ವಿದೇಶಿ ಪ್ರವಾಸಿಗರು ವಿಜಯನಗರದಲ್ಲಿ ಕಂಡ ಹಬ್ಬದಾಚರಣೆ

ತಾವು ಅನುಭವಿಸಿ ಆನಂದಿಸಿದ ವಿಜಯನಗರ ಸಾಮ್ರಾಜ್ಯದ ಮೂರು ನಾಡಹಬ್ಬಗಳ ಬಗ್ಗೆ ವಿದೇಶಿ ಪ್ರವಾಸಿಗರು ವಿವರವಾದ ವರದಿ ಕೊಟ್ಟಿರುವರು. ಅವು ಹೋಳಿ, ದೀಪಾವಳಿ ಮತ್ತು ಮಹಾನವಮಿ. ಇವುಗಳಲ್ಲಿ ಅತ್ಯಂತ ವಿಜೃಂಭಿತವೂ ವಿಶಿಷ್ಟವೂ ಆದುದು ಮಹಾನವಮಿ ಮಹೋತ್ಸವ. ಆ ಹಿಂದೆ ಧಾರ್ಮಿಕ ಆಚರಣೆ ಮಾತ್ರವಾಗಿದ್ದ ಈ ಉತ್ಸವವು ವಿಜಯನಗರದ ಕಾಲದಲ್ಲಿ ನಾಡಹಬ್ಬವಾಯಿತು. ಈ ಅವಕಾಶವನ್ನು ಬಳಸಿಕೊಂಡು ಸಾಮ್ರಾಜ್ಯದ ಸಂಪತ್ತು, ಸಾರ್ವಭೌಮತ್ವ, ಸೇನಾಶಕ್ತಿ ಹಾಗೂ ಪ್ರತಿಷ್ಠೆಯನ್ನು ವಿಜಯನಗರದ ಅರಸರು ಲೋಕಕ್ಕೆಲ್ಲ ಪ್ರದರ್ಶಿಸಿದರು. ಸಡಗರದ ಈ ಉತ್ಸವಗಳು ವಿದೇಶಿ ಪ್ರವಾಸಿಗರನ್ನು ಬೆರಗುಗೊಳಿಸಿದ್ದವು. ಅವರಲ್ಲಿ ಇಟಲಿಯ ನಿಕೋಲ-ದ-ಕೊಂತಿ (೧೪೨೦-೨೧) ಪರ್ಶಿಯಾದ ಅಬ್ದುಲ್ ರಜಾಕ್ (೧೪೪೩) ಈ ಹಬ್ಬಗಳನ್ನು ೧೫ನೆಯ ಶತಮಾನದ ಪೂರ್ವಾರ್ಧದಲ್ಲಿ ಕಂಡರೆ, ಪೋರ್ತುಗಲ್ಲಿನ ಡೊಮ್ಯಾಂಗೋ ಪ್ಯಾಸ್ (೧೫೨೦-೨೨) ಹಾಗೂ ಫೆರ‌್ನೊ ನೂನಿಜ್ (೧೫೩೫-೩೭) ಅವುಗಳನ್ನು ೧೬ನೆಯ ಶತಮಾನದ ಪೂರ್ವಾರ್ಧದಲ್ಲಿ ಗಮನಿಸಿದ್ದರು.

ವಿಜಯಸೌಧ

ಮಹಾನವಮಿಯು ವಿಜಯನಗರದರಸರ ಪ್ರತಿಷ್ಠೆಯನ್ನು ಪ್ರದರ್ಶಿಸುವ ಹಬ್ಬವಾಗಿ ತ್ತೆಂಬುದನ್ನು ಅಬ್ದುಲ್ ರಜಾಕ್ ಅರಿತಿದ್ದ. ದಂಡನಾಯಕರಿಂದ ಕಪ್ಪಕಾಣಿಕೆಗಳನ್ನು ಸ್ವೀಕರಿಸಲೆಂದೇ ಈ ಹಬ್ಬವನ್ನು ಅವರು ಆಚರಿಸುತ್ತಿದ್ದರೆಂದು ನೂನಿಜ್ ಕೂಡ ಕೇಳಿದ್ದ. ಈ ಹಬ್ಬಕ್ಕೆ ಅವರು ಎಷ್ಟು ಮಹತ್ವ ಕೊಟ್ಟಿದ್ದರೆಂದರೆ, ಇದರ ಆಚರಣೆಗಾಗಿಯೇ ಒಂದು ಮಹಾಮಂಟಪವನ್ನು ಕಟ್ಟಿ ಅದಕ್ಕಿ ‘ವಿಜಯಸೌಧ’ ಎಂಬ ಹೆಸರು ಕೊಟ್ಟಿದ್ದರು. ಇದು ವಿಜಯದಶಮಿ (ಮಹಾನವಮಿ) ಹಬ್ಬದಾಚರಣೆಯ ಕೇಂದ್ರಬಿಂದುವಾಗಿತ್ತು. ಈ ಸೌಧದ ಅವಶೇಷಗಳು ಇಂದಿಗೂ ಉಳಿದು ಬಂದಿದ್ದು, ಅದನ್ನು ‘ಮಹಾನವಮಿ ದಿಬ್ಬ’ ಮತ್ತು ‘ವಿಜಯಮಂಟಪ’ ಎಂದು ಈಗ ಕರೆಯಲಾಗುತ್ತಿದೆ. ಕೃಷ್ಣದೇವರಾಯನ ಆಮುಕ್ತಮಾಲ್ಯ (ಅ-೨)ದಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಗೊಂಡಿರುವ ‘ಗೋಪುರ ವೇದಿಕೆ’ಯು ಇದಾಗಿರಲು ಸಾಧ್ಯ.

ಈ ಹಬ್ಬದ ಒಂಬತ್ತು-ಹತ್ತು ದಿನಗಳಲ್ಲಿ ಸಾಮ್ರಾಜ್ಯವೇ ಮಹಾರಾಜಧಾನಿ ಪಟ್ಟಣದಲ್ಲಿ ಸಮ್ಮಿಳಿತಗೊಳ್ಳುತ್ತಿತ್ತು. ತಮ್ಮ ತಮ್ಮ ಪ್ರದೇಶದ ಚತುರ ನಾಟ್ಯಗಾರ್ತಿಯರನ್ನು ಕ್ರೀಡಾಪಟುಗಳನ್ನು ಕಡುಗಲಿಗಳನ್ನು ಇಲ್ಲಿಗೆ ಕರೆತಂದು, ಈ ಉತ್ಸವದಲ್ಲಿ ಪಾಲ್ಗೊಳ್ಳ ಬೇಕೆಂಬ ಕಡ್ಡಾಯದ ಕರೆಯು ಅಧೀನ ಅರಸರಿಗೆ, ದಂಡನಾಯಕರಿಗೆ, ಸಾಮಂತರಿಗೆ ಅರಸನಿಂದ ಹೋಗುತ್ತಿತ್ತು. ರಾಜ್ಯದ ಪರ ಯುದ್ಧ ನಿರತರಾದವರನ್ನು ಮತ್ತು ರಾಜ್ಯದ ಗಡಿರಕ್ಷಣೆಯಲ್ಲಿ ತೊಡಗಿಸಿಕೊಂಡ ದಂಡನಾಯಕರನ್ನು ಬಿಟ್ಟು ಉಳಿದೆಲ್ಲ ಪ್ರತಿಷ್ಠಿತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರೆಂಬುದರಲ್ಲಿ ಸಂಶಯವಿಲ್ಲ. ಇವರಲ್ಲಿ ಹಲವರು ಮೂರು-ನಾಲ್ಕು ತಿಂಗಳ ದಾರಿ ತುಳಿದು, ದೂರ ದೂರದ ಪ್ರದೇಶಗಳಿಂದ ಬರುತ್ತಿದ್ದರೆಂದು ಪ್ರವಾಸಿಗರು ವರದಿ ಮಾಡಿರುವರು. ಇವರಾರೂ ಬರಿಗೈಯಲ್ಲಿ ಬರುತ್ತಿರಲಿಲ್ಲ; ತಮ್ಮ ಪರಿವಾರ ಹಾಗೂ ಪ್ರತಿಷ್ಠಿತ ಪ್ರಜಾಮಂಡಳಿಯೊಡಗೂಡಿ, ಅರಸನಿಗೆ ಅರ್ಪಿಸಲು ಅಮೂಲ್ಯ ವಸ್ತು-ಒಡವೆ-ವನಿತೆಯರನ್ನು ತರುತ್ತಿದ್ದರು. ಯುದ್ಧಕವಚ ಹಾಗೂ ಹೌಡಾಗಳಿಂದ ವಿಶೇಷ ವಾಗಿ ಅಲಂಕರಿಸಿಕೊಂಡ ಗಜಗಳು ಗಾರುಡಿಗರನ್ನು ಮತ್ತು ಪಂಜುಪಟುಗಳನ್ನು ಹೊತ್ತು ಭೋರ್ಗರೆವ ಮೋಡಗಳಂತೆ ಘರ್ಜಿಸುತ್ತಾ ಸಾಗರೋಪಾದಿಯಲ್ಲಿ ಬರುತ್ತಿದ್ದುದನ್ನು ಅಬ್ದುಲ್ ರಜಾಕ್ ಗಮನಿಸಿದ್ದ. ಇದೊಂದು ವಾಸ್ತವ ದೃಶ್ಯವಾಗಿತ್ತೆಂದು ತೋರುವುದು, ಏಕೆಂದರೆ ವಿಜಯನಗರದ ಕವಿಯಾದ ಚಂದ್ರಶೇಖರನೂ ‘ನೀಲದ ನೆಲಗಟ್ಟಿನರಂಗ’ವನ್ನು ರಜಾಕ್ ಬರುವುದಕ್ಕಿಂತ ಒಂದೂವರೆ ದಶಕದ ಮುಂಚೆ (ಕ್ರಿ.ಶ. ೧೪೩೦)ಯೇ ಇಲ್ಲಿ ಕಂಡಿದ್ದನು ಎಂಬುದಕ್ಕೆ (ಪಂಪಾಸ್ಥಾನ ವರ್ಣನಂ ೮೬-ವ) ಸಾಕ್ಷಿ ನುಡಿದಿರುವನು.

ಉತ್ಸವದ ತೆರೆದಂಗಳ

ಸೆಪ್ಟೆಂಬರ್ ೧೪೪೬ರ ಉತ್ಸವದಲ್ಲಿ ಪಾಲ್ಗೊಂಡ ಅಬ್ದುಲ್ ರಜಾಕ್ ತನ್ನ ಅನುಭವ ವನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಿರುವನು. ‘ರಾಜ್ಯದ ಮೂಲೆಮೂಲೆಯ ದಣ್ಣಾಯಕರು, ಅಧಿರಾಜರು, ಸಾಮಂತರು ತಮ್ತು ಬ್ರಾಹ್ಮಣರು, ಗುಂಪುಗೊಂಡು ಅರಮನೆಯ ಪ್ರಾಂಗಣದಲ್ಲಿ ನೆರೆದಾಗ, ಅದು ‘ಪಚ್ಛೆರಾಗದ ಸಾಗರದಂತೆ ತೊಯ್ದಡುವಂತೆ’ ಅವನಿಗೆ ಗೋಚರಿಸಿತಂತೆ. ‘ಈ ಹಬ್ಬದ ನಿಮಿತ್ತ ಇಲ್ಲಿ ಹಲವಾರು ಡೇರಾಮಂಟಪಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ಹಲವು ಎರಡರಿಂದ ಐದು ಅಂತಸ್ತಿನವಾಗಿದ್ದರೆ, ಇನ್ನು ಕೆಲವು ತಮ್ಮ ಸುತ್ತಲೂ ಸುತ್ತುವ ತಿರುಗಣೀ ಮನೆಗಳಾಗಿದ್ದವು. ಅತ್ಯಂತ ನಾಜೂಕಿನಿಂದ ಮೂಡಿಸಿದ ಸುಂದರವಾದ ವರ್ಣಚಿತ್ರಗಳಿಂದ, ಕಲ್ಪನಾತೀತವಾದ ಪಶು, ಪಕ್ಷಿ, ಪ್ರಾಣಿ ಮಾತ್ರವಲ್ಲದೆ ನೊಣ-ನೊರಜುಗಳ ಸೂಕ್ಷ್ಮಚಿತ್ರಗಳಿಂದ ಈ ಡೇರೆಗಳು ಅಲಂಕಾರ ಗೊಂಡಿದ್ದವು’. ಮಹಾರಾಜಧಾನಿ ಪಟ್ಟಣದಲ್ಲಿ ಮಾತ್ರವಲ್ಲದೆ ರಾಜ್ಯದ ರಹದಾರಿಗಳಲ್ಲೆಲ್ಲಾ ನೆಟ್ಟು ಕಟ್ಟುಬಟ್ಟೆಯಿಂದ ಅಲಂಕರಿಸಿದ್ದ, ದೊಡ್ಡ ದೊಡ್ಡ ಮರದಿನ್ನೆಗಳ ಮಂಟಪಗಳು ಹಡಗಿನ ಘಟಸ್ತಂಬವನ್ನು ನೆನಪಿಸಿಕೊಡುತ್ತಿದ್ದವೆಂದು ಇಟಲಿಯ ಪ್ರವಾಸಿ ನಿಕೋಲ-ದ-ಕೊಂತಿ ಹೇಳಿರುವನು. ಆ ಆವರಣದ ಮುಂಭಾಗದಲ್ಲಿ ಒಂಬತ್ತು ಅಂತಸ್ತಿನ ಒಂದು ಅರಮನೆಯನ್ನೂ ಅಲ್ಲಿಂದ ಡೇರಾ ಮಂಟಪದವರೆಗೆ ವಿಸ್ತರಿಸಿದ್ದ ತೆರೆದಂಗಳವನ್ನೂ ಅಬ್ದುಲ ರಜಾಕ್ ನೋಡಿದ್ದರೆ, ಇದಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಪ್ಯಾಸ್ ಕಂಡಿದ್ದನು.

ಒಂದರ ಹಿಂದೆ ಒಂದು ನಿಂತಿದ್ದ ಎರಡು ಬೃಹತ್ ದ್ವಾರಗಳನ್ನು ವಿಜಯಸೌಧದ ಎರಡು ಬದಿಯಲ್ಲಿದ್ದ ಕಿರುಎತ್ತರದ ಮೊಗಸಾಲೆಗಳನ್ನು, ಇದರ ಉತ್ತರ ದಿಕ್ಕಿನಲ್ಲಿದ್ದ ಒಂದಂಕಣದ ಸ್ತಂಬಸೌಧವನ್ನು, ವಿಜಯಸೌಧದ ಆವರಣದಲ್ಲಿ ಪ್ಯಾಸ್ ಗುರುತಿಸಿದ್ದ. ಇದರ ಮುಂದೆ ಸೋಪಾನ ಮಾರ್ಗವಿದ್ದರೆ ಅದರ ಸುತ್ತಲೂ ಉಬ್ಬುಶಿಲ್ಪಗಳಿಂದ ಅಲಂಕರಿ ಸಲ್ಪಟ್ಟ ಜಗತಿ ಇತ್ತು. ಕಳಿಂಗಾ ರಾಜ್ಯದ ವಿರುದ್ಧ ಜಯ ಸಾಧಿಸಿದ ನಂತರ ಸೌಧವನ್ನು ಕಟ್ಟಿ ಅದಕ್ಕೆ ‘ವಿಜಯಸೌಧ’ ಎಂಬ ಹೆಸರು ಕೊಡಲಾಯಿತೆಂಬ ಅಭಿಮತವುಂಟು.ಇಲ್ಲಿಯ ಅರಮನೆಗಳ ಹಾಗೂ ವಿಜಯಸೌಧದ ಮಧ್ಯೆ ಒಂದು ದ್ವಾರಮಂಟಪವಿತ್ತು. ಆ ವಿಶಾಲವಾದ ಆವರಣವನ್ನು ಮೂವತ್ನಾಲ್ಕು ಒಳದಾರಿಗಳು ವಿಭಜಿಸಿದ್ದವು. ಇಲ್ಲಿಯ ಕಿರು ಎತ್ತರದ ಮೊಗಸಾಲೆಗಳು (ಬಹುಶಃ ಅಬ್ದುಲ್ ರಜಾಕ್ ಗುರುತಿಸಿದ ತಿರುಗು ಡೇರಾಮಂಟಪ) ಪ್ಯಾಸ್‌ನ ವಿಶೇಷ ಗಮನ ಸೆಳೆದಿದ್ದವು. ಇವು ಅಡಿಯಿಂದ ಮುಡಿಯವರೆಗೂ ಶೃಂಗಾರ ಗೊಂಡಿದ್ದನ್ನೂ ರಕ್ತಗೆಂಪು ಹಾಗೂ ಮರಕತ ಮಕಮಲ್ಲಿನ ಬಟ್ಟೆಗಳಿಂದ ವಿಶೇಷ ಬಗೆಯಲ್ಲಿ ಅಲಂಕೃತಗೊಂಡಿದ್ದನ್ನೂ ಅವನು ಕಂಡಿದ್ದನು.

