ನಿಕೊಲೆದೆಕೊಂತಿ ವೆನೀಸ್ ನಗರದ ಗೌರವ ಮನೆತನಕ್ಕೆ ಸೇರಿದವನು. ಚಿಕ್ಕವನಾಗಿದ್ದಾಗಲೇ ಸಿರಿಯಾದೇಶದ ಡಮಾಸ್ಕಸ್ ನಗರದಲ್ಲಿ ವರ್ತಕನಾಗಿ ತನ್ನ ವೃತ್ತಿಯನ್ನು ಪ್ರಾರಂಭಿಸಿದ. ಅಲ್ಲಿ ಅರಬ್ಬೀ ಭಾಷೆಯನ್ನು ಕಲಿತು, ಬಹುಶಃ ಅಲ್ಲಿಯೇ ಮದುವೆಯಾಗಿ, ತನ್ನ ಹೆಂಡತಿಯ ಸಮೇತ ಪೂರ್ವದೇಶಕ್ಕೆ ಪ್ರಯಾಣ ಹೊರಟ. ಸಂಸಾರ ಸಮೇತ ಇಂಡಿಯಾಕ್ಕೆ ಬಂದ ಪ್ರವಾಸಿ ಇವನೊಬ್ಬನೇ ಎಂದು ಕಾಣುತ್ತದೆ. ಆರುನೂರು ಇತರ ವರ್ತಕರ ತಂಡವನ್ನು ಕೂಡಿಕೊಂಡು ವ್ಯಾಪಾರದ ಸಾಮಾನುಗಳ ಸಮೇತ ಈತ ಪ್ರಯಾಣವನ್ನು ಆರಂಭಿಸಿದ. ಯಾವ ವರ್ಷ ಪ್ರಯಾಣ ಹೊರಟ ನೆಂದು ಖಚಿತವಾಗಿ ಗೊತ್ತಿಲ್ಲ.

ಅರೇಬಿಯಾ ದೇಶದ ಮರಳುಗಾಡನ್ನು ದಾಟಿ ಯೂಪ್ರೆಟೀಸ್ ನದಿಯ ಬಳಿ ಇದ್ದ ಬಾಗದಾದ್ ಎಂಬ ಪುರಾತನ ಪಟ್ಟಣವನ್ನು ತಲುಪಿದನು. ಮುಂದೆ ಬುಸ್ಸಾರ, ಓರ್ಮಸ್ ದ್ವೀಪಕ್ಕೆ ಬಂದು ಅಲ್ಲಿಂದ ಇಂಡಿಯಾ ದೇಶದ ಕಡೆ ಪ್ರಯಾಣ ಹೊರಟು ಕಾಲಕೇಶಿಯ (ಬಹುಶಃ  ಜಾಸ್ಕ್) ಎಂಬ ಪರ್ಷಿಯಾ ದೇಶದ ಭವ್ಯ ನಗರಕ್ಕೆ ಬಂದನು. ಪರ್ಷಿಯಾದಲ್ಲಿ ಮತ್ತೆ ಕೆಲವು ಪರ್ಷಿಯಾ ವರ್ತಕರನ್ನು ಕೂಡಿಕೊಂಡು ಬಾಡಿಗೆ ಹಡಗಿನಲ್ಲಿ ಇಂಡಿಯಾ ದೇಶಕ್ಕೆ ಪ್ರಯಾಣ ಹೊರಟನು. ಇಂಡಿಯಾದೇಶದ ಮಲಬಾರ್ ತೀರ, ವಿಜಯನಗರ, ಪೆನುಗೊಂಡ, ಮಲಯಪುರ ಮುಂತಾದ ಸ್ಥಳಗಳನ್ನೂ, ಸಿಲೋನ್, ಸುಮಾತ್ರ ಮತ್ತು ಜಾವಾ ದ್ವೀಪಗಳನ್ನೂ, ಕೊನೆಯದಾಗಿ ದಕ್ಷಿಣ ಚೀನಾದೇಶವನ್ನೂ ನೋಡಿಕೊಂಡು ತನ್ನ ದೇಶಕ್ಕೆ ಹಿಂದಿರುಗುವಾಗ ಇಥಿಯೋಪಿಯಾದೇಶದ ಸಮುದ್ರತೀರವನ್ನು ಹಾಯ್ದು ಕೆಂಪು ಸಮುದ್ರದ ಮೂಲಕ ಕೈರೋ ಪಟ್ಟಣವನ್ನು ತಲುಪಿದನು. ಕೈರೋ ಪಟ್ಟಣದಲ್ಲಿ ಅವನ ಹೆಂಡತಿಯೂ, ಪ್ರವಾಸಕಾಲದಲ್ಲಿ ಹುಟ್ಟಿದ ನಾಲ್ಕು ಮಕ್ಕಳ ಪೈಕಿ ಇಬ್ಬರು ಮಕ್ಕಳೂ ತೀರಿಹೋದರು. ಸುಮಾರು ಇಪ್ಪತ್ತೈದು ವರ್ಷಗಳ ನಂತರ, ಅಂದರೆ ಕ್ರಿ.ಶ. ೧೪೪೪ರಲ್ಲಿ, ನಿಕೊಲೊ ಕೊಂತಿ ವೆನೀಸಿಗೆ ಹಿಂದಿರುಗಿದನು.

ಕೊಂತಿ ವಿಜಯನಗರಕ್ಕೆ ಬಂದಾಗ ಆಗತಾನೆ ಪಟ್ಟಕ್ಕೆ ಬಂದಿದ್ದ ಎರಡನೇ ದೇವರಾಯ ರಾಜ್ಯವಾಳುತ್ತಿದ್ದನು. ವಿಜಯನಗರದ ಬಗ್ಗೆ ಇವನು ಹೇಳಿರುವ ಅನೇಕ ವಿಷಯಗಳು ಬಹಳ ಗಮನಾರ್ಹವಾಗಿವೆ.

ಕಾಲಕೇಶಿಯನ್ನು (ಬಹುಶಃ ಈಗಿನ ಜಾಸ್ಕ್) ಬಿಟ್ಟು ಹೊರಟು ಒಂದು ತಿಂಗಳ ಕಾಲ ಪ್ರಯಾಣಮಾಡಿ, ಇಂಡಸ್ ನದೀಮುಖಜವನ್ನು ದಾಟಿ, ಭವ್ಯ ನಗರವಾದ ಕಂಬೈತಾಕ್ಕೆ (ಕ್ಯಾಂಬೆಗೆ) ಬಂದೆ.

