ರಾಜನಿಗೆ ಹನ್ನೆರಡು ಧರ್ಮಪತ್ನಿಯರು. ಅವರಲ್ಲಿ ಮೂವರು ಮುಖ್ಯರು. ಅವರಲ್ಲಿ ಪ್ರತಿಯೊಬ್ಬರ ಪುತ್ರರು ರಾಜ್ಯಕ್ಕೆ ವಾರಸುದಾರರು, ಮಿಕ್ಕವರಲ್ಲ. ಅಂದರೆ, ಅವರೆಲ್ಲರಿಗೂ ಪುತ್ರರಿದ್ದರೆ. ಆದರೆ, ಒಬ್ಬನೇ ಮಗನಿದ್ದಾಗ ಅವನು ಯಾರ ಪುತ್ರನೇ ಆಗಿರಲಿ ಅವನೇ ವಾರಸುದಾರ. ಈ ಪ್ರಧಾನ ಪತ್ನಿಯರಲ್ಲಿ ಒಬ್ಬಳು ಒರಿಯಾ ರಾಜನ ಮಗಳು ಮತ್ತು ಮಿಕ್ಕವರು ಸೆರಿಂಗಪಟಾಒದ ರಾಜನಾಗಿರುವ ಸಾಮಂತನ ಪುತ್ರಿಯರು. ಇನ್ನೊಬ್ಬ ಪತ್ನಿ ವಾರಾಂಗನೆ. ರಾಜನಾಗುವ ಮುನ್ನ ಅವಳು ಅವನ ಉಪಪತ್ನಿಯಾಗಿದ್ದಳು. ಅವನು ರಾಜನಾದರೆ ತನ್ನನ್ನು ಪತ್ನಿಯಾಗಿ ಸ್ವೀಕರಿಸುವಂತೆ ಅವಳು ಅವನಿಂದ ವಚನ ಪಡೆದಿದ್ದಳು. ಹೀಗೆ ಈ ವಾರಾಂಗನೆ ಅವನ ಪತ್ನಿಯಾದಳು. ಅವಳ ಪ್ರೀತ್ಯರ್ಥವಾಗಿ ಅವನು ಈ ಹೊಸ ನಗರವನ್ನು ನಿರ್ಮಿಸಿದ ಮತ್ತು ಅದರ ಹೆಸರು…. (ಮೂಲ ಕೃತಿಯಲ್ಲಿ ಹೀಗಿದೆ) … ಈ ಪತ್ನಿಯರಲ್ಲಿ ಪ್ರತಿಯೊಬ್ಬಳಿಗೂ ತನ್ನ ಪರಿಚಾರಿಕೆಯರು, ಆಪ್ತ ಸೇವಕಿಯರು, ಕಾವಲುಗಾರ್ತಿಯರು ಮತ್ತು ಅಗತ್ಯವಿರುವ ಇತರ ಎಲ್ಲ ಸೇವಕಿಯರುಳ್ಳ ತನ್ನದೇ ಮನೆಯಿದೆ. ಇವರೆಲ್ಲ ಸ್ತ್ರೀಯರಾಗಿದ್ದು ಅವರಿರುವಲ್ಲಿ ಅವರನ್ನು ಸಂರಕ್ಷಿಸುವ ನಪುಂಸಕರನ್ನು ಹೊರತುಪಡಿಸಿ ಯಾವ ಪುರುಷನಿಗೂ ಪ್ರವೇಶವಿಲ್ಲ. ಬಹುಶಃ ರಾಜನ ಅನುಗ್ರಹದಿಂದ ಯಾವನೊಬ್ಬ ಉನ್ನತ ಅಂತಸ್ತಿನ ಹಿರಿಯನನ್ನುಳಿದು ಈ ಸ್ತ್ರೀಯರು ಯಾವ ಪುರುಷನ ಕಣ್ಣಿಗೂ ಬೀಳುವುದಿಲ್ಲ. ಅವರು ಹೊರಗೆ ಹೋಗಬಯಸಿದಾಗ ಅವರನ್ನು ಯಾರಿಗೂ ಕಾಣದಂತೆ ಮುಚ್ಚಿದ ಮೇಣೆಗಳನ್ನು ಹೊತ್ತೊಯ್ಯಲಾಗುತ್ತಿತ್ತು ಮತ್ತು ಎಲ್ಲ ಪೂರ್ತಿ ಮುನ್ನೂರು ನಾನೂರು ನಪಂಸಕರೂ ಅವರೊಂದಿಗಿರುತ್ತಿದ್ದರು. ಮಿಕ್ಕವರೆಲ್ಲ ಅವರಿಂದ ದೂರವಿರುತ್ತಾರೆ. ಈ ರಾಣಿಯರಲ್ಲಿ ಪ್ರತಿಯೊಬ್ಬಳೂ ಬಹಳಷ್ಟು ಧನ, ಸಂಪತ್ತು ಮತ್ತು ಸ್ವಂತ ಆಭರಣಗಳನ್ನು ಅಂದರೆ ತೋಳಬಂದಿಗಳು, ಕೈ ಬಳೆಗಳು, ಸಣ್ಣ ಮುತ್ತುಗಳು ಮತ್ತು ವಜ್ರಗಳನ್ನು ಪಡೆದಿರುತ್ತಾಳೆ. ಅಲ್ಲದೆ ಅದೂ ದೊಡ್ಡ ಪ್ರಮಾಣದಲ್ಲಿ ಎಂದು ನಮಗೆ ಹೇಳಲಾಯಿತು. ಅವರಲ್ಲಿ ಪ್ರತಿಯೊಬ್ಬಳಿಗೆ ಅನೇಕ ರತ್ನಗಳು, ಮಾಣಿಕ್ಯಗಳು, ವಜ್ರಗಳು, ಮುತ್ತುಗಳು ಮತ್ತು ಸಣ್ಣ ಮುತ್ತುಗಳಿಂದ ಸಾಧ್ಯವಿದ್ದಷ್ಟು ಚೆನ್ನಾಗಿ ಅಲಂಕೃತರಾದ ಅರವತ್ತು ಪರಿಚಾರಿಕೆಯರಿರುವರು ಎಂದೂ ನಮಗೆ ಹೇಳಲಾಯಿತು. ಇವನ್ನು ನಾವು ಅನಂತರ ನೋಡಿದೆವು ಮತ್ತು ಚಕಿತರಾದೆವು. ಅವರನ್ನು ನಾವು ನೋಡಿದ ಕೆಲವು ಉತ್ಸವಗಳು ಮತ್ತು ಅವರು ಬಂದ ರೀತಿಯ ಬಗೆಗೆ ನಾನು ಆಮೇಲೆ ಹೇಳುವೆ. ಒಳಗಡೆ ಈ ಪರಿಚಾರಿಕೆಯರೊಂದಿಗೆ ಹನ್ನೆರಡು ಸಾವಿರ ಸ್ತ್ರೀಯರಿದ್ದಾರೆಂದು ಹೇಳಲಾ ಗುತ್ತದೆ. ಏಕೆಂದರೆ ನೀವು ತಿಳಿಯಬೇಕಾದುದೇನೆಂದರೆ ಅಲ್ಲಿ ಕತ್ತಿ ಗುರಾಣಿ ಹಿಡಿಯುವ ಸ್ತ್ರೀಯರಿದ್ದಾರೆ, ಕುಸ್ತಿ ಆಡುವವರಿದ್ದಾರೆ, ಕಹಳೆ ಊದುವವರಿದ್ದಾರೆ, ಕೊಳಲು ಊದುವ ವರಿದ್ದಾರೆ ಮತ್ತು ನಮ್ಮವಕ್ಕಿಂತ ಭಿನ್ನವಾದ ಇತರ ವಾದ್ಯಗಳನ್ನು ಊದುವವರಿದ್ದಾರೆ. ಹಾಗೆಯೆ, ಬೋಯಿಗಳಾಗಿ ಮತ್ತು ಅಗಸರಾಗಿ ಮತ್ತು ರಾಜನಿಗೆ ಅವನ ಮನೆಯಲ್ಲಿ ಅಧಿಕಾರಿಗಳಿರುವಂತೆಯೆ ತಮ್ಮ ದ್ವಾರದೊಳಗಡೆ ಕಛೇರಿಗಳಿಗಾಗಿ ಸ್ತ್ರೀಯರಿದ್ದಾರೆ. ಅವರ ಮಧ್ಯೆ ಯಾವುದೇ ಕಲಹ ಅಥವಾ ವೈಮನಸ್ಸು ಇರಬಾರದೆಂದು ಈ ಮೂವರು ಪ್ರಧಾನ ಪತ್ನಿಯರಿಗೂ ಅಷ್ಟೇ, ಒಬ್ಬಳಿಗಿರುವಷ್ಟೆ ಇನ್ನೊಬ್ಬಳಿಗೆ, ಸ್ತ್ರೀಯರು ಇರುತ್ತಾರೆ. ಅವರೆಲ್ಲರೂ ಪ್ರೀತಿಯಿಂದಿದ್ದು ಪ್ರತಿಯೊಬ್ಬಳೂ ಪ್ರತ್ಯೇಕವಾಗಿ ವಾಸಿಸುತ್ತಾಳೆ. ಇದರಿಂದ ಇಷ್ಟೊಂದು ಜನರಿರುವ ಈ ಮನೆಗಳಿಗಾಗಿ ಎಂಥ ದೊಡ್ಡ ಆವರಣ ಇದ್ದಿರಬೇಕು ಮತ್ತು ಏನು ಬೀದಿ ಮತ್ತು ಓಣಿಗಳನ್ನು ಅವು ಹೊಂದಿರಬೇಕು ಎಂಬುದನ್ನು ಊಹಿಸಬಹುದು.

ರಾಜ ಅರಮನೆಯೊಳಗೆ ತಾನೊಬ್ಬನೆ ಇರುತ್ತಾನೆ ಮತ್ತು ತನ್ನ ಪತ್ನಿಯರಲ್ಲೊಬ್ಬಳ ಸಹವಾಸ ಬೇಕೆನಿಸಿದಾಗ ಒಬ್ಬ ನಪುಂಸಕನಿಗೆ ಅವಳನ್ನು ಕರೆತರುವಂತೆ ಆಜ್ಞಾಪಿಸುತ್ತಾನೆ. ಅವಳಿದ್ದಲ್ಲಿ ನಪುಂಸಕ ಪ್ರವೇಶಿಸದೆ ಕಾವಲುಗಾರ್ತಿಯರಿಗೆ ಅದನ್ನು ಹೇಳುತ್ತಾನೆ. ಅವರು ರಾಜನಿಂದ ಸಂದೇಶವಿದೆಯೆಂದು ರಾಣಿಗೆ ತಿಳಿಸುತ್ತಾರೆ. ಆಗ ಅವಳ ಪರಿಚಾರಿಕೆಯರಲ್ಲಿ ಇಲ್ಲವೆ ಆಪ್ತ ಸೇವಕಿಯರಲ್ಲಿ ಒಬ್ಬಳು ಬಂದು ಏನು ಬೇಕೆಂಬುದನ್ನು ತಿಳಿದುಕೊಳ್ಳುತ್ತಾಳೆ. ಆ ಮೇಲೆ ರಾಣಿ ರಾಜನಿದ್ದಲ್ಲಿಗಾಗಲಿ ಇಲ್ಲವೆ ರಾಜನೆ ರಾಣಿಯಿದ್ದಲ್ಲಿಗಾಗಲಿ ಬರುತ್ತಾನೆ. ಹೀಗೆ ಅವನು ಬೇರೆ ಯಾರಿಗೂ ತಿಳಿಯದಂತೆ ತನಗೆ ಹಿತವೆನಿಸುವಂತೆ ಸಮಯ ಕಳೆಯುತ್ತಾನೆ. ಈ ನಪುಂಸಕರಲ್ಲಿ ರಾಜನಿಗೆ ಅತ್ಯಂತ ಪ್ರೀತಿಯವರಾಗಿರುವವರು ಮತ್ತು ಅವನು ಮಲಗಿದಲ್ಲಿಯೆ ಮಲಗುವ ಕೆಲವರಿದ್ದಾರೆ; ಅವರು ದೊಡ್ಡ ಸಂಬಳ ಪಡೆಯುತ್ತಾರೆ.

