ದುಆರ್ತೆ ಬೊರ್ಬೊಸಾ ಲಿಸ್ಬನ್ನಿನಲ್ಲಿ ೧೫ನೇ ಶತಮಾನದ ಉತ್ತರಾರ್ಧ ದಲ್ಲಿ ಹುಟ್ಟಿದನು. ಇವನ ತಂದೆಯ ಹೆಸರು ದಿಯಾಗ್ ಬಾರ್ಬೊಸಾ ಎಂದು. ಇವನ ಸಹೋದರ ಅಂದರೆ ದುಆರ್ತೆ ಬಾರ್ಬೊಸನ ಚಿಕ್ಕಪ್ಪನೊಬ್ಬನಿದ್ದ. ಅವನ ಹೆಸರು ಗೋನ್ಸ್‌ಕಾಲೊಗಿಲ್ ಬಾರ್ಬೊಸ ಎಂದು. ಇವನು ಪೀಡ್ರೋ ಅಲ್ವಾರೀಸ್ ಕಾಬ್ರಾಲ್ ಎಂಬುವನ ನೌಕಾ ಪಡೆಯೊಡನೆ ಕ್ರಿ.ಶ. ೧೫೦೦ರಲ್ಲಿ ಇಂಡಿಯಾ ದೇಶಕ್ಕೆ ಬಂದ. ಕಾಬ್ರಾಲ್ ಹಿಂದಿರುಗುವಾಗ ಗಿಲ್ ಬಾರ್ಬೊಸಾನನ್ನು ತನ್ನ ಪ್ರತಿನಿಧಿಯಾಗಿ ಕೊಚ್ಚಿನ್ನಿನಲ್ಲಿ ಬಿಟ್ಟುಹೋದ. ದಿಯಾಗ್ ಬಾರ್ಬೊಸಾ ಕ್ರಿ.ಶ. ೧೫೦೧ರಲ್ಲಿ ಗಲ್ಲಿಸಿಯನ್ ಜೋವಾನೋವಾ ಎಂಬುವನ ನೌಕಾಪಡೆಯಲ್ಲಿ ಈ ದೇಶಕ್ಕೆ ಬಂದ. ದುಆರ್ತೆ ಬಾರ್ಬೊಸಾ ತನ್ನ ತಂದೆಯೊಡನೆಯೋ ಅಥವಾ ಚಿಕ್ಕಪ್ಪನೊಡನೆಯೋ ಈ ದೇಶಕ್ಕೆ ಬಂದಿರಬೇಕು. ಬಹುಶಃ ತನ್ನ ಚಿಕ್ಕಪ್ಪನು ಬಂದ ಅಲ್ವಾರೀಸ್ ಕಾಬ್ರಾಲನ ನೌಕಾಪಡೆಯೊಡನೆ ಬಂದಿರಬೇಕೆಂದು ಊಹೆ.

ಅಲ್ವಾರೀಸ್ ಕಾಬ್ರಾಲನೂ ಅವನ ಪಡೆಯವರೂ ಪೋರ್ಚುಗಲ್‌ನಿಂದ ಹೊರಟು ಆಫ್ರಿಕಾ ದೇಶದ ಪೂರ್ವ ತೀರದಲ್ಲಿರುವ ಸೊಫಾಲ, ಮೊಜಾಂಬಿಕ್, ಕಿಲ್ವಾ, ಮೊಂಬಾಸ, ಮೆಲಿಂದಿ ಎಂಬ ಸ್ಥಳ ಗಳನ್ನೂ, ಸೊಕೋತ್ರ ದ್ವೀಪವನ್ನೂ, ಕೆಂಪು ಸಮುದ್ರ ಮತ್ತು ಪರ್ಷಿಯಾ ಸಮುದ್ರಖಾರಿಯಲ್ಲಿರುವ ಓರ್ಮಸ್‌ಗಳನ್ನೂ ನೋಡಿಕೊಂಡು ಇಂಡಿಯಾ ದೇಶದ ಕ್ಯಾಂಬೆ ಖಾರಿಯಲ್ಲಿರುವ ಗೋಗಾ ಎಂಬ ಊರನ್ನು ಮುಟ್ಟಿ, ಅಲ್ಲಿಂದ ಇಂಡಿಯದ ಪಶ್ಚಿಮ ತೀರದಲ್ಲಿಯೇ ಪ್ರಯಾಣಮಾಡಿ ಕೊಚ್ಚಿನ್ನಿಗೆ ಬಂದರು.

ಚಿಕ್ಕಪ್ಪನೊಡನೆ ಕೊಚ್ಚಿನ್ನಿನಲ್ಲಿ ನಿಂತ ದುಆರ್ತೆ ಬಾರ್ಬೊಸಾ ಮಲಬಾರ್ ದೇಶದ ಭಾಷೆಯಾದ ಮಲೆಯಾಳಿಯನ್ನು ಬಹಳ ಚೆನ್ನಾಗಿ ಕಲಿತುಕೊಂಡ. ನಾನಾ ದೃಷ್ಟಿಗಳಿಂದ ಬಾರ್ಬೊಸನ ವರ್ಣನೆ ನಮಗೆ ಉಪಯೋಗವಾಗಿದೆ. ಅದರಲ್ಲಿಯೂ ಭೌಗೋಳಿಕ ಮತ್ತು ಮಾನವ ಕುಲಶಾಸ್ತ್ರ ದೃಷ್ಟಿಯಿಂದ ಇನ್ನೂ ಹೆಚ್ಚು ಉಪಯೋಗವಾಗಿದೆ. ಅವನ ಮುಖ್ಯ ಉದ್ದೇಶ ಚರಿತ್ರೆ ಬರೆಯುವುದಾಗಿರಲಿಲ್ಲ. ದೇಶಗಳ, ಜನಗಳ ಹಾಗೂ ಅವರ ನಡೆನುಡಿಗಳ ವರ್ಣನೆಯೇ ಅವನ ಉದ್ದೇಶವಾಗಿತ್ತು. ಅವನು ಮಾಡುವ ವಿಜಯನಗರ ಹಾಗೂ ಮಲಬಾರ್ ರಾಜ್ಯಗಳ ವರ್ಣನೆ ಮತ್ತು ಜನರ ಆಚಾರ ವಿಚಾರಗಳ ಮತ್ತು ವ್ಯಾಪಾರ ಸಾಪಾರಗಳ ಉಲ್ಲೇಖನ ಬಹಳ ಗಮನಾರ್ಹವಾದವುಗಳು. ಬಾರ್ಬೊಸಾ ಬರೆದದ್ದು ಪೋರ್ಚುಗೀಸ್ ಭಾಷೆಯಲ್ಲಿ. ಈ ಭಾಷೆಯಿಂದ ಇಟಾಲಿಯನ್, ಸ್ಪೆಯ್ನೆ ಮತ್ತು ಇಂಗ್ಲೀಷ್ ಭಾಷೆಗಳಿಗೆ ಭಾಷಾಂತರವಾಗಿದೆ.

ಗೋವಾದಿಂದ ಮುಂದೆ ಹೊರಟು ಮಲಬಾರ್ ಕಡೆಗೆ ಹೋದರೆ ಅಲಿಗಾ ಎಂಬ ನದಿ ಸಿಕ್ಕುತ್ತದೆ. ಈ ನದಿಯೇ ದಖನ್ ಮತ್ತು ನರಸಿಂಗ ರಾಜ್ಯಗಳ ಗಡಿ. ನದಿಯ ಮುಖದಲ್ಲಿ ಗುಡ್ಡದ ಮೆಲೆ ಸಿಂತಕೊಲ

[1] ಎಂಬ ದುರ್ಗವಿದೆ. ಇದನ್ನು ದಖನ್ ರಾಜನು ತನ್ನ ರಾಜ್ಯರಕ್ಷಣೆಗಾಗಿ ಕಟ್ಟಿಸಿದ್ದಾನೆ.

ಇಲ್ಲಿಗೆ ದಖನ್ ರಾಜ್ಯ ಕೊನೆಯಾಯಿತು. ಅಲಿಗಾ ನದಿಯನ್ನು ದಾಟಿದರೆ ನರಸಿಂಗ[2] ಮಹಾರಾಜ್ಯ ಆರಂಭವಾಗುತ್ತದೆ. ಈ ಮಹಾರಾಜ್ಯದಲ್ಲಿ ಐದು ದೊಡ್ಡ ದೊಡ್ಡ ರಾಜ್ಯಗಳಿವೆ. ಒಂದೊಂದು ರಾಜ್ಯಕ್ಕೂ ಬೇರೆ ಬೇರೆ ಭಾಷೆ. ಒಂದು ರಾಜ್ಯ ಸಮುದ್ರತೀರ ಹೋದಂತೆ ಹೋಗುತ್ತದೆ; ಇದಕ್ಕೆ ತುಳಿನಾಟ್ (ತುಳುನಾಡು) ಎಂದು ಹೆಸರು. ಇನ್ನೊಂದು ರಾಜ್ಯದ ಹೆಸರು ಲೆಗ್ನಿ[3] ಎಂದು; ಇದು ತಿಸಾ (ಒರಿಸ್ಸ) ರಾಜ್ಯಕ್ಕೆ ಹೊಂದಿಕೊಂಡಿದೆ. ಇನ್ನೊಂದು ರಾಜ್ಯದ ಹೆಸರು ಕನರಿ; ಇದರೊಳಗೇ ವಿಜನೇಗರ್ (ವಿಜಯನಗರ) ಇರುವುದು. ಮತ್ತೊಂದು ತಮುಳ್ (ತಮಿಳ್) ಎಂದು ಕರೆಯುವ ಚೋಮೆಂಡಲ್ (ಚೋಳಮಂಡಲ).

ನರಸಿಂಗ ರಾಜ್ಯ ಶ್ರೀಮಂತಿಕೆಯಿಂದ ಕೂಡಿದೆ. ಧನಧಾನ್ಯಗಳಿಂದ ಕೂಡಿದ ನಗರಗಳೂ ಪಟ್ಟಣಗಳೂ ಇವೆ. ರಾಜ್ಯವೆಲ್ಲ ಫಲವತ್ತಾಗಿದೆ. ಚೆನ್ನಾಗಿ ಸಾಗುವಳಿ ಮಾಡುತ್ತಾರೆ. ತುಳಿನಾಟ್ ರಾಜ್ಯದಲ್ಲಿ ಅನೇಕ ನದಿಗಳೂ ಬಂದರುಗಳೂ ಇವೆ. ಬೇಕಾದಷ್ಟು ವ್ಯಾಪಾರ ಸಾಪಾರವೂ, ಹಡಗಿನಲ್ಲಿ ಸಾಮಾನುಗಳ ರವಾನೆಯೂ ಇಲ್ಲಿ ನಡೆಯುತ್ತವೆ. ಈ ರಾಜ್ಯದಲ್ಲಿ ಅನೇಕ ಶ್ರೀಮಂತ ವರ್ತಕರು ನೆಲೆಸಿದ್ದಾರೆ.

ತುಳಿನಾಟ್ ರಾಜ್ಯಕ್ಕೂ ಬೇರೆ ರಾಜ್ಯಗಳಿಗೂ ಮಧ್ಯೆ ಮೆರ್ಜಿಯೋ ಎಂಬ ಬಹಳ ದೊಡ್ಡ ನದಿ ಸಿಕ್ಕುತ್ತದೆ.[4] ಈ ನದಿಯ ನೀರು ಉಪಯೋಗಿಸಿ ಒರಟಾದ ದಪ್ಪ ಅಕ್ಕಿಯನ್ನು ಹೇರಳವಾಗಿ ಬೆಳೆಸುತ್ತಾರೆ. ಇದನ್ನು ಕೊಂಡುಕೊಂಡು ಹೋಗಲು ಮಲಬಾರಿಗಳು ಇಲ್ಲಿಗೆ ಬರುತ್ತಾರೆ. ಸಂಬುಕ್ ಎಂಬ ದೋಣಿಗಳಲ್ಲಿ ಸಾಗಿಸಿಕೊಂಡು ಹೋಗುತ್ತಾರೆ. ಬರುವಾಗ ಇಲ್ಲಿಗೆ ಬೇಕಾದ ತೆಂಗಿನ ಕಾಯಿ, ಕೊಬರಿ ಎಣ್ಣೆ, ಜಾಗರಾ (ಬೆಲ್ಲ) ಇವುಗಳನ್ನು ತರುತ್ತಾರೆ.

ಅಲಿಗಾ ನದಿಯನ್ನು ದಾಟಿ ಮುಂದೆ ಹೋದರೆ ಹೊನೋರ್ (ಹೊನ್ನಾವರ)[5] ಎಂಬ ಸುಂದರ ಪಟ್ಟಣ ಸಿಕ್ಕುತ್ತದೆ. ಇದು ನದಿಯ ಮೇಲಿದೆ. ಹೊನೋರನ್ನು ಮಲಬಾರಿಗಳು ಪೊವರನ್ ಎಂದು ಕರೆಯುತ್ತಾರೆ. ಇವರು ಇಲ್ಲಿಗೆ ಅಕ್ಕಿ ಕೊಳ್ಳಲು ಬರುತ್ತಾರೆ. ಈ ಸಾಮಾನ್ಯ ಅಕ್ಕಿ ಅವರ ವಿಚಿತ್ರ ಆಹಾರ. ಬರುವಾಗ ತೆಂಗಿನಕಾಯಿ, ಎಣ್ಣೆ, ಜಾಗ್ರಾ ಮತ್ತು ತಾಳೆ ಮರದ ಹೆಂಡ ತೆಗೆದುಕೊಂಡು ಬರುತ್ತಾರೆ.

ಇಲ್ಲಿ ಈ ರಾಜ್ಯದ ಅಧಿಪತಿಯ ಆಶ್ರಯದಲ್ಲಿ ಇಬ್ಬರು ಕಡಲುಗಳ್ಳ ನಾಯಕರಿದ್ದರು. ಒಬ್ಬನ ಹೆಸರು ತಿಮೋಜ (ತಿಮ್ಮೋಜ); ಮತ್ತೊಬ್ಬನ ಹೆಸರು ರಾವ್‌ಜಿ (ಮಾಧವರಾವ್). ಪ್ರತಿಯೊಬ್ಬರ ಬಳಿಯಲ್ಲಿ ಸುಸಜ್ಜಿತವಾದ ಐದಾರು ಹಡಗುಗಳಿರುತ್ತಿದ್ದುವು. ಇವರು ಸಮುದ್ರದ ಮೇಲೆ ಹೋಗಿ ಮಲಬಾರೀ ಹಡಗುಗಳನ್ನು ಬಿಟ್ಟು ಉಳಿದೆಲ್ಲ ಹಡಗುಗಳನ್ನು ಕೊಳ್ಳೆಹೊಡೆದು ಬರುತ್ತಿದ್ದರು. ಕೊಳ್ಳೆ ಹೊಡೆದ ಸಾಮಾನುಗಳನ್ನು ನಾಡಿನ ಒಡೆಯನೊಡನೆ ಹಂಚಿಕೊಳ್ಳುತ್ತಿದ್ದರು. ಇವರು ದಖನ್ ರಾಜ್ಯದವರಾದರೂ ಮಹಮ್ಮದೀಯರ ಅಧೀನತೆ ಯಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದರು. ಆದರೆ ನಮ್ಮ ದೊರೆಯ ಹಡಗುಗಳು ಇಂಡಿಯಾ ಸಮುದ್ರದ ಮೇಲೆ ಓಡಾಡಲು ಆರಂಭಿಸಿದಂದಿನಿಂದ ಇವರ ಆಟವೆಲ್ಲ ನಿಂತಿದೆ.

ಸಮುದ್ರತೀರದಲ್ಲಿಯೇ ಮುಂದೆ ಹೋದರೆ ಇನ್ನೊಂದು ಸಣ್ಣ ನದಿಯ ಮೇಲೆ ಭಟಕಲಾ (ಭಟ್‌ಕಲ್) ಎಂಬ ದೊಡ್ಡ ಪಟ್ಟಣ ಸಿಕ್ಕುತ್ತದೆ. ಇಲ್ಲಿ ಭಾರೀ ವ್ಯಾಪಾರ ನಡೆಯುತ್ತದೆ. ಅನೇಕ ಮೂರರೂ ಜೆಂಟೈಲರೂ ಇಲ್ಲಿ ನೆಲೆಸಿದ್ದಾರೆ. ಇವರು ವ್ಯಾಪಾರದಲ್ಲಿ ಎತ್ತಿದ ಕೈ. ಓರ್ಮಸಿನಿಂದ ಬಂದ ಹಡಗುಗಳು ಮುಖ್ಯವಾಗಿ ಇಲ್ಲಿ ಬೆಳೆಯುವ ಬಿಳೀ ಅಕ್ಕಿ, ಬೂರಾ ಸಕ್ಕರೆ, ಕಬ್ಬಿಣ – ಇವನ್ನು ಹೇರಿಕೊಂಡು ಹೋಗುತ್ತವೆ. ಸಕ್ಕರೆಯನ್ನು ಅಚ್ಚುಮಾಡಲು ಇವರಿಗೆ ಬರುವುದಿಲ್ಲ. ಬೂರಾ ಸಕ್ಕರೆ ಒಂದು ಅರ್ರೋಬಕ್ಕೆ (ಒಂದು ಹಂಡ್ರೆಡ್‌ವೇಟಿನ ಕಾಲು ಭಾಗ) ಇನ್ನೂರು ನಲವತ್ತು ಮರವೆಡಿಗಳು. ಹಡಗುಗಳು ಇಲ್ಲಿಗೆ ಬರುವಾಗ ಕುದುರೆಗಳನ್ನೂ ಮುತ್ತುಗಳನ್ನೂ ತರುತ್ತವೆ. ಇವನ್ನು ನರಸಿಂಗ ರಾಜ್ಯಕ್ಕೆ ಮಾರುತ್ತಾರೆ. ಸಣ್ಣ ಮುತ್ತಗಳೆಂದರೆ ನರಸಿಂಗ (ವಿಜಯನಗರ) ರಾಜ್ಯದ ಮೂರರಿಗೆ ಬಹು ಆನಂದ. ಅಲ್ಲದೆ ಇಲ್ಲಿಗೆ ಹೆಚ್ಚಾಗಿ ತಾಮ್ರವೂ ಬರುತ್ತದೆ. ಇದನ್ನು ನಾಣ್ಯಕ್ಕೂ, ಪಾತ್ರೆಗಳನ್ನು ಮಾಡುವುದಕ್ಕೂ ಒಳನಾಡಿಗೆ ಸಾಗಿಸುತ್ತಾರೆ. ಆದರೆ ನಮ್ಮ ಅಪ್ಪಣೆಯ ಪ್ರಕಾರ ಮೂರರ ಅಥವಾ ಮೆಕ್ಕಾದ ಹಡಗುಗಳು ಇಲ್ಲಿಗೆ ಬರುವಂತಿಲ್ಲ. ಆದರೂ ಕೆಲವು ಕಳ್ಳತನದಿಂದ ಬರುತ್ತವೆ.

ಭಟಕಲಾ ಬಹಳ ಶ್ರೀಮಂತಿಕೆಯ ಊರು. ರಾಜನಿಗೂ ಇಲ್ಲಿರುವ ಜೆಂಟೈಲ್ ರಾಜ್ಯಪಾಲನಾದ ದಾಮಚೇಟಿಗೂ[6] ಬಹಳ ಆದಾಯ ಬರುತ್ತದೆ. ದಾಮಚೇಟಿಯ ಬಳಿ ಅಪಾರ ಹಣವೂ ಒಡವೆಗಳೂ ಇವೆ. ನರಸಿಂಗ ರಾಜ್ಯದ ರಾಜನು ಈ ಊರು ಮತ್ತು ಇತರ ಊರುಗಳನ್ನು ತನ್ನ ಸೋದರನ ಮಗನೊಬ್ಬನಿಗೆ ಕೊಟ್ಟಿದ್ದಾನೆ. ಆತ ತಾನೇ ರಾಜನೆಂದು ಹೇಳಿಕೊಳ್ಳುತ್ತಾನೆ. ಆದರೆ ಚಿಕ್ಕಪ್ಪನಿಗೆ ಅಧೀನನಾಗಿ ನಡೆದುಕೊಳ್ಳುತ್ತಾನೆ.

ಇಲ್ಲಿ ನಾನಾ ತರಹ ಅಳಲೆಕಾಯಿ ಮುಂತಾದ ಮೂಲಿಕೆಗಳಿವೆ. ಇವುಗಳಿಂದ ಒಳ್ಳೊಳ್ಳೆಯ ಲೇಹ್ಯ ಮುಂತಾದ ಔಷಧಿಗಳನ್ನು ತಯಾರಿಸುತ್ತಾರೆ. ಓರ್ಮಸ್ಸಿನ ಹಡಗುಗಳು ಅರಬ್ಬರಿಗೂ ಪರ್ಷಿಯನರಿಗೂ ಈ ಔಷಧಿಗಳನ್ನು ತೆಗೆದುಕೊಂಡು ಹೋಗುತ್ತವೆ.

