ಈ ಒಂಬತ್ತು ದಿನ ಮುಗಿದ ನಂತರ

[1] ಕುದುರೆಯೇರಿ ಹೊರ ನಡೆಯುತ್ತಾನೆ. ಮತ್ತು ತನ್ನ ದಳವಾಯಿಗಳ ಸೈನ್ಯಗಳ ನಿರೀಕ್ಷಣೆ ಮಾಡಲು ಹೋಗುತ್ತಾನೆ, ಸಶಸ್ತ್ರ ಸೈನಿಕರ ನಡುವೆ ಎರಡು ರಹದಾರಿ ದೂರ ಹೋಗುತ್ತಾನೆ. ಕೊನೆಗೆ ಅವನು ಕುದುರೆಯಿಂದ ಇಳಿಯುತ್ತಾನೆ ಮತ್ತು ಕೈಯಲ್ಲಿ ಬಿಲ್ಲುತೆಗೆದುಕೊಂಡು ಮೂರು ಬಾಣ ಹೊಡೆಯುತ್ತಾನೆ. ಅಂದರೆ, ಒಂದು ಇಡಲ್‌ಕಾವ್‌ನಿಗಾಗಿ ಮತ್ತು ಮತ್ತೊಂದು ಕೊಟಮುಲುಕೊದ ರಾಜನಿಗಾಗಿ,[2] ಇನ್ನೂ ಒಂದು ಪೋರ್ತುಗೀಜರಿಗಾಗಿ. ಎಲ್ಲಕ್ಕಿಂತ ದೂರ ತಲುಪಿದ ಬಾಣದ ದಿಕ್ಕಿನಲ್ಲಿರುವ ರಾಜ್ಯದ ಮೇಲೆ ಯುದ್ಧ ಮಾಡುವುದು ಅವನ ಪದ್ಧತಿಯಾಗಿತ್ತು. ಇದನ್ನು ಮಾಡಿಯಾದ ಮೇಲೆ ರಾಜ ಮನೆಗೆ ಮರಳಿ ಆ ದಿನ ಉಪವಾಸ ಆಚರಿಸುತ್ತಾನೆ ಮತ್ತು ಅವನೊಂದಿಗೆ ನಾಡಿನ ಎಲ್ಲಜನರೂ ಆಚರಿಸುತ್ತಾರೆ. ಮರುದಿನ ತನ್ನೆಲ್ಲ ಜನರೊಂದಿಗೆ ಸ್ನಾನ ಮಾಡಲು ನದಿಗೆ ತೆರಳುತ್ತಾನೆ. ಈ ಒಂಬತ್ತು ದಿನಗಳಲ್ಲಿಯೇ ರಾಜ ತನ್ನ ರಾಜ್ಯದಿಂದ  ಪಡೆಯುವ ಎಲ್ಲ ಕಂದಾಯಗಳನ್ನು ಸಲ್ಲಿಸಲಾಗುತ್ತದೆ. ಏಕೆಂದರೆ, ಈ ಮೊದಲೆ ಹೇಳಿರುವಂತೆ, ಎಲ್ಲ ಭೂಮಿ ರಾಜನಿಗೆ ಸೇರಿದ್ದು, ಮತ್ತು ಅವನ ಪರವಾಗಿ ದಳವಾಯಿಗಳು ಅದನ್ನು ಹಿಡಿದುಕೊಂಡಿರುತ್ತಾರೆ. ಅವರು ಅದನ್ನು ತಮ್ಮ ಒಡೆಯರಿಗೆ  ಒಂಬತ್ತು ಹತ್ತಾಂಶ ಕೊಡುವ ರೈತರಿಗೆ ಕೊಡಮಾಡುತ್ತಾರೆ. ಅವರಿಗೆ ತಮ್ಮದೇ ಭೂಮಿ ಇಲ್ಲ. ಏಕೆಂದರೆ, ರಾಜ್ಯ ಸಂಪೂರ್ಣವಾಗಿ ರಾಜನ ಸ್ವತ್ತು.[3]  ದಳವಾಯಿಗಳು ಮಾತ್ರ ರಾಜ ಅವರನ್ನು ಹೊಣೆಗಾರರನ್ನಾಗಿಸುವ  ಸೈನಿಕರ ದೆಸೆಯಿಂದ ಖರ್ಚಿಗೊಳಪಡುತ್ತಾರೆ. ಅವರು ಸೇವೆಯಿಂದ ಸೈನಿಕರನ್ನು ಒದಗಿಸಬೇಕಾಗುತ್ತದೆ. ಪ್ರತಿ ಶನಿವಾರ ನೃತ್ಯಗಾರ್ತಿಯರು ಅರಮನೆಗೆ ಹೋಗಿ ಅರಮನೆಯ ಒಳಗಡೆಯಿರುವ ರಾಜನ ವಿಗ್ರಹದ ಮುಂದೆ ನೃತ್ಯಗೈಯ್ಯಬೇಕು ಮತ್ತು ಭಂಗಿ ತೋರಬೇಕು. ಈ ದೇಶದ ಜನರು ಯಾವಾಗಲೂ ಶನಿವಾರದಂದು ಉಪವಾಸ ಆಚರಿಸುತ್ತಾರೆ ಮತ್ತು ಇಡೀ ದಿನವಾಗಲಿ ರಾತ್ರಿಯಾಗಲಿ ಏನನ್ನೂ ತಿನ್ನುವುದಿಲ್ಲ, ನೀರನ್ನೂ ಕುಡಿಯುವುದಿಲ್ಲ. ಉಸಿರು ಮಧುರವಾಗಿರಿಸಲು ಕೆಲವು ಲವಂಗಗಳನ್ನು ಮಾತ್ರ ಜಿಗಿಯುತ್ತಾರೆ. ರಾಜ ಯಾವಾಗಲೂ ದೊಡ್ಡ ಮೊತ್ತಗಳನ್ನು ನೀಡುತ್ತಾನೆ. ಅರಮನೆಯಲ್ಲಿ ಅವನ ಪುರೋಹಿತರಾಗಿರುವ  ಎರಡು ಅಥವಾ ಮೂರು ಸಾವಿರ ಬ್ರಾಹ್ಮಣರು ಯಾವಾಗಲೂ ಇರುತ್ತಾರೆ. ಅವರಿಗೆ ದಕ್ಷಿಣೆ ನೀಡಲು ರಾಜ ಆಜ್ಞಾಪಿಸುತ್ತಾನೆ. ಈ ಬ್ರಾಹ್ಮಣರು ಬಲು ನಿಕೃಷ್ಟ ಜನ. ಅವರಲ್ಲಿ ಯಾವಾಗಲೂ ಬಹಳ ಹಣವಿರುತ್ತದೆ, ಮತ್ತು ಅವರು ಎಷ್ಟು ಸೊಕ್ಕಿನವರೆಂದರೆ ಗುದ್ದುಕೊಟ್ಟರೂ ದ್ವಾರಪಾಲಕರು ಅವರನ್ನು ತಡೆಯಲಾಗುವುದಿಲ್ಲ.

ದಳವಾಯಿಗಳು ಮತ್ತು ಪ್ರಮುಖ ಜನ ರಾತ್ರಿಯಲ್ಲಿ, ನಾಲ್ಕರಿಂದ ಹನ್ನೆರಡರವರೆಗೆ (ಅಂತಸ್ತಿಗನುಗುಣವಾಗಿ), ಅತ್ಯುನ್ನತ ಅಂತಸ್ತಿನವರು ಹೆಚ್ಚೆಂದರೆ ಹನ್ನೆರಡರಂತೆ, ಎಣ್ಣೆ ಪಂಜುಗಳನ್ನು ಬಳಸುತ್ತಾರೆ.[4] ರಾಜನಾದರೊ ನೂರು ಇಲ್ಲವೆ ನೂರೈವತ್ತು ಪಂಜು ಹೊಂದಿರಬೇಕು. ದೇಶದಲ್ಲಿ ಬಹಳ ಮೇಣವಿದೆ, ಆದರೆ ಅದನ್ನು ಹೇಗೆ ಬಳಸಬೇಕೆಂದು ಅವರಿಗೆ ಗೊತ್ತಿಲ್ಲ. ಅದನ್ನು ರಾಜನಿಗೆ ಮಾರಲು ತಂದಿರಬಹುದಾದ ಕುದುರೆಗಳ ಹಾಗೂ ಇತರ ವಸ್ತುಗಳ ರೂಪದಲ್ಲಿ ಸರಕನ್ನು ತರುವ ಪ್ರತಿ ವರ್ತಕನೂ ರಾಜನೊಂದಿಗೆ ಭೆಟ್ಟಿಪಡೆದು ಬೇಕಿದ್ದರೆ ವ್ಯವಹಾರ ಮಾಡಲೋಸುಗ ತನ್ನ ಸರಕಿನ ನಮೂನೆಯನ್ನು ಅಥವಾ ತಾನು ತಂದ  ಅತ್ಯುತ್ತಮ ಕುದುರೆಯೊಂದನ್ನು ಅವನಿಗೆ ಕಾಣಿಕೆ ನೀಡಬೇಕು. ಇದನ್ನು ಕೇವಲ ರಾಜನಿಗೆ ಮಾಡಿದರೆ ಸಾಲದು. ನೀವು ವ್ಯವಹರಿಸಬೇಕಿರುವ ಎಲ್ಲ ಹಲವಾರು ಅಧಿಕಾರಿ ಗಳಿಗೂ ಕಡ್ಡಾಯವಾಗಿ ಲಂಚ ಕೊಡಬೇಕು. ತಮಗೆ ಯಾವ ಲಾಭವಿಲ್ಲದೆ ಅವರು ಏನನ್ನೂ ಮಾಡರು.

ಯಾವನಾದರೂ ಅನ್ಯಾಯವನ್ನು ಅನುಭವಿಸಿದಾಗ ಮತ್ತು ಪ್ರಕರಣವನ್ನು ರಾಜನಲ್ಲಿ ನಿವೇದಿಸಬಯಸಿದಾಗ ಅವನು ಅವನಿಗೆ ಏನು ಬೇಕೆಂದು ಕೇಳುವವರೆಗೆ ನೆಲಕ್ಕೆ ಮುಖಮಾಡಿ ಮಲಗುವ ಮೂಲಕ ತನ್ನ ಕಷ್ಟ ಎಷ್ಟು ದೊಡ್ಡದೆಂಬುದನ್ನು  ತೋರಿಸುತ್ತಾನೆ. ಒಂದು ವೇಳೆ ರಾಜ ಕುದುರೆಯ  ಮೇಲೆ ಹೋಗುವಾಗ ಅವನು ರಾಜನೊಂದಿಗೆ ಮಾತಾಡಬಯಸಿದರೆ ಈಟಿಯ ಕೋಲು ತೆಗೆದುಕೊಂಡು ಅದಕ್ಕೆ ಒಂದು ಟೊಂಗೆ ಕಟ್ಟುತ್ತಾನೆ ಮತ್ತು ಕೂಗುತ್ತ ರಾಜನ ಬದಿಯಲ್ಲಿ ಹೋಗುತ್ತಾನೆ. ಆಗ ಅವರು ಅವನಿಗೆ ಜಾಗ ಬಿಡುತ್ತಾರೆ, ಮತ್ತು ಅವನು ರಾಜನಿಗೆ  ತನ್ನ ದೂರ ಹೇಳಿಕೊಳ್ಳುತ್ತಾನೆ.  ಅದನ್ನು ಕೂಡಲೇ ಸ್ಥಳದಲ್ಲಿಯೇ ಬಹಳ ಗದ್ದವಿಲ್ಲದೆ  ಬಗೆಹರಿಸಲಾಗುತ್ತದೆ.  ರಾಜ ತನ್ನೊಂದಿಗೆ ಇರುತ್ತಿರುವ ದಳವಾಯಿ ಗಳಲ್ಲೊಬ್ಬನಿಗೆ ಫಿಯಾರ್ದುದಾರ ಕೇಳುವುದನ್ನು ಮಾಡಿಕೊಡಲು ಆಜ್ಞಾಪಿಸುತ್ತಾನೆ. ತಾನು ಇಂಥಿಂಥ ಪ್ರಾಂತದಲ್ಲಿ, ಇಂಥಿಂಥ ರಸ್ತೆಯಲ್ಲಿ ದೋಚಲ್ಪಟ್ಟಿರುನೆಂದು ಅವನು ದೂರು ಇತ್ತರೆ ರಾಜ ಕೂಡಲೆ ಆ ಪ್ರಾಂತದ ದಳವಾಯಿಗೆ, ಅವನು ಕಳ್ಳನನ್ನು ಹಿಡಿಯದಿದ್ದರೆ ಆ ದಳವಾಯಿಯನ್ನು ಬಂಧಿಸಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು. ಅದೇ ರೀತಿಯಲ್ಲಿ, ನಗರದಲ್ಲಾಗುವ ಕಳ್ಳತನಗಳ ಲೆಕ್ಕವನ್ನು ಕೊಡಲು ಪ್ರಧಾನ ದಂಡಾಧಿಕಾರಿ ಬಾಧ್ಯಸ್ಥನು. ಹೀಗಾಗಿ, ಅತಿ ಕಡಿಮೆ ಕಳವುಗಳು ಜರುಗುತ್ತವೆ. ಕೆಲವೊಂದು ಸಂಭವಿಸಿದರೂ ಸಹ ನೀವು ಯಾವುದಾದರೊಂದು ಚಿಕ್ಕ ಕಾಣಿಕೆ ಮತ್ತು ನಿಮ್ಮಿಂದ ಕಳವು ಮಾಡಿದ ಮನುಷ್ಯನ ವರ್ಣನೆ ನೀಡಿದರೆ ಕಳ್ಳ ನಗರದಲ್ಲಿರುವನೊ ಇಲ್ಲವೊ ಎಂಬುದನ್ನು ಮಂತ್ರವಾದಿಗಳ ಮೂಲಕ ಅವರು ಕ್ಷಿಪ್ರದಲ್ಲಿಯೆ ತಿಳಿಯುವರು. ಹೀಗಾಗಿ, ಈ ನಾಡಿನಲ್ಲಿ ಅತಿ ಕಡಿಮೆ ಕಳ್ಳರಿರುವರು.

