ಅಬ್ದುಲ್ ರಜಾಕ್ ಹಿಜ್ರಾ ೮೧೬ರಲ್ಲಿ ಅಂದರೆ ಕ್ರಿ.ಶ. ೧೪೧೩ರಲ್ಲಿ ಪರ್ಷಿಯಾ ದೇಶದ ಹೆರಾತಿನಲ್ಲಿ ಹುಟ್ಟಿದನು. ಇವನ ತಂದೆಯ ಹೆಸರು ಜಲಾಲುದ್ದೀನ್ ಜೊಹಾಕ್ ಎಂದು. ಈತ ರುಖ್‌ಷಾನ ಕಾಲದಲ್ಲಿ ಖಾಜಿಯಾಗಿದ್ದ. ತಂದೆ ಸತ್ತಮೇಲೆ, ಕ್ರಿ.ಶ. ೧೪೩೭ರಲ್ಲಿ, ರಜಾಕನು ರುಖ್‌ಷಾನ ಸೇವೆಗೆ ಸೇರಿಕೊಂಡ. ಕ್ರಿ.ಶ. ೧೪೪೧ರಲ್ಲಿ ಅಬ್ದುರ್ ರಜಾಕನನ್ನು ರುಖ್‌ಷಾ ವಿಜಯನಗರದ ರಾಜನ ಬಳಿಗೆ ತನ್ನ ರಾಯಭಾರಿ ಯಾಗಿ ಕಳುಹಿಸಿಕೊಟ್ಟ.

ಕ್ರಿ.ಶ. ೧೪೪೨ರಲ್ಲಿ ಹೆರಾತಿನಿಂದ ಇಂಡಿಯಾದೇಶಕ್ಕೆ ಹೊರಟ ರಜಾಕನು ಕೋಹಿಸ್ತಾನ್ ಮತ್ತು ಕಿರ್ಮಾನ್ ಮಾರ್ಗವಾಗಿ ಓರ್ಮಸ್ಸಿಗೆ ಬಂದು ಅಲ್ಲಿ ಇಂಡಿಯಾದೇಶಕ್ಕೆ ಹಡಗು ಹತ್ತಿದನು. ಮೊದಲು ಕಲ್ಲಿಕೋಟೆಯಲ್ಲಿ ಇಳಿದು ಅಲ್ಲಿಯ ಜಾಮೊರಿನ್ ದೊರೆಯನ್ನು ಕಂಡು, ಅಲ್ಲಿಂದ ಮಂಗಳೂರು ಮಾರ್ಗವಾಗಿ ವಿಜಯನಗರವನ್ನು ತಲುಪಿದನು. ವಿಜಯನಗರದಲ್ಲಿ ಅವನಿಗೆ ಆದರಪೂರ್ವಕವಾದ ಸ್ವಾಗತ ಸಿಕ್ಕಿತು. ವಿಜಯನಗರದಲ್ಲಿ ಮಹಾನವಮಿ ಉತ್ಸವವನ್ನು ನೋಡಿಕೊಂಡು ಕ್ರಿ.ಶ. ೧೪೪೩ನೇ ನವೆಂಬರಿನಲ್ಲಿ ತನ್ನ ಮರು ಪ್ರಯಾಣವನ್ನು ಪ್ರಾರಂಭಿಸಿದನು. ಆತ ಈ ದೇಶದಲ್ಲಿ ಸುಮಾರು ಎರಡು ವರ್ಷಗಳ ಕಾಲ ಇದ್ದ. ಹೊನ್ನಾವರದಲ್ಲಿ ಹಡಗು ಏರಿದ ರಜಾಕ್ ಸಮುದ್ರಯಾನಮಾಡಿ ಪುನಃ ಓರ್ಮಸ್ಸಿಗೆ ಹಿಂದಿರುಗಿದ.

ಓರ್ಮಸ್ಸಿನಿಂದ ತನ್ನ ದೇಶಕ್ಕೆ ಹೋದ ರಜಾಕ್ ತನ್ನ ಪ್ರವಾಸವನ್ನು ಕುರಿತು ಮತ್ಲಅಸ್ಸಾದೈನ್ (Matla-as-sa-dain) ಎಂಬ ಪುಸ್ತಕ ಬರೆದನು. ೧೪೪೬ರಲ್ಲಿ ರಜಾಕನನ್ನು ರಾಯಭಾರದ ಮೇಲೆ ಘಿಲಾನಿಗೆ ಕಳುಹಿಸಲಾಯಿತು. ಅನಂತರ ಅವನಿಗೆ ರಾಯಭಾರಿ ಎಂಬ ಬಿರುದು ದೊರಕಿತು. ಈ ರೀತಿಯ ಬಿರುದಾಂಕಿತನಾಗಿ ಈಜಿಪ್ಟಿಗೆ ಹೋಗಬೇಕೆಂದು ಅವನ ದೊರೆಯ ಅಪ್ಪಣೆಯಾಯಿತು. ಆದರೆ ದೊರೆ ಸತ್ತು ಹೋದದ್ದರಿಂದ ಆ ಪ್ರಯಾಣ ನಿಂತಿತು.

೧೪೬೨ರಲ್ಲಿ ರಜಾಕನನ್ನು ಹೆರಾತಿನಲ್ಲಿದ್ದ ಮಿರ‌್ಜ ಷಾ ರುಖ್ ಎಂಬ ಮುಸಲ್ಮಾನ್ ಮಠದ ಷೇಕನಾಗಿ ಚುನಾಯಿಸಿದರು. ಆ ಸ್ಥಾನದಲ್ಲಿ ಕ್ರಿ.ಶ. ೧೪೮೨ರವರೆಗೆ ಇದ್ದು ಆ ವರ್ಷ ರಜಾಕ್ ಪರಲೋಕವಾಸಿಯಾದನು. ರಜಾಕನು ತನ್ನ ಪ್ರವಾಸ ಕಥನವನ್ನಷ್ಟೇ ಅಲ್ಲದೆ ಷಾ ರುಖ್‌ನ ಮತ್ತು ತೈಮೂರನ ಇತರೆ ಉತ್ತರಾಧಿಕಾರಿಗಳ ಚರಿತ್ರೆಯನ್ನೂ ಬರೆದಿದ್ದಾನೆ.

ನನ್ನ ದೊರೆ ಖಾಖಾನ್ ಅಪ್ಪಣೆಯಂತೆ ಇಂಡಿಯಾ ದೇಶಕ್ಕೆ ರಂಜಾನ್ ಮೊದಲನೇ ದಿನ ಕೋಹಿಸ್ತಾನ್ ಮಾರ್ಗವಾಗಿ ಕಿರ್ಮಾನ್ ಮುಟ್ಟಿದೆ. ಅಲ್ಲಿಂದ ಓರ್ಮಜ್ ಬಂದರಿಗೆ ಬಂದೆನು. ಇಲ್ಲಿಗೆ ಎಲ್ಲಾ ದೇಶದ ಪ್ರಯಾಣಿಕರೂ ಬರುತ್ತಾರೆ. ಓರ್ಮಜ್‌ನಿಂದ  ಕಾಲಿಕಟ್‌ಗೆ ಬಂದು ತಲುಪಿದೆ. ಅಲ್ಲಿಂದ ಮುಂದೆ ಸಮೇರಿ ರಾಜನನ್ನು ಭೇಟಿಮಾಡಿ ಬೆಂಡಿನಾವೇಶ್ (ಬಹುಶಃ ಕನ್ನಾನೂರು) ದಾಟಿ ಮಂಗಲೋರ್ (ಮಂಗಳೂರು) ಬಂದರನ್ನು ತಲುಪಿದೆ. ಇದು ಬಿಜನಗರ ರಾಜ್ಯದ ಗಡಿ. ಇಲ್ಲಿ ಮೂರು ದಿನ ತಂಗಿದ್ದು ನಂತರ ಭೂಮಿಯ ಮೇಲೆ ನನ್ನ ಪ್ರಯಾಣ ಆರಂಭಿಸಿದೆ.

ಮಾರನೆಯ ದಿನ ಎದ್ದು ಪ್ರಾರ್ಥನೆಯ ವೇಳೆ ಈ ಕನಸನ್ನು ಜ್ಞಾಪಿಸಿಕೊಂಡು ಹಿಗ್ಗಿದೆ. ಸಾಮಾನ್ಯವಾಗಿ ಕನಸುಗಳು ನಿಜವಾಗುವುದಿಲ್ಲವಾದರೂ ಒಮ್ಮೊಮ್ಮೆ ಆಗುವುದುಂಟು. ತಿಳಿದ ಕೆಲವು ಜನರಿಗೆ ನನ್ನ ಕನಸಿನ ವಿಚಾರವನ್ನು ಹೇಳಿ ಇದರ ಅರ್ಥವೇನೆಂದು ಕೇಳಿದೆ. ಇದ್ದಕ್ಕಿದ್ದಂತೆ ಕಾಲಿಕಟ್‌ಗೆ ಒಬ್ಬ ಮನುಷ್ಯ ಬಂದ. ಅವನಿಂದ ಒಂದು ಸಂತಸದ ವಿಷಯ ಗೊತ್ತಾಯಿತು. ಬಲಾಢ್ಯವೂ ಮಹೋನ್ನತವೂ ಆದ ಬಿಜನಗರ (ವಿಜಯನಗರ) ಚಕ್ರಾಧಿಪತ್ಯದ ಚಕ್ರಾಧಿಪತಿಯ ಕಡೆಯಿಂದ ಸಮೇರಿಯ ಬಳಿಗೆ ಒಬ್ಬ ರಾಯಭಾರಿ ಬಂದಿರುವನೆಂತಲೂ, ಅವನು ಸಮೇರಿಗೆ ಒಂದು ಪತ್ರವನ್ನು ತಂದಿರುವನೆಂತಲೂ, ಆ ಪತ್ರದಲ್ಲಿ ಪರ್ಷಿಯಾ ರಾಜ ಖಾಖಾನನ ಕಡೆಯಿಂದ ಬಂದಿರುವ ರಾಯಭಾರಿಯನ್ನು ಬಿಜನಗರಕ್ಕೆ ಕಳುಹಿಸಿಕೊಡಬೇಕೆಂದು ತಿಳಿಸಿದೆಯೆಂತಲೂ ಗೊತ್ತಾಯಿತು. ಸಮೇರಿಯು ವಿಜಯನಗರದ ರಾಜನಿಗೆ ಅಧೀನನಲ್ಲದಿದ್ದರೂ ಅವನ ಬಗ್ಗೆ ಗೌರವ ತೋರಿಸುತ್ತಾನೆ. ಆ ರಾಜನನ್ನು ಕಂಡರೆ ಥರಥರ ನಡುಗುತ್ತಾನೆ. ಏಕೆಂದರೆ, ಜನ ಹೇಳುವುದನ್ನು ನಂಬುವುದಾದರೆ ಬಿಜನಗರದ ರಾಜನ ರಾಜ್ಯದಲ್ಲಿ ಕಾಲಿಕಟ್ಟಿಗೆ ಸಮನಾದ ಮುನ್ನೂರು ಬಂದರುಗಳಿವೆಯೆಂದೂ, ಅವನ ಭೂಪ್ರದೇಶ ಮೂರು ತಿಂಗಳ ಕಾಲ ಪ್ರಯಾಣ ಮಾಡುವಷ್ಟು ವಿಸ್ತಾರವಾಗಿದೆ ಎಂದೂ ಹೇಳುತ್ತಾರೆ.

ಮಂಗಲೋರಿನಿಂದ ಮೂರು ಪರಸಾಂಗು ದೂರದಲ್ಲಿ (ಸುಮಾರು ೧೫ ಮೈಲಿ) ಪ್ರಪಂಚದಲ್ಲೆಲ್ಲಿಯೂ ಎಣೆಯಿಲ್ಲದಂತಹ ವಿಗ್ರಹಗಳುಳ್ಳ ದೇವಸ್ಥಾನವನ್ನು ಕಂಡೆ. ಇದು ಹತ್ತು ಗಜ್ (ಗಜ) ಉದ್ದ ಹತ್ತು ಗಜ್ ಅಗಲವಾಗಿ ಚಚ್ಚೌಕವಾಗಿದ್ದು ಐದು ಗಜ್ ಎತ್ತರವಾಗಿದೆ. ಇಡೀ ದೇವಸ್ಥಾನವನ್ನು ಎರಕಹೊಯ್ದ ಕಂಚಿನಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ನಾಲ್ಕು ವೇದಿಕೆಗಳಿವೆ. ಮುಂದುಗಡೆ ಇರುವ ವೇದಿಕೆಯ ಮೇಲೆ ಚಿನ್ನದಿಂದ ಮಾಡಿದ ಮನುಷ್ಯಾಕಾರದ ದೊಡ್ಡ ವಿಗ್ರಹವಿದೆ. ಇದರ ಎರಡು ಕಣ್ಣುಗಳಿಗೆ ಎರಡು ಮಾಣಿಕ್ಯಗಳನ್ನು ಹದ್ದಿದ್ದಾರೆ. ಇದನ್ನು ಎಷ್ಟು ಕಲಾತ್ಮಕವಾಗಿ ಮಾಡಿದ್ದಾರೆಂದರೆ ನಾವು ಯಾವ ಕಡೆಯಿಂದ ನಿಂತು ನೋಡಿದರೂ ವಿಗ್ರಹವು ನಮ್ಮನ್ನೇ ನೋಡುವಂತೆ ಕಾಣುತ್ತದೆ. ಇಡೀ ವಿಗ್ರಹ ಅತ್ಯಾಶ್ಚರ್ಯಕರವಾದ ಸೂಕ್ಷ್ಮತೆ ಹಾಗೂ ಪರಿಪೂರ್ಣತೆಯ ಕಲಾಕೃತಿಯಾಗಿದೆ.

[1]

ಇಲ್ಲಿಂದ ಮುಂದೆ ಪ್ರಯಾಣಮಾಡುತ್ತಾ ಮಾಡುತ್ತಾ ಮುಂದೆ ಹೋದೆ. ಪ್ರತಿದಿನವೂ ಒಂದಲ್ಲ ಒಂದು ಜನಭರಿತವಾದ ಪಟ್ಟಣವೋ ನಗರವೋ ಕಂಡು ಬರುತ್ತಿತ್ತು. ಕೊಟ್ಟಕೊನೆಗೆ ಗಗನವನ್ನು ಮುಟ್ಟುವ ಪರ್ವತದ ಬಳಿಗೆ ಬಂದೆ. ಈ ಪರ್ವತದ ತಪ್ಪಲಿನಲ್ಲಿ ಸೂರ್ಯರಶ್ಮಿ ಬೀಳುವುದಕ್ಕೂ ಅವಕಾಶವಿಲ್ಲದ ಹಾಗೆ ಅಸಂಖ್ಯಾತ ಮರಗಿಡಗಳು ಒತ್ತಾಗಿ ಬೆಳೆದಿದ್ದುವು. ಮೇಲಿನಿಂದ ಬಿದ್ದ ಮಳೆಯೂ ನೆಲವನ್ನು ಮುಟ್ಟುವಂತಿರಲಿಲ್ಲ.

ಈ ಪವರ್ತವನ್ನೂ ಕಾಡನ್ನೂ ಹಿಂದುಳಿದು ಬೆಲೌರ್[2] ಎಂಬ ಪಟ್ಟಣಕ್ಕೆ ಬಂದೆ. ಇಲ್ಲಿರುವ ಮನೆಗಳು ಅರಮನೆಗಳಂತಿವೆ. ಇಲ್ಲಿರುವ ಸ್ತ್ರೀಯರು ಸ್ವರ್ಗದ ಅಪ್ಸರೆ ಯರಂತಿದ್ದಾರೆ. ಇಲ್ಲಿರುವ ದೇವಸ್ಥಾನ ಅನೇಕ ಪರಸಾಂಗುಗಳ ದೂರದಿಂದಲೇ ಕಾಣಿಸುವಷ್ಟು ಎತ್ತರವಾಗಿದೆ. ಇದರ ವರ್ಣನೆಮಾಡಲು ನನ್ನಿಂದ ಸಾಧ್ಯವಿಲ್ಲ. ಮಾಡಿದರೂ ಆ ನನ್ನ ವರ್ಣನೆಯನ್ನು ಕೇಳಿ ಉತ್ಪ್ರೇಕ್ಷೆ ಎಂದು ನೀವು ಅನುಮಾನಪಡುತ್ತೀರಿ. ಪಟ್ಟಣದ ಮಧ್ಯಭಾಗದಲ್ಲಿ ಹತ್ತು ಗಜ್ ವಿಸ್ತೀರ್ಣವುಳ್ಳ ಮೈದಾನವಿದೆ. ಇದು ಐರೆಮ್ ತೋಟವನ್ನು[3] ಮೀರಿಸುತ್ತದೆ. ಮರಗಳ ಎಲೆಯಷ್ಟು ಅಸಂಖ್ಯಾತ ಗುಲಾಬಿ ಹೂಗಳು ಬೆಳೆದಿವೆ. ಹರಿಯುವ ನದಿಯ ಇಕ್ಕೆಲಗಳಲ್ಲಿಯೂ ಅಸಂಖ್ಯಾತ ಸೈಪ್ರೆಸ್ ಮರಗಳು ಮೇಲೆದ್ದಿವೆ. ಗಗನವನ್ನು ಚುಂಬಿಸುವ ಎತ್ತರದ ಮರಗಳು ನೀರಿನಲ್ಲಿ ಪ್ರತಿಬಿಂಬಿಸುತ್ತವೆ. ತೂಗುವ ಗೊನೆಹೊತ್ತ ಬಾಳೆಯ ಗಿಡಗಳು ನಳನಳಿಸುತ್ತವೆ. ಈ ಸುಂದರ ಸ್ಥಳವನ್ನು ನೋಡಿ ಸ್ವರ್ಗವೇ ಸಂತಸ ಪಡುವುದೋ ಎನ್ನುವಂತಿದೆ. ಈ ಸೊಗಸಾದ ಸ್ಥಳದ ಜಾಗವನ್ನೆಲ್ಲಾ ಸಾಣೆ ಹಿಡಿದ ಕಲ್ಲುಗಳಿಂದ ಮುಚ್ಚಿದ್ದಾರೆ. ಕಲ್ಲುಗಳನ್ನು ಎಷ್ಟು ಸೂಕ್ಷ್ಮವಾಗಿಯೂ, ಚಾಕಚಕ್ಯತೆಯಿಂದಲೂ ಜೋಡಿಸಿದ್ದಾರೆಂದರೆ ಕಲ್ಲು ಕಲ್ಲುಗಳು ಸೇರಿ ಒಂದೇ ಕಲ್ಲಿನಂತೆ ಕಾಣುತ್ತವೆ. ಈ ಕಲ್ಲುಗಳಲ್ಲಿ ಪ್ರತಿಬಿಂಬಿಸಿದ ಆಕಾಶವು ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತದೆ.