ಇಂತಹ ಇನ್ನೆರಡು ಕಟ್ಟಡಗಳು ಈ ಅಂಗಳದ ಪೂರ್ವ ಬಾಗಿಲಿನೆದುರು ಇದ್ದುದನ್ನು ಪ್ಯಾಸ್ ನೋಡಿದ್ದನು. ಈ ಸೌಧದ ಸೋಪಾನಮಾರ್ಗ, ಎರಡು ಮಜಲಿನ ಜಗತಿ, ಪ್ರಧಾನ ಸ್ತಂಬಕಟ್ಟಡ, ಭಿತ್ತಿ, ಭುವನೇಶ್ವರಿ ಮೊದಲಾದುವುಗಳನ್ನೆಲ್ಲ ಬೆಲೆ ಬಾಳುವ ಕಸೂತಿ ಬಿಡಿಸಿದ ಬಟ್ಟೆಯಿಂದ ಶೃಂಗರಿಸಲಾಗಿತ್ತಲ್ಲದೆ ಇದರ ಹೊರಭಿತ್ತಿಯನ್ನು ಸುಂದರವಾದ ಉಬ್ಬುಶಿಲ್ಪಗಳಿಂದ ಅಲಂಕರಿಸಲಾಗಿತ್ತು. ಇವುಗಳಲ್ಲಿ ಒಂದನ್ನು ಸಿಂಹಾಸನ ಸೌಧ ಎಂದು ಕರೆಯಲಾಗಿತ್ತು.

ವಿರೂಪಾಕ್ಷ ಸಿಂಹಾಸನವಿಜಯನಗರ ರಾಜಾಸನ

ವಿಜಯಸೌಧವು ಪ್ರಾಂಗಣದ ಹೆಗ್ಗುರುತಾಗಿದ್ದರೆ, ಅದರ ಮೇಲೆ ರಾರಾಜಿಸುತ್ತಿದ್ದ ಒಂದು ಸಿಂಹಾಸನವು ವಿಜಯದಶಮಿ ಉತ್ಸವದ ಹೃದಯವಾಗಿತ್ತು. ನವರಾತ್ರಿ ಹಬ್ಬದಾಚರಣೆಯ ನಿಮಿತ್ತ ವಿಶೇಷವಾಗಿ ಸಜ್ಜುಗೊಳಿಸಲಾಗುತ್ತಿದ್ದ ವಿಜಯಸೌಧದ ವೇದಿಕೆಯ ಮೇಲಿರುತ್ತಿದ್ದ ಐದು ವಿಶೇಷತೆಗಳನ್ನು ಇಲ್ಲಿ ಗಮನಿಸುವುದುದಗತ್ಯ. ಅವು : ೧. ವೇದಿಕೆಯ ಒಂದು ಪಾರ್ಶ್ವದಲ್ಲಿದ್ದ (ಸೋಪಾನದ ಸಮೀಪ) ವಿರೂಪಾಕ್ಷನ ಪಟಗುಡಿ; ೨. ವೇದಿಕೆಯ ನಟ್ಟನಡುವೆ ಇದ್ದ ವಿರೂಪಾಕ್ಷ (ಕರ್ನಾಟಕ ಸಿಂಹಾಸನ); ೩. ಸಿಂಹಾಸನದ ಒಂದು ಬದಿಯಲ್ಲಿ ಮಣೆಯ ಮೇಲಿರಿಸಿದ್ದ ವಿರೂಪಾಕ್ಷ ಮುಕುಟ; ೪. ಮತ್ತೊಂದು ಬದಿಯಲ್ಲಿ ಇನ್ನೊಂದು ಮಣೆಯ ಮೇಲಿರಿಸಿದ್ದ ವಿರೂಪಾಕ್ಷ ಪಾದುಕೆ ಮತ್ತು ೫. ವೇದಿಕೆಯ ಮುಂಭಾಗದಲ್ಲಿ ರಾರಾಜಿಸುತ್ತಿದ್ದ ರಾಜಾಸನ.

ವಿಜಯನಗರ ರಾಜ್ಯದ ನಿಜವಾದ ಸಾಮ್ರಾಟ ವಿರೂಪಾಕ್ಷ. ಮೊದಲ ಮೂರು ವಂಶದ ಅರಸರು ಈ ದೇವತೆಯ ಪರವಾಗಿ, ಅವನ ಸೇವಕರಾಗಿ, ರಾಜ್ಯವನ್ನು ಆಳುತ್ತಿದ್ದರೆಂಬುದನ್ನು ಅವರ ದಾಖಲೆಗಳಂತೆ ಮಹಾನವಮಿ ಉತ್ಸವವೂ ಸಮರ್ಥವಾಗಿ ಸಾಧಿಸಿ ತೋರಿಸುವುದು. ಬಹುಶಃ ಈ ಕಾರಣಕ್ಕಾಗಿ ಪಂಪಾಸ್ಥಾನ ವರ್ಣನಂ ಕವಿಯು ಇದನ್ನು ‘ವಿರೂಪಾಕ್ಷನ ಒಡ್ಡೋಲಗ’ ಎಂದು ಗುರುತಿಸಿದನೆಂದು ಕಾಣುವುದು. ವಿಜಯಸೌಧದ ಮಧ್ಯದಲ್ಲಿ ರಾರಾಜಿ ಸುತ್ತಿದ್ದ ಅನರ್ಘ್ಯವೂ ಅದ್ಭುತವೂ ಆದ ಸುವರ್ಣ ಸಿಂಹಾಸನವು ವಾಸ್ತವವಾಗಿ ವಿರೂಪಾಕ್ಷ ಮೂರ್ತಿಯ ಪೀಠವಾಗಿತ್ತು. ಸುವರ್ಣದಿಂದ ಮಾಡಿದ ನಾಲ್ಕು ಸಿಂಹಗಳು ಹೊತ್ತು ನಿಂತಿದ್ದ ಈ ಮಣಿಮಯ ಸಿಂಹಾಸನದ ಯೋನಿ (ರಂಧ್ರ) ಭಾಗದಲ್ಲಿ ವಿರೂಪಾಕ್ಷನ (ಲಿಂಗ) ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಒಂದು ಮೊಳ ಎತ್ತರದ ಮಣಿಮಯ ಮುಕುಟವನ್ನು ಒಂದು ಮಣೆಯ ಮೇಲೆ ಇರಿಸಿದರೆ, ಅನರ್ಘ್ಯ ರತ್ನಗಳ ಕಾಲ್ತೊಡರಿನಿಂದ ಅಲಂಕೃತ ಗೊಂಡಿದ್ದ, ರಟ್ಟೆಗಾತ್ರದ ಸುವರ್ಣ ಪಾದುಕೆಗಳನ್ನು ಇನ್ನೊಂದು ಮಣೆಯ ಮೇಲೆ ಇರಿಸಲಾಗಿತ್ತು. ಇವೆರಡೂ ವಿರೂಪಾಕ್ಷ ದೈವೀ ಸಂಕೇತಗಳಾಗಿದ್ದವು. ‘ಈ ಸಿಂಹಾಸನ ವನ್ನೇರುವ ಅರ್ಹತೆ ಅತ್ಯಂತ ಸಾತ್ವಿಕನಾದ ದೈವೀಪುರುಷನಿಗೆ ಮಾತ್ರ ಉಂಟೆಂಬ ನಂಬಿಕೆ ಇದ್ದುದರಿಂದ ವಿಜಯನಗರದ ಅರಸರಾರೂ ಇದನ್ನು ಏರುವ ಸಾಹಸ ಮಾಡುವುದಿಲ್ಲ’, ಎಂದು ನೂನಿಜ್, ಪ್ಯಾಸ್, ಮೊದಲಾದವರು ಸಾಕ್ಷಿ ನುಡಿದಿರುವರು. ಈ ಕಾರಣದಿಂದಾಗಿ ಆಳುವ ಅರಸನಿಗೆ ಪ್ರತ್ಯೇಕ ರಾಜಾಸನವನ್ನು ಸಿದ್ಧಗೊಳಿಸಲಾಗುತ್ತಿತ್ತು. ಈ ರಾಜಾಸನವನ್ನು ಮಕಮಲ್ಲಿನ ಮೆತ್ತೆಯಿಂದ ಮಾಡಿ, ಮುತ್ತು-ರತ್ನಗಳಿಂದ ಅಲಂಕರಿಸಲಾಗಿತ್ತು. ಅರಸನ ವಿಶೇಷ ಅನುಗ್ರಹಕ್ಕೆ ಒಳಗಾದ ನೂನಿಜ್ ಇದನ್ನು ಸನಿಹದಿಂದ ನೋಡಿ ನಿಬ್ಬೆರಗಾದಾಗ, ಒಡ್ಡೋಲಗದವನೊಬ್ಬ’ ‘ಈ ಸುಂದರ ಆಸನದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದನಂತೆ! ‘ಇಂತಹುದನ್ನು ನಿಮ್ಮ ದೇಶದವರು ಮಾಡಲು ಸಾಧ್ಯವೇ?’ ಎಂಬ ಈ ಮಾತಿನ ಒಳಾರ್ಥವನ್ನು ಗ್ರಹಿಸಿದ ನೂನಿಜ್ ‘ಈ ಬಗೆಯ ಆಸನವನ್ನು ನಮ್ಮಲ್ಲಿಯೂ ಮಾಡಲು ಸಾಧ್ಯ. ಆದರೆ, ಇದರ ಅವಶ್ಯಕತೆ ನಮಗಿಲ್ಲ’, ಎಂದು ಉತ್ತರಿಸಿದನಂತೆ.

ಸುವರ್ಣದ ಎಳೆಗಳಿಂದ ಗುಲಾಬಿ ಹೂಗಳ ಕಸೂತಿ ಹಾಕಿ ಅಲಂಕರಿಸಿದ, ಪದರು ಪದರಿನ ಶ್ವೇತೋಸ್ತ್ರವನ್ನು ತೊಟ್ಟು, ಬಗೆಬಗೆಯ ಆಭರಣಗಳಿಂದ ಅಲಂಕರಿಸಿಕೊಂಡು, ಈ ರಾಜಾಸನದಲ್ಲಿ ಕಂಗೊಳಿಸುತ್ತಿದ್ದ ವಿಜಯನಗರದ ಅರಸನನ್ನು ಪ್ಯಾಸ್ ಸ್ವತಃ ಕಂಡಿದ್ದ.

ಮಹಾನವಮಿ ಸಮಾರಂಭದ ಆಚರಣೆಗಳು

ಮಹಾನವಮಿಯನ್ನುಒಂಬತ್ತು ದಿನ ಆಚರಿಸುತ್ತಿದ್ದುದರಿಂದ ಅದನ್ನು ನವರಾತ್ರಿಯ ಹಬ್ಬವೆಂದೂ ದುಷ್ಟಶಕ್ತಿಯ ವಿನಾಶವು ಈ ಹಬ್ಬದ ಪೌರಾಣಿಕ ಹೇತುವಾಗಿದ್ದುದರಿಂದ ‘ವಿಜಯದಶಮಿ’ (ಹತ್ತನೆಯ ದಿನ) ಎಂದೂ ಕರೆಯಲಾಗುತ್ತಿತ್ತು. ದಿನವಿಡೀ ಉಪವಾಸ ವಿದ್ದು ಈ ಹಬ್ಬವನ್ನು ವಿಧಿವತ್ತಾಗಿ ವಿಜಯನಗರದ ಅರಸರು ಆಚರಿಸುತ್ತಿದ್ದರು. ವಿಜಯಸಾಧನೆಯ ಸಂಕೇತವಾಗಿದ್ದ ತಮ್ಮ ಶಕ್ತಿ ಸಾಹಸ, ಸಂಪತ್ತನ್ನು ವಿಜೃಂಭಣೆಯಿಂದ ಕೊನೆಯ ದಿನ ಪ್ರದರ್ಶಿಸಿ, ದಶಮಿಯ ದಿನವನ್ನು ಅರ್ಥಪೂರ್ಣಗೊಳಿಸುತ್ತಿದ್ದರು.

ಒಂಬತ್ತು ದಿನಗಳನ್ನು ವಿಜಯದಶಮಿ ಉತ್ಸವಕ್ಕಾಗಿ ಮೀಸಲಿಡುತ್ತಿದ್ದ ಅರಸರು, ಬೆಳಗಿನ ಅರ್ಧ ದಿನವನ್ನು ಪೂಜೆ, ಯಜ್ಞ, ಯಾಗ, ಬಲಿ, ಮುಂತಾದವಕ್ಕೂ ಮಧ್ಯಾಹ್ನದ ಉಳಿದರ್ಧವನ್ನು ವೈಭವ ಪ್ರದರ್ಶನಕ್ಕೂ ವಿನಿಯೋಗಿಸುತ್ತಿದ್ದರು. ಬೆಳಗಿನ ಪೂಜೆಯು ವಿಜಯಸೌಧದ ಮೇಲೆ ಕಟ್ಟಿದ ಪಟಗುಡಿಯಲ್ಲಿ ಆರಂಭಗೊಂಡು, ಗಜರಾಜ-ರಾಜಾಶ್ವಗಳ ಪೂಜೆ, ಕುರಿಕೋಣಗಳ ಬಲಿ, ಯಜ್ಞ-ಯಾಗಾದಿಗಳ ಆಚರಣೆಗಳನ್ನು ಒಳಗೊಂಡಿರುತ್ತಿತ್ತು. ಇವನ್ನು ಆಚರಿಸುವಾಗ ಹಲವಾರು ಪುರೋಹಿತರ ಮಾರ್ಗದರ್ಶನವೂ ಪರಿವಾರದವರ ಸಹಯೋಗವೂ ಅರಸನಿಗಿರುತ್ತಿತ್ತು. ಮಧ್ಯಾಹ್ನ ಅರಸನು ವಿಶ್ರಮಿಸಿದರೂ ಆಹಾರ ಸೇವಿಸು ತ್ತಿರಲ್ಲಿಲ್ಲ; ರಾತ್ರಿಯ ಕಾರ್ಯಕ್ರಮಗಳೆಲ್ಲವೂ ಮುಗಿದ ನಂತರವೇ ಉಪವಾಸ ಮುರಿದು ಅವನು ಉಪಹಾರ ಸೇವಿಸುತ್ತಿದ್ದನು.

ಎರಡನೆಯ ಸುತ್ತಿನ ಕಾರ್ಯಕ್ರಮವು ಮಧ್ಯಾಹ್ನ ಮೂರಕ್ಕೆ ಆರಂಭವಾಗಿ, ಮಧ್ಯರಾತ್ರಿಯವರೆಗೂ ಮುಂದುವರಿಯುತ್ತಿತ್ತು. ರಾಜವೈಭವ, ಸೇನಾಶಕ್ತಿ, ಕಲೆ ಮತ್ತು ಸಾಹಸ ಪ್ರದರ್ಶನಗಳೇ ಪ್ರಧಾನವಾಗಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯಂತ ಪ್ರತಿಷ್ಠಿತ ವರ್ಗದವರು, ನಿಪುಣ ಕಲಾವಿದರು, ಆಪ್ತಪರಿವಾರವು, ಅಧೀನ ಅರಸರು, ದಂಡನಾಯಕರು, ಬ್ರಾಹ್ಮಣರು, ಚತುರ ಕ್ರೀಡಾಪಟುಗಳು, ನಿಷ್ಣಾತ ನಾಟ್ಯ-ಸಂಗೀತ-ವಾದ್ಯವೃಂದಗಳು, ವಿಶೇಷ ಗೌರವಾನ್ವಿತರು, ವಿದೇಶಿಯರು ಪಾಲ್ಗೊಳ್ಳುತ್ತಿದ್ದರು. ಆದರೆ ಅರಸನ ಅಂಗರಕ್ಷಕರನ್ನು ಬಿಟ್ಟು ಬೇರಾವ ಆಯುಧಧಾರಿಯೂ ಈ ಅಂಗಳದೊಳಗೆ ಆಗ ಕಾಲಿಡುವಂತಿರಲಿಲ್ಲ; ಅಲ್ಲದೆ, ಆವರಣದೊಳಗೆ ನಡೆಯುತ್ತಿದ್ದ ಹಬ್ಬದಾಚರಣೆಯ ದೃಶ್ಯಭಾಗ್ಯವು ಜನ ಸಾಮಾನ್ಯನಿಗೆ ಗಗನಕುಸುಮವಾಗಿತ್ತು. ಏಕೆಂದರೆ ಅರಮನೆಯ ಆಹ್ವಾನವಿಲ್ಲದವರಾರಿಗೂ ಈ ಅಂಗಳಕ್ಕೆ ಪ್ರವೇಶವಿರಲಿಲ್ಲ.