ಈ ರಾಜನಲ್ಲಿ ಯಾವಾಗಲೂ ಐವತ್ತುಸಾವಿರ ಸಂಬಳದ ಸೈನಿಕರಿರುವರು. ಅವರಲ್ಲಿ ಅರಮನೆಯ ರಕ್ಷಣಾಪಡೆಗೆ ಸೇರಿದ ಆರುಸಾವಿರ ಆಶ್ವಾಳುಗಳಿದ್ದಾರೆ. ಆ ಆರು ಸಾವಿರದಲ್ಲಿ ಅವನೊಂದಿಗೆ ಕುದುರೆಯೇರಿ ಹೋಗಲೇಬೇಕಾದ ಇನ್ನೂರು ಜನ ಸೇರಿದ್ದಾರೆ. ಅವನಲ್ಲಿ ಇಪ್ಪತ್ತು ಸಾವಿರ ಈಟಿಗಾರರು ಮತ್ತು ಗುರಾಣಿಧಾರಕರು ಮತ್ತು ಲಾಯದಲ್ಲಿನ  ಆನೆಗಳನ್ನು ನೋಡಿಕೊಳ್ಳಲು ಮೂರು ಸಾವಿರ ಜನರೂ ಇದ್ದಾರೆ. ಅವನಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಹದಿನಾರು ನೂರು ಆಳುಗಳು, ಮತ್ತು ಮುನ್ನೂರು ಕುದುರೆ ಶಿಕ್ಷಕರು ಮತ್ತು ಎರಡು ಸಾವಿರ ಕಸುಬುದಾರರು, ಅಂದರೆ ಕಮ್ಮಾರರು, ಉಪ್ಪಾರರು, ಮತ್ತು ಬಡಿಗರು, ಮತ್ತು ಅರಿವೆ ಒಗೆಯುವ ಅಗಸರು ಇದ್ದಾರೆ. ಅವನಲ್ಲಿರುವ ಮತ್ತು ಪ್ರತಿದಿನ ಕೂಲಿ ಪಡೆಯುವ ಜನರೆಂದರೆ ಇವರೆ. ಅವನು ಅವರಿಗೆ ಅರಮನೆಯ ದ್ವಾರದಲ್ಲಿ ಅವರ ಕೂಲಿ ಕೊಡುತ್ತಾನೆ. ಆರು ಸಾವಿರ ಆಶ್ವಾಳುಗಳಿಗೆ ರಾಜ ಕುದುರೆಗಳನ್ನು ಉಚಿತವಾಗಿ ಕೊಡುತ್ತಾನೆ ಮತ್ತು ಅವುಗಳಿಗಾಗಿ ಪ್ರತಿ ತಿಂಗಳು ಕಾಳುಕಡ್ಡಿ ಕೊಡುತ್ತಾನೆ. ಇವೆಲ್ಲ ಕುದುರೆಗಳಿಗೆ ರಾಜನ ಚಿಹ್ನೆಯಿಂದ ಮುದ್ರೆಯೊತ್ತಲಾಗಿರುತ್ತದೆ. ಅವು ಸತ್ತಾಗ ಮುದ್ರೆಯಿರುವ ಚರ್ಮದ ತುಂಡನ್ನು ಅವರು ಪ್ರಧಾನ ಅಶ್ವಪತಿ ಆದ ಮದನಾರ್ಕ್‌ನೆಡೆಗೆ ಒಯ್ಯಲೇಬೇಕು. ಅಂದರೆ ಮಾತ್ರ ಅವನು ಅವರಿಗೆ ಬೇರೆ ಕುದುರೆ ಕೊಡುವನು. ಮತ್ತು ಅನು ಕೊಡುವ ಕುದುರೆಗಳು ಬಹುತೇಕವಾಗಿ ರಾಜ ಸಾವಿರ ಪರ್ದಾಒಗಳಿಗೆ ಹನ್ನೆರಡು ಅಥವಾ ಹದಿನೈದರಂತೆ ಕೊಳ್ಳುವ ದೇಶಿಯ ಕುದುರೆಗಳನ್ನು ಕೊಳ್ಳುತ್ತಾನೆ. ಅವುಗಳಲ್ಲಿ ತನ್ನ ಲಾಯಗಳಿಗೆ ಅತ್ಯುತ್ತಮ ವಾದುವುಗಳನ್ನು ಆರಿಸಿಕೊಳ್ಳುತ್ತಾನೆ. ಮಿಕ್ಕುವುಗಳನ್ನು ತನ್ನ ದಳವಾಯಿಗಳಿಗೆ ಕೊಡುತ್ತಾನೆ, ಮತ್ತು ಅವುಗಳಿಂದ ಬಹಳ ಹಣ ಗಳಿಸುತ್ತಾನೆ. ಏಕೆಂದರೆ, ಒಳ್ಳೆಯ ಪರ್ಶಿಯನ್ ಕುದುರೆಗಳನ್ನು ತೆಗೆದಿಟ್ಟುಕೊಂಡು ದೇಶೀಯ ಕುದುರೆ ಗಳನ್ನು ಸಾವಿರ ಪರ್ದಾಒಗಳಿಗೆ ಐದರಂತೆ ಮಾರುತ್ತಾನೆ ಮತ್ತು ಅವರು ಸೆಪ್ಟಂಬರ್ ತಿಂಗಳೊಳಗೆ ಅವುಗಳ ದುಡ್ಡು ಕೊಡಲೇಬೇಕು. ಹೀಗೆ ಪಡೆದ ಹಣವನ್ನು ಅವನು ಪೋರ್ತಗೀಜರಿಂದ ಕೊಳ್ಳುವ ಅರಬ್ಬೀ ಕುದುರೆಗಳಿಗಾಗಿ ಕೊಡುತ್ತಾನೆ. ಹೀಗಾಗಿ, ಬೊಕ್ಕಸದಿಂದ ಏನೂ ಖರ್ಚಾಗದೆ ಅವನ ದಳವಾಯಿಗಳೆ ಎಲ್ಲದರ ಖರ್ಚನ್ನು ಕೊಡುತ್ತಾರೆ.

ಈ ರಾಜ ತನ್ನ ದ್ವಾರಗಳೊಳಗೆ ನಾಲ್ಕುಸಾವಿರಕ್ಕೂ ಹೆಚ್ಚು ಸ್ತ್ರೀಯರನ್ನು ಹೊಂದಿದ್ದಾನೆ. ಅವರೆಲ್ಲ ಅರಮನೆಯಲ್ಲಿ ಇರುತ್ತಾರೆ. ಕೆಲವರು ನೃತ್ಯಗಾರ್ತಿಯರಾಗಿರುತ್ತಾರೆ, ಇನ್ನು ಕೆಲವರು ರಾಜನ ಹೆಂಡಂದಿರನ್ನು ಮತ್ತು ಅರಮನೆಯೊಳಗಡೆ ರಾಜನನ್ನೂ ತಮ್ಮ ಹೆಗಲ ಮೇಲೆ ಹೊರುವ ಬೋಯಿಗಳು ಆಗಿರುತ್ತಾರೆ. ಏಕೆಂದರೆ, ರಾಜನ ಮನೆಗಳು ದೊಡ್ಡವಿವೆ ಮತ್ತು ಒಂದು ಮತ್ತೊಂದರ ನಡುವೆ ಬಹಳ ಅಂತರವಿರುತ್ತದೆ. ಅವನಲ್ಲಿ ಕುಸ್ತಿ ಆಡುವ  ಸ್ತ್ರೀಯರೂ ಮತ್ತು ಭವಿಷ್ಯ ಹಾಗೂ ಕಣಿ ಹೇಳುವ ಇತರರೂ ಇದ್ದಾರೆ. ಅವನಲ್ಲಿ ದ್ವಾರಗಳೊಳಗೆ ಮಾಡಲಾದ ಖರ್ಚುಗಳ ಲೆಕ್ಕ ಬರೆಯುವ ಸತ್ರೀಯರೂ ಮತ್ತು ರಾಜ್ಯದ ಎಲ್ಲ ಆಗುಹೋಗುಗಳನ್ನು ಬರೆದು ಹೊರಗಿನ ಲೇಖಕರೊಂದಿಗೆ ತಮ್ಮ ಪುಸ್ತಕಗಳನ್ನು ಹೋಲಿಸಿ ನೋಡುವ ಕರ್ತವ್ಯವುಳ್ಳ ಇತರರೂ ಇದ್ದಾರೆ. ಅವನಲ್ಲಿ ಸಂಗೀತಕ್ಕೂ ಸ್ತ್ರೀಯರಿದ್ದಾರೆ. ಅವರು ವಾದ್ಯಗಳನ್ನು ನುಡಿಸುತ್ತಾರೆ ಮತ್ತು ಹಾಡುತ್ತಾರೆ. ರಾಜನ ಹೆಂಡಂದಿರೂ ಸಂಗೀತದಲ್ಲಿ ಪರಿಣಿತರಿರುವರು.

ಅಲ್ಲದೆ, ರಾಜನಲ್ಲಿ ಬೇರೆ ಸ್ತ್ರೀಯರಿದ್ದಾರೆ. ತನ್ನ ಸ್ವಂತ ಸೇವೆಗಾಗಿ ಅವನು ಹತ್ತು ಜನ ಅಡುಗೆಯ ಸ್ತ್ರೀಯರನ್ನು ಮತ್ತು ತಾನು ಔತಣ ಕೊಟ್ಟ ಸಂದರ್ಭಗಳಿಗಾಗಿ ಕಾಯ್ದಿಟ್ಟ ಇತರರನ್ನು ಹೊಂದಿದ್ದಾನೆ. ಈ ಹತ್ತು ಜನ ರಾಜನನ್ನು ಬಿಟ್ಟು ಬೇರಾರಿಗೂ ಅಡಿಗೆ ಮಾಡುವುದಿಲ್ಲ. ಅಡುಗೆಮನೆಯ ಬಾಗಿಲಿಗೆ ಅವನು ಒಬ್ಬ ಬೀಜವೊಡೆದ ಪುರುಷನನ್ನು ರಕ್ಷಕನನ್ನಾಗಿ ಇರಿಸುತ್ತಾನೆ. ಅವನು ವಿಷದ ಭಯದಿಂದಾಗಿ ಯಾರಿಗೂ ಒಳಗೆ ಪ್ರವೇಶಿಸಲು ಕೊಡುವುದಿಲ್ಲ. ರಾಜ ಉಣ್ಣ ಬಯಸಿದಾಗ ಪ್ರತಿ ವ್ಯಕ್ತಿ ಹೊರಟುಹೋಗುತ್ತಾನೆ. ಮತ್ತು ತಮ್ಮ ಕರ್ತವ್ಯವಾಗಿದ್ದ ಕೆಲವು ಸ್ತ್ರೀಯರು ಬರುತ್ತಾರೆ.  ಮತ್ತು ಊಟಕ್ಕೆ ಸಿದ್ಧಗೊಳಿಸುತ್ತಾರೆ. ಅವರು ಅವನಿಗಾಗಿ ಬಂಗಾರದಿಂದ ಮಾಡಿದ, ದುಂಡಗಿನ, ಮೂರು ಕಾಲಿನ ಸ್ಟೂಲನ್ನು ಇಟ್ಟು ಅದರ ಮೇಲೆ ಭಕ್ಷ್ಯಗಳನ್ನು ಇಡುತ್ತಾರೆ. ಇವುಗಳನ್ನು ದೊಡ್ಡ ಬಂಗಾರದ ಪಾತ್ರೆಗಳಲ್ಲಿ ತರಲಾಗುತ್ತದೆ ಮತ್ತು ಚಿಕ್ಕ ಭಕ್ಷ್ಯಗಳನ್ನು ಬಂಗಾರದ ಬೋಗಣಿಗಳಲ್ಲಿ ತರಲಾಗುತ್ತದೆ. ಅವುಗಳಲ್ಲಿ ಕೆಲವೊಂದನ್ನು ಬೆಲೆಯುಳ್ಳ ಹರಳುಗಳಿಂದ  ಅಲಂಕರಿಸಲಾಗಿರುತ್ತದೆ. ಮೇಜಿನ ಮೇಲೆ ಅರಿವೆ ಇರುವುದಿಲ್ಲ. ಆದರೆ, ರಾಜ ಊಟ ಮುಗಿಸಿದಾಗ ಒಂದನ್ನು ತರಲಾಗುತ್ತದೆ ಮತ್ತು ಅವನು ತನ್ನ ಕೈಗಳನ್ನು ಮತ್ತು ಬಾಯಿಯನ್ನು ತೊಳೆದುಕೊಳ್ಳುತ್ತಾನೆ. ಸ್ತ್ರೀಯರು ಮತ್ತು ಬೀಜವೊಡೆದ ಪುರುಷರು ಅವನಿಗೆ  ಊಟ ಬಡಿಸುತಾ್ತರೆ. ರಾಜನ ಹೆಂಡಂದಿರು ಪ್ರತಿಯೊಬ್ಬಳು ತನ್ನ ಭವನದಲ್ಲಿಯೇ ಇರುತ್ತಾಳೆ ಮತ್ತು ಪರಿಚಾರಿಕೆಯರು ಅವರ ಸೇವೆಗೈಯುತ್ತಾರೆ. ಅವನು ನ್ಯಾಯಾಧೀಶರನ್ನು ಮತ್ತು ದಂಡಾಧಿಕಾರಿಗಳನ್ನು ಪ್ರತಿ ರಾತ್ರಿ ಕಾಯುವ ಕಾವಲುಗಾರರನ್ನು ಹೊಂದಿರುವನೆಂದು ಹೇಳಲಾಗುತ್ತದೆ, ಮತ್ತು ಇವರೆಲ್ಲ ಸ್ತ್ರೀಯರು.

