದ ನೀರು ತುಂಬಿಕೊಂಡು ಸ್ನಾನ ಮಾಡುವಂತೆ ನೀರನ್ನು ತುಂಬಿಕೊಂಡು ಸ್ನಾನ ಮಾಡಿದೆವು. ನಮ್ಮ ವಿಷಯದಲ್ಲಿ ನಿರ್ಜೀವ ವಸ್ತುಗಳಿಗೂ ಅಷ್ಟು ಮಮತೆ ಕರುಣೆ!

ಯಜಮಾನರು ಬಹು ನಿಷ್ಠರು; ಅವರಿಗೆ ಕಾಫೀ ಟೀಗಳ ಅಭ್ಯಾಸವಿಲ್ಲ. ನಾನು ಬಹಳ ಕಷ್ಟಪಟ್ಟು ಉರಿಯುವ ಬಿಸಿಸಿನಲ್ಲಿ ಅಂಗಡಿಗೆ ಓಡಿಹೋಗಿ ಹೊಸಪೇಟೆಯಿಂದ ಒಂದು ಪೌಂಡು ಪುಡಿಯನ್ನು ತಂದಿದ್ದೆ. ಹಿಂದಿನ ದಿನದ ಅವಸರದಲ್ಲಿ ಕಾಫೀ ಮಾಡಿ ಕುಡಿದು ಹೋಗುವುದಕ್ಕೆ ಆಗಿರಲಿಲ್ಲ. ಅದರ ದುಷ್ಫಲಗಳು ಎಷ್ಟು ಮಹತ್ತರವಾದುವೆಂಬುದು  ಯಜಮಾನರಿಗೆ ಆ ಮಧ್ಯಾಹ್ನ ತಿಳಿದುಬಂದಿತ್ತು. ಬಿಸಿಲು ಬಾಯಾರಿಕೆಗಳಿಂದ ದಣಿದು ಕಂಗೆಟ್ಟು, ಎಳೆಯ ಅಶ್ವತ್ಥಪತ್ರಗಳಂತೆ ಬಾಡಿ, ಹಜಾರ ರಾಮಸ್ವಾಮಿ ದೇವಸ್ಥಾನದ ಹೊರಹಜಾರದಲ್ಲಿ ತಂಪಾಗಿ ಮಲಗಿ ಮೂರು ಗಂಟೆಗಳ ಕಾಲ ನಿದ್ರೆ ಮಾಡಿದ್ದುದು ಅವರ ನೆನಪಿನಲ್ಲಿದ್ದಿತು. ‘ನಿಮಗೆ ಬೇಕಾದಷ್ಟು ಕಾಫೀ ಮಾಡಿ ಕುಡಿಯಿರಪ್ಪ. ಆಮೇಲೆ ಮುಖಗಳನ್ನು ಪಿಟೀಲು ಕಮಾನುಗಳಂತೆ ಉದ್ದ ಎಳೆದು ಜೋಲುಹಾಕಬೇಡಿ’ ಎಂದು ಹೇಳಿದರು. ವಸಂತಕುಸುಮಗಳ ಹಾಗೆ ನಮ್ಮ ಮುಖಕುಸುಮಗಳು ಅರಳಿ ಹಿಗ್ಗಿದವು… ಹಂಪೆಯ ಕಾಫಿ ಎಷ್ಟು ರುಚಿಯಾಗಿತ್ತೋ! ದೇವತೆಗಳು ಕುಡಿವ ಅಮೃತ ಅತಿ ಮಧುರವಾದುದೆಂದು ಹೇಳುತ್ತಾರೆ. ಅವರಾರಾದರೂ ಹಂಪೆಗೆ ನಾವಿರುವಲ್ಲಿಗೆ ಇಳಿದು ಬಂದಿದ್ದು ನಾವು ಕುಡಿದ ಕಾಫಿಯಲ್ಲಿ ಒಂದು ‘ಅರ್ಧ ಕಪ್’ ಕುಡಿದಿದ್ದರೆ, ಅವರು ಅಮೃತಪಾತ್ರೆಗಳನ್ನು ಅಧೋ ಲೋಕದ ಅತಲಜಲದೊಳಕ್ಕೆ ಬಿಸಾಡಿ ಕಾಫಿಯ ಅಭ್ಯಾಸವನ್ನು ಖಂಡಿತವಾಗಿ ಮಾಡಿ ಕೊಳ್ಳುತ್ತಿದ್ದರೆಂದು ನಾನು ಶಪಥಮಾಡಿ ಹೇಳಬಲ್ಲೆ.

ಹಂಪೆಯ ಯಾತ್ರೆಯಲ್ಲಿ ದಾರಿಯುದ್ದಕ್ಕೂ ಯಜಮಾನರೇ ನಮಗೆ ಅನ್ನದಾತರು. ಪರಸ್ಥಳಗಳಲ್ಲಿ ಅವರು ಇತರರ ಕೈಯಲ್ಲಿ ಊಟ ಮಾಡುವವರಲ್ಲ. ಅಡಿಗೆಗೆ ಬೇಕಾದ ಸಮಸ್ತ ಸಂಭಾರದ ಸಾಮಾನುಗಳನ್ನೂ ಉಪ್ಪು ಉಪ್ಪಿನಕಾಯಿ ಊಟದೆಲೆ ಚೆಕ್ಕೆಸೌದೆ ಮೊದಲುಗೊಂಡು ಎಲ್ಲವನ್ನೂ ತಂದಿದ್ದರು. ಇಲ್ಲದ ‘ಕಾಷ್ಠವ್ಯಸನ’ಗಳನ್ನು ಇವರು ಏಕೆ ಇಟ್ಟುಕೊಳ್ಳುವರೊ! ಎಲ್ಲಿ ಹೋದರೂ ಈ ಹಾಳು ಸಂಸಾರ ಹೊತ್ತುಕೊಂಡು ಹೋಗುತಾರಲ್ಲ; ಹೋಗುವ ಕಡೆ ಹೇಗೊ ಹಾಗೆ ಸುಲಭವಾಗಿ ತಿಂಡಿತೀರ್ಥಗಳಿಗೆ ಸರಿ ನೋಡಿಕೊಂಡು ಹೋಗಬಾರದೆ? ಎಂದು ಅಂದುಕೊಳ್ಳುತ್ತಿದ್ದೆವು. ನಾವು ಈಗಿನ ಕಾಲದವರು. ಹೇಗೆ ಬೇಕೆಂದರೆ ಹಾಗೆ ಹೊಂದಿಕೊಂಡು ಹೋಗಲು ಬಲ್ಲವರು; ನಮಗೆ ವ್ರತವಿಲ್ಲ, ನಿಷ್ಠೆಯಿಲ್ಲ, ಆಚಾರವಿಲ್ಲ; ಊಟ ಉಪಚಾರಗಳಲ್ಲಿ ಯಗ್ಗಿಲ್ಲ. ಹೋಟೆಲುಗಳಿರುವ ಕಡೆ ಹೋಗಿ ಊಟಮಾಡುವೆವು. ತಿಂಡಿ ಗಿಂಡಿ – ಅವು ಹೇಗಾದರೂ ಇರಲಿ- ಮಾಡುವವರು ಬ್ರಾಹ್ಮಣರಾಗಿದ್ದರೆ ಸರಿ -ಹೋಗಿ ತಿಂದುಬಿಡುವೆವು. ಆನಂದಭವನಗಳಲ್ಲಿ ತಿನ್ನುವ ನಮಗೆ ಎಲ್ಲಾದರೇನು? ಬೊಂಬಾಯಾದರೂ ಸರಿ ಇಂಗ್ಲೆಂಡಾದರೂ ಆಯಿತು ನಿಕರಾಗುವ ಆಗಲೇಳಿ – ಎಲ್ಲಾದರೂ ಯೋಚನೆ ಇಲ್ಲ. ಅವರಿಗೆ ಹಾಗಲ್ಲ. ಆದರೆ ಹಂಪೆಯಲ್ಲಿ ಹೋಟೆಲನ್ನೆಲ್ಲಿಂದ ತರಬೇಕು? ಯಜಮಾನರಂಥವರು ಕೃಪೆತೋರಿ ಅನ್ನ ಮಾಡಿ ಹಾಕದಿದ್ದರೆ ನಮಗೆ ಎಡಮಗ್ಗುಲೆ! ನಾವು ಮಾಡಿಕೊಂಡು ತಿನ್ನುವ ಸಂಭವವುಂಟೆ? ನಮ್ಮಲ್ಲಿ ಎಲ್ಲರೂ ಧೀರರೇ-  ಎಲ್ಲರೂ ಪಾಕಶಾಸ್ತ್ರ ಪ್ರವೀಣರೇಯೆ. ಆದರೆ ಮೈಬಗ್ಗಿಸಿ ಅಡಿಗೆ ಮಾಡುವುದಕ್ಕೆ ಕೂಡುವುದು ಯಾರ ಕೈಯಲ್ಲೂ ಆಗುತ್ತಿರಲಿಲ್ಲ. ನಾವು ನಾವೇ ಆಗಿದ್ದರೆ ಅಲ್ಲೇ ವಾಸವಾಗಿದ್ದ ಮುದುಕಿಯೊಬ್ಬರಿಗೆ ಹೇಳಿ, ಬೇಕಾದ ಸಾಮಾನುಗಳನ್ನು ತಂದುಹಾಕಿ ಅಡಿಗೆ ಮಾಡಿಸಿ ತಿಂದು ಮುಗಿಸುತ್ತಿದ್ದೆವು. ವಿಚಾರಿಸಿದುದರಲ್ಲಿ ನನಗೆ ಅವರು ನಾಲ್ಕೈದು ತಲೆ ಹಿಂದಿನ ಸಂಬಂಧವೆಂದೂ ತಿಳಿಯಿತು. ಈಗಿನ ಕಾಲದವರು ಧೀಮರು; ನಮಗೆ ಯಾವ ವಿಧವಾದ ಗಾಸಿ, ನಿರ್ಬಂಧ ಸಹಿಸವು. ನಾವು ಸುಖಪಡಬೇಕೆನ್ನುವ ರೀತಿ ಬೇರೆ; ಪೂರ್ವಕಾಲದ ಹಿರಿಯರ ರೀತಿ ನಡೆವಳಿಗಳೇ ಬೇರೆ.

ಆ ದಿನ ವಿದ್ಯಾರಣ್ಯರಿಗೆ ಅಭಿಷೇಕ ಮಾಡುವುದೆಂದು ನಿರ್ಣಯಿಸಿ ಎಲ್ಲರೂ ನದಿಯಲ್ಲಿ ಸ್ನಾನಮಾಡಿಕೊಂಡು ನೇಮದಿಂದ ಅಭಿಷೇಕ, ಪೂಜೆ ಆರಾಧನೆ ನಡೆಯಿತು. ರಾಯರು ಬರೆದ ‘ವಿದ್ಯಾರಣ್ಯ ಸ್ತೋತ್ರ’ವನ್ನು ಓದಿ ಯತಿಗಳಿಗೆ ಒಪ್ಪಿಸಿಯಾಯಿತು. ದೇವರ ನೈವೇದ್ಯಕ್ಕೆ ಅಲ್ಲಿ ಸಿಕ್ಕಿದ ಬಾಳೆ, ತೆಂಗು ಇಟ್ಟರು. ಯಜಮಾನರು ಹೆಸರುಬೇಳೆ ಪಾಯಸ ಮಾಡಿದ್ದರು. ಆಗ ಅದರ ಬಟವಾಡೆ ಸಂದಾಯವಾಗುವ ಹಾಗಿರಲಿಲ್ಲವಾದುದರಿಂದ ತೆಂಗಿನ ಕರಟ ಜಜ್ಜಿ ಕೊಬ್ಬರಿಯನ್ನು ಹಂಚಿದರು; ಎರಡೆರಡು ಬಾಳೆಹಣ್ಣು, ಅಷ್ಟು ಕೊಬ್ಬರಿ ನೈವೇದ್ಯಕ್ಕಿದ್ದ ಒಣದ್ರಾಕ್ಷಿ ಕಲ್ಲುಸಕ್ಕರೆ ಈ ನಾಲುವರು ಚಿಲ್ಲರೆ ದೇವರಿಗೆ ಅರ್ಪಿತವಾದವು.

