ಪ್ಯಾಸ್ ಎರಡನೇ ಕೃಷ್ಣದೇವರಾಯನ ಕಾಲದಲ್ಲಿ, ಅಂದರೆ ಕ್ರಿ.ಶ. ೧೫೨೦ರಲ್ಲಿ, ವಿಜಯನಗರಕ್ಕೆ ಬಂದಿದ್ದನು. ಅದು ವಿಜಯನಗರದ ಉಚ್ಛ್ರಾಯ ಕಾಲ. ಕೃಷ್ಣದೇವರಾಯನನ್ನು ಪ್ಯಾಸ್ ಹಲವಾರು ಸಲ ಕಂಡು ಅವನ ವೈಭವದ ಬಗ್ಗೆಯೂ, ಅವನ ಕಾಲದ ನಡೆನುಡಿಗಳ ಬಗ್ಗೆಯೂ ಬರೆದಿದ್ದಾನೆ.

ನೂನಿಜ್ ಬಂದದ್ದು ಪ್ಯಾಸ್‌ನ ನಂತರ, ಅಂದರೆ ಕ್ರಿ.ಶ. ೧೫೩೬ ಅಥವಾ ಕ್ರಿ.ಶ. ೧೫೩೭ರಲ್ಲಿ. ಆಗ ಕೃಷ್ಣದೇವರಾಯನ ನಂತರ ಪಟ್ಟಕ್ಕೆ ಬಂದ ಅಚ್ಯುತರಾಯ ಆಳುತ್ತಿದ್ದ. ಇವನು ಕೈಲಿ ಆಗದ, ಸ್ವಾರ್ಥದ, ಹೇಡಿತನದ ಹಾಗೂ ಕ್ರೂರ ಸ್ವಭಾವದ ರಾಜ. ಇವನ ಈ ಗುಣಗಳು ವಿಜಯನಗರದ ಸಾಮ್ರಾಜ್ಯದ ಅವನತಿಗೆ ಅಂಕುರಾರ್ಪಣ ಮಾಡಿದವು. ನೂನಿಜ್ ವಿಜಯನಗರದ ಅರಸುಗಳ ಪೂರ್ವೇತಿಹಾಸವನ್ನು ಹೇಳುವು ದಲ್ಲದೆ, ಅಚ್ಯುತರಾಯನ ಕಾಲದ ಪರಿಸ್ಥಿತಿಯನ್ನೂ ವರ್ಣಿಸುತ್ತಾನೆ.

ಪೋರ್ಚುಗೀಸ್ ಭಾಷೆಯಲ್ಲಿರುವ ಪ್ಯಾಸ್ ಮತ್ತು ನೂನಿಜರ ಮೂಲಗ್ರಂಥಗಳನ್ನು ಪ್ರಕಟಿಸಿದ ಭಾಗ್ಯ ಪ್ರಸಿದ್ಧ ಅರಬ್ಬೀ ವಿದ್ವಾಂಸರಾದ ಡೇವಿಡ್ ಲೋಪ್ ಎಂಬುವರಿಗೆ ಸೇರಿದ್ದು. ಇವರು ಕ್ರಿ.ಶ. ೧೮೯೭ರಲ್ಲಿ ಪ್ರಕಟಿಸಿದ ಡೋಸ್ ರೈಸ್ದೆಬಿಸ್ನಾಗ ಎಂಬ ಪುಸ್ತಕದಲ್ಲಿ ಮೇಲೆ ಹೇಳಿದ ಪ್ರವಾಸಿಗಳ ಪೂರ್ಣ ವರ್ಣನೆಯನ್ನು ಕೊಟ್ಟಿದ್ದಾರೆ. ಆ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಹೀಗೆ ಹೆಳಿದ್ದಾರೆ.

ಇವರು (ಪ್ಯಾಸ್ ಮತ್ತು ನೂನಿಜ್) ಬರೆದಿರುವುದು ಚರಿತ್ರಾ ದೃಷ್ಟಿ ಯಿಂದಲಾಗಲೀ ಅಥವಾ ಆ ದೇಶದ, ಅದರಲ್ಲಿಯೂ ರಾಜಧಾನಿಯ, ಅದರ ಉತ್ಪನ್ನ ವಸ್ತುಗಳ, ಅಲ್ಲಿಯ ಪದ್ಧತಿಗಳ ಮತ್ತು ಇತರ ಸಂಗತಿಗಳ ವರ್ಣನೆಯ ದೃಷ್ಟಿಯಿಂದಲಾಗಲೀ ಯಾವ ಭಾಷೆಯಲ್ಲಿ ಬರೆದಿರುವುದ ನ್ನಾದರೂ ಮೀರಿಸುತ್ತದೆ. ಇಟಲೀ ದೇಶದ ಪ್ರವಾಸಿಗಳಾದ ನಿಕೊಲೊದೆಕೊಂತಿ, ವರ್ತೆಮಾ ಮತ್ತು ಫ್ರೆಡರಿಕ್ ಇವರುಗಳು ಕಂಡು ಬರೆದ ಚಿತ್ರ ಇವುಗಳಷ್ಟು ವಿವರವಾಗಿಲ್ಲ. ಈ ಕಾರಣಗಳಿಂದ ಪ್ಯಾಸ್ ಮತ್ತು ನೂನಿಜ್ ವೃತ್ತಾಂತಗಳು ವಿಜಯನಗರದ ಸಾಮ್ರಾಜ್ಯ ಸ್ಥಿತಿಗತಿಗಳನ್ನು ಅರಿಯಲ್ಲು ಬಹು ಸಹಾಯಕವಾಗಿವೆ.

ಇಂಡಿಯಾ

[1]ದಿಂದ ಹೊರಟು ಸಮುದ್ರ ಕರಾವಳಿಯಿಂದ ನರಸಿಂಗನ[2] ರಾಜ್ಯದ ಕಡೆಗೆ ಪಯಣಿಸಲು ನೀವು (ಮೊದಲು) ಪ್ರಸಕ್ತ ರಾಜ್ಯದ ಮತ್ತು ಸಮುದ್ರದ ಬಳಿಯಿರುವ ಗಡಿಯಾಗಿರುವ ಗುಡ್ಡಗಳ ಪಂಕ್ತಿಯನ್ನು (ಸೆರಾ) ದಾಟಬೇಕು. ಈ ಸೆರಾ ಭಾರತದ ಇಡಿ ಕರಾವಳಿಗುಂಟ ಹಬ್ಬಿದೆ ಮತ್ತು ಜನರು ಒಳನಾಡನ್ನು ಪ್ರವೇಶಿಸುವ ಕಣಿವೆ ಮಾರ್ಗಗಳನ್ನು ಹೊಂದಿದೆ; ಏಕೆಂದರೆ ಪಂಕ್ತಿಯ ಮಿಕ್ಕೆಲ್ಲ ಭಾಗ ಶಿಲಾಮಯ ಹಾಗೂ ದಟ್ಟ ಅರಣ್ಯಮಯವಾಗಿದೆ. ಉಲ್ಲೇಖಿತ ರಾಜ್ಯ ಭಾರತದ ಕರಾವಳಿಯಲ್ಲಿ ಅನೇಕ ಸ್ಥಳಗಳನ್ನು ಹೊಂದಿದೆ; ಅವು ನಾವು ಶಾಂತಿಯಿಂದಿರುವ ರೇವುಗಳಾಗಿವೆ ಮತ್ತು ಅಲ್ಲಿಯ ಕೆಲವುಗಳಲ್ಲಿ ನಮ್ಮ ಕಾರಖಾನೆಗಳಿವೆ, ಎಂದರೆ, ಅಂಕೋಲಾ, ಮಿರ್ಗೆಒ, ಹೊನರ್, ಬಟೆಕಲ್, ಮಂಗಳೋರ, ಬ್ರಾಕಳೋರ ಮತ್ತು ಬಕನೋರ, ನಾವು ಈ ಸೆರಾದ ಮೇಲೆ ತಲುಪಿದ ತಕ್ಷಣ ಬಯಲುನಾಡು ಬರುತ್ತದೆ. ಅದರಲ್ಲಿ ಹೆಚ್ಚಿನ ಬೆಟ್ಟಸಾಲುಗಳಿರದೆ ಕೆಲವೇ ಚಿಕ್ಕ ಪರ್ವತಗಳಿವೆ; ಮತ್ತು ಮಿಕ್ಕೆಲ್ಲ ಸಾಂತರೆಮ್[3]ದ ಬಯಲುಗಳಂತೆ ಇದೆ. ಬಟೆಕಳ[4]ದಿಂದ ಝಾಂಬುಜ ಎಂಬ ಪಟ್ಟಣದವರೆಗಿನ ದಾರಿಯಲ್ಲಿ ಮಾತ್ರವೆ ಕೆಲವು ಅರಣ್ಯಮಯ ಬೆಟ್ಟಸಾಲುಗಳಿವೆ; ಆದರೂ ಸಹ ದಾರಿ ಸಮತಟ್ಟಾಗಿದೆ. ಬಟೆಕಳದಿಂದ ಈ ಝಾಂಬೂರ[5] ಪಟ್ಟಣಕ್ಕೆ ನಲವತ್ತು ಹರದಾರಿ ಇದೆ. ದಾರಿ ಬದಿಯಲ್ಲಿ ಅನೇಕ ತೊರೆಗಳಿವೆ ಮತ್ತು ಇದರಿಂದಾಗಿ ಎಷ್ಟೊಂದು ಸರಕು ಬಟೆಕಳಕ್ಕೆ ಸಾಗಾಟಗೊಳ್ಳುತ್ತದೆಂದರೆ ಪ್ರತಿವರ್ಷ ಐದಾರು ಸಾವಿರ ಹೇರು ಎತ್ತುಗಳು ಬರುತ್ತವೆ.