ದರಾಬರು

ವಿಜಯಸೌಧದ ವೇದಿಕೆಯ ಮೇಲಿರಿಸಿದ ರಾಜಾಸನದಲ್ಲಿ ಅರಸನು ಕುಳಿತಾಗ, ಅವನಿಗೆ ಅತ್ಯಂತ ಆಪ್ತ ಬಂಧುವರ್ಗದವರಲ್ಲಿ ಮೂರು-ನಾಲ್ಕು ಪ್ರತಿಷ್ಠಿತರು ಮಾತ್ರ ಅವನ ಹಿಂದೆ ಕುಳಿತುಕೊಳ್ಳಲು ಆಸನಗಳ ಏರ್ಪಾಡಿರುತ್ತಿತ್ತು. ಖಡ್ಗದಾರಿ ಅಂಗರಕ್ಷರು, ಹಡಪದವನು, ರಾಜಲಾಂಛನ ಹೊತ್ತವರು, ಚಾಮರಧಾರಿಗಳು, ಅರಸನ ಹಿಂದೆ ನಿಂತಿರುತ್ತಿದ್ದರು. ವಿರೂಪಾಕ್ಷ ಸಿಂಹಾಸನವನ್ನು ಸುತ್ತುವರಿದು ನಿಂತಿರುತ್ತಿದ್ದ ಬ್ರಾಹ್ಮಣರು ಈ ದೇವತೆಯ ಚಾಮರಸೇವೆಯಲ್ಲಿ ನಿರತರಾಗಿರುತ್ತಿದ್ದರು. ಇಷ್ಟು ಜನರನ್ನು ಬಿಟ್ಟರೆ, ಅರಸಿಯರು ಮತ್ತು ಅಮಾತ್ಯರನ್ನೊಳಗೊಂಡು ಉಳಿದವರಾರಿಗೂ ಈ ವೇದಿಕೆಯ ಮೇಲೆ ಸ್ಥಾನವಿರಲಿಲ್ಲ. ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ದಂಡನಾಯಕರಿಗೆ, ಸಾಮಂತರಿಗೆ, ಆವರಣದಲ್ಲಿ ನಿವೇಶನಗಳನ್ನು ಕಾಯ್ದಿರಿಸಲಾಗುತ್ತಿತ್ತು. ಸಾಮಾನ್ಯವಾಗಿ ಡೇರಾಮಂಟಪ ಅಥವಾ ಮೊಗಸಾಲೆಗಳಲ್ಲಿ ಅವರಿಗೆ ಈ ಅನುಕೂಲತೆಯನ್ನು ಮಾಡಿಕೊಡಲಾಗುತ್ತಿತ್ತು. ರಾಜಕುಮಾರರಿಗೆ ವಿಜಯಸೌಧದ ಎದುರಿನಲ್ಲಿದ್ದ ಎರಡು ಅರಮನೆಗಳಲ್ಲಿ (ಸಿಂಹಾಸನ ಸೌಧ?) ಏರ್ಪಾಟು ಮಾಡಲಾಗುತ್ತಿತ್ತು.

ವಿಜಯಸೌಧದ ಪ್ರಾಂಗಣವನ್ನೆಲ್ಲ ವಾದ್ಯಸಂಗೀತಗಾರರು, ನೃತ್ಯಗಾರ್ತಿಯರು, ಜಟ್ಟಿಗಳು, ಕುದುರೆ, ಆನೆ, ಒಂಟೆ, ಕಾಲ್ದಳದ ಭಟಾಗ್ರರು ಹಂಚಿಕೊಂಡು ನಿಲ್ಲುತ್ತಿದ್ದರು. ಹದಿನೈದನೆಯ ಶತಮಾನದಲ್ಲಿ ವಿಜಯಸೌಧವನ್ನು ಒಂಬತ್ತು ಅಂತಸ್ತುಗಳಲ್ಲಿ ಕಟ್ಟಲಾಗಿತ್ತೆಂದೂ ಅತ್ಯಂತ ಮೇಲಿನ ವೇದಿಕೆಯನ್ನು ಅರಸನು ಅಲಂಕರಿಸಿದ್ದರೆ ಏಳನೆಯ ಅಂತಸ್ತಿನಲ್ಲಿ ವಿದೇಶಿಯರಿಗೆ ಸ್ಥಾನಾವಕಾಶ ಮಾಡಿಕೊಡಲಾಗಿತ್ತೆಂದೂ ತಿಳಿದುಬರುವುದು. ೧೬ನೆಯ ಶತಮಾನದಲ್ಲಿ ಇದು ಬದಲಾವಣೆಗೊಂಡು, ವಿದೇಶಿಯರಿಗೆ ರಾಜಪುತ್ರರ ಅರಮನೆಯಲ್ಲಿ ಸ್ಥಳಾವಕಾಶ ಮಾಡಿಕೊಡಲಾಯಿತೆಂದು ತಿಳಿದು ಬರುವುದು. ಅರಸಿಯರಿಗಾಗಿ ಮೀಸಲಾದ ಸ್ಥಳದ ಸುಳಿವು ನಮಗೆ ಸಿಗುತ್ತಿಲ್ಲ. ಬಹುಶಃ ಅರಮನೆಯ ಮಾಡದ ಮೇಲೆ ಅಥವಾ ಅವರಿಗಾಗಿ ಪ್ರತ್ಯೇಕವಾಗಿ ನಿರ್ಮಿಸಿದ ಮಂಟಪಗಳಲ್ಲಿ ಅವರಿಗೆ ಆಸನದ ಏರ್ಪಾಟು ಮಾಡಲಾಗಿರುತ್ತಿತ್ತೆಂದು ತೋರುವುದು.

ಸಾಮಂತರ ಕಾರ್ಯಕ್ರಮ

ಸಾಮಂತರು, ನಾಯಕರು, ದಂಡಾಧಿಪರು, ಈ ಮುಂತಾದ ರಾಜ್ಯದ ಹಿರಿಯ ಅಧಿಕಾರಿಗಳು ಕಪ್ಪಕಾಣಿಕೆಗಳನ್ನು ಒಪ್ಪಿಸಿ, ತಮ್ಮ ನಿಷ್ಠೆಯನ್ನು ವಿರೂಪಾಕ್ಷನ ಸಮ್ಮುಖದಲ್ಲಿ ಪ್ರದರ್ಶಿಸಿ, ಅರಸನ ಅನುಗ್ರಹ ಸಂಪಾದಿಸಿಕೊಳ್ಳುವುದು ಸಂಜೆ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿತ್ತು. ಆಗ ಅವರು ಆಯುಧಗಳನ್ನಾಗಲೀ ಪಾದರಕ್ಷೆಗಳನ್ನಾಗಲೀ ತೊಟ್ಟು ವೇದಿಕೆಯನ್ನು ಏರುವಂತಿರಲಿಲ್ಲ. ವೇದಿಕೆಯ ಪಕ್ಕದಲ್ಲಿ ಸಾಲುಗೊಂಡು ನಿಲ್ಲುತ್ತಿದ್ದ ಇವರನ್ನು, ವೇದಿಕೆಯನ್ನೇರಲು ಅವರವರ ಅಂತಸ್ತಿಗನುಗುಣವಾಗಿ ಒಬ್ಬರನಂತರ ಒಬ್ಬರನ್ನು ಬಿಡಲಾಗುತ್ತಿತ್ತು. ವೇದಿಕೆಯನ್ನು ಹತ್ತಿ, ಅರಸನಿಗೆ ಅವರು ಗೌರವವನ್ನೂ ಕಪ್ಪವನ್ನೂ ಸಲ್ಲಿಸುತ್ತಿದ್ದರು. ವಿದೇಶಿ ಯಾತ್ರಿಕರು ಹೇಳಿರುವಂತೆ, ಅವರೆಲ್ಲರೂ ಕೈಕಟ್ಟಿ, ತಲೆಬಾಗಿ, ನೆಲ ನೋಡುತ್ತಾ ಅರಸನೆದುರು ನಿಲ್ಲುತ್ತಿದ್ದರು; ಗೌರವ ಪ್ರದರ್ಶಿಸಲು ಮಾತ್ರ ಅವರು ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ದೀರ್ಘನಮಸ್ಕಾರ ಮಾಡುತ್ತಿದ್ದರು. ಅರಸನೊಡನೆ ಸಂಭಾಷಣೆಗಿಳಿಯುವ ಧೈರ್ಯವಾಗಲೀ ಅವನನ್ನು ನೇರವಾಗಿ ನೋಡುವ ದಾರ್ಷ್ಟ್ಯವಾಗಲೀ ಇವರಾರಿಗೂ ಇರುತ್ತಿರಲಿಲ್ಲವಂತೆ!

ಎರಡು ನೂರಕ್ಕೂ ಹೆಚ್ಚು ಸಾಮಂತರು ತಮ್ಮ ಸೈನ್ಯದೊಡನೆ ಮಹಾರಾಜಧಾನಿ ಪಟ್ಟಣದಲ್ಲಿ ಈ ಸಂದರ್ಭದಲ್ಲಿ ನೆರೆಯುತ್ತಿದ್ದ ಬಗ್ಗೆ ದಾಖಲೆಗಳು ದೊರೆಯುವುವು. ಇವರಲ್ಲಿ ಕೆಲವರು ದೂರದ ಗಡಿಪ್ರದೇಶದಿಂದ ಮೂರುನಾಲ್ಕು ತಿಂಗಳ ಹಾದಿ ತುಳಿದು ರಾಜಧಾನಿಯನ್ನು ನವರಾತ್ರಿಯ ಮುನ್ನಾ ದಿನಗಳಲ್ಲಿ ಮುಟ್ಟುತ್ತಿದ್ದರು. ಆಯ್ದು ಅಲಂಕರಿಸಿದ ಹಲವೇ ಹಲವು ಯುದ್ಧ ಪಶು-ಪಟುಗಳನ್ನು ಅವರೊಡನೆ ಆವರಣದೊಳಗೆ ಬಿಡಲಾಗುತ್ತಿತ್ತು; ಅರಸನಿಗೆ ಅವರು ಕಪ್ಪ ಒಪ್ಪಿಸುವಾಗ, ಅವರ ಸಂಜೋಗ ಸೇನಾಪಡೆಯ ಒಂದು ತುಕುಡಿಯು ಮುನ್ನಂಗಳದಲ್ಲಿ ಸಾಲುಗೊಂಡು ನಿಂತು ಶಿಸ್ತಿನ ಕವಾಯತನ್ನು ಪ್ರದರ್ಶಿಸುತ್ತಿತ್ತು. ಆ ನಾಯಕನ ಉಳಿದ ಸೇನೆಯು ರಾಜಧಾನಿಗೆ ಬಂದಿದ್ದರೂ ಅರಸನ ದರ್ಶನ ಪಡೆಯಲು ಹಬ್ಬದ ಹತ್ತನೆಯ ದಿನದವರೆಗೂ ಅದು ಕಾಯಬೇಕಾಗಿರುತ್ತಿತ್ತು.

ಕಪ್ಪ ಒಪ್ಪಿಸುವ ಒಂದು ಸಮಾರಂಭದಲ್ಲಿ ಸ್ವತಃ ಪಾಲ್ಗೊಂಡಿದ್ದ ನೂನಿಜ್, ಅರಸನು ಈ ಸಂದರ್ಭದಲ್ಲಿ ಪಡೆಯುತ್ತಿದ್ದ ಸಂಪತ್ತಿನ ಬಗ್ಗೆ ವಿವರ ಕೊಟ್ಟಿರುವನು. ಈ ಎಲ್ಲ ನಾಯಂಕಾರರು ರಾಜ್ಯದ ಬೇರೆ ಬೇರೆ ಭಾಗಗಳ ಮೇಲಿನ ಅಧಿಕಾರ-ಆದಾಯ ಹೊಂದಿದ್ದರು. ಅವರಲ್ಲಿ ತಮಿಳು ಪ್ರದೇಶದ (ಶ್ರೀರಂಗಪಟ್ಟಣದಿಂದ ಶ್ರೀಲಂಕೆಯವರೆಗಿನ) ಸಾಮಂತನಾದ ಸಾಳ್ವನಾಯಕನೇ ಅಗ್ರಗಣ್ಯನಾಗಿದ್ದನು. ಅವನಿಗೆ ಬರುತ್ತಿದ್ದ ೧೧,೦೦,೦೦೦ ಬಂಗಾರದ ನಾಣ್ಯಗಳ (ಪಾರ್ದೋ) ಆದಾಯದಲ್ಲಿ೧/೩ ಭಾಗ (ಸು. ೩,೬೬,೬೬೬)ವನ್ನು ಪ್ರತಿ ವರ್ಷ ಅರಸನಿಗೆ ಕಪ್ಪರೂಪದಲ್ಲಿ ಅವನು ಒಪ್ಪಿಸುತ್ತಿದ್ದನು. ಉಳಿದವರ ವಾರ್ಷಿಕ ಸಂದಾಯ ಹೀಗಿತ್ತು:

೧. ಒರಿಸ್ಸಾ ಗಡಿ ಭಾಗದ ನಾಯಕನಾದ ‘ಅಜಪರ್ಚತಿಮಪ’ (ಅಜ್ಜಪ್ಪ-ತಿಮ್ಮಪ್ಪ)ನು ತನ್ನ ೮,೦೦,೦೦೦ ವಾರ್ಷಿಕ ವರಮಾನದಲ್ಲಿ ೩,೦೦,೦೦೦ ಪರ್ದೋಸ್‌ಗಳನ್ನು ಅರಸನಿಗೆ ಒಪ್ಪಿಸುತ್ತಿದ್ದ.

೨. ಕೊಂಕಣನಾಡಿನ ‘ಗಪನಾಯ್ಕೆ’ (ಗೋಪನಾಯಕ) ೬,೦೦,೦೦೦ ವರಮಾನದಲ್ಲಿ ೧,೫೦,೦೦೦ನ್ನು ಸಲ್ಲಿಸುತ್ತಿದ್ದ.

೩. ಮಹಾರಾಜಧಾನಿ ಪಟ್ಟಣದ ಹೊರ ಪ್ರದೇಶದ ‘ನರ್ವರಿ’ (ನರಹರಿ) ತನ್ನ ೪,೦೦,೦೦೦ ವರಮಾನದಿಂದ ೨,೦೦,೦೦೦, ‘ಮುಂಡೊಒಗೊಲ್’ (ಮುದ್ಗಲ್) ‘ಬಿಜಪನಾಯ್ಕೆ’ (ವೈಜಪನಾಯಕ) ೪,೦೦,೦೦೦ ವರಮಾನದಿಂದ ೧,೫೦,೦೦೦ ಸಂದಾಯ ಮಾಡುತ್ತಿದ್ದರು.

೪. ೩,೦೦,೦೦೦ ವರಮಾನ ಗಳಿಸಿಕೊಳ್ಳುತ್ತಿದ್ದ ‘ಕಲಲಿ’(ಕಳಲಿ)ಯ ‘ಚಿನಪನೈಕ’ (ಚಿನ್ನಪ್ಪ ನಾಯಕ), ‘ಬೊದಿಅಲ್-ಗುಯನ’ (ಬಂಟ್ವಾಳ-ಗೋವೆ)ಯ ‘ಬಿಜಪನೈಕೆ’ (ಬಸಪ್ಪ ನಾಯಕ), ‘ಗತೆ’ (ಗುತ್ತಿ)ಯ ‘ಅದಪನೈಕೆ’ (ಆದಪ್ಪ ನಾಯಕ) ಸಕ್ರಮವಾಗಿ, ೧,೦೦,೦೦೦, ೧೦,೦೦೦ ಮತ್ತು ೧,೦೦,೦೦೦ ವಾರ್ಷಿಕ ಕಪ್ಪವನ್ನು ಕೊಡುತ್ತಿದ್ದರು. ಅಲ್ಲದೆ ವಜ್ರ ಗಣಿಪ್ರದೇಶದ ಒಡೆಯನಾದ ಗುತ್ತಿಯ ನಾಯಕನು ತನ್ನ ಉತ್ಪಾದನೆಯಿಂದ ೪೦,೦೦೦ಕ್ಕೂ ಹೆಚ್ಚಿನ ಹಣವನ್ನು ಅರಸನಿಗೆ ಸಂದಾಯ ಮಾಡುತ್ತಿದ್ದನು.

