ಇಬ್ನೆಬತುತಾ ಉತ್ತರ ಆಫ್ರಿಕಾದಲ್ಲಿರುವ ಮೊರಾಕೊ ದೇಶದ ಟ್ಯಾಂಜಿಯರ್‌ನಲ್ಲಿ ಕ್ರಿ.ಶ. ೧೩೦೪ರಲ್ಲಿ ಹುಟ್ಟಿದನು. ಇಪ್ಪತ್ತೆರಡನೆಯ ವಯಸ್ಸಿನಲ್ಲಿಯೇ ಹುಟ್ಟಿದ ಊರನ್ನು ಬಿಟ್ಟು ಸುಮಾರು ಮುವತ್ತು ವರುಷಗಳ ಕಾಲ ದೇಶ ವಿದೇಶಗಳಲ್ಲಿ ಸಂಚಾರ ಮಾಡಿ ಸ್ವದೇಶಕ್ಕೆ ಹಿಂದಿರುಗಿ ತನ್ನ ಎಪ್ಪತ್ತಾನಾಲ್ಕನೇ ವಯಸ್ಸಿನಲ್ಲಿ, ಅಂದರೆ ಕ್ರಿ.ಶ. ೧೩೬೮ ಅಥವಾ ಕ್ರಿ.ಶ. ೧೩೬೯ರಲ್ಲಿ ಫೆಜ್ ಪಟ್ಟಣದಲ್ಲಿ ಕಾಲವಾದ. ಈತ ಇಂಡಿಯಾದಲ್ಲಿ ೧೩೩೩ ರಿಂದ ೧೩೪೭ರವರೆಗೆ ಇದ್ದನೆಂದು ಹೇಳುತ್ತಾರೆ.

ಈತನ ಸ್ವಂತ ಹೆಸರು ಅಬೂ ಅಬ್ದುಲ್ಲಾ ಮಹಮ್ಮದ್. ಕಸಬಿನಲ್ಲಿ ಈತ ಇಸ್ಲಾಂ ಮತದ ಉಪದೇಶಕ. ನಾನಾ ದೇಶಗಳಲ್ಲಿದ್ದ ಇಸ್ಲಾಂ ಮತದ ಉಪದೇಶಕರನ್ನೂ, ಫಕೀರರನ್ನೂ ನೋಡುವುದು ಈತನ ಉದ್ದೇಶ ವಾಗಿತ್ತು. ಏಷ್ಯಾಮೈನರ್, ಕಪ್ಪು ಸಮುದ್ರ, ಮಂಗೋಲ್ ಚಕ್ರಾಧಿಪತ್ಯಕ್ಕೆ ಸೇರಿದ ಕೆಲವು ಪ್ರದೇಶಗಳನ್ನು ದಾಟಿ ಇಂಡಿಯಾದ್ದೇಶವನ್ನು ಕ್ರಿ.ಶ. ೧೩೩೩ರಲ್ಲಿ ಪ್ರವೇಶಿಸಿದ.

ದೆಹಲಿ ಸುಲ್ತಾನ ಮಹಮ್ಮದ್ ಬಿನ್ ತೊಗಲಕ್ ದೊಡ್ಡದಾಗಿ ಸನ್ಮಾನವಿತ್ತು, ದೆಹಲಿಯ ಖಾಜಿಯನ್ನಾಗಿ ಇವನನ್ನು ನೇಮಿಸಿಕೊಂಡ. ಸುಲ್ತಾನನೊಡನೆ ಉಂಟಾದ ಮನಸ್ತಾಪದಿಂದ ಖಾಜಿ ಕೆಲಸವನ್ನು ಬಿಟ್ಟು ಫಕೀರನಾದ. ಈತ ಇಂಡಿಯಾದಲ್ಲಿ ಹದಿನಾಲ್ಕು ವರುಷಗಳಿದ್ದು, ಅದರಲ್ಲಿ ಏಳು ವರುಷಗಳ ಕಾಲ ದೆಹಲಿಯಲ್ಲಿದ್ದು ಅನೇಕ ವಿಷಯ ಗಳನ್ನು ತಿಳಿದುಕೊಂಡಿದ್ದನೆಂದು ತಿಳಿದು ಬರುತ್ತದೆ.