ಈಗ ಮೇಲ್ಕಾಣಿಸಿದ ರಾಜ್ಯದ ಬಗೆಗೆ. ಪೂರ್ವಕ್ಕಿರುವ[6] ಈ ಸೆರಾದ ಉದ್ದಕ್ಕೂ ಬಿಟ್ಟರೆ ಅದು ವಿರಳ ಅರಣ್ಯವಿರುವ ನಾಡು. ಆದರೆ, ಕೆಲವೆಡೆ ಎರಡು ಮೂರು ಹರದಾರಿವರೆಗೆ ನೀವು ಗಿಡಗಳ ತೋಪಿನಡಿ ನಡೆಯುತ್ತೀರಿ. ನಗರ, ಪಟ್ಟಣ ಮತ್ತು ಗ್ರಾಮಗಳ ಹಿಂದುಗಡೆ ಮಾವು ಮತ್ತು ಹಲಸಿನ ಗಿಡಗಳು, ಹುಣಿಸೆ ಮರಗಳು ಮತ್ತು ಇತರ ದೊಡ್ಡ ಮರಗಳ ತೋಟಗಳಿವೆ. ಇವು ವರ್ತಕರು ತಮ್ಮ ಸರಕಿನೊಂದಿಗೆ ನಿಲ್ಲುವ ವಿಶ್ರಾಂತಿ ಸ್ಥಳಗಳಾಗಿವೆ. ನಾನು ರೆಕಲೆಮ್[7] ನಗರದಲ್ಲಿ ಒಂದು ಮರ ನೋಡಿದೆ. ಅದರ ಕೆಳಗೆ ತಮ್ಮ ಲಾಯಗಳಲ್ಲಿ ಕ್ರಮವಾಗಿ ನಿಲ್ಲುವಂತೆ ಮುನ್ನೂರ ಇಪ್ಪತ್ತು ಕುದುರೆಗಳನ್ನು ನಿಲ್ಲಿಸಿದೆವು. ನಾಡಿನ ತುಂಬೆಲ್ಲ ಅನೇಕ ಸಣ್ಣ ಗಿಡಗಳು ನೋಡಸಿಗುತ್ತವೆ. ಈ ರಾಜ್ಯಗಳು ಒಳ್ಳೆಯ ಸಾಗುವಳಿ ಮಾಡಿದವುಗಳು ಮತ್ತು ಬಲು ಫಲವತ್ತಾದವುಗಳಲ್ಲದೆ ಆಕಳು, ಎಮ್ಮೆ ಮತ್ತು ಕುರಿತು ಮೊದಲಾದ ಜಾನುವಾರುಗಳ ವಿಫುಲತೆಯಿಂದ ಕೂಡಿವೆ. ಹಾಗೂ ಗುಡ್ಡಗಳಿಗೆ ಸೇರಿದ ಮತ್ತು ಮನೆಯಲ್ಲಿ ಬೆಳೆಸಿದ ಎರಡೂ ವಿಧದ ಪಕ್ಷಿಗಳು ಕೂಡ ಇಲ್ಲಿ ನಮ್ಮ ಪ್ರಾಂತದಲ್ಲಿನಕ್ಕಿಂತ ಹೆಚ್ಚು ವಿಫುಲವಾಗಿವೆ. ನಮ್ಮ ಭಾಗದಲ್ಲಿ ಬಿತ್ತದ ಭತ್ತ ಮತ್ತು ಮುಸುಕಿನ ಜೋಳ, ಧಾನ್ಯಗಳು, ಅವರೆ ಮತ್ತು ಇತರ ವಿಧದ ಬೆಳೆಗಳು ಹೊಲಗಳಲ್ಲಿ ಭರಪೂರ ಇವೆ; ಅಪರಿಮಿತ ಹತ್ತಿ ಕೂಡ. ಧಾನ್ಯಗಳು ದೊಡ್ಡ ಪ್ರಮಾಣದಲ್ಲಿವೆ. ಏಕೆಂದರೆ, ಮನುಷ್ಯರ ಆಹಾರಕ್ಕಾಗಿ ಬಳಸಲ್ಪಡುವುದಲ್ಲದೆ ಬೇರೆ ತರಹದ ಜವೆ ಇಲ್ಲದುದರಿಂದ ಅದನ್ನು ಕುದುರೆಗಳಿಗಾಗಿಯೂ ಬಳಸಲಾಗುತ್ತಿದೆ; ಮತ್ತು ಈ ನಾಡಿನಲ್ಲಿ ಗೋಧಿ ವಿಫುಲ ವಾಗಿದೆ. ಮತ್ತು ಅದೂ ಒಳ್ಳೆಯ ತರಗತಿಯದು. ಇಡಿ ನಾಡು ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳಿಂದ ಸಾಂದ್ರವಾಗಿ ತುಂಬಿಕೊಂಡಿದೆ; ಅವು ತೀರ ಬಲಿಷ್ಠವಾಗುವ ಭಯದಿಂದ ರಾಜ ಅವುಗಳನ್ನು ಮಣ್ಣಿನ ಗೋಡೆಗಳಿಂದ ಮಾತ್ರ ಸುತ್ತುಗಟ್ಟಲು ಅನುಮತಿಸಿದ್ದಾನೆ. ಆದರೆ, ಯಾವುದೊಂದು ನಗರ ತನ್ನ ನಾಡಿನ ಗಡಿಯಲ್ಲಿ ಇದ್ದರೆ ಅದು ಕಲ್ಲಿನ ಗೋಡೆಗಳನ್ನು ಹೊಂದಲು ಒಪ್ಪಿಗೆ ಕೊಡುತ್ತಾನೆ, ಆದರೆ ಪಟ್ಟಣಗಳಿಗಲ್ಲ; ಹೀಗಾಗಿ ಅವರು ನಗರಗಳನ್ನು ದುರ್ಗಗಳನ್ನಾಗಿಸಬಹುದೆ ವಿನಾ ಪಟ್ಟಣಗಳನ್ನಲ್ಲ.

ಈ ನಾಡೆಲ್ಲ ಸಮತಟ್ಟಾಗಿರುವುದರಿಂದ ಇಲ್ಲಿ ಗಾಳಿ ಮಿಕ್ಕ ಭಾಗಗಳಲ್ಲಿಗಿಂತ ಹೆಚ್ಚು ಬೀಸುತ್ತದೆ. ಅದು ಉತ್ಪಾದಿಸುವ ಎಣ್ಣೆ, ಬಿತ್ತಿದ ಬೀಜಗಳನ್ನು ಅನಂತರ ಒಕ್ಕುವುದರಿಂದ ಬರುತ್ತದೆ, ಮತ್ತು ಅದನ್ನವರು ತಾವು ಮಾಡುವ ಯಂತ್ರಗಳಿಂದ ಪಡೆಯುತ್ತಾರೆ. ಈ ನಾಡಿನಲ್ಲಿ ನೀರಿನ ಅಭಾವವಿದೆ. ಏಕೆಂದರೆ ಅದು ವಿಶಾಲವಾಗಿದ್ದು ಬಹಳ ಕಡಿಮೆ ತೊರೆಗಳಿವೆ; ಮಳೆಯಾದಾಗ ನೀರು ಕೂಡಿ ಬೀಳಲು ಅವರು ಸರೋವರಗಳನ್ನು ನಿರ್ಮಿಸುತ್ತಾರೆ ಮತ್ತು ಹಾಗೆ ಮಾಡುವ ಮೂಲಕ ಅವರು ತಮ್ಮ ಜೀವನ ನಡೆಸುತ್ತಾರೆ. ಮಳೆಯ ನೀರು ಮಾತ್ರ ಇರುವ ಮಿಕ್ಕವುಗಳಿಗಿಂತ ಊಟೆ ಇರುವ ಕೆಲವುಗಳ ಸಹಾಯದಿಂದ ಅವರು ತಮ್ಮನ್ನು ಚೆನ್ನಾಗಿ ಸಲಹಿಕೊಳ್ಳುತ್ತಾರೆ; ಏಕೆಂದರೆ, ನಾವು ನೋಡುವಂತೆ ಅನೇಕ ಊಟೆಗಳು ತೀರ ಬತ್ತಿಹೋಗಿರುವುದರಿಂದ ಜನರು ಅವುಗಳ ಸ್ತರಗಳಲ್ಲಿ ನಡೆದಾಡುತ್ತ ತಮ್ಮ ನಿರ್ವಹಣೆಗಾಗಿ ಸಾಕಷ್ಟು ಇರದಿದ್ದರೆ ಹೋಗಲಿ ಸ್ವಲ್ಪವಾದರೂ ನೀರು ದೊರಕಿಸಲು ಒರತೆ ತೋಡುತ್ತಾರೆ. ನೀರಿನ ಕೊರತೆಗೆ ಕಾರಣವೆಂದರೆ ನಮ್ಮ ಭಾಗದಲ್ಲಿ ಮತ್ತು (ಪೋರ್ತುಗೀಜ) ಭಾರತದಲ್ಲಿಯಂತೆ ಇಲ್ಲಿ ಚಳಿಗಾಲವಿರದೆ ಒಂದು ವರ್ಷ ಇನ್ನೊಂದಕ್ಕಿಂತ ಘೋರವಾದ ಸಿಡಿಲು ಮಿಂಚಿನ ಬಿರುಗಾಳಿ ಮಾತ್ರವಿರುವುದು. ಈ ಸರೋವರಗಳಲ್ಲಿ ವಿಶೇಷತಃ ಊಟೆಗಳು ಇರದವುಗಳಲ್ಲಿ, ನೀರು ಬಹುಮಟ್ಟಿಗೆ ರಾಡಿಯಾಗಿರುತ್ತದೆ. ಅದಕ್ಕೆ ಕಾರಣವೆಂದರೆ ನಾಡಿನಲ್ಲಿರುವ ಪ್ರಬಲ ಗಾಳಿ ಮತ್ತು ಧೂಳು ನೀರು ತಿಳಿಯಾಗಲು ಬಿಡುವುದೇ ಇಲ್ಲ. ಇದೂ ಅಲ್ಲದೆ, ಅವುಗಳಲ್ಲಿ ನೀರು ಕುಡಿಯುವ ಎಮ್ಮೆಗಳು, ಆಕಳು, ಎತ್ತುಗಳು ಮತ್ತು ಇತರ ಚಿಕ್ಕ ಜಾನುವಾರುಗಳ ಸಂಖ್ಯೆ ಅಧಿಕ. ಏಕೆಂದರೆ ಈ ನಾಡಿನಲ್ಲಿ ಅವರು ಎತ್ತುಗಳನ್ನು ಅಥವಾ ಆಕಳುಗಳನ್ನು ಕೊಲ್ಲುವುದಿಲ್ಲ ಎಂಬುದನ್ನು ತಿಳಿದಿರಬೇಕು; ಎತ್ತುಗಳು ಹೊರೆ ಹೊರುವ ಪ್ರಾಣಿಗಳು ಮತ್ತು ಹೇಸರಗತ್ತೆಗಳಂತಿರುತ್ತವೆ; ಇವು ಅವರ ಎಲ್ಲ ಸರಕುಗಳನ್ನು ಹೊತ್ತೊಯ್ಯುತ್ತವೆ. ಅವರು ಆಕಳುಗಳನ್ನು ಪೂಜಿಸುತ್ತಾರೆ ಮತ್ತು ಅವುಗಳನ್ನು ಕಲ್ಲಿನಲ್ಲಿ ಕಟ್ಟಿದ ದೇವಸ್ಥಾನಗಳಲ್ಲಿ ಇಡುತ್ತಾರೆ. ಹಾಗೆಯೇ ಹೋರಿಗಳನ್ನು ಕೂಡ; ಈ ದೇವಸ್ಥಾನಗಳಿಗೆ ದಾನ ಮಾಡಿದ ಅನೇಕ ಹೋರಿಗಳಿದ್ದು ಅವು ಊರು ಸುತ್ತಿದರೂ ಯಾರೂ ಅವುಗಳಿಗೆ ತೊಂದರೆ ಅಥವಾ ಹಾನಿ ಮಾಡುವುದಿಲ್ಲ. ಮೇಲಾಗಿ, ಈ ನಾಡಿನಲ್ಲಿ ಕತ್ತೆಗಳುಂಟು, ಆದರೆ ಅವು ಚಿಕ್ಕವಿದ್ದು ಅವರು ಅದನ್ನು ಚಿಕ್ಕ ಕೆಲಸಗಳಿಗಾಗಿ ಉಪಯೋಗಿಸುತ್ತಾರೆ; ಬಟ್ಟೆ ಒಗೆಯುವವರು ಅವುಗಳ ಮೇಲೆ ಬಟ್ಟೆ ಹೇರುತ್ತಾರೆ ಮತ್ತು ಅವುಗಳನ್ನು ಬೇರೆ ಯಾವುದಕ್ಕಿಂತ ಇದಕ್ಕೇ ಹೆಚ್ಚಾಗಿ ಉಪಯೋಗಿಸುತ್ತಾರೆ. ನರಸಿಂಗನ ಈ ರಾಜ್ಯ ಮುನ್ನೂರು ಗ್ರಾಮಗಳ ಕರಾವಳಿ ಹೊಂದಿಯೆಂಬುದನ್ನು ತಿಳಿದಿರಬೇಕು. ಪ್ರತಿ ಗ್ರಾಮ ಒಂದು ಹರದಾರಿ ಇರುತ್ತದೆ. ಇವುಗಳು ನಾನೀಗಾಗಲೆ ಹೇಳಿರುವ ಬೆಟ್ಟ ಸಾಲಿನ (ಸೇರಾ) ಉದ್ದಕ್ಕೂ ಈ ರಾಜ್ಯಕ್ಕೆ ಸೇರಿರುವ ಬಲ್ಲಗತೆ ಮತ್ತು ಚಾರಮಾಒಡೆಲ್[8] ತಲುಪುವರೆಗೆ ಇವೆ : ಮತ್ತು ಅಗಲದಲ್ಲಿ ಅದು ಒಂದುನೂರ ಅರವತ್ತು ನಾಲ್ಕು ಗ್ರಾಒಗಳಿವೆ; ಪ್ರತಿ ದೊಡ್ಡ ಗ್ರಾಒ ನಮ್ಮ ಎರಡು ಹರಿದಾರಿಗಳಷ್ಟಿರುವುದರಿಂದ ಅದು ಉದ್ದಕ್ಕೆ ಆರುನೂರು ಹರದಾರಿಗಳ ಕರಾವಳಿ ಹೊಂದಿದೆ ಮತ್ತು ಅಗಲಕ್ಕೆ ಮುನ್ನೂರು ನಲವತ್ತೆಂಟು ಹರದಾರಿ ಗಳಿವೆ…… ಬಟಕಲ್ಲದಿಂದ ಒರಿಯ[9] ರಾಜ್ಯದವರೆಗೆ ಅಡ್ಡವಾಗಿ.

