ಅಧ್ಯಾಯ ೧೩

ಅನೇಕ ಜನರು ನಗರವನ್ನು ಬಿಟ್ಟು ನಡೆದರು, ಮತ್ತು ತೆರಳಲು ಏನೂ ಇಲ್ಲದವರಿಗೆ ರಾಜ ಅವರ ಪಯಣಕ್ಕೆ ಬೇಕಾದುದೆಲ್ಲವನ್ನು ಕೊಡುವಂತೆ ಆಜ್ಞಾಪಿಸಿದ. ರಾಜ ಇಲ್ಲಿ ನಗರದ ಆಡಳಿತಕ್ಕೋಸ್ಕರ ಅಗತ್ಯವಿದ್ದ ಎಲ್ಲ ಏರ್ಪಾಟುಗಳನ್ನು ಮಾಡಿದ ನಂತರ ಕೆಲವು ದಿನ ನಿಂತ. ಗೋಡೆಗಳನ್ನು ದುರಸ್ತಿ ಮಾಡಿದ ನಂತರ ಆ ಊರನ್ನು ರಕ್ಷಿಸಲು ಸಾಕಷ್ಟು ಸೈನಿಕರನ್ನು ಇಟ್ಟು ಬಿಸ್ನಗದ ದಾರಿ ಹಿಡಿದ. ಅಲ್ಲಿ ಅವನನ್ನು ಅತ್ಯಂತ ವೈಭವದಿಂದ ಸ್ವಾಗತಿಸಲಾಯಿತು. ದೊಡ್ಡ ಉತ್ಸವಗಳನ್ನು ಏರ್ಪಡಿಸಲಾಯಿತು ಮತ್ತು ಅವನು ತನ್ನ ಸೈನಿಕರಿಗೆ ಉದಾರ ಕಾಣಿಕೆಗಳನ್ನು ನೀಡಿದ.

ಉತ್ಸವಗಳು ಮುಗಿದ ಕೂಡಲೆ ಅವನು ಹೊಸ ನಗರಕ್ಕೆ ನಡೆದ. ಅಲ್ಲಿರುವಾಗ ಇಡಲ್‌ಕಾವ್‌ನ ರಾಯಭಾರಿಯೊಬ್ಬ ಹೇಗೆ ಬಂದನೆಂದು ಅವನಿಗೆ ತಿಳಿಸಲಾಯಿತು. ಅವನಿಗಾಗಲೆ ಒಬ್ಬ ರಾಯಭಾರಿ ಬಂದುದು ತಿಳಿದಿತ್ತು, ಆದರೆ ತನಗೆ ಗೊತ್ತಿಲ್ಲದಂತೆ ನಟಿಸಿದ. ಏಕೆಂದರೆ, ಯಾವುದೆ ರಾಯಭಾರಿಯನ್ನು ಬರಮಾಡಿಕೊಳ್ಳಲು ಯಾರನ್ನಾದರೂ ಕಳಿಸಿಕೊಡುವುದು ರಾಜನ ವಾಡಿಕೆಯಾಗಿರಲಿಲ್ಲ. ಈ ರಾಯಭಾರಿ ಬಿಸ್ನಗ ನಗರ ದಲ್ಲಿದ್ದುದರಿಂದ ರಾಜ ಬಿಸ್ನಗದಿಂದ ಎರಡು ಹರದಾರಿ ದೂರವಿರುವ ಹೊಸ ನಗರದಲ್ಲಿ ರುವುದನ್ನು ತಿಳಿದು ಅಲ್ಲಿಗೆ ನಡೆದ. ನಗರದ ಹತ್ತಿರ ತನ್ನ ಡೇರೆ ನಿಲ್ಲಿಸಲು ತನ್ನ ಜನರಿಗೆ ಹೇಳಿದ. ಆ ಡೇರೆ ಅದುವರೆಗೆ ಆ ಪ್ರದೇಶದಲ್ಲಿ ಕಂಡರಿಯದಷ್ಟು ಅತ್ಯುತ್ತಮವಾದುದು ಮತ್ತು ಅತಿ ಸುಂದರವಾದುದು ಮತ್ತು ಬೆಲೆ ಬಾಳುವಂಥದು ಆಗಿತ್ತು. ಈ ರಾಯಭಾರಿಯ ಹೆಸರು ಮಾಟುಕೊಟಮ್ ಎಂದಿತ್ತು. ಅವನು ತನ್ನೊಂದಿಗೆ ತನ್ನ ಸೇವೆಗಾಗಿ ನೂರೈವತ್ತು ಕುದುರೆ ಮತ್ತು ಬಹಳ ಜನರಲ್ಲದೆ ಅನೇಕ ಹೇರು ಪ್ರಾಣಿಗಳನ್ನು ತಂದಿದ್ದ. ಅವುಗಳಲ್ಲಿ ಕೆಲವು ಒಂಟೆಗಳೂ ಇದ್ದವು. ಇಡಲ್‌ಕಾವ್‌ನ ಮಂತ್ರಾಲೋಚನೆ ಸಭೆಯ ಇಬ್ಬರು ಲಿಪಿಕಾರರನ್ನೂ ಅವನು ಕರೆತಂದುದರಿಂದ ನಿಜಕ್ಕೂ ಅವನು ಇಡಲ್‌ಕಾವ್‌ನ ಎಲ್ಲ ಅಧಿಕಾರದೊಂದಿಗೆ ಬಂದಿದ್ದನೆಂದು ನಂಬಬಹುದಿತ್ತು.

ತಾನು ಹೀಗೆ ತಳವೂರಿದ ಕೂಡಲೆ ರಾಯಭಾರಿ ತನ್ನ ಆಗಮವನ್ನು  ತಿಳಿಸಲು ರಾಜನಲ್ಲಿಗೆ ಕಳಿಸಿ ಮಹಾಪ್ರಭು ತನಗೆ ಸಂದರ್ಶನ ನೀಡುವಂತೆ ಮತ್ತು ವಿಳಂಬ ಮಾಡದೆ ತನ್ನನ್ನು ಅಲ್ಲಿಂದ ಕಳಿಸಿಕೊಡುವಂತೆ ಅರಿಕೆ ಮಾಡಿಕೊಂಡ. ಅವನನ್ನು ನೋಡುವುದಾಗಿ ರಾಜ ಉತ್ತರಿಸಿದ ಮತ್ತು ತಾನೂ ಈಗತಾನೆ ಬಂದುದರಿಂದ ಅವನು ಆತುರಪಡಬಾರದೆಂದೂ ಸಮಯ ಬಂದಾಗ ತಾನು ಅವನಿಗೆ ಹೋಗಲು ಅನುಮತಿ ಕೊಡುವುದಾಗಿಯೂ ಹೇಳಿಕಳಿಸಿದ. ಹೀಗಾಗಿ, ರಾಜ ಅವನನ್ನು ನೋಡಲು ಕರೆಕಳಿಸದೆ ಮತ್ತು ಅವನು ಏಕೆ ಬಂದಿರುವನೆಂದು ಕೇಳಿ ತಿಳಿದುಕೊಳ್ಳಬಯಸದೆ ರಾಯಭಾರಿ ಅಲ್ಲಿ ಒಂದು ತಿಂಗಳು ಇದ್ದ. ಅವನು ದಿನವೂ ಅರಮನೆಗೆ ಹೋಗುತ್ತಿದ್ದ ಮತ್ತು ತನ್ನೊಂದಿಗೆ ರಾಜ ಹೇಗೆ ನಡೆದುಕೊಳ್ಳುತ್ತಿದ್ದನೆಂಬುದನ್ನು ನೋಡಿ ಅವನು ಹೆಚ್ಚಿಗೆ ಮಾತನಾಡದಿರಲು, ಆದರೆ ರಾಜ ಕರೆಕಳಿಸುವ ತನಕ ಕಾಯ್ದಿರಲು, ನಿರ್ಧರಿಸಿದ. ಆದರೂ ಅವನು ದಿನಾಲು ಅರಮನೆಗೆ ಹೋಗಿ ಮನ್ನೆಯವರೊಂದಿಗೆ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಒಂದು ದಿನ ರಾಯಭಾರಿಗೆ ಮರುದಿನ ಶುಭದಿನವೆಂದೂ ಮತ್ತು ಅವನನ್ನು ಕೇಳಿ ಅವನು ಬಂದುದೇಕೆಂದು ತಿಳಿಯಬಯಸಿರುವುದಾಗಿ ಹೇಳಿ ಕಳಿಸಿದ. ರಾಯಭಾರಿ ಅಂಥ ಮಹಾಪ್ರಭುವಿನ ಮುಂದೆ ಹಾಜರಾಗಲು ಉಚಿತವಾದಂತೆ ಸಿದ್ಧತೆ ಮಾಡಿಕೊಂಡ. ತನ್ನ ಉದ್ದಿಷ್ಟ ಕಾರ್ಯ ಹಾಗೂ ತಾನು ಮಾಡಬೇಕಿದ್ದ ಅರಿಕೆಗನುಗುಣವಾಗಿ ನಗರಲ್ಲಿದ್ದ ಅನೇಕ ಮೂರರನ್ನು ಜೊತೆಗಿರಿಸಿಕೊಂಡಿದ್ದ ಮತ್ತು ಪದ್ಧತಿಗನುಸಾರವಾಗಿ ತನ್ನೊಂದಿಗೆ ತಮ್ಮ ಕಹಳೆ ನಗಾರಿಗಳೊಂದಿಗೆ ತನ್ನೆಲ್ಲ ಜನರನ್ನೂ ಇರಿಸಿಕೊಂಡಿದ್ದ. ಈ ರೀತಿ ಅವನು ಅರಮನೆಗೆ ಹೋದ. ಅಲ್ಲಿ ಮನ್ನೆಯರು ಮತ್ತು ರಾಜಪರಿವಾರದ ಅಧಿಕಾರಿಗಳು ಅವನನ್ನು ಗೌರವದಿಂದ ಬರಮಾಡಿಕೊಂಡರು. ರಾಜನಿದ್ದಲ್ಲಿಗೆ ಪ್ರವೇಶಿಸಲು ರಾಜನ ಅನುಮತಿಯ ಸಂದೇಶಕ್ಕಾಗಿ ಕಾಯುತ್ತ ಅವರು ಪ್ರಥಮ ದ್ವಾರದೊಳಗೆ ಕುಳಿತುಕೊಂಡರು. ಅವನನ್ನು ಪ್ರವೇಶ ಮಾಡಗೊಡಲು ಆಜ್ಞೆ ಬರಲು ಬಹಳ ವಿಳಂಬವೇನಾಗಲಿಲ್ಲ. ತನ್ನ ರೀತಿರಿವಾಜಿ ಗನುಗುಣವಾಗಿ ರಾಜನಿಗೆ ಪ್ರಣಾಮ ಸಲ್ಲಿಸಲಾಗಿ, ರಾಜನ ಮಂತ್ರಾಲೋಚನೆ ಮಂಡಲಿಯ ಸದಸ್ಯರು ರಾಜನ ಬದಿ ನಿಂತಿರಲು, ರಾಜ ಕೃಪೆದೋರಿ ಆಲಿಸಲು ಸಿದ್ಧನಾಗಿರಲು ತನ್ನ ರಾಯಭಾರದ ವಿವರಗಳನ್ನು ಹೇಳಲು ತಿಳಿಸಲಾಯಿತು. ರಾಜ ಹೀಗೆ ಆಜ್ಞೆಯಿತ್ತುದನ್ನು ನೋಡಿ ರಾಯಭಾರಿ ಇಂಥ ದೊಡ್ಡ ರಾಜನ ಸನ್ನಿಧಿಯಲ್ಲಿರುವಾಗ ಇಂಥ ರಾಯಭಾರಿಗಳು ತಾಳುವ ಭಯಭಕ್ತಿಯ ಚರ್ಯೆಯೊಂದಿಗೆ ಕೆಳಕಂಡ ರೀತಿಯಲ್ಲಿ ತನ್ನ ಸಂದೇಶವನ್ನು ಅರುಹಿದ.

