ಮೊದಲನೆಯ ರಾಜಾ ವೆಂಕಟನ ಮರಣಾನಂತರ ಕ್ರಿ.ಶ. ೧೬೧೪ರಲ್ಲಿ ಚಂದ್ರಗಿರಿಯಲ್ಲಿ ಜರುಗಿದ ಘಟನೆಗಳಿಗೆ ಸಂಬಂಧಿಸಿದ ಕೆಳಗಿನ ಟಿಪ್ಪಣಿ ಅತಿ ಸ್ವಾರಸ್ಯಕರವಾಗಿದೆ. ಏಕೆಂದರೆ, ಅದು ಇಂಗ್ಲೆಂಡಿನ ನಾವು ಇದುವರೆಗೆ ಸಂಪೂರ್ಣ ಅಜ್ಞಾನದಲ್ಲಿದ್ದ ಘಟನೆಗಳನ್ನು ಕುರಿತದ್ದಾಗಿದೆಯೆಂದು ನನ್ನ ಭಾವನೆ. ಅದು ಡಿಸೆಂಬರ ೧೨, ಕ್ರಿ.ಶ. ೧೬೧೬ರಂದು ಕೊಚಿನ್‌ದಲ್ಲಿ ಮ್ಯಾನುಎಲ್ ಬ್ಯಾರಡಸ್ ಬರೆದ ಪತ್ರದ ಅವತರಣಿಕೆಯನ್ನು ಹೊಂದಿದೆ. ಮತ್ತು ಲಿಸ್ಬನ್‌ನ ರಾಷ್ಟ್ರೀಯ ಪತ್ರಾಗಾರದಲ್ಲಿ ಸಂರಕ್ಷಿಸಿ ಇಡಲಾಗಿರುವ ಪತ್ರಗಳ ಕಂತೆಯಲ್ಲಿ ಸೆನ್ಹೊರ್ ಲೋಪ್ಸ್ ಇತ್ತೀಚೆಗೆ ಹುಡುಕಿ ತೆಗೆದಿದ್ದಾನೆ.

[1] ಅವನು ಅದನ್ನು ಮೂಲದಿಂದ ನಕಲು ಮಾಡಿ ದಯವಿಟ್ಟು ನನಗೆ ಕಳಿಸಿಕೊಟ್ಟ. ಅನುವಾದ ನನ್ನದೇ:

“ನಾನು ವೆಂಕಟಪತಿ ರಾಯಲು[2] ಎಂಬ ಬೀಸನಗರದ ಮುದಿ ರಾಜನ ಮರಣದ ಬಗೆಗೆ ಮತ್ತು ಸಾಮಾನ್ಯವಾಗಿ ಅವನ ಮಗನೆಂದು ನಂಬಿದ ಆದರೆ ನಿಜವಾಗಿ ಹಾಗಿರದ ಇನ್ನೊಬ್ಬನನ್ನು ಕೈಬಿಟ್ಟು ಚಿಕ್ಕರಾಯಲು ಎಂಬ ತನ್ನ ಭ್ರಾತ್ರೇಯನನ್ನು ತನ್ನ ಉತ್ತರಾಧಿಕಾರಿಯಾಗಿ ಅವನು ಆಯ್ಕೆ ಮಾಡಿದ ಬಗೆಗೆ ಹೇಳುವೆ. ನಿಜ ಸಂಗತಿ ಇಷ್ಟು. ರಾಜನ ಮದುವೆ ಬಾಯಮ್ಮ ಎಂಬ ಜಗರಾಯನ ಮಗಳೊಂದಿಗೆ ಆಗಿತ್ತು. ಅವಳು ಮಗನನ್ನು ಹೆರಲು ಹಾತೊರೆದರೂ ಮತ್ತು ಆ ಉದ್ದೇಶಕ್ಕಾಗಿ ಅವಳು ಯುಕ್ತಾಯುಕ್ತ ಹಂಚಿಕೆಗಳನ್ನು ಬಳಸಿದಾಗ್ಯೂ ಅವಳಿಗೆ ಮಗ ಜನಿಸಲಿಲ್ಲ. ರಾಣಿಯ ತಂದೆಯ ಕುಟುಂಬದ ಬ್ರಾಹ್ಮಣ ಸ್ತ್ರೀಯೊಬ್ಬಳು ಮಗನನ್ನು ಪಡೆಯಲು ರಾಣಿಯ ಹಂಬಲ ಎಷ್ಟು ಜೋರಾಗಿ ತ್ತೆಂಬುದನ್ನು ಮತ್ತು ದೇವರು ಅವಳಿಗೆ ಪುತ್ರದಾನ ಮಾಡಿರಲಿಲ್ಲವೆಂಬುದನ್ನು ತಿಳಿದು ತಾನು ಒಂದು ತಿಂಗಳ ಗರ್ಭಿಣಿಯೆಂದು ಹೇಳಿ ರಾಜನಿಗೆ ತಾನೇ (ರಾಣಿ) ಗರ್ಭಿಣಿಯಾಗಿರುವೆನೆಂದು ಹೇಳಬೇಕೆಂದೂ ಅದನ್ನು ಎಲ್ಲ ಕಡೆಗೆ ಪ್ರಚಾರ ಮಾಡಬೇಕೆಂದೂ ಆ ಸ್ಥಿತಿಯಲ್ಲಿರುವಂತೆ ನಟಿಸಬೇಕೆಂದೂ ತಾನು (ಬ್ರಾಹ್ಮಣ ಸ್ತ್ರೀ) ಜನ್ಮವಿತ್ತಾಗ ವಿಶ್ವಾಸಿಕನ ಮೂಲಕ ಕೂಸನ್ನು ಗೌಪ್ಯವಾಗಿ ಅರಮನೆಗೆ ಕಳಿಸಿದ ಕೂಡಲೆ ರಾಣಿ ಆ ಹುಡುಗ ತನ್ನ ಮಗನೇ ಎಂದು ಸಾರಬೇಕೆಂದೂ ಸೂಚಿಸಿದಳು. ಈ ಸಲಹೆ ರಾಣಿಗೆ ಒಳ್ಳೆಯದೆನಿಸಿ ಗರ್ಭಿಣಿಯಾಗಿರುವಂತೆ ಸೋಗು ಹಾಕಿದಳು ಮತ್ತು ಬ್ರಾಹ್ಮಣ ಸ್ತ್ರೀ ಮಗನಿಗೆ ಜನ್ಮವಿತ್ತ ಕೂಡಲೆ ಅವನನ್ನು ಅರಮನೆಗೆ ಕಳಿಸಿದಳು. ಮತ್ತು ರಾಣಿ ಬಾಯಮ್ಮ ಮಗನಿಗೆ ಜನ್ಮವಿತ್ತಳೆಂಬ ಸುದ್ದಿ ಹರಡಿತು. ಇದೆಲ್ಲ ಗೊತ್ತಿದ್ದರೂ ರಾಜ, ರಾಣಿಗಾಗಿ ತನಗಿದ್ದ ಪ್ರೀತಿಯಿಂದ ಮತ್ತು ವಿಷಯ ಬೆಳಕಿಗೆ ಬರಬಾರದೆಂದು ಮರೆಮಾಚಿದ ಮತ್ತು ಉತ್ಸವ ಏರ್ಪಡಿಸಿ ಸಿಂಹಾಸನದ ವಾರಸುದಾರನಿಗೆ ಯಾವಾಗಲೂ ನೀಡಲಾಗುತ್ತಿದ್ದ “ಚಿಕ್ಕರಾಯ”[3] ಎಂಬ ಹೆಸರನ್ನು ಹುಡುಗನಿಗೆ ಕೊಟ್ಟ. ಆದರೂ ಅವನನ್ನು ಎಂದೂ ತನ್ನ ಮಗನೆಂದು ಪರಿಗಣಿಸಲಿಲ್ಲ. ತದ್ವಿರುದ್ಧವಾಗಿ, ಅವನನ್ನು ಯಾವಾಗಲೂ ಚಾಂದಿಗ್ರಿಯ[4] ಅರಮನೆಯಲ್ಲಿ ಮುಚ್ಚಿಟ್ಟನಲ್ಲದೆ ತನ್ನ ವಿಶೇಷ ಅಪ್ಪಣೆಯಿಲ್ಲದೆ ಎಂದೂ ಅದರ ಹೊರಗೆ ಹೋಗಲು ಕೊಡಲಿಲ್ಲ. ಅವನು ರಾಣಿಯೊಂದಿಗೆ ಇದ್ದಾಗ ಮಾತ್ರ ಅಪ್ಪಣೆ  ನೀಡುತ್ತಿದ್ದ. ಅಲ್ಲದೇ, ಹುಡುಗ ಹದಿನಾಲ್ಕನೆಯ ವಯಸ್ಸು ತಲುಪಿದಾಗ ತನ್ನ ಭ್ರಾತ್ರೀಯಳೊಂದಿಗೆ ಮದುವೆ ಮಾಡಿದ. ತನ್ನ ಷಡ್ಡಕ ಓಬೊರಾಯ[5]ನನ್ನು ತೃಪ್ತಿಗೊಳಿಸಲೋಸುಗ ಹುಡುಗನಿಗೆ ಇಷ್ಟು ಗೌರವ ಮಾಡಿದ.

“ಮರಣಕ್ಕೆ ಮೂರು ದಿನ ಮುಂಚೆ ರಾಜ, ನಾನು ಹೇಳುವಂತೆ, ತನ್ನ ಮಗನೆಂಬ ಪ್ರತೀತಿಯಿದ್ದ ಮಗನನ್ನು ಕೈಬಿಟ್ಟು ಚಿಕ್ಕರಾಯನನ್ನು ತನ್ನ ರಾಜ್ಯದ ಹಲವಾರು ಮನ್ನೆಯರ ಸಮ್ಮುಖದಲ್ಲಿ ಕರೆ ಕಳಿಸಿದ, ಮತ್ತು ಅವನು ಅದನ್ನು ತೆಗೆದುಕೊಂಡು ರಾಜ್ಯದಲ್ಲಿ ತನ್ನ ಉತ್ತರಾಧಿಕಾರಿಯಾಗಬೇಕೆಂಬ ಉದ್ದೇಶದಿಂದ ರಾಜಮುದ್ರೆಯುಳ್ಳ ಉಂಗುರವಿರುವ ತನ್ನ ಬಲಗೈಯನ್ನು ಅವನ ಕಡೆಗೆ ಚಾಚುತ್ತ ಅವನ ಸಮೀಪಕ್ಕೆ ಹಿಡಿದ. ಇದರಿಂದ ಭ್ರಾತ್ರೇಯ ಕಣ್ಣೀರು ಸುರಿಸುತ್ತ ತನಗೆ ರಾಜನಾಗುವ ಇಷ್ಟವಿಲ್ಲವೆಂದೂ ಅದನ್ನು ಬೇಕಾದವರಿಗೆ ಕೊಡಬಹುದೆಂದೂ ರಾಜನಲ್ಲಿ ಬೇಡಿಕೊಂಡ, ಮತ್ತು ವೃದ್ಧನ ಪಾದದಲ್ಲಿ ಅಳುತ್ತ ಬಾಗಿದ. ರಾಜ ತನ್ನ ಸುತ್ತಲಿದ್ದವರಿಗೆ ರಾಜಕುಮಾರನನ್ನು  ಮೇಲೆತ್ತುವಂತೆ ಸಂಜ್ಞೆ ಮಾಡಿದ ಮತ್ತು ಅವರು ಹಾಗೆಯೆ ಮಾಡಿದರು; ಮತ್ತು ಆಗ ಅವರು ಅವನನ್ನು ರಾಜನ ಬಲಬದಿಗೆ ಇರಿಸಿದರು, ಮತ್ತು ಅವನು ಉಂಗುರವನ್ನು ತೆಗೆದುಕೊಳ್ಳುವಂತೆ ರಾಜ ತನ್ನ ಕೈ ಚಾಚಿದ. ಉಂಗುರ ಎಷ್ಟೊಂದು ಕೆಟ್ಟ ಅದೃಷ್ಟವನ್ನು ತರಬಹುದೆಂದು ಈಗಾಗಲೆ ಮುನ್ನರಿತಿದ್ದವನಂತೆ ರಾಜಕುಮಾರ ತನ್ನ ಕೈಗಳನ್ನು ತಲೆಯ ಮೇಲೆತ್ತಿದ ಮತ್ತು ಅದನ್ನು ತೆಗೆದುಕೊಳ್ಳದಿದ್ದರೆ ತನ್ನನ್ನು ಕ್ಷಮಿಸಬೇಕೆಂದು ರಾಜನನ್ನು ಬೇಡಿಕೊಂಡ. ಆಗ ವೃದ್ಧ ಉಂಗುರವನ್ನು ತೆಗೆದು ತನ್ನ ಬೆರಳ ತುದಿಯಲ್ಲಿ ಹಿಡಿದು ಇನ್ನೊಮ್ಮೆ ಚಿಕ್ಕರಾಯನಿಗೆ ನೀಡಿದನು. ಉಪಸ್ಥಿತರಿದ್ದ ಮುಖಂಡರ ಉಪದೇಶದಂತೆ ಅವನು ಅದನ್ನು ತೆಗೆದುಕೊಂಡು ಮೊದಲು ತಲೆಯ ಮೇಲೆ ನಂತರ ಬೆರಳ ಮೇಲೆ ಗಳಗಳ ಆಳುತ್ತ ಇಟ್ಟುಕೊಂಡ. ಆಗ ರಾಜ ೨೦೦,೦೦೦ ಕ್ರುಜೆಡೊ ಬೆಲೆಯುಳ್ಳ ರಾಜವಸ್ತ್ರ, ೬೦೦,೦೦೦ ಕ್ರುಜೆಡೊ ಬೆಲೆಯುಳ್ಳ ತನ್ನ ಕಿವಿಯಲ್ಲಿದ್ದ ವಜ್ರ ೨೦೦,೦೦೦ಕ್ಕೂ ಮಿಕ್ಕಿ ಬೆಲೆಯುಳ್ಳ ಶ್ರೇಷ್ಠ ಮುತ್ತುಗಳನ್ನು ತರಹೇಳಿದ. ಇವೆಲ್ಲ ಲಾಂಛನಗಳನ್ನು ಅವನು ತನ್ನ ಭ್ರಾತ್ರೇಯ ಚಿಕ್ಕರಾಯನಿಗೆ ತನ್ನ ಉತ್ತರಾಧಿಕಾರಿಯೆಂದು ಕೊಟ್ಟ ಮತ್ತು ಘೋಷಿಸಲಾಯಿತು. ಕೆಲವರು ಸಂತೋಷಪಟ್ಟರೆ ಇನ್ನಿತರರು ಅಸಂತುಷ್ಟ ರಾದರು.