ಈ ರಾಜನಿಗೆ ಪ್ರತಿದಿನ ಬೆಳಗಾಗುವ ಮುನ್ನ ಮುಕ್ಕಾಲು ಪಿಂಟು ಎಳ್ಳೆಣ್ಣೆ ಕುಡಿಯುವ ರೂಢಿಯಿದೆ ಮತ್ತು ಅದೇ ಎಣ್ಣೆಯನ್ನು ತನ್ನ ದೇಹಕ್ಕೆಲ್ಲ ಹಚ್ಚಿಕೊಳ್ಳುತ್ತಾನೆ. ತನ್ನ ಟೊಂಕವನ್ನು ಒಂದು ಚಿಕ್ಕ ಅರಿವೆಯಿಂದ ಸುತ್ತಿಕೊಂಡು ತನ್ನ ತೋಳುಗಳಿಗೆ ಮಣ್ಣಿನಿಂದ ಮಾಡಿದ ದೊಡ್ಡ ಭಾರಗಳನ್ನು ಕಟ್ಟಿಕೊಂಡು ಕತ್ತಿಯನ್ನು ತೆಗೆದುಕೊಂಡು ಎಲ್ಲ ಎಣ್ಣೆ ಬಸಿದು ಹೋಗುವವರೆಗೆ ಅದರೊಂದಿಗೆ ವ್ಯಾಯಾಮ ಮಾಡುತ್ತಾನೆ, ಮತ್ತು ತನ್ನ ಪೈಲ್ವಾನರಲ್ಲೊಬ್ಬನೊಂದಿಗೆ ಕುಸ್ತಿ ಆಡುತ್ತಾನೆ. ಈ ಪರಿಶ್ರಮದ ನಂತರ ಅವನು ಕುದುರೆಯೇರಿ ಬಯಲಿನಲ್ಲಿ ಅತ್ತಿಂದಿತ್ತ ನಾಗಾಲೋಟದ ಸವಾರಿ ಮಾಡುತ್ತಾನೆ. ಏಕೆಂದರೆ, ಅವನು ಇದನ್ನೆಲ್ಲ ಬೆಳಕು ಹರಿಯುವ ಮುನ್ನ ಮಾಡುತ್ತಾನೆ. ಆಮೇಲೆ ಅವನು ಮೈ ತೊಳೆದುಕೊಳ್ಳಲು ಹೋಗುತ್ತಾನೆ ಮತ್ತು ಅವನು ಪವಿತ್ರನೆಂದು ಪರಿಗಣಿಸುವ, ಅವನ  ಬಲು ಪ್ರೀತಿಯವನಾದ ಮತ್ತು ಬಹಳ ಧನಿಕನಾದ ಬ್ರಾಹ್ಮಣನೊಬ್ಬ ಅವನ ಮೈ ತೊಳೆಯುತ್ತಾನೆ. ಸ್ನಾನವಾದ ಮೇಲೆ ಅವನು ಅರಮನೆಯೊಳಗೆ ತನ್ನ ಗುಡಿಯಿರುವಲ್ಲಿಗೆ ಹೋಗಿ ಪದ್ಧತಿಯಂತೆ ತನ್ನ ಪ್ರಾರ್ಥನೆ ಮತ್ತು ವ್ರತಾಚರಣೆ ಮಾಡುತ್ತಾನೆ. ಅಲ್ಲಿಂದ ಅವನು ಗೋಡೆಗಳಿಲ್ಲದೆ ದ್ವಾರಮಂಟಪದ ಆಕಾರದಲ್ಲಿ ಕಟ್ಟಿದ ಕಟ್ಟಡಕ್ಕೆ ಹೋಗುತ್ತಾನೆ.  ಅದಕ್ಕೆ ಹಲವಾರು ಸ್ತಂಬಗಳಿದ್ದು ಅವುಗಳಿಗೆ ತುದಿಯವರೆಗೆ ಬಟ್ಟೆ ಇಳಿಬಿಡಲಾಗಿದೆ ಮತ್ತು ಗೋಡೆಗಳಿಗೆ ಸುಂದರವಾಗಿ ಬಣ್ಣ ಹಚ್ಚಲಾಗಿದೆ. ಅದರ ಎರಡೂ ಬದಿಗೆ ಚೆನ್ನಾಗಿ ಮಾಡಿದ ಸ್ತ್ರೀಯರ ಎರಡು ಆಕೃತಿಗಳುಂಟು. ಇಂಥ ಕಟ್ಟಡದಲ್ಲಿ ಅವನು ತನ್ನ ರಾಜ್ಯದಲ್ಲಿ ಹುದ್ದೆಯಲ್ಲಿರುವವರು ಮತ್ತು ತನ್ನ ನಗರಗಳ ಆಡಳಿತ ನೋಡಿಕೊಳ್ಳುವವರೊಂದಿಗೆ ಕೆಲಸ ಮುಗಿಸುತ್ತಾನೆ ಮತ್ತು ತನಗೆ ಪ್ರಿಯರಾದವರೊಂದಿಗೆ ಮಾತಾಡುತ್ತಾನೆ. ಎಲ್ಲರಿಗಿಂತಲೂ ಪ್ರಿಯನಾದವನೆಂದರೆ ತೆಮರ‌್ಸಿ

[1] ಎಂಬ ಹಿರಿಯ. ಅವನು ಇಡಿ ಮನೆಯನ್ನು ನಿಂಯತ್ರಿಸುತ್ತಾನೆ ಮತ್ತು ಮಹಾಪ್ರಭುಗಳು ಅವನೊಂದಿಗೆ ರಾಜನೊಂದಿಗೆ ನಡೆದುಕೊಂಡಂತೆಯೆ ನಡೆದುಕೊಳ್ಳುತ್ತಾರೆ. ರಾಜ ಈ ಮಂದಿಯೊಂದಿಗೆ ತನಗೆ ಇಷ್ಟವಾದ ವಿಷಯಗಳ ಬಗೆಗೆ ಮಾತಾಡಿದ ಮೇಲೆ ದ್ವಾರದಲ್ಲಿ ಕಾಯ್ದಿರುವ ಪ್ರಭುಗಳು ಹಾಗೂ ದಳವಾಯಿಗಳಿಗೆ ಬರಹೇಳುತ್ತಾನೆ. ಅವರು ಕೂಡಲೆ ಬಂದು ಸಲಾಮು ಮಾಡುತ್ತಾರೆ. ಅವರು ಬಂದ ಕೂಡಲೆ ಅವನಿಗೆ ಸಲಾಮು ಮಾಡಿ ಅವನಿಂದ ದೂರ ಗೋಡೆಗುಂಟ ನಿಲ್ಲುತ್ತಾರೆ. ಅವರು ಒಬ್ಬರಿಗೊಬ್ಬರೊಂದಿಗೆ ಮಾತಾಡುವುದಿಲ್ಲ. ಅವನೆದುರು ವೀಳ್ಯದೆಲೆ ಜಗಿಯುವುದೂ ಇಲ್ಲ. ತಮ್ಮ ಅಂಗಿಯ ತೋಳುಗಳಲ್ಲಿ ಕೈಯಿಟ್ಟುಕೊಂಡು ನೆಲದ ಮೇಲೆ ದೃಷ್ಟಿಯಿಟ್ಟು ನಿಂತಿರುತ್ತಾರೆ. ರಾಜ ಯಾರೊಂದಿಗಾದರೂ ಮಾತಾಡಬಯಸಿದರೆ ಅದನ್ನು ಎರಡನೆಯ ವ್ಯಕ್ತಿಯ ಮೂಲಕ ಮಾಡಲಾಗುತ್ತದೆ. ಮತ್ತು ರಾಜ ಯಾರೊಂದಿಗೆ ಮಾತಾಡಬಯಸುತ್ತಾನೊ ಅವನು ಕಣ್ಣೆತ್ತಿ ತನ್ನನ್ನು ಪ್ರಶ್ನಿಸುವವನಿಗೆ ಉತ್ತರ ಕೊಡುತ್ತಾನೆ. ಮತ್ತು ತನ್ನ ಮೊದಲಿನ ಸ್ಥಾನಕ್ಕೆ ಮರಳುತ್ತಾನೆ. ಅವರು ರಾಜ ಹೋಗಲು ಅಪ್ಪಣೆ ಕೊಡುವವರೆಗೆ ಹಾಗೆಯೆ ನಿಂತಿರುತ್ತಾರೆ. ಅವರಲ್ಲಿರುವ ಅತ್ಯಂತ ದೊಡ್ಡ ಮರ್ಯಾದೆಯಾದ ಸಲಾಮು ಎಂದರೆ ತಲೆಯ ಮೇಲೆ ತಮಗೆ ಸಾಧ್ಯವಿದಷ್ಟೂ ಎತ್ತಿ ಕೈ  ಜೋಡಿಸುವುದು. ಪ್ರತಿ ದಿನ ಅವರು ರಾಜನಿಗೆ ಸಲಾಮು ಮಾಡಲು ಹೋಗುವರು.