ಮತ್ತು ಈ ರಾಜ್ಯ ಬೆಂಗಾಲದ ಎಲ್ಲ ಭೂಪ್ರದೇಶದೊಂದಿಗೆ ಮುಂದುವರಿಯುತ್ತದೆ. ಮತ್ತು ಆ ಬದಿಗೆ ಪೂರ್ವಕ್ಕಿರುವ ಒರಿಯಾ ರಾಜ್ಯದೊಂದಿಗೆ ಮತ್ತು ಆಚೆಗಿನ ಉತ್ತರ ಬದಿಗೆ ಇಡಲ್‌ಕಾಒ[10] ಮತ್ತು ಒಝೆುಮೆಲುಕೊ[11] ಹೊಂದಿದ ಪ್ರದೇಶಗಳು ಸೇರಿರುವ ದಕ್ಖನ ರಾಜ್ಯದೊಂದಿಗೆ. ಗೋವಾ ಈ ಇಡಲ್‌ಕಾಒನೊಂದಿಗೆ ಯುದ್ಧನಿರತವಾಗಿದೆ. ಏಕೆಂದರೆ, ಆ ನಗರ ಅವದಾಗಿತ್ತು ಮತ್ತು ನಾವು ಅದನ್ನು ಅವನಿಂದ ತೆಗೆದುಕೊಂಡಿದ್ದೇವೆ.

ನಾನು ಮೇಲೆ ಹೇಳಿರುವ ಒರಿಯಾ ರಾಜ್ಯ ಬೆಂಗಾಲದೊಂದಿಗೆ ಮುಂದುವರಿ ಯುತ್ತಿದ್ದುದರಿಂದ ಮತ್ತು ಅದರೊಂದಿಗೆ ಯುದ್ಧದಲ್ಲಿ ತೊಡಗಿರುವುದರಿಂದ ನರಸಿಂಗನ ರಾಜ್ಯಕ್ಕಿಂತ ಬಲು ದೊಡ್ಡದಾಗಿದೆ; ಅದು ಎಲ್ಲ ಪೆಗು ರಾಜ್ಯದೊಂದಿಗೆ ಮತ್ತು ಮಲ್ಲಕ ಸಮುದ್ರದೊಂದಿಗೆ ಮುಂದುವರಿಯುತ್ತದೆ. ಅದು ಕ್ಯಾಂಬೆ ರಾಜ್ಯವನ್ನು ಮತ್ತು ದಕ್ಖನ ರಾಜ್ಯವನ್ನು ತಲುಪುತ್ತದೆ; ಮತ್ತು ಅದು ಪರ್ಶಿಯಾದವರೆಗೆ ಹಬ್ಬಿರುವುದೆಂದು ಅವರು ನನಗೆ ಅತ್ಯಂತ ಖಚಿತವಾಗಿ ಹೇಳಿದರು. ಅಲ್ಲಿನ ಜನರ ಬಣ್ಣ ತಿಳಿಯಾದದ್ದು. ಗಂಡಸರು ಒಳ್ಳೆಯ ಮೈಕಟ್ಟುವುಳ್ಳವರು. ಅದರ ರಾಜನಲ್ಲಿ ಬಹಳ ಸಂಪತ್ತು, ಅನೇಕ ಯೋಧರು ಮತ್ತು ಅನೇಕ ಆನೆಗಳು ಇವೆ. ಏಕೆಂದರೆ, ಈ ನಾಡಿನಲ್ಲಿ ಇವು ಅಧಿಕ ಸಂಖ್ಯೆಯಲ್ಲಿವೆ. (ನನ್ನ ಬಾತಮಿದಾರರಿಗೆ) ಇದು ಚೆನ್ನಾಗಿ ಗೊತ್ತಿದೆ. ಮತ್ತು ಅವನಿಗಿಂತ ಶ್ರೇಷ್ಠ ರಾಜ ಬೇರೆ ಇಲ್ಲ ಎಂದು ಅವರೆನ್ನುತ್ತಾರೆ. ಅವನು ಅಸಂಸ್ಕೃತ.

ಈಗ ನಮ್ಮ ವಿಷಯಕ್ಕೆ ಬರೋಣ. ದೀರ್ಘವಾಗಬಹುದೆಂದು ಭಾವಿಸಿ ನರಸಿಂಗ ರಾಜ್ಯದ ನಗರಗಳಲ್ಲಿನ, ಪಟ್ಟಣಗಳಲ್ಲಿನ, ಮತ್ತು ಗ್ರಾಮಗಳಲ್ಲಿನ ಪರಿಸ್ಥಿತಿಯನ್ನು ನಾನು ಇಲ್ಲಿ  ಉಲ್ಲೇಖಿಸಬಯಸುವುದಿಲ್ಲ; ಬೇರಲ್ಲಿಯೂ ನೋಡಸಿಗಲು ವಿರಳವಾಗಿರುವಂತಹ ಸ್ಮಾರಕ ಹೊಂದಿದ ದರ್ಚ[12] ನಗರದ ಬಗೆಗೆ ಮಾತ್ರ ಹೇಳುವೆ. ನಾನು ಮೇಲೆ ಹೇಳಿರುವ  ಕಾರಣದಿಂದಾಗಿ ಕಲ್ಲಿನದಾಗಿರದಿದ್ದರೂ ಒಳ್ಳೆಯ ಕೋಟೆ ಗೋಡೆಯನ್ನು ದರ್ಚ ನಗರ ಹೊಂದಿದೆ. (ಪೋರ್ತುಗೀಜ) ಭಾರತದ ಕಡೆಯಿರುವ ಪಶ್ಚಿಮ ಬದಿಗೆ ಅದು ಬಲು ಸುಂದರವಾದ ನದಿಯಿಂದ ಸುತ್ತುವರಿಯಲ್ಪಟ್ಟಿದೆ ಮತ್ತು ಆಚೆಗೆ ನಾಡಿನ ಪೂರ್ವ ಒಳಬದಿ ಪೂರ್ತಿ ಬಯಲು ಇದೆ. ಮತ್ತು ಗೋಡೆಗುಂಟ ಅದರ ಕಂದಕವಿದೆ. ಈ ದರ್ಚದಲ್ಲಿ ಒಂದು ಪಗೋಡಾ ಇದೆ; ನಾನು ಹೇಳುವ ಸ್ಮಾರಕ ಅದೇ. ಅದು ಎಷ್ಟು ಸುಂದರವಾಗಿದೆ ಯೆಂದರೆ ಅದರಷ್ಟು ಒಳ್ಳೆಯ ಇನ್ನೊಂದು ದೂರ ದೂರದಲ್ಲೂ ಸಿಕ್ಕದು. ಅದು ಒಂದೇ ಕಲ್ಲಿನಲ್ಲಿ ಮಾಡಿದ ಗೋಳಾಕಾರದ ಗುಡಿಯೆಂಬುದನ್ನು ನೀವು ತಿಳಿಯಬೇಕು. ಕಣ್ನೆಲೆಯ ಪ್ರತಿಯೊಂದು ಕಲೆಯಿಂದೊಡಗೂಡಿರುವ ಅದರ ದ್ವಾರ ಕೂಡುಬಡಗಿ ಕೆಲಸದ ರೀತಿಯದಿದೆ. ಪ್ರಸ್ತುತ ಕಟ್ಟಡದಲ್ಲಿ ಅನೇಕ ಆಕೃತಿಗಳಿವೆ. ಅವು ಕಲ್ಲಿನಿಂದ ಒಂದು ಮೊಳದಷ್ಟು ಹೊರ ಚಾಚಿರುವುದರಿಂದ ಅವುಗಳ ಎಲ್ಲ ಮಗ್ಗಲುಗಳನ್ನೂ ನೋಡಬಹುದು. ಮುಖಗಳು ಮತ್ತು ಮಿಕ್ಕೆಲ್ಲ ಭಾಗಗಳು ಎಷ್ಟು ಚೆನ್ನಾಗಿ ಕೆತ್ತಲ್ಪಟ್ಟಿವೆಯೆಂದರೆ ಅದಕ್ಕಿಂತ ಉತ್ತಮವಾಗಿ ಮಾಡಲು ಸಾಧ್ಯವಿರಲಿಲ್ಲ ಮತ್ತು ಪ್ರತಿಯೊಂದು ತನ್ನ ಜಾಗದಲ್ಲಿ ಎಲೆಗಳಿಂದ ಆವರಿಸಲ್ಪಟ್ಟಿದೆಯೇನೊ ಎಂಬಂತೆ ನಿಂತಿದೆ : ಮತ್ತು ಮೇಲೆ ರೋಮನ್ ಶೈಲಿಯದಿರುವ ಅದನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆಂದರೆ ಅದನ್ನು ಉತ್ತಮಗೊಳಿಸಲು ಸಾಧ್ಯವಿಲ್ಲ. ಇದಲ್ಲದೆ, ಎಲ್ಲ ಕಲ್ಲಿನಿಂದ ಮಾಡಿದ ಕಂಬಗಳ ಮೇಲೆ ನಿಂತಿರುವ ಚಿಕ್ಕ ದ್ವಾರಮಂಟಪವಿದೆ. ಅವುಗಳ ಪೀಠಗಳೊಂದಿಗೆ[13] ಕಂಬಗಳನ್ನು ಎಷ್ಟು ಉತ್ತಮವಾಗಿ ಕಡೆಯಲಾಗಿದೆಯೆಂದರೆ ಇಟಲಿಯಲ್ಲಿ ಮಾಡಿರುವಂತೆ ಭಾಸವಾಗುತ್ತವೆ; ಎಲ್ಲ ಅಡ್ಡಪಟ್ಟಿಗಳು ಮತ್ತು ತೊಲೆಗಳು ಅದೇ ಕಲ್ಲಿನವಿದ್ದು ಯಾವುದೇ ಹಲಗೆಗಳನ್ನಾಗಲಿ ಕಟ್ಟಿಗೆಯನ್ನಾಗಲಿ ಬಳಸಲಾಗಿಲ್ಲ ಮತ್ತು ಹೊರಗೂ ಒಳಗೂ ನೆಲವನ್ನೆಲ್ಲ ಅದೇ ಕಲ್ಲಿನಿಂದ ಹೊಂದಿಸಲಾಗಿದೆ ಮತ್ತು ಈ ಪಗೋಡಾ ದೇವಾಲಯವಿರುವಷ್ಟು ಸುತ್ತಲೂ ಅದೇ ಕಲ್ಲಿನಿಂದ ಮಾಡಿದ ಜಾಳಂದರದಿಂದ ಆವರಿಸಲ್ಪಟ್ಟಿದೆ. ಜಾಳಂದರವನ್ನು ಸುತ್ತವರಿದಿರುವ ಇನ್ನೊಂದು ಬಲು ಭದ್ರ ಗೋಡೆ ನಗರದ ಗೋಡೆಗಿಂತ ಉತ್ತಮವಾಗಿದೆ. ಏಕೆಂದರೆ, ಅದನ್ನು ಗಟ್ಟಿಯಾದ ಕಲ್ಲಿನಿಂದ ಕಟ್ಟಲಾಗಿದೆ. ಅದಕ್ಕೆ ಬಲು ವಿಶಾಲವಾದ ಮತ್ತು ಸುಂದರವಾದ ಮೂರು ಪ್ರವೇಶ ದ್ವಾರಗಳಿವೆ. ಪೂರ್ವಕ್ಕೆ ಪಗೋಡದ ಬಾಗಿಲಿಗೆ ಇದಿರಾಗಿರುವ ಬದಿಯ ಪ್ರವೇಶ ದ್ವಾರದಲ್ಲಿ ಚಿಕ್ಕ ಮತ್ತು ಎತ್ತರವಲ್ಲದ ಮೊಗಸಾಲೆಗಳಂಥ ಕಟ್ಟಡಗಳಿವೆ. ಅವುಗಳಲ್ಲಿ ಜೋಗಿಗಳು[14] ಕುಳಿತುಕೊಳ್ಳುತ್ತಾರೆ. ಕೆಂಪು ವರ್ಣದ ಇತರ ಚಿಕ್ಕ ಪಗೋಡಾಗಳಿರುವ ಈ ಆವರಣದಲ್ಲಿ ಹಡಗಿನ ಪಟಸ್ತಂಭದಂತಿರುವ ಕಲ್ಲಿದೆ. ಪೀಠ ಚತುರ್ಭುಜಾಕೃತಿಯದಿದ್ದು ಮತ್ತು ಅಲ್ಲಿಂದ ಮೇಲಕ್ಕೆ ಅಷ್ಟಭುಜಾಕೃತಿಯದಿದ್ದು ಅದು ಬಯಲಿನಲ್ಲಿ ನಿಂತಿದೆ. ಅದು ನನಗೆ ಆಶ್ಚರ್ಯವುಂಟುಮಾಡಲಿಲ್ಲ. ಏಕೆಂದರೆ, ನಾನು ರೋಮ್‌ನ ಸೆಂಟ್ ಪೀಟರ್ಸ್‌ನ ಇಷ್ಟೇ ಅಥವಾ ಇನ್ನೂ ಎತ್ತರವಿರುವ ಶಿಖರವನ್ನು ನೋಡಿರುವೆ.[15]