“ಮೂರು ದಿನ ತರುವಾಯ ರಾಜ ೬೭ನೆಯ ವಯಸ್ಸಿನಲ್ಲಿ ಸತ್ತ. ಅವನ ದೇಹವನ್ನು ಅವನ ತೋಟದಲ್ಲಿಯೇ ಸುವಾಸನೆಯ ಕಟ್ಟಿಗೆ, ಗಂಧ, ಕತ್ತಾಳೆ ಮುಂತಾದವುಗಳಿಂದ ಸುಡಲಾಯಿತು; ಕೂಡಲೇ ಮೂವರು  ರಾಣಿಯರು ಅಗ್ನಿಗೆ ಅರ್ಪಣೆ ಮಾಡಿಕೊಂಡರು. ಅವರಲೊಬ್ಬಳು ರಾಜನಷ್ಟೆ ವಯಸ್ಸಿನವಳು, ಇನ್ನಿಬ್ಬರು ೩೫ ವಯಸ್ಸಿನವರು ಆಗಿದ್ದರು. ಅವರು ಬಹಳ ಧೈರ್ಯ ತೋರಿದರು. ಅವರು ಬೆಲೆಯುಳ್ಳ ಉಡುಪು, ಅನೇಕ ರತ್ನಗಳು, ಬಂಗಾರದ ಆಭರಣಗಳನ್ನು ಮತ್ತು ಅಮೂಲ್ಯ ಹರಳುಗಳನ್ನು ಧರಿಸಿ ನಡೆದರು. ಚಿತೆಗೆ ಬಂದು ಅವರು ಅವುಗಳನ್ನು ಹಂಚಿದರು. ಕೆಲವನ್ನು ತಮ್ಮ ಸಂಬಂಧಿಗಳಿಗೆ ಕೊಟ್ಟರು. ತಮ್ಮ ಸಲುವಾಗಿ ಪ್ರಾರ್ಥಿಸಲೋಸುಗ ಕೆಲವನ್ನು ಬ್ರಾಹ್ಮಣರಿಗೆ, ಜನರು ಕಚ್ಚಾಡಿ ತೆಗೆದುಕೊಳ್ಳಲು ಕೆಲವನ್ನು ಅವೆರೆಡೆ ಎಸೆದರು. ಆ ಮೇಲೆ ಅವರು ಎಲ್ಲರಿಗೂ ವಿದಾಯ ಹೇಳಿ ಎತ್ತರದ ಸ್ಥಾನವನ್ನೇರಿ ಬಹಳ ದೊಡ್ಡದಾಗಿದ್ದ ಬೆಂಕಿಯ ಮಧ್ಯದಲ್ಲಿ ಬಿದ್ದರು. ಹೀಗೆ ಅವರು ಅಮರರಾದರು”.

“ಆಮೇಲೆ ಆಳತೊಡಗಿದ ಹೊಸ ರಾಜ, ಕೆಲವು ದಳವಾಯಿಗಳನ್ನು ಕೋಟೆ ಬಿಡುವಂತೆ ಒತ್ತಾಯಿಸಿದ, ಆದರೆ ಇತರರನ್ನು ತನ್ನ ಹತ್ತಿರ ಇಟ್ಟುಕೊಂಡ: ಮತ್ತು  ಮೂವರನ್ನುಳಿದು ಎಲ್ಲರೂ ತಮ್ಮ ವಿಧೇಯತೆಯನ್ನು ತೋರಲು ಬಂದರು. ಆ ಮೂವರೆಂದರೆ, ೬೦೦ ಸಾವಿರ ಕ್ರುಜೆಡೊ ಆದಾಯವಿದ್ದ ಮತ್ತು ಯುದ್ಧಭೂಮಿಯಲ್ಲಿ ೨೦,೦೦೦ ಯೋಧರನ್ನು ವ್ಯವಸ್ಥೆಗೊಳಿಸುವ ಜಗರಾಯ; ೪೦೦ ಸಾವಿರ ಕ್ರುಜೆಡೊ ಆದಾಯವಿರುವ ಮತ್ತು ೧೨,೦೦೦ ಯೋಧರ ಸೈನ್ಯ ಹೊಂದಿರುವ ತಿಮಾನಾಯಿಕ್; ಮತ್ತು ೨೦೦ ಸಾವಿರ ಕ್ರುಜೆಡೊ ಆದಾಯವಿರುವ ಮತ್ತು ೬೦೦೦ ಯೋಧರನ್ನು ಒಟ್ಟುಗೂಡಿಸುವ ಮಾಕರಾಯ. ಅವರು ಹೊಸ ರಾಜನಿಗೆ ಎಂದೂ ಪ್ರಭುನಿಷ್ಠೆ ತೋರುವುದಿಲ್ಲವೆಂದೂ ಆದರೆ ಅವನ ಸ್ಥಾನದಲ್ಲಿ ಈ ಸಂಚಿನ ಪ್ರಮುಖನಾಗಿದ್ದ ಜಗರಾಯನ[6] ಭ್ರಾತ್ರೀಯನೂ ಮೃತ ರಾಜನ ಮಗನೆಂಬ ಪ್ರತೀತಿ ಹೊಂದಿದವನನ್ನು ನಿಲ್ಲಿಸುವುದಾಗಿ ಶಪಥಗೈದರು. ಕೆಲವು ದಿನಗಳಲ್ಲಿಯೆ ಕೆಳಕಂಡ ಅವಕಾಶ ಒದಗಿಬಂತು.

“ಹೊಸ ರಾಜ ತನ್ನ ಮೂವರು ಮನ್ನೆಯರನ್ನು ಅಸಂತುಷ್ಟಗೊಳಿಸಿದ. ಮೊದಲನೆಯವನು ಸೈನ್ಯದ ದಂಡನಾಯಕನಾಗಿದ್ದ ಹಾಗೂ ೫೦೦ ಸಾವಿರ ಕ್ರುಜೆಡೊ ಕಪ್ಪ ಕೊಡುತ್ತಿದ್ದ ದಳವಾಯಿ. ಏಕೆಂದರೆ, ರಾಜ ಅವನಿಗೆ ಮೂರು ಕೋಟೆಗಳನ್ನು ಬಿಡಹೇಳಿ ಅವುಗಳನ್ನು ತನ್ನ ಮಕ್ಕಳಿಗೆ ಕೊಡಬಯಸಿದ್ದ. ಎರಡನೆಯವನು ತನ್ನ ಮಂತ್ರಿ. ತನ್ನ ಕಕ್ಕ ವೃದ್ಧ ರಾಜನಿಂದ ಅವುಗಳನ್ನು ಕದ್ದಿರುವುದಾಗಿ ಆಪಾದಿಸಿ ೧೦೦ ಸಾವಿರ ಕ್ರುಜೆಡೊಗಳನ್ನು ಕೊಡುವಂತೆ ಮಂತ್ರಿಗೆ ಹೇಳಿದ. ಮೂರನೆಯವನು ನರ್ಪರಾಯ. ಏಕೆಂದರೆ, ವೃದ್ಧ ರಾಜನ ಹೆಂಡತಿಯಾಗಿದ್ದ ತನ್ನ ತಂಗಿ ನರ್ಪನಿಗೆ ಕೊಟ್ಟಿದ್ದ ರತ್ನಗಳನ್ನು ಬೇಡಿದ. ಈ ಮೂವರು ಎರಡು ದಿನಗಳಲ್ಲಿ ರಾಜನ ಆಜ್ಞೆ ಪಾಲಿಸುವುದಾಗಿ ಉತ್ತರಿಸಿದರು; ಆದರೆ, ಅವರು ಗುಪ್ತವಾಗಿ ಜಗರಾಯನೊಂದಿಗೆ ಸೇರಿ ಅವನ ಭ್ರಾತ್ರೀಯನನ್ನು ರಾಜನನ್ನಾಗಿ ಮಾಡುವ ಸಂಚು ಹೂಡಿದ್ದರು. ಮತ್ತು ಅವರು ಅದನ್ನು ಕೆಳಗಿನಂತೆ ಮಾಡಿದರು :

“ತಾನು ರಾಜನಿಗೆ ಪ್ರಭುನಿಷ್ಠೆ ವ್ಯಕ್ತಪಡಿಸಲು ಬಯಸಿರುವುದಾಗಿ ಜಗರಾಯ ರಾಜನಿಗೆ ಹೇಳಿ ಕಳಿಸಿದ, ಮತ್ತು ತಿಮಾನಾಯಿಕ್ ಮತ್ತು ಮಾಕರಾಯ ಕೂಡ ಹಾಗೆಯೇ ಮಾಡಿದರು. ಬಡಪಾಯಿ ರಾಜ ಅವರಿಗೆ ಪ್ರವೇಶಿಸಲು ಅನುಮತಿ ನೀಡಿದ. ಜಗರಾಯ ಐದು ಸಾವಿರ ಯೋಧರನ್ನು ಆಯ್ಕೆ ಮಾಡಿದ ಮತ್ತು ಮಿಕ್ಕವರನ್ನು ನಗರದ ಹೊರಗೆ ಬಿಟ್ಟು ಈ ಆಯ್ದ ಅನುಯಾಯಿಗಳೊಂದಿಗೆ ಕೋಟೆಯನ್ನು ಪ್ರವೇಶಿಸಿದ. ಉಳಿದಿಬ್ಬರು ಪಿತೂರಿಗಾರರೂ ಹಾಗೆಯೆ ಮಾಡಿದರು. ಪ್ರತಿಯೊಬ್ಬನೂ ತನ್ನೊಂದಿಗೆ ಆಯ್ದ ಎರಡು ಸಾವಿರ ಯೋಧರನ್ನು ತಂದಿದ್ದ. ಕೋಟೆಗೆ ಎರಡು ಗೋಡೆಗಳಿವೆ. ಅವುಗಳನ್ನು ತಲುಪಿ ಜಗರಾಯ ಮೊದಲ ದ್ವಾರದ ಬಳಿ ಸಾವಿರ, ಎರಡನೆಯ ದ್ವಾರದ ಬಳಿ ಸಾವಿರ ಜನರನ್ನು ಇರಿಸಿದ. ದಳವಾಯಿ ಆ ಬದಿಗಿದ್ದ ಇನ್ನೆರಡು ದ್ವಾರಗಳನ್ನು ಹಿಡಿದುಕೊಂಡ. ಸ್ವಲ್ಪ ಕೋಲಾಹಲ ಮತ್ತು ರಾಜದ್ರೋಹದ ಕೂಗೆದ್ದುದರಿಂದ ರಾಜ ಅರಮನೆಯ ದ್ವಾರಗಳನ್ನು ಮುಚ್ಚಲು ಆಜ್ಞೆಯಿತ್ತ, ಆದರೆ ಪಿತೂರಿಗಾರರು ಅವುಗಳನ್ನು ತಲುಪಿದೊಡನೆ ಅವುಗಳನ್ನು ಒಡೆಯಲುದ್ಯುಕ್ತರಾದರು. ಮೊದಲಿಗೆ ಯಶಸ್ವಿಯಾದ ಮಾಕರಾಯ ರಾಜನನ್ನು ಅವರಿಗೆ ತಂದುಕೊಡುವುದಾಗಿ ಕೂಗಿದನು. ಶರಣಾಗತನಾದರೆ ಅವನಿಗೆ ಏನೂ ಅಪಾಯ ಮಾಡುವುದಿಲ್ಲೆಂಬ ವಚನವೀ ಯುವುದಾಗಿ, ಆದರೆ ಮೃತ ರಾಜನ ಮಗನಾದ ಜಗರಾಯನ ಭ್ರಾತ್ರೀಯ ರಾಜನಾಗ ಬೇಕೆಂದು, ರಾಜನಿಗೆ ಸಂದೇಶ ಕಳಿಸಿ ಅವನು ದ್ವಾರ ಒಡೆಯಲುದ್ಯುಕ್ತನಾದ.

