ಪ್ರಮುಖ ದ್ವಾರದ ಎದುರಿಗೆ ನಾಲ್ಕು ಸ್ತಂಭಗಳಿವೆ. ಎರಡು ಚಿನ್ನದ ಗಿಲೀಟು ಮಾಡಿದವು, ಇನ್ನೆರಡು ತಾಮ್ರದವು. ಅವುಗಳ ದೀರ್ಘ ವಯಸ್ಸಿನಿಂದಾಗಿ ಬಂಗಾರ ಉದುರಿಹೋಗಿದೆ ಎಂದು ನನಗೆನಿಸುತ್ತದೆ; ಉಳಿದೆರಡೂ ತಾಮ್ರದವು, ಏಕೆಂದರೆ ಎಲ್ಲವೂ ತಾಮ್ರದವು. ದೇವಾಲಯದ ದ್ವಾರಕ್ಕೆ ತೀರ ಹತ್ತಿರವಿರುವುದನ್ನು ಈಗ ಇಲ್ಲಿ ಆಳುತ್ತಿರುವ ಈ ರಾಜಾ ಕ್ರಿಸ್ನರಾವ್ ಕೊಟ್ಟಿದ್ದ. ಮಿಕ್ಕವುಗಳನ್ನು ಅವನ ಪೂರ್ವಾಧಿಕಾರಿಗಳು ನೀಡಿದ್ದರು. ದೇವಾಲಯದ ದ್ವಾರದ ಹೊರಬದಿಯಲ್ಲಿ ಚಾವಣಿಯವರೆಗೆ ತಾಮ್ರದಿಂದ ಆಚ್ಛಾದಿತ ವಾಗಿದ್ದು ಬಂಗಾರದ ಗಿಲೀಟು ಮಾಡಲಾಗಿದೆ. ಚಾವಣಿಯ ತುದಿಯ ಮೇಲೆ ಎರಡೂ ಬದಿಗೆ ಪೂರ್ತಿ ಬಂಗಾರದ ಗಿಲೀಟು ಮಾಡಲಾದ ಹುಲಿಗಳಂತೆ ಕಾಣುವ ಕೆಲವು ದೊಡ್ಡ ಪ್ರಾಣಿಗಳಿವೆ. ಈ ಗರ್ಭಗುಡಿಯನ್ನು ಪ್ರವೇಶಿಸಿದಾಕ್ಷಣ ಅದನ್ನು ಹೊತ್ತಿರುವ ಕಂಬ ಕಂಬದಲ್ಲೂ ಇರುವ ಅನೇಕ ಚಿಕ್ಕ ರಂದ್ರಗಳಲ್ಲಿ ಎಣ್ಣೆ ದೀಪಗಳಿರುವುದನ್ನು ನೋಡುತ್ತೀರಿ. ಅವು ಪ್ರತಿ ರಾತ್ರಿ ಉರಿಯುತ್ತವೆ ಎಂದು ಅವರು ನನಗೆ ಹೇಳುತ್ತಾರೆ. ಅವು ಎರಡೂವರೆ ಇಲ್ಲವೆ ಮೂರು ಸಾವಿರ ದೀಪಗಳಾಗುತ್ತವೆ. ಈ ಗುಡಿಯನ್ನು ದಾಟಿದ ಕೂಡಲೆ ಯಾವುದೋ ಚರ್ಚ್‌ನ ನೆಲಗವಿಯಂತಿರುವ ಇನ್ನೊಂದು ಚಿಕ್ಕ ಗುಡಿಯನ್ನು ಪ್ರವೇಶಿಸುತ್ತೀರಿ. ಅದಕ್ಕೆ ಬದಿಗಳಲ್ಲಿ ಎರಡು ಬಾಗಿಲುಗಳಿದ್ದು ಅಲ್ಲಿಂದ ಮುಂದಕ್ಕೆ ಈ ಕಟ್ಟಡ ಆರಾಧನಾ ಗೃಹದಂತಿವೆ. ಅಲ್ಲಿ ಅವರು ಆರಾಧಿಸುವ ಮೂರ್ತಿಯಿದೆ. ಅದನ್ನು ತಲುಪುವ ಮುನ್ನ ಮೂರು ಬಾಗಿಲುಗಳಿವೆ. ಗರ್ಭಗುಡಿ ಗುಮ್ಮಟ ಚಾವಣಿಯಾಗಿದ್ದು ಆಕಾಶದಿಂದ ಯಾವುದೆ ಬೆಳಕು ಬೀಳದಿದ್ದುದರಿಂದ ಕತ್ತಲಾಗಿರುತ್ತದೆ. ಅದನ್ನು ಯಾವಾಗಲೂ ಬತ್ತಿಗಳಿಂದ ಬೆಳಗಿಸಲಾಗುತ್ತದೆ. ಮೊದಲ ಬಾಗಿಲಲ್ಲಿ ದ್ವಾರಪಾಲಕರಿದ್ದು ಅವರು ಅದರ ಮೇಲ್ವಿಚಾರಣೆ ಯಲ್ಲಿದ್ದ ಬ್ರಾಹ್ಮಣರನ್ನು ಹೊರತುಪಡಿಸಿ ಯಾರಿಗೂ ಪ್ರವೇಶಿಸಲು ಬಿಡುವುದಿಲ್ಲ. ನಾನು ಅವರಿಗೆ ಏನನ್ನೊ ಕೊಟ್ಟೆನೆಂದು ಒಳಗೆ ಬಿಟ್ಟರು. ಬಾಗಿಲ ಮಧ್ಯೆ ಚಿಕ್ಕ ದೇವತೆಗಳ ವಿಗ್ರಹಗಳಿವೆ. ಪ್ರಧಾನ ಮೂರ್ತಿ ಯಾವುದೇ ಆಕಾರವಿಲ್ಲದ ದುಂಡು ಕಲ್ಲು. ಅದೆಂದರೆ ಅವರಿಗೆ ಬಲು ಭಕ್ತಿ. ಈ ಕಟ್ಟಡದ ಹೊರಮೈಗೆಲ್ಲ ತಾಮ್ರದ ಗಿಲೀಟು ಕೊಡಲಾಗಿದೆ. ದೇವಾಲಯದ ಹಿಂದೆ ಹೊರಗಡೆ ನಾನು ಹೇಳಿದ ಮೊಗಸಾಲೆಗಳಿಗೆ ಹತ್ತಿರವಾಗಿಯೆ ಬಿಳಿ ಚಂದ್ರಕಾಂತ ಶಿಲೆಯಲ್ಲಿ ಮಾಡಲಾದ ಆರು ತೋಳುಗಳುಳ್ಳ ಚಿಕ್ಕ ವಿಗ್ರಹವಿದೆ. ಒಂದರಲ್ಲಿ…. ಇದೆ,

[1] ಇನ್ನೊಂದರಲ್ಲಿ ಖಡ್ಗವಿದೆ. ಉಳಿದುವುಗಳಲ್ಲಿ ಪವಿತ್ರ ಲಾಂಛನಗಳಿವೆ. ಮತ್ತು ಅದರ ಪಾದದಡಿಯಲ್ಲಿ ಒಂದು ಕೋಣವಿದೆ ಮತ್ತು ಅದನ್ನು ಕೊಲ್ಲಲು ಸಹಾಯಕವಾದ ದೊಡ್ಡ ಪ್ರಾಣಿಯೊಂದಿದೆ. ಈ ದೇವಾಲಯದಲ್ಲಿ ಅವಿರತವಾಗಿ ತುಪ್ಪದ ದೀವಿಗೆ ಉರಿ ಯುತ್ತದೆ ಮತ್ತು ಸುತ್ತಲೂ ಪೂಜಾಗೃಹಗಳಿಗಾಗಿ ಚಿಕ್ಕ ದೇವಾಲಯಗಳಿವೆ.

ಮೇಲೆ ಹೇಳಿದ ಇತರೆ ದೇವಾಲಯಗಳು ಅದೇ ಮಾದರಿಯಲ್ಲಿ ರಚಿಸಲ್ಪಟ್ಟಿವೆ. ಆದರೆ ಇದು ಪ್ರಮುಖವಾದುದು ಮತ್ತು ಅತ್ಯಂತ ಪ್ರಾಚೀನವಾದುದು. ಅವುಗಳು ಹಲವಾರು ಕಟ್ಟಡಗಳನ್ನು ಮತ್ತು ಅನೇಕ ಗಿಡಗಳುಳ್ಳ ತೋಟಗಳನ್ನು ಹೊಂದಿವೆ. ಅವುಗಳಲ್ಲಿ ಬ್ರಾಹ್ಮಣರು ಕಾಯಿಲಪ್ಯಗಳನ್ನು[2] ಮತ್ತು ತಾವು ತಿನ್ನುವ ಇತರ ಸಸ್ಯಗಳನ್ನು ಬೆಳೆಯುತ್ತಾರೆ. ಇವುಗಳಲ್ಲಿ ಯಾವುದೊಂದರ ಉತ್ಸವ ಜರುಗಿದಾಗ ಗಾಲಿಗಳ ಮೇಲೆ ಉರುಳುವ ವಿಜಯೋತ್ಸವ ರಥಗಳನ್ನು ಎಳೆಯುತ್ತಾರೆ. ಬಹಳ ವೈಭವದೊಂದಿಗೆ ಹೇಳಲಾದ ಬೀದಿ ಗುಂಟ ವಿಗ್ರಹವನ್ನು (ಒಯ್ಯಲಾಗುತ್ತದೆ). ಅದರೊಂದಿಗೆ ನೃತ್ಯಕನ್ಯೆಯರು ಮತ್ತು ಸ್ತ್ರೀಯರು ಸಂಗೀತದೊಂದಿಗೆ ದೇವಾಲಯಕ್ಕೆ  ಹೋಗುತ್ತಾರೆ. ಈ ರಥಗಳನ್ನು ಎಳೆಯುವ ರೀತಿಯ ಬಗೆಗೆ ನಾನು ಹೇಳುವುದಿಲ್ಲ. ಏಕೆಂದರೆ,ನಾನು ಈ ನಗರದಲ್ಲಿದ್ದ ಒಟ್ಟು ಅವಧಿಯಲ್ಲಿ ಯಾವುದನ್ನೂ ಎಳೆಯಲಿಲ್ಲ. ನಗರದಲ್ಲಿ ಇನ್ನೂ ಅನೇಕ ದೇವಾಲಯಗಳಿವೆ. ಪದಬಾಹುಳ್ಯ ತೊಡೆಯಲು ಅವುಗಳ ಬಗೆಗೆ ನಾನು ಇಲ್ಲಿ ಹೇಳುವುದಿಲ್ಲ.

ಈ ಅನಾಗರಿಕರಲ್ಲಿಯೂ ನಮ್ಮಲ್ಲಿಯಂತೆ ಉತ್ಸವ ಆಚರಿಸುವ ದಿನಗಳಿವೆಯೆಂಬುದನ್ನು ನೀವು ತಿಳಿಯಬೇಕು. ಅವರ ಉಪವಾಸದ ದಿನಗಳೂ ಇವೆ. ಅಂದು ಅವರು ಇಡೀ ದಿನ ಏನನ್ನೂ ಸೇವಿಸುವುದಿಲ್ಲ; ಮಧ್ಯರಾತ್ರಿಗೆ ಮಾತ್ರ ಸೇವಿಸುತ್ತಾರೆ. ಮುಖ್ಯ ಉತ್ಸವದ ಕಾಲ ಬಂದಾಗ, ಅದು ರಾಜ್ಯದ ರಾಜಧಾನಿಯಾದುದರಿಂದಲೂ, ರಾಜ ಹೊಸ ನಗರದಿಂದ ಈ ಬೀಸ್ನಗ ನಗರಕ್ಕೆ ಆಗಮಿಸುತ್ತಾನೆ. ಈ ಉತ್ಸವಗಳಿಗೆ ಅವರು ಹಾಜರಿರುವಂತೆ ರಾಜ್ಯದ ಎಲ್ಲ ನರ್ತಕಿಯರನ್ನು ಕರೆಯಿಸಲಾಗುತ್ತದೆ. ಹಾಗೆಯೆ ದಳವಾಯಿಗಳು ಮತ್ತು ರಾಜರು ಮತ್ತು ಮಹಾ ಪ್ರಭುಗಳನ್ನು, ಅವರ ಪರಿವಾರಗಳೊಂದಿಗೆ. ಆದರೆ, ರಾಜ ಯುದ್ಧಕ್ಕೆ ಕಳಿಸಿದವರನ್ನು ಇಲ್ಲವೆ ಬೇರೆ ಭಾಗಗಳಲ್ಲಿರುವವರನ್ನು ಇಲ್ಲವೆ (ಆಕ್ರಮಣದ) ಭೀತಿಯಿರುವ ಕಡೆ ರಾಜ್ಯದ ದೂರ ಗಡಿಯಲ್ಲಿರುವವರನ್ನು ಮಾತ್ರ, ಉದಾಹರಣೆಗೆ ಒರಿಯಾ ರಾಜ್ಯ ಮತ್ತು ಇಡಲ್‌ಸಾಒನ ಪ್ರದೇಶಗಳು, ಕರೆಯುವುದಿಲ್ಲ. ಇಂಥ ದಳವಾಯಿಗಳು ಇಂಥ ಸ್ಥಳಗಳಲ್ಲಿ ಅನುಪಸ್ಥಿತರಿದ್ದರೂ ನಾನು ಇನ್ನು ಮುಂದೆ ಹೇಳುವವರು ಅವರ ಪರವಾಗಿ ಉತ್ಸವಕ್ಕೆ ಬಂದಿರುತ್ತಾರೆ.