ಹಿಂದೆ ನರಸಿಂಗನ ಇಡೀ ರಾಜ್ಯಕ್ಕೆ ಬೇಕಾದ ಅನೇಕ ಕುದುರೆಗಳೂ, ಮುತ್ತುಗಳೂ ಪ್ರತಿ ವರ್ಷ ಈ ಬಂದರಿಗೆ ಬರುತ್ತಿದ್ದುವು. ಆದರೆ ಪೋರ್ಚುಗೀಸರ ಕಾರಣದಿಂದಾಗಿ ಇವೆಲ್ಲ ಗೋವಾ ನಗರಕ್ಕೆ ಹೋಗುತ್ತವೆ. ಏಡನ್ನಿಗೆ ಇಲ್ಲಿಂದ ಹಡಗುಗಳು ಹೋಗಕೂಡದೆಂದು  ಪೋರ್ಚುಗೀಸರು ನಿರ್ಬಂಧಿಸಿದ್ದರೂ ಕಳ್ಳತನದಿಂದ ಹಡಗುಗಳನ್ನು ತುಂಬಿ ಕಳುಹಿಸುತ್ತಾರೆ. ಅನೇಕ ಮಲಬಾರೀ ಹಡಗುಗಳು ಮತ್ತು ಸಂಬುಕಗಳು ಇಲ್ಲಿಗೆ ತೆಂಗಿನಕಾಯಿ, ತಾಳೆಬೆಲ್ಲ, ತೆಂಗಿನ ಎಣ್ಣೆ, ತಾಳೆ ಹೆಂಡ ಇವುಗಳನ್ನು ತಂದು, ಇವಕ್ಕೆ ಬದಲಾಗಿ ಅಕ್ಕಿ, ಸಕ್ಕರೆ ಮತ್ತು ಕಬ್ಬಿಣಗಳನ್ನು ತೆಗೆದುಕೊಂಡು ಹೋಗುತ್ತವೆ. ಪೋರ್ಚುಗೀಸರ ಕಣ್ಣಿಗೆ ಮಣ್ಣೆರಚಿ ಸಂಬಾರ ಮತ್ತು ಗಂಧಿಗೆ ವಸ್ತುಗಳನ್ನು ಇಲ್ಲಿ ತರುತ್ತವೆ.

ನರಸಿಂಗ ರಾಜ್ಯದಲ್ಲಿ ದ್ವಂದ್ವಯುದ್ಧ ಮಾಡುವುದು ಒಂದು ದೊಡ್ಡ ವಿಧಾನ.[7]  ಮಾತ್ತೆತ್ತಿದರೆ ಒಬ್ಬರಿಗೊಬ್ಬರು ಸವಾಲು ಹಾಕುತ್ತಾರೆ. ಆಗ ರಾಜ ಅವರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ದ್ವಂದ್ವಯುದ್ಧಕ್ಕೆ ಬಿಡುತ್ತಾನೆ. ಅವರಿಗೆ ಸಹಾಯಕರಾಗಿ ದ್ವಿತೀಯರು ಇರುತ್ತಾರೆ. ಆಯುಧಗಳು ಅಳತೆಗೆ ತಕ್ಕಂತೆ ಇರುತ್ತವೆ. ನಿರ್ಧರವಾದ ದಿನ ಹೋರಾಳುಗಳು ಬರೇ ಚಡ್ಡಿ ಧರಿಸಿ ನಗು ಮುಖದಿಂದ ಅಖಾಡಕ್ಕೆ ಇಳಿಯುತ್ತಾರೆ. ರಾಜನೂ ಅವನ ಪರಿವಾರವೂ ಈ ಯುದ್ಧವನ್ನು ನೋಡಲು ನೆರೆಯುತ್ತಾರೆ.

ಹೋರಾಳುಗಳು ತಮ್ಮ ಇಷ್ಟದೇವರನ್ನು ಪ್ರಾರ್ಥಿಸಿದ ಮೇಲೆ, ಕತ್ತಿಗಳನ್ನು ತಾಗಿಸುತ್ತಾರೆ. ಅವರು ಬರಿ ಮೈಯ್ಯಲ್ಲಿರುವುದರಿಂದ ಕೆಲವು ಏಟುಗಳಲ್ಲಿಯೇ ಕದನ ಮುಕ್ತಾಯವಾಗುತ್ತದೆ. ದ್ವಿತೀಯರನ್ನು ಬಿಟ್ಟರೆ ಯಾರೂ ತುಟಿ ಪಿಟಕ್ಕೆನ್ನುವುದಿಲ್ಲ. ದ್ವಿತೀಯರು ಮಾತ್ರ ತಮ್ಮ ವಸ್ತಾದಿಗಳನ್ನು ಹುರಿದುಂಬಿಸುತ್ತಾರೆ.

ಭಟಕಲ ಪಟ್ಟಣ ಪೋರ್ಚುಗಲ್ ರಾಜನಿಗೆ ವರ್ಷವರ್ಷ ಪೊಗದಿ ಸಲ್ಲಿಸುತ್ತದೆ. ಪ್ರತಿವರ್ಷ ಇಲ್ಲಿ ತಾಮ್ರ ಮಾರಾಟವಾಗುತ್ತದೆ. ತಾಮ್ರವನ್ನು ಹಣ ಮಾಡಲು, ಕಡಾಯಿ ಮುಂತಾದ ಪಾತ್ರೆಗಳನ್ನು ಮಾಡಲು ಒಳನಾಡಿಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ ಇಲ್ಲಿ ಪಾದರಸ, ಸಿಂಧೂರ ಹವಳ, ಸ್ಫಟಿಕ ಮತ್ತು ದಂತ – ಇವು ಮಾರಾಟವಾಗುತ್ತವೆ.

ಭಟಕಲ ಪಟ್ಟಣ ಮಟ್ಟಸವಾದ ಭೂಮಿಯ ಮೇಲೆ ಕಟ್ಟಲ್ಪಟ್ಟಿದೆ. ಜನಭರಿತವಾದ ಊರು. ಕೋಟೆ ಇಲ್ಲ. ಊರಿನ ಸುತ್ತ ತೋಟತುಡಿಕೆಗಳಿವೆ. ತಿಳಿಯಾದ ನೀರು ಸಮೃದ್ದಿಯಾಗಿ ಸಿಕ್ಕುತ್ತದೆ. ಇಲ್ಲಿ ಪರ್ದನ್ (ಪರ‌್ದಾವ್ ಎಂಬ ಪೋರ್ಚುಗೀಸ್ ನಾಣ್ಯ) ಎಂಬ ಚಿನ್ನದ ನಾಣ್ಯ ಚಲಾವಣೆಯಲ್ಲಿದೆ. ಇದರ ಬೆಲೆ ಮುನ್ನೂರಿಪ್ಪತ್ತು ಮರವೆಡಿಗಳು. ದಾಮ ಎಂಬ ಬೆಳ್ಳಿಯ ನಾಣ್ಯವೂ ಉಂಟು. ಇದರ ಬೆಲೆ ಇಪ್ಪತ್ತು ಮರವೆಡಿಗಳು. ಇಲ್ಲಿ ತೂಕಗಳನ್ನು ಬಾಹರ್ (ಭಾರ?) ಎಂದು ಕರೆಯುತ್ತಾರೆ. ಒಂದು ಬಾಹರಿಗೆ ಪೋರ್ಚುಗಲ್ಲಿನ ನಾಲ್ಕು ಕ್ವಿಂಟಾಲುಗಳು.

ಮುಂದೆ ಹತ್ತು ಹರಿದಾರಿ ದೂರದಲ್ಲಿ ಒಂದು ಸಣ್ಣ ನದಿಯ ಮೇಲೆ ಮಯಂದೂರ್[8] ಎಂಬ ಪಟ್ಟಣ ಸಿಕ್ಕುತ್ತದೆ. ಇದು ಭಟಕಳಾ ಆಧಿಪತ್ಯಕ್ಕೆ ಸೇರಿದೆ. ಇಲ್ಲಿ ಒಳ್ಳೆಯ ಬತ್ತ ಬೆಳೆಸುತ್ತಾರೆ. ಬೆಳೆದ ಬತ್ತ ಭಟಕಳಕ್ಕೆ ಹೋಗುತ್ತದೆ. ಈ ಬತ್ತವನ್ನು ಮುಖ್ಯವಾಗಿ ನೀರಿರುವ ಕಣಿವೆಗಳಲ್ಲಿ ಬೆಳೆಯುತ್ತಾರೆ. ಎತ್ತು ಅಥವಾ ಎಮ್ಮೆಗಳನ್ನು ನಮ್ಮಲ್ಲಿರುವ ನೇಗಿಲಿನಂತಹ ನೇಗಿಲಿಗೆ ಕಟ್ಟಿ ನೆಲವನ್ನು ಉಳುತ್ತಾರೆ. ನೇಗಿಲಿನ ಕುಳದಲ್ಲಿ ಇರುವ ಟೊಳ್ಳಿನ ಮೂಲಕ ಬೀಜದ ಬತ್ತವನ್ನು ಬಿಡುತ್ತಾರೆ. ಉಳುತ್ತಾ ಹೋದಂತೆ ಬೀಜವು ಭೂಮಿಗೆ ಸೇರುತ್ತದೆ. ನೀರು ತುಂಬಿದ ಗದ್ದೆಗಳಲ್ಲಿ ಬೇರೆ ರೀತಿಯಲ್ಲಿ ಬೀಜ ಬಿತ್ತುವುದು ಸಾಧ್ಯವಿಲ್ಲದ್ದರಿಂದ ಈ ರೀತಿ ಬಿತ್ತನೆ ಮಾಡುತ್ತಾರೆ. ಖುಷ್ಕಿ ಜಮೀನುಗಳಲ್ಲಿ ಕೈ ಬಿತ್ತನೆ ಮಾಡುತ್ತಾರೆ. ನೀರಿರುವ ಜಮೀನುಗಳಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ.

ನಾಲ್ಕು ತರಹ ಬತ್ತ ಬೆಳೆಸುತ್ತಾರೆ. ಅತ್ಯುತ್ತಮವಾದ ಬತ್ತಕ್ಕೆ ಗಿರಜತ್ ಎನ್ನುತ್ತಾರೆ. ಎರಡನೆಯ ದರ್ಜೆಯ ಬತ್ತಕ್ಕೆ ಜಾನಿಬಜಲ್ ಎನ್ನುತ್ತಾರೆ. ಮೂರನೆಯದನ್ನು ಕಮಗರ್ ಎಂತಲೂ, ನಾಲ್ಕನೆಯದನ್ನು ಪಚರಿ ಎಂತಲೂ ಕರೆಯುತ್ತಾರೆ. ಒಂದೊಂದರ ಬೆಲೆ ಒಂದೊಂದು ತರ; ರುಚಿಯಲ್ಲಿಯೂ ಇವು ಬೇರೆ ಬೇರೆ.[9]

ಮಯಂದೂರಿನಿಂದ ಮುಂದೆ ಹೋದರೆ ಎರಡು ಸಣ್ಣ ನದಿಗಳು ಸಿಕ್ಕುತ್ತವೆ. ಈ ನದಿಗಳ ಬಳಿ ಬಾಕನೂರ್ (ಬಾರ‌್ಕೂರು)[10] ಮತ್ತು ಬಸಲೋರ್ – (ಬಸರೂರು)[11] ಎಂಬ ಪಟ್ಟಣಗಳು ಸಿಕ್ಕುತ್ತವೆ. ಇವೆರಡೂ ನರಸಿಂಗನ ರಾಜ್ಯಕ್ಕೆ ಸೇರಿದವುಗಳು. ಇಲ್ಲಿಯೂ ಒಳ್ಳೆಯ ಬತ್ತವನ್ನು ಹೇರಳವಾಗಿ ಬೆಳೆಯುತ್ತಾರೆ.

ಬತ್ತವನ್ನು ಕುಟ್ಟಿ ಕೇರಿ ಬತ್ತದ ಹುಲ್ಲಿನಲ್ಲಿ ಫನೆಗಾ ಎಂಬ ಮೂಡೆ[12] ಕಟ್ಟಿ ಮಲಬಾರಿಗೆ ಕಳುಹಿಸುತ್ತಾರೆ. ಒಂದೊಂದು ಫನೆಗಾದ ಬೆಲೆ ಬತ್ತದ ಗುಣದ ಮೇಲೆ ೧೫೦ ರಿಂದ ೨೦೦ ಮರವೆಡಿಗಳಾಗುತ್ತದೆ.

ಓರ್ಮಸ್, ಏಡನ್, ಕುಹೆರ್ ಮತ್ತು ಇನ್ನೂ ಅನೇಕ ಸ್ಥಳಗಳಿಂದ ಕನೋರ್ (ಕನ್ನಾನೂರು) ಮತ್ತು ಕ್ಯಾಲಿಕಟ್ಟಿಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಹಡಗುಗಳು ಇಲ್ಲಿಗೆ ಬರುತ್ತವೆ. ಕನೋರ್ ಮತ್ತು ಕ್ಯಾಲಿಕಟ್‌ನಿಂದ ಮಲಬಾರಿಗಳು ತಾಮ್ರ, ತೆಂಗಿನಕಾಯಿ, ಜಾಗ್ರಾ, ಕೊಬರಿ ಎಣ್ಣೆಗಳನ್ನು ತಂದು ಇಲ್ಲಿಂದ ಅಕ್ಕಿ ತೆಗೆದುಕೊಂಡು ಹೋಗುತ್ತಾರೆ. ಅಕ್ಕಿ ಸಿಕ್ಕರೆ ಸಾಕು, ಮಲಬಾರಿಗಳು ಜೀವನ ಸಾಗಿಸಿಬಿಡುತ್ತಾರೆ. ಏಕೆಂದರೆ ಮಲಬಾರ್ ಸಣ್ಣ ದೇಶವಾದರೂ ಜನಸಂಖ್ಯೆ ಅಪಾರ. ಇಡೀ ಮಲಬಾರ್ ಎಷ್ಟು ಜನಭರಿತವಾಗಿದೆ ಯೆಂದರೆ ಮೌಂಟ್ ಡೆಲಿಯಿಂದ ಕ್ಯುಲಾಂ ವರೆಗೆ ಇರುವ ಪ್ರದೇಶ ಒಂದೇ ನಗರವೆಂಬಂತೆ ಕಾಣಿಸುತ್ತದೆ.

ಈ ಊರುಗಳನ್ನು ಬಿಟ್ಟು ದಕ್ಷಿಣಕ್ಕೆ ಹತ್ತು ಹರಿದಾರಿ ಹೋದರೆ ಇನ್ನೊಂದು ದೊಡ್ಡ ನದಿ ಸಿಕ್ಕುತ್ತದೆ. ಈ ನದಿ ಸಮುದ್ರತೀರವನ್ನೇ ಹಿಡಿದು ಹರಿಯುತ್ತದೆ. ಈ ನದಿಯ ಅಕ್ಕಪಕ್ಕ ಬಹು ಸುಂದರವಾಗಿದೆ.[13] ತೆಂಗು ಮುಂತಾದ ಮರಗಿಡಗಳು ತುಂಬಿವೆ. ಅಲ್ಲಲ್ಲಿ ಸುಂದರವಾದ ಮನೆಗಳೂ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳು ಬಹಳ ದೊಡ್ಡವು; ಅವಕ್ಕೆ ತುಂಬಾ ಆದಾಯವಿದೆ. ಈ ನದಿಯ ಬಳಿ ಬಹಳ ದೊಡ್ಡ ಪಟ್ಟಣ ವೊಂದಿದೆ. ಇದು ಜೆಂಟೈಲರೂ, ಮೂರರೂ ಇರುವ ಜನಭರಿತ ಊರು. ಈ ಪಟ್ಟಣದ ಹೆಸರು ಮಂಗಳೂರ್. ಇದು ನರಸಿಂಗನ ರಾಜ್ಯಕ್ಕೆ ಸೇರಿದೆ. ಇಲ್ಲಿಗೆ ಅನೇಕ ಹಡಗುಗಳು ಬಂದು ಇಲ್ಲಿ ಸಿಕ್ಕುವ ಕಂದುಬಣ್ಣದ ಅಕ್ಕಿಯನ್ನು ಮಲಬಾರಿಗೆ ಯಾವಾಗಲೂ ತುಂಬಿಕೊಂಡು ಹೋಗುತ್ತವೆ. ಈ ಅಕ್ಕಿ (ಕುಚಲು ಅಕ್ಕಿ) ಬಿಳೀ ಅಕ್ಕಿಗಿಂತ ಹೆಚ್ಚು ಆರೋಗ್ಯಕರ ಮತ್ತು ರುಚಿಕರ. ಮಲಬಾರಿನ ಸಾಮಾನ್ಯ ಜನರು ಉಪಯೋಗಿಸುವುದು ಈ ಅಕ್ಕಿಯನ್ನೇ. ಇದು ಬಹಳ ಅಗ್ಗವಾಗಿಯೂ ಇರುತ್ತದೆ. ಇಲ್ಲಿಂದ ಏಡನ್ನಿಗೆ ಮೂರರ ಹಡಗುಗಳಲ್ಲಿ ಮೆಣಸನ್ನೂ ರವಾನಿಸುತ್ತಾರೆ. ಇಲ್ಲಿಂದ ಮುಂದೆ ಮೆಣಸು ಬೆಳೆಯುತ್ತದೆ. ಮಂಗಳೂರಿನಲ್ಲಿ ಬೆಳೆಯುವ ಮೆಣಸಿಗಿಂತ ಮಲಬಾರಿನಲ್ಲಿ ಬೆಳೆಯುವ ಮೆಣಸೇ ಹೆಚ್ಚು. ಮಂಗಳೂರಿನಲ್ಲಿ ಅನೇಕ ಮಸೀದಿಗಳೂ ಇವೆ.

ಮುಂದೆ ಹೋದರೆ ಕುನ್ಬಳ (ಕುಂಬಳ) ಎಂಬ ಪಟ್ಟಣ ಸಿಕ್ಕುತ್ತದೆ. ಇಲ್ಲಿ ಬೆಳೆಯುವ ಕರೀ ಅಕ್ಕಿ ಮಲಬಾರಿಗೂ ಮಾಲ್ಡೀವ್ ದ್ವೀಪಗಳಿಗೂ ಹೋಗುತ್ತದೆ. ಮಾಲ್ಡೀವ್ ದ್ವೀಪದಿಂದ ತೆಂಗಿನನಾರಿನ ಹಗ್ಗ ಬರುತ್ತದೆ. ಕುನ್ಬಳ ನರಸಿಂಗನ ರಾಜ್ಯಕ್ಕೆ ಸೇರಿದೆ. ಆ ರಾಜ್ಯದ ಪರವಾಗಿ ಇಲ್ಲಿ ಒಬ್ಬ ದೊರೆ ಇದ್ದಾನೆ. ಈ ಊರು ಕನೋರ್ ರಾಜ್ಯದ ಗಡಿ, ಏಕೆಂದರೆ ಇಲ್ಲಿಗೆ ನರಸಿಂಗನ ರಾಜ್ಯದ ತುಲಿನಾಟ್ (ತುಳುನಾಡು) ಮುಗಿಯುತ್ತದೆ.