“ಸುತ್ತುಗಟ್ಟಲ್ಪಟ್ಟಿದ್ದ ಬಡಪಾಯಿ ರಾಜ ಅನುಯಾಯಿಗಳಿಲ್ಲದುದನ್ನು ಮತ್ತು ಯಾವ ಉಪಾಯವಿಲ್ಲದುದನ್ನು ಕಂಡು ವಚನವನ್ನು ಸ್ವೀಕರಿಸಿದ ಮತ್ತು ತನ್ನ ಹೆಂಡತಿ ಮಕ್ಕಳೊಂದಿಗೆ ಆತನು ವಾಸಿಸುತ್ತಿದ್ದ ಗೋಪುರದಿಂದ ಹೊರಟ. ಅವನು ಯೋಧರ ಮಧ್ಯದೊಳಗಿಂದ ಗಂಭೀರ ಮುಖ ಹೊತ್ತು ನೆಲದ ಮೇಲೆ ದೃಷ್ಟಿಯಿಟ್ಟು ಸಾಗಿದ. ಯಾರೂ (ಪದ್ಧತಿಯಂತೆ) ತಲೆಯ ಮೇಲೆ ಕೈಜೋಡಿಸಿ ಅವನಿಗೆ ಗೌರವ ತೋರಲಿಲ್ಲ. ಅವನೂ ಯಾರಿಗೂ ವಂದಿಸಲಿಲ್ಲ.

“ರಾಜ ಹೋದಮೇಲೆ ಜಗರಾಯ ತನ್ನ ಭ್ರಾತ್ರೀಯನನ್ನು ಕರೆದು ಅವನಿಗೆ ಪಟ್ಟಕಟ್ಟಿ ಉಪಸ್ಥಿತರಿದ್ದ ಎಲ್ಲ ಮನ್ನೆಯರೂ ಅವನಿಗೆ ಪ್ರಭುನಿಷ್ಠೆ ತೋರುವಂತೆ ಮಾಡಿದ; ಅವನು ಈಗ ಅಭಿಷಿಕ್ತ ರಾಜನಾದುದರಿಂದ ಅರಮನೆಯನ್ನು ಪ್ರವೇಶಿಸಿ ಅದನ್ನು ಮತ್ತು ಅದರಲ್ಲಿದ್ದ ಎಲ್ಲ ದ್ರವ್ಯ ಹಾಗೂ ಅಮೂಲ್ಯ ಹರಳುಗಳನ್ನು ವಶಕ್ಕೆ ತೆಗೆದುಕೊಂಡ. ವರದಿ ನಿಜವಿದ್ದುದಾದರೆ, ವಜ್ರಗಳಲ್ಲೆ ಅವನಿಗೆ ಅತ್ಯುತ್ಕೃಷ್ಟ ಹರಳುಗಳಿಂದ ತುಂಬಿದ ಮೂರು ದೊಡ್ಡ ಪೆಟ್ಟಿಗೆಗಳು ದೊರೆತವು. ಇದಾದ ನಂತರ (ಜಗರಾಯ) ಪದಚ್ಯುತ ರಾಜನನ್ನು ಅತ್ಯಂತ ಕಠಿಣ ಕಾವಲಿನಲ್ಲಿಟ್ಟ. ಮತ್ತು ಅವನನ್ನು ಎಂಟು ಸಾವಿರ ಯೋಧರೊಂದಿಗೆ ಕೋಟೆಯ ಹೊರಗಡೆ ನಿಂತ ಮತ್ತು ಜಗರಾಯನೊಂದಿಗೆ ಕೂಡಬಯಸದ ಎಚಮನಾಯಿಕ್ ಎಂಬ ಹೆಸರಿನ ಒಬ್ಬನೇ ಒಬ್ಬ ದಳಪತಿಯನ್ನುಳಿದು ಎಲ್ಲರೂ ತೊರೆದರು. ನಿಜವಾಗಿಯೂ, ರಾಜದ್ರೋಹದ ಬಗೆಗೆ ಕೇಳಿ ಅವನು ತನ್ನ ಪಾಳೆಯ ಕಿತ್ತು ತನ್ನ ಕೋಟೆಯಲ್ಲಿಯೆ ಮುಚ್ಚಿ ಕುಳಿತು ಅಧಿಕ ಸೈನ್ಯ ಸಂಗ್ರಹಿಸಲಾರಂಭಿಸಿದ.”

“ಬಂದು ತನ್ನ ಭ್ರಾತ್ರೀಯನಿಗೆ ಪ್ರಭುನಿಷ್ಠೆ ತೋರುವಂತೆ ಮತ್ತು ಹಾಗೆ ಮಾಡಲು ನಿರಾಕರಿಸಿದರೆ ತಾನು ಅವನನ್ನು ನಾಶಪಡಿಸುವುದಾಗಿಯೂ ಜಗರಾಯ ಈ ಮನುಷ್ಯನಿಗೆ ಸಂದೇಶ ಕಳಿಸಿದ. ಯಾರ ಮಗನೆಂದು ಮತ್ತು ಅವನ ಜಾತಿ ಯಾವುದೆಂದು ಯಾರಿಗೂ ಗೊತ್ತಿರದ ಹುಡುಗನಿಗೆ ಗೌರವ ತೋರಿಸುವವನು ತಾನಲ್ಲವೆಂದು ಎಚಮನಾಯಿಕ್ ಉತ್ತರ ಕೊಟ್ಟ; ಮತ್ತು ತನ್ನನ್ನು ನಾಶಪಡಿಸುವ ಬಗೆಗಾದರೂ ಜಗರಾಯ ಹೊರಬಂದು ತನ್ನನ್ನು ಎದುರಿಸುವನೆ? ಹಾಗಿದ್ದರೆ, ತಾನು ತನ್ನಲ್ಲಿರುವ ಯೋಧರೊಂದಿಗೆ ಅವನಿಗಾಗಿ ಕಾಯುವೆ”.

ಈ ಉತ್ತರ ಬಂದ ಮೇಲೆ ಜಗರಾಯ ಸಾವಿರ ಸವಿಮಾತು ಹೇಳಿದ ಮತ್ತು ಮರ್ಯಾದೆ ಮತ್ತು ಆದಾಯಗಳ ಭರವಸೆಯಿತ್ತ. ಆದರೆ ಯಾವುದೂ ಅವನನ್ನು ಬದಲಿಸಲಿಲ್ಲ. ಅಷ್ಟೇ ಏಕೆ, ಎಚಮ ತನ್ನ ಬಲಗಳೊಂದಿಗೆ ರಣರಂಗಕ್ಕಿಳಿದು ಜಗರಾಯನನ್ನು ಯುದ್ಧಕ್ಕೆ ಆಹ್ವಾನಿಸಿದ; ಅವನ ಬಳಿ ದಳಪತಿಗಳಿದ್ದುದರಿಂದ ಅವನು ಹೊರಬಂದು ಯುದ್ಧ ಮಾಡಿ ಸಾಧ್ಯವಿದ್ದರೆ ತನ್ನನ್ನು ಸೋಲಿಸಲಿ ಮತ್ತು ಹಾಗಾದರೆ ಅವನ ಭ್ರಾತ್ರೀಯ ಅವಿರೋಧವಾಗಿ ರಾಜನಾಗುವನು ಎಂದು ಹೇಳಿದ. ಕೊನೆಗೆ ಜಗರಾಯ ಎಚಮನಾಯಿಕ್‌ನ ನಿಷ್ಠೆ ದೊರಕಿಸಿಕೊಳ್ಳುವ ಆಸೆ ಬಿಟ್ಟ. ಆದರೆ ಕಾಣಿಕೆ ಮತ್ತು ಭರವಸೆಗಳಿಂದ ಮನ್ನೆಯರನ್ನು ಒಲಿಸಿಕೊಂಡ.

“ಜಗರಾಯ ಹೀಗೆ ನಿರತನಾಗಿರುವಾಗ ಎಚಮನಾಯಿಕ್ ಒಂದಿಲ್ಲೊಂದು ರೀತಿಯಲ್ಲಿ ಬಂಧಿತ ರಾಜನಿದ್ದಲ್ಲಿಗೆ ಪ್ರವೇಶ ದೊರಕಿಸಲೆತ್ನಿಸುತ್ತಿದ್ದ. ಅದು ಸಾಧ್ಯವಾಗದೆ ಅವನು ಕೊನೆಯ ಪಕ್ಷ ಅವನ ಮಕ್ಕಳಲ್ಲೊಬ್ಬನನ್ನಾದರೂ ಪಡೆಯುವ ಉಪಾಯ ಮಾಡಿದ. ಅವನು ಅದನ್ನು ಈ ರೀತಿ ಮಾಡಿದ. ಬಂಧಿತ ರಾಜನ ಬಟ್ಟೆ ಒಗೆಯುವ ಅಗಸನನ್ನು ಕರೆಕಳಿಸಿ ರಾಜನ ನಡುವಿನ ಮಗನನ್ನು ತಂದುಕೊಟ್ಟರೆ ದೊಡ್ಡ ವಸ್ತುಗಳ ಆಸೆ ತೋರಿದ. ವಿಷಯವನ್ನು ಗೋಪ್ಯವಾಗಿಡುವುದಾದರೆ ಹಾಗೆ ಮಾಡುವುದಾಗಿ ಅಗಸ ಮಾತು ಕೊಟ್ಟ. ರಾಜನಿಗೆ ಒಗೆದ ಬಟ್ಟೆಗಳನ್ನು ಒಯ್ಯುವ ದಿನ ಬಂದಾಗ ಅವನು ಅವುಗಳನ್ನು (ಸೆರೆಮನೆಯೊಳಗೆ) ಮತ್ತು ಅವುಗಳೊಂದಿಗೆ ಎಚಮನಾಯಿಕ್‌ನಿಂದ ತಾಳೆಗರಿ ಪತ್ರವನ್ನು ಒಯ್ದ. ಅದರಲ್ಲಿ ಅವನು ತನ್ನೊಂದಿಗಿದ್ದ ಮೂರು ಮಕ್ಕಳಲ್ಲಿ ಒಬ್ಬನನ್ನಾದರೂ ಕಳಿಸಿಕೊಡುವಂತೆಯೂ ಅಗಸನು ಅವನ ಬಿಡುಗಡೆಯನ್ನು ಕಾರ್ಯಗತಗೊಳಿಸುವ ಭರವಸೆಯನ್ನು ತಾನು ನೀಡುವುದಾಗಿಯೂ ರಾಜನಲ್ಲಿ ದೈನ್ಯದಿಂದ ಬೇಡಿಕೊಂಡ. ರಾಜ ಹನ್ನೆರಡು ವರ್ಷದ ತನ್ನ ಎರಡನೆಯ ಮಗನನ್ನು ಬಿಟ್ಟುಕೊಟ್ಟು ಹಾಗೆ ಮಾಡಿದ, ಏಕೆಂದರೆ ಹದಿನೆಂಟು ವರ್ಷದ ಹಿರಿಯ ಮಗನನ್ನು ಅಗಸ ಒಯ್ಯುವ ಧೈರ್ಯ ಮಾಡಲಿಲ್ಲ. ಅವನು ಹುಡುಗನನ್ನು ಒಪ್ಪಿಸಿ ಹೊಲಸು ಬಟ್ಟೆಗಳಲ್ಲಿಡುತ್ತ ಏನೂ ಹೆದರಬೇಡ ಮತ್ತು ಯಾವುದೆ ನೋವು ಉಂಟಾದರೂ ಅಳಬಾರದೆಂಬ ಎಚ್ಚರಿಕೆ ನೀಡಿದ. ರಕ್ಷಕರನ್ನು ಹೆಚ್ಚು ಸುರಕ್ಷಿತವಾಗಿ ಹಾಯ್ದು ಹೋಗಲೋಸುಗ ಅಗಸ ಎಲ್ಲಕ್ಕೂ ಮೇಲೆ ಎಲ್ಲರೂ ದೂರ ಸರಿಯುವಂಥ ಹೊಲಸು ಬಟ್ಟೆಗಳನ್ನಿಟ್ಟ; ಮತ್ತು “ತಲ್ಲಾ! ತಲ್ಲಾ!” ಎಂದರೆ “ದೂರ ಸರಿಯಿರಿ! ದೂರ ಸರಿಯಿರಿ!” ಎಂದು ಕೂಗುತ್ತ ಹೊರಕ್ಕೆ ನಡೆದ. ಆದುದರಿಂದ, ಎಲ್ಲರೂ ಅವನಿಗೆ ದಾರಿ ಬಿಟ್ಟರು ಮತ್ತು ಅವನು ದುರ್ಗದಿಂದ ತನ್ನ ಮನೆಗೆ ಬಂದ. ಅಲ್ಲಿ ಅವನು ರಾಜಕುಮಾರನ್ನು ಮೂರು ದಿನ ಬಚ್ಚಿಟ್ಟು ಮತ್ತು ಅವುಗಳ ಕೊನೆಗೆ ಅವನನ್ನು ಎಚಮನಾಯಿಕ್‌ನಿಗೆ ಒಪ್ಪಿಸಿದನು. ಎಚಮನ ಬಿಡಾರ ನಗರದಿಂದ ಒಂದು ಹರದಾರಿ ದೂರವಿತ್ತು ಮತ್ತು ಹುಡುಗನನ್ನು ಆ ಪಾಳೆಯಗಾರ ಮತ್ತು ಅವನ ಎಲ್ಲ ಸೈನ್ಯ ಬಹಳ ಸಂತೋಷ ಸಂಭ್ರಮ ಗಳಿಂದ ಬರಮಾಡಿಕೊಂಡರು”.