ಹನ್ನೆರಡನೆಯ ಸೆಪ್ಟಂಬರದಂದು[3] ಪ್ರಾರಂಭವಾಗಿ ಒಂಬತ್ತು ದಿನ ನಡೆಯುವ ಈ ಉತ್ಸವಗಳು ರಾಜನ ಅರಮನೆಯಲ್ಲಿ ಜರುಗುತ್ತವೆ.

ಅರಮನೆ ಈ ತರಹದ್ದು ಇದೆ. ಅದು ನಾನು ಹೇಳಿರುವ ಬಯಲು ಸ್ಥಳಕ್ಕೆ[4] ತೆರೆಯುವ ದ್ವಾರ ಹೊಂದಿದೆ. ಈ ದ್ವಾರದ ಮೇಲೆ ಸ್ವಲ್ಪ ಎತ್ತರದ ಗೋಪುರವಿದೆ. ಮಿಕ್ಕವುಗಳಂತೆ ಇದನ್ನೂ ಕಟ್ಟಲಾಗಿದ್ದು ಅದಕ್ಕೆ ಮೊಗಸಾಲೆಗಳಿವೆ. ಈ ದ್ವಾರದ ಹೊರಗೆ ಅರಮನೆಯನ್ನು ಸುತ್ತುತ್ತದೆಂದು ನಾನು ಹೇಳಿರುವ ಗೋಡೆ ಪ್ರಾರಂಭವಾಗುತ್ತದೆ. ದ್ವಾರದಲ್ಲಿ ಅನೇಕ ದ್ವಾರಪಾಲಕರಿರುವರು.[5] ಅವರು ಕೈಯಲ್ಲಿ ಚರ್ಮದ ಕೋರಡಗಳು ಮತ್ತು ಬಡಿಗೆಗಳನ್ನು ಹಿಡಿದಿರುತ್ತಾರೆ. ದಳವಾಯಿಗಳು ಮತ್ತು ಪ್ರಮುಖರು ಕಾವಲು ಪಡೆಯ ಮುಖ್ಯಸ್ಥನಿಂದ ಆಜ್ಞೆ ಬಂದಿರುವವರನ್ನು ಅಲ್ಲದೆ ಬೇರೆ ಯಾರನ್ನೂ ಪ್ರವೇಶಿಸಗೊಡುವುದಿಲ್ಲ. ಈ ದ್ವಾರ ದಾಟಿದರೆ ಒಂದು ಬಯಲು ಸ್ಥಳವಿದೆ ಮತ್ತು ಮೊದಲಿನಂತಹ ಇನ್ನೊಂದು ದ್ವಾರವುಂಟು. ಅಲ್ಲಿಯೂ ದ್ವಾರಪಾಲಕರು ಮತ್ತು ರಕ್ಷಕರು ಇರುವವರು. ಇದನ್ನು ಪ್ರವೇಶಿಸಿದ ಕೂಡಲೆ ಒಂದು ವಿಶಾಲ ಬಯಲು ಸ್ಥಳವಿದೆ, ಅದರ ಒಂದು ಬದಿಗೆ ಮತ್ತು ಇನ್ನೊಂದು ಬದಿಗೆ ಎತ್ತರವಲ್ಲದ ಮೊಗಸಾಲೆಗಳಿವೆ. ಇಲ್ಲಿ ದಳವಾಯಿಗಳು ಮತ್ತು ಪ್ರಮುಖರು ಉತ್ಸವ ನೋಡಲೋಸುಗ ಕುಳಿತುಕೊಳ್ಳುತ್ತಾರೆ. ಈ ಬಯಲು ಸ್ಥಳದ ಉತ್ತರ ದಿಕ್ಕಿನ ಎಡಬದಿಗೆ ಒಂದು ಏಕಮಹಡಿಯ ದೊಡ್ಡ ಕಟ್ಟಡವಿದೆ. ಮಿಕ್ಕವುಗಳೆಲ್ಲ ಅದರಂತೆಯೆ ಇವೆ. ಈ ಕಟ್ಟಡ ಆನೆಯಾಕಾರದ ಮತ್ತು ಇತರ ಆಕೃತಿಗಳುಳ್ಳ ಕಂಬಗಳ ಮೇಲೆ ನಿಂತಿದ್ದು ಮುಂದೆಲ್ಲ ಬಯಲಿದೆ. ಅದಕ್ಕೆ ಹೋಗಲು ಮೆಟ್ಟಿಲುಗಳನ್ನು ಹತ್ತಬೇಕು. ಅದರ ಸುತ್ತ ಕೆಳಗಡೆ ಜಗತಿಯಿದೆ. ಅದಕ್ಕೆ ಹಾಸುಗಲ್ಲು ಜೋಡಿಸಲಾಗಿದೆ. ಇಲ್ಲಿ ಕೆಲವು ಜನ ಉತ್ಸವ ನೋಡಲು ನಿಂತುಕೊಳ್ಳುತ್ತಾರೆ. ಅದನ್ನು ನಾನೀಗಾಗಲೇ ಹೇಳಿರುವಂತೆ ರಾಜ ಒರಿಯಾ ವಿರುದ್ಧ ಯುದ್ಧದಿಂದ ಹಿಂತಿರುಗಿದಾಗ ಕಟ್ಟಿದ್ದರಿಂದ ಈ ಮನೆಗೆ ವಿಜಯಗೃಹ ಎಂದು ಕರೆಯಲಾ ಗುತ್ತದೆ. ಬಯಲು ಸ್ಥಳದ ಬಲಬದಿೆ ಕೆಲವು ಅಟ್ಟಣೆಗಳಿದ್ದವು. ಅವು ಕಟ್ಟಿಗೆಯವಿದ್ದು ಗೋಡೆಯ ತುದಿಯ ಮೇಲೂ ಕಾಣುವಷ್ಟು ಎತ್ತರವಾಗಿದ್ದವು. ಅವುಗಳ ಮೇಲ್ಭಾಗವನ್ನು ನಡುಗೆಂಪು ಮತ್ತು ಹಸಿರು ಮಖಮಲ್ಲಿನಿಂದ ಮತ್ತು ಇತರ ಸುಂದರ ಬಟ್ಟೆಗಳಿಂದ ಮುಚ್ಚಲಾಗಿತ್ತು. ಮತ್ತು ಕೆಳಗಿನಿಂದ ಮೇಲಿನವರೆಗೆ ಅಲಂಕರಿಸಲಾಗಿತ್ತು. ಈ ಬಟ್ಟೆ ಉಣ್ಣೆಯದೆಂದು ಯಾರೂ ಊಹಿಸದಿರಲಿ. ಏಕೆಂದರೆ, ಈ ದೇಶದಲ್ಲಿ ಅಂಥದಾವುದೂ ಇಲ್ಲ. ಆದರೆ ಅವು ಉತ್ಕೃಷ್ಟ ಉತ್ಸವಗಳಿಗಾಗಿ ವಿಶೇಷತಃ ಮಾಡಲಾಗಿರುತ್ತದೆ. ಅವು ಹನ್ನೊಂದು ಇವೆ. ದ್ವಾರಗಳಿಗೆ ಎದುರಾಗಿ ಎರಡು ವರ್ತುಲಗಳಿದ್ದವು. ಅವುಗಳಲ್ಲಿ ಬಂಗಾರ, ವಜ್ರ ಮತ್ತು ಮುತ್ತುಗಳ ಆಭರಣದಿಂದ ಅಲಂಕೃತರಾದ ನರ್ತಕಿಯರಿದ್ದರು. ಬಯಲು ಜಾಗದ ಮುಂದೆ ಪೂರ್ವ ಬದಿಗಿರುವ ದ್ವಾರಕ್ಕೆದುರಾಗಿ ನಾನು ಹೇಳಿರುವ ವಿಜಯಗೃಹದ ತರಹದ್ದೇ ಎರಡು ಕಟ್ಟಡಗಳಿವೆ. ಈ ಕಟ್ಟಡಗಳಿಗೆ ಸುಂದರವಾಗಿ ಕಲ್ಲಿನಲ್ಲಿ ಮಾಡಿದ ಒಂದು ರೀತಿಯ ಮೆಟ್ಟಿಲು ಇವೆ ಒಂದು ಮಧ್ಯದಲ್ಲಿದ್ದರೆ ಇನ್ನೊಂದು ಕೊನೆಗಿದೆ. ಈ ಕಟ್ಟಡದ ತುಂಬ, ಗೋಡೆಗಳು ಮತ್ತು ಮಾಳಿಗೆ ಎರಡೂ ಅಲ್ಲದೆ ಆಧಾರಗಳನ್ನೂ ಬಿಡದಂತೆ ಒಳ್ಳೆಯ ಬಟ್ಟೆಗಳನ್ನು ತೂಗುಹಾಕಲಾಗಿತ್ತು. ಗೋಡೆಯ ಮೇಲಿನ ಬಟ್ಟೆಗಳ ಮೇಲೆ ಕಸೂತಿ ಮಾದರಿಯ ಆಕೃತಿಗಳಿಂದ ಅಲಂಕರಿಸಲಾಗಿತ್ತು. ಈ ಕಟ್ಟಡಗಳಿಗೆ ಒಂದರ ಮೇಲೊಂದು ಎರಡು ಸುಂದರವಾಗಿ ಕಡೆದ ಮತ್ತು ಅವುಗಳ ಮಗ್ಗಲುಗಳನ್ನು ಚೆನ್ನಾಗಿ ಮಾಡಿದ ಜಗಲಿಗಳು ಇವೆ. ಈ ಜಗಲಿಗಳಿಗೆ ಉತ್ಸವಕ್ಕಾಗಿ ರಾಜನಿಗೆ ಪ್ರಿಯರಾದವರ ಮಕ್ಕಳು, ಕೆಲವೊಮ್ಮೆ ನಪುಂಸಕರು, ಬರುತ್ತಾರೆ. ರಾಜನಿಗೆ ಹತ್ತಿರವಾಗಿಯೆ ಮೇಲಿನ ಜಗಲಿಯ ಮೇಲೆ ಅವನೊಂದಿಗೆ ಬಂದಿದ್ದ ನಮ್ಮೆಲ್ಲರೊಂದಿಗೆ ಕ್ರಿಸ್ಟೊವಾಒ ದ ಫಿಗೈರೆಡೊ ಇದ್ದ. ಏಕೆಂದರೆ, ಉತ್ಸವಗಳನ್ನು ಮತ್ತು ವೈಭವ ಚೆನ್ನಾಗಿ ಕಾಣುವ ಜಾಗದಲ್ಲಿ ಅವನನ್ನು ಕುಳ್ಳಿರಿಸುವಂತೆ ರಾಜ ಆಜ್ಞೆಗೈದಿದ್ದ.ಅರಮನೆಯಲ್ಲಿರುವ ಬೀದಿಗಳ ಬಗೆಗೆ ಮರೆಯುವ ಮುನ್ನ ಇಲ್ಲಿಯೆ ಹೇಳಿಬಿಡುತ್ತೇನೆ. ನಾನು ಹೇಳಿರುವ ಅರಮನೆಯೊಳಗೆ ರಾಜನ ಮತ್ತು ಅವನ ಪತ್ನಿಯರ ಮತ್ತು ನಾನು ಈಗಾಗಲೆ ಹೇಳಿರುವಂತೆ ಸಂಖ್ಯೆಯಲ್ಲಿ ಹನ್ನೆರಡು ಸಾವಿರವಿರುವ ಪರಿಚಾರಿಕೆಯರ ಬಿಡದಿಗಳಿವೆ. ಅವರು ಒಳಗೆ ಹೋಗಲು ಈ ಮನೆಗಳ ಸಾಲುಗಳಿಗೆ ದ್ವಾರವುಂಟು. ಈ ಅರಮನೆ ಮತ್ತು ವಿಜಯಗೃಹದ ನಡುವೆ ಒಂದು ದ್ವಾರವಿದ್ದು ಅದು ಅದಕ್ಕೆ ಹಾದಿಯಾಗಿದೆ. ಒಳಗೆ ಮೂವತ್ನಾಲ್ಕು ಬೀದಿಗಳಿವೆ.