ಈ ವೇದಿಕೆಯ ಮಧ್ಯೆ ನೀಲಿಯ ಕಲ್ಲುಗಳಿಂದ ನಿರ್ಮಿಸಿದ ಗುಡಿಯಿದೆ. ಈ ಗುಡಿ ಕೆಳಗೆ ಅಗಲವಾಗಿ ಮೇಲಕ್ಕೆ ಹೋದಂತೆ ಚೂಪಾಗುತ್ತದೆ. ಇದರ ನಿರ್ಮಾಣದ ಚಾಕಚಾಕ್ಯತೆ ಸ್ವರ್ಗವನ್ನು ಮನಸ್ಸಿಗೆ ತರುತ್ತದೆ. ಗೋಳಾಕಾರವಾಗಿಯೂ, ಎತ್ತರವಾಗಿಯೂ ಇರುವ ಇದರ ಒಳಭಾಗ ಪೂರ್ಣಚಂದ್ರನನ್ನು ಮನಸ್ಸಿಗೆ ತರುತ್ತದೆ. ಇಲ್ಲಿ ಚಿತ್ರಿಸಿರುವ ಅಸಂಖ್ಯಾತ ಚಿತ್ರಗಳನ್ನು ಒಂದು ತಿಂಗಳಾದರೂ ಡಮಾಸ್ಕ್ ಅಥವಾ ಟಫೆಟಾ ಬಟ್ಟೆಯ ಮೇಲೆ ಚಿತ್ರಿಸಿಕೊಳ್ಳಲು ಸಾಧ್ಯವಿಲ್ಲ. ಕಟ್ಟಡದ ಬುಡದಿಂದ ತುದಿಯವರೆಗೂ ಚಿತ್ರಗಳಿಲ್ಲದ ಜಾಗ ಒಂದು ಅಂಗುಲದಷ್ಟೂ ಇಲ್ಲ. ಈ ದೇವಸ್ಥಾನ ನಾಲ್ಕು ಹಂತಗಳಾಗಿ ಕಟ್ಟಿದ್ದಾಗಿದೆ. ಇದರ ಉದ್ದ ಮೂವತ್ತು ಗಜ್, ಅಗಲ ಇಪ್ಪತ್ತು ಗಜ್, ಎತ್ತರ ಐವತ್ತು ಗಜ್ ಇದೆ.

ಈ ಊರಿನಲ್ಲಿರುವ ಇತರ ಮನೆಗಳೆಲ್ಲ, ಅವು ದೊಡ್ಡದಾಗಿರಲಿ ಚಿಕ್ಕದಾಗಿರಲಿ, ಅತಿ ಸೂಕ್ಷ್ಮವಾದ ಚಿತ್ರಕಲೆ ಮತ್ತು ಶಿಲ್ಪಕಲೆಯಿಂದ ತುಂಬಿವೆ. ದೇವಸ್ಥಾನದಲ್ಲಿ ಬೆಳಗ್ಗೆ ಸಾಯಂಕಾಲ ಪೂಜೆ ನಡೆಯುತ್ತದೆ. ಈ ಪೂಜೆಗಳಲ್ಲಿ ದೇವರಿಗೆ ಒಪ್ಪುವಂತಹುದು ಯಾವುದೂ ಇಲ್ಲ. ಪೂಜೆಗಳಾದನಂತರ ವಾದ್ಯಗೋಷ್ಠಿ, ಭಜನೆ ಮತ್ತು ಭೋಜನಗಳು ನಡೆಯುತ್ತವೆ. ಈ ಪಟ್ಟಣದಲ್ಲಿರುವ ಪ್ರತಿಯೊಬ್ಬರಿಗೂ ಈ ದೇವಸ್ಥಾನದಿಂದ ವರ್ಷಾಸನ ಇತ್ಯಾದಿ ಸಂಭಾವನೆಗಳು ದೊರೆಯುತ್ತವೆ. ಬಹುದೂರದ ನಗರಗಳಿಂದಲೂ ದೇವರಿಗೆ ಹರಕೆ ಕಾಣಿಕೆಗಳು ಬರುತ್ತವೆ. ಮತಹೀನರಾದ ಈ ಜನರ ಅಭಿಪ್ರಾಯದಲ್ಲಿ ಈ ಊರು ಅಗ್ನಿಪೂಜಕರ ಯಾತ್ರಾಸ್ಥಳ.

ಈ ಊರಿನಲ್ಲಿ ಎರಡು ಮೂರು ದಿವಸಗಳು ನಿಂತು ಪ್ರಯಾಣವನ್ನು ಮುಂದುವರಿಸಿದೆ. ಜುಲ್‌ಹಿಜ್ಜಾ ತಿಂಗಳ (ಏಪ್ರಿಲ್ ತಿಂಗಳ ಕೊನೆಯಲ್ಲಿ) ನಾನೂ ನನ್ನ ಪರಿವಾರವೂ ಬಿಜನಗರವನ್ನು ಮುಟ್ಟಿದೆವು. ನಮ್ಮನ್ನು ಎದುರುಗೊಳ್ಳಲು ರಾಜನು ದೊಡ್ಡ ಪರಿವಾರವನ್ನೇ ಕಳುಹಿಸಿದ್ದನು; ಅಲ್ಲದೆ ಇಳಿದುಕೊಳ್ಳಲು ನಮಗೆ ಚೆಂದದ ಮನೆಯೊಂದರಲ್ಲಿ ಏರ್ಪಡಿಸಿದ್ದನು.

ವಿಜಯನಗರವು ಬಹಳ ದೊಡ್ಡದಾದ ಜನವಸತಿಯುಳ್ಳ ಊರು. ರಾಜನ ಖ್ಯಾತಿ ಮತ್ತು ಅವನ ಪ್ರಭುತ್ವ ಮನೋನ್ನತವಾಗಿವೆ. ರಾಜ್ಯ ಸೆರೆನ್‌ದಿಬ್ (ಸಿಂಹಳ) ಗಡಿಯಿಂದ ಕಲ್ಬೆರ್ಗದ ಕೊಟ್ಟಕೊನೆಯವರೆಗೆ, ಬಂಗಾಳದಿಂದ ಮೆಲಿಬಾರ್ (ಮಲಬಾರ್) ಕೊನೆಯವರೆಗೆ (ಕೃಷ್ಣನದಿಯಿಂದ ಕೇಪ್‌ಕಾಮೊರಿನ್‌ವರೆಗೆ) ಸಾವಿರ ಫರಸಾಂಗುಗಳಷ್ಟು ವಿಸ್ತರಿಸಿದೆ. ದೇಶದ ಬಹುಭಾಗ ಸಾಗುವಳಿಯಲ್ಲಿದ್ದು ಬಹು ಫಲವತ್ತಾಗಿದೆ. ಈ ದೇಶದಲ್ಲಿ ಮುನ್ನೂರು ಬಂದರುಗಳಿವೆ. ಪರ್ವತದೋಪಾದಿಯಲ್ಲಿರುವ ಮತ್ತು ಪೆಡಂಭೂತಗಳಂತಿರುವ ಸಾವಿರಕ್ಕೂ ಮೀರಿದ ಆನೆಗಳನ್ನು ಇಲ್ಲಿ ನೋಡಬಹುದು. ಸೈನ್ಯದಲ್ಲಿ ಹನ್ನೊಂದು ಲಕ್ಷದಷ್ಟು ಯೋಧರಿದ್ದಾರೆ.

ಈ ರಾಯನ ಶ್ರೇಷ್ಠತೆಯನ್ನು ಮೀರಿಸುವ ಇಡೀ ಹಿಂದುಸ್ಥಾನದಲ್ಲಿ ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಹಿಂದೂಸ್ಥಾನದ ರಾಜರುಗಳನ್ನು ರಾಯ್ ಎಂದು ಕರೆಯುತ್ತಾರೆ. ರಾಯ್‌ನನ್ನು ಬಿಟ್ಟರೆ ಬ್ರಾಹ್ಮಣರು ಉಳಿದೆಲ್ಲರಿಗಿಂತ ಶ್ರೇಷ್ಠಸ್ಥಾನವನ್ನು ಪಡೆದಿದ್ದಾರೆ. ಪರ್ಷಿಯಾ ಭಾಷೆಯಲ್ಲಿರುವ ಕಲೀಲ ಮತ್ತು ದಿಮ್ನ ಎಂಬ ಅತಿಸುಂದರವಾದ ಗ್ರಂಥದಲ್ಲಿ ಬರುವ ರಾಯ್ ಮತ್ತು ಬ್ರಾಹ್ಮಣನಿಗೆ ಸಂಬಂಧ ಪಟ್ಟ ಕಥೆಗಳು ಈ ದೇಶದ ಪ್ರತಿಭಾವಂತನೊಬ್ಬ ಹೇಳಿದವುಗಳಾಗಿರಬಹುದು.

ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ ಏಳು ಕೋಟೆಗಳೂ ಒಂದನ್ನೊಂದು ಆವರಿಸಿ ಕೊಂಡಿವೆ. ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಭಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿದ್ದಾರೆ. ಇವುಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಹೇಗೆ ಹೂತಿದ್ದಾರೆಂದರೆ, ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರ ವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಯಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಹು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಾರೆ. ಯಾರನ್ನೂ ಸಂರ್ಪೂ ಪರೀಕ್ಷೆ ಮಾಡದೆ ಒಳಗೆ ಬಿಡುವುದಿಲ್ಲ.[4]

ಎರಡನೆಯ ಕೋಟೆ ವಿಶಾಲವಾದ ಜಾಗವನ್ನು ಆಕ್ರಮಿಸಿದೆ. ಇದರಂತೆ ನಾಲ್ಕು, ಐದು ಮತ್ತು ಆರನೆಯ ಕೋಟೆಗಳಿವೆ.

ಎಲ್ಲಾ ಕೋಟೆಗಳ ಮಧ್ಯದಲ್ಲಿರುವ ಏಳನೆಯ ಕೋಟೆ ಆಕ್ರಮಿಸಿಕೊಂಡಿರುವ ಜಾಗ ಹೆರಾತ್ ನಗರದ ಮಾರ್ಕೆಟ್ ಜಾಗದ ಹತ್ತರಷ್ಟು ವಿಶಾಲವಾಗಿದೆ. ಇಲ್ಲಿ ರಾಜನು ವಾಸಮಾಡುವ ಅರಮನೆಯಿದೆ. ಉತ್ತರದಿಕ್ಕಿನಲ್ಲಿ ಮೊದಲನೆಯ ಕೋಟೆಯ ಹೆಬ್ಬಾಗಿಲಿನಿಂದ ಹಿಡಿದು ದಕ್ಷಿಣದಲ್ಲಿರುವ ಹೆಬ್ಬಾಗಿಲಿಗೆ ಎರಡು ಪರಸಾಂಗುಗಳಷ್ಟು ದೂರವಿದೆ. ಪೂರ್ವ ದಿಂದ ಪಶ್ಚಿಮಕ್ಕೂ ಅಷ್ಟೇ ದೂರ.

ಮೊದಲನೆಯ ಕೋಟೆಗೂ, ಎರಡನೆಯ ಕೋಟೆಗೂ ಮಧ್ಯೆ ಇರುವ ಜಾಗದಲ್ಲಿ ಅಂದರೆ ಮೂರನೆಯ ಕೋಟೆಯವರೆಗೆ ಇರುವ ಜಾಗದಲ್ಲಿ ಬೇಸಾಯದ ಹೊಲಗಳೂ, ಮನೆಗಳೂ ಮತ್ತು ತೋಟಗಳೂ ಇವೆ.

ಮೂರನೆಯ ಕೋಟೆಯಿಂದ ಏಳನೆಯ ಕೋಟೆಯವರೆಗೆ ಅಸಂಖ್ಯಾತ ಜನಗಳನ್ನೂ, ಅನೇಕ ಅಂಗಡಿಗಳನ್ನೂ, ಅಂಗಡಿ ಬೀದಿಯನ್ನೂ ನೋಡಬಹುದು. ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ ಎದುರುಬದಿರಾಗಿ ನಾಲ್ಕು ಅಂಗಡಿ ಬೀದಿಗಳಿವೆ. ಉತ್ತರದಲ್ಲಿ ರಾಯ್‌ನ ಅರಮನೆಯ ಮಹಾದ್ವಾರವಿದೆ. ಪ್ರತಿಯೊಂದು ಅಂಗಡಿಯ ಸಾಲಿನ ಮೇಲುಗಡೆ ಭವ್ಯವಾದ ಉಪ್ಪರಿಗೆಯುಳ್ಳ ಕಮಾನು ಹಾದಿ ಇದೆ. ಆದರೆ ರಾಯ್‌ನ ಅರಮನೆಯಲ್ಲಿರುವ ಸಭಾಮಂಟಪು ಇದೆಲ್ಲಕ್ಕಿಂತಲೂ ಎತ್ತರವಾಗಿದೆ.

ಅಂಗಡಿ ಬೀದಿಗಳು ಬಹು ಉದ್ದವಾಗಿಯೂ ಅಗಲವಾಗಿಯೂ ಇವೆ. ಗುಲಾಬಿ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಎತ್ತರವಾದ ವೇದಿಕೆಗಳನ್ನು ರಚಿಸಿಕೊಂಡಿದ್ದಾರೆ. ಈ ವೇದಿಕೆಗಳ ಎರಡೂಕಡೆ ಹೂಗಳನ್ನು ರಾಶಿಹಾಕಿ ವ್ಯಾಪಾರ ಮಾಡುತ್ತಾರೆ. ಬೀದಿಗಳಲ್ಲೆಲ್ಲಾ ಗುಲಾಬಿ ಹೂವಿನ ವಾಸನೆಯೋ ವಾಸನೆ! ಹೊಸಗುಲಾಬಿ ಹೂಗಳ ನೋಟವೋ ನೋಟ! ಈ ಜನಗಳು ಗುಲಾಬಿ ಹೂಗಳು ಇಲ್ಲದಿದ್ದರೆ ಬದುಕುವಂತೆಯೇ ಕಾಣುವುದಿಲ್ಲ. ಹೊಟ್ಟೆಗೆ ಹಿಟ್ಟು ಎಷ್ಟು ಆವಶ್ಯಕವೋ ಜುಟ್ಟಿಗೆ ಗುಲಾಬಿಯೂ ಅಷ್ಟೇ ಅವಶ್ಯಕವೆಂದು ಭಾವಿಸುತ್ತಾರೆ.

ಬೇರೆ ಬೇರೆ ಕಸುಬಿಗೆ ಸೇರಿದ ವರ್ತಕರ ಅಂಗಡಿಗಳು ಬೇರೆ ಬೇರೆ ಇವೆ. ರತ್ನಪಡಿ ವ್ಯಾಪಾರಿಗಳು ಅಂಗಡಿ ಬೀದಿಗಳಲ್ಲಿ ಬಹಿರಂಗವಾಗಿ ವಜ್ರವೈಢೂರ್ಯಗಳನ್ನೂ ಮುತ್ತು ಗಳನ್ನೂ ಮಾರುತ್ತಾರೆ.