“ಈ ಸುದ್ದಿ ಹೊರಗೆಲ್ಲ ಹರಡಿ ಜಗರಾಯನ ಕಿವಿ ತಲುಪಲಾಗಿ ಅವನು ಅರಮನೆಯನ್ನು ಶೋಧಿಸಲು ಆಜ್ಞಾಪಿಸಲಾಗಿ ಅದು ನಿಜವೆಂದು ಕಂಡುಬಂತು. ಅವನ ಮನಸ್ಸು ಎಷ್ಟೊಂದು ಕಲಕಿತೆಂದರೆ ಅವನು ಹಲವಾರು ದಿನ ಮನೆ ಬಿಟ್ಟು ಕದಲಲಿಲ್ಲ; ಅವನು ತನ್ನ ಬಂಧಿಯಾಗಿದ್ದ ರಾಜನ ರಕ್ಷಕ ದಳವನ್ನು ಇಮ್ಮಡಿಗೊಳಿಸಿದ, ದ್ವಾರಗಳನ್ನು ಮುಚ್ಚಿಸಿದ ಮತ್ತು ಯಾರೂ ರಾಜನಿಗೆ ಅನ್ನ ಮತ್ತು ಒರಟು ಕಾಯಿಪಲ್ಯೆ ಬಿಟ್ಟು ತಿನ್ನಲು ಬೇರೇನನ್ನೂ ಕೊಡಕೂಡದೆಂದು ಆಜ್ಞಾಪಿಸಿದ.”[7]

ಎಚಮನಾಯಿಕ್‌ನ ಹತ್ತಿರ ರಾಜನ ಮಗ ಇರುವುದು ಗೊತ್ತಾದ ತಕ್ಷಣ ಜಗರಾಯನ ನಾಲ್ವರು ದಳವಾಯಿಗಳು ಎಂಟು ಸಾವಿರ ಯೋಧರೊಂದಿಗೆ ಅವನ ಪಕ್ಷ ಸೇರಿದರು; ಅದರಿಂದ ಅವನಲ್ಲಿ ಒಟ್ಟು ಹದಿನಾರು ಸಾವಿರ ಯೋಧರಾದರು ಮತ್ತು ಈಗ ನ್ಯಾಯವಾದ ರಾಜನನ್ನು ರಕ್ಷಿಸುವ ಒಳ್ಳೆಯ ಭರವಸೆ ಮೂಡಿತು. ಆದುದರಿಂದ, ಅವನು ರಾಜನನ್ನು ಪಾರು ಮಾಡಲು ಪರಿಣಾಮಕಾರಿ ಕ್ರಮ ಕೈಕೊಂಡ. ತನ್ನೆಲ್ಲ ಸೈನಿಕರಲ್ಲಿ ರಾಜ ಬಂಧೀಖಾನೆಯಲ್ಲಿರುವ ಜಾಗದವರೆಗೆ ಸುರಂಗ ಮಾರ್ಗವನ್ನು ತೋಡಲೆತ್ನಿಸುವ ಭರವಸೆ ನೀಡಿದ. ಇಪ್ಪತ್ತು ಮಂದಿಯನ್ನು ಆರಿಸಿದ. ಈ ನಿರ್ಧಾರ ಈಡೇರಿಸಲು ಅವರು ದುರ್ಗಕ್ಕೆ ಹೋಗಿ ತಾವು ಅವನ ಸೇನೆ ಸೇರಬಯಸಿರುವುದಾಗಿ ದಳವಾಯಿಗೆ ನಿವೇದಿಸಿ, ಸಂಬಳ ಸ್ವೀಕರಿಸಿದರು. ಮತ್ತು ಕೆಲದಿನಗಳ ನಂತರ ರಾಜನ ಬಂಧೀಖಾನೆಗೆ ಪ್ರವೇಶ ದೊರಕಿಸುವ ಸುರಂಗ ಮಾರ್ಗ ಅಗೆಯತೊಡಗಿದರು. ತನ್ನ ಕೊಠಡಿಯನ್ನು ಸೈನಿಕರು ಹೀಗೆ ಪ್ರವೇಶಿ ಸುವುದನ್ನು ಕಂಡು ರಾಜ ಆಶ್ಚರ್ಯಚಕಿತನಾದ ಮತ್ತು ಅವರು ತನ್ನ ಮುಂದೆ ಸಾಷ್ಟಾಂಗ ಹಾಕಿ ಎಚಮನಾಯಿಕ್‌ನ ತಾಳೆಗರಿ ಓಲೆಯನ್ನು ಕೊಟ್ಟಾಗ ಇನ್ನೂ ಚಕಿತನಾದ. ಅದರಲ್ಲಿ ರಾಜನು ಈ ಜನರನ್ನು ನಂಬಬೇಕೆಂದೂ ಅವರು ಅವನನ್ನು ದುರ್ಗದ ಹೊರಗೆ ಕರೆತರುವುದಾಗಿಯೂ ಅರಿಕೆ ಮಾಡಿಕೊಳ್ಳಲಾಗಿತ್ತು. ರಾಜ ಸಮ್ಮತಿಸಿದ. ಅವನು ಲಗುಬಗೆಯಿಂದ ತನ್ನ ವಸ್ತ್ರಗಳನ್ನೆಲ್ಲ ಕಳಚಿ ಒಂದೇ ಒಂದು ಬಟ್ಟೆ ಹೊದ್ದುಕೊಂಡ; ತನ್ನ ಮಡದಿ ಪುತ್ರ ಪುತ್ರಿಯರಿಗೆ ವಿದಾಯ ಹೇಳುತ್ತ ತಾನು ಸ್ವತಂತ್ರನಾದಾಗ ಅವರೆಲ್ಲರನ್ನೂ ಬಿಡುಗಡೆ ಮಾಡಲಿರುವುದರಿಂದ ಭಯಪಡುವ ಕಾರಣವಿಲ್ಲವೆಂದೂ ತಿಳಿಸಿದ.”

“ಆದರೆ ಸರಿಯಾಗಿ ಇದೇ ಕ್ಷಣಕ್ಕೆ ಆದುದೇನೆಂದರೆ ರಾತ್ರಿ ಪಂಜು ಹಿಡಿದು ಅರಮನೆಯ ಕಾವಲು ಮಾಡುತ್ತಿದ್ದ ಸೈನಿಕರಲ್ಲೊಬ್ಬ ಗುಂಡಿಯಲ್ಲಿ ಬಿದ್ದ. ಅವನ ಕೂಗು ಕೇಳಿ ಇತರರು ಓಡಿಬಂದರು ಮತ್ತು ಅಗೆಯಲಾಗಿ ಅವರು ನೆಲ ಮಾರ್ಗವನ್ನು ಕಂಡುಹಿಡಿದರು. ಅವರು ಅದನ್ನು ಪ್ರವೇಶಿಸಿ ಅರಮನೆಯವರೆಗೆ ಬಂದರು. ನತದೃಷ್ಟ ರಾಜ ಪಾರಾಗಲು ಅದರಲ್ಲಿಳಿಯುತ್ತಿದ್ದ ಸಮಯಕ್ಕೆ ಅಲ್ಲಿಗೆ ತಲುಪಿದರು. ಅವನನ್ನು ಸೆರೆಹಿಡಿಯಲಾಯಿತು. ಮತ್ತು ಜಗರಾಯನಿಗೆ ಅಪಾಯದ ಸೂಚನೆ ಕೊಡಲಾಗಿ ಅವನು ರಾಜನನ್ನು ಅಧಿಕ ಕಾವಲುಗಾರರೊಂದಿಗೆ ಇನ್ನೂ ಒಳಗಿರುವ ಚಿಕ್ಕದಾಗಿರುವ ಕೋಣೆಗೆ ಕಳಿಸಿದ. ಹೀಗಾಗಿ ಬಡಪಾಯಿ ಬಂಧಿ ಪಾರಾಗುವ ಆಸೆ ಬಿಟ್ಟ”.

“ಈ ಯುಕ್ತಿ ಫಲಿಸದಿದ್ದುದನ್ನು ನೋಡಿ ಎಚಮನಾಯಿಕ್ ದುರ್ಗದಲ್ಲಿದ್ದ ಐನೂರು ಯೋಧರ ದಳವಾಯಿಗೆ ಒಳ್ಳೆಯ ಅವಕಾಶ ಸಿಗುತ್ತಲೆ ಕಾವಲುಗಾರರನ್ನು ಕೊಂದು ರಾಜನನ್ನು ಪಾರು ಮಾಡಲು ಲಂಚ ಕೊಟ್ಟ. ಇತಿಯೊಬ್ಲೆಜಾ[8] ಎಂಬ ಹೆಸರುಳ್ಳ ಈತ ಒಂದು ದಿನ ಶರಣಾಗತನಾದ ಪಾಳೆಯಗಾರನೊಬ್ಬನನ್ನು ಬರಮಾಡಿಕೊಳ್ಳಲೋಸುಗ ಜಗರಾಯ ತನ್ನ ಎಲ್ಲ ಸೈನಿಕರೊಂದಿಗೆ ಅರಮನೆಯಿಂದ ಹೋದುದನ್ನು ಮತ್ತು ದುರ್ಗದಲ್ಲಿ ಸುಮಾರು ಐದು ಸಾವಿರ ಜನ ಇದ್ದುದನ್ನು ಕಂಡು ಒಂದು ತಾಸಿನೊಳಗೆ ಕಾವಲುಗಾರರನ್ನು ಕೊಂದು ಮೂರು ದ್ವಾರಗಳನ್ನು ವಶಪಡಿಸಿಕೊಂಡು ಕೂಡಲೆ ಬಂದು ದುರ್ಗ ವಶಪಡಿಸಿಕೊಳ್ಳಲು ಎಚಮನಾಯಿಕ್‌ನಿಗೆ ಹೇಳಿಕಳಿಸಿದ. ಆದರೆ ಜಗರಾಯ ಹೆಚ್ಚು ಜಾಗ್ರತೆಯಾಗಿದ್ದ; ಅವನು ತನ್ನ ಎಲ್ಲ ಬಲಗಳೊಂದಿಗೆ ವಾಪಸು ಬಂದು ಇತಿಯೊಬ್ಲೆಜಾನಿಗೆ ಗೊತ್ತಿರದ ದಿಡ್ಡೀಬಾಗಿನಿಂದ ಪ್ರವೇಶಿಸಿ ದಳವಾಯಿ ಮತ್ತು ಅವನ ಐದುನೂರು ಅನುಯಾಯಿಗಳನ್ನು ಕೊಂದ.

“ಈ ಪ್ರಯತ್ನದಿಂದ ಕ್ರುದ್ಧನಾದ ಜಗರಾಯ ತನ್ನ ಭ್ರಾತ್ರೇಯನ ಪಕ್ಷ ಬಲಪಡಿಸಲು ರಾಜನನ್ನು ಮತ್ತು ಅವನ ಎಲ್ಲ ಕುಟುಂಬವನ್ನು ಕೊಲ್ಲಲು ನಿರ್ಧರಿಸಿದ. ಅವನು ಈ ಕೆಲಸವನ್ನು ಚಿನಾಒಬ್ರಾಯ[9] ಎಂಬ ತನ್ನ ತಮ್ಮನಿಗೆ ಒಪ್ಪಿಸಿ ಅರಮನೆಗೆ ಹೋಗಿ ತನ್ನನ್ನು ತಾನೆ ಕೊಂದುಕೊಳ್ಳಬೇಕೆಂದೂ ಇಲ್ಲದಿದ್ದರೆ ತಾನು ಅವನನ್ನು ತನ್ನ ಕಠಾರಿಯಿಂದ ಇರಿದು ಕೊಲ್ಲುವುದಾಗಿಯೂ ನತದೃಷ್ಟ ರಾಜನಿಗೆ ಹೇಳುವಂತೆ ಆಜ್ಞಾಪಿಸಿದ.