ನಾವು ಈ ನಾಡಿಗೆ ಬಂದಾಗ ರಾಜ ಈ ಹೊಸ ನಗರದಲ್ಲಿದ್ದ ಮತ್ತು ಅವನನ್ನು ಕಾಣಲು ಕ್ರಿಸ್ಟೊವಾಒ ದ ಫಿಗೈರೆಡೊ[2] ತನ್ನ ಜೊತೆಗೆ ಬಂದ ನಾವೆಲ್ಲ ಪೋರ್ತುಗೀಜ ರೊಂದಿಗೆ ಹೋದ. ಎಲ್ಲರೂ ನಮ್ಮ ರೀತಿಯಲ್ಲಿ ಬೆಡಗಿನ ವೇಷಗಳೊಂದಿಗೆ ಸುಂದರವಾಗಿ ಭೂಷಿತರಾಗಿದ್ದೆವು. ರಾಜ ಅವನನ್ನು ಒಳ್ಳೆಯ ರೀತಿಯಲ್ಲಿ ಬರಮಾಡಿಕೊಂಡ ಮತ್ತು ಅವನೊಂದಿಗೆ ಬಹಳ ಸಂತುಷ್ಟನಾಗಿದ್ದ. ರಾಜ ಅವನೊಂದಿಗೆ ಅವನು ತನ್ನ ಜನರಲ್ಲಿಯೆ ಒಬ್ಬನೇನೊ ಎನ್ನುವಷ್ಟು ಸಂಪ್ರೀತನಾಗಿದ್ದ. ಅವನಲ್ಲಿ ಅಷ್ಟೊಂದು ಆಸಕ್ತಿ ತೋರಿದ. ಮತ್ತು ಅವನೊಂದಿಗೆ ಹೋಗಿದ್ದ ನಮ್ಮವರೊಂದಿಗೂ ಬಹಳ ಪ್ರೀತಿ ತೋರಿದ. ನಾವು ರಾಜನಿಗೆ ಎಷ್ಟೊಂದು ಹತ್ತಿರವಿದ್ದೆವೆಂದರೆ ಅವನು ನಮ್ಮೆಲ್ಲರನ್ನೂ ಮುಟ್ಟಿದ ಮತ್ತು ನಮ್ಮನ್ನೆಷ್ಟು ನೋಡಿದರೂ ಅವನಿಗೆ ಸಾಲದು. ಆ ಮೇಲೆ ಕ್ರಿಸ್ಟೊವಾಒ ದ ಫಿಗೈರೆಡೊ ಕ್ಯಾಪ್ಟನ್ ಮೇಜರ್‌ನ[3] ಪತ್ರಗಳನ್ನು ಮತ್ತು ಅವನಿಂದ ತಂದ ವಸ್ತುಗಳನ್ನು ರಾಜನಿಗೆ ಕೊಟ್ಟ. ಅವುಗಳಿಂದ ಅವನು ಬಹಳ ಸಂತಸಪಟ್ಟ. ಮುಖ್ಯವಾಗಿ, ಪ್ರಕೃತ ಕ್ರಿಸ್ಟೊವಾಒ ದ ಫಿಗೈರೆಡೊ ಇತರ ಅನೇಕ ವಸ್ತುಗಳೊಂದಿಗೆ ತಂದಿದ್ದ ಕೆಲವೊಂದು ಆರ್ಗನ್‌ಗಳಿಂದ.[4] ರಾಜ ಅನೇಕ ಬಂಗಾರದ ಗುಲಾಬಿಗಳಿಂದ ಹೆಣೆಯಲಾದ ಕೆಲವು ಬಿಳಿ ಬಟ್ಟೆಗಳನ್ನು ಧರಿಸಿದ್ದ. ಕೊರಳಲ್ಲಿ ಭಾರಿ ಬೆಲೆಯುಳ್ಳ ವಜ್ರಗಳ ಕಂಠಿಹಾರ ಧರಿಸಿದ್ಧ. ತಲೆಯ ಮೇಲೆ ಗ್ಯಾಲಿಸಿಯನ್ ಶಿರಸ್ತ್ರಾಣದ ಮಾದರಿಯ,  ಉತ್ಕೃಷ್ಟ ರೇಷ್ಮೆಯ ತುಂಡಿನಿಂದ ಆಚ್ಛಾದಿತ ಜರತಾರಿ ಟೊಪ್ಪಿಗೆ ಧರಿಸಿದ್ದ. ಅವನು ಬರಿಗಾಲಿನಲ್ಲಿದ್ದ. ಏಕೆಂದರೆ ಬರಿಗಾಲಿನಲ್ಲಿರದ ಹೊರತು ಯಾರೂ ಎಂದೂ ರಾಜನಿದ್ದಲ್ಲಿ ಪ್ರವೇಶೀಸುವುದಿಲ್ಲ ಮತ್ತು ಬಹುತೇಕ ಜನರು ಅಥವಾ ಹೆಚ್ಚೂ ಕಡಿಮೆ ಎಲ್ಲರೂ ಬರಿಗಾಲಿನಲ್ಲಿಯೇ ನಡೆದಾಡುತ್ತಾರೆ. ಪಾದರಕ್ಷೆಗಳಿಗೆ ಪ್ರಾಚೀನ ಶೈಲಿಯಂತೆ ಚೂಪು ತುದಿಗಳಿವೆ ಮತ್ತು ಅಟ್ಟೆಗಳನ್ನು ಬಿಟ್ಟು ಬೇರೇನೂ ಇರದೆ ಮೇಲ್ಗಡೆ ಅವುಗಳನ್ನು ಕಾಲಲ್ಲಿರಿಸಿಕೊಳ್ಳಲು ಸಹಾಯಕವಾಗುವಂತೆ ಕೆಲವು ಪಟ್ಟಿಗಳಿರುವ ಇತರ ಪಾದರಕ್ಷೆಗಳು ಇವೆ. ಇಟಲಿಯಿಂದ ಬರುವ ಕೆಲವು ಕಾಗದಗಳು ಅಥವಾ ಅವಶೇಷಗಳಲ್ಲಿ ನೀವು ಕಾಣುವಂತಹ ಪ್ರಾಚೀನ ಕಾಲದಲ್ಲಿ ರೋಮನರು ರೂಢಿಗತವಾಗಿ ಧರಿಸುತ್ತಿದ್ದಂತಹ ಪಾದರಕ್ಷೆಗಳಂತೆ ಅವುಗಳನ್ನು ಮಾಡಲಾಗಿದೆ. ರಾಜ ಕ್ರಿಸ್ಟೋವಾಒ ದ ಫಿಗೈರೆಡೊನನ್ನು ಕಳುಹಿಸಿಕೊಟ್ಟಾಗ ಅವನಿಗೆ ಜರತಾರಿ ಅಂಗಿಯನ್ನೂ ರಾಜ ಧರಿಸುವಂತಹದೆ[5] ರೀತಿಯ ಟೊಪ್ಪಿಗೆಯನ್ನೂ ಕೊಟ್ಟ. ಮತ್ತು ಪ್ರತಿಯೊಬ್ಬ ಪೋರ್ತುಗೀಜನಿಗೂ ಅನೇಕ ಸುಂದರ ಆಕೃತಿಗಳಿಂದ ಕಸೂತಿ ಹೆಣೆದ ಬಟ್ಟೆಯನ್ನು ಕೊಟ್ಟ. ರಾಜ ಇದನ್ನು ಕೊಡುವುದೇಕೆಂದರೆ ಅದು ಪದ್ಧತಿಯಾಗಿದೆ. ಅವನು ಅದನ್ನು ಮೈತ್ರಿ ಮತ್ತು ಪ್ರೀತಿಗಳ ದ್ಯೋತಕವಾಗಿ ಕೊಡುತ್ತಾನೆ.

ಕ್ರಿಸ್ಟೊವಾಒ ದ ಫಿಗೈರೆಡೊನನ್ನು ರಾಜ ಕಳುಹಿಸಿಕೊಟ್ಟಾಗ ನಾವು ಈ ನಗರದಿಂದ ಹರದಾರಿ ದೂರವಿರುವ ಬೀಸ್ನಗ ನಗರಕ್ಕೆ ಬಂದೆವು ಮತ್ತು ಇಲ್ಲಿ ಕೆಲವು ಬಹಳ ಉತ್ತಮ ಮನೆಗಳಲ್ಲಿ ವಾಸಿಸಲು ಅವನು ಆಜ್ಞಾಪಿಸಿದ. ಮತ್ತು ಅನೇಕ ದೊರೆಗಳು, ದಳವಾಯಿಗಳು ಮತ್ತು ರಾಜನ ಪರವಾಗಿ ಬಂದ ಇತರ ವ್ಯಕ್ತಿಗಳು ಫಿಗೈರೆಡೊನನ್ನು ಭೇಟಿಯಾದರು. ರಾಜ ಅವನಿಗೆ ಅನೇಕ ಕುರಿಕೋಳಿಗಳನ್ನು ಮತ್ತು ಬೆಣ್ಣೆ, ಜೇನುತುಪ್ಪ ಮತ್ತಿತರ ಖಾದ್ಯಗಳಿಂದ ತುಂಬಿದ ಅನೇಕ ಪಾತ್ರೆಗಳನ್ನು ಕಳಿಸಿದ. ಅವನು ಅವುಗಳನ್ನು ಕೂಡಲೆ ಕಾಲಾಳುಗಳು ಮತ್ತು ತನ್ನೊಂದಿಗೆ ತಂದಿದ್ದ ಜನರಿಗೆ ಹಂಚಿದ. ರಾಜ ಅವನಿಗೆ ಅನೇಕ ಪ್ರೀತಿಯ ಮತ್ತು ಸಂತೋಷದ ಮಾತುಗಳನ್ನು ಹೇಳಿದ ಮತ್ತು ಪೋರ್ತುಗಾಲದ ರಾಜ ನಡೆಸುತ್ತಿದ್ದ ರಾಜ್ಯ ಎಂತಹದೆಂಬುದರ ಬಗೆಗೆ ವಿಚಾರಿಸಿದ. ಅದರ ಬಗೆಗೆ ಎಲ್ಲ ಹೇಳಲಾಗಿ ಅವನಿಗೆ ಸಂತೋಷವಾದಂತಿತ್ತು.

ಬೀಸನಗರ ನಗರದ ವಿಷಯಕ್ಕೆ ಮರಳುವುದಾದರೆ, ಅಲ್ಲಿಂದ ಹೊಸ ನಗರಕ್ಕೆ ಕ್ರೀಡಾಯುದ್ಧದ ಸ್ಥಳದಷ್ಟು ಅಗಲವಾದ ಬೀದಿ ಹೋಗುತ್ತದೆಂಬುದನ್ನು ತಿಳಿಯಬೇಕು. ಅದರ ಇಕ್ಕೆಲ್ಲಗಳಲ್ಲೂ ಮನೆಗಳು ಮತ್ತು ಅಂಗಡಿಗಳು ಸಾಲುಗಟ್ಟಿವೆ. ಅವುಗಳಲ್ಲಿ ಎಲ್ಲವನ್ನೂ ಮಾರಲಾಗುತ್ತದೆ. ದಾರಿಹೋಕರಿಗೆ ನೆರಳು ನೀಡುವ ಉದ್ದೇಶದಿಂದ ಈ ರಸ್ತೆಯುದ್ದಕ್ಕೂ ರಾಜ ಹಚ್ಚಲು ಅಜ್ಞಾಪಿಸಿದ ಅನೇಕ ಗಿಡಗಳಿವೆ. ಈ ರಸ್ತೆಯ ಮೇಲೆ ಸುಂದರವಾದ ಕಲ್ಲಿನ ದೇವಾಲಯವನ್ನು[6] ಕಟ್ಟುವಂತೆ ರಾಜ ಆಜ್ಞಾಪಿಸಿ. ದಳವಾಯಿಗಳ ಮತ್ತು ಮಹಾಪ್ರಭುಗಳು ಕಟ್ಟಿಸಿದ ಇತರ ಗುಡಿಗಳೂ ಇವೆ.