ಆಮೇಲೆ ಯಜಮಾನರು ಊಟಕ್ಕೆ ಬಡಿಸಿದರು; ವಿದ್ಯಾರಣ್ಯರ ಪೂಜೆಯಲ್ಲವೆ?  ತೊವ್ವೆ, ಪಲ್ಯ, ಉಪ್ಪಿನಕಾಯಿ, ಸಾರು ಎಲ್ಲ ಆಯಿತು. ಪಾಯಸ ಗಂ ಎಂದಿತ್ತು. ಹುರಿದ ಹೆಸರು ಬೇಳೆಯದು. ಒಣಕೊಬ್ಬರಿ, ಏಲಕ್ಕಿ, ಕೇಸರಿ ಹಾಕಿದ್ದರು. ಯಜಮಾನರ ಅಚ್ಚುಕಟ್ಟುತನ ಅವರ ಕೈಗೇ ಸಂದದ್ದು. ಬಹುರುಚಿಯಾಗಿತ್ತು. ರಾಯರಿಗೆ ಸಂತೋಷ ತಡೆಯಲಾಗಲಿಲ್ಲ. ‘ಪಾಯಸ, Class ಪಾಯಸ ಸಾರ್; ನೀವು ನಮ್ಮೊಡನೆ ಕುಳಿತಿದ್ದರೆ ನಿಮಗೆ ಈ ರುಚಿ ಗೊತ್ತಾಗುತ್ತಿತ್ತು. ಇದಕ್ಕೆ ಏನು ಕೊಟ್ಟೇವು ಸಾರ್ ನಿಮಗೆ?’ ಎಂದರು.

ಯಜ – ನೆಮ್ಮದಿಯಾಗಿ ಕೂತು ಊಟಮಾಡಿ. ಸಾಕಷ್ಟು ಮಾಡಿದ್ದೇನೆ. ಸಂಕೋಚ ಬೇಡ ಎಂದರು.

ರಾ – ನಿಮಗೆ ನಮ್ಮಂಥ ಮಕ್ಕಳು ಇನ್ನೂ ಆರು ಮಂದಿ ಆಗಲಿ ಎಂದು ಹರಸುವುದು ಅಧಿಕಪ್ರಸಂಗ; ಹಾರೈಸುತ್ತೇನೆ. ಇಂಥ ಉಪಕಾರವನ್ನು ಮಾಡುತ್ತ ನಿಮ್ಮ ವಂಶವನ್ನು ಬೆಳಗಲಿ.

ಯಜ – ಆರೂ ಆಗಬಹುದು; ಹತ್ತೂ ಆಗಬಹುದು. ವಯಸ್ಸು ನನ್ನನ್ನು ಹುಡುಗನಾಗಿ ಸುತ್ತದೆಯೇ. ಆದರೆ ನೋಡಿ. ನಿಮ್ಮಂಥವರು ಬೇಡ; ನೀವು ನಾನು ಹೇಳಿದ ಮಾತು ಕೇಳುವವರಲ್ಲ. ಇಂಥವರನ್ನು ನಡೆಸುವ ಕಷ್ಟ, ನನಗೆ ಬಾರದಿರಲಿ; ನಿಮ್ಮಂಥ ಯೋಗ್ಯತೆ ಯವರಾದರೆ ಚಿಂತೆಯಿಲ್ಲ.

ರಾಯರಿಗೆ ಆ ಮಾತು ಸತ್ಯವೆನ್ನಿಸಿತಾಗಿ ಬೇರೇನೂ ನುಡಿಯಲು ಆಗದೆ “ಏನೋ ಸಾರ್, ನನ್ನ ತೃಪ್ತಿಯನ್ನು ನಿವೇದಿಸಬೇಕೆಂದು ಮಾತ್ರ ತೋರಿತು. ತಾಳಿಕೊಳ್ಳುವುದಕ್ಕಾಗದೆ ಹೇಳಿದೆ. ಅನ್ಯಾಯ ಮನ್ನಿಸಿರಿ” ಎಂದರು.

ಯಜ – ಮನ್ನಿಸದೆ ಮತ್ತೇನು ಮಾಡಲಿ?

ಇದು ಆಖೈರು ಮಾತು.

ಅದು ಹಾಗಿರಲಿ. ಯಜಮಾನರೇನೊ ಶುಚಿಯಾಗಿ, ರುಚಿಯಾಗಿ ಎಲ್ಲರಿಗೂ ಅಡಿಗೆ ಮಾಡಿ ಹಾಕುತ್ತಿದ್ದರು. ನಮಗೆ ಬೇಸರವೆಂದು ತೋರಿದರೆ ಮಿಕ್ಕ ಎಲ್ಲ ಕೆಲಸಗಳನ್ನೂ ತಾವೇ ಮಾಡುವರು. ಆದರೆ ಎಲ್ಲ ಕೆಲಸಗಳನ್ನೂ ಅವರಿಂದಲೇ ಮಾಡಿಸುವುದು ಧರ್ಮವೆ? ಮರ್ಯಾದೆಯೆ? ಎಂದುಕೊಂಡವರು ಚಿಲ್ಲರೆ ಕೆಲಸಗಳೊಂದೊಂದನ್ನೂ ನಾವು ಒಬ್ಬೊಬ್ಬರು ಮಾಡುತ್ತಿದ್ದೆವು. ಕಸ ಗುಡಿಸುವುದು, ನೆಲ ಸಾರಿಸುವುದು, ಹುಳಿಹಚ್ಚಿ ದಿನಕ್ಕೆ ಎಂಟು ಸಲ ಪಾತ್ರೆ ತೊಳೆಯುವುದು, ಬೂದಿ ಇಟ್ಟಿಗೆ ಪುಡಿಗಳಿಂದ ಮುಸುರೆ ತಿಕ್ಕುವುದು. ಇಂಥ ಕೆಲಸಗಳು ಮಾಡಿದಷ್ಟೂ ಇರಲೇ ಇರುತ್ತಿದ್ದವಾದುದರಿಂದ ಒಬ್ಬರಲ್ಲದಿದ್ದರೆ ಒಬ್ಬರು ಇವುಗಳಲ್ಲಿ ಇರುತ್ತಲೇ ಇದ್ದೆವು. ಏನು ಕೆಲಸಗಳಪ್ಪ ಇವು, ಎಂದು ಗುಡಿಸುತ್ತ ಗುಡಿಸುತ್ತ ಸೊಂಟದ ಮೇಲೆ ಕೈಯಿಟ್ಟುಕೊಂಡು ಒಬ್ಬರ ಮುಖವನ್ನೊಬ್ಬರು ನಿಸ್ತೇಜರಾಗಿ ನೋಡುತ್ತ, ಅರ್ಧ ಆರಿಹೋಗುವಂತಿರುವ  ದೀಪದಂತೆ ನಗುತ್ತ, ಭಗವಂತನ ವಿಚಿತ್ರ ಸೃಷ್ಟಿಯಲ್ಲಿನ ಈ ದಿನಚರಿಯ ಕರ್ಮಗಳನ್ನು ಕುರಿತು ಚಿಂತಿಸುತ್ತಲೂ ವಿಧಿ ತಮ್ಮನ್ನು ಆ ಸ್ಥಿತಿಗೆ ತಂದುದಕ್ಕೆ ತಮ್ಮನ್ನೂ ವಿಧಿಯನ್ನೂ ಒಟ್ಟಿಗೆ ದೂಷಿಸಿಕೊಳ್ಳುತ್ತಲೂ ಇರುವುದನ್ನು ನೋಡಿದರೆ ಯಾರೂ ಕಣ್ಣೀರು ಹಾಕುತ್ತಿದ್ದರು. ಆದರೆ ಮಾಡುವುದೇನು? ಪ್ರಾಪಂಚಿಕ ಜೀವನದಲ್ಲಿ ಈ ತೆರದ ಕರ್ಮಗಳೇ ಹೆಚ್ಚು. ಆದೂ ಅಲ್ಲದೆ ನಮಗೋಸ್ಕರವಾಗಿ ಅಷ್ಟು ದುಡಿಯುತ್ತಿರುವ ಅರವತ್ತುವರುಷ ಮಯಸ್ಸಿನ ಸಾತ್ವಿಕ ಯಜಮಾನರಿಗೆ ಅಸಮಾಧಾನ ವಾಗದಿದ್ದರೆ ಸಾಕು ಎಂಬುದೊಂದು ಆಶಯ. ಹಂಪೆಯಲ್ಲಿ ಇತರ ಕಡೆ ಊಟ ಉಪಚಾರ ಅಪಾಯಕರವೆಂದೂ ಕೇಳಿದ್ದೆವು. ಆ ಭಯದಿಂದ ನಮ್ಮ ಕರ್ತವ್ಯನಿಷ್ಠೆ ಬಲವತ್ತರ ವಾಗುತ್ತಿತ್ತು. ಮನೆಗಳಲ್ಲಿ ಹೆಣ್ಣುಮಕ್ಕಳು ಬದುಕುವ ಸಮಸ್ತ ಕಾಲವೂ ಇದರಲ್ಲಿಯೇ ಉಳಿಯಬೇಕು ಎಂಬೆಣಿಕೆ ನಮಗೆ ಅವರಲ್ಲಿ ಗೌರವವುಂಟುಮಾಡಿತು. ಒಂದೊಂದು ಸಲ ಮಾತ್ರ ಆ ಕೆಲಸಗಳನ್ನು ಮುಗಿಸಿಕೊಂಡು ಹೊರಗೆ ಬಂದರೆ ಪ್ರತಿಯೊಬ್ಬರೂ ಹಣೆಹಣೆ ಬಡಿದುಕೊಳ್ಳುತ್ತ ವಿಕಟವಾಗಿ ನಗುತ್ತಿದ್ದುದನ್ನು ನೆನೆದುಕೊಂಡರೆ ಈಗಲೂ ಅಳುಬರುವಂತಾ ಗುತ್ತದೆ. ಅವಶ್ಯ ಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ.