ರಾಜ ಯಾವುದೆ ವಸ್ತ್ರವನ್ನು ಒಮ್ಮೆಗಿಂತ ಹೆಚ್ಚು ಧರಿಸುವುದಿಲ್ಲ, ಅದನ್ನು ತೆಗೆದಾಗ ಆ ಕರ್ತವ್ಯ ಹೊಂದಿದ ಕೆಲವು ಅಧಿಕಾರಿಗಳಿಗೆ ಅದನ್ನು ಕೊಡುತ್ತಾನೆ. ಅವರು ಲೆಕ್ಕ ಕೊಡುತ್ತಾರೆ; ಮತ್ತು ಈ ವಸ್ತ್ರಗಳನ್ನು ಎಂದೂ ಯಾರಿಗೂ ಕೊಡಲಾಗುವುದಿಲ್ಲ. ಇದನ್ನು ದೊಡ್ಡ ಘನತೆಯ ಕುರುಹೆಂದು ಪರಿಗಣಿಸಲಾಗುತ್ತದೆ. ಅವನ ಬಟ್ಟೆಗಳು ಬಹಳ ಉತ್ತಮ ವಸ್ತುಗಳಿಂದ ಮಾಡಿದ ಮತ್ತು ಬಂಗಾರದ ಕೆಲಸ ಮಾಡಿದ ರೇಶ್ಮೆ ಅರಿವೆಗಳಾಗಿರುತ್ತವೆ. ಪ್ರತಿಯೊಂದು ಹತ್ತು ಪರ್ದಾಒ ಬೆಲೆಯುಳ್ಳದ್ದಾಗಿರುತ್ತದೆ. ಅವರು ಕೆಲವೊಮ್ಮೆ ಅದೇ ತರಹದ ಬಾಜುರಿಗಳನ್ನು ಧರಿಸುತ್ತಾರೆ. ಅವು ಅಂಚುಗಳಿದ್ದ ಅಂಗಿಗಳಂತಿರುತ್ತವೆ ; ಮತ್ತು ತಲೆಯ ಮೇಲೆ ಕುಲ್ಯಾಸ್ ಎಂದು ಕರೆಯುವ ಮಖಮಲ್ಲಿನ ಟೊಪ್ಪಿಗೆಗಳನ್ನು ಧರಿಸುತ್ತಾರೆ. ಇವುಗಳಲ್ಲೊಂದು ಸುಮಾರು ಇಪ್ಪತ್ತು ಕ್ರುಜೆಡೊಗಳಷ್ಟು ಬೆಲೆಯುಳ್ಳದಿದ್ದೆ. ಅವನು ಅದನ್ನು ತಲೆಯ ಮೇಲಿಂದ ಎತ್ತಿದ ಮೇಲೆ ಅದನ್ನು ಪುನಃ ಎಂದೂ ಧರಿಸುವುದಿಲ್ಲ.

ಈ ರಾಜ್ಯದಲ್ಲಿ ನೀಡಲಾಗುವ ಶಿಕ್ಷೆಗಳೆಂದರೆ : ಇವು ಕಳ್ಳನಿಗೆ, ಅವನು ಯಾವುದೆ ಕಳವು ಮಾಡಿರಲಿ, ಅದು ಎಷ್ಟೇ ಅಲ್ಪವಿರಲಿ, ಕೂಡಲೆ ಅವನ ಒಂದು ಕಾಲನ್ನು ಮತ್ತು ಒಂದು ಕೈಯನ್ನು ಕತ್ತರಿಸಲಾಗುತ್ತದೆ, ಮತ್ತು ಕಳವು ದೊಡ್ಡದಿದ್ದರೆ ಅವನನ್ನು ಗದ್ದದ ಕೆಳಗೆ ಕೊಕ್ಕೆ ಸಿಕ್ಕಿಸಿ ಗಲ್ಲಿಗೇರಿಸಲಾಗುತ್ತದೆ. ಯಾವನೊಬ್ಬ ಮನುಷ್ಯ ಗೌರವಾರ್ಹ ಸ್ತ್ರೀ ಅಥವಾ ಕನ್ಯೆಯ ಮೇಲೆ ಅತ್ಯಾಚಾರ ಮಾಡಿದರೆ ಅದೇ ಶಿಕ್ಷೆ ವಿಧಿಸಲಾಗುತ್ತದೆ. ಅವನು ಇಂಥ ಯಾವುದೇ ಹಿಂಸೆ ಮಾಡಿದರೆ ಅದೇ ಶಿಕ್ಷೆ ತರಹದ್ದಾಗಿರುತ್ತದೆ.  ದ್ರೋಹಿಗಳಾದ  ಮನ್ನೆಯವರನ್ನು  ಹೊಟ್ಟೆಯೊಳಗೆ ತಳ್ಳಿದ ಕಟ್ಟಿಗೆಯ ಕಂಬದ ಮೇಲೆ ಸಜೀವವಾಗಿ ಶೂಲಕ್ಕೇರಿಸಲು ಕಳಿಸಲಾಗುತ್ತದೆ. ಕೆಳವರ್ಗದ ಜನರಿಗಾದರೊ, ಅವರು ಯಾವುದೆ ಅಪರಾಧ ಮಾಡಿರಲಿ, ಅವನು ತಕ್ಷಣ ಪೇಟೆಯಲ್ಲಿ ಅವರ ತಲೆ ಕಡಿಯಲು ಆಜ್ಞಾಪಿಸುತ್ತಾನೆ, ಮತ್ತು ಮರಣ ದ್ವಂದ್ವಯುದ್ಧದ ಪರಿಣಾಮವಾಗಿರದಿದ್ದರೆ ಕೊಲೆಗೂ ಅದೇ ಶಿಕ್ಷೆ. ಏಕೆಂದರೆ, ದ್ವಂದ್ವ ಯುದ್ಧದಲ್ಲಿ ಕಾದುವವರಿಗೆ ಬಹಳ ಗೌರವ ನೀಡಲಾಗುತ್ತದೆ, ಮತ್ತು ಸತ್ತವನ ಆಸ್ತಿಯನ್ನು ಬದುಕುಳಿದವನಿಗೆ ಕೊಡಲಾಗುತ್ತದೆ; ಆದರೆ, ಮಂತ್ರಿಯ ಅನುಮತಿ ಯಿಲ್ಲದೆ ಯಾರೂ ದ್ವಂದ್ವಯುದ್ಧ ಮಾಡುವಂತಿಲ್ಲ. ಅವನು ಅದನ್ನು ತಕ್ಷಣ ನೀಡುತ್ತಾನೆ. ಇವು ಸಾಮಾನ್ಯ ತರಹದ ಶಿಕ್ಷೆಗಳು. ಆದರೆ ಹೆಚ್ಚು ವಿಚಿತ್ರವಾದ ಬೇರೆಯವೂ ಉಂಟು. ಏಕೆಂದರೆ, ರಾಜನಿಗೆ ಹಾಗೆ ಮನಸ್ಸಾದರೆ ಮನುಷ್ಯನನ್ನು ಆನೆಗಳ ಮುಂದೆ ಎಸೆಯುವಂತೆ ಆಜ್ಞಾಪಿಸುತ್ತಾನೆ ಮತ್ತು ಅವು ಅವನನ್ನು ತುಂಡುತುಂಡಾಗಿ ಸಿಗಿದುಹಾಕುತ್ತವೆ. ಜನರು ಅವನಿಗೆ ಎಷ್ಟೊಂದು ವಿಧೇಯರಾಗಿರುವರೆಂದರೆ ತನ್ನ ಬೆನ್ನ ಮೇಲೆ ಕಲ್ಲು ಹೊತ್ತು ಇಡಿ ದಿನ ರಸ್ತೆಯಲ್ಲಿ ನೀವು ಮುಕ್ತಗೊಳಿಸುವವರೆಗೆ ನಿಲ್ಲಲು ಯಾರಿಗಾದರೂ ನೀವು ರಾಜನ ಪರವಾಗಿ ಹೇಳಿದರೆ, ಅವನು ಹಾಗೆಯೆ ಮಾಡುವನು.

ರಾಜ್ಯದಲ್ಲಿ ಉದ್ಯುಕ್ತರಾದ ರಾಜನ ಅಧಿಕಾರಿಗಳು ಇವರು : ಮೊದಲು ರಾಜ್ಯದ ಮಂತ್ರಿ. ಅವನು ಅದರಲ್ಲಿ ಎರಡನೆಯ ವ್ಯಕ್ತಿ, ನಂತರ ರಾಜನ ಸ್ವಂತ ಭೂಮಿಯ[5] ಗುಮಾಸ್ತರೊಂದಿಗೆ ಭಂಡಾರಿ, ಪ್ರಧಾನ ಭಂಡಾರಿ ಮತ್ತು ಅರಮನೆ ರಕ್ಷಕದಳಪತಿ, ರತ್ನಭಂಡಾರಿ, ಪ್ರಧಾನ ಅಶ್ವಪತಿ. ರಾಜನಲ್ಲಿ ಕಂದಾಯಗಳ ನಿಯಂತ್ರಕನಾಗಲಿ ಬೇರೆ ಅಧಿಕಾರಿಗಳಾಗಲಿ ಅಥವಾ ಅವನ ಮನೆಯ ಅಧಿಕಾರಿಗಳಾಗಲಿ ಇಲ್ಲ, ಆದರೆ ಅವನ ರಾಜ್ಯದ ದಳವಾಯಿಗಳು ಮಾತ್ರ ಇರುವರು. ಅವರಲ್ಲಿ ನಾನಿಲ್ಲಿ ಕೆಲವರನ್ನು, ಅವರು ಹೊಂದಿರುವ ಆದಾಯಗಳನ್ನು ಮತ್ತು ಅವರು ಪ್ರಭುಗಳಾಗಿದ್ದ ಪ್ರದೇಶವನ್ನು ಉಲ್ಲೇಖಿಸುವೆ.

ಮೊದಲಿಗೆ ಪ್ರಸ್ತುತ ಮಂತ್ರಿ ಸಾಳ್ವನಾಯಕ್. ಅವನಿಗೆ ಹನ್ನೊಂದು ಲಕ್ಷ ಸುವರ್ಣ ಪರ್ದಾಒಗಳ ಆದಾಯವಿದೆ. ಅವನು ಚಾರಮಾಒಡೆಲ್ ನಾಗಪಟಾವ್, ತಂಗೋರ್, ಮತ್ತು ಬೊಂಗಾರಿನ್, ದಪಟಾವ್, ತ್ರುಗುಎಲ್, ಮತ್ತು ಕಾಲಿಮ್‌ಗಳ ದೊರೆ ಮತ್ತು ಇವೆಲ್ಲ ನಗರಗಳು. ಅವುಗಳ ಪ್ರದೇಶವೆಲ್ಲ ವಿಶಾಲವಾದುದು, ಮತ್ತು ಅವುಗಳು ಸಿಲೋನಿನ ಗಡಿಯಲ್ಲಿವೆ.[6] ಈ ಹಣದಲ್ಲಿ ಒಂದು ಮೂರಾಂಶವನ್ನು ಅವನು ರಾಜನಿಗೆ ಕೊಡಬೇಕು. ಎರಡು ಮೂರಾಂಶ ಅವನು ರಾಜನಿಗಾಗಿ ಸಲಹಲೇಬೇಕಾದ ಲಷ್ಕರಿಗಳು ಮತ್ತು ಕುದುರೆಗಳ-ಮೂವತ್ತು ಸಾವಿರ ಕಾಲಾಳು ಮತ್ತು ಮೂರು ಸಾವಿರ ಕುದುರೆಗಳು ಮತ್ತು ಮೂವತ್ತು ಆನೆಗಳು-ಖರ್ಚಿಗಾಗಿ ಅವನಲ್ಲಿ ಉಳಿಯುತ್ತೆ. ಅಂದರೆ, ಈ ಪಡೆಯ ಖರ್ಚು ಕಳೆದ ನಂತರ ಉಳಿಯುವ ಶೇಷವನ್ನು ಅವನು ಪಡೆಯುತ್ತಾನೆ. ಆದರೆ, ಈ ರೀತಿಯಲ್ಲಿ ಅವನು ಬಹಳ ಸಂಪತ್ತು ಗಳಿಸುತ್ತಾನೆ. ಏಕೆಂದರೆ, ಅವನು ಎಂದೂ ಪೂರ್ಣ ಪಡೆಯನ್ನು ಸಲಹುವುದಿಲ್ಲ. ರಾಜ, ತನಗೆ ಇಷ್ಟಬಂದಾಗ, ಈ ಮನ್ನೆಯರ ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತಾನೆ.