ಹೀಗಾಗಿ ಬೀಸ್ನಗ ನಗರಕ್ಕೆ ಮರಳುತ್ತ ನಿಮಗೆ ತಿಳಿದಿರಬೇಕಾದುದೇನೆಂದರೆ ನೀವು ನಗರದ ದ್ವಾರಗಳನ್ನು ತಲಪುವ ಮುನ್ನ ನಗರದ ಎಲ್ಲಾ ಆವರಣಗಳನ್ನು ಸುತ್ತುಗಟ್ಟುವ ಗೋಡೆಯುಳ್ಳ ಹೆಬ್ಬಾಗಿಲಿದೆ ಮತ್ತು ಈ ಗೋಡೆ ಬಹಳ ಗಟ್ಟಿಯಾದುದೂ ಬೃಹತ್ ಕಲ್ಲು ಕಟ್ಟಡವೂ ಆಗಿದೆ. ಆದರೆ, ಈಗ ಅದು ಅಲ್ಲಲ್ಲಿ ಒಡೆದಿದೆ. ಅವರು ಅದರಲ್ಲಿ ದುರ್ಗಗಳನ್ನು[7] ಇಡದೆ ಬಿಡರು. ಈ ಗೋಡೆಗೆ ಕೆಲವೆಡೆ ಮತ್ತು ಕೆಳಮಟ್ಟದಲ್ಲಿ ಕಟ್ಟಲಾಗಿರುವ ಭಾಗಗಳಲ್ಲಿ ನೀರಿನ ಕಂದಕವಿದೆ. ಅದರಿಂದ ಪ್ರತ್ಯೇಕವಾಗಿ ಇನ್ನೂ ಒಂದು (ರಕ್ಷಣೆ) ಕೆಳಗೆ ಹೇಳಿದಂತೆ ಮಾಡಿದ್ದು ಇದೆ. ಚೂಪು ತುದಿಯುಳ್ಳ ಕೆಲವು ಎತ್ತರವಾದ ಕಲ್ಲುಗಳನ್ನು ನೆಲದ ಮೇಲೆ ಎದೆ ಎತ್ತರದಲ್ಲಿ ನಿಲ್ಲಿಸಿದ್ದಾರೆ. ಅವು ಒಂದೂವರೆ ಈಟಿಕೋಲಿನಷ್ಟು ಅಗಲವಿದ್ದು ಅವುಗಳ ಮತ್ತು ದೊಡ್ಡ ಗೋಡೆಯ ಮಧ್ಯೆ ಅಷ್ಟೆ ಅಂತರವಿದೆ. ಈ ಗೋಡೆ ಯಾವುದೊಂದು ಗುಡ್ಡ ಅಥವಾ ಕಲ್ಲುಗಾಡು ತಲುಪುವವರೆಗಿನ ಎಲ್ಲ ಕೆಳಮಟ್ಟದ ನೆಲದಲ್ಲೂ ನಿಂತಿದೆ. ನೀರು ಈ ಗೋಡೆಯ ಮೊದಲ ಸಾಲಿನ ಮೂಲಕ ಹಾಯುತ್ತದೆ. ಮತ್ತು ಊಟೆಗಳಿದ್ದುದರಿಂದ ಸರೋವರಗಳಲ್ಲಿ ಬಹಳ ನೀರು ಇದೆ. ಇಲ್ಲಿ ಹಣ್ಣಿನ ತೋಟಗಳು ಮತ್ತು ಒಂದು ಚಿಕ್ಕ ತೆಂಗಿನ ತೋಪು ಮತ್ತು ಅನೇಕ ಮನೆಗಳಿವೆ.

ನಗರದ ಪ್ರಥಮ ದ್ವಾರದತ್ತ ಈಗ ತಿರುಗೋಣ. ನೀವು ಅದನ್ನು ತಲುಪುವ ಮುನ್ನ ಒಂದು ಚಿಕ್ಕ ನೀರಿನ ಹೊಂಡ ಬರುತ್ತದೆ. ಆ ಮೇಲೆ ಗೋಡೆ ಬರುತ್ತದೆ. ಗೋಡೆ ಪೂರ್ತಿ ಕಲ್ಲುಕಟ್ಟಡದ್ದಾಗಿದ್ದು ಬಹಳ ಭದ್ರವಾಗಿದೆ ಮತ್ತು ದ್ವಾರ ತಲುಪುವ ಮುಂಚೆ ಅದು ಒಂದು ತಿರುವು ಪಡೆದಿರುತ್ತದೆ. ಈ ದ್ವಾರದ ಬಾಯಿಯಲ್ಲಿ ಆಚೆಗೊಂದು ಈಚೆಗೊಂದು ಎರಡು ಗೋಪುರಗಳಿವೆ. ಇದು ಅದನ್ನು ಬಲು ಭದ್ರವಾಗಿಸಿದೆ. ಅದು ವಿಶಾಲವೂ ಸುಂದರವೂ ಆಗಿದೆ. ನೀವು ಒಳಗೆ ಪ್ರವೇಶಿಸಿದ ತಕ್ಷಣ ಎರಡು ಚಿಕ್ಕ ದೇವಾಲಯಗಳಿವೆ. ಅವುಗಳಲ್ಲೊಂದಕ್ಕೆ ಅನೇಕ ಗಿಡಗಳಿರುವ ಸುತ್ತು ಗೋಡೆಯಿದ್ದರೆ ಇನ್ನೊಂದರಲ್ಲಿ ಪೂರ್ತಿ ಕಟ್ಟಡಗಳೇ ಇವೆ. ಪ್ರಥಮ ದ್ವಾರದ ಈ ಗೋಡೆ ಇಡಿ ನಗರವನ್ನು ಸುತ್ತುವರಿಯುತ್ತದೆ. ಮುಂದೆ ಸಾಗಿದರೆ ಇನ್ನೊಂದು ಗೋಡೆ ಸಾಲಿರುವ ಇನ್ನೊಂದು ದ್ವಾರ ಬರುತ್ತದೆ. ಅದು ಕೂಡ ಮೊದಲಿನ ಗೋಡೆಯೊಳಗಡೆ ನಗರವನ್ನು ಸುತ್ತುವರಿಯುತ್ತದೆ. ಇಲ್ಲಿಂದ ರಾಜನ ಅರಮನೆಯವರೆಗೆಲ್ಲ ಬಹಳ ಸುಂದರವಾದ ಬೀದಿಗಳು ಮತ್ತು ಪ್ರತಿಷ್ಠಿತರ ಮನೆಗಳ ಸಾಲುಗಳನ್ನು ಕಾಣಬಹುದು. ಮುಖ್ಯ ಬೀದಿಗುಂಟ ಹೋದರೆ ಮುಖ್ಯ ಮಾರ್ಗಗಳಲ್ಲೊಂದು ಬರುತ್ತದೆ. ಅದು ರಾಜನ ಅರಮನೆಯ ಮುಂದಿರುವ ದೊಡ್ಡ ಬಯಲು ಸ್ಥಳದಿಂದ[8] ಹೊರಡುತ್ತದೆ. ಇದರ ಎದುರುಗಡೆ ಇರುವ ಇನ್ನೊಂದು, ನಗರದ ಇನ್ನೊಂದು ಬದಿಗೆ ಹೋಗುತ್ತದೆ. ಸರಕು ಹಾಗೂ ಮಿಕ್ಕೆಲ್ಲವನ್ನು ಒಯ್ಯುವ ಬಂಡಿಗಳು ಮತ್ತು ವಾಹನಗಳು ಈ ಬಯಲಿನ ಮೇಲೆಯೆ ಹಾಯ್ದುಹೋಗುತ್ತದೆ. ಅದು ನಗರದ ಮಧ್ಯದಲ್ಲಿರುವುದರಿಂದ ಅದು ಉಪಯುಕ್ತವಾದಂತೆ ಇರುವಂತಿಲ್ಲ.

ರಾಜನ ಈ ಅರಮನೆ ಇತರ ಕೆಲವು ಗೋಡೆಗಳಂತೆ ಬಲು ಭದ್ರವಾಗಿರುವ ಗೋಡೆಯಿಂದ ಸುತ್ತುವರಿಯಲ್ಪಟ್ಟಿದ್ದು ಲಿಸ್ಬನ್‌ನ ದುರ್ಗಕ್ಕಿಂತ ಹೆಚ್ಚು ಸ್ಥಳ ಅವರಿಸಿದೆ.

ಇನ್ನೂ ಮುಂದಕ್ಕೆ ಸಾಗಿ ಇನ್ನೊಂದು ಹೆಬ್ಬಾಗಿಲಿಗೆ ಬಂದರೆ ಅಲ್ಲಿ ಅದಕ್ಕೆ ಹೊಂದಿಕೊಂಡೆ ಆ ಬದಿಗೊಂದು ಈ ಬದಿಗೊಂದರಂತೆ ಎರಡು ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲೊಂದರ ಬಾಗಿಲಲ್ಲಿ ಅನೇಕ ಕುರಿಗಳನ್ನು ಕಡಿಯಲಾಗುತ್ತದೆ. ಈ ಗುಡಿಯ ಬಾಗಿಲಲ್ಲಿ ಹೊರತುಪಡಿಸಿ ಇಡಿ ನಗರದಲ್ಲಿ ಎಲ್ಲೂ ಅನಾಗರಿಕರ (ಹಿಂದೂಗಳ) ಉಪಯೋಗಕ್ಕಾಗಿ ಅಥವಾ ಮಾರುಕಟ್ಟೆಗಳಲ್ಲಿ ಮಾರಾಟಕ್ಕಾಗಿ ಯಾವುದೆ ಕುರಿ ಕಡಿಯು ವುದಿಲ್ಲ. ಅವುಗಳ ರಕ್ತವನ್ನು ದೇವಾಲಯದಲ್ಲಿನ ಮೂರ್ತಿಗೆ ನೈವೇದ್ಯ ಮಾಡುತ್ತಾರೆ. ತಲೆಗಳನ್ನು ಅವನಿಗೆ ಬಿಡಲಾಗುತ್ತದೆ ಮತ್ತು ಪ್ರತಿಯೊಂದು ಕುರಿಗೆ ಒಂದು ಚಕ್ರಮ್ ಕೊಡುತ್ತಾರೆ. ಅದು ಕಾರ್ಟಿಲ್ಹಾ(ಕಾರ್ಟಿಲ್ಹಾ= ಫಾರ್ದಿಂಗ್)ದಂತಹ ನಾಣ್ಯ.

ಈ ಪಶುಬಲಿಯ ಸಮಯಕ್ಕೆ ಅಲ್ಲೊಬ್ಬ ಆ ದೇವಾಲಯದ ಮೇಲ್ವಿಚಾರಣೆಯಲ್ಲಿ ಉಪಸ್ಥಿತನಿದ್ದು ಕುರಿ ಅಥವಾ ಆಡಿನ ತಲೆ ಕಡಿದ ಸಲಕ್ಕೊಮ್ಮೆ ಮೂರ್ತಿ ಆ ಬಲಿಯನ್ನು ಸ್ವೀಕರಿಸುವುದರ ಸಂಕೇತವಾಗಿ ಕೊಂಬು ಊದುತ್ತಾನೆ. ಮುಂದೆ ಈ ಜೋಗಿಗಳು ಯಾವ ತರಹದ ಮನುಷ್ಯರೆಂಬ ಬಗೆಗೆ ಹೇಳುವೆ.[9]

ಈ ದೇವಾಲಯಗಳಿಗೆ ತೀರ ಹತ್ತಿರದಲ್ಲಿ ಕೆತ್ತನೆಯ ಕೆಲಸ ಮತ್ತು ಆಕೃತಿಗಳಿಂದ ತುಂಬಿದ ವಿಜಯೋತ್ಸವದ ರಥವಿದೆ. ಅದನ್ನು ಪ್ರತಿವರ್ಷ ಉತ್ಸವ ಕಾಲದಲ್ಲಿ ಅದು ಸಾಗಬಹುದಾದಂತಹ ಬೀದಿಗಳ ಮೂಲಕ ನಗರದಲ್ಲಿ ಎಳೆಯಲಾಗುತ್ತದೆ. ಅದು ದೊಡ್ಡದಿದ್ದು ತಿರುವುಗಳಲ್ಲಿ ಹಾಯದು.