 

ಅಧ್ಯಾಯ ೧೪

ಪ್ರಭುವೆ, ನನ್ನ ಒಡೆಯ ಇಡಲ್‌ಕಾವ್ ನನ್ನನ್ನು ನಿಮ್ಮಲ್ಲಿಗೆ ಕಳಿಸಿರುವನು : ಮತ್ತು ನೀವು ನ್ಯಾಯ ಒದಗಿಸಲು ಸಂತೋಷಿಸುವಿರಾಗಿ ನನ್ನ ಮುಖದಿಂದ ಅರಿಕೆ ಮಾಡುತ್ತಾನೆ. ಪ್ರಪಂಚದಲ್ಲಿಯೆ ಅತ್ಯಂತ ಬಲಶಾಲಿ ರಾಜ ಮತ್ತು ಅತ್ಯಧಿಕ ನ್ಯಾಯ ಮತ್ತು ಸತ್ಯನಿಷ್ಠನೊಬ್ಬನ ವಿಷಯದಲ್ಲಿಯಂತೆ ನಿಮ್ಮ ವಿಷಯದಲ್ಲಿ ಅವನು ಅತಿ ಸದ್ಭಾವನೆ ಹೊಂದಿರುವ ನೆಂದು, ನೀವು ಅವನೊಂದಿಗಿದ್ದ ಮೈತ್ರಿ ಮತ್ತು ಶಾಂತಿ ಒಪ್ಪಂದವನ್ನು ಅಷ್ಟೇ ಅಲ್ಲ, ಅನೇಕ ವರ್ಷಗಳ ಹಿಂದೆ ಮಾಡಿಕೊಳ್ಳಲಾಗಿದ್ದ ಮತ್ತು ಎಲ್ಲ ರಾಜರು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದ ಶಾಂತಿ ಒಪ್ಪಂದವನ್ನು ಕಾರಣವಿಲ್ಲದೆ ಭಂಗ ಮಾಡಿರುವಿರಿ. ನೀವು ನಿಮ್ಮ ರಾಜ್ಯ ಬಿಟ್ಟು ಬಂದು ಅವನ ಮೇಲೆ ಇಂಥ ಯುದ್ಧವನ್ನೇಕೆ ಮಾಡಿದಿರೆಂಬುದು ಅವನಿಗೆ ತಿಳಿಯದು. ನೀವು ರಾಚೊಲ್ ನಗರಕ್ಕೆ ಮುತ್ತಿಗೆ ಹಾಕಿದ ಹಾಗೂ ಸುತ್ತಲಿನ ಪ್ರದೇಶವನ್ನು ಲೂಟಿ ಹಾಗೂ ನಾಶ ಮಾಡಿದ ಸುದ್ದಿ ತಂದು ಹೇಳಿದಾಗ ಅವನು ಸಂಶಯವಿರದೆ ಇದ್ದ. ಆ ಸುದ್ದಿ ಅವನನ್ನು ಹೊರಬಂದು ಅದರ ರಕ್ಷಣೆ ಮಾಡಲು ಹಚ್ಚಿತು. ಆಗ ನಿಮ್ಮಿಂದ ಅವನ ದರಬಾರದ ಎಲ್ಲ ಜನರು ಕೊಲ್ಲಲ್ಪಟ್ಟರು. ಅವನ ಶಿಬಿರವನ್ನು ಲೂಟಿ ಹಾಗೂ ನಾಶ ಮಾಡಲಾಯಿತು. ನೀವೆ ಸ್ವತಃ ಆದಕ್ಕೆ ಒಳ್ಳೆಯ ಸಾಕ್ಷಿಯಾಗಿರುವಿರಾದುದರಿಂದ ಅದಕ್ಕೆ ಪರಿಹಾರ ಒದಗಿಸಬೇಕೆಂದು ಮತ್ತು ಅವನಿಂದ ಕಿತ್ತುಕೊಂಡ ಫಿರಂಗಿ ಮತ್ತು ಡೇರೆಗಳು, ಕುದುರೆಗಳು ಮತ್ತು ಆನೆಗಳನ್ನು ಇತರ ವಸ್ತುಗಳೊಂದಿಗೆ ಅವನಿಗೆ ಮರಳಿಸಬೇಕೆಂದು ಅರಿಕೆ ಮಾಡಿಕೊಳ್ಳುತ್ತಾನೆ. ಈ ಆಸ್ತಿ ಮತ್ತು ಇತರ ವಸ್ತುಗಳ ಬಗೆಗೆ ಅವನು ಅರಿಕೆ ಮಾಡಿಕೊಳ್ಳುತ್ತಿರುವ ಸಮಾಧಾನವನ್ನು ನೀವು ನೀಡಿದಿರಾದರೆ ಅವನು ನಿಮಗೆ ಸದಾ ನಿಷ್ಠ ಮಿತ್ರನಾಗುವನು. ಇಲ್ಲದಿದ್ದರೆ, ನಿಮಗೆ ಸಂತೋಷ ನೀಡಿರಬಹುದಾಗಿದ್ದರೂ ನಿಮ್ಮ ಕ್ರಮ ಕೆಟ್ಟದ್ದು ಎಂದು ತಿಳಿಸಲು ಅಪ್ಪಣೆಯಿತ್ತಿರುವನು”. ಹೀಗೆ ಹೇಳಿ ಅವನು ಹೆಚ್ಚಿಗೆ ಹೇಳದೆ ಮುಕ್ತಾಯಗೊಳಿಸಿದನು. ಅವನು ಹಿಂದಿರುಗಿ ಹೋಗಿ ವಿಶ್ರಮಿಸಬಹುದೆಂದೂ ಮರುದಿನ ಅವನು ಹೊರಡಲು ಅನುಮತಿ ನೀಡಲಾಗುವುದೆಂದೂ ರಾಜ ಹೇಳಿ ಅವನಿಗೆ ರೇಷ್ಮೆಯ ನೀಳುಡುಪು ಹಾಗೂ ಬಟ್ಟೆಗಳನ್ನು ಕೊಡಮಾಡಿದ.

 

ಅಧ್ಯಾಯ ೧೫

ಮರುದಿನ ರಾಜ ರಾಯಭಾರಿಯನ್ನು ಕರೆಕಳಿಸಿ ಅವರ ಮಧ್ಯೆ ಇತರ ವಿಷಯಗಳ ಬಗೆಗೆ ಮಾತುಗಳಾದ ಮೇಲೆ, ಇಡಲ್‌ಕಾವ್ ತನ್ನ ಪಾದವನ್ನು ಚುಂಬಿಸುವುದಾದರೆ ಅವನ ಇಚ್ಛೆಯಂತೆ ಇಡಲ್‌ಕಾವ್‌ನಿಗೆ ಎಲ್ಲವನ್ನೂ ಹಿಂತಿರುಗಿಸಲು ಮತ್ತು ತಕ್ಷಣ ಸಲಬಟಕಾವ್‌ನನ್ನು ಸಂತೋಷದಿಂದ ಬಿಡುಗಡೆಗೊಳಿಸುವುದಾಗಿ ರಾಜ ನುಡಿದ. ರಾಜನ ಉತ್ತರ ಕೇಳಿದ ಮೇಲೆ ರಾಯಭಾರಿ ಅವನ ಅಪ್ಪಣೆ ಪಡೆದು ತನ್ನ ಡೇರೆಗೆ ತೆರಳಿದ; ಮತ್ತು ಅವನು ಆದುದನ್ನು ವಿವರಿಸಿ ಇಡಲ್‌ಕಾವ್‌ನಿಗೆ ಬರೆದು ತನ್ನೊಂದಿಗೆ ಬಂದಿದ್ದ ಲಿಪಿಕಾರರಲ್ಲೊಬ್ಬನನ್ನು ಅವನಲ್ಲಿಗೆ ಕಳಿಸಿದನು. ಬಹಳ ಕಾಲವಾಗುವ ಮುಂಚೆಯೆ ಇಡಲ್‌ಕಾವ್ ಅವನಿಗೆ ಹೀಗೆ ಉತ್ತರ ಕಳುಹಿಸಿದ : ಅವನು ಬಿಸ್ನಗಕ್ಕೆ ಹೋಗಲಾರನಾದುದ ರಿಂದ ತನಗೆ ರಾಜನನ್ನು ಭೆಟ್ಟಿಯಾಗುವುದು ಹೇಗೆ ಸಾಧ್ಯ? ಆದರೂ ಸಹ ರಾಜ ಇಷ್ಟಪಟ್ಟುದನ್ನು ಹರುಷಪಟ್ಟು ಮಾಡಲು ಪೂರ್ಣ ಮನಸ್ಸಿದೆ. ಈ ಉತ್ತರದೊಂದಿಗೆ ರಾಯಬಾರಿ ರಾಜನಲ್ಲಿಗೆ ಹೋದ, ಮತ್ತು ರಾಜ ತಾನು ಇಡಲ್‌ಕಾವ್‌ನಿಂದ ಪಡೆದುದೆಲ್ಲಕ್ಕಿಂತ ಇಡಲ್‌ಕಾವ್ ಬಂದು ತನ್ನ ಪಾದ ಚುಂಬಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಿದ್ದುದರಿಂದ ಅವನು ರಾಯಭಾರಿಗೆ ಹೀಗೆಂದ : “ನೀನು ಇಡಲ್‌ಕಾವ್ ನನ್ನ ರಾಜ್ಯದ ಗಡಿಗೆ ಬರುವಂತೆ ಮಾಡು, ಏಕೆಂದರೆ ನಾನು ಕ್ಷಿಪ್ರದಲ್ಲಿಯೆ ಅಲ್ಲಿರುವೆ”. ಇದಕ್ಕೆ ಒಪ್ಪಿಕೊಂಡು ರಾಯಭಾರಿ ಗಡಿಗೆ ಬರುವಂತೆ ಇಡಲ್‌ಕಾವ್‌ನನ್ನು ಮನವೊಲಿಸಲು ತೆರಳಿದ. ರಾಜನಂತೂ ಗಡಿಗೆ ಹತ್ತಿರವಿರುವ ಮುದಕಲ್ ಎಂಬ ನಗರಕ್ಕೆ ಕೊಡಲೆ ಹೊರಟ ಮತ್ತು ಇಡಲ್‌ಕಾವ್ ಬರುತ್ತಿರುವನು ಮತ್ತು ಆಗಲೆ ಹತ್ತಿರದಲ್ಲಿದ್ದಾನೆ ಎಂದು ಹೇಳುವವರೆಗೆ ಅವನು ಅಲ್ಲಿ ಕಾಯ್ದ. ತಕ್ಷಣ ರಾಜ ಅವನನ್ನು ಭೆಟ್ಟಿಯಾಗಲು ನಡೆದ ಮತ್ತು ದಖಿಮ್ ರಾಜ್ಯವನ್ನು ಪ್ರವೇಶಿಸಿದ. ಇಡಲ್‌ಕಾವ್‌ನನ್ನು ಭೆಟ್ಟಿಯಾಗಲು ಅವನು ಅಷ್ಟೊಂದು ಉತ್ಸುಕ ನಾಗಿದ್ದ. ಆದರೆ, ಎಷ್ಟು ಹೇಳಿದರೂ ಇಡಲ್‌ಕಾವ್ ರಾಜನನ್ನು ಭೆಟ್ಟಿಯಾಗುವ ಧೈರ್ಯ ಮಾಡಲಿಲ್ಲ, “ಅದೋ, ಅವನು ತೀರ ಹತ್ತಿರದಲ್ಲಿಯೇ ಇದ್ದಾನೆ” ಎಂದು ಅವರು ಹೇಳುತ್ತಿದ್ದಂತೆಯೆ ರಾಜ ಎಷ್ಟು ದೂರ ಪಯಣಿಸಿದನೆಂದರೆ ದಖಿಮ್‌ದ ರಾಜ್ಯದಲ್ಲೆಲ್ಲ ಅತ್ಯುತ್ತಮ ನಗರವಾಗಿದ್ದ ಬಿಜಪೂರ್‌ವರೆಗೂ (ಬಿಜಾಪುರ) ಬಂದುಬಿಟ್ಟ. ನಮ್ಮ ಶೈಲಿಯಂತೆಯೆ ಕಟ್ಟಲಾದ ಅಸಂಖ್ಯ ಮನೆಗಳಿದ್ದ ಅದು ಅನೇಕ ತೋಟಗಳನ್ನು ಮತ್ತು ದ್ರಾಕ್ಷಿ ಬಳ್ಳಿಯಿಂದ ಮಾಡಿದ ಮಂಟಪಗಳನ್ನು, ಮತ್ತು ದಾಳಿಂಬ ಮತ್ತು ಕಿತ್ತಳೆ ಮತ್ತು ಲಿಂಬೂ ಮತ್ತು ಇತರ ಎಲ್ಲ ತರಹದ ತೋಟೋತ್ಪನ್ನಗಳನ್ನು ಹೊಂದಿದೆ.