“ತನಗೆ ಪ್ರಯತ್ನಿಸಿದ ಬಂಡಾಯ ಏನೂ ತಿಳಿಯದೆಂದು ಬಂದಿ ತಾನು ತಪ್ಪಿಸಿಕೊಳ್ಳಲೆತ್ನಿಸಿದ. ಆದರೆ ತನ್ನ ಕೈಯಿಂದಲೆ ಆಗಲಿ ಇಲ್ಲವೆ ಇನ್ನೊಬ್ಬರ ಕೈಲಾಗಲಿ ತಾನು ಸಾಯಲೇಬೇಕೆಂದು – ಅತ್ಯಂತ ಕರುಣಾಜನಕ ಮತ್ತು ನಾನು ಅತ್ಯಂತ ದುಃಖದಿಂದ ಹೇಳುತ್ತಿರುವ ವಿಷಯ! – ಹೇಳಿದ ಚಿನಾಒಬ್ರಾಯನ ನಿರ್ಧಾರ ನೋಡಿ ರಾಜ ತನ್ನ ಹೆಂಡತಿಯನ್ನು ಕರೆದು ಸ್ವಲ್ಪ ಮಾತಾಡಿದ ನಂತರ ಅವಳ ತಲೆ ಕತ್ತರಿಸಿದ. ಆ ಮೇಲೆ ಕಡೆಯ ಮಗನನ್ನು ಕರೆಕಳಿಸಿ ಅವನಿಗೂ ಹಾಗೆಯೆ ಮಾಡಿದ. ತನ್ನ ಚಿಕ್ಕ ಮಗಳನ್ನೂ ಅದೇ ರೀತಿ ಕೊಂದ. ತರುವಾಯ ಅವನು ಆಗಲೆ ವಿವಾಹಿತನಾಗಿದ್ದ ತನ್ನ ಮೊದಲ ಮಗನನ್ನು ಕರೆಕಳಿಸಿ ತನ್ನ ಹೆಂಡತಿಯನ್ನು ಕೊಲ್ಲುವಂತೆ ಆಜ್ಞಾಪಿಸಲಾಗಿ ಅವನು ಅವಳ ತಲೆ ಕತ್ತರಿಸಿ ಹಾಗೆ ಮಾಡಿದ. ಇದಾದ ಮೇಲೆ ನಾಲ್ಕು ಬೆರಳು ಅಗಲದ ಉದ್ದ ಕತ್ತಿ ತೆಗೆದುಕೊಂಡು ಅದರ ಮೇಲೆ ಬಿದ್ದು ಕೊನೆಯುಸಿರೆಳೆದ. ಮತ್ತು ಸಿಂಹಾಸನದ ವಾರಸುದಾರನಾಗಿದ್ದ ಅವನ ಮಗನೂ ತನ್ನ ತಂದೆಯನ್ನು ಅನುಕರಿಸಿ ತನಗೂ ಹಾಗೆಯೇ ಮಾಡಿಕೊಂಡ. ರಾಜ ಕೊಲ್ಲಲು ಮನಸ್ಸಾಗದ ಒಬ್ಬ ಚಿಕ್ಕ ಮಗಳು ಮಾತ್ರ ಉಳಿದಳು; ಆದರೆ, ರಾಜರಕ್ತದ ಕುಟುಂಬದವರಾರೂ ಉಳಿಯಬಾರದು ಮತ್ತು ಸಿಂಹಾಸನ ತನ್ನ ಭ್ರಾತ್ರೇಯನಿಗೆ ಸುರಕ್ಷಿತವಾಗಬೇಕು ಎಂಬ ಉದ್ದೇಶದಿಂದ  ಚಿನಾಒಬ್ರಾಯ ಅವಳನ್ನು ಕೊಂದ.

“ಈ ಘೋರ ಕೃತ್ಯದಿಂದ ಕೆಲವು ಪಾಳೆಯಗಾರರು ಜುಗುಪ್ಸೆಗೊಂಡರು ಮತ್ತು ಅದರ ಕ್ರೂರತನದಿಂದ ರೊಚ್ಚಿಗೆದ್ದು ಎಚಮನಾಯಿಕ್‌ನ ಪಕ್ಷ ಸೇರಿ ಅಗಸ ಪಾರು ಮಾಡಿದ್ದ ಮತ್ತು ರಾಜಮನೆತನದ ಉಳಿದಿದ್ದ ಒಬ್ಬನೇ ರಾಜಕುಮಾರನ್ನು ರಕ್ಷಿಸಲು ನಿರ್ಧರಿಸಿದರು. ಈ ಲಜ್ಜಾಸ್ಪದ ಅಮಾನುಷತೆಯಿಂದ ಕೆರಳಿದ ಮತ್ತು ತನ್ನ ಧ್ಯೇಯ ನ್ಯಾಯವಾದುದೆಂಬ ವಿಶ್ವಾಸ ತಾಳಿದ ಎಚಮನಾಯಿಕ್ ತನ್ನ ಅತ್ಯುತ್ತಮ ಹತ್ತು ಸಾವಿರ ಸೈನಿಕರನ್ನು ಆಯ್ದು ಅರವತ್ತು ಸಾವಿರಕ್ಕಿಂತ ಹೆಚ್ಚು ಯೋಧರು ಮತ್ತು ಆನೇಕ ಆನೆ ಕುದುರೆಗಳಿದ್ದ ಜಗರಾಯನಿಗೆ ಕಾಳಗದ ಕರೆಕೊಟ್ಟ. ಎಚಮ ಅವನಿಗೆ ಈ ರೀತಿಯಲ್ಲಿ ಸಂದೇಶ ಕಳಿಸಿದ – “ಈಗ ನೀನು ನಿನ್ನ ರಾಜ ಮತ್ತು ಅವನ ಎಲ್ಲ ಕುಟುಂಬ ಕೊಂದು ನಿನ್ನಿಂದ ಪಾರುಮಾಡಿ ತಂದು ನನ್ನಲ್ಲಿಟ್ಟುಕೊಂಡಿರುವ ಈ ಹುಡುಗನೊಬ್ಬನೇ ಉಳಿದಿರುವುದರಿಂದ ನಿನ್ನೆಲ್ಲ ಸೈನಿಕರೊಂದಿಗೆ ಹೊರಗೆ ಬಂದು ಯುದ್ಧ ಮಾಡು; ಅವನನ್ನು ಮತ್ತು ನನ್ನನ್ನು ಕೊಲ್ಲು, ಆಮೇಲೆ ನಿನ್ನ ಭ್ರಾತ್ರೇಯ ಸಿಂಹಾಸನದ ಮೇಲೆ ಸುರಕ್ಷಿತವಾಗುವನು”.

“ಜಗರಾಯ ಕೆಲಹೊತ್ತು ಇದರಿಂದ ಜಾರಿಕೊಳ್ಳಲೆತ್ನಿಸಿದ; ಆದರೆ  ಎಚಮನಾಯಿಕ್ ಆಗ್ರಹಪಡಿಸಿದ್ದನ್ನು ನೋಡಿ ತನ್ನಲ್ಲಿ ಇಷ್ಟೊಂದು ಸೈನಿಕರಿದ್ದುದರಿಂದ ತಾನು ಸುಲಭವಾಗಿ ಜಯಶಾಲಿಯಾಗುವುದಲ್ಲದೆ ಎಚಮ ನಾಯಿಕ್ ಮತ್ತು ರಾಜಕುಮಾರನನ್ನು ಸೆರೆಹಿಡಿಯ ಬಲ್ಲೆನೆಂಬ ವಿಶ್ವಾಸ ಹೊಂದಿ ಕಾದಲು ನಿರ್ಣಯಿಸಿದ. ಆದುದರಿಂದ, ಅವನು ತನ್ನೆಲ್ಲ ಸೈನಿಕರೊಂದಿಗೆ ರಣರಂಗಕ್ಕಿಳಿದ. ಎಚಮ ನಾಯಿಕ್ ಒಂದು ಹರಿದಾರಿ ದೂರ ಉಳಿದ ಹತ್ತು ಸಾವಿರ ಯೋಧರಿಗೆ ರಾಜಕುಮಾರನನ್ನು  ಒಪ್ಪಿಸಿ ಕೊಟ್ಟು ಮಿಕ್ಕ ಹತ್ತು ಸಾವಿರದೊಂದಿಗೆ ಅವನು ಕಾಳಗ ಕೊಟ್ಟುದಲ್ಲದೆ ತಾನೆ ಮೊದಲಿಗನಾಗಿ ಕಾದಿದ; ಅವನು ಎಷ್ಟು ರೊಚ್ಚು ಮತ್ತು ರಭಸದಿಂದ ಕಾದಿದನೆಂದರೆ ತನ್ನೆಲ್ಲ ಜನರೊಂದಿಗೆ ತನ್ನ ಭ್ರಾತ್ರೇಯನನ್ನು ಸುತ್ತುಗಟ್ಟಿದ್ದ ಜಗರಾಯ ಒಂದು ಬದಿಗೆ ತಳ್ಳಲ್ಪಟ್ಟು ಶತ್ರುವಿಗೆ ಸಂದುಗಳು ಸಿಕ್ಕವು, ಮತ್ತು ಅನೇಕರು ಯುದ್ಧದಲ್ಲಿ ಮರಣವನ್ನಪ್ಪಿದರು. ಎಚಮನಾಯಿಕ್ ವಿಜಯೋತ್ಸಾಹದಿಂದ ಜಗರಾಯನ ಡೇರೆಗಳನ್ನು ಹೊಕ್ಕು ಅಲ್ಲಿದ್ದ ಹಿರಿಯ ರಾಜನಿಗೆ ಸೇರಿದ ಎಲ್ಲ ರಾಜ ಮುದ್ರೆಗಳನ್ನು ಚಿಕರಾಯನ ಮಗ ಯುವ ರಾಜಕುಮಾರನಿಗೆ ಕೊಟ್ಟು ಅವನನ್ನು ನ್ಯಾಯವಾದ ವಾರಸುದಾರ ಮತ್ತು ಎಲ್ಲ ಬೀಸನಗರ ಸಾಮ್ರಾಜ್ಯದ ರಾಜ ಎಂದು ಘೋಷಿಸಿದ.

ಅವನು ಕೊಂಡೊಯ್ದ ಕೊಳ್ಳೆ ವಿಪುಲವಾಗಿತ್ತು. ಏಕೆಂದರೆ ಬರಿ ಬೆಲೆಯುಳ್ಳ ಹರಳುಗಳಲ್ಲಿಯೆ ಅವನಿಗೆ ಎರಡು ದಶಲಕ್ಷ ಮೌಲ್ಯದಷ್ಟು ದೊರೆಯಿತೆಂದು ಹೇಳ ಲಾಗುತ್ತದೆ.

ಈ ವಿಜಯದ ನಂತರ ಅನೇಕ ಮನ್ನೆಯರು ತಾವಾಗಿಯೆ ಎಚಮನಾಯಿಕ್‌ನ ಪಕ್ಷ ಸೇರಿದರು. ಎಷ್ಟರಮಟ್ಟಿಗೆಂದರೆ ಅಲ್ಪಕಾಲದಲ್ಲಿಯೆ ಅವನ ಠಾಣ್ಯದಲ್ಲಿ ಐವತ್ತು ಸಾವಿರ ಯೋಧರಿದ್ದರೆ ಕೇವಲ ಹದಿನೈದು ಸಾವಿರ ಹೊಂದಿದ ಜಗರಾಯ ಅಡವಿಗೆ ಓಡಿಹೋದ. ಇಲ್ಲಿ ಮಾತ್ರ ಇನ್ನೂ ಕೆಲವರು ಅವನನ್ನು ಕೂಡಿಕೊಂಡುದರಿಂದ ಯುದ್ಧ ಈ ಎರಡು ವರ್ಷ[10] ಮುಂದುವರಿದು ಅದೃಷ್ಟ ಒಮ್ಮೆ ಈ ಕಡೆಗೆ ಒಮ್ಮೆ ಆ ಕಡೆಗೆ ಒಲಿದಿದೆ. ಆದರೆ ಯುವ ರಾಜಕುಮಾರನ ಪಕ್ಷ ಯಾವಾಗಲೂ ಬಲಗೊಳ್ಳುತ್ತ ಸಾಗಿದೆ. ಮದುರೆಯ ಮಹಾನ್ ನಾಯಕ್[11] ಬೀಸನಗ ರಾಜನ ಅಡಿಕೆ ಪರಿಚಾರಕನಾಗಿದ್ದ. ಕೆಲವರು ಹೇಳುವಂತೆ ಪ್ರತಿ ವರ್ಷ ೬೦೦೦೦೦ ಪಗೋಡಾಗಳ ಭೂಗಂದಾಯ ಕೊಡುವ, ಮತ್ತು ತ್ರಾವಣ ಕೋರಿನವನಂತಹ ಅನೇಕ ರಾಜರು ಹಾಗೂ ಮನ್ನೆಯರನ್ನು ತನ್ನ ಮಾಂಡಲಿಕರನ್ನಾಗಿ ಪಡೆದಿರುವ ಜಗರಾಯನ ಪಕ್ಷ ವಹಿಸಿ ತಂಜಾವೂರಿನ ನಾಯಕ್‌ನ ವಿರುದ್ಧ ಅವನಿಗೆ ಆಸರೆಯಾಗಿದ್ದರೂ (ಎಚಮ್‌ನಾಯಕ್‌ನ) ಬಲ ಇನ್ನೂ ಅಧಿಕಗೊಳ್ಳುತ್ತ ಸಾಗಿತ್ತು. ಆದರೂ ಸಹ, ಕೊನೆಯವನು ಅಷ್ಟು ಬಲಿಷ್ಠನಾಗಿರದಿದ್ದರೂ ಯುವಕ ರಾಜನ ನೆರವಿನಿಂದ ಕ್ರಮೇಣ ಮೇಲುಗೈ ಸಾಧಿಸುತ್ತಿದ್ದಾನೆ. ವಾಸ್ತವವಾಗಿ ಈಗ ತ್ರಿಂಚೆನೆಪಾಲಿ[12]ಯ ವಿಶಾಲ ಖುಲ್ಲಾ ಮೈದಾನಗಳ ರಣರಂಗದಲ್ಲಿ ಪ್ರತಿಯೊಂದು ಪಕ್ಷ ಪಡೆದಿದ್ದ ನೂರು ಸಾವಿರ ಜನರಲ್ಲದೆ ಒಂದು ದಶಲಕ್ಷದಷ್ಟು ಯೋಧರೂ ನೆರೆದಿದ್ದಾರೆ.