ಮುಂದೆ ಸಾಗಿದರೆ, ನಾನು ವರ್ಣಿಸಿದಂತಹ ಉತ್ಕೃಷ್ಟ ಮನೆಗಳ ಸಾಲುಗಳು ಮತ್ತು ಓಣಿಗಳುಳ್ಳ ವಿಶಾಲ ಮತ್ತು ಸುಂದರ ಬೀದಿಯಿದೆ. ಆ ಮನೆಗಳು ಅಂಥವುಗಳನ್ನು ಪಡೆಯುವಷ್ಟು ಶ್ರೀಮಂತರವು ಎಂದು ತಿಳಿಯಬೇಕು. ಈ ಬೀದಿಯಲ್ಲಿ ವರ್ತಕರಿದ್ದು ಅಲ್ಲಿ ನೀವು ಎಲ್ಲ ತರಹದ ಮಾಣಿಕ್ಯ ಮತ್ತು ವಜ್ರಗಳು, ಪಚ್ಛಗಳು, ಮುತ್ತುಗಳು, ಸಣ್ಣ ಮುತ್ತುಗಳು, ಬಟ್ಟೆ ಮತ್ತು ಭೂಮಿಯ ಮೇಲಿರುವ ಮತ್ತು ನೀವು ಕೊಳ್ಳಬಯಸುವ ಪ್ರತಿಯೊಂದು ತರಹದ ವಸ್ತುವನ್ನೂ ಕಾಣಬಹುದು. ಮತ್ತು ಅಲ್ಲಿ ನೀವು ಪ್ರತಿ ಸಂಜೆ ಸಂತೆಯೊಂದನ್ನು ನೋಡಿವಿರಿ. ಅದರಲ್ಲಿ ಅವರು ಅನೇಕ ಸಾಮಾನ್ಯ ಕುದುರೆಗಳನ್ನು ಮತ್ತು ತಟ್ಟುಕುದುರೆಗಳನ್ನು ಹಾಗೂ ಅನೇಕ ಜಂಬೀರಗಳನ್ನು, ನಿಂಬೆಗಳನ್ನು, ಕಿತ್ತಲೆಗಳನ್ನು, ದ್ರಾಕ್ಷಿಗಳನ್ನು ಮತ್ತು ಪ್ರತಿಯೊಂದು ತರಹದ ಕಾಯಿಪಲ್ಯೆ ಮತ್ತು ಹಣ್ಣು ಹಂಪಲವನ್ನು ಮತ್ತು ಕಟ್ಟಿಗೆಯನ್ನು ಮಾರುತ್ತಾರೆ. ಈ ಬೀದಿಯಲ್ಲಿ ಇವೆಲ್ಲ ಇವೆ. ಇದರ ಕೊನೆಗೆ ತನ್ನದೇ ಗೋಡೆಯಿರುವ ಹೆಬ್ಬಾಗಿಲು ಇದೆ. ಈ ಗೋಡೆ ನಾನು ಹೇಳಿರುವ ಎರಡನೆಯ ಗೋಡೆಯನ್ನು ಈ ನಗರಕ್ಕೆ ಮೂರು ಕೋಟೆಗಳಾಗುವ ರೀತಿಯಲ್ಲಿ ಸೇರುತ್ತದೆ. ಇನ್ನೂ ಒಂದು ಕೋಟೆಯೆಂದರೆ ರಾಜನ ಅರಮನೆ. ಈ ಹೆಬ್ಬಾಗಿಲನ್ನು ದಾಟಿದರೆ ಅನೇಕ ಕುಶಲಕರ್ಮಿಗಳಿರುವ ಇನ್ನೊಂದು ಬೀದಿಯಿದೆ ಮತ್ತು ಅಲ್ಲಿ ಹಲವಾರು ವಸ್ತುಗಳನ್ನು ಮಾರಲಾಗುತ್ತದೆ. ಈ ಬೀದಿಯಲ್ಲಿ ಎರಡು ಚಿಕ್ಕ ದೇವಾಲಯಗಳಿವೆ. ಪ್ರತಿ ಬೀದಿಯಲ್ಲೂ ದೇವಾಲಯಗಳಿವೆ. ಇವುಗಳು, ನಮ್ಮ ಭಾಗಗಳಲ್ಲಿ ನಿಮಗೆ ಗೊತ್ತಿರುವಂತೆ, ಎಲ್ಲ ಕುಶಲಕರ್ಮಿಗಳ ಮತ್ತು ವರ್ತಕರ ಸಂಘಗಳಂತಹ ಸಂಸ್ಥೆಗಳಿಗೆ ಸೇರಿವೆ. ಆದರೆ, ಪ್ರಮುಖ ಮತ್ತು ದೊಡ್ಡ ದೇವಾಲಯಗಳು ನಗರದ ಹೊರಗೆ ಇವೆ. ಈ ಬೀದಿಯಲ್ಲಿ ಕ್ರಿಸ್ಟೊವಾಒ ದ ಫಿಗೈರೆಡೊ ವಾಸಿಸಿದ್ದ. ಪ್ರತಿ ಶುಕ್ರವಾರ ಅಲ್ಲಿ ಸಂತೆ ಇರುತ್ತದೆ. ಅದರಲ್ಲಿ ಅನೇಕಾನೇಕ ಹಂದಿಗಳು, ಕೋಳಿಗಳು, ಒಣಗಿಸಿದ ಸಮುದ್ರ ಮೀನುಗಳು, ನನಗೆ ಹೆಸರು ಗೊತ್ತಿರದ ಆ ನಾಡಿನ ಹುಟ್ಟುವಳಿಗಳಾದ ಇತರ ವಸ್ತುಗಳು ಇರುತ್ತವೆ. ಅದರಂತೆಯೆ, ದಿನಾಲು ನಗರದ ಬೇರೆ ಬೇರೆ ಭಾಗಗಳಲ್ಲಿ ಸಂತೆ ಜರುಗುತ್ತದೆ. ಈ ಬೀದಿಯ ಕೊನೆಯಲ್ಲಿ ಮೂರರ ವಾಸಸ್ಥಾನವಿದೆ. ಅದು ನಗರದ ತೀರ ಅಂಚಿಗೆ ಇದೆ. ಈ ನಾಡಿನ ನಿವಾಸಿಗಳಾಗಿರುವ ಈ ಮೂರರಿಗೆ ರಾಜ ಸಂಬಳ ಕೊಡುತ್ತಾನೆ ಮತ್ತು ಅವರು ಅವನ ಕಾವಲುಗಾರರಾಗಿದ್ದಾರೆ. ಅದು ಹೊಂದಿರುವ ಬೃಹತ್ ವ್ಯಾಪಾರ ಹಾಗೂ ಮುಖ್ಯತಃ ವಜ್ರಗಳುಳ್ಳ ಅನೇಕ ಬೆಲೆಯುಳ್ಳ ಹರಳುಗಳಿಂದಾಗಿ ಈ ನಗರದಲ್ಲಿ ಪ್ರತಿಯೊಂದು ದೇಶ ಹಾಗೂ ಜನಾಂಗದ ಜನರನ್ನು ಕಾಣಬಹುದು.

ಈ ನಗರದ ಗಾತ್ರದ ಬಗೆಗೆ ನಾನಿಲ್ಲಿ ಬರೆಯುವುದಿಲ್ಲ. ಏಕೆಂದರೆ, ಯಾವ ಸ್ಥಳದಿಂದಲೂ ಅದು ಎಲ್ಲ ಕಾಣಿಸದು. ಆದರೆ ನಾನೊಂದು ಗುಡ್ಡ ಏರಿದೆ, ಅಲ್ಲಿಂದ ಅದರ ಬಹುಭಾಗವನ್ನು ನೋಡಲು ಶಕ್ಯವಾಯಿತು. ಅದನ್ನು ಎಲ್ಲ ನೋಡಲಾಗಲಿಲ್ಲ ಏಕೆಂದರೆ ಅದು ಹಲವಾರು ಬೆಟ್ಟ ಸಾಲುಗಳ ಮಧ್ಯೆ ಇದೆ. ಅಲ್ಲಿಂದ ನಾನು ನೋಡಿದುದು ರೋಮ್‌ನಷ್ಟು ವಿಶಾಲವಾಗಿಯೂ ಮತ್ತು ಬಹಳ ಸುಂದರವಾಗಿಯೂ ಕಂಡಿತು. ಅದರೊಳಗೆ ಮತ್ತು ಮನೆಗಳ ತೋಟಗಳಲ್ಲಿ ಅನೇಕ ಗಿಡಗಳಿವೆ ಮತ್ತು ಅದರ ಮಧ್ಯೆ ಹರಿಯುವ ನೀರಿನ ಅನೇಕ ನಾಲೆಗಳಿವೆ. ಅಲ್ಲಲ್ಲಿ ಸರೋವರಗಳಿವೆ. ರಾಜ ತನ್ನ ಅರಮನೆಯ ಹತ್ತಿರವೇ ತೆಂಗಿನ ತೋಪು ಮತ್ತು ಇತರ ಸಂಪದ್ಭರಿತ ಹಣ್ಣಿನ ಗಿಡಗಳನ್ನು ಹೊಂದಿದ್ದಾನೆ. ಮೂರರ ವಾಸಸ್ಥಾನದ ಕೆಳಗಡೆ ಒಂದು ಚಿಕ್ಕ ನದಿಯಿದೆ. ಅದರ ಈ ಬದಿಗೆ ಅನೇಕ ಹಣ್ಣಿನ ತೋಟಗಳು ಮತ್ತು ಅನೇಕ ಹಣ್ಣಿನ ಗಿಡಗಳುಳ್ಳ ತೋಟಗಳು ಇವೆ. ಅವುಗಳಲ್ಲಿ ಬಹುಮಟ್ಟಿಗೆ ಇರುವುದು ಮಾವು, ಅಡಿಕೆ, ಹಲಸು ಮತ್ತು ಅನೇಕ ನಿಂಬೆ, ಕಿತ್ತಳೆ ಗಿಡಗಳು. ಅವುಗಳು ಒಂದಕ್ಕೊಂದು ಎಷ್ಟು ಗುತ್ತಾಗಿ ಬೆಳೆದಿವೆಯೆಂದರೆ ಅದು ದಟ್ಟ ಅರಣ್ಯದಂತೆ  ತೋರುತ್ತದೆ. ಮತ್ತು ಅಲ್ಲಿ ಬಿಳಿ ದ್ರಾಕ್ಷಿಗಳೂ ಉಂಟು. ನಗರದಲ್ಲಿರುವ ನೀರೆಲ್ಲ ಪ್ರಥಮ ಸುತ್ತಿನ ಗೋಡೆಯ ಹೊರಗೆ ಇರುವ ನಾನು ಹೇಳಿದ ಎರಡು ಕೆರೆಗಳಿಂದ ಬರುತ್ತದೆ.

ಈ ನಗರದಲ್ಲಿನ ಜನರ ಸಂಖ್ಯೆ ಎಣಿಕೆ ಮಿಕ್ಕಿದ್ದು. ಎಷ್ಟರಮಟ್ಟಿಗೆಂದರೆ ಕಲ್ಪಿತವೆಂದು ತಿಳಿದಾರೆಂಬ ಭಯದಿಂದ ನಾನು ಅದನ್ನು ಇಲ್ಲಿ ಬರೆಯಲಿಚ್ಛಿಸುವುದಿಲ್ಲ. ಜನರ ಮತ್ತು ಆನೆಗಳ ಸಂಖ್ಯೆ ಎಷ್ಟು ದೊಡ್ಡದಾಗಿತ್ತೆಂದರೆ ಅಶ್ವಾಳಾಗಲಿ ಕಾಲಾಳಾಗಲಿ ಯಾವ ಸೈನ್ಯವೂ ಯಾವ ಓಣಿ ಅಥವಾ ಬೀದಿಯನ್ನೂ ಭೇದಿಸಿಕೊಂಡು ನುಗ್ಗಲು ಸಾಧ್ಯವಿಲ್ಲ.