ಕ್ರಿಸ್ನರಾವ್‌ನ ಮಂತ್ರಿಯಾಗಿದ್ದ ಇನ್ನೊಬ್ಬ ದಳವಾಯಿ, ಅಜಪರ್ಕಟಿಮಪನಿಗೆ ಎಂಟುನೂರು ಸಾವಿರ ಸುವರ್ಣ ಪರ್ದಾಒಗಳ ಆದಾಯವಿದೆ. ಅವನು ಹುಡೊಗರಿ[7], ಕೊಂಡ್ರೊವಿಮ್[8], ಮತ್ತು ಪೆನಗುಂಡಿಮ್[9] ನಗರದ ಮತ್ತು ಸಿದೌಟದ[10], ಕೊದೆಗರಲ್‌ದ[11] ದೊರೆ. ಇವೆಲ್ಲ ದೊಡ್ಡ ನಗರಗಳು ಒರಿಯಾ ರಾಜ್ಯದ ಗಡಿಯಲ್ಲಿವೆ, ಮತ್ತು ಕೆಲವು ಕೇಪ್ ಕೊಮೊರಿನ್ ಗಡಿಯಲ್ಲಿವೆ. ಈ ಪ್ರದೇಶಗಳನ್ನು ಕ್ರಿಸ್ನರಾವ್ ಅವನಿಗೆ ಅವನನ್ನು ಮಂತ್ರಿಯನ್ನಾಗಿ ನೇಮಿಸಿದಾಗ ಮತ್ತು ಅವುಗಳ ಒಡೆಯನಾಗಿದ್ದ ತನ್ನ ಮಂತ್ರಿಯಾಗಿದ್ದ ಸಾಲ್ವಟಿನಿಕನ ಕಣ್ಣು ಕೀಳಿಸಿದಾಗ ಕೊಟ್ಟನು. ಅವನು ಇಪ್ಪತ್ತೈದು ಸಾವಿರ ಕಾಲಾಳು, ಹದಿನೈದು ಸಾವಿರ ಕುದುರೆ, ಮತ್ತು ನಲವತ್ತು ಆನೆಗಳೊಂದಿಗೆ ಸೇವೆ ಮಾಡಬೇಕು, ಮತ್ತು ಪ್ರತಿವರ್ಷ ರಾಜನಿಗೆ ಮುನ್ನೂರು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ.

ಗಪನಾಯಿಕ್ ಎಂದು ಕರೆಯಲಾಗುವ ಇನ್ನೊಬ್ಬ ದಳವಾಯಿ ಈ ಪ್ರದೇಶಗಳ ಅರ್ಥಾತ್ ರೊಸಿಲ್,[12] ತಿಪಾರ್, ತಿಕಾಲೊ, ಮತ್ತು ಬಿಗೊಲೊಮ್[13]ಗಳ ದೊರೆಯಾಗಿರುವನು. ಈ ಪ್ರದೇಶಗಳು ಇಡಲ್‌ಕಾವ್‌ನ ಪ್ರದೇಶಕ್ಕೆ ಹೊಂದಿಕೊಂಡು ಸಾಗುತ್ತವೆ.  ಇವೆಲ್ಲವುಗಳಲ್ಲಿ ವಿಫುಲ ಗೋದಿ ಮತ್ತು ಕಾಳುಕಡ್ಡಿ, ದನಕರು, ಆಡುಗಳು ಮತ್ತು ಎಳ್ಳು ಮತ್ತು ಹತ್ತಿ ಇದೆ. ಕೊನೆಯದರಿಂದ ಅತ್ಯುತ್ತಮ ಬಟ್ಟೆ ಮಾಡಲಾಗುತ್ತದೆ. ಏಕೆಂದರೆ, ಎಲ್ಲ ಉತ್ಪಾದಿತ ಬಟ್ಟೆಯೂ ಅದರಿಂದಲೆ ಮಾಡಲಾಗಿರುತ್ತದೆ. ಈ ಪ್ರದೇಶಗಳಿಂದ ಅವನಿಗೆ ಆರುನೂರು ಸಾವಿರ ಪರ್ದಾಒಗಳ ಆದಾಯವಿದೆ. ಅವನು ಎರಡು ಸಾವಿರ ಐನೂರು ಕುದುರೆ, ಇಪ್ಪತ್ತು ಸಾವಿರ ಕಾಲಾಳು, ಮತ್ತು ಇಪ್ಪತ್ತು ಆನೆಗಳನ್ನು ಪೂರೈಸಬೇಕು, ಮತ್ತು ಪ್ರತಿವರ್ಷ ರಾಜನಿಗೆ ನೂರೈವತ್ತು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ. ಬೀಜಮಡಿಗಳು ಮತ್ತು ದನಸಂತಾನಾಭಿವೃದ್ದಿ ಹೊಲಗಳಿಂದ ಬಲು ಶ್ರೀಮಂತವಾದ ಪ್ರದೇಶವಾಗಿರುವ ವಿಂಗಾಪೊರದ[14] ದೊರೆಯಾಗಿರುವ ಇನ್ನೊಬ್ಬ ದಳವಾಯಿ ಲೆಪಪಾಯಿಕ್ ಎಂಬವನಿಗೆ ಮುನ್ನೂರು ಸಾವಿರ ಪರ್ದಾಒಗಳ ಆದಾಯವಿದೆ. ಅವನು ಹನ್ನೆರಡುನೂರು ಕುದುರೆ, ಇಪ್ಪತ್ತು ಸಾವಿರ ಕಾಲಾಳು ಮತ್ತು ಇಪ್ಪತ್ತೆಂಟು ಆನೆಗಳನ್ನು ಪೂರೈಸಬೇಕು, ಮತ್ತು ಅವನು ಪ್ರತಿವರ್ಷ ರಾಜನಿಗೆ ಎಂಬತ್ತು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ.

ನರ್ವರ ಎಂದು ಕರೆಯಲ್ಪಡುವ ರತ್ನಗಳ ಬಂಢಾರಿ ಒಂದೆಗೆಯು[15] ಎಂದು ಕರೆಯಲಾಗುವ ಹೊಸ ನಗರದ ದಳವಾಯಿ ಆಗಿರುವನು, ಮತ್ತು ದಿಗುಒಟಿ, ದಾರ್ಗುಎಮ್ ಮತ್ತು ಎಂಟರೆಮ್[16] ನಗರಗಳ ಮತ್ತು ಬಿಸ್ನಗದ ಭೂಮಿಗಳ ಗಡಿಯಲ್ಲಿರುವ ಇತರ ಭೂಮಿಗಳ ದೊರೆ ಆಗಿರುವನು; ಅವು ಎಲ್ಲ ಹೊಲಗಳು. ಅವು ಅವನಿಗೆ ಪ್ರತಿವರ್ಷ ನಾನೂರು ಸಾವಿರ ಪರ್ದಾಒಗಳನ್ನು ನೀಡುತ್ತದೆ. ಅದರಲ್ಲಿ ಎರಡುನೂರು ಸಾವಿರವನ್ನು ರಾಜನಿಗೆ ಕೊಡುತ್ತಾನೆ ಮತ್ತು ಮಿಕ್ಕಿದ್ದನ್ನು ಹನ್ನೆರಡು ಸಾವಿರ ಕಾಲಾಳುಗಳು ಮತ್ತು ಆರುನೂರು ಕುದುರೆ ಮತ್ತು ಇಪ್ಪತ್ತು ಆನೆಗಳ ಮೇಲೆ ಖರ್ಚು ಮಾಡುತ್ತಾನೆ.

ರಾಜನ ದಂಡನಾಯಕನಾದ ಚಿನಪನಾಯಿಕ್ ಎನ್ನುವ ಇನ್ನೊಬ್ಬ ದಳವಾಯಿ ಮುನ್ನೂರು ಸಾವಿರ ಪರ್ದಾಒಗಳನ್ನು ನೀಡುವ ಒಳನಾಡಿನಲ್ಲಿ ಕೊಚಿಮ್‌ದ ದಿಕ್ಕಿನಲ್ಲಿರುವ ಕಳಲಿಯ[17] ಪ್ರದೇಶ ಹಾಗೂ ಇನ್ನೂ ಅನೇಕ ಪ್ರದೇಶಗಳ ದೊರೆ ಆಗಿರುವನು; ಅವನು  ರಾಜನಿಗೆ ಪ್ರತಿ ವರ್ಷ ಒಂದುನೂರು ಸಾವಿರ ಪರ್ದಾಒಗಳನ್ನು ಕೊಡಲು ಬಾಧ್ಯಸ್ಥನು ಮತ್ತು ಎಂಟುನೂರು ಕುದುರೆ ಮತ್ತು ಹತ್ತು ಸಾವಿರ ಕಾಲಾಳುಗಳೊಂದಿಗೆ ಸೇವೆ ಸಲ್ಲಿಸುತ್ತಾನೆ.

ಕ್ರಿಸ್ನಪನಾಯಿಕ್ ದೊಡ್ಡ ನಗರದವಾದ ಆಒಸೆಲ್[18] ಮತ್ತು ಅವುಗಳ ಹೆಸರುಗಳು ಕಠಿಣವಾದುದರಿಂದ ನಾನಿಲ್ಲಿ ಹೇಳಿರದ ಇತರ ಗ್ರಾಮಗಳ ದೊರೆ ಆಗಿರುವನು. ಈ ಪ್ರದೇಶಗಳು ಅವನಿಗೆ ಪ್ರತಿವರ್ಷ ಇಪ್ಪತ್ತು ಸಾವಿರ ಸುವರ್ಣ ಪರ್ದಾಒಗಳನ್ನು ನೀಡುತ್ತವೆ. ಅವನು ರಾಜನಿಗೆ ಏಳು ಸಾವಿರ ಪರ್ದಾಒಗಳ ವಾರ್ಷಿಕ ಕಂದಾಯ ಸಲ್ಲಿಸುತ್ತಾನೆ, ಮತ್ತು ಐನೂರು ಕುದುರೆ ಮತ್ತು ಏಳುನೂರು ಕಾಲಾಳುಗಳೊಂದಿಗೆ ಸೇವೆ ಸಲ್ಲಿಸುತ್ತಾನೆ.

ಸಮುದ್ರ ಕರಾವಳಿಯಲ್ಲಿರುವ ಮಂಗಳೂರಿನ ಗಡಿಯಲ್ಲಿರುವ ಬೋದಿಯಾಲ್[19] ಪ್ರದೇಶದ ದಳವಾಯಿಯಾದ ಬಜಪನಾರ್ಕನೂ ಕೂಡ ಅವನು ಗಿಯಾನ[20]ದ ದೊರೆಯೂ ಅಹುದು. ಈ ಪ್ರದೇಶದಲ್ಲಿ ಮೆಣಸು, ಕಬ್ಬು ಮತ್ತು (ನಾರಿ[21]) ಬಟ್ಟೆ ಮತ್ತು ಭತ್ತ ವಿಫುಲವಾಗಿವೆ; ಆದರೆ, ಗೋದಿ, ಇತರ ಬಟ್ಟೆ ಇಲ್ಲ, ಮತ್ತು ಅದು ಮೇಣದ ನಾಡು. ಅದು ಅವನಿಗೆ ಪ್ರತಿವರ್ಷ ಮುನ್ನೂರು ಸಾವಿರ ಪರ್ದಾಒಗಳನ್ನು ಕೊಡುತ್ತದೆ. ಅವನು ಎಂಟುನೂರು ಅಶ್ವಾಳು ಮತ್ತು ಹತ್ತುಸಾವಿರ ಕಾಲಾಳು ಮತ್ತು ಹದಿನೈದು ಆನೆಗಳೊಂದಿಗೆ ಸೇವೆ ಮಾಡುತ್ತಾನೆ. ಅವನು ರಾಜನಿಗೆ ಹತ್ತು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ.

ರಾಜಾ ಕ್ರಿಸ್ನರಾವ್‌ನ ಪ್ರಧಾನ ಅಶ್ವಪತಿಯಾಗಿದ್ದ ಮಲಪನಾರ್ಕ್, ಕಾಲೆಕು[22]ದ ಒಳನಾಡಿನಲ್ಲಿರುವ ಅವಳಿ[23] ಪ್ರದೇಶದ ದೊರೆಯಾಗಿರುವನು. ಈ ನಾಡಿನಲ್ಲಿ ಕಬ್ಬಿಣ ಮತ್ತು ಹತ್ತಿ, ಭತ್ತ, ಆಡುಗಳು, ಕುರಿಗಳು, ಆಕಳುಗಳು ಮತ್ತು ಎಮ್ಮೆಗಳು ವಿಫುಲವಾಗಿವೆ. ಅವನಿಗೆ ಹದಿನೈದು ಸಾವಿರ ಪರ್ದಒಗಳ ಆದಾಯವಿದೆ. ನಾನೂರು ಕುದುರೆ ಮತ್ತು ಆರು ಸಾವಿರ ಕಾಲಾಳುಗಳೊಂದಿಗೆ ಸೇವೆ ಮಾಡಲು ಅವನು ಬಾಧ್ಯಸ್ಥನು. ಮತ್ತು ರಾಜನಿಗೆ ಪ್ರತಿವರ್ಷ ಐದು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ.