ಕಾಫೀಗೆ ಅನುಕೂಲ ಮಾಡಿಕೊಟ್ಟು ಯಜಮಾನರು ನಮ್ಮನ್ನು ಸುಪ್ರಸನ್ನರನ್ನಾಗಿ ಮಾಡಿದ್ದುದರಿಂದ ಆ ದಿನ ಪಂಪಾಸರೋವರವನ್ನು ನೋಡಿ ಬಂದು ಸಾಯಂಕಾಲ ಬಂಗಲೆಗೆ ಹೋಗುವುದೆಂದು ನಿಷ್ಕರ್ಷೆಯಾಯಿತು. ‘ಅದೆಷ್ಟು ದೂರವಿದೆಯೋ? ಅಲ್ಲಿಂದ ಹಿಂದಿರುಗಿ ಬರುವುದಕ್ಕೆ ಎಷ್ಟು ಹೊತ್ತು ಹಿಡಿಯುವುದೋ? ಆಮೇಲೆ ಎಲ್ಲಿಯ ಅಡಿಗೆ? ತುಂಬಾ ಅನನುಕೂಲವಾಗುವುದು’ ಎಂದು ಯೋಚಿಸಿದವರು ಅಡಿಗೆ ಮಾಡಿಟ್ಟೇ ಹೊರಡುವುದೆಂದು ನಿರ್ಧರವಾಯಿತು. ಅವೆಲ್ಲ ಮುಗಿಯುವ ಹೊತ್ತಿಗೆ ಹನ್ನೊಂದು ಗಂಟೆ ಬೇಸಗೆಯ ಬಿಸಿಲು; ಅದರಲ್ಲಿಯೂ ಹಂಪೆಯಲ್ಲಿ. ಆ ಮಟಮಟ ಮಧ್ಯಾಹ್ನದಲ್ಲಿ ಹೊರಡುವುದಕ್ಕೆ ಮುಂಚೆಯೇ ಮುಸುರೆಯ ಪಾತ್ರೆಗಳನ್ನು ತೊಳೆದು ಸಾಯಂಕಾಲ ಬಂಗಲೆಗೆ ಹೊರಡುವುದಕ್ಕೆ ಎಲ್ಲವನ್ನೂ ಅಣಿಮಾಡಿಟ್ಟು ಹೋಗಬೇಕೆಂದು ಯಜಮಾನರು ಸ್ವಲ್ಪ ಒತ್ತಿಯೇ ಹೇಳಿದರು. ಬೇರೆ ಏನು ಕೆಲಸವನ್ನಾದರೂ ಮಾಡಬಹುದು ನೋಡಿ; ಎಷ್ಟಾದರೂ ತಿನ್ನಬಹುದು, ನಿದ್ದೆ ಹೋಗಬಹುದು, ಬಟ್ಟೆ ಒಗೆಯಬಹುದು, ಸೌದೆ ಸೀಳಬಹುದು; ನಮಗೆ ಬೇಕಿಲ್ಲದಾಗಲೂ ಊಟಮಾಡಿದ ಕೂಡಲೆಯೂ ಯಾರಾದರೂ ಕೆಲಸ ಹೇಳಿದರೆ ಮೈ ಕಿಡಿಕಿಡಿಯಾಗುವುದು. ಮುಸರೆ ಪಾತ್ರೆಗಳಿಗೆ ಏನು ಮದುವೆ, ಏನು ಮಡಿ – ಹೇಳಿ. ಆಮೇಲೆ ತೊಳೆದುಕೊಂಡರೆ ಆಗುವುದಿಲ್ಲವೆ? ಯಾರಿಗಾದರೂ ಹೇಳಿ ಆ ಕೆಲಸ ಮಾಡಿಸಿದರೆ ಆಗದೆ?… ನೀವೂ ನಾವೂ ಆದರೆ ಆಗುತ್ತೆ. ಯಜಮಾನರಿಗೆ ಹಾಗಲ್ಲ. ಕ್ರಮವಾಗಿ ಒಂದು ಕೆಲಸವನ್ನು ಮಾಡಿ -ಅದು ಎಷ್ಟು ಅಲ್ಪವಾದುದಾಗಿರಲಿ – ಅದನ್ನು ಆಗಲೇ ಪೂರೈಸಬೇಕೆಂಬುದು ಅವರ ಜೀವನದ ತತ್ವ. ಭಗವಂತನ ಅನುಗ್ರಹದಿಂದ ಈವರೆಗೂ ಅವರಿಗೆ ಹಾಗೆಯೇ ನಡೆದು ಬಂದಿದೆ. ವಿಶೇಷ ಹೇಳಲೇನು? ಆ ಕೆಲಸವನ್ನು ಮಾಡಿ ಮುಗಿಸಲು ಅಂಗಳದ ಕಾಲುವೆಗೆ ಹೋದೆವು. ಅವರೂ ನಮ್ಮೆಲ್ಲರ ಅಸಮಾಧಾನವನ್ನು ಕಂಡಿದ್ದರು. ಆಗ ಒಂದು ಚಮತ್ಕಾರವನ್ನು ಮಾಡಿ ನಮ್ಮನ್ನು ಒಲಿಸಿಕೊಂಡರು. ಲಂಚ ಸ್ವಾಮಿ, ಲಂಚ. ಅಲ್ಲದೆ ಮತ್ತೇನು? ಸ್ಟೌ ಹತ್ತಿಸಿದವರು ಒಂದು ಕೊಳಗ ನೀರು ಮರಳಿಸಿ ‘ಮೂರ್ತಿ ಇಲ್ಲಿ ಬಾರಯ್ಯ ಸ್ವಲ್ಪ’ ಎಂದರು. ಮೂರ್ತಿ ಒಳಗೆ ಹೋಗಲು ‘ಆ ಪುಡಿ ಇನ್ನಷ್ಟು ಇದೆಯೇನೊ ಹಾಕಿ ಮುಗಿಸಿಬಿಡು; ಆ ಅನಿಷ್ಟವನ್ನು ಇನ್ನೆಲ್ಲಿ ಹೊತ್ತು ಕೊಂಡುಹೊಗುವುದು’ ಎಂದರು. ಬಾವಿಯ ಹತ್ತಿರವಿದ್ದ ನನಗೆ ಕಿವಿ ನೆಟ್ಟಗಾಯಿತು. ನಾವು ಪಾತ್ರೆಗಳನ್ನು ಸಂಭ್ರಮದಿಂದ ಒಳಕ್ಕೆ ಎತ್ತಿಕೊಂಡು ಹೋದೆವು. ಆ ಒಳಗಾಗಿ ಕಾಫಿ ಸಿದ್ಧವಾಗಿತ್ತು. ಮೂವರೂ ನೋಡಿದೆವು. ಉದ್ದಕ್ಕೆ ಹೋಗಿ ಯಜಮಾನರಿಗೆ ನಮಸ್ಕಾರ ಮಾಡೋಣವೇ ಎಂಬಷ್ಟು ಭಕ್ತಿ ಬಂದು ಅವರಲ್ಲಿಯೂ ದೇವರಲ್ಲಿಯೂ ನಮ್ಮ ನಂಬಿಕೆ ಬಲವಾಗಿ ಹುರಿಗೊಂಡಿತು. ಆದರೆ ನಮ್ಮ ಕಿರುಚಾಪಲ್ಯ ಗಳನ್ನು ದೊಡ್ಡವರಿಗೆ ನಾಚಿಕೆಯಿಲ್ಲದೆ, ಹಾಗೆ – ಅಂಥ ಸಮಯದಲ್ಲಿ – ತೋರಿಸುವುದು ಸರಿಯಲ್ಲವೆಂದು ತಿಳಿದು ‘ಏಳಿ ಸಾರ್, ಹೊರಡೋಣ, ಇನ್ನು ಹೊತ್ತಾಗುತ್ತೆ, ಇವತ್ತು ಇಪ್ಪತ್ತು ಮೈಲಿ ಆದರೂ ನಡೆಯುವಷ್ಟು ಶಕ್ತಿ ಬಂದುಬಿಟ್ಟಿದೆ’-ಎಂದರು ವೆಂಕಟೇಶಯ್ಯ ನವರು. ಉಳಿದವರು ಒಬ್ಬರ ಮುಖವನ್ನೊಬ್ಬರು ನೋಡಿ ‘ಭೇಷ್’ ಎಂದು ತಮತಮಗೂ ಯಜಮಾನರಿಗೂ ಕಣ್ಣು ಸಂಜ್ಞೆಯಿಂದಲೇ ಧನ್ಯವಾದಗಳನ್ನು ಸಮರ್ಪಿಸುವಂತೆ ಮನೋ ಭಾವವನ್ನು ಮುಖದಲ್ಲಿ ವ್ಯಕ್ತಗೊಳಿಸಿದೆವು.

‘ಅದು ನನ್ನ ಪ್ರಭಾವವೂ ಅಲ್ಲ, ನಿಮ್ಮದೂ ಅಲ್ಲಪ್ಪ; ಅಗೋ ಎದುರಿಗೆ ಆ ಕೊಳಗದಪ್ಪಲೆ ಇದೆಯೇ ಅದರ ಪ್ರಭಾವ’ ಅಂದರು ಯಜಮಾನರು.

ಅವರು ಎಂದಿಗೂ ಸುಳ್ಳಾಡುವವರೇ ಅಲ್ಲ. ಇತರರಿಗೆ ಸಹಿಸಲಿ ಸಹಿಸದೆ ಇರಲಿ, ತಮಗೆ ನಿಜವೆಂದು ತೋರಿದುದನ್ನು ಹಿಂದು ಮುಂದು ಯೋಚಿಸದೆ ಹೇಳಿಯೇತೀರುವರು. ಆದುದರಿಂದ ಅನೇಕರಿಗೆ ಅವರಲ್ಲಿ ಸಹನೆಯಿಲ್ಲ. ನಿಷ್ಠರ ನೇಮವು ದುರ್ಬಲರಿಗೆ ಅನನುಕೂಲ; ಕಷ್ಟ.

ಮುಂದೆ ಒಂದು ಭಾರಿ ಚರ್ಚೆಗೆ ಆರಂಭವಾಯಿತು. ಯಜಮಾನರ ದೃಷ್ಟಿಯಲ್ಲಿ ಅದೇನೂ ಆಗ ಫೈಸಲ್ ಆಗುವಂತೆ ತೋರಲಿಲ್ಲ. ಆಗತಾನೇ ‘ಪೃಷ್ಠೋಷ್ಠ’ವಾಗಿ ಊಟ ಮಾಡಿ ಹೊಟ್ಟೆಗಳು ಪೀಪಾಯಿಗಳಂತೆ ಆಗಿದ್ದುವು. ಆ ಬಿಸಿಲಿನಲ್ಲಿ, ಅದೇ ಕ್ಷಣವೇ ಒಂದು ಕೊಳಗ ಬಿಸಿಬಿಸಿ ಕಾಫಿ ಕುಡಿಯುವುದು ಎಂದರೇನು? ಎಂದು ನೀವು ನಗಬಹುದು. ನೀವೆಲ್ಲ ವಿರಕ್ತರು, ಸಂಯಮಿಗಳು. ನಮಗೆ ಅಷ್ಟು ಸಂಯಮವಿಲ್ಲ. ಹುಡುಗತನದಿಂದಲೂ ಹೀಗೇ – ‘ನಿನ್ನ ಆಶೆಗೆ ಬೆಂಕಿ ಇಟ್ಟರು;  ತಪ್ಪಲೆಯಲ್ಲಿರುವುದು ಹೊಟ್ಟೆಯಲ್ಲಿ ಇರಲಿ ಎನ್ನುತ್ತಿರುವೆಯೇ ಹೊರತು’ ಎಂದು ಮುಂತಾಗಿ ನಮ್ಮ ತಾಯಿ ನನ್ನನ್ನು ಅನೇಕವೇಳೆ ಬೈದಿದ್ದಾರೆ; ನೀವೂ ಬೇಕಾದರೆ ನಮ್ಮನ್ನು ಬಯ್ಯಿರಿ. ಸ್ವಭಾವೋ ದುರತಿಕ್ರಮಃ ಎಂದು ರಾವಣಾಸುರನಂಥವನೇ ಹೇಳಿಲ್ಲವೆ? ದೇವರು ನಮ್ಮನ್ನು ಸೃಷ್ಟಿಸಿರುವುದು ಹೀಗೆ. ಅವನ ಇಚ್ಛೆಯ ಮೇಲೆ ನಮ್ಮ ಪ್ರಯತ್ನವೇನು ನಡೆಯುತ್ತದೆ? ಹೀಗೆ ನಮ್ಮನ್ನು ಏಕೆ ಸೃಷ್ಟಿಸಿದೆಯೋ ಪಾಪಿ ಎಂದು ಮೂದಲಿಸಿ ಅವನ ಕೈಲಿ ಜಗಳವಾಡುವುದಕ್ಕಾಗುತ್ತದೆಯೆ? ನಾವು ಆಡಿದರೂ ಆಡಬಹುದು;  ಅವನೂ ಜಗಳಕ್ಕೆ ನಿಲ್ಲಬಹುದು. ಆದರೆ ಮಠಮುದ್ರೆಯವರು ನಮಗೆ ಬಹಿಷ್ಕಾರ ಹಾಕಿಬಿಡುತ್ತಾರೆ. ಆಮೇಲೆ? ಅವನ ಶಿಕ್ಷೆಯ ಭಯಕ್ಕಿಂತಲೂ ಇವರ ಬಹಿಷ್ಕಾರದ ಭಯವೇ ಹೆಚ್ಚು ಭೀಕರವಾದುದು. ನಾನು ಹೇಳುವುದು ಸುಳ್ಳೆ?… ಹೆಣ್ಣು ಮಕ್ಕಳಿರುವವರು ನಾವು;  ಹೆದರಿಕೆ.

ಕೊನೆಗೆ ನಾನು ವೆಂಕಟೇಶಯ್ಯನವರಿಗೆ ‘ನಿನ್ನೆ ನೀರನ್ನು ಹೊತ್ತುಕೊಂಡು ಹೋದಹಾಗೆ ಇವೊತ್ತು ಕಾಫೀ ತೆಗೆದುಕೊಂಡುಹೋದರಾಯಿತು; ದಾರಿಯಲ್ಲಿ  ಬಾಯಾರಿಕೆಯಾದಾಗ ಕುಡಿಯೋಣ’ ಎಂದೆ,- ನೋಡೋಣ ಅವರ ಮನಸ್ಸಿನಲ್ಲಿ ಹೇಗಿದೆಯೊ ತಿಳಿದುಕೊಳ್ಳೋಣ ಎಂದು.

‘ನೀವು ಹೊತ್ತುಕೊಂಡು ಬರುವ ಹಾಗಿದ್ದರೆ ನೋಡಿ, ಎರಡು ತಂಬಿಗೆ ಇದೆ’

‘ಎಲ್ಲರೂ ಸ್ವಲ್ಪ ಸ್ವಲ್ಪ ದೂರ ತಕ್ಕೊಂಡು ಹೋಗೋಣ.’

