ನಾನೀಗ ಅವರು ಹೇಗೆ ಶಸ್ತ್ರ ಹಾಗೂ ಅಲಂಕಾರಗಳನ್ನು ಧರಿಸಿದ್ದರೆಂಬುದನ್ನು ವರ್ಣಿಸಲಿಚ್ಛಿಸುವೆ. ಅಶ್ವದಳ ಪೂರ್ಣಾಲಂಕೃತ ಕುದುರೆಗಳ ಹಣೆಗಳ ಮೇಲೆ ಫಲಕಗಳು. ಕೆಲವು ಬೆಳ್ಳಿಯವು. ಬಹುಮಟ್ಟಿನವು ಬಂಗಾರದ ಗಿಲೀಟು ಮಾಡಲ್ಪಟ್ಟವು. ಅವುಗಳಿಗೆ ಎಲ್ಲ ಬಣ್ಣಗಳ ರೇಷ್ಮೆಯಿಂದ ಹೊಸೆದ ಅಂಚುಗಳು ಮತ್ತು ಅದರದೇ ಲಗಾಮುಗಳು.

[1] ಮಿಕ್ಕವುಗಳಿಗೆ ಮೆಕ್ಕಾ ಮಕಮಲ್ಲಿನ ಸಜ್ಜುಗಳು. ಇನ್ನು ಕೆಲವು ಸ್ಯಾಟಿನ್ ಮತ್ತು ಕಿತ್ತನಾರು-ಮೊದಲಾದ ಬೇರೆ ತರಹದ ರೇಷ್ಮೆಗಳವು. ಮತ್ತು ಕೆಲವು ಚೀನಾ ಮತ್ತು ಪರ್ಷಿಯಾಗಳ ಕಿನ್‌ಕಾಪಿನವು. ಗಿಲೀಟಿನ ಫಲಕಗಳುಳ್ಳ ಕೆಲವರು ಅವುಗಳಲ್ಲಿ ಹಲವು ದೊಡ್ಡ ಬೆಲೆಯುಳ್ಳ ಹರಳುಗಳನ್ನು ಕೂಡಿಸಿದ್ದರು ಮತ್ತು ಅಂಚುಗಳಲ್ಲಿ ಚಿಕ್ಕ ಹರಳುಗಳ ಕಲಾಬತು. ಈ ಕುದುರೆಗಳಲ್ಲಿ ಕೆಲವುಗಳ ಹಣೆಯ ಮೇಲೆ ಹಾವುಗಳ ಮತ್ತು ನಾನಾ ವಿಧದ ಇತರ ದೊಡ್ಡ ಪ್ರಾಣಿಗಳ ಮುಖಗಳು ಇದ್ದವು. ಅವು ಎಂಥ ವಿಲಕ್ಷಣ ರೀತಿಯಲ್ಲಿ ಮಾಡಲ್ಪಟ್ಟಿದ್ದವೆಂದರೆ ಅವುಗಳ ಮಾಟದ ಪರಿಪೂರ್ಣತೆಯಿಂದಾಗಿ ಅವು ಮನೋಹರ ನೋಟಗಳಾಗಿದ್ದವು. ಅಶ್ವಾಳುಗಳು ರಜಾಯಿ,[2] ಜರತಾರಿ, ಮಖಮಲ್ಲು ಮತ್ತು ಎಲ್ಲ ವಿಧದ ರೇಷ್ಮೆಯ ಅಂಗಿಗಳನ್ನು ತೊಟ್ಟಿದ್ದರು. ಈ ಅಂಗಿಗಳನ್ನು ಬಹಳ ಗಟ್ಟಿಯಾದ ಚರ್ಮದ ಪದರುಗಳಿಂದ ಮಾಡಿದ್ದು ಅವುಗಳನ್ನು ಮಜಬೂತಾಗಿಸುವ ಬೇರೆ ಕಬ್ಬಿಣ (ತಗಡು)ದಿಂದ ಸಜ್ಜುಗೊಳಿಸಲಾಗಿದೆ. ಕೆಲವರು ಈ ತಗಡುಗಳನ್ನು ಒಳಗೂ ಹೊರಗೂ ಗಿಲೀಟು ಮಾಡಿಸಿದ್ದಾರೆ ಮತ್ತು ಕೆಲವನ್ನು ಬೆಳ್ಳಿಯಿಂದ ಮಾಡಲಾಗಿದೆ. ಅವರ ತಲೆಯುಡುಪುಗಳು ಶಿರಸ್ತ್ರಾಣಗಳ ಮಾದರಿಯಲ್ಲಿ ಮಾಡಲಾಗಿವೆ. ಅವುಗಳ ಅಂಚುಗಳು ಕುತ್ತಿಗೆಗಳನ್ನು ಮುಚ್ಚುತ್ತವೆ. ಪ್ರತಿಯೊಂದಕ್ಕೂ ಮುಖ ಸಂರಕ್ಷಿಸುವ ಭಾಗವಿದೆ. ಅವು ಅಂಗಿಗಳ ಮಾದರಿಯವೆ ಆಗಿವೆ. ಅವರು ಕೊರಳಲ್ಲಿ ಪೂರ್ತಿ ಗಿಲೀಟು ಮಾಡಲಾದ ಹಾರಗಳನ್ನು ಧರಿಸುತ್ತಾರೆ. ಇನ್ನು ಕೆಲವುಗಳನ್ನು ಬಂಗಾರ ಹಾಗೂ ಬೆಳ್ಳಿಯ ತಗಡುಗಳನ್ನು ಜೋಡಿಸಿ ರೇಷ್ಮೆಯಿಂದ ಮತ್ತು ಕೆಲವುಗಳನ್ನು ಕನ್ನಡಿಯಷ್ಟು ಉಜ್ವಲವಾದ ಉಕ್ಕಿನೊಂದಿಗೆ ಮಾಡಲಾಗಿದೆ. ಟೊಂಕದಲ್ಲಿ ಅವರು ಕತ್ತಿಗಳನ್ನು ಮತ್ತು ಚಿಕ್ಕ ಗಂಡುಗೊಡಲಿಗಳನ್ನು ಧರಿಸಿರುತ್ತಾರೆ. ಮತ್ತು ಕೈಗಳಲ್ಲಿ ಬಂಗಾರ ಮತ್ತು ಬೆಳ್ಳಿಯಿಂದ ಹೊದಿಸಿದ ಕೋಲುಳ್ಳ ಈಟಿಗಳನ್ನು ಹಿಡಿದಿರುತ್ತಾರೆ. ಕುದುರೆಗಳ ಮೇಲೆ ಎಲ್ಲರೂ ಮಖಮಲ್ಲು, ಕಿತ್ತನಾರು ಮತ್ತು ಹಲವಾರು ಬಣ್ಣದ ರೇಷ್ಮೆಗಳಿಂದ ಮಾಡಿದ ತಮ್ಮ ರಾಜಛತ್ರಗಳನ್ನು ಹೊಂದಿ ರುತ್ತಾರೆ. ಬಿಳಿ ಮತ್ತು ಬಣ್ಣದ ಬಾಲಗಳುಳ್ಳ ಅನೇಕ (ಪತಾಕೆಗಳನ್ನು)ವನ್ನು ಅವರು ಹೊಂದಿರುತ್ತಾರೆ. ಮತ್ತು ಅವುಗಳನ್ನು ಬಹಳ ಗೌರವದಿಂದ ನೋಡಿಕೊಳ್ಳುತ್ತಾರೆ. ಈ ಬಾಲಗಳೆಂದರೆ ಕುದುರೆಗಳ ಬಾಲಗಳು. ಆನೆಗಳಿಗೂ ಇದೆ ರೀತಿ ಮಖಮಲ್ಲು ಮತ್ತು ಬಂಗಾರದ ಜೂಲುಗಳನ್ನು ಹಾಕಲಾಗಿರುತ್ತದೆ. ಜೂಲುಗಳಿಗೆ ಅನೇಕ ಜಾಲರಿಗಳಿದ್ದು ಅನೇಕ ಬಣ್ಣಗಳ ಒಳ್ಳೆಯ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಮತ್ತು ಭೂಮಿ ಪ್ರತಿಧ್ವನಿಸುವಂತೆ ಗಂಟೆಗಳನ್ನು ಕಟ್ಟಲಾಗಿರುತ್ತದೆ. ಪ್ರತಿಯೊಂದರ ಬೆನ್ನ ಮೇಲೆ ಮೂರು ಅಥವಾ ನಾಲ್ಕು ಜನರು ತಮ್ಮ ರಜಾಯಿ ಅಂಗಿ ಧರಿಸಿ, ಢಾಲು ಮತ್ತು ಈಟಿಗಳಿಂದ ಸಜ್ಜಿತರಾಗಿ ಆಕ್ರಮಣಕ್ಕೇನೊ ಎಂಬಂತೆ ಕುಳಿತಿರುತ್ತಾರೆ. ಈಗ ಕಾಲಾಳುಗಳ ಬಗೆಗಾದರೆ ಅವರು ಎಷ್ಟೊಂದು ಸಂಖ್ಯೆಯಲ್ಲಿದ್ದಾರೆಂದರೆ ಜಗತ್ತಿನಲ್ಲಿ ಅದರೊಂದಿಗೆ ಏನನ್ನೂ ಹೋಲಿಸಲಾಗದಂಥ ರೀತಿಯಲ್ಲಿ ಅವರು ಎಲ್ಲ ಕೊಳ್ಳ ಮತ್ತು ಗುಡ್ಡಗಳನ್ನು ಸುತ್ತುವರಿದಿ ರುತ್ತಾರೆ. ನೀವು ಅವರಲ್ಲಿ ಎಂತೆಂಥ ಒಳ್ಳೆಯ ಬಟ್ಟೆಗಳನ್ನು ನೋಡುವಿರೆಂದರೆ ಅವು ಎಲ್ಲಿಂದ ಬರುತ್ತವೆಂದು ನಾನು ಹೇಳಲಾರೆ. ಅವು ಎಷ್ಟು ಬಣ್ಣದವೆಂಬುದನ್ನೂ ಯಾರೂ ಹೇಳರು. ಈಟಿಗಾರರ ಈಟಿಗಳ ಮೇಲೆ ಹಲವಾರು ಬಂಗಾರದ ಮತ್ತು ಬೆಳ್ಳಿಯ ಹೂಗಳು, ಹುಲಿ ಮತ್ತಿತರ ದೊಡ್ಡ ಪಶುಗಳ ಆಕೃತಿಗಳು, ಸುಂದರವಾಗಿ ಕೆತ್ತಿದ ಬೆಳ್ಳಿಯ ಎಲೆ ವಿನ್ಯಾಸ, ಬಣ್ಣ ಕೊಟ್ಟವು, ಕಪ್ಪು ಮತ್ತು (ಎಷ್ಟೊಂದು ಬೆಳ್ಳಗಿದ್ದವೆಂದರೆ) ನೀವು ಕನ್ನಡಿಯಲ್ಲಿಯಂತೆ ಅದರೊಳಗೆ ನೋಡಬಹುದು, ಮತ್ತು ಅವರ ಖಡ್ಗಗಳು ಎಷ್ಟು ಒಳ್ಳೆಯ ರೀತಿಯಲ್ಲಿ ಅಲಂಕೃತವಾಗಿರುವವೆಂದರೆ ಅವುಗಳನ್ನು ಅದಕ್ಕಿಂತ ಹೆಚ್ಚು ಹಾಗೆ ಮಾಡಲಾಗದು. ಬಿಲ್ಲುಗಾರರ ಬಗೆಗೆ ಹೇಳಬೇಕೆಂದರೆ ಅವರ ಬಿಲ್ಲುಗಳಿಗೆ ಬಂಗಾರ ಮತ್ತು ಬೆಳ್ಳಿಯ ತಗಡು ಹೊಂದಿಸಲಾಗಿರುತ್ತದೆ. ಮಿಕ್ಕವರು ಅವುಗಳನ್ನು ಉಜ್ಜಿ ಹೊಳಪು ಕೊಡಲಾಗಿರುತ್ತದೆ ಮತ್ತು ಅವರ ಬಾಣಗಳು ನೀಟಾಗಿದ್ದು ಹೇಗೆ ಗರಿ ಹಾಕಲಾಗಿರುತ್ತದೆಂದರೆ ಅವುಗಳನ್ನು ಇನ್ನೂ ಉತ್ತಮಗೊಳಿಸಲು ಸಾಧ್ಯವಿಲ್ಲ. ಟೊಂಕಗಳಲ್ಲಿ ಬಂಗಾರದ ಮತ್ತು ಬೆಳ್ಳಿಯ ಕಾವುಗಳು ಮತ್ತು ಹಿಡಿಕೆಗಳುಳ್ಳ ಕಠಾರಿ ಮತ್ತು ಗಂಡುಗೊಡಲಿಗಳು. ಅಲ್ಲದೆ, ತುಬಾಕಿ ಮತ್ತು ದೊಡ್ಡ ಬಾಯಿಯ ಸಣ್ಣ ಬಂದೂಕು ಹಿಡಿದು ದಪ್ಪ ಅಂಗಿ ಧರಿಸಿದ ತುಬಾಕಿದಳ ಎಲ್ಲರೂ ತಮ್ಮ ತಮ್ಮ ಸ್ಥಾನದಲ್ಲಿ ತಮ್ಮ…..ಗಳೊಂದಿಗೆ[3] ತಮ್ಮೆಲ್ಲ ಆಟೋಪದೊಂದಿಗೆ. ಅದು ನಿಜಕ್ಕೂ ನೋಡುವಂಥದು. ನಂತರ ಮೂರರು – ಅವರನ್ನು ಮರೆಯುವಂತಿಲ್ಲ – ಅವರು ಕೂಡ ತಮ್ಮ ಢಾಲು, ಈಟಿ, ತುರ್ಕಿಬಿಲ್ಲು, ಅನೇಕ ಸಿಡಿಗುಂಡುಗಳು, ಭಲ್ಲೆ ಮತ್ತು ಅಗ್ನಿ ಬಾಣಗಳೊಂದಿಗೆ ಸೈನ್ಯ ಪ್ರದರ್ಶನಲ್ಲಿದ್ದರು. ಮತ್ತು ಈ ಆಯುಧಗಳನ್ನು ಬಳಸಲು ಬಲು ಚೆನ್ನಾಗಿ ಬಲ್ಲವರು ಅವರಲ್ಲಿದ್ದುದು ನನಗೆ ಬಹಳ ಅಚ್ಚರಿಯುಂಟು ಮಾಡಿತು.

