ಟೊಮ್ ಪೀರೆಸ್ (Tome Pires) ೧೬ನೆಯ ಶತಮಾನದ ಪೂರ್ವಾರ್ಧದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಇತ್ತೀಚಿನವರೆಗೂ ಮರೆತುಹೋಗಿದ್ದ ಒಬ್ಬ ಪೋರ್ಚುಗೀಸ್ ಪ್ರವಾಸಿ. ಗೋವಾ ರಾಜ್ಯಸ್ಥಾಪನೆ ಮಾಡಿದ ಅಲ್ಬುಕರ್ಕ್ ಮುಂತಾದವರು ಹಾಗೂ ಬಾರ್ಬೊಸಾ ಎಂಬ ಹೆಸರಾಂತ ಪ್ರವಾಸಿಗಳ ಮುಂದೆ ಇವನು ಸಾಮಾನ್ಯನಾಗಿ ಕಂಡರೂ ಇವನ ಪ್ರವಾಸ ಕಥನ ಸಾಮಾನ್ಯವಾದುದೇನಲ್ಲ. ಆದರೆ ಇತ್ತೀಚಿನವರೆಗೆ ಇವನ ಪ್ರವಾಸ ಕಥನ ಕತ್ತಲೆಯಲ್ಲಿ ಮರೆಯಾಗಿತ್ತು.

ಪೀರೆಸ್ ರಾಜಕುಮಾರ ಅಫೊನ್ಸೊನ ಸಾಮಾನ್ಯ ವೈದ್ಯನಾಗಿ ೧೫೧೧ರಲ್ಲಿ ಇಂಡಿಯಾಕ್ಕೆ ಬಂದ. ಎರಡೂವರೆ ವರ್ಷಗಳ ಕಾಲ ಪೋರ್ಚುಗೀಸರು ಹೊಸದಾಗಿ ಗೆದ್ದುಕೊಂಡ ಮಲಕ್ಕದಲ್ಲಿ ಇದ್ದ. ಅಲ್ಲಿ ಈತ ತನ್ನ ಸೂಮ ಓರಿಯಂಟಲ್ (Suma-Orienta) ಅಂದರೆಪೌರ್ವಾತ್ಯದ ಸಾರ ಎಂಬ ತನ್ನ ಪ್ರವಾಸ ಕಥನ ಬರೆದ. ಅನಂತರ ಈತ ಚೀನಾಕ್ಕೆ ಯೂರೋಪಿನ ಪ್ರಥಮ ರಾಯಭಾರದ ಮುಖಂಡನಾಗಿ ಹೋಗಿ, ಅಲ್ಲಿಯೇ ಬಹುಶಃ ೧೫೪೦ರಲ್ಲಿ ಕಾಲವಾದ. ಇತ್ತೀಚಿನವರೆಗೂ ಬೆಳಕಿಗೆ ಬಾರದಿದ್ದ ಈತ ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತ ವಾದ ಪ್ರವಾಸ ಕಥನವನ್ನು ಬರೆದಿಟ್ಟು ಹೋಗಿದ್ದಾನೆ. ಯೂರೋಪಿನ ಪ್ರಾಚೀನಕಾಲದ ಪ್ರವಾಸಿಗಳಲ್ಲಿ ಈತ ಬರೆದ ಕಥನ ಬಹು ಸ್ವಾರಸ್ಯವೂ, ವಿವರಗಳಿಂದ ಕೂಡಿದುದೂ ಆಗಿದೆ. ಎಲ್ಲವನ್ನೂ ಈತ ಸೂಕ್ಷ್ಮವಾಗಿ ಈಕ್ಷಿಸಿ ಬಹು ವಿವರವಾದ ದಾಖಲೆಗಳನ್ನು ಬಿಟ್ಟು ಹೋಗಿದ್ದಾನೆ. ಈತನ ಸೂಮ ಓರಿಯಂಟಲ್ ಹತ್ತಾರು ಪತ್ರಗಳ ಮೂಲಕ ಬರೆದ ಕಥೆಯಾಗಿದೆ.