ಯಥಾರ್ಥವನ್ನು ಹೇಳಲೇನು? ನಮ್ಮೊಬ್ಬರಿಗೂ ಅದನ್ನು ಹೊತ್ತುಕೊಂಡು ಹೋಗುವುದು ಇಷ್ಟವಿಲ್ಲ. ನಾನು ಹೇಳಿದುದು ಲೋಕಮರ್ಯಾದೆಗಾಗಿ. ನಾನು ಎಸೆದ ಹಗ್ಗ ನನ್ನ ಕುತ್ತಿಗೆಗೇ ಬೀರುವಂತಾದರೆ! ಮೂರ್ತಿ ಅಂದರು -‘ಸ್ವಲ್ಪ ಇಲ್ಲಿ ಕುಡಿದು, ಸ್ವಲ್ಪ ತೆಗೆದುಕೊಂಡು ಹೋಗೋಣ’ ಎಂದು.

ಯಜ – ನಿಮಗೆಲ್ಲ ಕಷ್ಟವಾದರೆ ನಡೆಯಿರಪ್ಪ, ನಾನು ಹೊತ್ತುಕೊಂಡು ಬರುತ್ತೇನೆ.

ರಾ – ಸರಿ, ಸಾರ್ ಚೆನ್ನಾಯಿತು! ಇಷ್ಟು ಹೊತ್ತೂ ಚೆನ್ನಾಗಿರಲಿಲ್ಲ. ಎಲ್ರೀ ಶ್ರೀಕಂಠಯ್ಯ, ಲೋಟ ತಕ್ಕೊಳ್ರೀ.

ಚರ್ಚಾವಿಷಯವು ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಹಾಗಾಯಿತು. ಒಳಗೆ ಎಲ್ಲರಿಗೂ ಉಕ್ಕಿ ಉಕ್ಕಿ ಬರುತ್ತಿರುವ ನಗು. ಯಜಮಾನರು ಹೋಯೆಂದು ನಕ್ಕರು. ಅವರು ಹಾಗೆ ನಗುತ್ತಿದ್ದರೆ ನಮಗೆ ಶ್ರೇಯಸ್ಕರ ಎಂದುಕೊಂಡವರು ಒಬ್ಬೊಬ್ಬರಾಗಿ ಲೋಟಗಳಲ್ಲಿ ಅಮೃತವನ್ನು ತುಂಬಿದೆವು – ತುಂಬಿ, ಪಾನಮಾಡಿ ಆತ್ಮಶಾಂತಿ ಮಾಡಿಕೊಂಡೆವು. ಒಬ್ಬೊಬ್ಬರಿಗೆ ಎರಡು ಲೋಟಗಳಾದುವು.

ವೆಂ – ಇನ್ನು ಉಳಿದಿರುವ ಈ ಇಷ್ಟನ್ನೇನು ಹೊತ್ತುಕೊಂಡು ಹೋಗುವುದು? ಹಿಡೀರ‌್ರೀ ಲೋಟಾನ, ಕಾಫೀ ಆರಿಹೋದರೆ ಚೆನ್ನಾಗಿರುವುದಿಲ್ಲ. ‘ನನಗೆ ಜಾಸ್ತಿ ಆಯಿತುರೀ’ ಎಂದೆ; ದೇವರಿಗೆ ಹೇಳುವಂತೆ ಹೇಳಿದೆ. ಅವರು ಕೇಳಬೇಕಲ್ಲ.

‘ಈ ಆವಟ ಬಿಡಿ, ಕಂಡಿದ್ದೇನೆ. ನೀವು ಕಾಫೀ ಸಾಕು ಎಂದರೆ ನಾನು ನಂಬಿಯೇನೆ?’

ಎಷ್ಟು ವಿಧವಾಗಿ ಹೇಳಿದರೂ ಕೇಳದೆ ಇನ್ನೂ ಒಂದು ಲೋಟದ ತುಂಬ ಹಾಕಿದರು. ಇನ್ನೇನು ಮಾಡುವುದು? ‘ವೈದ್ಯೋನಾರಾಯಣೋ ಹರಿಃ’ ಎಂದು ಕಣ್ಣು ಮುಚ್ಚಿಕೊಂಡು ಕುಡಿದುಬಿಟ್ಟೆ. ಉಳಿದ ಮೂವರು ಸ್ನೇಹಿತರೂ ಹಾಗೇಯೇ ಮಾಡಿದರು. ಎಲ್ಲರಿಗೂ ನಾನು ಚಿರಂಜೀವಿ. ನನಗೆ ತೃಪ್ತಿಯಾದಮೇಲೆ ತಮಗೆ. ಹಿರಿಯರ ರೀತಿಯೇ ಹೀಗೆ.

‘ಇನ್ನು ಹೊರಡಬಹುದು ತಾನೇಪ್ಪ’ ಎಂದರು ಯಜಮಾನರು. ಓಹೋ ಎಂದು ಹೊರಟೆವು. ನಮ್ಮಲ್ಲಿ  ಇಬ್ಬರು, ಮೇಲೆ ಸಾದಾ ಷರಟು ಬನಿಯನ್ನುಗಳನ್ನು ಹಾಕಿಕೊಂಡು ಉತ್ತರೀಯವನ್ನು ಹೊದ್ದಿದ್ದೆವು. ಮೂರ್ತಿಗಳು ಮಾತ್ರ ಕೋಟು ಹಾಕಿಕೊಂಡಿದ್ದರು. ಎಲ್ಲರ ಬಂಡವಾಳವೂ ಅವರ ಕೈಯಲ್ಲಿತ್ತು. ಆದುದರಿಂದ ಅವರಿಗೆ ಆ ಉರಿಬಿಸಿಲಲ್ಲಿಯೂ ಕೋಟುಹಾಕಿಕೊಂಡೇ ಇರಬೇಕಾದ  ಸುಖ ನಿರ್ಬಂಧವಾಗಿ ಬಂದಿತ್ತು. ಇನ್ನಿಬ್ಬರು ಕೇವಲ ಒಂದೊಂದು ಉತ್ತರೀಯವನ್ನು ಹೊದ್ದಿದ್ದರು. ಐವರಿಗೆ ಮೂರು ಛತ್ರಿ. ಮೂವರ ಕಾಲುಗಳಿಗೆ ಮಾತ್ರ ಜೋಡು. ಇನ್ನಿಬ್ಬರು ಈವರೆಗೂ ಛತ್ರಿ ಹಿಡಿಯುವ ಪದ್ಧತಿಯನ್ನೇ ಇಟ್ಟುಕೊಂಡಿಲ್ಲ. ಕಾಲಿಗೆ ಹಾಕಿದ್ದ ಜೋಡುಗಳನ್ನು ಒಬ್ಬರು ಬೆಳಗಾವಿಯಲ್ಲಿಯೂ ಇನ್ನೊಬ್ಬರು ಗದಗಿನಲ್ಲಿಯೂ ಮರೆತು ಬಂದು ಈಗ ಬರಿಯ ಕಾಲಿನಲ್ಲಿ ನಡೆದು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದರು. ಭೂಮಾತೆ ಸಂಪರ್ಕದಿಂದ ಪವಿತ್ರರಾಗಿ ಸುಖಿಸದೆ, ಅಖಿಲ ಲೋಕಜೀವನಾಧಿಕಾರಿಗಳಾದ ಸೂರ್ಯ ವಾಯುದೇವರುಗಳಿಂದ ತಲೆಯನ್ನು ಮುಚ್ಚಿಕೊಂಡು ಬಾಳುವ ಜೀವನ ಹೇಯವಾದುದು ! ಎಂಬುದು ಅವರ ಅಭಿಪ್ರಾಯ. ಆ ದೇವತೆಗಳ ಅನುಗ್ರಹ ಅಂದು ಅವರಿಗೆ ಸಂಪೂರ್ಣವಾಗಿ ಆಯಿತೆಂದೇ ಹೇಳಬೇಕು.

ೊಕೊಠಡಿಯಿಂದ ಹೊರಗೆ ಬಂದವರು ಚೆನ್ನಯ್ಯ ಎಂದು ಕೂಗಿದೆವು. ವೆಂಕಟೇಶಯ್ಯ ನವರು ‘ಅವನು ಹಿಂದಿರುಗಿ ಬಂದ ಹಾಗೆಯೇ ಇಲ್ಲ. ಧಾರವಾಡದವರು ಯಾರನ್ನೊ ನೋಟಕ್ಕೆ ಕರೆದುಕೊಂಡು ಹೋಗಿ ಬರುತ್ತೇನೆಂದು ಬೆಳಗ್ಗೆಯೇ ಹೇಳಿ ಹೋಗಿದ್ದ’ ಎಂದರು. ಅವನೇ ನಮಗೆ ಅಲ್ಲಿ ಮಾರ್ಗದರ್ಶಕನು;  ಪರಮಾಪ್ತ ಸ್ನೇಹಿತನು. ಆದರೆ ಅವನಿಗೆ ಕಾಯುತ್ತ ಕುಳಿತರೆ ಕೆಲಸ ಕೆಡುತ್ತದೆಂದು ತಿಳಿದು ಹಂಪೆಯ ಹಾಳುಗಳ ಪುಸ್ತಕವೊಂದನ್ನು ಕೈಲಿ ಹಿಡಿದುಕೊಂಡು ಹೊರಟೆವು. ‘ದಾರಿಯಲ್ಲಿ ಯಾರಾದರೂ ಸಿಕ್ಕದೆ ಹೋಗುತ್ತಾರೆಯೆ? ಕಾಲು ಕುರುಡೇನು? ಬಾಯಿ ಕುರುಡೊ? ಕೇಳಿಕೊಂಡು ಕೇಳಿಕೊಂಡು ಹೋಗೋಣ ನಡೆಯಿರಿ’ ಎಂದು ಮುಂದೆ ನಡೆದೆವು. ಇಷ್ಟು ಹೊತ್ತಿಗೆ ಆಗಲೆ ಒಂದು ಗಂಟೆಯ ಸುಮಾರಿಗೆ ಬಂದಿತ್ತು. ಹತ್ತು ಹತ್ತುಮಾರಿಗೂ ‘ಚೆನ್ನಯ್ಯನು ಜೊತೆಯಲ್ಲಿ ಇದ್ದಿದ್ದರೆ ಚೆನ್ನಾಗಿತ್ತು’ ಎಂದುಕೊಳ್ಳುತ್ತ ಹೊರಟೆವು. ಒಂದೊಂದು ಸಲ ‘ಹೋಗಲಿ; ಅವನ ದಂಡೆ ಹರಿಯಿತು; ಬರುವ ರೂಪಾಯಿ ಕಳೆದುಕೊಂಡ; ಯಾರಿಗೆ ನಷ್ಟ?’ ಎಂದುಕೊಳ್ಳುತ್ತ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಆದರೂ ಒಂದು ವಿಷಯ ಮಾತ್ರ ಖಂಡಿತ! ಅವನಿಲ್ಲದುದರಿಂದ ಕೊರತೆ ಕಾಣುತ್ತಿತ್ತು.

ವಿರೂಪಾಕ್ಷ ದೇವಸ್ಥಾನದ ಮುಂದೆ ಸುಮಾರು ನೂರು ಇನ್ನೂರು ಗಜಗಳ ದೂರ ಅಗಲವಾದ ತೇರುಬೀದಿ; ಮೈಸೂರು ನೂರಡಿ ರಸ್ತೆಗಿಂತಲೂ ವಿಶಾಲವಾಗಿಯೂ, ತುಂಬಾ ಜನಪೂರ್ಣವಾಗಿಯೂ ಪೂರ್ವದಲ್ಲಿ ಅದು ಇದ್ದಿರಬೇಕು. ಇಕ್ಕೆಡೆಗಳಲ್ಲಿಯೂ ಕಲ್ಲು ಮಂಟಪಗಳು; ರಸ್ತೆಯ ಕೊನೆಯಲ್ಲಿ ನಮ್ಮ ದಾರಿಯ ಎಡಗಡೆ ಬೃಹದಾಕಾರದ ಕಲ್ಲುಬಸವನ ವಿಗ್ರಹ. ಆಗಿನ ಕಾಲದವರಿಗೆ ಮಾಡುವುದಕ್ಕೆ ಬೇರೆ ಏನೂ ಕೆಲಸವಿರಲಿಲ್ಲ ವೆಂದು ಕಾಣುತ್ತದೆ; ಎಲ್ಲಿ ದೊಡ್ಡ ಬಂಡೆಯೊಂದು ಸಿಕ್ಕಿದರೆ ಅಲ್ಲಿ ಬಸವ, ಗಣೇಶ, ಹನುಮಂತ, ನರಸಿಂಹ ವಿಗ್ರಹಗಳನ್ನು ಕೆತ್ತುತ್ತಿದ್ದರು. ಕೆಲಸದ ಶ್ರಮವೂ ಅಗಾಧತೆಯೂ ಅವರಿಗೆ ತೋರುತ್ತಲೇ ಇರಲಿಲ್ಲವೇನೋ? ಇಲ್ಲವಾದರೆ ಹತ್ತು ಹದಿನೈದು ಅಡಿ ಅಗಲದ ಪಾಣಿಪೀಠದ ಮೇಲೆ ಆರು ಏಳು ಅಡಿಗಳ ಉದ್ದದ ಶಿವಲಿಂಗ ಮಾಡಿಡುತ್ತಿದ್ದರೆ? ಹದಿನೈದು ಇಪ್ಪತ್ತು ಅಡಿ ಎತ್ತರದ ನರಸಿಂಹಸ್ವಾಮಿ! ಹದಿನೈದು ಅಡಿಯ ಗಣೇಶ!! ಅವರಿಗೆ ಹುಚ್ಚು ಹಿಡಿದಿರಬೇಕು! ಅಂಥ ಅವುಗಳ ಹೆಸರು ಬಲ್ಲಿರೇನು? ಒಂದು ಸಾಸುವೆಕಾಳಿನ ಗಣೇಶವಂತೆ; ಇನ್ನೊಂದು ಕಡಲೆಕಾಳಿನ ಗಣೇಶವಂತೆ; ಹೀಗೆಯೇ ಹಲಸಿನಕಾಯಿ ಗಣೇಶನೆಂದು ಒಂದನ್ನು ಮಾಡಿದ್ದಿದ್ದರೆ ಅದು ಹೇಗಿರುತ್ತಿದ್ದಿತೊ! ನಾನು ಊಹಿಸಲಾರೆ.