ಈ ಪಗೋಡಾಗಳು ಅವರು ಪ್ರಾರ್ಥಿಸುವ ಮತ್ತು ಮೂರ್ತಿಗಳನ್ನಿಡುವ ಕಟ್ಟಡಗಳು. ಮೂರ್ತಿಗಳು ನಾನಾ ವಿಧವಾಗಿವೆ: ಪುರುಷರು ಮತ್ತು ಸ್ತ್ರೀಯರು, ಹೋರಿ ಮತ್ತು ಮಂಗಗಳ ಆಕೃತಿಗಳು. ಅವರು ಪೂಜಿಸುವ ಇನ್ನು ಕೆಲವು ಬರಿ ದುಂಡನೆಯ ಕಲ್ಲುಗಳು ಮಾತ್ರ. ದರ್ಚದ ಈ ದೇವಾಲಯದಲ್ಲಿ ಮಾನವನ ದೇಹ, ದಂತಗಳುಳ್ಳ ಆನೆಯ ಮುಖ, ಪ್ರತಿ ಮಗ್ಗಲಿಗೆ ಮೂರು ತೋಳು, ಆರು ಕೈಗಳು ಇರುವ ಮೂರ್ತಿಯಿದೆ.[16] ಈ ತೋಳುಗಳಲ್ಲಿ ನಾಲ್ಕು ಈಗಾಗಲೆ ಉದುರಿದ್ದು ಎಲ್ಲವೂ ಕಳಚಿ ಬಿದ್ದಾಗ ಪ್ರಪಂಚ ನಾಶವಾಗುತ್ತದೆಂದು ಅವರು ಹೇಳುತ್ತಾರೆ. ಹೀಗಾಗುವದೆಂದು ಅವರು ಪೂರ್ತಿ ನಂಬಿದ್ದು ಅದನ್ನು ಪ್ರವಾದನೆಯೆಂದು ಗ್ರಹಿಸುತ್ತಾರೆ. ಆ ಮೂರ್ತಿಗೆ ದಿನಾಲು ಅನ್ನ ಇಕ್ಕುತ್ತಾರೆ. ಏಕೆಂದರೆ, ಅದು ಉಣ್ಣುತ್ತದೆಂದು ಅವರು ಹೇಳುತ್ತಾರೆ. ಅದು ಉಣ್ಣುವಾಗ ಆ ದೇವಾಲಯಕ್ಕೆ ಸೇರಿದ ಮಹಿಳೆಯರು ನೃತ್ಯಗೈಯುತ್ತಾರೆ ಮತ್ತು ಇವರಿಗೆ ಜನಿಸಿದ ಎಲ್ಲ ಮಹಿಳೆಯರೂ ದೇವಾಲಯಕ್ಕೆ ಸೇರುತ್ತಾರೆ. ಆ ಮಹಿಳೆಯರು ಸಡಿಲು ಶೀಲವುಳ್ಳವರಾಗಿದ್ದು ನಗರದಲ್ಲಿರುವ ಅತ್ಯುತ್ತಮ ಓಣಿಗಳಲ್ಲಿ ವಾಸಿಸುತ್ತಾರೆ. ಅವರ ಎಲ್ಲ ನಗರಗಳಲ್ಲೂ ಇದೇ ರೀತಿ ಇರುತ್ತದೆ ಮತ್ತು ಅವರಿಗೆ ಶ್ರೇಷ್ಠ ಮನೆಗಳ ಸಾಲುಗಳಿರುತ್ತವೆ. ಅವರು ಬಹಳ ಪ್ರತಿಷ್ಠಿತರಿದ್ದು ದಳವಾಯಿಗಳ ಉಪಪತ್ನಿಗಳಾಗಿರುವ ಗೌರವಾನ್ವಿತರ ವರ್ಗಕ್ಕೆ ಸೇರಿದವರೆಂದು ಪರಿಗಣಿಸಲಾಗುತ್ತದೆ. ಯಾವುದೇ ಗೌರವಾನ್ವಿತ ವ್ಯಕ್ತಿ ಯಾವುದೇ ದೂಷಣೆಗೊಳಗಾಗದೆ ಅವರ ಮನೆಗಳಿಗೆ ಹೋಗಬಹುದು. ಈ ಮಹಿಳೆಯರಿಗೆ ರಾಜನ ಪತ್ನಿಯರ ಸಮಕ್ಷಮಕ್ಕೂ ಪ್ರವೇಶಿಸಲು (ಅನುಮತಿಸಲಾಗಿರುತ್ತದೆ). ಅವರು ಅವರೊಂದಿಗೆ ಇರಬಹುದು ಮತ್ತು ವೀಳ್ಯದೆಲೆ ಸೇವಿಸಬಹುದು. ಹೀಗೆ ಮಾಡಲು ಎಂಥ ಉನ್ನತ ದರ್ಜೆಯ ವ್ಯಕ್ತಿಗೂ ಸಾಧ್ಯವಿಲ್ಲ. ಈ ವೀಳ್ಯದೆಲೆ ನಮ್ಮ ದೇಶದ ಮೆಣಸು ಅಥವಾ ಐವಿ ತರಹದ ಎಲೆಯುಳ್ಳ ಸಸ್ಯ : ಅವರು ಈ ಎಲೆಯನ್ನು ಯಾವಾಗಲೂ ತಿನ್ನುತ್ತಾರೆ ಮತ್ತು ಅಡಿಕೆ ಎನ್ನುವ ಇನ್ನೊಂದು ಕಾಯಿಯೊದಿಗೆ ಯಾವಾಗಲೂ ಬಾಯಿಯಲ್ಲಿ ಇಟ್ಟುಕೊಳ್ಳು ತ್ತಾರೆ. ಅದು ಸ್ವಲ್ಪ ಮೆಡ್ಲರ್‌ನಂತಿದ್ದು ಗಟ್ಟಿಯಾಗಿರುತ್ತದಲ್ಲದೆ ಪರಿಮಳಕ್ಕೆ ಒಳ್ಳೆಯದಾಗಿ ರುತ್ತದೆ ಮತ್ತು ಇತರ ಅನೇಕ ಗುಣಗಳುಳ್ಳದ್ದಿರುತ್ತದೆ. ನಮ್ಮಂತೆ ಉಣ್ಣಲಾರದವರಿಗೆ ಅದು ಶ್ರೇಷ್ಠ ಏರ್ಪಾಡು. ಅವರಲ್ಲಿ ಕೆಲವರು ಮಾಂಸ ಸೇವಿಸುತ್ತಾರೆ. ಗೋಮಾಂಸ ಮತ್ತು ಹಂದಿಯ ಮಾಂಸವನ್ನು ಬಿಟ್ಟು ಉಳಿದೆಲ್ಲ ತರಹದ್ದನ್ನು ತಿನ್ನುತ್ತಾರೆ. ಆದರೂ ಸಹ, ಇಡಿ ದಿನ ಈ ವೀಳ್ಯದೆಲೆ ಮೆಲ್ಲುವುದನ್ನು ಅವರು ಬಿಡರು.