೫. ಅತ್ಯಂತ ಅಲ್ಪ ವರಮಾನದ ‘ಅವ್ರೋ’ (ಹೊಯ್ಸಳ) ನಾಡಿನ ‘ಕ್ರಿಪ್ನಪನಾಇಕೆ’ (ಕೃಷ್ಣಪ್ಪನಾಯಕ) ಮತ್ತು ‘ಅವಲಿಯ’ (ಆವಣಿ)ಯ ‘ಮಲ್ಲಪನಾಯಕ’ರು ತಮ್ಮ ವಾರ್ಷಿಕ ವರಮಾನವಾದ ೨೦,೦೦೦ ಮತ್ತು ೧೫,೦೦೦ದಲ್ಲಿ ಸಕ್ರಮವಾಗಿ ೭,೦೦೦ ಮತ್ತು ೫,೦೦೦ ಸಲ್ಲಿಸುತ್ತಿದ್ದರು.

ಅರಸನಿಗೆ ಸಂದಾಯವಾಗುತ್ತಿದ್ದ ವಾರ್ಷಿಕ ಕಪ್ಪದ ಮೊತ್ತವು ಸಾಮಂತರ ಆದಾಯವನ್ನು ಅವಲಂಬಿಸಿದಷ್ಟೇ ಅವರ ಖರ್ಚು-ವೆಚ್ಚ ಮತ್ತು ಸಾಮ್ರಾಜ್ಯದೊಡನೆ ಅವರಿಗಿದ್ದ ರಾಜಕೀಯ-ಸೈನಿಕ ಸಂಬಂಧವನ್ನು ಅವಲಂಬಿಸಿತ್ತೆಂಬುದರಲ್ಲಿ ಸಂಶಯವಿಲ್ಲ. ಸ್ಥೂಲವಾಗಿ ಹೇಳು ವುದಾದರೆ, ನಾಯಕರು ತಮ್ಮ ವಾರ್ಷಿಕ ವರಮಾನದ ೧/೩ ಭಾಗವನ್ನು ಅರಸನಿಗೆ ಕಪ್ಪದ ರೂಪದಲ್ಲಿ ಕೊಡುತ್ತಿದ್ದರೆನ್ನಬಹುದು. ಇದು ಏನೇ ಇರಲಿ, ವಾರ್ಷಿಕ ಸಂದಾಯವು ಅರಸನ ಅಭೀಷ್ಠೆಯ ಮೇರೆಗೆ ತೀರ್ಮಾನವಾಗುತ್ತಿತ್ತು. ಆದರೆ ನಾಯಂಕಾರರು ಕಟ್ಟಲೇಬೇಕಾದ ಸೈನ್ಯಬಲದಲ್ಲಿ ಯಾವ ಬಗೆಯ ರಿಯಾಯಿತಿಯನ್ನೂ ಅವರಿಗೆ ತೋರಿಸಲಾಗುತ್ತಿರಲಿಲ್ಲ. ಇದನ್ನು ದೃಢಪಡಿಸಿಕೊಳ್ಳಲೆಂದೇ ನವರಾತ್ರಿಯ ಮರುದಿನವಾದ ದಶಮಿಯನ್ನು ಮೀಸಲಾಗಿಡಲಾಗಿತ್ತು. ಅಂದು ಎಲ್ಲ ಸಾಮಂತರ ಸೈನ್ಯವನ್ನು ಮಹಾರಾಜಧಾನಿ ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿ ನಿಲ್ಲಿಸಿದಾಗ, ಈ ಶಿಸ್ತುಪ್ರದರ್ಶನದ ಪರಿವೀಕ್ಷಣೆಯನ್ನು ಸ್ವತಃ ಅರಸನೇ ಮಾಡುತ್ತಿದ್ದನು. ಅಂದರೆ ನವರಾತ್ರಿಯ ಸಮಾರಂಭವು ಒಂಬತ್ತನೆಯ ದಿನ ಮುಕ್ತಾಯಗೊಳ್ಳದೆ ದಶಮಿಯ ದಿನದ ಸೈನ್ಯ ಕವಾಯತಿನ ಕಾರ್ಯಕ್ರಮದೊಂದಿಗೆ ಕೊನೆಗೊಳ್ಳುತ್ತಿತ್ತೆಂದು ಅರ್ಥ.

ಮನರಂಜನಾ ಕಾರ್ಯಕ್ರಮ

ಕಪ್ಪ ಒಪ್ಪಿಸುವುದು ಮುಗಿದೊಡನೆ ಮನರಂಜನಾ ಕಾರ್ಯಕ್ರಮ ಆರಂಭಗೊಳ್ಳುತ್ತಿತ್ತು. ಆಗ ವಾರಾಂಗನೆಯರ ನೃತ್ಯ, ಪೈಲ್ವಾನರ ಪಟ್ಟಿನ ಪ್ರದರ್ಶನ, ವಾದ್ಯ-ಸಂಗೀತಗಾರರ ಸೊಂಪು, ಗಾರುಡಿಗರ ಗತ್ತು, ಪಂಜಿನಾಳುಗಳ ಕೈಚಳಕ, ಪಶುಗಳ ಸಾಹಸದಾಟ, ವಿವಿಧ ವೇಷಧಾರಿಗಳ ಬೆಡಗಿನಾಟ, ವಿದೂಷಕರ ನಗೆನಾಟಕ, ಮೊದಲಾದವು ಆವರಣದಲ್ಲೆಲ್ಲ ಅನಾವರಣಗೊಳ್ಳುತ್ತಿದ್ದವು. ಈ ಸಾಂಸ್ಕೃತಿಕ ಕಾರ್ಯಕ್ರಮದ ವೈವಿಧ್ಯತೆ ವರ್ಷದಿಂದ ವರ್ಷಕ್ಕೆ ಅಲ್ಪ ಸ್ವಲ್ಪ ಬದಲಾಗುತ್ತಿದುದು ಸಹಜ, ಏಕೆಂದರೆ ಇದರಲ್ಲಿ ಪಾತ್ರ ವಹಿಸುವವರು ಬೇರೆ ಬೇರೆ ರಾಜ್ಯದವರಾಗಿರುತ್ತಿದ್ದು ಅವರವರ ಪ್ರದೇಶಗಳ ವಿಶೇಷ ಕಲೆಗಳನ್ನಿಲ್ಲಿ ಪ್ರದರ್ಶಿಸಲೆಂದೇ ಆಯ್ಕೆಗೊಂಡವರಾಗಿರುತ್ತಿದ್ದರು. ಒಂದಾದ ಮೇಲೆ ಮತ್ತೊಂದು, ಒಂದರ ಪಕ್ಕದಲ್ಲಿ ಇನ್ನೊಂದು, ಆಟಗಳು ಪ್ರದರ್ಶನಗೊಳ್ಳುತ್ತಿದ್ದಾಗ ತಾಳ, ಹಲಗೆ, ಮದ್ದಳೆ, ಕಹಳೆಗಳನ್ನು ದಣಿವರಿಯದಂತೆ ವಾದ್ಯಗಾರರು ಮೊಳಗಿಸುತ್ತಿದ್ದರು. ಸೂರ್ಯ ಮುಳುಗಿದೊಡನೆ ಸಾವಿರಾರು ಪಂಜುಗಳನ್ನು ಬೆಳಗಿಸಿ, ಅಂಗಳ, ಆಕಾಶ, ಕೋಟೆ, ಕೊತ್ತಳ, ಮಂದಿರ, ಮಂಟಪಗಳನ್ನೆಲ್ಲಾ ಪ್ರಜ್ವಲಿಸಿ, ಹಗಲು-ರಾತ್ರಿಯ ಅಂತರವನ್ನು ಅಳಿಸಿ ಹಾಕಲಾಗುತ್ತಿತ್ತು. ಆಗ ಬಿರುಸುಬಾಣ ಸಿಡಿಸಿ, ಮದ್ದು ಹೊತ್ತಿಸಿ, ಪಟಾಕಿಗಳನ್ನು ಪುಟಿಸಿ, ಅಗ್ನಿಪುಷ್ಪಗಳನ್ನು ಚಿಮ್ಮಿಸಿ, ಕೃತಕಮಿಂಚಿನ ಅಲೆಗಳಿಂದ ಭೂಮ್ಯಾಕಾಶವನ್ನೆಲ್ಲಾ ಭರಿಸ ಲಾಗುತ್ತಿತ್ತು.

ಈ ಮನರಂಜನಾ ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಸಾರೋಟ ಸಾಮಂತರು ಸಾಲುಗೊಂಡು ಬಂದು ವಿಜಯಸೌಧದ ಮುಂದೆ ನಿಲ್ಲುತ್ತಿದ್ದರು. ಇಂತಹ ಒಂದು ಸಂದರ್ಭ ದಲ್ಲಿ ಸಾಳುವ ನಾಯಕನ ರಥವು ಮುಂಚೂಣಿಯಲ್ಲಿ ಇದ್ದುದನ್ನೂ ರಾಜ್ಯದ ಉಳಿದ ಪ್ರತಿಷ್ಠಿತರ ರಥಗಳು ಅದನ್ನು ಹಿಂಬಾಲಿಸಿ ಬಂದು ಈ ಅಂಗಳವನ್ನು ಹಂಚಿಕೊಂಡು ನಿಂತು ಅರಸನಿಗೆ ಗೌರವ ಸಲ್ಲಿಸಿದುದನ್ನೂ ಪ್ರವಾಸಿಗನೊಬ್ಬ ಕಂಡಿದ್ದನು.

ಕ್ರೀಡೆಗಳು

ಕುಸ್ತಿಪಟುಗಳ ವರಸೆ ನವರಾತ್ರಿ ಹಬ್ಬದ ಪ್ರಧಾನ ಮನರಂಜನಾ ಕಾರ್ಯಕ್ರಮವಾಗಿತ್ತು. ನಾಡಿನ ಚತುರ ಜಗಜಟ್ಟಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ಸುಕರಾಗಿ ಇಲ್ಲಿ ನೆರೆಯುತ್ತಿದ್ದರು. ವಿಜಯನಗರದ ಅರಸರು ಸ್ವತಃ ಕುಸ್ತಿ ಪಟುಗಳಾಗಿದ್ದರಲ್ಲದೆ ಒಂದು ಸಾವಿರ ಪೈಲ್ವಾನರನ್ನು ಅವರು ಪೋಷಿಸಿದ್ದರೆಂಬ ವರದಿ ಇದೆ. ಮಹಾಸಾಮಂತರಾರಿಗೂ ದೊರಕದ ಸೌಲತ್ತು-ಸಲುಗೆಯನ್ನು ಇವರಿಗೆ ಕೊಡಲಾಗಿತ್ತೆಂದೂ ಹೇಳಲಾಗುತ್ತದೆ. ಅರಸನ ಮುಂದೆ ಕುಳಿತುಕೊಳ್ಳುವ ಮತ್ತು ಅವನ ಸಮ್ಮುಖದಲ್ಲಿ ತಾಂಬೂಲ ಜಗಿಯುವ ಸ್ವಾತಂತ್ರ್ಯ ಇವರನ್ನು (ಹಾಗೂ ವಾರಾಂಗನೆಯರನ್ನು) ಹೊರತುಪಡಿಸಿ ಮತ್ತಾರಿಗೂ ಈ ರಾಜ್ಯದಲ್ಲಿ ಇರಲಿಲ್ಲವೆಂಬುದನ್ನು ವಿದೇಶೀ ಪ್ರವಾಸಿಗರು ಗುರುತಿಸಿದ್ದರು. ವರ್ಷವಿಡೀ ಕಸರತ್ತು ಮಾಡುವುದೇ ಜಟ್ಟಿಗಳ ಉದ್ಯೋಗವಾಗಿತ್ತು. ಕಾರಣ ಮತ್ತಾವ ಕೆಲಸ ಮಾಡಲು ಇವರನ್ನು ಬಲವಂತಪಡಿಸಲಾಗುತ್ತಿರಲಿಲ್ಲವಂತೆ. ಇವರಿಗೆ ತರಬೇತಿ ಕೊಟ್ಟು ದಕ್ಷ ಜಟ್ಟಿಗಳನ್ನಾಗಿ ಮಾಡಲು ಅವರ ಮೇಲೆ ಒಬ್ಬ ಉಸ್ತಾದನಿರುತ್ತಿದ್ದ. ಇವರೆಲ್ಲರಿಗೂ ನೇರ ಹಾಗೂ ಧಾರಾಳ ರಾಜಪೋಷಣೆ ದೊರೆಯುತ್ತಿತ್ತು.

ಈ ಜಟ್ಟಿಗಳ ಸೆಣೆಸಾಟವನ್ನು ನ್ಯೂನಿಜ್ ಸ್ವತಃ ನೋಡಿದ್ದ. ಇವರು ಮೈ ವರಸೆಯನ್ನು ಮಾತ್ರ ಪ್ರದರ್ಶಿಸದೆ ಎದುರಾಳಿಗಳ ಮುಖವನ್ನು ಒಡೆದು ತಮ್ಮ ಹಿರಿಮೆಯನ್ನು ಪ್ರದರ್ಶಿಸುತ್ತಿದ್ದರೆಂದು ಅವನು ಹೇಳಿರುವನು.

ಕರಿಗಳ ಕೌಶಲ್ಯ

ಈ ವಾರ್ಷಿಕ ಕಾರ್ಯಕ್ರಮದಲ್ಲಿ ಪಶುಗಳ ಆಟಗಳು ವಿಶಿಷ್ಟವೆನಿಸಿದ್ದವು. ಇದರಲ್ಲಿ ಆನೆಗಳ ಎರಡು ಅಸದೃಶ ಸಾಹಸದಾಟಗಳು ಅಬ್ದುಲ್ ರಜಾಕ್‌ನ ವಿಶೇಷ ಗಮನವನ್ನು ಸೆಳೆದಿದ್ದವು. ಅಟ್ಟದ ಮೇಲಿನ ಇಕ್ಕಟ್ಟಿನ ಸ್ಥಳದಲ್ಲಿ ನಿಂತು, ತಮ್ಮ ಜಾಣ್ಮೆಯನ್ನೂ ಸಾಹಸವನ್ನೂ ಪ್ರದರ್ಶಿಸುತ್ತಿದ್ದ ಆನೆಗಳನ್ನು ಕಂಡು ಅವನು ಬೆರಗಾಗಿದ್ದನು. ಒಂದು ಆನೆ ಅಟ್ಟದ ಮೂರು ಮಜಲನ್ನು ಏರಿದಂತೆಲ್ಲ ಅಟ್ಟಕ್ಕೆ ಆಧಾರವಾಗಿಟ್ಟಿದ್ದ ಚಟ್ಟನ್ನು ಪ್ರದರ್ಶಕರು ಹಿಂತೆಗೆದುಕೊಂಡು ಅದು ಹಿಂದಕ್ಕೆ ಬಾರದಂತೆ ಮಾಡಿದಾಗ, ಪಾದಗಳನ್ನು ಊರಲು ಮಾತ್ರ ಇದ್ದ ಫಲಕದ ಮೇಲೆ ನಿಂತು ಕೆಳಗೆ ನುಡಿಸುತ್ತಿದ್ದ ವಾದ್ಯಗಳ ಲಯಕ್ಕೆ ತಕ್ಕಂತೆ ತಾಳಹಾಕುತ್ತಾ ಈ ಆನೆಯು ಸೊಂಡಿಲನ್ನು ಗಾಳಿಯಲ್ಲಿ ತೂರಾಡುತ್ತಿದ್ದುದನ್ನು ಈ ಯಾತ್ರಿಕ ನೋಡಿ ವಿಸ್ಮಯಪಟ್ಟಿದ್ದ. ಮತ್ತೊಂದು ಆಟದಲ್ಲಿ ಹತ್ತು ಮೊಳ ಎತ್ತರದ ಸ್ತಂಭದ ಮೇಲಿರಿಸಿದ ಅಡ್ಡತೊಲೆಯ ಒಂದು ಭಾಗಕ್ಕೆ ಆನೆಯನ್ನು ಏರಿಸಿ, ಅದೇ ತೊಲೆಯ ಇನ್ನೊಂದು ಭಾಗದಲ್ಲಿ ಅದರ ತೂಕದ ಬಂಡೆಗಲ್ಲನ್ನು ಪೇರಿಸಿ, ಆನೆಯ ದಂಡಿನುಯ್ಯಲೆ ಯನ್ನು ಮಾಡಿಸಿದ್ದನ್ನೂ ಅವನು ಕಂಡಿದ್ದ. ವಾದ್ಯಗಳ ಲಯಕ್ಕೆ ತಕ್ಕಂತೆ ಸೊಂಡಿಲ್ಲನ್ನು ತೇಲಾಡಿಸಿ ಈ ಆನೆಯು ತನ್ನ ಸಂಗೀತ ಪ್ರಜ್ಞೆಯನ್ನು ಪ್ರದರ್ಶಿಸುತ್ತಿತ್ತಂತೆ! ಅಂತರದಲ್ಲಿ ನಿಂತು ತನ್ನ ಅಪಾರ ಭಾರವನ್ನು ನಿಗ್ರಹಿಸಿದ್ದಲ್ಲದೆ ಈ ಪಶುಗಳು ಸಂಗೀತ ಪ್ರಜ್ಞೆಯನ್ನೂ ಮೆರೆದ ಕಾರಣ ಇದೊಂದು ಅತ್ಯಂತ ಮೋಜಿನ ಆಟವೆನಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲ.