ರಾಜ ಅರಮನೆಯಿಂದ ನಾನು ಈಗಾಗಲೆ ಹೇಳಿರುವ ಕುದುರೆಯ ಮೇಲೆ ಹೊರಡುತ್ತಾನೆ. ನಾನೀಗಾಗಲೆ ಹೇಳಿದ ಹಲವಾರು ಶ್ರೇಷ್ಠ ಬಿಳಿ ಬಟ್ಟೆಗಳನ್ನು ಧರಿಸುತ್ತಾನೆ. ಬಂಗಾರದ ಗಿಲೀಟು ಮಾಡಲಾದ ಮತ್ತು ಕಡುಗೆಂಪು ಮಖಮಲ್ಲು ಹೊದಿಸಿದ ಎರಡು ರಾಜಛತ್ರ ಗಳೊಂದಿಗೆ ಮತ್ತು ಇಂಥ ಸಮಯಗಳಲ್ಲಿ ಧರಿಸುವ ಉದ್ದೆಶದಿಂದ ಇಡಲಾದ ರತ್ನಗಳು ಮತ್ತು ಆಭರಣಗಳೊಂದಿಗೆ. ಇಂಥ ರತ್ನಗಳನ್ನು ಎಂದಾದರೂ ಧರಿಸಿದವನು ಮಾತ್ರ ಇಷ್ಟು ದೊಡ್ಡ ದೊರೆ ಧರಿಸಬಹುದಾದ ವಸ್ತುಗಳನ್ನು ಅರಿಯಬಲ್ಲ. ಮನ್ನೆಯರ ಮತ್ತು ಉನ್ನತ ದರ್ಜೆಯವರ ವೈಭವವನ್ನು ನೋಡಿದರೆ ನಾನು ಅದೆಲ್ಲವನ್ನೂ ವರ್ಣಿಸಲು ಅಸಾಧ್ಯ. ಹಾಗೆ ಮಾಡಲೆತ್ನಿಸಿರೂ ಯಾರೂ ನಂಬರು ಕುದುರೆಗಳು ಮತ್ತು ಅವುಗಳು ಧರಿಸಿದ ಯುದ್ಧ ಕವಚ ನೋಡಿದರೆ ಅವು ಲೋಹಫಲಕಗಳಿಂದ ಯಾವ ರೀತಿ ಆಚ್ಚಾದಿತವಾದುದನ್ನು ನೀವು ಕಾಣುವಿರೆಂದರೆ ನಾನು ನೋಡಿದುದನ್ನು ವರ್ಣಿಸಲು ನನ್ನ ಬಳಿ ಶಬ್ದಗಳಿಲ್ಲ. ಕೆಲವು ಇನ್ನು ಕೆಲವುಗಳ ನೋಟವನ್ನು ನನ್ನಿಂದ ಮರೆಮಾಡಿದವು; ನಾನು ನೋಡಿದುದೆಲ್ಲ ಹೇಳಲೆತ್ನಿಸುವುದು ಅಸಾಧ್ಯ. ಏಕೆಂದರೆ, ನಾನು ಹೋಗುತ್ತ ನನ್ನ ತಲೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಎಷ್ಟೊಂದು ಮೇಲಿಂದ ಮೇಲೆ ತಿರುಗಿಸುತ್ತಿದ್ದೆನೆಂದರೆ ಅರಿವು ತಪ್ಪಿ ನನ್ನ ಕುದುರೆಯಿಂದ ಹೆಚ್ಚೂ ಕಡಿಮೆ ಹಿಂದಕ್ಕೆ ಬೀಳುವಂತಾಗಿತ್ತು. ಅದೆಲ್ಲದರ ವೆಚ್ಚದ ಬಗೆಗೆ ಅಚ್ಚರಿಪಡುವ ಕಾರಣವಿಲ್ಲ. ಏಕೆಂದರೆ, ನಾಡಿನಲ್ಲಿ ಅಷ್ಟೊಂದು ಹಣವಿದೆ ಮತ್ತು ದೊರೆಗಳು ಅಷ್ಟೊಂದು ಶ್ರೀಮಂತರಿದ್ದಾರೆ.

ರಾಜನ ಮುಂದೆ ನಾನು ಹೇಳಿರುವಂತೆ ಬಹಳ ಆನೆಗಳು ತಮ್ಮ ಗೌಸುಗಳು ಮತ್ತು ಆಭರಣಗಳೊಂದಿಗೆ ಹೋಗುತ್ತಿದ್ದವು. ರಾಜನ ಮುಂದೆ ಸುಮಾರು ಇಪ್ಪತ್ತು ಕುದುರೆಗಳು. ಅವುಗಳಿಗೆ ಪೂರ್ತಿ ಜೂಲು ಮತ್ತು ಜೀನು ಮತ್ತು ತಮ್ಮ ಪ್ರಭುವಿನ ವೈಭವ ಮತ್ತು ಅಂತಸ್ತುಗಳನ್ನು ಪ್ರದರ್ಶಿಸುವ ಬಂಗಾರ ಮತ್ತು ಬೆಲೆಯುಳ್ಳ ಹರಳುಗಳ ಕಸೂತಿಗಳು, ರಾಜನಿಗೆ ಸಮೀಪದಲ್ಲಿಯೆ ಕಾರ್ಪೊ ದ ಡಿಯೊಸ್ ಉತ್ಸವದ ದಿನದಂದು ಲಿಸ್ಬನ್‌ನಲ್ಲಿ ನೋಡುವಂತಹ ಪಂಜರ ಹೋಗುತ್ತದೆ. ಅದಕ್ಕೆ ಬಂಗಾರದ ಗಿಲೀಟು ಮಾಡಲಾಗಿದ್ದು ಅದು ದೊಡ್ಡದಿದೆ. ಅದು ತಾಮ್ರ ಅಥವಾ ಬೆಳ್ಳಿಯಿಂದ ಮಾಡಿದ್ದಂತೆ ತೋರಿತು. ಅದನ್ನು ಪ್ರತಿ ಬದಿಯಲ್ಲಿ ಎಂಟರಂತೆ ಹದಿನಾರು ಜನ ಹೊರುತ್ತಾರೆ. ಅಲ್ಲದೆ, ತಮ್ಮ ಸರದಿ ಪಡೆಯುವ ಇತರರು ಇರುತ್ತಾರೆ. ಅದರಲ್ಲಿ ನಾನೀಗಾಗಲೆ ಹೇಳಿದ ವಿಗ್ರಹವನ್ನು ಒಯ್ಯುತ್ತಾರೆ. ಹೀಗೆ ಜೊತೆಗೂಡಿ ರಾಜ ತನ್ನ ಸೈನಿಕರತ್ತ ದೃಷ್ಟಿ ಬೀರುತ್ತ ಮುಂದೆ ಸಾಗಿದ. ಅವರು ಗಟ್ಟಿಯಾಗಿ ಕೂಗುತ್ತ, ಕೇಕೆ ಹಾಕುತ್ತ ತಮ್ಮ ಗುರಾಣಿಗಳನ್ನು ಬಡಿಯುತ್ತಿದ್ದರು. ನಗರ ಕಿತ್ತು ಬೀಳುವುದೇನೊ ಎಂಬಂತೆ ಕುದುರೆಗಳು ಹೇಂಕರಿಸಿದವು, ಆನೆಗಳು ಘೀಳಿಟ್ಟವು. ಶಸ್ತ್ರಾಸ್ತ್ರಗಳ ಮತ್ತು ತುಬಾಕಿಗಳ ಸುರಿಮಳೆಯಿಂದ ಗಿರಿಗಹ್ವರಗಳು ಮತ್ತು ನೆಲವೆಲ್ಲ ಅದುರಿದವು, ಬಯಲುಗಳ ಮೇಲೆ ಸಿಡಿಗುಂಡುಗಳು ಮತ್ತು ಅಗ್ನಿ ಬಾಣಗಳನ್ನು ನೋಡುವುದು ಅದ್ಭುತವಾಗಿತ್ತು. ನಿಜಕ್ಕೂ ಅಲ್ಲಿ ಇಡಿ ಪ್ರಪಂಚವೆ ನೆರೆದಂತೆ ಕಾಣುತ್ತಿತ್ತು.

ಈ ರೀತಿ ರಾಜ ನಾನೀಗಾಗಲೆ ಹೇಳಿರುವ ಡೇರೆಯಿದ್ದಲ್ಲಿಗೆ ಬರುವವರೆಗೆ ಅದು ನಡೆಯುತ್ತಿದ್ದು. ಅವನು ಅದನ್ನು ಪ್ರವೇಶಿಸಿ ತನ್ನ ವಾಡಿಕೆಯ ಆಚರಣೆಗಳನ್ನು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದ. ರಾಜ ಸಾಗುವಾಗ ಸೈನಿಕರು ತಮ್ಮಸ್ಥಾನಗಳಿಂದ ಅಲುಗಾಡುತ್ತಿದ್ದ ರೆಂದು ಭಾವಿಸಬಾರದು. ತದ್ವಿರುದ್ಧವಾಗಿ ಅವರು ರಾಜ ಹಿಂತಿರುಗುವವರೆಗೆ ತಮ್ಮ ಸ್ಥಳಗಳಲ್ಲಿ ಅಲುಗಾಡದೆ ನಿಂತಿರುವರು. ತನ್ನ ಆಚರಣೆಗಳನ್ನು ಮುಗಿಸಿದಾಕ್ಷಣ ಅವನು ಪುನಃ ಕುದುರೆಯೇರಿ ತಾನು ಬಂದಂತೆಯೆ ನಗರಕ್ಕೆ ಹಿಂದಿರುಗಿದ. ಸೈನಿಕರು ಘೋಷಣೆ ಹಾಕುವುದಕ್ಕೆ ಬೇಸರಿಸಲಿಲ್ಲ. ಅವನು ದಾಟಿ ಹೋದ ಕೂಡಲೆ ಅವರು ಹೊರಡತೊಡಗಿದರು. ಆಮೇಲೆ ಗುಡ್ಡಗಳು ಮತ್ತು ಇಳಿಜಾರುಗಳ ಮೇಲೆ ಇದ್ದವರ ಅವರೋಹಣವನ್ನು ನೋಡುವುದು. ಅವರ ಘೋಷ, ಗುರಾಣಿ ಬಡಿಯುವುದು, ಮತ್ತು ಎಣಿಕೆಯಿಲ್ಲದ ಬಿಲ್ಲುಬಾಣಗಳ ಅಲುಗಾಡಿಸುವಿಕೆ, ನಿಜವಾಗಿಯೂ ನಾನೆಷ್ಟು ಪರವಶನಾದೆನೆಂದರೆ ನಾನು ಸ್ವಪ್ನದರ್ಶನ ಕಂಡವನಂತೆ ಮತ್ತು ಕನಸಿನಲ್ಲಿದ್ದಂತೆ ಎನಿಸಿತು. ಆಮೇಲೆ ಸೈನಿಕರು ಬಯಲುಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದ ತಮ್ಮ ಡೇರೆಗಳಿಗೆ ಮತ್ತು ಗುಡಾರಗಳಿಗೆ ಸಾಗತೊಡಗಿದರು. ಎಲ್ಲ ದಳಪತಿಗಳು ರಾಜನೊಂದಿಗೆ ಅರಮನೆಯವರೆಗೆ ಸಾಗಿ ಅಲ್ಲಿಂದ ತಮ್ಮ ಶ್ರಮದಿಂದ ವಿಶ್ರಾಂತಿ ಪಡೆಯಲು ತೆರಳಿದರು.