ಆಮೇಲೆ ಈ ದರ್ಚ ನಗರದಿಂದ ಹದಿನೆಂಟು ಹರದಾರಿ ದೂರವಿರುವ ನರಸಿಂಗ ರಾಜ್ಯದ ಹಾಗೂ ರಾಜ ಯಾವಾಗಲೂ ಅಲ್ಲಿಯೆ ವಾಸಿಸುವ ಬೀಸ್ನಗ ನಗರದ ಕಡೆಗೆ ಹೋಗುವಾಗ ಅನೇಕ ನಗರಗಳು ಮತ್ತು ಗೋಡೆಯುಳ್ಳ ಹಳ್ಳಿಗಳಿವೆ. ಮತ್ತು ಬೀಸ್ನಗ ನಗರ ತಲಪುವ ಎರಡು ಹರದಾರಿ ಮುಂಚೆ ನಗರವನ್ನು ಪ್ರವೇಶಿಸಲು ಕಣಿವೆ ಮಾರ್ಗಗಳುಳ್ಳ ಉನ್ನತ ಬೆಟ್ಟ ಸಾಲುಗಳಿವೆ. ಇವುಗಳನ್ನು ಹೆಬ್ಬಾಗಿಲುಗಳೆಂದು ಕರೆಯಲಾಗುತ್ತದೆ. ಇವುಗಳ ಮೂಲಕವೆ ಪ್ರವೇಶಿಸಬೇಕು, ಏಕೆಂದರೆ ಇವುಗಳ ಮೂಲಕವಲ್ಲದೆ ಬೇರೆ ದಾರಿಯಿಲ್ಲ. ಈ ಬೆಟ್ಟಸಾಲು ಇಪ್ಪತ್ತು ನಾಲ್ಕು ಹರದಾರಿಗಳ ಆವರ್ತನದಿಂದ ನಗರವನ್ನು ಸುತ್ತುವರಿ ಯುತ್ತದೆ ಮತ್ತು ಈ ಸಾಲಿನೊಳಗೆ ಅದನ್ನು ಸಮೀಪದಿಂದ ಸುತ್ತುವರಿಯುವ ಮಿಕ್ಕವು ಇವೆ. ಈ ಬೆಟ್ಟಸಾಲುಗಳಿಗೆ ಯಾವುದೆ ಸಮತಲ ಭೂಮಿ ಹತ್ತುವಲ್ಲೆಲ್ಲ ಅವು ಅದನ್ನು ಬಲು ಭದ್ರ ಗೋಡೆಯೊಂದಿಗೆ ಅಡ್ಡ ಹಾಯುತ್ತವೆ. ಇದರಿಂದಾಗಿ ಮೊದಲ ಸಾಲಿನಲ್ಲಿರುವ ಮತ್ತು ನಗರಕ್ಕೆ ಪ್ರವೇಶ ಮಾರ್ಗಗಳಾಗಿರುವ ದ್ವಾರಗಳ ಮೂಲಕ ದಾರಿಗಳು ಹಾಯುವ ಸ್ಥಳಗಳನ್ನು ಹೊರತುಪಡಿಸಿ ಗುಡ್ಡಗಳು ಪೂರ್ತಿ ಮುಚ್ಚಿವೆ. ಇಂಥ ಸ್ಥಳಗಳಲ್ಲಿ ಕೆಲವು ಮಂದಿ ಸುರಕ್ಷಿತವಿರಬಹುದಾದ ಸಣ್ಣ ತಗ್ಗುಗಳು (ಅಥವಾ ಗುಹೆಗಳು)[17] ಇವೆ : ಈ ಬೆಟ್ಟಸಾಲುಗಳು ನಗರದ ಒಳಭಾಗದವರೆಗೆ ಸಾಗುತ್ತವೆ. ಇವೆಲ್ಲ ಸುತ್ತಗಟ್ಟುಳ್ಳ ಪ್ರದೇಶಗಳ ನಡುವೆ ಭತ್ತ ಬೆಳೆಯುವ ಬಯಲುಗಳು ಮತ್ತು ಕಣಿವೆಗಳಿವೆ. ಲೆಟ್ಯುಸ್ ಮತ್ತು ಕ್ಯಾಬೆಜುಗಳು ಮಾತ್ರವಲ್ಲದೆ ಪೋರ್ತುಗಾಲಿನಲ್ಲಿಯಂತೆ ಕಿತ್ತಲೆ, ನಿಂಬೆ, ಜಂಬೀರ, ಮೂಲಂಗಿ ಮತ್ತಿತರ ತೋಟೋತ್ಪನ್ನಗಳುಳ್ಳ ತೋಟಗಳಿವೆ. ಈ ಬೆಟ್ಟಸಾಲುಗಳ  ಮಧ್ಯೆ ಅನೇಕ ಸರೋವರಗಳಿದ್ದು ಅವುಗಳಿಂದ ಮೇಲೆ ಹೇಳಿರುವ ಬೆಳೆಗಳಿಗೆ ನೀರುಣ್ಣಿಸುತ್ತಾರೆ. ಮತ್ತು ಇವೆಲ್ಲ ಬೆಟ್ಟಸಾಲುಗಳಲ್ಲಿ ತೀರ ಚಿಕ್ಕವನ್ನು ಬಿಟ್ಟರೆ ಅರಣ್ಯಗಳು ಇಲ್ಲವೆ ಕುರುಚಲುಗಿಡಗಳ ಗುಂಪುಗಳಾಗಲಿ ಹಸಿರಾದ ಇನ್ನಾವುದಾಗಲಿ ಇಲ್ಲ. ಈ ಗುಡ್ಡಗಳಾದರೊ ಎಂದಿಗೂ ವಿಚಿತ್ರವಾಗಿವೆ. ಅವುಗಳು ಬಿಳಿಗಲ್ಲಿನವಾಗಿದ್ದು ಅತ್ಯಂತ ಅಸದೃಶ ರೀತಿಯಲ್ಲಿ ಕಲ್ಲು ದಿಮ್ಮಿಗಳನ್ನು ಒಂದರ ಮೇಲೊಂದು ಪೇರಿಸಿಟ್ಟಂತಿದೆ. ಹಾಗಾಗಿ, ಅವು ಹವೆಯಲ್ಲಿ ನಿಂತಿರುವಂತೆ ಮತ್ತು ಒಂದಕ್ಕೊಂದು ಕೂಡಿಲ್ಲವೆಂಬಂತೆ ಭಾಸವಾಗುತ್ತದೆ. ನಗರ ಈ ಬೆಟ್ಟದ ಮಧ್ಯದಲ್ಲಿದ್ದು ಅವುಗಳಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಟ್ಟಿದೆ.

ಬೆಟ್ಟಸಾಲುಗಳು ದಖೆಮ್[18] ರಾಜ್ಯದವರೆಗೂ ತಲುಪುತ್ತವೆ ಮತ್ತು ಇಡಲ್ ಸಾಒನ ರಾಜ್ಯದ ಹಾಗೂ ಹಿಂದೆ ನರಸಿಂಗನ ರಾಜ್ಯಕ್ಕೆ ಸೇರಿದ ರಾಚೋಲ ಎಂಬ ನಗರದ ಗಡಿಯವರೆಗೂ ಹಬ್ಬಿವೆ. ಆ ನಗರದ ಸಲುವಾಗಿ ಬಹಳ ಯುದ್ಧವಾಗಿ ಈ ರಾಜ ಅದನ್ನು ಇಡಲ್ ಸಾಒನಿಂದ ತೆಗೆದುಕೊಂಡ. ಹೀಗಾಗಿ ಈ ಬೆಟ್ಟಸಾಲುಗಳು ಒಂದು ರೀತಿಯಲ್ಲಿ ಇವೆರಡು ರಾಜ್ಯಗಳು ಎಂದೂ ಒಂದುಗೂಡದೆ ಯಾವಾಗಲೂ ಯುದ್ಧದಲ್ಲಿ ತೊಡಗಿರಲು ಕಾರಣವಾಗಿವೆ. ಒರಿಯಾ ಕಡೆಗೂ ಬೆಟ್ಟಸಾಲುಗಳಿವೆ. ಆದರೆ, ನಮ್ಮವುಗಳಂತೆ ಕುರುಚಲು ಗಿಡಗಳು ಮತ್ತು ಪೊದೆಗಳ ಚಿಕ್ಕ ಗುಂಪುಗಳಿರುವುದರಿಂದ ಅವು ಇವುಗಳಿಗಿಂತ ಭಿನ್ನವಾಗಿವೆ. ಈ ಬೆಟ್ಟ ಸಾಲುಗಳ ಎತ್ತರ ಕಡಿಮೆಯಿದ್ದು ಅವುಗಳ ಮಧ್ಯೆ ದೊಡ್ಡ ಬಯಲುಗಳಿವೆ. ಇವೆರಡು ರಾಜ್ಯಗಳ ತೀರ ಪೂರ್ವ ಅಂಚಿಗೆ ನಾಡು, ಎಲ್ಲೂ ಕಾಣದಂಥ ಅತ್ಯಂತ ನಿಬಿಡವಾದ ಕುರುಚಲು ಅಡವಿಯಿಂದ ತುಂಬಿದೆ ಎಂಬುದನ್ನು ಅರಿತಿರಬೇಕು. ಅದರಲ್ಲಿ ದೊಡ್ಡ ಪ್ರಾಣಿಗಳಿವೆ ಮತ್ತ (ಇದು) ಎಂಥ ದುರ್ಗವಾಗಿದೆಯೆಂದರೆ ಅದು ಎರಡೂ ಮಗ್ಗಲುಗಳನ್ನು ಸಂರಕ್ಷಿಸುತ್ತದೆ. ಅದು ಒಂದು ರಾಜ್ಯದಿಂದ ಇನ್ನೊಂದಕ್ಕೆ ಹೋಗುವ ಕಣಿವೆ ಮಾರ್ಗಗಳನ್ನು ಹೊಂದಿದೆ. ಈ ಕಣಿವೆ ಮಾರ್ಗಗಳ ಗಡಿಯಲ್ಲಿ ನರಸಿಂಗದ ರಾಜ ಕೆಲವು ಯೋಧರೊಂದಿಗೆ ಒಬ್ಬ ದಳವಾಯಿಯನ್ನು ಇಟ್ಟಿದ್ದಾನೆ ಮತ್ತು (ಪೋರ್ತಗೀಜ) ಭಾರತದ ಬದಿಗೆ ನಾನು ಹೇಳಿದುದನ್ನು ಹೊರತುಪಡಿಸಿ ಅವನು ಯಾವ ಸೈನ್ಯವನ್ನೂ ಇರಿಸಿಲ್ಲ.