ರಾಜ ಅಲ್ಲಿಗೆ ನಡೆದ. ಏಕೆಂದರೆ, ಇಂಥ ಒಳ್ಳೆಯ ನಗರದಲ್ಲಿ ಇಡಲ್‌ಕಾವ್‌ನ ಬರುವಿಕೆಗಾಗಿ ಕಾಯುವುದು ಅವನಿಗೆ ಒಳ್ಳೆಯದೆನಿಸಿತು. ಅವನು ಇಲ್ಲಿ ಸಿಕ್ಕರೆ, ತನಗೆ ತೋರಿದ ಅವಮರ್ಯಾದೆಗಾಗಿ, ಅವನನ್ನು  ಸರೆಹಿಡಿಯುವುದಾಗಿ ಇಲ್ಲವೆ ಕೊಲ್ಲಲು ಆಜ್ಞೆಯೀಯುವುದಾಗಿ ನಿರ್ಧಾರ ಕೈಗೊಂಡ; ಮತ್ತು ತನ್ನ ವೈರಿ ಬರುವ ಧೈರ್ಯ ಮಾಡದಿದ್ದುದನ್ನು ಕಂಡು ಅವನು ನಗರದಲ್ಲಿ ಹಲವಾರು ದಿನ ಉಳಿದ. ಆ ಮೇಲೆ ನೀರು ಸಾಲದ್ದರಿಂದ ಅವನು ಅಲ್ಲಿಂದ ಹೊರಟ. ಏಕೆಂದರೆ ಈ ನಗರ ಬಯಲುಸೀಮೆಯಲ್ಲಿದ್ದು ಮಳೆಯ ನೀರು ಬಂದು ಸೇರುವ ಎರಡು ಕೆರೆಗಳನ್ನು ಬಿಟ್ಟರೆ ಬೇರೆ ನೀರು ಇಲ್ಲದಿದ್ದುದರಿಂದ ರಾಜ ತಮ್ಮ ನಾಡಿನಲ್ಲಿ ನಿಲ್ಲಲು ಶಕ್ಯವಾಗದಂತೆ ಮಾಡಲೋಸುಗ ಮೂರರು ಇವುಗಳನ್ನು ಒಡೆದು ನೀರು ಸೋರಿಹೋಗುವಂತೆ ಮಾಡಿದ್ದರು. ಈ ಕಾರಣಕ್ಕಾಗಿ ಅಲ್ಲಿಂದ ತೆರಳುವುದು ಉಚಿತವೆಂದು ರಾಜನಿಗೆ ತೋರಿತು. ಆದರೆ ನಗರವನ್ನು ಬಿಡುವಾಗ ಅದನ್ನು ಹೆಚ್ಚು ಕಡಿಮೆ ಭಗ್ನಾವಶೇಷಗಳ ಸ್ಥಿತಿಗೆ ತರಲಾಗಿತ್ತು. ರಾಜನೇ ಅದನ್ನು ನಾಸಪಡಿಸಲು ಆಜ್ಞೆಯಿತ್ತಿರಲಿಲ್ಲ. ಆದರೆ, ಅವನ ಸೈನಿಕರು ಅಡಿಗೆಗೆ ಬೆಂಕಿ ತಯಾರಿಸಲು ಎಷ್ಟೊಂದು ಮನೆಗಳನ್ನು ಕೆಡವಿದ್ದರೆಂದರೆ ಅದನ್ನು ನೋಡಲು ಬಹಳ ಖೇದವಾಗುತ್ತಿತ್ತು. ಇದಕ್ಕೆ ಕಾರಣವೆಂದರೆ ಅವರಿಗೆ ಬಹಳ ದೂರದಿಂದ ಬರುತ್ತಿದ್ದ ಸೌದೆಯ ಕೊರತೆ ಆ ನಾಡಿನಲ್ಲಿದ್ದುದು. ಅವುಗಳನ್ನು ನಾಶಪಡಿಸಲು ಆಜ್ಞೆಯೀಯುವಂತೆ ತನ್ನ ದಳವಾಯಿಗಳ ಮನೆಗಳು ಏನು ತಪ್ಪು ಮಾಡಿದ್ದವೆಂದು ಕೇಳಲು ಇಡಲ್‌ಕಾವ್ ರಾಜನಲ್ಲಿಗೆ ಕಳಿಸಿದ. ಏಕೆಂದರೆ ರಾಜ ತಾನೇ ಅಲ್ಲಿದ್ದುದರಿಂದ ಇಡಲ್‌ಕಾವ್‌ನ ಅರಮನೆಗಳನ್ನು ಬಿಟ್ಟರೆ ಬೇರಾವ ಮನೆಗಳೂ ಉಳಿದಿರಲಿಲ್ಲ. ಅದನ್ನು ಮಾಡಿದವನು ತಾನಲ್ಲ ಆದರೆ ತನ್ನ ಜನರನ್ನು ನಿಯಂತ್ರಿಸಲು ತನಗೆ ಆಗಲಿಲ್ಲ ಎಂದು ರಾಜ ಉತ್ತರ ಕಳಿಸಿದ.

ರಾಜ ಮೊದಗಲ್ಲಿಗೆ ಹೋದಾಗ ಇಡಲ್‌ಕಾವ್ ಬಿಗಾಪೊರಿಗೆ ಮರಳಿದ. ಅದರಲ್ಲಿ ಮಾಡಲಾಗಿದ್ದ ಧ್ವಂಸವನ್ನು ಕಂಡು ತಾನು ರಾಜನಲ್ಲಿಗೆ ಹೋಗಿದ್ದರೆ ಇಂಥ ಹಾನಿ ಉಂಟಾಗುತ್ತಿರಲಿಲ್ಲ ಮತ್ತು ಇನ್ನು ಮುಂದಾದರೂ ತಾನು ಹಾಗೆ ಮಾಡಬೇಕೆಂದು ಅನ್ನುತ್ತ ಇಂಥ ಹಾನಿ ಮಾಡಲಾಗಿದ್ದುದಕ್ಕೆ ತನ್ನನ್ನು ತಾನೆ ದೂಷಿಸಿಕೊಂಡ. ತನ್ನ ಮಟ್ಟಿಗೆ ಹಾಗೆ ಮಾಡಲು ಸಿದ್ಧವಾಗಿದ್ದರೂ ತನಗೆ ತಪ್ಪು ಸಲಹೆ ನೀಡಲಾಗಿತ್ತೆಂದು ಅವನೆಂದ. ತಾನು ರಾಜನ ಮೈತ್ರಿ ಗಳಿಸಿದ್ದರೆ ತನ್ನ ಸ್ಥಿತಿ ಎಷ್ಟು ಸುರಕ್ಷಿತವಾಗಿರುತ್ತಿತ್ತು, ಅವನೊಂದಿಗೆ ಸ್ನೇಹ ಬೆಳೆಸಿದ್ದರೆ ತನ್ನ ರಾಜ್ಯದ (ದೊಡ್ಡಸ್ತಿಕೆಯನ್ನು) ಇನ್ನೂ ಹೆಚ್ಚಿಸಬಹುದಿತ್ತು. ಮತ್ತು ರಾಜನ ಅನುಗ್ರಹದಿಂದ ತನ್ನ ಇಚ್ಛೆಗಳನ್ನೆಲ್ಲ ಈಡೇರಿಸಬಹುದಿತ್ತು ಎಂಬುದನ್ನು ಅವರ ಮುಂದಿಟ್ಟು ತನ್ನ ಸಲಹೆಗಾರರೊಂದಿಗೆ ಸಮಾಲೋಚಿಸಿದ. ಈ ವಿಷಯಗಳು ಮತ್ತು ಇದೇ ತೆರನ ಇತರ ವಿಷಯಗಳ ಬಗೆಗೆ ತನ್ನ ಸಲಹೆಗಾರರೊಡನೆ ನಿರಂತರವಾಗಿ ಸಮಾಲೋಚಿಸ ತೊಡಗಿದ. ಆಗ, ಅವನೊಂದಿಗೆ ಯುದ್ಧದಿಂದ ಓಡಿದ್ದ ಮತ್ತು ಇಂಥ ವಿಷಯಗಳಲ್ಲಿ ಸೂಕ್ಷ್ಮಮತಿಯೂ ಠಕ್ಕನೂ ಆಗಿದ್ದ ಬಿಳಗಾವ್‌ದ ದೊರೆ ಅಸದಕಾವ್ ರಾಜನಲ್ಲಿಗೆ ಹೋಗಲು ತನಗೇ ಅನುಮತಿ ನೀಡಬೇಕೆಂದು ಕೋರುತ್ತ ತಾನು ಎಲ್ಲವನ್ನೂ ಸರಿಪಡಿಸುವುದಾಗಿಯೂ ಎಲ್ಲವೂ ತನ್ನ ಪ್ರಭು ಇಚ್ಛಿಸಿದಂತೆಯೆ ಆಗುವಂತೆ ಮಾಡು ವುದಾಗಿಯೂ ಭರವಸೆ ನೀಡಿದನು. ಮತ್ತು ಇಡಲ್‌ಕಾವ್ ಮನಃಪೂರ್ವಕವಾಗಿ ಅವನನ್ನು ಆಲಿಸಿದ.

ಅಸದಕಾವ್ ಇಡಲ್‌ಕಾವ್‌ನ ಸೇವೆ ಮಾಡುವ ಇಚ್ಛೆಯಿಂದ ಈ ಪ್ರಯಾಣ ಮಾಡುವ  ತೊಂದರೆ ತೆಗೆದುಕೊಂಡಿರಲಿಲ್ಲ. ಅದನ್ನು ಬೇರೆ ಯಾರಾದರೂ ಅಷ್ಟೆ ಚೆನ್ನಾಗಿ ಮಾಡ ಬಹುದಿತ್ತು. ಆದರೆ, ಒಂದು ದುಷ್ಟ ಉದ್ದೇಶದಿಂದ ಮತ್ತು ಬಿಸ್ನಗದಲ್ಲಿ ರಾಜ ಸೆರೆಹಿಡಿದಿಟ್ಟಿದ್ದ ಸಲಬತ್‌ಕಾವ್‌ನೊಂದಿಗೆ ತಾನು ಹೊಂದಿದ್ದ ದುರ್ಭಾವನೆಯಿಂದ ಅವನು ಹಾಗೆ ಮಾಡಿದ. ಅವನು ಈ ದುಷ್ಟ ಹೇತು ತಾಳಲು ಕಾರಣವೆಂದರೆ ಇಡಲ್‌ಕಾವ್ ಓಡಿಹೋಗುವಂತೆ ಮಾಡಿದವನು ಅಸದಕಾವ್ ಎಂದು ಮತ್ತು ಇಂಥ ಹೇಡಿಗೆಲಸ ಸೈನ್ಯವನ್ನು ನಾಶಮಾಡಲು ಸಾಕಾಯಿತೆಂದು ಸಲಬಟಕಾವ್‌ನಿಗೆ ಗೊತ್ತಿತ್ತು. ಇದರ ಬಗೆಗೆ ಸಲಬಟಕಾವ್ ತನ್ನ ಭೆಟ್ಟಿಗೆ ಬಂದವರು ಅಥವಾ ಕಳಿಸಿದವರೆದುರು ರೋಷದಿಂದಲೆ ಮಾತಾಡಿದ್ದ, ಮತ್ತು  ಒಂದೇ ಒಂದು ಕಾರಣಕ್ಕಾಗಿ ಅಲ್ಲದಿದ್ದರೆ ತಾನು ಬಂಧನದಿಂದ ಬಿಡುಗಡೆ ಹೊಂದ ಬಯಸಿರಲಿಲ್ಲ ಎಂದು ಅವನು ಯಾವಾಗಲೂ ಅನ್ನುತ್ತಿದ್ದ. ಅದೆಂದರೆ, ಅಸದಕಾವ್‌ನನ್ನು ನಾಶಪಡಿಸುವುದು ಮತ್ತು ಒಬ್ಬ ಬದ್ಧ ವೈರಿಯೊಂದಿಗೆಂಬಂತೆ ಅವನ ವಿರುದ್ಧ ಯುದ್ಧ ಮಾಡುವುದು. ಈ ಸಂಗತಿಗಳು ಅಸದಕಾವ್‌ನಿಗೆ ಚೆನ್ನಾಗಿ ತಿಳಿದಿದ್ದವು ಮತ್ತು ಅವನನ್ನು ಅವರು ಬಿಡುಗಡೆ ಮಾಡಿದರೆ ಅವನು ಅಂದಂತೆಯೆ ಆಗುವುದು. ಆದುದರಿಂದ, ಯೋಗ್ಯ ಸ್ಥಳದಲ್ಲಿ ಹೇಳಲಿರುವಂತೆ, ಅವನ ಮರಣಕ್ಕೆ ಹಂಚಿಕೆ ಹಾಕಿ ಅದನ್ನು ತಪ್ಪಿಸಿಕೊಳ್ಳಬೇಕೆಂದು ಅವನು ನಿರ್ಧರಿಸಿದ. ಅಸದಕಾವ್ ರಾಜನಲ್ಲಿಗೆ ರಾಯಭಾರಿಯಾಗಿ ತನ್ನನ್ನು ಕಳಿಸಿಕೊಡಲು ಕೇಳಿಕೊಂಡುದು ಈ ಕಾರಣಕ್ಕಾಗಿ ಮತ್ತು ಅದನ್ನು ಈಡೇರಿಸಲಾಯಿತು.