ಈ ರಾಜ ಯುದ್ಧ ಕವಚವುಳ್ಳ ೩೫,೦೦೦ ಅಶ್ವಾಳುಗಳು ಸೇರಿದಂತೆ ಒಂದು ದಶಲಕ್ಷ[4] ಕಾದುವ ಸೈನಿಕರನ್ನು ಯಾವಾಗಲೂ ಹೊಂದಿರುತ್ತಾನೆಂಬುದನ್ನು ನೀವು ಅರಿಯಬೇಕೆಂದು ಬಯಸುವೆ. ಇವರೆಲ್ಲ ಅವನ ವೇತನದಲ್ಲಿರುವವರು. ಅವನು ಇವೆಲ್ಲ ಸೈನಿಕರನ್ನು ಒಟ್ಟಿಗೆ ಇಟ್ಟಿದ್ದು ಅವಶ್ಯಕತೆ ಬಿದ್ದಾಗ ಯಾವ ದಿಕ್ಕಿಗಾದರೂ ಕಳಿಸಲು ಸನ್ನದ್ಧವಾಗಿ ಇರಿಸುತ್ತಾನೆ. ಈ ಬಿಸ್ನಗ ನಗರದಲ್ಲಿದ್ದುದರಿಂದ ನಾನೊಮ್ಮೆ ರಾಜ ಸಮುದ್ರ ಕರಾವಳಿಯಲ್ಲಿರುವ ತನ್ನ ಸ್ಥಳಗಳಲ್ಲೊಂದರ ವಿರುದ್ಧ ಸೇನಾಬಲ ಕಳಿಸಿದುದನ್ನು ನೋಡಿದೆ. ಅವನು ಅನೇಕ ಅಶ್ವಾಳುಗಳಿದ್ದ ೧೫೦,೦೦೦ ಸೈನಿಕರೊಂದಿಗೆ ಐವರು ದಳಪತಿಗಳನ್ನು ಕಳಿಸಿದ. ಅವನಲ್ಲಿ ಅನೇಕ ಆನೆಗಳಿವೆ. ತನ್ನ ರಾಜ್ಯದ ನೆರೆಯಲ್ಲಿರುವ ಮೂವರು ರಾಜರಲ್ಲಿ ಯಾವನೊಬ್ಬನಿಗೆ ರಾಜನು ತನ್ನ ಬಲ ಪ್ರದರ್ಶಿಸಬಯಸಿದಾಗ ರಣರಂಗದಲ್ಲಿ ಎರಡು ದಶಲಕ್ಷ ಸೈನಿಕರನ್ನು ನಿಲ್ಲಿಸುತ್ತಾನೆ. ತತ್ಪರಿಣಾಮವಾಗಿ ಈ ಭಾಗಗಳಲ್ಲಿ ಅವನು ಅತ್ಯಂತ ಭಯ ಹುಟ್ಟಿಸುವ ರಾಜನಾಗಿರುವನು. ಅವನು ತನ್ನ ರಾಜ್ಯದಿಂದ ಇಷ್ಟೊಂದು ಜನರನ್ನು ಒಯ್ದರೂ ರಾಜ್ಯ ಜನರಹಿತವಾಗಿರುತ್ತದೆಂದು ಭಾವಿಸಕೂಡದು. ಅದು ಎಷ್ಟೊಂದು ಜನಭರಿತವಾಗಿ ರುತ್ತದೆಂದರೆ ಅವನು ಒಬ್ಬನನ್ನೂ ಒಯ್ದಿಲ್ಲವೆಂಬಂತೆ ಅನಿಸುತ್ತದೆ. ಇದಕ್ಕೆ ಕಾರಣವೆಂದರೆ ಅದರಲ್ಲಿರುವ ಅನೇಕ ಮತ್ತು ಶ್ರೆಷ್ಠ ವರ್ತಕರು. ರಣರಂಗದಲ್ಲಿ ಹೋಗಬೇಕಾದವರಲ್ಲದೆ ಅಲ್ಲಿ ದುಡಿಯುವ ಜನ ಮತ್ತು ವ್ಯಾಪಾರದಲ್ಲಿ ತೊಡಗಿದ ಮಿಕ್ಕೆಲ್ಲ ತರಹದ ಜನ ಇದ್ದಾರೆ. ಅಧಿಕ ಸಂಖ್ಯೆಯಲ್ಲಿ ಬ್ರಾಹ್ಮಣರೂ ಇದ್ದಾರೆ. ವಿಧರ್ಮೀಯ ನಾಡಿನಲ್ಲೆಲ್ಲ ಈ ಬ್ರಾಹ್ಮಣರಿದ್ದಾರೆ. ಅವರು ಸಾವನ್ನುಂಟು ಮಾಡುವುದಾವುದನ್ನೂ ತಿನ್ನುವುದಿಲ್ಲ. ಅವರಿಗೆ ಶಸ್ತ್ರಗಳ ಬಳಕೆಯಲ್ಲಿ ಅಭಿರುಚಿಯಿಲ್ಲ.

ರಾಜನ ಆದಾಯವೆಷ್ಟು ಮತ್ತು ಇಷ್ಟು ಸೈನಿಕರಿಗೆ ಸಂಬಳ ಕೊಡಲು ಶಕ್ತನಾಗಿರಲು ಅವನ ಭಂಡಾರ ಎಂಥದು ಎಂದು ಯಾರಾದರೂ ಕೇಳಿದರೆ, ಅವನು ತನ್ನ ರಾಜ್ಯದಲ್ಲಿ ಇಷ್ಟೊಂದು ಮತ್ತು ಎಂಥ ದೊಡ್ಡ ಪ್ರಭುಗಳನ್ನು ಹೊಂದಿರುವುದರಿಂದ ಮತ್ತು ಅವರಲ್ಲಿ ಬಹುಮಂದಿ ತಮ್ಮದೇ ಆದಾಯಗಳನ್ನು ಹೊಂದಿರುವುದರಿಂದ ನಾನು ಹೀಗೆ ಉತ್ತರಿಸುವೆ: ತನ್ನ ಸೈನಿಕರ ಮೇಲೆ ನಿಯಮಿಸಿದ ಈ ದಳಪತಿಗಳು ಅವನ ಮನ್ನೆಯರು; ಅವರು ಪ್ರಭುಗಳು, ಅವರು ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳ ಸ್ವಾಮ್ಯ ಪಡೆದಿರುತ್ತಾರೆ. ದಳಪತಿಗಳಲ್ಲಿ ಕೆಲವರು ಒಂದು ಒಂದೂವರೆ ದಶಲಕ್ಷ ಪರ್ದಾಒಗಳ ಆದಾಯ ವುಳ್ಳವರಿದ್ದಾರೆ. ಇನ್ನು ಕೆಲವರು ಒಂದು ನೂರು ಮತ್ತು ಇನ್ನೂ ಕೆಲವರು ಇನ್ನೂರು, ಮುನ್ನೂರು ಅಥವಾ ಐನೂರು ಸಾವಿರ ಪರ್ದಾಒಗಳ ಆದಾಯವುಳ್ಳವರು. ಪ್ರತಿಯೊಬ್ಬನಿಗೂ ಆದಾಯವಿರುವುದರಿಂದ ರಾಜ ಅವನು ಸಲಹಬೇಕಿದ್ದ ಕಾಲಾಳು, ಕುದುರೆ ಮತ್ತು ಆನೆಗಳ ಸೈನ್ಯವನ್ನು ನಿಗದಿಗೊಳಿಸುತ್ತಾನೆ.[5] ಯಾವಾಗಲೇ ಕರೆಯಲಿ ಎಲ್ಲಿಗೇ ಹೋಗಬೇಕಿರಲಿ ಈ ಸೈನಿಕರು ಕರ್ತವ್ಯಕ್ಕಾಗಿ ಸದಾ ಸನ್ನದ್ಧರಾಗಿತ್ತಾರೆ. ಈ ರೀತಿ ಅವನು ಈ ದಶಲಕ್ಷ ಹೋರಾಳುಗಳನ್ನು ಯಾವಾಗಲೂ ಸಿದ್ಧವಾಗಿಟ್ಟಿರುತ್ತಾನೆ. ತಾನು ಅವರಿಗೆ ಸಂಬಳ ಕೊಡುತ್ತಿರುವುದರಿಂದ ಪ್ರತಿ ದಳಪತಿಯೂ ತನಗೆ ಲಭ್ಯವಿರುವ ಅತ್ಯುತ್ತಮ ಸೈನಿಕರನ್ನು ತಯಾರಿಸಲು ಶ್ರಮಿಸುತ್ತಾನೆ. ಮತ್ತು ಈ ಪ್ರದರ್ಶನದಲ್ಲಿ ಎಂದಿಗೂ ಕಾಣಲು ಸಾಧ್ಯವಾದ ಅತ್ಯುತ್ಕೃಷ್ಟ ಯುವಕರನ್ನು ನಾನು ಕಂಡೆ. ಏಕೆಂದರೆ, ಇಡೀ ವ್ಯೆಹದಲ್ಲಿ ಹೇಡಿಯಂತೆ ನಡೆದುಕೊಳ್ಳುವ ಒಬ್ಬನನ್ನೂ ನಾನು ಕಾಣಲಿಲ್ಲ. ಈ ಸೈನಿಕರನ್ನು ಸಲಹುವುದಲ್ಲದೆ ಪ್ರತಿ ದಳಪತಿ ರಾಜನಿಗೆ ವಾರ್ಷಿಕ ಕಪ್ಪ ಕೊಡಬೇಕು ಮತ್ತು ರಾಜ ತಾನು ಪಗಾರ ಕೊಡುವ ತನ್ನದೇ ಸಂಬಳದಾರ ಸೈನಿಕರನ್ನೂ ಪಡೆದಿರುತ್ತಾನೆ. ತನ್ನ ಸ್ವಂತ ನಿಯಂತ್ರಣದಲ್ಲಿ ಎಂಟುನೂರು ಆನೆಗಳನ್ನು ಮತ್ತು ತನ್ನ ಲಾಯಗಳಲ್ಲಿ ಯಾವಾಗಲೂ ಐನೂರು ಕುದುರೆ ಗಳನ್ನು ಇಟ್ಟಿರುತ್ತಾನೆ. ಈ ಕುದುರೆಗಳ ಮತ್ತು ಆನೆಗಳ ಖರ್ಚಿಗಾಗಿ ಅವನು ಈ ಬಿಸ್ನಗ ನಗರದಿಂದ ಬರುವ ಆದಾಯಗಳನ್ನು ಮೀಸಲಿಟ್ಟಿದ್ದಾನೆ. ಈ ಖರ್ಚು ಎಷ್ಟು ದೊಡ್ಡದಾಗಿ ರುವುದೆಂದು ನೀವು ಸುಲಭವಾಗಿ ಊಹಿಸಬಹುದು. ಇವುಗಳ ಖರ್ಚಲ್ಲದೆ ಕುದುರೆಗಳು ಮತ್ತು ಆನೆಗಳ ಚಾಕರಿಗಾಗಿದ್ದ ಸೇವಕರ ಖರ್ಚು ಬೇರೆ. ಇದರಿಂದ ಈ ನಗರದ ಆದಾಯ ಎಷ್ಟಾಗಿರಬಹುದೆಂದು ನೀವು ತೀರ್ಮಾನಿಸಬಹುದು. ವಿಶಾಲ ಪ್ರದೇಶಗಳು ಮತ್ತು ದೊಡ್ಡ ಆದಾಯಗಳುಳ್ಳ ಬೇರೆ ದಳಪತಿಗಳು ಮತ್ತು ಪ್ರಭುಗಳಲ್ಲದೆ ಬಿಸ್ನಗದ ಈ ರಾಜನ ಪ್ರಜೆಗಳು ಮತ್ತು ಮಾಂಡಲಿಕರಾಗಿದ್ದ ಐವರು ರಾಜರಿದ್ದರು.[6] ಈ ರಾಜನಿಗೆ ಪುತ್ರ ಅಥವಾ ಪುತ್ರಿ ಜನಿಸಿದಾಗಲೆಲ್ಲ ರಾಜ್ಯದ ಅವನ ಎಲ್ಲ ಮನ್ನೆಯವರು ಹಣ ಮತ್ತು ಬೆಲೆಯುಳ್ಳ ರತ್ನಗಳ ಕಾಣಿಕೆ ಸಲ್ಲಿಸುವರು ಮತ್ತು ಪ್ರತಿವರ್ಷ ಅವನ ಜನ್ಮದಿನದಂದೂ ಹಾಗೆಯೆ ಮಾಡುವರು.

ನಾನು ಹೇಳಿರುವ ಈ ಉತ್ಸವಗಳು ಮುಗಿದ ಮೇಲೆ ಮತ್ತು ಅಕ್ಟೋಬರದ ಆದಿಯಲ್ಲಿ ಅದರ ಹನ್ನೊಂದು ದಿವಸ ಕಳೆದ ಮೇಲೆ ಅವರು ದೊಡ್ಡ ಉತ್ಸವಗಳನ್ನು ಮಾಡುತ್ತಾ ರೆಂಬುದನ್ನು ನೀವು ಅರಿಯಬೇಕು. ಆಗ ಪ್ರತಿಯೊಬ್ಬನೂ ತನಗೆ ಇಷ್ಟಬಂದಂತೆ ಹೊಸ, ಬೆಲೆ ಬಾಳುವ ಮತ್ತು ಸುಂದರ ಬಟ್ಟೆಗಳನ್ನು ಧರಿಸುತ್ತಾನೆ. ಎಲ್ಲ ದಳಪತಿಗಳು ತಮ್ಮ ಜನರಿಗೆ ಅನೇಕ ಬಣ್ಣಗಳ ಬಟ್ಟೆಗಳನ್ನು ಕೊಡುತ್ತಾರೆ. ಪ್ರತಿಯೊಬ್ಬನಿಗೂ ತನ್ನದೇ ಬಣ್ಣ ಮತ್ತು ಲಾಂಛನ ಇರುತ್ತದೆ. ಅದೇ ದಿನದಂದು ಅವರು ರಾಜನಿಗೆ ಹಣದ ದೊಡ್ಡ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಅವರು ಆ ದಿನ ರಾಜನಿಗೆ ಹಣದ ರೂಪದಲ್ಲಿ ಒಂದು ದಶಲಕ್ಷ ಐನೂರು ಸಾವಿರ ಸುವರ್ಣ ಪರ್ದಾಒಗಳನ್ನು ಕೊಡುತ್ತಾರೆಂದು ಹೇಳಲಾಗುತ್ತದೆ ಕೂಡ. ಪ್ರತಿ ಪರ್ದಾಒನ ಬೆಲೆ ಮುನ್ನೂರ ಅರವತ್ತು ರೆಯ್ಸ. ಇದರಿಂದ ಅದೆಲ್ಲ ಎಷ್ಟು ರೆಯ್ಸ ಆಗುತ್ತದೆಂದು ನೀವು ತಿಳಿಯಬಹುದು. ಈ ದಿನದಿಂದ ಅವರ ವರ್ಷ ಆರಂಭಿಸುತ್ತದೆ ಎಂಬುದನ್ನು  ನೀವು ತಿಳಿಯಬೇಕೆಂದು ಅಪೇಕ್ಷಿಸುವೆ. ಅದವರ ಹೊಸ ವರ್ಷ. ಇದಕ್ಕಾಗಿ ಅವರು ಉತ್ಸವ ಆಚರಿಸುತ್ತಾರೆ ಮತ್ತು ಕಾಣಿಕೆ ನೀಡುತ್ತಾರೆ. ಅದರಿಂದ ಅಚ್ಚರಿಪಡಬೇಕಿಲ್ಲ. ಏಕೆಂದರೆ, ನಾವು ಕೂಡ ಹೊಸ ವರ್ಷದ ದಿನ ಹಾಗೆಯೆ ಮಾಡುತ್ತೇವೆ. ಅವರು ಹೊಸ ವರ್ಷವನ್ನು ಈ ತಿಂಗಳಿನಲ್ಲಿ ಅಮವಾಸ್ಯೆಯ ದಿನ ಆರಂಭಿಸುತ್ತಾರೆ ಮತ್ತು ತಿಂಗಳುಗಳನ್ನು ಯಾವಾಗಲೂ ಚಂದ್ರನಿಂದ ಚಂದ್ರನಿಗೆ ಎಣಿಸುತ್ತಾರೆ.[7]