ಸಮುದ್ರತೀರವನ್ನು ಬಿಟ್ಟು ನರಸಿಂಗನ ರಾಜ್ಯದ ಒಳಭಾಗಕ್ಕೆ ಪ್ರವೇಶಿಸಿದರೆ ಹನ್ನೆರಡು ಅಥವಾ ಹದಿನೈದು ಹರಿದಾರಿ ದೂರದಲ್ಲಿ ಬಹಳ ಎತ್ತರವಾದ ಪರ್ವತಶ್ರೇಣಿ ಇದೆ. ಇದು ಬಹಳ ಕಡಿದಾಗಿದ್ದು ಹತ್ತುವುದಕ್ಕೆ ಕಷ್ಟ. ಈ ಶ್ರೇಣಿ ನರಸಿಂಗನ ರಾಜ್ಯದ ಆರಂಭದಿಂದ ಪ್ರಾರಂಭವಾಗಿ ಮಲಬಾರ್ ದೇಶದ ಆಚೆ ಇರುವ ಕಾಮೊರಿ ರಾಜ್ಯದವರೆಗೆ ಹಬ್ಬಿದೆ. ಮೇಲೆ ಹೇಳಿದ ತುಳಿನಾಟ್ ಈ ಶ್ರೇಣಿಗೂ ಸಮುದ್ರಕ್ಕೂ ಮಧ್ಯೆ ಶ್ರೇಣಿಯ ಬುಡದಲ್ಲಿದೆ. ಇಂಡಿಯನರು ಹೇಳುವ ಪ್ರಕಾರ ಪುರಾತನ ಕಾಲದಲ್ಲಿ ತುಳಿನಾಟ್ ಪ್ರದೇಶವೆಲ್ಲಾ ಸಮುದ್ರದಿಂದ ಆವರಿಸಲ್ಪಟ್ಟಿತ್ತು. ಸಮುದ್ರ ಪರ್ವತಶ್ರೇಣಿಯವರೆಗೆ  ಇತ್ತು. ಕಾಲಾಂತರದಲ್ಲಿ ಸಮುದ್ರ ಹಿಂದೆ ಸರಿದು ಬೇರೆ ಭಾಗಗಳನ್ನು ಆಕ್ರಮಿಸಿತು. ಸಮುದ್ರ ಪರ್ವತಶ್ರೇಣಿಯವರೆಗೆ ಹಬ್ಬಿತ್ತು ಎನ್ನುವುದಕ್ಕೆ ಕುರುಹುಗಳಿವೆ. ತಗ್ಗು ಪ್ರದೇಶವೆಲ್ಲಾ ಸಮುದ್ರಮಟ್ಟಕ್ಕೆ ಇದೆ.[14]

ಪರ್ವತ ಶ್ರೇಣಿ ಬಹಳ ಹಳ್ಳ ದಿಣ್ಣೆಗಳಿಂದ ಕೂಡಿದೆ; ಮುಗಿಲು ಮುಟ್ಟುವಷ್ಟು ಎತ್ತರವಾಗಿದೆ. ಈ ಶ್ರೇಣಿಯನ್ನು ಹತ್ತುವುದು ಬಹಳ ಕಷ್ಟ. ಕೆಲವು ಕಡೆಗಳಲ್ಲಿ ಮಾತ್ರ ಬಹಳ ಕಷ್ಟಪಟ್ಟು ಹತ್ತಬೇಕು. ಈ ಕಾರಣವೇ ಮಲಬಾರ್ ಸುರಕ್ಷಿತವಾಗಿರುವುದು. ಇಲ್ಲದಿದ್ದರೆ ನರಸಿಂಗ ರಾಜ್ಯದ ರಾಜ ಅದನ್ನು ಯಾವಾಗಲೋ ಗೆದ್ದುಕೊಂಡು ಬಿಡುತ್ತಿದ್ದ.

ಈ ಪರ್ವತ ಶ್ರೇಣಿಯಲ್ಲಿ ಅಲ್ಲಲ್ಲಿ ಒಳ್ಳೊಳ್ಳೆಯ ಪಟ್ಟಣಗಳೂ ಇವೆ. ತಿಳಿ ನೀರೂ ರುಚಿಯಾದ ಹಣ್ಣುಗಳೂ ಸಮೃದ್ದಿಯಾಗಿವೆ. ಕಾಡುಹಂದಿಗಳೂ, ಭಾರಿಯಾದ ಹಾಗೂ ಸುಂದರವಾದ ಜಿಂಕೆಗಳೂ, ಅನೇಕ ಚಿರತೆಗಳೂ, ಹುಲಿ ಕರಡಿಗಳೂ, ಬೆಕ್ಕಿನಂಥ ಪ್ರಾಣಿಗಳೂ ತುಂಬಿವೆ. ಅಲ್ಲದೆ ಕುದುರೆಯಂತೆ ಕಾಣುವ ಬೂದಿ ಬಣ್ಣದ ಒಂದು ತರದ ಪ್ರಾಣಿಗಳೂ ಇವೆ. ಇವು ಬಹಳ ಚುರುಕು; ಹಿಡಿಯುವುದು ಕಷ್ಟ. ರೆಕ್ಕೆ ಇರುವ ಹಾರುವ ಹಾವುಗಳಿವೆ. ಇವು ಬಹಳ ವಿಷ. ಮರದಲ್ಲಿ ಇರುವ ಹಾವುಗಳ ಉಸಿರು ತಾಗಿದರೆ ಅಥವಾ ಕಣ್ಣಿಗೆ ಬಿದ್ದರೆ ಸಾಕು ಸಾವು ಖಂಡಿತ. ಅಲ್ಲದೆ ಈ ಪವರ್ತಶ್ರೇಣಿಯಲ್ಲಿ ಕಾಡಾನೆಗಳಿವೆ. ನದಿಗಳಲ್ಲಿ ನೀಲಮಣಿ ಮತ್ತು ಪದ್ಮರಾಗ ಮುಂತಾದ ಬೆಲೆಯಾದ ಹರಳುಗಳು ಸಿಕ್ಕುತ್ತವೆ. ಇವುಗಳನ್ನು ಮಲಬಾರಿಗೆ ತೆಗೆದುಕೊಂಡು ಹೋಗಿ ಮಾರುತ್ತಾರೆ. ಅಲ್ಲಿ ಇವುಗಳನ್ನು ಸಾಣೆ ಹಿಡಿಯುತ್ತಾರೆ.

ಈ ಪರ್ವತ ಶ್ರೇಣಿಯನ್ನು ದಾಟಿದ ಮೇಲೆ ಸಿಕ್ಕುವ ಪ್ರದೇಶ ಹೆಚ್ಚು ಕಡಿಮೆ ಮಟ್ಟವಾಗಿದೆ. ಈ ಮೈದಾನ ಪ್ರದೇಶ ಬಹಳ ಫಲವತ್ತಾಗಿದ್ದು ಇಲ್ಲಿ ಎಲ್ಲವೂ ಸಮೃದ್ದಿಯಾಗಿ ಸಿಕ್ಕುತ್ತವೆ. ಇದೆಲ್ಲ ನರಸಿಂಗ ರಾಜ್ಯಕ್ಕೆ ಸೇರಿದ್ದು. ಇಲ್ಲಿ ಅನೇಕ ನಗರಗಳೂ, ಗ್ರಾಮಗಳೂ, ಕೋಟೆ ಕೊತ್ತಳಗಳೂ ಇವೆ. ಅನೇಕ ದೊಡ್ಡ ದೊಡ್ಡ ನದಿಗಳು ಹರಿಯುತ್ತವೆ. ರಾಜ್ಯದಲ್ಲಿ ಅಕ್ಕಿ, ತರಕಾರಿ ಹೇರಳವಾಗಿ ಬೆಳೆಯುತ್ತವೆ. ದನ, ಎಮ್ಮೆ, ಹಂದಿ, ಆಡು, ಕುರಿ, ಕತ್ತೆ, ಸಣ್ಣ ಕುದುರೆ – ಇವು ತುಂಬಿವೆ. ಇವನ್ನೆಲ್ಲ ಜನ ಉಪಯೋಗಿಸುತ್ತಾರೆ. ಎತ್ತು, ಕೋಣ, ಕತ್ತೆ ಮತ್ತು ಕುದುರೆಗಳ ಮೇಲೆ ಸಾಮಾನು ಹೇರುತ್ತಾರೆ; ಮತ್ತು ಬೇಸಾಯಕ್ಕೂ ಉಪಯೋಗಿ ಸುತ್ತಾರೆ.

ಹೆಚ್ಚು ಕಡಿಮೆ ಎಲ್ಲಾ ಗ್ರಾಮಗಳಲ್ಲಿ ಜೆಂಟೈಲರೇ ಇರುವುದು. ಇವರಲ್ಲಿ ಕೆಲವರು ಮೂರರಿದ್ದಾರೆ. ಈ ಮೂರರಲ್ಲಿ ಕೆಲವರು ಊರುಗಳ ಅಧಿಪತಿಗಳಾಗಿದ್ದಾರೆ. ನರಸಿಂಗ ರಾಜ ಅವನ್ನು ಅವರಿಗೆ ಕೊಟ್ಟಿದ್ದಾನೆ. ಉಳಿದ ಊರುಗಳು ಅವನಿಗೆ ಸೇರಿದವುಗಳು. ಅಲ್ಲಿ ತನ್ನ ಪರವಾಗಿ ರಾಜ್ಯಪಾಲರುಗಳನ್ನೂ ತೆರಿಗೆ ವಸೂಲಿಕಾರರನ್ನೂ ನೇಮಿಸಿದ್ದಾನೆ.

ಪರ್ವತಗಳಿಂದಾಚೆ ನಲವತ್ತು ಹರಿದಾರಿಗಳು[15] ಒಳನಾಡಿಗೆ ಹೋದರೆ ಬಿಜನಗರ್ ಎಂಬ ಬಹು ದೊಡ್ಡ ನಗರ ಸಿಕ್ಕುತ್ತದೆ. ಈ ನಗರಗಳಲ್ಲಿ ಅಸಂಖ್ಯಾತ ಜನ ವಾಸಮಾಡುತ್ತಾರೆ. ಒಂದು ಕಡೆ ಬಹಳ ಒಳ್ಳೆಯ ಕೋಟೆಯೂ, ಇನ್ನೊಂದು ಕಡೆ ನದಿಯೂ, ಮತ್ತೊಂದು ಕಡೆ ಪರ್ವತವೂ ಇವೆ. ನರಸಿಂಗುವ ರಾಜ್ಯದ ರಾಜನು ಯಾವಾಗಲೂ ಇಲ್ಲಿ ವಾಸ ಮಾಡುತ್ತಾನೆ.

ರಾಜ ಜೆಂಟೈಲ. ಇವನನ್ನು ರಾಹೇನಿ (ರಾಯ) ಎಂದು[16] ಕರೆಯುತ್ತಾರೆ. ರಾಜನು ಸುಂದರವಾದ ಹಾಗೂ ದೊಡ್ಡದಾದ ಅರಮನೆಗಳನ್ನು ಕಟ್ಟಿಸಿದ್ದಾನೆ. ಅಲ್ಲಲ್ಲಿ ಅನೇಕಾನೇಕ ಅಂಗಳಗಳಿವೆ. ಈ ಅಂಗಳಗಳಲ್ಲಿ ಅನೇಕ ದಿಬ್ಬಗಳೂ, ಕೊಳಗಳೂ, ಹೂಗಿಡಗಳೂ ಇವೆ. ಕೊಳಗಳಲ್ಲಿ ಹೇರಳವಾಗಿ ಮೀನು ಸಾಕುತ್ತಾರೆ. ಮರಗಳಿಂದಲೂ ಹೂಗಿಡಗಳಿಂದಲೂ ತುಂಬಿದ ತೋಟಗಳಿವೆ.

ನಗರದಲ್ಲಿ ಶ್ರೀಮಂತ ಸರದಾರರು ವಾಸಮಾಡುವ ಮನೆಗಳೂ ಇವೆ. ಜನಸಾಮಾನ್ಯರ ಮನೆಗಳೆಲ್ಲ ಹುಲ್ಲು ಹೊದಿಸಿದವುಗಳು. ನಗರದ ಬೀದಿಗಳೂ ಚೌಕಗಳೂ ವಿಶಾಲವಾಗಿವೆ. ನಾನಾ ದೇಶದ ಮತ್ತು ನಾನಾ ಜನಾಂಗದ ಜನರು ಈ ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ತುಂಬಿರುತ್ತಾರೆ. ಏಕೆಂದರೆ ಇಲ್ಲಿ ಅನೇಕ ಮೂರ್ ವರ್ತಕರು ಮತ್ತು ಶ್ರೀಮಂತ ಜೆಂಟೈಲ್ ನಿವಾಸಿಗಳಲ್ಲದೆ ಬೇರೆ ಕಡೆಗಳಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಮುತ್ತಿ ಕೊಂಡಿರುವ ಜನರಿದ್ದಾರೆ. ಇಲ್ಲಿಗೆ ಬರಬಹುದಾದವರೆಲ್ಲ ಬಂದು ಇಲ್ಲಿದ್ದು ವ್ಯಾಪಾರ ಸಾಪಾರಗಳಲ್ಲಿ ತೊಡಗಿದ್ದಾರೆ. ಯಾರು ಬೇಕಾದರೂ ಅಡೆತಡೆಗಳಿಲ್ಲದ ಸುರಕ್ಷಿತವಾಗಿ ಇಲ್ಲಿರಬಹುದು. ಯಾರಿಂದಲೂ ಅವರಿಗೆ ತೊಂದರೆ ಇಲ್ಲ. ಎಲ್ಲಿಂದ ಬಂದರೆಂದು ಯಾರೂ ಕೇಳುವುದಿಲ್ಲ. ಯಾವ ಜನಾಂಗದವರೆಂದು ಪ್ರಶ್ನೆ ಮಾಡುವುದಿಲ್ಲ. ಅವರು ಮೂರರಾಗಿರ ಬಹುದು ಅಥವಾ ಕ್ರೈಸ್ತರಾಗಿರಬಹುದು. ಎಲ್ಲರೂ ತಮ್ಮ ಮತಧರ್ಮದಂತೆ ಅಥವಾ ತಮ್ಮ ಇಷ್ಟದಂತೆ ಇರಬಹುದು.

ಈ ನಗರದಲ್ಲಿ ನಡೆಯುವ ವ್ಯಾಪಾರ ಅಗಾಧವಾಗಿದೆ. ರಾಜ್ಯದ ಆಳ್ವಿಕೆಯ ಅಧಿಕಾರವನ್ನು ಹೊತ್ತ ರಾಜ್ಯಪಾಲರುಗಳು ಎಲ್ಲರನ್ನೂ ನ್ಯಾಯನೀತಿಗಳಿಂದ ನೋಡಿಕೊಳ್ಳುತ್ತಾರೆ. ಇಲ್ಲಿ ಪೆಗು ಮತ್ತು ಸೆಲನಿ (ಸಿಲೋನ್)ಗಳಿಂದ ಬಂದ ಅನೇಕ ವಜ್ರವೈಢೂರ್ಯಗಳ ಆಭರಣಗಳಿವೆ. ಈ ರಾಜ್ಯದಲ್ಲಿಯೂ ವಜ್ರಗಳು ಸಿಕ್ಕುತ್ತವೆ. ನರಸಿಂಗನ ರಾಜ್ಯದಲ್ಲಿ ಒಂದು ಮತ್ತು ದಖನಿ ರಾಜ್ಯದಲ್ಲಿ ಒಂದು ವಜ್ರದ ಗಣಿಗಳಿವೆ. ಓರ್ಮಸ್ ಮತ್ತು ಕಾಯೆಲ್‌ಗಳಿಂದ ತಂದ ಮುತ್ತುಗಳೂ, ಸಣ್ಣ ಮುತ್ತುಗಳ ಆಭರಣಗಳನ್ನು ಕಂಡರೆ ಬಹಳ ಆಸೆ. ಆದ್ದರಿಂದ ಅವುಗಳನ್ನು ಇಲ್ಲಿಗೆ ತಂದು ಸುರಿಯುತ್ತಾರೆ. ಚೀನಾ ಮತ್ತು ಅಲೆಕ್ಸಾಂಡ್ರಿಯಾದಿಂದ ಬಂದ ನಾನಾ ತರಹ ರೇಷ್ಮೆ ಮತ್ತು ಸಾಧಾರಣ ಕಿಂಕಾಪು ಬಟ್ಟೆಗಳನ್ನು ಇಲ್ಲಿರುವ ಜನ ಧರಿಸುತ್ತಾರೆ. ಅಲ್ಲದೆ ಕೆಂಪು ಮತ್ತು ಇತರ ಬಣ್ಣದ ಬಟ್ಟೆಗಳನ್ನೂ ಹೆಚ್ಚಾಗಿ ಉಪಯೋಗಿಸುತ್ತಾರೆ. ಹವಳಗಳನ್ನು ಗುಂಡುಗಳಾಗಿ ಮಾಡಿ ಧರಿಸುತ್ತಾರೆ.

ಬಿಜನಗರಕ್ಕೆ ತಾಮ್ರ, ಪಾದರಸ, ಸಿಂಧೂರ, ಕೇಸರಿ, ಗುಲಾಬಿ ಅತ್ತರು, ಅಫೀಮು, ಗಂಧ ಮತ್ತು ಆ್ಯಲೊ ಮರ, ಕರ್ಪೂರ, ಕಸ್ತೂರಿ – ಇವು ಬರುತ್ತವೆ. ಕಸ್ತೂರಿ ಮುಂತಾದ ಸುಗಂಧ ವಸ್ತುಗಳನ್ನು ಮೈಕೈಗೆಲ್ಲಾ ಪೂಸಿಕೊಳ್ಳುವುದು ಇಲ್ಲಿಯ ಜನರ ಪದ್ಧತಿ.

ಈ ಊರಿನಲ್ಲಿ ಮತ್ತು ಇಡೀ ರಾಜ್ಯದಲ್ಲಿ ಅಗಾಧವಾಗಿ ಮೆಣಸು ಉಪಯೋಗಿಸುತ್ತಾರೆ. ಈ ಮೆಣಸನ್ನು ಮಲಬಾರಿನಿಂದ ಎತ್ತು ಮತ್ತು ಕತ್ತೆಗಳ ಮೇಲೆ ಹೇರಿಕೊಂಡು ಬರುತ್ತಾರೆ.

ಇಲ್ಲಿ ಪರ್ದೋ[17] ಎಂಬ ಚಿನ್ನದ ನಾಣ್ಯ ಚಲಾವಣೆಯಲ್ಲಿದೆ. ಇದರ ಬೆಲೆ ಮುನ್ನೂರು ಮರವೆಡಿಗಳು. ಈ ನಾಣ್ಯಗಳನ್ನು ರಾಜ್ಯದ ಕೆಲವು ಊರುಗಳಲ್ಲಿ ಟಂಕ ಒತ್ತುತ್ತಾರೆ. ಇಡೀ ಇಂಡಿಯಾದೇಶದಲ್ಲೆಲ್ಲಾ ಈ ನಾಣ್ಯ ಚಲಾವಣೆಯಲ್ಲಿದೆ. ನಾಣ್ಯಕ್ಕೆ ಉಪಯೋಗಿಸಿರುವ ಚಿನ್ನ ಸಾಧಾರಣವಾಗಿದೆ. ನಾಣ್ಯವು ದುಂಡಾಗಿದ್ದು ಅದನ್ನು ಅಚ್ಚಿನಿಂದ ತಯಾರಿಸುತ್ತಾರೆ. ಕೆಲವು ನಾಣ್ಯಗಳ ಒಂದು ಕಡೆ ಇಂಡಿಯಾ ಲಿಪಿಯೂ, ಮತ್ತೊಂದು ಕಡೆ ಗಂಡು ಹೆಣ್ಣಿನ ಚಿತ್ರವೂ ಇವೆ. ಮತ್ತೆ ಕೆಲವಕ್ಕೆ ಒಂದು ಕಡೆ ಲಿಪಿ ಮಾತ್ರ ಇರುತ್ತದೆ.

ರಾಜನು ದೇಶದ ಆಡಳಿತವನ್ನು ತನ್ನ ರಾಜ್ಯಪಾಲರುಗಳಿಗೆ ವಹಿಸಿ ತಾನು ಯಾವಾಗಲೂ ರಾಜಧಾನಿಯಲ್ಲಿ ಸುಖವಾಗಿ ಇರುತ್ತಾನೆ. ರಾಜನೂ ಈ ಊರಿನ ನಿವಾಸಿಗಳೂ ಜೆಂಟೈಲರು. ಇವರು ಕಂದುಬಣ್ಣಕ್ಕಿದ್ದರೂ ಹೆಚ್ಚು ಕಡಿಮೆ ಬೆಳ್ಳಗಿದ್ದಾರೆ. ತಲೆಕೂದಲು ಕೋಮಲ ವಾಗಿಯೂ ಕಪ್ಪಾಗಿಯೂ ಇದೆ. ಮೈಕೈ ಸಮಕಟ್ಟುಳ್ಳವರು. ನಮ್ಮಂತೆ ಲಕ್ಷಣವಾಗಿದ್ದಾರೆ. ಹೆಂಗಸರೂ ಸುಂದರವಾಗಿದ್ದಾರೆ.