 

ಅಧ್ಯಾಯ ೧೬

ಇಡಲ್‌ಕಾವ್ ಕಳಿಸಿಕೊಟ್ಟ ಅಸದಕಾವ್ ಕೆಲವು ಅಶ್ವಾಳು ಹಾಗೂ ಸೇವಕರಿಂದೊಡಗೂಡಿ ರಾಜನಿದ್ದ ಮುದೊಗಲ್ ನಗರದ ದಾರಿ ಹಿಡಿದ. ಮತ್ತು ಇಡಲ್‌ಕಾವ್ ನದಿಯವರೆಗೆ ಅವನೊಂದಿಗೆ ಹೋದ. ಅಸದಕಾವ್ ಆಗಮಿಸಿದಾಗ ರಾಜನ ಆಜ್ಞೆಯಿಂದ ನಗರದೊಳಕ್ಕೆ ಬರಲು ಬಿಡಲಾಗಿ ಅವನ ಆಜ್ಞೆಯಿಂದ ಕರೆಕಳಿಸಲ್ಪಡುವವರೆಗೆ ಅವನು ರಾಜನನ್ನು ಭೆಟ್ಟಿಯಾಗದೆ ಹಲವು ದಿನ ಉಳಿದ ; ಆಮೇಲೆ ಪ್ರವೇಶ ನೀಡಲಾಗಿ ರಾಜನೊಂದಿಗೆ ಮಾತಾನಾಡುತ್ತ ಇಂಥ ಮಾತುಕಥೆಗಳಲ್ಲಿ ಜಾಣನೂ ದಿಟ್ಟನೂ ಆಗಿರುವವನ ಶೈಲಿಯಲ್ಲಿ ಇಡಲ್‌ಕಾವ್ ಮಾಡಿದ್ದ ತಪ್ಪಿಗೆ ಕಾರಣವನ್ನು ನೀಡಿದ. ರಾಜನೊಂದಿಗೆ ಹೇಗೆ ಮಾತಾಡಬೇಕೆಂಬುದು ಅವನಿಗೆ ಎಷ್ಟು ಚೆನ್ನಾಗಿ ಗೊತ್ತಿತ್ತೆಂದರೆ ಅವನು ಇಡಲ್‌ಕಾವ್ ಅವನನ್ನು ಭೆಟ್ಟಿಯಾಗದಿದ್ದುದಕ್ಕೆ ಮುಖ್ಯ ಕಾರಣವೆಂದರೆ ಅವನು ಬಂಧಿಸಿದ್ದ ಸಲಬಟಕಾವ್‌ನ ವರ್ತನೆಯೆಂದೂ, ಈ ಮನುಷ್ಯ ಇಡಲ್‌ಕಾವ್‌ನಿಗೆ ಹಾಗೆ ಮಾಡಬಾರ ದೆಂದು ಬರೆದಿದ್ದನೆಂದೂ ಮತ್ತು ರಾಜ ಅವನನ್ನು ಕೊಲ್ಲಬಯಸಿರುವನೆಂಬ ಕಾರಣ ಕೊಟ್ಟಿದ್ದನೆಂದೂ ಅವನು ರಾಜನಿಗೆ ಹೇಳಿದ ಮತ್ತು ಇಂಥ ಇತರ ಮಾತುಗಳಿಂದ ಅವನು ರಾಜನ ಮನಸ್ಸನ್ನು ಸಲಬಟಕಾವ್‌ನ ವಿರುದ್ಧ ಮರಣದ ಮಟ್ಟಿಗೂ ತಿರುಗಿಸಲೆತ್ನಿಸಿದನು. ಅಸದಕಾವ್ ಇಷ್ಟಪಡುವುದೇನೆಂದು ಕಂಡು ಮತ್ತು ಇಷ್ಟು ದೊಡ್ಡ ಖ್ಯಾತಿಯ ಮನುಷ್ಯ ಸಂಪೂರ್ಣವಾಗಿ ಸತ್ಯವಿರದಿದ್ದುದನ್ನು ಹೇಳುವ ಅಪರಾಧ ಮಾಡಲಾರನೆಂಬ ನಂಬಿಕೆಯಿಂದ ರಾಜ ಸಿಟ್ಟಿಗೆದ್ದು ಆಗ ಬಿಸ್ನಗದಲ್ಲಿದ್ದ ಸಲಬಟಕಾವ್‌ನ ತಲೆ ಕಡಿಯಬೇಕೆಂದು ಆಜ್ಞೆಯಿತ್ತ; ಮತ್ತು ಸಂದೇಶ ಬಂದ ತಕ್ಷಣ ಇದನ್ನು ಪೂರೈಸಲಾಯಿತು.

ಈ ಕಾರ್ಯ ಸಾಧಿಸಿದ ಕೂಡಲೆ ಅಸದಕಾವ್ ತಾನು ಅರಕ್ಷಿತನೆಂದು ಬಗೆದ ಮತ್ತು ಮಹಾರಾಜ ಅಲ್ಲಿಗೆ ಬಂದಾಗ ಅವನನ್ನು ಭೆಟ್ಟಿಯಾಗಲೋಸುಗ ನದಿಗೆ ಬರುವಂತೆ ಇಡಲ್‌ಕಾವ್‌ನನ್ನು ತಾನು ಕರೆತರಬಯಸಿರುವುದಾಗಿ ಹೇಳಿ ಕೂಡಲೆ ಹೊರಡಲು ರಾಜನ ಅನುಮತಿ ಕೋರಿದ. ಅವಸರಪಡಬಾರದೆಂದೂ ಅಲ್ಲಿ ಕೆಲವು ದಿನ ವಿನೋದಪಡ ಬೇಕೆಂತಲೂ ಹೇಳಿದ ರಾಜ ತಾನು ಅವನಿಗೆ ಕೆಲವು ವಸ್ತುಗಳನ್ನು ತೋರಿಸಬಯಸಿರು ವುದಾಗಿಯೂ ಮತ್ತು ಅವನೊಂದಿಗೆ ಮಾತನಾಡುವುದು ಇನ್ನೂ ಸ್ವಲ್ಪ ಇದೆಯೆಂದೂ ಮುಂದುವರೆದು ಹೇಳಿದ. ಆದರೆ, ಅಸದಕಾವ್ ತನ್ನ ದ್ರೋಹ ಬಯಲಾಗುವುದೆಂದು ಭಯಪಟ್ಟು ತಾನು ಸುರಕ್ಷಿತನಲ್ಲ ಎಂದು ಭಾವಿಸಿದ ಮತ್ತು ಯಾವ ರೀತಿ ವರ್ತಿಸಿದನೆಂದರೆ ಸಲಬಟಕಾವ್‌ನ ವಿಷಯದಲ್ಲಿ ಅವನು ಮಾಡಿದ್ದು ಗೊತ್ತಾಯಿತು. ಆದುದರಿಂದ, ರಾಜ ಅವನನ್ನು ಸೆರೆ ಹಿಡಿಯಲು ಕಳಿಸಿದ, ಆದರೆ ಅವನನ್ನು ನೋಡಲು ಅವರು ಹೋದಾಗ ಅವನಾಗಲೆ ಹೋಗಿಬಿಟ್ಟಿದ್ದ. ಏಕೆಂದರೆ, ಒಂದು ರಾತ್ರಿ ಅವನು ಇಡಲ್‌ಕಾವ್‌ನಲ್ಲಿಗೆ ಓಡಿಬಂದು ರಾಜ ಸಲಬಟಕಾವ್‌ನನ್ನು ಕೊಲ್ಲಲು ಆಜ್ಞೆ ಮಾಡಿದ್ದನೆಂದೂ ಮತ್ತು ತನಗೂ ಹಾಗೆಯೆ ಮಾಡಬೇಕೆಂದಿದ್ದನೆಂದೂ, ಅದಕ್ಕಾಗಿ ತಾನು ಪಾರಾಗಿ ಬಂದುದಾಗಿಯೂ ಹೇಳಿದ. ಏನೆಂದರೂ ಕರಿಯನೆ ಆಗಿದ್ದ ರಾಜನನ್ನು ಅವನು ಇಡಲ್‌ಕಾವ್ ನಂಬಕೂಡದೆಂದು ತನಗೆ ಅನಿಸುತ್ತದೆಂದ. ಹೀಗೆ ಮಾತಾಡಿದ ನಂತರ ಅವನು ಬಿಳಗಾವ್ೆ ಹೋಗಿ ತನ್ನ ಸ್ಥಾನ ಬಲಪಡಿಸಿಕೊಂಡ ಮತ್ತು ಇಡಲ್‌ಕಾವ್ ನಂತರ ಅವನನ್ನು ಕರೆಕಳಿಸಿದರೆ ಅವನು ಪಾಲಿಸಲಿಲ್ಲ. ಏಕೆಂದರೆ, ತಾನು ಮಾಡಿದ ದುಷ್ಟತನ ಗೊತ್ತಾಗುವುದೆಂದು ಅವನಿಗೆ ತಿಳಿದಿತ್ತು.

ಅಧ್ಯಾಯ ೧೭

ರಾಜ ತನ್ನ ಪ್ರದೇಶದ ಅಂಚಿಗೆ ಹೋಗದೆ ಬಿಡಲಿಲ್ಲ ಮತ್ತು ಅಸದಕಾವ್ ಹೇಳಿದ್ದಂತೆ ಅಲ್ಲಿ ಇಡಲ್‌ಕಾವ್‌ನನ್ನಾಗಲಿ ಅವನ ತಾಯಿಯನ್ನಾಗಲಿ ಕಾಣದಿದ್ದುದರಿಂದ ಇದೆಲ್ಲ ಅಸದಕಾವ್‌ನ ಕಪಟತನವೆಂದು ಮತ್ತು ಸಲಬಟಕಾವ್‌ನ ಮರಣ ಸಾಧಿಸಲೋಸುಗ ಅವನು ಇದನ್ನೆಲ್ಲ ಮಾಡಿದ್ದನೆಂದು ತಕ್ಷಣ ಗ್ರಹಿಸಿದ. ಇದರಿಂದ ತುಂಬ ರೊಚ್ಚಿಗೆದ್ದು ಅವನು ದಖಿಮ್‌ದ ರಾಜ್ಯವನ್ನು ಪ್ರವೇಶಿಸಿ ಕಲ್ಬರ್ಗುರಾ (ಪುರಾತನ ಬಹಮನಿ ರಾಜಧಾನಿಯಾಗಿದ್ದ ಕಲಬರ್ಗಾ) ನಗರದ ಮೇಲೆ ದಂಡಯಾತ್ರೆ ಮಾಡಿ ಅದನ್ನು ನಾಶಪಡಿಸಿದ ಮತ್ತು ದುರ್ಗವನ್ನು ನೆಲಸಮಗೊಳಿಸಿದರಲ್ಲದೆ ಅನೇಕ ಊರುಗಳಿಗೂ ಹಾಗೆಯೆ ಮಾಡಿದ.

ಅಲ್ಲಿಂದ ಅವನು ಮುಂದಕ್ಕೆ ನುಗ್ಗಬೇಕೆಂದಿದ್ದ. ಆದರೆ, ಅವನ ಸಲಹೆಗಾರರು ಅದಕ್ಕೊಪ್ಪಲಿಲ್ಲ. ಆ ರಸ್ತೆಯಿಂದ ಹೋದರೆ ನೀರು ಕಡಿಮೆ ಬೀಳುವುದೆಂದೂ, ತಾವು ಗೆಳೆಯರೆಂದು ಎಣಿಸಿದ್ದ ಮೂರ ದೊರೆಗಳು, ಅವರೆಲ್ಲ ಒಬ್ಬನೇ ಸಾರ್ವಭೌಮನ ಸೇವೆಗೈಯುತ್ತಿದ್ದುದರಿಂದ, ರಾಜ ಇತರರ ನಾಡುಗಳನ್ನು ವಶಪಡಿಸಿಕೊಂಡಂತೆಯೆ ತಮ್ಮ ನಾಡುಗಳನ್ನೂ ವಶಪಡಿಸಿಕೊಳ್ಳಬಹುದೆಂದು ಭಯಪಡುವುದಕ್ಕಿಂತ ಭಿನ್ನತೆರನಾಗುವರೆಂದೂ ಮತ್ತು ಆ ಕಾರಣಕ್ಕಾಗಿ ಬಹುಶಃ ಇಡಲ್‌ಕಾವ್‌ನೊಂದಿಗೆ ಮೈತ್ರಿಮಾಡಿಕೊಳ್ಳಬಹುದು ಮತ್ತು ಒಟ್ಟಾಗಿ ರಾಜನ ವಿರುದ್ಧ ಬರಬಹುದೆಂದೂ, ಮತ್ತು ಅವರ ಬಗೆಗೆ ಭಯಪಡುವ ಕಾರಣವಿರದಿದ್ದಾಗ್ಯೂ ಎಷ್ಟೂ ಇಲ್ಲದಂತಾಗಿದ್ದ ನೀರಿನ ಅಭಾವದ ಬಗೆಗೆ ರಾಜ ಭಯಪಡ ಬೇಕಾಗಿದೆಯೆಂದೂ ಅವರು ಹೇಳಿದರು. ಈ ಸಲಹೆ ಉತ್ತಮವಾದುದೆಂದು ರಾಜ ಒಪ್ಪಿಕೊಂಡ.