ಉತ್ಸವಗಳಿಗೆ ತಿರುಗುವದಾದರೆ, ಈ ವಿಜಯಗೃಹದಲ್ಲಿ ರಾಜ ಅರಿವೆಯಿಂದ ಮಾಡಿಸಿದ, ಬಾಗಿಲು ಮುಚ್ಚಿದ, ಕೋಣೆಯೊಂದನ್ನು ಕಟ್ಟಿಸಿದ್ದಾನೆ ಎಂಬುದನ್ನು ನೀವು ತಿಳಿಯಬೇಕು. ಅದರಲ್ಲಿ ದೇವತೆಯ ಗುಡಿಯಿದೆ. (ಕಟ್ಟಡದ) ಮಧ್ಯದಲ್ಲಿರುವ ಇನ್ನೊಂದರಲ್ಲಿ ಮಧ್ಯದ ಮೆಟ್ಟಲುಗಳಿಗೆ ಇದಿರಾಗಿ ಒಂದು ಜಗಲಿ ಇರಿಸಲಾಗಿದೆ. ಈ ಜಗಲಿ ಮೇಲೆ ರಾಜಸಿಂಹಾಸನ ನಿಂತಿರುತ್ತದೆ. ಅದನ್ನು ಹೀಗೆ ಮಾಡಲಾಗಿದೆ. ಅದು ನಾಲ್ಕು ಮಗ್ಗಲುಳ್ಳದ್ದು ಮತ್ತು ಸಪಾಟಾದುದು, ಮೇಲ್ಭಾಗ ದುಂಡಗಿದ್ದು ಮಧ್ಯದಲ್ಲಿ ಆಸನಕ್ಕೆ ತಗ್ಗು ಇದೆ. ಅದರ ಮರಗೆಲಸದ ಬಗೆಗೆ ನೀವು ತಿಳಿದಿರಬೇಕಾದುದೇನೆಂದರೆ ಅದು ಪೂರ್ತಿಯಾಗಿ ರೇಷ್ಮೆ ಬಟ್ಟೆಗಳಿಂದ(?)[6] ಹೊದಿಸಲ್ಪಟ್ಟಿದೆ ಮತ್ತು ಪೂರ್ತಿ ಬಂಗಾರದ ಸಿಂಹಗಳಿವೆ ಮತ್ತು ಬಟ್ಟೆಗಳ ಮಧ್ಯವಿರುವ ಸ್ಥಳಗಳಲ್ಲಿ ಕೆಳಗಡೆ ಅನೇಕ ಮಾಣಿಕ್ಯ, ಸಣ್ಣ ಮುತ್ತು ಮತ್ತು ಮುತ್ತುಗಳುಳ್ಳ ಸುವರ್ಣ ಫಲಕಗಳಿವೆ. ಮಗ್ಗಲುಗಳ ಸುತ್ತಲೂ ಗಣ್ಯ ವ್ಯಕ್ತಿಗಳ ಸುವರ್ಣಾ ಕೃತಿಗಳು ತುಂಬಿವೆ. ಅವುಗಳ ಮೇಲೆ ಬಹಳ ಬಂಗಾರದ ಕೆಲಸವಿದ್ದು ಅದರಲ್ಲಿ ಅನೇಕ ಅಮೂಲ್ಯ ಹರಳುಗಳಿವೆ. ಈ ಸಿಂಹಾಸನದ ಮೇಲೆ ಗುಲಾಬಿ ಮತ್ತು ಹೂಗಳಿಂದ ಆವೃತವಾದ ಬಂಗಾರದ್ದೇ ಇರುವ ವಿಗ್ರಹವನ್ನಿಡಲಾಗಿದೆ. ಈ ಸಿಂಹಾಸನದ ಒಂದು ಪಕ್ಕದಲ್ಲಿ ಕೆಳಗಿನ ಜಗಲಿಯ ಮೇಲೆ ತಲೆಯುಡಿಗೆ ಇದೆ. ಇದನ್ನೂ ಅದೇ ರೀತಿಯಲ್ಲಿ ಮಾಡಲಾಗಿದೆ. ಅದು ನೆಟ್ಟಗೆ ಇದ್ದು ಒಂದು ಗೇಣಿನಷ್ಟು ಎತ್ತರವಾಗಿದೆ. ಮೇಲ್ಭಾಗ ದುಂಡಗಿದೆ. ಅದು ಮುತ್ತುಗಳು, ಮಾಣಿಕ್ಯಗಳು ಮತ್ತು ಇತರ ಎಲ್ಲ ಬೆಲೆಯುಳ್ಳ ಹರಳುಗಳಿಂದ ತುಂಬಿ ಹೋಗಿದೆ. ಅದರ ನೆತ್ತಿಯ ಮೇಲೆ ತೀರ ದುಂಡಗಿರದ, ಕಾಯಿಯಷ್ಟು ದೊಡ್ಡದಾದ ಮುತ್ತು ಇದೆ. ಇನ್ನೊಂದು ಪಕ್ಕಕ್ಕೆ ಅದೇ ಮಾದರಿಯಲ್ಲಿ ಮಾಡಿದ ಕಾಲ್ಕಡಗವಿದೆ. ಅದು ಇನ್ನೊಂದು ರಾಜರತ್ನವಾಗಿದ್ದು ದೊಡ್ಡ ಮುತ್ತುಗಳು, ಅನೇಕ ಮಾಣಿಕ್ಯಗಳು, ವಜ್ರಗಳು ಮತ್ತು ಇತರ ಬೆಲೆಯುಳ್ಳ ಹರಳುಗಳಿಂದ ತುಂಬಿಹೋಗಿದೆ. ಅದು ಮನುಷ್ಯನ ತೋಳಿನಷ್ಟು ದಪ್ಪವಿದೆ. ಇದೆಲ್ಲದರ ಮುಂದೆ ಜಗಲಿಯ ಅಂಚಿಗೆ[7] ಆನಿಕೆಯ ಮೇಲೆ ಕೆಲವು ದಿಂಬುಗಳಿವೆ. ಅಲ್ಲಿ ಉತ್ಸವಗಳ ಕಾಲಕ್ಕೆ ರಾಜ ಕುಳಿತಿದ್ದ. ಉತ್ಸವಗಳು ಹೀಗೆ ಆರಂಭಿಸುತ್ತವೆ.

ಬೆಳಗಾದಾಗ ರಾಜ ಈ ವಿಜಯಗೃಹಕ್ಕೆ ಬರುತ್ತಾನೆ, ವಿಗ್ರಹ ಮತ್ತು ಅದರ ಬ್ರಾಹ್ಮಣರಿರುವ ಕೋಣೆಗೆ ಹೋಗುತ್ತಾನೆ ಮತ್ತು ಪ್ರಾರ್ಥನೆ ಮತ್ತು ಆಚರಣೆಗಳನ್ನು ಮಾಡುತ್ತಾನೆಂಬುದನ್ನು ನೀವು ತಿಳಿಯಬೇಕು. ಮನೆಯ ಹೊರಗಡೆ ಅವನ ಕೆಲವು ಪ್ರಿಯರು ಇರುತ್ತಾರೆ ಮತ್ತು ಚೌಕದ ಮೇಲೆ ಅನೇಕ ನರ್ತಕಿಯರು ನರ್ತನಗೈಯುತ್ತಿರುವರು. ಚೌಕದ ಸುತ್ತಲಿನ ಮೊಗಸಾಲೆಗಳಲ್ಲಿ ಅಲ್ಲಿಗೆ ನೋಡಲು ಬಂದಿರುವ ಅನೇಕ ದಳವಾಯಿಗಳು ಮತ್ತು ಪ್ರಮುಖರು ಇದ್ದಾರೆ. ಮತ್ತು ನೆಲದ ಮೇಲೆ, ಮನೆಯ ಜಗಲಿಯ ಹತ್ತಿರ ಸುಂದರ ಮತ್ತು ಸುವ್ಯವಸ್ಥಿತ ಸಜ್ಜಿನಿಂದೊಡಗೂಡಿದ ಹನ್ನೊಂದು ಕುದುರೆಗಳು ಮತ್ತು ಅವುಗಳ ಹಿಂದೆ ಅನೇಕ ಅಲಂಕಾರ ಹೊತ್ತ ನಾಲ್ಕು ಸುಂದರ ಆನೆಗಳು ಇವೆ. ಒಳಗೆ ಪ್ರವೇಶಿಸಿದ ಮೇಲೆ ರಾಜ ಹೊರಗೆ ಬರುತ್ತಾನೆ ಮತ್ತು ಅವನೊಂದಿಗೆ ಬರುವ ಬ್ರಾಹ್ಮಣ ಬಿಳಿ ಗುಲಾಬಿಗಳಿಂದ ತುಂಬಿದ ಬುಟ್ಟಿಯನ್ನು ಕೈಯಲ್ಲಿ ಹಿಡಿದು ಜಗಲಿಯ ಮೇಲೆ ಕುಳಿತ ರಾಜನಲ್ಲಿಗೆ ಹೋಗುತ್ತಾನೆ. ರಾಜ ಮೂರು ಹಿಡಿ ಗುಲಾಬಿಗಳನ್ನು ಎತ್ತಿಕೊಂಡು ಕುದುರೆಗಳತ್ತ ಎಸೆಯುತ್ತಾನೆ. ಅವುಗಳನ್ನು ಎಸೆದ ಮೇಲೆ ಪರಿಮಳಗಳ ಬುಟ್ಟಿ ತೆಗೆದು ಕೊಂಡು ಅವುಗಳತ್ತ ಧೂಪಾರತಿ ಮಾಡುವಂತೆ ಆಚರಿಸುತ್ತಾನೆ. ಇದು ಮುಗಿದ ಮೇಲೆ ಅವನು ಆನೆಗಳನ್ನು ತಲುಪಿ ಅವುಗಳಿಗೂ ಹಾಗೆಯೆ ಮಾಡುತ್ತಾನೆ. ರಾಜ ಇದನ್ನು ಪೂರ್ತಿಗೊಳಿಸಿದಾಗ ಬ್ರಾಹ್ಮಣನು ಬುಟ್ಟಿ ತೆಗೆದುಕೊಂಡು ಜಗಲಿಗೆ ಇಳಿಯುತ್ತಾನೆ ಮತ್ತು ಅಲ್ಲಿಂದ ಆ ಗುಲಾಬಿಗಳನ್ನು ಮತ್ತು ಇತರ ಹೂಗಳನ್ನು ಎಲ್ಲ ಕುದುರೆಗಳ ಮೇಲೆ ಏರಿಸುತ್ತಾನೆ. ಮತ್ತು ಇದನ್ನು ಮಾಡಿ ರಾಜನಲ್ಲಿಗೆ ಮರಳುತ್ತಾನೆ. ಅಮೇಲೆ ರಾಜ ವಿಗ್ರಹವಿದ್ದಲ್ಲಿಗೆ ಪುನಃ ಹೋಗುತ್ತಾನೆ ಮತ್ತು ಅವನು ಒಳಗೆ ಹೋದ ಕೂಡಲೆ ಡೇರೆಗಳ ಪರದೆಗಳಂತೆ ಮಾಡಲಾದ ಕೋಣೆಯ ಪರದೆಗಳನ್ನು ಎತ್ತುತ್ತಾರೆ. ರಾಜ ಇವುಗಳಿದ್ದಲ್ಲಿ ಕೂಡುತ್ತಾನೆ. ಮತ್ತು ಅವುಗಳನ್ನೆಲ್ಲ ಎತ್ತಲಾಗುತ್ತದೆ. ಅಲ್ಲಿಂದ ಅವನು ಇಪ್ಪತ್ನಾಲ್ಕು ಕೋಣಗಳು ಮತ್ತು ನೂರೈವತ್ತು ಕುರಿಗಳ ವಧೆಯನ್ನು ವೀಕ್ಷಿಸುತ್ತಾನೆ. ಅವುಗಳನ್ನು ವಿಗ್ರಹಕ್ಕೆ ನೈವೇದ್ಯ ಮಾಡಲಾಗುತ್ತದೆ. ಈ ಕೋಣಗಳ ಮತ್ತು ಕುರಿಗಳ ರುಂಡಗಳನ್ನು ಕೆಲವು ದೊಡ್ಡ ಮಚ್ಚುಗತ್ತಿಗಳಿಂದ ಒಂದೇ ಹೊಡೆತಕ್ಕೆ ಕತ್ತರಿಸುತ್ತಾರೆಂಬುದನ್ನೂ ನೀವು ತಿಳಿಯಬೇಕು. ಅವುಗಳನ್ನು ಈ ವಧೆಯ ಹೊಣೆಯುಳ್ಳವನು ಹಿಡಿದಿರುತ್ತಾನೆ. ಅವರ ಕೈ ಎಷ್ಟು ನಿಶ್ಚಿತವಾಗಿರುತ್ತದೆಂದರೆ ಒಂದು ಏಟೂ ತಪ್ಪುವುದಿಲ್ಲ. ಈ ಪಶುಬಲಿ ಮುಗಿದ ನಂತರ ರಾಜ ಹೊರನಡೆದು ಇತರ ದೊಡ್ಡ ಕಟ್ಟಡಗಳಿಗೆ ಬರುತ್ತಾನೆ. ಅವುಗಳ ಜಗಲಿಗಳ ಮೇಲೆ ನಿಂತಿರುವ ಬ್ರಾಹ್ಮಣ ಸಮೂಹ ಅವನು ತಾವಿದ್ದಲ್ಲಿಗೆ ಏರಿದ ಕೂಡಲೆ ರಾಜನ ಮೇಲೆ ಹತ್ತು ಅಥವಾ ಹನ್ನೆರಡು ಗುಲಾಬಿಗಳನ್ನು ಚೆಲ್ಲುತ್ತಾರೆ – (ಅಂದರೆ) ಅವನಿಗೆ ತೀರ ಹತ್ತಿರದಲ್ಲಿದ್ದವರು. ಅನಂತರ ಅವನು ಕಟ್ಟಡಗಳ ಮೇಲ್ಭಾಗದಗುಂಟ ಸಾಗುತ್ತಾನೆ ಮತ್ತು ಕೊನೆ ತಲುಪಿದಾಕ್ಷಣ ತನ್ನ ತಲೆಯ ಮೇಲಿಂದ ಟೊಪ್ಪಿಗೆ ತೆಗೆದು ನೆಲದ ಮೇಲಿಟ್ಟು ವಿಗ್ರಹವಿರುವ (ಸ್ಥಳಕ್ಕೆ) ಮುಖವಾಗುವಂತೆ ತಿರುಗುತ್ತಾನೆ. ಇಲ್ಲಿ ಅವನು ಸಾಷ್ಟಾಂಗ ಹಾಕುತ್ತಾನೆ. ಮೇಲೆದ್ದ ನಂತರ ಅವನು ಕಟ್ಟಡದ ಒಳಗಡೆ ಹೋಗುತ್ತಾನೆ ಮತ್ತು ಉದ್ಯಾನವನ್ನು (ಅಥವಾ ಗೋಡೆಯಿರುವ ಆವರಣ) ಪ್ರವೇಶಿಸುತ್ತಾನೆ. ಅಲ್ಲೊಂದು ಚಿಕ್ಕ ಉರಿ ಹೊತ್ತಿಸಲಾಗಿರುತ್ತದೆಂದು ಹೇಳುತ್ತಾರೆ. ಮತ್ತು ಅವನು ಅದರಲ್ಲಿ ಅನೇಕ ಪದಾರ್ಥ ಗಳಿಂದ, ಅಂದರೆ ಮಾಣಿಕ್ಯ ಮತ್ತು ಮುತ್ತು ಮತ್ತು ಇತರ ಎಲ್ಲ ಬಗೆಯ ಬೆಲೆಯುಳ್ಳ ಹರಳುಗಳು ಮತ್ತು ಕತ್ತಾಳೆ ಮತ್ತು ಸುಗಂಧಿತ ಪದಾರ್ಥಗಳಿಂದ ಭಸ್ಮವನ್ನು ಆ ಉರಿಯಲ್ಲಿ ಎಸೆಯುತ್ತಾನೆ. ಇದಾದ ಮೇಲೆ ಅವನು ದೇವಾಲಯಕ್ಕೆ ಹಿಂತಿರುಗುತ್ತಾನೆ ಮತ್ತು ಒಳಗೆ ಹೋಗಿ ಸ್ವಲ್ಪ ಹೊತ್ತು ಇರುತ್ತಾನೆ. ಆ ಸಮಯದಲ್ಲಿ ಇನ್ನೊಂದು ದ್ವಾರದಿಂದ ಆ ಕಟ್ಟಡದಲ್ಲಿದ್ದ ಅವನಿಗೆ ಪ್ರಿಯರಾದ ಕೆಲವರು ಪ್ರವೇಶಿಸಿ ತಮ್ಮ ಸಲಾಮು ಮಾಡುತ್ತಾರೆ. ನಂತರ ಅವನು ಎಲ್ಲಿಂದ ಕುದುರೆಗಳತ್ತ ಹೂ ತೂರಿದನೊ ಆ ಸ್ಥಳಕ್ಕೆ ಹಿಂದಿರುಗುತ್ತಾನೆ. ಅವನು ಇಲ್ಲಿಗೆ ಬಂದ ತಕ್ಷಣ ಎಲ್ಲ ದಳವಾಯಿಗಳು ಮತ್ತು ಪ್ರಮುಖರು ಬಂದು ಅವನಿಗೆ ಸಲಾಮು ಮಾಡುತ್ತಾರೆ ಮತ್ತು ಕೆಲವರು ತಾವು ಇಷ್ಟಪಟ್ಟರೆ ಅವನಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ ಮತ್ತು ಬಂದಂತೆಯೆ ಹಿಂದೆ ಸರಿಯುತ್ತಾರೆ. ಪ್ರತಿಯೊಬ್ಬನು ತನ್ನ ಬಿಡದಿಗೆ ಹೋಗುತ್ತಾನೆ. ರಾಜ ನಾನು ಈಗಾಗಲೆ ಹೇಳಿರುವ ಬಯಲು ಕಣದಲ್ಲಿರುವ ಎರಡು ಕಟ್ಟಡಗಳ ಮಧ್ಯೆ ಇರುವ ದ್ವಾರದ ಮೂಲಕ ಅರಮನೆಯ ಒಳಕ್ಕೆ ಹೋಗುತ್ತಾನೆ. ವಾರಾಂಗನೆಯರು ಮತ್ತು ದೇವಾಲಯದ ಮತ್ತು ಅರಮನೆಯ ನರ್ತಕಿಯರು ಬಹಳ ಹೊತ್ತಿನವರೆಗೆ ದೇವಾಲಯ ಹಾಗೂ ವಿಗ್ರಹದ ಮುಂದೆ ನರ್ತನಗೈಯುತ್ತ ಉಳಿಯುತ್ತಾರೆ. ಈ ಒಂಬತ್ತು ದಿನಗಳಲ್ಲಿ ಪ್ರತಿ ಮುಂಚಾನೆ ಸಮಯದಲ್ಲಿ ನಾನು ಹೇಳಿರುವ ಆಚರಣೆ ಗಳೊಂದಿಗೆ ಇದೆಲ್ಲವನ್ನು ಮಾಡಲಾಗುತ್ತದೆ. ಪ್ರತಿದಿನ (ಹಿಂದಿನದಕ್ಕಿಂತ) ಅಧಿಕ ಭವ್ಯವಾಗಿರುತ್ತದೆ.

