ಪ್ರವಾಸ ಒಂದು ಚೇತೋಹಾರಿ ಅನುಭವ. ನಾವು ಅನೇಕ ಬಗೆಯ ಪ್ರವಾಸಗಳನ್ನು ಮಾಡುತ್ತೇವೆ. ಅದರಲ್ಲೂ ದೇಶವಿದೇಶಗಳ ಅಪೂರ್ವ ‘ತಾಣ’ಗಳನ್ನು ನೋಡಬೇಕೆಂಬುದು ಮನುಷ್ಯನ ಮೂಲಬಯಕೆಗಳಲ್ಲಿ ಒಂದು. ಅಂಥ ಬಯಕೆಯ ಪರಿಣಾಮವಾಗಿ ಬೇರೆ ಬೇರೆ ದೇಶದ ಪ್ರವಾಸಿಗರು ನಮ್ಮ ದೇಶಕ್ಕೂ ನಮ್ಮ ದೇಶದ ಪ್ರವಾಸಿಗರು ವಿದೇಶಗಳಿಗೂ ಹೋಗಿ ಬರುವುದುಂಟು. ಹೀಗೆ ಹೋಗಿ ಬರುವವರು ‘ಪ್ರವಾಸ ಕಥನ’ಗಳನ್ನು ಬರೆಯುತ್ತಾರೆ. ಅವರು ತಮ್ಮ ದಿನಚರಿಯ ಪುಟಗಳಲ್ಲಿ ಚಿತ್ರಣ ಹಾಕಿಕೊಂಡಿದ್ದನ್ನು ವಿವರವಾಗಿ ಬರೆಯುವುದುಂಟು. ಆ ಬಗೆಯ ‘ಪ್ರವಾಸ ಕಥನ’ಗಳು ಇತಿಹಾಸದ ದಾಖಲೆಗಳಾಗಿ ಮಾತ್ರ ಉಳಿದುಕೊಳ್ಳದೆ; ಸಾಂಸ್ಕೃತಿಕ ದಾಖಲೆಗಳಾಗಿಯೂ ಮನುಷ್ಯ ಸ್ವಭಾವದ ರೂಪಣಗಳಾಗಿಯೂ ಉಳಿಯುತ್ತವೆ. ಇಂಥ ಅಪೂರ್ವ ಪ್ರವಾಸ ಕಥನಗಳನ್ನು ದೇಶ-ವಿದೇಶದ ಬರೆಹಗಳಲ್ಲಿ ಕಾಣುತ್ತೇವೆ. ಅಂಥ ಪ್ರವಾಸಕಥನಗಳನ್ನು ಓದುವುದು ಒಂದು ವಿಶಿಷ್ಟ ಅನುಭವವೇ ಸರಿ!

ಮಧ್ಯಕಾಲೀನ ದಕ್ಷಿಣ ಭಾರತದ ಚರಿತ್ರೆಯಲ್ಲಿ ‘ವಿಜಯನಗರ’ಕ್ಕೆ ಸಂದಿರುವ ಪ್ರಾಶಸ್ತ್ಯ ಅಷ್ಟಿಷ್ಟಲ್ಲ. ಕರ್ಣಾಟಕಕ್ಕೆ ಕೋಡು ಮೂಡಿಸಿದ ಕಾಲವೆಂದರೆ ವಿಜಯನಗರ ಸಾಮ್ರಾಜ್ಯದ ಯುಗವೇ. ಇಲ್ಲಿ ವಿರೂಪಾಕ್ಷನೆ ಅಧಿದೈವ. ರಾಜರೆಲ್ಲ ಆ ದೈವದ ಅಧೀನರು. ವಿರೂಪಾಕ್ಷಸ್ವಾಮಿಯ ಅಂಕಿತದಲ್ಲಿ ಸಕಲವೂ ನಡೆಯಬೇಕು. ಇದು ಆಕಾಲದ ಸಾಂಸ್ಕೃತಿಕ ನ್ಯಾಯ.

ಇಂಥ ದೊಡ್ಡ ಸಾಮ್ರಾಜ್ಯಕ್ಕೆ ವಿದೇಶಗಳಿಂದ ಬಂದು ಹೋದವರ ಸಂಖ್ಯೆ ಅಪರಿಮಿತ. ಕ್ರಿ.ಶ. ೧೫ನೇ ಶತಮಾನ ಪೂರ್ವಾರ್ಧದಿಂದ ಈ ‘ಯಾತ್ರೆ’ ಆರಂಭವಾಗಿ ಕಳೆದ ಶತಮಾನದವರೆಗೂ ವಿದೇಶಿ ಪ್ರವಾಸಿಗರು ಬಂದು ಹೋಗಿದ್ದಾರೆ. ಬಂದು ಹೋದವರಲ್ಲಿ ಕೆಲವರು ‘ಪ್ರವಾಸ ಕಥನ’ಗಳನ್ನು ಬರೆದಿಟ್ಟಿದ್ದಾರೆ. ಇನ್ನೆಷ್ಟೊ ಪ್ರವಾಸ ಕಥನಗಳು ಕಾಲಗರ್ಭದಲ್ಲಿ ಹೂತುಹೋಗಿವೆ. ಕೆಲವು ಪ್ರವಾಸಿಗರು ಬರೆದಿಟ್ಟುಕೊಂಡ ದಿನಚರಿಗಳು ಕನ್ನಡಕ್ಕೆ ಬರದೆ ಹಾಗೇ ಉಳಿದುಬಿಟ್ಟಿವೆ. ಹೀಗೆ ಉಳಿದುಕೊಂಡ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ‘ವಿಜಯನಗರ’ದ ಸಾಂಸ್ಕೃತಿಕ ಅನನ್ಯತೆಗಳು, ಅದರ ವೈಭವಗಳು, ಅಲ್ಲಿಯ ಸಾಮಾಜಿಕ ಸಂಗತಿಗಳು, ಅಲ್ಲಿಯ ಆಚರಣೆಗಳು ನಮ್ಮ ಕಣ್ಣ ಮುಂದೆ ಅಪೂರ್ವ ಸಂಗತಿಗಳನ್ನು ಪ್ರದರ್ಶಿಸುತ್ತವೆ. ಇವುಗಳ ಅಧ್ಯಯನ ಆಗಬೇಕಾಗಿದೆ. ಇಲ್ಲಿಗೆ ಬಂದು ಹೋದ ನಿಕೊಲೊ-ದೆ-ಕೊಂತಿ, ಅಬ್ದುಲ್ ರಜಾಕ್, ದುಆರ್ತೆ ಬಾರ್ಬೊಸಾ, ಡೊಮಿಂಗೊ ಪ್ಯಾಸ್, ಫರ್ನಾಒ ನೂನಿಜ್ ಇವರಂಥ ಪ್ರಸಿದ್ಧ ಪ್ರವಾಸಿಗರ ಬರೆಹಗಳು ಇರುವಂತೆ; ಇಬ್-ನೆ-ಬತುತಾ, ಅಥನೇಷಿಯಸ್ ನಿಕಿಟಿನ್, ಸೀಜರ್ ಫ್ರೆಡರಿಕ್, ಬ್ಯಾರಡಸ್, ಲೆಫ್ಟಿನೆಂಟ್ ಎಮಿಟ್ ಇವರಂಥ ಅಷ್ಟು ಪ್ರಸಿದ್ಧರಲ್ಲದ ಪ್ರವಾಸಿಗರೂ ಇದ್ದಾರೆ. ‘ವಿಜಯನಗರ’ದ ಸಾಂಸ್ಕೃತಿಕ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಇವರೆಲ್ಲರೂ ನೀಡುವ ವಿವರಗಳು ಅಪೂರ್ವವಾಗಿವೆಯೆಂದೇ ನಮ್ಮ ನಂಬುಗೆ.

ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ನಿರ‌್ಮಾಣವೆಂದರೆ, ಸಮಸ್ತ ವಸ್ತು ವಿವರಗಳ ವ್ಯಾಖ್ಯಾನವೆಂದೇ ಅರ್ಥ. ಸಾಂಸ್ಕೃತಿಕ ಪರಿಪ್ರೇಕ್ಷ್ಯಕ್ಕೆ ಇತಿಹಾಸದ ದಾಖಲೆಗಳು ಎಷ್ಟು ಮುಖ್ಯವೊ ಆ ಕಾಲದ ಚಾರಿತ್ರಿಕ ಕಾವ್ಯಗಳೂ ಪುರಾಣಗಳೂ ಅಷ್ಟೇ ಮುಖ್ಯವಾಗುತ್ತವೆ. ಇವುಗಳ ಜೊತೆಗೆ ಪ್ರವಾಸಿಗರ ಖಾಸಗಿ ದಿನಚರಿ ಮತ್ತು ಪ್ರವಾಸ ಕಥನಗಳು ಅದಕ್ಕಿಂತ ಬಹುಮುಖ್ಯವೆಂಬುದನ್ನು ಕಳೆದ ಶತಮಾನದ ಚಾರಿತ್ರಿಕ ಅಧ್ಯಯನಕಾರರು ಮನಗಂಡಿದ್ದಾರೆ. ಬಖೈರು, ಕೈಫಿಯತ್ತು, ಪ್ರವಾಸಿಗರ ಬರೆಹಗಳು ‘ಸಬಾಲ್ಟ್ರನ್ ಅಧ್ಯಯನ’ಕ್ಕೆ ಹೊಸ ಬಗೆಯ ಆಕರಗಳಾಗಿರುವುದನ್ನು ನಾವು ಗಮನಿಸಿದ್ದೇವೆ. ಈ ಬಗೆಯ ಬಹುಶಿಸ್ತೀಯ ಅಧ್ಯಯನಗಳು ಕಳೆದ ಹಾಗೂ ಈ ದಶಕದ ಚಾರಿತ್ರಿಕ ಅಧ್ಯಯನಕ್ಕೆ ಹೊಸ ಬೆಳಕನ್ನೂ ಹೊಸ ದಾರಿಗಳನ್ನೂ ನಿರ‌್ಮಾಣ ಮಾಡಿಕೊಟ್ಟಿವೆ.

ವಿಜಯನಗರ ಮಹಾಸಾಮ್ರಾಜ್ಯ ಬೆಳಗಿದ ಕಾಲವನ್ನೂ ಅದು ಅಳಿದುಹೋದ ಕಾಲವನ್ನೂ ಪ್ರವಾಸಿಗರ ಎಲ್ಲ ಬರೆಹಗಳು ಹೊಳೆಯಿಸುತ್ತವೆ. ಕ್ರಿ.ಶ. ೧೫ನೇ ಶತಮಾನದ ಪೂರ್ವಾರ್ಧದಿಂದ ೧೬ನೇ ಶತಮಾನದ ಪೂರ್ವಾರ್ಧದವರೆಗೂ ಬಂದು ಹೋದವರ ಪಟ್ಟಿ ದೊಡ್ಡದಿರುವುದೇನೋ ನಿಜ. ಆದರೆ, ಬಂದು ಹೋದವರೆಲ್ಲ ‘ಪ್ರವಾಸ ಕಥನ’ಗಳನ್ನು ಬರೆಯಲಿಲ್ಲ. ಆದರೆ, ಬರೆದವರ ಸಂಖ್ಯೆ ತೀರ ಕಡಿಮೆಯೇನಲ್ಲ. ಅದು ನಮ್ಮ ಅದೃಷ್ಟ. ವಿಜಯನಗರ ಕುರಿತು ಆ ಅವಧಿಯಲ್ಲಿ ಬರೆದವರ ಸಂಖ್ಯೆ ಹನ್ನೆರಡು. ಇದು ಸಂಖ್ಯಾವಿಶೇಷವಲ್ಲ. ಆದರೆ, ನ್ಯೂನಿಜ್, ಬಾರ್ಬೊಸಾ, ಅಬ್ದುಲ್ ರಜಾಕ್, ಡೊಮಿಂಗೊ ಪ್ಯಾಸ್ ಈ ವಿದೇಶೀ ಮಹಾಶಯರ ಬರೆಹಗಳು ಬಹು ದೀರ್ಘವಾಗಿವೆ; ಬಹು ಮಹತ್ವದ ದಾಖಲೆಗಳಾಗಿವೆ. ಅವು ಕೊಡುವ ಚಾರಿತ್ರಿಕ ವಿವರಗಳು ನಮ್ಮನ್ನು ದಂಗು ಬಡಿಸುತ್ತವೆ. ಈ ವಿವರಗಳಲ್ಲಿರುವ ರಾಜನ ಅಂತಃಪುರದ ಚಿತ್ರಗಳೂ ಸಾಮಾಜಿಕ ಆಚರಣೆಗಳೂ ವಿವಿಧ ಜಾತಿಗಳ ವಿವರಗಳೂ ಹಲವು ಜ್ಞಾನಶಾಖೆಗಳ ವಿದ್ವಾಂಸರಿಗೆ ಬಹು ಉಪಯುಕ್ತ ವಾಗಿವೆ. ಇಲ್ಲಿಯ ಬರೆಹಗಳಲ್ಲಿ ಹುರುಳೆಷ್ಟು ಅರೆ ತಿಳುವಳಿಕೆಗಳೆಷ್ಟು ಎಂಬುದು ಬೇರೆ ಮಾತು. ಆದರೆ, ಇಂದಿನ ಚಾರಿತ್ರಿಕ ಮಾನದಂಡದಿಂದ ಅವುಗಳನ್ನು ನೋಡದೆ, ವಿದೇಶಿಗರ ಕಣ್ಣಲ್ಲಿ ಮನಸ್ಸಿನಲ್ಲಿ ಕಾಣಿಸಿಕೊಂಡ ವಿವರಗಳ ಪರಿಪ್ರೇಕ್ಷ್ಯದಲ್ಲಿ ನಾವು ಅವುಗಳನ್ನು ಪರಿಭಾವಿಸ ಬೇಕಾಗುತ್ತದೆ. ಹತ್ತಾರು, ನೂರಾರು ಘಟನೆಗಳ ಮೂಲಕ ಚರಿತ್ರೆಗಳ ನಿರ‌್ಮಾಣ ಆಗುತ್ತದೆ. ಅದು ಒಂದು ಚರಿತ್ರೆಯ ನಿರ‌್ಮಾಣವಲ್ಲ; ಹಲವು ಚರಿತ್ರೆಯ ನಿರ‌್ಮಾಣ. ಪ್ರತಿಯೊಬ್ಬ ಪ್ರವಾಸಿಗನದೂ ಕಣ್ಣಲ್ಲಿ ಕಂಡುಕೊಂಡ, ರೂಪಿಸಿಕೊಂಡ ಚರಿತ್ರೆಯ ನಿರ‌್ಮಾಣದ ಸಂಗತಿಗಳೇ ಆಗಿವೆ.