ವಾರಾಂಗನೆಯರ ಪಾತ್ರ

ಪಂಜುಪಡೆಯ ಕೈಚಳಕ, ಜಟ್ಟಿಗರ ವರಸೆ, ಕಟ್ಟಾಳುಗಳ ಖಡ್ಗ ಕೌಶಲ್ಯ, ಯುದ್ಧಪಶುಗಳ ಶಿಸ್ತುಪ್ರದರ್ಶನ, ಜಾಲಗಾರರ ಜೂಲಾಟ, ಡೊಂಬರ ಚಮತ್ಕಾರ, ಕಹಳೆ-ಡೊಳ್ಳು-ತಮ್ಮಟೆಯವರ ವರಸೆ, ವಾದ್ಯಗಾರರ ವೈಖರಿ, ಕೀರ್ತನಕಾರರ ಗೋಷ್ಠಿ ಮುಂತಾದವುಗಳನ್ನೆಲ್ಲ ಮೀರಿ ಗಮನ ಸೆಳೆಯುತ್ತಿದ್ದುದು ವಾರಾಂಗನೆಯರ ನೃತ್ಯ. ಧಾರ್ಮಿಕ ಹಾಗೂ ಮನರಂಜನಾ ಕಲಾಪಗಳೆರಡರಲ್ಲೂ ಇವರಿಗೆ ಪ್ರಮುಖ ಪಾತ್ರವಿತ್ತು. ಪ್ರಾತಃಕಾಲದಿಂದ ಆರಂಭಗೊಂಡು ಮಧ್ಯರಾತ್ರಿಯವರೆಗೂ ದೇವಾಲಯ, ಮಂಟಪ, ದ್ವಾರ, ಅರಮನೆ, ರಸ್ತೆಯ ಚೌಕು, ವಿಜಯಸೌಧದ ಪ್ರಾಂಗಣ, ಈ ಮೊದಲಾದ ಕೇಂದ್ರಗಳಲ್ಲಿ ಗುಂಪುಗಟ್ಟಿಗೊಂಡು ಕುಣಿ ಯುತ್ತಿದ್ದ ಈ ನಿತ್ಯಸುಮಂಗಲೆಯರು ಮನಸೂರೆಗೊಳ್ಳದ ವ್ಯಕ್ತಿಯೇ ಇರಲಿಲ್ಲ. ತಮ್ಮ ಪ್ರದೇಶದ ಅತ್ಯಂತ ಸುಂದರಾಂಗಿಯರನ್ನು ಕರೆತಂದು, ಅವರ ಬೆಡಗುಬಿನ್ನಾಣಗಳನ್ನು ಉತ್ಸವ ಕಣದಲ್ಲಿ ಪ್ರದರ್ಶಿಸಲು ನಾಯಂಕಾರರು ಪೈಪೋಟಿ ನಡೆಸುತ್ತಿದ್ದರೆಂದು ತಿಳಿದು ಬರುವುದು.

ವಿಜಯನಗರದ ಅರಸರು ಈ ವರನಾರಿಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದರು. ಅರಮನೆಗಳ ಆವರಣದಲ್ಲಿಯೇ ಅವರಿಗೆ ವರ್ಣಮಯ ಮನೆಗಳ ಬಡಾವಣೆಗಳನ್ನು ನಿರ್ಮಿಸ ಲಾಗಿತ್ತು. ಅರಸನ ಸಮ್ಮುಖದಲ್ಲಿ ಕುಳಿತು ವೀಳ್ಯೆ ಜಗಿಯುವ ದಾರ್ಷ್ಟ್ಯ ಯಾವ ಸಾಮಂತನಿಗಿರದಿದ್ದರೂ ಇವರಿಗಿತ್ತು ಎಂದು ಪ್ಯಾಸ್ ತಿಳಿಸಿರುವನು. ಅಲ್ಲದೆ, ಈ ವಾರಾಂಗನೆಯರ ಅಪಾರ ದ್ರವ್ಯಸಂಪತ್ತನ್ನು ವರ್ಣಿಸಲು ತನ್ನ ಶಬ್ದ ಭಂಡಾರದ ಬಡತನದ ಬಗ್ಗೆ ಅವನು ದೂರಿಕೊಂಡಿದ್ದನು. ಬಾರ್ಬೋಸ ಕೂಡಾ ಇವರಲ್ಲಿದ್ದ ಅಪಾರ ಸಂಪತ್ತನ್ನು ಕಂಡು ಬೆರಗಾಗಿದ್ದನು. ಸಂತಾನವಿಲ್ಲದ ಒಬ್ಬ ವಾರಾಂಗನೆಯು ಮರಣ ಸನ್ನಿಹಿತವಾದಾಗ ಅವಳು ತನ್ನ ಸಖಿಗೆ ಹನ್ನೆರಡು ಸಾವಿರ ಮತ್ತು ಅರಸನಿಗೆ ಎಪ್ಪತ್ತು ಸಾವಿರ ಪಾರ್ದೋಗಳನ್ನು ಬಿಟ್ಟುಕೊಟ್ಟುದ್ದನ್ನು ಅವನೇ ಸ್ವತಃ ಕಂಡಿದ್ದನು. ರಾಜಧಾನಿಯ ವಾರಾಂಗನೆಯೊಬ್ಬಳ ಬಳಿ ಒಂದು ಲಕ್ಷ ಪಾರ್ದೋಗಳಿವೆ ಎಂಬುದನ್ನು ಕೇಳಿದ್ದ ಪ್ಯಾಸ್ ‘ಇವರನ್ನು ಸಾಕಷ್ಟು ಬಲ್ಲ ನನಗೆ ಈ ಮಾತಿನಲ್ಲಿ ನಂಬಿಕೆ ಇದೆ’ ಎಂದು ಸಾಕ್ಷಿ ನುಡಿದಿರುವನು.

ಬೆಳಗಿನ ಕಾರ್ಯಕ್ರಮದಲ್ಲಿ ಪಶುಪೂಜೆಯನ್ನು ಪುರೋಹಿತರು ಮುಗಿಸಿದೊಡನೆ ‘ಒಂದು ಸಹಸ್ರ ಅಂಗನೆಯರು ಅರಸನ ಮುಂದೆ ನಿಂತು ನೃತ್ಯ ಮಾಡುತ್ತಿದ್ದುದನ್ನು ಸಂಜೆಯ ಕಪ್ಪಕಾಣಿಕೆಯ ಕಾರ್ಯಕ್ರಮ ಮುಗಿದೊಡನೆ ವಿಜಯಸೌಧದ ಮುಂದೆ ಗುಂಪುಗುಂಪಾಗಿ ನೆರೆದು ಅವರು ಸಾಮೂಹಿಕವಾಗಿ ನರ್ತಿಸುತ್ತಿದ್ದುದನ್ನು ನೂನಿಜ್ ಪ್ರತ್ಯಕ್ಷ ಕಂಡಿದ್ದ. ನಿಕೋಲ್-ದ-ಕೊಂತಿಯಾದರೋ ಈ ಹದಿಹರೆಯದ ವಾರಾಂಗನೆಯರ ಬೆಡಗಿಗೆ ಬೆವೆತು, ಬಾಯಾರಿ, ಅವರ ಸೌಂದರ್ಯವನ್ನು ಆತುರದಲ್ಲಿ ಆಸ್ವಾದಿಸಲು ಪ್ರಯತ್ನಿಸಿದಂತೆ ಕಾಣುವುದು. ‘ಚಂದ್ರನಂತಹ ಕಪೋಲ ಮತ್ತು ವಸಂತದ ಅಲರನ್ನು ಉಪೇಕ್ಷಿಸುವಂತಹ ಮುಖದ ಈ ಸಿಂಗಾರಿಗಳ ಮೈಮಾಟವು ಶುಭ್ರೋಜ್ವಲ ಗುಲಾಬಿಪುಷ್ಪದಂತೆ ಸಮ್ಮೋಹಿತ ವಾಗಿತ್ತು’ ಎಂದು ಅವನು ಹೊಗಳಿರುವನು. ಅವರನ್ನು ಮರೆಮಾಡಿದ ಜವನಿಕೆಯನ್ನು ಜಾರಿಸಿದಾಗ, ಮೆಲ್ಲಮೆಲ್ಲನೆ ಹೆಜ್ಜೆ ಇಡುತ್ತಾ ತೂಗುತ್ತಾ ಬಳುಕುತ್ತಾ ಅವರು ಮುಂಬರು ವುದನ್ನು ಬಯಲಂಗಳದಲ್ಲಿ ನಿಂತು ನೋಡಿದ ಅವನು, ಮದೋನ್ಮತ್ತನಾದುದನ್ನೂ ಬುದ್ದಿಭ್ರಮೆಗೀಡಾದುದನ್ನೂ ಒಪ್ಪಿಕೊಂಡಿರುವನು.

ವಿದೇಶಿ ಪ್ರವಾಸಿಗರು ಇಷ್ಟೆಲ್ಲಾ ವಿವರಗಳನ್ನು ಒದಗಿಸಿದ್ದರೂ ಅಪೂರ್ಣವೆನಿಸುವ ಈ ನೃತ್ಯಗಾರ್ತಿಯರ ಚಿತ್ರವನ್ನು ಪೂರ್ತಿಗೊಳಿಸಿಕೊಳ್ಳಲು ಸ್ಥಳೀಯ ಕವಿಗಳನ್ನು ನಾವು ಮೊರೆಹೋಗಬೇಕಾಗಿದೆ. ಪ್ರವಾಸಿಗರಂತೆ ಇವರಲ್ಲಿ ಕೆಲವರು ತಾವು ಸ್ವತಃ ಕಂಡದ್ದನ್ನೂ ಅನುಭವಿಸಿದ್ದನ್ನೂ ನಿಷ್ಠೆಯಿಂದ ದಾಖಲಿಸಿರುವರು; ಇದರಿಂದಾಗಿ ಇವರು ರಚಿಸಿದ ಕಾವ್ಯಗಳಿಗೆ ಐತಿಹಾಸಿಕ ಆಕರದ ರುಜುತ್ವವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇತಿಹಾಸ ಪ್ರಜ್ಞೆಯನ್ನು ಸಮರ್ಥವಾಗಿ ಮೈಗೂಡಿಸಿಕೊಂಡದ್ದಲ್ಲದೆ ವಿಜಯನಗರ ಮಹಾರಾಜದಾನಿ ಪಟ್ಟಣದೊಡನೆ ಗಹನವಾಗಿ ಗುರುತಿಸಿಕೊಂಡ ಈ ಕಾಲದ ಕವಿಗಳಲ್ಲಿ ಪ್ರಮುಖನಾದವನು ಪಂಪಾಸ್ಥಾನ ವರ್ಣನಂ ಕರ್ತೃ. ಪ್ರವಾಸಿಗರ ವರದಿಯನ್ನು ಚಂದ್ರಶೇಖರನು ಎಷ್ಟು ಸಮರ್ಥಿಸುವನು ಮತ್ತು ಹೇಗೆ ವಿಸ್ತರಿಸುವನು ಎಂಬ ಅಂಶವನ್ನು ಅವನ ಕಾವ್ಯದಲ್ಲಿ ಕಂಡುಕೊಳ್ಳಬಹುದು.

ಚಂದ್ರಶೇಖರನು ಮಹಾನವಮಿ ಮಹೋತ್ಸವವನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅದಕ್ಕಿಂತಲೂ ಅರ್ಥಪೂರ್ಣವಾದ ‘ವಿರೂಪಾಕ್ಷ ಒಡ್ಡೋಲಗ’ದ ಪ್ರಸ್ತಾಪ ಮಾಡುತ್ತಾ ಅಲ್ಲಿ ನಡೆಯುತ್ತಿದ್ದ ಕಲಾಕಲಾಪಗಳನ್ನು, ವಿಶೇಷವಾಗಿ ವಾರವಿಲಾಸಿನಿಯರ ನೃತ್ಯಗಳನ್ನು, ಸಮಗ್ರವಾಗಿ ಚಿತ್ರಿಸಿರುವನು. ಈ ಕಾಲಕ್ಕಾಗಲೇ ನಾಟ್ಯಕಲೆಯು ಪ್ರಾದೇಶಿಕ ಛಾಪು ಪಡೆದುಕೊಂಡಿತ್ತಲ್ಲದೇ ಅದು ಮಾರ್ಗಶೈಲಿಯ ಗುಣಮಟ್ಟವನ್ನು ಸರಿಗಟ್ಟುವುದಲ್ಲದೆ ಅದನ್ನು ಮೀರಿ ಏರುವ ಪ್ರಯತ್ನಕ್ಕೆ ಶ್ರಮಿಸುತ್ತಿತ್ತೆಂದು ತೋರುವುದು. ಪ್ರೇಕ್ಷಕರನ್ನು ಮರುಳು ಮಾಡಬಲ್ಲ ‘ನಿಜ್ಜವಣಿ’, ವಾರಾಂಗನೆಯ ಲಾವಣ್ಯವನ್ನು ಪ್ರದರ್ಶಿಸುವ ‘ಸಳಿ’, ಅಂಗಾಂಗ ಚಲನೆಯಿಂದ ರೋಮಾಂಚನಗೊಳಿಸುವ ‘ಝುಂಕಾ’, ಸ್ತನ ಮತ್ತು ಬಾಹುಕಂಪನ ಗಳಿಂದ ಮನಸೂರೆಗೊಳ್ಳುವ ‘ತರಹರ’ – ಈ ಮೊದಲಾದ ವೈಖರಿಗಳನ್ನು ವಿಜಯನಗರ ಕಾಲದ ಹಲವು (ಉದಾ. ಪದ್ಮಣಾಂಕ ಮತ್ತು ಚಾಮರಸ) ಕವಿಗಳು ಗುರುತಿಸಿದ್ದರು. ಇವರಲ್ಲೆಲ್ಲಾ ಅತ್ಯಂತ ಹೆಚ್ಚಿನ ಅನುಭವವನ್ನು ಪಡೆದ ನಾಟ್ಯಶಾಸ್ತ್ರಜ್ಞನೆಂದರೆ ಚಂದ್ರಶೇಖರ.