“ಈ ಆಂತರಿಕ ಯುದ್ಧದ ಲಾಭ ಪಡೆದು ಸ್ಯಾನ್ ಥೋಮೆ[13] ನಗರ – ಅದು ಇದುವರೆಗೆ ಬೀಸನಗದ ರಾಜನಿಗೆ ಸೇರಿದ್ದು ಅವನಿಗೆ ಭೂಕಂದಾಯ ಮತ್ತು ಸುಂಕಗಳನ್ನು ಕೊಡುತ್ತಿದ್ದಿತು. ಅವುಗಳನ್ನು ಅವನು ಕೆಲವು ಪಾಳೆಯಗಾರರಿಗೆ ಓಲೈಸಿ ಕೊಡುತ್ತಿದ್ದ. ಅವರು ಮೇಲಿಂದ ಮೇಲೆ ಪೋರ್ತುಗೀಜರಿಗೆ ತೊಂದರೆ ಕೊಡುತ್ತಿದ್ದರು – ತನ್ನನ್ನು ಸ್ವತಂತ್ರಗೊಳಿಸಿಕೊಂಡು ಪ್ರತಿಯೊಂದರಲ್ಲೂ ಮತ್ತು ಪ್ರತಿಯೊಂದಕ್ಕೂ ಪೋರ್ತುಗಾಲದ ರಾಜನ ಸ್ವತ್ತಾಗಲು ನಿರ್ಧರಿಸಿತು. ಈ ಉದ್ದೇಶಕ್ಕಾಗಿ ಅದು ತನ್ನ ಮಹಾಪ್ರಭುವಿನ ಹೆಸರಿನಲ್ಲಿ ತನ್ನಲ್ಲಿಗೆ ಕಳಿಸಿ ವಶಪಡಿಸಿಕೊಳ್ಳುವಂತೆ ರಾಜಪ್ರತಿನಿಧಿಯನ್ನು ಬೇಡಿಕೊಂಡಿತು. ಅವನು ನಾನು ಆಮೇಲೆ ಹೇಳಲಿರುವಂತೆ ಹಾಗೆಯೆ ಮಾಡಿದ. ಏತನ್ಮಧ್ಯೆ, ಪಟ್ಟಣವನ್ನು ಆಳುತ್ತಿದ್ದ. ಮ್ಯಾನುಎಲ್ ದ ಫ್ರಾಯಸ್ ಎಂಬ ಹೆಸರಿನ ದಳವಾಯಿ ಪಟ್ಟಣಕ್ಕೆ ಸಮೀಪ ಅದನ್ನು ಆಳುತ್ತಿದ್ದ ದುರ್ಗವಿದ್ದುದನ್ನು ಕಂಡು ಮತ್ತು ಅದರ ದಳವಾಯಿ ಶರಣಾಗಲು ನಿರಾಕರಿಸಿದುದರಿಂದ ಅದನ್ನು ಬಲಪ್ರಯೋಗದಿಂದ ವಶಪಡಿಸಿಕೊಳ್ಳಲು ನಿರ್ಧರಿಸಿದ. ಆದುದರಿಂದ ಅವನು ಅದಕ್ಕೆ ಮುತ್ತಿಗೆ ಹಾಕಿ ಯಾರೂ ಹೊರಗೆ ಹೋಗದಂತೆ ಸಮೀಪದಿಂದ ಸುತ್ತುಗಟ್ಟಿದ”.

ಅಂತಿಮವಾಗಿ ಪೋರ್ತುಗೀಜರು ಯಶಸ್ವಿಯಾದರು. ದುರ್ಗವನ್ನು ವಶಪಡಿಸಿ ಕೊಳ್ಳಲಾಯಿತು. ೧೫೦೦ ಜನರ ಅದರ ಕಾವಲುದಂಡು ಬಿಟ್ಟುಕೊಟ್ಟಿತು ಮತ್ತು ಸ್ವಾಧೀನವನ್ನು ಪೂರ್ಣಗೊಳಿಸಲು ಸಮುದ್ರದಿಂದ ನೌಕಾಪಡೆ ಸುತ್ತಿ ಬಂದಿತು.

ಮುಂಬರುವ ಕತೆ ನನಗನಿಸುವಂತೆ ಇದುವರೆಗೆ ಇಂಗ್ಲಿಷ್ ಓದುಗರಿಗೆ ತಿಳಿಯಪಡಿಸಿದ ಘಟನೆಗಳಿಗೆ ಸಂಬಂಧಿಸಿದೆ, ಮತ್ತು ಅಷ್ಟುಮಟ್ಟಿಗೆ ಅತಿ ಸ್ವಾರಸ್ಯಕರವಾಗಿದೆ. ಸದ್ಯ ಅದರ ಖಚಿತತೆಯನ್ನು ಒಪ್ಪಿಕೊಳ್ಳೋಣ ಮತ್ತು ಈಗಾಗಲೆ ಕೊಡಲಾಗಿರುವ ವಂಶಾವಳಿ ಪಟ್ಟಿಯ ದೃಷ್ಟಿಯಲ್ಲಿ ಓದೋಣ.[14]

ಒಂದನೆಯ ರಾಜಾ ವೆಂಕಟನಿಗೆ ಒಬ್ಬ ಸಹೋದರಿಯಿದ್ದಳು. ಅವಳನ್ನು ಬ್ಯಾರಡಸ್ ‘ಒಬೊ’ (ಬಹುಶಃ ಓಬಳ) ರಾಯನೆಂದು ಕರೆಯುವ ಪಾಳೆಯಗಾರನಿಗೆ ಮದುವೆ ಮಾಡಿಕೊಡಲಾಗಿತ್ತು. ನಮಗೆ ಗೊತ್ತಿರುವಂತೆ ಅವನಿಗಿದ್ದ ಸೋದರಳಿಯರೆಂದರೆ ಅವನ ಸಹೋದರ ಮೂರನೆಯ ರಾಮನ ಮಕ್ಕಳಾದ ಎರಡನೆಯ ತಿರುಮಲ ಹಾಗೂ ಮೂರನೆಯ ರಂಗ ಮಾತ್ರ ಎರಡನೆಯ ತಿರುಮಲನಿಗೆ ಪುತ್ರರಿರಲಿಲ್ಲವೆಂದು ತೋರುವುದರಿಂದ ಮತ್ತು ಮೂರನೆಯ ರಂಗನಿಗೆ ‘ಹಲವು ಸಹೋದರರಲ್ಲೊಬ್ಬ’ನೆಂದು ಶಾಸನಗಳಲ್ಲಿ ದೃಢಪಡಿಸಲಾಗಿರುವ ನಾಲ್ಕನೆಯ ರಾಮ ಎಂಬ ಪುತ್ರನಿದ್ದುದರಿಂದ ಕ್ರಿ.ಶ. ೧೬೧೪ರಲ್ಲಿ ಒಂದನೆಯ ವೆಂಕಟನ ಮರಣಾನಂತರ ರಾಜನ ಸ್ಥಾನಕ್ಕೆ ಏರಿಸಿದ ಮತ್ತು ಮೂರು ಪುತ್ರರನ್ನು ಪಡೆದಿದ್ದ, ಬ್ಯಾರಡಸ್ ಉಲ್ಲೇಖಿಸುವ, ಸೋದರಳಿಯ ಮೂಲಪಾಠದಲ್ಲಿ ‘ಚಿಕ್ಕರಾಯ’ ಅಥವಾ ‘ಯುವರಾಜ’ನೆಂದು ಕರೆಯಲಾದ ಮೂರನೆಯ ರಂಗನೇ ಎಂದು ಸಹಜವಾಗಿಯೆ ಭಾವಿಸಬೇಕಾಗುತ್ತದೆ. ಅಂದಮೇಲೆ, ಅವನು ೧೬೧೪ರಲ್ಲಿ ಉತ್ತರಾಧಿಕಾರಿಯಾದ, ಆದರೆ ತರುವಾಯ ಪದಚ್ಯುತಗೊಳಿಸಲ್ಪಟ್ಟ, ಬಂಧಿಸಲ್ಪಟ್ಟ ಮತ್ತು ತನ್ನ ಪ್ರಾಣವನ್ನು ತಾನೆ ತೆಗೆದುಕೊಳ್ಳುವಂತೆ ಬಲವಂತಗೊಳಿಸಲ್ಪಟ್ಟ. ಅದೇ ಸಮಯಕ್ಕೆ ಅವನ ಮೊದಲ ಮಗ ತನ್ನ ತಂದೆಯ ಉದಾಹರಣೆಯನ್ನು ಅನುಕರಿಸಿದ ಮತ್ತು ಅವನ ಕಡೆಯ ಮಗ ತನ್ನ ತಂದೆಯಿಂದ ಕೊಲ್ಲಲ್ಪಟ್ಟ. ‘ನಡುವಿನ ಮಗ’ ಪಾರಾದ, ಮತ್ತು ಎಚಮನಾಯಿಕನೆಂಬ ಹಿತೈಷಿ ಪಾಳೆಯಗಾರನಿಂದ ಸಿಂಹಾಸನಕ್ಕೇರಿಸಲ್ಪಟ್ಟ. ಈ ಎರಡನೆಯ ಮಗ ಬಹುಶಃ ನಾಲ್ಕನೆಯ ರಂಗ. ಜಗರಾಯನ ಮಗಳು ಬಾಯಮ್ ಮತ್ತು ನರ್ಪರಾಯನ ಹೆಸರಿಸಲಿಲ್ಲದ ಸಹೋದರಿ ರಾಜಾ ವೆಂಕಟನ ಇಬ್ಬರು ರಾಣಿಯರಾಗಿದ್ದರು. ಬಾಯಮ್ಮ ಗುಟ್ಟಾಗಿ ಅರಮನೆಯಲ್ಲಿ ತಂದು ಅವನು ರಾಜಾ ವೆಂಕಟನ ಮಗ ಎಂಬ ನೆಪದಲ್ಲಿ ಅವನಿಗೆ ಶಿಕ್ಷಣ ಕೊಡಿಸಲಾಗುತ್ತಿದ್ದ ಬ್ರಾಹ್ಮಣ ಹುಡುಗನಿಗೆ ಒಂದನೆಯ ವೆಂಕಟನ ಸೋದರ ಸೊಸೆಯನ್ನು ಮದುವೆ ಮಾಡಿಕೊಡಲಾಗಿತ್ತು. ಅವನನ್ನು ಪಟ್ಟಕ್ಕೆ ತರುವ ಸಂಚು ತಾತ್ಪೂರ್ತಿಕವಾಗಿ ಯಶಸ್ವಿಯಾಯಿತು ಮತ್ತು ಅನಂತರ ಪಟ್ಟಕ್ಕೆ ಬಂದ ನಾಲ್ಕನೆಯ ರಂಗನನ್ನುಳಿದು ಮೂರನೆಯ ರಂಗ ಮತ್ತು ಎಲ್ಲ ರಾಜಕುಟುಂಬವನನ್ನು ಕೊಲ್ಲಲಾಯಿತು.