ಈ ಮನೋಹರವಾದ ಪ್ರದೇಶದಲ್ಲಿಯೂ, ರಾಜನ ಅರಮನೆಯಲ್ಲಿಯೂ ಸೊಗಸಾಗಿ ಗೆಯ್ದ ಕಲ್ಲಿನಿಂದ ನಿರ್ಮಿಸಿದ ಕಾಲುವೆಗಳಲ್ಲಿ ಹರಿಯುವ ನೀರಿನ ಝುರಿಗಳನ್ನು ನೋಡಬಹುದು.[5]

ಸುಲ್ತಾನನ (ರಾಜನ) ಅರಮನೆಯ ಮಹಾದ್ವಾರದ ಎಡಗಡೆ ಅರಮನೆಯೋಪಾದಿಯಲ್ಲಿ ಕಾಣುವ ಬಹು ದೊಡ್ಡದಾದ ದಿವಾನ್‌ಖಾನೆಯಿದೆ. ಇದರ ಮುಂದೊಂದು ಹಜಾರವಿದೆ. ಇದು ಮನುಷ್ಯನ ಎತ್ತರದಷ್ಟಿದ್ದು ಮೂವತ್ತು ಗಜ್ ಉದ್ದವೂ ಹತ್ತು ಗಜ್ ಅಗಲವೂ ಇದೆ. ಇಲ್ಲಿ ದಫ್ತರಖಾನೆ ಇದೆ. ಅಲ್ಲದೆ ಇಲ್ಲಿ ಕಾರ್ಖೂನರು ಕುಳಿತುಕೊಳ್ಳುತ್ತಾರೆ. ಈ ಕಾರ್ಖೂನರ ಬರವಣಿಗೆ ಎರಡು ರೀತಿ ಇದೆ. ಕಬ್ಬಿಣದ ಕಲಮ್‌ನಿಂದ ಎರಡುಗಜ ಉದ್ದ ಮತ್ತು ಎರಡುಬೆರಳು ಅಗಲವಿರುವ ಇಂಡಿಯಾದ ಕಾಯಿಯ ಗರಿಯಮೇಲೆ (ತಾಳೆಯ ಗರಿಯ ಮೇಲೆ?) ಬರೆಯುವುದು ಒಂದು ರೀತಿ. ಇದರ ಮೇಲೆ ಬರೆದ ಅಕ್ಷರಗಳು ವರ್ಣರಹಿತವಾಗಿರುತ್ತವೆ. ಅಲ್ಲದೆ ಬಹಳ ದಿವಸ ಉಳಿಯುವುದಿಲ್ಲ. ಬಿಳೀಬಣ್ಣದ ಮೇಲ್ಮೈಗೆ ಕಪ್ಪುಬಣ್ಣ ಹಚ್ಚಿ ಅದರ ಮೇಲೆ ಬಳಪದ ಕಲಮ್‌ನಿಂದ ಬರೆಯುವುದು ಎರಡನೆಯ ರೀತಿ. ಈ ಬರವಣಿಗೆ ಬಹಳ ದಿವಸ ನಿಲ್ಲುತ್ತದೆ. ಇದಕ್ಕೆ ಬಹಳ ಪ್ರಾಶಸ್ತ್ಯವಿದೆ.

ಈ ಅರಮನೆಯ ಮಧ್ಯೆ (ಅಂದರೆ ದಿವಾನಖಾನೆಯ ಮಧ್ಯೆ) ಎತ್ತರವಾದ ವೇದಿಕೆಯ ಮೇಲೆ ದೈಯ್ಯಂಗ್ (ಡಣನಾಯಕ ಅಥವಾ ದಿವಾನ) ಎಂದು ಕರೆಯಲ್ಪಡುವ ಒಬ್ಬ ಖೋಜಾ ಕುಳಿತಿರುತ್ತಾನೆ. ಹಜಾರದ ಕೊನೆಯಲ್ಲಿ ಸಾಲಾಗಿ ಚೋಪ್‌ದಾರರು ನಿಂತಿರುತ್ತಾರೆ. ಯಾವ ಕಾರ್ಯನಿಮಿತ್ತವಾಗಿ ಯಾರು ಬಂದರೂ ಚೊಪ್‌ದಾರರ ಎರಡು ಸಾಲುಗಳ ಮಧ್ಯೆ ನಡೆದುಬಂದು ದೈಯ್ಯಂಗನಿಗೆ ಕಾಣಿಕೆಯನ್ನರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿ ಎದ್ದುನಿಂತು ಆಮೇಲೆ ತಮ್ಮ ಅಹವಾಲನ್ನು ಹೇಳಿಕೊಳ್ಳಬೇಕು. ದೈಯ್ಯಂಗನು ಅಹವಾಲನ್ನು ಕೇಳಿ ರಾಜ್ಯದಲ್ಲಿರುವ ನಿಯಮಾನುಸಾರ ತೀರ್ಪು ಕೊಡುತ್ತಾನೆ. ಈ ತೀರ್ಪಿನ ಮೇಲೆ ಅಪೀಲೇ ಇಲ್ಲ.

ದಿವಾನ್‌ಖಾನೆಯಿಂದ ದೈಯ್ಯಂಗ್ ಹೊರಟಾಗ ಅವನ ಮುಂದೆ ವಿವಿಧ ಬಣ್ಣಗಳ ಛತ್ರಿಗಳನ್ನು ಹಿಡಿದುಕೊಂಡು ಹೋಗುತ್ತಾರೆ. ವಾದ್ಯಗಳು ಮೊಳಗುತ್ತಿರುತ್ತವೆ. ಅವನ ಅಕ್ಕಪಕ್ಕದಲ್ಲಿ ಹೋಗುವ ಹೊಗಳುಭಟ್ಟರು ಬಹುಪಾರಾಕು ಹೇಳುತ್ತಿರುತ್ತಾರೆ. ರಾಜನಿರುವ ಅರಮನೆಯನ್ನು ಮುಟ್ಟುವ ಮುನ್ನ ಏಳು ಬಾಗಿಲುಗಳನ್ನು ದಾಟಿ ಹೋಗಬೇಕು. ಪ್ರತಿಯೊಂದು ಬಾಗಿಲನ್ನೂ ಒಬ್ಬೊಬ್ಬ ದ್ವಾರಪಾಲಕ ಕಾಯುತ್ತಾನೆ. ದೈಯ್ಯಂಗನು ಪ್ರತಿಬಾಗಿಲಿಗೆ ಬಂದಾಗ ಛತ್ರಿಗಳನ್ನು(?) ಬಿಚ್ಚುತ್ತಾರೆ. ಏಳನೆಯ ಬಾಗಿಲನ್ನು ದೈಯ್ಯಂಗ ನೊಬ್ಬನೇ ಪ್ರವೇಶಿಸಿ ರಾಜನಿಗೆ ಕೇವಲ ಐದು ನಿಮಿಷಗಳಲ್ಲಿ ರಾಜ್ಯದ ಆಡಳಿತದ ವರದಿಯನ್ನೊಪ್ಪಿಸಿ ಹಿಂದಿರುಗುತ್ತಾನೆ. ರಾಜನ ಅರಮನೆಯ ಹಿಂಭಾಗದಲ್ಲಿ ದೈಯ್ಯಂಗನ ವಾಸದ ಮನೆಯಿದೆ.

ಅರಮನೆಯ ಎಡಭಾಗದಲ್ಲಿ ದರಬ್‌ಖಾನೆ (ಟಂಕಸಾಲೆ) ಇದೆ. ಈ ದೇಶದಲ್ಲಿ ಮೂರು ತರಹ ನಾಣ್ಯಗಳಿವೆ. ಇವನ್ನು ಚಿನ್ನಕ್ಕೆ ಒಂದು ಲೋಹ ಸೇರಿಸಿ ಮಾಡುತ್ತಾರೆ. ಒಂದನ್ನು ವರಹ ಎಂದೂ, ಇನ್ನೊಂದನ್ನು ಪರ್ತಬ್ ಎಂದೂ, ಮತ್ತೊಂದನ್ನು ಫನಂ ಎಂದೂ ಕರೆಯುತ್ತಾರೆ. ವರಹದ ತೂಕ ಒಂದು ಮಿತ್ಕಲ್, ಅಂದರೆ ಎರಡು ದಿನಾರುಗಳಷ್ಟು. ಪರ್ತಬ್ ವರಹದ ಅರ್ಧದಷ್ಟು. ಫನಂ ಪರ್ತಬ್‌ನ ಹತ್ತನೇಒಂದು ಭಾಗದಷ್ಟು. ಇವುಗಳಲ್ಲೆಲ್ಲಾ ಫನಂ ಅತ್ಯಂತ ಉಪಯುಕ್ತವಾದ ನಾಣ್ಯ. ಫನಂನ ಆರನೇ ಒಂದು ಭಾಗವಾದ ತರ್ ಎಂಬ ಅಪ್ಪಟ ಬೆಳ್ಳಿಯ ನಾಣ್ಯವನ್ನು ಮಾಡುತ್ತಾರೆ. ಇದು ಚಲಾವಣೆಯಲ್ಲಿ ಬಹಳ ಉಪಯುಕ್ತವಾದ ನಾಣ್ಯ. ಈ ತರ್ ಎಂಬ ನಾಣ್ಯದ ಮೂರನೆಯ ಒಂದು ಭಾಗದಷ್ಟು ತೂಕದ ನಾಣ್ಯವನ್ನು ಜಿತೆಲ್ ಎಂದು ಕರೆಯುತ್ತಾರೆ. ಇದು ತಾಮ್ರದ ನಾಣ್ಯ.

ಈ ಚಕ್ರಾಧಿಪತ್ಯದಲ್ಲಿರುವ ಪದ್ಧತಿಗನುಸಾರವಾಗಿ ಎಲ್ಲಾ ಪ್ರಾಂತಗಳೂ ನಿಗದಿಯಾದ ಕಾಲದಲ್ಲಿ ಚಿನ್ನವನ್ನು ಟಂಕಸಾಲೆಗೆ ತರಬೇಕು. ಯಾರಿಗಾದರೂ ಸಂಭಾವನೆಯನ್ನು ಚಿನ್ನದ ರೂಪದಲ್ಲಿ ದೈಯ್ಯಂಗ್ ಕೊಡಬೇಕಾಗಿ ಬಂದರೆ ಅದನ್ನು ದರಬ್‌ಖಾನೆಯಲ್ಲಿಯೇ ಕೊಡಬೇಕು. ಸಿಪಾಯಿಗಳಿಗೆ ಸಂಬಳವನ್ನು ನಾಲ್ಕು ತಿಂಗಳಿಗೊಂದು ಸಾರಿ ಪಾವತಿ ಮಾಡುತ್ತಾರೆ. ಯಾವ ಪ್ರಾಂತದ ಆದಾಯದಿಂದಲೂ ಈ ಖರ್ಚುಗಳನ್ನು ಮಾಡುವುದಿಲ್ಲ.

ಈ ಚಕ್ರಾಧಿಪತ್ಯದ ಜನಸಂಖ್ಯೆಯ ಅಗಾಧತೆಯನ್ನು ವರ್ಣಿಸಲು ಅಸದಳ. ರಾಜನ ಅರಮನೆಯ ನೆಲಮಾಳಿಗೆಯಲ್ಲಿ ಚಿನ್ನದ ಗಟ್ಟಿಗಳನ್ನು ರಾಶಿ ಹಾಕಿದ್ದಾರೆ. ಈ ದೇಶದ ಪ್ರತಿಯೊಬ್ಬ ನಿವಾಸಿಯೂ, ಅವನು ಮೇಲ್ತರಗತಿಯವನಾಗಿರಲೀ ಅಥವಾ ಸಾಮಾನ್ಯನಾಗಿರಲೀ, ಕೊನೆಗೆ ಅಂಗಡಿ ಬೀದಿಯಲ್ಲಿ ಕೆಲಸ ಮಾಡುವವರೂ ಸಹ, ಕೊರಳು, ತೋಳು ಮತ್ತು ಬೆರಳುಗಳಿಗೆ ಮುತ್ತುಗಳನ್ನೋ ಅಥವಾ ರತ್ನಖಚಿತವಾದ ಬೆಲೆಯುಳ್ಳ ಒಡವೆಗಳನ್ನೋ ಧರಿಸಿರುತ್ತಾರೆ.

ದಿವಾನ್‌ಖಾನೆಗೆ ಎದುರಾಗಿ ಫಿಲ್‌ಖಾನೆ (ಗಜಶಾಲೆ) ಇದೆ. ರಾಜನಿಗೆ ಸೇರಿದ ಅನೇಕ ಆನೆಗಳು, ದೇಶದಲ್ಲೆಲ್ಲಾ ಬಹಳ ಭಾರಿಯಾದ ಆನೆಗಳು, ಅರಮನೆಯ ಬಳಿ ಅಂದರೆ ಮೊದಲನೆಯ ಮತ್ತು ಎರಡನೆಯ ಕೋಟೆಗಳ ಮಧ್ಯೆ ಇರುವ ಉತ್ತರ ಪಶ್ಚಿಮ ಜಾಗದಲ್ಲಿರುತ್ತವೆ. ಈ ಆನೆಗಳು ಗರ್ಭವಾಗಿ ಮರಿ ಹಾಕುತ್ತವೆ. ರಾಜನ ಬಳಿ ಅತ್ಯಂತ ದೊಡ್ಡದಾದ ಬಿಳಿಯ ಆನೆ ಇದೆ. ಈ ಆನೆಯ ಮೈಮೇಲೆ ಅಲ್ಲಲ್ಲಿ ನೀರಿನ ಗುಳ್ಳೆಗಳಂತೆ ಬೂದುಬಣ್ಣದ ಮಚ್ಛೆಗಳಿವೆ. ಪ್ರತಿದಿನ ಬೆಳಗ್ಗೆ ಆನೆಯನ್ನು ರಾಜನ ಮುಂದೆ ತೆಗೆದುಕೊಂಡು ಹೋಗುತ್ತಾರೆ. ಇದರ ದರ್ಶನ ತನಗೆ ಒಳ್ಳೆಯದೆಂದು ರಾಜ ಭಾವಿಸುತ್ತಾನೆ. ಅರಮನೆಯ ಆನೆಗಳಿಗೆ ಕಿಚಡಿಯನ್ನು ತಿನ್ನಿಸುತ್ತಾರೆ. ಇದನ್ನು ತಾಮ್ರದ ಹಂಡೆಗಳಲ್ಲಿ ಬೇಯಿಸಿ ಆನೆಗಳ ಮುಂದೆಯೇ ಹೊರಕ್ಕೆ ತೆಗೆದು, ಹರಡಿ ಅದರ ಮೇಲೆ ಉಪ್ಪನ್ನೂ ಸಕ್ಕರೆಯನ್ನೂ ಎರಚಿ ಚೆನ್ನಾಗಿ ಕಲಸುತ್ತಾರೆ. ಹೀಗೆ ಕಲಸಿದ ಮೇಲೆ ಅದನ್ನು ಎರಡು ಮಣದಷ್ಟು ತೂಕದ ಉಂಡೆಗಳನ್ನಾಗಿ ಮಾಡುತ್ತಾರೆ. ಈ ಉಂಡೆಗಳನ್ನು ತುಪ್ಪದಲ್ಲಿ ಅದ್ದಿ ಆನೆಯ ಬಾಯೊಳಗೆ ಇಡುತ್ತಾರೆ. ಕಿಚಡಿಯನ್ನು ಮಾಡುವಾಗ ಯಾವುದಾದರೂ ಸಾಮಾನು ಹಾಕುವುದನ್ನು ಮರೆತರೆ ಆನೆಗಳು ಮಾವಟಿಗನ ಮೇಲೆ ಎರಗುತ್ತವೆ. ಈ ತಪ್ಪಿಗೆ ರಾಜ ಮಾವಟಿಗರಿಗೆ ಕ್ರೂರ ಶಿಕ್ಷೆ ವಿಧಿಸುತ್ತಾನೆ. ದಿನಕ್ಕೆ ಎರಡು ಸಲ ಈ ಕಿಚಡಿಯನ್ನು ಆನೆಗಳಿಗೆ ತಿನ್ನಿಸುತ್ತಾರೆ.

ಆನೆಗಳನ್ನು ಕಟ್ಟುವುದಕ್ಕೆ ಒಂದೊಂದು ಆನೆಗೂ ಒಂದೊಂದು ಬೇರೆ ಬೇರೆ ಅಂಕಣವಿದೆ. ಈ ಅಂಕಣದ ಗೋಡೆಗಳು ಬಹಳ ಭದ್ರವಾಗಿವೆ. ಮೇಲ್ಚಾವಣಿಗೆ ಬಹಳ ಗಟ್ಟಿಯಾದ ಮರವನ್ನು ಉಪಯೋಗಿಸಿದ್ದಾರೆ. ಆನೆಯ ಕುತ್ತಿಗೆಗೂ ಬೆನ್ನಿಗೂ ಸರಪಣಿಗಳನ್ನು ಬಿಗಿದು ಆ ಸರಪಳಿಗಳ ತುದಿಯನ್ನು ಮೇಲ್ಚಾವಣಿಗೆ ಕಟ್ಟುತ್ತಾರೆ. ಬೇರೆ ಯಾವ ರೀತಿಯಲ್ಲಿ ಕಟ್ಟಿದರೂ ಆನೆಗಳು ಬಿಚ್ಚಿ ಕೊಳ್ಳುತ್ತವೆ. ಮುಂಗಾಲುಗಳನ್ನು ಸರಪಣಿಗಳಿಂದ ಕಟ್ಟುತ್ತಾರೆ.

