ತಾಳವಿಲ್ಲದಲೆ ಬೇತಾಳನಂದದಿ ಕುಣಿತ
ಕಾಳ ನತರ್ಕನ ಕಾಲ್ಕೆಳಗೆ ತೊತ್ತುಳಿಗೊಂಡು
ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿಗಿದಿರಾಗಿ ಬಂದು ನಿಂದು
ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು
ಬೀಳುಗಳ ಬದಿಬದಿಗೆ ಬೀಳುಗಳ ಬಾಳುಗಳು
ಕಾಳ ರಕ್ಕಸನ ಕಡೆಕೂಳು – ಬಾಳಕವಾದ ನಾಡ ನಡುಮನೆಯ ಕಂಡೆ.


ಕನಸೆನಲೊ, ಕಾಡು ಪಾಲಾದ ಭೂಪಾಲಕನ
ಮನಸೆನಲೊ, ಮೋಡದೊಳು ಮೂಡಿ ಮುಸುಳುವ ಚಿತ್ರ –
ವೆನಲೋ, ಕಂಪಡಗಿ ಪೆಂಪುಡುಗಿ ಬಣ್ಣವು ಕೆಟ್ಟ ನಿರ್ಮಾಲ್ಯ ಮಾಲೆಯೆನಲೊ?
ನೆನಸಿ ಕೃತಕರ್ಮ ಪಶ್ಚಾತ್ತಾಪದಿಂದ ಬೆಂದು
ಜನಿಸಿ ಸುಜ್ಞಾನ, “ಉದ್ಧಾರ ಮಾಡಿರಿ” ಎಂದು
ಮನಸಿನಿಂದೆರಗಿರುವನೆನಲೊ – ಪಾತಕಿ ಬಂದು ಪಾವನನ ಚರಣಗಳಿಗೆ.


ಬಿದ್ದ ರಾಜ್ಯವಿದಲ್ಲ ಉದ್ಬುದ್ಧವಾಗಿದ್ದು
ಎದ್ದ ರಾಜ್ಯದ ಮೊಳಕೆಯಿದು, ಇದರ ಬಳಿಯಲ್ಲಿ
ಇದ್ದು ಸಂಜೀವನದ ಜಪಿಸುವಂತಹ ಯೋಗಿ ಕೊಂಪೆ ಹಂಪೆಯು ಇದಲ್ಲ.
ಬುದ್ದಿಯೆಣಿಸಿತು, ಅಂತರಂಗದಧಿನಾಯಕನು
ಸುದ್ದಿಯನು ಸೂರುವೊಲು ಬುದ್ದಿಯನು ಮೀರುವೊಲು
ಎದ್ದು ಹೇಳಿದನೊ ತಾ ಕನಕನೊಡೆಯನು ಪೇಳ್ದ ಶುದ್ಧ ಮುಂಡಿಗೆಯಿದೆಂದು.


ಕರ್ಮಯೋಗಿಯ ಬಳಿಗೆ ಯೋಗೀಶ್ವರನು ನಿಂದು
ಕರ್ಮದ ಅಕರ್ಮದೊಳ ಮರ್ಮಮಂ ತಿಳಿಸಿ ಸದ್ –
ಧರ್ಮಮಂ ಸತತ ನಡೆಸಿದರೆ, ಧ್ರುವವಿಜಯವೆಂದಂದು ತೋರಿಸಿದ ತೆರದಿ.
ಧರ್ಮ – ಕರ್ಮದ ಪುರಾತನ ಪುರಗಳಿವು ಪೂರ್ವ
ಧರ್ಮ ಬಲದಿಂದೇರಿ ಕರ್ಮಬಲದಿಂದಿಳಿದು
ಮರ್ಮದೊಳು ನೆಡುವಂತೆ ಸಪ್ರಯೋಗಿಕಮಾಗಿ ಕಲಿಸುವವು ತತ್ವೆವೆಂದು.

ಅಂಬಿಕಾತನಯದತ್ತ

—-
ಆಕರ: ಅಂಬಿಕಾತನಯದತ್ತರ ಸಮಗ್ರಕಾವ್ಯ, ಬೇಂದ್ರೆ ಜೀವನ ಮಹಾಕಾವ್ಯ, ಔದುಂಬರ ಗಾಥೆ, ದಶರ್ನ, ಸಂಪುಟ ೨, ಸಂಪಾದಕರು : ವಾಮನ ಬೇಂದ್ರೆ, ವರಕವಿ ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳ್ಳಿ ೫೮೦ ೦೩೦.