ನಿಕಿಟಿನ್ ರಷ್ಯಾದೇಶದ ತ್ವೈರ್ ಎಂಬ ಊರಿನವನು. ರಷ್ಯಾದೇಶದಿಂದ ಇಂಡಿಯಾ ದೇಶಕ್ಕೆ ಬಂದ ಪ್ರವಾಸಿಗರಲ್ಲಿ ಬಹುಶಃ ಮೊದಲನೆಯವ. ಮೂರನೆಯ ಐವಾನನು ರಷ್ಯಾದೇಶವನ್ನು ಆಳುತ್ತಿದ್ದಾಗ, ಅಂದರೆ ಸುಮಾರು ಕ್ರಿ.ಶ. ೧೪೭೦ರಲ್ಲಿ, ವ್ಯಾಪಾರಕ್ಕೋಸ್ಕರ ಇಂಡಿಯಾದೇಶಕ್ಕೆ ಬಂದಿದ್ದ. ಇವನು ಹೆಚ್ಚಾಗಿ ಗೋಲ್ಕೊಂಡ ಮತ್ತು ದಖನ್ ರಾಜ್ಯಗಳ ವಿಚಾರ ಬರೆದಿದ್ದಾನೆ. ಅಷ್ಟು ಆಳವಾಗಿ ಈ ದೇಶದ ಸ್ಥಿತಿಗತಿಗಳನ್ನು ನೋಡಿಯಾಗಲೀ ಅಥವಾ ತಿಳಿದಾಗಲೀ ಬರೆಯದಿದ್ದರೂ, ಇವನು ಹೇಳಿರುವ ವಿಚಾರಗಳು ಗಮನಾರ್ಹವಾಗಿವೆ.

ಕ್ರಿ.ಶ. ೧೪೬೮ರಲ್ಲಿ ತನ್ನ ಊರಾದ ತ್ವೈರ್‌ನಿಂದ ಹೊರಟು ರಷ್ಯಾ, ಇಂಡಿಯಾ ಮತ್ತು ಏಷ್ಯಾ ಮೈನರ್‌ನ ಕೆಲವು ಭಾಗಗಳನ್ನು ನೋಡಿಕೊಂಡು ಕ್ರಿ.ಶ. ೧೪೭೪ರಲ್ಲಿ ತನ್ನ ದೇಶಕ್ಕೆ ಹಿಂದಿರುಗಿದ.

ತನ್ನ ಊರಿನಿಂದ ಹೊರಟು ಕ್ಯಾಸ್ಪಿಯನ್ ಸಮುದ್ರವನ್ನು ದಾಟಿ ಬೊಖಾರಕ್ಕೆ ಬಂದನು. ಪರ್ಷಿಯಾ ದೇಶದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಿಗೆ ಭೇಟಿ ಮಾಡಿ ಓರ್ಮಸ್ಸಿಗೆ ಬಂದನು. ಅಲ್ಲಿಂದ ಹೊರಟು  ಇಂಡಿಯಾಕ್ಕೆ ಸಮುದ್ರಯಾನ ಮಾಡಿ ಬೊಂಬಾಯಿಯ ಚೌಲ್ ಎಂಬ ಬಂದರನ್ನು ಮುಟ್ಟಿದ. ಅಲ್ಲಿಂದ ಬೀದರ್‌ಗೆ ತಲುಪಿ ನಾಲ್ಕು ವರ್ಷಗಳನ್ನು ಕಳೆದು, ನಂತರ ಕ್ಯಾಲಿಕಟ್, ಸಿಲೋನ್, ಪೆಗು ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ. ನಿಕಿಟಿನ್ ನಂತರ ಸ್ವದೇಶಕ್ಕೆ ತೆರಳಿದ ಬಗ್ಗೆ ಮಾಹಿತಿಯಿಲ್ಲ. ನಿಕಿಟಿನನ ಪ್ರವಾಸ ಕಥನವನ್ನು ರಷ್ಯನ್ ಲೆಗೇಷನ್ನಿನ ಸೆಕ್ರೆಟರಿಯವರಾದ ಕೌಂಟ್ ವೀಲ್ ಹೋರ್‌ಸ್ಕಿ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.