ಜಗತ್ತಿನಲ್ಲಿಯೆ ಇದು ಅತ್ಯಂತ ಚೆನ್ನಾಗಿ ಸವರಿಸಿದ ನಗರ. ಅಕ್ಕಿ, ಗೋದಿ, ಧಾನ್ಯಗಳು, ಮುಸುಕಿನ ಜೋಳ, ಕೆಲಮಟ್ಟಿನ ಜವೆ ಮತ್ತುಅವರೆಗಳು, ಹಸಿರುಗಡಲೆ, ಬೇಳೆಕಾಳು, ಕುದುರೆಗಡಲೆ ಮತ್ತು ಈ ನಾಡಿನಲ್ಲಿ ಬೆಳೆಯುವ ಹಾಗೂ ಜನರ ಆಹಾರವಾಗಿರುವ ಇತರ ಅನೇಕ ಧಾನ್ಯಗಳು ಮೊದಲಾದ ಆಹಾರ ಧಾನ್ಯಗಳ ದಾಸ್ತಾನು ಇಲ್ಲಿ ಮಾಡಲಾಗಿದೆ. ಇವುಗಳ ದೊಡ್ಡ ಸಂಗ್ರಹವಿದ್ದು ಇವುಗಳು ಬಹಳ ಅಗ್ಗವಾಗಿವೆ. ಅದನ್ನು ಮೂರರನ್ನುಳಿದು ಬೇರೆ ಯಾರೂ ತಿನ್ನದುದರಿಂದ ಗೋಧಿ ಇತರ ಧಾನ್ಯಗಳಷ್ಟು ಸಾಮಾನ್ಯವಾಗಿಲ್ಲ. ಆದರೆ ನಾನು ಹೇಳಿದುದನ್ನು ನೀವು ಕಾಣುವಿರಿ. ಬೀದಿಗಳು ಮತ್ತು ಪೇಟೆಗಳು ಮೂಟೆ ಹೇರಿದ ಲೆಕ್ಕವಿಲ್ಲದಷ್ಟು ಎತ್ತುಗಳಿಂದ ತುಂಬಿದುದರಿಂದ ಅವುಗಳಿಂದಾಗಿ ನೀವು ಮುಂದೆ ಸಾಗಲಾರಿರಿ ಮತ್ತು ಅನೇಕ ಬೀದಿಗಳಲ್ಲಿ ಅವು ಎಷ್ಟೊಂದು ಇರುತ್ತವೆಂದರೆ ನೀವು ಅವು ಹೋಗುವವರೆಗೆ ನಿಲ್ಲಬೇಕು ಇಲ್ಲವೆ ಇನ್ನೊಂದು ಹಾದಿಯಿಂದ ಹೋಗಬೇಕು. ಬಹಳ ಕೋಳಿಗಳೂ ಇವೆ. ಫವಾಒ ಎಂದು ಕರೆಯಲಾಗುವ ಒಂದು ವಿಂಟೆಮ್[10] ಬೆಲೆಯುಳ್ಳ ನಾಣ್ಯಕ್ಕೆ ನಗರದಲ್ಲಿ ಮೂರು ಕೋಳಿ ಕೊಡುತ್ತಾರೆ. ನಗರದ ಹೊರಗೆ ಒಂದು ವಿಂಟೆಮ್‌ಗೆ ನಾಲ್ಕು ಕೋಳಿ ಕೊಡುತ್ತಾರೆ.

ಈ ನಾಡಿನಲ್ಲಿ ಅನೇಕ ಕವುಜುಗ ಹಕ್ಕಿಗಳಿವೆ. ಆದರೆ, ಅವು ನಮ್ಮಂತಹ ನಮೂನೆಯವು ಅಥವಾ ಮಟ್ಟದವು ಆಗಿಲ್ಲ. ಅವು ಇಟಲಿಯ ಎಸ್ಟರ್ನ್‌ಗಳಂತಿವೆ. ಇವು ಮೂರು ವಿಧವಾಗಿವೆ. ಒಂದು ಜಾತಿ ಪೋರ್ತುಗಾಲದವುಗಳಂತೆ ಒಂದೇ ಚಿಕ್ಕ ಗಡಸುಚಾಚು ಹೊಂದಿದೆ; ಇನ್ನೊಂದು ಜಾತಿ ಪ್ರತಿಯೊಂದು ಕಾಲಿನಲ್ಲಿ ಎರಡು ಚೂಪಾದ ಹೆಚ್ಚೂ ಕಡಿಮೆ ನಮ್ಮ ಬೆರಳಿನಷ್ಟು ಉದ್ದ ಹಾಗೂ ದಪ್ಪವಾದ ಗಡಸುಚಾಚು ಹೊಂದಿದೆ. ಇನ್ನೂ ಒಂದು ಜಾತಿ ಬಣ್ಣದ್ದು. ಇವುಗಳಿಂದಲೂ ಲಾವಕ್ಕಿ ಮತ್ತು ಮೊಲಗಳಿಂದಲೂ ಎಲ್ಲ ಜಾತಿಯ ಕಾಡುಪಕ್ಷಿಗಳಿಂದಲೂ ಮತ್ತು ಸರೋವರಗಳಲ್ಲಿರುವ ಗೀಜಗನಂತೆ ಕಾಣುವ ಇತರ ಹಕ್ಕಿಗಳಿಂದಲೂ ಮಾರುಕಟ್ಟೆಗಳು ತುಂಬಿರುತ್ತವೆ. ಇವೆಲ್ಲ ಪಕ್ಷಿಗಳು ಮತ್ತು ಬೇಟೆ ಪ್ರಾಣಿಗಳನ್ನು ಅವರು ಜೀವಂತ ಮಾರುತ್ತಾರೆ ಮತ್ತು ಅವು ಬಹಳ ಅಗ್ಗವಿರುತ್ತವೆ. ಏಕೆಂದರೆ, ಅವರು ಒಂದು ವಿಂಟೆಮ್‌ಗೆ ಆರು ಅಥವಾ ಎಂಟು ಕವುಜುಗ ಹಕ್ಕಿಗಳನ್ನು ಕೊಡುತ್ತಾರೆ ಮತ್ತು ಮೊಲಗಳನ್ನು ಎರಡು, ಕೆಲವೊಮ್ಮೆ ಒಂದು ಕೊಡುತ್ತಾರೆ. ಇತರ ಹಕ್ಕಿಗಳನ್ನಾದರೊ ನೀವು ಎಣಿಸಲಾರದಷ್ಟು ಕೊಡುತ್ತಾರೆ. ಏಕೆಂದರೆ, ದೊಡ್ಡವುಗಳನ್ನು ಕೂಡ ಎಷ್ಟೊಂದು ಕೊಡುತ್ತಾರೆಂದರೆ ಅವರು ಕೊಡುವ ಹಕ್ಕಿಗಳು, ಪಾರಿವಾಳಗಳು ಮತ್ತು ನಾಡಿನ ಇತರ ಸಾಮಾನ್ಯ ಪಕ್ಷಿಗಳಂತಹ ಚಿಕ್ಕವುಗಳ ಕಡೆಗೆ ನೀವು ಗಮನಿಸದಿರಬಹುದು. ಹಕ್ಕಿಗಳು ಎರಡು ತರಹದವು: ಕೆಲವು ಪೋರ್ತುಗಾಲಿನಲ್ಲಿನವುಗಳಂತೆ ಇವೆ, ಮಿಕ್ಕವು ಥ್ರಶ್ ಪಕ್ಷಿಗಳಷ್ಟು ದೊಡ್ಡವು. ಹಕ್ಕಿಗಳನ್ನು ಒಂದು ಫವಾಒಗೆ ಹನ್ನೆರಡು ಅಥವಾ ಹದಿನಾಲ್ಕು ಕೊಡುತ್ತಾರೆ. ಪಾರಿವಾಳಗಳ ಬೆಲೆ ಇತರ ಪಕ್ಷಿಗಳಿದ್ದಷ್ಟೆ. ಅವರು ದಿನಾಲು ಕೊಲ್ಲುವ ಕುರಿಗಳಿಗೆ ಲೆಕ್ಕವಿಲ್ಲ, ಅವುಗಳನ್ನು ಎಣಿಸಲಿಕ್ಕಾಗದು. ಏಕೆಂದರೆ, ಪ್ರತಿಯೊಂದು ಬೀದಿಯಲ್ಲಿ ಮಾಂಸ ಮಾರುವ ಜನರಿದ್ದಾರೆ. ಅದು ಎಷ್ಟು ಸ್ವಚ್ಛ ಹಾಗೂ ದಪ್ಪವಾಗಿರುತ್ತದೆಂದರೆ ಅದು ಹಂದಿಯ ಮಾಂಸದಂತೆ ಕಾಣುತ್ತದೆ. ಕಟುಕರ ಮನೆಗಳಿರುವ ಕೆಲವು ಬೀದಿಗಳಲ್ಲಿ ಹಂದಿಗಳೂ ಇವೆ. ಅವು ಎಷ್ಟು ಬೆಳ್ಳಗೆ ಮತ್ತು ಸ್ವಚ್ಛವಾಗಿವೆಯೆಂದರೆ ನಿಮಗೆ ಯಾವುದೆ ದೇಶದಲ್ಲಿ ಇದ್ದಕ್ಕಿಂತ ಉತ್ತಮವಾದವುಗಳು ದೊರೆಯವು. ಒಂದು ಹಂದಿಯ ಬೆಲೆ ನಾಲ್ಕು ಅಥವಾ ಐದು ಫನಮ್‌ಗಳು. ಅಲ್ಲದೆ, ದಿನಾಲು ಬರುವ ನಿಂಬೆಯ ರಾಶಿಗಳಿಗೆ ಪೊಮೊಸ್‌ನವುಗಳು ಯಾವ ಲೆಕ್ಕವೂ ಅಲ್ಲ. ಸಿಹಿ ಮತ್ತು ಹುಳಿ ಕಿತ್ತಳೆಗಳ, ಕಾಡುಬದನೆಕಾಯಿಗಳ ಇತರ ಕಾಯಿಪಲ್ಯ, ಹಣ್ಣುಹಂಪಲುಗಳ ವಿಫುಲತೆ ದಂಗುಬಡಿಸು ವಂತಹದು. ಈ ನಗರಗಳ ಪರಿಸ್ಥಿತಿ ಹಗಲೆಲ್ಲ ಸಾಮಗ್ರಿ ಮತ್ತು ಆಹಾರ ಧಾನ್ಯಗಳ ಕೊರತೆ ಬೀಳುವ ಇತರ ನಗರಗಳ ಪರಿಸ್ಥಿತಿಯಂತಿಲ್ಲ. ಏಕೆಂದರೆ, ಇದರಲ್ಲಿ ಎಲ್ಲವೂ ವಿಫುಲವಾಗಿದೆ. ಪ್ರತಿದಿನ ಮಾರಲಾಗುವ ಬೆಣ್ಣೆ, ಎಣ್ಣೆ, ಹಾಲುಗಳ ಮೊತ್ತದ ಬಗೆಗೂ ಹೇಳದಿರಲಾರೆ. ಈ ನಗರದಲ್ಲಿ ಜರುಗುವ ಆಕಳು ಮತ್ತು ಎಮ್ಮೆಗಳ ಸಂಗೋಪನೆ ಯಾವ ಪ್ರಮಾಣದ್ದೆಂದರೆ ಅದರಂತಹದಿನ್ನೊಂದನ್ನು ನೋಡಲು ನೀವು ದೂರ ಹೋಗಬೇಕು. ಬಹಳ ದಾಳಿಂಬಗಳೂ ಉಂಟು. ದ್ರಾಕ್ಷಿಗಳನ್ನು ಒಂದು ಫನಮ್‌ಗೆ ಮೂರು ಗೊಂಚಲಿನಂತೆ, ದಾಳಿಂಬಗಳನ್ನು ಹತ್ತರಂತೆ ಮಾರಲಾಗುತ್ತದೆ.