ಗಂಡಸರು ಸೊಂಟದಿಂದ ಕೆಳಕ್ಕೆ ಪಂಚೆಯನ್ನು ಮಡಿಕೆಯಾಗಿ ಮಾಡಿ ಬಹಳ ಬಿಗಿಯಾಗಿ ಉಡುತ್ತಾರೆ. ಹತ್ತಿ, ರೇಷ್ಮೆ ಅಥವಾ ಸಾಧಾರಣ ಕಿಂಕಾಪಿನಿಂದ ಮಾಡಿದ ಮಂಡಿಯವರೆಗೆ ಬರುವಂತಹ ಅಂಗಿಗಳನ್ನು ತೊಡುತ್ತಾರೆ. ಈ ಅಂಗಿಗಳ ಮುಂಭಾಗ ತೆರೆದಿರುತ್ತದೆ. ತಲೆಗೆ ಸಣ್ಣ ಟೋಪಿಗಳನ್ನು ಹಾಕಿಕೊಳ್ಳುತ್ತಾರೆ. ಕೆಲವರು ರೇಷ್ಮೆ ಅಥವಾ ಕಿಂಕಾಪಿನ ರುಮಾಲು ಸುತ್ತುತ್ತಾರೆ. ತಲೆಯ ಮೇಲೆ ಜುಟ್ಟು ಗಂಟು ಹಾಕುತ್ತಾರೆ. ಕಾಲುಚೀಲ ಹಾಕದೆ ಕಾಲಿಗೆ ಪಾದರಕ್ಷೆಗಳನ್ನು ಧರಿಸುತ್ತಾರೆ. ಭುಜದ ಮೇಲೆ ರೇಷ್ಮೆ ಅಥವಾ ಹತ್ತಿಯ ವಸ್ತ್ರ ಹಾಕಿಕೊಳ್ಳು ತ್ತಾರೆ. ಕತ್ತಿ ಹಿಡಿದ ಸೇವಕರು ಅವರ ಹಿಂದೆ ನಡೆದುಕೊಂಡು ಹೋಗುತ್ತಾರೆ.

ಶ್ರೀಗಂಧ, ಗಂಧ, ಪಚ್ಚಕರ್ಪೂರ, ಕಸ್ತೂರಿ, ಕೇಸರಿಗಳನ್ನು ಪನ್ನೀರಿನಲ್ಲಿ ಹಾಕಿ ಸ್ನಾನಮಾಡಿದ ಮೇಲೆ ಮೈಗೆ ಪೂಸಿಕೊಳ್ಳುತ್ತಾರೆ. ಈ ಕಾರಣ ಇವರು ಘಮಘಮಿಸುತ್ತಿ ರುತ್ತಾರೆ. ಕೊರಳಿಗೆ ಚಿನ್ನದ ಸರವನ್ನೂ ಮತ್ತಿತರ ಆಭರಣಗಳನ್ನೂ ಧರಿಸುತ್ತಾರೆ. ತೋಳಿಗೆ ಹರಳಿನ ತೋಳುಬಂದಿಗಳನ್ನೂ, ಕೈಬೆರಳುಗಳಿಗೆ ಉಂಗುರಗಳನ್ನೂ, ಕಿವಿಗೆ ಮುತ್ತಿನ ಮತ್ತು ವಜ್ರದ ಓಲೆಗಳನ್ನೂ ಧರಿಸುತ್ತಾರೆ. ಮಳೆ ಮತ್ತು ಬಿಸಿಲಿಗಾಗಿ ಒಬ್ಬ ಸೇವಕನು ಇವರ ಹಿಂದೆ ಛತ್ರಿ ಹಿಡಿದುಕೊಂಡು ಹೋಗುತ್ತಿರುತ್ತಾನೆ. ಈ ಛತ್ರಿಗಳನ್ನು ರೇಷ್ಮೆ ಬಟ್ಟೆಯಿಂದ ಮಾಡಿ ಸೊಗಸಾಗಿ ಅಲಂಕರಿಸುತ್ತಾರೆ. ಇವನ್ನು ಬೇಕೆಂದಾಗ ತೆರೆದು ಮುಚ್ಚಬಹುದು. ಕೆಲವು ಛತ್ರಿಗಳ ಬೆಲೆ ಮುನ್ನೂರು ನಾನೂರ ಚಿನ್ನದ ನಾಣ್ಯಗಳಷ್ಟು. ಶ್ರೀಮಂತಿಕೆಗೆ ತಕ್ಕಂಥ ಛತ್ರಿ ಉಪಯೋಗಿಸುತ್ತಾರೆ.

ಸ್ತ್ರೀಯರು ಆರು ಗಜ ಉದ್ದ ನವುರಾದ ರೇಷ್ಮೆ ಅಥವಾ ಹತ್ತಿ ಬಟ್ಟೆಯ ಬಣ್ಣಬಣ್ಣದ ಸೀರೆಗಳನ್ನು ಉಡುತ್ತಾರೆ. ಸೀರೆಯ ಒಂದು ಭಾಗವನ್ನು ಸೊಂಟದಿಂದ ಕೆಳಕ್ಕೆ ಉಟ್ಟು, ಮತ್ತೊಂದು ಭಾಗವನ್ನು ಎದೆಯ ಮೇಲೂ ಭುಜದ ಮೇಲೂ ಬರುವಂತೆ ಹಾಕಿಕೊಳ್ಳುತ್ತಾರೆ. ಹೀಗೆ ಉಟ್ಟಾಗ ಒಂದು ತೋಳು ಮತ್ತು ಒಂದು ಭುಜ ಮಾತ್ರ ಕಾಣುತ್ತವೆ. ಕಸೂತಿ ಹಾಕಿದ ಗಿಲೀಟಿನ ಚರ್ಮದ ಪಾದರಕ್ಷೆಗಳನ್ನು ಧರಿಸುತ್ತಾರೆ. ತಲೆಯನ್ನು ಮುಚ್ಚಿಕೊಳ್ಳು ವುದಿಲ್ಲ. ಕೂದಲನ್ನು ಬಾಚಿ, ಮುಡಿಕಟ್ಟಿ ಸುವಾಸನೆಯ ಹೂ ಮುಡಿಯುತ್ತಾರೆ. ಮೂಗಿಗೆ ಒಂದು ಕಡೆ ತೂತುಮಾಡಿ ಮುತ್ತಿನ ಅಥವಾ ಹರಳಿನ ತೂಗು ಮೂಗುತಿಯನ್ನು ಧರಿಸುತ್ತಾರೆ. ಕಿವಿಗಳನ್ನು ಚುಚ್ಚಿಸಿಕೊಂಡು ಓಲೆ ಮುಂತಾದ ಅನೇಕ ಆಭರಣಗಳನ್ನು ಧರಿಸುತ್ತಾರೆ. ಚಿನ್ನ, ವಜ್ರ, ವೈಢೂರ್ಯ, ಹವಳ ಮುಂತಾದವುಗಳಿಂದ ಮಾಡಿದ ಕೊರಳು ಸರಗಳನ್ನೂ, ಪದಕಗಳನ್ನೂ, ತೋಳುಬಂದಿಗಳನ್ನೂ, ಕೈಬಳೆಗಳನ್ನೂ ತೊಡುತ್ತಾರೆ. ತೋಳುಗಳಿಗೆ ಪೋಣಿಸಿದ ಹವಳಗಳನ್ನು ಕಟ್ಟಿಕೊಳ್ಳುತ್ತಾರೆ. ಕೈಬೆರಳುಗಳಿಗೆ ವಜ್ರ ವೈಢೂರ್ಯಗಳ ಉಂಗುರಗಳನ್ನು ಹಾಕಿಕೊಳ್ಳುತ್ತಾರೆ. ವಜ್ರವೈಢೂರ್ಯಗಳಿಂದ ಅಲಂಕೃತವಾದ ಡಾಬುಗಳನ್ನು ತೊಡುತ್ತಾರೆ. ಕಾಲಿಗೆ ಚಿನ್ನದ ಬಳೆ ಮತ್ತು ಕಾಲುಂಗುರಗಳನ್ನು ಹಾಕಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇವರು ಬಹು ಶ್ರೀಮಂತಿಕೆಯ ಒಡವೆ ವಸ್ತ್ರಗಳನ್ನು ಧರಿಸಿದವರಾಗಿರುತ್ತಾರೆ.

ಸ್ತ್ರೀಯರು ನೃತ್ಯದಲ್ಲಿ ಎತ್ತಿದ ಕೈ. ನಾನಾ ತರ ವಾದ್ಯಗಳನ್ನು ಬಾರಿಸಿಕೊಂಡು ಹಾಡುತ್ತಾರೆ. ಅಲ್ಲದೆ ವಿಧವಿಧ ಭಂಗಿಗಳ ಆಟಪಾಟಗಳನ್ನು ಆಡಬಲ್ಲವರು. ಸ್ತ್ರೀಯರು ಬಹು ರೂಪವತಿಯರು. ಗಾಂಭೀರ್ಯದಿಂದ ವರ್ತಿಸುತ್ತಾರೆ. ನಮ್ಮಂತೆ ಮದುವೆಯಾಗುತ್ತಾರೆ. ವಿವಾಹದ ಕಾಯಿದೆಕಟ್ಟಲೆಗಳಿವೆ. ಆದರೂ ಕೆಲವರು, ಅದರಲ್ಲಿಯೂ ಸಾಕುವ ಶಕ್ತಿಯುಳ್ಳ ಶ್ರೀಮಂತರು, ಹಲವಾರು ಹೆಂಡತಿಯರನ್ನು ಮದುವೆಯಾಗುತ್ತಾರೆ. ರಾಜನ ಅಂತಃಪುರದಲ್ಲಿ ಅನೇಕ ಜನ ಸ್ತ್ರೀಯರಿದ್ದಾರೆ. ಇವರಲ್ಲದೆ ಇಟ್ಟುಕೊಂಡವರು ಎಷ್ಟೋ ಜನ.

ಅರಮನೆಯ ಊಳಿಗಕ್ಕೆ ಬೇಕಾದ ಹೆಂಗಸರನ್ನು ರಾಜ್ಯದಲ್ಲೆಲ್ಲಾ ಹುಡುಕಿ ಅವರಲ್ಲಿ ರೂಪವತಿಯರನ್ನು ಆರಿಸಿಕೊಳ್ಳುತ್ತಾರೆ. ಅರಮನೆಯ ಎಲ್ಲ ಕೆಲಸವೂ ಸ್ತ್ರೀಯರಿಂದಲೇ ನಡೆಯಬೇಕಾದ್ದರಿಂದ ಅದಕ್ಕೆ ಶುಚಿ ರುಚಿಯನ್ನರಿತ ಸ್ತ್ರೀಯರೇ ಬೇಕು. ಇವರಿಗೆ ಅರಮನೆಯೊಳಗೇ ವಾಸಕ್ಕೆ ಮನೆಗಳನ್ನು ಕಟ್ಟಿ ಬೇಕಾದುದನ್ನೆಲ್ಲ ಒದಗಿಸುತ್ತಾರೆ. ಇವರು ತಮ್ಮ ಗಾಯನ, ನೃತ್ಯ, ಅಭಿನಯ ಮುಂತಾದ ಸಾವಿರಾರು ವಿಧಾನಗಳಿಂದ ರಾಜನ ಮನಸ್ಸಿಗೆ ಆನಂದವನ್ನುಂಟು ಮಾಡುತ್ತಾರೆ.

ಈ ಹಿಂದೆ ನಾನು ಹೇಳಿದ ಕೊಳಗಳಲ್ಲಿ ಸ್ತ್ರೀಯರೂ ನಿತ್ಯವೂ ಸ್ನಾನಮಾಡಿ, ವಾದ್ಯ ಬಾರಿಸಿ, ಹಾಡಿ ನಲಿಯುತ್ತಾರೆ. ರಾಜನು ಇವರನ್ನು ತನ್ನ ಶಯನಾಗೃಹಕ್ಕೆ ಕರೆಸಿಕೊಳ್ಳುತ್ತಾನೆ. ಮೊದಲ ಗಂಡುಮಗು ರಾಜ್ಯಕ್ಕೆ ಉತ್ತರಾಧಿಕಾರಿ. ರಾಜನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಈ ಸ್ತ್ರೀಯರಲ್ಲಿ ಪರಸ್ಪರ ಅಸೂಯೆ, ಸ್ಪರ್ಧೆ ಎಷ್ಟಿರುತ್ತೆ ಎಂದರೆ ತಮಗೆ ಬೇಡವಾದವರನ್ನು ಕೊಲ್ಲಿಸುವುದಕ್ಕೂ ಹೇಸುವುದಿಲ್ಲ. ಕೆಲವರು ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳು ವುದೂ ಉಂಟು.

ರಾಜನು ಪ್ರತ್ಯೇಕವಾದ ಓಲಗಶಾಲೆಯಲ್ಲಿ ತನ್ನ ಶ್ರೀಮಂತ ಸರದಾರರು ಮತ್ತು ಅಧಿಕಾರಿಗಳೊಡನೆ ಕುಳಿತು ರಾಜ್ಯದ ವ್ಯವಹಾರಗಳನ್ನು ಪರಿಶೀಲಿಸುತ್ತಾನೆ. ಇವರು ರಾಜನನ್ನು ನೋಡಲು ಹೋದಾಗ ನಜರು ಒಪ್ಪಿಸಿ ತಮ್ಮ ಗೌರವ ಸೂಚಿಸುತ್ತಾರೆ. ತಪ್ಪಿತಸ್ಥರನ್ನು ರಾಜ ಕ್ರೂರಶಿಕ್ಷೆಗೆ ಗುರಿಮಾಡುತ್ತಾನೆ. ಒಳ್ಳೆಯವರಿಗೆ ಬಹುಮಾನಗಳನ್ನೂ ಮೆಚ್ಚಿಗೆಯನ್ನೂ ಸೂಚಿಸಿ ಗೌರವಿಸುತ್ತಾನೆ.

ರಾಜ್ಯದ ಶ್ರೀಮಂತ ಸರದಾರರೂ ಅವನ ಸಂಬಂಧಿಗಳೂ ಪಲ್ಲಕ್ಕಿಯಲ್ಲಿ ಕುಳಿತು ಕುದುರೆ ಸವಾರರು ಮತ್ತು ಆಳುಕಾಳುಗಳ ಸಮೇತ ಅರಮನೆಗೆ ಬರುತ್ತಾರೆ. ರಾಜನು ಹೇಳಿಕಳುಹಿಸುವವರೆಗೆ ಅರಮನೆಯ ಬಾಗಿಲಿನಲ್ಲಿ ಕಾಯುತ್ತಾರೆ. ಅವರು ತಪ್ಪುಗಳನ್ನು ಮಾಡಿದ್ದಲ್ಲಿ ರಾಜನು ಅವರಿಗೆ ಹೇಳಿಕಳುಹಿಸುತ್ತಾನೆ. ಅವರು ತಪ್ಪನ್ನು ಒಪ್ಪಿಕೊಂಡರೆ ಅವರನ್ನು ಛೀಮಾರಿಮಾಡಿ, ಅವರ ಆದಾಯದಲ್ಲಿ ಅರ್ಧವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾನೆ. ಇಲ್ಲದಿದ್ದರೆ ಅವರನ್ನು ಬೆತ್ತಲೆಯಾಗಿ ನೆಲದಮೇಲೆ ಮಲಗಿಸಿ ಚೆನ್ನಾಗಿ ಹೊಡೆಸುತ್ತಾನೆ. ಅವರು ತನ್ನ ಸಂಬಂಧಿಗಳಾಗಿದ್ದಲ್ಲಿ ಅಥವಾ ಬಹಳ ದೊಡ್ಡವರಾಗಿದ್ದರೆ  ರಾಜನೇ ತನ್ನ ಕೈಯಿಂದ ಹೊಡೆಯುತ್ತಾನೆ. ಹೀಗೆ ಹೊಡೆದು ಅರಮನೆಯ ತನ್ನ ಖಾಸಾ ವಸ್ತ್ರಶಾಲೆಯಿಂದ ಬೆಲೆಯಾದ ಉಡುಪುಗಳನ್ನು ತರಿಸಿ, ಅವರಿಗೆ ಉಡಿಸಿ, ಪಲ್ಲಕ್ಕಿಗಳಲ್ಲಿ ಕುಳ್ಳಿರಿಸಿ, ವಾದ್ಯಸಮೇತ ಅರಮನೆಯಿಂದ ಕಳುಹಿಸುತ್ತಾನೆ.[18]

ಅರಮನೆಯ ಬಾಗಿಲ ಬಳಿ ಯಾವಾಗಲೂ ಅನೇಕ ಪಲ್ಲಕ್ಕಿಗಳೂ ಅಶ್ವಾರೋಹಿಗಳೂ ಇರುವುದನ್ನು ನೋಡಬಹುದು.

ರಾಜನ ಬಳಿ ಒಂಬೈನೂರು ಆನೆಗಳೂ, ಇಪ್ಪತ್ತು ಸಾವಿರ ಕುದುರೆಗಳೂ ಇವೆ. ಇವನ್ನೆಲ್ಲಾ ದುಡ್ಡುಕೊಟ್ಟು ಕೊಂಡುಕೊಂಡಿದ್ದಾನೆ. ಒಂದೊಂದು ಆನೆಯ ಬೆಲೆ ೧೫೦೦ ರಿಂದ ೨೦೦೦ ಡಕಟ್. ಏಕೆಂದರೆ ಈ ಆನೆಗಳು ಬಹಳ ಭಾರಿಯಾಗಿದ್ದು ಯುದ್ಧಕ್ಕೆ ಬೇಕಾದವುಗಳು ಮತ್ತು ರಾಜನ ದರ್ಬಾರ್ ಕಾಲದಲ್ಲಿ ಉಪಯೋಗಿಸತಕ್ಕಂಥವುಗಳು.

ಕುದುರೆಗಳ ಬೆಲೆ ೩೦೦ ರಿಂದ ೬೦೦ ಡಕಟ್ಟುಗಳು. ರಾಜನ ಸ್ವಂತ ಉಪಯೋಗಕ್ಕೆ ಬೇಕಾದ ಕೆಲವು ಕುದುರೆಗಳ ಬೆಲೆ ೯೦೦ ಅಥವಾ ೧೦೦೦ ಡಕಟ್ಟುಗಳು. ಕುದುರೆಗಳನ್ನು ತನ್ನ ಶ್ರೀಮಂತ ಸರದಾರರಿಗೆ ಹಂಚಿಕೊಟ್ಟು ಅವರು ಅವುಗಳನ್ನು ಸಾಕುವ ವ್ಯವಸ್ಥೆ ಮಾಡಿದ್ದಾನೆ. ಒಬ್ಬೊಬ್ಬ ಅಂಗರಕ್ಷ ಯೋಧನಿಗೆ ಒಂದು ಕುದುರೆಯನ್ನೂ, ಕುದುರೆಯ ಮಾಲೀಸು ಮಾಡಲು ಒಬ್ಬ ಆಳನ್ನೂ ಕೊಡುತ್ತಾನೆ. ಅಲ್ಲದೆ ಒಬ್ಬ ಗುಲಾಮೀ ಹುಡುಗಿ ಯನ್ನೂ ಕೊಡುತ್ತಾನೆ. ನಾಲ್ಕೈದು ಚಿನ್ನದ ಪರ್ದೋಗಳ ಮಾಸಾಶನವನ್ನು ಕೊಡುತ್ತಾನೆ. ಈ ಯೋಧನಿಗೂ, ಆಳು ಮತ್ತು ಕುದುರೆಗಳಿಗೂ ಬೇಕಾದ ಗ್ರಾಸವನ್ನೂ ಕೊಡುತ್ತಾನೆ.

ಅರಮನೆಯ ಪಾಕಗೃಹಗಳಿಂದ ಆನೆ ಕುದುರೆಗಳಿಗೆ ಬೇಕಾದ ಆಹಾರ ಒದಗಿಸಲ್ಪಡುತ್ತದೆ. ಪಾಕಗೃಹಗಳು ಬಹಳ ದೊಡ್ಡದಾಗಿವೆ. ಲೆಕ್ಕವಿಲ್ಲದಷ್ಟು ತಾಮ್ರದ ಕಡಾಯಿಗಳಲ್ಲಿ ಅನ್ನವನ್ನು ಬೇಯಿಸುತ್ತಾರೆ. ಅಡುಗೆ ಮಾಡಲು ಅನೇಕ ಜನರಿದ್ದಾರೆ. ಅಕ್ಕಿ, ಹುರುಳಿ, ಕಡಲೆ, ತರಕಾರಿಗಳನ್ನು ಬೇಯಿಸಿ ಮಾಡಿದ ಅನ್ನವನ್ನು ಆನೆ ಕುದುರೆಗಳನ್ನು ನೋಡಿಕೊಳ್ಳುವ ಆಳುಗಳು ಬಂದು ತೆಗೆದುಕೊಂಡು ಹೋಗುತ್ತಾರೆ. ಇದೆಲ್ಲಾ ತುಂಬಾ ವ್ಯವಸ್ಥೆ ಹಾಗೂ ಕ್ರಮದಿಂದ ನಡೆಯುತ್ತದೆ.