ಟೊಮ್ ಪಿರೇಸ ರಾಜಕುಮಾರ ಅಫೊನ್ಸೋ ಬಳಿ ವೈದ್ಯನಾಗಿದ್ದ. ಈತ ಸುಮಾರು ಕ್ರಿ.ಶ. ೧೪೭೮ರಲ್ಲಿ ಹುಟ್ಟಿದ. ಇಂಡಿಯಾಕ್ಕೆ ಬಂದಾಗ ಈತನ ವಯಸ್ಸು ೪೩ ವರ್ಷ, ಕ್ರಿ.ಶ. ೧೫೪೦ರಲ್ಲಿ ತನ್ನ ೭೦ನೇ ವರ್ಷದಲ್ಲಿ ಈತ ವಿಧಿವಶನಾದ. ಗಂದಿಗೆ ವ್ಯಾಪಾರಿಯಾಗಿ ಇಂಡಿಯಾಕ್ಕೆ ಬಂದ, ಕ್ರಿ.ಶ. ೧೫೧೧ರಲ್ಲಿ ಲಿಸ್ಬನ್‌ನಿಂದ ಹೊರಟ ಹಡಗಿನಲ್ಲಿ ಪಿರೇಸ್ ಕನ್ನಾನೂರಿಗೆ ಸೆಪ್ಟೆಂಬರ್‌ನಲ್ಲಿ ಬಂದು, ಅಲ್ಲಿ ಗಂದಿಗೆ ವ್ಯಾಪಾರ ಆರಂಭಿಸಿದ. ಕೊಚ್ಚಿ, ಮಲಕ್ಕ ಪ್ರದೇಶಗಳಲ್ಲಿ ಕೆಲಕಾಲ ತಂಗಿದ್ದು, ಮುಂದೆ ರಾಯಭಾರಿಯಾಗಿ ಚೀನಾಕ್ಕೆ ತೆರಳಿದ ಕಾರಣಾಂತರದಿಂದ ಬಂಧಿತನಾಗಿ ಕ್ರಿ.ಶ. ೧೫೪೦ರಲ್ಲಿ ಬಂಧನದಲ್ಲಿದ್ದಾಗಲೇ ವಿಧಿವಶನಾದ.

ಈತ ಇಂಡಿಯಾದ ಕ್ಯಾಂಬೆ, ಮತ್ತು ಮಲಕ್ಕಾದ ವ್ಯಾಪಾರ ವಹಿವಾಟುಗಳ ಬಗೆಗೆ ವಿವರಿಸಿದ್ದಾನೆ. ನಂತರ ತನರೀಸ್ ನಾಡಿನ ದ್ವೀಪದಿಂದ ಆರಂಭಿಸಿ ಮಿರ‌್ಜಾನ್, ಭಟ್ಕಲ್ ಮುಂತಾದ ಸ್ಥಳಗಳ ಬಗೆಗೆ ತಿಳಿಸಿದ್ದಾನೆ.

ಪೀರೆಸ್ ಸಾಯುವಾಗ ಅವನಿಗೆ ಸುಮಾರು ೭೦ ವರ್ಷ ವಯಸ್ಸು. ಈತ ತನ್ನ ಪ್ರವಾಸ ಕಥನವಾದ ಸೂಮ ಓರಿಯಂಟಲ್ ಅನ್ನು ಬರೆಯಲು ಆರಂಭಿಸಿದ್ದು ಮಲಕ್ಕದಲ್ಲಿದಾಗ; ಮುಗಿಸಿದ್ದು ಅಲ್ಲಿಂದ ಇಂಡಿಯಾಕ್ಕೆ ಬಂದಮೇಲೆ. ಚೀನಾಕ್ಕೆ ಹೋದಾಗಲೂ ಆತನು ಬರೆಯುತ್ತಲೇ ಇದ್ದ. ಆದರೆ ಆ ಉಪಯುಕ್ತ ಗ್ರಂಥ ಈಗ ಇಲ್ಲ.