ಈಗ ಉತ್ಸವಗಳಿಗೆ ಹಿಂದಿರುಗೋಣ. ಮಧ್ಯಾಹ್ನ ಮೂರು ಗಂಟೆಗೆ ಪ್ರತಿಯೊಬ್ಬನೂ ಅರಮನೆಗೆ ಬರುತ್ತಾನೆ. ಎಲ್ಲರನ್ನೂ ಒಮ್ಮೆಲೆ ಪ್ರವೇಶಿಸಲು ಬಿಡುವುದಿಲ್ಲ. (ದ್ವಾರಗಳ ನಡುವಿನ ಬಯಲು ಜಾಗದಲ್ಲಿ ಹೋಗಲು ನಮಗೆ ಬಿಟ್ಟರು). ಆದರೆ, ಮಲ್ಲರು, ನರ್ತಕಿಯರು, ಎಲ್ಲ ಸಜ್ಜು ಮತ್ತು ಅಲಂಕಾರಗಳಿಂದೊಡಗೂಡಿದ ಆನೆಗಳು, ಈಟಿ ಢಾಲುಗಳಿಂದ ಸುಸಜ್ಜಿತರಾಗಿ ರಜಾಯಿ ಅಂಗಿ ತೊಟ್ಟು ಅವುಗಳ ಮೇಲೆ ಕುಳಿತವರು ಒಳಗೆ ಹೋಗುತ್ತಾರೆ. ಒಳಸೇರಿದ ಕೂಡಲೆ ಇವರು ಕಣ ಸುತ್ತುವರಿದು ಪ್ರತಿಯೊಬ್ಬನೂ ತನ್ನ ಸ್ಥಳದಲ್ಲಿ ನಿಂತುಕೊಳ್ಳುತ್ತಾನೆ ಮತ್ತು ಮಲ್ಲರು ಆ ಕಟ್ಟಡದ ಮಧ್ಯದಲ್ಲಿರುವ ಪಾವಟಿಗೆಗಳಿಗೆ ಹತ್ತಿರ ಹೋಗುತ್ತಾರೆ. ಅಲ್ಲಿ ನರ್ತಕಿಯರಿಗೆ ನರ್ತನಗೈಯಲು ವಿಶಾಲವಾದ ಬಯಲು ನೆಲವನ್ನು ಸಿದ್ಧಗೊಳಿಸಲಾಗಿದೆ. ಇತರ ಅನೇಕ ಜನ, ಅಂದರೆ ಬ್ರಾಹ್ಮಣರು, ರಾಜನಿಗೆ ಪ್ರಿಯರಾದವರ ಮಕ್ಕಳು ಮತ್ತು ಅವರ ಸಂಬಂಧಿಗಳು, ಆಗ ಕಟ್ಟಡದ ಎದುರಿಗಿರುವ ಪ್ರವೇಶ ದ್ವಾರದಲ್ಲಿರುತ್ತಾರೆ. ಇವರೆಲ್ಲ ರಾಜನ ಸೇವೆಗೈಯುವ ಕುಲೀನ ಯುವಕರು. ಈ ಮನೆಯ ಅಧಿಕಾರಿಗಳು ಎಲ್ಲ ಜನರಲ್ಲಿ ಶಿಸ್ತು ಪಾಲಿಸುತ್ತ ಅಡ್ಡಾಡುತ್ತಾರೆ. ಮತ್ತು ಪ್ರತಿಯೊಬ್ಬನು ತನ್ನ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಯಾವನೂ ಆಮಂತ್ರಿಸದೆ ಹೊರತು ಪ್ರವೇಶಿಸಲಾರದಂತೆ ಬೇರೆ ಬೇರೆ ಮಂಟಪಗಳನ್ನೂ ದ್ವಾರಗಳಿಂದ ಪ್ರತ್ಯೇಕಿಸಲಾಗಿದೆ. ಸಾಲ್ವಟಿನಿಕಾ[8] ಕಟ್ಟಡ ಪ್ರವೇಶಿಸುವ ಪ್ರಧಾನ ವ್ಯಕ್ತಿಯಾಗಿದ್ದು ಎಲ್ಲದರ ಮೇಲ್ವಿಚಾರಣೆ ಮಾಡುತ್ತಾನೆ. ಏಕೆಂದರೆ ಅವನೇ ರಾಜನನ್ನು ಬೆಳೆಸಿ ರಾಜನನ್ನಾಗಿ ಮಾಡಿದವ ಮತ್ತು ರಾಜ ಅವನನ್ನು ತಂದೆಯಂತೆ ಕಾಣುತ್ತಾನೆ. ರಾಜ ಅವನನ್ನು ಯಾವಾಗ ಕರೆದರೂ “ದೊರೆ ಸಾಲ್ವಟಿನಿಕಾ” ಎಂದು ಸಂಬೋಧಿಸುತ್ತಾನೆ ಮತ್ತು ರಾಜ್ಯದ ಎಲ್ಲ ದಳವಾಯಿಗಳು ಮತ್ತು ಮನ್ನೆಯರು ಅವನಿಗೆ ಸಲಾಮು ಮಾಡುತ್ತಾರೆ. ಉತ್ಸವಗಳು ಜರುಗುವ ಕಣದೊಳಗೆ ದ್ವಾರಗಳಲ್ಲೊಂದರ ಹತ್ತಿರ ನಿಂತು ಈ ಸಾಲ್ವಟಿನಿಕಾ ಉತ್ಸವಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ತರಲು ಅಲ್ಲಿಂದಲೆ ಆಜ್ಞೆ ನೀಡುತ್ತಾನೆ.

ಇದನ್ನೆಲ್ಲ ಮಾಡಿ ವ್ಯವಸ್ಥೆಗೊಳಿಸಿದ ಮೇಲೆ ರಾಜ ನಾನೀಗಾಗಲೆ ಹೇಳಿರುವ ಸಿಂಹಾಸನ ಮತ್ತು ಇತರ ವಸ್ತುಗಳಿರುವ ಜಗಲಿಗೆ ಬಂದು ಕುಳಿತುಕೊಳ್ಳುತ್ತಾನೆ. ಮತ್ತು ಒಳಗಿರುವ ಎಲ್ಲರೂ ಅವನಿಗೆ ಸಲಾಮು ಮಾಡುತ್ತಾರೆ. ಅವರು ಹಾಗೆ ಮಾಡಿದ ಕೂಡಲೆ ಮಲ್ಲರು ನೆಲದ ಮೇಲೆ ಕುಳ್ಳಿರುತ್ತಾರೆ. ಏಕೆಂದರೆ, ಇವರಿಗೆ ಕೂಡಲು ಅನುಮತಿಯಿದೆ. ಆದರೆ, ಬೇರಾರೂ, ಅವನು ಎಂಥಾ ಮಹಾಪ್ರಭುವೆ ಆಗಿರಲಿ, ರಾಜ ಆಜ್ಞೆ  ನೀಡದ ಹೊರತು ಕುಳ್ಳಿರುವಂತಿಲ್ಲ. ರಾಜನೆದುರು ಯಾವಾಗಲೂ ವೀಳ್ಯದೆಲ್ಲೆ ತಿನ್ನಬಹುದಾದ ನರ್ತಕಿಯರನ್ನು ಹೊರತುಪಡಿಸಿ ಬೇರಾರೂ ತಿನ್ನಬಾರದೆಂದದಿದ್ದರೂ ಮಲ್ಲರು ತಿನ್ನಬಹುದಾಗಿದೆ. ರಾಜ ತನ್ನ ಸ್ಥಾನದಲ್ಲಿ ಆಸೀನನಾದ ತಕ್ಷಣ ತನ್ನ ಕುಲಕ್ಕೆ ಸೇರಿದ, ಸ್ವತಃ ರಾಜರಾಗಿದ್ದ ಮತ್ತು ತನ್ನ ಹೆಂಡತಿಯರ ತಂದೆಗಳಾದ ಮೂವರು ಅಥವಾ ನಾಲ್ವರನ್ನು ತನ್ನೊಂದಿಗೆ ಕುಳ್ಳಿರಲು ಹೇಳುತ್ತಾನೆ. ಇವರಲ್ಲಿ ಪ್ರಮುಖರಾದವನೆಂದರೆ ಸಿರಿಂಗಪಟಾಒ ಮತ್ತು ಮಲಬಾರದ ದಂಡೆಗುಂಟ ಇರುವ ಎಲ್ಲ ಪ್ರದೇಶದ ರಾಜ. ಈ ರಾಜನನ್ನು ಕುಮಾರವೀರ್ಯ[9] ಎಂದು ಕರೆಯಲಾಗುತ್ತದೆ. ಇವನು ಜಗಲಿಯ ಇನ್ನೊಂದು ಬದಿಗೆ ರಾಜನಷ್ಟೆ ಮುಂಭಾಗದಲ್ಲಿ ಕುಳ್ಳಿರುತ್ತಾನೆ. ಮಿಕ್ಕವರೆಲ್ಲ ಹಿಂದೆ ಕುಳ್ಳಿರುವರು.