ಹೇಳಲಾಗಿರುವ ಕತೆ ಎಷ್ಟುಮಟ್ಟಿಗೆ ನಿಜ ಎಂಬುದನ್ನು ನಾವಿನ್ನೂ ನಿರ್ಣಯಿಸಲಾರೆವು; ಆದರೆ, ಅದೆಲ್ಲ ಕಟ್ಟು ಕತೆಯಾಗಿರುವುದು ತೀರ ಅಸಂಭವ, ಮತ್ತು ಈ ಘಟನೆಗಳ ಕಾಲ ನಿಶ್ಚಿತವಾಗಿಯೂ ಕ್ರಿ.ಶ. ೧೬೧೪ರ ಮತ್ತು ೧೬೧೬ರ ಮಧ್ಯೆ ಬ್ಯಾರಡಸ್‌ನ ಪತ್ರದ ದಿನಾಂಕ ಎರಡನೆಯ ವರ್ಷದ ಡಿಸೆಂಬರ್ ೧೨ ಆಗಿರುವುದರಿಂದ – ಎಂದು ನಿಗದಿಗೊಳಿಸಿ ಸದ್ಯ ನಾವು ಅದನ್ನು ಒಪ್ಪಿಕೊಳ್ಳಬಹುದು.

ಎಪಿಗ್ರಾಫಿಯಾ ಇಂಡಿಕಾದಿಂದ ಆಯ್ದು ಕೊಟ್ಟಿರುವ ಮೇಲಿನ ವಂಶಾವಳಿ ಪಟ್ಟಿಗೆ ಆಧಾರವಾಗಿರುವ ಶಾಸನಗಳು ಕ್ರಿ.ಶ. ೧೬೧೪ ಮತ್ತು ಎರಡನೆಯ ಪೆದ್ದ ವೆಂಕಟರಾಜನೆಂದು ಹೆಸರಿಸಿದ ೧೬೩೪ರ ನಡುವಣ ಯಾವ ದಿನಾಂಕವನ್ನೂ ನೀಡುವುದಿಲ್ಲ. ಕ್ರಿ.ಶ. ೧೮೮೩ರಲ್ಲಿ ಆಗ ನನಗೆ ತಲುಪಿದ ಶಾಸನಗಳ ವರದಿಗಳಿಂದ ಸಂಗ್ರಹಿಸಿದ ವಿಜಯನಗರ ಹೆಸರುಗಳ ಪಟ್ಟಿಯನ್ನು ಪ್ರಕಟಿಸಿದೆ.[15] ಅವುಗಳ ಖಚಿತತೆಯ ಬಗೆಗೆ ನನಗೆ ಏನೂ ಖಾತರಿಯಿಲ್ಲ ಮತ್ತು ಅವುಗಳನ್ನೆಲ್ಲ ಇನ್ನು ಮುಂದೆ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಸ್ಪಷ್ಟವಿದೆ. ಇದ್ದಮಟ್ಟಿಗೆ ಪಟ್ಟಿ ಹೀಗಿದೆ:

  ಕ್ರಿ. ಶ.
ರಂಗ ೧೬೧೯
ರಾಮ ೧೬೨೦-೧೬೨೨
ರಂಗ ೧೬೨೩
ವೆಂಕಟ ೧೬೨೩
ರಾಮ ೧೬೨೯
ವೆಂಕಟ ೧೬೩೬

ಕೊನೆಗೆ ಉಲ್ಲೇಖಿಸಲಾದ ಹೆಸರು ಮತ್ತು ಕಾಲ ಸ್ಪಷ್ಟವಾಗಿ ಸರಿಯಿದೆ.

ಕ್ರಿ.ಶ. ೧೬೩೩ರಲ್ಲಿ ಇನ್ನೂ ಚಂದ್ರಗಿರಿಯಲ್ಲಿದ್ದ ವಿಜಯನಗರ ರಾಜನಿಂದ ಪ್ರೇರೇಪಿತವಾದ ಪೋರ್ತುಗೀಜರು ಡಚ್‌ರನ್ನು ‘ಪ್ಯಾಲಿಯಕೇಟ್’ ಅಥವಾ ಪುಲಿಕಟ್‌ನಿಂದ ಹೊರಹಾಕುವ ಪ್ರಯತ್ನ ಮಾಡಿದರು. ಪೋರ್ತುಗೀಜರು ಸಮುದ್ರದಿಂದ ಮತ್ತು ರಾಜನು ನೆಲದಿಂದ ಆಕ್ರಮಣ ಮಾಡಬೇಕೆಂದು ನಿರ್ಣಯಿಸಲಾಯಿತು. ಒಪ್ಪಿದಂತೆ ತನ್ನ ಹನ್ನೆರಡು ನೌಕೆಗಳನ್ನು ರಾಜಪ್ರತಿನಿಧಿ ಕಳಿಸಿದ. ಆದರೆ, ತನ್ನ ಸೈನ್ಯವನ್ನು ಆಂತರಿಕ ಗಲಭೆಗಳನ್ನು ಹತ್ತಿಕ್ಕಲು ಬಳಸಬೇಕಾಯಿತೆಂಬ ಸ್ಪಷ್ಟೀಕರಣ ನೀಡಿ ರಾಜನು ಆಕ್ರಮಣ ಮಾಡಲಿಲ್ಲ. ರಾಜನ ಪಾಲಿನ ಒಪ್ಪಂದ ಈಡೇರದಿದ್ದುದರಿಂದ ಪೋರ್ತುಗೀಜರ ಯೋಜನೆ ಪುನಃ ತಲೆಕೆಳಗಾದ ಎರಡನೆಯ ದಂಡಯಾತ್ರೆಗೂ ಹೆಚ್ಚಿನ ಯಶ ದೊರೆಯಲಿಲ್ಲ. ನೌಕಾಪಡೆ ತೆರಳಿದ ಮೇಲೆ ರಾಜ ಡಚ್ ವಸಾಹತುವಿನ ಮೇಲೆ ಆಕ್ರಮಣ ಮಾಡಿದ. ಆದರೆ, ಬಹಳ ಹಣ ಕೊಟ್ಟು ಕಾಟ ತಪ್ಪಿಸಿಕೊಂಡ ಮತ್ತು ಹಾಲಂಡಿನವರು ತದನಂತರ ತೊಂದರೆಗೊಳಗಾಗದೆ ಉಳಿದರು.

ಟೋರ್‌ದ ಟೊಂಬೊದಲ್ಲಿನ ರಾಷ್ಟ್ರೀಯ ಪತ್ರಾಗಾರದಲ್ಲಿದ್ದ ‘ಲಿವ್ರೊಸ್ ದಾಸ್ ಮಾಂಕೊಜ್’ನಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಅನೇಕ ಕಾಗದಗಳನ್ನು ಹುಡುಕಿರುವುದಾಗಿ ಸೆನ್ಹೊರ್ ಲೋಪ್ಸ್ ನನಗೆ ಹೇಳುತ್ತಾನೆ. ೩೪ನೆಯ ಸಂಪುಟ ಫೋಲಿಯೊ (೯೧-೯೯)ದಲ್ಲಿರುವುವು ಅತ್ಯಂತ ಸ್ವಾರಸ್ಯಕರವಾಗಿವೆ. ಇವುಗಳನ್ನು ಮೆಲಿಯಾಪುರ (ಸ್ಯಾನ್ ಥೋಮೆ) ದ ಕ್ಯಾಪ್ಟನ್ ಜನರಲ್, ಕಂಪನಿ ಆಫ್ ಜೀಸನ್‌ನ ಪಾದ್ರ್ ಪೆರೊ ಮೆಕ್ಸಿಯಾ ಮತ್ತು ಬಿಶಪ್ ಬರೆದಿರುವರು. ಮಿಕ್ಕ ದಸ್ತೈವಜುಗಳಲ್ಲಿ ಆಗ ವೆಲ್ಲೋರಿನಲ್ಲಿದ್ದ ವಿಜಯನಗರ ರಾಜನ ಎರಡು ತಾಳೆಗರಿ ಓಲೆಗಳ ಅನುವಾದಗಳು ನೋಡಸಿಗುತ್ತವೆ. ಇವುಗಳಿಂದ ರಾಜ ಶಕ್ತಿಗುಂದಿದ್ದ ಮತ್ತು ತಿಮ್ಮರಾಯನೆಂಬವನು ಅವನ ವಿರುದ್ಧ ಬಂಡೆದ್ದಿದ್ದ ಎಂದು ತೋರುತ್ತದೆ.

ಕ್ರಿ.ಶ. ೧೬೩೯ರಲ್ಲಿ ವಿಜಯನಗರದ ರಾಜನಿಗೆ ರಂಗ ಅಥವಾ ಶ್ರೀರಂಗ ಎಂದು ಕರೆದರು. ಮತ್ತು ಅವನು ಆ ಕಾಲಕ್ಕೆ ಚಂದ್ರಗಿರಿಯಲ್ಲಿ ವಾಸಿಸುತ್ತಿದ್ದನೆಂದು ನಮಗೆ ತಿಳಿದುಬರುತ್ತದೆ. ಏಕೆಂದರೆ, ಆ ವರ್ಷ ಮದ್ರಾಸದಲ್ಲಿ ಇಂಗ್ಲಿಷ್ ವ್ಯಾಪಾರ ನಿಲ್ದಾಣದ ಮುಖ್ಯಸ್ಥನಾಗಿದ್ದ ಮಿಸ್ಟರ್ ಡೇ ಆ ಊರಿನಲ್ಲಿ ಒಂದು ಮೈಲು ಅಗಲ ಐದು ಮೈಲು ಉದ್ದವಿರುವ ಭೂಮಿಯನ್ನು ರಾಜನಿಂದ ದಾನವಾಗಿ ಪಡೆದ. ಸೇಂಟ್ ಜಾರ್ಜ್ ಕೋಟೆ ನಂತರ ನಿರ್ಮಿತವಾದುದು ಇದರ ಮೇಲೆಯೆ. ಮದ್ರಾಸ ಬಳಿಯ ನಾಡನ್ನು ಆಗ ಒಬ್ಬ ಮಂಡಲಾಧಿಪತಿ ಅಥವಾ ನಾಯಕ ಆಳುತ್ತಿದ್ದ. ಅವನು ತನ್ನ ನಾಮ ಮಾತ್ರದ ಸಾರ್ವಭೌಮನ ಇಚ್ಛೆ ಅಥವಾ ಆಜ್ಞೆಗಳನ್ನು ಎಷ್ಟೊಂದು ನಿರ್ಲಕ್ಷಿಸುತ್ತಿದ್ದನೆಂದರೆ ರಾಯ ಹೊಸ ಪಟ್ಟಣಕ್ಕೆ ಶ್ರೀರಂಗರಾಯಲಪಟ್ನವ‰ ಶ್ರೀರಂಗರಾಯನ ಪಟ್ಟಣ ಎಂದು ಹೆಸರಿಡ ಬೇಕೆಂದು ಆದೇಶಿಸಿದ್ದರೂ ನಾಯಕನು ತನ್ನ ತಂದೆಯ ಹೆಸರಾದ ಚೆನ್ನನ ದ್ಯೋತಕವಾಗಿ ಅದಕ್ಕೆ ‘ಚೆನ್ನಪಟ್ನಮ್’ ಎಂದೇ ಹೆಸರಿಟ್ಟ. ಅದು ಇಂದಿಗೂ ಹಿಂದೂಗಳಿಗೆ ಅದೇ ಹೆಸರಿನಿಂದ ಪರಿಚಿತವಿದೆ. ಏನಿದ್ದರೂ ಅದು ಸ್ಥಳೀಯ ಪರಂಪರಾಭಿಪ್ರಾಯ ಮಾತ್ರ. ಈ ರಾಜ ಬಹುಶಃ ಕ್ರಿ.ಶ. ೧೬೪೪ರಲ್ಲಿ ಜೀವಿಸಿದ್ದನೆಂದು ಹೇಳಲಾಗಿರುವ ಎಪಿಗ್ರಾಫಿಯಾ ಪಟ್ಟಿಯಲ್ಲಿನ ಆರನೆಯ ರಂಗನಾಗಿದ್ದ.

ಈ ದಿನಾಂಕ ತರುವಾಯ ನನ್ನ (ಸಂದೇಹಾಸ್ಪದ ಮತ್ತು ಪರಿಶೀಲಿಸದ) ಶಾಸನಗಳು ಕೆಳಗಿನ ಹೆಸರುಗಳು ಮತ್ತು ದಿನಾಂಕಗಳನ್ನು ಕೊಡುತ್ತವೆ.