ನೀವು ತಿಳಿಯಬೇಕೆಂದು ನಾನೀಗ ಅಪೇಕ್ಷಿಸುವುದೇನೆಂದರೆ ಈ ಸ್ಥಳದ ಹಿಂದಿನ ರಾಜರು ಅನೇಕ ವರ್ಷಗಳಿಂದ ಒಂದು ಬೊಕ್ಕಸವನ್ನು ಇಟ್ಟುಕೊಂಡುಬರುವ ರೂಢಿಯನ್ನು ಬೆಳೆಸಿದ್ದಾರೆ. ಪ್ರತಿಯೊಬ್ಬನ ಮರಣಾನಂತರವೂ ಅದನ್ನು ಯಾರೂ ನೋಡಲಾಗದಂತೆ ಮತ್ತು ತೆರೆಯಲಾಗದಂತೆ ಬೀಗ ಮುದ್ರೆಗಳಿಂದ ಭದ್ರಪಡಿಸಲಾಗುತ್ತದೆ. ಉತ್ತರಾಧಿಕಾರಿ ಗಳಾಗಿ ಬರುವ ರಾಜರೂ ಅವುಗಳನ್ನು ತೆರೆಯುವುದಿಲ್ಲ ಅಥವಾ ಅವುಗಳಲ್ಲೇನಿದೆಯೆಂದು ತಿಳಿಯರು. ರಾಜರಿಗೆ ಅತ್ಯಂತ ಕಠಿಣ ಪರಿಸ್ಥಿತಿ ಇರದ ಹೊರತು ಅವುಗಳನ್ನು ತೆರೆಯಲಾ ಗುವುದಿಲ್ಲ. ಹೀಗೆ, ರಾಜ್ಯಕ್ಕೆ ತನ್ನ ಅಗತ್ಯಗಳಿಗೋಸ್ಕರ ಒಳ್ಳೆಯ ಸರಬರಾಯಿ ಇರುತ್ತದೆ. ಈ ರಾಜ ತನ್ನ ಬೊಕ್ಕಸವನ್ನು ಹಿಂದಿನ ರಾಜರುಗಳಿಗಿಂತ ಭಿನ್ನವಾಗಿ ಮಾಡಿದ್ದಾನೆ. ಅದರಲ್ಲಿ ಪ್ರತಿವರ್ಷ ಹತ್ತು ದಶಲಕ್ಷ ಪರ್ದಾಒಗಳನ್ನು ಇಡುತ್ತಾನೆ. ತನ್ನ ಮನೆ ಖರ್ಚಿಗೆ ಬೇಕಾದುದ ಕ್ಕಿಂತ ಒಂದು ಪರ್ದಾಒ ಕೂಡ ಜಾಸ್ತಿ ಅವುಗಳಿಂದ ಹೊರ ತೆಗೆಯುವುದಿಲ್ಲ. ಈ ಖರ್ಚುಗಳು ಮತ್ತು ತನ್ನ ಪತ್ನಿಯರ ಮನೆಗಳಲ್ಲಿಯ ಖರ್ಚುಗಳು ಮಿಕ್ಕಿ ಉಳಿದುದೆಲ್ಲ ಅವನಿಗಾಗಿ. ನಾನೀಗಾಗಲೆ ಹೇಳಿರುವಂತೆ ಅವನು ತನ್ನಲ್ಲಿ ಹನ್ನೆರಡು ಸಾವಿರ ಸ್ತ್ರೀಯರನ್ನು ಇಟ್ಟುಕೊಂಡಿ ರುತ್ತಾನೆ. ಇದರಿಂದ ಈ ರಾಜ್ಯದ ಶ್ರೀಮಂತಿಕೆ ಎಷ್ಟು ದೊಡ್ಡದು ಮತ್ತು ಅವನು ಸಂಗ್ರಹಿಸಿದ ಸಂಪತ್ತು ಎಷ್ಟು ದೊಡ್ಡದು ಎಂಬುದನ್ನು ನೀವು ತೀರ್ಮಾನಿಸಬುದು.

ಯಾರಿಗಾದರೂ ಪರ್ದಾಒ ಅಂದರೇನೆಂದು ಗೊತ್ತಿರದಿದ್ದರೆ ಅದು ಈ ರಾಜ್ಯ ಬಿಟ್ಟು ಭಾರತದಲ್ಲೆಲ್ಲೂ ಟಂಕಿಸದ ದುಂಡಗಿನ ಸುವರ್ಣನಾಣ್ಯವೆಂದು ಅವನು ತಿಳಿದುಕೊಳ್ಳಲಿ. ಅದರ ಒಂದು ಬದಿಗೆ ಎರಡು ಆಕೃತಿಗಳು, ಮತ್ತೊಂದು ಬದಿಯ ಮೇಲೆ ಅದನ್ನು ಟಂಕಿಸಲು ಆಜ್ಞಾಪಿಸಿದ ರಾಜನ ಹೆಸರು ಮುದ್ರಿಸಲಾಗಿರುತ್ತದೆ. ಈ ರಾಜ ಟಂಕಿಸಲು ಆಜ್ಞಾಪಿಸಿದವುಗಳು ಒಂದೇ ಆಕೃತಿ ಹೊಂದಿದೆ. ಈ ನಾಣ್ಯ ಭಾರತದಾದ್ಯಂತ ಚಲಾವಣೆ ಯಲ್ಲಿದೆ. ಈಗಾಗಲೆ ಹೇಳಿದಂತೆ ಪ್ರತಿ ಪರ್ದಾಒನ ಬೆಲೆ ಮುನ್ನೂರ ಅರವತ್ತು ರೆಯ್ಸ.

ಇವೆಲ್ಲ ಸಂಗತಿಗಳು (ಉತ್ಸವಗಳು) ಕಳೆದ ಮೇಲೆ ರಾಜ ಹೊಸ ನಗರಕ್ಕೆ ಹೋದ. ನಾನೀಗಾಗಲೆ ಅದರ ಬಗೆಗೆ ಹೇಳಿರುವಂತೆ ಅದು ಅವನಿಗೆ ಬಹಳ ಇಷ್ಟ. ಏಕೆಂದರೆ, ನಾನೀಗಾಗಲೆ ಹೇಳಿರುವಂತೆ ಅದನ್ನು ನಿರ್ಮಿಸಿ ಜನವಸತಿ ಮಾಡಿಸಿದವನು ಅವನೇ. ರಾಜ ಎರಡು ವರ್ಷಗಳಲ್ಲಿ ಈ ನಗರ ಕಟ್ಟಿದ. ರಾಜನನ್ನು ನಾಗರಿಕರು ಒಳ್ಳೆಯ ಉತ್ಸವಗಳೊಂದಿಗೆ ಬರಮಾಡಿಕೊಂಡರು. ಬೀದಿಗಳಲ್ಲಿ ಬೆಲೆಬಾಳುವ ಬಟ್ಟೆಗಳನ್ನು ನೇತು ಬಿಡಲಾಗಿತ್ತು. ಕಟ್ಟಲಾಗಿದ್ದ ಅನೇಕ ವಿಜಯೋತ್ಸವ ಕಮಾನುಗಳ ಕೆಳಗೆ ರಾಜ ನಡೆದ. ಈ ನಗರದಲ್ಲಿ ರಾಜ ತನ್ನ ಕಾವಲು ಪಡೆಯ ಇನ್ನೊಂದು ಪರಿಶೀಲನ ಪ್ರದರ್ಶನ ಏರ್ಪಡಿಸಿದ ಮತ್ತು ಅದು ವರ್ಷಾರಂಭವಾದುದರಿಂದ ಅವನು ಎಲ್ಲರಿಗೂ ಸಂಬಳ ವಿತರಿಸಿದ. ವರ್ಷಕ್ಕೊಮ್ಮೆ ಸಂಬಳ ಕೊಡುವುದು ಅವರ ರೂಢಿ. ಅವನ ಮನೆಯ ಅಧಿಕಾರಿಗಳಿಂದ ವೀಕ್ಷಣೆ ನಡೆದು ಅವರು ಪ್ರತಿಯೊಬ್ಬನ ಹೆಸರು ಮತ್ತು ಅವನ ಮುಖ ಇಲ್ಲವೆ ದೇಹದ ಮೇಲೆ ಇರುವ ಕಲೆಗಳನ್ನು ಬರೆದುಕೊಳ್ಳುತ್ತಿದ್ದರು. ಒಂದು ಸಾವಿರ ಪರ್ದಾಒ ಸಂಬಳವಿರುವ ರಕ್ಷಕ ಪಡೆಯವರು ಇದ್ದರೆ. ಕೆಲವರಿಗೆ ಎಂಟುನೂರು, ಆರುನೂರು, ಸ್ವಲ್ಪ ಹೆಚ್ಚು ಇಲ್ಲವೆ ಕಮ್ಮಿ; ವ್ಯತ್ಯಾಸವಿದೆ ಹಾಗೂ ವ್ಯಕ್ತಿಗಳಲ್ಲೂ ವ್ಯತ್ಯಾಸವಿದೆ. ಅವರಲ್ಲಿ ಉನ್ನತ ದರ್ಜೆಯ ಕೆಲವರಿಗೆ ಎರಡು ಮೂರು ಕುದುರೆಗಳಿವೆ ಮತ್ತು ಮಿಕ್ಕವರಿಗೆ ಒಂದಕ್ಕಿಂತ ಹೆಚ್ಚಿಲ್ಲ. ಈ ಸೈನಿಕರಿಗೆ ತಮ್ಮ ದಳಪತಿ ಇದ್ದು ಪ್ರತಿಯೊಬ್ಬ ದಳಪತಿ ಕ್ರಮ ಹಾಗೂ ಪದ್ಧತಿಯಂತೆ ತನ್ನ ರಕ್ಷಕದಳದೊಂದಿಗೆ ಅರಮನೆಗೆ ಕಾವಲಾಗಿ ನಿಲ್ಲಲು ಹೋಗುವನು. ರಾಜ ತನ್ನ ಕಾವಲು ಪಡೆಯಲ್ಲಿ ಐನೂರು ಅಶ್ವಾಳುಗಳನ್ನು ಹೊಂದಿದ್ದಾನೆ. ಮತ್ತು ಇವರು ತಮ್ಮ ಆಯುಧಗಳಿಂದ ಅರಮನೆಯ ಹೊರಗೆ ಪಹರೆ ಮಾಡುತ್ತಾರೆ. ಒಳಗಡೆ ಎರಡು ಪಹರೆಗಳಿ ರುತ್ತವೆ ಮತ್ತು ಖಡ್ಗ ಗುರಾಣಿ ಹಿಡಿದ ಜನರು ಇರುತ್ತಾರೆ.

ನಾನು ಈಗಾಗಲೆ ಹೇಳಿರುವಂತೆ ರಾಜ ಈ ಹೊಸ ನಗರದಲ್ಲಿದ್ದು ಕ್ರಿಸ್ಟೊವಾಒ ದ ಫಿಗೈರೆಡೊ ಅವನನ್ನು ದಯವಿಟ್ಟು ಬಿಸ್ನಗ ನಗರದ ಅರಮನೆಯನ್ನು ತೋರಿಸಲು ಅಪ್ಪಣೆ ನೀಡುವಂತೆ ಕೇಳಿಕೊಂಡ. ಏಕೆಂದರೆ, ತನ್ನೊಂದಿಗೆ ಅನೇಕ ಪೋರ್ತುಗೀಜರು ಬಂದಿದ್ದು ಅವರು ಹಿಂದೆಂದೂ ಬಿಸ್ನಗ ನೋಡಿರದಿದ್ದುದರಿಂದ ದೇವರು ಅವರನ್ನು ತಮ್ಮ ನಾಡಿಗೆ ತಿರುಗಿ ಒಯ್ದಗ ಹೇಳಲು ಏನಾದರೂ ಇರಲೆಂಬ ಉದ್ದೇಶದಿಂದ ಅವರು ಅದನ್ನು ನೋಡಲು ಸಂಭ್ರಮಿಸುತ್ತಿದ್ದಾರೆ ಎಂದೂ ಅರಿಕೆ ಮಾಡಿಕೊಂಡ. ರಾಜ ಕೂಡಲೆ ತನ್ನ ವಾಸಸ್ಥಾನಗಳಲ್ಲಿ ಕೆಲವನ್ನು ಅವರಿಗೆ ತೋರಿಸುವಂತೆ ಆಜ್ಞೆ ಮಾಡಿದ. ಏಕೆಂದರೆ, ಅವನ ಪತ್ನಿಯರ ವಾಸಸ್ಥಾನಗಳನ್ನು ಯಾರೂ ನೋಡುವಂತಿಲ್ಲ. ಬಿಸ್ನಗ ನಗರವನ್ನು ನಾವು ತಲುಪಿದ ಕೂಡಲೆ ಗಂದರಾಜೊ ಎಂಬ ಹೆಸರುಳ್ಳ ಮತ್ತು ಸಾಲ್ವಟಿನಿಕ್[8]ನ ಸಹೋದರನಾದ ಆ ನಗರದ ಮಂಡಲಾಧಿಪತಿ ಅರಮನೆಯನ್ನು ನಮಗೆ ತೋರಿಸಿದ.