ಪೀರೆಸನ ಸೂಮ ಓರಿಯಂಟಲ್ ಸುಮಾರು ನಾಲ್ಕು ಶತಮಾನಗಳ ಕಾಲ ಕಣ್ಮರೆಯಾಗಿದ್ದುದು ಇತ್ತೀಚಿಗೆ ಅಂದರೆ ೧೯೩೭ರಲ್ಲಿ ಬೆಳಕಿಗೆ ಬಂದಿತು. ಇದರಿಂದ ಪೌರ್ವಾತ್ಯ ದೇಶಗಳನ್ನು ಕುರಿತು ಬರೆದ ಗ್ರಂಥ ಗಳಲ್ಲಿ ಅತ್ಯಂತ ಪ್ರಾಚೀನವಾದ ಗ್ರಂಥವೊಂದು ದೊರಕಿದಂತಾಯಿತು. ಈಗ ಇಲ್ಲಿ ಆ ಗ್ರಂಥದಿಂದ ಆಯ್ದು ಕೆಲವು ಮುಖ್ಯ ವಿಷಯಗಳನ್ನು ಮಾತ್ರ ಹೇಳಲಾಗುವುದು.

‘ಮೊದಲ ಇಂಡಿಯಾ’ದ ಕೊನೆಯ ರಾಜ್ಯವನ್ನು ‘ಕನರಿಜ್’ (Canarij- ಕನ್ನಡ) ರಾಜ್ಯ ಎಂದು ಕರೆಯುತ್ತಾರೆ. ಇದಕ್ಕೆ ಒಂದು ಕಡೆ ಗೋವಾ ರಾಜ್ಯ ಹಾಗೂ ಅಂಜ್ ದ್ವೀಪಗಳು ಗಡಿಯಾದರೆ, ಇನ್ನೊಂದು ಕಡೆ ‘ಮಧ್ಯ ಇಂಡಿಯಾ’ ಅಥವಾ ‘ಮಲಬಾರ್ ಇಂಡಿಯಾ’ ಗಡಿಯಾಗಿದೆ. ಒಳನಾಡಿನಲ್ಲಿ ನರಸಿಂಗರಾಜನಿದ್ದಾನೆ. ಈತನ ಭಾಷೆ ‘ಕನರೀಸ್’ (Kanarese). ಇದು ಡೆಕ್ಕನಿನ ಮತ್ತು ಗೋವಾ ರಾಜ್ಯಗಳ ಭಾಷೆಗಳಿಂದ ಭಿನ್ನವಾದುದು. ಸಮುದ್ರತೀರದಲ್ಲಿ ಮತ್ತು ಸಣ್ಣ ಪುಟ್ಟ ಪ್ರದೇಶಗಳಲ್ಲಿ ಎರಡು ರಾಜರುಗಳಿದ್ದಾರೆ. ಇವರೆಲ್ಲಾ ವಿಧರ್ಮಿಗಳು ಹಾಗೂ ನರಸಿಂಗನಿಗೆ ಅಧೀನರು. ಈ ಜನ ನಾಗರೀಕರು, ಯುದ್ಧಾಸಕ್ತರು ಹಾಗೂ ಸಮದ್ರದ ಮೇಲೂ ಭೂಮಿಯ ಮೇಲೂ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವ ಪ್ರವೀಣರು. ಭೂಮಿ ಸಾಗುವಳಿಯಲ್ಲಿದೆ. ಪ್ರಾಮುಖ್ಯವಾದ ಪಟ್ಟಣಗಳಿವೆ.

ಕನರೀಸ್ ನಾಡಿನಲ್ಲಿ ಅಂಜ್‌ದ್ವೀಪದಿಂದ ಆರಂಭಿಸಿ ಮಂಗಳೂರುವರೆಗೆ ಸಿಕ್ಕುವ ಬಂದರುಗಳು ಯಾವುದೆಂದರೆ ಮಿರ್ಜಾನ್, ಹೊನ್ನಾವರ, ಭಟ್ಕಲ್, ಬಸ್ರೂರು (Bacalor), ‘ಬೈರವೇರ’ (Bairavera=ಬ್ರಹ್ಮಾವರ?), ಬಾರ್ಕೂರು, ವ್ಡಿಪಿರಂ (Vdipiram=ಉಡುಪಿ ಅಥವಾ ಉದಯಾವರ?) ಮತ್ತು ಮಂಗಳ್ಳೋರ್ (Mangallor=ಮಂಗಳೂರು). ಇವೆಲ್ಲಾ ವ್ಯಾಪಾರದ ಬಂದರುಗಳು. ಹೊನ್ನಾವಾರದಿಂದ ಅಂಜ್ ದ್ವೀಪದವರೆಗಿನ ಪ್ರದೇಶ ಗರ‌್ಸೋಪ್ (ಗೇರುಸೊಪ್ಪೆ) ರಾಜನಿಗೆ ಸೇರಿದ್ದು. ಭಟ್ಕಲ್, ಬಸ್ರೂರು ಮತ್ತು ಇತರ ಒಳನಾಡಿನ ಪಟ್ಟಣಗಳಿಗೇ ಒಬ್ಬ ರಾಜನಿದ್ದಾನೆ. ಉಳಿದ ನಾಲ್ಕು ಬಂದರುಗಳಲ್ಲಿ ಬಂದರಿನ ಮುಖ್ಯಸ್ಥರು (Captains) ಇದ್ದಾರೆ. ಇವರೆಲ್ಲ ನರಸಿಂಗನಿಗೆ ಅಧೀನರಾಗಿದ್ದು ಕಂದಾಯ ಕವಳಿಗೆಗಳನ್ನು ಸಲ್ಲಿಸುತ್ತಿದ್ದಾರೆ.