ಹೀಗೆ, ಕ್ರಿ.ಶ. ೧೫ನೇ ಶತಮಾನದ ಪೂರ್ವಾರ್ಧದಿಂದ ೧೬ನೇ ಶತಮಾನದ ಪೂರ್ವಾರ್ಧದ ವರೆಗೆ ಬಂದು ಹೋದ ಪ್ರವಾಸಿಗರು ಇರುವಂತೆ ಇಪ್ಪತ್ತನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಬಂದು ಹೋದವರುಂಟು! ಶ್ರೀರಾಮಸ್ವಾಮಿ ಅಯ್ಯಂಗಾರ್ ಎಂಬುವರು ೧೯೧೬ರಲ್ಲಿ ಬರೆದ ‘ಜೀರ್ಣ ವಿಜಯನಗರ ದರ್ಶನ’ ಎಂಬುದು ಆಧುನಿಕ ವಿದ್ವಾಂಸ ಲೇಖಕರೊಬ್ಬರು ಬರೆದ ಮೊದಲ ಪ್ರವಾಸಿ ಗ್ರಂಥ. ಇದು ಈಗ ನಮಗೆ ಅಲಭ್ಯ. ೧೯೩೧ರಲ್ಲಿ ಬೆಳಗಾವಿಯ ಶ್ರೀ ಪಿ. ಕುಲಕರ್ಣಿ ಅವರು ಬರೆದ ‘ಹಾಳು ಹಂಪೆ’ ಎಂಬ ಚಿಕ್ಕ ಪುಸ್ತಕ ನಾವು ಗಮನಿಸಬಹುದಾದುದು. ಈ ಎರಡೂ ಗ್ರಂಥಗಳು  ‘ಹಾಳು ಹಂಪಿ’ಯನ್ನೂ ಅದರ ಹಿಂದಿನ ಗತವೈಭವವನ್ನೂ ಹೇಳುವ ಗ್ರಂಥಗಳಾಗಿವೆ. ಇದಾದ ಮೇಲೆ ೧೯೩೨ರಲ್ಲಿ ಪ್ರಕಟವಾದ ವಿ.ಸೀ. ಅವರ ‘ಪಂಪಾಯಾತ್ರೆ’, ಆಧುನಿಕ ಪ್ರವಾಸ ಕಥನಗಳಲ್ಲಿ ಬಹು ಮುಖ್ಯವಾದುದು. ಈ ಕೃತಿಯಲ್ಲಿರುವ ಇತಿಹಾಸದ ನೋವು, ವರ್ತಮಾನದ ಸಂಕಟಗಳು ನಮ್ಮ ಮನಸ್ಸನ್ನು ಸೆಳೆಯುತ್ತವೆ. ಸಾಹಿತ್ಯಕ ದೃಷ್ಟಿಯಿಂದ, ಪ್ರವಾಸ ಕಥನದ ವಿಶಿಷ್ಟತೆಯಿಂದ, ಈ ಕೃತಿಗೆ ಅನನ್ಯವಾದ ಸ್ಥಾನವಿದೆ. ಹಂಪಿಯ ಬಗ್ಗೆ ಬೇಂದ್ರೆ ಮತ್ತು ಕುವೆಂಪು ಅವರ ಕವಿತೆಗಳಲ್ಲದೆ ಇನ್ನೂ ಹತ್ತಾರು ಶ್ರೇಷ್ಠ ಕವಿತೆಗಳಿವೆ. ಹಲವು ಸಾಹಿತ್ಯ ಪ್ರಕಾರಗಳಿಗೆ ವಿಜಯನಗರವು ವಸ್ತುವಾಗಿದೆ. ವಿಜಯನಗರ ಅರ್ಥಾತ್ ಹಂಪಿಯು ಇಪ್ಪತ್ತನೆಯ ಶತಮಾನದ ಮೊದಲ ಆರುದಶಕಗಳ ಕಾಲ ನಮ್ಮ ಕನ್ನಡ ಲೇಖಕರ ಮನಸ್ಸನ್ನು ಸೆಳೆದಿದೆ. ಉತ್ತರ ಕರ್ನಾಟಕದ ಗೆಳೆಯರ ಗುಂಪು, ಹಲಸಂಗಿ ಗೆಳೆಯರ ಗುಂಪು, ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಕನ್ನಡ ಸಂಘ, ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಸಂಘ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡದ ವಿದ್ಯಾವರ್ಧಕ ಸಂಘ, ಮಂಗಳೂರಿನ ಕರ್ನಾಟಕ ಸಂಘ – ಹೀಗೆ ಕರ್ಣಾಟಕದ ಸಂಘಸಂಸ್ಥೆಗಳೂ ಲೇಖಕರ ಬಳಗವೂ ‘ಹಂಪಿ’ ಕುರಿತು ವಿಚಾರ ಸಂಕಿರಣಗಳನ್ನು ನಡೆಸಿವೆ; ಸಾಹಿತ್ಯಕ ಯಾತ್ರೆ ನಡೆಸಿವೆ; ಆಲೂರು ವೆಂಕಟರಾಯರು ವಿಜಯನಗರ ‘ಷಟ್‌ಸಾಂವತ್ಸರಿ ಕೋತ್ಸವ’ ನಡೆಸಿದುದನ್ನು ನಾವು ಮರೆಯುವಂತಿಲ್ಲ. ‘ವಿಜಯನಗರ’ ಕೇವಲ ಹೆಸರಲ್ಲ; ಇದೊಂದು ಐತಿಹಾಸಿಕ ಸ್ಮರಣೆ. ಅದು ವೈಭವವು ಮಾತ್ರವಲ್ಲ, ಜೀವಂತ ದರ್ಶನ. ಅದು ಕೇವಲ ಗತಚರಿತ್ರೆಯಲ್ಲ; ನಿತ್ಯ ಸಾಂಸ್ಕೃತಿಕ ಚರಿತ್ರೆ.

‘ಪ್ರವಾಸಿ ಕಂಡ ವಿಜಯನಗರ’ – ಈ ಸಂಕಲನ ಕೃತಿಯು ವಿಜಯನಗರದ ಒಂದು ಮಹದ್ದರ್ಶನವನ್ನು ಕಟ್ಟಿಕೊಡುತ್ತದೆ. ಇಲ್ಲಿಯ ಪ್ರವಾಸಿಗರ ಕುತೂಹಲಗಳು, ಸಮಾಜವನ್ನು ಪರಿಭಾವಿಸುವ ಕ್ರಮಗಳು, ಸಂಭ್ರಮ-ಆಶ್ಚರ್ಯಗಳು ನಮಗೆ ಇಂದೂ ಹೊಸ ತಿಳುವಳಿಕೆಯನ್ನು ನೀಡುತ್ತವೆ. ವಿಜಯನಗರವು ಸಾಮ್ರಾಜ್ಯಯುಗದಿಂದ ಪ್ರಜಾಸಾಮ್ರಾಜ್ಯ ಯುಗದವರೆಗೂ ಬೆಳೆದು ಬಂದಿದೆ. ವಿದೇಶಿ ಪ್ರವಾಸಿಗರಿಗೆ ಪ್ರವಾಸ ಒಂದು ಸುಖಕರ ಯಾನವಲ್ಲ; ಅದೊಂದು ಸಾವಿನ ಮನೆ ಹೊಕ್ಕ ಅನುಭವ. ಆದರೆ, ಪ್ರಾಣವನ್ನು ಕೈಯಲ್ಲಿ ಹಿಡಿದು ಅವರು ಪ್ರವಾಸ ಕೈಗೊಂಡ ಧೀರ ನಿಲುವನ್ನು ನಾವು ಪ್ರಶಂಸಿಸಬೇಕು. ಈ ಹೊತ್ತಿಗೂ ಅವರನ್ನು ನಾವು ಕೃತಜ್ಞತೆಯಿಂದ ನೆನೆಯಬೇಕು.