ರಾಜನನ ಪ್ರಧಾನ ಸಲಹೆಗಾರನಾದ ಅದಪನಾಯಿಕ್ ಎಂಬ ಇನ್ನೊಬ್ಬ ದಳವಾಯಿ ವಜ್ರಗಳು ಬರುವ ಗಾಟೆ[24] ನಾಡಿನ ಮತ್ತು ಇನ್ನೂ ಅನೇಕ ಪ್ರದೇಶಗಳ ದೊರೆಯಾಗಿರುವನು.  ಅವು ಅವನಿಗೆ ಮುನ್ನೂರು ಸಾವಿರ ಬಂಗಾರದ ಪರ್ದಾಒಗಳನ್ನು ನೀಡುತ್ತವೆ. ಇದರಲ್ಲಿ ತಾವೇ ಪ್ರತ್ಯೇಕ ಆದಾಯವಾಗಿರುವ ಬೆಲೆಯುಳ್ಳ ಹರಳುಗಳು ಸೇರಿಲ್ಲ. ಇಪ್ಪತ್ತು ಮ್ಯಾಂಗೆಲಿನ್[25]ಗಿಂತ ಹೆಚ್ಚು ತೂಕವುಳ್ಳ ಎಲ್ಲ ವಜ್ರಗಳನ್ನು ರಾಜನಿಗೆ ಅವನ ಭಂಡಾರಕ್ಕಾಗಿ ಕೊಡುವ ಕರಾರಿಗೊಳಪಟ್ಟು ಅವನು ಪ್ರತಿವರ್ಷ ರಾಜನಿಗೆ ನಲವತ್ತು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ. ಅವನು ಎಂಟುಸಾವಿರ ಕಾಲಾಳು, ಎಂಟುನೂರು ಕುದುರೆಗಳು ಮತ್ತು ಮೂವತ್ತು ಆನೆಗಳೊಂದಿಗೆ ಸೇವೆ ಮಾಡುತ್ತಾನೆ, ಮತ್ತು ಪ್ರತಿವರ್ಷ ರಾಜನಿಗೆ ಒಂದುನೂರು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ.

ಇನ್ನೊಬ್ಬ ಬಪಜನಾಯಿಕ್ ಮುಮ್‌ದೊಗುಎಲ್‌ನ[26] ದಳವಾಯಿಯಾಗಿರುವನು, ಅದು ಇಡೆಲ್‌ಕಾವ್‌ನ ದುರ್ಗವಾಗಿತ್ತು ಮತ್ತು ಅದರ ಗಡಿಯಾಗಿದ್ದ ರಾಚೊಲ್[27] ಅನ್ನು ಕ್ರಿಸ್ನರಾವ್ ವಶಪಡಿಸಿಕೊಂಡಾಗ ಅವನಿಂದ ಕಿತ್ತುಕೊಳ್ಳಲಾಗಿತ್ತು.  ಈ ಮುಮ್‌ದೊಗುಎಲ್ ದುರ್ಗ ಇತರ ಪ್ರದೇಶಗಳೊಂದಿಗೆ ಅವನಿಗೆ ನಾನೂರು ಸಾವಿರ ಪರ್ದಾಒಗಳನ್ನು ಕೊಡುತ್ತದೆ. ಅವನು ಒಂದು ಸಾವಿರ ಕುದುರೆ, ಹತ್ತು ಸಾವಿರ ಕಾಲಾಳು ಮತ್ತು ಐವತ್ತು ಆನೆಗಳೊಂದಿಗೆ ಸೇವೆ ಸಲ್ಲಿಸುತ್ತಾನೆ, ಮತ್ತು ರಾಜನಿಗೆ ಪ್ರತಿವರ್ಷ ನೂರೈವತ್ತು ಸಾವಿರ ಪರ್ದಾಒಗಳನ್ನು ಕೊಡುತ್ತಾನೆ.

ಈ ರೀತಿ ಬಿಸ್ನಗ ರಾಜ್ಯವನ್ನು ಎಲ್ಲರೂ ವಿಧರ್ಮೀಯರಾಗಿರುವ[28] ಇನ್ನೂರಕ್ಕೂ ಹೆಚ್ಚು ದಳವಾಯಿಗಳಲ್ಲಿ ವಿಭಜಿಸಲಾಗಿದೆ. ಅವರು ಹೊಂದಿರುವ ಪ್ರದೇಶ ಮತ್ತು ಆದಾಯವನ್ನನುಸರಿಸಿ ರಾಜ ಅವರು ಇಟ್ಟುಕೊಳ್ಳಬೇಕಾದ  ಪಡೆಗಳನ್ನು ಮತ್ತು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನ ಮೊದಲ ಒಂಬತ್ತು ದಿನಗಳಲ್ಲಿ ಅವರು ಅವನಿಗೆ ಎಷ್ಟು ಧನ ಕೊಡಬೇಕು ಎಂಬುದನ್ನು ನಿರ್ಧರಿಸುತ್ತಾನೆ. ಅವನು ಅವರಿಗೆ ಎಂದೂ ರಸೀದಿ ಕೊಡುವುದಿಲ್ಲ. ಆದರೆ, ಅವರು ಕೊಡದಿದ್ದರೆ ಮಾತ್ರ ಅವರನ್ನು ಚನ್ನಾಗಿ ಶಿಕ್ಷಿಸಲಾಗುತ್ತದೆ, ನಾಶಮಾಡಲಾಗುತ್ತದೆ. ಮತ್ತು ಅವರ ಆಸ್ತಿಯನ್ನು ಕಿತ್ತುಕೊಳ್ಳಲಾಗುತ್ತದೆ. ಈ ರಾಜ್ಯದ ಎಲ್ಲಾ ದಳವಾಯಿಗಳು ಮೇಣೆಗಳ ಮತ್ತು ಪಲ್ಲಕ್ಕಿಗಳನ್ನು ಉಪಯೋಗಿಸುತ್ತಾರೆ. ಅವು ಚಟ್ಟಗಳಂತಿರುತ್ತವೆ ಮತ್ತು ಜನರು ಅವುಗಳನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ಯುತ್ತಾರೆ. ಆದರೆ, ಜನರಿಗೆ, ಅವರು ಅತ್ಯುನ್ನತ ದರ್ಜೆಯ ಅಶ್ವಾಳುಗಳಾಗಿರದ ಹೊರತು ಮೇಣೆಗಳನ್ನು ಬಳಸಲು ಅನುಮತಿ ಕೊಡಲಾಗುವುದಿಲ್ಲ. ದಳವಾಯಿಗಳು ಮತ್ತು ಪ್ರಮುಖ ವ್ಯಕ್ತಿಗಳು ಪಲ್ಲಕ್ಕಿಗಳನ್ನು ಬಳಸುತ್ತಾರೆ. ರಾಜನಿರುವ ಆಸ್ಥಾನದಲ್ಲಿ ಯಾವಾಗಲೂ ಇಪ್ಪತ್ತು ಸಾವಿರ ಮೇಣೆಗಳು ಮತ್ತು ಪಲ್ಲಕ್ಕಿಗಳು ಇರುತ್ತವೆ.

ಬಿಸ್ನದ ರಾಜ್ಯದ ಈ ಸಂಗತಿಗಳು (ಅಂದರೆ, ಅದರ ಶಕ್ತಿ ಮತ್ತು ವ್ಯಾಪ್ತಿಯ) ಬಗೆಗೆ ನಾನು ಅತಿಶಯೋಕ್ತಿ ಮಾಡಿರುವೆನೆಂದು ನಿಮಗನಿಸಿದರೂ ಸಹ ಹಿಂದಿನ ಕಾಲದಲ್ಲಿ ಅವು ಹೆಚ್ಚು ಗಮನಾರ್ಹವಾಗಿದ್ದವು ಮತ್ತು ಈಗಿನಕ್ಕಿಂತ ದೊಡ್ಡದಾಗಿದ್ದವು ಎಂದು ಈ ನಾಡಿನ ಜನ ಒತ್ತಿ ಹೇಳುತ್ತಾರೆ.

ಈ ಬಿಸ್ನಗ ರಾಜ್ಯದಲ್ಲಿ ನಾಡಿಗರೆ ಆದ ಬ್ರಾಹ್ಮಣರು ಎಂಬ ಒಂದು ವರ್ಗದ ಜನ ಇದ್ದಾರೆ. ಅವರಲ್ಲಿ ಬಹುತೇಕರು ಜೀವಂತವಾಗಿರುವುದಾವುದನ್ನು ಎಂದೂ ಕೊಲ್ಲುವುದಿಲ್ಲ ಮತ್ತು ತಿನ್ನುವುದಿಲ್ಲ, ಮತ್ತು ಇವರು ಅವರಲ್ಲಿಯೆ ಅತ್ಯುತ್ತಮರಾದವರು. ಅವರು ಪ್ರಾಮಾಣಿಕ ಜನ, ವ್ಯಾಪಾರ ಮಾಡುವವರು, ಬಹಳ ತೀಕ್ಷ್ಣರು ಹಾಗೂ ಬಹು ಪ್ರತಿಭೆಯುಳ್ಳವರು. ಲೆಕ್ಕಪತ್ರದಲ್ಲಿ ನಿಷ್ಣಾತರು, ತೆಳುದೇಹದವರು ಮತ್ತು ಒಳ್ಳೆಯ ರೂಪವುಳ್ಳವರು, ಆದರೆ ಶ್ರಮದ ಕೆಲಸಕ್ಕೆ ಯೋಗ್ಯರಲ್ಲದವರು. ಇವರಿಂದ ಮತ್ತು ಅವರು ಕೈಗೊಳ್ಳುವ ಕರ್ತವ್ಯಗಳಿಂದ ರಾಜ್ಯ ನಡೆಯುತ್ತದೆ. ಮೂರು ಮೂರ್ತಿಗಳು ಮತ್ತು ಒಬ್ಬನೇ ಒಬ್ಬ ದೇವರು ಇದ್ದಾರೆಂದು ಅವರು ನಂಬುತ್ತಾರೆ ಮತ್ತು ಪವಿತ್ರ ತ್ರಿಮೂರ್ತಿಯ ಮೂರ್ತಿಗಳನ್ನು ಅವರು “ಘ್ರಿಸೆಬೆಂಕ” ಎಂದು ಕರೆಯುತ್ತಾರೆ. ಕನ್ನಡದವರಾದ ಇನ್ನೊಂದು ವರ್ಗವಿದೆ. ಅವರ ದೇವಾಲಯಗಳಲ್ಲಿ ಮಂಗಗಳು, ಆಕಳುಗಳು, ಎಮ್ಮೆಗಳು, ಮತ್ತು ರಾಕ್ಷಸರು (ವಿಗ್ರಹಗಳು) ಇರುತ್ತವೆ. ಅವುಗಳಿಗೆ ಅವರು ಬಹಳ ಭಕ್ತಿ ತೋರುತ್ತಾರೆ. ಅವರು ಪೂಜಿಸುವ ಈ ಮೂರ್ತಿಗಳು ಮತ್ತು ಮಂಗಗಳಿಗೆ ಹಿಂದಿನ ಕಾಲದಲ್ಲಿ ಈ ನಾಡೆಲ್ಲ ಸೇರಿತ್ತು ಮತ್ತು ಅಂದಿನ ಕಾಲದಲ್ಲಿ ಅವು ಮಾತನಾಡಬಲ್ಲವಾಗಿದ್ದವು ಎಂದು ಅವರು ಹೇಳುತ್ತಾರೆ. ಶೌರ್ಯದ ಒಳ್ಳೆಯ ಕತೆಗಳಿಂದ ತಮ್ಮ ದೇವರ ಬಗೆಗಿನ ನಂಬಲು ಕಷ್ಟವಾಗುವಂತಹ ಮೂರ್ಖ ಕತೆಗಳಿಂದ ತುಂಬಿದ ಗ್ರಂಥಗಳು ಅವರಲ್ಲಿವೆ. ಆದರೆ, ಈ ಕಾರಣದಿಂದಾಗಿ ಬಿಸ್ನಗ ರಾಜ್ಯದಲ್ಲಾಗಲಿ ವಿಧರ್ಮಿಗಳ ನಾಡಿನಲ್ಲಿ ಎಲ್ಲಿಯೆ ಆಗಲಿ ಮಂಗಗಳನ್ನು ಕೊಲ್ಲುವುದಿಲ್ಲ, ಮತ್ತು ಈ ನಾಡಿನಲ್ಲಿ ಅವು ಎಷ್ಟಿವೆಯೆಂದರೆ ಅವುಗಳಿಂದ ಬೆಟ್ಟಗಳು ಮುಚ್ಚಿವೆ. ತೆಲುಂಗಲ್ಲೆ[29] ಎಂಬ ಇನ್ನೊಂದು ವರ್ಗದ ಜನರಿದ್ದಾರೆ. ಇವರು ಸತ್ತಾಗ ಅವರ ಹೆಂಡಂದಿರನ್ನು ಅವರೊಂದಿಗೆ ಸಜೀವವಾಗಿ ದಫನ ಮಾಡಲಾಗುತ್ತದೆ.