ಈ ಕಲ್ಬರ್ಗುರಾ ನಗರದಲ್ಲಿ, ಅದಕ್ಕೆ ಸೇರಿದ ದುರ್ಗದಲ್ಲಿ, ರಾಜ ದಖೆಮ್‌ದ ರಾಜನ ಮೂವರು ಪುತ್ರರನ್ನು ಸೆರೆಹಿಡಿದ. ಅವನ ತಂದೆ ತೀರಿಕೊಂಡಿದ್ದುದರಿಂದ ಎಲ್ಲಕ್ಕಿಂತ ಹಿರಿಯನನ್ನು ದಖೆಮ್‌ದ ರಾಜನನ್ನಾಗಿ ಮಾಡಿದ. ಆದರೆ, ಇಡಲ್‌ಕಾವ್ ದಖೆಮ್‌ದ ರಾಜನ ಜಾರಜಪುತ್ರನೂ ತನ್ನ ಸೋದರಿಯರಲ್ಲೊಬ್ಬಳನ್ನು ಮದುವೆಯಾಗಿದ್ದ ಒಬ್ಬ ಮೈದುನನನ್ನು ರಾಜನನ್ನಾಗಿ ಮಾಡಬಯಸಿದ್ದ. ಈ ಕಾರಣದಿಂದ ಈ ಮೂವರು ಸಹೋದರರನ್ನು ಆ ದುರ್ಗದಲ್ಲಿ ಸೆರೆ ಹಿಡಿದಿಟ್ಟಿದ್ದ. ಅವನು ರಾಜನನ್ನಾಗಿ ಮಾಡಿದವನನ್ನು ಇಡಿ ರಾಜ್ಯ ಹಾಗೆಂದೇ ಸ್ವೀಕರಿಸಿತ್ತು ಮತ್ತು ಎಲ್ಲ ಮಹಾಪ್ರಭುಗಳು ರಾಜನ ಭಯಕ್ಕಾಗಿ, ಇಡಲ್‌ಕಾವ್ ಕೂಡ, ಅವನಿಗೆ ವಿಧೇಯರಾಗಿ ನಡೆದುಕೊಂಡರು (ಈ ಉದ್ಧೃತ ಭಾಗ ಐತಿಹಾಸಿಕ ದೃಷ್ಟಿಕೋನದಿಂದ ಅತಿ ಖಚಿತವೆಂದೆನಿಸುವುದಿಲ್ಲ). ಉಳಿದಿಬ್ಬರು ಸಹೋದರ ರನ್ನು ತನ್ನೊಂದಿಗೆ ಕರೆದೊಯ್ದ ಮತ್ತು ಪ್ರತಿಯೊಬ್ಬನಿಗೆ ಪ್ರತಿವರ್ಷ ಐವತ್ತು ಸಾವಿರ ಸುವರ್ಣ ಪರ್ದಾಒಗಳಂತೆ ವರ್ಷಾಶನ ನೀಡಿದ; ಅವರು ನಿಜಕ್ಕೂ ಆಗಿರುವಂತೆಯೆ ರಾಜಕುಮಾರರು ಮತ್ತು ಮಹಾಪ್ರಭುಗಳೆಂದು ಭಾವಿಸಿ ಅವರೊಂದಿಗೆ ಹಾಗೆಯೆ ನಡೆದುಕೊಳ್ಳುತ್ತಾನೆ. ಅವನು ತೆರಳಿದ್ದ ವರ್ಷವೇ ಸಂಭವಿಸಿದ ರಾಜನ ಬಿಸ್ನಗ ನಗರಕ್ಕೆ ಮರಳುವಿಕೆಯ ತರುವಾಯ ಶಾಂತಿ ಇಲ್ಲವೆ ಯುದ್ಧಕ್ಕೆ ಸಂಬಂಧಿಸಿದಂತೆ ಉಲ್ಲೇಖಾರ್ಹವಾದ ಇನ್ನೇನೂ ಅವನ ಮತ್ತು ಇಡಲ್‌ಕಾವ್ ಮಧ್ಯೆ ಜರುಗಲಿಲ್ಲ.

 

ಅಧ್ಯಾಯ ೧೮

ರಾಜ ಇದನ್ನು ಮುಕ್ತಾಯಗೊಳಿಸಿದ ಮತ್ತು ತನ್ನ ವೈರಿಗಳ ಮೇಲೆ ಇಷ್ಟು ದೊಡ್ಡ ವಿಜಯ ಸಾಧಿಸಿದ ತರುವಾಯ, ತಾನು ಆಗಲೆ ವಯಸ್ಸಾಗುತ್ತಿದ್ದುದನ್ನು ಕಂಡು ಮುಪ್ಪಿನಲ್ಲಿ ವಿಶ್ರಮಿಸಬಯಸಿದ. ತಾನು ಸತ್ತ ಮೇಲೆ ತನ್ನ ಮಗ ರಾಜನಾಗಬೇಕೆಂದು ಬಯಸಿ, ತನ್ನ ಮರಣಾನಂತರ ಏನಾಗುವುದೆಂದು ತಿಳಿಯದಿದ್ದುದರಿಂದ ಆ ಹುಡುಗ ಆರು ವರ್ಷದವ ನಿದ್ದರೂ ಸಹ ತನ್ನ ಜೀವಿತದಲ್ಲಿಯೇ ಅವನನ್ನು ರಾಜನನ್ನಾಗಿ ಮಾಡಲು ನಿರ್ಧರಿಸಿದ. ಆದುದರಿಂದ, ಅವನು ತನ್ನ ಸಿಂಹಾಸನ ಮತ್ತು ಎಲ್ಲ ಅಧಿಕಾರ ಹಾಗೂ ಅಭಿದಾನ ತ್ಯಜಿಸಿ ಅವನ್ನೆಲ್ಲ ತನ್ನ ಮಗನಿಗೆ ಕೊಟ್ಟು ಸ್ವತಃ ತಾನೆ ಅವನ ಮಂತ್ರಿಯಾದ ಮತ್ತು ಆ ಹುದ್ದೆಯಲ್ಲಿದ್ದ ಸಾಲ್ವಟಿನಿಕ (ಸಾಳುವ ತಿಮ್ಮ) ಅವನ ಸಲಹೆಗಾರನಾದ ಮತ್ತು ಅವನ ಮಕ್ಕಳಲ್ಲೊಬ್ಬನನ್ನು ಅವರಲ್ಲಿ ದೊಡ್ಡ ದೊರೆಯನ್ನಾಗಿ ಮಾಡಿದ. ರಾಜಾ ಕ್ರಿಸ್ನರಾವ್ ಎಲ್ಲಿಯವರೆಗೆ ಹೋದನೆಂದರೆ ತನ್ನ ಮಗನಿಗೆ ರಾಜ್ಯ ಕೊಟ್ಟ ಮೇಲೆ ಸ್ವತಃ ತಾನೆ ಅವನಿಗೆ ಪ್ರಣಾಮ ಸಲ್ಲಿಸುತ್ತಿದ್ದ. ಈ ಬದಲಾವಣೆಗಳೊಂದಿಗೆ ರಾಜ ಎಂಟು ತಿಂಗಳವರೆಗೆ ನಡೆದ ಉತ್ಸವ ಗಳನ್ನು ಏರ್ಪಡಿಸಿದ. ಆ ಸಮಯದಲ್ಲಿ ರಾಜನ ಮಗ ರೋಗಕ್ಕೆ ತುತ್ತಾಗಿ ತೀರಿಕೊಂಡ.

ಅವನ ಮರಣದ ತರುವಾಯ ಕ್ರಿಸ್ನರಾವ್ ತನ್ನ ಮಗ ಸಾಲ್ವಟಿನಿಕನ ಮಗ ಕೊಟ್ಟ ವಿಷದಿಂದ ತೀರಿಕೊಂಡನೆಂದು ತಿಳಿದು ಕೋಪದಲ್ಲಿ ಅದು ಹಾಗೆಯೆ ಆದುದು ಖಚಿತವೆಂದು ಬಗೆದು ಅವನು ಸಾಲ್ವಟಿಕನನ್ನು, ಅವನ ಮಗನನ್ನು, ಸಾಲ್ವಟಿನಿಕನ ಸಹೋದರ ಗೌಂಡಜನನ್ನು, ಇನ್ನುಳಿದ ಅನೇಕ ದಳವಾಯಿಗಳನ್ನು ಮತ್ತು ಸಾಲ್ವಟಿನಿಕನ ಸಂಬಂಧಿಕರನ್ನು ಕರೆಕಳಿಸಿ ಸಲಾಮಿನ ಸಮಯಕ್ಕೆ ಅವರಿಗೊಂದು ಭಾಷಣ ಮಾಡಿದ. ಅನೇಕ ದೊರೆಗಳು ಮತ್ತು ರಾಜ್ಯದ ಪ್ರಮುಖ ವ್ಯಕ್ತಿಗಳು ಮತ್ತು ಸಾಲ್ವಟಿನಿಕನ ಸಂಬಂಧಿಗಳು ಹಾಜರಿದ್ದರು. ಅವನು ಅವರನ್ನುದ್ದೇಶಿಸಿ ಹೀಗೆಂದ ; “ನಾನು ನಿನ್ನನ್ನು ನೆಚ್ಚಿನ ಗೆಳೆಯನೆಂದು ಪರಿಗಣಿಸಿದ್ದೆ. ಕಳೆದ ನಲವತ್ತು ವರ್ಷಗಳಿಂದಲೂ ನೀನು ನನಗಿತ್ತ ರಾಜ್ಯದಲ್ಲಿ ನೀನು ಮಂಡಲಾಧಿಪತಿ ಯಾಗಿದ್ದಿ. ಆದಾಗ್ಯು ನಾನು ನಿನಗೆ ಅದಕ್ಕಾಗಿ ಋಣದಲ್ಲಿರಬೇಕಾಗಿಲ್ಲ. ಏಕೆಂದರೆ, ಹಾಗೆ ಮಾಡುವಲ್ಲಿ ನೀನು ನಿನ್ನ ಕರ್ತವ್ಯಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ನಡೆದುಕೊಂಡೆ, ನನ್ನ ಸಹೋದರನಾಗಿದ್ದ ರಾಜ, ನಿನ್ನ ಸ್ವಾಮಿ ನಿನಗೆ ಹಾಗೆ ಆಜ್ಞೆಯಿತ್ತಿದ್ದ ರಿಂದ ನೀನು ನನ್ನ ಕಣ್ಣುಗಳನ್ನು ಕೀಳಿಸಲು ಬದ್ಧನಾಗಿದ್ದಿ. ಆದರೂ ಸಹ ನೀನು ಅವನ ಇಷ್ಟವನ್ನು ಪೂರೈಸಲೂ ಇಲ್ಲ. ಅವನಿಗೆ ವಿಧೇಯಾನಾಗಿಯೂ ನಡೆದುಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ನೀನು ಅವನಿಗೆ ಮೋಸ ಮಾಡಿದಿ ಮತ್ತು ಆಡಿನ ಕಣ್ಣುಗಳನ್ನು ಕೀಳಿಸಿದಿ. ಆದುದರಿಂದ, ನೀನೂ ಮತ್ತು ನಾನು ಅಷ್ಟೊಂದು ಅನುಗ್ರಹ ತೋರಿದ ನಿನ್ನ ಮಕ್ಕಳೂ ದ್ರೋಹಿಗಳಾಗುವಿರಿ. ಈಗ ನೀನು ಮತ್ತು ನಿನ್ನ ಮಕ್ಕಳು ಕೊಟ್ಟ ವಿಷದಿಂದ ನನ್ನ ಮಗ ಮೃತಪಟ್ಟನೆಂದು ನನಗೆ ತಿಳಿದಿದೆ ಮತ್ತು ಅದಕ್ಕಾಗಿ ನಿಮ್ಮನ್ನೆಲ್ಲ ಬಂಧಿಗಳನ್ನಾಗಿ ಮಾಡಲಾಗಿದೆ”. ಈ ಮಾತುಗಳೊಂದಿಗೆ ಅವನು ಎದ್ದುಬಂದು ಅವರನ್ನು ಹಿಡಿದು ಬಂಧಿಸಿದನು ಮತ್ತು ಹಾಗೆ ಮಾಡುವಲ್ಲಿ ತನ್ನ ನೆರವಿಗೆ ಬರುವಂತೆ ಕೋರಿ ಕುದುರೆಗಳೊಂದಿಗೆ ಆಗ ಆ ಪ್ರದೇಶದಲ್ಲಿದ್ದ ಅನೇಕ ಪೋರ್ತುಗೀಜರನ್ನು ತನ್ನ ನೆರವಿಗೆ ಕರೆದ. ಆ ತಂದೆ ಮಕ್ಕಳನ್ನು ಬಂಧಿಸಿದ ನಂತರ ಅವರು ಮೂರು ವರ್ಷ ಸೆರೆಮನೆಯಲ್ಲಿದ್ದರು. ಅವನು ಕೋದಮರದೆಯ

[1] ಮಗನನ್ನು ಮಂತ್ರಿಯನ್ನಾಗಿ ಮಾಡಿದ, ಅವನ ತಂದೆಯಾದ ರಾಜನ ಆಜ್ಞೆಯಂತೆ ರಾಜಾ ನರಸಿಂಗನ ಮಗನನ್ನು ಪೆನಗುಂಡಿಯ ಉದ್ಯಾನದಲ್ಲಿ ಮೋಸದಿಂದ ಕೊಂದಿದ್ದವನು ಇವನೇ. ಈ ಚರಿತ್ರೆಯಲ್ಲಿ ಇದನ್ನು ಈಗಾಗಲೆ ಹೇಳಲಾಗಿದೆ.