ಗರ್ಸೋಪಾ ರಾಜ ಗಣ್ಯನಾದ ಮನುಷ್ಯ. ಅವನ ಬಳಿ ಮೂರುಸಾವಿರ ಅಶ್ವಾರೋಹಿಗಳಿದ್ದಾರೆಂದು ಗೊತ್ತಾಗಿದೆ. ಒಳನಾಡಿನಲ್ಲಿ ಒಂದು ಸಣ್ಣದಾದ ಊರಿದೆ. ಅಲ್ಲಿ ತಿಮೋಜ (ತಿಮ್ಮೋಜ) ಇದ್ದಾನೆ. ಗರ್ಸೋಪ ರಾಜನಿಗೆ ಸಂಬಂಧಿಯಾದ ಈತ ಮೊದಲಿಗೆ ಹೊನ್ನಾವರದಲ್ಲಿ ಇರುತ್ತಿದ್ದ. ಈತ ಆಗಾಗ್ಗೆ ನರಸಿಂಗನ ಅಪ್ಪಣೆಯಂತೆ ಆತನ ಆಸ್ಥಾನಕ್ಕೆ ಹೋಗಿಬರುತ್ತಾನೆ. ಈತನನ್ನು ಕಂಡರೆ ನಾವಿಕರಿಗೆ ತುಂಬಾ ಹೆದರಿಕೆ ಇತ್ತು.

ಭಟ್ಕಲ್ ರಾಜ ಕನರೀಸ್ ಭಾಷೆ ಮಾತನಾಡುವ ವಿಧರ್ಮ. ಹೊನ್ನಾವರ ಮತ್ತು ಗರ‌್ಸೋಪ ರಾಜರುಗಳಿಗಿಂತ ದೊಡ್ಡವ. ಈತನ ರಾಜ್ಯ ಒಳನಾಡಿನಲ್ಲಿ ಬಹಳ ದೂರ ಹಬ್ಬಿದೆ. ಗೋವಾ ಮತ್ತು ಚಾಲ್ ಬಿಟ್ಟರೆ ಭಟ್ಕಲ್ ಬಹುಮುಖ್ಯವಾದ ಬಂದರು. ಬಹಳ ವ್ಯಾಪಾರ ನಡೆಯುತ್ತದೆ. ಒಳನಾಡಿನಲ್ಲಿ ಬೆಳೆಯುವ ಅತ್ಯುತ್ತಮವಾದ ‘ಜೀರಸಾಲ್’ (Giracal)  ಮತ್ತು ‘ಚಂಬಸಾಲ್’ (Chambacal) ಎಂದು ಕರೆಯಲ್ಪಡುವ ಅಕ್ಕಿ ಇಲ್ಲಿಂದ ರವಾನೆಯಾಗುತ್ತವೆ.