ಆನೆಗಳನ್ನು ಹಿಡಿಯುವ ವಿಧಾನ ಈ ರೀತಿ ಇದೆ: ಆನೆ ನೀರು ಕುಡಿಯಲು ಹೋಗುವ ದಾರಿಗೆ ಅಡ್ಡವಾಗಿ ಕಂದಕ ಅಗೆದು ಅದರ ಬಾಯನ್ನು ಹುಸಿಯಾಗಿ ಮುಚ್ಚುತ್ತಾರೆ. ಇದನ್ನು ಅರಿಯದ ಆನೆ ಕಂದಕದ ಒಳಕ್ಕೆ ಬೀಳುತ್ತದೆ. ಹೀಗೆ ಬಿದ್ದ ಆನೆಯ ಬಳಿಗೆ ಎರಡು ಮೂರು ದಿವಸಗಳು ಯಾರೂ ಹೋಗುವುದಿಲ್ಲ. ಅನಂತರ ಒಬ್ಬನು ಆನೆಯ ಬಳಿಗೆ ಹೋಗಿ ಅದನ್ನು ಕೋಲಿನಿಂದ ಚೆನ್ನಾಗಿ ಹೊಡೆಯುತ್ತಾನೆ. ಆಗ ಮತ್ತೊಬ್ಬನು ಕಾಣಿಸಿಕೊಂಡು ಹೊಡೆಯುತ್ತಿರುವವನನ್ನು ಅಟ್ಟಿಸಿಕೊಂಡು ಹೋಗಿ ಅವನ ಕೈಯ್ಯಲ್ಲಿರುವ ದೊಣ್ಣೆಯನ್ನು ಕಿತ್ತು ದೂರ ಎಸೆಯುತ್ತಾನೆ. ಹೀಗೆ ಮಾಡಿದಮೇಲೆ ಆನೆಗೆ ಸ್ವಲ್ಪ ಮೇವು ಹಾಕಿ ಹೊರಟು ಹೋಗುತ್ತಾನೆ. ಹಲವಾರು ದಿವಸಗಳು ಹೀಗೆ ಒಬ್ಬನು ಆನೆಯನ್ನು ಹೊಡೆಯುವುದೂ ಮತ್ತೊಬ್ಬನು ಅದನ್ನು ತಪ್ಪಿಸುವುದೂ ನಡೆಯುತ್ತದೆ. ಹೀಗೆ ಮಾಡುವುದರಿಂದ ಹೊಡೆತವನ್ನು ತಪ್ಪಿಸಿದವನೊಡನೆ ಆನೆ ಒಗ್ಗಿಕೊಳ್ಳುತ್ತದೆ. ಅವನು ದಿನೇದಿನೇ ಆನೆಯ ಬಳಿಗೆ ಬಂದು ಮೈತುರಿಸಿ ಅದಕ್ಕೆ ಇಷ್ಟವಾದ ಹಣ್ಣುಗಳನ್ನು ಕೊಟ್ಟು ಪಳಗಿಸಿದ ಮೇಲೆ ಅದರ ಕೊಳರಳಿಗೆ ಸರಪಳಿಯನ್ನು ಹಾಕುತ್ತಾನೆ.

ಈ ರೀತಿ ಹಿಡಿದ ಒಂದು ಆನೆ ತಪ್ಪಿಸಿಕೊಂಡು ಕಾಡಿಗೆ ಓಡಿಹೋದ ಕಥೆಯೊಂದಿದೆ. ಇದನ್ನು ಅಟ್ಟಿಸಿಕೊಂಡು ಹೋದ ಮಾವುತ ಮತ್ತೊಮ್ಮೆ ಅದನ್ನು ಹಿಡಿಯಬೇಕೆಂದು ದಾರಿಗೆ ಅಡ್ಡವಾಗಿ ಕಂದಕವನ್ನು ಅಗೆದನು. ಈ ಮೋಸವನ್ನು ಅರಿತ ಆನೆ ದೊಡ್ಡ ಮರದ ದಿಮ್ಮಿಯನ್ನು ಸೊಂಡಲಲ್ಲಿ ಹಿಡಿದು ತನ್ನ ಮುಂದೆ ಹೆಜ್ಜೆ ಹೆಜ್ಜೆಗೆ ಇಟ್ಟುಕೊಂಡು ನೆಲವು ಭದ್ರವಾಗಿರುವುದೇ ಇಲ್ಲವೇ ಎಂದು ನಿರ್ಧರಿಸಿಕೊಳ್ಳುತ್ತಾ ನೀರು ಕುಡಿಯುವ ಸ್ಥಳಕ್ಕೆ ಹೋಯಿತು. ಇದನ್ನು ಹೇಗಾದರೂ ಮಾಡಿ ಹಿಡಿಯಬೇಕೆಂದು ಮಾವಟಿಗನು ನಿರ್ಧರಿಸಿದನು. ಆನೆಯು ಹೋಗುವ ದಾರಿಯಲ್ಲಿದ್ದ ಮರವೊಂದರ ಮೇಲೆ ಕುಳಿತು ಅದು ಮರದಡಿಗೆ ಬಂದಾಗ ಆನೆಯ ಮೇಲಕ್ಕೆ ಧುಮುಕಿ ಅದಕ್ಕೆ ಕಟ್ಟಿದ್ದ ಹಗ್ಗಗಳನ್ನು ಭದ್ರವಾಗಿ ಹಿಡಿದು ಕೊಂಡನು. ಅವನನ್ನು ಎಸೆಯುವುದಕ್ಕೆ ಆನೆ ಎಷ್ಟೋ ಪ್ರಯತ್ನಪಟ್ಟಿತು. ಎಡಗಡೆ ಆನೆ ಹೊರಳಿದರೆ ಅವನು ಬಲಗಡೆ ಹೊರಳುತ್ತಿದ್ದ; ಬಲಗಡೆ ಹೊರಳಿದರೆ ಎಡಗಡೆ ಹೊರಳುತ್ತಿದ್ದ. ಈ ಮಧ್ಯೆ ತಲೆಯನ್ನು ಅಂಕುಶದಿಂದ ತಿವಿಯುತ್ತಿದ್ದ. ಕೊನೆಗೆ ಆನೆ ಸುಸ್ತಾಗಿ ಮಾವಟಿಗನ ಸರಪಳಿಗಳಿಂದ ಬಂಧಿತವಾಯಿತು. ಹೀಗೆ ಬಂಧಿತವಾದ ಆನೆಯನ್ನು ರಾಜನ ಮುಂದೆ ಹಿಡಿದುಕೊಂಡು ಹೋದಾಗ ರಾಜನು ಅವನಿಗೆ ಉದಾರವಾಗಿ ಬಹುಮಾನ ಕೊಟ್ಟನು.

ಹಿಂದೂಸ್ಥಾನದ ರಾಜರುಗಳು ಕೂಡ ಆನೆಯ ಬೇಟೆಯಲ್ಲಿ ಭಾಗವಹಿಸುತ್ತಾರೆ. ತಿಂಗಳುಗಟ್ಟಲೆ ಕಾಡಿನಲ್ಲಿದ್ದುಕೊಂಡು ಆನೆಗಳನ್ನು ಹಿಡಿದು ತಮಗೆ ಬೇಕಾದ ಆನೆ ಸಿಕ್ಕಾಗ ಹೆಮ್ಮೆಪಡುತ್ತಾರೆ. ಅಪರಾಧಿಗಳನ್ನು ಶಿಕ್ಷಿಸಲು ಒಮ್ಮೊಮ್ಮೆ ಅವರನ್ನು ಆನೆ ಕಾಲಕೆಳಕ್ಕೆ ಎಸೆಯುತ್ತಾರೆ. ಆನೆ ಅವರನ್ನು ಕಾಲಿನಿಂದ ಒಸಗಿ ಸೊಂಡಿಲಿನಿಂದ ಹರಿದು ಚಿಂದಿಚಿಂದಿ ಮಾಡಿಬಿಡುತ್ತದೆ. ಆನೆಯ ವ್ಯಾಪಾರದಲ್ಲಿ ನಿರತರಾದ ವರ್ತಕರು ಸೆರೆನ್‌ದಿಬ್‌ಗೆ ಹೋಗಿ ಅಲ್ಲಿ ಆನೆಗಳನ್ನು ಕೊಂಡು ನಾನಾ ದೇಶಗಳಿಗೆ ಮಾರುತ್ತಾರೆ. ಆನೆಗೆ ಗಜಕ್ಕೆ ಇಷ್ಟು ಎಂದು ಬೆಲೆ ಕಟ್ಟುತ್ತಾರೆ.

ದರಬ್‌ಖಾನೆಗೆ ಎದುರಾಗಿ ರಾಜ್ಯಪಾಲನ ಮನೆಯಿದೆ. ಇಲ್ಲಿ ಹನ್ನೆರಡು ಸಾವಿರ ಸೈನಿಕರು ಕಾವಲು ಕಾಯುತ್ತಾರೆ. ಪ್ರತಿಯೊಬ್ಬರಿಗೂ ದಿನಕ್ಕೆ ಒಂದು ಫನಂ ಸಂಬಳ ಕೊಡುತ್ತಾರೆ. ಈ ಸಂಬಳಕ್ಕೆ ಬೇಕಾದ ಹಣ ವೇಶ್ಯಾಗೃಹಗಳ ಮೇಲೆ ಹಾಕಿದ ತೆರಿಗೆಯಿಂದ ಬರುತ್ತದೆ. ಈ ವೇಶ್ಯಾಗೃಹಗಳ ಭವ್ಯತೆಯನ್ನೂ, ಈ ಗೃಹಗಳಲ್ಲಿರುವ ಯುವತಿಯರ ಸೌಂದರ್ಯವನ್ನೂ, ಅವರ ಹಾವಭಾವ ವಿಲಾಸಗಳನ್ನೂ ವರ್ಣಿಸಲು ಸಾಧ್ಯವಿಲ್ಲ. ಕೆಲವು ವಿಚಾರಗಳನ್ನು ಮಾತ್ರ ನಾನು ಹೇಳುತ್ತೇನೆ. ದರಬ್‌ಖಾನೆಯ ಹಿಂಭಾಗದಲ್ಲಿ ಮುನ್ನೂರು ಗಜಕ್ಕಿಂತಲೂ ಹೆಚ್ಚು ಉದ್ದವಾದ ಇಪ್ಪತ್ತು ಗಜಕ್ಕಿಂತಲೂ ಹೆಚ್ಚು ಅಗಲವಾದ ಒಂದು ತರಹ ಅಂಗಡಿ ಬೀದಿ ಇದೆ. ಇವುಗಳ ಮುಂದೆ ಸಿಂಹಾಸನದೋಪಾದಿಯಲ್ಲಿ ಅಂದವಾದ ಶಿಲೆಗಳಿಂದ ಕಟ್ಟಿದ ಪೀಠಗಳಿವೆ. ಗೃಹಗಳ ಸಾಲಿನ ಎರಡೂ ಕಡೆಯೂ ಸಿಂಹ, ಹುಲಿ, ಚಿರತೆ ಮತ್ತು ಇತರ ಪ್ರಾಣಿಗಳ ಚಿತ್ರಗಳನ್ನು ಚಿತ್ರಿಸಿದ್ದಾರೆ. ಈ ಚಿತ್ರಗಳನ್ನು ಎಷ್ಟು ಚೆನ್ನಾಗಿ ಬರೆದಿದ್ದಾರೆಂದರೆ ಮತ್ತು ಇವು ಎಷ್ಟು ಸ್ವಾಭಾವಿಕವಾಗಿ ಕಾಣುತ್ತವೆ ಎಂದರೆ ಇವು ಜೀವಂತ ಪ್ರಾಣಿಗಳೋ ಎಂದು ಭಾಸವಾಗುತ್ತವೆ. ಮಧ್ಯಾಹ್ನವಾದ ಮೇಲೆ ಭವ್ಯವಾಗಿ ಸಿಂಗರಿಸಿದ ಈ ಗೃಹಗಳ ಮುಂದೆ ವೇಶ್ಯಾಂಗನೆಯರು ಮೇಲೆ ತಿಳಿಸಿದ ಪೀಠಗಳ ಮೇಲೆ ಕುಳಿತುಕೊಳ್ಳುತ್ತಾರೆ. ಈ ವೇಶ್ಯೆಯರು ಬೆಲೆಯಾದ ಮುತ್ತು ಮಾಣಿಕ್ಯಗಳಿಂದಲೂ ವಸ್ತ್ರಗಳಿಂದಲೂ ಅಲಂಕೃತರಾಗಿ ರುತ್ತಾರೆ. ಇವರು ನವಯೌವ್ವನೆಯರು ಹಾಗೂ ಬಹುರೂಪವತಿಯರು. ಪ್ರತಿಯೊಬ್ಬ ವೇಶ್ಯೆಯ ಬಳಿ ಇಬ್ಬರು ದಾಸಿಯರು ಇದ್ದು ಮನರಂಜನೆಯನ್ನುಂಟು ಮಾಡುತ್ತಾರೆ. ಯಾರು ಬೇಕಾದರೂ ಈ ಬೀದಿಗೆ ಬಂದು ತನಗೆ ಮೆಚ್ಚಿಗೆಯಾದ ವೇಶ್ಯೆಯನ್ನು ಆರಿಸಿಕೊಂಡು ಅವಳೊಡನೆ ಕಾಲಕಳೆಯಬಹುದು. ಆತನ ಬಳಿ ಇರುವ ಸಾಮಾನುಗಳನ್ನೆಲ್ಲಾ ಈ ವೇಶ್ಯಾಗೃಹಗಳ ಮೇಲ್ವಿಚಾರಕರ ಬಳಿ ಇಟ್ಟು ಹೋಗಬೇಕು. ಹೀಗೆ ಇಟ್ಟ ಸಾಮಾನುಗಳು ಗೈರುವಿಲೆಯಾದರೆ ಮೇಲ್ವಿಚಾರಕರೇ ಜವಾಬ್ದಾರರು.

ಈ ನಗರದ ಏಳು ಕೋಟೆಗಳಲ್ಲಿಯೂ ಈ ತರಹ ಅನೇಕ ವೇಶ್ಯಾಗೃಹಗಳಿವೆ. ಈ ವೇಶ್ಯಾಗೃಹಗಳ ಮೇಲೆ ಹಾಕಿದ ತೆರಿಗೆಯಿಂದ ಹನ್ನೆರಡು ಸಾವಿರ ಫನಂ ಆದಾಯ ಬರುತ್ತದೆ. ಈ ಹಣವನ್ನು ಪಹರೆಯವರಿಗೆ ಸಂಬಳವಾಗಿ ಕೊಡುತ್ತಾರೆ. ಈ ಪಹರೆಯವರು ಕೋಟೆ ಯೊಳಗೆ ನಡೆಯುವ ಎಲ್ಲಾ ವಿಚಾರಗಳನ್ನೂ ತಿಳಿದುಕೊಳ್ಳಬೇಕು; ಕಳವುಗಳನ್ನು ಪತ್ತೆಹಚ್ಚಿ ವರದಿಮಾಡಬೇಕು. ಹಾಗೆ ಮಾಡದೆ ಹೋದರೆ ಆ ಮಾಲಿನ ಬೆಲೆಯನ್ನು ಮಾಲೀಕರಿಗೆ ಕೊಡಬೇಕು. ನನ್ನ ಸಹಪಾಠಿಗಳು ಕೊಂಡುಕೊಂಡಿದ್ದ ಕೆಲವು ಗುಲಾಮರು ಓಡಿಹೋಗಿ ಬಿಟ್ಟರು. ಈ ವಿಚಾರವನ್ನು ಕೊತ್ವಾಲನಿಗೆ ತಿಳಿಸಿದೆವು. ನಮ್ಮ ಬಿಡಾರಗಳನ್ನು ನೋಡಿ ಕೊಳ್ಳುತ್ತಿದ್ದ ಪಹರೆ ನಾಯಕನಿಗೆ ತಪ್ಪಿಸಿಕೊಂಡು ಹೋದ ಗುಲಾಮರನ್ನು ಹಿಡಿದು ತರಬೇಕು, ಇಲ್ಲವೆ ಅವರ ಬೆಲೆಯನ್ನು ಕಟ್ಟಿಕೊಡಬೇಕು ಎಂದು ಆತ ಆಜ್ಞೆಮಾಡಿದ. ಗುಲಾಮರ ಬೆಲೆ ಎಷ್ಟು ಎಂದು ಪಹರೆಯವರು ತಿಳಿದುಕೊಂಡು ಆ ಬೆಲೆಯನ್ನು ಕೊಟ್ಟುಬಿಟ್ಟರು.

ಇವಿಷ್ಟು ಬಿಜನಗರದ ಮತ್ತು ಅದರ ಚಕ್ರವರ್ತಿಯ ವಿವರಗಳು.

ನಾನು ಚಾಲ್ತಿಜಾ ತಿಂಗಳ ಕೊನೆಯಲ್ಲಿ (ಕ್ರಿ.ಶ. ೧೪೪೩ನೇ ಏಪ್ರಿಲ್ ತಿಂಗಳಿನ ಕೊನೆಯಲ್ಲಿ) ಈ ಮಹಾನಗರಕ್ಕೆ ಬಂದೆ. ನನಗೆ ಮೀಸಲಾಗಿಟ್ಟಿದ್ದ ಬಹಳ ದೊಡ್ಡ ಮನೆಯೊಂದರಲ್ಲಿ ಬಿಡಾರ ಮಾಡಿದೆ. ಹೆರಾತ್ ನಗರದ ಅರಮನೆಯ ಹೆಬ್ಬಾಗಿಲ ಮೇಲೆ ಕಾಣುವ ಮನೆಯೊಂದರಂತೆ ಇತ್ತು ನನ್ನ ಬಿಡಾರದ ಮನೆ. ಹಲವಾರು ದಿನಗಳು ವಿಶ್ರಾಂತಿ ಪಡೆದು ಪ್ರಯಾಣದ ಆಯಾಸವನ್ನು ಪರಿಹಾರ ಮಾಡಿಕೊಂಡೆ.