ಅದಾದ ಕ್ಷಿಪ್ರದಲ್ಲಿಯೆ ಸಾಲ್ವಟಿನಿಕನ ಮಗ ದಣಾಯಿಕ ಸೆರೆಮನೆಯಿಂದ ಪಾರಾಗಿ ದರೋಡೆಗಾರರು ಮತ್ತು ದಾರಿಗಳ್ಳರನ್ನು ಬಿಟ್ಟು ಬೇರಾರೂ ವಾಸಿಸದ ಬೆಟ್ಟಸಾಲಿಗೆ ಹೋದನು. ಇದರಲ್ಲಿದ್ದ ಒಂದು ದುರ್ಗದಲ್ಲಿ ಅವನ ಸಂಬಂಧಿಯಾಗಿದ್ದ ದಳವಾಯಿಯೊಬ್ಬನಿದ್ದ. ಅವನು ಇವನನ್ನು ಬರಮಾಡಿಕೊಂಡು ತನಗೆ ಸಾಧ್ಯವಿದ್ದ ಎಲ್ಲ ನೆರವು ನೀಡಿದ. ಅಲ್ಲಿಂದ ಅವನು ಕ್ರಿಸ್ನರಾವ್‌ನ ವಿರುದ್ಧ ಎಂಥ ಯುದ್ಧ ಮಾಡಿದನೆಂದರೆ ಅವನ ವಿರುದ್ಧ ಬಹಳ ಜನ ಕಳಿಸಬೇಕಾಯಿತು. ಮತ್ತು ಸೈನ್ಯದ ದಂಡನಾಯಕನಾಗಿ ಅವನು ತನ್ನ ಮಂತ್ರಿ ಅಜಬೊಯಿಸನನ್ನು ಕಳಿಸಿದ. ಅವನು ಆ ಸ್ಥಳವನ್ನು ಸುತ್ತು ಕಡೆಯಿಂದ ಮುತ್ತಿಗೆ ಹಾಕಿ ಅವನನ್ನು ಅದರೊಳಗೆ ಸೆರೆಹಿಡಿದು ಬಂಧಿಯನ್ನಾಗಿ ರಾಜನಲ್ಲಿಗೆ ತಂದ. ಅವನು ಹೀಗೆ ಬಂದನಂತರ ರಾಜ ಅವನನ್ನು ತನ್ನೆದುರು ಅವನ ತಂದೆ ಸಾಲ್ವಟಿನಿಕ ಮತ್ತು ಸೆರೆಮನೆಯಲ್ಲಿಟ್ಟಿದ್ದ ಅವನ ಇನ್ನೊಬ್ಬ ಸಹೋದರನೊಂದಿಗೆ ತರುವಂತೆ ಆಜ್ಞೆ ಮಾಡಿದ. ಅವರನ್ನು ಗಲ್ಲು ಸ್ಥಳಕ್ಕೆ ಕಳಿಸಿ ಅವರ ಕಣ್ಣು ಕೀಳಿಸಿದ. ಏಕೆಂದರೆ, ಈ ದೇಶದಲ್ಲಿ ಬ್ರಾಹ್ಮಣರನ್ನು ಕೊಲ್ಲದೆ ಶಿಕ್ಷೆ ಮಾತ್ರ ವಿಧಿಸಿ ಜೀವಿಸಗೊಡುತ್ತಾರೆ. ಆದುದರಿಂದ. ಅವನು ಅವರನ್ನು ಪುನಃ ಸೆರೆಮನೆಯಲ್ಲಿಟ್ಟ. ಮತ್ತು ಅಲ್ಲಿಯೆ ತಿಮ್ಮನಾಯಿಕ ತೀರಿಕೊಂಡ ಮತ್ತು ಅವನ ತಂದೆ ಇನ್ನೊಬ್ಬ ಮಗ ಗಮದರ್ಜ[2]ನೊಂದಿಗೆ ಸೆರೆಮನೆಯಲ್ಲುಳಿದ.

 

ಅಧ್ಯಾಯ ೧೯

ಈ ಸಮಯಕ್ಕೆ ಹೊಸದಾಗಿ ಇಡಲ್‌ಕಾವ್ ತನ್ನ ಸೈನ್ಯ ಸಂಗ್ರಹಿಸಿ ತನ್ನ ಅಶ್ವ ಹಾಗೂ ಗಜಪಡೆಗಳನ್ನು ಹೊಸದಾಗಿ ರಚಿಸಿ ಬಿಸ್ನಗ ರಾಜನ ಅಧೀನದಲ್ಲುಳಿದ ರಾಚೋಲ್‌ನ ಮೆಲೆ ದಂಡಯಾತ್ರೆ ಹೊರಟ. ಈ ಸುದ್ದಿ ಕೇಳಿ ಕ್ರಿಸ್ನರಾವ್ ಯಾರಿಗೂ ಹೇಳದೆ ಕುದುರೆಗೆ ಜೀನು ತೊಡಿಸಲು ಆಜ್ಞೆಯಿತ್ತ ಮತ್ತು ಇಡಲ್‌ಕಾವ್ ಆಗಲೆ ಅಲ್ಲಿದ್ದ ರಾಚೋಲ್‌ನತ್ತ ತುಂಬ ವೇಗವಾಗಿ ಕುದುರೆ ಏರಿ ನಡೆದ. ಆದರೆ, ರಾಜನ ಆಗಮನ ತಿಳಿದ ಕೂಡಲೆ ವೈರಿ ಓಡಿದ. ದಾರಿಯಲ್ಲಿ ಕ್ರಿಸ್ನರಾವ್ ೧೦೦೦ ಪರ್ದಾಗಳಿಗೆ ೪೩/೪ ರಂತೆ ಆರುನೂರು ಕುದುರೆಗಳನ್ನು ಪೋರ್ತುಗೀಜರಿಂದ ಕೊಂಡ.[3] ಅವನು ಈಗಾಗಲೆ ಎರಡು ಬಾರಿ ತನ್ನ ವಚನಗಳನ್ನು ಮುರುದಿದ್ದುದಾಗಿಯೂ ಮತ್ತು ನೀಡಿದ್ದ ಆಶ್ವಾಸನೆಯನ್ನು ಪೂರೈಸದಿದ್ದುರಿಂದ ತಾನು ಅವನ ಮೇಲೆ ಎಂಥ ಯುದ್ಧ ಮಾಡುವೆನೆಂದರೆ ಅವನು ಬಲವಂತವಾಗಿ ತನ್ನ ಸಾಮಂತನಾಗಬೇಕಾಗುವುದೆಂದೂ ಮತ್ತು ಅವನಿಂದ ತಾನು ಬಿಳ್ಗಾವ್[4] ಪಡೆದುಕೊಳ್ಳುವವರೆಗೆ ಅವನನ್ನು ಬಿಡುವುದಿಲ್ಲವೆಂದೂ ಹೇಳಿ ಅವನು ರಾಚೋಲ್‌ನಿಂದ ಇಡಲ್‌ಕಾವ್‌ನಿಗೆ ಸಂದೇಶ ಕಳಿಸಿದ.

ಈಗ ಚಳಿಗಾಲ ಆರಂಭಿಸಿದ್ದರಿಂದ ರಾಜ ಮುಂದುವರಿಯಲಾಲಿಲ್ಲ ಆದುದರಿಂದ ಈ ಯುದ್ಧಕ್ಕೆ ಸಿದ್ಧವಾಗಲು ಅವನು ಬಿಸ್ನಗಕ್ಕೆ ಹೋಗಿ ದೊಡ್ಡ ಫಿರಂಗಿದಳವನ್ನು ಸಜ್ಜು ಗೊಳಿಸಲು ಆಜ್ಞೆಯಿತ್ತ ಮತ್ತು ಗೋವಾಕ್ಕೆ ರಾಯಭಾರಿಯನ್ನು ಕಳಿಸಿ ಮಂಡಲಾಧಿಪತಿಯ ನೆರವು ಕೋರಿದ. ಬಿಳಿಗಾವ್ ವಶಪಡಿಸಿಕೊಂಡ ಮೇಲೆ ಭೂಭಾಗವನ್ನು ಅವನಿಗೆ ಕೊಡುವುದಾಗಿ ವಚನವಿತ್ತ. ಏಕೆಂದರೆ, ಈ ಬಿಳ್ಗಾವ್ ನಗರ ಗೋವಾದಿಂದ ಹದಿನೈದು ಹರದಾರಿ ಇದೆ ಮತ್ತು ಅದರ ದಳವಾಯಿ ಗೋವಾದ ಭೂಭಾಗದ ಅಧಿಪತಿಯೂ ಆಗಿರುವನು. ಗೋವಾ ಅವನ ಬಿಳ್ಗಾವ್ ನಗರದ ಗಡಿಯಾಗಿದೆ ಮತ್ತು ಗೋವಾದ ಭೂಭಾಗದಿಂದ ಮೂರು ಹರದಾರಿ ದೂರವಿರುವ ಪೊಂಡಾದಲ್ಲಿನ ದುರ್ಗದಲ್ಲಿ ಅವನ ದಳವಾಯಿಗಳಲ್ಲೊಬ್ಬನಿದ್ದಾನೆ. ಅವನು ಕಂದಾಯ ಸ್ವೀಕರಿಸುತ್ತಾನೆ ಮತ್ತು ಹಲವಾರು ಹಳ್ಳಿಗಳ ಮೇಲೆ ಅಧಿಪತ್ಯ ಹೊಂದಿರುವನು. ಇದೇ ರೀತಿ ಇವುಗಳಿಗೆ ಮತ್ತು ಉಳಿದವುಗಳಿಗೆ, ಇಡಿ ನಾಡಿನ ಪ್ರಭುವಾದ ಇಡಲ್‌ಕಾವ್ ನಿಯಮಿಸಿದ ಬೇರೆ ದಳವಾಯಿಗಳು ಇರುವರು.[5]

ಕ್ರಿಸ್ನರಾವ್ ಹೀಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಅವನು ಒಮ್ಮೆಲೆ ಅವನ ಪೂರ್ವಜರೆಲ್ಲ ಸತ್ತಿದ್ದ ತೊಡೆಸಂದಿನ ಬೇನೆಗೆ ತುತ್ತಾದ. ಬಿಸ್ನಗದ ಎಲ್ಲ ರಾಜರು ಸಾಯುವುದು ಇದೇ ಬೇನೆಯಿಂದ.