ಬೈರವೇರಾ, ಬಾರ್ಕೂರು, ವ್ಡಿಪಿರಂ ಮತ್ತು ಮಂಗಳೂರು ಬಂದರುಗಳಿಗೆ ಹಡಗುಗಳು ಬರುತ್ತವೆ. ವರ್ತಕರು ಕ್ಯಾಂಬೆ, ಗೋವಾ, ಡೆಕ್ಕನ್ ಮತ್ತು ಓರ್ಮಸ್‌ಗಳಿಗೆ ಇಲ್ಲಿಂದ ಸರಕುಗಳನ್ನು ರವಾನಿಸುತ್ತಾರೆ. ಮತ್ತು ಆ ಸ್ಥಳಗಳಲ್ಲಿ ಸಿಕ್ಕುವ ಸರಕುಗಳನ್ನು ತರಿಸುತ್ತಾರೆ. ಈ ಬಂದರುಗಳಲ್ಲಿ ಗಣ್ಯರಾದ ಬಂದರು ನಾಯಕರುಗಳು (Captains) ಸೈನ್ಯ ಸಮೇತ ಇದ್ದಾರೆ. ಇವುಗಳಿಂದ ಬರುವ ಆದಾಯ ನರಸಿಂಗನಿಗೆ ಸಲ್ಲುತ್ತದೆ. ಈ ಕನರಾ ನಾಡಿನಿಂದ ನರಸಿಂಗನಿಗೆ ಹೇರಳವಾದ ಆದಾಯವುಂಟು. ಇಡೀ ನಾಡು ಸಾಗುವಳಿಯಲ್ಲಿದೆ. ಎಲೆ ಅಡಿಕೆ ಬೆಳೆ ಇಲ್ಲಿ ಹೆಚ್ಚು. ದೊಡ್ಡ ದೊಡ್ಡ ದೇವಸ್ಥಾನಗಳಿವೆ.

ನರಸಿಂಗರಾಜ ಕನರಾದ ವಿಧರ್ಮ (The king is a heathen of Kanara). ಆ ಕಡೆ ಈತ ಕಳಿಂಗನೂ ಹೌದು (and on the other hand he is a Kling). ಅವನ ಆಸ್ಥಾನದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ರಾಜನ ಮಾತೃಭಾಷೆ (natural speech) ಕನರೀಸ್. ರಾಜನ ಆಸ್ಥಾನದಲ್ಲಿ ಸಾವಿರ ನರ್ತಕಿಯರೂ, ಗಾಯಕಿಯರೂ ಇದ್ದಾರೆ. ಇದೇ ವೃತ್ತಿಯ ನಾಲ್ಕೈದು ಸಾವಿರ ಪುರುಷರೂ ಇದ್ದಾರೆ. ಇವರು ಕಳಿಂಗರು (Klings); ಕನರೀಸ್ ಅಲ್ಲ, ಏಕೆಂದರೆ, ತೆಲಿಂಗನ(Telingana)ದ ಜನರು ಹೆಚ್ಚು ಲಾವಣ್ಯವುಳ್ಳವರು ಹಾಗೂ ನಾನಾ ಆಟಪಾಠಗಳಲ್ಲಿ ಎತ್ತಿದ ಕೈಯ್ಯದವರು.

ಮಂಗಳೂರಿಗೆ ‘ಮೊದಲ ಇಂಡಿಯಾ’ ಕೊನೆಯಾಗಿ, ಅಲ್ಲಿಂದ ‘ಎರಡನೆ ಇಂಡಿಯಾ’ ಅಥವಾ ‘ಮಧ್ಯ ಇಂಡಿಯಾ’ ಆರಂಭವಾಗುತ್ತದೆ. ಇದರ ಆರಂಭ ಮಯ್‌ಸಿರಂ (ಮಂಜೇಶ್ವರ)ದಿಂದ. ಮಯ್‌ಸಿರಂ ಮಲಬಾರಿನ ಮೊದಲ ಬಂದರು. ಇಲ್ಲಿ ಆರಂಭವಾದ ಮಧ್ಯ ಇಂಡಿಯಾ ಬೆಂಗಾಳದ ಗಡಿಯಲ್ಲಿರುವ ಗಂಗಾ ನದಿಯಲ್ಲಿ ಕೊನೆಗೊಳ್ಳುತ್ತವೆ. ಮಯ್‌ಸಿರಂ ಬಂದರು ಬಿಸ್ನಾಗರ (ವಿಜಯನಗರ) ರಾಜನಿಗೆ ಸೇರಿದ್ದು.