ಕಂಬೈತಾದಲ್ಲಿ ಇಪ್ಪತ್ತು ದಿವಸಗಳು ನಿಂತು ಆಮೇಲೆ ಮುಂದೆ ಪ್ರಯಾಣ ಮಾಡಿ ಸಮುದ್ರದ ದಡದಲ್ಲಿರುವ ಎರಡು ನಗರಗಳಿಗೆ ಬಂದೆ. ಒಂದರ ಹೆಸರು ಪಕಮೂರಿಯ:

[1] ಇನ್ನೊಂದರ ಹೆಸರು ಹೆಲ್ಲಿ.[2] ಸ್ಥಳದ ಭಾಷೆಯಲ್ಲಿ ಕರೆಯುವ ಬೆಳದಿ, ಗೆಬೆಲಿ, ನೀಲಿ ಮತ್ತು ಶುಂಠಿ ಎಂಬವುಗಳನ್ನು ಈ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಶುಂಠಿ ಒಂದು ಕುರುಚಲು ಗಿಡದ ಬೇರು. ಈ ಗಿಡ ಎರಡು ಮೊಳ ಎತ್ತರ ಬೆಳೆಯುತ್ತದೆ. ಎಲೆಗಳು ಅಗಲವಾಗಿರುತ್ತವೆ. ಬೇರನ್ನು ಅಗೆದು ಅದಕ್ಕೆ ಬೂದಿ ಬೆರಸಿ ಮೂರು ದಿವಸ ಬಿಸಿಲಿನಲ್ಲಿ ಒಣಗಿಸುತ್ತಾರೆ.

ಮೇಲೆ ಹೇಳಿದ ಸ್ಥಳಗಳಿಂದ ಹೊರಟು, ಭೂಭಾಗದೊಳಕ್ಕೆ ಮುನ್ನೂರು ಮೈಲಿ ಪ್ರಯಾಣ ಮಾಡಿ, ಭವ್ಯ ನಗರವಾದ ಬಿಜೆನೆಗಾಲಿಯಾ (ವಿಜಯನಗರ) ಎಂಬ ಸ್ಥಳಕ್ಕೆ ಬಂದೆ. ಇದು ಬಹಳ ಕಡಿದಾದ ಪರ್ವತಗಳಿಗೆ[3] ತೀರಾ ಸಮೀಪದಲ್ಲಿದೆ. ನಗರದ ಸುತ್ತಳತೆ ಅರುವತ್ತು ಮೈಲಿ. ಸುತ್ತ ಕಟ್ಟಿರುವ ಕೋಟೆ ಪರ್ವತಗಳಷ್ಟು ಎತ್ತರವಾಗಿದ್ದು ಅವುಗಳ ಬಡುದಲ್ಲಿರುವ ಕಣಿವೆಗಳನ್ನು ಆಕ್ರಮಿಸಿಕೊಂಡಿದೆ. ಈ ನಗರದಲ್ಲಿ ಶಸ್ತ್ರಾಸ್ತ್ರಗಳಲ್ಲಿ ಪ್ರವೀಣರಾದ ತೊಂಬತ್ತು ಸಾವಿರ ಜನರಿದ್ದಾರೆಂದು ಅಂದಾಜು ಹಾಕಲಾಗಿದೆ. ಇಲ್ಲಿಯ ನಿವಾಸಿಗಳು ತಮ್ಮ ಇಚ್ಛೆ ಬಂದಷ್ಟು ಜನ ಹೆಂಡತಿಯರನ್ನು ಮದುವೆ ಆಗುತ್ತಾರೆ. ಗಂಡನು ಸತ್ತರೆ ಹೆಂಡತಿಯರೆಲ್ಲ ಚಿತೆಯಲ್ಲಿ ಬಿದ್ದು ಸಾಯುತ್ತಾರೆ.

ಇಲ್ಲಿಯ ರಾಜನು[4] ಇಂಡಿಯಾ ದೇಶದ ರಾಜರೆಲ್ಲರಿಗಿಂತ ಬಹಳ ಬಲಾಢ್ಯನಾಗಿದ್ದಾನೆ. ಇವನಿಗೆ ಹನ್ನೆರಡು ಸಾವಿರ ಹೆಂಡತಿಯರಿದ್ದಾರೆ. ಇವರಲ್ಲಿ ನಾಲ್ಕು ಸಾವಿರ ಜನ ಅವನು ಹೋದೆಡೆಯಲ್ಲೆಲ್ಲಾ ಕಾಲ್ನಡಗೆಯಲ್ಲಿ ಹೋಗುತ್ತಾರೆ. ಇವರದು ಮುಖ್ಯವಾಗಿ ಅಡುಗೆಯ ಕೆಲಸ. ಇವರಿಗಿಂತಲೂ ಹೆಚ್ಚು ರೂಪವತಿಯರಾದ ನಾಲ್ಕುಸಾವಿರ ಹೆಂಡತಿಯರು ಕುದುರೆಗಳ ಮೇಲೆ ಸವಾರಿ ಮಾಡುತ್ತಾ ಹೋಗುತ್ತಾರೆ. ಉಳಿದವರನ್ನು ಪಲ್ಲಕಿಗಳ ಮೇಲೆ ಗಂಡಸರು ಹೊತ್ತುಕೊಂಡು ಹೋಗುತ್ತಾರೆ. ಇವರಲ್ಲಿ ಎರಡುಮೂರುಸಾವಿರ ಹೆಂಡತಿಯರು ರಾಜನು ಸತ್ತಾಗ ತಮ್ಮ ಆತ್ಮಸಂತೋಷದಿಂದ ಚಿತೆಯೊಳಗೆ ಬಿದ್ದು ಪ್ರಾಣತ್ಯಾಗ ಮಾಡುತ್ತೇವೆಂಬ ವಾಗ್ದಾನಮಾಡಿ ರಾಜನ ಕೈಹಿಡಿದಿರುತ್ತಾರೆ.

ಬಿಜೆನೆಗೇಲಿಯಾದಿಂದ ಎಂಟು ದಿವಸ ಪ್ರಯಾಣ ಮಾಡಿದರೆ ಪೆಲಗೊಂಡ (ಪೆನುಗೊಂಡ?) ಎಂಬ ಬಹು ಭವ್ಯವಾದ ನಗರ ಸಿಕ್ಕುತ್ತದೆ. ಇದು ಮೇಲೆ ಹೇಳಿದ ರಾಜನ ಅಧೀನಕ್ಕೆ ಒಳಪಟ್ಟಿದೆ. ಇದರ ಸುತ್ತಳತೆ ಹತ್ತು ಮೈಲಿಗಳು. ಇಲ್ಲಿಂದ ಭೂಮಾರ್ಗವಾಗಿ ಇಪ್ಪತ್ತು ದಿವಸಗಳು ಪ್ರಯಾಣಮಾಡಿದರೆ ರೇವು ಪಟ್ಟಣವಾದ ಪೆಡಿಫೆಟಾನಿಯ[5] ಎಂಬ ಸ್ಥಳ ಸಿಕ್ಕುತ್ತದೆ. ಹೋಗುವಾಗ ದಾರಿಯಲ್ಲಿ ಒಡೆಘೀರಿಯಾ (ಉದಯಗಿರಿ) ಮತ್ತು ಸೆಂಡರ್‌ಘೀರಿಯಾ (ಚಂದ್ರಗಿರಿ) ಎಂಬ ಪಟ್ಟಣಗಳೂ ಸಿಕ್ಕುತ್ತವೆ. ಇಲ್ಲಿ ಶ್ರೀಗಂಧದ ಮರ ಬೆಳೆಯುತ್ತದೆ.