ಒಂದು ದಿನ ರಾಜನು ದೂತರ ಮೂಲಕ ನನಗೆ ಪತ್ರ ಕಳುಹಿಸಿದನು. ಅದೇ ದಿನ ಸಾಯಂಕಾಲ ನಾನು ರಾಜನನ್ನು ನೋಡಲು ಹೋದೆ. ನಾನು ರಾಜನಿಗೆ ಸುಂದರವಾದ ಕುದುರೆಗಳನ್ನೂ ಬೆಲೆಯಾದ ಡಮಾಸ್ಕ್ ಮತ್ತು ಸಾಟಿನ್ ಬಟ್ಟೆ ಥಾನುಗಳನ್ನೂ ಅರ್ಪಿಸಿದೆ. ರಾಜನು ಸಭಾಮಂಟಪದಲ್ಲಿ ಕುಳಿತು ಭವ್ಯವಾದ ವೈಭವದೊಡಗೂಡಿ ಒಡ್ಡೈಸುತ್ತಿದ್ದನು.  ಅವನ ಎಡಗಡೆ ಮತ್ತು ಬಲಗಡೆ ಚಕ್ರಾಕಾರವಾಗಿ ಅಸಂಖ್ಯಾತ ಜನಸಂದಣಿ ಸೇರಿತ್ತು. ರಾಜನು ಹಸುರು ಬಣ್ಣದ ಸ್ಯಾಟಿನ್‌ಬಟ್ಟೆ ಉಡುಪು ಧರಿಸಿದ್ದನು. ಕೊರಳಿನ ಸುತ್ತ ವಜ್ರ ವೈಢೂರ್ಯಗಳ ಹಾಗೂ ಮುತ್ತುಗಳ ಕೊರಳಪಟ್ಟಿಯನ್ನು ಹಾಕಿಕೊಂಡಿದ್ದನು. ಅವನ ಮೈಬಣ್ಣ ಎಣ್ಣೆಗೆಂಪಾಗಿತ್ತು. ತೆಳ್ಳಗೆ ಸ್ವಲ್ಪ ಉದ್ದವಾಗಿದ್ದನು. ಕೆನ್ನೆಗಳು ಕೊಂಚ ಕುಳಿಯಾಗಿದ್ದುವು. ಆದರೆ ಗಡ್ಡ ಬೆಳೆಸಿರಲಿಲ್ಲ. ಅವನ ಮುಖಭಾವ ಸೌಮ್ಯವಾಗಿತ್ತು.[6]

ರಾಜನ ಮುಂದೆ ನನ್ನನ್ನು ಕರೆದುಕೊಂಡು ಹೋಗಲು ನಾನು ತಲೆ ಬಗ್ಗಿಸಿ ಮೂರು ಸಲ ನಮಸ್ಕಾರ ಮಾಡಿದೆ. ರಾಜನು ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ ತನಗೆ ಬಹು ಸಮೀಪದಲ್ಲಿದ್ದ ಪೀಠದಲ್ಲಿ ಕುಳಿತುಕೊಳ್ಳುವಂತೆ ಅಪ್ಪಣೆ ಮಾಡಿದನು. ನಾನು ನನ್ನ ರಾಜನಿಂದ ತಂದಿದ್ದ ಪತ್ರವನ್ನು ಅವನ ಕೈಗೆ ಕೊಟ್ಟಾಗ ರಾಜ ಅದನ್ನು ತನ್ನ ದುಭಾಷಿಗೆ ಕೊಟ್ಟು ‘ದೊಡ್ಡ ರಾಜನೊಬ್ಬ ನಮ್ಮ ಬಳಿಗೆ ರಾಯಭಾರಿಯನ್ನು ಕಳುಹಿಸಿರುವುದು ನಮ್ಮ ಮನಸ್ಸಿಗೆ ನಿಜವಾಗಿಯೂ ಸಂತೋಷವಾಗಿದೆ’ ಎಂದನು.

ಸೆಖೆಯಿಂದಲೂ, ಧರಿಸಿದ್ದ ಅನೇಕ ಉಡುಪುಗಳ ಕಾರಣದಿಂದಲೂ ನಾನು ಬೆವೆತು ಒದ್ದೆಯಾಗಿ ಒದ್ದಾಡುತ್ತಿದ್ದುದನ್ನು ನೋಡಿ ರಾಜನು ಕನಿಕರಪಟ್ಟು ತನ್ನ ಕೈಯ್ಯಲ್ಲಿದ್ದಂಥ ಬೀಸಣಿಗೆಯೊಂದನ್ನು ನನಗೆ ಕೊಡಿಸಿಕೊಟ್ಟನು. ಅನಂತರ ಹರಿವಾಣದಲ್ಲಿ ಎರಡು ಕಟ್ಟು ವೀಳೆಯದೆಲೆ, ಐದುನೂರು ಫನಂ ನಾಣ್ಯಗಳುಳ್ಳ ಚೀಲ ಮತ್ತು ಇಪ್ಪತ್ತು ಮಿತ್‌ಕಾಲ್ ತೂಕದಷ್ಟು ಕರ್ಪೂರವನ್ನಿಟ್ಟು  ಸಾಮಾನ್ಯನಾದ ನನ್ನನ್ನು ಗೌರವಿಸಿದನು. ಅನಂತರ ನಾನು ಅನುಮತಿ ಪಡೆದು ಬಿಡದಿಗೆ ಹಿಂದಿರುಗಿದೆ.

ಇಲ್ಲಿಯವರೆಗೆ ನನ್ನ ಬಿಡದಿಯ ಗ್ರಾಸಕ್ಕಾಗಿ ಪ್ರತಿನಿತ್ಯ ಎರಡು ಕುರಿ, ನಾಲ್ಕು ಜೊತೆ ಕೋಳಿ, ಐದು ಮಣ ಅಕ್ಕಿ, ಒಂದು ಮಣ ಬೆಣ್ಣೆ, ಒಂದು ಮಣ ಸಕ್ಕರೆ, ಎರಡು ಚಿನ್ನದ ವರಾಹಗಳನ್ನು ಕೊಡುತ್ತಿದ್ದರು. ಅನಂತರವೂ ಇಷ್ಟನ್ನು ಮುಂದುವರಿಸಿಕೊಂಡು ಹೋಗಲಾಯಿತು. ವಾರಕ್ಕೆ ಎರಡು ಸಲ ಸಂಜೆಯ ಹೊತ್ತು ರಾಜನು ನನಗೆ ಹೇಳಿಕಳುಹಿಸಿ ನನ್ನ ದೊರೆಯಾದ ಖಾಖಾನನ ಬಗ್ಗೆ ಪ್ರಶ್ನೆಗಳನ್ನು ಹಾಕಿ ವಿಚಾರಗಳನ್ನು ತಿಳಿದು ಕೊಳ್ಳುತ್ತಿದ್ದನು. ಹೋದಾಗಲೆಲ್ಲಾ ಒಂದುಕಟ್ಟು ವೀಳೆಯದೆಲೆ, ಫನಂ ನಾಣ್ಯಗಳ ಚೀಲ ಮತ್ತು ಒಂದಿಷ್ಟು ಮಿತ್ಕಾಲ್ ಕರ್ಪೂರ ಬಹುಮಾನವಾಗಿ ಸಿಕ್ಕುತ್ತಿತ್ತು. ರಾಜನು ತನ್ನ ದುಭಾಷಿಯ ಮೂಲಕ ನನ್ನನ್ನು ಕುರಿತು ‘ನಿಮ್ಮ ರಾಜರುಗಳು ರಾಯಭಾರಿಯನ್ನು ಕರೆದು ಅವನೊಡನೆ ಸಹಭೋಜನ ಮಾಡುತ್ತಾರೆ. ಆದರೆ ನಾವು ನಿಮ್ಮೊಡನೆ ಸಹ ಭೋಜನ ಮಾಡಬಾರದು. ಆದ್ದರಿಂದ ಅದರ ಬದಲು ಈ ಚಿನ್ನದ ನಾಣ್ಯಗಳ ಚೀಲವೇ ನಾವು ರಾಯಭಾರಿಗಳಿಗೆ ಕೊಡುವ ಸಹಭೋಜನ’ ಎಂದು ಹೇಳಿದನು.

ವೀಳೆಯದೆಲೆಯನ್ನು ಹಿಂದೂಸ್ಥಾನ, ಅರಬ್ಬೀದೇಶದ ಬಹುಭಾಗ, ಓರ್ಮಸ್ ರಾಜ್ಯ – ಈ ಕಡೆಗಳ ಜನರು ಬಹಳ ಆಸೆಯಿಂದ ಉಪಯೋಗಿಸುತ್ತಾರೆ. ನಿಜವಾಗಿಯೂ ಅದರಲ್ಲಿ ಒಳ್ಳೆಯ ಗುಣಗಳಿರುವುದರಿಂದ ಅದಕ್ಕೆ ಇಷ್ಟು ಪ್ರಾಶಸ್ತ್ಯ. ಇದನ್ನು ಉಪಯೋಗಿಸುವ ರೀತಿ ಹೀಗಿದೆ : ಸಿಪಾರಿ (ಸುಪಾರಿ) ಎಂದು ಕರೆಯುವ ಅಡಕೆಯನ್ನು ಸ್ವಲ್ಪ ಜಜ್ಜಿ ಬಾಯೊಳಕ್ಕೆ ಹಾಕಿಕೊಳ್ಳುತ್ತಾರೆ. ವೀಳೆಯದೆಲೆಗೆ ಸುಣ್ಣವನ್ನು ಹಚ್ಚಿ ಸುರುಳಿಮಾಡಿ ಬಾಯಲ್ಲಿಟ್ಟು ಅಗಿಯುತ್ತಾರೆ. ಒಂದೊಂದು ಸಲ ನಾಲ್ಕಾರು ಎಲೆಗಳನ್ನು ಒಟ್ಟಿಗೇ ಬಾಯಲ್ಲಿ ಹಾಕಿಕೊಂಡು ಅಗಿಯುವುದುಂಟು. ಕೆಲವು ವೇಳೆ ಪಚ್ಚಕರ್ಪೂರ ಸೇರಿಸಿಕೊಳ್ಳುತ್ತಾರೆ. ರಸವನ್ನು ಒಮ್ಮೊಮ್ಮೆ ಉಗಿಯುತ್ತಾರೆ. ಅದು ಕೆಂಪು ಬಣ್ಣಕ್ಕಿರುತ್ತದೆ. ವೀಳೆಯವನ್ನು ಹಾಕಿಕೊಂಡಾಗ ಮುಖವು ಬಣ್ಣವೇರಿ ತೇಜಸ್ಸು ಕಾಣಿಸುತ್ತದೆ. ದ್ರಾಕ್ಷಾರಸವನ್ನು ಕುಡಿದರೆ ಬರುವಂಥ ಅಮಲು ಬರುತ್ತದೆ. ಹೊಟ್ಟೆ ತುಂಬ ಉಂಡಾಗ ಇದನ್ನು ಹಾಕಿಕೊಂಡರೆ ಆಹಾರವನ್ನು ಜೀರ್ಣಮಾಡುತ್ತದೆ. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಿ ಹಲ್ಲುಗಳಿಗೆ ಶಕ್ತಿಕೊಡುತ್ತದೆ. ವೀಳೆಯದೆಲೆ ಎಷ್ಟು ಬಲವರ್ಧಕ, ಎಷ್ಟು ಕಾಮೋತ್ತೇಜಕ ಎಂಬುದನ್ನು ವರ್ಣಿಸಲಾರೆ. ಬಹುಶಃ ಈ ವೀಳೆಯದೆಲೆಯ ಗುಣವೇ ಕಾರಣ ಇರಬೇಕು ಈ ದೇಶದ ದೊರೆ ತನ್ನ ಅಂತಃಪುರದಲ್ಲಿ ಲೆಕ್ಕವಿಲ್ಲದಷ್ಟು ಸ್ತ್ರೀಯರನ್ನು ಇಟ್ಟುಕೊಂಡಿರುವುದಕ್ಕೆ.

ಜನಗಳು ಹೇಳುವುದು ನಿಜವಾದರೆ, ರಾಜನ ಅಂತಃಪುರದಲ್ಲಿ ಇರುವ ರಾಣಿಯರು ಮತ್ತು ಇಟ್ಟುಕೊಂಡವರು ಏಳುನೂರು ಜನರಿದ್ದಾರೆ. ಅಂತಃಪುರಕ್ಕೆ ಹತ್ತು ವರ್ಷ ಮೀರಿದ ಮಗುವಿಗೆ ಪ್ರವೇಶವಿಲ್ಲ. ಪ್ರತಿಯೊಬ್ಬಳಿಗೂ ಬೇರೆ ಬೇರೆ ವಾಸಗೃಹ. ಇಬ್ಬರನ್ನು ಒಂದೇ ಮನೆಯಲ್ಲಿ ಇಡುವುದಿಲ್ಲ. ಪ್ರತಿಯೊಬ್ಬರಿಗೂ ಬೇರೆ ಬೇರೆ ಊಟೋಪಚಾರ ಇತ್ಯಾದಿ. ದೇಶದಲ್ಲಿ ಎಲ್ಲಿಯಾದರೂ ಸರಿಯೆ, ರೂಪವತಿಯಾದ ಹುಡುಗಿ ಇದ್ದಾಳೆಂದು ಗೊತ್ತಾದರೆ ಆಕೆಯ ತಂದೆ ತಾಯಿಗಳ ಒಪ್ಪಿಗೆ ಪಡೆದ ಕೂಡಲೇ ಆಕೆಯನ್ನು ವೈಭವಯುತವಾಗಿ ಕರೆದು ತಂದು ಅಂತಃಪುರಕ್ಕೆ ಸೇರಿಸುತ್ತಾರೆ. ಅಂದಿನಿಂದ ಮತ್ಯಾರೂ ಆಕೆಯನ್ನು ನೋಡುವಂತಿಲ್ಲ. ಆದರೆ ಆಕೆಗೆ ಅಂತಃಪುರದಲ್ಲಿ ಅತ್ಯುನ್ನತವಾದ ಗೌರವ ದೊರೆಯುತ್ತದೆ.

ನಾನು ಬಿಜನಗರಕ್ಕೆ ಬರುವುದಕ್ಕೆ ಮುಂಚೆ ಕಾಲಿಕಟ್ಟಿನಲ್ಲಿ ಇದ್ದಾಗ (೧೪೪೨ನೇ ನವೆಂಬರ್‌ನಿಂದ ೧೪೪೩ನೇ ಏಪ್ರಿಲ್‌ವರೆಗೆ) ಬಿಜನಗರದಲ್ಲಿ ಒಂದು ಅಪೂರ್ವವೂ ಅದ್ಭುತವೂ ಆದ ಸಂಗತಿ ಜರುಗಿತು. ಅದನ್ನು ಈಗ ಹೇಳುತ್ತೇನೆ :

ರಾಜನ ತಮ್ಮ[7] ಒಂದು ಹೊಸ ಮನೆಯನ್ನು ಕಟ್ಟಿಸಿ ಅದರ ಪ್ರವೇಶೋತ್ಸವಕ್ಕೆ ರಾಜನನ್ನೂ[8]  ರಾಜ್ಯದ ಮುಖ್ಯ ಆಸ್ಥಾನಿಕರನ್ನೂ ಆಹ್ವಾನಿಸಿದನು. ವಿಗ್ರಹಾರಾಧಕರು ಮತ್ತೊಬ್ಬರು ಕಾಣುವಂತೆ ಊಟ ಮಾಡುವುದಿಲ್ಲವೆಂಬುದು ಗೊತ್ತಾದ ವಿಷಯವಷ್ಟೆ! ಬಂದ ಅತಿಥಿಗಳೆಲ್ಲ ಒಂದು ದೊಡ್ಡ ಹಜಾರದಲ್ಲಿ ನೆರೆದರು. ಒಬ್ಬೊಬ್ಬರ ಊಟವಾದ ಮೇಲೆ ರಾಜನ ತಮ್ಮನು ಆಗಾಗ್ಯೆ ಆ ಹಜಾರಕ್ಕೆ ಬಂದು ಇಂತಿಂಥವರು ಬಂದು ಊಟ ಮಾಡಬೇಕೆಂದು ಆಹ್ವಾನಿಸುತ್ತಿದ್ದನು. ಈ ಉತ್ಸವಕ್ಕೆಂದು ಊರಿನಲ್ಲಿದ್ದ ಎಲ್ಲಾ ಡೋಲು, ತುತೂರಿ, ಕೊಂಬು, ಕಹಳೆ ಮುಂತಾದ ವಾದ್ಯಗಳನ್ನು ತರಿಸಿ ಆ ವಾದ್ಯಗಳನ್ನು ಒಂದೇ ಸಲ ಬಾರಿಸುವಂತೆ ವ್ಯವಸ್ಥೆ ಮಾಡಿದ್ದನು. ಅವು ಕಿವಿ ಕಿವುಡಾಗುವಂತೆ ಭೋರ್ಗರೆಯುತ್ತಿದ್ದುವು. ಭೋಜನಕ್ಕೆ ಆಹ್ವಾನಿತರಾದವರು ಒಬ್ಬೊಬ್ಬರಾಗಿ ಭೋಜನದ ಮನೆಯನ್ನು ಹೊಕ್ಕ ಕೂಡಲೇ ಅಲ್ಲಿ ಅಡಗಿದ್ದ ಇಬ್ಬರು ಕಟುಕರು ಅವರ ಮೇಲೆ ಬಿದ್ದು ಕಠಾರಿಯಿಂದ ಇರಿದು ಶರೀರವನ್ನು ತುಂಡುತುಂಡಾಗಿ ಕತ್ತರಿಸಿ ಹಾಕುತ್ತಿದ್ದರು. ಒಬ್ಬನನ್ನು ಕತ್ತರಿಸಿದ ಮೇಲೆ ಇನ್ನೊಬ್ಬನನ್ನು ಊಟಕ್ಕೆ ಕರೆಯುತ್ತಿದ್ದರು. ಹೀಗೆ ಒಬ್ಬರಾದ ಮೇಲೆ ಒಬ್ಬರು ಮಾರಿಗೌತಣವಾದರು.