ಕುದುರೆಯನ್ನು ಒಬ್ಬನು ಸರಿಯಾಗಿ ಸಾಕದಿದ್ದರೆ ಅದನ್ನು ಮತ್ತೊಬ್ಬನಿಗೆ ವಹಿಸಿ, ಅದರ ಬದಲು ಇನ್ನೂ ಬಡಕಲಾದ ಕುದುರೆಯನ್ನು ಕೊಟ್ಟು ಅದನ್ನು ಸಾಕುವಂತೆ ಮಾಡುತ್ತಾರೆ. ಚೆನ್ನಾಗಿ ಸಾಕಿದರೆ ಅದನ್ನು ಹಿಂದೆಗೆದುಕೊಂಡು ಅದಕ್ಕಿಂತ ಉತ್ತಮವಾದ ಕುದುರೆಯನ್ನು ಕೊಡುತ್ತಾರೆ. ಈ ರೀತಿ ಕುದುರೆಗಳನ್ನೂ, ಆನೆಗಳನ್ನೂ ರಾಜನ ಕರ್ಚಿನಲ್ಲಿ ಚೆನ್ನಾಗಿ ಸಾಕಿ ಸಲಹುತ್ತಾರೆ. ಶ್ರೀಮಂತ ಸರದಾರರೂ ತಮ್ಮ ಅಧೀನರಿಗೆ ಕೊಟ್ಟ ಕುದುರೆಗಳ ಬಗ್ಗೆಯೂ ಇದೇ ರೀತಿ ನಡೆದುಕೊಳ್ಳುತ್ತಾರೆ. ಇಲ್ಲಿ ಕುದುರೆಗಳು ಬಹಳ ದಿನಗಳು ಬದುಕುವುದಿಲ್ಲ. ಈ ದೇಶದಲ್ಲಿ ಕುದುರೆಗಳನ್ನು ಬೆಳೆಸುವುದಿಲ್ಲ. ಓರ್ಮಸ್ ಮತ್ತು ಕ್ಯಾಂಬೆಯಿಂದ ಇಲ್ಲಿಗೆ ಕುದುರೆಗಳನ್ನು ತರಿಸಿ ಸಾಕುತ್ತಾರೆ. ಈ ಕಾರಣ ಇಲ್ಲಿ ಕುದುರೆಗಳಿಗೆ ಬಹಳ ಬೆಲೆ.

ರಾಜನ ಅಶ್ವದಳ ಮತ್ತು ಕಾಲ್ದಳಗಳಲ್ಲಿರುವವರೆಲ್ಲ ಸೇರಿ ಹತ್ತು ಲಕ್ಷ ಜನರಿದ್ದಾರೆ. ಇವರಿಗೆಲ್ಲ ಸಂಬಳ ಉಂಟು. ಐದಾರು ಸಾವಿರ ಸ್ತ್ರೀಯರೂ ಇದ್ದಾರೆ. ಇವರಿಗೂ ಸಂಬಳವುಂಟು. ಯುದ್ಧಕ್ಕೆ ಹೋದಾಗ ಸೈನಿಕರ ಸಂಖ್ಯೆಗನುಗುಣವಾಗಿ ಸ್ತ್ರೀಯರನ್ನೂ ಕಳುಹಿಸುತ್ತಾರೆ. ಇವರಿಲ್ಲದೆ ಸೈನಿಕರು ಯುದ್ಧ ಮಾಡಲಾರರೆಂದೂ, ಸೈನಿಕರು ಒಮ್ಮತದಿಂದ ಇರಲಾರರೆಂದೂ ಹೇಳುತ್ತಾರೆ. ಈ ಸ್ತ್ರೀಯರು ಬಹು ಸೊಗಸುಗಾತಿಯರು; ನೃತ್ಯ ಗೀತ ಗಾಯನ ದೊಂಬರಾಟಗಳಲ್ಲಿ ನುರಿತ ಚದುರೆಯರು.

ಸೈನ್ಯಕ್ಕೆ ಯೋಧನನ್ನು ಚುನಾಯಿಸಿಕೊಳ್ಳುವ ಮುನ್ನ ಅವನನ್ನು ಬೆತ್ತಲೆಯಾಗಿ ನಿಲ್ಲಿಸಿ ಅವನ ಮೈಕಟ್ಟು, ಉದ್ದ, ದಪ್ಪ ಇವುಗಳನ್ನು ನೋಡಿ, ಅವನ ಹೆಸರು, ತಂದೆತಾಯಿಗಳ ಹೆಸರು ಇತ್ಯಾದಿ ವಿಚಾರಗಳನ್ನು ತಿಳಿದುಕೊಂಡು ಬರೆದುಕೊಳ್ಳುತ್ತಾರೆ. ಸಂಬಳದ ಬಟವಾಡೆ ಪುಸ್ತಕದಲ್ಲಿ ಅವನ ಈ ವಿವರಗಳೆಲ್ಲಾ ಇರುತ್ತವೆ. ಒಂದು ಸಲ ಸೈನ್ಯಕ್ಕೆ ಸೇರಿದ ನಂತರ ಬಿಟ್ಟು ಹೋಗುವುದು ಕಷ್ಟ. ತಪ್ಪಿಸಿಕೊಂಡು ಹೋಗಿ ಸಿಕ್ಕಿಬಿದ್ದರೆ ಬಹಳ ಕಠಿಣ ಶಿಕ್ಷೆ ಆಗುತ್ತದೆ. ನಾನಾ ಕಡೆಗಳಿಂದ ಬಂದು ಇಲ್ಲಿ ಸೈನ್ಯಕ್ಕೆ ಸೇರಿದ ಸರದಾರರು ತಮ್ಮ ತಮ್ಮ ಮತಾನುಸಾರ ನಡೆದುಕೊಳ್ಳುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ನರಸಿಂಗನ ರಾಜದ ಜೆಂಟೈಲರಲ್ಲಿ ಮೂರು ಪಂಗಡಗಳಿವೆ. ಪ್ರತಿಯೊಂದು ಪಂಗಡವೂ ತನ್ನದೇ ಆದ ರೀತಿನೀತಿ ನಿಯಮಗಳನ್ನು ಪಾಲಿಸುತ್ತದೆ ಮತ್ತು ಬೇರೆ ಪಂಗಡದಿಂದ ಭಿನ್ನವಾಗಿರುತ್ತದೆ.

ಈ ಪಂಗಡಗಳಲ್ಲಿ ಮುಖ್ಯವಾದುದು ರಾಜನ ಹಾಗೂ ಶ್ರೀಮಂತ ಸರದಾರರುಗಳ ಮತ್ತು ಯುದ್ಧ ಮಾಡುವ ಜನರಿಗೆ ಸಂಬಂಧಪಟ್ಟ ಪಂಗಡ. ಇವರು ತಮಗಿಷ್ಟ ಬಂದಷ್ಟು ಹೆಂಗಸರನ್ನು ಮದುವೆಯಾಗಬಹುದು. ಇವರ ಆಸ್ತಿಪಾಸ್ತಿಗೆ ಗಂಡುಮಕ್ಕಳೇ ಉತ್ತರಾಧಿಕಾರಿ ಗಳು. ಗಂಡ ಸತ್ತಾಗ ಹೆಂಡತಿ ಗಂಡನೊಡನೆ ಸಹಗಮನ ಮಾಡಲೇಬೇಕು. ಇದನ್ನು ಪತಿಭಕ್ತಿ ಎಂದು ಭಾವಿಸುತ್ತಾರೆ. ಬಡವಳಾದವಳು ತನ್ನ ಆತ್ಮಸಂತೋಷದಿಂದ ಸೀದಾ ಹೋಗಿ ಗಂಡನ ಚಿತೆಯಲ್ಲಿ ಬಿದ್ದು ಸಾಯುತ್ತಾಳೆ. ಅನುಕೂಲಸ್ತಳಾದವಳು ಚಿತೆಗೆ ಬೀಳುವ ಮುನ್ನ ನೆಂಟರಿಷ್ಟರನ್ನೆಲ್ಲಾ ಸೇರಿಸಿ ಊಟೋಪಚಾರ ಮಾಡಿ ಕುದುರೆಯ ಮೇಲೆ ಮೆರವಣಿಗೆ ಹೊರಡುತ್ತಾಳೆ. ಕುದುರೆ ಬೂದು ಬಣ್ಣದ್ದಿರಬೇಕು ಅಥವಾ ಬಿಳೀ ಬಣ್ಣದ್ದಿರಬೇಕು. ಕುದುರೆಯ ಮೇಲೆ ಮೆರವಣಿಗೆ ಹೊರಟು ಗಂಡನ ಚಿತೆ ಇರುವ ಬಳಿಗೆ ಹೋಗುತ್ತಾಳೆ. ಹೊಸದಾಗಿ ದೊಡ್ಡ ಚಿತೆಯನ್ನೇ ಮಾಡುತ್ತಾರೆ. ಸಿದ್ಧವಾದ ಚಿತೆಯ ಬಳಿಗೆ ಹೋಗಿ ಆಕೆ ಪೂರ್ವಾಭಿಮುಖವಾಗಿ ನಿಂತು ಮೂರು ಸಲ ನಮಸ್ಕಾರ ಮಾಡುತ್ತಾಳೆ. ಆ ಮೇಲೆ ತಾನು ತೊಟ್ಟ ಆಭರಣಗಳನ್ನೆಲ್ಲಾ ತನ್ನ ನೆಂಟರಿಷ್ಟರಿಗೆ ಹಂಚಿ ಬಿಡುತ್ತಾಳೆ. ಕೊನೆಗೆ ಸೊಂಟಕ್ಕೆ ಸುತ್ತಿದ ಬಟ್ಟೆ ಮಾತ್ರ ಉಳಿಯುತ್ತದೆ.

ಈ ಸ್ಥಿತಿಯಲ್ಲಿರುವ ಆಕೆ ಗಂಡಸರನ್ನು ಕುರಿತು ‘ನೋಡಿ, ಗಂಡನೊಡನೆ ಸಾಯುವ ಹೆಂಗಸಿಗೆ ನೀವೆಷ್ಟು ಕೃತಜ್ಞರಾಗಿರಬೇಕು ಎಂಬುದನ್ನು!’ ಎಂದು ಹೇಳುತ್ತಾಳೆ; ಹೆಂಗಸರನ್ನು ಕುರಿತು ‘ನಿಮ್ಮ ಪತಿಭಕ್ತಿ ಎಷ್ಟಿರಬೇಕು ಎಂಬುದನ್ನು ನೆನಸಿಕೊಳ್ಳಿ. ನನ್ನಂತೆ ನೀವೂ ನಿಮ್ಮ ಪತಿಯರನ್ನು ಅನುಸರಿಸಬೇಕು’ ಎನ್ನುತ್ತಾಳೆ.

ಇಷ್ಟು ಹೇಳಿದ ಮೇಲೆ ಆಕೆಯ ಕೈಗೆ ಎಣ್ಣೆಯ ಗಡಿಗೆಯನ್ನು ಕೊಡುತ್ತಾರೆ. ಆಕೆ ಅದನ್ನು ತಲೆಯ ಮೇಲಿಟ್ಟುಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾಳೆ. ಚಿತೆಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ಪೂರ್ವಾಭಿಮುಖವಾಗಿ ನಿಂತು ವಂದನೆಗೈಯ್ಯುತ್ತಾಳೆ. ಆ ಮೇಲೆ ಗಡಿಗೆಯ ಎಣ್ಣೆಯನ್ನು ಉರಿಯುವ ಚಿತೆಗೆ ಸುರಿದು, ಗಡಿಗೆಯನ್ನು ಅದರೊಳಗೆ ಎಸೆದು, ಚಿತೆಯೊಳಕ್ಕೆ ಧಮುಕುತ್ತಾಳೆ. ನೀರಿನ ಕೊಳಕ್ಕೆ ಧುಮುಕುವಷ್ಟು ಸಂತೋಷದಿಂದ ಆಕೆ ಉರಿಯುವ ಅಗ್ನಿ ಕುಂಡದಲ್ಲಿ ಧುಮುಕಿ ಬಿಡುತ್ತಾಳೆ. ಸುತ್ತ ನೆರೆದ ನೆಂಟರಿಷ್ಟರು ತಮ್ಮ ಕೈಯ್ಯಲ್ಲಿ ಹಿಡಿದಿರುವ ಎಣ್ಣೆ, ತುಪ್ಪ, ಒಣಸೌದೆಗಳನ್ನು ಆಕೆಯ ಮೇಲೆ ಹಾಕುತ್ತಾರೆ. ಆ ಅಗಾಧ ಜ್ವಾಲೆಯಲ್ಲಿ ಆಕೆ ಒಂದರಗಳಿಗೆಯಲ್ಲಿ ಸುಟ್ಟು ಭಸ್ಮವಾಗಿ ಬಿಡುತ್ತಾಳೆ. ಆಮೇಲೆ ಬೂದಿಯನ್ನು ಹರಿಯುವ ನದಿಗಳಿಗೆ ಬಿಡುತ್ತಾರೆ.

ಸಹಗಮನ ಮಾಡದ ಹೆಂಗಸರನ್ನು ಬಹಳ ಅಗೌರವದಿಂದ ಕಾಣುತ್ತಾರೆ. ಅವರ ತಲೆಯನ್ನು ಬೋಳಿಸಿ ಮನೆತನಕ್ಕೆ ಅಮಂಗಳವೆಂದು ಹೊರಗೆ ಅಟ್ಟುತ್ತಾರೆ. ಹೀಗೆ ಮನೆಯಿಂದ ಅಟ್ಟಲ್ಪಟ್ಟ ವಿಧವೆಯರು ದಿಕ್ಕಿಲ್ಲದೆ ಅಲೆಯುತ್ತಾರೆ. ಅತಿ ಚಿಕ್ಕ ವಯಸ್ಸಿನ ವಿಧವೆಯರ ಬಗ್ಗೆ ದಯಾ ದಾಕ್ಷಿಣ್ಯ ತೋರಿಸಿದ ಪಕ್ಷದಲ್ಲಿ, ಅವರನ್ನು ದೇವಸ್ಥಾನಗಳಿಗೆ ಕಳುಹಿಸಿ, ಅಲ್ಲಿ ದೇವಸ್ಥಾನಕ್ಕಾಗಿ ಹಣ ಗಳಿಸಲು ದೇವದಾಸಿಯರಾಗಿ ಬಿಡುತ್ತಾರೆ. ದೇವದಾಸಿಯರಿರುವ ದೇವಸ್ಥಾನಗಳು ಅನೇಕ ಇವೆ. ಅಲ್ಲಿ ಐವತ್ತರಿಂದ ನೂರು ದೇವದಾಸಿಯರಿರುವುದನ್ನು ನೋಡಬಹುದು. ಮದುವೆಯಾಗದ ಕೆಲವು ಹೆಂಗಸರು ತಮ್ಮ ಆತ್ಮಸಂತೋಷದಿಂದ ದೇವದಾಸಿಯರಾಗಿರುವುದೂ ಉಂಟು. ಇವರು ನಿಗದಿಯಾದ ವೇಳೆ ದೇವರ ಮುಂದೆ ನಿತ್ಯವೂ ಕುಣಿದು ಹಾಡುತ್ತಾರೆ. ಉಳಿದ ವೇಳೆಯನ್ನು ತಮಗಿಷ್ಟ ಬಂದ ರೀತಿಯಲ್ಲಿ ಕಳೆಯುತ್ತಾರೆ.

ರಾಜನು ಸತ್ತರೆ ಅವನ ಅಂತಃಪುರದ ನಾನೂರು ಐನೂರು ಸ್ತ್ರೀಯರೂ ಅವನೊಡನೆ ಚಿತೆಯಲ್ಲಿ ಬೀಳುತ್ತಾರೆ. ಇಷ್ಟು ಜನರ ಅನುಕೂಲಕ್ಕಾಗಿ ಚಿತೆಯ ಗುಂಡಿಯನ್ನೂ ಚಿತಾಗ್ನಿಯನ್ನೂ ಬಹಳ ದೊಡ್ಡದು ಮಾಡಿರುತ್ತಾರೆ. ಶ್ರೀಗಂಧ ಮುಂತಾದ ಮರಗಳನ್ನೂ ಎಣ್ಣೆ ತುಪ್ಪಗಳನ್ನೂ ಹೇರಳವಾಗಿ ಶೇಖರಿಸುತ್ತಾರೆ. ಈ ಚಿತೆಯಲ್ಲಿ ಬೀಳುವುದಕ್ಕೆ ನಾಮುಂದು ತಾಮುಂದು ಎಂದು ನುಗ್ಗುತ್ತಾರೆ. ಅದೊಂದು ಅಪೂರ್ವ ದೃಶ್ಯ! ರಾಜನ ಅನೇಕ ಅನುಚರರೂ ಇದೇ ರೀತಿ ರಾಜ ಸತ್ತಾಗ ಚಿತೆಯಲ್ಲಿ ಬೀಳುತ್ತಾರೆ.

ಈ ಪಂಗಡದ ಜನರು (ಕ್ಷತ್ರಿಯರು) ಗೊಮಾಂಸವನ್ನು ಬಿಟ್ಟು ಉಳಿದ ಮಾಂಸಗಳನ್ನೂ ಮೀನನ್ನೂ ತಿನ್ನುತ್ತಾರೆ.

ಇನ್ನೊಂದು ಪಂಗಡ ಬ್ರಾಹ್ಮಣರದು. ಇವರು ಪುರೋಹಿತರೂ, ದೇವಸ್ಥಾನಗಳಲ್ಲಿ ಅರ್ಚಕರೂ ಆಗಿದ್ದಾರೆ. ಇವರು ಮೀನು ಮಾಂಸ ತಿನ್ನುವುದಿಲ್ಲ. ಏಕಪತ್ನೀ ವ್ರತಸ್ಥರು; ಹೆಂಡತಿ ಸತ್ತರೆ ಇನ್ನೊಬ್ಬಳನ್ನು ಮದುವೆಯಾಗುವುದಿಲ್ಲ. ಮಕ್ಕಳೇ ಆಸ್ತಿಗೆ ಉತ್ತರಾಧಿಕಾರಿ ಗಳು. ಬ್ರಾಹ್ಮಣರೆಂಬ ಗುರುತಿಗಾಗಿ ಮೂರು ಎಳೆಯ ಜನಿವಾರ ಧರಿಸುತ್ತಾರೆ. ಇವರು ಸಂಪೂರ್ಣ ಸ್ವತಂತ್ರರು. ಏನು ಮಾಡಿದರೂ ಇವರಿಗೆ ಮರಣದಂಡನೆ ಇಲ್ಲ. ನೆಮ್ಮದಿಯಾಗಿ ಜೀವನ ನಡೆಸಿಕೊಂಡು ಹೋಗುತ್ತಾರೆ.

ಬ್ರಾಹ್ಮಣರನ್ನು ಜನರು ಬಹಳ ಗೌರವಿಸುತ್ತಾರೆ. ರಾಜನೂ, ಶ್ರೀಮಂತ ಸರದಾರರೂ, ಇತರ ಗೌರವ ಮನೆತನದವರೂ ಕೊಡುವ ದಾನಧರ್ಮಗಳಿಂದ ಇವರ ಜೀವನ ಸುಖವಾಗಿ ನಡೆಯುತ್ತದೆ. ಕೆಲವರು ಆಸ್ತಿಪಾಸ್ತಿಗಳನ್ನು ಮಾಡಿಕೊಂಡು ಶ್ರೀಮಂತರಾಗಿದ್ದಾರೆ. ಕೆಲವರು ಹೇರಳವಾದ ಆದಾಯ ಉಳ್ಳ ದೇವಸ್ಥಾನಗಳಲ್ಲಿ ಸೇರಿಕೊಂಡಿರುತ್ತಾರೆ. ಇವರಿಗೆ ಭೋಜನ ವೆಂದರೆ ಪಂಚಪ್ರಾಣ; ಭೋಜನ ಮಾಡುವುದಕ್ಕೇ ಹುಟ್ಟಿದಂತೆ ಕಾಣುತ್ತದೆ. ಭೋಜನವೆಂದರೆ ಯೋಜನವಾದರೂ ಹೋಗುತ್ತಾರೆ. ಅನ್ನ, ತುಪ್ಪ, ಸಕ್ಕರೆ, ತರಕಾರಿ ಮತ್ತು ಹಾಲು ಇವರ ಆಹಾರ.