ರಾಜ ಅಲ್ಲಿ ಬಂಗಾರದ ಗುಲಾಬಿಗಳಿಂದ (ಕಸೂತಿಯಿಂದ) ಆಚ್ಛಾದಿತವಾದ ಬಿಳಿ ಬಟ್ಟೆ ಹಾಗೂ ತನ್ನ ರತ್ನಗಳನ್ನು ಧರಿಸಿ ಕುಳ್ಳಿರುತ್ತಾನೆ. ಅವನು ಹಲವಾರು ಈ ಬಿಳಿ ಬಟ್ಟೆಗಳನ್ನು ಧರಿಸುತ್ತಾನೆ ಮತ್ತು ನಾನು ಅವನನ್ನು ಯಾವಾಗಲೂ ಹಾಗೆಯೆ ಕಂಡದ್ದು. ಅವನ ಸುತ್ತ ಅವನ ತಾಂಬೂಲ, ಖಡ್ಗ ಮತ್ತು ಅವನ ಇತರ ರಾಜಲಾಂಛನಗಳನ್ನು ಹೊತ್ತ ಬಾಲಸೇವಕರು ನಿಂತಿರುತ್ತಾರೆ. ವಿಗ್ರಹವನ್ನಿಟ್ಟಿರುವ ಸಿಂಹಾಸನದ ಸುತ್ತ ಅನೇಕ ಬ್ರಾಹ್ಮಣರು ನಿಂತಿರುತ್ತಾರೆ. ಅವರು ಅದಕ್ಕೆ ಕುದುರೆಬಾಲದ ಜವಿಗಳಿಂದ ಗಾಳಿ ಹಾಕುತ್ತಾರೆ. ಅವುಗಳ ಹಿಡಿಕೆಗಳು ಬಂಗಾರ ಹೊದ್ದಿಸಿದವುಗಳಾಗಿವೆ. ಈ ಜವಿಗಳು ಅತಿ ಶ್ರೇಷ್ಠ ಗೌರವದ ಪ್ರತೀಕ. ಅವರು ಅವುಗಳಿಂದ ರಾಜನಿಗೂ ಗಾಳಿ ಹಾಕುತ್ತಾರೆ.

ರಾಜ ಕುಳಿತ ಕೂಡಲೆ[10] ಹೊರಗೆ ಕಾಯುತ್ತಿದ್ದ ದಳವಾಯಿಗಳು, ಪ್ರತಿಯೊಬ್ಬನು ತನ್ನ ಪ್ರಮುಖರು ಮುಂತಾದವರೊಂದಿಗೆ ಶಿಸ್ತಿನಿಂದ, ಪ್ರವೇಶೀಸುತ್ತಾರೆ. ರಾಜನೆದುರು ಬಂದು ಸಲಾಮು ಮಾಡುತ್ತಾರೆ. ಮತ್ತು ನಾನು ಈಗಾಗಲೇ ವರ್ಣಿಸಿರುವ ಮಂಟಪಗಳಲ್ಲಿ ತಮ್ಮ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಮನ್ನೆಯರ ಪ್ರವೇಶ ಮುಗಿದಾಕ್ಷಣ ಸೈನ್ಯಗಳ ದಳಪತಿಗಳು ಢಾಲು ಬಲ್ಲೆಗಳೊಂದಿಗೆ ಪ್ರವೇಶಿಸುತ್ತಾರೆ. ನಂತರ ಬಿಲ್ಲುಪಡೆಯ ದಳಪತಿಗಳು ಇಂಥ ಸ್ಥಳದಲ್ಲಿ ಶಸ್ತ್ರಾಸ್ತ್ರ ಧರಿಸಿದ ಯಾವನೂ ಪ್ರವೇಶಿಸಲು ಇಲ್ಲವೆ ರಾಜನಿದ್ದಲ್ಲಿಗೆ ಬರಲು ಕೊಡದಂತೆ ಈ ಅಧಿಕಾರಿಗಳು ಕಣದ ಸುತ್ತಲೂ ನೆಲದ ಮೇಲೆ ಆನೆಗಳ ಮುಂದೆ ನಿಂತುಕೊಳ್ಳುತ್ತಾರೆ ಮತ್ತು ಅವರು ರಾಜನ ರಕ್ಷಕರಾಗಿರುವರು. ಈ ಸೈನಿಕರು ತಮ್ಮ ಸ್ಥಾನಗಳಲ್ಲಿ ನಿಂತ ಕೂಡಲೆ ಸ್ತ್ರೀಯರು ನರ್ತಿಸಲಾರಂಭಿಸುವರು ಮತ್ತು ಅವರಲ್ಲಿ ಕೆಲವರು ನಾನು ಹೇಳಿರುವ ಅವುಗಳ ಪ್ರವೇಶದ್ವಾರದಲ್ಲಿರುವ ವರ್ತುಲಾಕಾರದ ದ್ವಾರಮಂಟಪಗಳಲ್ಲಿ ನಿಂತುಕೊಳ್ಳುತ್ತಾ ಈ ಸ್ತ್ರೀಯರು ತಮ್ಮ ದೇಹಗಳ ಮೇಲೆ ಧರಿಸಿದ ವಿಫುಲ ಸಂಪತ್ತನ್ನು ಯಥೋಚಿತವಾಗಿ ನಿಮಗಾರು ವರ್ಣಿಸಬಲ್ಲರು? ಅಷ್ಟೊಂದು ವಜ್ರ, ಮಾಣಿಕ್ಯ, ಮುತ್ತುಗಳಿಂದೊಡಗೂಡಿದ ಬಂಗಾರದ ಕಂಠಾಭರಣಗಳು; ತೋಳುಗಳು ಹಾಗೂ ರಟ್ಟೆಗಳಲ್ಲಿಯೂ  ಕಡಗಗಳು; ಕೆಳಗೆ ನಡುಪಟ್ಟಿಗಳು; ಕಾಲಗಳಲ್ಲಿ ತಪ್ಪದೆ ಕಾಲ್ಕಡಗಗಳು. ಅಚ್ಚರಿ ಬೇರೆ ರೀತಿಯದು ಆಗಿರುತ್ತದೆ, ಅರ್ಥಾತ್ ಇಂಥ ವೃತ್ತಿಯ ಸ್ತ್ರೀಯರಿಗೆ ಇಷ್ಟು ಐಶ್ವರ್ಯ ಹೇಗೆ ಬಂತೆಂಬ ಬಗೆಗೆ. ಆದರೆ ಅವರಲ್ಲಿ ತಮಗೆ ಕೊಡಲಾದ ಹೊಲಗಳುಳ್ಳ, ಮೇಣೆಗಳುಳ್ಳ, ಎಷ್ಟೊಂದು ಸೇವಕಿಯರುಳ್ಳ ಮತ್ತು ಎಣಿಸಲಾಗದಷ್ಟು ವಸ್ತುಗಳುಳ್ಳವರು ಇದ್ದಾರೆ. ಒಂದು ನೂರು ಸಾವಿರ ಪದಾರ್ಥಗಳನ್ನು[11] ಪಡೆದಿರುವಳೆಂದು ಹೇಳಲಾಗುವ ಸ್ತ್ರೀಯೊಬ್ಬಳು ಈ ನಗರದಲ್ಲಿದ್ದಾಳೆ ಮತ್ತು ಅವರನ್ನು ನೋಡಿದ್ದುದರ ಮೇಲಿಂದ ನಾನಿದನ್ನು ನಂಬುತ್ತೇನೆ.

ಅನಂತರ ಮಲ್ಲರು ಆಟ ಆರಂಭಿಸುವರು. ಅವರ ಕುಸ್ತಿ ನಮ್ಮದರಂತೆ ತೋರುವುದಿಲ್ಲ. ಆದರೆ ಹಲ್ಲು ಮುರಿಯುವಂಥ ಕಣ್ಣು ಕೀಳುವಂಥ ಮುಖ ವಿಕಾರಗೊಳಿಸುವಂಥ ಬಲವಾದ ಏಟುಗಳನ್ನು ಕೊಡಲಾಗುತ್ತದೆ. ಅವು ಎಷ್ಟು ತೀವ್ರವಾಗಿರುತ್ತದೆಂದರೆ ಆಗೊಮ್ಮೆ ಈಗೊಮ್ಮೆ ಮಾತು ಕಟ್ಟಿಹೋದ ಕೆಲವರನ್ನು ಅವರ ಮಿತ್ರರು ಹೊತ್ತೊಯ್ಯುತ್ತಾರೆ. ಅವರು ಒಬ್ಬರನ್ನೊಬ್ಬರು ಚೆನ್ನಾಗಿ ಒಗೆಯುತ್ತಾರೆ ಕೂಡ. ಅವರಿಗೆ ತಮ್ಮ ಮುಖಂಡರು ಮತ್ತು ತೀರ್ಪುಗಾರರಿರುತ್ತಾರೆ. ಅವರು ಕಣದಲ್ಲಿ ಎಲ್ಲರನ್ನೂ ಒಂದೇ ಸಮನಾಗಿ ನೋಡಿ ಕೊಳ್ಳುತ್ತಾರೆ ಮತ್ತು ಗೆದ್ದವರನ್ನು ಸತ್ಕರಿಸುತ್ತಾರೆ.

ದಿನದ ಈ ಅವಧಿಯಲ್ಲೆಲ್ಲ ಕುಸ್ತಿ ಮತ್ತು ಸ್ತ್ರೀಯರ ನರ್ತನ ಬಿಟ್ಟು ಬೇರೇನೂ ಮಾಡಲಾಗುವುದಿಲ್ಲ. ಆದರೆ ಸೂರ್ಯ ಕೆಳಗಿಳಿದ ತಕ್ಷಣ ಅನೇಕ ಪಂಜುಗಳನ್ನು ಮತ್ತು ಅರಿವೆಯಿಂದ ಮಾಡಿದ ದೊಡ್ಡ ಮಶಾಲುಗಳನ್ನು ಹೊತ್ತಿಸುತ್ತಾರೆ. ಇವುಗಳನ್ನು ಕಣದ ಸುತ್ತ ಯಾವ ರೀತಿ ಇಡಲಾಗುತ್ತದೆಂದರೆ ಅದೆಲ್ಲ ದಿನದಂತೆಯೆ ಬೆಳಕಾಗಿರುತ್ತದೆ. ಗೋಡೆಗಳ ಮೇಲೆ ಸಹ ಅವುಗಳನ್ನಿಡಲಾಗುತ್ತದೆ. ಕೋಟೆ ಗೋಡೆಯ ಕಂಡಿಗಳಲೆಲ್ಲ ಉರಿಯುವ ದೀಪಗಳನ್ನು ಇರಿಸುತ್ತಾರೆ ಮತ್ತು ರಾಜ ಕೂಡುವ ಸ್ಥಳ ಪಂಜುಗಳಿಂದ ತುಂಬಿದೆ. ಇವೆಲ್ಲವನ್ನೂ ಹೊತ್ತಿಸಿದ ತಕ್ಷಣ ಅನೇಕ ಬಲು ಚಿತ್ತಾಕರ್ಷಕ ಆಟಗಳನ್ನು ಮತ್ತು ಯುಕ್ತಿಗಳನ್ನು ಆರಂಭಿಸಲಾಗುತ್ತದೆ. ಆದರೆ ಇವುಗಳು ಬಹಳ ಹೊತ್ತು ನಿಲ್ಲುವುದಿಲ್ಲ. ಅವು ರಾಜನಿದ್ದಲ್ಲಿಗೆ ಬಂದು ಹೋಗಿಬಿಡುತ್ತವೆ. ಆಮೇಲೆ ಇತರರು ಕುದುರೆ ಮೇಲೆ ಕುಳಿತು ಯುದ್ಧ ಮಾಡುವ ರೀತಿಯಲ್ಲಿ ಪ್ರವೇಶಿಸುತ್ತಾರೆ. ಈ ಕುದುರೆಗಳು ಪೋರ್ತುಗಾಲದಲ್ಲಿ ಕಾರ್ಪೊ ದ ಡೈಯೊಸ್‌ನ ಉತ್ಸವಕ್ಕೆ ಮಾಡಲಾದಂತಹ ಆಟದ ಕುದುರೆಗಳಂತಿರುತ್ತವೆ. ಬೇರೆಯವರು ಬಲೆಗಳೊಂದಿಗೆ ಮೀನು ಹಿಡಯಲೆಂಬಂತೆ ಬಂದು ಕಣದಲ್ಲಿದ್ದ ಜನರನ್ನು ಸೆರೆ ಹಿಡಿಯುತ್ತಾರೆ. ಈ ಮನರಂಜನೆಗಳು ಮುಕ್ತಾಯವಾದಾಗ ಅವರು ಅನೇಕ ಬಾಣ ಬಿರುಸುಗಳನ್ನು ಮತ್ತು ಅನೇಕ ಬೇರೆ ಬೇರೆ ರೀತಿಯ ಜ್ವಾಲೆಗಳನ್ನು ಮತ್ತು ಉರಿಯುತ್ತಲೆ ತ್ಮೊಳಗಿಂದ ಅನೇಕ ಬಾಂಬು ಹಾಗೂ ಆಕಾಶ ಬಾಣಗಳನ್ನು ಉಗುಳುವ ದುರ್ಗಗಳನ್ನೂ ಆಕಾಶದಲ್ಲಿ ಎಸೆಯುತ್ತಾರೆ.