ವಾದ್ಯಗಳ ಅಪಾರ ಶಬ್ದ ಕಾರಣ ಕೊಲೆಯ ಕಾರ್ಯದಲ್ಲಿ ನಿರತರಾದ ಕೆಲವರನ್ನು ಬಿಟ್ಟು ಉಳಿದವರು ಯಾರಿಗೂ ಈ ಘೋರ ಕೃತ್ಯ ಗೊತ್ತಾಗಲೇ ಇಲ್ಲ. ಈ ರೀತಿ ದೇಶದ ಗಣ್ಯರಾದ ಹಿರಿಯ ವ್ಯಕ್ತಿಗಳೆಲ್ಲ ಕೊಲೆಯಾಗಿಬಿಟ್ಟರು. ರಾಜನ ತಮ್ಮನು ರಕ್ತದ ಕೋಡಿ ಹರಿಯುತ್ತಿದ್ದ ತನ್ನ ಹೊಸ ಮನೆಯನ್ನು ಬಿಟ್ಟು ರಾಜನ ಅರಮನೆಗೆ ಹೋಗಿ ಕಾವಲುಗಾರರನ್ನೆಲ್ಲಾ ಭೋಜನಕ್ಕೆ ಕರೆದು ಅವರನ್ನೂ ಉಳಿದವರ ದಾರಿಯಲ್ಲಿಯೇ ಕಳುಹಿಸಿಕೊಟ್ಟನು. ರಾಜನ ರಕ್ಷಣೆಗೆ ಜನರೇ ಇಲ್ಲದಂತೆ ಮಾಡಿಬಿಟ್ಟನು. ಅನಂತರ ಆ ಪಾಪಿ ರಾಜನ ಅರಮನೆಯನ್ನು ಪ್ರವೇಶಿ ಅವನ ಮುಂದೆ ವೀಳೆಯದ ತಟ್ಟೆಯನ್ನಿಟ್ಟು ಭೋಜನಕ್ಕೆ ಆಹ್ವಾನಿಸಿದನು. ಆದರೆ ವೀಳೆಯದೆಲೆಯ ಕೆಳಗೆ ಕಠಾರಿಯನ್ನು ಬಚ್ಚಿಟ್ಟಿದನು. ‘ಭೋಜನ ಸಿದ್ಧವಾಗಿದೆ, ಮಹಾಸ್ವಾಮಿಯವರು ದಯಮಾಡಿಸಬೇಕು’ ಎಂದು ರಾಜನನ್ನು ಭೋಜನಕ್ಕೆ ಆಹ್ವಾನಿಸಿದನು. ದೊಡ್ಡವರಿಗೆ ದೇವರೇ ದಾರಿ ತೋರಿಸುತ್ತಾನೆಂಬ ಮಾತಿಗನು ಸಾರವಾಗಿ ರಾಜನು ತನಗೆ ಮೈ ಸ್ವಸ್ಥವಿಲ್ಲೆಂದು ಹೇಳಿದನು. ತಮ್ಮನು ತನ್ನ ಕೆಲಸ ಕೆಟ್ಟಿತಲ್ಲಾ ಎಂದು ಬಚ್ಚಿಟ್ಟಿದ್ದ ಕಠಾರಿಯಿಂದ ರಾಜನನ್ನು ನಾಲ್ಕಾರು ಸಲ ತಿವಿದನು. ರಾಜ ತನ್ನ ಪೀಠದಿಂದ ಬಿದ್ದುಬಿಟ್ಟನು. ರಾಜನು ಸತ್ತುಹೋದನೆಂದು ಭಾವಿಸಿದ ತಮ್ಮನು ರಾಜನ ತಲೆಯನ್ನು ಕತ್ತರಿಸಿ ಹಾಕುವಂತೆ ತನ್ನ ಆಪ್ತನೊಬ್ಬನಿಗೆ ತಿಳಿಸಿ, ಅರಮನೆಯ ಮೇಲೇರಿ ಜನರನ್ನು ಉದ್ದೇಶಿಸಿ ತಾನು ರಾಜನನ್ನೂ ಅವನ ತಮ್ಮಂದಿರನ್ನೂ ಬ್ರಾಹ್ಮಣರು ಮತ್ತು ಉಳಿದೆಲ್ಲ ಆಸ್ಥಾನಿಕರನ್ನೂ ಕೊಂದಿರುವೆನೆಂದೂ, ಅಂದಿನಿಂದ ತಾನೇ ರಾಜನೆಂದೂ ಘೋಷಿಸಿದನು.

ಆದರೆ ರಾಜನು ಸತ್ತಿರಲಿಲ್ಲ. ಆತ ಚೇತರಿಸಿಕೊಂಡು ಎದ್ದು, ತನ್ನ ತಲೆಯನ್ನು ಕತ್ತರಿಸಲು ಬಂದವನನ್ನು ಕೊಂದು ಅಂತಃಪುರದ ಮಾರ್ಗವಾಗಿ ಅರೆಮನೆಯಿಂದ ಹೊರಬಂದನು. ಅತ್ತ ತಮ್ಮನು ತಾನೇ ರಾಜನೆಂದು ಘೋಷಿಸುತ್ತಿರುವಾಗ ರಾಜನು ಕಾಣಿಸಿಕೊಂಡು ತಾನು ಸತ್ತಿಲ್ಲವೆಂದೂ, ತನ್ನನ್ನು ಕೊಲ್ಲಲು ಪ್ರಯತ್ನಪಟ್ಟ ದ್ರೋಹಿಯನ್ನು ಹಿಡಿಯಬೇಕೆಂದೂ ಕೂಗಿದನು. ನೆರೆದ ಇಡೀ ಜನ ಸಮೂಹ ರಾಜನ ತಮ್ಮನನ್ನು ಹಿಡಿದು ಕೊಂದುಹಾಕಿತು. ಈ ಕೃತ್ಯದಲ್ಲಿ ಸಾಯದೇ ಬದುಕಿದವನು ಡನಾಯಕನೊಬ್ಬನೇ.[9] ಅವನು ರಾಜಕಾರ್ಯದ ಮೇಲೆ ಸಿಲೋನಿನ ಗಡಿಯ ಕಡೆ ಹೋಗಿದ್ದರಿಂದ ಬದುಕಿಕೊಂಡನು. ಈ ಹೀನಕೃತ್ಯಕ್ಕೆ ಸಹಾಯ ಮಾಡಿದವರನ್ನೆಲ್ಲಾ ರಾಜನು ಕೊಲ್ಲಿಸಿದನು. ಅನೇಕ ಜನಗಳನ್ನು ಜೀವಸಹಿತ ಸುಡಿಸಿದನು. ಕೆಲವರ ಚರ್ಮ ಸುಲಿಸಿದನು. ಒಟ್ಟಿನಲ್ಲಿ ಅವರ ವಂಶದ ಹೆಸರಿಲ್ಲದಂತೆ ಮಾಡಿದನು.

ಆಡಳಿತ ನಡೆಸುವ ಈ ದೇಶದ ವಿಗ್ರಹಾರಾಧಕರು ತಮ್ಮ ಗೌರವ ಪ್ರತಿಷ್ಠೆ, ತಮ್ಮ ಅಧಿಕಾರ, ತಮ್ಮ ದರ್ಪ ಮತ್ತು ತಮ್ಮ ವೈಭವ ಪ್ರದರ್ಶನಕ್ಕಾಗಿ ಪ್ರತಿ ವರ್ಷವೂ ಮಹಾನದಿ (ಮಹಾನವಮಿ) ಎಂಬ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ನಿಜವಾಗಿಯೂ ಒಬ್ಬ ಚಕ್ರವರ್ತಿಗೆ ಯೋಗ್ಯವಾದ ಹಬ್ಬವೇ ಸರಿ. ಇದನ್ನು ಆಚರಿಸುವ ರೀತಿ ಹೀಗಿದೆ :

ಬಿಜನಗರದ ರಾಜನ ಅಪ್ಪಣೆಯಂತೆ ಮೂರು ತಿಂಗಳು ಪ್ರಯಾಣದಷ್ಟು ವಿಸ್ತಾರವಾದ ಅವನ ರಾಜ್ಯದ ಎಲ್ಲಾ ಕಡೆಗಳಿಂದ ಮಾಂಡಲಿಕರೂ, ಸರದಾರರೂ ಮತ್ತು ಮುಖ್ಯಸ್ಥರೂ ರಾಜಧಾನಿಗೆ ಬರುತ್ತಾರೆ. ಅವರು ಬರುವಾಗ ಸಾವಿರಾರು ಆನೆಗಳ ಸಮೇತ ಬರುತ್ತಾರೆ. ಹೀಗೆ ಸೇರಿದ ಆನೆಗಳ ಸಮೂಹ ಅಲ್ಲೋಲಕಲ್ಲೋಲವಾದ ಸಮುದ್ರವನ್ನು ಅಥವಾ ಬಿರುಗಾಳಿಗೆ ತುತ್ತಾದ ಮೇಘವನ್ನು ಹೋಲುತ್ತದೆ. ಆನೆಗಳಿಗೆ ಸೊಗಸಾದ ಹೊದಿಕೆಗಳನ್ನು ಹೊಂದಿಸಿ ಬೆನ್ನಿಗೆ ಅಂಬಾರಿಗಳನ್ನು ಬಿಗಿದಿರುತ್ತಾರೆ. ಈ ಅಂಬಾರಿಗಳಲ್ಲಿ ದೊಂಬರೂ, ನಾನಾ ಆಟ ಚತುರರೂ ಕುಳಿತುಕೊಳ್ಳುತ್ತಾರೆ. ಆನೆಯ ಸೊಂಡಿಲು ಮತ್ತು ಕಿವಿಗಳ ಮೇಲೆ ರಸಸಿಂಧೂರ ಮತ್ತು ಇತರ ಬಣ್ಣಗಳನ್ನು ಸೇರಿಸಿ ಅಪೂರ್ವವೂ ಆಶ್ಚರ್ಯವೂ ಆದ ರೀತಿಯಲ್ಲಿ ಅಲಂಕಾರ ಮಾಡುತ್ತಾರೆ.

ರಾಜಬ್ ತಿಂಗಳಲ್ಲಿ ನಿರ್ಧಾರವಾದ ದಿನ ಈ ಆನೆಗಳೂ ನಾನಾ ಕಡೆಯಿಂದ ಬಂದ ಸೇನಾನಾಯಕರುಗಳೂ ಪ್ರಮುಖ ವ್ಯಕ್ತಿಗಳೂ ಪಂಡಿತರಾದ ಬ್ರಾಹ್ಮಣರೂ ಅರಮನೆಯಲ್ಲಿ ನೆರೆಯುತ್ತಾರೆ. ಅರಮನೆಯ ಮುಂದಿರುವ ವೈಭವಯುತವಾಗಿ ಅಲಂಕೃತವಾದ ಮೈದಾನವು ಅಸಂಖ್ಯಾತ ಆನೆಗಳ ಸೇರುವಿಕೆಯಿಂದ ಸಮುದ್ರದ ಅಲೆಗಳಂತೆ ಅಥವಾ ಪುನರುತ್ಥಾನದ ದಿನ ಸೇರುವ ಜನಸಂದಣಿಯಂತೆ ಕಾಣುತ್ತದೆ. ಅರಮನೆಯ ಮುಂದಿನ ವಿಶಾಲವಾದ ಪ್ರದೇಶದಲ್ಲಿ ಮೂರು, ನಾಲ್ಕು ಮತ್ತು ಐದು ಅಂತಸ್ತಿನ ಅನೇಕ ರಂಗಮಂಟಪಗಳನ್ನು ನಿರ್ಮಿಸುತ್ತಾರೆ. ಈ ರಂಗಮಂಟಪಗಳನ್ನು ಮೇಲಿನಿಂದ ಕೆಳಗಿನವರೆವಿಗೆ ನಾನಾ ಚಿತ್ರಗಳಿಂದ ಅಲಂಕರಿಸುತ್ತಾರೆ. ಮನಸ್ಸು ಊಹಿಸಬಹುದಾದ ಎಲ್ಲಾ ಪ್ರಾಣಿಗಳ, ಅಂದರೆ ಮನುಷ್ಯರ, ಕಾಡುಪ್ರಾಣಿಗಳ, ಹಕ್ಕಿಗಳ, ಕೊನೆಗೆ ನೊಣ ಮತ್ತು ಹುಳುಹುಪ್ಪಟೆಗಳ ಚಿತ್ರಗಳನ್ನು ಅದ್ಭುತವಾದ ಕಲಾಚತುರತೆಯಿಂದ ಚಿತ್ರಿಸುತ್ತಾರೆ. ಕೆಲವು ಮಂಟಪಗಳನ್ನು ಯಾವ ರೀತಿ ನಿರ್ಮಿಸುತ್ತಾರೆಂದರೆ ಅವನ್ನು ಬೇಕೆಂದರೆ ಕ್ಷಿಪ್ರದಲ್ಲಿ ತಿರುಗಿಸಿ ಬೇರೊಂದು ಮುಖ ತೋರಿಸಬಹುದು. ಒಂದೊಂದು ಕ್ಷಣಕ್ಕೆ ಒಂದೊಂದು ತರಹ ಕೋಣೆ ಅಥವಾ ಹಜಾರ ಕಣ್ಣಿಗೆ ಕಾಣಿಸಿಕೊಳ್ಳುತ್ತದೆ.

ಈ ಪ್ರದೇಶದಲ್ಲಿ ಒಂಬತ್ತು ಭವ್ಯಾಲಂಕೃತ ಮಂಟಪಗಳು ಸಿದ್ಧವಾಗುತ್ತವೆ. ಒಂಬತ್ತನೇ ಮಂಟಪದಲ್ಲಿ ರಾಜನ ಸಿಂಹಾಸನವಿರುತ್ತದೆ. ಏಳನೇ ಮಂಟಪದಲ್ಲಿ ಈ ಕಥನ ಹೇಳುವ ಸಾಮಾನ್ಯನಾದ ನನಗೂ, ನನ್ನ ಸಹಪಾಠಿಗಳಿಗೂ ಜಾಗ ಮೀಸಲಾಗಿತ್ತು. ನಮ್ಮನ್ನು ಬಿಟ್ಟು ಬೇರೆಯವರಿಗೆ ಇಲ್ಲಿ ಅವಕಾಶವಿರಲಿಲ್ಲ. ಅರಮನೆಗೂ ಮಂಟಪಗಳಿಗೂ ಮಧ್ಯೆ ಬಹು ಸುಂದರವಾದ ಸ್ಥಳದಲ್ಲಿ ಗಾಯಕರೂ ಕತೆಗಾರರೂ ಹಾಡುತ್ತಲೂ ಕಥೆ ಹೇಳುತ್ತಲೂ ಇದ್ದರು. ಹಾಡುಗಳನ್ನು ಸಾಮಾನ್ಯವಾಗಿ ಹೆಂಗಸರು ಹಾಡುತ್ತಾರೆ. ಪೂರ್ಣಚಂದ್ರನಂತೆ ತುಂಬಿದ ಕೆನ್ನೆಯ ಮತ್ತು ವಸಂತ ಋತುವಿಗಿಂತಲೂ ಆಹ್ಲಾದಕರವಾದ ಮುಖವುಳ್ಳ ಕೆಲವು ಚಿಕ್ಕ ಹೆಣ್ಣುಮಕ್ಕಳು ಸೊಗಸಾದ ಉಡುಪಿನಲ್ಲಿ ರಾಜನ ಎದುರಿಗಿದ್ದ ಸುಂದರವಾದ ಪರದೆಯ ಹಿಂದೆ ಇದ್ದರು. ಅವರು ಮನಸ್ಸನ್ನಾಕರ್ಷಿಸುವ ಹೊಚ್ಚ ಹೊಸ ಗುಲಾಬಿಯಂತಹ ತಮ್ಮ ಮುಖಭಾವಗಳನ್ನು ಪ್ರದರ್ಶಿಸಿ ನೋಟಕರ ಮನ ಸೆಳೆಯುತ್ತಿದ್ದರು. ಇದ್ದಕ್ಕಿದ್ದಂತೆ ಪರದೆ ಮೇಲೇರಿ ಕೆಳಗಿಳಿಯಿತು. ಹುಡುಗಿಯರು ತಮ್ಮ ಹಾವಭಾವ ವಿಲಾಸಗಳನ್ನು ತೋರಿಸುತ್ತಾ ನರ್ತನಕ್ಕೆ ಸಿದ್ಧರಾದರು. ಅವರ ಹಾವಭಾವ ಎಂಥವರನ್ನೂ ಮುಗ್ಧ ಮಾಡುವಂತಿತ್ತು.

ಡೊಂಬರು ಕೆಲವು ಅದ್ಭುತವಾದ ಚತುರತೆಯ ಆಟಗಳನ್ನು ಆಡಿದರು. ಭಾರಿ ಆನೆಯೊಂದು ಮರದ ತುಂಡಿನ ಮೇಲೆ ನಾಲ್ಕು ಕಾಲುಗಳನ್ನೂ ಒಂದೇ ಕಡೆ ಹಾಕಿ ನಿಂತುಕೊಂಡು ವಾದ್ಯಕ್ಕೆ ತಕ್ಕಂತೆ ತನ್ನ ಸೊಂಡಿಲನ್ನೂ ಮೈಯ್ಯನ್ನೂ ಕುಣಿಸಿತು. ತಕ್ಕಡಿಯೋಪಾದಿಯಲ್ಲಿ ಹತ್ತು ಗಜ್ ಎತ್ತರದಲ್ಲಿ ನೆಟ್ಟ ಸ್ತಂಭವೊಂದಕ್ಕೆ ಒಂದು ಕಡೆ ಆನೆಯ ತೂಕದಷ್ಟು ಕಲ್ಲನ್ನೂ, ಇನ್ನೊಂದು ಕಡೆ ಹಲಗೆಯ ಮೇಲೆ ಆನೆಯನ್ನೂ ನಿಲ್ಲಿಸಿ ಅರ್ಧವೃತ್ತದಷ್ಟು ಅತ್ತಿತ್ತ ಆಡಿಸಿದರು. ಆನೆ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾ ಮೈ ಕುಲುಕುತ್ತಾ ಇತ್ತು.