ಬಿಸ್ನಗದ ರಾಜ ಬ್ರಾಹ್ಮಣನಾಗಿದ್ದಾನೆ.[30] ಮದುವೆಯಾಗದ ಮತ್ತು ಎಂದೂ ಸ್ತ್ರೀಯನ್ನು ಸ್ಪರ್ಶಿಸಿರದ ಬ್ರಾಹ್ಮಣ ಪಂಡಿತನಿಂದ ಅವನು ದಿನಾಲು ಮತೋಪದೇಶವನ್ನು ಆಲಿಸುತ್ತಾನೆ. ಅವನು ತನ್ನ ಮತೋಪದೇಶದಲ್ಲಿ ದೇವನ ಕಟ್ಟಳೆಗಳನ್ನು, ಅಂದರೆ ಯಾವುದೇ ಜೀವವನ್ನು ಕೊಲ್ಲಬಾರದು, ಇನ್ನೊಬ್ಬನಿಗೆ ಸೇರಿದ್ದನ್ನು ಕಸಿದುಕೊಳ್ಳಬಾರದು ಮತ್ತು ಇವುಗಳಂತೆಯೆ ಇತರ ಕಟ್ಟಳೆಗಳನ್ನು (ಪಾಲಿಸಲು) ಪ್ರೇರೇಪಿಸುತ್ತಾನೆ. ಈ ಜನ ಆಕಳುಗಳಿಗೆ ಎಷ್ಟೊಂದು ಭಕ್ತಿ ಹೊಂದಿರುವರೆಂದರೆ ಅವರು ದಿನಾಲು ಅವುಗಳನ್ನು, ಕೆಲವರು ಪೃಷ್ಠದ ಮೇಲೆಂದು ಹೇಳಲಾಗುತ್ತದೆ. ಅವರ ಮರ್ಯಾದೆಗಾಗಿ – ಈ ಸಂಗತಿಯನ್ನು ಒತ್ತಿ ಹೇಳುವುದಿಲ್ಲ-ಚುಂಬಿಸುತ್ತಾರೆ. ಈ ಆಕಳುಗಳ ಸಗಣಿಯಿಂದ, ಪವಿತ್ರ ಜಲದಿಂದಲೆಂಬಂತೆ, ಅವರು ತಮ್ಮ ಪಾಪಗಳನ್ನು ಮಾರ್ಜನ ಮಾಡಿಕೊಳ್ಳುತ್ತಾರೆ. ಬ್ರಾಹ್ಮಣ ಪುರೋಹಿತರಿಗೆ ತಮ್ಮ ಪಾಪಗಳನ್ನು ನಿವೇದಿಸಬೇಕೆಂಬ ಕಟ್ಟಳೆಯೊಂದಿದೆ ಆದರೆ, ಅತಿ ಧಾರ್ಮಿಕರಾದವರನ್ನುಳಿದು ಅವರು ಹಾಗೆ ಮಾಡುವುದಿಲ್ಲ. ಇನ್ನೊಬ್ಬನ ಮುಂದೆ ಪಾಪ ನಿವೇದನೆ ಮಾಡಲು ನಾಚಿಕೆಯಾಗುತ್ತದೆಂದು ಅವರು ನೆಪ ಹೇಳುತ್ತಾರೆ. ಮತ್ತು ದೇವರ ಸಮ್ಮುಖದಲ್ಲಿ  ತಮಗೆ ತಾವೇ ನಿವೇದಿಸಿಕೊಂಡರೆ ಸಾಕೆಂದು ಅವರು ಹೇಳುತ್ತಾರೆ. ಏಕೆಂದರೆ, ಹಾಗೆ ಮಾಡದವನಿಗೆ ಪುಣ್ಯ ಸಿಗದು. ಹೀಗೆ ಅವರು ಕಟ್ಟಳೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಪಾಲಿಸುತ್ತಾರೆ. ಆದರೆ (ವಾಸ್ತವವಾಗಿ) ಅವರು ಅದನ್ನು ಎಷ್ಟು ಕ್ವಚಿತ್ತಾಗಿ ಮಾಡುತ್ತಾರೆಂದರೆ ಈ ಪಾಪನಿವೇದನೆಯ ಕಟ್ಟಳೆಯನ್ನು ನಿರ್ಲಕ್ಷಿಸುತ್ತಾರೆ. (ಎಂದು ಹೇಳಬಹುದು).

ಈ ಬಿಸ್ನಗ ರಾಜ್ಯವೆಲ್ಲ ವಿಧರ್ಮಿಯಾದುದು. ಗಂಡರು ಸತ್ತಾಗ ಹೆಂಡಿರು ಅಗ್ನಿ ಪ್ರವೇಶಿಸಿ ಸಹಗಮನ ಮಾಡುವ ಪದ್ಧತಿಯಿದೆ ಮತ್ತು ಹಾಗೆ ಮಾಡುವುದೆಂದರೆ ಗೌರವವೆಂದು ಭಾವಿಸುತ್ತಾರೆ. ಆದುದರಿಂದ ತಮ್ಮ ಗಂಡಂದಿರು ಸತ್ತಾಗ ತಮ್ಮ ಹಾಗೂ ತಮ್ಮ ಗಂಡಂದಿರ ಸಂಬಂಧಿಕರೊಂದಿಗೆ ಶೋಕಿಸುತ್ತಾರೆ, ಆದರೆ ಅಳತೆ ಮೀರಿ ಶೋಕಿಸುವ ಹೆಂಡತಿಗೆ ತನ್ನ ಗಂಡನನ್ನು ಅರಸಿ ಹೋಗುವ ಇಚ್ಛೆಯಿಲ್ಲವೆಂದು ಅವರು ಭಾವಿಸುತ್ತಾರೆ; ಮತ್ತು ಶೋಕ ಮುಗಿದ ಮೇಲೆ ಅಗ್ನಿ ಪ್ರವೇಶಿಸಲು ಮತ್ತು ತಮ್ಮ ಸಂತತಿಗೆ ಅವಮರ್ಯಾದೆ ಮಾಡದಿರಲು ಅವರ ಸಂಬಂಧಿಗಳು ಅವರಿಗೆ ಉಪದೇಶಿಸುತ್ತಾರೆ. ಅದಾದ ನಂತರ, ಅವರು ಸತ್ತವನನ್ನು ಟೊಂಗೆಗಳ ಮತ್ತು ಹೂಗಳಿಂದ ಆಚ್ಛಾದಿತವಾದ ಮಂಡಪವುಳ್ಳ ಹಾಸಿಗೆಯ ಮೇಲೆ ಇಡುತ್ತಾರೆ. ಹೆಂಡತಿಯನ್ನು ಒಂದು ಕೆಲಸಕ್ಕೆ ಬಾರದ ಕುದುರೆ ಹತ್ತಿಸುತ್ತಾರೆ, ಮತ್ತು ಅವಳು ಅನೇಕ ಆಭರಣ ತೊಟ್ಟು ಗುಲಾಬಿಗಳಿಂದ ಆಚ್ಛಾದಿತವಾಗಿ ಅವರ ಹಿಂದೆ ಹೋಗುತ್ತಾಳೆ. ಅವಳು ಒಂದು ಕೈಯಲ್ಲಿ ಕನ್ನಡಿಯನ್ನೂ ಇನ್ನೊಂದರಲ್ಲಿ ಹೂಗೊಂಚಲನ್ನೂ ಹಿಡಿದಿರುತ್ತಾಳೆ, ಅವಳು ಮತ್ತು ಅನೇಕ ವಿಧದ ಸಂಗೀತದಿಂದೊಡಗೂಡಿ (ಅವಳು ಹೋಗುತ್ತಾಳೆ). ಅವನ ಸಂಬಂಧಿಗಳು ಅತಿ ಸಂತೋಷದಿಂದ (ಅವಳೊಂದಿಗೆ ಹೋಗುತ್ತಾರೆ). ಒಬ್ಬ ಮನುಷ್ಯನು ಚಿಕ್ಕ ನಗಾರಿ ಬಾರಿಸುತ್ತ ನಡೆಯುತ್ತಾನೆ ಮತ್ತು ಅವಳು ತನ್ನ ಗಂಡನನ್ನು ಸೇರಲು ಹೊರಟಿರುವಳೆಂದು ಸಾರುವ ಹಾಡನ್ನು ಹಾಡುತ್ತಾನೆ. ಅವಳೂ ಹಾಗೆ ಮಾಡುವುದಾಗಿ ಹಾಡುತ್ತಲೆ ಹೇಳುತ್ತಾಳೆ. ಅವರನ್ನು ಯಾವಾಗಲೂ ಸುಡುವ ಸ್ಥಳಕ್ಕೆ ಅವಳು ಬರುತ್ತಲೆ ತನ್ನ ಗಂಡನನ್ನು ಸುಡುವವರೆಗೆ  ಸಂಗೀತಗಾರರೊಂದಿಗೆ ಅವಳು ಕಾಯುತ್ತಾಳೆ. ಅವನ ದೇಹವನ್ನು ಅದಕ್ಕಾಗಿಯೆ ಮಾಡಿದ  ಬಹಳ ಕಟ್ಟಿಗೆಯಿಂದ  ಮುಚ್ಚಲಾದ ದೊಡ್ಡ ಕುಣಿಯಲ್ಲಿ ಇಡುತ್ತಾರೆ. ಉರಿ ಹಚ್ಚುವ ಮುನ್ನ ಅವನ ತಾಯಿ ಅಥವಾ ತೀರ ಹತ್ತಿರದ ಸಂಬಂಧಿ ತಲೆಯ ಮೇಲೆ ನೀರಿನ ಕುಡಿಕೆಯನ್ನು ಹೊತ್ತು ಕೈಯಲ್ಲಿ ಕೊಳ್ಳಿ ಹಿಡಿದು ಕುಣಿಯ ಸುತ್ತ ಮೂರು ಸಲ ಹೋಗುತ್ತಾಳೆ ಮತ್ತು ಸುತ್ತಿಗೆಯೊಂದರಂತೆ ಪಾತ್ರೆಯಲ್ಲಿ ತೂತು ಮಾಡುತ್ತಾಳೆ, ಈ ಮೂರು ಸುತ್ತು ಮುಗಿದ ಮೇಲೆ  ಸಣ್ಣದಿದ್ದ ಕುಡಿಕೆಯನ್ನು ಒಡೆಯುತ್ತಾಳೆ, ಮತ್ತು ಕೊಳ್ಳಿಯನ್ನು ಕುಣಿಯಲ್ಲಿ ಎಸೆಯುತ್ತಾಳೆ. ಆ ಮೇಲೆ ಅವರು ಉರಿ ಹಚ್ಚುತ್ತಾರೆ ಮತ್ತು ದೇಹ ಸುಟ್ಟಾಗ ಉತ್ಸವಕ್ಕೆ ಬಂದ ಎಲ್ಲರೊಂದಿಗೆ ಹೆಂಡತಿ ಬಂದು ಕಾಲು ತೊಳೆದು ಕೊಳ್ಳುತ್ತಾಳೆ. ಆ ಮೇಲೆ ಒಬ್ಬ ಬ್ರಾಹ್ಮಣ ಅವರ ಧರ್ಮದಂತೆ ಅವಳ ಮೇಲೆ ಕೆಲವು ಕರ್ಮಗಳನ್ನು ಮಾಡುತ್ತಾನೆ. ಅವನು ಇದನ್ನು ಮಾಡಿ ಮುಗಿಸಿದ ಮೇಲೆ ಅವಳು ತಾನು ತೊಟ್ಟಿದ್ದ ಎಲ್ಲ ಆಭರಣಗಳನ್ನು ತನ್ನ ಕೈಯಿಂದೆ ತೆಗೆಯುತ್ತಾಳೆ ಮತ್ತು ತನ್ನ ಸ್ತ್ರೀ ಸಂಬಂಧಿಗಳಲ್ಲಿ ಹಂಚುತ್ತಾಳೆ. ಅವಳಿಗೆ ಮಕ್ಕಳಿದ್ದರೆ ಅವರನ್ನು ತನ್ನ ಅತ್ಯಂತ ಗೌರವಾನ್ವಿತ ಸಂಬಂಧಿಗಳಿಗೆ ಒಪ್ಪಿಸುತ್ತಾಳೆ. ಅವಳು ತೊಟ್ಟಿದ್ದ ಎಲ್ಲವನ್ನೂ ಅವಳ ಒಳ್ಳೆಯ ಬಟ್ಟೆಗಳನ್ನೂ ಸಹ, ಅವರು ಕಳಚಿದ ಮೇಲೆ ಅವರು ಅವಳಿಗೆ ಒಂದಿಷ್ಟು ಸಾದಾ ಹಳದಿ ಬಟ್ಟೆಗಳನ್ನು ತೊಡಿಸುತ್ತಾರೆ, ಮತ್ತು ಅವಳ ಸಂಬಂಧಿಗಳು ಅವಳ ಕೈ ಹಿಡಿದುಕೊಳ್ಳುತ್ತಾರೆ. ಅವಳು ಇನ್ನೊಂದರಲ್ಲಿ ಒಂದು ಟೊಂಗೆ ಹಿಡಿದುಕೊಂಡು ಉರಿಯಿದ್ದ ಕುಣಿಯಿದ್ದಲ್ಲಿಗೆ ಹಾಡುತ್ತ, ಓಡುತ್ತ ಹೋಗುತ್ತಾಳೆ. ಮತ್ತು ಕುಣಿಯ ಬಳಿ ಕೆಲವು ಎತ್ತರವಾಗಿ ಮಾಡಲಾದ ಪಾವಟಿಗೆಗಳನ್ನು ಏರುತ್ತಾಳೆ. ಇದನ್ನು ಮಾಡುವ ಮುಂಚೆ ಅವರು ಬೆಂಕಿಯ ಸುತ್ತ ಮೂರು ಸಲ ಸುತ್ತುತ್ತಾರೆ, ಮತ್ತು ಆಗ ಅವಳು ಪಾವಟಿಗೆ ಹತ್ತುತ್ತಾಳೆ ಮತ್ತು ಬೆಂಕಿ ಕಾಣದಂತೆ ತನ್ನ ಮುಂದೆ ಒಂದು ಚಾಪೆಯನ್ನು ಹಿಡಿಯುತ್ತಾಳೆ. ಅವರು ಅಕ್ಕಿ ಕಟ್ಟಿದ ಅರಿವೆಯನ್ನು ಮತ್ತು ವೀಳ್ಯದೆಲೆ ಇರುವ ಇನ್ನೊಂದನ್ನು, ಮತ್ತು ಅವಳು ತನ್ನನ್ನು ಸಿಂಗರಿಸಿಕೊಂಡ ಹಣೆಗೆ ಕನ್ನಡಿಗಳನ್ನು, ತನ್ನ ಗಂಡನ ಬದಿಯಲ್ಲಿ ಸಿಂಗರಿಸಿಕೊಳ್ಳಲು ಇವೆಲ್ಲ ಬೇಕೆನ್ನುತ್ತ, ಬೆಂಕಿಯಲ್ಲಿ ಎಸೆಯುತ್ತಾರೆ. ಅಂತಿಮವಾಗಿ ಅವಳು ಎಲ್ಲರಿಂದ ಬೀಳ್ಕೊಳ್ಳುತ್ತಾಳೆ, ಮತ್ತು ತನ್ನ ತಲೆಯ ಮೇಲೆ ಎಣ್ಣೆಯ ಪಾತ್ರೆ ಇಟ್ಟುಕೊಳ್ಳುತ್ತಾಳೆ ಮತ್ತು ಬೆಂಕಿಯಲ್ಲಿ ಎಷ್ಟೊಂದು ಧೈರ್ಯದಿಂದ ಬೀಳು್ತಾಳೆಂದರೆ ಅದೊಂದು ಅದ್ಭುತ ಸಂಗತಿಯಾಗಿದೆ; ಅವಳು ಒಳಗೆ ಬಿದ್ದ ತಕ್ಷಣ ಸಂಬಂಧಿಗಳು ಉರುವಲು ಕಟ್ಟಿಗೆ ಹಿಡಿದು ಸಿದ್ಧರಾಗಿರುತ್ತಾರೆ ಮತ್ತು ಶೀಘ್ರವಾಗಿ ಅದರಿಂದ ಅವಳನ್ನು ಮುಚ್ಚುತ್ತಾರೆ. ಹೀಗೆ ಮಾಡಿದ ಮೇಲೆ ಅವರೆಲ್ಲ ಗಟ್ಟಿಯಾಗಿ ರೋದನಗೈಯುತ್ತಾರೆ. ಒಬ್ಬ ದಳವಾಯಿ ಸತ್ತಾಗ ಅವನಿಗೆ ಎಷ್ಟೇ ಹೆಂಡರಿರಲಿ ಅವರೆಲ್ಲ ಸುಟ್ಟುಕೊಳ್ಳುತ್ತಾರೆ, ಮತ್ತು ರಾಜ ಸತ್ತಾಗಲೂ ಅಷ್ಟೇ. ತೆಲುಗರೆಂದು ಕರೆಯಲ್ಪಡುವ ಜಾತಿಯ ಜನರನ್ನು  ಬಿಟ್ಟು ವಿಧರ್ಮಿ ನಾಡಿನಲ್ಲೆಲ್ಲ ಇದೇ ಪದ್ಧತಿಯಿದೆ.  ತೆಲುಗರಲ್ಲಿ ಅವರು ಸತ್ತಾಗ ಅವರ ಹೆಂಡರನ್ನು ಅವರೊಂದಿಗೆ ಸಜೀವವಾಗಿ ದಫನ ಮಾಡಲಾಗುತ್ತದೆ. ಇವರು ಕುಣಿಗೆ ಬಹಳ ಸಂತೋಷದಿಂದ ಹೋಗುತ್ತಾರೆ. ಅದರೊಳಗೆ, ಒಂದು ಅವನಿಗೆ ಇನ್ನೊಂದು ಅವಳಿಗೆ, ಎರಡು ಮಣ್ಣಿನ ಕುಳ್ಳೆಡೆಗಳನ್ನು ಮಾಡುತ್ತಾರೆ ಮತ್ತು ಇಬ್ಬರನ್ನೂ ಅವನವನ ಕುಳ್ಳೆಡೆಯ ಮೇಲಿರಿಸಿ ಅವರು ಮುಚ್ಚುವವರೆಗೆ ಸ್ವಲ್ಪ ಸ್ವಲ್ಪವಾಗಿ ಮುಚ್ಚುತ್ತಾರೆ; ಮತ್ತು ಹೀಗೆ ಹೆಂಡತಿ ಗಂಡನೊಂದಿಗೆ ಸಾಯುತ್ತಾಳೆ.