ಈಗ ಮೊದಲ ಸಾಲಿನ ದ್ವಾರಗಳ ಬಗೆಗೆ ನಾನು ಹೇಳುವುದೇನೆಂದರೆ ಪಶ್ಚಿಮಕ್ಕೆ ಮುಖ್ಯ ಹಾಗೂ ಗೋವಾದಿಂದ ಬರುವವರು ಹಾಯುವ ಹೊರ ಬಾಗಿಲಾಗಿರುವುದರ ಪ್ರವೇಶದಲ್ಲಿ ಈ ರಾಜ ಅದರೊಳಗೆ ಗೋಡೆ ಹಾಗೂ ಗೋಪುರಗಳಿಂದ ಬಲಪಡಿಸಲಾದ ಬಲವಾದ ನಗರವನ್ನು[19] ಕಟ್ಟಿದ್ದಾನೆ ಮತ್ತು ದ್ವಾರಗಳ ಹೊರ ಬಾಗಿಲುಗಳು ಗೋಪುರಗಳನ್ನು ಹೊಂದಿದ್ದು ಬಲು ಗಟ್ಟಿಯಾಗಿವೆ. ಈ ಗೋಡೆಗಳು ಇತರ ನಗರಗಳ ಗೋಡೆಗಳಂತಿರದೆ ಯಾವ ಪ್ರದೇಶದಲ್ಲೂ ಕಾಣಸಿಗದಂತಹ ಗಟ್ಟಿ ಕಲ್ಲುಕಟ್ಟಡವಾಗಿವೆ, ಮತ್ತು ಒಳಗಡೆ ಸಪಾಟಾದ ಮಾಳಿಗೆಗಳ್ಳುಳ್ಳ ಅವೇ ಮಾದರಿಯ ಕಟ್ಟಡಗಳ ಅತಿ ಸುಂದರ ಸಾಲುಗಳಿವೆ. ಇದರಲ್ಲಿ ಅನೇಕ ವರ್ತಕರು ವಾಸವಾಗಿದ್ದು ಅದು ಬಹಳ ಜನಸಂಖ್ಯೆಯಿಂದ ತುಂಬಿದೆ. ಏಕೆಂದರೆ ರಾಜ ಅನೇಕ ಗೌರವಾನ್ವಿತ ವರ್ತಕರನ್ನು ನಗರಗಳಿಂದ ಅಲ್ಲಿಗೆ ಹೋಗುವಂತೆ ಪ್ರೇರಿಸುತ್ತಾನೆ ಮತ್ತು ಅದರಲ್ಲಿ ಸಾಕಷ್ಟು ನೀರು ಇದೆ. ಇದಲ್ಲದೆ ರಾಜ ಅಲ್ಲಿ ಒಂದು ಕೆರೆ[20] ಕಟ್ಟಿಸಿದ್ದಾನೆ. ನನಗೆನಿಸುವಂತೆ ಅದು ಒಂದು ಫ್ಯಾಲ್ಕನ್ ಗುಂಡಿನಷ್ಟು[21] ಅಗಲವಿದೆ. ಅದು ಎರಡು ಗುಡ್ಡಗಳ ಬಾಯಿಯಲ್ಲಿರುವುದರಿಂದ ಒಂದಿಲ್ಲೊಂದು ಬದಿಯಿಂದ ಬರುವ ಎಲ್ಲ ನೀರು ಅಲ್ಲಿ ಸಂಗ್ರಹವಾಗುತ್ತದೆ; ಇದೂ ಅಲ್ಲದೆ, ಹೊರಗಿನ ಬೆಟ್ಟ ಸಾಲಿನ ಕೆಳಭಾಗಗಳುದ್ದಕ್ಕೂ ಸಾಗುವ ಕೊಳವೆಗಳ ಮೂಲಕ ಮೂರು ರಹದಾರಿಗಳಿಗಿಂತ ಅಧಿಕ ದೂರದಿಂದ ಅದಕ್ಕೆ ನೀರು ಬರುತ್ತದೆ. ಈ ನೀರನ್ನು ತಾನೇ ಒಂದು ಚಿಕ್ಕ ನದಿಯೊಳಗೆ ಹೊರಸೂಸುವ ಕೆರೆಯೊಂದರಿಂದ ತರಲಾಗುತ್ತದೆ. ಕೆರೆಗೆ ಆಕೃತಿಗಳನ್ನು ಸುಂದರವಾಗಿ ಕೆತ್ತಿದ ಮೂರು ದೊಡ್ಡ ಸ್ತಂಭಗಳಿವೆ. ಇವು ಮೇಲೆ ಕೆಲವು ಕೊಳವೆಗಳೊಂದಿಗೆ ಜೋಡಿಸಲ್ಪಟ್ಟಿವೆ. ಅವರು ತಮ್ಮ ತೋಟಗಳಿಗೆ ಹಾಗೂ ಭತ್ತದ ಹೊಲಗಳಿಗೆ ನೀರುಣಿಸುವಾಗ ಅವುಗಳ ಮೂಲಕ ನೀರು ಪಡೆಯುವರು. ಈ ಕೆರೆ ನಿರ್ಮಿಸಲೊಸುಗ ಅದು ವ್ಯಾಪಿಸಿರುವ ನೆಲವನ್ನು ಆವರಿಸಿದ್ದ ಗುಡ್ಡವನ್ನು ರಾಜ ಒಡೆಸಿದ. ಕೆರೆಯಲ್ಲಿ ಎಷ್ಟೊಂದು ಕೆಲಸಗಾರರನ್ನು ನಾನು ಕಂಡೆನೆಂದರೆ ಅವರು ಹದಿನೈದು ಅಥವಾ ಇಪ್ಪತ್ತು ಸಾವಿರವಿದ್ದಾರು. ಅವರು ಇರುವೆಗಳಂತೆ ಕಾಣುತ್ತಿದ್ದು ಅವರು ಓಡಾಡುವ ನೆಲವೇ ಕಾಣುತ್ತಿರಲಿಲ್ಲ. ಅವರು ಅಷ್ಟು ಸಂಖ್ಯೆಯಲ್ಲಿ ಇದ್ದರು. ಈ ಕೆರೆಯ ಕಾರ್ಯವನ್ನು ರಾಜ ತನ್ನ ದಳವಾಯಿಗಳಿಗೆ ಹಂಚಿ ಕೊಟ್ಟಿದ್ದ. ತನ್ನ ಕೈ ಕೆಳಗೆ ಕೊಡಲಾದ ಜನರು ಕೆಲಸ ಮಾಡುವಂತೆ ಕೆರೆ ನಿರ್ಮಾಣ ಪೂರ್ತಿಯಾಗಿ ಮುಗಿಯಂವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ದಳವಾಯಿ ಕರ್ತವ್ಯವಾಗಿತ್ತು.

ಕೆರೆ ಎರಡು ಮೂರು ಸಲ ಒಡೆಯಿತು ಮತ್ತು ಅದು ಮೇಲಿಂದ ಮೇಲೆ ಒಡೆಯುವ ಕಾರಣವನ್ನು ತಮ್ಮ ದೇವತಾವಿಗ್ರಹವನ್ನು ಕೇಳಿ ತಿಳಿದುಕೊಳ್ಳುವಂತೆ ರಾಜ ಬ್ರಾಹ್ಮಣರಿಗೆ ಹೇಳಿದ. ದೇವತಾವಿಗ್ರಹ ಕೋಪಗೊಂಡಿದೆ ಹಾಗೂ ಅವರು ಬಲಿ ಕೊಡಬೇಕೆಂದು ಇಚ್ಛಿಸುತ್ತದೆ ಮತ್ತು ಅದಕ್ಕೆ ಮನುಷ್ಯರ, ಕುದುರೆಗಳ ಮತ್ತು ಎಮ್ಮೆಗಳ ರಕ್ತ ಕೊಡಬೇಕು ಎಂದು ಬ್ರಾಹ್ಮಣರು ಹೇಳಿದರು ಮತ್ತು ಇದನ್ನು ಕೇಳಿದ ಕೂಡಲೆ ರಾಜ ಗುಡಿಯ ಬಾಗಿಲಿನಲ್ಲಿ ಅರವತ್ತು ಮನುಷ್ಯರ ಮತ್ತು ಅನೇಕ ಕುದುರೆ ಹಾಗೂ ಎಮ್ಮೆಗಳ ತಲೆ ಕಡಿಯಬೇಕೆಂದು ಆಜ್ಞಾಪಿಸಿದ. ಅದನ್ನು ಕೂಡಲೆ ಪೂರೈಸಲಾಯಿತು.

ಈ ಬ್ರಾಹ್ಮಣರು ನಮ್ಮ ಕ್ರೈಸ್ತ ಸನ್ಯಾಸಿಗಳಂತಿರುವವರು ಮತ್ತು ಪವಿತ್ರ ಮಾನವರೆಂದು ಪರಿಗಣಿಸಲ್ಪಡುತ್ತಾರೆ. ನಾನು ಹೇಳುತ್ತಿರುವುದು ದೇವಾಲಯಗಳ ಪುರೋಹಿತರು ಮತ್ತು ಪಂಡಿತರಾದ ಬ್ರಾಹ್ಮಣರ ಬಗೆಗೆ. ಏಕೆಂದರೆ, ರಾಜನಲ್ಲಿ ಅನೆಕ ಬ್ರಾಹ್ಮಣರಿರುವವರಾದರೂ ಅವರು ಪಟ್ಟಣ ಹಾಗೂ ನಗರಗಳ ಅಧಿಕಾರಿಗಳಾಗಿದ್ದು ಅವುಗಳ ಆಡಳಿತಕ್ಕೆ ಸೇರಿದವರು. ಮಿಕ್ಕವರು ವರ್ತಕರು, ಮತ್ತು ಇನ್ನುವುಳಿದವರು ತಮ್ಮದೇ ಆಸ್ತಿ ಮತ್ತು ಸಾಗುವಳಿಯಿಂದ ಮತ್ತು ತಮ್ಮ ಪಿತ್ರಾರ್ಜಿತ ಹೊಲಗಳಲ್ಲಿ ಬೆಳೆಯುವ ಪೈರಿನಿಂದ ಜೀವನ ನಿರ್ವಹಿಸುತ್ತಾರೆ. ದೇವಾಲಯಗಳ ಹೊಣೆಯುಳ್ಳವರು ಪಂಡಿತರಾಗಿದ್ದು ಸಾವಿಗೆ ಈಡಾಗುವ ಮಾಂಸ ಅಥವಾ ಮೀನು ಮುಂತಾದ ಯಾವುದನ್ನೂ ತಿನ್ನುವುದಿಲ್ಲ. ಸಾರನ್ನು ಕೆಂಪಾಗಿಸುವ ಯಾವುದನ್ನೂ ತಿನ್ನುವುದಿಲ್ಲ. ಏಕೆಂದರೆ ಅದು ರಕ್ತವಾಗಿರುತ್ತದೆಂದು ಅವರು ಹೇಳುತ್ತಾರೆ. ದೇವರ ಸೇವೆ ಮಾಡುತ್ತ ತಪಸ್ಸು ಮಾಡುತ್ತ ಪುರೋಹಿತರಂತಹ ಜೀವನ ಸಾಗಿಸಬಯಸುವ ನಾನು ಹೇಳಿದ ಇತರ ಬ್ರಾಹ್ಮಣರಲ್ಲಿ ಕೆಲವು ಮಾಂಸವನ್ನಾಗಲಿ ಮೀನನ್ನಾಗಲಿ ಸಾವನ್ನುಂಟು ಮಾಡುವ ಯಾವುದನ್ನೆ ಆಗಲಿ ತಿನ್ನುವುದಿಲ್ಲ. ಅವರು ಅನ್ನದೊಂದಿಗೆ ತರಕಾರಿ,[22] ಬೆಣ್ಣೆ ಮತ್ತು ಹಣ್ಣಿನಿಂದ[23] ಮಾಡಿದ ಇತರ ಪದಾರ್ಥಗಳನ್ನು ಮಾತ್ರ ತಿನ್ನುತ್ತಾರೆ. ಅವರೆಲ್ಲ ವಿವಾಹಿತರಾಗಿದ್ದು ಬಲು ಸುಂದರ ಪತ್ನಿಯರನ್ನು ಪಡೆದಿರುತ್ತಾರೆ; ಪತ್ನಿಯರು ಏಕಾಂತ ಪ್ರಿಯರಾಗಿದ್ದು ಮನೆ ಬಿಟ್ಟು ಹೊರಬೀಳುವುದಿಲ್ಲ. ಸ್ತ್ರೀಯರು ತಿಳಿ ಬಣ್ಣದವರು. ಈ ಬ್ರಾಹ್ಮಣರ ಜಾತಿಯಲ್ಲಿ ದೇಶದಲ್ಲಿಯೆ ಅತ್ಯಂತ ಸುಂದರ ಪುರುಷರು ಮತ್ತು ಸ್ತ್ರೀಯರು ಇದ್ದಾರೆ; ಏಕೆಂದರೆ, ಇತರ ಜಾತಿಗಳಲ್ಲೂ ಸಾಮಾನ್ಯವಾಗಿ ತಿಳಿಬಣ್ಣದ ಜನರಿರುವುದಾದರೂ ಅವರು ತೀರ ಕಡಿಮೆಯಾಗಿದ್ದಾರೆ. ತಮ್ಮನ್ನು ತಾವೇ ಬ್ರಾಹ್ಮಣರೆಂದು ಕರೆದುಕೊಳ್ಳುವವರು ಈ ನಾಡಿನಲ್ಲಿ ಅನೇಕರು ಇದ್ದಾರೆ, ಆದರೆ ಅವರು ನಾನು ಹೇಳಿದವರಿಗಿಂತ ತೀರ ಭಿನ್ನವಾದ ಜೀವನ ಸಾಗಿಸುತ್ತಾರೆ. ನಾನು ಹೇಳುವವರನ್ನು ರಾಜ ಬಹಳ ಗೌರವದಿಂದ ಕಾಣುತ್ತಾನೆ ಮತ್ತು ಬಹಳ ಸ್ನೇಹದೃಷ್ಟಿ ತೋರುತ್ತಾನೆ.