ವಿಜಯನಗರವನ್ನು ಕಂಡ ಪ್ರವಾಸಿಗರಲ್ಲಿ ಅಬ್ದುಲ್ ರಜಾಕ್ ಮಹಾಶಯನದು ದೊಡ್ಡ ಹೆಸರು. ಇವನು ಪರ್ಷಿಯಾ ದೇಶದವನು. ಈತ ೧೪೪೨ರ ಸುಮಾರಿಗೆ ವಿಜಯನಗರಕ್ಕೆ ಬಂದ. ಆ ಕಾಲಕ್ಕೆ ವಿಜಯನಗರವು ಸುವರ್ಣ ವೈಭವವನ್ನು ಕಂಡಿತ್ತು. ಅವನು ವಿಜಯನಗರ ದಲ್ಲಿ ನಡೆಯುತ್ತಿದ್ದ ‘ಮಹಾನವಮಿ ಉತ್ಸವ’ವನ್ನು ಬಹು ಸಂಭ್ರಮದಿಂದ ವರ್ಣಿಸಿದ್ದಾನೆ. ವಿಜಯನಗರದ ಸಾಂಸ್ಕೃತಿಕ ಉತ್ಸವಗಳನ್ನು ಹಬ್ಬಹರಿದಿನಗಳನ್ನು, ರಾಜನ ರೀತಿರಿವಾಜು ಗಳನ್ನು ಬಹು ಎಚ್ಚರಿಕೆಯಿಂದ ವರ್ಣಿಸಿದ್ದಾನೆ. ಅವನ ಮಾತುಗಳು ತುಂಬಾ ವಸ್ತುನಿಷ್ಠವಾಗಿವೆ. ವಿಜಯನಗರದ ಕುರಿತು ಅವನ ಮಾತುಗಳು ಹೀಗಿವೆ:

ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ ಏಳು ಕೋಟೆಗಳೂ ಒಂದನ್ನೊಂದು ಆವರಿಸಿ ಕೊಂಡಿವೆ. ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಭಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿದ್ದಾರೆ. ಇವುಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಹೇಗೆ ಹೂತಿದ್ದಾರೆಂದರೆ, ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಯಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಹು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಾರೆ. ಯಾರನ್ನೂ ಸಂಪೂರ್ಣ ಪರೀಕ್ಷೆ ಮಾಡದೆ ಒಳಗೆ ಬಿಡುವುದಿಲ್ಲ.

 (ಅಬ್ದುಲ್ ರಜಾಕ್, ಪು.೧೨-೧೩)

ವಿಜಯನಗರದ ಬಾಹ್ಯ ವಿವರಗಳು ನಮ್ಮ ಕಣ್ಣ ಮುಂದೆ ಕಟ್ಟಿಕೊಡುವಂತೆ ಅಬ್ದುಲ್ ರಜಾಕ್ ವಿವರಿಸಬಲ್ಲ. ಅವನು ರಾಜನ ದಿವಾನ್‌ಖಾನೆಗೆ ಎದುರಾಗಿದ್ದ ‘ಫಿಲ್‌ಖಾನೆ’ ಅರ್ಥಾತ್ ಗಜಶಾಲೆ ಕುರಿತು ಬರೆದ ವಿವರಗಳು ಹೀಗಿವೆ:

ದಿವಾನ್‌ಖಾನೆಗೆ ಎದುರಾಗಿ ಫಿಲ್‌ಖಾನೆ (ಗಜಶಾಲೆ) ಇದೆ. ರಾಜನಿಗೆ ಸೇರಿದ ಅನೇಕ ಆನೆಗಳು, ದೇಶದಲ್ಲೆಲ್ಲಾ ಬಹಳ ಭಾರಿಯಾದ ಆನೆಗಳು, ಅರಮನೆಯ ಬಳಿ ಅಂದರೆ ಮೊದಲನೆಯ ಮತ್ತು ಎರಡನೆಯ ಕೋಟೆಗಳ ಮಧ್ಯೆ ಇರುವ ಉತ್ತರ ಪಶ್ಚಿಮ ಜಾಗದಲ್ಲಿರುತ್ತವೆ. ಈ ಆನೆಗಳು ಗರ್ಭವಾಗಿ ಮರಿ ಹಾಕುತ್ತವೆ. ರಾಜನ ಬಳಿ ಅತ್ಯಂತ ದೊಡ್ಡದಾದ ಬಿಳಿಯ ಆನೆ ಇದೆ. ಈ ಆನೆಯ ಮೈಮೇಲೆ ಅಲ್ಲಲ್ಲಿ ನೀರಿನ ಗುಳ್ಳೆಗಳಂತೆ ಬೂದುಬಣ್ಣದ ಮಚ್ಚೆಗಳಿವೆ. ಪ್ರತಿದಿನ ಬೆಳಗ್ಗೆ ಆನೆಯನ್ನು ರಾಜನ ಮುಂದೆ ತೆಗೆದುಕೊಂಡು ಹೋಗುತ್ತಾರೆ. ಇದರ ದರ್ಶನ ತನಗೆ ಒಳ್ಳೆಯದೆಂದು ರಾಜ ಭಾವಿಸುತ್ತಾನೆ. ಅರಮನೆಯ ಆನೆಗಳಿಗೆ ಕಿಚಡಿಯನ್ನು ತಿನ್ನಿಸುತ್ತಾರೆ. ಇದನ್ನು ತಾಮ್ರದ ಹಂಡೆಗಳಲ್ಲಿ ಬೇಯಿಸಿ ಆನೆಗಳ ಮುಂದೆಯೇ ಹೊರಕ್ಕೆ ತೆಗೆದು, ಹರಡಿ ಅದರ ಮೇಲೆ ಉಪ್ಪನ್ನೂ ಸಕ್ಕರೆಯನ್ನೂ ಎರಚಿ ಚೆನ್ನಾಗಿ ಕಲಸುತ್ತಾರೆ. ಹೀಗೆ ಕಲಸಿದ ಮೇಲೆ ಅದನ್ನು ಎರಡು ಮಣದಷ್ಟು ತೂಕದ ಉಂಡೆಗಳನ್ನಾಗಿ ಮಾಡುತ್ತಾರೆ. ಈ ಉಂಡೆಗಳನ್ನು ತುಪ್ಪದಲ್ಲಿ ಅದ್ದಿ ಆನೆಯ ಬಾಯೊಳಗೆ ಇಡುತ್ತಾರೆ.