ಈ ಸುಡುಮದ್ದಿನ ವಿನೋದ ಮುಕ್ತಾಯವಾದ ಮೇಲೆ ದಳವಾಯಿಗಳಿಗೆ ಸೇರಿದ ಅನೇಕ ವಿಜಯೋತ್ಸವ ರಥಗಳು ಪ್ರವೇಶಿಸುತ್ತವೆ. ಅವುಗಳಲ್ಲಿ ಕೆಲವನ್ನು ವಿದೇಶಗಳಲ್ಲಿ ಯುದ್ಧನಿರತ ದಳವಾಯಿಗಳು ಕಳಿಸಿರುತ್ತಾರೆ. ಅವುಗಳು ಪ್ರವೇಶೀಸುವುದು ಹೀಗೆ. ಮೊದಲನೆಯದು ಸಾಲ್ವಟಿಕಾನದು ಮತ್ತು ಅವು ಒಂದರ ಹಿಂದೊಂದು ಬರುತ್ತವೆ. ನರ್ತನ ಬಾಲೆಯರು ಮತ್ತು ಇತರ ಮಾನವ ಆಕೃತಿಗಳುಳ್ಳ ಬೆಲೆಯುಳ್ಳ ಬಟ್ಟೆಗಳಿಂದ ಆಚ್ಛಾದಿತವಾದಂತೆ ಕೆಲವು ರಥಗಳು ತೋರುತ್ತವೆ. ಇನ್ನು ಕೆಲವು ರಥಗಳು ಒಂದರ ಮೇಲೊಂದು ಅಂತಸ್ತುಗಳನ್ನು ಹೊಂದಿವೆ. ಮಿಕ್ಕವುಗಳೆಲ್ಲ ಒಂದೇ ರೀತಿಯವು. ಮತ್ತು ಅವು ತಮ್ಮ ಕ್ರಮದಲ್ಲಿ ರಾಜನಿದ್ದೆಡೆಗೆ ಸಾಗುತ್ತವೆ. ರಥಗಳು ಹೊರಗೆ ಹೋದ ಮೇಲೆ ಅವುಗಳನ್ನು ಹಿಂಬಾಲಿಸಿ ಅನೇಕ ಕುದುರೆಗಳು ಬರುತ್ತವೆ. ಅವುಗಳನ್ನು ಸಜ್ಜುಗಳಿಂದ ಮತ್ತು ರಾಜನ ಬಣ್ಣದ ಉತ್ಕೃಷ್ಟ ಬಟ್ಟೆಗಳಿಂದ ಹೊಚ್ಚಿರುತ್ತಾರೆ. ಅವುಗಳ ತಲೆ ಹಾಗೂ ಕುತ್ತಿಗೆಗಳ ಮೇಲೆ ಅನೇಕ ಗುಲಾಬಿಗಳು ಮತ್ತು ಹೂಗಳಿರುತ್ತವೆ ಮತ್ತು ಅವುಗಳ ಲಗಾಮುಗಳಿಗೆ ಬಂಗಾರದ ಗಿಲೀಟು ಮಾಡಲಾಗಿರುತ್ತದೆ. ಈ ಕುದುರೆಗಳ ಮುಂದೆ ರಾಜನ ಎರಡು ಛತ್ರಗಳುಳ್ಳ ಹಾಗೂ ಮಿಕ್ಕವುಗಳಿಂದ ಭವ್ಯ ಅಲಂಕಾರಗಳನ್ನು ಹೊಂದಿದ ಕುದುರೆ ನಡೆಯುತ್ತದೆ. ಅದನ್ನು ಇನ್ನೊಂದು ಕುದುರೆ ಅರ್ಧ ುತ್ತು ಸುತ್ತುತ್ತ ಕುಣಿಯುತ್ತ ನಡೆಯುತ್ತದೆ. ಈ ಕಲೆಯಲ್ಲಿ ತರಬೇತುಗೊಳಿಸಿರುವುದರಿಂದ ಎಲ್ಲ ಕುದುರೆಗಳೂ ಹಾಗೆಯೇ ಮಾಡುತ್ತವೆ. ಇಷ್ಟು ವೈಭವದೊಂದಿಗೆ ನಡೆಸಿಕೊಂಡು ಒಯ್ಯಲಾಗುವ ಈ ಕುದುರೆ ರಾಜ ಇಟ್ಟುಕೊಂಡಂತಹದು. ಅದರ ಮೇಲೆಯೇ ಅವರನ್ನು ರಾಜರಾಗಿ ಪ್ರತಿಜ್ಞೆ ವಿಧಿಸಿ ಬರಮಾಡಿಕೊಳ್ಳಲಾಗುತ್ತದೆ ಮತ್ತು ಅವರ ನಂತರ ಬರುವವರನ್ನೂ ಅದರ ಮೇಲೆಯೆ ಪ್ರತಿಜ್ಞೆ ವಿಧಿಸಬೇಕು, ಇಂಥ ಕುದುರೆ ಸತ್ತರೆ ಅದರ ಸ್ಥಾನದಲ್ಲಿ ಇನ್ನೊಂದನ್ನು ಇಡುತ್ತಾರೆ ಎಂಬುದನ್ನು ನೀವು ತಿಳಿಯಬೇಕು. ಯಾವುದೆ ರಾಜ ಕುದುರೆಯ ಮೇಲೆ ಪ್ರತಿಜ್ಞೆ ಸ್ವೀಕರಿಸಬಯಸದಿದ್ದರೆ ಅವನಿಗೆ ಆನೆಯ ಮೇಲೆ ಪ್ರತಿಜ್ಞೆ ವಿಧಿಸುತ್ತಾರೆ. ಅದನ್ನೂ ಇಟ್ಟುಕೊಂಡು ಅಷ್ಟೇ ಗೌರವದಿಂದ ನೋಡಿಕೊಳ್ಳುತ್ತಾರೆ.

ಈ ಕುದುರೆಗಳು ನಾನು ಹೇಳಿರುವಂತೆ ಸಾಗುತ್ತ ಕಣವನ್ನು ಎರಡು ಸಲ ಸುತ್ತಿ ಒಂದರ ಮುಂದೊಂದರಂತೆ ಐದಾರು ಸಾಲುಗಳಲ್ಲಿ ಕಣದ ಮಧ್ಯದಲ್ಲಿ ಬಂದು ನಿಲ್ಲುತ್ತವೆ. ರಾಜನ ಕುದುರೆ ಅವುಗಳ ಮುಂದಿದ್ದು ಎಲ್ಲವೂ ರಾಜನಿಗೆ ಎದುರಾಗಿ ನಿಲ್ಲುತ್ತವೆ. ಅವು ಯಾವ ರೀತಿ ನಿಲ್ಲುತ್ತವೆಂದರೆ ಅವುಗಳ ಮತ್ತು ಜನರ ಮಧ್ಯೆ ಸುತ್ತಲೂ ಬಯಲು ಜಾಗವಿರುತ್ತದೆ. ಅವುಗಳನ್ನು ಈ ರೀತಿ ನಿಲ್ಲಿಸಲಾದ ಮತ್ತು ಎಲ್ಲವೂ ಸ್ತಬ್ಧವಾದ ಕೂಡಲೆ ಅರಮನೆಯೊಳಗಿಂದ ರಾಜನ ಹತ್ತಿರವಿರುವವರಲ್ಲಿ ಅತ್ಯುನ್ನತ ದರ್ಜೆಯ ಬ್ರಾಹ್ಮಣನೊಬ್ಬ ಮತ್ತು ಅವನೊಂದಿಗೆ ಇನ್ನಿಬ್ಬರು ಹೊರಬರುತ್ತಾರೆ. ಈ ಪ್ರಧಾನ ಬ್ರಾಹ್ಮಣ ತನ್ನ ಕೈಗಳಲ್ಲಿ ತೆಂಗಿನಕಾಯಿ, ಸ್ವಲ್ಪ ಅಕ್ಕಿ ಮತ್ತು ಹೂಗಳಿರುವ ಬೋಗುಣಿಯೊಂದನ್ನು ಮತ್ತು ಇತರರು ನೀರಿನ ಪಾತ್ರೆಯನ್ನು ಒಯ್ಯುತ್ತಾರೆ. ರಾಜನಿಗೆ ಎದುರಾಗಿ ನಿಂತ ಕುದುರೆಗಳ ಹಿಂಭಾಗದ ಮೂಲಕ ಅವರು ಸುತ್ತ ತಿರುಗುತ್ತಾರೆ. ಅಲ್ಲಿ ತನ್ನ ಆಚರಣೆಗಳನ್ನು ಜರುಗಿಸಿ ಅವನು ಅರಮನೆಗೆ ಹಿಂದಿರುಗುತ್ತಾನೆ.