ಮುಂದೆ ಹೊಗುತ್ತ ಹೋಗುತ್ತ ರಸ್ತೆ ಚಿಕ್ಕದಾಯಿತು; ಅಲ್ಲಿ ಕ್ರೈಸ್ತರಾರಾದರೂ ಇದ್ದಿದ್ದರೆ ಸ್ವರ್ಗದ ದಾರಿಯಂತೆ ಎಂದು ಹೇಳುತ್ತಿದ್ದರು. ಉದ್ದಕ್ಕೂ ಬೆಟ್ಟಗಳು. ಮಾರ್ಗ ಸಾಧ್ಯವಾದಷ್ಟು ಸುಲಭವಾಗಲೆಂದು ಹಿಂದಿನವರು ಕಲ್ಲು ಕಡಿದು ಮೆಟ್ಟಿಲುಗಳನ್ನು ಮಾಡಿದ್ದಾರೆ. ದಾರಿಯ ಉದ್ದಕ್ಕೂ ಇರುವ ಮುಳ್ಳುಗಿಡ ಮುಳ್ಳುಕೊಂಟುಗಳನ್ನು ಬಿಟ್ಟರೆ ಕಣ್ಣು ಹರಿಯುವವರೆಗೂ ಸುತ್ತಲೂ ಏನು ಸುಂದರ ದೃಶ್ಯಗಳು? ನೂರಾರು ವರುಷಗಳಿಂದ ಸುಮಾರು ಒಂದೇ ಸಮನಾಗಿ ತಮ್ಮ ಸ್ಥಿತಿಯನ್ನು ಕಾಪಾಡಿಕೊಂಡು ಪ್ರಪಂಚದ ಕಷ್ಟಸುಖ ಗಳನ್ನೂ ಮಂಗಳಾಮಂಗಳಗಳನ್ನೂ ಅವಿಚಲಿತ ದೃಷ್ಟಿಯಿಂದ ನೋಡುತ್ತ ದೃಢವಾಗಿ ಪಟುವಾಗಿ ನಿಂದಿರುವ ಪರ್ವತಗಳು; ಪರ್ವತಶಿಖರಗಳ ಮೇಲೆ ಆಕಾಶದ ಬಿಳಿಮೋಡಗಳಿಂದ ಸುತ್ತವರಿಯಲ್ಪಟ್ಟು ಸೇವೆಗೊಳ್ಳುತ್ತ ಸಿಡಿಲುಬಳ್ಳಿಗಳೊಡನೆ ಸರಸವಾಡುತ್ತ ಉಚ್ಚ ಪೀಠಗಳ ಮೇಲಿರುವ ದೇವಾಲಯ, ತಪೋಗೃಹ, ಆಶ್ರಮಗಳು; ಬೆಟ್ಟಗಳ ನಡುನಡುವೆ ದೂರದಲ್ಲಿ ಒಂದರ ಹಿಂದೆ ಒಂದು, ಒಂದಕ್ಕಿಂತ ಒಂದು ಹೆಚ್ಚು ಎತ್ತರವಾಗಿ ಶಿಖರಗಳ ಹಂತದಂತೆ ದೂರದ ಆಕಾಶಕ್ಕೆ ಏರಿ ಕಾಣುತ್ತಿರುವ ದೇವಾಲಯಗಳ ಮಹಾದ್ವಾರ ಗೋಪುರಗಳು; ಎಡಗಡೆ ಹತ್ತಿರದಲ್ಲಿಯೆ ಕಲ್ಲುಬಂಡೆಗಳ ಹಿಂದೆ ಕಲಕಲನಾದದಿಂದ ಹರಿಯುತ್ತಿರುವ ತರಂಗಿಣೀ ತುಂಗಭದ್ರೆಯ ಕೋಲಾಹಲ; ನದಿಗೂ ನಮಗೂ ಮಧ್ಯೆ ಅಲ್ಲಲ್ಲಿ ಹೊಸದಾಗಿ ಪೂರ್ಣ ಕುಸುಮಿತವಾದ ಕಾಡುಮಲ್ಲಿಗೆ ಗಿಡಗಳು; ಸ್ವಲ್ಪ ದೂರ ನೇರವಾಗಿ ಹೋಗಿ, ಉತ್ತರಕ್ಷಣದಲ್ಲಿಯ ಎಲ್ಲಿಯೊ ಹೊಕ್ಕು, ಹೇಗೊ ತಿರುಗಿ, ಮರೆಯಾಗಿ, ಮುಖವನ್ನು ಮುಚ್ಚಿಕೊಂಡು, ಪುನಃ ಮೈಲಿಗಳ ದೂರದಲ್ಲಿ ಪರ್ವತಸಾನುವೊಂದರಲ್ಲಿ ಕಣ್ಣಿಗೆ ಬೀಳುತ್ತ ನಮ್ಮೊಡನೆ ಹುಡುಗಾಟವಾಡಲೆಳಸುವಂತೆ ಮುಂದುವರಿದಿರುವ ಮೆಟ್ಟಿಲುದಾರಿ. ಬಹುದೂರ ಹೀಗೆಯೇ ಪ್ರಕೃತಿಯ ಈ ತೆರೆದ ವಿಚಿತ್ರ ರಮಣೀಯತೆಯನ್ನು ನೋಡುತ್ತ ಅಲ್ಲಿ ಹೊರ ಹೊಮ್ಮುತ್ತಿರುವ ಸೌಂದರ್ಯವನ್ನು ಅನುಭವಿಸುತ್ತ ಖಗಮೃಗಕೀಟ ಧ್ವನಿಗಳಿಂದ ತುಂಬಿ ನಿಬಿಡವಾಗಿ ಹೃದಯರಂಜಕವಾಗಿರುವ ಪ್ರಕೃತಿಯ ಏಕಾಂತವನ್ನು ನೋಡಿ ಆನಂದಿಸುವ ನಾವೇ ಪುಣ್ಯಶಾಲಿಗಳೆಂದು ಅಂದುಕೊಳ್ಳುತ್ತ ಮುಂದೆ ಮುಂದೆ ಹೊರಟೆವು, ಹೀಗೆ ಮೈಮರೆತು ಹೋಗುತ್ತಿರುವ ನಮಗೆ ಅಲ್ಲಲ್ಲಿ ಒಡೆದು ಬೇರೆಯಾಗುತ್ತಿರುವ ದಾರಿಗಳ ಯೊಚನೆ ಬರಲಿಲ್ಲ.

ಸ್ವಲ್ಪವೂ ಶ್ರಮವಿಲ್ಲದೆ ಅಚ್ಯುತರಾಯರ ದೇವಸ್ಥಾನದವರೆಗೂ ಹೋದೆವು. ಅಲ್ಲಿಯೇ ನರಸಿಂಹಸ್ವಾಮಿಯ ದೇವಸ್ಥಾನವೂ ಒಂದಿದೆ. ಬ್ರಿಟಿಷ್ ಸರಕಾರದವರು ತಮ್ಮ ಕೈಯಲ್ಲಾದ ಮಟ್ಟಿಗೆ ಇಲ್ಲಿಯೂ ಜೀರ್ಣೋದ್ಧಾರ ಕಾರ್ಯವನ್ನು ಮಾಡಿದ್ದಾರೆ. ಒಳಗೆ ಹೋಗಿ ನೋಡಿದುದಾಯಿತು. ಅಲ್ಲಿ ಹೆಚ್ಚು ಹೊತ್ತು ನಿಲ್ಲಲ್ಲು ಅವಕಾಶವಿಲ್ಲ. ಮುಂದೆ ನೋಡ ಬೇಕಾದುದೆಷ್ಟನ್ನೊ ಇಟ್ಟುಕೊಂಡು ಇಲ್ಲಿ ಬಹುಕಾಲ ಕಳೆವುದು ಹೇಗೆ? ಅಲ್ಲಿಂದ ಮುಂದೆ ನಾಲ್ಕಾರು ದಾರಿ ಕವಲೊಡೆದಿದ್ದವು. ಕೈಯಲ್ಲಿದ್ದ ಪುಸ್ತಕದ ಪ್ರಯೋಜನ ಅಲ್ಲಿಗೆ ನಿಂತು ಹೋಯಿತು. ಉತ್ತರ ದಿಕ್ಕಿನ ಕಲ್ಲುಮಂಟಪಗಳ ಸಾಲಲ್ಲಿಯೇ ಹೊರಟು ಹೋಗಿದ್ದರೆ ಸುಲಭವಾಗಿ ಕೋದಂಡರಾಮಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಸೇರಬಹುದಾಗಿತ್ತು. ಆದರೆ ನಮ್ಮ ಐವರ ಅಭಿಪ್ರಾಯಗಳು ಐದು ತೆರೆನಾಗಿದ್ದುದರಿಂದ ಒಬ್ಬರು ಹೇಳಿದುದು ಒಬ್ಬರಿಗೆ ಸರಿತೋರದಾಯಿತು. ದೇವರು ಜನರಿಗೆ ಸ್ವಲ್ಪ ಬುದ್ದಿಯನ್ನು ಕೊಟ್ಟರೆ ಸಾಕು, ಒಬ್ಬರಿಗೆ ಒಪ್ಪಿದುದು ಇನ್ನೊಬ್ಬರಿಗೆ ಸರಿಹೋಗದು. ಸ್ವತಂತ್ರವಾಗಿ ಯೋಚನೆ ಮಾಡಲಲ್ಲದಿದ್ದರೆ ಬುದ್ದಿಶಕ್ತಿ ಏತಕ್ಕೆ? ಎಲ್ಲರೂ ಒಂದೇ ರೀತಿ ಯೋಚನೆ ಮಾಡದಿರುವುದಕ್ಕೆಂದೆ ಸೃಷ್ಟಿಕರ್ತನು ಅದನ್ನು ಹಾಗೆ ಮಾಡಿರುವುದು. ಒಬ್ಬರ ತೀರ್ಮಾನಗಳು ಇನ್ನೊಬ್ಬರ ರಬ್ಬರ್ ಸ್ಟಾಂಪ್ ಆಗಿರಬೇಕೆಂದೇ ಸ್ವಾತಂತ್ರ್ಯ ಕೊಟ್ಟಿದ್ದು? ಕೊನೆಗೆ ಯಜಮಾನರೂ ರಾಯರೂ ತಮ್ಮ ಕಾಲಲ್ಲಿ ಜೊಡುಗಳಿವೆಯೆಂದೂ ತಾವು ಮುಂದೆ ಹೋಗಿ ಆ ದಾರಿ ಸರಿಯೊ ಅಲ್ಲವೊ ಎಂಬುದನ್ನು ಪರೀಕ್ಷೆ ಮಾಡಿ ನಮಗೆ ಕೂಗಿ ಹೇಳುವೆವೆಂದೂ ಹೇಳಿ ಮುಂದೆ ನಡೆದರು. ಮೂವರು ಹಿಂದುಳಿದೆವು. ಮೂರ್ತಿ ಕಾಲಿಗೆ ಮುಳ್ಳು ಚುಚ್ಚಿ ರಕ್ತ ಹರಿಯುವಂತಾಗಿತ್ತು. ಸರಿಯಾದ ದಾರಿ ಸಿಕ್ಕದಿದ್ದರೆ ಒಂದು ಹೆಜ್ಜೆ ಕೂಡ ಮುಂದಕ್ಕಿಡಲು ಅವರಿಗೆ ಸಾಧ್ಯವಾಗು ವಂತಿರಲಿಲ್ಲ. ಪುನಃ ಅಂದುಕೊಂಡೆವು – ‘ಹಾಳಾದವನು ಆ ಚೆನ್ನಯ್ಯ ನಮ್ಮ ಸಂಗಡ ಇದ್ದಿದ್ದರೆ?’ ಎಂದು. ಮುಂದೆ ಹೊರಟಿದ್ದವರು ಹಾಗೂ ಹೀಗೂ ಸುತ್ತಿಕೊಂಡು ಒಂದು ಸೀಳುದಾರಿ ಹಿಡಿದು ನಮ್ಮನ್ನು ಕರೆದು ಕೂಗಿದರು. ನಾವು ಆ ಮುಳ್ಳುಕಲ್ಲುಗಳ ದಾರಿಯನ್ನೇ  ಹಿಡಿಯಬೇಕಾಯಿತು. ಚೆನ್ನಯ್ಯನಿದ್ದಿದ್ದರೆ!  ಅವನು ದಾರಿಗಳನ್ನು ಬಲ್ಲವನು. ಸುಲಭವಾಗಿ, ನೇರವಾಗಿ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದನು. ನಮ್ಮ ಸ್ವಂತ ಅನುಭವ ಪರೀಕ್ಷೆಗಳಿಂದಲೇ ಎಲ್ಲವನ್ನೂ ಕಂಡು ತಿಳಿದುಕೊಳ್ಳುವೆವೆಂದು ಯಾವ ಕೆಲಸ ಮಾಡಿದರೂ ಹೀಗೆಯೇ ಎಂದು ತೋರುತ್ತದೆ; ಪರಿಣಾಮದಲ್ಲಿ ಫಲವೇನೊ ದೊರಕಬಹುದು; ಆದರೆ ಮಾರ್ಗ ತಪ್ಪುವ ಸಂಭವವುಂಟು. ಮಾರ್ಗ ಕಷ್ಟವಾಗುವುದಂತೂ ಖಂಡಿತ. ಗುರಮುಖೇನ ಕಲಿತ ಪಾಠ ಸುಲಭವಾಗಿ ಉತ್ತಮ ಶಿಕ್ಷಣವನ್ನು ಕೊಡುವಂತೆ.