(ಅಬ್ದುಲ್ ರಜಾಕ್, ಪು.೧೫)

ಅಬ್ದುಲ್ ರಜಾಕ್ ಸಾಮಾಜಿಕ ಜೀವನವನ್ನು ಮರೆತವನಲ್ಲ, ಅವನು ಅನೇಕ ಸಂಗತಿಗಳನ್ನು ಹೇಳುತ್ತಾನೆ. ತಾಂಬೂಲ ಅಥವಾ ವೀಳೆಯದ ಬಗೆಗೆ ಅವನು ಕೊಡುವ ವಿವರಗಳು ಬಹು ಕುತೂಹಲಕರವಾಗಿವೆ. ಮಧ್ಯಕಾಲೀನ ಸಾಮಾಜಿಕ ಜೀವನ ತಿಳಿಯಲು ಇವು ಪ್ರೇರಕವಾಗಿವೆ:

ವೀಳೆಯದೆಲೆಯನ್ನು ಹಿಂದೂಸ್ಥಾನ, ಅರಬ್ಬೀದೇಶದ ಬಹುಭಾಗ, ಓರ್ಮಸ್ ರಾಜ್ಯ- ಈ ಕಡೆಗಳ ಜನರು ಬಹಳ ಆಸೆಯಿಂದ ಉಪಯೋಗಿಸುತ್ತಾರೆ. ನಿಜವಾಗಿಯೂ ಅದರಲ್ಲಿ ಒಳ್ಳೆಯ ಗುಣಗಳಿರುವುದರಿಂದ ಅದಕ್ಕೆ ಇಷ್ಟು ಪ್ರಾಶಸ್ತ್ಯ. ಇದನ್ನು ಉಪಯೋಗಿಸುವ ರೀತಿ ಹೀಗಿದೆ : ಸಿಪಾರಿ (ಸುಪಾರಿ) ಎಂದು ಕರೆಯುವ ಅಡಕೆಯನ್ನು ಸ್ವಲ್ಪ ಜಜ್ಜಿ ಬಾಯೊಳಕ್ಕೆ ಹಾಕಿಕೊಳ್ಳುತ್ತಾರೆ. ವೀಳೆಯದೆಲೆಗೆ ಸುಣ್ಣವನ್ನು ಹಚ್ಚಿ ಸುರುಳಿಮಾಡಿ ಬಾಯಲ್ಲಿಟ್ಟು ಅಗಿಯುತ್ತಾರೆ. ಒಂದೊಂದು ಸಲ ನಾಲ್ಕಾರು ಎಲೆಗಳನ್ನು ಒಟ್ಟಿಗೇ ಬಾಯಲ್ಲಿ ಹಾಕಿಕೊಂಡು ಅಗಿಯುವುದುಂಟು. ಕೆಲವು ವೇಳೆ ಪಚ್ಚಕರ್ಪೂರ ಸೇರಿಸಿಕೊಳ್ಳುತ್ತಾರೆ. ರಸವನ್ನು ಒಮ್ಮೊಮ್ಮೆ ಉಗಿಯುತ್ತಾರೆ. ಅದು ಕೆಂಪು ಬಣ್ಣಕ್ಕಿರುತ್ತದೆ. ವೀಳೆಯವನ್ನು ಹಾಕಿಕೊಂಡಾಗ ಮುಖವು ಬಣ್ಣವೇರಿ ತೇಜಸ್ಸು ಕಾಣಿಸುತ್ತದೆ. ದ್ರಾಕ್ಷಾರಸವನ್ನು ಕುಡಿದರೆ ಬರುವಂಥ ಅಮಲು ಬರುತ್ತದೆ. ಹೊಟ್ಟೆ ತುಂಬ ಉಂಡಾಗ ಇದನ್ನು ಹಾಕಿಕೊಂಡರೆ ಆಹಾರವನ್ನು ಜೀರ್ಣಮಾಡುತ್ತದೆ. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಿ ಹಲ್ಲುಗಳಿಗೆ ಶಕ್ತಿಕೊಡುತ್ತದೆ. ವೀಳೆಯದೆಲೆ ಎಷ್ಟು ಬಲವರ್ಧಕ, ಎಷ್ಟು ಕಾಮೋತ್ತೇಜಕ ಎಂಬುದನ್ನು ವರ್ಣಿಸಲಾರೆ. ಬಹುಶಃ ಈ ವೀಳೆಯದೆಲೆಯ ಗುಣವೇ ಕಾರಣ ಇರಬೇಕು ಈ ದೇಶದ ದೊರೆ ತನ್ನ ಅಂತಃಪುರದಲ್ಲಿ ಲೆಕ್ಕವಿಲ್ಲದಷ್ಟು ಸ್ತ್ರೀಯರನ್ನು ಇಟ್ಟುಕೊಂಡಿರುವುದಕ್ಕೆ.

(ಅಬ್ದುಲ್ ರಜಾಕ್, ಪು.೧೯)

ಈತ ನೀಡುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆಯುವ ಡೊಂಬರ ಚತುರತೆಯ ಆಟಗಳಾಗಲಿ, ಹಲವು ಬಗೆಯ ಆಚರಣೆಯ ವಿವರಗಳಾಗಲಿ, ನಮ್ಮ ಕಣ್ಣ ಮುಂದೆ ಕಟ್ಟಿ ನಿಲ್ಲುತ್ತವೆ.

ಪ್ರವಾಸಿಗರಲ್ಲಿ ದುಆರ್ತೆ ಬಾರ್ಬೊಸಾ ಮುಖ್ಯನಾದ ಮತ್ತೊಬ್ಬ ಪ್ರವಾಸಿ. ಈತ ಕ್ರಿ.ಶ. ೧೫೦೧ರಲ್ಲಿ ಭಾರತಕ್ಕೆ ಬಂದ. ಈತನ ಬರೆಹದಲ್ಲಿರುವ ದೇಶಗಳ, ಜನಗಳ ಹಾಗೂ ಅವರ ನಡೆನುಡಿಗಳ ವಿವರಗಳು ಬಹುಮುಖ್ಯವಾಗಿವೆ. ಈತ ನೀಡುವ ‘ವಿಜಯನಗರ’ (ಬಿಜನಗರ್)ದ ಚಿತ್ರಣ ಮಾರ‌್ಮಿಕವಾಗಿದೆ. ಈತ ಲಿಸ್ಬನ್ ದೇಶದವನು. ಅವನು ಬರೆದದ್ದು ಪೋರ್ಚುಗೀಸ್ ಭಾಷೆಯಲ್ಲಿ. ಭೌಗೋಳಿಕ ಮತ್ತು ಮಾನವಕುಲಶಾಸ್ತ್ರ ದೃಷ್ಟಿಯಿಂದ ಇವನ ಬರೆಹಗಳು ಮಹತ್ವದವಾಗಿವೆ. ಬಾರ್ಬೊಸಾನಿಗೆ ಕಂಡದ್ದೆಲ್ಲ ಕುತೂಹಲವೇ. ಅವನು ವಿಜಯನಗರದಲ್ಲಿ ಚಲಾವಣೆಯಲ್ಲಿದ್ದ ನಾಣ್ಯದ ಬಗೆಗೆ ಕೊಡುವ ವಿವರಗಳು ಹೀಗಿವೆ:

ಇಲ್ಲಿ ಪರ್ದೋ ಎಂಬ ಚಿನ್ನದ ನಾಣ್ಯ ಚಲಾವಣೆಯಲ್ಲಿದೆ. ಇದರ ಬೆಲೆ ಮುನ್ನೂರು ಮರವೆಡಿಗಳು. ಈ ನಾಣ್ಯಗಳನ್ನು ರಾಜ್ಯದ ಕೆಲವು ಊರುಗಳಲ್ಲಿ ಟಂಕ ಒತ್ತುತ್ತಾರೆ. ಇಡೀ ಇಂಡಿಯಾದೇಶದಲ್ಲೆಲ್ಲಾ ಈ ನಾಣ್ಯ ಚಲಾವಣೆಯಲ್ಲಿದೆ. ನಾಣ್ಯಕ್ಕೆ ಉಪಯೋಗಿಸಿರುವ ಚಿನ್ನ ಸಾಧಾರಣವಾಗಿದೆ. ನಾಣ್ಯವು ದುಂಡಾಗಿದ್ದು ಅದನ್ನು ಅಚ್ಚಿನಿಂದ ತಯಾರಿಸುತ್ತಾರೆ. ಕೆಲವು ನಾಣ್ಯಗಳ ಒಂದು ಕಡೆ ಇಂಡಿಯಾ ಲಿಪಿಯೂ, ಮತ್ತೊಂದು ಕಡೆ ಗಂಡು ಹೆಣ್ಣಿನ ಚಿತ್ರವೂ ಇವೆ. ಮತ್ತೆ ಕೆಲವಕ್ಕೆ ಒಂದು ಕಡೆ ಲಿಪಿ ಮಾತ್ರ ಇರುತ್ತದೆ.