ವಿರೂಪಾಕ್ಷ ಒಡ್ಡೋಲಗದಲ್ಲಿ ಜರುಗುತ್ತಿದ್ದ ಮೂರು ನಾಟ್ಯಪ್ರಭೇದಗಳನ್ನು ಚಂದ್ರಶೇಖರನು ಗುರುತಿಸಿರುವನು. ಇವುಗಳನ್ನು ‘ಮಾರ್ಗ’, ‘ಪ್ರದೇಶ’ ಮತ್ತು ‘ದೇಸಿ’ ಶೀರ್ಷೆಕೆಯಡಿ ತರಬಹುದು. ಇವುಗಳಲ್ಲಿ ಮಾರ್ಗದಡಿ ಗುರುತಿಸಿಕೊಂಡ ಸಾಂಪ್ರದಾಯಿಕ ಮತ್ತು ಶಾಸ್ತ್ರನಿಯಂತ್ರಿತ ನೃತ್ಯವು ಈ ಒಡ್ಡೋಲಗದ ಕಾರ್ಯಕ್ರಮದಲ್ಲಿ ಅಗ್ರಸ್ಥಾನ ಪಡೆದಿತ್ತು. ಆಂಗಿಕಾ, ಆಹಾರ್ಯ, ಸಾತ್ವಿಕ ಮತ್ತು ವಾಚಕಾಭಿನಯವನ್ನು ಸ್ಥಾಯೀ ಮತ್ತು ಸಂಚಾರಿ ರಸಧಾರೆಯನ್ನು, ಅಂಗಹಾರ, ಕರಣ, ಸ್ಥಾನಕ, ಚಾರಿ ಬಂಧಗಳನ್ನು, ವೈಜ್ಞಾನಿಕ ವಾಗಿಯೂ ಕಲಾತ್ಮಕವಾಗಿಯೂ ನಿರೂಪಿಸುವುದೇ ಈ ಶಾಖೆಯ ನೃತ್ಯಗಾರ್ತಿಯ ಹಿರಿಮೆ. ಕಾಂಡಪಟವನ್ನು ಜಲಕ್ಕನೇ ಜಾರಿಸಿದಾಗ, ‘ಮೇಣದ ಸಜ್ಜರಸ ಪುತ್ಥಳಿ, ಮಿಂಚಿನ ಬೊಂಬೆಯಂದ’ದ ಚಲ್ಲುಗಂಗುಳ, ಒಯ್ಯರಿಯು ‘ಕಡೆಗಣ್ಣ ಕಾಂತಿಯನತ್ತಿತ್ತ ಬಿತ್ತರಿಸುತ್ತಾ ಕಿಱುನಗೆಯಂ ಬೀರುತ್ತಾ’ ಓರೆನಡೆಯ ಹೆಜ್ಜೆ ಹಾಕುತ್ತಾ ‘ನೀಲನೆಲಗಟ್ಟಿನ ರಂಗ’ವನ್ನು ಪ್ರವೇಶಿಸಿದಾಗ ‘ಮುಗಿಲಮಿಂಚಿನ ಕುಡಿ’ ಸ್ಫೋಟಿಸಿದಂತಾದುದನ್ನು ಈ ಕವಿ ಗಮನಿಸಿದ್ದ. ಪ್ರವಾಸಿಗನೊಬ್ಬನು ಅವಳಲ್ಲಿ ‘ಶುಭೋಜ್ವಲ ಗುಲಾಬಿ ಪುಷ್ಪದ’ ಪ್ರಕಾಶವನ್ನು ಕಂಡರೆ ಚಂದ್ರಶೇಖರನು ಕುಡಿಮಿಂಚಿನ ಪ್ರಕಾಶವನ್ನು ಕಂಡಿದ್ದನು. ಅದು ಏನೇ ಇರಲಿ, ಅವಳ ನೃತ್ಯ ಸೌಂದರ್ಯವು ಒಂದಿಲ್ಲೊಂದು ಬಗೆಯಲ್ಲಿ ಇವರಿಬ್ಬರನ್ನೂ ಸರಿ ಪ್ರಮಾಣದಲ್ಲಿ ಪುಳಕಿತಗೊಳಿಸಿತ್ತೆನ್ನುವುದರಲ್ಲಿ ಅನುಮಾನವಿಲ್ಲ. ಈ ನೃತ್ಯವನ್ನು ನೋಡಲು ಸೇರಿದ್ದ ರಸಿಕ ಸಭಿಕರ ಅನುಭವವೂ ಇದೇ ಬಗೆಯದ್ದಾಗಿತ್ತೆಂಬುದನ್ನು ಅವರು ಸಭಾಂಗಣದಿಂದ ಉದ್ಘೋಷಿಸಿದ ನುಡಿಗಳಿಂದ ಅರಿತುಕೊಳ್ಳಬಹುದು. ಇದು ಲೇಸು ಲೇಸು ಎಂದು ಒಮ್ಮೆ ಅವಳ ನೃತ್ಯದ ಪರಿಶುದ್ಧತೆಯನ್ನು ಅವರು ಹೊಗಳಿದರೆ, ಇದು ಪೊಸತಯ್ಯಯ್ಯ ಎಂದು ಅದರಲ್ಲಿಯ ನವ್ಯತೆಯನ್ನು ಕಂಡವರು ಹೊಗಳಿ, ಭಾಪು ಎಂದು ಕೂಗಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರಂತೆ!

ಮೊದಲ ಸುತ್ತಿನ ನೃತ್ಯವು ಮುಕ್ತಾಯಗೊಂಡೊಡನೆ, ಈ ನರ್ತಕಿಗಿಂತ ಭಿನ್ನ ಉಡುಪು ತೊಟ್ಟು ಭಿನ್ನ ಶೈಲಿಯ ನೃತ್ಯವನ್ನು ಪ್ರದರ್ಶಿಸಲು ಮತ್ತೊಬ್ಬಳು ರಂಗಕ್ಕಿಳಿದಳಂತೆ. ಪ್ರಾದೇಶಿಕ ನೃತ್ಯ ಪ್ರಭೇದದ ಹರಿಕಾರಳಂತೆ ತೋರುತ್ತಿದ್ದ ಇವಳು ‘ತಾಂಡವ’, ‘ಶಬ್ದ’ ಮತ್ತು ‘ಗೀತ’ ಪ್ರಬಂಧಗಳನ್ನಲ್ಲದೆ ಅತ್ಯಂತ ಸಾಹಸಪೂರ್ಣವಾದ ‘ಅವಗಡದ ಅಡವು’ಗಳನ್ನು ಕರಗತಮಾಡಿ ಕೊಂಡವಳಾಗಿದ್ದಳು. ವಿಸ್ಮಯಕಾರೀ ಪಟ್ಟುಗಳನ್ನೂ ಕಸರತ್ತುಗಳನ್ನೂ ಒಳಗೊಂಡ ಈ ನೃತ್ಯದ ಪ್ರಧಾನ ಅಂಶಗಳೆಂದರೆ ಜಿಗಿಯುವುದು, ಲಾಗ ಹಾಕುವುದು, ಗಿರಿಗಿರಿ ದೇಹ ಗಿರಿಗಿಟ್ಟುಸುವುದು, ಒಂಟಿಕಾಲಿನ ಮೇಲೆ ನಿಂತು ಬಿಲ್ಲಿನಂತೆ ದೇಹವನ್ನೂ – ದೇಹಾಂಗಗಳನ್ನೂ ಮಣಿಸುವುದು, ಮಂಡಿಯೂರಿ ದಿಂಡಿಹಾಕುವುದು, ಮೊಳಕಾಲೂರಿ ಬುಗುರಿಯಾಡುವುದು, ವಿರುದ್ಧ ದಿಕ್ಕಿನಲ್ಲಿ ಪಾದಗಳನ್ನು ತೂರುತ್ತಾ ಗಾಳಿಯಲ್ಲಿ ಹಾರಿ ನೆಲ ಸೇರುವುದು ಮುಂತಾದವುಗಳಾಗಿದ್ದವು. ಮಾರ್ಗವನ್ನು ಪೂರ್ಣ ಕೈಬಿಡದೆ ದೇಸಿಯ ಹಿರಿಮೆಯನ್ನು ಮೆರೆಯುವುದು ಈ ನೃತ್ಯದ ಗುರಿಯಾಗಿತ್ತೆಂದು ತೋರುವುದು. ಇದರಲ್ಲಿ ದೇಸಿ ಪ್ರಭೇದಗಳಾದ ‘ಕತರ’, ‘ಸುಳುಹು’, ‘ತರಹರ’, ‘ಒತ್ತುಮಾನ-ಬೆಟ್ಟಮಾನ’, ಮೊದಲಾದವು ಪ್ರಾಧಾನ್ಯತೆ ಪಡೆದುಕೊಂಡಿದ್ದವು.

ಪ್ರಾದೇಶಿಕ ನೃತ್ಯವು ಅಂತ್ಯಗೊಂಡೊಡನೆ, ಚಲ್ಲಣತೊಟ್ಟ ‘ದೇಸಿಕಾರ್ತಿ’ಯ ಅಪ್ಪಟ ದೇಸಿ ನೃತ್ಯಕ್ಕೆ ತೆರವಾಯಿತಂತೆ. ಈ ನೃತ್ಯವನ್ನು ವಿಶೇಷವಾಗಿ ಮೆಚ್ಚುವವರು ಸ್ಥಳೀಯರಾಗಿದ್ದರು. ಪ್ರಧಾನವಾಗಿ ಕನ್ನಡ, ತೆಲುಗು, ತಮಿಳು ನಾಡಿನ ರಸಿಕರನ್ನು ಓಲೈಸಲು ಇದು ಸಮರ್ಥವಾಗಿತ್ತು. ಇಲ್ಲಿ ನೃತ್ಯ ಮತ್ತು ವಾದ್ಯಕ್ಕೆ ಪ್ರಥಮ ಸ್ಥಾನ, ಸಂಗೀತಕ್ಕೆ ನಂತರದ ಸ್ಥಾನ. ಮಿಂಚಿನ ಹೊಳಪು ಮತ್ತು ನಾಗನಾಲಿಗೆಯ ಸೆಳಕುಗಳನ್ನು ಮೈಗೂಡಿಸಿ ಕೊಂಡವಳಿಗೆ ಮಾತ್ರ ಈ ನೃತ್ಯಸಾಧ್ಯವೆನಿಸಿತ್ತು. ಇದು ನೆಲದ ಗುಣವನ್ನು ಪ್ರತಿಬಿಂಬಿಸುವ ಕಲೆಯಾಗಿದ್ದು, ಮಾತಂಗಿ (ಬುಡಕಟ್ಟು), ಶಬರಿ (ಅಟವಿಕ), ಯೋಗಿಣಿ (ಮಾದಕ), ಯವನಿಕ (ಪಾರಸಿಕ) ಮುಂತಾದ ಪ್ರಭೇದಗಳನ್ನು ಒಳಗೊಂಡಿತ್ತು.

ಸಾಮ್ರಾಜ್ಯದ ನಾಯಂಕಾರರೆಲ್ಲರೂ ತಮ್ಮ ತಮ್ಮ ಪ್ರದೇಶದ ಚತುರ ಕಲಾವಿದರನ್ನು ಕರೆತಂದು ಮಹಾನವಮಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ಈಗಾಗಲೇ ಗಮನಿಸಿದ್ದೇವೆ. ಇವರಲ್ಲಿ ಬೆಟ್ಟಗಾಡು, ಬುಡಕಟ್ಟು, ಘಟ್ಟಪ್ರದೇಶ, ಬಯಲುನಾಡಿನ (ವಿಶೇಷವಾಗಿ ತಮಿಳು, ಸಿಂಹಳ, ಒರಿಯಾ ಪ್ರಾಂತಗಳ) ಕಲಾವಿದರು ಒಳಗೊಂಡಿದ್ದ ರೆಂಬುದನ್ನೂ ಗಮನಿಸಿದ್ದೇವೆ. ಈ ಪ್ರದೇಶಗಳಿಂದ ಬಂದ ಜನರನ್ನೆಲ್ಲಾ ಖುಷಿಪಡಿಸಲು ಈ ನೃತ್ಯವು ತಕ್ಕದಾಗಿರಲು ಸಾಕು. ಚಂದ್ರಶೇಖರನು ‘ಚಿಂದು’ ಎಂಬ ತಮಿಳು ಮತ್ತು ಆಂಧ್ರದವರಿಗೆ ಪ್ರಿಯವಾದ ನಾಟ್ಯವನ್ನೂ ಕವಿಲು (ಖವ್ವಾಲಿ), ಗಜಲು (ಗಜಲ್), ಭೈತು, ತುರಿಗೆ, ಅಂದೋಳಿತ ಮುಂತಾದ ಯವನ-ಪಾರಸಿಕ ಶೈಲಿಗಳ ಪಟ್ಟುಗಳನ್ನು ಸೂಕ್ಷ್ಮವಾಗಿ ಚರ್ಚಿಸುವನು. ವಿಜಯನಗರ ಮಹಾರಾಜಧಾನಿ ಪಟ್ಟಣದಲ್ಲಿ ತುರುಕರ ಬಡಾವಣೆಗಳಿದ್ದುದು ಮಾತ್ರವಲ್ಲದೆ, ಅವರದೇ ಆದ ಪ್ರಸಿದ್ಧ ಸೇನಾತುಕಡಿಯೂ ಇದ್ದಿತು. ಫಿರಂಗಿ ಮತ್ತು ಅಶ್ವದಳಗಳಲ್ಲಿದ್ದ ನಿಷ್ಣಾತ ತುರುಕರ ಸಮರ್ಥತೆಯ ಬಗ್ಗೆ ವಿಜಯ ನಗರದರಸರು ಹೆಮ್ಮೆ ಹೊಂದಿದ್ದರು. ಈ ತುಕುಡಿಗಳು ದಶಮಿಯ ದಿನದಂದು ಅರಸನ ಎದುರು ತಮ್ಮ ತಮ್ಮ ವೈಖರಿಗಳನ್ನು ಪ್ರದರ್ಶಿಸಲು ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿದ್ದವೆಂಬುದನ್ನು ಅರಿತು ಕೊಳ್ಳಲು ದಶಮಿಯ ದಿನ ನಡೆಯುತ್ತಿದ್ದ ಸೇನಾಶಕ್ತಿಯ ಪರಿವೀಕ್ಷಣಾ ಕಾರ್ಯಕ್ರಮದೆಡೆ ನಮ್ಮ ಗಮನವನ್ನು ಹರಿಸಬೇಕು.

ಮುಕ್ತಾಯ ಕಾರ್ಯಕ್ರಮ

ಮಹಾನವಮಿಯ ಹಬ್ಬದಲ್ಲಿ ವಾರಾಂಗನೆಯರಿಗಲ್ಲದೆ ಅಂತಃಪುರ ಪರಿವಾರಕ್ಕೂ ಅರಸುಕುವರಿಯರಿಗೂ ವಿಶಿಷ್ಟ ಪಾತ್ರವಿತ್ತು. ವಾಸ್ತವವಾಗಿ ಪ್ರತಿ ಸಂಜೆಯ ಮನರಂಜನಾ ಕಲಾಪವು ಅರಸಿಯರ ಆರತಿ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಇದು ಸಾರೋಟ ಸಾಮಂತರ ಗೌರವಾರ್ಪಣೆಯಾದ ನಡೆದ ನಂತರ ಪ್ರಾರಂಭವಾಗುತ್ತಿತ್ತು.