 

—-
ಆಕರ : ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ೧೯೯೨, ಮೂಲ :  ರಾಬರ್ಟ್ ಸಿವೆಲ್, ಅನುವಾದ: ಸದಾನಂದ ಕನವಳ್ಳಿ, (ಪುಟ ೩೧೨-೪೩೦), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬[1]       ಚರಿತ್ರಕಾರ ರಾಜನಿಗೆ ಅವನ ಅನುವಂಶಿಕ “ರಾಯ”ಉಪಾಧಿಯನ್ನು ನೀಡುತ್ತಿರುವ ಸಂದರ್ಭ ಇದೊಂದೆ. ಪೋರ್ತುಗೀಜರು ಅದನ್ನು ಸಾಮಾನ್ಯವಾಗಿ  Rao ಎಂದು ಬರೆಯುವರು, ರಾಯ ರಾಜ, ಎರಡೂ ಒಂದೇ.

[2]       ಗೋಲಕೊಂಡದ ಖುತುಬ್ ಶಾಹ.

[3]       ನಿಜವಿರಲಿ ಇಲ್ಲದಿರಲಿ, ಬಾಹ್ಯ ಮೂಲದಿಂದ ಬರುವ ಈ ಹೇಳಿಕೆ, ದಕ್ಷಿಣ ಭಾರತದ ರೈತರು ಹಿಂದೂ ಸರಕಾರದ ಪ್ರಜೆಗಳಾಗಿದ್ದಾಗ ಮನ್ನೆಯವರಿಂದ ಘೋರ ದಬ್ಬಾಳಿಕೆಗೆ ಗೊಳಪಟ್ಟಿದ್ದರೆಂಬ ಅನೇಕ ವೇಳೆ ತಾಳಿದ ಗ್ರಹಿಕೆಗೆ ಆಧಾರ ಒದಗಿಸುತ್ತದೆ. ಒಂದಕ್ಕೊಂದ ರಿಂದ ಸ್ವತಂತ್ರವಾಗಿ ಬರೆಯಲಾಗಿರುವ ಇವೆರಡೂ ವೃತ್ತಾಂತಗಳಲ್ಲಿನ ಇತರ ಅವತರಣಿಕೆ ಗಳು, ಜನಸಮೂಹವನ್ನು ಹತ್ತಿಕ್ಕುವ ಮತ್ತು ಅವರು ಅತೀವ ಬಡತನ ಮತ್ತು ಸಂಕಟಗಳಲ್ಲಿ ಜೀವಿಸುತ್ತಿರುವ, ಇಲ್ಲಿ ಮಾಡಲಾಗಿರುವ ಹೇಳಿಕೆಯನ್ನು ದೃಢಪಡಿಸುತ್ತವೆ.

[4]       ಬಹುಶಃ, ನಗರದ ಮೂಲಕ ಹಾಯ್ದು ಹೋಗುವಾಗ.

[5]       De fazemda ಇಲ್ಲಿ ಕೊಡಲಾಗಿರುವಂತೆಯೆ ಅದರರ್ಥ ಎಂದು ನನ್ನ ಎಣಿಕೆ, ರಾಜ್ಯವನ್ನು ಪ್ರಾಂತಗಳಲ್ಲಿ ಅಥವಾ ಆಸ್ತಿಗಳಲ್ಲಿ ವಿಭಜಿಸಲಾಗಿತ್ತೆಂಬುದನ್ನು ಮುಂದೆ ಗಮನಿಸುವಿರಿ. ಪ್ರತಿಯೊಂದನ್ನು ಒಬ್ಬ ಮನ್ನೆಯನಿಗೆ ಒಪ್ಪಿಸಲಾಗಿತ್ತು. ಅವನು ರಾಜನಿಗೆ ವರ್ಷಕ್ಕೆ ನಿಶ್ಚಿತ ಮೊತ್ತ ಕೊಡುತ್ತ ತನಗೆ ಲಾಭವಾಗುವಂತೆ ಉತ್ಪನ್ನ ಪಡೆಯುತ್ತಿದ್ದ. ರತ್ನಗಳ ಕೋಶಾಧಿಕಾರಿಯಾಗಿದ್ದ ನರ್ವರನ ವಿಷಯದಲ್ಲಾದರೊ, ಅವನ “ಆಸ್ತಿ ಬಿಸ್ನಗ ರಾಜ್ಯದ ಗಡಿಗೆ ಹತ್ತಿದೆ”ಎಂದು ವರ್ಣಿಸಲಾಗಿದೆ. ಮತ್ತು ಈ ಮಾತು ರಾಜನಾಳುತ್ತಿದ್ದ ಇಡಿ ರಾಜ್ಯವನ್ನು ಸೂಚಿಸುವುದಿಲ್ಲವಾದುದರಿಂದ  ರಾಜನ ಸ್ವಂತದ ಹೊಲಗಳು ಅಂದರೆ ಅವನ ಮನೆಯ ಜಮೀನಿಗೆ ಸೀಮಿತ ಅರ್ಥದಲ್ಲಿ ಅನ್ವಯಿಸುತ್ತದೆಂದು ತೆಗೆದುಕೊಳ್ಳಬೇಕು. “ಖಾಸ್”ಎಂದು ಕರೆಯಲಾಗುವ ಭೂಮಿಗಳನ್ನು ರಾಜ ಹೊಂದಿರುವ ಪದ್ಧತಿ ಭಾರತದಲ್ಲಿ ಚಿರಪರಿಚಿತವಿದೆ. ಈ ಭೂಮಿಗಳನ್ನು ಅವನ ಸ್ವಂತದ ಬಳಕೆ ಮತ್ತು ಪ್ರಯೋಜನಕ್ಕಾಗಿ ಹೊಂದಿರಲಾಗುತ್ತದೆ. ಇದರಿಂದ ಭಿನ್ನವಾಗಿ ಅವನ ಅಧೀನದಲ್ಲಿ ಬೇರೆಯವರು ಹಿಡಿದಿದ್ದ ಭೂಮಿಗಳ ಆದಾಯ ಸಾರ್ವಜನಿಕ ಭಂಡಾರಕ್ಕೆ ಹೋಗಬೇಕು.

[6]       ಈ ಪಟ್ಟಿಯಲ್ಲಿ ಮದುರಾವನ್ನು ಹೆಸರಿಸಲಾಗಿಲ್ಲವೆಂಬುದನ್ನು ಗಮನಿಸಬೇಕು. ಆದಾಗ್ಯೂ ೧೪೯೯ರಿಂದ ಒಬ್ಬ ನಾಯಕ ಅಥವಾ ವಿಜಯನಗರದ ಮಾಂಡಲಿಕ ಪಾಳೆಯಗಾರ ಆ ಊರನ್ನ ಆಳುತ್ತಿದ್ದನೆಂದು ತೋರುತ್ತದೆ. ಶ್ರೀ ನೆಲ್ಸನ್ ತನ್ನ ಕೃತಿ “ದ ಮದುರಾ ಕಂಟ್ರಿ”ಯಲ್ಲಿ ಕೆಳಕಂಡ ನಾಯಕರ ಪಟ್ಟಿ ನೀಡುತ್ತಾನೆ :-

ಕ್ರಿ.ಶ.