ಹತ್ತು ನಿಮಿಷಗಳಲ್ಲಿ ದೊಡ್ಡದಾರಿಗೆ ಬಂದೆವು. ಅಲ್ಲಿಗೆ ಸೇರುವಷ್ಟರೊಳಗೆ ಮೂರ್ತಿ ಗಳಿಗೂ ವೆಂಕಟೇಶಯ್ಯನವರಿಗೂ ಸಾಕುಸಾಕಾಗಿ ಹೋಗಿತ್ತು. ಸಂಸಾರದಲ್ಲಿ ಒದಗುವ ಅಲ್ಪ ಕಷ್ಟಗಳೂ ವೇದನೆಗಳೂ ಮನಸ್ಸನ್ನು ಕೆಡಿಸಿ ನಿರಾಶೆಯನ್ನುಂಟುಮಾಡಿ ಪ್ರಪಂಚದ ಸರ್ವ ಸತ್ಕರ್ಮಗಳಿಗೂ ಉತ್ತಮ ಭಾವನಾ ಸಂತೋಷಗಳಿಗೂ ಅಡ್ಡ ಬರುವಂತೆ ಈ ಹಾಳು ಮುಳ್ಳುಗಳು ನಮ್ಮ ಮನಸ್ಸನ್ನು ಬಲವಂತದಿಂದ ತಮ್ಮತ್ತ ಸೆಳೆದು ಹಿಂಸೆಕೊಟ್ಟಿದ್ದವು. ಬದುಕು ಕೇವಲ ಸುಖಮಯವಾದುದೇ ಅಲ್ಲ; ಅದರಲ್ಲಿ ದಾರಣ ದುಃಖವಿದೆ. ಈ ತತ್ತ್ವವನ್ನು ಜನ ಮರೆತು ಸರ್ವದಾ ಲೋಲುಪರಾಗದೆ ಇರಲಿ ಎಂದು ಭಗವಂತನು ಈ ವಿಧವಾಗಿ ಪ್ರಪಂಚವನ್ನು ಸೃಷ್ಟಿಸಿದನೊ ಏನೊ! ಅದು ಹೇಗಾದರೂ ಇರಲಿ, ಭೂಸಂಪರ್ಕ ದಿಂದ ಪವಿತ್ರವಾಗುವೆವೆಂದು ತಿಳಿದಿದ್ದ ನಮ್ಮ ಸ್ನೇಹಿತರಿಬ್ಬರಿಗೂ ಭೂಮಾತೆ ನಿಷ್ಕಪಟವಾದ ಪ್ರೇಮವನ್ನೇ ತೋರಿದಳೆಂದು ಹೇಳಬೇಕು. ಬೆಳ್ಳನ ಮೂರ್ತಿಯ ಹೆಜ್ಜೆಯಿಂದ ಹರಿಯುತ್ತಿದ್ದ ರಕ್ತವನ್ನು ನೋಡಬೇಕಿತ್ತು. ಪಾಪ.

ಇನ್ನೆರಡು ಮಾರುಗಳ ದೂರದಲ್ಲಿ ಎರಡು ದೇವಸ್ಥಾನಗಳು; ಒಂದು ಕೋದಂಡ ರಾಮಸ್ವಾಮಿ ದೇವಸ್ಥಾನ; – ನದಿಯ ದಂಡೆನಲ್ಲಿಯೇ. ಇನ್ನೊಂದು, ಈಚೆ, ಬೆಟ್ಟದ ಕಿಬ್ಬಿಯಲ್ಲಿ, ಲಕ್ಷ್ಮೀನಾರಾಯಣಸ್ವಾಮಿಯ ದೇವಸ್ಥಾನ. ನಮ್ಮಲ್ಲಿ ಕೆಲವರು ‘ಅದನ್ನೇನು ನೋಡುವುದು? ಅಂಥಾದ್ದು ಇಲ್ಲಿ ಒಂದು ಸಾವಿರವಿದೆ ಬನ್ನಿ;  ಕೋದಂಡರಾಮನ ದರ್ಶನ ತೆಗೆದುಕೊಂಡು ಮುಂದೆ ಹೋಗೋಣ;  ಅಲ್ಲಿ ಪೂಜೆ ನಡೆಯುತ್ತಿರುವಂತೆ ಕಾಣುತ್ತದೆ’ ಎಂದರು. ಆದರೂ ನನಗೆ ಸ್ವಲ್ಪ ಚಪಲ. ರಾಯರು ದೊಡ್ಡ ಮನಸ್ಸು ಮಾಡಿ ನನ್ನಂತೆಯೇ, ನೋಡಿಕೊಂಡು ಹೋಗೋಣವೇಳಿ ಎಂದರು. ಅವರ ಸಹಕಾರದಿಂದ ನನ್ನಾಸೆ ನೆರವೇರಿತು.

ಆ ದೇವಸ್ಥಾನ ದೊಡ್ಡದಲ್ಲ. ಹೊರಗಡೆ ಕೆತ್ತನೆಯ ಕೆಲಸವೊಂದೂ ಇಲ್ಲ. ಯಾವ ಜಕ್ಕಣಾಚಾರ್ಯನ ಶಿಲ್ಪವೂ ಅಲ್ಲಿ ಇಲ್ಲ. ಒಂದೇ ಬಂಡೆಯಲ್ಲಿ ದೇವಸ್ಥಾನವನ್ನು ಕೊರೆದು ಅದನ್ನು ಸಾಮಾನ್ಯವಾಗಿ ಕಟ್ಟಿದ್ದಾರೆ. ಪ್ರಾಕ್ತನ ವಿಚಾರಕರ ಅಥವಾ ಯಾತ್ರಿಕರ ಗಮನ ಈ ದೇವಸ್ಥಾನದ ಕಡೆ ಹೆಚ್ಚಾಗಿ ತಿರುಗಿಲ್ಲ. ಒಳಗೆ ಮೂರು ವಿಗ್ರಹಗಳಿವೆ;  ತೆಳ್ಳಗೆ ಉದ್ದವಾಗಿ ಒಂದರ ಪಕ್ಕದಲ್ಲಿ ಒಂದು ಅತ್ಯುತ್ತಮವಾಗಿ ಕಡೆದು ಮಾಡಿದವು. ಒಂದು ಶ್ರೀಮನ್ನಾರಾಯಣ ವಿಗ್ರಹ;  ಅದರ ಎರಡು ಪಕ್ಕಗಳಲ್ಲಿಯೂ ಶ್ರೀದೇವಿ ಭೂದೇವೀ ಮೂರ್ತಿಗಳು – ನಿಜವಾದ ದೇವತಾವಿಗ್ರಹಗಳಿವು. ಹೀಗಿದ್ದರಲ್ಲವೆ, ಜನರಿಗೆ ಅವುಗಳಲ್ಲಿ ಭಕ್ತಿಯೂ ಪ್ರೀತಿಯೂ ಹುಟ್ಟುವುದು;? ಆದರೆ ನಾವು ಹತಭಾಗ್ಯರು. ಆ ದೇವತಾಮೂರ್ತಿಗಳನ್ನು ಕಣ್ಣಾರೆ ನೋಡಿ ಸಂತೋಷ ಪಡುವ ಪುಣ್ಯವು ನಮಗೆ ಎಲ್ಲಿ ಬಂದೀತು? ಯಾರೊ ಕ್ರೂರಕರ್ಮಿಗಳು – ಘಾತಕರು – ಈ ಸೌಂದರ್ಯವನ್ನೇ ದೂರದಿಂದ ಹುಡುಕಿಕೊಂಡು ಬಂದು ವಿಗ್ರಹಗಳ ಚೆಂದವನ್ನೂ ಚೆಲುವನ್ನೂ ನೋಡಿ ಸಹಿಸಲಾರದೆ ಅವನ್ನು ಭಿನ್ನ ಮಾಡಿದ್ದಾರೆ. ಅನ್ಯಮತೀ ಯರೇ ಅದನ್ನು ಮಾಡಿರಬೇಕೆನ್ನಲಾರೆ, ನಾಶಕ್ರಿಯೆಯಲ್ಲಿ ನಮ್ಮವರ ವ್ಯಾಪಾರ ಸಣ್ಣದೇನಲ್ಲ. ದೇವನ ಅಖಂಡಮೂರ್ತಿಯನ್ನು ಈ ಕರ್ಮಭೂಮಿಯಲ್ಲಿ ನೋಡುವುದು ಅಸಾಧ್ಯವೆಂದು ಕಾಲಕಾಲದಲ್ಲಿಯೂ ಯಾವುದೊ ಅದೃಷ್ಟ ವ್ಯಕ್ತಿಯೊಂದು ಸಾರಿಸಾರಿ ಹೇಳುವುದು ಎನ್ನು ವಂತೆ. ಈ ದೇವಮೂರ್ತಿಗಳ ಪಾದ ಭಾಗವೊಂದು ಮಾತ್ರವುಳಿದು ಉಳಿದ ಶ್ರೀತನುವೆಲ್ಲವೂ ಈಗ ಕಾಣದಂತಾಗಿದೆ. ಸಾಧಾರಣದವರಿಗೆ ಕಾಣಿಸದ ಕಡೆ ಎಲ್ಲಿಯೊ ಒಂದು ಮೂಲೆಯಲ್ಲಿ, ಶ್ರದ್ಧಾಳುಗಳಾಗಿ ಅರಸುವವರಿಗೆ ಮಾತ್ರ ಭಗವಂತನ ಪಾದದರ್ಶನವಾಗುವುದೆಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆದರೆ  ಆ ಪಾದದರ್ಶನ ಮಾತ್ರದಿಂದ – ಅವು ಇಂಥ ದಿವ್ಯ ಪಾದಗಳೇ ಆಗಿದ್ದಾಗ್ಯೂ – ನಮಗೆ ಸಂತೊಷ ದೊರೆಯದೆಂದೂ ಈ ರೀತಿ ಅವನ್ನು ಕಂಡರೆ ಸಂತೋಷಕ್ಕಿಂತಲೂ ಹೆಚ್ಚಾಗಿ ದುಃಖವೇ ಆಗುವುದೆಂದೂ ವಿಶದವಾಗಿ ಹೇಳಬೇಕಾದು ದೇನಿದೆ? ಇಲ್ಲವಾಗಿದ್ದರೆ ದೇವ ಸಂದರ್ಶನವಂತೂ ಇರಲಿ – ಈ ಶಿಲಾದೈವಸಂದರ್ಶನವೂ ಸಂಪೂರ್ಣವಾಗಿ ಆಗದಿರುತ್ತಿತ್ತೆ? ಮೇಲ್ಗಡೆ ಸಪ್ತಫಣಗಳಿಂದ ದೇವನಿಗೆ ಛತ್ರಿ ಹಿಡಿದಂತೆ ನಿಂತಿರುವ ಫಣಿರಾಜನಿಗೂ ದುರ್ಗತಿ ತಪ್ಪಿಲ್ಲ. ಫಣಿರಾಜನ ಕಂಠವು ಕತ್ತರಿಸಿ ಹೋಗಿದೆ. ಎಲ್ಲಿಯೊ ನಡುವೆ ಹರಿದುಹೋಗಿರುವ ಫಣಭಾಗದಿಂದ ಒಂದೆರಡು ಜೊತೆ ನಾಲಗೆಗಳು ಒಡೆಯನಿಗೆ ಏನೊ ಹೇಳುವುದಕ್ಕೆಂದು ಹೊರಟು ಹೇಳಿ ಮುಗಿಸುವಷ್ಟರಲ್ಲೇ ಜೀವರಸ ಪ್ರವಾಹವು ನಿಂತುಹೋಗಲು ನಿಶ್ಚೇಷ್ಟವಾಗಿ ನಿಂತುಬಿಟ್ಟಂತೆ ಕಾಣುತ್ತಿದೆ. ಈಗಲೂ ಇಷ್ಟು ದಿನಗಳ ಮೇಲೆ ಈ ಮುನ್ನೂರು ಮೈಲಿಗಳ ದೂರದಿಂದ ಒಮ್ಮೆ ಆ ದೃಶ್ಯವನ್ನು ನೋಡಿದರೆ, ದುಶ್ಶಮಿತವಾದ ತೀವ್ರ ವೇದನೆಯೊಂದು ಮನಸ್ಸಿನಲ್ಲಿ ಉಂಟಾಗಿ ಶೂಲದ ಇರಿತದಂತೆ ನೋಯಿಸುತ್ತದೆ. ಆದರೂ ಅದೇ ದೃಷ್ಟಿ ಪುನಃಪುನಃ ಪ್ರೀತಿಯಿಂದ, ಭಕ್ತಿಯಿಂದ, ನಯದಿಂದ, ನಿರ್ಮಲಾಂತಃಕರಣದಿಂದ, ಅಶ್ರುಜಲಾಂಜಲಿಗಳಿಂದ ಆ ಪವಿತ್ರ ಪಾದಗಳ ಬಳಿಗೆ ಹೋಗಿ ಅದನ್ನು ತೊಳೆದು ಕುಸುಮ ಪರಿಮಳಗಳಿಂದ ಪೂಜಿಸಲೆಳಸಿ ಸರ್ವದಾ ಅಲ್ಲಿಯೇ ಇರಲು ಆತುರಾತುರವಾಗಿಯೂ ಇರುತ್ತದೆ. ಕವಿಯೊಬ್ಬನು ಹೇಳಿರುವಂತೆ ಇಹದಲ್ಲಿ ಅಸಮಗ್ರವಾಗಿ ಅಸಂಪೂರ್ಣವಾಗಿ ಮುರಿದು ಬೇರೆ ಬೇರೆಯಾಗಿರುವುದೆಲ್ಲ ಪರದಲ್ಲಿ ಸಮಗ್ರವಾಗಿ ಸಂಪೂರ್ಣವಾಗಿ ರೂಪುಗೊಂಡು ರಂಜಿಸುವುದೇನೊ! ಈಗ ಉಳಿದಿರುವ ಈ ಪಾದಪದ್ಮಗಳ ನೆನಪಾದರೂ ಸರ್ವದಾ ನಮಗೆ ಇರುವಂತೆ ಈ ದೇವನೇ ನಮ್ಮನ್ನು ಆಶೀರ್ವದಿಸಕೂಡದೇಕೆ?