ಇದು ಮುಗಿದ ಮೇಲೆ ಇಪ್ಪತ್ತೈದು ಮೂವತ್ತು ದ್ವಾರಪಾಲಕಿಯರು ಕೈಯಲ್ಲಿ ಛಡಿ, ಹೆಗಲ ಮೇಲೆ ಚಾವುಟಿ ಹಿಡಿದು ಒಳಗಿನಿಂದ ಬರುವುದನ್ನು ಕಾಣುತ್ತೀರಿ. ಇವರ ಹಿಂದೆಯೆ ಅನೇಕ ನಪುಂಸಕರು ಬರುತ್ತಾರೆ. ಈ ನಪುಂಸಕರ ನಂತರ ಅನೇಕ ತುತ್ತೂರಿ, ಮದ್ದಲೆ, ಕೊಳಲು (ನಮ್ಮವುಗಳಂತಹವಲ್ಲ), ಪಿಟೀಲು ಮತ್ತಿತರ ಸಂಗೀತ ನುಡಿಸುವ ಸ್ತ್ರೀಯರು ಬರುತ್ತಾರೆ. ಈ ಸ್ತ್ರೀಯರ ಹಿಂದೆ ಇಪ್ಪತ್ತರಷ್ಟು ಮಹಿಳಾ ಹೊರೆಯಾಳುಗಳು ಕೈಯಲ್ಲಿ ಪೂರ್ತಿ ಬೆಳ್ಳಿಯಿಂದ ಹೊದಿಸಿದ ಬೆತ್ತಗಳನ್ನು ಹಿಡಿದು ಬರುತ್ತಾರೆ. ಅವರ ಬೆನ್ನ ಹಿಂದೆಯೆ ಕೆಳಗಿನ ರೀತಿಯಲ್ಲಿ ಬಟ್ಟೆ ಧರಿಸಿದ ಸ್ತ್ರೀಯರು ಬರುತ್ತಾರೆ. ಅವರಿಗೆ ಬಲು ತುಟ್ಟಿಯ ಮತ್ತು ಶ್ರೇಷ್ಠ ರೇಷ್ಮೆ ಬಟ್ಟೆಗಳಿರುತ್ತವೆ. ತಲೆಯ ಮೆಲೆ ಅವರು ಕೊಲ್ಲಾಯಿ[12] ಎಂದು ಕರೆಯುವ ಎತ್ತರವಾದ ಟೊಪ್ಪಿಗೆಗಳನ್ನು ಧರಿಸುತ್ತಾರೆ ಮತ್ತು ಈ ಟೊಪ್ಪಿಗೆಗಳ ಮೇಲೆ ಅವರು ಮುತ್ತುಗಳಿಂದ ಮಾಡಿದ ಹೂಗಳನ್ನು ಧರಿಸುತ್ತಾರೆ. ಕೊರಳಲ್ಲಿ ಅನೆಕ ಪಚ್ಚೆ, ವಜ್ರ, ಮಾಣಿಕ್ಯ ಮತ್ತು ಮುತ್ತು ಜೋಡಿಸಿದ ಬಂಗಾರದ ಕಂಠಾಭರಣ; ಇದಲ್ಲದೆ ಅನೇಕ ಮುತ್ತಿನ ಸರಗಳು ಮತ್ತು ದವಾಲಿಗಳಿಗಾಗಿ ಬೇರೆಯವು; ತೋಳಿನ ಕೆಳಭಾಗದಲ್ಲಿ ಅನೇಕ ಬಳೆಗಳು; ಅರ್ಧಭಾಗ ಬರಿದಾದ ಮೇಲ್ತೋಳಿನ ಮೇಲೆ ಅದೇ ರೀತಿಯ ಬೆಲೆಯುಳ್ಳ ಹರಳುಗಳುಳ್ಳ ತೋಳ್ಬಂದಿಗಳು; ಟೊಂಕದ ಮೇಲೆ ಬಂಗಾರ ಹಾಗೂ ಬೆಲೆಯುಳ್ಳ ಹರಳುಗಳ ಡಾಬುಗಳು; ಈ ಡಾಬುಗಳು ಒಂದರ ಕೆಳಗೊಂದರಂತೆ ಅರ್ಧ ತೊಡೆಯವರೆಗೂ ನೇತಾಡುತ್ತವೆ; ಈ ಡಾಬುಗಳಲ್ಲದೆ ಇನ್ನೂ ಅನೇಕ ಆಭರಣಗಳು ಅವರಲ್ಲಿವೆ ಮತ್ತು ಹರಳುಗಳ ಸುತ್ತ ಮುತ್ತುಗಳ ಹಲವು ಸರಗಳು, ಏಕೆಂದರೆ ಅವರು ಮಿಕ್ಕವುಗಳಿಗಿಂತ ಬೆಲೆಯುಳ್ಳ ಕಾಲಂದಿಗೆಗಳನ್ನು ಧರಿಸುತ್ತಾರೆ. ಅವರು ತಮ್ಮ ಕೈಗಳಲ್ಲಿ ಚಿಕ್ಕ ನೀರಿನ ತಂಬಿಗೆಯಷ್ಟು ದೊಡ್ಡದಿರುವ ಬಂಗಾರದ ಪಾತ್ರೆಗಳನ್ನು ಒಯ್ಯುತ್ತಾರೆ. ಇವುಗಳೊಂದಿಗೆ ಮೇಣದಿಂದ ಅಂಟಿಸಲಾದ ಮುತ್ತಿನ ಬಳ್ಳಿಗಳಿದ್ದು ಇದೆಲ್ಲದರ ನಡುವೆ ಉರಿಯುವ ದೀಪ ಇರುತ್ತದೆ. ಅವರು ಒಬ್ಬರ ಮುಂದೊಬ್ಬರಂತೆ ನಿಯಮಿತ ಕ್ರಮದಲ್ಲಿ ಬರುತ್ತಾರೆ. ಒಟ್ಟು ಹದಿನಾರರಿಂದ ಇಪ್ಪತ್ನಾಲ್ಕರವರೆಗಿನ ವಯಸ್ಸಾದ ಸುಮಾರಿಗೆ ಅರವತ್ತು ಸುಂದರ ತರುಣಿಯರು. ಈ ಸ್ತ್ರೀಯರಲ್ಲಿ ಪ್ರತಿಯೊಬ್ಬಳೂ ತನ್ನ ದೇಹದ ಮೇಲೆ ಧರಿಸಿದ್ದುದರ ಬೆಲೆ ಹಾಗೂ ಮೌಲ್ಯದ ಅಂದಾಜು ಮಾಡಬಲ್ಲವರಾರು? ಅವರು ಧರಿಸಿದ ಬಳೆಗಳ, ಬಂಗಾರದ ಮತ್ತು ಆಭರಣಗಳನ್ನು ಹೊರೆ ಎಷ್ಟಾಗಿತ್ತೆಂದರೆ ಅವರಲ್ಲನೇಕರು ಅವುಗಳ ಭಾರ ತಾಳಲಾರರು. ಮತ್ತು ಅವರ ಕೈಗಳಿಗೆ ಆಸರೆಯಾಗುವ ಮೂಲಕ ಸಹಾಯಕರಾದ ಸ್ತ್ರೀಯರು ಅವರ ಜೊತೆಗಿರುತ್ತಾರೆ. ಈ ರೀತಿಯಲ್ಲಿ ಮತ್ತು ಈ ಅಲಂಕಾರದಲ್ಲಿ ಅವರು ಕುದುರೆಗಳ ಸುತ್ತ ಮೂರು ಸಲ ಸುತ್ತಿ ಕೊನೆಗೆ ಅರಮನೆಗೆ ಹಿಂತಿರುಗುತ್ತಾರೆ. ಇವರೂ ಮತ್ತು ಇವರೊಂದಿಗೆ ಹೋಗುವ ಇತರರೂ ರಾಣಿಯರ ಗೌರವಾನುಚರೆಯರು. ಉತ್ಸವದ ಈ ಒಂಬತ್ತು ದಿನಗಳಲ್ಲಿ ಪ್ರತಿಯೊಂದರಂದು ರಾಣಿಯರಲ್ಲೊಬ್ಬಳು, ಪ್ರತಿಯೊಬ್ಬಳೂ ತನ್ನದೇ ದಿನದಂದು, ತನ್ನ ಸ್ತ್ರೀಯರನ್ನು ಇತರರೊಂದಿಗೆ ಕಳಿಸುತ್ತಾಳೆ. ಉತ್ಸವದ ಗೌರವಾರ್ಥವಾಗಿ ಅಧಿಕಾರಿಗಳು ರಾಜ ಮೊದಲೆ ವ್ಯವಸ್ಥೆಗೊಳಿಸಿರುವಂತೆ ತಮ್ಮ ರಿವಾಜಿನಂತೆ ದಿನಗಳನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ಚೆನ್ನಾಗಿ ತೊಡಿಗೆ ಧರಿಸಿದ ಈ ಸ್ತ್ರೀಯರು ಪ್ರತಿದಿನ ಬಂದು ತಮ್ಮನ್ನು ಇಂಥ ವಸ್ತುಗಳಲ್ಲಿಯೆ ತೋರ್ಪಡಿಸಿಕೊಳ್ಳಲು ಮತ್ತು ಪ್ರತಿಯೊಬ್ಬಳು ತನ್ನಲ್ಲಿರುವುದನ್ನು ಪ್ರದರ್ಶಿಸಲು ಸಂತಸಪಡುತ್ತಾರೆ.

ಈ ಸ್ತ್ರೀಯರು ಹಿಂತಿರುಗಿದ ಮೇಲೆ ಕುದುರೆಗಳೂ ಹೋಗುತ್ತವೆ. ಆ ಮೇಲೆ ಆನೆಗಳು ಬಂದು ತಮ್ಮ ಸಲಾಮು ಮಾಡಿ ಅವೂ ಹಿಂತಿರುಗುತ್ತವೆ. ಅವು ಹೋದ ಕೊಡಲೆ ರಾಜ ಕಟ್ಟಡದ ಕೊನೆಯಲ್ಲಿರುವ ಚಿಕ್ಕ ಬಾಗಿಲಿನ ಮೂಲಕ ಹೊರಟುಹೋಗುತ್ತಾನೆ. ಅನಂತರ ಬ್ರಾಹ್ಮಣರು ವಿಗ್ರಹವನ್ನು ತೆಗೆದುಕೊಂಡು ಅದನ್ನು ನಾನು ಹೇಳಿರುವ ಅರಿವೆಯ ಕೋಣೆಯುಳ್ಳ ವಿಜಯಗೃಹದೊಳಗೆ ಒಯ್ಯುವರು. ರಾಜ ತಕ್ಷಣ ಹೊರಬಂದು ವಿಗ್ರಹವಿದ್ದಲ್ಲಿಗೆ ಹೋಗಿ ತನ್ನ ಪ್ರಾರ್ಥನೆಗಳನ್ನು ಸಲ್ಲಿಸುತ್ತಾನೆ. ಮತ್ತು ವ್ರತಗಳನ್ನು ಆಚರಿಸುತ್ತಾನೆ. ಆಗ ಅಲ್ಲಿಗೆ ಇನ್ನೂ ಅಧಿಕ ಕೋಣ ಮತ್ತು ಕುರಿ ತರುತ್ತಾರೆ ಮತ್ತು ಮೊದಲಿನಂತೆಯೆ ಕೊಲ್ಲುತ್ತಾರೆ. ಅನಂತರ ನರ್ತಿಸಲು ವಾರಾಂಗನೆಯರು ಬರುತ್ತಾರೆ. ಕೋಣ ಕುರಿಗಳ ಬಲಿ ಮುಗಿದ ಕೂಡಲೆ ರಾಜ ಅಲ್ಲಿಂದ ಹೊರಟು ರಾತ್ರಿಯೂಟಕ್ಕೆ ಹೋಗುತ್ತಾನೆ. ಏಕೆಂದರೆ, ಅವನು ಒಂಬತ್ತು ದಿನಗಳೆಲ್ಲ ಉಪವಾಸವಿರುತ್ತಾನೆ, ಮತ್ತು (ಪ್ರತಿದಿನ) ಎಲ್ಲ ಮುಗಿಯುವವರೆಗೆ ಅವನು ಏನನ್ನೂ ತಿನ್ನುವುದಿಲ್ಲ ಮತ್ತು ಅವರ ಊಟದ ಸಮಯ ಮಧ್ಯರಾತ್ರಿ. ವಾರಾಂಗನೆಯರು ವಿಗ್ರಹದ ಮುಂದೆ ಬಹಳ ಹೊತ್ತು ನರ್ತಿಸುತ್ತ ಉಳಿಯುತ್ತಾರೆ.

ಈ ರೀತಿಯಾಗಿ ಒಂಬತ್ತು ದಿನಗಳ ಈ ಉತ್ಸವಗಳನ್ನು ಆಚರಿಸಲಾಗುತ್ತದೆ. ಕೊನೆಯ ದಿನ ಇನ್ನೂರೈವತ್ತು ಕೋಣಗಳನ್ನು ನಾಲ್ಕು ಸಾವಿರದ ಐನೂರು ಕುರಿಗಳನ್ನು ಬಲಿ ಕೊಡಲಾಗುತ್ತದೆ.

ಉತ್ಸವದ ಈ ದಿನಗಳು ಕಳೆದ ಮೇಲೆ ರಾಜ ತನ್ನ ಎಲ್ಲ ಬಲಗಳ ಪರಿಶೀಲನ ಜರುಗಿಸುತ್ತಾನೆ ಮತ್ತು ಪರಿಶೀಲನವನ್ನು ಈ ರೀತಿ ವ್ಯವಸ್ಥೆಗೊಳಿಸಲಾಗಿರುತ್ತದೆ. ರಾಜ ತನ್ನ ಮೆಕ್ಕಾ ಮಕಮಲ್ಲಿನ ಡೇರೆಯನ್ನು ನಗರದಿಂದ ಒಂದು ಹರದಾರಿ ದೂರ ಆ ಉದ್ದೇಶಕ್ಕಾಗಿಯೆ ಪೂರ್ವ ನಿರ್ಧರಿತ ಸ್ಥಳದಲ್ಲಿ ನಿಲ್ಲಿಸಲು ಆಜ್ಞಾಪಿಸುತ್ತಾನೆ. ಯಾವುದರ ಗೌರವಾರ್ಥ ಇವೆಲ್ಲ ಉತ್ಸವಗಳನ್ನು ಆಚರಿಸಲಾಯಿತೊ ಆ ವಿಗ್ರಹವನ್ನು ಈ ಡೇರೆಯಲ್ಲಿಡುವರು. ಈ ಡೇರೆಯಿಂದ ರಾಜನ ಅರಮನೆಯವರೆಗೆ ದಳಪತಿಗಳು ತಮ್ಮ ಸೈನಿಕರು ಮತ್ತು ಸಜ್ಜಿನೊಂದಿಗೆ ಸಾಲಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬನೂ ರಾಜನ ಸಿಬ್ಬಂದಿಯಲ್ಲಿ ತನಗಿರುವ ದರ್ಜೆಗನುಗುಣವಾದ ಸ್ಥಾನದಲ್ಲಿ ಹೀಗೆ, ಸೈನಿಕರು ಸಾಲಾಗಿ ನಿಲ್ಲುವರು. ಆದರೆ, ಅದು ನಿಮಗೆ ಒಂದೇ ಸಾಲಾಗಿ ಕಾಣಲಿಕ್ಕಿಲ್ಲ. ಕೆಲವೆಡೆ ಒಂದರ ಹಿಂದೊಂದರಂತೆ ಎರಡು ಮೂರು ಸಾಲುಗಳಿರಬಹುದು. ಸರೋವರವಿದ್ದಲಿ ಅದು ಸೈನಿಕರಿಂದ ಸುತ್ತುವರಿಯಲ್ಪಟ್ಟಿತ್ತು ಮತ್ತು ರಸ್ತೆ ಇಕ್ಕಟ್ಟಾಗಿದ್ದಲ್ಲಿ ಅವರನ್ನು ಬಯಲಿನಲ್ಲಿ ನಿಲ್ಲಿಸಲಾಗಿತ್ತು; ಮತ್ತು ಅಂತೆಯೇ ಗುಡ್ಡಗಳ ಇಳಿಜಾರು ಮತ್ತು ದಿಣ್ಣೆಗಳ ಮೇಲೆ ಯಾವ ರೀತಿ ನಿಲ್ಲಿಸಲಾಗಿರುತ್ತದೆಂದರೆ ಸೈನಿಕರಿಂದ ಪೂರ್ತಿ ಆಚ್ಛಾದಿತವಾಗದ ಗುಡ್ಡವಾಗಲಿ ಬಯಲಾಗಲಿ ಕಾಣಸಿಗದು. ಕಾಲಾಳುಗಳು ಕುದುರೆ ಮೇಲಿರುವವರ ಮುಂದೆ ಮತ್ತು ಆನೆಗಳು ಕುದುರೆಗಳ ಹಿಂದೆ ನಿಂತಿರುತ್ತವೆ. ಈ ವಿನ್ಯಾಸದಲ್ಲಿ ಪ್ರತಿಯೊಬ್ಬ ದಳಪತಿ ತನ್ನ ಸೈನಿಕರೊಂದಿಗೆ ನಿಂತಿದ್ದ. ಮನೆಗಳ ಸಮತಟ್ಟಾದ ಮಾಳಿಗೆಗಳ ಮೇಲೆ ಸೈನಿಕರನ್ನು ನಿಲ್ಲಿಸಲಸಾಧ್ಯವಾದುದರಿಂದ ನಗರದೊಳಗೆ ತಮ್ಮ ಠಾಣ್ಯಗಳಿದ್ದ ದಳಪತಿಗಳು ಸೈನಿಕರಿಗಾಗಿ ಬೀದಿಗಳ ಮುಖಗಳಿಗೆ ಅಡ್ಡಲಾಗಿ ಅಟ್ಟಣಿಗೆಗಳನ್ನು ನಿಲ್ಲಿಸುತ್ತಿದ್ದರು. ಹೇಗೆಂದರೆ ಎಲ್ಲ ಒಳಗೂ ಹೊರಗೂ ತುಂಬಿರುತ್ತಿದ್ದವು.[1]      ಮೂಲ ಕೃತಿಯಲ್ಲಿ ಈ ಶಬ್ದ ಬಿಟ್ಟುಹೋಗಿದೆ.