ಬಿಜನೆಗೇಲಿಯಾದಲ್ಲಿಯೂ (ವಿಜಯನಗರ) ಕೂಡ ವರ್ಷಕ್ಕೊಮ್ಮೆ ದೇವರ ವಿಗ್ರಹ ವನ್ನು ಎರಡು ರಥಗಳ ಮಧ್ಯೆ ಇಟ್ಟು ಮೆರವಣಿಗೆ ಮಾಡುತ್ತಾರೆ. ಈ ರಥಗಳಲ್ಲಿ ಸರ್ವಾಲಂಕೃತವಾದ ಗಾಯಕಿಯರು ದೇವರ ಭಜನೆ ಮಾಡುತ್ತಿರುತ್ತಾರೆ. ಜನಗಳ ಗುಂಪು ವಿಗ್ರಹವನ್ನು ಹಿಂಬಾಲಿಸಿ ಹೋಗುತ್ತಿರುತ್ತದೆ. ವಿಶೇಷ ಭಕ್ತಿ ಇರುವ ಅನೇಕರು ರಥದ ಚಕ್ರಕ್ಕೆ ಮೈಒಡ್ಡಿ ಪ್ರಾಣತ್ಯಾಗ ಮಾಡುತ್ತಾರೆ. ಮತ್ತೆ ಕೆಲವರು ತಮ್ಮ ಪಕ್ಕೆಯಲ್ಲಿ ತೂತುಮಾಡಿ ಅದರಲ್ಲಿ ಹಗ್ಗವನ್ನು ಪೋಣಿಸಿ ರಥಕ್ಕೆ ಅಲಂಕಾರಿಕವಾಗಿ ತೂಗುಹಾಕಿಕೊಳ್ಳುತ್ತಾರೆ. ಹೀಗೆ ತೂಗುಹಾಕಿಕೊಂಡು ವಿಗ್ರಹದೊಡನೆ ಮೆರವಣಿಗೆ ಹೋಗುತ್ತಾರೆ. ಈ ತರಹ ಬಲಿದಾನ ಎಲ್ಲಾ ಬಲಿದಾನಗಳಿಗಿಂತ ಉತ್ಕೃಷ್ಟವೆಂದು ಇವರು ಭಾವಿಸುತ್ತಾರೆ.

ವರ್ಷದಲ್ಲಿ ಮೂರು ದೊಡ್ಡ ಹಬ್ಬಗಳನ್ನು ಆಚರಿಸುತ್ತಾರೆ. ಒಂದು ಹಬ್ಬದಲ್ಲಿ ಸ್ತ್ರೀಪುರುಷರಾದಿಯಾಗಿ ನದಿ ಅಥವಾ ಸಮುದ್ರದಲ್ಲಿ ಸ್ನಾನಮಾಡಿ ಹೊಸ ಬಟ್ಟೆಗಳನ್ನು ಉಟ್ಟು ಮೂರು ದಿವಸ ನೃತ್ಯ, ಗಾಯನ ಮತ್ತು ಭೋಜನದಲ್ಲಿ ಕಳೆಯುತ್ತಾರೆ.[6] ಇನ್ನೊಂದು ಹಬ್ಬದಲ್ಲಿ ದೇವಸ್ಥಾನಗಳಲ್ಲಿಯೂ, ಮನೆಯ ಮೇಲ್ಛಾವಣಿಯ ಮೇಲೂ ಹಗಲು ರಾತ್ರಿ ಸುಸಿಮನ್ನಿ ಎಣ್ಣೆಯ ಅಸಂಖ್ಯಾತ ದೀಪಗಳನ್ನು ಉರಿಸುತ್ತಾರೆ.[7] ಇನ್ನೊಂದು ಒಂಬತ್ತು ದಿವಸಗಳ ಹಬ್ಬ. ಆಗ ದೊಡ್ಡ ಬೀದಿಗಳಲ್ಲಿ ಹಡಗಿನ ಪಠಸ್ತಂಭದಂತಹ ಸ್ತಂಭಗಳನ್ನು ನೆಟ್ಟು ಬಹು ಸುಂದರವಾದ ಜರತಾರೀ ಬಟ್ಟೆಯ ಚೂರುಗಳನ್ನು ಮೇಲ್ಗಡೆ ಸಿಕ್ಕಿಸುತ್ತಾರೆ. ಈ ಸ್ತಂಭದ ತುದಿಯಲ್ಲಿ ದಿನವೂ ದೇವರಲ್ಲಿ ಅಪಾರ ಭಕ್ತಿಯುಳ್ಳ ಮತ್ತು ಎಂಥ ಕಷ್ಟವನ್ನಾದರೂ ಸ್ಥಿರ ಮನಸ್ಸಿನಿಂದ ಸಹಿಸಬಲ್ಲ ಒಬ್ಬನನ್ನು ಕುಳ್ಳಿರಿಸುತ್ತಾರೆ. ಇವನ ಕಡೆಗೆ ಕಿತ್ತಳೆ, ನಿಂಬೆ, ಮುಂತಾದ ಹಣ್ಣುಗಳನ್ನು ಎಸೆಯುತ್ತಾರೆ.[8]  ಇವಲ್ಲದೆ ಮೂರು ದಿನಗಳ ಹಬ್ಬ ಮತ್ತೊಂದಿದೆ. ಈ ಹಬ್ಬದಲ್ಲಿ ಎಲ್ಲರ ಮೇಲೂ, ರಾಜರಾಣಿಯರನ್ನೂ ಬಿಡದೆ, ಓಕುಳಿ ನೀರನ್ನು ಎರಚುತ್ತಾರೆ. ಈ ಓಕುಳಿ ನೀರನ್ನು ಈ ಉದ್ದೇಶಕ್ಕಾಗಿಯೇ ದಾರಿಯ ಪಕ್ಕದಲ್ಲಿ ಇಟ್ಟಿರುತ್ತಾರೆ. ಓಕುಳಿ ಎರಚಿದರೂ ಎಲ್ಲರೂ ನಗುತ್ತಲೇ ಇರುತ್ತಾರೆ.[9]

ಮದುವೆಗಳನ್ನು ಬಹು ವೈಭವದಿಂದ ಮಾಡುತ್ತಾರೆ. ಹಾಡುತ್ತಾರೆ, ವಾದ್ಯಗಳನ್ನು ಬಾರಿಸುತ್ತಾರೆ, ಭೋಜನ ಕೂಟಗಳನ್ನು ಏರ್ಪಡಿಸುತ್ತಾರೆ. ಕೆಲವರು ಹಾಡಿದರೆ ಮತ್ತೆ ಕೆಲವರು ನಮ್ಮ ರೀತಿಯಲ್ಲಿ ಕುಣಿಯುತ್ತಾರೆ. ಕೆಲವರು ಬಣ್ಣದ ಕೋಲುಗಳನ್ನು ಹಿಡಿದು ಕೋಲಾಟ ಮಾಡುತ್ತಾರೆ. ಇದನ್ನೆಲ್ಲಾ ನೋಡುವುದಕ್ಕೆ ಬಹಳ ಆನಂದವಾಗುತ್ತದೆ.