ಈ ರಾಜಾ ಕ್ರಿಸ್ನಾರಾವ್ ತರುಣನಿದ್ದು ಈ ಬಿಸ್ನಗ ನಗರದಲ್ಲಿ ಬೆಳೆಯುತ್ತಿದ್ದಾಗ ಒಬ್ಬ ವಾರಾಂಗನೆಯೊಂದಿಗೆ ಗುಪ್ತ ಪ್ರಣಯ ಹೊಂದಿದ್ದ. ಅವನಿಗೆ ಅವಳಲ್ಲಿ ಬಹಳ ಅನುರಕ್ತಿಯಿತ್ತು ಮತ್ತು ಅವಳ ಹೆಸರು ಚಿಣದೇವಿದಿ ಎಂದಿತ್ತು. ಅವಳಲ್ಲಿ ತಾನು ಇಟ್ಟಿದ್ದ ವಿಫುಲ ಪ್ರೇಮಕ್ಕಾಗಿ ತಾನು ರಾಜನಾದರೆ ಅವಳನ್ನು  ಮದುವೆಯಾಗುವುದಾಗಿ ಅನೇಕ ಬಾರಿ ಅವನು ವಚನಕೊಟ್ಟಿದ್ದ. ಇದನ್ನು ವಿನೋದಕ್ಕಾಗಿ ಅವನು ಹೇಳಿದ್ದರೂ ಅದು ಅನಂತರ ನಿಜವಾಯಿತೆಂದು ಚರಿತ್ರೆ ದಾಖಲಿಸಿದೆ. ಏಕೆಂದರೆ, ಸಿಂಹಾಸನಕ್ಕೇರಿಸಿದ ಮೇಲೂ ತಾನು ತರುಣನಿದ್ದಾಗ ಮಾಡುತ್ತಿದ್ದ ವಿಷಯಗಳಿಂದ ದೂರ ಮಾಡಲ್ಪಟ್ಟಿದರೂ ಅವನು ಈ ಸ್ತ್ರೀಯೊಂದಿಗಿನ ಪ್ರೇಮವನ್ನು ಮರೆಯದೆ ಗುಪ್ತವಾಗಿ ತನ್ನ ಅರಮನೆಯಿಂದ ಅವಳ ಮನೆಗೆ ಹೋಗುತ್ತಿದ್ದ ಮತ್ತು ಇದನ್ನು ಒಂದು ರಾತ್ರಿ ಕಂಡುಹಿಡಿದು ಅವನು ಆ ಸ್ತ್ರೀಯ ಮನೆಯೊಳಗೆ ಪ್ರವೇಶಿಸುವುದನ್ನು ನೋಡುತ್ತ ನಿಂತಿದ್ದ ಅವನ ಮಂತ್ರಿ ಸಾಲ್ವಟಿನಿಕ ಅದಕ್ಕಾಗಿ ಅವನನ್ನು ಬಹಳ ಬೈದು ಮರಳಿ ಅರಮನೆಗೆ ಕರೆದೊಯ್ದ. ಆಗ ರಾಜ ತಾನು ಅವಳನ್ನು ಎಷ್ಟೊಂದು ಪ್ರೀತಿಸುತ್ತಿರುವೆನೆಂದು ಅವಳನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿರುವುದಾಗಿಯೂ ಮತ್ತು ಯಾವುದೇ ಪರಿಸ್ಥಿತಿಯಲ್ಲಿಯೂ ಹಾಗೆ ಮಾಡಲು ನಿರ್ಧರಿಸಿರುವುದಾಗಿಯೂ ಅವನಿಗೆ ಹೇಳಿದ. ಅದರ ಬಗೆಗೆ ಅವನು ಎಷ್ಟು ಅಚಲನಾಗಿರುವನೆಂಬುದನ್ನು ನೋಡಿದ ಮಂತ್ರಿ ಅವನ ಇಚ್ಛೆಗೆ ಮಣಿದು ಮಹಾಸ್ವಾಮಿಗಳಿಗೆ ಅದಕ್ಕಾಗಿ ದೂಷಣೆ ಒದಗದ ರೀತಿಯಲ್ಲಿ ಅದನ್ನು ಸಾಧಿಸುವುದಾಗಿ ಹೇಳಿದ. ಇದನ್ನು ಮಾಡಲೋಸುಗ ಅವನು ನರಸಿಂಗದ ರಾಜರ ಮನೆತನದ ಒಬ್ಬ ಅತಿ ಸುಂದರ ಹೆಂಗಸನ್ನು ಆಯ್ದು ತಂದ ಮತ್ತು ಅವಳನ್ನು ಅವನೊಂದಿಗೆ ವಿವಾಹ ಮಾಡಿದ ನಂತರ ಸಮಾರಂಭದ ಕೊನೆಗೆ ಅವನು ಈ ಹೆಂಗಸು ಮತ್ತು ಆ ಹೆಂಗಸನ್ನು ಒಂದು ಮನೆಯಲ್ಲಿಟ್ಟು ಅದಕ್ಕೆ ಒಂದು ದೊಡ್ಡ ಮತ್ತು ಎತ್ತರವಾದ ಗೋಪುರ ಕಟ್ಟಿಸಿ ಅವಳನ್ನು ಅದರಲ್ಲಿಸಿದ. ತರುವಾಯದಲ್ಲಿ ರಾಜ ಇತರ ಅನೇಕ ಹೆಂಡಂದಿರನ್ನು ಲಗ್ನವಾದ. ಏಕೆಂದರೆ, ಈ ರಾಜರು ಬಹಳ ಹೆಂಡಂದಿರನ್ನು ಹೊಂದಿರುವುದು ಬಹಳ ಘನವಾದುದೆಂದು ಬಗೆಯುತ್ತಾರೆ. ಈ ರಾಜಾ ಕ್ರಿಸ್ನರಾವ್ ನಾಲ್ವರನ್ನು ಮದುವೆಯಾದನಾದರೂ ಇವಳನ್ನು ಇತರ ಎಲ್ಲರಿಗಿಂತ ಹೆಚ್ಚು ಪ್ರೀತಿಸಿದ. ಈ ರಾಜ ಇವಳ ಗೌರವಾರ್ಥ, ಅವಳಲ್ಲಿ ತಾನಿಟ್ಟಿದ್ದ ಪ್ರೀತ್ಯರ್ಥವಾಗಿ, ಒಂದು ನಗರವನ್ನು ಕಟ್ಟಿ ಅದಕ್ಕೆ ನಾಗಲಾಪುರವೆಂದು ಹೆಸರಿಟ್ಟು ತನ್ನ ರಾಜ್ಯದಲ್ಲಿಯೆ ಅತ್ಯುತ್ತಮ ಕಾರ್ಯವಾದ ಒಂದು ಹೊಸ ಗೋಡೆಯನ್ನು ಅದರ ಸುತ್ತ ಕಟ್ಟಿಸಿದ ಮತ್ತು ಗಚ್ಚುಗಾರೆಗಳಿಂದಲೆ ಕಟ್ಟಿದ ಮನೆಗಳುಳ್ಳ ಒಂದು ಉದ್ದ ಹಾಗೂ ವಿಶಾಲವಾದ ರಸ್ತೆಯನ್ನು ಅದರಲ್ಲಿ ನಿರ್ಮಿಸಿದ. ಈ ನಗರಲ್ಲಿ ಜನರನ್ನು ವಸತಿಗೊಳಿಸಲೋಸುಗ ಅಲ್ಲಿ ತಮ್ಮ ಅರಮನೆಗಳನ್ನು ಕಟ್ಟಿಸಿಕೊಳ್ಳುವಂತೆ ತನ್ನ ರಾಜ್ಯದ ದೊರೆಗಳೆಲ್ಲರಿಗೆ ಆಜ್ಞೆಯಿತ್ತ ಮತ್ತು ಅವರು ಹಾಗೆಯೆ ಮಾಡಿದರು. ಈ ನಗರದಲ್ಲಿ ಒಂದು ಪ್ರಮುಖ ಬೀದಿಯಿದೆ. ಅದರ ಉದ್ದ ನಾಲ್ಕು ಸಾವಿರ ಏಳುನೂರು ಅಡಿ[6] ಮತ್ತು ನಲವತ್ತು ಅಡಿ ಅಗಲ ಇದ್ದು ಖಂಡಿತವಾಗಿಯೂ ನೋಡಲು ಸಾಧ್ಯವಿರುವ ಅತ್ಯಂತ ಸುಂದರ ಬೀದಿಯಾಗಿದೆ. ಖರ್ಚು ಲೆಕ್ಕಿಸದೆ ಅವನು ಈ ನಗರವನ್ನು ನಿರ್ಮಿಸಿದ ಮತ್ತು ಪೂರ್ಣಗೊಳಿಸಿದ. ಈ ನಾಡಿನಲ್ಲಿ ಸುಂಕ ಬಹಳವಿದ್ದು ಅದು ಈಗ ಒಳಗೆ ಬರುವ ವಸ್ತುಗಳಿಂದ ಬರುವ ಸುಂಕದಿಂದ ನಲವತ್ತೆರಡು ಸಾವಿರ ಪರ್ದಾಒಗಳನ್ನು ನೀಡುತ್ತದೆ. ಏಕೆಂದರೆ, ಪುರುಷ, ಸ್ತ್ರೀಯರು ಅಲ್ಲದೆ ತಲೆ ಹೊರೆ ಮತ್ತು ಎಲ್ಲ ಸರಕೂ ಬಿಡದಂತೆ ಯಾವುದೂ ಸುಂಕ ಕೊಡದಂತೆ ದ್ವಾರದೊಳಕ್ಕೆ ಪ್ರವೇಶಿಸುವಂತಿಲ್ಲ.

ರಾಜ ತನ್ನ ಕಾಲದಲ್ಲಿ ನೀರಿಗಾಗಿ ಎರಡು ಬಲು ಎತ್ತರವಿರುವ ದಡಗಳ ಮಧ್ಯೆ ಇರುವ  ಕೆರೆಯನ್ನು ನಿರ್ಮಿಸಿದ. ಈ ನಾಡಿನಲ್ಲಿ ಅದನ್ನು ಮಾಡುವ ಸಾಧನವಾಗಲಿ ಮಾಡುವವನಾಗಲಿ ಇರದ್ದರಿಂದ ಕೆಲವು ಪೋರ್ತುಗೀಜ ಉಪ್ಪಾರರನ್ನು ಮಂಡಲಾಧಿಪತಿಯನ್ನು ಕೋರಿ ಗೋವಾಕ್ಕೆ ಹೇಳಿಕಳಿಸಿದ. ಮಂಡಲಾಧಿಪತಿ ಕಲ್ಲಿನ ಬಹುಕುಶಲ ಕೆಲಸಗಾರನಾದ ಜೊಆಒ ಡೆಲಾಪೊಂಟಿ[7]ಯನ್ನು ಕಳಿಸಿದ. ರಾಜ ಅವನಿಗೆ ಕೆರೆಯನ್ನು ಹೇಗೆ ಕಟ್ಟಬೇಕೆಂದು ತಾನು ಬಯಸಿರುವುದನ್ನು ಹೇಳಲಾಗಿ ಅವನು ನಕ್ಕ. ಏಕೆಂದರೆ, ಅವನ ನಾಡಿನಲ್ಲಿ ಮನೆ ಕಟ್ಟಲು ಸುಣ್ಣವನ್ನು ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ದೊಡ್ಡ ದೊಡ್ಡ ಕಲ್ಲುಗಳನ್ನು ಮತ್ತು ಬಂಡೆಗಳನ್ನು ಕೊಳ್ಳದಲ್ಲಿ ಒಗೆಯಲು ರಾಜ ಆಜ್ಞೆಯಿತ್ತ. ಆದರೆ ಎಲ್ಲ ಪುಡಿ ಪುಡಿಯಾದುದರಿಂದ ದಿನವಿಡಿ ಮಾಡಿದ ಕೆಲಸ ರಾತ್ರಿಯಲ್ಲಿ ಹಾಳಾಗುತ್ತಿತ್ತು. ಇದರಿಂದ ಅಚ್ಚರಿಗೊಂಡ ರಾಜ ತನ್ನ ಪಂಡಿತರನ್ನು ಮತ್ತು ಮಾಂತ್ರಿಕರನ್ನು ಕಳಿಸಿ ಇದರ ಬಗೆಗೆ ಅವರ ವಿಚಾರ ಕೇಳಿದ. ಆ ಕೆಲಸ ಅಷ್ಟೊಂದು ದೊಡ್ಡದಿದ್ದು ಅವನು ದೇವತಾ ವಿಗ್ರಹಗಳಿಗೆ ಏನನ್ನೂ ನೀಡದಿದ್ದುದರಿಂದ ಅವುಗಳು ಅವನ ಕೆಲಸದ ಬಗೆಗೆ ಸಿಟ್ಟಾಗಿವೆಯೆಂದೂ ಅಲ್ಲಿ ಅವನು ಪುರುಷರ ಇಲ್ಲವೆ ಸ್ತ್ರೀಯರ ಇಲ್ಲವೆ ಕೋಣಗಳ ರಕ್ತ ಸುರಿಸದಿದ್ದರೆ ಆ ಕೆಲಸ ಎಂದೂ ಪೂರ್ತಿಗೊಳ್ಳದೆಂದೂ ಅವರು ಅವನಿಗೆ ಹೇಳಿದರು. ಆದುದರಿಂದ, ರಾಜ ತನ್ನ ಬಂದಿಗಳಾಗಿದ್ದ ಮತ್ತು ಮರಣಕ್ಕೆ ಅರ್ಹರಾಗಿದ್ದ ಎಲ್ಲ ಪುರುಷರನ್ನೂ ತರಲು ಕಳಿಸಿ ಅಲ್ಲಿ ತಲೆ ಕತ್ತರಿಸಲು ಆಜ್ಞಾಪಿಸಿದ. ಇದರೊಂದಿಗೆ ಕೆಲಸ ಮುಂದುವರಿಯಿತು. ಕೊಳ್ಳದ ಮಧ್ಯದಲ್ಲಿ ಅಡ್ಡಲಾಗಿ ಅವನು ಎಂಥ ಎತ್ತರವಾದ ಮತ್ತು ಅಗಲವಾದ ಒಡ್ಡು ಕಟ್ಟಿದನೆಂದರೆ ಅದು ಉದ್ದಕ್ಕಾಗಲಿ ಅಗಲಕ್ಕಾಗಲಿ ಬಾಣ ಹೋಗುವಷ್ಟು ದೂರವಿತ್ತು ಮತ್ತು ದೊಡ್ಡ ಕಂಡಿಗಳನ್ನು ಹೊಂದಿತ್ತು. ಮತ್ತು ಅದರ ಕೆಳಗೆ ನೀರು ಹರಿದುಹೋಗಲು ಕೊಳವೆಗಳನ್ನು ಜೋಡಿಸಿದ ಮತ್ತು ಮುಚ್ಚಬೇಕೆಂದಾಗ ಅವರು ಅವುಗಳನ್ನು ಮುಚ್ಚುತ್ತಿದ್ದರು. ಈ ನೀರಿನ ಸಹಾಯದಿಂದ ಅವರು ನಗರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು ಮತ್ತು ಭತ್ತದ ಹೊಲಗಳಿಗೆ ಮತ್ತು ತೋಟಗಳಿಗೆ ನೀರುಣಿಸಲು ಅನೇಕ ಕಾಲುವೆಗಳನ್ನು ಕಟ್ಟಿದರು. ಹೊಲಗಳನ್ನು ಸುಧಾರಿಸಲೋಸುಗ ಈ ನೀರಿನಿಂದ ನೀರುಣ್ಣುವ ಹೊಲಗಳನ್ನು ಜನರಿಗೆ ಒಂಬತ್ತು ವರ್ಷ ಅವರು ಸುಧಾರಣೆ ಮಾಡಿಕೊಳ್ಳುವವರೆಗೆ ಉಚಿತವಾಗಿ ಕೊಟ್ಟ. ತತ್ಫಲವಾಗಿ ಈಗಾಗಲೆ ಕಂದಾಯ ೨೦,೦೦೦ ಪರ್ದಾಒಗಳಿಗೆ ಏರಿದೆ.