  ಕ್ರಿ. ಶ.
ರಂಗ ೧೬೪೩, ೧೬೪೭, ೧೬೫೫, ೧೬೬೨, ೧೬೬೩, ೧೬೬೫, ೧೬೬೭, ೧೬೭೮
ವೆಂಕಟ ೧೬೭೮, ೧೬೮೦
ರಂಗ ೧೬೯೨
ವೆಂಕಟ ೧೭೦೬
ರಂಗ ೧೭೧೬
ಮಹಾದೇವ ೧೭೨೪
ರಂಗ ೧೭೨೯
ವೆಂಕಟ ೧೭೩೨
ರಾಮ ೧೭೩೯
ವೆಂಕಟ ೧೭೪೪
ವೆಂಕಟ ೧೭೯೧, ೧೭೯೨, ೧೭೯೩

ಆನೆಗುಂದಿಯ ಹಳೆಯ ಮನೆತನದ ಆಸ್ತಿಯ ನೆರೆಹೊರೆಯ ಪ್ರದೇಶವನ್ನು ಹದಿನೆಂಟನೆಯ ಶತಮಾನದ ಆದಿಯಲ್ಲಿ ರಾಯರು ದಿಲ್ಲಿಯ ಮೊಗಲ ಸಾಮ್ರಾಟನ ಸಾಮಂತ ರಾಜ್ಯವಾಗಿ ಪಡೆದಿದ್ದರೆಂದು ಸರ್ ಥಾಮಸ್ ಮನ್ರೊನ ಕಾಗದಗಳಿಂದ ನಾನು ಗ್ರಹಿಸಿದ್ದೇನೆ. ಕ್ರಿ.ಶ. ೧೭೪೯ರಲ್ಲಿ ಅದನ್ನು ಮರಾಠರು ಹಿಡಿದುಕೊಂಡರು. ಮತ್ತು ಕ್ರಿ.ಶ. ೧೭೭೫ರಲ್ಲಿ ಮೈಸೂರಿನ ಹೈದರಲಿ ಅದನ್ನು ಅಡಗಿಸಿದ. ಆದರೆ ಅದು ಟೀಪು (ಟಿಪ್ಪುಸುಲ್ತಾನ)ನ ಕಾಲದವರೆಗೆ ಅರೆಸ್ವತಂತ್ರ ಸಾಮಂತ ರಾಜ್ಯವಾಗಿ ಮುಂದುವರಿಯಿತು. ತನ್ನ ಹಿತಾಸಕ್ತಿಗಳ ಪ್ರಶ್ನೆಯಿದ್ದಾಗ ಅನುತಾಪ ಅಥವಾ ಅನುಕಂಪದ ಆಧಿಕ್ಯಕ್ಕೇನೂ ಈಡಾಗದ ಟೀಪು ಕ್ರಿ.ಶ. ೧೭೮೬ರಲ್ಲಿ ಆ ಆಸ್ತಿಯನ್ನು ಇಡಿಯಾಗಿ ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಹದಿಮೂರು ವರ್ಷ ತರುವಾಯ ಅವನು ಸೆರಿಂಗಪಟ್ನಮ್‌ನಲ್ಲಿ ಕೊಲ್ಲಲ್ಪಟ್ಟ, ಮತ್ತು ಅದನ್ನನುಸರಿಸಿ ಜರುಗಿದ ಆಸ್ತಿ ವರ್ಗಾವಣೆಯಲ್ಲಿ ಆ ಚಿಕ್ಕಪ್ರದೇಶವನ್ನು ಹೈದರಾಬಾದ ನಿಜಾಮನಿಗೆ ವಹಿಸಿಕೊಡಲಾಯಿತು ಮತ್ತು ಇಂಗ್ಲಿಷ್ ಸರಕಾರ ತುಂಗಭದ್ರೆಯ ತಮ್ಮ ಬದಿಯಲ್ಲಿನ ಭೂಮಿಗಳನ್ನು ಇಟ್ಟುಕೊಂಡರು. ಈ ಭೂಮಿನಷ್ಟಕ್ಕೆ ಕೆಲಮಟ್ಟಿನ ಪರಿಹಾರ ವೆಂದು ಸರಕಾರ ತೀರ ಇತ್ತೀಚಿನವರೆಗೆ ಆನೆಗುಂದಿ ಮನೆತನದ ಮುಖ್ಯಸ್ಥನಿಗೆ ವರ್ಷಾಶನ ನೀಡಿದೆ. ಅದನ್ನೀಗ ರದ್ದುಗೊಳಿಸಲಾಗಿದೆ.

 

—-
ಆಕರ: ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ೧೯೯೨, ಮೂಲ :  ರಾಬರ್ಟ್ ಸಿವೆಲ್, ಅನುವಾದ: ಸದಾನಂದ ಕನವಳ್ಳಿ, (ಪುಟ ೨೪೨-೨೫೬), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬[1]      ಕಾರ್ಟಾರಿಯೊ ದೊಸ್ ಜೆಸುಟೊಸ್ (ಕಂತೆ ೩೬, ಕಟ್ಟು ೬೫ ನಂ. ೨೨, ಲಿಸ್ಬನ್‌ನ ರಾಷ್ಟ್ರೀಯ ಪತ್ರಾಗಾರ. ಅರ್ಕೈವೊ ದ ಟೊರ್ ದೊ ಟೊಂಬೊದಲ್ಲಿ). ಅಂಟೊನಿಯೊ ಬಾಕರೊ, ಡೆಕಡಾ, ೧೩ ಪು. ೨೯೬ರೊಂದಿಗೆ ಹೋಲಿಸಿ. ಅದೇ ದಾರುಣ ಘಟನೆಗಳಿಗೆ ಸಂಬಂಧಿಸಿದವೆಂದು ಹೇಳುವ ಇನ್ನೂ ಪರಿಷ್ಕರಿಸದ ಹಸ್ತಪ್ರತಿಯಾದ “ಡೊಕುಮೆಂಟೊಜ್ ರಿಮೆಟಿಡೊಸ್ ದ ಇಂಡಿಯಾ, ಅಥವಾ ಲಿವ್ರೊಸ್ ದೇಸ್ ಮಾಂಕೊಜ್, t.i.೩೫೯ ಮತ್ತು t.i. ೩೭೦-೩೭೧, ರತ್ತ ಮಿಸ್ಟರ್ ಲೋಪ್ಸ್ ನನ್ನ ಗಮನ ಸೆಳೆಯುತ್ತಾನೆ.

[2]      ಪು. ೨೩೨ರ ಮೇಲಿನ ವಂಶಾವಳಿ ಪಟ್ಟಿಯನ್ನು ನೋಡಿ. ಒಂದನೆಯ ವೆಂಕಟ ನಾಲ್ಕನೆಯ ರಾಜವಂಶದ ಪ್ರಥಮ ವಾಸ್ತವಿಕ ರಾಜನಾದ ತಿರುಮಲನ ಮಗ. ಬ್ಯಾರಡೊಸ್ ಹೇಳುವಂತೆ ‘ಚಿಕ್ಕ’ಎಂಬುದು ಸಾಮಾನ್ಯತಃ ಸಿಂಹಾಸನದ ವಾರಸುದಾರನಿಗೆ ನೀಡಲಾಗುತ್ತಿದ್ದ ಹೆಸರಾದುದರಿಂದ ಭ್ರಾತ್ರೇಯ ಚಿಕ್ಕರಾಯ ಮೂರನೆಯ ರಂಗ ಆಗಿರಬಹುದು. ಹಾಗಿದ್ದ ಪಕ್ಷದಲ್ಲಿ ‘ಹಲವು ಸಹೋದರರಲ್ಲೊಬ್ಬನಾದ’ಹಾಗೂ ರಂಗನ ಮಗನಾದ ನಾಲ್ಕನೆಯ ರಾಮ, ಪತ್ರದಲ್ಲಿ ಹೇಳಿದ ಸಗಟು ಸಂಹಾರದಿಂದ ಪಾರಾದ ಬಾಲಕನಾಗುತ್ತಾನೆ.

[3]      ಕನ್ನಡದಲ್ಲಿ ‘ಚಿಕ್ಕರಾಯ’ಎಂದರೆ ‘ಚಿಕ್ಕ’ಅಥವಾ ‘ಯುವ’ರಾಯ ಎಂದರ್ಥ.

[4]      ಚಂದ್ರಗಿರಿ.

[5]      ಇದು ಯಾರಿಗೆ ಅನ್ವಯಿಸುತ್ತದೆಂಬುದು ಗೊತ್ತಿಲ್ಲ. ಆ ಹೆಸರು ಬಹುಶಃ ‘ಓಬಳ’.

[6]      ಈ ಯುವಕ ಇಮ್ಮಡಿ ವಿವಾಹದಿಂದ ಜಗರಾಯನ ಭ್ರಾತ್ರೀಯನಾಗಿದ್ದ. ಅವನ ಹೆಂಡತಿ ರಾಜಾ ವೆಂಕಟನ ಭ್ರಾತ್ರೀಯಳಾಗಿದ್ದಳು ಮತ್ತು, ಆದುದರಿಂದ, ವಿವಾಹದಿಂದ ರಾಣಿ ಬಾಯಮ್ಮನ ಭ್ರಾತ್ರೀಯಳು. ಬಾಯಮ್ಮ ಜಗರಾಯನ ಮಗಳು.

[7]      ಬ್ರೆಡೊಸ್, ಟಿಪ್ಪಣಿ ನೋಡಿರಿ: ಪು. ೨೪೫, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[8]      ಬಹುಶಃ ಇತೆ ಓಬಳೇಶ್ವರ.

[9]      ಚಿನ್ನ ಓಬಳರಾಯ.

[10]     ಇದನ್ನು ಬರೆದುದು ಕ್ರಿ.ಶ. ೧೬೧೬ರಲ್ಲಿ.

[11]     ಇವನು ಕ್ರಿ.ಶ. ೧೬೦೯ರಿಂದ ಕ್ರಿ.ಶ. ೧೬೨೩ರವರೆಗೆ ಮದುರಾದ ನಾಯಕ್ಕ(ನಾಯಕ)ನಾಗಿದ್ದ ಮುತ್ತುವೀರಪ್ಪ. ಅವನ ಆಳ್ವಿಕೆಯಲ್ಲಿ ತಂಜಾವೂರಿನೊಂದಿಗೆ ಯುದ್ಧವಾಗಿತ್ತೆಂದು ಮಿಸ್ಟರ್ ನೆಲ್ಸನ್ (‘ಮದುರಾ ಕಂಟ್ರಿ’)ಉಲ್ಲೇಖಿಸುತ್ತಾನೆ. ಕ್ರಿ.ಶ. ೧೫೩೫ರಲ್ಲಿ ಬರೆದ ನೂನಿಜ್ ವಿಜಯನಗರ ರಾಜ್ಯದ ಮಹತ್ವದ ವಿಭಾಗಗಳಲ್ಲಿ ಮದುರೆಯನ್ನು ಉಲ್ಲೇಖಿಸುವುದಿಲ್ಲ;ಮತ್ತು ಇದು ಇತರ ಮೂಲಗಳಿಂದ ಪಡೆದ ಚರಿತ್ರೆಯೊಂದಿಗೆ ಸರಿಹೊಂದುತ್ತದೆ. ಆದರೆ ಕ್ರಿ.ಶ. ೧೬೧೪ರಷ್ಟೊತ್ತಿಗೆ ಮದುರೆಯ ನಾಯಕ ಬಹಳ ಬಲಿಷ್ಠನಾಗಿದ್ದ ಆದಾಗ್ಯೂ ಜನರು ತಮ್ಮ ಹಳೆಯ ಸಾರ್ವಭೌಮರಾಗಿದ್ದ ಪಾಂಡ್ಯನ್‌ರನ್ನು ಇನ್ನೂ ಆಗಾಗ ಮನ್ನಿಸುತ್ತಿದ್ದರು. ಅವರಲೊಬ್ಬನನ್ನು ಕ್ರಿ.ಶ. ೧೬೨೩ರಷ್ಟು ಇತ್ತೀಚೆಗೆ ಉಲ್ಲೇಖಿಸಲಾಗಿದೆ. (‘ಸ್ಕೆಚ್ ಆಫ್ ದ ಡಿನ್ಯಾಸ್ಟೀಜ್ ಆಫ್ ಸದರ್ನ್ ಇಂಡಿಯಾ’, ೮೫).

[12]     ತ್ರಿಚಿನಾಪಳ್ಳಿ.

[13]     ಮದ್ರಾಸಿಗೆ ಹತ್ತಿರವಿದ್ದು ಪೋರ್ತಗೀಜರಿಂದ ಹಲವು ಬಾರಿ ‘ಮೆಲ್ಲಿಯಾಪೂರ’ಎಂದು ಕರೆಯಲಾಗಿದ್ದ ಅದರ ಹೆಸರು ಮೈಲಾಪುರ. ಹದಿನಾರನೆಯ ಶತಮಾನದ ಕೊನೆಗೆ ವರ್ಣಿಸಿದ ಘಟನೆಗಳ ಕಾಲಕ್ಕಿಂತ ಕೆಲವು ವರ್ಷ ಮೊದಲು ಬರೆಯುತ್ತ ಲಿನ್ ಸ್ಕೊಟೆನ್ ಹೇಳುವುದೇನೆಂದರೆ “ಈ ಪಟ್ಟಣ…. ಈಗ ನರಸಿಂಗನ ಮತ್ತು ಕೋರಮಂಡಲ ಕರಾವಳಿಯ ಪ್ರಮುಖ ನಗರ”.

[14]     ಮರೆತು ಹೋದ ಮಹಾಸಾಮ್ರಾಜ್ಯ ವಿಜಯನಗರ, ನೋಡಿರಿ :ಪುಟ ೨೩೧ ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[15]     “ಸ್ಕೆಚ್ ಆಫ್ ದ ಡಿನ್ಯಾಸ್ಪೀಜ್ ಆಫ್ ಸದರ್ನ್ ಇಂಡಿಯಾ”ಪು. ೧೧೨.