ಗಾಯಕರಿಗೂ, ಪ್ರವಚನಕಾರರಿಗೂ, ಡೊಂಬರಿಗೂ ರಾಜನಿಂದ ಸೊಗಸಾದ ಚಿನ್ನದ ಉಡುಪುಗಳು ಬಹುಮಾನವಾಗಿ ದೊರೆಯುತ್ತವೆ.

ಮೂರು ದಿವಸಗಳೂ ಉರಿಯುವ ಸೂರ್ಯ ಆಕಾಶದಲ್ಲಿ ಮನಮೋಹಕ ಗರಿಗಳನ್ನು ಎತ್ತಿದ ನವಿಲಿನಂತೆ ಕಾಣಿಸುವ ಬೆಳಗಿನಿಂದ ಹಿಡಿದು, ಕಗ್ಗತ್ತಲಿನಲ್ಲಿ ನವಿಲು ತನ್ನ ರೆಕ್ಕೆಗಳನ್ನು ಬಿಚ್ಚುವ ಇರುಳಿನವರೆಗೆ ಒಂದೇ ಸಮನೆ ವೈಭವದ ಹಬ್ಬವನ್ನು ಆಚರಿಸಲಾಯಿತು. ನಾನಾ ರೀತಿಯ ಬಾಣಬಿರುಸುಗಳು, ಬಾಣ ಬಿರುಸುಗಳನ್ನು ಉಪಯೋಗಿಸುವ ಆಟಪಾಟಗಳು, ಮತ್ತಿತರ ಕ್ರೀಡೆಗಳನ್ನು ವಿವರವಾಗಿ ವರ್ಣಿಸಲು ಇಲ್ಲಿ ಸ್ಥಳವಿಲ್ಲ.

ಮೂರನೆಯ ದಿನ ರಾಜನು ಸಿಂಹಾಸನದಿಂದ ಏಳುವಾಗ ನನ್ನನ್ನು ಅವನ ಸಮ್ಮುಖಕ್ಕೆ ಕರೆದುಕೊಂಡು ಹೋದರು. ಬಹು ದೊಡ್ಡದಾದ ಆ ಸಿಂಹಾಸನವನ್ನು ಚಿನ್ನದಿಂದ ಮಾಡಿ ಅಪಾರ ಬೆಲೆಯ ವಜ್ರ ವೈಢೂರ್ಯಗಳಿಂದ ಅಲಂಕಾರ ಮಾಡಿದ್ದರು. ಸಿಂಹಾಸನದ ರಚನೆ ಸೂಕ್ಷ್ಮತೆಯಲ್ಲಿಯೂ ಬುದ್ದಿವಂತಿಕೆಯಲ್ಲಿಯೂ ಪರಿಪೂರ್ಣವಾಗಿತ್ತು. ವಜ್ರ ವೈಢೂರ್ಯಗಳನ್ನು ಹದಿಯುವ ಕಲೆ ಈ ದೇಶದಲ್ಲಿರುವಂತೆ ಬಹುಶಃ ಮತ್ತೆಲ್ಲಿಯೂ ಇಲ್ಲವೆಂದು ಕಾಣುತ್ತದೆ.

ಸಿಂಹಾಸನದ ಮುಂದೆ ಚಚ್ಚೌಕವಾದ ಒಂದು ಮೆತ್ತೆಯಿತ್ತು. ಅದರ ಅಂಚಿಗೆ ಮೂರು ಸುತ್ತು ಅತ್ಯಂತ ಸುಂದರವಾದ ಬಿಳಿ ಮುತ್ತುಗಳನ್ನು ಹೆಣೆದಿದ್ದರು. ಮೂರು ದಿನಗಳೂ ರಾಜನು ಸಿಂಹಾಸನದ ಹಿಂದೆ ಈ ಮೆತ್ತೆಯ ಮೇಲೆ ಮಂಡಿಸಿದ್ದನು. ಮಹಾನದಿಯ (ಮಹಾನವಮಿಯ) ಹಬ್ಬ ಮುಗಿದ ಮೇಲೆ ಸಾಯಂಕಾಲ ಪ್ರಾರ್ಥನೆಯ ವೇಳೆ ರಾಜನು ನನಗೆ ಹೇಳಿ ಕಳುಹಿಸಿದನು. ನಾನು ಅರಮನೆಗೆ ಹೋದಾಗ ನನ್ನನ್ನು ನಾಲ್ಕು ಮಂಟಪಗಳ ಬಳಿಗೆ ಕರೆದೊಯ್ದರು. ಈ ಮಂಟಪಗಳು ಒಂದೊಂದು ಹತ್ತು ಗಜ್ ಉದ್ದ ಮತ್ತು ಅಷ್ಟೇ ಅಗಲವಾಗಿದ್ದುವು. ಇವುಗಳ ಮೇಲ್ಛಾವಣಿಯನ್ನೂ, ಗೋಡೆಯನ್ನೂ ಚಿನ್ನದ ತಗಡುಗಳಿಂದ ಹೊದಿಸಿ ವಜ್ರಗಳಿಂದ ಅಲಂಕರಿಸಿದ್ದರು. ತಗಡು ಕತ್ತಿಯ ಅಲಗಿನಷ್ಟು ಮಂದವಾಗಿತ್ತು. ಚಿನ್ನದ ಮೊಳೆಗಳನ್ನೇ ಉಪಯೋಗಿಸಿ ತಗಡನ್ನು ಜೋಡಿಸಿದ್ದರು. ಮುಂಭಾಗದಲ್ಲಿದ್ದ ವೇದಿಕೆಯ ಮೇಲೆ ಸಿಂಹಾಸನವಿತ್ತು. ಸಿಂಹಾಸನ ಬಹಳ ದೊಡ್ಡದಾಗಿತ್ತು. ಇಂತಹ ಸಿಂಹಾಸನದ ಮೇಲೆ ಕುಳಿತ ರಾಜನ ವೈಭವ ಬಹು ಭವ್ಯವಾಗಿತ್ತು. ನನ್ನನ್ನು ಕುರಿತು ರಾಜನು ನನ್ನ ದೊರೆ ಖಾಖಾನ್, ಅವನ ಅಮೀರರು, ಅವನ ಸೈನ್ಯ ಹಾಗೂ ಕುದುರೆಗಳು ಮತ್ತು ಅವನ ದೇಶದ ದೊಡ್ಡ ನಗರಗಳಾದ ಸಮರ್‌ಕಂಡ್, ಹೇರಾತ್ ಮತ್ತು ಷಿರಾಜ್ – ಇವುಗಳ ಬಗ್ಗೆ ಅತ್ಯಂತ ಸ್ನೇಹದ ನುಡಿಗಳನ್ನು ಆಡಿ, ತನ್ನ ಕಡೆಯಿಂದ ಒಬ್ಬ ದಕ್ಷ ರಾಯಭಾರಿಯನ್ನೂ, ಹಲವಾರು ಸಾಲು ಆನೆಗಳನ್ನೂ, ಹದಿನೆಂಟು ಖ್ವಾಜಾಗಳನ್ನೂ ಮತ್ತು ಇತರ ಬಹುಮಾನಗಳನ್ನೂ ಕಳುಹಿಸುವುದಾಗಿ ಹೇಳಿದನು. ರಾಜ ನನಗೆ ವೀಳೆಯವನ್ನೂ ಫನಂ ಹಣದ ಚೀಲಗಳನ್ನೂ ಆತನಿಗೆ ಮೀಸಲಾದ ಹಣ್ಣುಗಳನ್ನೂ ಕೊಟ್ಟು ನನ್ನನ್ನು ಬೀಳ್ಕೊಟ್ಟನು.

ಈ ಭೇಟಿಯ ಕಾಲದಲ್ಲಿ ರಾಜನ ಆಪ್ತನೊಬ್ಬನು ದುಬಾಷಿಯ ಮೂಲಕ ಮೇಲೆ ಹೇಳಿದ ಮಂಟಪಗಳ ಬಗ್ಗೆ ‘ನಿಮ್ಮ ದೇಶದಲ್ಲಿ ಇಷ್ಟು ಭವ್ಯವಾದ ಮಂಟಪಗಳನ್ನು ನಿರ್ಮಿಸಬಲ್ಲರೆ?’ ಎಂದು ಪ್ರಶ್ನೆ ಹಾಕಿದನು. ಅದಕ್ಕುತ್ತರವಾಗಿ ನಾನು ‘ಇಷ್ಟೇ ಸುಂದರವಾಗಿ ಕೆಲಸ ಮಾಡಬಲ್ಲರು. ಆದರೆ ಇದು ಅಲ್ಲಿಯ ಪದ್ಧತಿಯಲ್ಲ’ ಎಂದೆ. ನಾನು ಹೇಳಿದ್ದು ರಾಜನಿಗೆ ಬಹಳ ಮೆಚ್ಚುಗೆಯಾಯಿತು.

ರಾಜನಿಂದ ಸನ್ಮಾನಿತನಾದ ನನ್ನ ವಿಚಾರ ತಿಳಿದು ಮತ್ತು ರಾಜನು ನನ್ನ ದೊರೆಯ ಆಸ್ಥಾನಕ್ಕೆ ರಾಯಭಾರಿಯನ್ನು ಕಳುಹಿಸುವನೆಂಬ ವಿಚಾರ ಕೇಳಿ ಓರ್ಮಸಿನಿಂದ ಬಂದು ಇಲ್ಲಿ ನೆಲಸಿರುವ ಜನರು ನನ್ನ ಬಗ್ಗೆ ಅಸೂಯೆಪಟ್ಟರು. ಶಾಂತಿ ಹಾಗೂ ಸ್ನೇಹ ಸೌಧದ ತಳಪಾಯವನ್ನೇ ಕೀಳಲು ಯತ್ನಿಸಿದರು. ನಾನು ಖಾಖಾನನ ಕಡೆಯಿಂದ ಬಂದವನೇ ಅಲ್ಲವೆಂಬ ವದಂತಿ ಹಬ್ಬಿಸಿ ತಮ್ಮ ದುರ್ನಡತೆಯನ್ನು ತೋರಿಸಿದರು. ಈ ವಿಚಾರ ದೊರೆಯ ಅಮೀರರ ಹಾಗೂ ವಜೀರರ ಕಿವಿಗೂ ಮುಟ್ಟಿತು.

ನನ್ನ ಬಗ್ಗೆ ತುಂಬಾ ಪ್ರೀತಿ ವಿಶ್ವಾಸಗಳನ್ನು ತೋರಿಸುತ್ತಿದ್ದ ದೈಯ್ಯಂಗನು ಈ ಸಮಯದಲ್ಲಿ ಕಲ್ಬೆರ್ಗಾ ಮೇಲೆ ದಂಡೆತ್ತಿ ಹೊರಟನು. ಬಿಜನಗರದಲ್ಲಾದ ಅಲ್ಲೋಲ ಕಲ್ಲೋಲವನ್ನು ತನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವ ಉದ್ದೇಶ ಕಲ್ಬೆರ್ಗಾದ ಸುಲ್ತಾನ್ ಅಲ್ಲಾವುದ್ದೀನ್ ಅಹಮ್ಮದ್ ಷಾ ಏಳು ಲಕ್ಷ ವರಹ ಹಣ ಕೊಡಬೇಕೆಂದೂ, ಹಾಗೆ ಕೊಡದಿದ್ದರೆ ರಾಜ್ಯದ ಮೇಲೆ ಬೀಳುವುದಾಗಿಯೂ ಒಬ್ಬ ರಾಯಭಾರಿಯ ಮೂಲಕ ಬಿಜನಗರದ ರಾಜನಿಗೆ ಹೇಳಿ ಕಳುಹಿಸಿದನು. ದೇವರಾಯನು ಈ ವಿಚಾರವನ್ನು ಕೇಳಿ ಅಧೀರನಾದರೂ ಧೈರ್ಯ ತಂದುಕೊಂಡನು. ತಾನು ಬದುಕಿರುವುದರಿಂದ ತನ್ನ ಆಪ್ತರು ಸತ್ತರೂ ಚಿಂತೆಯಿಲ್ಲವೆಂದೂ, ಸೂರ್ಯನು ಪ್ರಕಾಶಿಸಿದರೆ ಅಸಂಖ್ಯಾತ ಕಣಗಳನ್ನು ನೋಡಬಹುದೆಂದೂ ಮಾರುತ್ತರ ಕಳುಹಿಸಿದನು.

ಎರಡು ಕಡೆಯ ಸೇನೆಗಳೂ ಯುದ್ಧ ಸನ್ನದ್ಧವಾದುವು. ಬಿಜನಗರದ ಕಡೆಯಿಂದ ದೈಯ್ಯಂಗನು ಹೊರಡಬೇಕಾಯಿತು. ಅವನ ಸ್ಥಾನದಲ್ಲಿ ರಾಜನು ಕ್ರೈಸ್ತಮತಕ್ಕೆ ಸೇರಿದ ನಿಮೇ ಫಜಿರ್ ಎಂಬುವನನ್ನು ನೇಮಿಸಿದನು. ತಾನು ದೈಯ್ಯಂಗನಿಗೇ ಸಮನೆಂದು ಈತ ಭಾವಿಸಿದನು. ಕುಳ್ಳನೂ, ದುರ್ಬುದ್ದಿಯುಳ್ಳವನೂ, ಹೀನಕುಲಜನೂ, ಸಣ್ಣ ಬುದ್ದಿಯವನೂ ಆದ ಈತನಲ್ಲಿ ಅತ್ಯಂತ ಹೀನವಾದ ನಡತೆಗಳೆಲ್ಲ ಮನೆಮಾಡಿಕೊಂಡಿದ್ದುವು; ಒಳ್ಳೆಯ ಗುಣವೆಂಬುದು ಒಂದೂ ಇರಲಿಲ್ಲ. ತನಗೆ ಅಧಿಕಾರ ಸಿಕ್ಕಿತೋ ಇಲ್ಲವೋ ನನಗೆ ನಿತ್ಯವೂ ಬರುತ್ತಿದ್ದ ಭತ್ಯವನ್ನು ನಿಲ್ಲಿಸಿಬಿಟ್ಟನು. ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ಓರ್ಮಸ್ಸಿನ ಜನರು ನನ್ನ ಮೇಲೆ ಸಲ್ಲದ ಚಾಡಿ ಹೇಳಿದರು. ನಾನು ರಾಯಭಾರಿಯೇ ಅಲ್ಲ, ಖಾಖಾನ್ ದೊರೆಯಿಂದ ಒಂದು ಪತ್ರ ತಂದ ವರ್ತಕನಷ್ಟೇ ಎಂದು ಹೇಳಿಬಿಟ್ಟರು. ವಿಗ್ರಹಾರಾಧಕ ರಲ್ಲಿಯೂ ಸುಳ್ಳು ವಿಚಾರಗಳನ್ನು ತಿಳಿಸಿ ಅವರ ಮನಸ್ಸನ್ನೂ ಕೆಡಿಸಿದರು. ವಿಗ್ರಹಾರಾಧಕರೇ ಇರುವ ದೇಶದಲ್ಲಿ ನನ್ನ ಪರಿಸ್ಥಿತಿ ಬಹಳ ಕಷ್ಟಕ್ಕಿಟ್ಟುಕೊಂಡಿತು. ಹಲವಾರು ದಿವಸಗಳು ನಾನೇನು ಮಾಡಬೇಕೆಂದು ತೋಚದೆ ಸುಮ್ಮನಿದ್ದೆ. ಇಷ್ಟೆಲ್ಲ ಆಗಿದ್ದರೂ ರಾಜನು ಹಲವಾರು ಸಲ ನನ್ನನ್ನು ಬೀದಿಯಲ್ಲಿ ಕಂಡಾಗ ನನ್ನ ಕಡೆ ಪ್ರೀತಿಯಿಂದ ನೋಡಿ ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದನು. ನಿಜವಾಗಿಯೂ ಈ ರಾಜನು ಮಹಾಗುಣವಂತ ಹಾಗೂ ನಿಷ್ಪಕ್ಷಪಾತಿ.

ದೈಯ್ಯಂಗ್ ಕಲ್ಬೆರ್ಗಾ ದೇಶದ ಮೇಲಿನ ಯುದ್ಧವನ್ನು ಮುಗಿಸಿ ಅಲ್ಲಿ ಸಿಕ್ಕ ಹಲವಾರು ಅದೃಷ್ಟಹೀನ ಜನರನ್ನು ಕೈಸೆರೆ ಹಿಡಿದುಕೊಂಡು ಹಿಂದಿರುಗಿದನು. ತಾನಿಲ್ಲದ ವೇಳೆ ನಿಮೇ ಫಜಿರ್ ನನ್ನ ಬಗ್ಗೆ ತೋರಿಸಿದ ತಾತ್ಸಾರಕ್ಕಾಗಿ ಅವನನ್ನು ಬೈದು, ಬಂದ ದಿನವೇ ನನಗೆ ಏಳು ಸಾವಿರ ವರಾಹಗಳನ್ನು ಟಂಕಸಾಲೆಯಿಂದ  ಕೊಡುವಂತೆ ಆಜ್ಞೆ ಮಾಡಿದನು.