ನಾನು ಹೇಳಿರುವಂತೆ ರಾಜನ ಪತ್ನಿಯರ ಸೇವೆಯಲ್ಲಿರುವ ಸ್ತ್ರೀಯರು ಉತ್ಸವಕ್ಕೆ ಬರುವಾಗ ಹೊರಗೆ ಹೋಗಲು ಬಳಸುವ ದ್ವಾರವನ್ನು ಪ್ರವೇಶಿಸಿದರೆ ಅದರ ಎದುರಿಗೆ ಅಂತಹದೆ ಇನ್ನೊಂದಿದೆ. ಇಲ್ಲಿ ಅವರು ನಮಗೆ ನಿಲ್ಲಲು ಹೇಳಿದರು ಮತ್ತು ನಾವು ಎಷ್ಟು ಜನರಿರುವೆವೆಂದು ಎಣಿಸಿದರು ಮತ್ತು ಎಣಿಸುತ್ತಿದ್ದಂತೆಯೆ ನಯವಾಗಿ ಗಿಲಾವು ಮಾಡಿದ ಮತ್ತು ಸುತ್ತಲೂ ಬಲು ಬಿಳಿಯಾದ ಗೋಡೆಗಳುಳ್ಳ[9] ಒಂದು ಸಣ್ಣ ಅಂಗಳದೊಳಗೆ ಬಿಟ್ಟರು. ಈ ಅಂಗಳದ ಕೊನೆಗೆ ನಾವು ಪ್ರವೇಶಿಸಿದ ದ್ವಾರದ ಎದುರಿಗೆ ಅಂಟಿಕೊಂಡು ಎಡಕ್ಕೆ ಇನ್ನೊಂದಿದೆ ಮತ್ತು ಮುಚ್ಚಿದ ಇನ್ನೂ ಒಂದಿದೆ. ಎದುರಿಗಿರುವ ದ್ವಾರ ರಾಜನ ವಾಸಸ್ಥಾನದ್ದು. ಈ ದ್ವಾರದ ಪ್ರವೇಶದಲ್ಲಿ ಹೊರಗಡೆ ಸಜೀವಾಕೃತಿಯಂತೆ ಬಣ್ಣಿಸಿದ ಮತ್ತು ಆ ರೀತಿಯಲ್ಲಿ ಚಿತ್ರಿಸಿದ ಎರಡು ಆಕೃತಿಗಳಿವೆ. ಅವಾವುವೆಂದರೆ, ಬಲಬದಿಗಿರುವುದು ಈ ರಾಜನ ತಂದೆಯದು ಮತ್ತು ಎಡಬದಿಯದು ಈ ರಾಜನದು. ತಂದೆ ಕಪ್ಪು ಮತ್ತು ಒಳ್ಳೆಯ ರೂಪವುಳ್ಳವನು ಮತ್ತು ಮಗನಿಗಿಂತ ದೃಢಕಾಯನು ಇರುವನು. ಅವರು ತಮ್ಮ ಎಲ್ಲ ಉಡುಗೆ ತೊಡಿಗೆ ಮತ್ತು ಅವರು ಉಡುವ ಅಥವಾ ಜೀವಂತವಿರುವಾಗ ಉಡುತ್ತಿದ್ದಂತಹ ಬಟ್ಟೆಬರೆ ಧರಿಸಿ ನಿಂತಿರುವರು. ಆಮೇಲೆ, ದ್ವಾರದೊಳಗೆ ಪ್ರವೇಶಿಸಲಿಚ್ಛಿಸಿದ ನಮ್ಮನ್ನು ಪುನಃ ಎಣಿಸಿದರು ಮತ್ತು ಅವರು ನಮ್ಮನ್ನು ಎಣಿಸುವುದು ಮುಗಿದ ನಂತರ ನಾವು ಅದರಲ್ಲೇನಿತ್ತೆಂದು ನಾನೀಗ ಬಣ್ಣಿಸಲಿರುವ ಚಿಕ್ಕ ಮನೆಯನ್ನು ಪ್ರವೇಶಿಸಿದೆವು.

ನೀವು ಒಳಗೆ ಬಂದ ಕೂಡಲೆ ಎಡಬದಿಗೆ ಒಂದರ ಮೇಲೊಂದರಂತೆ ಎರಡು ಕೋಣೆಗಳಿವೆ. ಅವು ಹೀಗಿವೆ : ಕೆಳಗಿನದು ನೆಲಕ್ಕಿಂತ ಕೆಳಗೆ ಇದ್ದು ಅದಕ್ಕೆರಡು ಬಂಗಾರದ ಗಿಲೀಟು ಮಾಡಿದ ತಾಮ್ರ ಹೊದಿಸಿದ ಚಿಕ್ಕ ಪಾವಟಿಗೆಗಳಿವೆ. ಮತ್ತು ಅಲ್ಲಿಂದ ಮೇಲಿನವರೆಗೆ ಪೂರ್ತಿ ಬಂಗಾರದ ಪದರು ಕೂಡಿಸಲಾಗಿದೆ. (ನಾನು ಹೇಳುತ್ತಿರುವುದು ಬಂಗಾರದ ಗಿಲೀಟು ಕೊಟ್ಟಿದೆ ಎಂದಲ್ಲ, ಒಳಗಡೆ ಬಂಗಾರದ ಪದರು ಕೂಡಿಸಲಾಗಿದೆ ಎಂದು) ಮತ್ತು ಹೊರಗಡೆ ಅದು ಗುಮ್ಮಟಾಕಾರದ್ದಿದೆ. ಅದಕ್ಕೆ ನಾಲ್ಕು ಬದಿಯುಳ್ಳ ಬಿದಿರು ಕೆಲಸದಿಂದ[10] ಕಟ್ಟಲಾದ  ದ್ವಾರಮಂಟಪವಿದೆ. ಅದರ ಮೇಲೆ ಮಾಣಿಕ್ಯ, ವಜ್ರ, ಇತರ ಎಲ್ಲ ಬೆಲೆಯುಳ್ಳ ಹರಳುಗಳು ಮತ್ತು ಮುತ್ತುಗಳ ಕೆಲಸವಿದೆ. ದ್ವಾರಮಂಟಪದ ಮೇಲೆ ಎರಡು ಸುವರ್ಣ ಲೋಲಕಗಳಿವೆ. ಎಲ್ಲ ಬೆಲೆಯುಳ್ಳ ಹರಳುಗಳ ಕೆಲಸ ಹೃದಯಾಕಾರದ್ದಿದೆ. ಒಂದರೊಳಗೊಂದು ಹೆಣೆದ ದಪ್ಪ ಸಣ್ಣ ಮುತ್ತಿನ ಕೆಲಸ ಮಾಡಿದ ಹಗ್ಗವಿದೆ. ಗುಮ್ಮಟದ ಮೇಲೆ ಅದರದೇ ಲೋಲಕಗಳಿವೆ. ಈ ಕೋಣೆಯಲ್ಲಿ ಒಂದು ಮಂಚವಿದೆ. ಆದರ ಕಾಲುಗಳು ದ್ವಾರಮಂಟಪ ದಂತೆಯೆ ಇವೆ. ಅಡ್ಡಪಟ್ಟಿಗಳನ್ನು ಬಂಗಾರದಿಂದ ಹೊಂದಿಸಲಾಗಿತ್ತು. ಅದರ ಮೇಲೆ ಕಪ್ಪು ಸ್ಯಾಟಿನ್ ಬಟ್ಟೆಯ ಗಾದಿಯಿತ್ತು. ಅದರ ಸುತ್ತ ಒಂದು ಗೇಣಗಲದ ಮುತ್ತಿನ ಕಂಬಿಸಾಲು ಇತ್ತು. ಅದರ ಮೆಲೆ ಎರಡು ದಿಂಬುಗಳಿದ್ದು ಬೇರೆ ಯಾವ ಹೊದಿಕೆಯೂ ಇಲ್ಲ. ಅದರ ಮೇಲಿನ ಕೋಣೆಯಲ್ಲಿ ಏನಾದರೂ ಇತ್ತೊ ಇಲ್ಲವೊ ಹೇಳಲಾರೆ, ಏಕೆಂದರೆ, ನಾನದನ್ನು ನೋಡಲಿಲ್ಲ. ಕೆಳಗೆ ಬಲಗಡೆ ಇರುವುದನ್ನು ಮಾತ್ರ ನೋಡಿದೆ. ಈ ಮನೆಯಲ್ಲಿ ಕಡೆದ ಕಲ್ಲಿನ ಕಂಬಗಳುಳ್ಳ ಕೋಣೆಯಿದೆ. ಕೋಣೆಯೆಲ್ಲ, ಕೋಣೆ ಮತ್ತು ಗೋಡೆಗಳು, ತುದಿಯಿಂದ ಅಡಿವರೆಗೆ, ದಂತದಿಂದ ಮಾಡಲ್ಪಟ್ಟಿವೆ. ಅಡ್ಡತೊಲೆಗಂಬಗಳ ಮೆಲ್ಭಾಗದಲ್ಲಿ ಎಲ್ಲ ದಂತದ ಗುಲಾಬಿ ಮತ್ತು ಇತರ ಹೂಗಳಿವೆ. ಎಲ್ಲವನ್ನೂ ಎಷ್ಟು ಚೆನ್ನಾಗಿ ಮಾಡಲಾಗಿದೆಯೆಂದರೆ ಅದಕ್ಕಿಂತ ಉತ್ತಮವಾದುದು ಇರಲು ಸಾಧ್ಯವಿಲ್ಲ. ಅದು ಎಷ್ಟೊಂದು ಶ್ರೀಮಂತವೂ ಸುಂದರವೂ ಅಗಿದೆಯೆಂದರೆ ನಿಮಗೆ ಇಂಥ ಇನ್ನೊಂದು ಎಲ್ಲೂ ದೊರೆಯದು. ಇದೆ ಮಗ್ಗಲಲ್ಲಿ – ಇಲ್ಲಿಗೆ ಬಂದ ಪೋರ್ತುಗೀಜರವರೆಗೆ ಕೂಡ ಎಲ್ಲ ಜನರ ಜೀವನ ವಿಧಾನಗಳನ್ನೆಲ್ಲ ಬಣ್ಣಗಳಲ್ಲಿ ಚಿತ್ರಿಸಲಾಗಿದೆ. ಅದರಿಂದ, ಪ್ರತಿಯೊಬ್ಬನು, ಕುರುಡರು ಮತ್ತು ಭಿಕ್ಷುಕರವರೆಗೂ, ತನ್ನ ದೇಶದಲ್ಲಿ ಹೇಗೆ ಜೀವನ ನಡೆಸುತ್ತಾನೆಂದು ರಾಜನ ಪತ್ನಿಯರು ಅರಿಯಬಹುದು. ಈ ಮನೆಯಲ್ಲಿ ಎರಡು ಬಂಗಾರದಿಂದ ಹೊದಿಸಲಾದ ಸಿಂಹಾಸನಗಳು ಮತ್ತು ಪರದೆಗಳುಳ್ಳ ಬೆಳ್ಳಿಯ ಮಂಚ ಇವೆ. ಇಲ್ಲಿ ನಾನು ಹಸಿರು ಬೆಣಚುಕಲ್ಲಿನ ಹಾಸನ್ನೊಂದು ಕಂಡೆ. ಅದನ್ನು ಈ ಮನೆಯಲ್ಲಿ ಮಹತ್ವದ ವಸ್ತುವೆಂದು ಭಾವಿಸಲಾಗುತ್ತದೆ. ಈ ಬೆಣಚುಕಲ್ಲು ಇದ್ದ ಹತ್ತಿರದಲ್ಲಿಯೆ, ಅಂದರೆ ಅರಮನೆಗೆ ಪ್ರವೇಶವಿರುವ ಕೆಲವು ಕಮಾನುಗಳ ಕೆಳಗೆ, ಕೆಲವು ಚಿಲಕಗಳಿಂದ ಮುಚ್ಚಲಾದ ಒಂದು ಚಿಕ್ಕ ಬಾಗಿಲು ಇದೆ. ಅದರೊಳಗೆ ಹಿಂದಿನ ರಾಜರಲ್ಲೊಬ್ಬನ ನಿಧಿ ಇದೆಯೆಂದು ನಮಗೆ ಹೇಳಿದರು.