(ದುಆರ್ತೆ ಬಾರ್ಬೊಸಾ, ಪು.೩೮)

ಬಾರ್ಬೊಸಾ ಆ ಕಾಲದಲ್ಲಿ ಜೀವಂತವಾಗಿದ್ದ ‘ಸಹಗಮನ ಪದ್ಧತಿ’ಯ ವರ್ಣನೆ ಕರುಳು ಇರಿಯುತ್ತದೆ. ಸಹಗಮನಕ್ಕೆ ಒಪ್ಪದವರು ಪಡುವ ಕಷ್ಟವನ್ನು ಕುರಿತು ಬಾರ್ಬೊಸಾ ನೀಡುವ ವಿವರಗಳು ಜೀವಂತವಾಗಿವೆ:

ಸಹಗಮನ ಮಾಡದ ಹೆಂಗಸರನ್ನು ಬಹಳ ಅಗೌರವದಿಂದ ಕಾಣುತ್ತಾರೆ. ಅವರ ತಲೆಯನ್ನು ಬೋಳಿಸಿ ಮನೆತನಕ್ಕೆ ಅಮಂಗಳವೆಂದು ಹೊರಗೆ ಅಟ್ಟುತ್ತಾರೆ. ಹೀಗೆ ಮನೆಯಿಂದ ಅಟ್ಟಲ್ಪಟ್ಟ ವಿಧವೆಯರು ದಿಕ್ಕಿಲ್ಲದೆ ಅಲೆಯುತ್ತಾರೆ. ಅತಿ ಚಿಕ್ಕ ವಯಸ್ಸಿನ ವಿಧವೆಯರ ಬಗ್ಗೆ ದಯಾ ದಾಕ್ಷಿಣ್ಯ ತೋರಿಸಿದ ಪಕ್ಷದಲ್ಲಿ, ಅವರನ್ನು ದೇವಸ್ಥಾನಗಳಿಗೆ ಕಳುಹಿಸಿ, ಅಲ್ಲಿ ದೇವಸ್ಥಾನಕ್ಕಾಗಿ ಹಣ ಗಳಿಸಲು ದೇವದಾಸಿಯರಾಗಿ ಬಿಡುತ್ತಾರೆ. ದೇವದಾಸಿಯರಿರುವ ದೇವಸ್ಥಾನಗಳು ಅನೇಕ ಇವೆ. ಅಲ್ಲಿ ಐವತ್ತರಿಂದ ನೂರು ದೇವದಾಸಿಯರಿರುವುದನ್ನು ನೋಡಬಹುದು. ಮದುವೆಯಾಗದ ಕೆಲವು ಹೆಂಗಸರು ತಮ್ಮ ಆತ್ಮಸಂತೋಷದಿಂದ ದೇವದಾಸಿಯರಾಗಿರುವುದೂ ಉಂಟು. ಇವರು ನಿಗದಿಯಾದ ವೇಳೆ ದೇವರ ಮುಂದೆ ನಿತ್ಯವೂ ಕುಣಿದು ಹಾಡುತ್ತಾರೆ. ಉಳಿದ ವೇಳೆಯನ್ನು ತಮಗಿಷ್ಟ ಬಂದ ರೀತಿಯಲ್ಲಿ ಕಳೆಯುತ್ತಾರೆ.

(ಅಬ್ದುಲ್ ರಜಾಕ್, ಪು.೪೩)

ಬಾರ್ಬೊಸಾ ಸಿಡಿಯಾಡುವ ಆಚರಣೆಯನ್ನೂ ಬೇಟೆಯಾಡುವ ವಿವರಗಳನ್ನೂ ನೀಡಿದ್ದಾನೆ. ಅವನು ನೀಡಿರುವ ವಿವರಗಳು ಸಮಕಾಲೀನ ಆಚರಣೆಯ ಜತೆಗೆ ತುಲನೆ ಮಾಡಿ ನೋಡಲು ಅವಕಾಶಗಳಿವೆ.

ಅಬ್ದುಲ್ ರಜಾಕ್, ಬಾರ್ಬೊಸಾ ನಂತರ ಬಂದವರಲ್ಲಿ ಡೊಮಿಂಗೊ ಪ್ಯಾಸ್ ಪ್ರಮುಖ ಪ್ರವಾಸಿಗ. ಆತ ಕ್ರಿ.ಶ. ೧೫೨೦ರಲ್ಲಿ ವಿಜಯನಗರಕ್ಕೆ ಬಂದ. ಈತ ಪೋರ್ಚುಗೀಸ್ ಭಾಷೆಯಲ್ಲಿ ತನ್ನ ಪ್ರವಾಸ ಕಥನವನ್ನು ಬರೆದಿದ್ದಾನೆ. ವಿಜಯನಗರದ ರಾಜಧಾನಿಯ ವರ್ಣನೆ, ಅಲ್ಲಿ ಉತ್ಪನ್ನಗೊಳ್ಳುವ ವಸ್ತುಗಳ ಬಗೆಗೆ, ಅಲ್ಲಿ ಆಚರಿಸಲಾಗುತ್ತಿದ್ದ ಆಚರಣೆಗಳ ಬಗೆಗೆ ಎಷ್ಟೆಷ್ಟೋ ಕುತೂಹಲಕರ ವರ್ಣನೆಗಳು ಅವನ ಬರೆಹಗಳಲ್ಲಿ ಇವೆ. ಎರಡನೇ ಕೃಷ್ಣದೇವರಾಯನ ದಿನಚರಿ ತಿಳಿಯಬೇಕಾದರೆ ಪ್ಯಾಸ್‌ನ ಬರೆಹಕ್ಕೆ ನಾವು ಹೋಗಬೇಕು. ಅವನು ರಾಜನ ದಿನಚರಿಯನ್ನು ನಿರೂಪಿಸಿರುವ ಭಾಗ ಕುತೂಹಲಕರವಾಗಿದೆ.