ನರಸನಾಯಕ…………………………..      ೧೪೯೯ -೧೫೦೦

ತೆನ್ನ ನಾಯಕ ………………………….      ೧೫೦೦ -೧೫೧೫

ನರಸಪಿಳ್ಳೈ (ತಮಿಳ)…………………….     ೧೫೧೫ -೧೫೧೯

ಕುರುಕುರು ತಿಮ್ಮಪ್ಪನಾಯಕ …………….      ೧೫೧೯ -೧೫೨೪

ಕಟ್ಟಿಯಾಮ ಕಾಮಯ್ಯ ನಾಯಕ………….      ೧೫೨೪ -೧೫೨೬

ಚಿನ್ನಪ್ಪನಾಯಕ…………………………       ೧೫೨೬ -೧೫೩೦

ಅಯ್ಯಕೆರೆ ವೆಯ್ಯಪ್ಪ ನಾಯಕ ……………      ೧೫೩೦ -೧೫೩೫

ವಿಶ್ವನಾಥ ನಾಯಕ ಅಯ್ಯರ್………………     ೧೫೩೫ -೧೫೪೫

ತಾನು ಸ್ವತಃ ರಾಜನ ನಿಯೋಗಿಯಾಗಿದ್ದರೂ ಒಂದು ಅನುವಂಶಿಕ ರಾಜವಂಶವನ್ನು ಸ್ಥಾಪಿಸಿದ ಮಹಾನ್ ವಿಶ್ವನಾಥ ನಾಯಕನಿಗಿಂತ ಮುಂಚೆ ಇತರ ನಾಲ್ವರು ಉಲ್ಲೇಖಿಸಲ್ಪಟ್ಟಿ ರುವರು. ಅವನು ಕ್ರಿ.ಶ. ೧೫೫೯ರಿಂದ ೧೫೬೩ ರವರೆಗೆ ಮದುರೆಯನ್ನು ಆಳಿದ. ಮತ್ತು ಕೃಷ್ಣಪ್ಪ (೧೬೦೨-೧೬೦೯)ಮದುರೆಯ ರಾಜೋಪಾದಿಗಳನ್ನು ಧರಿಸಿದ ಪ್ರಥಮನಾಗಿದ್ದಂತೆ ತೋರುತ್ತದೆ. ಅವನ ಮಗ ಮುತ್ತುವೀರಪ್ಪ (೧೬೦೯-೧೬೨೩)ಕ್ರಿ.ಶ. ೧೬೧೬ರಲ್ಲಿ ಚಂದ್ರಗಿರಿಯಲ್ಲಿ ೬,೦೦,೦೦೦ ಪಗೋಡಾಗಳ ಕಪ್ಪವನ್ನು ವಿಜಯನಗರದ ರಾಜನಿಗೆ ಕೊಟ್ಟನೆಂದು ಪೋರ್ಜುಗೀಜ ಲೇಖಕ ಬ್ಯಾರಡಸ್ (ಮೇಲೆ ಪು.೨೩೦)ನ ಕಥಾನಕದಲ್ಲಿ ಹೇಳಲಾಗಿದೆ. ಅವನು ತನ್ನ ಕೆಳಗೆ ಹಲವಾರು ಮಾಂಡಲಿಕ ರಾಜರನ್ನು ಹೊಂದಿದ್ದ ಮತ್ತು ಆಗಲೆ ಬಹಳ ಅಧಿಕಾರ ಪಡೆದಿದ್ದಿರಬೇಕು, ನ್ಯೂನಿಜ್ ಕಾಲಕ್ಕೆ ಮದುರಾ ದೊಡ್ಡ ಪ್ರಾಂತಗಳಲ್ಲೊಂದಾ ಗಿರಲಿಲ್ಲ. ಆದರೆ ನಂತರ ಹಾಗೆ ಆಗಿರುವ  ಜೊರೊಮ್ಯಾಂಡೆಲ್, ನೆಗಪಟಮ್ ಮತ್ತು ತಂಜೋರ್ ಹೆಸರುಗಳು ಪಟ್ಟಿಯಲ್ಲಿ ಸುಲಭವಾಗಿ ಗುರುತಿಸುವಂತಹವುಗಳಾಗಿವೆ. “ಬೊಂಗಾರಿನ್”ಅನ್ನು ನಾನು ಗುರುತಿಸ ಲಾರನಾದರೂ “ಗಿರಿಮ್”ಪ್ರತ್ಯಯ “ಗಿರಿ”ಅಂದರೆ “ಪರ್ವತ”ವನ್ನು ಸೂಚಿಸುವಂತಿದೆ. “ದಪಟಾಒ”ದೇವಿಪಟ್ನಮ್ ಆಗಿರಬಹುದು. “ತ್ರುಗುಎಲ್ ” ಘಿರುಕೊವಿಲ್‌ನೊಂದಿಗೆ ಅಲ್ಪ ಸಾಮ್ಯ ಹೊಂದಿದಂತಿದೆ. ವಿಜಯನಗರದ ರಾಜ ಅಸದಖಾನನಿಗೆ ಕೊಟ್ಟ ಕೋಟೆಗಳಲ್ಲೊಂದು ಎಂದು ಬ್ಯಾರೊಸ್ ಮತ್ತು ಇತರರು ಉಲ್ಲೇಖಿಸಿರುವ “ತೃಗುಎಲ್”ಮತ್ತು ಇದು ಒಂದೇ ಅಲ್ಲ. ಏಕೆಂದರೆ, ಅವುಗಳು ಬೆಳಗಾಂವಿಗೆ ಹತ್ತಿರವಿದ್ದರೆ ಈ “ತೃಗುಎಲ್”ತೀರ ದಕ್ಷಿಣದಲ್ಲಿದೆ. “ಕೌಲಿಮ್”ಕಾಯಲ್ ಆಗಿರಬಹುದು.

[7]       ಉದಯಗಿರಿ.

[8]       ಕೊಂಡವೀಡು.

[9]       ಪೆನ್ನಕೊಂಡ

[10]      ಸಿದ್ಥೌಟ್ ಅಥವಾ ಸಿದ್ಧಪಟ್ಟಮ್, ಕಡಪಾ ಜಿಲ್ಲೆ, ಕೊದೆಗರಲ್ ಗಂದಿಕೋಟವನ್ನು ಪ್ರತಿನಿಧಿಸುತ್ತಿರಬಹುದು. “ಗಿರಿ”ಎಂಬ ಪದಾಂತ್ಯದ ಬದಲು “ಕೋಟ”(ಕೋಟೆ ) ಬಳಸಲಾಗಿದೆ. ಉದಾ:ಗಂದಗಿರಿ.

[11]      (?)ಕನಿಗಿರಿ. ನೆಲ್ಲೂರು ಜಿಲ್ಲೆ

[12]      ಬಹುಶಃ ಗೋವಾ ಸಮೀಪದ ರಾಚೋಲ್.

[13]      ಬಿಚೊಲಿಮ್ (?)

[14]      ಬೇರೆಡೆ

[15]      ಪ್ಯಾಸ್‌ನ ವೃತ್ತಾಂತದ ಕೊನೆಯ ವಾಕ್ಯವನ್ನು (ನೋಡಿ:ಪು. ೩೦೪, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು). ಅಲ್ಲಿ “ಪೂರ್ವಕ್ಕಿರುವ”ಒಂದು ಪಟ್ಟಣವನ್ನು ಕೃಷ್ಣದೇವರಾಯ ತನ್ನ ಪ್ರೀತಿಯ ಮಡದಿಯ ಗೌರವಾರ್ಥ ಕಟ್ಟಿಸಿದ ಹೊಸ ನಗರ ಎಂದು ಕರೆಯಲಾಗಿದೆ.ಲೇಖಕ ಖಂಡಿತವಾಗಿ ಆ ಹೇಳಿಕೆಯಲ್ಲಿ ಗೊಂದಲ ಕ್ಕೀಡಾಗಿದ್ದಾನೆ. ಏಕೆಂದರೆ, ಹಾಗೆ ಸ್ಥಾಪಿಸಿದ ನಗರ ಹೊಸಪೇಟದ ಹಳೆಯ ಹೆಸರಾಗಿದ್ದ ನಾಗಲಾಪುರವೆಂಬುದು ಸ್ಪಷ್ಟವಿದೆ. ಬೇರೆಡೆಗಳಲ್ಲಿ ಅದು ಹೊಸಪೇಟವೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಮೇಲೆ ಉಲ್ಲೇಖಿತ ವಾಕ್ಯದಲ್ಲಿ “ಪೂರ್ವಕ್ಕಿರುವ”ಈ ಪಟ್ಟಣ “ಅರ್ದೆಗಮಾ”ಎಂಬ ಹೆಸರು ಹೊಂದಿತ್ತೆಂದು ಹೇಳಲಾಗಿದೆ, ಮತ್ತು ಅದರ ಸ್ಥಳ ನಿರ್ಧರಿಸಲು ಕಷ್ಟಕರವಾಗಿದೆ. ಯಾವುದರ “ಪೂರ್ವಕ್ಕೆ”?ನಾಗಲಾಪುರ ಉದ್ದೇಶಿತ ವೆಂದಾದರೆ “ಅರ್ದೆಗಮಾ”ಅಥವಾ ಪುಂದೆಗಮಾ (ಗೆಮಾ ಎಂದರೆ ಬಹುಶಃ ಗ್ರಾಮ)ಆ ಪಟ್ಟಣದ ಹೊರಗೇರಿ ಆಗಿರಬಹುದು. ರಾಜಧಾನಿಯ ಪೂರ್ವಕ್ಕೆಂದು ಹೇಳುವುದಾದರೆ ನಾನು ಆ ಸ್ಥಳವನ್ನು ಗುರುತಿಸಲಾರೆ. ಆದರೆ, ಈ ಸ್ಥಳಗಳು ರಾಯಮೂಲಗಳ ಗಡಿಗುಂಟ ರಾಜಧಾನಿಗೆ ಸಮೀಪವಿದ್ದದು ಸ್ಪಷ್ಟವಿದೆ. “ಬಿಸ್ನಗದ ಭೂಮಿಗಳ ಗಡಿಗುಂಟ”ಎಂಬುದರ ಅರ್ಥ ಹೀಗೆ ಎಂದು ನಾನು ಗ್ರಹಿಸುತ್ತೇನೆ.

[16]      ಈ ಮೂರು ಊರುಗಳನ್ನು ನಾನು ಗುರುತಿಸಲಾರೆ “ದಿಗೌಟಿ”ಬಹುಶಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ವಿಭಾಗದ ದುಗ್ಗವತ್ತಿ ಇರಬಹುದು. “ದಾರ್ಗುಎಮ್”“ದ್ರೂಗ್”ಅಥವಾ “ದುರ್ಗಮ್”ಅನ್ನು ಸೂಚಿಸುತ್ತದೆ. ಆ ಶಬ್ದವನ್ನು ಬೆಟ್ಟಕೋಟೆಗೆ ಅನ್ವಯಿಸಲಾಗಿದೆ. ಅಂಥವು ನೆರೆಹೊರೆಯಲ್ಲಿ ಬೇಕಾದಷ್ಟು ಇವೆ. ಬಳ್ಳಾರಿಯ ದಕ್ಷಿಣಕ್ಕಿರುವ ರಾಯದುರ್ಗ ಮಹತ್ವದವುಗಳಲ್ಲೊಂದು. ಗೋವಾದಿಂದ ಪೂರ್ವದತ್ತ ಹೋಗುವ ಘಾಟ್ ರಸ್ತೆ ಗಳಲ್ಲೊಂದನ್ನು ಹಳೆಯ ನಕಾಶೆಯಲ್ಲಿ “ದಿಗುಇಯ ದ್ವಾರ”ಎಂದು ಕರೆಯಲಾಗಿದೆ.

[17]      ಬಹುಶಃ ಆ ರಾಜಧಾನಿಯ ದಕ್ಷಿಣಕ್ಕೆ ಹದಿನೈದು ಮೈಲು ದೂರವಿರುವ ಮೈಸೂರಿನಲ್ಲಿ ಕಳಲೆ. ವಿಜಯನಗರ ರಾಜವಂಶಕ್ಕೆ ಸಂಬಂಧಿಕನಾಗಿದ್ದ ಮನ್ನೆಯನೊಬ್ಬನು ಕ್ರಿ.ಶ.  ೧೫೦೪ರಲ್ಲಿ ಅದನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ (ರೈಸನ ಗ್ಯಾಜೆಟಿಯರ್ಸ್‌.ii, ೨೫೫).

[18]      ಗುರುತಿಸಲಾಗದ್ದು.

[19]      ಬಹುಶಃ ಮೈಸೂರಿನಲ್ಲಿರುವ ಬೂದೆಹಾಳ. ಅದನ್ನು ಕಳಲೆಯಂತೆಯೆ ವಿಜಯನಗರದ ಅಧಿಕಾರಿಯೊಬ್ಬ ಸ್ಥಾಪಿಸಿದ್ದ ಮತ್ತು ಅದರಲ್ಲಿ ಹದಿನಾರನೆಯ ಶತಮಾನದ ಹಲವಾರು ಶಾಸನಗಳಿವೆ. ಅದು ಆ ಊರಿನ ದಕ್ಷಿಣಕ್ಕೆ ನಲವತ್ತು ಮೈಲು ದೂರವಿದ್ದು ಚಿಟಲ್‌ದ್ರುಗ್ ವಿಭಾಗದಲ್ಲಿದೆ.

[20]      ಗುರುತಿಸಲಾಗದುದು.

[21]      Roupa ನಾರು ಬಟ್ಟೆ. ಈ ಶಬ್ದವನ್ನು ಹತ್ತಿಗಾಗಿ ಬಳಸಲಾಗಿಲ್ಲ, ಮತ್ತು ಮುಂದಿನ ವಾಕ್ಯ, ಹತ್ತಿ ಆ ಪ್ರದೇಶದಲ್ಲಿ ಬೆಳೆಯುತ್ತಿರಲಿಲ್ಲವೆಂದು ತೋರಿಸುತ್ತದೆ.

[22]      ಕ್ಯಾಲಿಕಟ್.

[23]      ಲಿಪಿಕಾರನು “ಅವಾತಿ”ಬದಲು ಇದನ್ನು ಬರೆಯುವ ತಪ್ಪು ಮಾಡಿದ್ದಾನೆಂಬ ಸೂಚನೆಯನ್ನು ಊಹಿಸುತ್ತೇವೆ. ಮೈಸೂರಿನ ಕೋಲಾರ ಜಿಲ್ಲೆಯಲ್ಲಿನ ಈ ಹಳ್ಳಿ ಹದಿನೈದನೆಯ ಶತಮಾನದಲ್ಲಿ ಮಹತ್ವದ ಊರಾಗಿತ್ತು. “ಮೊರಸು ವೊಕ್ಕಲು”ಅಥವಾ “ಏಳು ರೈತ”ರಿಂದ ಇಲ್ಲಿ ಒಂದು ಆಳುವ ಮನೆತನ ಸ್ಥಾಪಿಸಲ್ಪಟ್ಟಿತ್ತು (ರೈಸ್, “ಮೈಸೂರ್ ಅಂಡ್ ಕೂರ್ಗ್”, ii, ೨೦). ಈ ವರ್ಣನೆ ಅದಕ್ಕೆ ಸರಿಯಾಗಿ ಅನ್ವಯಿಸುತ್ತದೆ.

[24]      “ಘಟ್ಟಗಳು”ಅಥವಾ ಬಹುಶಃ ಗುತ್ತಿ (ಗೂಟಿ)ಎಲ್ಲಿ ಒಂದು ಉತ್ಕೃಷ್ಟ ಗಿರಿದುರ್ಗದ ಅವಶೇಷಗಳಿವೆಯೊ ಆ ಗೂಟಿಯ ನೈರುತ್ಯಕ್ಕೆ ಸುಮಾರು ಇಪ್ಪತ್ತು ಮೈಲು ದೂರದಲ್ಲಿ ಸಮೃದ್ಧ ವಜ್ರ ಕರೂರ ವಜ್ರಗಳಿವೆ.

[25]      ಮೇಲೆ ಟಿಪ್ಪಣಿ ೫ ನೋಡಿರಿ, ಪು ೩೯೬.

[26]      ಮದಕಲ್.

[27]      ರಾಯಚೂರ.

[28]      ಅರ್ಥಾತ್ ಹಿಂದೂ ಧರ್ಮ, ಮಹಮ್ಮದೀಯವಲ್ಲ.

[29]      ತೆಲುಗರು.

[30]      ಖಂಡಿತವಾಗಿಯೂ ಹೀಗಿರಲಿಲ್ಲ.