ಮೂರನೆಯ ಪಂಗಡಕ್ಕೆ ಸೇರಿದವರು ಬ್ರಾಹ್ಮಣರಂತೆಯೇ ಇರುವ ಮತ್ತೊಂದು ತರ ಜನ. ಇವರು ಹುರಿಮಾಡಿದ ರೇಷ್ಮೆಯ ದಾರದಿಂದ ಮೊಟ್ಟೆ ಗಾತ್ರದ ಕಲ್ಲನ್ನು ಬಟ್ಟೆಯಲ್ಲಿ ಕಟ್ಟಿ ಕುತ್ತಿಗೆಗೆ ನೇತು ಹಾಕಿಕೊಳ್ಳುತ್ತಾರೆ. ಆ ಕಲ್ಲೇ ಇವರಿಗೆ ದೇವರಂತೆ. ಇವರಿಗೆ ಸಮಾಜದಲ್ಲಿ ಬಹಳ ಗೌರವ ಸನ್ಮಾನಗಳುಂಟು. ಇವರು ಕಟ್ಟಿಕೊಂಡ ಆ ಕಲ್ಲನ್ನು ತಬರೈನೇ[19] ಎಂದು ಕರೆಯುತ್ತಾರೆ. ಆ ಕಲ್ಲಿನ ಮೇಲಿನ ಗೌರವದಿಂದ ಇವರು ಏನು ಮಾಡಿದರೂ ಯಾರೂ ಇವರಿಗೆ ತೊಂದರೆ ಮಾಡುವುದಿಲ್ಲ. ಇವರೂ ಮೀನು ಮಾಂಸ ತಿನ್ನುವುದಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಇವರು ಅಡ್ಡಿಆತಂಕಗಳಿಲ್ಲದೆ ಹೋಗಬಹುದು.

ಇವರಲ್ಲಿ ವರ್ತಕರಾದವರು ವ್ಯಾಪಾರದ ಸಾಮಾನುಗಳನ್ನೂ ಹಣವನ್ನೂ ಹೇರಿಕೊಂಡು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಯಾವ ತೊಂದರೆಯೂ ಇಲ್ಲದೆ ಹೋಗುತ್ತಾರೆ. ಇವರಲ್ಲಿ ಕೆಲವರು ತಾವೇ ವ್ಯಾಪಾರ ಮಾಡುವುದೂ ಉಂಟು.

ಇವರು ಏಕಪತ್ನೀ ವ್ರತಸ್ಥರು. ಗಂಡಸತ್ತಾಗ ಹೆಂಡತಿ ಗಂಡನ ಶವದೊಡನೆ ಸಮಾಧಿಯಾ ಗುತ್ತಾಳೆ. ಒಂದಾಳು ಮಟ್ಟಕ್ಕಿಂತ ಹೆಚ್ಚು ಆಳವಾದ ಗುಂಡಿಯನ್ನು ತೋಡಿ, ಅದರೊಳಗೆ ಆಕೆಯನ್ನು ನಿಲ್ಲಿಸಿ, ಸುತ್ತಲೂ ಮಣ್ಣು ನೂಕಿ, ತುಳಿದು ದಮ್ಮಸ್ಸು ಮಾಡಿ, ತಲೆಯ ಮೇಲೆ ದೊಡ್ಡ ಕಲ್ಲು ಹೇರಿ ಮಣ್ಣನ್ನು ಎಳೆಯುತ್ತಾರೆ. ಆಕೆ ನಿಧಾನವಾಗಿ ಸಾಯುತ್ತಾಳೆ. ಇಂಥ ಸಂದರ್ಭಗಳಲ್ಲಿ ಅನೇಕ ಕರ್ಮಗಳನ್ನು ಮಾಡುತ್ತಾರೆ. ಎಂಥ ಕನಿಕರದ ಹಾಗೂ ಸಂಕಟದ ಸ್ಥಿತಿ! ಈ ಸ್ತ್ರೀಯರು ತಮ್ಮ ಆತ್ಮಸಂತೋಷದಿಂದ ಈ ಕ್ರೂರ ಅಂತ್ಯಕ್ಕೆ ಬಲಿಯಾಗಬೇಕಾದರೆ ಮತ್ತು ಕೇವಲ ಗೌರವಕ್ಕಾಗಿಯೇ ಈ ರೀತಿ ಮಾಡಬೇಕಾದರೆ ಈ ಪ್ರಪಂಚದ ಆಸೆ, ಗೌರವ, ಘನತೆಗಳಿಗೇನು ಬೆಲೆಯೆಂದು ನಾವು ಆಲೋಚನೆ ಮಾಡ ಬೇಕಾಗುತ್ತದೆ.

ಈ ಮಹಾನಾಡಿನ ಸ್ತ್ರೀಯರಿಗೆ ವಿಗ್ರಹಾರಾಧನೆಯಲ್ಲಿ ಎಷ್ಟು ಅಗಾಧ ಭಕ್ತಿಯೆಂದರೆ ಇವರು ಆ ವಿಗ್ರಹಗಳಿಗಾಗಿ ಎಂತಹ ಅದ್ಭುತ ಕೆಲಸಗಳನ್ನು ಬೇಕಾದರೂ ಮಾಡಬಲ್ಲರು. ತಾನು ಮೆಚ್ಚಿದ ನಲ್ಲನು ತನ್ನನ್ನು ಮದುವೆಯಾಗುವುದಾದರೆ ಇಂತಹ ಸೇವನೆಯನ್ನು ಮಾಡುವೆನೆಂದು ದೇವರಲ್ಲಿ ಹರಕೆ ಮಾಡಿಕೊಳ್ಳುತ್ತಾಳೆ. ತನ್ನಿಚ್ಛೆ ನೆರವೇರಿದಾಗ ಆಕೆ ಗಂಡನ ಅನುಮತಿ ಪಡೆದು ದೇವರಿಗೆ ತನ್ನ ರಕ್ತ ಚೆಲ್ಲುವ ಹರಕೆಯನ್ನು ಸಲ್ಲಿಸುತ್ತಾಳೆ. ಅದನ್ನು ನಡೆಸುವ ರೀತಿ ಹೀಗಿದೆ.

ಎತ್ತಿನಗಾಡಿಯ ಮೇಲೆ ಬಾವಿಯಿಂದ ನೀರೆತ್ತುವ ಏತದಂತಹ ಏತವನ್ನು ಹೂಡುತ್ತಾರೆ. ಆ ಏತದ ತುದಿಯಲ್ಲಿ ಎರಡು ಕಬ್ಬಿಣದ ಕೊಕ್ಕೆಗಳಿರುತ್ತವೆ. ಹರಕೆ ಸಲ್ಲಿಸುವ ಹೆಣ್ಣು ತನ್ನ ತಂದೆತಾಯಿ ಬಂಧುಬಳಗದೊಡಗೂಡಿ,  ವಾದ್ಯ ನೃತ್ಯಗಾಯನ ಸಮೇತ ಮೆರವಣಿಗೆ ಹೊರಡುತ್ತಾಳೆ. ಸೊಂಟದಿಂದ ಕೆಳಕ್ಕೆ ಮಾತ್ರ ಹತ್ತಿಯ ಬಟ್ಟೆಯನ್ನುಟ್ಟಿರುತ್ತಾಳೆ. ದೇವರ ಗುಡಿಯ ಮುಂದೆ ಹೆಬ್ಬಾಗಿಲಿನ ಬಳಿ ಏತದ ಗಾಡಿ ನಿಲ್ಲುತ್ತೆ. ಅಲ್ಲಿಗೆ ಹೋದ ಮೇಲೆ ಏತವನ್ನು ಬಗ್ಗಿಸಿ ಅದರ ತುದಿಯಲ್ಲಿರುವ ಕೊಕ್ಕೆಗಳನ್ನು ಸೊಂಟಕ್ಕೆ ಚುಚ್ಚುತ್ತಾರೆ. ಕೊಕ್ಕೆಗಳು ಚರ್ಮವನ್ನು ಹೊಕ್ಕು ಮಾಂಸಖಂಡಕ್ಕೆ ಚುಚ್ಚಿಕೊಳ್ಳುತ್ತವೆ. ಆಕೆಯ ಒಂದು ಕೈಗೆ ಕಠಾರಿಯನ್ನೂ, ಮತ್ತೊಂದು ಕೈಗೆ ಗುರಾಣಿಯನ್ನೂ ಕೊಡುತ್ತಾರೆ. ಅನಂತರ ಏತವನ್ನು ಮೇಲೆ ಎತ್ತುತ್ತಾರೆ. ಕೆಳಗೆ ನಿಂತ ಜನಸಮೂಹ ಉಘೇ ಎನ್ನುತ್ತದೆ. ಏತದಿಂದ ನೇತಾಡುವ ಆಕೆಯ ಸೊಂಟದಿಂದ ಹೊರಟ ರಕ್ತ ಕಾಲುಗಳ ಮೇಲೆ ಹರಿದು ತೊಟ್ಟಿಕ್ಕುತ್ತಿರುತ್ತದೆ. ಆದರೆ ಆಕೆ ಕೊಂಚವೂ ಮುಖ ಚುಳ್ಳಿಸದೆ ನಗುನಗುತ್ತ ತನ್ನ ಕಠಾರಿಯನ್ನು ಬೀಸುತ್ತಿರುತ್ತಾಳೆ; ತನ್ನ ಗಂಡನ ಕಡೆಗೂ ಸಂಬಂಧಿಗಳ ಕಡೆಗೂ ನಿಂಬೆಹಣ್ಣುಗಳನ್ನು ಎಸೆಯುತ್ತಿರುತ್ತಾಳೆ. ಈ ರೀತಿ ಸಿಡಿ ಆಡಿಸಿ ಆಕೆಯನ್ನು ದೇವರ ಮುಂದೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಆಕೆಯನ್ನು ಏತದಿಂದ ಇಳಿಸಿ ಗಾಯಗಳಿಗೆ ಔಷಧಿ ಹಾಕುತ್ತಾರೆ. ಆಕೆ ದೇವರಿಗೆ ಪೂಜೆಮಾಡಿ ನೆರೆದವರಿಗೂ ಬ್ರಾಹ್ಮಣರಿಗೂ ಸಂತರ್ಪಣೆ ನಡೆಸಿ ದಾನಧರ್ಮ ಮಾಡುತ್ತಾಳೆ. ಅಂದಿನಿಂದ ಆಕೆ ಗಂಡನ ಅಧೀನಳಾಗುತ್ತಾಳೆ.

ಈ ರಾಜ್ಯದಲ್ಲಿ ಮತ್ತೊಂದು ರೀತಿಯ ವಿಗ್ರಹಾರಾಧನೆ ನಡೆಯುತ್ತದೆ. ಮೂಢ ನಂಬಿಕೆಯಿಂದ ಅನೇಕ ಹೆಂಗಸರು ತಮ್ಮ ಕನ್ಯೆಯರನ್ನು ದೇವದಾಸಿಯರಾಗಿ ಬಿಡುತ್ತಾರೆ. ಅವರು ಹತ್ತು ವರ್ಷ ವಯಸ್ಕರಾದಾಗ ಅವರನ್ನು ಮದುವೆಯಲ್ಲಿ ಮೆರವಣಿಗೆ ಮಾಡಿದಂತೆ ಮೆರವಣಿಗೆ ಮಾಡುತ್ತ ಬಂಧುಬಳಗದೊಡನೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ದೇವಸ್ಥಾನದ ಬಾಗಿಲಿನ ಹೊರಗಡೆ ಮನುಷ್ಯನ ಎತ್ತರದ ಕಗ್ಗಲ್ಲು ಇರುತ್ತದೆ. ಇದರ ಸುತ್ತ ಮರದ ಕಟಕಟೆಯಿರುತ್ತದೆ. ಈ ಕಟಕಟೆಯ ಮೇಲೆ ಅನೇಕ ದೀಪಗಳನ್ನಿಟ್ಟು ಅಲಂಕರಿಸುತ್ತಾರೆ. ಸುತ್ತಲೂ ರೇಷ್ಮೆಯ ಪರದೆಯನ್ನು ಹಾಕುತ್ತಾರೆ. ಹೊರಗಡೆಯವರಾರಿಗೂ ಒಳಗೆ ನಡೆಯುವುದು ಕಾಣುವುದಿಲ್ಲ. ಮೇಲೆ ಹೇಳಿದ ಶಿಲೆಯ ಮೇಲೆ ಮನುಷ್ಯನ ಅರ್ಧದಷ್ಟು ಎತ್ತರದ ಇನ್ನೊಂದು ಶಿಲೆ ಇರುತ್ತದೆ. ಈ ಶಿಲೆಯ ಮಧ್ಯೆ ಒಂದು ಕುಳಿಯಿರುತ್ತದೆ. ಈ ಕುಳಿಗೆ ಚೂಪಾದ ಕಡ್ಡಿಯನ್ನು ಸಿಕ್ಕಿಸಿರುತ್ತಾರೆ. ಕನ್ಯೆಯ ತಾಯಿ ತನ್ನ ಮಗಳನ್ನೂ ಹತ್ತಿರದ ಸಂಬಂಧಿಗಳಾದ ಸ್ತ್ರೀಯರನ್ನೂ ಕಟಕಟೆಯೊಳಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಆದರೆ ಅವು ಹೊರಗಡೆಯವರಿಗೆ ಗೊತ್ತಾಗುವುದಿಲ್ಲ. ಅಂತೂ ಆ ವಿಧಿಗಳು ಮುಗಿದ ಮೇಲೆ ಕನ್ಯೆಯು ಅಲ್ಲಿ ಸಿಕ್ಕಿಸಿರುವ ಕಡ್ಡಿಯ ಸಹಾಯದಿಂದ ತನ್ನ ಕನ್ನೆತನವನ್ನು ನೀಗಿ ಕಲ್ಲುಗಳ ಮೇಲೆ ರಕ್ತವನ್ನು ಚೆಲ್ಲುತ್ತಾಳೆ.

ನರಸಿಂಗದ ರಾಜನಿಗೂ, ಆತನ ರಾಜ್ಯದ ಹೆಚ್ಚು ಭಾಗವನ್ನು ಗೆದ್ದುಕೊಂಡಿರುವ ದಖನ್ ರಾಜನಿಗೂ ಆಗಾಗ್ಗೆ ಯುದ್ಧಗಳಾಗುತ್ತಲೇ ಇರುತ್ತವೆ. ಹಾಗೆಯೇ ಜೆಂಟೈಲ್ ರಾಜನಾದ ಒಳನಾಡಿನಲ್ಲಿರುವ ಒಟಿರ (ಔಡ್ರಾ : ಒರಿಸ್ಸ) ರಾಜನಿಗೂ ಯುದ್ಧಗಳು ನಡೆಯುತ್ತಲೇ ಇರುತ್ತವೆ.

ಸಾಮಾನ್ಯವಾಗಿ ನರಸಿಂಗದ ರಾಜ ತಾನೇ ಸ್ವತಃ ಯುದ್ಧಕ್ಕೆ ಹೋಗುವುದಿಲ್ಲ; ಸೇನಾಧಿಪತಿಗಳನ್ನು ಕಳುಹಿಸುತ್ತಾನೆ. ಹೋಗಬೇಕಾಗಿ ಬಂದಾಗ ನಿರ್ಧಾರವಾದ ದಿನ ನಗರದ ಹೊರಗಡೆ ತನ್ನ ಮಂದಿಮಾರ್ಬಲ ಸಮೇತ ಹೋಗಿ ಯಾವ ದಿಕ್ಕಿಗೆ ಯುದ್ಧಕ್ಕೆ ಹೋಗಬೇಕೋ ಆ ದಿಕ್ಕಿಗೆ ಒಂದು ಬಾಣ ಬಿಡುತ್ತಾನೆ. ಇಂಥ ದಿನ ಯುದ್ಧಕ್ಕೆ ಹೊರಡ ಬೇಕೆಂದು ನಿರ್ಧರಿಸುತ್ತಾನೆ. ಈ ವಿಚಾರ ಇಡೀ ರಾಜ್ಯಕ್ಕೆಲ್ಲ ಗೊತ್ತಾಗುತ್ತದೆ. ರಾಜ ಊರ ಹೊರಗಡೆ ಹಾಕಿದ ಗುಡಾರಗಳಲ್ಲಿರುತ್ತಾನೆ. ಹೊರಡುವ ದಿನ ಬಂದಾಗ ಆತನ ಆಜ್ಞೆಯಂತೆ ನಗರವನ್ನು ಬೆಂಕಿ ಇಟ್ಟು ಸುಟ್ಟುಬಿಡುತ್ತಾರೆ. ಅರಮನೆಗಳು, ದುರ್ಗಗಳು, ದೇವಸ್ಥಾನಗಳು ಮತ್ತು ಶ್ರೀಮಂತ ಸರದಾರರ ಮನೆಗಳನ್ನು ಬಿಟ್ಟು ಉಳಿದ ಎಲ್ಲಾ ಮನೆ ಮಠಗಳನ್ನು ಸುಟ್ಟುಹಾಕುತ್ತಾರೆ. ಇದರ ಉದ್ದೇಶ ಊರಿನವರೆಲ್ಲ ಅವರ ಹೆಂಡತಿ ಮಕ್ಕಳ ಸಮೇತ ಯುದ್ಧಕ್ಕೆ ಹೊರಟು ರಾಜನೊಡನೆ ಹೋರಾಡಲಿ ಎಂದು. ಜನರು ಓಡಿಹೋಗದಿರಲೆಂದು ಅವರಿಗೆ ಕೈ ತುಂಬ ಸಂಬಳ ಕೊಡುತ್ತಾನೆ.

ಈ ಹೆಚ್ಚಿಗೆ ಸಂಬಳಕ್ಕೆ ಮೊದಲು ಅರ್ಹರು ಯಾರೆಂದರೆ ಮದುವೆಯಾಗದ ಹುಡುಗಿಯರು. ಇಂಥವರು ಬಹಳ ಜನ ಇರುತ್ತಾರೆ. ಇವರು ಯುದ್ಧ ಮಾಡದಿದ್ದರೂ ಇವರನ್ನು ಮೆಚ್ಚಿದ ಯೋಧರು ವೀರಾವೇಶದಿಂದ ಹೋರಾಡುತ್ತಾರೆ. ಈ ಯುವತಿಯರ ಮೇಲಿನ ಆಸೆಗಾಗಿ ಬೇರೆ ರಾಜ್ಯಗಳಿಂದಲೂ ಶ್ರೀಮಂತರೂ ಸರದಾರರೂ ಬಂದು ರಾಜನ ಸೈನ್ಯವನ್ನು ಸೇರಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಏಳೆಂಟು ಮುದ್ದು ಯುವತಿಯರನ್ನು ತಮ್ಮ ಸೇವೆಗೆ ಸೇರಿಸಿಕೊಂಡಿರುತ್ತಾರೆ. ಇವರಿಗೆ ರಾಜನ ಬೊಕ್ಕಸದಿಂದ ಸಂಬಳ ದೊರೆಯುತ್ತದೆ.

ಈ ಯುವತಿಯರು ಬಹಳ ಮಾನ್ಯತೆಯಿಂದ ಇರುತ್ತಾರೆ. ಇವರಿಗೆ ಯಾರೂ ವಾರಸುದಾರರು ಇಲ್ಲದೇ ಹೋದಾಗ ಇವರ ಇಡೀ ಆಸ್ತಿಯೆಲ್ಲ ರಾಜನಿಗೆ ಸೇರುತ್ತದೆ. ಒಂದು ಸಲ ಇಂಥವಳೊಬ್ಬಳು ಸತ್ತಾಗ ರಾಜನಿಗೆ ಅರುವತ್ತು ಸಾವಿರ ಚಿನ್ನದ ಪಾರ್ದೊಗಳು ಸಿಕ್ಕಿದುವು. ಇಷ್ಟಲ್ಲದೆ ಆಕೆ ಹನ್ನೆರಡು ಸಾವಿರ ಚಿನ್ನದ ಪರ್ದೊಗಳನ್ನು ತಾನು ಚಿಕ್ಕಂದಿನಿಂದ ಸಾಕಿದ್ದ ದಾಸಿಯೊಬ್ಬಳಿಗೆ ದಾನ ಮಾಡಿದ್ದಳು. ಈ ರಾಜನ ಅಪಾರ ಶ್ರೀಮಂತಿಕೆಗೆ ಇದೇನು ಹೆಚ್ಚಲ್ಲ. ಒಡವೆ ಮತ್ತು ವಜ್ರವೈಢೂರ್ಯಗಳೆಂದರೆ ರಾಜನಿಗೂ ಬಹಳ ಪ್ರೀತಿ. ಬಹಳ ಹಣಕೊಟ್ಟು ಕೊಂಡುಕೊಳ್ಳುತ್ತಾನೆ.

ಈ ರಾಜ್ಯದ ಜನರಿಗೆ ಮೃಗಪಕ್ಷಿಗಳ ಬೇಟೆಯಲ್ಲಿ ತುಂಬಾ ಆಸಕ್ತಿ. ದುಡಿಮೆ ಮಾಡುವ ತೊತ್ತುಗಳೂ ಅನೇಕ ಜನ ಇದ್ದಾರೆ.