ಈ ಮನೆಯನ್ನು ಬಿಟ್ಟಕೂಡಲೆ ನಾವು ಪ್ರಾಣಿ ಕಾಳಗಗಳ ಕಣದಷ್ಟು ದೊಡ್ಡ ಅಂಗಳವನ್ನು ಪ್ರವೇಶಿಸಿದೆವು. ಅದು ಚೆನ್ನಾಗಿ ಗಿಲಾಯ ಮಾಡಲಾಗಿದ್ದು ಅದರ ಮಧ್ಯದ ಸುಮಾರಿಗೆ ಕೆಲವು ಕಟ್ಟಿಗೆಯ ಕಂಬಗಳ ಜೊತೆಗೆ ಪೂರ್ತಿ ತಾಮ್ರದ ಗಿಲೀಟಿನಿಂದ ಹೊದಿಸಿದ ತೊಲೆ ಮೇಲ್ಗಡೆ ಇದೆ. ಮಧ್ಯದಲ್ಲಿ ಒಂದರೊಳಗೊಂದು ಜೋಡಿಸಿದ ಕೊಂಡಿಗಳುಳ್ಳ ಬೆಳ್ಳಿಯ ನಾಲ್ಕು ಸರಪಣಿಗಳು ಇವೆ. ಅವು ರಾಜನ ಪತ್ನಿಯರಿಗೆ ಜೋಕಾಲಿಯಾಗಿ ಬಳಸಲ್ಪಡುತ್ತವೆ. ಈ ಅಂಗಳದ ಪ್ರವೇಶಕ್ಕೆ ಬಲಬದಿಗೆ ನಾವು ನಾಲ್ಕೈದು ಪಾವಟಿಗೆ ಏರಿ ನಾನೀಗಾಗಲೆ ಹೇಳಿರುವಂತೆ ಕಟ್ಟಲಾದ ಕೆಲವು ಸುಂದರ ಮನೆಗಳು ಚಪ್ಪಟೆ ಮಾಳಿಗೆಗಳುಳ್ಳ ಒಂದೇ ಅಂತಸ್ತಿನವು. ಯೋಜನೆ ಚೆನ್ನಾಗಿದ್ದು ಅವುಗಳು ಸೋಪಾನ ಗೃಹಶ್ರೇಣಿಗಳಂತಿವೆ. ಅಲ್ಲೊಂದು ಅನೇಕ ಕಂಬಗಳ ಮೇಲೆ ಕಟ್ಟಿದ ಕಟ್ಟಡವಿದೆ. ಅವು ಕಲ್ಲುಗೆಲಸದವಾಗಿದ್ದು ಮತ್ತು ಚಾವಣಿಯ ಎಲ್ಲ ಕೆಲಸವೂ ಹಾಗೆಯೆ ಇದ್ದು ಮಿಕ್ಕದ್ದು ಕಟ್ಟಿಗೆಯದಿದೆ. ಎಲ್ಲ ಕಂಬಗಳು (ಬೇರೆ ಎಲ್ಲ ಕೆಲಸದೊಂದಿಗೆ) ಬಂಗಾರದಿಂದ ಹೊದಿಸಲಾಗಿವೆಯೊ ಎಂಬಂತೆ ಗಿಲೀಟು ಮಾಡಲಾಗಿದೆ.

ಆಮೇಲೆ ಈ ಕಟ್ಟಡದ ಪ್ರವೇಶದ್ವಾರದಲ್ಲಿ ಮಧ್ಯಪಟಾಂಗಣದ ನಡುವೆ ನಾಲ್ಕು ಕಂಬಗಳ ಮೇಲೆ ಕಲ್ಲುಗೆಲಸದಲ್ಲಿ ಜೋಡಿಸಲಾದ ಇತರ ಚಿಕ್ಕ ಆಕೃತಿಗಳಲ್ಲದೆ ಅನೇಕ ನರ್ತಕಿಯರ ಆಕೃತಿಗಳಿಂದ ತುಂಬಿದ ವಿತಾನ ನಿಂತಿದೆ. ಇದೂ ಕೂಡ ಪೂರ್ತಿ ಬಂಗಾರದ ಗಿಲೀಟು ಮಾಡಲಾಗಿದೆ. ಮತ್ತು ಶಿಲ್ಪಗಳ ಹೊರಗೆ ಚಾಚಿರುವ ಎಲೆಗಳ ಕೆಳಬದಿಯ ಮೇಲೆ ಸ್ವಲ್ಪ ಕೆಂಪು ಬಣ್ಣವಿದೆ. ಈ ಕಟ್ಟಡವನ್ನು ಅವರು ಬಳಸುವುದಿಲ್ಲವೆಂಬುದನ್ನು ನೀವು ತಿಳಿದಿರಬೇಕು. ಏಕೆಂದರೆ, ಇದು ಅವರ ದೇವತೆಗೆ ಮತ್ತು ದೇವಾಲಯಕ್ಕೆ ಸೇರಿದ್ದು. ಇದರ ಕೊನೆಗೆ ಬಾಗಿಲಿರುವಲ್ಲಿ ವಿಗ್ರಹವಿದೆ. ಈ ದೇವತೆಯ ಉತ್ಸವ ಆಚರಿಸುವಾಗಲೆಲ್ಲ ಅದನ್ನು ಸುವರ್ಣ ಸಿಂಹಾಸನದ ಮೇಲೆ ಹೊತ್ತೊಯ್ದು ಆ ಉದ್ದೇಶಕ್ಕಾಗಿಯೆ ಮಾಡಿದ ವಿತಾನದ ಕೆಳಗೆ ಇಡುತ್ತಾರೆ. ಆಮೇಲೆ ಅಲ್ಲಿಗೆ ಬ್ರಾಹ್ಮಣರು ತಮ್ಮ ಆಚರಣೆಗಳನ್ನು ಜರುಗಿಸಲು ಮತ್ತು ನರ್ತಕಿಯರು ನರ್ತನಗೈಯಲು ಬರುತ್ತಾರೆ.

ಈ ಕಟ್ಟಡದಿಂದ ಕೆಳಗಿಳಿದು ನಾವು ಅಂಗಳದ ಎಡಪಕ್ಕದಲ್ಲಿ ಸಾಗಿದೆವು ಮತ್ತು ಅದರುದ್ದಕ್ಕೂ ವಿಸ್ತರಿಸಿರುವ ಮೊಗಸಾಲೆಯನ್ನು ಪ್ರವೇಶಿಸಿದೆವು. ಅದರಲ್ಲಿ ಕೆಲವು ವಸ್ತುಗಳನ್ನು ನೋಡಿದೆವು. ಮೊಗಸಾಲೆ ಪ್ರವೇಶಿಸುತ್ತಲೆ ಬೆಳ್ಳಿಯ ಸರಪಳಿಗಳಿಂದ ತೂಗುಬಿಟ್ಟ ಮಂಚವಿತ್ತು. ಮಂಚಕ್ಕೆ ಬಂಗಾರದ ಗಟ್ಟಿಗಳಿಂದ ಮಾಡಿದ ಕಾಲುಗಳಿದ್ದವು. ಅವುಗಳನ್ನು ಎಷ್ಟು ಚೆನ್ನಾಗಿ ಮಾಡಲಾಗಿದೆಯೆಂದರೆ ಅವುಗಳನ್ನು ಉತ್ತಮಪಡಿಸಲು ಸಾಧ್ಯವಿಲ್ಲ. ಮತ್ತು ಮಂಚದ ಅಡ್ಡಪಟ್ಟಿಗಳು ಬಂಗಾರದಿಂದ ಹೊದಿಸಲಾಗಿವೆ. ಈ ಮಂಚದ ಮುಂದಿರುವ ಕೋಣೆಯಲ್ಲಿ ಬಂಗಾರದ ಸರಪಳಿಗಳಿಂದ ತೂಗುಬಿಟ್ಟ ಇನ್ನೊಂದು ಮಂಚವಿದೆ. ಈ ಮಂಚಕ್ಕೆ ಬೆಲೆಯುಳ್ಳ ಹರಳುಗಳನ್ನು ಅಧಿಕವಾಗಿ ಜೋಡಿಸಲಾದ ಬಂಗಾರದ ಗಟ್ಟಿಗಳಿಂದ ಮಾಡಲಾದ ಕಾಲುಗಳಿವೆ. ಮಂಚದ ಅಡ್ಡಪಟ್ಟಿಗಳನ್ನು ಬಂಗಾರದಿಂದ ಹೊದಿಸಲಾಗಿದೆ. ಈ ಕೋಣೆಯ ಮೇಲೆ ಇನ್ನೊಂದು ಚಿಕ್ಕ ಕೋಣೆಯಿತ್ತು. ಅದಕ್ಕೆ ಬಂಗಾರದ ಗಿಲೀಟು ಮಾಡಲಾಗಿದೆ ಮತ್ತು ಬಣ್ಣ ಹಚ್ಚಲಾಗಿದೆ ಎನ್ನುವುದನ್ನು ಬಿಟ್ಟರೆ ಅದರಲ್ಲಿ ಏನೂ ಇಲ್ಲ. ಈ ಕೋಣೆ ದಾಟಿದರೆ ಅದೇ ಮೊಗಸಾಲೆಗುಂಟ ಮುಂದೆ ಈ ರಾಜ ಕಟ್ಟಲು ಆಜ್ಞಾಪಿಸಿದ ಕೋಣೆಯಿತ್ತು. ಹೊರಗಡೆ ಪ್ರಮೀಳೆಯರಂತೆ ಬಿಲ್ಲು ಬಾಣ ಹಿಡಿದ ಸ್ತ್ರೀಯರ ಆಕೃತಿಗಳಿವೆ. ಅವರು ಆ ಕೋಣೆಗೆ ಬಣ್ಣ ಹಚ್ಚಲಾರಂಭಿಸಿದ್ದರು ಮತ್ತು ಮಿಕ್ಕವುಗಳಿಗಿಂತ ಅದು ಉತ್ಕೃಷ್ಟವಾಗಬೇಕಿತ್ತೆಂದು ಮತ್ತು ಕೆಳಗಿನ ನೆಲ ಹಾಗೂ ಉಳಿದೆಲ್ಲ ಪೂರ್ತಿಯಾಗಿ ಬಂಗಾರದ ತಗಡಿನಿಂದ ಆಚ್ಛಾದಿತವಾಗಬೇಕಿತ್ತೆಂದು ಅವರು ನಮಗೆ ಹೇಳಿದರು. ಈ ಮೊಗಸಾಲೆ ದಾಟಿ ಅದಕ್ಕಿಂತ ಎತ್ತರವಿರುವ ಇನ್ನೊಂದನ್ನು ಏರಿ ನಾವು ಒಂದು ಕೊನೆಯಲ್ಲಿ ಮೂರು ಬಂಗಾರದ ಕಡಾಯಿಗಳನ್ನು ಕಂಡೆವು. ಅವುಗಳು ಎಷ್ಟು ದೊಡ್ಡವಿದ್ದವೆಂದರೆ ಪ್ರತಿಯೊಂದರಲ್ಲಿ ಅರ್ಧ ಆಕಳು ಬೇಯಿಸಬಹುದಿತ್ತು. ಅವುಗಳೊಂದಿಗೆ ಬಹಳ ದೊಡ್ಡ ಬೆಳ್ಳಿಯ ಕಡಾಯಿಗಳು ಮತ್ತು ಕೆಲವು ಚಿಕ್ಕ ಹಾಗೂ ಕೆಲವು ದೊಡ್ಡ ಬಂಗಾರದ ಪಾತ್ರೆಗಳಿದ್ದವು. ಅಲ್ಲಿಂದ ಒಂದು ಚಿಕ್ಕ ಮೆಟ್ಟಿಲು ಸಾಲು ಹತ್ತಿ ಹೋದೆವು ಮತ್ತು ಚಿಕ್ಕ ಬಾಗಿಲಿನ ಮೂಲಕ ಈ ರೀತಿಯಾಗಿರುವ ಕಟ್ಟಡ ಪ್ರವೇಶಿಸಿದೆವು. ರಾಜ ತನ್ನ ಸ್ತ್ರೀಯರನ್ನು ನೃತ್ಯ ಕಲಿಯಲು ಕಳಿಸುವುದು ಈ ಭವನಕ್ಕೆ. ಅದು ಉದ್ದವಾದ ಬಹಳ ಅಗಲವಲ್ಲದ ಕಂಬಗಳ ಮೇಲೆ ನಿಂತ ಪೂರ್ತಿ ಕಲ್ಲಿನ ಕಟ್ಟಡ. ಕಂಬಗಳು ಗೋಡೆಯಿಂದ ಒಂದು ಪೂರ್ತಿತೋಳಿನಷ್ಟು ದೂರ ಇವೆ. ಒಂದರಿಂದ ಇನ್ನೊಂದರ ಮಧ್ಯೆ ಒಂದೂವರೆ ತೋಳು, ಬಹುಶಃ ಇನ್ನೂ ಸ್ವಲ್ಪ ಹೆಚ್ಚು ಅಂತರವಿದೆ. ಈ ಕಂಬಗಳು ಕಟ್ಟಡದ ಸುತ್ತ ಆ ರೀತಿಯಲ್ಲಿ ನಿಲ್ಲುತ್ತವೆ. ಅವು ಎಲ್ಲ ಗಿಲೀಟು ಮಾಡಿ[11] ಇತರ  ಪೊಳ್ಳುಗಳೊಂದಿಗೆ(?) ಮಾಡಿದ ಅರೆಕಂಬಗಳು(?)[12] ಆಧಾರ (ಅಥವಾ ನುಣಪಾದ)ಗಳಲ್ಲಿ ಮೇಲ್ಗಡೆ[13] ಆನೆಗಳು ಮತ್ತು ಇತರ ಆಕಾರಗಳ ಬಹಳಷ್ಟು ಪ್ರಾಣಿಗಳಿವೆ. ಒಳಭಾಗ ಕಾಣುವಂತೆ ಅದು ಅನಾವೃತವಾಗಿದೆ ಮತ್ತು ಈ ಪ್ರಾಣಿಗಳ ಒಳಬದಿಯ ಮೇಲೆ ಇತರ ಬಿಂಬಗಳಿವೆ. ಪ್ರತಿಯೊಂದನ್ನು ಸ್ವರೂಪಕ್ಕನುಗುಣವಾಗಿ ಇಡಲಾಗಿದೆ. ಬೆನ್ನಿಗೆ ಬೆನ್ನು ಹತ್ತಿದ ಮಾನವಾಕೃತಿಗಳು ಮತ್ತು ಬೇರೆ ಬೇರೆ ವಿಧದ ಪ್ರಾಣಿಗಳವೂ ಇವೆ. ಪ್ರತಿಯೊಂದಕ್ಕೂ ಪುಟೀಪಿನಂತಹ ಕಂಬದಿಂದ ಕಂಬದವರೆಗಿರುವ ತೊಲೆಯಿದೆ. ಮತ್ತು ಕಂಬದಿಂದ ಕಂಬಕ್ಕೆ ಇಂತಹ ಅನೇಕ ಪುಟೀಪುಗಳಿವೆ. ಗಿಲೀಟು ಮಾಡಲಾದ ಹಾಗೂ ಒಂದು ಮೊಳ ಆಕಾರದ ಮುದುಕರ ಬಿಂಬಗಳೂ ಇವೆ. ಪುಟೀಪುಗಳಲ್ಲಿ ಪ್ರತಿಯೊಂದಕ್ಕೂ ಈ ರೀತಿಯಲ್ಲಿ ಇಡಲಾದ ಒಂದು ಇದೆ. ಈ ಬಿಂಬಗಳು ಕಟ್ಟಡದ ತುಂಬ ಇವೆ. ಕಂಬಗಳ ಮೇಲೆ ಇತರ ಚಿಕ್ಕ ಬಿಂಬಗಳಿವೆ. ಇನ್ನೂ ಕೆಲವು ಅವಕ್ಕಿಂತ ಚಿಕ್ಕವು. ಹೀಗೆಯೆ ಮತ್ತೂ ಕೆಲವು ಬಿಂಬಗಳು. ಅವು ಯಾವ ರೀತಿ ಇದ್ದವೆಂದರೆ ಈ ಕೆಲಸ ತಮ್ಮ ವಿನ್ಯಾಸಗಳೊಂದಿಗೆ ಈ ಕಂಬಗಳ ಮೇಲೆ, ಕಂಬದಿಂದ ಕಂಬಕ್ಕೆ, ಆಕಾರದಲ್ಲಿ ಕ್ರಮೇಣ ಕಡಿಮೆಗೊಳ್ಳುತ್ತ ಹೋದುದನ್ನು ಕಂಡೆ. ಪ್ರತಿಸಲ ಗೇಣಿನಷ್ಟು ಚಿಕ್ಕದಾಗುತ್ತ ಹೋಗಿ ಕೊನೆಗೆ ಇಲ್ಲದಂತಾಯಿತು. ಹಾಗೆ ಅದು ಕ್ರಮೇಣ ಚಿಕ್ಕದಾಗುತ್ತ ಹೋಗಿ ಕೊನೆಗೆ ಎಲ್ಲ ಶಿಲ್ಪ ಕೆಲಸದಲ್ಲಿ ಬರಿ ಗುಮ್ಮಟ ಉಳಿಯಿತು. ಇದಾದರೊ ನಾನು ನೋಡಿದುದರಲ್ಲಿ ಅತ್ಯಂತ ಸುಂದರವಾದುದು. ಈ ಬಿಂಬಗಳು ಮತ್ತು ಕಂಬಗಳ ನಡುವೆ ಎಲೆಗಳ ವಿನ್ಯಾಸ ಮುಂದುವರಿದಿದೆ. ಅದೆಲ್ಲ ಗಿಲೀಟು ಮಾಡಲಾದ ಫಲಕಗಳಂತಿದ್ದು ಕೆಂಪು ಮತ್ತು ನೀಲಿಯಲ್ಲಿ ಎಲೆಗಳ ಬೆನ್ನುಗಳಿವೆ. ಕಂಬಗಳ ಮೇಲಿನ ಬಿಂಬಗಳು ಸಾರಂಗ ಮತ್ತು ಇತರ ಪ್ರಾಣಿಗಳವಿದ್ದು ಅವುಗಳಿಗೆ ಬಣ್ಣ ಹಚ್ಚಲಾಗಿದ್ದು ಮುಖಗಳು ಕೆಂಪಾಗಿವೆ. ಆದರೆ ಇತರ ಆನೆಯ ಮೇಲೆ ಕುಳಿತ ಆಕೃತಿಗಳು ಹಾಗೂ ಪುಟೀಪುಗಳ ಮೇಲಿನವೆಲ್ಲ ಚಿಕ್ಕ ಡೋಲು ಹಿಡಿದ ನರ್ತಕಿಯರವು.