ಈ ರಾಜನಿಗೆ ಪ್ರತಿದಿನ ಬೆಳಗಾಗುವ ಮುನ್ನ ಮುಕ್ಕಾಲು ಪಿಂಟು ಎಳ್ಳೆಣ್ಣೆ ಕುಡಿಯುವ ರೂಢಿಯಿದೆ ಮತ್ತು ಅದೇ ಎಣ್ಣೆಯನ್ನು ತನ್ನ ದೇಹಕ್ಕೆಲ್ಲ ಹಚ್ಚಿಕೊಳ್ಳುತ್ತಾನೆ. ತನ್ನ ಟೊಂಕವನ್ನು ಒಂದು ಚಿಕ್ಕ ಅರಿವೆಯಿಂದ ಸುತ್ತಿಕೊಂಡು ತನ್ನ ತೋಳುಗಳಿಗೆ ಮಣ್ಣಿನಿಂದ ಮಾಡಿದ ದೊಡ್ಡ ಭಾರಗಳನ್ನು ಕಟ್ಟಿಕೊಂಡು ಕತ್ತಿಯನ್ನು ತೆಗೆದುಕೊಂಡು ಎಲ್ಲ ಎಣ್ಣೆ ಬಸಿದು ಹೋಗುವ ವರೆಗೆ ಅದರೊಂದಿಗೆ ವ್ಯಾಯಾಮ ಮಾಡುತ್ತಾನೆ, ಮತ್ತು ತನ್ನ ಪೈಲ್ವಾನರಲ್ಲೊಬ್ಬನೊಂದಿಗೆ ಕುಸ್ತಿ ಆಡುತ್ತಾನೆ. ಈ ಪರಿಶ್ರಮದ ನಂತರ ಅವನು ಕುದುರೆಯೇರಿ ಬಯಲಿನಲ್ಲಿ ಅತ್ತಿಂದಿತ್ತ ನಾಗಾಲೋಟದ ಸವಾರಿ ಮಾಡುತ್ತಾನೆ. ಏಕೆಂದರೆ, ಅವನು ಇದನ್ನೆಲ್ಲ ಬೆಳಕು ಹರಿಯುವ ಮುನ್ನ ಮಾಡುತ್ತಾನೆ. ಆಮೇಲೆ ಅವನು ಮೈ ತೊಳೆದುಕೊಳ್ಳಲು ಹೋಗುತ್ತಾನೆ ಮತ್ತು ಅವನು ಪವಿತ್ರನೆಂದು ಪರಿಗಣಿಸುವ, ಅವನ  ಬಲು ಪ್ರೀತಿಯವನಾದ ಮತ್ತು ಬಹಳ ಧನಿಕನಾದ ಬ್ರಾಹ್ಮಣನೊಬ್ಬ ಅವನ ಮೈ ತೊಳೆಯುತ್ತಾನೆ. ಸ್ನಾನವಾದ ಮೇಲೆ ಅವನು ಅರಮನೆಯೊಳಗೆ ತನ್ನ ಗುಡಿಯಿರುವಲ್ಲಿಗೆ ಹೋಗಿ ಪದ್ಧತಿಯಂತೆ ತನ್ನ ಪ್ರಾರ್ಥನೆ ಮತ್ತು ವ್ರತಾಚರಣೆ ಮಾಡುತ್ತಾನೆ.

(ಡೊಮಿಂಗೊ ಪಿಯಾಸ್, ಪು.೬೩)

ಇಲ್ಲಿಯ ಚಿತ್ರಣ ಕೇವಲ ರಾಜನಿಗೆ ಮಾತ್ರ ಸಂಬಂಧಿಸದೆ, ಆ ಕಾಲದ ‘ಕುಸ್ತಿ’ಯ ವಿವರಗಳನ್ನು ಸೂಚ್ಯವಾಗಿ ತಿಳಿಸುತ್ತದೆ. ಪ್ಯಾಸ್ ‘ಸಂಜೆ ಸಂತೆ’ಯ ವಿವರವನ್ನು ನೀಡಿದ್ದಾನೆ. ಅದು ನಮಗೆ ತಾಲ್ಲೂಕಿನಲ್ಲಿ ನಡೆಯುವ ವಿವರಗಳಂತಿವೆ:

ಅಲ್ಲಿ ನೀವು ಪ್ರತಿ ಸಂಜೆ ಸಂತೆಯೊಂದನ್ನು ನೋಡುವಿರಿ. ಅದರಲ್ಲಿ ಅವರು ಅನೇಕ ಸಾಮಾನ್ಯ ಕುದುರೆಗಳನ್ನು ಮತ್ತು ತಟ್ಟುಕುದುರೆಗಳನ್ನು ಹಾಗೂ ಅನೇಕ ಜಂಬೀರಗಳನ್ನು, ನಿಂಬೆಗಳನ್ನು, ಕಿತ್ತಲೆಗಳನ್ನು, ದ್ರಾಕ್ಷಿಗಳನ್ನು ಮತ್ತು ಪ್ರತಿಯೊಂದು ತರಹದ ಕಾಯಿಪಲ್ಯೆ ಮತ್ತು ಹಣ್ಣು ಹಂಪಲವನ್ನು ಮತ್ತು ಕಟ್ಟಿಗೆಯನ್ನು ಮಾರುತ್ತಾರೆ.

(ಡೊಮಿಂಗೊ ಪ್ಯಾಸ್, ಪು.೬೮)

ಪ್ಯಾಸ್ ಕುರಿ ಮಾರುವ ಸ್ಥಳಗಳನ್ನು ಕುರಿಗಳ ಕಸಾಯಿಖಾನೆಯನ್ನು ಕುರಿತು ಬರೆಯುವ ಭಾಗಗಳು ‘ಸಾಮಾಜಿಕ ಜೀವನ’ದ ಜೀವಂತ ಭಾಗಗಳೇ ಆಗಿವೆ. ಬಾರ್ಬೊಸಾ ನವರಾತ್ರಿ ಉತ್ಸವದ ಬಗ್ಗೆ ನೀಡಿರುವ ವರ್ಣನೆ ಕ್ವಚಿತ್ತಾಗಿದೆ. ಆದರೆ, ಪ್ಯಾಸ್ ನವರಾತ್ರಿ ಉತ್ಸವ ಕುರಿತು ನೀಡಿರುವ ವಿವರಗಳು ಮನೋಜ್ಞವಾಗಿವೆ. ಪ್ರತಿದಿನವೂ ನಡೆಯುವ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಆ ಚಿತ್ರಣವು ದೀರ್ಘವೂ ಸಮಕಾಲೀನ ವಿವರಗಳನ್ನು ಒಳಗೊಂಡಿದ್ದೂ ಆಗಿದೆ. ಪ್ಯಾಸ್ ಮಹಾಶಯನು ವರ್ತಕ, ಬ್ರಾಹ್ಮಣರ ಬಗೆಗೆ ಕೊಡುವ ಸಾಮಾಜಿಕ ವಿವರಗಳು ಐತಿಹಾಸಿಕ ವಿವರಗಳಿಗೆ ಪೂರಕವಾಗಿ ರುವುದನ್ನು ನಾವು ಗಮನಿಸಬಹುದು.

ವಿದೇಶಿ ಪ್ರವಾಸಿಗರಲ್ಲಿ ೧೬ನೇ ಶತಮಾನದ ಪೂರ್ವಾರ್ಧದಲ್ಲಿ ಬಂದ ನ್ಯೂನಿಜ್ ಪ್ರವಾಸಿ ಬರೆದ ಪ್ರವಾಸ ಕಥನವು ಅಬ್ದುಲ್ ರಜಾಕ್, ಬಾರ್ಬೊಸಾ, ಪ್ಯಾಸ್ ಇವರೆಲ್ಲರ ಬರೆಹಗಳಿಗಿಂತ ಬಹುದೀರ್ಘವಾಗಿದೆ. ಅವನು ರಾಜ, ರಾಜನ ಆಡಳಿತ, ಸುತ್ತಮುತ್ತಣ ಜನಜೀವನ, ಸಾಂಸ್ಕೃತಿಕ ಸಂಗತಿಗಳನ್ನು ವಿವರವಾಗಿ ನೀಡಿದ್ದಾನೆ. ವಿಜಯನಗರದ ಸಮಕಾಲೀನ ಸಮಾಜೋ-ರಾಜಕೀಯ ಸಂಗತಿಗಳನ್ನು ಕುರಿತು ಇವನು ನೀಡಿರುವಷ್ಟು ವಿವರಗಳು ಬೇರೆ ಯಾವ ಪ್ರವಾಸಿಗನೂ ನೀಡಿಲ್ಲದಿರುವುದು ಅವನ ವೈಶಿಷ್ಟ್ಯವಾಗಿದೆ. ಈತ ಕುಶಲ ರಾಜತಾಂತ್ರಿಕ; ಅವನ ಬರೆಹಗಳಲ್ಲಿ ಕಾಣಿಸುವ ರಾಜತಾಂತ್ರಿಕ ವಿವರಗಳು ನ್ಯೂನಿಜ್‌ನ ಮನೋಭಾವನೆ ಯನ್ನು ಪ್ರತಿಬಿಂಬಿಸುತ್ತವೆ. ಅವನು ಇಪ್ಪತ್ತೆರಡು ಅಧ್ಯಾಯಗಳಲ್ಲಿ ವಿಜಯನಗರದ ವಿವರಗಳನ್ನು ನೀಡಿದ್ದಾನೆ. ಅರಮನೆಯಲ್ಲಿ ನಡೆಯುತ್ತಿದ್ದ ದುಷ್ಟಕೂಟಗಳು, ಕುಟಿಲೋಪಾಯಗಳು, ಮಂತ್ರಿ, ಸಾಮಂತ, ಡಣ್ಣಾಯಕರ ಮನೋಭಾವಗಳನ್ನೂ ಬಹು ವಿವರವಾಗಿ ನ್ಯೂನಿಜ್ ವರ್ಣಿಸಿದ್ದಾನೆ. ಅವನು ನೀಡಿರುವ ವಿವರಗಳು ಚಾರಿತ್ರಿಕ ಸಂಗತಿಗಳಾಗಿರುವುದನ್ನು ವಿದ್ವಾಂಸರು ಒಪ್ಪಿದ್ದಾರೆ. ಒಂದು ಉದಾಹರಣೆಯನ್ನು ಮಾತ್ರ ಆಸಕ್ತಿಗಾಗಿ ನೋಡಬಹುದು. ರಾಜನ ಊಟದ ವಿವರ ಕುತೂಹಲಕಾರಿಯಾಗಿದೆ:

ತನ್ನ ಸ್ವಂತ ಸೇವೆಗಾಗಿ ಅವನು ಹತ್ತು ಜನ ಅಡುಗೆಯ ಸ್ತ್ರೀಯರನ್ನು ಮತ್ತು ತಾನು ಔತಣ ಕೊಟ್ಟ ಸಂದರ್ಭಗಳಿಗಾಗಿ ಕಾಯ್ದಿಟ್ಟ ಇತರರನ್ನು ಹೊಂದಿದ್ದಾನೆ. ಈ ಹತ್ತು ಜನ ರಾಜನನ್ನು ಬಿಟ್ಟು ಬೇರಾರಿಗೂ ಅಡಿಗೆ ಮಾಡುವುದಿಲ್ಲ. ಅಡುಗೆಮನೆಯ ಬಾಗಿಲಿಗೆ ಅವನು ಒಬ್ಬ ಬೀಜವೊಡೆದ ಪುರುಷನನ್ನು ರಕ್ಷಕನನ್ನಾಗಿ ಇರಿಸುತ್ತಾನೆ. ಅವನು ವಿಷದ ಭಯದಿಂದಾಗಿ ಯಾರಿಗೂ ಒಳಗೆ ಪ್ರವೇಶಿಸಲು ಕೊಡುವುದಿಲ್ಲ. ರಾಜ ಉಣ್ಣ ಬಯಸಿದಾಗ ಪ್ರತಿ ವ್ಯಕ್ತಿ ಹೊರಟುಹೋಗುತ್ತಾನೆ. ಮತ್ತು ತಮ್ಮ ಕರ್ತವ್ಯವಾಗಿದ್ದ ಕೆಲವು ಸ್ತ್ರೀಯರು ಬರುತ್ತಾರೆ.  ಮತ್ತು ಊಟಕ್ಕೆ ಸಿದ್ಧಗೊಳಿಸುತ್ತಾರೆ. ಅವರು ಅವನಿಗಾಗಿ ಬಂಗಾರದಿಂದ ಮಾಡಿದ, ದುಂಡಗಿನ, ಮೂರು ಕಾಲಿನ ಸ್ಟೂಲನ್ನು ಇಟ್ಟು ಅದರ ಮೇಲೆ ಭಕ್ಷ್ಯಗಳನ್ನು ಇಡುತ್ತಾರೆ. ಇವುಗಳನ್ನು ದೊಡ್ಡ ಬಂಗಾರದ ಪಾತ್ರೆಗಳಲ್ಲಿ ತರಲಾಗುತ್ತದೆ ಮತ್ತು ಚಿಕ್ಕ ಭಕ್ಷ್ಯಗಳನ್ನು ಬಂಗಾರದ ಬೋಗಣಿಗಳಲ್ಲಿ ತರಲಾಗುತ್ತದೆ. ಅವುಗಳಲ್ಲಿ ಕೆಲವೊಂದನ್ನು ಬೆಲೆಯುಳ್ಳ ಹರಳುಗಳಿಂದ  ಅಲಂಕರಿಸಲಾಗಿರುತ್ತದೆ. ಮೇಜಿನ ಮೇಲೆ ಅರಿವೆ ಇರುವುದಿಲ್ಲ. ಆದರೆ, ರಾಜ ಊಟ ಮುಗಿಸಿದಾಗ ಒಂದನ್ನು ತರಲಾಗುತ್ತದೆ ಮತ್ತು ಅವನು ತನ್ನ ಕೈಗಳನ್ನು ಮತ್ತು ಬಾಯಿಯನ್ನು ತೊಳೆದುಕೊಳ್ಳುತ್ತಾನೆ. ಸ್ತ್ರೀಯರು ಮತ್ತು ಬೀಜವೊಡೆದ ಪುರುಷರು ಅವನಿಗೆ  ಊಟ ಬಡಿಸುತ್ತಾರೆ.

 (ನ್ಯೂನಿಜ್, ಪು.೧೮೨)

ವಿಜಯನಗರದ ಪೂರ್ವೋತ್ತರ ಇತಿಹಾಸವನ್ನು ಕಟ್ಟಿಕೊಟ್ಟ ಪ್ರವಾಸಿಗರ ಈ ಬರೆಹಗಳು ಅಪೂರ್ವ ಕಥನಗಳಾಗಿರುವುದು ಒಂದು ವಿಶೇಷ. ಇಂಥ ಬರೆಹಗಳ ಮೂಲಕ ಕರ್ನಾಟಕವನ್ನು ಅದರ ಮೂಲಕ ವಿಜಯನಗರ ಅಥವಾ ಹಂಪಿಯನ್ನು ತಿಳಿಯುವುದಕ್ಕೆ ಸಹಾಯಕವಾಗಿದೆ.

ನಾವು ನಿನ್ನೆಯನ್ನು ಸರಿಯಾಗಿ ತಿಳಿಯದೆ ಇಂದಿನ ವರ್ತಮಾನವನ್ನು ತಿಳಿಯಲಾರೆವು. ಇಂದಿನ ವರ್ತಮಾನ ತಿಳಿಯದೆ ಭವಿಷ್ಯತ್ತನ್ನು ನಿರ‌್ಮಿಸಿಕೊಳ್ಳಲಾರೆವು. ನಿನ್ನೆ-ಇಂದು-ನಾಳೆಗಳ ಸುಸಾಂಗತ್ಯದಲ್ಲಿ ಜೀವನಪಟವಿದೆ. ಅಂಥ ಜೀವನಪಟವನ್ನು ತಿಳಿಸಿಕೊಡುವ ಪ್ರವಾಸಿಗರ ಬರೆಹಗಳು ಅರಿವಿನ ಬೆಳಕಿಗೆ ಬೀಜಗಳಾಗಿವೆಯೆಂದು ಹೇಳಲು ಸಂತೋಷವಾಗುತ್ತದೆ.