ಆರತಿ ತಟ್ಟೆಗಳನ್ನು ಹಿಡಿದ ಅಂತಃಪುರದ ಸುಮಂಗಲಿಯರು ಅಂಗಳಕ್ಕೆ ಬರುವ ಮುನ್ನ, ಚಾಟಿಯನ್ನು ಹೆಗಲಿಗೇರಿಸಿಕೊಂಡ ದಂಡಧಾರಿಣೀ ದೌವಾರಿಕೆಯರು, ಅರ್ಧಪುರುಷರು, ಸಂಗೀತ-ವಾದ್ಯಗಾರ್ತಿಯರು, ರಜತದೊಡವೆ ತೊಟ್ಟ ಹೊರೆಯಾಳುಗಳು, ಆಪ್ತ ಪರಿಚಾರಿಕೆ ಯರು, ಒಬ್ಬೊಬ್ಬರಾಗಿ ಬಂದು ಅಂಗಳವನ್ನು ಅಲಂಕರಿಸುತ್ತಿದ್ದರು. ಆಗ ಅತ್ಯಂತ ಸುಂದರಿಯರಾದ ಮೂವತ್ತಾರು ಅರಸಿಯರು ಬಂಗಾರದ ಕಳಸಗಳನ್ನು ಕೈಯಲ್ಲಿ ಹಿಡಿದು, ಮಣಭಾರದ ಒಡವೆಗಳ ಒತ್ತಡಕ್ಕೆ ಮಣಿದುಬಾಗಿ, ಅಡಿ ಮುಂದಿಡಲಾರದೆ ತಮ್ಮ ಸಖಿಯರೊಡಗೂಡಿ ಮೆಲ್ಲಮೆಲ್ಲಗೆ ನಡೆದು ಬರುತ್ತಿದ್ದುದನ್ನು ನೂನಿಜ್ ನೋಡಿದ್ದ. ಈ ಕೊನೆಯ ಅಂಕಣದ ಕಾರ್ಯಕ್ರಮವನ್ನು ಪ್ಯಾಸ್ ತುಂಬಾ ಆಸಕ್ತಿಯಿಂದ ಅವಲೋಕಿ ಸಿದ್ದನಲ್ಲದೆ ಇದರಲ್ಲಿ ಪಾಲ್ಗೊಂಡಿದ್ದ ‘ಹದಿನಾರರಿಂದ ಇಪ್ಪತ್ತು ವರ್ಷಗಳ ಅರವತ್ತು ಅರಸಿಯರನ್ನು’ ಅವನು ಎಣಿಕೆ ಮಾಡಿದ್ದ. ಅಲ್ಲದೇ ಅವರು ತೊಟ್ಟ ರೇಶ್ಮೆಯ ಪೀತಾಂಬರ, ಸುವರ್ಣದ ಮುಡಿ ಹೂ, ರತ್ನ-ಪಚ್ಛೆ-ಮಾಣಿಕ್ಯ-ವಜ್ರಗಳ ಕಂಠಾಭರಣ, ಮುತ್ತಿನೆಳಗಳ ಸರ, ಬೃಹತ್ ಗಾತ್ರದ ಭುಜಕೀರ್ತಿ, ಮುಂಗೈಯನ್ನೆಲ್ಲ ಮುಚ್ಚಿದ್ದ ಕಂಕಣಗಳು, ವಜ್ರದೊಂಕಿ, ಮಣಿಮಯ ಸುವರ್ಣಮೇಖಲೆಯಿಂದ ಜೋಲಾಡುತ್ತಾ ನಡುತೊಡೆ ತಟ್ಟುತ್ತಿದ್ದ ಮಣಿಗುಚ್ಛ, ಸಾಲುಮುತ್ತಿನ ನೂಪುರ – ಹೀಗೆ ಅಡಿಯಿಂದ ಮುಡಿಯವರೆಗೂ ಅವರನ್ನು ಅಲಂಕರಿಸಿದ್ದ ಆಭರಣಗಳ ಪಟ್ಟಿಮಾಡಿ, ಇವನು ನಮ್ಮ ಮುಂದಿಟ್ಟಿರುವನು. ‘ಇವರು ತೊಟ್ಟ ಒಡೆವಗಳ ಬೆಲೆಯನ್ನು ಕಟ್ಟುವವರಾರು?’ ಎಂಬ ಪ್ರಶ್ನೆ ಕೇಳಿಕೊಂಡ ಅವನು, ಅವರ ಬೆಡಗು ಜೀವನದಲ್ಲಿ ಅಡಗಿದ್ದ ಬವಣೆಯನ್ನೂ ಗುರುತಿಸಿದ್ದನು. ‘ತೊಟ್ಟ ರತ್ನಾಭರಣಗಳ ಭಾರದಿಂದ ಕುಸಿದಿದ್ದ ಅರಸಿಯರಿಗೆ ಭುಜಕೊಟ್ಟು ಆಧಾರಸ್ತಂಬದಂತೆ ಅವರ ಸಖಿಯಂದಿರು’ ನಿಂತಿದ್ದರು, ಎಂಬ ಅವನ ಅನುಕಂಪದ ಮಾತು ಮಾರ್ಮಿಕವಾಗಿದೆ.

ಅರಸನು ರಾಜಾಸನದಿಂದ ಎದ್ದು, ದಿನದ ಉಪವಾಸ ವ್ರತ ಮುರಿದು ರಾತ್ರಿಯ ಒಂದು ಹೊತ್ತಿನ ಉಪಹಾರ ಮಾಡಲು, ವೇದಿಕೆಯ ಹಿಂಬಾಗಿಲ ಮೂಲಕ ಅಂತಃಪುರ ಸೇರಿದಾಗ, ಒಡ್ಡೋಲಗವು ಕರಗಿ, ದರಬಾರಿನ ಒಂದು ದಿನ ಕಾರ್ಯಕ್ರಮವು ಮುಕ್ತಾಯ ಗೊಳ್ಳುತ್ತಿತ್ತು. ಆದರೆ ಬೇಡರ ಬೆಡಗಿಯರ ಕುಣಿತ, ವಾದ್ಯಗಾರರ ಆರ್ಭಟ, ರಾಜಾಂಗಳದ ಹೊರ ಅಂಚನ್ನೆಲ್ಲಾ ಹಂಚಿಕೊಂಡು, ಕತ್ತಲನ್ನು ಕೂಡಿಕೊಂಡು, ಮಹಾರಾಜಧಾನಿ ಪಟ್ಟಣದಲ್ಲೆಲ್ಲಾ ಮರುಧ್ವನಿಸಿ, ಉತ್ಸವದ ಸೊಡರನ್ನು ಸೂಸುತ್ತಲೇ ಮತ್ತೊಂದು ಮುಂಜಾ ವನ್ನು ಬರಮಾಡಿಕೊಳ್ಳುತ್ತಿತ್ತು.

ದಶಮಿಯ ಮುಕ್ತಾಯ ಸಮಾರಂಭ

ನವರಾತ್ರಿ ಬರಿ ಮೋಜಿನ ಹಬ್ಬವಾಗಿರಲಿಲ್ಲ, ವ್ಯವಸ್ಥಿತವಾಗಿ ಯೋಜಿಸಿದ, ರಾಜ್ಯದ ಸೇನಾಶಕ್ತಿಯ ಪರಿವೀಕ್ಷಣಾ ಕಾರ್ಯಕ್ರಮವಾಗಿತ್ತೆಂಬುದನ್ನು ಈಗಾಗಲೇ ಗಮನಿಸಿದ್ದೇವೆ. ದಸರೆಯ ಉತ್ಸವಕಾಲದಲ್ಲಿ ರಾಜ್ಯದ ಸಾಮಂತರೆಲ್ಲರೂ ತಮ್ಮ ಸೈನ್ಯವನ್ನು ಕರೆತಂದು, ಅರಸನೆದುರು ಅದನ್ನು ಪ್ರದರ್ಶಿಸಿ, ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಪೂರೈಸಿರುವುದರ ಬಗ್ಗೆ ಮನದಟ್ಟು ಮಾಡಿಕೊಡುತ್ತಿದ್ದರೆಂಬುದನ್ನೂ ಗಮನಿಸಿದ್ದೇವೆ. ಅರಸನಾದರೋ ಪ್ರತಿ ಸಾಮಂತನ ಸೇನಾಬಲದ ಸತ್ಯಾಸತ್ಯತೆಯನ್ನು ಸ್ವತಃ ಮನದಟ್ಟು ಮಾಡಿಕೊಂಡು, ಅವರೆಷ್ಟು ನಿಷ್ಠರಾಗಿರುವರೆಂಬುದನ್ನು ನಿಷ್ಕರ್ಷಿಸಿಕೊಳ್ಳುತ್ತಿದ್ದನು. ಸಮರ್ಥರಿಗೆ-ನಿಷ್ಠಾವಂತರಿಗೆ ಪುರಸ್ಕಾರ, ಮೋಸಗಾರರಿಗೆ-ಅಸಮರ್ಥರಿಗೆ ಶಿಕ್ಷೆ, ಈ ದಶಮಿ ಕಾರ್ಯಕ್ರಮದ ಪ್ರಧಾನ ಗುರಿಯಾಗಿತ್ತೆಂಬುದರಲ್ಲಿ ಅನುಮಾನವಿಲ್ಲ.

ಬಾಹ್ಯಶತ್ರುಗಳಿಂದ ರಕ್ಷಿಸಿಕೊಂಡು, ರಾಜ್ಯದ ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಮಾತ್ರವಲ್ಲದೆ ತಮ್ಮ ರಾಜ್ಯದ ಗಡಿಯನ್ನು ಕಾಲಕಾಲಕ್ಕೆ ವಿಸ್ತರಿಸಿಕೊಳ್ಳಲೂ ವಿಜಯನಗರದ ಅರಸರು ಅಪಾರ ಸೈನ್ಯವನ್ನು ಕಟ್ಟಿದ್ದರೆಂಬುದರಲ್ಲಿ ಅನುಮಾನವಿಲ್ಲ. ಈ ಸೈನ್ಯವನ್ನು ಎರಡು ಗುಂಪಿನಡಿ ತರಬಹುದು : ಒಂದು, ಅರಸರೇ ಸಂಬಳಕೊಟ್ಟು ತಮ್ಮ ನೇರ ಅಂಕಿತದಲ್ಲಿಟ್ಟುಕೊಂಡ ಪಡೆ; ಇನ್ನೊಂದು, ಅರಸರ ಪರವಾಗಿ ಅವರ ನಾಯಂಕಾರರು ಕಟ್ಟಿ ಒದಗಿಸುತ್ತಿದ್ದ ಪಡೆ. ಈ ಎರಡು ಪಡೆಗಳೂ ದಶಮಿಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದವು.

ಬಖೈರ್‌ನಲ್ಲಿ ದೊರೆಯುವ ವಿವರಗಳ ಆಧಾರದ ಮೇಲೆ ವಿಜಯನಗರ ಸೈನ್ಯದಲ್ಲಿದ್ದ ಆರು ಶಾಖೆಗಳನ್ನು ಗುರುತಿಸಬಹುದು. ಅವು : ಕಾಲ್ದಳ, ಅಶ್ವದಳ, ಗಜದಳ, ಫಿರಂಗಿದಳ, ಒಂಟೆದಳ ಮತ್ತು ನಂದಿದಳ. ಈ ಸೈನ್ಯ ಪ್ರಮಾಣದ ಅಂದಾಜು ಕಟ್ಟಲು ಹಲವಾರು ಪ್ರಯತ್ನಗಳು ನಡೆದಿದ್ದು ಅವುಗಳಲ್ಲಿ ಕೆಲವು ನೈಜತೆಗೆ ಸಮೀಪವಾಗಿರಬಹುದೆನಿಸುವುವು. ಇದು ಪ್ರಾರಂಭಗೊಳ್ಳುವುದು ಇಟಲಿ ದೇಶದ ನಿಕೊಲ-ದ-ಕೊಂತಿಯಿಂದ; ಈತನು ಮಹಾರಾಜಧಾನಿ ಪಟ್ಟಣದಲ್ಲಿ ಕಂಡದ್ದು ೯೦,೦೦೦ ಶಸ್ತ್ರಧಾರಿಗಳನ್ನು ಬಹುಶಃ ಇದು ಅರಸನ ನೇರ ಅಂಕಿತದಲ್ಲಿದ್ದ ಪಡೆಯಾಗಿರಬಹುದು. ನಗದು ಸಂಬಳಕೊಟ್ಟು ಬೆಳೆಸಿದ್ದ ಕೃಷ್ಣದೇವರಾಯನ ಸೈನ್ಯದಲ್ಲಿ ೧,೦೦,೦೦೦ ಕಾಲಾಳುಗಳನ್ನು ೨೦,೦೦೦ ಅಶ್ವಯೋಧರನ್ನು ಮತ್ತು ೯೦೦ ಗಜದಳದವರನ್ನು ಪೋರ್ತುಗಲ್ಲಿನ ಬಾರ್ಬೋಸ, ಪ್ಯಾಸ್ ಮತ್ತು ನ್ಯೂನಿಜರು ನೋಡಿದ್ದರು. ರಷ್ಯಾ ದೇಶದ ನಿಕಿಟನ್ ಕಂಡಿದ್ದು ೧,೦೦,೦೦೦ ಕಾಲಾಳು, ೫೦,೦೦೦ ಅಶ್ವದಳ, ೩೦೦ ಗಜದಳವನ್ನು ಕೃಷ್ಣರಾಯ ವಿಜಯಮು ಎಂಬ ತೆಲುಗು ಗ್ರಂಥದಲ್ಲಿ ರಾಯನ ನೇರ ಅಧೀನದಲ್ಲಿದ್ದ ೬,೦೦೦ ಅಶ್ವಪಡೆಯ ಪ್ರಸ್ತಾಪ ಬರುವುದು. ಇವನ ನೇರ ಅಂಕಿತದಲ್ಲಿದ್ದ ಗಜದಳದ ಪ್ರಮಾಣವು ಸುಮಾರು ೯೦೦ ಎಂದು ಬಾರ್ಬೊಸ ತಿಳಿದಿದ್ದನು.

ರಾಜ್ಯದ ವಿವಿಧ ಭಾಗಗಳ ಮೇಲಿನ ಆಡಳಿತಾಧಿಕಾರವನ್ನು ಪಡೆದುಕೊಂಡಿದ್ದ ಸಾಮಂತರು ಅವರವರಿಗೆ ವಹಿಸಿಕೊಟ್ಟಿದ್ದ ಸೈನಿಕ ಹೊಣೆಗಾರಿಯನ್ನು ಪೂರೈಸಿಕೊಡುವುದು ನಾಯಂಕಾರ ವ್ಯವಸ್ಥೆಯ ಪ್ರಮುಖ ಅಂಗವಾಗಿತ್ತು. ಅಬ್ದುಲ್ ರಜಾಕನ ಅಂದಾಜಿನಂತೆ ಇದು ೧೧,೦೦,೦೦೦ ಯೋಧರನ್ನಲ್ಲದೆ ಗುಡ್ಡ ಗಾತ್ರದ ಮತ್ತು ಹಿಡಂಬಿಯಾಕಾರದ ೧,೦೦೦ ಗಜಗಳನ್ನೊಳಗೊಂಡಿತ್ತು. ಪ್ಯಾಸ್ ಕೂಡ ೧೦,೦೦,೦೦೦ ಬಲವನ್ನು ಗುರುತಿಸಿದ್ದ. ಕೃಷ್ಣದೇವರಾಯನು ರಾಯಚೂರನ್ನು ಮುತ್ತಿದಾಗ ಅವನ ಸೈನ್ಯದಲ್ಲಿ ೩,೦೦,೩೦೦ ಕಾಲಾಳುಗಳನ್ನು, ೩೨,೦೦೦ ಅಶ್ವದಳವನ್ನು, ೫೫೦ ಗಜದಳವನ್ನು ತೊಡಗಿಸಿದ್ದುದನ್ನು ನೂನಿಜ್ ಕಂಡಿದ್ದ. ಕೌಟಾ ಮತ್ತು ಸೌಸಾರ ಅಂದಾಜಿನಂತೆ ಈ ಬಲವು ೬೦,೦೦೦ ಕಾಲಾಳು ಮತ್ತು ೧,೦೦,೦೦೦ ಅಶ್ವದಳವನ್ನು ಒಳಗೊಂಡಿತ್ತು. ರಾಯವಾಚಕಮು ಎಂಬ ತೆಲುಗು  ಗ್ರಂಥದಲ್ಲಿ ೫,೦೦,೦೦೦ ಕಾಲಾಳು, ೬೦,೦೦೦ ಅಶ್ವದಳ ಮತ್ತು ೧೨೦ ಘಟ್ಟಮ್, (೧೦ ಆನೆಗಳನ್ನೊಳಗೊಂಡದ್ದು ಒಂದು ಘಟ) ಅಥವಾ ೧,೨೦೦ ಗಜದಳವನ್ನು ಉಲ್ಲೇಖಿಸಲಾಗಿದೆ.

ಈ ಎಲ್ಲಾ ವರದಿಗಳನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ವಿಜಯನಗರ ಸೈನ್ಯದ ಅಪಾರ ಪ್ರಮಾಣವನ್ನು ಅದರ ಸಂಖ್ಯಾಬಲವು ಕಾಲಕಾಲಕ್ಕೆ ಬದಲಾಗುತ್ತಿದ್ದುದನ್ನು ಗುರುತಿಸಬಹುದು. ಇದು ಏನೇ ಇದ್ದರೂ, ಕನಿಷ್ಟ ೫,೦೦,೦೦೦ ಕಾಲ್ದಳ, ೩೦,೦೦೦ರಿಂದ ೬೦,೦೦೦ ಅಶ್ವದಳ, ೩೫೦ರಿಂದ ೧,೦೦೦ ಗಜದಳಗಳನ್ನು ವಿಜಯನಗರದ ಸೇನೆಯು ಒಳಗೊಂಡಿತ್ತೆಂಬುದರಲ್ಲಿ ಅನುಮಾನವಿಲ್ಲ. ಇದಕ್ಕೆ ಒಂಟೆಗಳ ದಳವನ್ನೂ ಸರಕು-ಸರಂಜಾಮನ್ನು ಸಾಗಿಸುತ್ತಿದ್ದ ನಂದಿ ದಳವನ್ನೂ ಸೇರಿಸಬೇಕಾಗುವುದು; ಆದರೆ ಅವುಗಳ ಸರಿಯಾದ ಪ್ರಮಾಣವು ನಮಗೆ ದೊರಕುತ್ತಿಲ್ಲ. ಅತಿ ವೇಗದಿಂದ ಓಡುವ ಒಂಟೆಯ ದಳವನ್ನು ವಾರ್ಥೆಮ್ ಸ್ವತಃ ನೋಡಿದ್ದನು. ಇಮ್ಮಡಿ ದೇವರಾಯನ ದಳವಾಯಿಯೊಬ್ಬನು ೧೦,೦೦೦ ಒಂಟೆಗಳ ಪಡೆಯನ್ನು ದಕ್ಷಿಣದ ದಂಡೆಯಾತ್ರೆಯಲ್ಲಿ ತೊಡಗಿಸಿದ್ದ ಬಗ್ಗೆ ಮತ್ತು ರಕ್ಕಸತಂಗಡಿಗೆಯ ಕದನದಲ್ಲಿ ಸಾವಿರಾರು ಒಂಟೆಗಳನ್ನು ಬಳಸಿದ್ದ ಬಗ್ಗೆ ಆಧಾರಗಳು ದೊರೆಯುವುವು.