ಗಂಗಾನದಿಯ ಉತ್ತರಕ್ಕಿರುವ ಜನರಲ್ಲಿ ಮೇಲ್ತರಗತಿಯ ಜನರನ್ನು ಬಿಟ್ಟರೆ ಬೇರೆಯವರು ಬಿಸಿನೀರಿನಲ್ಲಿ ಸ್ನಾನ ಮಾಡುವುದಿಲ್ಲ. ಅದರ ಬದಲು ದಿನಕ್ಕೆ ಹಲವಾರು ಸಲ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಎಣ್ಣೆ ತೆಗೆಯುವುದಿಲ್ಲ. ನಮ್ಮಲ್ಲಿ ಬೆಳೆಯುವ ಹಣ್ಣುಗಳಾದ ಪೀಚ್‌ಹಣ್ಣು, ಪೇರುಹಣ್ಣು, ಚೆರ್ರಿಹಣ್ಣು, ನಿಂಬೆಹಣ್ಣು ಇಲ್ಲಿ ಸಿಕ್ಕುವುದಿಲ್ಲ.

ಪೆಡಿಫೆಟಾನಿಯಾ ನಾಡಿನಲ್ಲಿ ಮೂರು ಮೊಳ ಎತ್ತರವಿರುವ ಒಂದು ಮರ ಬೆಳೆಯುತ್ತದೆ. ಹಣ್ಣು ಬಿಡುವುದಿಲ್ಲ. ಯಾರಾದರೂ ಹತ್ತಿರ ಹೋದರೆ ಅದು ಸಂಕುಚಿತವಾಗಿ ತನ್ನ ಕೊಂಬೆಗಳನ್ನೆಲ್ಲಾ ಎಳೆದುಕೊಳ್ಳುತ್ತದೆ. ದೂರಹೋದರೆ ಪುನಃ ಹರಡಿಕೊಳ್ಳುತ್ತದೆ. ಇದನ್ನು ನಿಗರ್ವಿ ಎಂಬ ಅರ್ಥ ಬರುವ ಹೆಸರಿನಿಂದ ಕರೆಯುತ್ತಾರೆ.[10]

ಬಿಜನೆಗೇಲಿಯಾದಿಂದ ಉತ್ತರಕ್ಕೆ ಹದಿನೈದು ದಿವಸ ಪ್ರಯಾಣ ಮಾಡಿದರೆ ಅಲ್ಬೇನಿಗರಾಸ್ ಎಂಬ ಪರ್ವತವಿದೆ. ಈ ಪರ್ವತದ ಸುತ್ತ ನೀರಿನ ಕೊಳಗಳಿವೆ. ಈ ಕೊಳಗಳಲ್ಲಿ ವಿಷಜಂತುಗಳೂ ಪರ್ವತದಲ್ಲಿ ಹಾವುಗಳೂ ತುಂಬಿವೆ. ಈ ಪರ್ವತದಲ್ಲಿ ವಜ್ರಗಳು ಸಿಕ್ಕುತ್ತವೆ.[11] ಈ ವಜ್ರಗಳನ್ನು ಶೇಖರಿಸುವ ರೀತಿ ಬಹು ಸ್ವಾರಸ್ಯವಾಗಿದೆ. ಈ ಪರ್ವತದ ಮೇಲಕ್ಕೆ ಒಂದು ಎತ್ತನ್ನು ಹೊಡೆದುಕೊಂಡು ಹೋಗಿ, ಅಲ್ಲಿ ಅದನ್ನು ಕತ್ತರಿಸಿ ಬಿಸಿಯಾದ ಮತ್ತು ರಕ್ತಮಯವಾದ ಮಾಂಸದ ತುಂಡುಗಳನ್ನು ಅದಕ್ಕೋಸ್ಕರವೇ ನಿರ್ಮಿತವಾದ ಯಂತ್ರಗಳ ಸಹಾಯದಿಂದ ಇನ್ನೊಂದು ಬೆಟ್ಟದ ತುದಿಗೆ ಎಸೆಯುತ್ತಾರೆ. ಅಲ್ಲಿ ಬಿದ್ದ ಮಾಂಸದ ಚೂರಿಗೆ ವಜ್ರಗಳು ಅಂಟಿಕೊಳ್ಳುತ್ತವೆ. ಆ ಮಾಂಸದ ಚೂರುಗಳನ್ನು ಕಚ್ಚಿಕೊಂಡು ಹದ್ದುಗಳೂ, ರಣಹದ್ದುಗಳೂ ಸರ್ಪಗಳಿಲ್ಲದ ಸ್ಥಳಗಳಿಗೆ ಹೋಗಿ ಕುಳಿತು ಕೊಳ್ಳುತ್ತವೆ. ಆ ಸ್ಥಳಕ್ಕೆ ಜನರು ಹೋಗಿ ಅಲ್ಲಿ ಉದುರಿದ ವಜ್ರಗಳನ್ನು ಶೇಖರಿಸುತ್ತಾರೆ. ಇದಕ್ಕಿಂತಲೂ ಬೆಲೆಯಾದ ವಜ್ರಗಳನ್ನು ಭೂಮಿಯಿಂದ ಅಗೆದು ತೆಗೆಯುತ್ತಾರೆ.

ವರ್ಷವನ್ನು ಹನ್ನೆರಡು ತಿಂಗಳಾಗಿ ವಿಭಾಗಿಸಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ನಾಣ್ಯಗಳಿಲ್ಲ. ಅದರ ಬದಲು ನಾವು ಬೆಕ್ಕಣ್ಣುಮಣಿ ಎಂದು ಕರೆಯುವ ಮಣಿಗಳನ್ನು ಉಪಯೋಗಿಸುತ್ತಾರೆ. ಕೆಲವು ಕಡೆ ದಬ್ಬಳದೋಪಾದಿಯಲ್ಲಿ ಮಾಡಿದ ಕಬ್ಬಿಣದ ತುಂಡು ಗಳನ್ನು ಉಪಯೋಗಿಸುತ್ತಾರೆ. ಮತ್ತೆ ಕೆಲವು ಕಡೆ ರಾಜನ ಹೆಸರನ್ನು ಕೆತ್ತಿದ ರಟ್ಟುಗಳನ್ನು ಉಪಯೋಗಿಸುತ್ತಾರೆ. ಇಂಡಿಯಾದ ಹಿಂಬದಿಯಲ್ಲಿ ವೆನೀಸಿನ ಡುಕೆಟ್ ನಾಣ್ಯಗಳನ್ನು ಉಪಯೋಗಿಸುತ್ತಾರೆ. ಕೆಲವು ಕಡೆ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿವೆ.