[2]      ಬ್ರೆಡೊಸ್. (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪುಟ. ೨೨೭, ೨೪೫ ಮತ್ತು ಟಿಪ್ಪಣಿಗಳನ್ನು ನೋಡಿರಿ).

[3]      ಪ್ಯಾಸ್‌ನಲ್ಲಿ ನೀಡಲಾಗಿರುವ ತಾರೀಖುಗಳ ಬಗೆಗಿನ ಚರ್ಚೆಗೆ ನೋಡಿರಿ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪುಟ. ೧೫೨).

[4]      ಸ್ಪಷ್ಟವಾಗಿಯೆ ಶಸ್ತ್ರಾಸ್ತ್ರಗಳ ಸ್ಥಳ ಸೂಚಿತವಾಗಿದೆ.

[5]      ಈ ಜನರನ್ನು ದಿನಚರಿಯಲ್ಲಿ ಮೇಲಿಂದ ಮೇಲೆ ಉಲ್ಲೇಖಿಸಲಾಗಿದೆ. ಅವರ ಮುಖ್ಯಸ್ಥ, ರಾಜನ ಅತಿ ಮಹತ್ವದ ಅಧಿಕಾರಿಗಳಲ್ಲೊಬ್ಬ. ಆದುದರಿಂದ, ನಾನು ಅವನಿಗೆ ಕಾವಲು ಪಡೆಯ ಮುಖ್ಯಸ್ಥ ಎಂದು ಹೆಸರು ಕೊಟ್ಟಿರುವೆ.

[6]      ನನಗೆ ಆ ಅನುವಾದದ ಬಗೆಗೆ ಸಂದೇಹ. ಬಳಸಲಾದ ಪದಕ್ಕೆ ಬಹುಶಃ ಪಾರಿಭಾಷಿಕ ಅರ್ಥವೊಂದಿದ್ದಿರಬೇಕು.

[7]      ಇದರರ್ಥ ಅಂಚು, ಮುಂಭಾಗ ಎಂದಿರಬೇಕಲ್ಲವೆ ರಾಜನ ಛಾವಣಿಯ ತೀರ ಅಂಚು ಅಲ್ಲವೆಂದು ನನಗನಿಸುತ್ತದೆ.

[8]      ಪ್ರಧಾನಿ ಸಾಳುವ ತಿಮ್ಮ. ಫಿಯಾಸ್ ಮತ್ತು ನೂನಿಜ್‌ರಿಬ್ಬರ ದಿನಚರಿಗಳಲ್ಲಿ ಈ ಹೆಸರನ್ನು ನಾನಾ ವಿಧ ಬರೆಯಲಾಗಿದೆ. ಕೃಷ್ಣದೇವ ತನ್ನ ಸಿಂಹಾಸನಕ್ಕಾಗಿ ಅವನಿಗೆ ಋಣಿಯಾಗಿದ್ದ.

[9]      ಈ ಕಾಲಕ್ಕೆ ಇದ್ದ ಸೆರಿಂಗಪಟಮ್‌ದ ರಾಜ ಬೆಟ್ಟದ ಚಾಮರಾಯ. ಅವನು ಮೈಸೂರು ನಾಡನ್ನು ಕ್ರಿ.ಶ. ೧೫೧೩ರಿಂದ ಕ್ರಿ.ಶ. ೧೫೫೨ರವರೆಗೆ ಆಳಿದ. ಅವನಿಗೆ ಮೂವರು ಪುತ್ರರು, ಅವನ ಮರಣ ಕಾಲಕ್ಕೆ ಇಬ್ಬರೂ ಹಿರಿಯ ಪುತ್ರರು ಅವನ ಆಸ್ತಿಯ ಭಾಗಗಳನ್ನು ಪಡೆದರು. ಆದರೆ ಇಬ್ಬರೂ ಸಂತಾನವಿಲ್ಲದೆ ಸತ್ತರು, ಮೂರನೆಯ ಪುತ್ರ ‘ಹಿರೆ’ಅಥವಾ ‘ವೀರ’ಚಾಮ. ಅವನು ಸ್ಪಷ್ಟವಾಗಿಯೆ ಎಲ್ಲಕ್ಕಿಂತ ಬಲಶಾಲಿಯಾಗಿದ್ದನು. ಮತ್ತು ತನ್ನ ತಂದೆಗೆ ಅತ್ಯಂತ ಪ್ರಿಯನಾಗಿದ್ದನು. ಏಕೆಂದರೆ, ತಂದೆ ಮರಣ ಸಮಯಕ್ಕೆ ತನ್ನ ಪಾಲೆಂದು ಅವನು ಮೈಸೂರಿನ ಪ್ರಧಾನ ನಾಡು, ಪಟ್ಟಣ ಕೂಡ, ಮತ್ತು ನೆರಪ್ರಾಂತ ಪಡೆದ. ಕ್ರಿ.ಶ. ೧೫೬೫ರಲ್ಲಿ ವಿಜಯನಗರದ ಪತನದ ನಂತರ ಅವನು ವಸ್ತುತಃ ಸ್ವತಂತ್ರನಾದ ಮತ್ತು ಕ್ರಿ.ಶ. ೧೫೭೮ರಲ್ಲಿ ಅವನ ಸಂಬಂಧಿ ರಾಜಾ ಉದ್ವೆಯಾರ್ ಪ್ರಧಾನ ಅಧಿಕಾರವನ್ನು ಹಿಡಿದುಕೊಳ್ಳುವವರೆಗೆ ಆಳಿದ. “ಕುಮಾರ”(ಮಗ)ಎಂಬ ಪದವನ್ನು ಭಾರತದಲ್ಲಿ ರಾಜಮನೆತನಗಳಲ್ಲಿ ಆಳುವ ರಾಜನ ಸಂತತಿಗೆ ಹಗಲೆಲ್ಲ ಅನ್ವಯಿಸಲಾಗುತ್ತದೆ. ಆದುದ ರಿಂದ, “ಕುಮಾರವೀರ್ಯ”“ಕುಮಾರ ವೀರಯ್ಯ”ಆಗಿರಬಹುದೆಂದು ಭಾವಿಸುವ ಧೈರ್ಯ ಮಾಡುತ್ತೇನೆ. ಈ ಉತ್ಸವಗಳಲ್ಲಿ ಸೆರಿಂಗಪಟಮ್‌ದ ರಾಜ ಸ್ವತಃ ಉಪಸ್ಥಿತನಾಗಿರದೆ ಫಿಯಾಸ್ ನೋಡಿದ ವ್ಯಕ್ತಿ ಅವನ ಮಗ “ವೀರ”ಆಗಿದ್ದನು.

[10]     “ಉತ್ಸವಗಳತ್ತ ತಿರುಗೋಣ”ಎಂದು ಲೇಖಕ ಆರಂಭಿಸುತ್ತಾನೆ. ಅದು ತೀರ ಬೇಸರ ಹಿಡಿಸುವಂತಿರುವುದರಿಂದ ನಾನು ಅದನ್ನಿಲ್ಲಿ ಕೈಬಿಟ್ಟಿರುವೆ.

[11]     ಖಚಿತವಾಗಿ ಬೆಲೆ ಕಟ್ಟಲು ಬಲು ಕಠಿಣವಾಗಿರುವ ಒಂದು ಚಿಕ್ಕ ಸುವರ್ಣ ನಾಣ್ಯ. ಅಬ್ದುಲ್ ರಜಾಕ್ (೧೪೪೩)ಸ್ವಷ್ಟವಾಗಿ ಅರ್ಧ ಪಗೋಡಕ್ಕೆ ಸಮವೆನ್ನುತ್ತಾನೆೆ;ವಾರ್ಥೆಮಾ (೧೫೦೩-೭)ಒಂದು ಪಗೋಡಕ್ಕೆ ಸಮವೆನ್ನುತ್ತಾನೆ ;ನಾವು ಈ ಎರಡನೆಯ ಅರ್ಥದಲ್ಲಿಯೆ ಅದನ್ನು ತೆಗೆದುಕೊಳ್ಳಬೇಕು. ವಾರ್ಥೆಮಾ ಅದನ್ನು “ಸುವರ್ಣ ಡುಕಟ್”ಎಂದು ಕರೆಯುತ್ತಾರೆ. ತನ್ನ ಕಾಲದಲ್ಲಿ ಅದು ಫ್ಹೆಮಿಶ್ ಡಾಲರಿನಷ್ಟು ಸರಿಸುಮಾರು ಬೆಲೆ ಹೊಂದಿತ್ತೆಂದು ಪರ್ಚಸ್ ಹೇಳುತ್ತಾನೆ. ತೀರಾ ಇತ್ತೀಚಿನ ದಿನಗಳಲ್ಲಿ ಪಗೋಡಕ್ಕೆ ನಿಗದಿಪಡಿಸಿದ ಸಾಧಾರಣ ಬೆಲೆಯೆಂದರೆ ರೂ. ಮೂರೂವರೆ (ಯುಲ್ ಆ್ಯಂಡ್ ಬರ್ನೆಲ್‌ನ ನಿಘಂಟಿನಲ್ಲಿ “ಹಾಬ್ಸನ್-ಜಾಬ್ಸನ್ ಕೆಳಗೆ ‘ಪಗೋಡ’ಮತ್ತು ‘ಪರ್ದಾಒ’ನೋಡಿರಿ). ಯೂಲ್ ಸ್ಪಷ್ಟವಾಗಿ ಪ್ರಸ್ತುತ ಕಾಲದಲ್ಲಿ ೪ ಶಿಲಿಂಗ್ ೬ ಪೆನ್ಸ್ ಎಂದು ಅದರ ಬೆಲೆ ಕಟ್ಟುತ್ತಾನೆ ಬ್ಯಾರೊಸ್ ಮತ್ತು ಕ್ಯಾಸ್ಟನ್‌ಹೆಡಾ ಇಬ್ಬರೂ ಪರ್ದಾಒನ ೩೬೦ ರೆಯ್ಸ ಆಗಿತ್ತೆಂದು ಪ್ಯಾಸ್‌ನೊಂದಿಗೆ ಒಪ್ಪುತ್ತಾರೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ,ಪು. ೨೯೬-೯೭).

[12]     ತೆಲುಗಿನಲ್ಲಿ “ಕುಲ್ಲಾಯಿ”. (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೨೨೫, ೨೭೧, ಟಿಪ್ಪಣಿ ೨ ಮತ್ತು ಪು. ೪೦೭ ನೋಡಿರಿ). ಈ ಸ್ತ್ರೀಯರು ಪುರುಷರ ತಲೆಯುಡಿಗೆ ಧರಿಸುದಂತೆ ತೋರುತ್ತದೆ.