ಈ ನಗರದ ಉತ್ತರ ದಿಕ್ಕಿಗೆ ಬಹಳ ನೀರುಳ್ಳ ದೊಡ್ಡ ನದಿಯಿದೆ. ಅದರಲ್ಲಿ ವಿಫುಲ ಮೀನುಗಳಿವೆ. ಆ ಮೀನುಗಳು ಅನಾರೋಗ್ಯಕರವಾಗಿವೆ. ಮತ್ತು ಈ ನದಿಯಲ್ಲಿ….. (ಮೂಲದಲ್ಲಿ ಹೀಗೆಯೆ ಇದೆ) ಎಂದು ಎನ್ನಬಹುದಾದದ್ದು ಇದೆ. ಉಳಿದ ನದಿಗಳು ಹರಿದುಬಂದು ಇದಕ್ಕೆ ಸೇರಿರುವುದರಿಂದ ಇದು ವಿಶಾಲವಾಗಿದೆ.

ಈಗ ಈ ನದಿಯ ದಂಡೆಯ ಮೇಲಿರುವ ಊರುಗಳನ್ನು ನೋಡೋಣ. ಸೇನುಗುಂಡಿಮ್[11] ಎಂದು ಕರೆಯಲಾಗುವ ನಗರವೊಂದು ನಿರ್ಮಿತವಾಗಿದೆ. ಅದು ಈ ಹಿಂದೆ ರಾಜ್ಯದ ರಾಜಧಾನಿಯಾಗಿತ್ತೆಂದು ಹೇಳುತ್ತಾರೆ. ಆದರೆ ಈಗ ಅಲ್ಲಿ ಬಹಳ ಕಡಿಮೆ ಜನ ವಾಸವಾಗಿದ್ದಾರೆ. ಅದು ಇನ್ನೂ ಒಳ್ಳೆಯ ಗೋಡೆಗಳನ್ನು ಹೊಂದಿದ್ದು ಬಹಳ ಭದ್ರವಾಗಿದೆ. ಮತ್ತು ಅದು ಎರಡೇ ದ್ವಾರಗಳಿರುವ ಎರಡು ಬೆಟ್ಟಸಾಲುಗಳ ನಡುವೆ ಇದೆ. ಈ ನಗರದಲ್ಲಿ ರಾಜನ ಪರವಾಗಿ ಒಬ್ಬ ದಳವಾಯಿ ಇರುತ್ತಾನೆ. ಜನರು ಈ ಊರಿಗೆ ಬುಟ್ಟಿಗಳಂತೆ ದುಂಡಗಿರುವ ದೋಣಿಗಳಲ್ಲಿ ದಾಟಿ ಬರುತ್ತಾರೆ. ಅವುಗಳನ್ನು ಒಳಗಡೆ ಬೆತ್ತದಂತೆ ಮಾಡಿ ಹೊರಮೈಗೆ ಚರ್ಮ ಹೊದಿಸುತ್ತಾರೆ. ಅವುಗಳು ಹದಿನೈದು ಇಪ್ಪತ್ತು ಜನರನ್ನು ಒಯ್ಯಬಲ್ಲವು ಮತ್ತು ಅಗತ್ಯ ಬಿದ್ದರೆ ಕುದುರೆ ಮತ್ತು ಎತ್ತುಗಳೂ ಅವುಗಳಲ್ಲಿ ದಾಟುತ್ತವೆ. ಆದರೆ, ಬಹುಮಟ್ಟಿಗೆ ಈ ಪ್ರಾಣಿಗಳು ಈಜಿ ದಾಟುತ್ತವೆ. ಜನರು ಅವುಗಳನ್ನು ಒಂದು ತರದ ಮೋಟು ಹುಟ್ಟಿನಿಂದ ಹುಟ್ಟುಹಾಕುತ್ತಾರೆ ಮತ್ತು ಅವು ಇತರ ದೋಣಿಗಳಂತೆ ನೇರವಾಗಿ ಹೋಗಲಾರವಾದುದರಿಂದ ಈ ದೋಣಿಗಲು ಯಾವಾಗಲೂ ದುಂಡಗೆ ತಿರುಗುತ್ತವೆ. ರಾಜ್ಯದಲ್ಲಿ ನದಿಗಳಿರುವೆಡೆಯಲ್ಲೆಲ್ಲ ಇವುಗಳನ್ನು ಬಿಟ್ಟರೆ ಬೇರೆ ದೋಣಿಗಳಿಲ್ಲ.[12]

ಈ ನಗರದಲ್ಲಿ ಸಜೀವ ಕುರಿಗಳನ್ನು ಮಾರುವ ಸ್ಥಳಗಳೂ ಉಂಟು. ನಗರದ ಸುತ್ತಲಿನ ಹೊಲಗಳು ಅವುಗಳಿಂದ ತುಂಬಿದುದನ್ನು ಕಾಣಬಹುದು. ಅದೇ ರೀತಿ ಆಕಳುಗಳು ಹಾಗೂ ಎಮ್ಮೆಗಳದ್ದೂ. ನೋಡಲು ಅದು ಸುಂದರ ನೋಟವಾಗಿರುತ್ತದೆ. ಹಾಗೆಯೆ ಆಡುಗಳು, ಮರಿಗಳು ಮತ್ತು ಟಗರುಗಳದ್ದೂ. ಟಗರುಗಳು ಎಷ್ಟು ದೊಡ್ಡವಿರುತ್ತವೆಂದರೆ ಅವುಗಳಿಗೆ ಲಗಾಮು ಜೀನು ತೊಡಿಸಲಾಗುತ್ತದೆ. ಅನೇಕ ಕುರಿಗಳೂ ಅದೇ ರೀತಿ ಇದ್ದು ಹುಡುಗರು ಅವುಗಳ ಮೇಲೆ ಕುಳಿತು ನಡೆಸುತ್ತಾರೆ.

ನಗರದ ಗೋಡೆಗಳಾಚೆ ಉತ್ತರಕ್ಕೆ ಮೂರು ಬಲು ಸುಂದರ ದೇವಾಲಯಗಳಿವೆ. ಅವುಗಳಲ್ಲೊಂದನ್ನು ವಿಟೆಲಾ[13] ಎಂದು ಕರೆಯಲಾಗುತ್ತದೆ. ಅದು ಈ ನಾಗುಂಡಿಮ್ ನಗರಕ್ಕೆ ಎದುರಾಗಿ ನಿಂತಿದೆ. ಇನ್ನೊಂದನ್ನು ಆ ಒಪರಾದ್ಯನಾರ್[14] ಎಂದು ಕರೆಯುತ್ತಾರೆ. ಅವರು ಬಹಳ ಭಕ್ತಿ ತೋರುವುದೂ ಮತ್ತು ಮಹಾ ತೀರ್ಥಯಾತ್ರೆ ಹೊರಡುವುದೂ ಇದಕ್ಕೇ.

ಈ ದೇವಾಲಯದಲ್ಲಿ, ಪೂರ್ವಕ್ಕಿರುವ ಅದರ ಪ್ರಧಾನ ಹೆಬ್ಬಾಗಿಲಿಗೆ ಎದುರಾಗಿ ಉಪ್ಪರಿಗೆಯ ಮೊಗಸಾಲೆ ಹಾಗೂ ಕಮಾನು ದಾರಿಗಳುಳ್ಳ ಬಲು ಸುಂದರ ಮನೆಗಳ ಬಲು ಸುಂದರ ಬೀದಿಯಿದೆ. ಇವುಗಳಲ್ಲಿ ಅಲ್ಲಿಗೆ ಬರುವ ಯಾತ್ರಿಗಳಿಗೆ ಆಶ್ರಯ ನೀಡಲಾಗುತ್ತದೆ. ಮೇಲುವರ್ಗದವರ ವಾಸಕ್ಕಾಗಿ ಮನೆಗಳೂ ಇವೆ. ಅದೇ ಬೀದಿಯಲ್ಲಿ ರಾಜನ ಅರಮನೆಯೊಂದಿದೆ. ದೇವಾಲಯವನ್ನು ಸಂದರ್ಶಿಸುವಾಗ ಅವನು ಅಲ್ಲಿಯೆ ತಂಗುತ್ತಾನೆ. ಈ ಪ್ರಥಮ ಹೆಬ್ಬಾಗಿಲಿನ ಮೇಲೆ ಒಂದು ದಾಳಿಂಬ ವೃಕ್ಷ[15]ವಿದೆ. ದ್ವಾರಕ್ಕೆ ಬಲು ಎತ್ತರವಾದ ಗೋಪುರವಿದೆ. ಗೋಪುರ ಪುರುಷ ಸ್ತ್ರೀಯರ, ಬೇಟೆಯ ದೃಶ್ಯಗಳ, ಇನ್ನೂ ಅನೇಕ ಆಕೃತಿಗಳ ಸಾಲುಗಳಿಂದ ಆಚ್ಛಾದಿತವಾಗಿದೆ. ಗೋಪುರ ಮೇಲಕ್ಕೆ ಹೋದಂತೆ ಕಿರಿದಾಗುವುದ ರಿಂದ ಆಕೃತಿಗಳು ಆಕಾರದಲ್ಲಿ ಚಿಕ್ಕದಾಗುತ್ತವೆ. ಈ ದ್ವಾರ ದಾಟಿದರೆ ಮೊದಲಿನದಂತಹದೇ ಇನ್ನೊಂದು ದ್ವಾರವುಳ್ಳ ವಿಶಾಲ ಅಂಗಳದಲ್ಲಿ ಪ್ರವೇಶಿಸುತ್ತೀರಿ. ಆದರೆ ಈ ದ್ವಾರ ಉದ್ದಕ್ಕೂ ಚಿಕ್ಕದಾಗಿದೆ. ಈ ಎರಡನೆಯ ದ್ವಾರ ದಾಟಿದರೆ ಕಲ್ಲಿನ ಕಂಬಗಳ ಮೇಲೆ ಸುತ್ತಲೂ ಇರುವ ಮೊಗಸಾಲೆಗಳುಳ್ಳ ವಿಶಾಲ ಅಂಗಳವಿದೆ. ಈ ಅಂಗಳದ ಮಧ್ಯದಲ್ಲಿ ಗರ್ಭ ಗುಡಿಯಿದೆ.[1]      ಇವನು ಕೃಷ್ಣದೇವನ ಮಂತ್ರಿ ಸುಪ್ರಸಿದ್ಧ ಸಾಳುವ ತಿಮ್ಮ. ತೆಮ್ಮರ‌್ಸಿ ಎಂಬ ಪದಾಂತ್ಯ ಬಹುಶಃ ‘ಅರಸ’ವನ್ನು ಪ್ರತಿನಿಧಿಸುತ್ತದೆ. ತೆಮೆರ‌್ಸಿ…. ತಿಮ್ಮರಸ…. ತಿಮ್ಮರಾಜ.