ಈ ಫಲಕಗಳ ವಿನ್ಯಾಸಗಳು ನೃತ್ಯಗಳ ಕೊನೆಯಲ್ಲಿ ಭಂಗಿಗಳನ್ನು ಯಾವ ರೀತಿಯಲ್ಲಿ ತೋರ್ಪಡಿಸುತ್ತವೆಂದರೆ ಪ್ರತಿ ಫಲಕದ ಮೇಲೆ ನೃತ್ಯದ ಕೊನೆಗೆ ಉಚಿತ ಭಂಗಿಯಲ್ಲೊಬ್ಬ ನರ್ತಕಿಯಿದ್ದಾಳೆ. ಸ್ತ್ರೀಯರಿಗೆ ಕಲಿಸಲೋಸುಗ ಹೀಗೆ ಮಾಡಲಾಗಿದೆ. ನೃತ್ಯ ಮುಗಿದ ಮೇಲೆ ತಾವು ಯಾವ ಭಂಗಿಯಲ್ಲುಳಿಯಬೇಕೆಂಬುದನ್ನು ಮರೆತಾಗ ಆ ನೃತ್ಯದ ಕೊನೆ ಇದ್ದ ಫಲಕವನ್ನು ನೋಡಬಹುದು. ಅದರಿಂದ ತಾವು ಏನು ಮಾಡಬೇಕೆಂಬುದನ್ನು  ಅವರು ಲಕ್ಷ್ಯದಲ್ಲಿಡುತ್ತಾರೆ.

ಈ ಮನೆಯ ಕೊನೆಗೆ ಎಡಬದಿಗೆ ಬಣ್ಣ ತೊಟ್ಟ ಗೋಡೆಯಿದೆ. ಸ್ತ್ರೀಯರು ತಮ್ಮ ದೇಹ ಮತ್ತು ಕಾಲುಗಳನ್ನು ಸಡಿಲಗೊಳಿಸಲೋಸುಗ ತಮ್ಮ ಕೈಗಳೊಂದಿಗೆ ಅದಕ್ಕೆ ಅಂಟಿಕೊಳ್ಳುತ್ತಾರೆ. ಅವರ ನೃತ್ಯವನ್ನು ಲಾವಣ್ಯಗೊಳಿಸಲೋಸುಗ ಇಡಿ ದೇಶವನ್ನು ನಮ್ಯವಾಗಿರಿಸಲು ಅಲ್ಲಿ ಕಲಿಸುತ್ತಾರೆ. ಇನ್ನೊಂದು ತುದಿಗೆ ಬಲಕ್ಕೆ ರಾಜ ಅವರು ನರ್ತಿಸುವುದನ್ನು ನೋಡಲು ಕುಳಿತುಕೊಳ್ಳುವಲ್ಲಿ ಎಲ್ಲ ನೆಲೆಗಳು ಮತ್ತು ಗೋಡೆಗಳು ಬಂಗಾರದಿಂದ ಹೊದಸಲಾಗಿವೆ ಮತ್ತು ಗೋಡೆಯ ಮಧ್ಯದಲ್ಲಿ ನೃತ್ಯದ ಕೊನೆಗೆ ತಾಳುವ ಭಂಗಿಯಲ್ಲಿ ಕೈಗಳಿರುವ ಹನ್ನೆರಡು ವರ್ಷದ ಹುಡುಗಿಯ ಗಾತ್ರದ ಸ್ತ್ರೀಯ ಬಂಗಾರದ ಮೂರ್ತಿಯಿದೆ.

ಅವರು ನಮಗೆ ಇದಕ್ಕಿಂತ ಹೆಚ್ಚು ತೋರಿಸಲಿಲ್ಲ. ನಾನೀಗಾಗಲೆ ಹೇಳಿರುವ ನಪುಂಸಕರನ್ನು ಹೊರತುಪಡಿಸಿ ಸ್ತ್ರೀಯರ ವಾಸಸ್ಥಾನವನ್ನು ಯಾರೂ ನೋಡುವಂತಿಲ್ಲ. ಇಲ್ಲಿಂದ ನಾವು ಒಳಗೆ ಹೋಗುತ್ತಿದ್ದಂತೆಯೆ ಎರಡನೆಯ ದ್ವಾರಕ್ಕೆ ಬಂದೆವು. ಅಲ್ಲಿ ನಮ್ಮನ್ನು ಮತ್ತೊಮ್ಮೆ ಎಣಿಸಿದರು.

ಬಿಸ್ನಗ ನಗರದಲ್ಲಿ ನೂರು ಸಾವಿರಕ್ಕಿಂತ ಹೆಚ್ಚು ವಸತಿ ಗೃಹಗಳಿವೆಯೆಂದು ಹೇಳಲಾಗುತ್ತದೆ. ಅವೆಲ್ಲ ಒಂದು ಅಂತಸ್ತಿನವು ಮತ್ತು ಸಮತಟ್ಟು ಮಾಳಿಗೆಯವಿದ್ದು ಪ್ರತಿಯೊಂದಕ್ಕೂ ಒಂದು ಎತ್ತರವಿಲ್ಲದ ಸುತ್ತುಗೋಡೆಯಿದೆ. ರಾಜ ವಾಸಿಸುವುದು ಹೆಚ್ಚಾಗಿ ಈ ನಗರದಲ್ಲಿಯೆ. ಉತ್ತರ ಬದಿಗೆ ಕಲ್ಲುಗುಡ್ಡಗಳಿವೆ. ಅವುಗಳ ನಡುವೆ ನದಿ ಹರಿಯುತ್ತದೆ. ಮತ್ತು ಗೋಡೆ ಅವುಗಳ ತುದಿಯಗುಂಟ ವ್ಯಾಪಿಸಿದೆ. ಆಚೆಗೆ ನಾಗುಂಡಿಮ್ ಎಂದು ಕರೆಯಲಾಗುವ ನಗರವಿದೆ. ಅದಕ್ಕೆ ಮೂರೇ ದ್ವಾರಗಳು : ಎಂದರೆ, ನದಿ ಮೂಲಕ ಒಂದು, ಅವರು ಸರಿಯಾಗಿ ಈ ದ್ವಾರದಲ್ಲಿ[14] ಹತ್ತಿ ಅದನ್ನು ನಾವೆಗಳಲ್ಲಿ ದಾಟುವರು; ಆ ಬದಿಗೆ ಉತ್ತರಕ್ಕಿರುವ ಇನ್ನೊಂದು ಅಧಿಕ ಭದ್ರವಾದ ದ್ವಾರ. ಅದು ಎಷ್ಟು ಕೆಟ್ಟ ರಸ್ತೆಯಾಗಿದೆಯೆಂದರೆ ಒಮ್ಮೆ ಒಬ್ಬನೇ ಅಶ್ವಾರೋಹಿ ದಾಟಬಹುದು.

(ಬಿಸ್ನಗದ) ವಾಯವ್ಯಕ್ಕೆ ಬಿಸ್ನಗಕ್ಕೆ ಹೊಂದಿಕೊಂಡು ಕ್ರಿಸ್ನಾಪೊರ್[15] ಎಂಬ ಇನ್ನೊಂದು ನಗರವಿದೆ. ಅದರಲ್ಲಿ ಅವರು ಹೆಚ್ಚಾಗಿ ಪೂಜೆ ಮಾಡುವ ಅವರ ಎಲ್ಲ ದೇವಾಲಯಗಳಿವೆ ಮತ್ತು ಈ ನಗರದ ಆದಾಯವೆಲ್ಲ ಅವುಗಳಿಗೆ ಕೊಡಲಾಗಿದೆ. ಒಂದು ನೂರು ಬಂಗಾರದ ಪರ್ದಾಒಗಳ ಆದಾಯವಿದೆ ಎಂದು ಹೇಳಲಾಗುತ್ತದೆ. ದೇವಾಲಯಗಳು ಉನ್ನತವಾಗಿದ್ದು ಎಲ್ಲ ಕಾಮಪ್ರೇರಕ ಭಂಗಿಗಳಲ್ಲಿರುವ ಪುರುಷ ಸ್ತ್ರೀಯರ ಅನೇಕ ಆಕೃತಿಗಳುಳ್ಳ ದೊಡ್ಡ ಕಟ್ಟಡಗಳನ್ನು ಹೊಂದಿವೆ.

ದಕ್ಷಿಣ ಬದಿಗೆ ಬಯಲಿನಲ್ಲಿರುವ ನಾಗಲಾಪುರ ಎಂಬ ಇನ್ನೊಂದು ನಗರ. ಇದರಲ್ಲಿ ಇಡಲ್‌ಸಾಒ ಮುತ್ತಿಗೆ ಹಾಕಿದಾಗ ಬಿಡಾರ ಹೂಡಿದ್ದ ಮತ್ತು ಅದನ್ನು ನೆಲಸಮ ಮಾಡಿದ ಆದರೆ, ಈಗಾಗಲೆ ಅದನ್ನು ಪುನಃ ಕಟ್ಟಲಾಗಿದೆ ಮತ್ತು ಇದು ಬಿಸ್ನಗದಿಂದ ಒಂದು ಹರದಾರಿ ದೂರ ಇದೆ.[16]

ಪೂರ್ವಕ್ಕೆ ಆರ್ದೆಗಮಾ[17] ಎಂಬ ಇನ್ನೊಂದು ನಗರವಿದೆ. ಅದು ಈ ರಾಜನ ಪ್ರಧಾನ ರಾಣಿಯ ಹೆಸರು. ಅದು ಹೊಸದಿದೆ ಮತ್ತು ಅವನು ಅವಳ ಪ್ರೀತ್ಯರ್ಥ ಅದನ್ನು ಕಟ್ಟಿದ.

—-
ಆಕರ : ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ೧೯೯೨, ಮೂಲ :  ರಾಬರ್ಟ್ ಸಿವೆಲ್, ಅನುವಾದ: ಸದಾನಂದ ಕನವಳ್ಳಿ, (ಪುಟ ೨೫೮-೩೧೧), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)
[1]      ಲಗಾಮುಗಳು ಚರ್ಮದಿಂದ ಮಾಡಲಾಗಿರದೆ ದಾರಗಳಾಗಿ ಹೊಸೆದ ರೇಷ್ಮೆಯವು.