ರಾಜ ನಿರ್ಮಿಸಿದ ಈ ನೂತನ ನಗರಕ್ಕೆ ಯಾವ ಪತ್ನಿಯ ಪ್ರೀತ್ಯರ್ಥವಾಗಿ ಅದನ್ನು ನಿರ್ಮಿಸಿದನೊ ಅವಳ ಹೆಸರು ಇಡಲಾಗಿದೆ.[24] ಮತ್ತು ಪ್ರಸಕ್ತ ನಗರವನ್ನು ಬಯಲಿನಲ್ಲಿ ಸ್ಥಾಪಿಸಲಾಗಿದೆ ಮತ್ತು ಅದರ ಸುತ್ತಮುತ್ತ ನೆಲಕ್ಕನುಗುಣವಾಗಿ ನಿವಾಸಿಗಳು ಪ್ರತಿಯೊಂದೂ  ಪ್ರತ್ಯೇಕವಾಗಿರುವ ತೋಟಗಳನ್ನು ಮಾಡಿಕೊಂಡಿರುವರು. ಈ ನಗರದಲ್ಲಿ ರಾಜ ಅನೇಕ ವಿಗ್ರಹಗಳುಳ್ಳ ದೇವಾಲಯ ಕಟ್ಟಿಸಿದ. ಅದು ಬಹಳ ಚೆನ್ನಾಗಿ ಮಾಡಿದ ಕೆಲಸವಾಗಿದೆ ಮತ್ತು ಅದೇ ರೀತಿಯಲ್ಲಿ ಚೆನ್ನಾಗಿ ಮಾಡಿದ ಕೆಲವು ಭಾವಿಗಳನ್ನು ಅದು ಹೊಂದಿದೆ. ಅದರ ಮನೆಗಳು ನಮ್ಮವುಗಳಂತೆ ಮಹಡಿಗಳುಳ್ಳಂತೆ ಕಟ್ಟಿರದೆ ಸಮತಲ ಮಾಳಿಗೆ ಮತ್ತು ಗೋಪುರಗಳಿಂದೊಡಗೂಡಿದ ಒಂದೇ ಅಂತಸ್ತಿನವಿದ್ದು ನಮ್ಮವುಗಳಿಗಿಂತ ಭಿನ್ನವಾಗಿವೆ. ಏಕೆಂದರೆ, ಅವರವು ಅಂತಸ್ತಿನಿಂದ ಅಂತಸ್ತಿಗೆ ಮುಂದುವರಿಯುತ್ತವೆ. ಅವುಗಳಿಗೆ ಸ್ತಂಭಗಳಿವೆ. ಪೂರ್ತಿ ಅನಾವೃತವಾಗಿರುವ ಅವುಗಳಲ್ಲಿ ಒಳಗೂ ಹೊರಗೂ ಮೊಗಸಾಲೆಗಳಿವೆ. ಅಲ್ಲಿ ಅವರಿಗೆ ಬೇಕಿದ್ದರೆ ಜನರನ್ನು ಸುಲಭವಾಗಿ ವಸತಿ ಮಾಡಿಸಬಹುದಾದರಿಂದ ಅವು ರಾಜನಿಗೆ ಸೇರಿದ ಮನೆಗಳಂತೆ ಕಾಣುತ್ತವೆ. ಈ ಅರಮನೆಗಳು ಅವುಗಳನ್ನೆಲ್ಲ ಸುತ್ತುಗಟ್ಟುವ ಗೋಡೆ ಹೊಂದಿವೆ. ಮತ್ತು ಒಳಗಡೆ ಅನೇಕ ಕಾವಲುಗಾರರಿರುವ ಎರಡು ದ್ವಾರಗಳಿವೆ. ಅವರು ನಾಯಕರು ಮತ್ತು ಅಲ್ಲಿ ಕೆಲಸವಿರುವವರನ್ನು ಹೊರತುಪಡಿಸಿ ಯಾರಿಗೂ ಪ್ರವೇಶ ನೀಡುವುದಿಲ್ಲ. ಇವೆರಡು ದ್ವಾರಗಳ ಮಧ್ಯೆ ಸುತ್ತಲೂ ಮೊಗಸಾಲೆ ಗಳಿರುವ ವಿಶಾಲವಾದ ಓಲಗವಿದೆ. ಅಲ್ಲಿ ಈ ನಾಯಕರು ಮತ್ತು ಇತರ ಗೌರವಾನ್ವಿತ ಜನರು ರಾಜ ತನ್ನಲ್ಲಿಗೆ ಅವರನ್ನು ಕರೆಕಳಿಸುವವರೆಗೆ ಕಾಯುತ್ತಾರೆ.

ರಾಜ ಸಾಧಾರಣ ಎತ್ತರ ಮತ್ತು ಒಳ್ಳೆಯ ಮೈಬಣ್ಣದವನು ಮತ್ತು ಒಳ್ಳೆಯ ಮೈಕಟ್ಟಿನವನು, ತೆಳ್ಳಗಿರುವುದಕ್ಕಿಂತ ದಪ್ಪವೇ ಇದ್ದಾನೆ; ಅವನ  ಮುಖದ ಮೇಲೆ ಮೈಲಿ ಕಲೆಗಳಿವೆ. ಅವನು ಅತ್ಯಂತ ಭಯಭಕ್ತಿಯುಳ್ಳವನೂ ಮತ್ತು ಗೆಲುವಿನ ಸ್ವಭಾವದವನೂ ಆನಂದಭರಿತನೂ ಇದ್ದು ಯಾರಿಗೂ ಸಾಧ್ಯವಿದ್ದಷ್ಟು ಪರಿಪೂರ್ಣ ರಾಜನಾಗಿದ್ದಾನೆ. ಅವನು ವಿದೇಶೀಯರನ್ನು ಗೌರವಿಸಬಯಸುವವನೂ ಅವರನ್ನು ಪ್ರೀತಿಯಿಂದ ಬರಮಾಡಿ ಕೊಳ್ಳುವವನೂ ಆಗಿದ್ದು ಅವರ ಸ್ಥಿತಿ ಏನೆ ಇರಲಿ ಅವರ ಎಲ್ಲ ವ್ಯವಹಾರಗಳ ಬಗೆಗೆ ವಿಚಾರಿಸುತ್ತಾನೆ. ಅವನು ಶ್ರೇಷ್ಠ ದೊರೆಯೂ ಬಹಳ ನ್ಯಾಯಪರನೂ ಆಗಿರುವಂತೆಯೆ ಥಟ್ಟನೆ ಕೋಪಾವೇಶಕ್ಕೆ ಒಳಗಾಗುವವನೂ ಆಗಿದ್ದಾನೆ ಇದು ಅವನ ಬಿರುದಾಗಿದೆ; “ಕ್ರಿಸ್ನರಾವ್ ಮಕಾಒ,[25] ರಾಜಾಧಿರಾಜ, ಭಾರತದ ಮಹಾಪ್ರಭುಗಳ ಪ್ರಭು, ಮೂರು ಸಾಗರಗಳ ಹಾಗೂ ಮೂರು ಲೋಕಗಳ ಗಂಡ”. ಅವನು ಈ ಬಿರುದನ್ನು ಹೊಂದಿರು ವುದೇಕೆಂದರೆ[26] ಅವನಲ್ಲಿರುವ (?) ಸೈನ್ಯಗಳು ಮತ್ತು ಪ್ರದೇಶಗಳ ಕಾರಣದಿಂದಾಗಿ ಅವನು ಇತರ ಯಾವನಿಗಿಂತಲೂ ಪದವಿಯಲ್ಲಿ ದೊಡ್ಡವನಿರುವನು. ಆದರೆ, ಅವನಂತಹ ಮನುಷ್ಯ ಏನೆಲ್ಲ ಹೊಂದಿರಬೇಕೆಂಬುದನ್ನು ಹೋಲಿಸಿದರೆ ಅವನಲ್ಲಿ (ನಿಜವಾಗಿಯೂ) ಏನೂ ಇಲ್ಲವೆಂದು ತೋರುತ್ತದೆ. ಅವನು ಎಲ್ಲದರಲ್ಲೂ ಅಷ್ಟೊಂದು ದಯಾವೀರನೂ ಪರಿಪೂರ್ಣನೂ ಆಗಿರುವನು. ಈ ರಾಜ ಒರಿಯಾದ ರಾಜನೊಂದಿಗೆ ಸದಾ ಯುದ್ಧದಲ್ಲಿ ತೊಡಗಿರುತ್ತಾನೆ ಮತ್ತು ಅನೇಕ ನಗರ ಪಟ್ಟಣಗಳನ್ನು ವಶಪಡಿಸಿಕೊಳ್ಳುತ್ತಾ ನಾಶಪಡಿಸುತ್ತ ಅವನ ರಾಜ್ಯವನ್ನು ಪ್ರವೇಶಿಸಿದ. ಅವನು ಅವನ ಬಹಳಷ್ಟು ಸೈನಿಕರನ್ನು ಮತ್ತು ಆನೆಗಳನ್ನು ಹೊಡೆದೋಡಿಸಿದ ಮತ್ತು ಅವನ ಮಗನನ್ನು ಸೆರೆಹಿಡಿದ ಮತ್ತು ಬೀಸ್ನಗ ನಗರದಲ್ಲಿಯೆ ದೀರ್ಘಕಾಲ ಬಂಧನದಲ್ಲಿರಿಸಿದ. ಅವನು ಅಲ್ಲಿಯೆ ಸತ್ತ. ಒಪ್ಪಂದ ಮಾಡಿಕೊಂಡು ಶಾಂತಿ(ಕಾಪಾಡಿಕೊಳ್ಳಲು)ಗೋಸ್ಕರ ಒರಿಯಾದ ರಾಜ ಕೊಟ್ಟ ಮಗಳನ್ನು ಅವನು ಮದುವೆಯಾಗಿ ಹೆಂಡತಿಯಾಗಿರಿಸಿಕೊಂಡ.[1]      ಇಲ್ಲಿ ಆ ಪದ ಗೋವಾ ನಗರದ ತಕ್ಷಣ ಸುತ್ತಲಿರುವ ಪೋರ್ತುಗೀಜ ಭಾರತದ ಚಿಕ್ಕ ನಾಡಿಗೆ ಸೀಮಿತವಾಗಿದೆ. ಆದುದರಿಂದ, ಲಿನ್‌ಸ್ಕೊಟೆನ್ (ಕ್ರಿ.ಶ. ೧೫೮೩)ಹೀಗೆ ಬರೆದ : “ಕ್ಯಾಂಬೆಯ ತುದಿಗೆ ಭಾರತ ಆರಂಭಿಸುತ್ತದೆ. ಮತ್ತು ಡೆಕಮ್ ಮತ್ತು ಕುಂಕಮ್ ಭೂಮಿಗಳು”. ಅಂದರೆ, ಕ್ಯಾಂಬೆಯ ಪ್ರದೇಶಗಳ ತಕ್ಷಣ ದಕ್ಷಿಣಕ್ಕೆ ಪೋರ್ತುಗೀಜ ಭಾರತದ ಭೂಪ್ರದೇಶಗಳು ಆರಂಭಿಸಿದರೆ ಗಡಿಯಲ್ಲಿದ್ದ ಇತರ ನಾಡುಗಳೆಂದರೆ ದಕ್ಖನ ಮತ್ತು ಕೊಂಕಣ.