ಹಿಂದೂಗಳ ಸುಲ್ತಾನ ಕದಮನು ಬಹಳ ಶಕ್ತಿವಂತನಾದ ರಾಜ. ಇವನ ಬಳಿ ಅಸಂಖ್ಯಾತ ಸೈನ್ಯವಿದೆ. ಇವನು ಬಿಜನೇಘರ್ (ವಿಜಯನಗರ) ಎಂಬ ಸ್ಥಳದಲ್ಲಿ ಪರ್ವತದ ಮೇಲೆ ವಾಸಮಾಡುತ್ತಾರೆ. ಈ ಭಾರೀ ನಗರದ ಸುತ್ತಲೂ ಮೂರು ಕೋಟೆಗಳಿವೆ. ಈ ಊರಿನ ಮಧ್ಯೆ ನದಿ ಹರಿಯುತ್ತದೆ. ಒಂದು ಕಡೆ ಕಂಟಕಕಾರಿಯಾದ ಜಂಗಲ್ ಇದೆ. ಶತ್ರುವು ಬಿಜನೇಘರ್ ಮೇಲೆ ಧಾಳಿ ಮಾಡಿ ಒಂದು ತಿಂಗಳು ಮುತ್ತಿಗೆ ಹಾಕಿದನು. ಅನ್ನನೀರಿನ ಅಭಾವದಿಂದ ಅನೇಕ ಸೈನಿಕರು ಸತ್ತುಹೋದರು. ಹತ್ತಿರದಲ್ಲಿ ಯಥೇಚ್ಛವಾಗಿ ನೀರಿದ್ದರೂ ಅದು ಅವನ ಕೈಗೆ ಸಿಕ್ಕದಾಯಿತು. ಅನಂತರ ಮಲ್ಲಿಕ್ ಖಾನ್ ಖೋಡಾ ಎಂಬುವನು ಈ ಭದ್ರವಾದ ನಗರವನ್ನು ಹಗಲೂರಾತ್ರಿ ಮುತ್ತಿಗೆಹಾಕಿ ಗೆದ್ದನು. ಭಾರಿ ಫಿರಂಗಿ ಸಮೇತ ಮುತ್ತಿಗೆ ಹಾಕಿದ ಸೈನಿಕರಿಗೆ ಇಪ್ಪತ್ತು ದಿನಗಳು ಅನ್ನನೀರಿರಲಿಲ್ಲ. ಮಲ್ಲಿಕ್ ಖಾನನು ತನ್ನ ಯೋಧರಲ್ಲಿ ಅತ್ಯುತ್ತಮವಾದ ಐದು ಸಾವಿರ ಜನರನ್ನು ಕಳೆದುಕೊಂಡನು. ನಗರವು ಕೈವಶವಾದ ಮೇಲೆ ಇಪ್ಪತ್ತು ಸಾವಿರ ಹೆಂಗಸರು ಗಂಡಸರ ತಲೆಯನ್ನು ಕಡಿಸಲಾಯಿತು. ಇಪ್ಪತ್ತು ಸಾವಿರ ಜನರನ್ನು ಚಿಕ್ಕವರು ಮುದುಕರೆನ್ನದೆ ಖೈದಿಗಳನ್ನಾಗಿ ಮಾಡಿ ಆಮೇಲೆ ತಲೆ ಒಂದಕ್ಕೆ ಐದು, ಹತ್ತು ಟೆಂಕಗಳಂತೆ ಮಾರಲಾಯಿತು. ಮಕ್ಕಳಿಗೆ ಎರಡು ಟೆಂಕಾ ಬೆಲೆ. ಆದರೆ ಭಂಡಾರ ಬರಿದಾಗಿತ್ತು. ಪಟ್ಟಣವನ್ನು ಬಿಡಬೇಕಾಯಿತು. ದೇವರಿಗೇ ಗೊತ್ತು ಯಾರು ಭಕ್ತನೆಂದು. ಆ ಭಕ್ತಿಯುಳ್ಳವನಿಗೆ ದೇವರೊಬ್ಬನೇ ಎಂಬ ಅರಿವುಂಟು. ಅವನ ಧ್ಯಾನಮಾಡಲು ಆ ಭಕ್ತನಿಗೆ ಎಲ್ಲೆಡೆಯೂ ಆಸಕ್ತಿ ಇರುತ್ತದೆ.

—-
ಆಕರ: ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ (ಸಂಪುಟ – ೨), ೧೯೬೬, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪುಟ ೧೮೭.