[2]      Laudeis. ಬೇರೆ ಬೇರೆ ರೀತಿ ಬರೆಯಲಾದ ಈ ಶಬ್ದ ಸತತವಾಗಿ ಬಳಸಲ್ಪಟ್ಟಿದೆ. ಇದು ಭಾರತದಲ್ಲಿ ಹಿಂದಿನ ಕಾಲದಲ್ಲಿ ಹಗಲಲ್ಲೆಲ್ಲ ಹಾಕಿಕೊಳ್ಳಲಾಗುತ್ತಿದ್ದ ಚರ್ಮ ಅಥವಾ ಲೋಹದ ತುಣುಕಗಳಿಂದ ಬಲಪಡಿಸಿದ ದಪ್ಪ ರಜಾಯಿ ಅಂಗಿಗಳಿಗೆ ಅನ್ವಯಿಸುತ್ತದೆಂದು ತೋರುತ್ತದೆ. ಅವುಗಳಲ್ಲಿ ಬಹುಮಟ್ಟಿನವು ಚೆನ್ನಾಗಿ ಅಲಂಕೃತವಾಗಿದ್ದವು ಮತ್ತು ಖಡ್ಗದ ಏಟುಗಳಿಂದ ಒಳ್ಳೆಯ ರಕ್ಷಣೆ  ಒದಗಿಸುತ್ತಿದ್ದವು. ಉತ್ತರ ಆರ್ಕಾಟದಲ್ಲಿ ವೆಲ್ಲೋರಿನ ಕೋಟೆಯಲ್ಲಿರುವ ವಿಜಯನಗರ ಕಾಲದಲ್ಲಿ ಕಟ್ಟಲಾದ ಅತ್ಯಂತ ಅಲಂಕೃತವಾದ ದೇವಾಲಯದ ಕಂಬಗಳ ಮೇಲೆ ಹಿಂಗಾಲ ಮೇಲೆ ನಿಂತ ಕುದುರೆಗಳನ್ನು ಕಡೆಯಲಾಗಿದೆ. ಅವುಗಳ ಆರೋಹಿಗಳು ಗುಂಡಿ ಮತ್ತು ಕಸಿಗಳಿಂದ ಕಟ್ಟಲಾದ ಮೆಲ್ನೋಟಕ್ಕೆ ಚರ್ಮದವೆಂದು ತೋರುವ ಕವಚಗಳನ್ನು ಧರಿಸಿದ್ದಾರೆ. ದಿನಚರಿಕಾರ ಸೂಚಿಸಿರುವ ಅಂಗವಸ್ತ್ರ ಇದಾಗಿರುವ ಸಾಧ್ಯತೆಯಿದೆ. ಅದು “ಅರಿವೆ ಅಥವಾ ಮೆತ್ತೆಯಿಂದ ತುಂಬಿದ”ಎಂಬ ಅರ್ಥ ನೀಡುವ “ಲೋಡು”ಎಂಬ ಕನ್ನಡಕ್ಕೆ ಸಂಬಂಧಿಸಿದ್ದೆಂಬ ಸುಳಿವು ಬಿಟ್ಟರೆ ಆ ಶಬ್ದದ ಮೂಲದ ಬಗೆಗೆ ಬೇರೆ ಸುಳಿವು ನೀಡಲಾರೆ. ಕ್ರಿ.ಶ. ೧೫೨೦ರ ರಾಯಚೂರು ದಂಡಯಾತ್ರೆಯಲ್ಲಿ ಹಿಂದೂ ಅಶ್ವದಳದ ಉಡುಪು ವರ್ಣಿಸುತ್ತ ಬ್ಯಾರೊಸ್ ಅವರ ಈಟಿ ತಿವಿತ ಮತ್ತು ಖಡ್ಗ ಇರಿತಗಳಿಂದ ಸಂರಕ್ಷಿಸಲು ಸಮರ್ಥವಾದ ನೂಲಿನ ಲೋಡುಗಳನ್ನು (embutidos, ಈ ಸಂದರ್ಭದಲ್ಲಿ ಅದು ಏನೆ ಅರ್ಥ ನೀಡಲಿ, ವಾಚ್ಯಾರ್ಥದಲ್ಲಿ “ಒಳಗೆ ತುಂಬಲಾದ”)ಅಥವಾ ದೇಹ, ತಲೆ ಮತ್ತು ತೋಳುಗಳು;ಕುದುರೆಗಳು ಮತ್ತು ಆನೆಗಳನ್ನು ಅದೇ ರೀತಿ ಸಂರಕ್ಷಿಸಲಾಗಿರುತ್ತದೆ. ಕಾಲಾಳುಗಳು ಸಂರಕ್ಷಕ ಚಿಲಕತ್ತು ಧರಿಸದೆ “ಕೇವಲ ಲೋಡುಗಳನ್ನು ಧರಿಸುತ್ತಿದ್ದರು.”ಡೆಕಡಾ, iii.L.iv.c.4

[3]      Lioes ಅರ್ಥ ಸ್ಪಷ್ಟವಿಲ್ಲ.

[4]      ಈ ದೊಡ್ಡ ಸಂಖ್ಯೆಯ ಬಗೆಗೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೫೮).

[5]      ನೂನಿಜ್‌ನಿಂದ ಕೆಲವು ವಿವರಗಳು ನೀಡಲ್ಪಟ್ಟಿವೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೫೮).

[6]      ನೂನಿಜ್‌ನ ತೀರ ಸ್ವತಂತ್ರವಾದ ಪ್ರಮಾಣದ ಪ್ರಕಾರ ಇವರು ಬಂಕಾಪುರ, ಗೆರೆಸೊಪ್ಪ, ಬಕಾನೂರ, ಕ್ಯಾಲಿಕಟ್ ಮತ್ತು ಭಟ್ಕಳದ ರಾಜರು (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೫೮).

[7]      ಈ ಕಾಲಾನುಕ್ರಮಣಿಕೆಯ ವಿವರಗಳ ಬಗೆಗೆ ಪೂರ್ಣ ಟಿಪ್ಪಣಿಗಾಗಿ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೫೮).

[8]      ನೂನಿಜ್‌ನ “ಗುಆಂಡಾಜಾ”(ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೫೮).

[9]      ಇವೆಲ್ಲ ಕಟ್ಟಡಗಳು ಸಂಪೂರ್ಣ ನಾಶಗೊಳಿಸಲ್ಪಟ್ಟಿವೆ. ಆದರೆ ಕಾಳಜಿಪೂರ್ಣವಾದ ಮತ್ತು ವ್ಯವಸ್ಥಿತವಾದ ಉತ್ಖನನ ಅರಮನೆಯ ಇಡಿ ವಿನ್ಯಾಸವನ್ನು ತೋರ‌್ಪಡಿಸಬಹುದು. ಹಾಳು ಗಳಲ್ಲಿ ಮತ್ತು ಭಗ್ನಾವಶೇಷಗಳಲ್ಲಿ, ವರ್ಣಿಸಲಾಗಿರುವ ಸುಂದರ ಶಿಲ್ಪಗಳ ಅವಶೇಷಗಳು ದೊರೆಯಬಹುದು. ಪ್ಯಾಸ್ ವರ್ಣಿಸಿದ ಉತ್ಸವಗಳನ್ನು ರಾಜ ಮತ್ತು ಅವನ ಆಸ್ಥಾನಿಕರು ನೋಡುತ್ತಿದ್ದ ದೊಡ್ಡ ಅಲಂಕೃತ ದ್ವಾರಮಂಟಪದ ಹಿಂದೆಯೆ ಮತ್ತು ಹಾಗಾಗಿ ಇದೀಗ ಪ್ರಸ್ತಾಪಿಸಿದ ದ್ವಾರಕ್ಕೆ ಹತ್ತಿಕೊಂಡ ಮಣ್ಣು ಮತ್ತು ಹಾಳಿನಲ್ಲಿ ಅರೆಹೂತಿರುವ ಮತ್ತು ಪ್ರತಿಯೊಂದು ಒಂದೇ ಕಲ್ಲು ದಿಮ್ಮಿಯಲ್ಲಿ ಮಾಡಿದ ಎರಡು ದೊಡ್ಡ ಕಲ್ಲಿನ ಬಾಗಿಲುಗಳಿವೆ. ಮರಗೆಲಸವನ್ನು ಅನುಕರಿಸುವಂತೆ ಕಲ್ಲಿನಲ್ಲಿ ಪಟ್ಟಿಗಳನ್ನು ಕೆತ್ತಲಾಗಿದೆ ಮತ್ತು ಅದೇ ದಿಮ್ಮಿಯಲ್ಲಿ ಕೊರೆದ ದೊಡ್ಡ ಚಿಲಕಗಳಿವೆ.

[10]     Feyto huas meyas ಇದರ ಅರ್ಥದ ಬಗೆಗೆ ನನಗೆ ಸಂದೇಹವಿದೆ. ಈಗ ಉಳಿದಿರುವ ಅವಶೇಷಗಳ ರಾಶಿಯ ಪರಿಶೀಲನೆ ಇವೆಲ್ಲ ಅಂಶಗಳನ್ನು ಬಗೆಹರಿಸಬಹುದು. ಶಿಲಾಶಿಲ್ಪಗಳನ್ನು ಒಡೆದು ಬಿಟ್ಟು ಹೋಗಲಾಗುತ್ತಿತ್ತು. ಅವನ್ನು ಒಯ್ಯಲಾಗುತ್ತಿರಲಿಲ್ಲ.

[11]     ಈ ವರ್ಣನೆ ವಿಶೇಷ ಗಮನಕ್ಕೆ ಅರ್ಹವಾಗಿದೆ. ಲೇಖಕ ಸ್ಪಷ್ಟವಾಗಿಯೆ ಶ್ರೀಮಂತವಾಗಿ ಶಿಲ್ಪಿಸಲಾದ ಮಂಡಪವನ್ನು ವರ್ಣಿಸುತ್ತಾನೆ. ಅದರಂಥ ಅನೇಕ ನಮೂನೆಗಳು ದೇವಾಲಯ ಗಳಲ್ಲಿ ಇನ್ನೂ ನೋಡಸಿಗುತ್ತವೆ. ಮತ್ತು ಇಡಿ ಕಲ್ಲು ಕೆತ್ತೆನೆಗೆ ಚೆನ್ನಾಗಿ ಬಣ್ಣ ನೀಡಲಾಗಿತ್ತು ಮತ್ತು ಬಂಗಾರದ ಗಿಲೀಟು ಮಾಡಲಾಗಿತ್ತು. ಬಹುಶಃ ಯಾವಾಗಲೂ ಹೀಗೆಯೆ ಆಗಿತ್ತು. ವಿಜಯನಗರದ ಈ ಅನೇಕ ಕಟ್ಟಡಗಳ ಮೇಲೆ ಬಣ್ಣದ ಗುರುತುಗಳು ಇನ್ನೂ ಉಳಿದಿವೆ.

[12]     ಇಲ್ಲಿ ನಿರೂಪಿಸಲಾಗಿರುವಂತೆ ಇರದಿದ್ದರೆ ಇದರ ಅರ್ಥ ತಿಳಿಯದು.

[13]     ಬಹುಶಃ ಶಿಲ್ಪಗಳು ದಕ್ಷಿಣ ಭಾರತದ ಆ ಕಾಲದ ದೇವಾಲಯಗಳಲ್ಲಿ ಇಂದಿಗೂ ನೋಡಸಿಗುವ ಅನೇಕ ಶಿಲ್ಪಗಳಂತಿವೆ. ಅವುಗಳ ಕಂಬಗಳ ಗದ್ದಿಗೆ ಕಲ್ಲನ್ನು ಆನೆಗಳ, ಕುದುರೆಗಳ, ರಾಕ್ಷಸರ ವಿಚಿತ್ರ ಆಕೃತಿಗಳಿಂದ ಚೆನ್ನಾಗಿ ಕಡೆಯಲಾಗುತ್ತಿತ್ತು.

[14]     ಈ ದ್ವಾರ ಆನೆಗುಂದಿಯ ದೋಣಿದಾಟಿನ ಎದುರಿಗೆ ಇಂದಿಗೂ ಇದೆ.

[15]     ಒಂದು ಉತ್ಕೃಷ್ಟ ದೇವಾಲಯದ ಅವಶೇಷಗಳಿರುವ ಕೃಷ್ಣಾಪುರ.

[16]     ಈ ವಾಕ್ಯವನ್ನು ನಂತರ ಮಧ್ಯೆ ಸೇರಿಸಲಾಗಿರಬೇಕೆಂಬುದು ಸ್ಪಷ್ಟವಾಗಿದೆ. ಬಹುಶಃ ಕೊನೆಯ ನಾಲ್ಕು ಪ್ಯಾರಾಗಳನ್ನು ಹಾಗೆಯೆ ಮಾಡಿರಬೇಕು. ಏಕೆಂದರೆ, ಉಪಾಂತ ವಾಕ್ಯ ಬಹುಶಃ ಕ್ರಿ.ಶ. ೧೫೨೨ ಅಥವಾ ಆ ಸುಮಾರಿಗೆ ಬರೆದ ಪ್ಯಾಸ್‌ನ ಮೂಲ ದಿನಚರಿಯ ಭಾಗವಾಗಿರಲಾರದು. ಏಕೆಂದರೆ, ಅದು ಕ್ರಿ.ಶ. ೧೫೩೫-೩೬ರಲ್ಲಿ ಜರುಗಿದ ಘಟನೆಯನ್ನು ಪ್ರಸ್ತಾಪಿಸುತ್ತದೆ.

[17]     ಇತರೆಡೆ “ಒಂದೆಗೆಮಾ”ಎಂದು ಕರೆಯಲಾಗಿದೆ. ಅದರ ಇನ್ನೊಂದು ಹೆಸರು ನಾಗಲಾಪುರ. ಅದೇ ಆಧುನಿಕ ಹೊಸಪೇಟೆ, (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೪೧೦).