ದಶಮಿದಿನದ ಸೇನಾಪರಿವೀಕ್ಷಣಾ ಕಾರ್ಯಕ್ರಮವು ಅರಮನೆಯ ಆವರಣದಲ್ಲಿ ಜರುಗದೆ ಮಹಾರಾಜಧಾನಿ ಪಟ್ಟಣ ಪರಿಸರದ ಆರೆಂಟು ಮೈಲು ವಿಸ್ತಾರದ ಪ್ರದೇಶದಲ್ಲಿ ನಡೆಯುತ್ತಿತ್ತು. ಈ ದಿನದ ಸಂಜೋತ ಸೈನ್ಯದ ಶಿಸ್ತಿನ ಪ್ರದರ್ಶನವನ್ನು ಪ್ಯಾಸ್ ಹೆಚ್ಚು ಸಮರ್ಥವಾಗಿ ದಾಖಲಿಸಿರುವನು. ಏಕೆಂದರೆ ಅದರಲ್ಲಿ ಅವನು ಸ್ವತಃ ಪಾಲ್ಗೊಳ್ಳಲು ಸಾಧ್ಯವಾಗಿತ್ತು. ‘ರಾಜಧಾನಿಯಿಂದ ಒಂದು ಲೀಗ್ ದೂರದಲ್ಲಿ ಮೊದಲೇ ನಿಶ್ಚಿತಗೊಳಿಸಿದ ಸ್ಥಳದಲ್ಲಿ, ಮೆಕ್ಕಾಮಕಮಲ್ಲಿನ ಒಂದು ಡೇರೆಯನ್ನು ಎತ್ತಿ, ಅಲ್ಲಿ ಮೊದಲು ವಿರೂಪಾಕ್ಷ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅರಮನೆಯಿಂದ ಈ ಡೇರೆಯವರೆಗಿನ ಭೂಪ್ರದೇಶವನ್ನೆಲ್ಲ ಶಿಸ್ತಿನ ಸೇನಾಪ್ರದರ್ಶನಕ್ಕೆ ಮೀಸಲಿಡಲಾಗಿತ್ತು. ತಮ್ಮ ತಮ್ಮ ಸೇನೆಯೊಡನೆ ಬಂದು, ತಮ್ಮ ಅಂತಸ್ತಿಗೆ ತಕ್ಕಂತೆ ನಿರ್ಧರಿಸಲಾಗಿದ್ದ ಸ್ಥಳದಲ್ಲಿ ಒಬ್ಬರ ಹಿಂದೆ ಮತ್ತೊಬ್ಬ ಯೋಧನನ್ನು ನಿಲ್ಲಿಸಿ, ತಾವೂ ನಿಂತು, ಸುತ್ತಲ ಪ್ರದೇಶವನ್ನೆಲ್ಲ ಸಾಮ್ರಾಜ್ಯದ ಸಾಮಂತರು ತುಂಬಿದ್ದರು. ಅಲ್ಲಲ್ಲಿ ಕೆರೆಗಳು ಅಡ್ಡ ಬಂದಾಗ ಅವನ್ನು ಸುತ್ತುವರಿದು, ರಸ್ತೆ ಇಕ್ಕಟ್ಟಾಗಿದ್ದಾಗ ಸನಿಹದ ಬಯಲು ಪ್ರದೇಶಗಳನ್ನು ಬಳಸಿಕೊಂಡು, ಸೈನ್ಯದ ತುಕಡಿಗಳು ನಿಂತಿದ್ದವು. ಹೀಗೆ ಬಯಲು, ಬೆಟ್ಟ, ಕೆರೆ, ಕಣಿವೆಗಳೆಲ್ಲವನ್ನೂ ತುಂಬಿ ನಿಂತ ಸೇನೆಯಿಂದ ನೆಲವೇ ನೋಡಸಿಗದಂತಾಗಿತ್ತು. ಕಾಲಾಳುಗಳನ್ನು ಕುದುರೆ ಸಾಲಿನ ಮುಂದೆ, ಕುದುರೆಗಳನ್ನು ಆನೆಸಾಲಿನ ಮುಂದೆ ನಿಲ್ಲಿಸಿ, ಪ್ರತಿಯೊಬ್ಬ ನಾಯಕನು ತನ್ನ ಬಲವನ್ನು ಪ್ರದರ್ಶಿಸುತ್ತಿದ್ದನು. ಇದು ರಾಜ್ಯದ ಬೇರೆ ಬೇರೆ ಭಾಗದಿಂದ ಬಂದವರ ಬಗೆಯಾದರೆ ಮಹಾರಾಜಧಾನಿ ಪಟ್ಟಣದ ದಂಡನಾಯಕರಾದರೋ ವಿಶೇಷವಾಗಿ ಸಜ್ಜು ಗೊಳಿಸಿ ರಸ್ತೆಯ ಬಳಿ ಕಟ್ಟಿದ ಅಟ್ಟದ ಮೇಲೆ ತಮ್ಮ ಸೇನೆಯನ್ನು ನಿಲ್ಲಿಸಿ, ಪಟ್ಟಣದ ದ್ವಾರಗಳೆಲ್ಲವೂ ಅದರಿಂದ ತುಂಬಿ ತುಳುಕುವಂತೆ ಮಾಡಿದ್ದರು. ಸೈನ್ಯ ಪ್ರದರ್ಶನಕ್ಕಾಗಿ ಇಂತಹ ವಿಶೇಷ ಅಟ್ಟಗಳನ್ನು ನಿರ್ಮಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ ಚಪ್ಪಟೆಯಾದ (ಮಣ್ಣಿನ) ಮನೆಯ ಮಾಳಿಗೆಯ ಮೇಲೆ ಸೈನ್ಯವನ್ನು ನಿಲ್ಲಿಸುವುದು ಸುರಕ್ಷಿತವಾಗಿರಲಿಲ್ಲ’, ಎಂದು ಈ ಯಾತ್ರಿಕನು ವರ್ಣಿಸಿರುವನು.

ಗಜ, ಅಶ್ವ, ಕಾಲ್ದಳ, ಬಿಲ್ಲಾಳು ಹಾಗೂ ತುರುಕ-ಪಡೆಗಳು ತಮ್ಮ ಪಶುಗಳನ್ನು ವಿಶೇಷವಾಗಿ ಅಲಂಕರಿಸಿ, ತಾವೂ ಸಿಂಗರಿಸಿಕೊಂಡು, ಥಳಥಳ ಹೊಳೆಯುವ ಆಯುಧಗಳನ್ನು ಹಿಡಿದು ನಿಂತ ಶಿಸ್ತಿನ ಸೊಬಗನ್ನು ಪ್ಯಾಸ್ ತುಂಬಾ ಮೆಚ್ಚಿದ್ದ.

‘ಸುಂದರ ಹಾಗೂ ಬೆಲೆಬಾಳುವ, ಅನೇಕ ಪದರುಗಳ ಶುಭ್ರಬಿಳಿ ವಸ್ತ್ರಗಳನ್ನು ಧರಿಸಿ, ಅನರ್ಘ್ಯ ರತ್ನಗಳ ಮಾಲೆಗಳಿಂದ ಅಲಂಕರಿಸಿಕೊಂಡು, ರಕ್ತಗೆಂಪು ಮಕಮಲ್ಲಿನ ಹೊಳೆವ ಛತ್ರದ್ವಯ ಸಮೇತನಾಗಿ ಅರಮನೆಯಿಂದ ಹೊರಟು, ಸಾಮಂತರೂ ದಳನಾಯಕರೂ ಸಜ್ಜುಗೊಂಡು ಠೀವಿಯಲ್ಲಿ ನಿಂತಿರುವುದನ್ನು ಪರಿವೀಕ್ಷಿಸಲು ಬರುತ್ತಿದ್ದ ಅಶ್ವಾರೂಢ ಅರಸನ ಸೊಬಗನ್ನೆಲ್ಲ ನಾನು ವರ್ಣಿಸಲಾರೆ. ಅದನ್ನು ವರ್ಣಿಸಬಲ್ಲೆನಾದರೂ ನಾನು ಹೇಳುವುದನ್ನು ನಂಬುವವರಾದರೂ ಯಾರು? … ನಾನು ನೋಡಿದುದನ್ನೆಲ್ಲ ಹೇಳಲು ನನ್ನಲ್ಲಿ ಶಬ್ದಗಳಿಲ್ಲ ನಿಜ; ಆದರೆ, ಇಲ್ಲಿ ನಡೆಯುತ್ತಿರುವುದೆಲ್ಲವನ್ನೂ ನೋಡಲು ನನಗೂ ಸಾಧ್ಯವಾಗುತ್ತಿಲ್ಲ. ಕಾಣುತ್ತಿರುವುದದನ್ನೆಲ್ಲ ಹೇಳುವ ನನ್ನ ಪ್ರಯತ್ನವೇ ನಿರರ್ಥಕ ಸಾಹಸವೆನಿಸುವುದು. ಒಮ್ಮೆ ಆಚೆ, ಒಮ್ಮೆ ಈಚೆ, ರುಂಡವನ್ನು ಹೊರಳಿಸುತ್ತಾ ಇದೆಲ್ಲವನ್ನು ನೋಡುತ್ತಿರುವಾಗ ನನ್ನ ತಲೆ ಸುತ್ತುಗಟ್ಟಿದಂತಾಗಿ, ಕುದುರೆಯ ಮೇಲೆ ನಾನು ಬೆನ್ನು ಮೇಲಾಗಿ ಬಿದ್ದುಬಿಡುವೆನೇನೋ ಅನಿಸುತ್ತಿತ್ತು. ಮೈಯನ್ನೆಲ್ಲಾ ಅಲಂಕರಿಸಿಕೊಂಡು ಹೌಡಾಗಳನ್ನು ಪೇರಿಸಿಕೊಂಡ ಆನೆಗಳು ಅರಸನ ಮುಂಚೂಣಿ ನೆಲವನ್ನು ತುಳಿಯುತ್ತಿದ್ದವು. ಅವುಗಳ ಹಿಂದೆ ರತ್ನಖಚಿತ ಸುವರ್ಣದ ಒಡವೆಗಳಿಂದ ಅಲಂಕೃತಗೊಂಡ, ರಾಜ್ಯ ಗೌರವ ಸಂಕೇತದಂತಿದ್ದ, ಸುಮಾರು ಇಪ್ಪತ್ತು ಜೊತೆ ಪಲ್ಲಣಪೋಷಿತ ರಾಜಾಶ್ವಗಳಿದ್ದವು. ಬೃಹತ್ ಪ್ರಮಾಣದ (ವಿರೂಪಾಕ್ಷ) ವಿಗ್ರಹವನ್ನೊಳಗೊಂಡ ರಜತ ಸಿಬಿಕೆಯನ್ನು ಹೊತ್ತ ಹದಿನಾರು ಜನ ಬೋವಿಗಳೊಡನೆ ಸೈನ್ಯವನ್ನು ಪರಿವೀಕ್ಷಿಸುತ್ತಾ ಅರಸನು ಮುನ್ನಡೆದಾಗ, ತಮ್ಮ ಖೇಟಕಗಳನ್ನು ಕುಟ್ಟಿ ಪಡೆಯಾಳುಗಳು ಮಾಡುತ್ತಿದ್ದ ಜಯಕಾರದ ಆರ್ಭಟ, ಕೆನೆಯುತ್ತಿದ್ದ ಅಶ್ವಗಳ ಹೇಷಾರವ, ಹೊರಹೊಮ್ಮುತ್ತಿದ್ದ ಗಜಘಟಾಳಿಯ ಘರ್ಜನೆ, ಬೆಟ್ಟ ಕಣಿವೆ ಗಳನ್ನೆಲ್ಲಾ ನಡುಗುಟ್ಟಿಸುವಂತೆ, ಪಟ್ಟಣವನ್ನೆಲ್ಲ ಪಲ್ಲಟಗೊಳಿಸುವಂತೆ ತೋರಿದವು. ಆಗ ಸಿಡಿಸಿದ ಬಾಣಬಿರುಸು, ಮದ್ದುಗುಂಡು, ಪೆಟಲು-ರಾಟಳಗಳಿಂದ ತೂರಿಬಂದ ಅಗ್ನಿಪುಷ್ಪಗಳ ಸುರಿಮಳೆ ಸೊಬಗನ್ನು ಸವಿಯಲು ಲೋಕವೇ ಅಲ್ಲಿ ನೆರೆದಿದೆಯೆನೋ’ ಎಂಬಂತೆ ಈ ಯಾತ್ರಿಕನಿಗೆ ಗೋಚರಿಸಿತು.*

 

ಆಕರಗಳು

ವಿದೇಶಿ ಪ್ರವಾಸಿಗರ ವರದಿಗಳು

೧. ಡೇಮ್ಸ್, ಎಂ.ಎಸ್. (ಸಂ), ದಿ ಬುಕ್ ಆಫ್ ಡುಆರ್ಟಿ ಬಾರ್ಬೋಸ, (ದಿ ಹೈಕ್ಲುಟ್ ಸೊಸೈಟಿ, ಲಂಡನ್, MCMXVIII).

೨. ಇಲಿಯಟ್, ಎಚ್.ಎಂ., ಮತ್ತು ಡೌಸನ್, ಹಿಸ್ಟರಿ ಆಫ್ ಇಂಡಿಯಾ ಆ್ಯಸ್ ಟೋಲ್ಡ್ ಬೈ ಇಟ್ಸ್ ಓನ್ ಹಿಸ್ಟೋರಿಯನ್ಸ್, ಸಂ. ೨, (ಲಂಡನ್, ೧೮೬೭-೭೭).

೩. ಫಿಲ್ಲಿಯೋಜ, ವಿ., ವಿಜಯನಗರ ಆ್ಯಸ್ ಸೀನ್ ಬೈ ಡೊಮಿಂಗೋಸ್ ಪಯಾಸ್ ಅಂಡ್ ಫೆರ್ನಾವೊ ನೂನಿಜ್ (ಸಿಕ್ಸ್‌ಟೀಂತ್ ಸೆಂಚುರಿ ಪೋರ್ಚುಗೀಸ್ ಕ್ರಾನಿಕಲ್ಸ್) ಆ್ಯಂಡ್ ಅದರ್ಸ್‌(ದೆಹಲಿ, ೧೯೯೯).

೪. ಲಾಖ್, ಡಿ., ಇಂಡಿಯಾ ಇನ್ ದಿ ಐಯ್ಸ ಆಫ್ ಯುರೋಪ್, (ಚಿಕಾಗೊ, ೧೯೬೮).

೫. ಸಿವೆಲ್, ಆರ್., ಎ ಫರ್ಗಾಟನ್ ಎಂಪೈರ್ (ದೆಹಲಿ, ೧೯೬೨).

೬. ಟೆಂಪಲ್, ಆರ್.ಸಿ., ದಿ ಐಟಿನೆರರೀ ಆಫ್ ಲುಡೋಮಿಕೊ ವಾರ್ಥೆಮ ಆಫ್ ಬೊಲೋನ, ಫ್ರಮ್ ೧೫೦೨ ಟು ೧೫೦೮, (ಲಂಡನ್, ೧೯೨೮).

ಕನ್ನಡ ಕಾವ್ಯ

೧. ಚಂದ್ರಶೇಖರ, ಪಂಪಾಸ್ಥಾನ ವರ್ಣನಂ (ಸಂ. ಕೃಷ್ಣ ಜೋಯಿಸ್ ಎಸ್.ಎನ್., ಶರಣ ಗ್ರಂಥಮಾಲಾ, ೧೯೫೫).*      ಸಂಕಲನ ೨೪ ಸಂಚಿಕೆಯಿಂದ ಆಯ್ದ ಈ ಲೇಖನವನ್ನು ಲೇಖಕರ ಮತ್ತು ಸಂಪಾದಕರ ಅನುಮತಿ ಪಡೆದು ಪ್ರಕಟಿಸಲಾಗಿದೆ.