[2]      ಕೊರಿಯಾನ ಪ್ರಕಾರ ಮಂಡಲಾಧಿಪತಿ ಲೊಪೊ ಸೊಆರಿಸ್ ಕ್ರಿಸ್ಟೊವಾಒ ದ ಫಿಗೈರೆಡೊನನ್ನು ಕ್ರಿ.ಶ. ೧೫೧೭ರಲ್ಲಿ ರಾಜ ಪ್ರತಿನಿಧಿಯಾಗಿ ವಿಜಯನಗರಕ್ಕೆ ಕುದುರೆ ಆನೆಗಳೊಂದಿಗೆ ಕಳಿಸಿಕೊಟ್ಟ (ಲೆಂಡಸ್‌ದ ಇಂಡಿಯಾ, ii.೫೦೯-೫೧೦). ಆದರೆ, ಈ ದೃಢ ಹೇಳಿಕೆ ಎಷ್ಟು ಮಟ್ಟಿಗೆ ನಿಜವೆಂಬುದು ನಮಗೆ ತಿಳಿಯದು ಎಂದು ಸೆನ್ಹೊರ್ ಲೋಪ್ಸ್ ಎತ್ತಿ ತೋರಿ ಸುತ್ತಾನೆ (ತನ್ನ ‘ಕ್ರಾನಿಕಾ’ದ ಪೀಠಿಕೆ ixxxii ಟಿಪ್ಪಣಿ). ಆದರೆ ಅವನು ಗೋವಾ ದಲ್ಲಿದ್ದುದಂತೂ ನಿಜ ಮತ್ತು ಈ ಯುದ್ಧ ಜರುಗಿದ ಅನತಿ ಕಾಲದಲ್ಲಿಯೆ ಅವನನ್ನು ಗೋವಾದ ಭೂಖಂಡಗಳ ಪ್ರಧಾನ ಠಾಣೆದಾರನನ್ನಾಗಿ ಮಾಡಲಾಯಿತು. ಮತ್ತು ಅವನ ವಾಸಸ್ಥಾನ ಮರಡೊರ್‌ನ ದೇವಾಲಯದಲ್ಲಿತ್ತು. ಅವನು ಹಲವು ಬಾರಿ ಮುಸಲ್ಮಾನರ ಕೈಯಲ್ಲಿಗಂಡಾಂತರದಲ್ಲಿ ಸಿಲುಕಿದ್ದ ಮತ್ತು ಕ್ರಿ.ಶ. ೧೫೩೬ರಲ್ಲಿ ಪೋರ್ತುಗೀಜರು ಮತ್ತು ಅವನು ಗೆಳೆತನ ಹೊಂದಿದ್ದ ಬೆಳಗಾವಿಯ ಅಸದ ಖಾನ ಮಧ್ಯೆ ಜರುಗಿದ ಯುದ್ಧಗಳಲ್ಲಿ ಉಪಸ್ಥಿತನಿದ್ದ, ಅವನು ಒಂದು ಕಾಲಕ್ಕೆ ಗೋವಾದ ಕಾರಖಾನೆಯ ಮೊಕ್ತಿಯಾರನೂ ಆಗಿದ್ದನೆಂದು ಮಿಸ್ಟರ್ ಡ್ಯಾನ್ವರ್ಸ್ (೨, ೫೦೭)ಹೇಳುತ್ತಾನೆ.

[3]      ಇದು ಸ್ಪಷ್ಟವಾಗಿಯೆ ರಾಯ್ ದ ಮೆಲೊನಿಗೆ ಅನ್ವಯಿಸುತ್ತದೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ,ಪುಟ ೧೫೫). ದ ಸಿಕ್ವೆರಾನನ್ನು ಉದ್ದೇಶಿಸಿದ್ದುದಾಗಿದ್ದರೆ ಅವನನ್ನು “ಮಂಡಲಾಧಿಪತಿ”ಎಂದು ಕರೆಯಲಾಗುತ್ತಿತ್ತು.

[4]      ಇವು ನಿಶ್ಚಿತವಾಗಿಯೂ ಸಂಗೀತ ವಾದ್ಯಗಳಾಗಿದ್ದವೆಂದು ಮಿಸ್ಟರ್ ಫರ್ಗ್ಯುಸನ್ ಎತ್ತಿ ತೋರಿಸುತ್ತಾನೆ. ಮಹಾಪ್ರಭುವಿಗೆ ಕಳಿಸಲಾದ ಕಾಣಿಕೆಗಳಲ್ಲಿ “ಕೆಲವು ಆರ್ಗನ್‌ಗಳು ಮತ್ತು ಒಂದು ಕ್ಲ್ಯಾವಿಕಾರ್ಡ್ ಮತ್ತು ಅವುಗಳ ವಾದಕನೊಬ್ಬ”ಇದ್ದವೆಂದು, ಕ್ರಿ.ಶ. ೧೫೨೦(ಅದೇ ವರ್ಷ)ದಲ್ಲಿ ಡಾಮ್ ರಾಡ್ರಿಗೊ ದ ಲಿಮಾನ ನೇತೃತ್ವದ ರಾಯಭಾರವನ್ನು “ಪ್ರೆಸ್ಟರ್ ಜಾನ್”ನಿಗೆ ವರ್ಣಿಸುತ್ತ ಕ್ಯಾಸ್ಟನ್ ಹೆಡಾ (೫.೨೮)ಹೇಳುತ್ತಾನೆ. ಈ ಆರ್ಗನ್‌ಗಳು ಅವರ ರಾಯಭಾರ ಕುರಿತ ಫಾದರ್ ಆಳ್ವಾರಿಜ್‌ನ ವೃತ್ತಾಂತದಲ್ಲೂ ಉಲ್ಲೇಖಿತವಾಗಿವೆ. (ಹ್ಯಾಕ್ಲುಟ್ ಸೊಸಾಯಿಟಿ ಅನುವಾದ. ಪು.೧೦).

[5]      “ರಾಜ ಎರಡು ಗೇಣಿನ ಬಂಗಾರದ ಜರತಾರಿ ಟೊಪ್ಪಿಗೆಯನ್ನು ಧರಿಸುತ್ತಾನೆ”. ಎಂದು ವಾರ್ಥೆಮಾ ಹೇಳುತ್ತಾನೆ. ಇವನು ಕೃಷ್ಮದೇವನ ಪೂರ್ವಾಧಿಕಾರಿ ನರಸಿಂಹ.

[6]      ಕಮಲಾಪುರದ ರಸ್ತೆಯ ಮೇಲೆ ಹೊಸಪೆಟೆಯಿಂದ ಒಂದು ಮೈಲಿನಷ್ಟು ದೂರವಿರುವ ಸುಂದರವಾದ ಅನಂತಶಯನ ದೇವಾಲಯವನ್ನು ಇದು ನಿರ್ದೇಶಿಸಬಹುದು, ಮರಗಳು ಇಂದಿಗೂ ಕೊಂಚಮಟ್ಟಿಗೆ ನಿಂತಿವೆ.

[7]      ಲೇಖಕ ಬಹುಶಃ ಬುರುಜುಗಳು ಅಥವಾ ಗೋಪುರಗಳನ್ನು ಅಥವಾ ಗುಡ್ಡದ ನೆತ್ತಿಯ ಮೇಲೆ ಭದ್ರ ಗೋಡೆಯುಳ್ಳ ಆಶ್ರಯ ಸ್ಥಾನಗಳನ್ನು ಸೂಚಿಸುತ್ತಾನೆ. ವಾಕ್ಯವೃಂದ ಅಸ್ಪಷ್ಟವಾಗಿದೆ.

[8]      ಇಲ್ಲಿ ಉಲ್ಲೇಖಿತವಾದ ಮಾರ್ಗ ಬಹುಶಃ ಕಮಲಾಪುರ ಗ್ರಾಮದ ಉತ್ತರಕ್ಕಿರುವ ಅರಮನೆಯ ಆವರಣದ ಪ್ರವೇಶ ಮಾರ್ಗ.

[9]      ಲೇಖಕ ಈ ಭರವಸೆ ಈಡೇರಿಸುವುದನ್ನು ಮರೆತುಬಿಟ್ಟ.

[10]     ವಿಂಟೆಮ್ = ೭/೨೦ಪೆನಿ

[11]     ಆನೆಗುಂದಿ.

[12]     ವಿಠಲಸ್ವಾಮಿಯ ದೇವಾಲಯದ ಸಮೀಪದಲ್ಲಿ ಇಂದಿಗೂ ಅದರ ಅವಶೇಷಗಳು ಕಂಡು ಬರುವ, ನೆಟ್ಟಗೆ ನಿಲ್ಲಿಸಿದ ಒರಟು ಏಕಶಿಲಾ ಕಂಬಗಳ ಮೇಲೆ ಕಟ್ಟಲಾದ ಕಲ್ಲಿನ ಸೇತುವೆ ಉಲ್ಲೇಖಿಸಲ್ಪಡದಿರುವುದನ್ನು ನೋಡಿದರೆ ಅದನ್ನು ನಂತರದ ಕಾಲದಲ್ಲಿ ಕಟ್ಟಲಾಯಿತೆಂದು ತೋರುತ್ತದೆ.

[13]     ವರ್ಣಿಸಲಾಗಿರುವ ಸ್ಥಳದಿಂದಾಗಿ ಇದು ಸುಂದರವಾಗಿ ಕಡೆದ ವಿಠಲಸ್ವಾಮಿ ದೇವಾಲಯ ವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

[14]     ಈ ಶಬ್ದವೊಂದು ಒಗಟು. ವರ್ಣನೆಯಿಂದ ಸಂಭವನೀಯವಾಗಿ ತೋರುವಂತೆ ಈ ದೇವಾಲಯ ಇಂದಿಗೂ ಬಳಕೆಯಲ್ಲಿರುವ ಹಂಪೆಯ ಮುಖ್ಯ ದೇವಾಲಯವೆ ಆಗಿದ್ದರೆ ‘ಆಒಪೆ’(Aope)‘ಹಂಪಿ’ಅಥವಾ ‘ಹಂಪೆ’ಯನ್ನು ಸಂಕೇತಿಸುತ್ತದೆಂದು ನಾನು ಸೂಚಿಸಬಯಸುತ್ತೇನೆ. Radi ‘ರಾಜಾ’ಅಥವಾ radian ‘ರಾಜ್ಯಮ್’ಆಗಿರಬಹುದು. ಅದನ್ನು “ರಾಜನ ಹಂಪೆ ದೇವಾಲಯ”- ಇದು ಅದನ್ನು ಕರಾರುವಾಕ್ಕಾಗಿ ವರ್ಣಿಸುತ್ತದೆ ಎಂದು ವರ್ಣಿಸಿದ ಯಾವನೊ ಒಬ್ಬ ಬಹುಶಃ ಈ ಹೆಸರನ್ನು ಪಿಯಾಸ್‌ನಿಗೆ ಕೊಟ್ಟಿರ ಬಹುದು. ವಿರುಪಾಕ್ಷನಿಗೆ ಸಮರ್ಪಿತವಾಗಿದ್ದು ಅದು ಮಹಾನಗರದ ಪ್ರಮುಖ ಆರಾಧನ ಮಂದಿರವಾಗಿತ್ತು.

[15]     ಬಳಸಲಾದ ಶಬ್ದ romeyra ಅದು ದಾಳಿಂಬವೃಕ್ಷ ಅಥವಾ ಸ್ತ್ರೀಯಾತ್ರಿ ಎಂಬ ಅರ್ಥ ನೀಡಬಹುದು. ಪ್ರಸ್ತಾಪ, ಬಾಗಿಲ ಮೇಲಿರುವ ಗೋಪುರದ ಮೇಲಣ ಮೆತುಗಾರೆಯ ಆಕೃತಿಗಳು ಮತ್ತು ನಕ್ಷೆಗಳಿಗಿದೆ.