[2]      “ನರಸಿಂಗನ ರಾಜ್ಯ”ಎಂಬುದು ಪೋರ್ತುಗೀಜರು ಮತ್ತು ಇತರರು ಬಹುತೇಕವಾಗಿ ವಿಜಯನಗರಕ್ಕೆ ಕೊಟ್ಟ ಹೆಸರು.

[3]      ಪೋರ್ತುಗೀಸರ ಕಾಲದಲ್ಲಿ.

[4]      ಇದು ಸ್ಪಷ್ಟವಾಗಿಯೆ ಕರಾವಳಿಯಿಂದ ವಿಜಯನಗರಕ್ಕೆ ರೂಢಿಯ ಮಾರ್ಗವಾಗಿತ್ತು. ಫಾದರ್ ಲೂಯಿಸ್ ಕ್ರಿ.ಶ. ೧೫೦೯ರಲ್ಲಿ ಕೋಚಿನ್‌ದಿಂದ ರಾಜಧಾನಿಗೆ ತನ್ನ ಪಯಣಕ್ಕೆ ಅದನ್ನು ಬಳಸಿದನು (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೩೩, ಮತ್ತು ಟಿಪ್ಪಣಿ).

[5]      ಬಹುಶಃ ಭಟ್ಕಳದ ಕರಾವಳಿಯಿಂದ ಸುಮಾರು ೧೨೦ ಮೈಲಿರುವ ಸಂಡೂರು, ಸಂಡೂರು ವಿಜಯನಗರದಿಂದ ೨೫ ಮೈಲು ದೂರವಿರುವ ಚಿಕ್ಕ ಮರಾಠಾ ಸಂಸ್ಥಾನ.

[6]      ಅರ್ಥಾತ್, ಪೋರ್ತುಗೀಜ ಭಾರತದ ಪೂರ್ವಕ್ಕೆ ವಿಜಯನಗರ ಭೂಪ್ರದೇಶದ ಪಶ್ಚಿಮಕ್ಕೆ.

[7]      ಗುರುತಿಸಲಾಗದ್ದು. ದೊಡ್ಡ ಮರವಂತೂ ಆಲದ್ದು.

[8]      ಕೋರಮಂಡಲ ಈ ಹೆಸರನ್ನು ಪೋರ್ತುಗೀಜರು ಪೂರ್ವ ತಮಿಳು ಮತ್ತು ದಕ್ಷಿಣ ತೆಲುಗು ನಾಡುಗಳಿಗೆ ಕೊಟ್ಟಿದ್ದರು. ಅದಕ್ಕೆ ಖಚಿತವಾದ ಸೀಮೆಯಿರಲಿಲ್ಲ. ಮತ್ತು ಅನೇಕ ಬಾರಿ ಕೃಷ್ಣಾ ನದಿಯಷ್ಟು ದೂರ ಉತ್ತರಕ್ಕೆ ಅಥವಾ ಒರಿಸಾದವರೆಗೆ ಹಬ್ಬಿತ್ತೆಂದು ಭಾವಿಸಲಾಗುತ್ತದೆ. ಚೋಳರ ನಾಡು ಎಂಬರ್ಥದ ಚೋಳುಮಂಡಲದಿಂದ ಬಂದಿರುವ ಹೆಸರಿನ ಈಗ ಸಾಮಾನ್ಯವಾಗಿ ಸ್ವೀಕೃತವಾದ ವ್ಯಾಖ್ಯಾನಕ್ಕೆ ಯೂಲ್ ಮತ್ತು ಬರ್ನೆಲ್ ಅಂಟಿಕೊಳ್ಳುತ್ತಾರೆ. (ಲಘು ಶಬ್ದ ಕೋಶ, ನಿರ್ದಿಷ್ಟ ಪದ, ಕೋರಮಂಡಲ್).

[9]      ಒರಿಸಾ.

[10]     ಆದಿಲ್‌ಖಾನ, ಬಿಜಾಪುರದ ಸುಲ್ತಾನ. ಪೋರ್ತುಗೀಜರು ಕೆಲವೊಮ್ಮೆ ಆ ಹೆಸರನ್ನು ಇದಲ್‌ಕ್ಷ (‘ಶಾಹ’ಬದಲು ‘ಕ್ಷ’)ಎಂದು ಬರೆಯುತ್ತಾರೆ. ಹಳೆಯ ದಿನಚರಿಗಳಲ್ಲಿ, ಹಿಡಲ್‌ಖಾನ, ಆ ದೈಹಮ್ ಮುಂತಾದ ಅಸಂಖ್ಯ ಕಾಗುಣಿತಗಳಿವೆ.

[11]     ಅಹಮದನಗರದ ಸುಲ್ತಾನ ನಿಜಾಮ-ಉಲ್-ಮುಲ್ಕ್ ಅಥವಾ ನಿಜಾಮ ಶಾಹ, ಅದೇ ರೀತಿ, ಗೋಲ್ಕೊಂಡದ ಕುತುಬ್ ಶಾಹನನ್ನು ಈ ದಿನಚರಿಗಳಲ್ಲಿ “ಕೋಟಾಮಲುಕೊ”ಎಂದು ಕರೆಯಲಾಗಿದೆ. ಬೀರರ್‌ನ ಇಮಾದ್ ಶಾಹನನ್ನು ಡಚ್‌ರು (ಲಿನ್‌ಸ್ಕೊಟೆನ್)ಮತ್ತು ಪೋರ್ತುಗೀಜರು “ಇಮದೆಮಲುಕೊ”ಅಥವಾ “ಮಾದ್ರೆಮಲುಕೊ”ಎಂತಲೂ ಕರೆದಿದ್ದಾರೆ. ಬೀದರಿನ ಬರೀದ್ ಶಾಹನನ್ನು “ಮೇಲಿಕ್ ವೆರಿದೊ”ಎಂದು ಕರೆಯಲಾಗಿದೆ.

[12]     ಮೂಲದಲ್ಲಿ ಇದರ ಕಾಗುಣಿತ ಸಂದೇಹಾಸ್ಪದವಾಗಿದೆ. ಮೊದಲು ಅದು ಅರ್ಚ ಎಂದಿದ್ದರೆ ಮುಂದಿನ ಸಂದರ್ಭದಲ್ಲಿ ಅದು ನಿಸ್ಸಂದೇಹವಾಗಿ ದರ್ಚ ಎಂದಿದೆ. ಆ ಊರಿನ ಮೂರನೆಯ ಉಲ್ಲೇಖ ಲರ್ಚ ಎಂದಿದೆ. ಪ್ರತಿ ಸಲವೂ ಸ್ಪಷ್ಟವಾಗಿಲ್ಲ, ಮತ್ತು ಅದು ಚುಕ್ಕೆಯಿಡದ  i ಆಗಿರಬಹುದು. ಅಲ್ಲದೆ, c ಬಹುಶಃ e ಆಗಿರುವ ಸಾಧ್ಯತೆಯಿದೆ, ಮತ್ತು ಹೆಸರು ಅರೆಹ ಅಥವಾ ದರೆಹ ಆಗಿರಬಹುದು. ಕೊನೆಯದನ್ನು ನಾವು ಸ್ವೀಕರಿಸಿದರೆ ನಾವು ಅದನ್ನು ಧಾರವಾಡದೊಂದಿಗೆ ಸಮೀಕರಿಸಬಹುದು ಮತ್ತು ನೂನಿಜ್‌ನ ದುರೀ ಕೂಡ ಅದೇ ಎಂದು ನಂಬಬಹುದು (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ,ಪು. ೩೧೩).

[13]     ಬಹುಶಃ Pianhasಅಥವಾ Peanhasಕ್ಕಾಗಿ ಮೂಲದಲ್ಲಿ Pranhas ಬಳಸಲಾಗಿದೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ,ಪು. ೨೮೮).

[14]     ಜೋಗಿಗಳು, ಹಿಂದೂ ಸನ್ಯಾಸಿಗಳು.

[15]     ಇದು ಬಹುಶಃ ಸೇಂಟ್ ಪೀಟರ್ಸ್‌ನಲ್ಲಿರುವ ಇಜಿಪ್ಯಿಯನ್ ಚೌಕ ಸೂಚ್ಯಾಕಾರದ ಕಂಬವನ್ನು ಸೂಚಿಸುತ್ತದೆ.

[16]     ಸ್ಪಷ್ಟವಾಗಿಯೆ ಗಣೇಶ ದೇವತೆ.

[17]     Buqueyrois ಈ ಶಬ್ದ, ಕಟ್ಟಲಾಗುವ ಹಂಗಾಮಿ ಹೊರಕೋಟೆಗಳಿಗೆ ಭಿನ್ನವಾಗಿ ಅಗೆದು ಮಾಡಿದ್ದುದನ್ನು ಸೂಚಿಸುತ್ತದೆ.

[18]     ದಕ್ಖನ.

[19]     ಇದು ನಾಗಲಾಪುರ, ಆಧುನಿಕ ಹೊಸಪೇಟೆ (ಎಪಿಗ್ರಾಫಿಯಾ ಇಂಡಿಕಾ, ೪. ೨೬೭)

[20]     ಈ ಕೆರೆ ಅಥವಾ ಸರೋವರವನ್ನು ನೂನಿಜ್ ವರ್ಣಿಸಿದ್ದಾನೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೩೮೭).

[21]     ತೋಪಖಾನೆಯ ಫ್ಯಾಲ್ಕನ್ ಎಂಬ ಹೆಸರಿನ ಮೊದಲಿನ ಫಿರಂಗಿಯ ಗುಂಡು ಸಿಡಿಯುವಷ್ಟು ದೂರ.

[22]     ಬ್ರೆಡೊಸ್, blitesಒಂದು ರುಚಿಹೀನ ಅಡಿಗೆ ತರಕಾರಿ. ಆದರೆ ಆ ಶಬ್ದ ರೂಢಿಯಲ್ಲಿಲ್ಲ ಮತ್ತು ಬ್ರಾಹ್ಮಣರು ಬಹುತೇಕ ತರಕಾರಿಗಳನ್ನು ಬಳಸುತ್ತಿದ್ದುದರಿಂದ ನಾನು ಸಾಮಾನ್ಯ ಪದವನ್ನ ಇಷ್ಟಪಟ್ಟಿರುವೆ.

[23]     Macaas ಅರ್ಥಾತ್ “ಸೇಬುಹಣ್ಣುಗಳು”.

[24]     ಅದನ್ನು ಸಾಮಾನ್ಯವಾಗಿ ನಾಗಲಾಪುರ ಎಂದು ಕರೆಯುತ್ತಿದ್ದರು. ಆದರೆ ಆ ಮಹಿಳೆಯ ಹೆಸರು ಚಿನ್ನದೇವಿ ಎಂದಿತ್ತೆಂದು ನೂನಿಜ್ ಹೇಳುತ್ತಾನೆ (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ,ಪು. ೩೮೬).

[25]     ಸ್ಪಷ್ಟವಾಗಿಯೆ ‘ಮಹಾ’(ಶ್ರೇಷ್ಠ)ಹಾಗೂ ‘ಶಾಹ’ಪದಗಳ ಮಿಶ್ರಣ.

[26]     ಮುಂದಿನ ಭಾಗ ಮೂಲದಲ್ಲಿ ಸ್ಪಷ್ಟವಾಗಿಲ್ಲ.