ಬಿಜನಗರದಲ್ಲಿ ನೆಲಸಿದ್ದ ಖ್ವಾಜಾ ಮಸೂದ್ ಮತ್ತು ಖ್ವಾಜಾ ಮೊಹಮ್ಮದ್ ಎಂಬ ಖುರಾಸಾನ್ ದೇಶದವರನ್ನು ರಾಜನು ತನ್ನ ರಾಯಭಾರಿಗಳಾಗಿ ನೇಮಿಸಿ ಅನೇಕ ಬಹುಮಾನದ ವಸ್ತುಗಳನ್ನು ಅವರ ವಶಕ್ಕೆ ಒಪ್ಪಿಸಿದನು. ಖಾಖಾನ್ ದೊರೆಗೆ ಪತ್ರವನ್ನು ಬರೆಸಿ ಅದನ್ನು ರಾಯಭಾರಿಗಳ ವಶಕ್ಕೆ ಕೊಟ್ಟನು. ದಿಹ್ಲಿಯಲ್ಲಿ ಆಳುತ್ತಿದ್ದ ಸುಲ್ತಾನ್ ಫಿರೋಜ್‌ಷಾನ ಉತ್ತರಾಧಿಕಾರಿಗಳಲ್ಲಿ ಒಬ್ಬನಾದ ಫರ‌್ಮಾ ಖಾಖಾನನೂ ಖ್ವಾಜಾ ಜೆಮಾಲುದ್ದೀನ್ ಎಂಬ ರಾಯಭಾರಿಯನ್ನು ನಮ್ಮ ರಾಜನ ಬಳಿಗೆ ಕಳುಹಿಸಲು ಏರ್ಪಾಡು ಮಾಡಿದನು.

ನಾನು ಕೊನೆಯ ಸಲ ಬಿಜನಗರದ ರಾಜನನ್ನು ಭೇಟಿ ಮಾಡಿದಾಗ ರಾಜ ನನ್ನನ್ನು ಕುರಿತು ‘ನೀವು ಮಿರ್ಜಾ ಷಹರುಖ್ ಚಕ್ರವರ್ತಿಯ ರಾಯಭಾರಿಯಲ್ಲವೆಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಹಾಗೆ ಹೇಳದಿದ್ದರೆ ನಾನು ನಿಮಗೆ ಇನ್ನೂ ಹೆಚ್ಚಿನ ಮರ್ಯಾದೆ ಮಾಡುತ್ತಿದ್ದೆ. ಮುಂದೆ ನಮ್ಮ ದೇಶಕ್ಕೆ ಮತ್ತೊಮ್ಮೆ ಬಂದಲ್ಲಿ ನಿಮಗೆ ನಮ್ಮ ಸ್ಥಾನಮಾನಕ್ಕೆ ತಕ್ಕಂಥ ಗೌರವ ಸಲ್ಲುವುದು’ ಎಂದು ಹೇಳಿದನು.

ನಮ್ಮ ರಾಜನಿಗೆ ಬರೆದ ಪತ್ರದಲ್ಲಿಯೂ ಓರ್ಮಸಿನ ಜನರ ದುರ್ಬೋಧನೆಗೆ ಒಳಗಾಗಿ ಈ ಮಾತುಗಳನ್ನು ಕಾಣಿಸಲಾಗಿತ್ತು : “ನಾವು ತಮಗೆ ತಮ್ಮ ಸ್ಥಾನಮಾನಕ್ಕೆ ತಕ್ಕಂತಹ ಬಹುಮಾನಗಳನ್ನು ಕೊಟ್ಟು ತಮ್ಮ ಸ್ನೇಹ ಸಂಪಾದಿಸಬೇಕೆಂದಿದ್ದೆವು. ಆದರೆ ಕೆಲವರು ನಮಗೆ ಹೇಳಿರುವ ಪ್ರಕಾರ ಅಬ್ದುರ್ ರಜಾಕರು ತಮ್ಮ ಆಸ್ಥಾನಕ್ಕೆ ಸೇರಿದವರಲ್ಲವೆಂದು ಗೊತ್ತಾಗುತ್ತದೆ.’

ತನ್ನ ಬಗ್ಗೆ ಬಿಜನಗರದ ರಾಜ ಹೇಳಿಕೊಳ್ಳುತ್ತಾ ‘ಈ ರಾಜನಲ್ಲಿ ದೊರೆಯ ವೈಭವೂ, ಪ್ರವಾದಿಗಳ ಪವಿತ್ರತೆಯೂ, ಯೋಗಿಗಳ ಸದ್ಗುಣಗಳೂ ಮಿಳಿತವಾಗಿವೆ’ ಎಂದು ತಿಳಿಸಿದನು.

ನಿಜವಾಗಿಯೂ ಬಿಜನಗರದ ರಾಜ ಮಹೋನ್ನತನೇ ಸರಿ. ಆದ್ದರಿಂದ ದೊಡ್ಡವರ ಮತ್ತು ಚಿಕ್ಕವರ ಮಾತು, ಪ್ರತಿಯೊಬ್ಬ ಸಾಹಿತಿಯ ಬರವಣಿಗೆ, ಪ್ರತಿಯೊಬ್ಬ ರಾಯಸದವನ ಲೇಖನಿ ಈ ರಾಜನನ್ನು ಕುರಿತು ನುಡಿಯಲೀ ಮಾತ; ಹಾಡಲೀ ಹಾಡ :

ನೀನೇ ನೂಹ್,
ಇಬ್ರಾಹಿಂನಂತೆ.
ನೀನೆ ಮಹಾನುಭಾವ,
ದೈವಕೃಪೆಯನಾಂತೆ.
ನೀನೆ ಖಿಜ್ರ್
ಮೂಸನಂತೆ,
ಸರಿಸಮಾನ ಸ್ಥಾನಪಡೆದ ಆತಗಿದಿರ್.
ನೀನೆ ಅಹಮದ್
ದೇವರ ಸಿಂಹಾಸನವ
ಸುತ್ತುವರಿದ ಬೃಹತ್.
ನೀನೆ ಜೀಸಸ್,
ದೈವತ್ವವನು ಬೆಳಗಿದ ಯಶಸ್.
ಇನ್ನು ಮುಂದೆ
ಮಾನವರು ಇರ್ಪ ಭೂಮಿಯಲೆಲ್ಲ
ನಿನ್ನ ಸಾಮ್ರಾಜ್ಯಕೆ
ಸೇರಿದಂತೆ ಭಾವಿಸುವರೆಲ್ಲ.
ನೀನೆ ವಿಷುವತ್ತಿನ ಸೂತ್ರದಾರ;
ನಿನ್ನ ಆಧಿಪತ್ಯ ಎಲ್ಲರಿಗೂ ಆಧಾರ.

ಇಲ್ಲಿಯ ಜನರು ತಿಳಿದುಕೊಂಡಿರುವಂತೆ ಬಿಜನಗರದ ರಾಜ್ಯ ವಿಷುವತ್ತಿನಲ್ಲಿದೆ. (Equinactial line = ದಿವಾರಾತ್ರಿಗಳು ಸಮನಾಗಿರುವ ಭೂಮಧ್ಯ ರೇಖೆ). ಆದ್ದರಿಂದ ‘ನೀನೆ ವಿಷುವತ್ತಿನ ಸೂತ್ರಧಾರ; ನಿನ್ನ ಆಧಿಪತ್ಯ ಎಲ್ಲರಿಗೂ ಆಧಾರ’ ಎಂಬ ಮಾತು ಸಂಪೂರ್ಣ ಸರಿಯಾಗಿದೆ.

ಬಡ ಲೇಖಕನಾದ ನಾನು ನನ್ನ ರಾಯಭಾರತ್ವದ ಕೆಲಸಗಳನ್ನು ಮುಗಿಸಿಕೊಂಡು ಮರುಪ್ರಯಾಣವನ್ನು ಓಮನ್ (ಅರಬ್ಬೀ) ಸಮುದ್ರದ ಕಡೆಗೆ ಆರಂಭಿಸಿದೆ. ಆಸೆ ತುಂಬಿದ ಮನಸ್ಸಿನಿಂದ ದೇವರ ದಯೆಕೋರಿ ನಾನು ಶಾಬಾನ್ ತಿಂಗಳ ಹನ್ನೆರಡನೇ ದಿನ (೧೪೪೩ನೇ ನವೆಂಬರ್ ೩) ಬಿಜನಗರದ ರಾಯಭಾರಿಗಳ ಸಮೇತ ರಾಜಧಾನಿಯನ್ನು ಬಿಟ್ಟು ನನ್ನ ಮರುಪ್ರಯಾಣವನ್ನು ಆರಂಭಿಸಿದೆ. ಹದಿನೆಂಟು ದಿನಗಳ ಕಾಲ ಪ್ರಯಾಣ ಮಾಡಿ ರಂಜಾನ್ ತಿಂಗಳ ಮೊದಲನೇ ದಿನ (೧೪೪೩ನೇ ನವೆಂಬರ್ ೨೩) ಓಮನ್ ಸಮುದ್ರದ ತೀರವನ್ನೂ, ಮಂಗನೊರನ್ನೂ (ಮಂಗಳೂರು) ತಲುಪಿದೆ. ಇಲ್ಲಿ ನನಗೆ ಷರೀಫ್ ಎವಿೂರ್ ಸೈದ್ ಅಲ್ಲಾವುದ್ದೀನ್ ಮೆಸ್ಸೆಡಿ ಎಂಬ ನೂರಿಪ್ಪತೈದು ವರ್ಷದ ಯೋಗಿಯ ಸಹವಾಸದ ಯೋಗ ಒದಗಿತು. ಮುಸಲ್ಮಾನರೂ ವಿಗ್ರಹಾರಾಧಕರೂ ಇವನನ್ನು ಭಕ್ತಿಯಿಂದ ಕಾಣುತ್ತಿದ್ದರು. ದೇಶದಲ್ಲೆಲ್ಲಾ ಇವನ ಮಾತಿಗೆ ಬೆಲೆ ಇತ್ತು.

ಬಿಜನಗರದ ರಾಜನ ರಾಯಭಾರಿಗಳಲ್ಲಿ ಒಬ್ಬ ರಾಯಭಾರಿ ಖ್ವಾಜಾ ಮಸೂದ್ ಮಂಗನೊರ್ ನಗರದಲ್ಲಿ ತೀರಿಕೊಂಡ.

ಮಂಗನೋರ್‌ನಲ್ಲಿ ರಂಜಾನ್ ಉಪವಾಸದ ನಂತರ ಮಾಡುವ ಹಬ್ಬವನ್ನು ಮುಗಿಸಿ ಕೊಂಡು ನಾನು ಮನೊರ್ (ಹೊನ್ನಾವರ) ಬಂದರಿಗೆ ಹೋಗಿ ಅಲ್ಲಿ ಒಂದು ಹಡಗನ್ನು ಗೊತ್ತು ಮಾಡಿದೆ. ಅದರಲ್ಲಿ ನಲವತ್ತು ದಿನಗಳ ಸಮುದ್ರಯಾನ ಕಾಲದಲ್ಲಿ ಇಪ್ಪತ್ತು ಜನಗಳಿಗೆ ಬೇಕಾಗುವಷ್ಟು ಗ್ರಾಸವನ್ನು ತುಂಬಿಸಿದೆ.

ಸಮುದ್ರಯಾನದಲ್ಲಿ ಏನೇನೋ ಕಷ್ಟಗಳು ಒದಗಬಹುದೆಂದು ಹೆದರಿಕೆ ಆಯಿತು. ಆದರೂ ದೇವರ ಮೇಲೆ ಭಾರ ಹಾಕಿ ಜುಲ್ಕದ ತಿಂಗಳಿನ ಐದನೇ ದಿನ (೧೪೪೪ನೇ ಜನವರಿ ೨೮) ಹಡಗು ಹತ್ತಿ ಸಮುದ್ರಯಾನವನ್ನು ಆರಂಭಿಸಿದೆ.

ಗಾಳಿಯ ಹೊಡೆತದಿಂದ ಹಡಗಿಗೆ ಆಗಿದ್ದ ಹಾನಿಯನ್ನು ಸರಿಮಾಡಿಕೊಂಡು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.

ನಾನು ಪ್ರಯಾಣವನ್ನು ಮುಂದುವರೆಸಿ ಓರ್ಮಸ್ ಬಂದರಿಗೆ (೧೪೪೪ನೇ ಏಪ್ರಿಲ್ ೨೨) ಹಿಂದಿರುಗಿದೆ. ಮನೋರ್‌ನಿಂದ ಓರ್ಮಸಿಗೆ ಬರಲು ಅರುವತ್ತೈದು ದಿನಗಳಾದುವು.

—-
ಆಕರ: ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ (ಸಂಪುಟ-೨), ೧೯೬೬, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪುಟ ೧೫೧-೧೭೧.[1]     ಈ ಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ (ಈಗ ಬಂಟವಾಳ ತಾಲೂಕಿನ) ಪೊಳಲಿ = ಪುಲಿನಪುರ ಎಂದು ಶ್ರೀ ಗೋವಿಂದ ಪೈ ಅವರು ತಮ್ಮ ತುಳುನಾಡು ಎಂಬ ಲೇಖನದಲ್ಲಿ ಹೇಳಿದ್ದಾರೆ. (ತೆಂಕನಾಡು ಎಂಬ ಪುಸ್ತಕ ನೋಡಿ.) ಆದರೆ ಈಗ ರಜಾಕ್ ವರ್ಣಿಸಿರುವಂಥ ದೇವಸ್ಥಾವಾಗಲೀ ವಿಗ್ರಹವಾಗಲೀ ಅಲ್ಲಿ ಇಲ್ಲ. ಈಗ ಇರುವುದು ಸಾಮಾನ್ಯವಾದೊಂದು ದೇವಸ್ಥಾನ ಮತ್ತು ರಾಜರಾಜೇಶ್ವರಿ ವಿಗ್ರಹ. ಹಿಂದಿನ ದೇವಸ್ಥಾನ ಮತ್ತು ವಿಗ್ರಹಗಳನ್ನು ಕೊಳ್ಳೆ ಹೊಡೆದ ಮೇಲೆ ಈಗಿನ ದೇವಸ್ಥಾನ ಮತ್ತು ವಿಗ್ರಹಗಳು ನಿರ್ಮಾಣವಾಗಿದ್ದರೂ ಆಗಿರಬಹುದು.

[2]     ಬೆಲೌರ್ : ಒಂದು ಪ್ರತಿಯಲ್ಲಿ ಬೆಗ್ಲೂರ್ ಎಂದಿದೆ. ಸರ್ ಎಲ್ಲಿಯಟ್ ಎಂಬ ಚರಿತ್ರಕಾರರು ಇದು ಬಿದ್ರೂರ್ (ಬಿದನೂರು) ಇರಬೇಕೆಂದು ಹೇಳಿದ್ದಾರೆ. ಸೀವೆಲ್ಲರೂ ಇದೇ ಅಭಿಪ್ರಾಯಪಡುತ್ತಾರೆ. ಬಿದಿರಿನ ಊರು ಬಿದರೂರು ಆಗಿದೆ ಎಂದು ಹೇಳುತ್ತಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿರುವ ಶಿವಪ್ಪನಾಯಕನ ನಗರ ಎಂಬ ಊರು ಹಿಂದಿನ ಬಿದರೂರ್.

[3]     ಅರೇಬಿಯಾ ರಾಜನೊಬ್ಬ ಸ್ವರ್ಗವನ್ನನುಕರಿಸಿ ಸೃಷ್ಟಿಸಿದ ತೋಟ.

[4]     ಇವರು ಸುಂಕ ವಸೂಲು ಮಾಡುವವರು.

[5]     ಹಂಪೆಯ ಅವಶೇಷಗಳಲ್ಲಿ ಸ್ತ್ರೀಯರ ಮಜ್ಜನದ ಮನೆಯಿಂದ ಸ್ವಲ್ಪ  ದೂರದಲ್ಲಿ ಈಗಲೂ ಇದರ ಅವಶೇಷಗಳನ್ನು ನೋಡಬಹುದು.

[6]     ಇಂಡಿಯಾ  ಆಫೀಸಿನಲ್ಲಿರುವ ಪ್ರತಿಯಲ್ಲಿ ‘ಅವನು ಬಹು ಚಿಕ್ಕವನಾಗಿದ್ದ’ ಎಂದು ಸೇರಿದೆ. ಹಾಗಿದ್ದರೆ ರಜಾಕನು ನೋಡಿದ್ದು ಎರಡನೇ ದೇವರಾಯನನ್ನಲ್ಲ. ಏಕೆಂದರೆ ಅಷ್ಟು ಹೊತ್ತಿಗೆ ಅಂದರೆ ಕ್ರಿ.ಶ. ೧೪೪೬ಕ್ಕೆ ದೇವರಾಯನು ಪಟ್ಟಕ್ಕೆ ಬಂದು ಇಪ್ಪತ್ತುನಾಲ್ಕು ವರ್ಷಗಳಾಗಿದ್ದುವು.

[7]     ನ್ಯೂನಿಜನು ಹೇಳುವ ಪ್ರಕಾರ ಸೋದರನ ಮಗ. ಆದರೆ ರಜಾಕನು ಹೇಳಿರುವುದೇ ಸರಿಯೆಂದು ವಿದ್ವಾಂಸರ ಅಭಿಪ್ರಾಯ.

[8]     ಇವನು ಎರಡನೇ ದೇವರಾಯ. ಈತ ಕ್ರಿ.ಶ. ೧೪೧೯ ರಿಂದ ೧೪೪೪ ರವರೆಗೆ ಆಳಿದನು.

[9]     ಡನಾಯಕ ಎಂಬುದು ಅಂಕಿತನಾಮವಲ್ಲ. ಡನಾಯಕ ಅಥವಾ ಡಣ್ಣಾಯಕ ಎಂದರೆ ಸೇನಾದಳಪತಿ ಅಥವಾ ಸೇನಾನಾಯಕ ಎಂದರ್ಥ. ಇಲ್ಲಿ ಹೇಳಿರುವುದು ಲಕ್ಕಣ್ಣ ಡನಾಯಕನನ್ನು ಕುರಿತು.