ನರಸಿಂಗನ ರಾಜ್ಯವನ್ನು ದಾಟಿದರೆ ಸಿಕ್ಕುವುದು ಒಟಿರ (ಒರಿಸ್ಸಾ) ಎಂಬ ರಾಜ್ಯ. ಇಲ್ಲಿ ರಾಜನೂ ಪ್ರಜೆಗಳೂ ಜೆಂಟೈಲರು. ತುಂಬಾ ಶ್ರೀಮಂತನೂ ಶಕ್ತಿವಂತನೂ ಆಗಿದ್ದಾನೆ ರಾಜ. ಇವನಿಗೂ ನರಸಿಂಗದ ರಾಜನಿಗೂ ಆಗಾಗ್ಗೆ ಯುದ್ಧಗಳಾಗುತ್ತಲೇ ಇರುತ್ತವೆ.

—-
ಆಕರ: ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ (ಸಂಪುಟ-೨), ೧೯೬೬, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪುಟ ೨೮೦-೩೦೩.[1]      ಸಿಂತಕೊಲ : ಇದು ಅರಬ್ಬೀ ಪ್ರವಾಸಿಗಳು ಹೇಳಿರುವ ಚಿತ್ರಾಪುರ, ಚಕ್ರಕೂಟ ಅಥವಾ ಚಿತ್ರಗಿರಿ ಇರಬಹುದೆಂದು ಊಹೆ.

[2]      ನರಸಿಂಗ : ವಿಜನಯಗರ ರಾಜ್ಯವನ್ನು ಪೋರ್ಚುಗೀಸರು ನರಸಿಂಗ ರಾಜ್ಯವೆಂದು ವಾಸ್ಕೊ-ದ-ಗಾಮನು ಮೊದಲು ಇಂಡಿಯಾ ದೇಶಕ್ಕೆ ಬಂದಾಗ ಆಳುತ್ತಿದ್ದ ನರಸಿಂಹರಾಯನ ಹೆಸರಿನ ಮೇಲೆ ಕರೆದರು.

[3]      ಲೆಗ್ನಿ : ಇದು ಬಂಕಾಪುರವಿರಬೇಕೆಂದು ಲಾಂಗ್‌ವರ್ತ್ ಡೇಮ್ಸ್‌ರ ಅಭಿಪ್ರಾಯ. ಇದು ಧಾರವಾಡಕ್ಕೆ ನಲವತ್ತು ಮೈಲಿ ದೂರದಲ್ಲಿ ಸವಣೂರು ಬಳಿ ಹೊನ್ನಾವರದಿಂದ ವಿಜಯನಗರಕ್ಕೆ ಹೋಗುವ ಹೆದ್ದಾರಿಯಲ್ಲಿ ಸಿಕ್ಕುತ್ತದೆ. ಕ್ರಿ.ಶ. ೮೪೮ ರಿಂದಲೂ ಇದರ ಉಲ್ಲೇಖನವಿದೆ. ಕ್ರಿ.ಶ. ೧೫೭೩ ರ ವರೆಗೆ ಹಿಂದುಗಳೇ ಇಲ್ಲಿ ರಾಜರಾಗಿದ್ದರು. ಅನಂತರ ಅಲಿ ಅದಿಲ್ ಷಾ ಎಂಬುವನು ಇದರ ಮೇಲೆ ಮುತ್ತಿಗೆ ಹಾಕಿ ಇಲ್ಲಿದ್ದ ಸುಂದರ ದೇವಸ್ಥಾನವನ್ನು ನಾಶಮಾಡಿದನು.

[4]      ಮೆರ್ಜಿಯೋ : ಇದು ಈಗಿನ ಮಿರ್ಜಾನ್. ಈಗ ಇದು ಏನಿಲ್ಲದಿದ್ದರೂ ಹಿಂದೆ ಬಹು ಮುಖ್ಯವಾಗಿತ್ತೆಂದು ಕಾಣುತ್ತದೆ.

[5]      ಹೊನೋರ್: ಇದು ಇಲ್ಲಿ ಮಾತನಾಡುವ ಕನ್ನಡ ಭಾಷೆಯಿಂದ ಹೊನ್ನಿನ+ಊರು = ಹೊನ್ನೂರು=ಹೊನ್ನಾವರ ಆಗಿದೆ ಎಂಬುದಾಗಿ ಅಭಿಪ್ರಾಯವಿದೆ.

[6]      ದಾಮಾಚೇಟ್ : ಇದು ಮಹಮ್ಮದೀಯ ಹೆಸರಲ್ಲ. ದಾಮಶೆಟ್ಟಿ ಅಥವಾ ದಾಮಚೆಟ್ಟಿ ಎಂಬ ಹೆಸರಿರಬೇಕು.

[7]      ಪೂರ್ವದೇಶಗಳಲ್ಲಿ ದ್ವಂದ್ವಯುದ್ಧ ಸಾಮಾನ್ಯವಾಗಿರಲಿಲ್ಲ. ಆದರೂ ಬಾರ್ಬೊಸಾ ಜೊತೆಗೆ ಫೆರ‌್ನಾಂವ್ ನೂನಿಜ್ ಮತ್ತು ಮಾರ್ಕೊ ಪೋಲೋ ಈ ವಿಚಾರ ಹೇಳಿರು ವುದು ಗಮನಾರ್ಹ.

[8]      ಮಯಂದೂರ್ =  ಇದು ಬಹುಶಃ ಈಗಿನ ಬೈಂದೂರು. ಬಿಂದು ಎಂಬ ಋಷಿಯ ಹೆಸರಿನಿಂದ ಬಿಂದೂರು ಆಗಿ, ಆಮೇಲೆ ಬೈಂದೂರು ಆಗಿದೆಯೆಂದು ಅಭಿಪ್ರಾಯವಿದೆ.

[9]      ಈ ಪ್ರದೇಶದಲ್ಲಿ ಬೆಳೆಯುವ ನಾನಾ ತರಹ ಬತ್ತಗಳು ಈ ರೀತಿ ಇವೆ : ಜೀರಸಾಲೆ ಗಂಧಸಾಲೆ, ರಾಮಸಾಲೆ, ದಬ್ಬಣಸಾಲೆ, ಮೆಂತೆಸಾಲೆ, ಅಜಪಸಾಲೆ, ಕಲಮೇ, ಅಂಬಟ್ಟೇ, ದೊಡ್ಡರೆ, ಕಿನ್ನಿಬೀಜ, ಕಯಮೇ, ಸಮುಂಗೇ, ಮುಂಡಲೇ, ಬಿಳೀಹಳ್ಳಗ ಮತ್ತು ಕೆಂಪು ಹಳ್ಳಗ, ದಡ್ಡೇ, ಕಾಪಿಕಜೇ, ಕುದ್ರುಬೀಜ, ಸುಂಗಲ್, ಒಂತೆಕರೆ, ಕುಂದೆರಕುಟ್ಟಿ ಮತ್ತು ತೆಕ್ಕಂ ಬೊಲಿಯಾರಿ.

ಸಾಮಾನ್ಯವಾಗಿ ಈ ಬತ್ತಗಳನ್ನೆಲ್ಲಾ ಕುಸುವಿ ಅಕ್ಕಿಮಾಡುತ್ತಾರೆ. ಉತ್ತಮ ತರಹ ಬತ್ತಗಳಿಗೆ ‘ಮಸ್ಕತಿ’ ಎಂಬ ಸಾಮೂಹಿಕ ಹೆಸರುಂಟು. ಈ ಬತ್ತಗಳಿಂದ ಅಕ್ಕಿಮಾಡಿ ಮಸ್ಕಾತ್ ದೇಶಕ್ಕೆ ಕಳುಹಿಸುತ್ತಿದ್ದುದರಿಂದ ಮಸ್ಕತಿ ಎಂಬ ಹೆಸರು ಬರಲು ಕಾರಣವಾಯಿತು. ಈ ಮಸ್ಕತಿ ಅಕ್ಕಿಗೆ ಕಾವಿ ಬಣ್ಣಕಟ್ಟಿ ಇದನ್ನು ಗೋವೆಗೆ ರವಾನಿಸುತ್ತಿದ್ದರೆಂಬ ವಿಚಾರ ಬಸರೂರಿನಲ್ಲಿ ತಿಳಿದುಬಂದಿದೆ. ಕಂಬಳಿಯಲ್ಲಿ ಒಂದಿಷ್ಟು ಕಾವಿ ಬಣ್ಣ ಹಾಕಿ ಅದರೊಳಗೆ ಅಕ್ಕಿ ಸುರಿದು ಅಲ್ಲಾಡಿಸಿದರೆ ಬಣ್ಣ ಅಕ್ಕಿಗೆ ಅಂಟಿಕೊಳ್ಳುತ್ತಿತ್ತು.

[10]     ಬಾಕನೂರ್ : ಈ ಹೆಸರು ಹೇಗೆ ಬಂದಿತು ಎಂಬುದು ಸ್ಪಷ್ಟವಿಲ್ಲ. ಭೂತಾಳಪಾಂಡ್ಯನು ಬಾರಕೂರಿನಲ್ಲಿ ಅರಸನಾಗುವುದಕ್ಕೆ ಮುಂಚೆ ಇದಕ್ಕೆ ಜಯಂತಿಕಾ ನಗರವೆಂದು ಹೆಸರಿದ್ದಿತಂತೆ. ಇದು ವಾರಕೂಲ ಎಂಬ ಸಂಸ್ಕೃತ ಶಬ್ದದಿಂದ ಬಂದಿರಬಹುದೆಂಬ ಒಂದು ಅಭಿಪ್ರಾಯವಿದೆ. ವಾರ=ವಾರಿಧಿ=ಸಮುದ್ರ, ಕೂಲ=ದಡ – ಈ ಎರಡು ಪದಗಳು ಸೇರಿ ವಾರ ಕೂಲಪುರ ಎಂದಾಗಿ ಕಾಲಾಂತರದಲ್ಲಿ ಬಾರಕೂಲವೆಂದು ಕರೆಯಲ್ಪಟ್ಟು, ಅದೇ ಬಾರಕೂರು ಆಗಿರಬಹುದೆಂದು ಊಹಿಸಲಾಗಿದೆ. ಜೈನರಾಜನಾದ ಭೂತಾಳಪಾಂಡ್ಯನು ಬಾರಕೂರಿನಲ್ಲಿ ಆಳಿಕೊಂಡಿರುವಾಗ ಘಟ್ಟದ ಮೇಲೆ ವಾಸವಾಗಿದ್ದ ಜೈನ ವರ್ತಕನಾದ ಕೇಶವಣ್ಣನ ಆರು ಮಂದಿ ಕನ್ಯೆಯರನ್ನೂ, ಬಸವಣನ ಆರು ಮಂದಿ ಕನ್ಯೆಯರನ್ನೂ ಮದುವೆಯಾದ ಕಾರಣ ಬಾರಕನ್ಯಾ ಊರು ಆಗಿ, ಆಮೇಲೆ ಬಾರಕ್ಕ ಊರು ಆಗಿ, ಕ್ರಮೇಣ ಬಾರಕೂರು ಆಯಿತೆಂದೂ ಒಂದು ಐತಿಹ್ಯವಿದೆ. ಭೈರಾದೇವಿ ಎಂಬ ರಾಣಿ ಆಳಿಕೊಂಡಿದ್ದರಿಂದ ಇದಕ್ಕೆ ಭೈರಕ್ಕನೂರು ಅಥವಾ ಭಾರಕ್ಕ+ಊರು = ಭಾರಕೂರು ಎಂಬ ಹೆಸರು ಬಂದಿತೆಂಬ ಮತ್ತೊಂದು ಐತಿಹ್ಯವಿದೆ.

ಮಧುರೆಯ ರಾಜವಂಶದವರು ಪಾಂಡ್ಯನಗರವನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬಂದರೆಂದೂ, ಅವರ ಸಂತತಿಯವನಾದ ಭೂತಾಳಪಾಂಡ್ಯನೇ ಈ ಜಿಲ್ಲೆಯಲ್ಲಿರುವ ಅಳಿಯ ಸಂತಾನಕ್ಕೆ ಮೂಲ ಪುರುಷನೆಂದೂ ಹೇಳಲಾಗಿದೆ. ಭೂತಾಳಪಾಂಡ್ಯನ ಹುಟ್ಟು ಹೆಸರು ಜಯಪಾಂಡ್ಯ. ಈತನ ಸೋದರಮಾವ ದೇವಪಾಂಡ್ಯ ವ್ಯಾಪಾರಾರ್ಥರಾಗಿ ಒಂದು ದೊಡ್ಡ ಹಡಗನ್ನು ಕಟ್ಟಿಸಿ, ಅದನ್ನು ನೀರಿಗಿಳಿಸುವ ಸಮಾರಂಭದಲ್ಲಿ ಆ ಹಡಗಿನಲ್ಲಿದ್ದ ಭೂತರಾಜನಾದ ಕುಂಡೋದರನು ತನಗೆ ನರಾಹುತಿಯನ್ನು ಕೊಡದ ಹೊರತು ಹಡಗನ್ನು ನೀರಿಗಿಳಿಸಲಿಕ್ಕೆ ಬಿಡುವುದಿಲ್ಲವೆಂದು ಹೇಳಿದನಂತೆ. ತನ್ನ ಸ್ವಂತ ಮಕ್ಕಳನ್ನು ಬಲಿಕೊಡಲು ದೇವಪಾಂಡ್ಯನ ಹೆಂಡತಿ ಒಪ್ಪದೇ ಹೋದಳೆಂದೂ, ಅವನ ತಂಗಿ ತನ್ನ ಮಗನಾದ ಜಯಪಾಂಡ್ಯನನ್ನು ಕೊಡಲು ಒಪ್ಪಿದಳೆಂದೂ, ಅಷ್ಟರಿಂದಲೇ ಸಂತೃಪ್ತನಾದ ಕುಂಡೋದರ ತನಗೆ ನರಬಲಿಯ ಅಗತ್ಯವಿಲ್ಲವೆಂದು ಹೇಳಿ ಹಡಗನ್ನು ನೀರಿಗಿಳಿಸಲಿಕ್ಕೆ ಬಿಟ್ಟನೆಂದೂ ಕಥೆ ಇದೆ. ಆಗ ದೇವಾಪಾಂಡ್ಯ ಒಂದು ಶಾಸನಮಾಡಿ ಆ ಹಡಗಿನಲ್ಲಿ ತಂದ ಸರಕುಗಳಿಗೆ ತನ್ನ ಮಕ್ಕಳು ಬಾದ್ಯಸ್ತರಲ್ಲವೆಂದೂ, ಅವೆಲ್ಲಕ್ಕೂ ತನ್ನ ಸೋದರಳಿಯ ಜಯಪಾಂಡ್ಯನೇ ಬಾದ್ಯಸ್ತನೆಂದೂ, ತನ್ನ ಮರಣಾನಂತರ ತನ್ನ ಎಲ್ಲಾ ಚರಸ್ಥಿರ ಆಸ್ತಿಗಳಿಗೆ ಆತನೇ ಉತ್ತರಾಧಿಕಾರಿಯೆಂದೂ ಅಪ್ಪಣೆಮಾಡಿದನು. ಅಂದಿನಿಂದ ಜಯಪಾಂಡ್ಯನಿಗೆ ಭೂತಾಳ ಪಾಂಡ್ಯನೆಂಬ ಹೆಸರಾಯಿತು. ಭೂತಾಳಪಾಂಡ್ಯನು ಕುಂಡೋದರನ ಆಜ್ಞಾನುಸಾರವಾಗಿ ತನ್ನ ಪ್ರಜೆಗಳು ಅಳಿಯಸಂತಾನ ಕಟ್ಟನ್ನು ಅನುಸರಿಸುವಂತೆ ಕಟ್ಟಾಜ್ಞೆ ಮಾಡಿದನು. ಅಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೈನರು, ಭಂಟರು, ಭಿಲ್ಲವರು ಮತ್ತು ಇತರ ತುಳು ಜಾತಿಯವರು ಈ ಕ್ರಮವನ್ನು ಅನುಸರಿಸಲಾರಂಭಿಸಿದರು.

ಸೀತಾನದಿಯ ದಂಡೆಯ ಮೇಲಿರುವ ಬಾರಕೂರು ಪಟ್ಟಣವು ಮೊದಲು ವ್ಯಾಪಾರದ ಹೆದ್ದಾರಿಯಾಗಿದ್ದಿತು. ಇದು ಸಮುದ್ರತೀರದಿಂದ ಮೂರು ಮೈಲಿಯ ದೂರದಲ್ಲಿ ನದಿಯ ದಂಡೆಯ ಮೇಲಿದ್ದರೂ ಅಲ್ಲಿಯವರೆಗೆ ವ್ಯಾಪಾರದ ಹಡುಗಳು ಬರುತ್ತಿದ್ದುವೆಂದೂ, ಆದರೆ ಈಚೆಗೆ ನದೀಮುಖವು ಮರಳಿನಿಂದ ಮುಚ್ಚಿಹೋಗಿ ಹಡಗುಗಳು ಬರುವುದು ನಿಂತುಹೋಯಿತೆಂದೂ ಗೊತ್ತಾಗುತ್ತದೆ. ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಿಜಯನಗರದ ಹರಿಹರ ರಾಯನ ಕೈವಶವಾಗಲು ಬಾರಕೂರು ಸಂಸ್ಥಾನಾಧಿಪತಿ ಅವನ ಮಾಂಡಲಿಕನಾಗಿ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದನು. ಕ್ರಿ.ಶ. ೧೫೦೬ರಲ್ಲಿ ವಿಜಯನಗರದ ನರಸಿಂಗರಾಯನು ಕೆಳದಿಯ ಬಸವ ಅರಸು ಒಡೆಯನನ್ನು ಬಾರಕೂರಿನ ರಾಜನಾಗಿ ನೇಮಿಸಿದುದರಿಂದ ಅದು ಇಕ್ಕೇರಿಯ ನಾಯಕರ ಸ್ವಾಧೀನವಾಯಿತು. ಕ್ರಿ.ಶ. ೧೪೯೮ರಲ್ಲಿ ವಾಸ್ಕೊ-ದ-ಗಾಮಾ ಇಂಡಿಯಾಕ್ಕೆ ಬಂದಮೇಲೆ ಕ್ರಿ.ಶ. ೧೫೨೮ರಲ್ಲಿ ಬಾರಕೂರಿನ ಮಂಡಳಾಧಿಪತಿ ಒಳ್ಳೆಯ ಮೆಣಸನ್ನು ಬಂದರಿಗೆ ತರುವ ಉದ್ದೆಶದಿಂದ ಊರಿನ ಕಿರಿ ಮಂಜಿಗಳಿಗೆ ಆಶ್ರಯ ಕೊಟ್ಟನೆಂಬ ಕಾರಣ ಪೋರ್ಚುಗೀಸರ ವೈಸರಾಯ್ ಸಂಪಾಯೊ ಎಂಬುವನು ತಾನೇ ಸ್ವತಃ ನೌಕಾಪಡೆಯನ್ನು ತೆಗೆದುಕೊಂಡು ಬಂದು ಬಾರಕೂರನ್ನು ಸುಟ್ಟುಬಿಟ್ಟನು. ಇಕ್ಕೇರಿಯ (ಕೆಳದಿಯ) ವೆಂಕಟಪ್ಪನಾಯಕನು ಕ್ರಿ.ಶ. ೧೫೮೨ ರಿಂದ ಕ್ರಿ.ಶ. ೧೬೨೯ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳಿಕೊಂಡಿದ್ದಾಗ ಗೇರುಸೊಪ್ಪೆಯ ಜೈನ ಭೈರಾರಾಣಿ ಬಸರೂರನ್ನು ಬಿಜಾಪುರ ಸುಲ್ತಾನನಾಗಿದ್ದ ಅದಿಲ್‌ಷಹನಿಗೆ ಬಿಟ್ಟುಕೊಟ್ಟ ಕಾರಣ ನಾಯಕನು ಅವಳ ಮೇಲೆ ಕೋಪಗೊಂಡು ಬಾರಕೂರು ನಗರವನ್ನು ಸುಟ್ಟುಸೂರೆ ಮಾಡಿದನು. ಇಕ್ಕೇರಿ ನಾಯಕರ ತರುವಾಯ ಹೈದರಾಲಿ ಬಾರಕೂರಿನಲ್ಲಿ ಒಬ್ಬ ಮುಸಲ್ಮಾನ ಪ್ರತಿನಿಧಿಯನ್ನು ನೇಮಿಸಿ ರಾಜ್ಯಾಡಳಿತ ನಡೆಸಿದನು. ಆಮೇಲೆ ಅವನ ಮಗ ಟಿಪ್ಪುಸುಲ್ತಾನನಿಂದ ಇಂಗ್ಲಿಷರು ಬಾರಕೂರನ್ನು ಗೆದ್ದುಕೊಂಡರು.