ಯುದ್ಧ ಮಾಡುವಾಗ ಭಲ್ಲೆ ಕತ್ತಿ ಮತ್ತು ದುಂಡಾದ ಗುರಾಣಿಗಳನ್ನೂ ಬಿಲ್ಲುಗಳನ್ನೂ ಉಪಯೋಗಿಸುತ್ತಾರೆ. ಕೆಲವು ಭಾಗಗಳಲ್ಲಿ ಶಿರಸ್ತ್ರಾಣಗಳನ್ನು ಎದೆಕವಚವನ್ನೂ ಉಪಯೋಗಿ ಸುತ್ತಾರೆ. ಮಧ್ಯ ಇಂಡಿಯಾದ ಜನರು ಗುಂಡುಗಳನ್ನು ಸಿಡಿಸುವ ಯಂತ್ರವನ್ನೂ, ಸಿಡಿಗುಂಡು ಗಳನ್ನೂ ಉಪಯೋಗಿಸುತ್ತಾರೆ. ಅಲ್ಲದೆ ನಗರಗಳಿಗೆ ಮುತ್ತಿಗೆಹಾಕಲು ಬೇಕಾದ ಆಯುಧ ಗಳನ್ನೂ ಉಪಯೋಗಿಸುತ್ತಾರೆ.[12]

ಕಾಂಬೈತಾ ನಿವಾಸಿಗಳು ಮಾತ್ರ ಕಾಗದವನ್ನು ಉಪಯೋಗಿಸುತ್ತಾರೆ. ಉಳಿದ ಕಡೆಗಳಲ್ಲೆಲ್ಲಾ ಮರದ ಎಲೆಗಳ ಮೇಲೆ ಬರೆದು ಅವುಗಳನ್ನು ಜೋಡಿಸಿ ಸುಂದರವಾದ ಪುಸ್ತಕಗಳನ್ನು ಮಾಡುತ್ತಾರೆ. ನಾವು ಅಥವಾ ಯಹೂದಿಗಳು ಬರೆಯುವಂತೆ ಎಡದಿಂದ ಬಲಕ್ಕಾಗಲೀ, ಬಲದಿಂದ ಎಡಕ್ಕಾಗಲೀ ಬರೆಯದೆ, ಮೇಲಿನಿಂದ ಕೆಳಕ್ಕೆ ಬರೆಯುತ್ತಾರೆ. ಇಂಡಿಯಾ ದೇಶದಲ್ಲಿ ನಾನಾ ಭಾಷೆಗಳೂ, ಭಾಷಾರೂಪಗಳೂ ಇವೆ.

ಗುಲಾಮರು ಬೇಕಾದಷ್ಟು ಜನರಿದ್ದಾರೆ. ಸಾಲ ತೀರಿಸಲು ಸಾಧ್ಯವಿಲ್ಲದ ಸಾಲಗಾರ ಸಾಲ ಕೊಟ್ಟವನ ಸೊತ್ತಾಗುತ್ತಾನೆ. ಇವರು ನಮ್ಮನ್ನು ಫರಂಗಿಯವರೆಂದು ಕರೆಯುತ್ತಾರೆ. ವಿವೇಕದಲ್ಲಿ ತಮ್ಮನ್ನು ಮೀರಿಸುವವರು ಯಾರೂ ಇಲ್ಲವೆಂದು ಭಾವಿಸುತ್ತಾರೆ. ತಮಗೆ ಮಾತ್ರ ಎರಡು ಕಣ್ಣುಗಳಿವೆ ಉಳಿದವರಿಗೆ ಒಂದೇ ಕಣ್ಣಿದೆಯೆಂದು ಭಾವಿಸುತ್ತಾರೆ.

ಒಬ್ಬನ ಮೇಲೆ ದುಷ್ಕೃತ್ಯದ ಆರೋಪಣೆ ಬಂದರೆ ಸಾಕ್ಷಿಗಳು ಇಲ್ಲದಿದ್ದಲ್ಲಿ ಅಪರಾಧಿ ಪ್ರಮಾಣ ಮಾಡುವುದಕ್ಕೆ ಅವಕಾಶ ಕೊಡುತ್ತಾರೆ. ಮೂರು ತರಹ ಪ್ರಮಾಣಗಳಿವೆ. ಒಂದರಲ್ಲಿ ಅಪರಾಧಿ ದೇವರ ಮುಂದೆ ನಿಂತು ತಾನು ನಿರಪರಾಧಿಯೆಂದು ಹೇಳಿ ಕೆಂಪಗೆ ಕಾದ ಕಬ್ಬಿಣವನ್ನು ನಾಲಗೆಯಿಂದ ನೆಕ್ಕಬೇಕು. ಅವನಿಗೆ ಏನೂ ಅಪಾಯವಾಗದಿದ್ದರೆ ನಿರಪರಾಧಿಯೆಂದು ತೀರ್ಮಾನಿಸುತ್ತಾರೆ. ಮತ್ತೊಂದು ವಿಧಾನದಲ್ಲಿ ದೇವರ ಮುಂದೆ ಕಾದ ಕಬ್ಬಿಣದ ತುಂಡನ್ನೋ ಅಥವಾ ಕಾದ ತಗಡನ್ನೋ ಕೈಯಲ್ಲಿ ಹಿಡಿದು ನಾಲ್ಕಾರು ಹೆಜ್ಜೆ ನಡೆದುಕೊಂಡು ಹೋಗಬೇಕು. ಅವನಿಗೆ ಏನೂ ಅಪಾಯವಾಗದಿದ್ದರೆ ಅವನು ನಿರಪರಾಧಿಯೆಂದು ತೀರ್ಮಾನಿಸುತ್ತಾರೆ. ಮೂರನೆಯದು ಸರ್ವೇಸಾಮಾನ್ಯವಾದ ವಿಧಾನ. ದೇವರ ಮುಂದೆ ಕುದಿಯುವ ತುಪ್ಪವನ್ನಿಟ್ಟು ಅದರೊಳಕ್ಕೆ ಅಪರಾಧಿಯ ಎರಡು ಬೆರಳುಗಳನ್ನು ಅದ್ದಿಸುತ್ತಾರೆ. ಹಾಗೆ ಮಾಡಿದ ತಕ್ಷಣವೇ ಬೆರಳುಗಳ ಸುತ್ತ ಬಟ್ಟೆ ಸುತ್ತಿ ಮುದ್ರೆ ಒತ್ತುತ್ತಾರೆ. ಮೂರನೆಯ ದಿವಸ ಬಟ್ಟೆಯನ್ನು ಬಿಚ್ಚಿ ನೋಡುತ್ತಾರೆ. ಬೆರಳುಗಳು ಸುಟ್ಟಿದ್ದರೆ ಅಪರಾಧಿ ಎಂತಲೂ, ಸುಡದಿದ್ದರೆ ನಿರಪರಾಧಿ ಎಂತಲೂ ತೀರ್ಮಾನಿಸುತ್ತಾರೆ.