ಈತ ಮಲಬಾರ್‌ನ ಸ್ವತಂತ್ರ ರಾಜರುಗಳ ಆಶ್ರಯದಲ್ಲಿ ಕೆಲಕಾಲ ತಂಗಿ, ಕೋರಮಂಡಲ, ಅಸ್ಸಾಂ ಪ್ರದೇಶಗಳನ್ನು ಸಂದರ್ಶಿಸಿದರು. ಚೀನಾ, ಮೆಕ್ಕಾ, ಅಂಡಲೂಷಿಯ ಮತ್ತು ನಿಗ್ರೋಲ್ಯಾಂಡ್ ದೇಶಗಳನ್ನು ಸುತ್ತಿ ಸ್ವದೇಶಕ್ಕೆ ಹಿಂದಿರುಗಿದ. ಈತನ ಪ್ರವಾಸ ಕಥನವನ್ನು ಇಬ್ನೆಜುಜ್ಜೆ ಎಂಬುವನು ಅರಬ್ಬಿ ಭಾಷೆಯಲ್ಲಿ ಬರೆದಿಟ್ಟನು. ಅರಬ್ಬಿ ಭಾಷೆಯಿಂದ,  ಫ್ರೆಂಚ್ ಭಾಷೆಗೆ ಭಾಷಾಂತರವಾಯಿತು. ನಂತರ ಇಂಗ್ಲಿಷ್ ಭಾಷೆಗೆ ಎಚ್.ಎ.ಆರ್. ಗಿಬ್ ಎಂಬುವವನು ಭಾಷಾಂತರಿಸಿದ. ತೊಘಲಕನ ಕಾಲದ ವಿಚಾರಗಳು, ಈತನ ಪ್ರವಾಸ ಕಥನದಲ್ಲಿ ದೊರಕುತ್ತವೆ. ಹಾಗೆಯೇ ವಿಜಯನಗರ ಸಾಮ್ರಾಜ್ಯ ಅಸ್ತಿತ್ವದಲ್ಲಿದ್ದ ಕಾಲದ ಉಪಯುಕ್ತ ವಿಚಾರಗಳು ದೊರಕುತ್ತವೆ. ಜವಾಹರಲಾಲ್ ನೆಹರು ಅವರು ಆತನನ್ನು ಅದ್ಭುತ ಪ್ರವಾಸಿ ಎಂದು ಕರೆದಿದ್ದಾರೆ.