ಮುಂದೆ ಕೋದಂಡರಾಮಸ್ವಾಮಿಯ ಗುಡಿ. ಅಲ್ಲಿ ಜನರ ಗದ್ದಲ ಬಹಳ;  ಸಮಾರಾಧನೆಯ ಸಂಭ್ರಮದ ಓಡಾಟ ಬೇರೆ. ಅಷ್ಟು ಜನರ ಗದ್ದಲವಿರುವಕಡೆಯೂ ಅರ್ಚಕರ ಆರಾಧನೆ ಪೂಜೆಗಳು ನಡೆಯುತ್ತಿರುವ ಕಡೆಯೂ ವಾಸಿಸಿಕೊಂಡಿರುವುದಕ್ಕೆ ದೇವನು ಹಿಂಜರಿಯುತ್ತಾನಂತೆ. ಅವನಿಗೆ ಜನಭಯ ಬಹಳ. ಅಲ್ಲಿಂದ ಮುಂದೆ ನೋಡು ವಲ್ಲಿ ಅತಿಶಯ ಸಂತೋಷದಾಯಕವಾದ ವಿಷಯ! ನಮ್ಮ ಭಾಗ್ಯದೇವತೆಯ ಹಾಗೆ ಚೆನ್ನಯ್ಯನು ಬರುತ್ತಿದ್ದನು!! ಇನ್ನೇನು ನಮಗೆ ಭಯ?

‘ನೋಡಿ ಸಾರ್, ಇಲ್ಲಿ ಬರುತ್ತಿದ್ದಾನೆ. ಅಲ್ಲೆಲ್ಲ ಹುಡುಕಿದರೆ ಸಿಕ್ಕುತ್ತಾನೆಯೆ?’

‘ಇಷ್ಟು ಹೊತ್ತು ಎಲ್ಲಿ ಹೋಗಿದ್ದೆಯೊ – ಗಂಡ?’ ಎಂದರು ಯಜಮಾನರು – ‘ನಿನಗೆ ಕಾದು ಕಾದು ಈ ಹೊತ್ತಿನ ಕೆಲಸವೆಲ್ಲ ನಾಶವಾಗಿ ಹೋಯಿತು’

ಚೆನ್ನಯ್ಯ- ಅವರು ಒಯ್ದುಕೊಂಡೋಗಿಬಿಟ್ರು. ಎಷ್ಟು ಹೇಳಿದರೂ ಬಿಡಲಿಲ್ಲ. ಈಗ ಬರೋದು ಕೂಡ ಕಷ್ಟವಾಗಿ ಹೋಯ್ತು.

ಯಜ – ಹೋಗಲಿ. ಈಗ ನಮ್ಮ ಜೊತೆಯಲ್ಲಿ ನೀನು ಬರಬೇಕು.

ಚೆ – ಒಂದು ಸಲ ನಾನಲ್ಲಿಗಾಗಲೇ ಅವರನ್ನು ಕರೆದುಕೊಂಡು ಹೋಗಿಬಂದೆ ಸ್ವಾಮಿ. ಇಲ್ಲಿಗೆ ಬಲುದೂರ ಇದೆ. ನಡೆದು ಕಾಲು ಬಿದ್ದು ಹೋಗಿದೆ. ನೋಯುತ್ತೆ ಸ್ವಾಮಿ!

ನಾವು –  ನೋವು ಏನು ಮಾಡುತ್ತೆ ನಡೆಯೊ! ನಾಳೆ ನಿನ್ನ ನಾವು ಬಾಯೆಂದು ಕರೆಯುತ್ತೇವೆಯೆ?… ಇಲ್ಲಿಂದ ಅಲ್ಲಿಗೆ ಎಷ್ಟು ದೂರವಾಗುತ್ತೆ ?

ಮನುಷ್ಯರ ಸ್ವಾರ್ಥಪರತೆಗೆ ಮೇರೆಯೇ ಇಲ್ಲ. ನಮ್ಮ ಕೆಲಸವಾದರೆ ಆಯಿತು. ಇತರರ ಚಿಂತೆ ನಮಗೇನು?

ಚೆ – ನಾಲ್ಕೈದು ಮೈಲಿ ಆಗುತ್ತೆ ಸ್ವಾಮಿ. ಬರೋದಕ್ಕೆ ತುಂಬಾ ಹೊತ್ತಾಗುತ್ತೆ.

ನಾವು – ದೂರದ ನೆಪಹಾಕಿ ತಪ್ಪಿಸಿಕೊಳ್ಳಬೇಕು ಅಂತಿದ್ದೀಯೋ? ನಿನಗೇನು ಎಷ್ಟು ತಪ್ಪಿದರೆ ಅಷ್ಟೇ ಸಾಕು. ಈವೊತ್ತು ಎಷ್ಟೇ ಹೊತ್ತಾದರೂ ಅಲ್ಲಿ ಹೋಗಿಯೇ ಬರಬೇಕು.

ಚೆ – ಅದಕ್ಕಲ್ಲ ಸ್ವಾಮಿ – ನಡೀರಿ ಬರ‌್ತೇನೆ. ದೂರವೇನೊ ಕಡಮೆ ಇಲ್ಲ, – ಇತ್ಯಾದಿ.

ಅಂತು ಚೆನ್ನಯ್ಯ ನಮ್ಮ ಜೊತೆಯಲ್ಲಿ ಬರುವುದಕ್ಕೆ ಒಪ್ಪಿ ಮುಂದೆ ನಡೆದನು. ಅವನು ಮುಂದೆ, ನಾವು ಹಿಂದೆ. ಅವನು ಹಾಗೆಯೇ ನಮ್ಮ ಕಡೆ ತಿರುಗಿ ಅಲ್ಲಿನ ಒಂದು ಪ್ರದೇಶವನ್ನು ಕೈಬೆರಳಿಂದ ನಿರ್ದೇಶಿಸಿ, ‘ಅಲ್ಲಿ ನೀರು ಬಲು ಆಳ ಇದೆ ಸ್ವಾಮಿ. ಮೊನ್ನೆ ಇಬ್ಬರು ಮುಳುಗಿ ಹೋದರು’ ಎಂದನು.

‘ಎಲ್ಲೊ?’

ಕೋದಂಡರಾಮಸ್ವಾಮಿ ದೇವಸ್ಥಾನದ ಎದುರಿನಲ್ಲಿ ನದಿಯ ಪಾತ್ರ ಬಹು ಅಗಲ ವಾಗಿದೆ. ನೀರಿನ ಪ್ರವಾಹ ಬಂದು ಬಂದು ಇಲ್ಲಿ ಸುಮಾರು ಒಂದು ಸಣ್ಣ ಕೆರೆಯಷ್ಟು ಅಂಗಳವನ್ನು ಮಾಡಿಕೊಂಡಿದೆ. ಎದುರಿಗಿರುವ ದೇವರು ದೇವಸ್ಥಾನಗಳ ಸಮ್ಮುಖದಲ್ಲಿ ತುಂಗಭದ್ರೆ ನಮ್ರಳಾಗಿ ಪ್ರಣಾಮ ಗೈಯಲೆಳಸಿ ಪ್ರದಕ್ಷಿಣೆ ಮಾಡಿ ಮುಂದೆ ಹೋಗುವಂತಿದೆ. ಅಲ್ಲಿಗೆ ಕೈಬೆರಳು ತೋರಿಸಿ ಚೆನ್ನಯ್ಯ ‘ಅಲ್ಲಿ’ ಎಂದನು. ನದಿಯ ಆಚೆಕಡೆಯ ದಂಡೆಯಲ್ಲಿ ಶ್ರೀರಾಮದೂತನು ಹುಟ್ಟಿದನೆಂಬ ಅಂಜನಾಪರ್ವತ. ನಮಗೆ ಎಡಗಡೆ ಬೆಟ್ಟಗಳ ನಡುವೆ ಜಾಗಮಾಡಿಕೊಂಡು ಹರಿದುಬರುತ್ತಿರುವ ನದಿ. ವಿಶಾಲವಾದ ನಮ್ಮ ಮುಂದಿನ ಜಲಾಂಗಣ;  ತುಂಗಭದ್ರೆ ಅಲ್ಲಿಂದ ಮುಂದೆ ಅತಿ ಸಂಭ್ರಮದಿಂದ ಪ್ರಯಾಣ ಮಾಡುತ್ತ ಎದುರಿಗೆ ಸಿಕ್ಕಿದ ಕಲ್ಲುಬಂಡೆಗಳನ್ನು ಅಪ್ಪಳಿಸಿಕೊಂಡು, ಸೀರ್ಪನಿಗಳನ್ನು ಚೆಲ್ಲಿಕೊಂಡು, ಅವುಗಳ ಮೇಲೆ ಝಲ್ಲನೆ ಹರಿದು, ಸುಳಿದು ಸಗರ್ವದಿಂದ ಹೋಗುತ್ತಿರುವ ದೃಶ್ಯ. ಅವನ್ನು ನೋಡಿದರೆ ಯಾರ ಮನಸ್ಸಿನಲ್ಲಿ ತಾನೆ ಗಂಭೀರಭಾವತರಂಗಗಳು ಉದಯಿಸವು ! ರಾಯರು ಕೇಳಿದರು – ‘ಇಲ್ಲೆಲ್ಲೊ, ಚೆನ್ನಯ್ಯ’  ಸಂನ್ಯಾಸಿ ದಿಬ್ಬವೆಂಬ ಜಾಗವಿದೆ ಅಂತಾರಲ್ಲ?’ ಎಂದು.