ನಮ್ಮ ದೇಶದಲ್ಲಿ ಜನಗಳ ಪ್ರಾಣಹರಣ ಮಾಡುವಂಥ ಉಪದ್ರವಗಳು ಈ ದೇಶದಲ್ಲಿ ಇಲ್ಲವೇ ಇಲ್ಲ. ಈ ಕಾರಣದಿಂದ ಇಲ್ಲಿಯ ಜನಸಂಖ್ಯೆ ನಂಬಿಕೆಗೂ ಮೀರಿದ್ದು. ಇವರ ಸೈನ್ಯದಲ್ಲಿ ಲಕ್ಷಾಂತರ ಜನರು ಇರುತ್ತಾರೆ. ಒಂದು ಯುದ್ಧದಲ್ಲಿ ವಿಜಯಿಗಳಾದವರು ವಿಜಯ ಸಂಕೇತಕ್ಕಾಗಿ ಹನ್ನೆರಡು ರಥಗಳಲ್ಲಿ ತಲೆಗಳನ್ನು ತುಂಬಿಕೊಂಡು ಬಂದಿದ್ದರು. ಈ ತಲೆಗಳನ್ನು ತಲೆಗಳ ಹಿಂಬದಿಯ ಕೂದಲಿಗೆ ರೇಷ್ಮೆ ಮತ್ತು ಜರತಾರಿಯ ಹುರಿ ಕಟ್ಟಿ ತಂದಿದ್ದರು. ನಾನು ಕೆಲವು ಯುದ್ಧಗಳನ್ನು ಪ್ರೇಕ್ಷಕನಾಗಿ ನೋಡಿದ್ದುಂಟು. ಕೇವಲ ಪ್ರೇಕ್ಷಕನೆಂದು ಎರಡು ಪಕ್ಷಗಳಿಗೂ ಗೊತ್ತಾದ್ದರಿಂದ ನನಗೆ ಯಾವ ತೊಂದರೆಯೂ ಆಗಲಿಲ್ಲ.

—-
ಆಕರ : ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ (ಸಂಪುಟ-೨), ೧೯೬೬, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪುಟ ೧೨೫-೧೨೮.[1]     ಪಕಮೂರಿಯ: ಇದು ಬಹುಶಃ ಬಾರ‌್ಕೂರು ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೋಕಿನ ಈ ಸ್ಥಳವನ್ನು ಕೆಲವು ಪ್ರವಾಸಿಗಳು ಫಾಕನೂರು ಎಂತಲೂ ಕರೆದಿದ್ದಾರೆ. ಟಾಃಲೆಮಿ ಕರೆದಿರುವ ಬೈಜಂತಿಯೋನ್ ಎಂಬ ಸ್ಥಳ ರತ್ನಗಿರಿ ಜಿಲ್ಲೆಯ ವಿಜಯದುರ್ಗ ಅಲ್ಲ, ಉತ್ತರ ತುಳುವನಾಡಿನಲ್ಲಿರುವ ಅಂದರೆ ಈಗಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕುಂದಾಪುರವೆಂತಲೂ, ಕುಂದಾಪುರಕ್ಕೆ ತುಳುವ ಇತಿಹಾಸದ ಪ್ರಕಾರ ಜಯಂತಿಪುರ ಅಥವಾ ಜಯಂತಿಕಾ ಎಂಬ ಹೆಸರುಗಳೂ ಇದ್ದುವೆಂದು ಗೊತ್ತಾಗುತ್ತದೆ. ಪರಶುರಾಮ ಸೃಷ್ಟಿಯಲ್ಲಿ ಜಯಂತಿ ದ್ವೀಪವೂ ಒಂದು ಎಂದು ಗೊತ್ತಾಗುತ್ತದೆ. ಸಮುದ್ರ ತೀರದಲ್ಲಿ ಬನವಾಸಿ ಎಂಬ ಸ್ಥಳವಿದೆಯೆಂದು ಆಲ್ಬೆರೂನಿ ಹೇಳಿದ್ದಾನೆ. ಶಿಲಾಲಿಪಿಗಳಾನುಸಾರ ಬನವಾಸಿಗೆ ಜಯಂತಿಪುರ ಮತ್ತು ವೈಜಯಂತಿಗಳೆಂಬ ಹೆಸರುಗಳೂ ಉಂಟು. ಬಾರಕೂರು ಕುಂದಾಪುರಕ್ಕೆ ಅತಿ ಸಮೀಪದಲ್ಲಿದೆ. ಬಾರಕೂರಿಗೆ ಬಾರಹ್‌ಕನ್ಯಾಪುರ ಅಥವಾ ಹನ್ನೆರಡು ಕನ್ಯೆಯರ ಪುರ ಎಂಬ ಹೆಸರೂ ಇತ್ತು.

[2]     ಹೆಲ್ಲಿ: ಇದು ಮೌಂಟ್ ಡೆಲ್ಲಿ.

[3]     ವಿಜಯನಗರದ ಸುತ್ತ ಪರ್ವತಗಳು ಇಲ್ಲ. ಕೇವಲ ಅಡ್ಡಾದಿಡ್ಡಿಯಾಗಿರುವ ಕಲ್ಲುಗುಡ್ಡಗಳೇ ಅಲ್ಲಿರುವುದು. ಆದ್ದರಿಂದ ಇಲ್ಲಿ ಹೇಳಿರುವ ಕಡಿದಾದ ಪರ್ವತಗಳು ಪಶ್ಚಿಮಘಟ್ಟಗಳಿದ್ದರೂ ಇರಬಹುದು. ನಿಕೊಲೊ ಸಮುದ್ರತೀರದಿಂದ ಯಾವ ಮಾರ್ಗದಲ್ಲಿ ಹೊರಟು ಪಶ್ಚಿಮಘಟ್ಟಗಳನ್ನು ದಾಟಿದ ಎಂಬುದು ಖಚಿತವಾಗಿಲ್ಲ.

[4]     ನಿಕೊಲೊ ವಿಜಯನಗರಕ್ಕೆ ಬಂದಾಗ ಆಳುತ್ತಿದ್ದ ರಾಜ ಎರಡನೇ ದೇವರಾಯ.

[5]     ಪೆಡಿಫೆಟಾನಿಯಾ : ತೆಲ್ಲಿಚೆರಿಯ ಬಳಿ ಇರುವ ಧರ್ಮಪುರಂ ಇರಬಹುದು.

[6]     ಇದು ಕನ್ನಡಿಗರ ಯುಗಾದಿ ಇರಬೇಕು. ಡೊಮಿಂಗೋ ಪಾಯಸನು ಈ ಹಬ್ಬ ಅಕ್ಟೋಬರ್ ಹನ್ನೆರಡನೇ ತಾರೀಖು ನಡೆಯಿತೆಂದು ಹೇಳುತ್ತಾನೆ. ಬಹುಶಃ ಇದು ತಪ್ಪೆಂದು ಕಾಣುತ್ತೆ.

[7]     ಇದು ದೀಪಾವಳಿ.

[8]     ಇದು ನವರಾತ್ರಿ ಹಬ್ಬ ಇರಬಹುದು.