ಬಾರಕೂರಿನಲ್ಲಿ ಈಗ ಮುಚ್ಚಲ್ಪಟ್ಟಿರುವ ಸಿದ್ಧರಸ ಮತ್ತು ಪಾದರಸ ಎಂಬ ಬಾವಿಗಳು ಹಿಂದೆ ಇದ್ದುವೆಂದು ಹೇಳುತ್ತಾರೆ. ಇಲ್ಲಿ ಕೋಟೆಕೇರಿ, ಮೂಡುಕೇರಿ, ಮಣಿಗಾರಕೇರಿ ಮತ್ತು ಚೌಳಿಕೇರಿಗಳೆಂಬ ನಾಲ್ಕು ಮುಖ್ಯ ಕೇರಿಗಳಿವೆ. ಇದಲ್ಲದೆ ಭಂಡಾರ ಕೇರಿ ಮತ್ತು ಬಳೆಗಾರಕೇರಿಗಳೆಂಬ ಸಣ್ಣ ಕೇರಿಗಳಿವೆ. ಬಾರಕೂರು ಈಗ ಹಾಳುಬಿದ್ದ ಊರು.

[11]     ಬಸಲೋರ್ = ಬಸರೂರು : ೧೩ನೇ ಶತಮಾನದಲ್ಲಿ ಅಲೂಪ ವಂಶದ ವಿಬುಧ ವಸು ಚಕ್ರವರ್ತಿ ಎಂಬುವನು ಆಳುತ್ತಿದ್ದಾಗ ಇದು ಅವನ ರಾಜಧಾನಿಯಾಗಿದ್ದುದರಿಂದ ಈ ಊರಿಗೆ ವಸುಪುರ, ಕಾಲಕ್ರಮೇಣ ಬಸುಪುರ, ಬಸುಊರು, ಬಸರೂರು ಆಯಿತೆಂದು ಹೇಳಲಾಗಿದೆ. ವಾರಾಹಿ ನದಿಯ ದಂಡೆಯ ಮೇಲೆ ಸಮುದ್ರ ತೀರದಿಂದ ಮೂರು ಮೈಲಿ ದೂರದಲ್ಲಿರುವ ಈ ಊರಿಗೆ ಹಿಂದೆ ಹಡಗುಗಳು ಬರುತ್ತಿದ್ದುವೆಂದೂ, ನದಿಯ ಮುಖ ಮರಳಿನಿಂದ ಮುಚ್ಚಿ ಹೋದಮೇಲೆ ಹಡಗುಗಳು ಬರುವುದು ನಿಂತುಹೋಯಿತೆಂದೂ ಗೊತ್ತಾಗುತ್ತದೆ. ಮೊದಲಿಗೆ ಈ ಊರಿಗೆ ಶುಕ್ತಿಮತಿಯೆಂಬ ಹೆಸರಿತ್ತೆಂದು ಬಸರೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೇಳುವ ಸಂಕಲ್ಪಮಂತ್ರದಿಂದ ತಿಳಿದುಬರುತ್ತದೆ. ಈ ಊರಿನಲ್ಲಿ ಏಳು ಕೇರಿ, ಏಳು ಕೆರೆ ಮತ್ತು ಏಳು ದೇವಸ್ಥಾನಗಳಿವೆ. ಮೂಡುಕೇರಿ, ಬಸದಿ ಕೇರಿ, ವಿಲಾಸ ಕೇರಿ, ಮಂಡಿಕೇರಿ, ರಾಹುತಕೇರಿ, ಗುಡಿಗಾರಕೇರಿ ಮತ್ತು ಅಗ್ರಹಾರ ಕೇರಿಗಳೇ ಆ ಏಳು ಕೇರಿಗಳು. ಈ ಕೇರಿಗಳ ಹೊರಭಾಗದಲ್ಲಿ ದ್ವಾರಗಳಿದ್ದು ಅವುಗಳನ್ನು ರಾತ್ರಿ ಕಾಲದಲ್ಲಿ ಮುಚ್ಚುತ್ತಿದ್ದರೆನ್ನುವುದಕ್ಕೆ ಕುರುಹುಗಳಿವೆ. ಹಿಂದೆ ಕಲ್ಲಿನಿಂದ ಕಟ್ಟಿದ ಡಾಕ್‌ಗಳ ಗುರುತುಗಳೂ ಇವೆ.

ಕ್ರಿ.ಶ. ೧೪೧೭ ರಿಂದ ಕ್ರಿ.ಶ. ೧೪೪೬ರವರೆಗೆ ಆಳಿದ ವಿಜಯನಗರದ ಪ್ರೌಢದೇವರಾಯ ಬಸರೂರಿನ ದೇವಸ್ಥಾನ ಮತ್ತು ಛತ್ರಗಳಿಗೆ ಉಂಬಳಿ ಬಿಟ್ಟಿರುವನೆಂಬ ಶಿಲಾಶಾಸನಗಳಿವೆ.

ಕ್ರಿ.ಶ. ೧೫೨೪ ರಲ್ಲಿ ವಾಸ್ಕೋ-ದ-ಗಾಮಾ ಈ ಊರಿನ ಮೇಲೆ ಧಾಳಿ ಮಾಡಿ ಇದನ್ನು ವಶಪಡಿಸಿಕೊಂಡು ೫೦೦ ಮುಡಿ ಅಕ್ಕಿಯನ್ನು ಆಗ್ಗೆ ಪಾಳೆಯಗಾರನಾಗಿದ್ದ ತೊಳಹಾರನೆಂಬುವನು ಕಪ್ಪವಾಗಿ ಕೊಡಬೇಕೆಂದು ಕಡ್ಡಾಯ ಮಾಡಿದನು. ತೊಳಹಾರನಿಗೂ ಪೋರ್ಚುಗೀಸರಿಗೂ ಕ್ರಿ.ಶ. ೧೫೬೬ ಮತ್ತು ಕ್ರಿ.ಶ. ೧೫೭೧ ರಲ್ಲಿ ಯುದ್ಧವಾಗಿ ಕೊನೆಗೆ ಸಂಧಾನದಲ್ಲಿ ಪೋರ್ಚುಗೀಸರು ಇಲ್ಲಿ ಒಂದು ಕೋಟೆ ಕಟ್ಟಬಹುದೆಂಬ ಒಪ್ಪಂದವಾಯಿತು. ಪಾಶ್ಚಿಮಾತ್ಯ ರಾಷ್ಟ್ರೀಯ ಮುದ್ರೆ ಇರುವ – ಆಕಡೆ ಈಕಡೆ ಗಂಡಭೇರುಂಢ, ಅವೆರಡರ ಮಧ್ಯೆ ಶಿಲುಬೆ ಇರುವ – ಮರದ ಕೆತ್ತನೆ ಕೆಲಸವೊಂದು ಒಬ್ಬ ಅರ್ಚಕರ ಮನೆಯ ಕಿಟಕಿಯಾಗಿ ಈಗ ಉಪಯೋಗಿಸಲ್ಪಡುತ್ತಿದೆ. ಕ್ರಿ.ಶ. ೧೬೩೦ ರಿಂದ ಕ್ರಿ.ಶ. ೧೬೪೬ ರವರೆಗೆ ಆಳಿದ ವೀರಭದ್ರನಾಯಕನ ಕಾಲದಲ್ಲಿ ಪೋರ್ಚುಗೀಸರಿಗೆ ಇಲ್ಲಿ ಕೋಟೆ ಕಟ್ಟುವ ಅನುಮತಿ ದೊರಕಿತು. ಬಳಿಕ ಬಸರೂರು ಕೆಳದಿ ನಾಯಕರ ಆಳಿಕೆಗೊಳಗಾಯಿತು. ಆಮೇಲೆ ಕ್ರಿ.ಶ. ೧೭೭೩ ರಲ್ಲಿ ಹೈದರಾಲಿಯ ವಶವಾಯಿತು. ಟಿಪ್ಪುವೂ  ಬಸರೂರನ್ನು ಸಂದರ್ಶಿಸಿದ್ದನೆಂದು ಕಾಣುತ್ತದೆ.

ಈ ಊರು ವಿವಿಧ ಕಲೆಗಳಿಗೆ ಆಶ್ರಯವಾಗಿದ್ದಿತು. ಗುಡಿಗಾರ, ಕಂಚುಗಾರ, ಪಟಿಗಾರ ಮತ್ತು ನೇಕಾರ – ಇವರುಗಳಿದ್ದರು. ಇಲ್ಲಿ ಈಗ ಗುಡಿಗಾರರ ಒಂದೇ ಒಂದು ಮನೆ ಇದೆ. ಮರದ ಬೊಂಬೆಗಳನ್ನು ಮಾಡಿ ಬಣ್ಣಹಾಕುವ ಒಳ್ಳೆಯ ಕಲೆಯನ್ನು ಇನ್ನೂ ಈ ಗುಡಿಗಾರರು ನಡೆಸಿಕೊಂಡು ಬರುತ್ತಿದ್ದಾರೆ.

ಬಸರೂರಿನ ಬಂದರಿನ ವಿಚಾರವಾಗಿ ಬಿದನೂರಿನ ಅರಸನಿಗೂ ಪೋರ್ಚುಗೀಸರಿಗೂ ವಿವಾದ ಉಂಟಾದಾಗ ಒಂದು ಪಂಚಾಯ್ತಿ ನಡೆಯಿತಂತೆ. ಆ ಪಂಚಾಯ್ತಿಯ ಕಾರಣ ಬಸರೂರು ಬಿದನೂರು ಅರಸನದೆಂದೂ ತೀರ್ಮಾನವಾಗಿ, ಪೋರ್ಚುಗೀಸರು ಇಲ್ಲಿ ವ್ಯಾಪಾರದ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ದೊರೆಯಿತು. ಅಂದಿನಿಂದ ‘ಬಸರೂರು ಪಂಚಾಯಿತಿ’ ಎಂದು ಜನ ಆಡಿಕೊಳ್ಳಲು ಆರಂಭಿಸಿದರಂತೆ.

ಇಲ್ಲಿಯ ಭಂಟರನ್ನು ನಾಡವರೆಂದು ಕರೆಯುತ್ತಾರೆ. ಇವರು ಕನ್ನಡ ನಾಡಿನವರೆಂದೂ, ಬೇಲೂರು ಸಾಗರ ಮುಂತಾದ ಕಡೆಗಳಿಂದ ಬಂದು ಇಲ್ಲಿ ನೆಲಸಿದರೆಂದೂ ಹೇಳುತ್ತಾರೆ. ‘ಸುಭಟರ್ಕಳ್, ಕವಿಗಳ್, ಸುಪ್ರಭುಗಳ್, ಚೆಲ್ವರ್ಕಳ್,’ ಎಂಬಲ್ಲಿ ನಾಡ ವರ್ಗಳ್ ಎಂದರೆ ನಾಡವರೆಂದೂ, ಅವರು ಕನ್ನಡನಾಡಿನವರೆಂದು ಅರ್ಥವೆಂದೂ ಹೇಳಲಾಗಿದೆ. ತುಳುನಾಡಿನಲ್ಲಿ ಬಂದು ನೆಲಸಿದ ಈ ಕನ್ನಡಿಗರ ಕಾರಣ ಇಲ್ಲಿ ಕನ್ನಡ ಭಾಷೆ ಮನೆ ಮಾತಾಗಲು ಕಾರಣವಾಯಿತಂತೆ.

ಈ ಊರಿನಲ್ಲಿ ಈಗಲೂ ಹೇಳುತ್ತಾರೆ ಬಸರೂರಿನ ಅವನತಿಗೆ ಕಾರಣ ಶಿವಾಜಿಯ ಕೊಳ್ಳೆ, ಟಿಪ್ಪು ಸಿಟ್ಟು, ಬಸರೂರಿಗೆ ಪೆಟ್ಟು ಎಂದು.

ಪೋರ್ಚುಗೀಸರ ಮತಾಂತರದ ಹಾವಳಿಯನ್ನು ತಪ್ಪಿಸಿಕೊಳ್ಳಲು ಗೋವೆಯಿಂದ ಗೌಡಾಸಾರಸ್ವತರು ಮೊಟ್ಟಮೊದಲಿಗೆ ಬಸರೂರಿಗೆ ಬಂದರೆಂದು ಹೇಳುತ್ತಾರೆ. ಇದಕ್ಕೆ ಆಧಾರ ಗೋವೆ ಬಿಟ್ಟರೆ ಈ ಊರಿನಲ್ಲಿರುವ ಮಹಾಲಸ ನಾರಾಯಣಿ, ಶಾಂತೇರಿ ಕಾಮಾಕ್ಷಿ ಮತ್ತು ಶ್ರೀಲಕ್ಷ್ಮಿದಾಮೋದರ ಎಂಬ ಮೂರು ದೇವಸ್ಥಾನಗಳು.

ಈ ಊರಿನ ಪ್ರತಿಯೊಂದು ಮನೆಯ ಹಿತ್ತಲಿನಲ್ಲಿ ಎರಡು ಮೂರು ಬಾವಿಗಳಿವೆ. ಅಲ್ಲದೆ ದನಗಳಿಗೆ ನೀರು ಕುಡಿಯಲು ಕಲ್ಲುಮರಿಗೆ, ಬಾವಿ ಮತ್ತು ನಿಲುಸುಕಲ್ಲು – ಇವನ್ನು ಧರ್ಮಾರ್ಥವಾಗಿ ಮಾಡಿಸಿದ ಹಲವಾರು ಸ್ಥಳಗಳುಂಟು.

[12]     ಬತ್ತವನ್ನು ಕುಸುವಿ, ಕುಟ್ಟಿ, ಅಕ್ಕಿಮಾಡಿ, ಬತ್ತದ ಹುಲ್ಲಿನಲ್ಲಿ ‘ಮುಡಿ’ ಕಟ್ಟುವುದು ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಪದ್ಧತಿ. ಹೀಗೆ ಮುಡಿ ಕಟ್ಟಿದ ಅಕ್ಕಿ ಎರಡು ವರ್ಷಗಳವರೆಗೆ ಕೆಡದೆ ಇರುತ್ತದೆ. ಒಂದು ಮುಡಿಯಲ್ಲಿ ಒಂದು ‘ಮುರ’ ಅಕ್ಕಿ ಇರುತ್ತದೆ. ಒಂದು ಮುರ ಎಂದರೆ ಎಂಬತ್ತು ತೊಲ ತೂಕದ ೪೨ ಸೇರು ಅಕ್ಕಿ. ಮುಡಿಗೆ ಮಾನಿಗೆ ಎಂಬ ಹೆಸರೂ ಬಸರೂರು ಕಡೆ ಉಂಟು. ಫನೆಗಾ ಎಂದು ಬಾರ್ಬೊಸಾ ಉಪಯೋಗಿಸಿರುವ ಪದ ಮಾನಿಗೆ ಎಂಬುದರ ಅಪಭ್ರಂಶವಿರಬಹುದೆ? ಮುಡಿಗಳಲ್ಲಿ ಕಂಚಿನ ಮುಡಿ ಮತ್ತು ರಸ್ತುಮುಡಿ ಎಂದೂ ಉಂಟು. ಕಂಚಿನ ಮುಡಿಗೆ ನಾಲ್ಕು ಕಳಸಿಗೆಗಳು. ಒಂದು ಕಳಸಿಗೆಗೆ ೧೪ ಸೇರುಗಳು. ರಸ್ತುಮುಡಿಗೆ ೬೦ ಸೇರುಗಳು.

[13]     ಇಲ್ಲಿ ನೇತ್ರಾವತಿ ಮತ್ತು ಗುರುಪುರ (ಫಲ್ಗುಣೀ) ನದಿಗಳನ್ನು ಕುರಿತು ಹೇಳಲಾಗಿದೆ.

[14]     ‘ಭರತಖಂಡದ ಪಶ್ಚಿಮ ಕರಾವಳಿಯಲ್ಲಿ ಪಶ್ಚಿಮಘಟ್ಟವೆಂಬ ಸಹ್ಯಾದ್ರಿಯ ಪಡುಗಡೆಗೆ, ಬಡಗಲು ಮುಂಬಯಿ ಆಧಿಪತ್ಯದ ಠಾಣಾ ಜಿಲ್ಲೆಯಲ್ಲಿಯ ವೈತರಣೀ ನದಿಯಿಂದ ತೆಂಕಲು ಕನ್ಯಾಕುಮಾರೀ ಭೂಶಿರದ (Cape Comorin) ವರೆಗೆ ಚಾಚಿರುವ ಪ್ರದೇಶವು ಪ್ರಾಚೀನ ಕಾಲದಿಂದ ಶೂರ್ಪಾರಕ ಕ್ಷೇತ್ರ ಅಥವಾ ಶೂರ್ಪಾರಕ ದೇಶವೆಂದೂ, ಪರಶುರಾಮನು ‘ಹುತವಹ ಬಾಣದಿಂದ ಮಿಸೆ ತೂಳ್ದ’ (ಗದಾಯುದ್ಧ I, ೨೪) ಸಮುದ್ರವು ಆತನಿಗೆ ಬಿಟ್ಟುಕೊಟ್ಟ ಹೊಸ ಭೂಮಿ ಅದೆಂಬ ಐತಿಹ್ಯದ ಮೇರೆಗೆ ಪರಶುರಾಮ ಸೃಷ್ಟಿ ಅಥವಾ ಪರಶುರಾಮ ಭೂಮಿ ಎಂದು ಕರೆಯಲ್ಪಡುತ್ತದೆ; ಉದಾ:-

೧.   ಸ್ಕಾಂದಪುರಾಣದ ಸಹ್ಯಾದ್ರಿ ಖಂಡದಲ್ಲಿ –

ನವೀನಂ ನಿರ್ಮಿತಂ ಕ್ಷೇತ್ರಂ ಶೂರ್ಪಾರಕಮನುತ್ತಮಮ್

ವೈತರಣ್ಯಾ ದಕ್ಷಿಣೇತು ಸುಬ್ರಹ್ಮಣ್ಯಾಸ್ತಥೋತ್ತರೇ |

ಸಹ್ಯಾತ್ಸಾಗರ ಪರ್ಯಂತರ ಶೂರ್ಪಾರಕಂ ವ್ಯವಸ್ಥಿತಮ್

೨.   ಮಹಾಭಾರತದ ಶಾಂತಿ ಪರ್ವ (ಅಧ್ಯಾಯ ೪೯)

ತತಃ ಶೂರ್ಪಾರಕಂ ದೇಶಂ ಸಾಗರಸ್ತಸ್ಯ ನಿರ್ಮಮೇ |

ಸಹಸಾ ಚಾಮದಗ್ನ್ಯಸ್ಯ ಸೋಪಾರಾಂತ ಮಹೀತಲಮ್’

– ತೆಂಕನಾಡು ಎಂಬ ಪುಸ್ತಕದಲ್ಲಿ ಗೋವಿಂದ ಪೈ ಅವರ ತುಳುನಾಡು ಎಂಬ ಲೇಖನದಿಂದ ಉದ್ಧೃತ.

[15]     ಸುಮಾರು ನೂರನಲವತ್ತು ಮೈಲಿ.

[16]     ಈ ಕಾಲದಲ್ಲಿ ಆಳುತ್ತಿದ್ದವನು ಕೃಷ್ಣದೇವರಾಯ.

[17]     ಪರ್ದೋ : ಪ್ರತುಪ ಎಂಬ ನಾಣ್ಯದ ಅಪಭ್ರಂಶ.

[18]     ರಾಜನು ಈ ರೀತಿಯ ಶಿಕ್ಷೆ ಕೊಡುತ್ತಿದ್ದುದು ಸುಳ್ಳೆಂದೂ, ಕೇವಲ ಗದರಿಸಿ ಕಳುಹಿಸುತ್ತಿದ್ದನೆಂತಲೂ ಒಬ್ಬರ ಅಭಿಪ್ರಾಯ.

[19]     ತಬರೈನೇ : ಇದು ಬಾರ್ಬೊಸನಿಗೆ ಬರುತ್ತಿದ್ದ ಮಲೆಯಾಳೀ ಭಾಷೆಯ ಪದವಿರಬೇಕೆಂದೂ, ತಾಂಬರನೇ ಎಂದರೆ ದೇವ ಅಥವಾ ಒಡೆಯ ಎಂದು ಅರ್ಥವೆಂದೂ, ಮಲೆಯಾಳಿಯಲ್ಲಿ ತುಂಬರಾನ್, ತಮಿಳಿನಲ್ಲಿ ತಂಬರಾನ್ ಎಂಬ ಪದಗಳು ಇದೇ ಅರ್ಥ ಕೊಡುತ್ತವೆಯೆಂದೂ ವಿದ್ವಾಂಸರ ಅಭಿಪ್ರಾಯ.