ಚೆ – ಅಗೊಳ್ಳಿ ಸ್ವಾಮಿ, ಅದು, ಆ ಕಲ್ಲುಮಂಟಪ, ನದಿಯ ಆಚೆಕಡೆ?

ಮಂಟಪವನ್ನು ಆಗಲೆ ನಾವೆಲ್ಲ ನೋಡಿದ್ದೆವು. ಇತರ ಕಲ್ಲುಮಂಟಪಗಳಂತೆಯೇ – ಹೊರಗಣ ಆಕಾರದಲ್ಲಿ – ಅದೂ ಅತಿ ಸಾಮಾನ್ಯವಾದುದು. ಆದರೆ ಬೆಟ್ಟದ ಆ ಕಡಿದಾದ ತಪ್ಪಲಿನಲ್ಲಿ, ಆ ದುರ್ಗಮಪ್ರದೇಶದಲ್ಲಿ, ಪ್ರಾಣಿ ಸಂಬಂಧವಿಲ್ಲದ ಆ ನಿವಾಸವನ್ನು ಮಾಡಿಕೊಂಡು ಇರುತ್ತಿದ್ದವರು ಎಂಥವರಾಗಿರಬೇಕು? ಎಂದುಕೊಂಡಿದ್ದೆವು. ಈಗ ಅದೇ ಮಂಟಪವೇ ಸಂನ್ಯಾಸಿ ದಿಬ್ಬವೆಂದು ತಿಳಿಯುತ್ತಲೆ ರಾಯರ ಮನಸ್ಸು ಸಂಪೂರ್ಣವಾಗಿ ಆ ಕಡೆ ಹೊರಟುಹೋಯಿತು. ಅದನ್ನು ಅವರು ಹಾಗೇ ಧ್ಯಾನಿಸುತ್ತ ನಿಂತರು. ಐತಿಹಾಸಿಕ ಸಂಬಂಧಗಳಿಂದ, ಅವರ ಕಣ್ಣಿಗೆ – ನಮ್ಮೆಲ್ಲರೆ ಕಣ್ಣಿಗೆ – ಆ ನಿರ್ಜೀವ ಮಂಟಪ ವಿದ್ಯಾರಣ್ಯರ ತಪಸ್ಸ್ಥಾನವಾಗಿ ಎದುರಿಗೆ ಚಿತ್ರಿತವಾಗಿ ನಿಂತಿತು. ವಿದ್ಯಾರಣ್ಯರ ವಿಷಯದಲ್ಲಿ ಅನಂತಭಕ್ತಿಭಾವಗಳಿದ್ದ ರಾಯರಿಗಂತೂ ಕಾಲದೇಶಗಳ ಅರಿವು ಅಳಿಸಿಹೋಗಿ ಮನಸ್ಸು ಧ್ಯಾನದಲ್ಲಿ ಮುಳುಗಿತು. ಸ್ವಲ್ಪ ಹೊತ್ತಿನ ಬಳಿಕ, ‘ಅಲ್ಲಿಗೆ ಹೋಗುವುದಕ್ಕೆ ದಾರಿಯಿಲ್ಲ ವೇನಯ್ಯ?’ ಎಂದರು.

ಚೆ – ಇಲ್ಲ ಸ್ವಾಮಿ, ಆನೆಗೊಂದಿಯ ಕಡೆಯಿಂದ ಬೆಟ್ಟ ಹತ್ತಿ ಇಳಿದು ಬಂದರೆ ಆಗಬಹುದು. ಬಲು ಕಷ್ಟ.

ರಾ – ನೀರು ದಾಟಿ ಯಾರೂ ಆ ಕಡೆ ಈಗ ಹೋಗುವುದೇ ಇಲ್ಲವೇನು?

ಚೆ – ನಾನು ಯಾರನ್ನೂ ನೋಡಿಲ್ಲ ಗುರುವೆ. ನೀರು ಬಹಳ ಇದೆ. ಅಂಥಾದ್ದು ಈ ಸುತ್ತಮುತ್ತಲೂ ಎಷ್ಟೋ ಇವೆ. ಅಲ್ಲಿ ಹೋಗಿ ಇರೋ ಅಂಥಾವೋರು ಈಗ ಯಾರೂ ಇಲ್ಲ.

ನಿಜವಾಗಿಯೂ ಅದು ನಿರ್ಗಮ ಪ್ರವೇಶವೇ. ಇಲ್ಲದಿದ್ದರೆ ನಿದ್ಯಾರಣ್ಯರು ಆ ಸ್ಥಳದಲ್ಲಿ ತಮ್ಮ ಆಶ್ರಮವನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದರೆ? ಜನರ ಸುಳಿವಿಲ್ಲದೆ, ಅದರ ಗದ್ದಲಕ್ಕೆ ದೂರವಾದ ಆ ಏಕಾಂತ ಸ್ಥಾನ ಎಷ್ಟು ರಮಣೀಯವಾಗಿದೆ? ವಿಶ್ವವ್ಯಾಪಾರ ತತ್ತ್ವಗಳನ್ನು ಕುರಿತು ಚಿಂತಿಸುತ್ತ, ಶಮದಮಯೋಗಾದಿ ತಪಶ್ಚರ್ಯೆಗಳಿಂದ ಆತ್ಮಶಕ್ತಿ ಯನ್ನು ವೃದ್ದಿಪಡಿಸಿಕೊಂಡು, ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡು ನಿಶ್ಚಿಂತರಾಗಿರಲು ಕಲಿಯಲು ಈ ಶಾಂತಿನಿಕೇತನವು ಎಷ್ಟು ತಕ್ಕುದಾಗಿ ಮನೋಹರವಾಗಿರುವುದೆಂಬುದನ್ನು ವರ್ಣಿಸಿ ಹೇಳುವುದು ಸಾಧ್ಯವಿಲ್ಲ. ಇಲ್ಲಿ ಕುಳಿತು ತಾನೇ ಆ ವೀರತಪಸ್ವಿಗಳು ಹಿಂದೂ ಧರ್ಮವನ್ನು ಉದ್ಧಾರಮಾಡುವ ಯೋಚನೆಗಳನ್ನು ಪಕ್ವಮಾಡಿಕೊಂಡುದು! ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಉದ್ದೇಶಗಳನ್ನು ಹುರಿಮಾಡಿಕೊಂಡುದು!

ಹಂಪೆಯ ಆಕೃತಿಯನ್ನೂ, ಅಲ್ಲಿ ಭೂಕಟ್ಟನ್ನೂ, ಪ್ರಕೃತಿರಮಣೀಯತೆಯನ್ನೂ ನೋಡಿದರೆ ಸಾಮಾನ್ಯರಾದವರ ಮನಸ್ಸಿನ ಉತ್ಸಾಹವೇ ಮೇರೆ ತಪ್ಪಿದಂತಾಗುವುದು. ಅವರಂಥ ತಪಸ್ವಿಗಳಿಗೂ ದೇಶಭಾಂಧವರಿಗೂ ಸ್ಮಾರ್ತ ಸಾಮ್ರಾಜ್ಯ ಸಂಸ್ಥಾಪನೆಯ ಯೋಚನೆ ಬಂದುದು ಹೆಚ್ಚೇನು? ಬ್ರಾಹ್ಮಣನ ಸತ್ವತೇಜಸ್ಸಂಪಾದನೆಗೂ ಕ್ಷತ್ರಿಯನ ಕ್ಷಾತ್ರ ರಾಷ್ಟ್ರ ಪ್ರತಿಷ್ಠಾಪನೆಗೂ ಭೂಮಿಯ ಈ ಭಾಗ ಪಡೆದಿರುವಷ್ಟು ಅನುಕೂಲ್ಯ ಇನ್ನಾವ ಭಾಗವೂ ಪಡೆದಿಲ್ಲವೆಂದು ಹೇಳಬಹುದು. ಮುಂದೆ ಮುಂದೆ ಹೊರಟೆವು. ರಾಯರು ಇನ್ನೂ ಧ್ಯಾನತತ್ಪರರಾಗಿಯೇ ಇದ್ದರು. ನಾವು ಯಾರೂ ಅವರನ್ನು ಮಾತನಾಡಿಸಲಿಲ್ಲ; ‘ಅವರನ್ನು ನಾಸ್ತಿಕರೆಂದು ಕರೆಯುವರಾರು?’ ಎಂದು ನನಗೆ ಅನ್ನಿಸಿತು.

ಮುಂದೆ ಅನತಿದೂರದಲ್ಲಿಯೇ ಎತ್ತರವಾದ ತುಲಾಪುರುಷ ದಾನಸ್ತಂಭಗಳು;  ವಿಜಯ ನಗರದ ಅರಸರು ಪರ್ವ ಗ್ರಹಣ ಇತ್ಯಾದಿ ಪುಣ್ಯಕಾಲಗಳಲ್ಲಿ ತುಲಾಭಾರ ಮಾಡಿಸಿಕೊಂಡು ರತ್ನಕನಕಾದಿ ದ್ರವ್ಯಗಳನ್ನು ಯಥೇಚ್ಛವಾಗಿ ದಾನಮಾಡುತ್ತಿದ್ದ ಸ್ಥಳವಂತೆ. ಸಾಮ್ರಾಜ್ಯೇಶ್ವರ ಕೃಷ್ಣದೇವರಾಯನೂ ಅವನ ತರುವಾಯ ಬಂದ ಅಚ್ಯುತರಾಯನೂ ಇಲ್ಲಿ ಈ ತೆರನಾದ ಸುವರ್ಣದಾನಗಳನ್ನು ಅನೇಕವಾಗಿ ಮಾಡಿದರಂತೆ. ಅದು ಶಾಂತಿ ಕರ್ಮವೊ ಶಾಸ್ತ್ರವಿಧಿಯೊ ತಮ್ಮ ವೈಭವ ದರ್ಪಗಳ ಉದ್ದಂಡ ಧೋರಣೆಯನ್ನು ಲೋಕಕ್ಕೆ ಪ್ರಕಟಿಸಿ ಖ್ಯಾತಿಗೊಳ್ಳಲು ಹಿಂದಿನವರು ನಡೆಸುತ್ತಿದ್ದ ದಂಭವೃತ್ತಿಯೊ ಇವೆಲ್ಲವೂನೊ ಹೇಳುವರಾರು? ನಮ್ಮದು ಅತಿವೃಷ್ಟಿ ಅನಾವೃಷ್ಟಿಯ ಖಂಡ. ಇಲ್ಲಿ ಯಾವ ವಿಷಯದಲ್ಲಿಯೂ ಜನರಲ್ಲಿ ಸಮತೆ ಯಾಗಲಿ ಸ್ತಿಮಿತಗತಿಯಾಗಲಿ ಮಧ್ಯವೃತ್ತಿಯಾಗಲಿ ಇರದು. ಈ ಸ್ವಭಾವ ಉಷ್ಣದೇಶ ಗಳವರಾದ ನಮಗೆ ಸೃಷ್ಟಿಕರ್ತನು ಕೊಟ್ಟ ಅಖಂಡಶಾಪವೆಂದು ತೋರುವುದು.