ಇಲ್ಲಿಯ ಜನ ಸಮುದ್ರದ ಮೇಲೆ ವ್ಯಾಪಾರಮಾಡಿ ಜೀವಿಸುತ್ತಾರೆ. ಬೇಸಾಯದ ಜಮೀನಿಲ್ಲ. ಹೆನಾವರಿನ ರಾಜನ ಹೆಸರು ಸುಲ್ತಾನ್ ಜಲಾಲುದ್ದೀನ್ ಎಂದು. ಅವನು ಹರ್ಯಾಬ್ (ಈತ ವಿಜಯನಗರದ ಸ್ಥಾಪಕ ಒಂದನೇ ಹರಿಹರ ಎಂಬುದರಲ್ಲಿ ಸಂದೇಹವಿಲ್ಲ) ಎಂಬ ಹಿಂದೂ ರಾಜನಿಗೆ ಅಧೀನನಾಗಿದ್ದಾನೆ. ನಿತ್ಯವೂ ಮಸೀದಿಗೆ ಸೂರ್ಯೋದಯಕ್ಕೆ ಮುಂಚೆ ಹೋಗಿ ಸೂರ್ಯೋದಯವಾಗುವವರೆಗೆ ಕೋರಾನನ್ನು ಓದುವ ಪದ್ಧತಿ ಇಟ್ಟುಕೊಂಡಿದ್ದಾನೆ. ನಾನೂ ನನ್ನ ಕೆಲವು ಸಹಪಾಠಿಗಳೂ ಇವನೊಡನೆ ಭೋಜನ ಮಾಡಿದೆವು. ತಾಳಂ (ಥಾಲಿ) ಎಂದು ಕರೆಯುವ ತಟ್ಟೆಯಲ್ಲಿ ಅನ್ನ, ತುಪ್ಪ, ಉಪ್ಪು ಹಾಕಿದ ಮೆಣಸಿನ ಗೊಂಚಲು, ಹಸಿ ಶುಂಠಿ, ನಿಂಬೆಹಣ್ಣು ಮತ್ತು ಮಾವಿನಕಾಯಿ ಉಪ್ಪಿನಕಾಯಿ, ತರಕಾರಿಯ ಪಲ್ಯ, ಹಾಲಿನಿಂದ ಮಾಡಿದ ಪಾಯಸ ಮುಂತಾದವುಗಳನ್ನು ಬಡಿಸಿದರು. ಜೊತೆಗೆ ಹುರಿದ ಕೋಳಿಯನ್ನೂ ನಾನಾ ತರಹೆ ಮೀನನ್ನೂ ಅನ್ನದ ಜೊತೆ ಬಡಿಸಿದರು. ಕೊನೆಯಲ್ಲಿ ಮಜ್ಜಿಗೆಯನ್ನು ಬಡಿಸಿದರು. ಇಲ್ಲಿಗೆ ಊಟ ಮುಗಿದಂತೆ. ಮಜ್ಜಿಗೆಯನ್ನು ಬಡಿಸಿದರೆ ಊಟ ಮಾಡಬೇಕಾದ್ದು ಮತ್ತೇನೂ ಇಲ್ಲವೆಂದು ಅರ್ಥ. ಎಲ್ಲ ಆದಮೇಲೆ ಬಿಸಿನೀರು ಕುಡಿಯುತ್ತಾರೆ. ಏಕೆಂದರೆ ಮಳೆಗಾಲದಲ್ಲಿ ತಣ್ಣೀರು ಒಳ್ಳೆಯದಲ್ಲ.

ಬೇರೊಂದು ಸಂದರ್ಭದಲ್ಲಿ ನಾನು ಈ ಸುಲ್ತಾನನೊಡನೆ ಹನ್ನೊಂದು ತಿಂಗಳು ಇದ್ದೆ. ಆಗ ಮತ್ತು ಮಾಲ್ಡೀವ್ ದ್ವೀಪಗಳು, ಸೀಲಾನ್ (ಸಿಲೋನ್), ಮಾಬಾರ್ ಮತ್ತು ಮುಲಯ್‌ಬಾರ್ ದೇಶಗಳಲ್ಲಿ ಇದ್ದಾಗ ಬರೀ ಅನ್ನವನ್ನು ಮಾತ್ರ ತಿನ್ನಬೇಕಾಯಿತು. ಇಲ್ಲಿ ರೊಟ್ಟಿ ಇಲ್ಲವೇ ಇಲ್ಲ.

ಜಲಾಲುದ್ದೀನನ ಆಸ್ಥಾನದಲ್ಲಿ ಮೂರು ದಿವಸಗಳು ಇದ್ದು ನಮ್ಮ ಪ್ರಯಾಣಕೋಸ್ಕರ ಕೊಟ್ಟ ಭತ್ಯವನ್ನು ತೆಗೆದುಕೊಂಡು ಮೂರುದಿನ ಪ್ರಯಾಣ ಮಾಡಿ ಮುಲಯ್‌ಬಾರಿಗೆ (ಮಲಬಾರಿಗೆ) ಬಂದೆವು.

—-
ಆಕರ:
ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ (ಸಂಪುಟ-೨), ೧೯೬೬, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪುಟ೬೮-೬೯.