[9]     ಇದು ಹೋಳೀ ಹಬ್ಬ.

[10]    ಇದು  ಮುಟ್ಟಿದರೆ ಮುನಿಯ ಎಂಬ ಹಬ್ಬುವ ಗಿಡ ಇರಬಹುದೇ?.

[11]    ಇದು ಕೃಷ್ಣಾ ನದಿಯ ಬಳಿ ಇದ್ದ ಗೋಲ್ಕೊಂಡ ಗಣಿ ಇರಬಹುದು. ಈ ಗಣಿ ಇದ್ದುದು ವಿಜಯನಗರದ ಉತ್ತರಕ್ಕಲ್ಲ, ಪೂರ್ವಕ್ಕೆ.

[12]    ಸಾಮಾನ್ಯವಾಗಿ ಬೆಣಚು ಕಲ್ಲಿನಿಂದ (Granite) ಮಾಡಿದ ಈ ಗುಂಡುಗಳನ್ನು ವಿಜಯನಗರದ ಸುತ್ತಮುತ್ತ ನೋಡಬಹುದು.

�A+a �� �� tyle=’font-size:12.0pt; font-family:Tunga’>ಯ ವಿವರಗಳನ್ನು ಸೂಚ್ಯವಾಗಿ ತಿಳಿಸುತ್ತದೆ. ಪ್ಯಾಸ್ ‘ಸಂಜೆ ಸಂತೆ’ಯ ವಿವರವನ್ನು ನೀಡಿದ್ದಾನೆ. ಅದು ನಮಗೆ ತಾಲ್ಲೂಕಿನಲ್ಲಿ ನಡೆಯುವ ವಿವರಗಳಂತಿವೆ:

ಅಲ್ಲಿ ನೀವು ಪ್ರತಿ ಸಂಜೆ ಸಂತೆಯೊಂದನ್ನು ನೋಡುವಿರಿ. ಅದರಲ್ಲಿ ಅವರು ಅನೇಕ ಸಾಮಾನ್ಯ ಕುದುರೆಗಳನ್ನು ಮತ್ತು ತಟ್ಟುಕುದುರೆಗಳನ್ನು ಹಾಗೂ ಅನೇಕ ಜಂಬೀರಗಳನ್ನು, ನಿಂಬೆಗಳನ್ನು, ಕಿತ್ತಲೆಗಳನ್ನು, ದ್ರಾಕ್ಷಿಗಳನ್ನು ಮತ್ತು ಪ್ರತಿಯೊಂದು ತರಹದ ಕಾಯಿಪಲ್ಯೆ ಮತ್ತು ಹಣ್ಣು ಹಂಪಲವನ್ನು ಮತ್ತು ಕಟ್ಟಿಗೆಯನ್ನು ಮಾರುತ್ತಾರೆ.

(ಡೊಮಿಂಗೊ ಪ್ಯಾಸ್, ಪು.೬೮)

ಪ್ಯಾಸ್ ಕುರಿ ಮಾರುವ ಸ್ಥಳಗಳನ್ನು ಕುರಿಗಳ ಕಸಾಯಿಖಾನೆಯನ್ನು ಕುರಿತು ಬರೆಯುವ ಭಾಗಗಳು ‘ಸಾಮಾಜಿಕ ಜೀವನ’ದ ಜೀವಂತ ಭಾಗಗಳೇ ಆಗಿವೆ. ಬಾರ್ಬೊಸಾ ನವರಾತ್ರಿ ಉತ್ಸವದ ಬಗ್ಗೆ ನೀಡಿರುವ ವರ್ಣನೆ ಕ್ವಚಿತ್ತಾಗಿದೆ. ಆದರೆ, ಪ್ಯಾಸ್ ನವರಾತ್ರಿ ಉತ್ಸವ ಕುರಿತು ನೀಡಿರುವ ವಿವರಗಳು ಮನೋಜ್ಞವಾಗಿವೆ. ಪ್ರತಿದಿನವೂ ನಡೆಯುವ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಆ ಚಿತ್ರಣವು ದೀರ್ಘವೂ ಸಮಕಾಲೀನ ವಿವರಗಳನ್ನು ಒಳಗೊಂಡಿದ್ದೂ ಆಗಿದೆ. ಪ್ಯಾಸ್ ಮಹಾಶಯನು ವರ್ತಕ, ಬ್ರಾಹ್ಮಣರ ಬಗೆಗೆ ಕೊಡುವ ಸಾಮಾಜಿಕ ವಿವರಗಳು ಐತಿಹಾಸಿಕ ವಿವರಗಳಿಗೆ ಪೂರಕವಾಗಿ ರುವುದನ್ನು ನಾವು ಗಮನಿಸಬಹುದು.

ವಿದೇಶಿ ಪ್ರವಾಸಿಗರಲ್ಲಿ ೧೬ನೇ ಶತಮಾನದ ಪೂರ್ವಾರ್ಧದಲ್ಲಿ ಬಂದ ನ್ಯೂನಿಜ್ ಪ್ರವಾಸಿ ಬರೆದ ಪ್ರವಾಸ ಕಥನವು ಅಬ್ದುಲ್ ರಜಾಕ್, ಬಾರ್ಬೊಸಾ, ಪ್ಯಾಸ್ ಇವರೆಲ್ಲರ ಬರೆಹಗಳಿಗಿಂತ ಬಹುದೀರ್ಘವಾಗಿದೆ. ಅವನು ರಾಜ, ರಾಜನ ಆಡಳಿತ, ಸುತ್ತಮುತ್ತಣ ಜನಜೀವನ, ಸಾಂಸ್ಕೃತಿಕ ಸಂಗತಿಗಳನ್ನು ವಿವರವಾಗಿ ನೀಡಿದ್ದಾನೆ. ವಿಜಯನಗರದ ಸಮಕಾಲೀನ ಸಮಾಜೋ-ರಾಜಕೀಯ ಸಂಗತಿಗಳನ್ನು ಕುರಿತು ಇವನು ನೀಡಿರುವಷ್ಟು ವಿವರಗಳು ಬೇರೆ ಯಾವ ಪ್ರವಾಸಿಗನೂ ನೀಡಿಲ್ಲದಿರುವುದು ಅವನ ವೈಶಿಷ್ಟ್ಯವಾಗಿದೆ. ಈತ ಕುಶಲ ರಾಜತಾಂತ್ರಿಕ; ಅವನ ಬರೆಹಗಳಲ್ಲಿ ಕಾಣಿಸುವ ರಾಜತಾಂತ್ರಿಕ ವಿವರಗಳು ನ್ಯೂನಿಜ್‌ನ ಮನೋಭಾವನೆ ಯನ್ನು ಪ್ರತಿಬಿಂಬಿಸುತ್ತವೆ. ಅವನು ಇಪ್ಪತ್ತೆರಡು ಅಧ್ಯಾಯಗಳಲ್ಲಿ ವಿಜಯನಗರದ ವಿವರಗಳನ್ನು ನೀಡಿದ್ದಾನೆ. ಅರಮನೆಯಲ್ಲಿ ನಡೆಯುತ್ತಿದ್ದ ದುಷ್ಟಕೂಟಗಳು, ಕುಟಿಲೋಪಾಯಗಳು, ಮಂತ್ರಿ, ಸಾಮಂತ, ಡಣ್ಣಾಯಕರ ಮನೋಭಾವಗಳನ್ನೂ ಬಹು ವಿವರವಾಗಿ ನ್ಯೂನಿಜ್ ವರ್ಣಿಸಿದ್ದಾನೆ. ಅವನು ನೀಡಿರುವ ವಿವರಗಳು ಚಾರಿತ್ರಿಕ ಸಂಗತಿಗಳಾಗಿರುವುದನ್ನು ವಿದ್ವಾಂಸರು ಒಪ್ಪಿದ್ದಾರೆ. ಒಂದು ಉದಾಹರಣೆಯನ್ನು ಮಾತ್ರ ಆಸಕ್ತಿಗಾಗಿ ನೋಡಬಹುದು. ರಾಜನ ಊಟದ ವಿವರ ಕುತೂಹಲಕಾರಿಯಾಗಿದೆ:

ತನ್ನ ಸ್ವಂತ ಸೇವೆಗಾಗಿ ಅವನು ಹತ್ತು ಜನ ಅಡುಗೆಯ ಸ್ತ್ರೀಯರನ್ನು ಮತ್ತು ತಾನು ಔತಣ ಕೊಟ್ಟ ಸಂದರ್ಭಗಳಿಗಾಗಿ ಕಾಯ್ದಿಟ್ಟ ಇತರರನ್ನು ಹೊಂದಿದ್ದಾನೆ. ಈ ಹತ್ತು ಜನ ರಾಜನನ್ನು ಬಿಟ್ಟು ಬೇರಾರಿಗೂ ಅಡಿಗೆ ಮಾಡುವುದಿಲ್ಲ. ಅಡುಗೆಮನೆಯ ಬಾಗಿಲಿಗೆ ಅವನು ಒಬ್ಬ ಬೀಜವೊಡೆದ ಪುರುಷನನ್ನು ರಕ್ಷಕನನ್ನಾಗಿ ಇರಿಸುತ್ತಾನೆ. ಅವನು ವಿಷದ ಭಯದಿಂದಾಗಿ ಯಾರಿಗೂ ಒಳಗೆ ಪ್ರವೇಶಿಸಲು ಕೊಡುವುದಿಲ್ಲ. ರಾಜ ಉಣ್ಣ ಬಯಸಿದಾಗ ಪ್ರತಿ ವ್ಯಕ್ತಿ ಹೊರಟುಹೋಗುತ್ತಾನೆ. ಮತ್ತು ತಮ್ಮ ಕರ್ತವ್ಯವಾಗಿದ್ದ ಕೆಲವು ಸ್ತ್ರೀಯರು ಬರುತ್ತಾರೆ.  ಮತ್ತು ಊಟಕ್ಕೆ ಸಿದ್ಧಗೊಳಿಸುತ್ತಾರೆ. ಅವರು ಅವನಿಗಾಗಿ ಬಂಗಾರದಿಂದ ಮಾಡಿದ, ದುಂಡಗಿನ, ಮೂರು ಕಾಲಿನ ಸ್ಟೂಲನ್ನು ಇಟ್ಟು ಅದರ ಮೇಲೆ ಭಕ್ಷ್ಯಗಳನ್ನು ಇಡುತ್ತಾರೆ. ಇವುಗಳನ್ನು ದೊಡ್ಡ ಬಂಗಾರದ ಪಾತ್ರೆಗಳಲ್ಲಿ ತರಲಾಗುತ್ತದೆ ಮತ್ತು ಚಿಕ್ಕ ಭಕ್ಷ್ಯಗಳನ್ನು ಬಂಗಾರದ ಬೋಗಣಿಗಳಲ್ಲಿ ತರಲಾಗುತ್ತದೆ. ಅವುಗಳಲ್ಲಿ ಕೆಲವೊಂದನ್ನು ಬೆಲೆಯುಳ್ಳ ಹರಳುಗಳಿಂದ  ಅಲಂಕರಿಸಲಾಗಿರುತ್ತದೆ. ಮೇಜಿನ ಮೇಲೆ ಅರಿವೆ ಇರುವುದಿಲ್ಲ. ಆದರೆ, ರಾಜ ಊಟ ಮುಗಿಸಿದಾಗ ಒಂದನ್ನು ತರಲಾಗುತ್ತದೆ ಮತ್ತು ಅವನು ತನ್ನ ಕೈಗಳನ್ನು ಮತ್ತು ಬಾಯಿಯನ್ನು ತೊಳೆದುಕೊಳ್ಳುತ್ತಾನೆ. ಸ್ತ್ರೀಯರು ಮತ್ತು ಬೀಜವೊಡೆದ ಪುರುಷರು ಅವನಿಗೆ  ಊಟ ಬಡಿಸುತ್ತಾರೆ.

 (ನ್ಯೂನಿಜ್, ಪು.೧೮೨)

ವಿಜಯನಗರದ ಪೂರ್ವೋತ್ತರ ಇತಿಹಾಸವನ್ನು ಕಟ್ಟಿಕೊಟ್ಟ ಪ್ರವಾಸಿಗರ ಈ ಬರೆಹಗಳು ಅಪೂರ್ವ ಕಥನಗಳಾಗಿರುವುದು ಒಂದು ವಿಶೇಷ. ಇಂಥ ಬರೆಹಗಳ ಮೂಲಕ ಕರ್ನಾಟಕವನ್ನು ಅದರ ಮೂಲಕ ವಿಜಯನಗರ ಅಥವಾ ಹಂಪಿಯನ್ನು ತಿಳಿಯುವುದಕ್ಕೆ ಸಹಾಯಕವಾಗಿದೆ.

ನಾವು ನಿನ್ನೆಯನ್ನು ಸರಿಯಾಗಿ ತಿಳಿಯದೆ ಇಂದಿನ ವರ್ತಮಾನವನ್ನು ತಿಳಿಯಲಾರೆವು. ಇಂದಿನ ವರ್ತಮಾನ ತಿಳಿಯದೆ ಭವಿಷ್ಯತ್ತನ್ನು ನಿರ‌್ಮಿಸಿಕೊಳ್ಳಲಾರೆವು. ನಿನ್ನೆ-ಇಂದು-ನಾಳೆಗಳ ಸುಸಾಂಗತ್ಯದಲ್ಲಿ ಜೀವನಪಟವಿದೆ. ಅಂಥ ಜೀವನಪಟವನ್ನು ತಿಳಿಸಿಕೊಡುವ ಪ್ರವಾಸಿಗರ ಬರೆಹಗಳು ಅರಿವಿನ ಬೆಳಕಿಗೆ ಬೀಜಗಳಾಗಿವೆಯೆಂದು ಹೇಳಲು ಸಂತೋಷವಾಗುತ್ತದೆ.