ಈ ಕೆರೆಯ ಮೇಲೆ ಸುತ್ತಲೂ ಆವರಣವಿರುವ ಒಂದು ದೊಡ್ಡ ದಿಂಡು ಇದೆ ಮತ್ತು ಅದರ ಮಧ್ಯಕ್ಕೆ ಈಚೆಗೊಂದು ಅಚೆಗೊಂದು ಎರಡು ಗೋಪುರಗಳುಳ್ಳ ಕೆಲವು ಬಲು ಗಟ್ಟಿಯಾದ ದ್ವಾರಗಳಿವೆ. ಒಳಗೆ ಯಾವಾಗಲೂ ಕಾವಲಿರುವ ೧೦೦೦ ಜನ ಇರುತ್ತಾರೆ. ಎಲ್ಲ ರಸ್ತೆಗಳು ಅಲ್ಲಿ ಕೂಡಿದ್ದು ಬಿಸ್ನಗ ನಗರವನ್ನು ಪ್ರವೇಶಿಸಲು ಇದನ್ನು ಬಿಟ್ಟರೆ ಅನ್ಯ ಮಾರ್ಗವಿರದ್ದರಿಂದ ಎರಡೂ ನಗರಗಳಲ್ಲಿ ಬರುವ ವಸ್ತುಗಳೆಲ್ಲ ಇದೇ ದ್ವಾರದ ಮೂಲಕ ಪ್ರವೇಶಿಸಬೇಕು. ಈ ದ್ವಾರವನ್ನು ಪ್ರತಿ ವರ್ಷ ೧೨,೦೦೦ ಪರ್ದಾಒಗಳಿಗೆ ಬಾಡಿಗೆಗೆ ಕೊಡಲಾಗುತ್ತದೆ ಮತ್ತು ಯಾರೂ, ಅವನು ಸ್ವದೇಶೀಯನಿರಲಿ, ವಿದೇಶೀಯನಿರಲಿ, ಬಾಡಿಗೆದಾರರು ಕೇಳಿದಷ್ಟು ಹಣ ಕೊಡದೆ ಪ್ರವೇಶಿಸುವಂತಿಲ್ಲ. ಇವೆರಡೂ ನಗರಗಳಲ್ಲಿ ಆಹಾರ ಸಾಮಗ್ರಿಯಾಗಲಿ ವ್ಯಾಪಾರಿ ಸರಕಾಗಲಿ ಯಾವುದೂ ಇಲ್ಲದ್ದರಿಂದ ಎಲ್ಲವೂ ಹೊರಗಿನಿಂದ ಹೇರು ಎತ್ತುಗಳ ಮೇಲೆ ಬರುತ್ತದೆ. ಏಕೆಂದರೆ, ಈ ನಾಡಿನಲ್ಲಿ ಭಾರ ಹೊರಲು ಅವರು ಯಾವಾಗಲೂ ಪ್ರಾಣಿಗಳನ್ನು ಬಳಸುತ್ತಾರೆ. ಪ್ರತಿದಿನ ಈ ದ್ವಾರಗಳ ಮೂಲಕ ೨೦೦೦ ಎತ್ತುಗಳು ಪ್ರವೇಶಿಸುತ್ತವೆ ಮತ್ತು ರಾಜ್ಯದ ಯಾವುದೆ ಭಾಗದಲ್ಲಿ ಎಂದೂ ಏನನ್ನೂ ಕೊಡಬೇಕಿರದ ಕೆಲವು ಕೋಡು ಇಲ್ಲದ ಎತ್ತುಗಳನ್ನು ಬಿಟ್ಟರೆ ಇವುಗಳಲ್ಲಿ ಪ್ರತಿಯೊಂದು ಮೂರು ವಿಂಟೆಮ್‌ಗಳನ್ನು[8] ತೆರಬೇಕಾಗುತ್ತದೆ.

ಇವೆರಡು ನಗರಗಳ ಹೊರಗಡೆ ಗೋಧಿ, ಕಡಲೆ ಮತ್ತು ರಾಗಿಗಳಿಂದ ಫಲವತ್ತಾಗಿ ಸಾಗುವಳಿಗೈದ ಹೊಲಗಳೂ ಇವೆ. ಕೊನೆಯದನ್ನು ಈ ಪ್ರದೇಶದಲ್ಲಿ ಅತಿ ಹೆಚ್ಚಾಗಿ ತಿನ್ನುತ್ತಾರೆ ; ಅದರ ನಂತರ, ಈ ದೇಶದ ಬಹುಭಾಗದಲ್ಲಿ ಯಾವಾಗಲೂ ತಿನ್ನುವ ಮತ್ತು ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವಾದ ಅಡಿಕೆ.[1]      ಈ ಹೆಸರನ್ನು ಯಾವುದೆ ಸಾಮಾನ್ಯ ಹಿಂದೂ ಹೆಸರು ಅಥವಾ ಬಿರುದು ಎಂದು ಗುರುತಿಸುವುದು ನನಗೆ ಸಾಧ್ಯವಾಗಿಲ್ಲ. ನನ್ನ ಗ್ರಹಿಕೆಯಂತೆ “ಕೋದಮೆರದೆಯ ಮಗ”ಎಂದು ಉದ್ದೇಶಿಸಿರ ಬಹುದು. ಕಾಗುಣಿತದಲ್ಲಿ ಗೊಂದಲವುಂಟಾಗಿದ್ದ ಪಕ್ಷದಲ್ಲಿ ರಾಚೋಲಿನ ಮಹಾದಂಡಯಾತ್ರೆ ಯಲ್ಲಿ ರಾಜನ ಪಡೆಗಳ ನೇತೃತ್ವ ವಹಿಸಿದ್ದ ಬಲಿಷ್ಠ ಮನ್ನೆಯರ ಕಡೆ ಗಮನ ಸೆಳೆಯುತ್ತೇನೆ. ಅವರಲ್ಲೊಬ್ಬ ‘ಕೊಂಡಮಾರ’ಎಂಬವನಿದ್ದ. ಈ ಅಧ್ಯಾಯದ ಕೊನೆಯ ವಾಕ್ಯವೃಂದದಲ್ಲಿ ಈ ನೂತನ ಮಂತ್ರಿಯ ಹೆಸರನ್ನು ‘ಅಜಬೊಯಿಸ’ಎಂದು ಮತ್ತು ಪ್ರಾಂತೀಯ ಪ್ರಭುಗಳ ಪಟ್ಟಿಯಲ್ಲಿ ‘ಅಜಪರ್ಕಟಿಮಪ’ಎಂದು ಕೊಡಲಾಗಿದೆ. ಎರಡನೆಯದು ಮೊದಲನೆಯದಕ್ಕಿಂತ ಹೆಚ್ಚು ಸಮಂಜಸವೆನಿಸುತ್ತದೆ. ಮೊದಲರ್ಧ ಮನೆತನದ ಹೆಸರು ಮತ್ತು ಕೊನೆಯದು ಅವನ ಸ್ವಂತ ಹೆಸರು ‘ತಿಮ್ಮಪ್ಪ’ಎಂದಿದ್ದಿರಬಹುದು.

[2]      ಈ ಅಧ್ಯಾಯದ ಮುಂಚಿನ ಉದ್ಧೃತ ಭಾಗದಲ್ಲಿ ಸಾಳುವ ತಿಮ್ಮನಿಗೆ ಗೌಂಡಜ ಎಂಬ ತಮ್ಮನಿದ್ದನೆಂದು ಹೇಳಲಾಗಿದೆ. ಎರಡನ್ನೂ ಹೋಲಿಸಿ ನೋಡಿದರೆ ಅವನ ತಮ್ಮ ಮತ್ತು ಮಗ ಇಬ್ಬರಿಗೂ ಬಹುಶಃ ಗಂಡರಾಜ ಎಂಬ ಒಂದೇ ಹೆಸರಿತ್ತೆಂದು ತೋರುತ್ತದೆ. ಪ್ಯಾಸ್ ತನ್ನ ಕಾಲದಲ್ಲಿ ತಮ್ಮ ರಾಜಧಾನಿಯ ಮಂಡಲಾಧಿಪತಿಯಾಗಿದ್ದನೆಂದು ಉಲ್ಲೇಖಿಸುತ್ತಾನೆ. ಅವನನ್ನು ‘ಗರೋದರಾಜೊ’ಎಂದು ಕರೆಯುತ್ತಾನೆ.

[3]      ೪೦೦೦ ಪರ್ದಾಒಗಳಿಗೆ ಹತ್ತೊಂಬತ್ತು. ಚರಿತ್ರಕಾರ ವಿಜಯನಗರದಲ್ಲಿ ಕುದುರೆ ವ್ಯಾಪಾರಿ ಯಾಗಿದ್ದ. ಮುಂದೆ ಅವನು ಒಂದು ಸಾವಿರ ಪರ್ದಾಒಗಳಿಗೆ ಹನ್ನೆರಡು ಅಥವಾ ಹದಿನೈದು ಕುದುರೆಗಳು ಸಾಮಾನ್ಯ ಬೆಲೆಯಾಗಿತ್ತೆಂದು ಉಲ್ಲೇಖಿಸುತ್ತಾನೆ.

[4]      ಬೆಳಗಾಂವಿ.

[5]      ಪೊಂಡಾದ ದಳವಾಯಿ ಅಂಕುಶ್‌ಖಾನ ಇದ್ದ.

[6]      ಸುಮಾರು ಒಂದೂಕಾಲು ಮೈಲೂ, ನಾಗಲಾಪುರ ಎಂದರೆ ಆಧುನಿಕ ಹೊಸಪೇಟೆ , ಅಳತೆ ನಿಕರವಾಗಿದ್ದರೆ, ನಿಸ್ಸಂಶಯವಾಗಿಯೂ ರಾಜಧಾನಿಗೆ ಹೋಗುವ ಈ ಬೀದಿ ಈಗಿಲ್ಲ.

[7]      ಹದಿನಾರನೆಯ ಶತಮಾನದ ಇತಿಹಾಸದಲ್ಲಿ ಡೆಲಾ ಪೊಂಟಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಉಲ್ಲೇಖಿಸಲಾಗಿದೆ. ವೆನಿಸ್‌ದಲ್ಲಿನ ರಿಯಾಲ್ಟೊ ಕ್ರಿ.ಶ. ೧೫೮೮ರಲ್ಲಿ ಆ್ಯಂಟೊನಿಯೊ ಡೆಲಾ ಪೊಂಟಿಯಿಂದ ನಿರ್ಮಿತವಾದುದರಿಂದ ಅವರು ಬಹುಶಃ ಇಟ್ಯಾಲಿಯನ್ ಅಥವಾ ಇಟ್ಯಾಲಿಯನ್ ಮೂಲದ ಕುಟುಂಬವಾಗಿದ್ದುದು ಮತ್ತು ವೃತ್ತಿಯಿಂದ ಅಭಿಯಂತರಾಗಿದ್ದರು.  ಇದಾದರೊ ಕಾಲ್ಪನಿಕ ಸಂಬಂಧವಾಗಿರಬಹುದು. ಪೋರ್ತುಗಾಲ ಮತ್ತು ಇಟಲಿ ಎರಡರಲ್ಲೂ ಸೇತುವೆ ನಿಮಾಣದಲ್ಲಿ ಕೌಶಲ್ಯ ಪಡೆದಿದ್ದ ಅಥವಾ ಹಿಂದಿನ ಕಾಲದಲ್ಲಿ ಆ ಮನೆತನದವನೊಬ್ಬ ಯಾವುದೊ ಒಂದು ಸೇತುವೆಯ ನಿರ್ಮಾಣದಲ್ಲಿ ವಿಶೇಷತೆ ಪಡೆದ ಪರಿಣಾಮವಾಗಿ ಆ ಅಡ್ಡ ಹೆಸರನ್ನು ಪಡೆದಿರುವ ಸಾಧ್ಯತೆಯಿದೆ. ಗ್ರಂಥ ಪಾಠದಲ್ಲಿ ಅಭಿಯಂತ, ಬಹುಶಃ ಪೋರ್ತುಗಾಲ ರಾಜ ಕ್ರಿ.ಶ. ೧೫೨೦ರ ಏಪ್ರಿಲ್ ಕೊನೆಗೆ ಮೊರೊಕೊದಲ್ಲಿನ ಟೆಟುಆನ್‌ನಲ್ಲಿ ದುರ್ಗವೊಂದನ್ನು ಕಟ್ಟುವ ಸಾದ್ಯತೆಯನ್ನು ಪರಿಶೀಲಿಸಲು ಕಳಿಸಿದ ವ್ಯಕ್ತಿಯಾಗಿರಬಹುದು. ಡಾಮ್ ಪೆದ್ರೊ ದ ಮ್ಯಾಸ್ಕರೆನ್ಹಸ್ (ನಂತರ, ಕ್ರಿ.ಶ. ೧೫೫೪ರಲ್ಲಿ, ಗೋವಾದ ಮಂಡಲಾಧಿಪತಿ ಯಾದ)ಈ ಉದ್ದಿಷ್ಟ ಕಾರ್ಯಕ್ಕಾಗಿ ಸ್ಯೂಟಾದಿಂದ ಯಾನ ಮಾಡಿದ ಮತ್ತು “ಜೊಆಒ ನ್ಯೂನೆಸ್ ದ ಪಾಂಟ್”ಅವನೊಂದಿಗೆ ತೆರಳಿದನೆಂದು ಉಲ್ಲೇಖಿಸಲಾಗಿದೆ. ಮೂರಿಷ್ ಕಡಲುಗಳ್ಳರು ಈ ಮೊದಲು ಮಾಡಿಕೊಂಡಿದ್ದಂತೆ ಸ್ಪೇನ್ ಮತ್ತು ಪೋರ್ತುಗಾಲ ಮೇಲೆ ಕಡಲುಗಳ್ಳರು ದಾಳಿ ಮಾಡುವ ನೆಲೆಯಾಗಿ ಟೆಟುಆನ್ ಅನ್ನು ಮುಂದೆಯೂ ಬಳಸದಂತೆ ತಡೆಯಲು ರಾಜ ಮತ್ತು ಸಾಮ್ರಾಟ ಐದನೆಯ ಚಾರ್ಲ್ಸ್ ಇಬ್ಬರೂ ಕಾತರರಾಗಿದ್ದರು. (ಡ್ಯಾಮಿಆಒ ದ ಗೊಎಸ್, ಕ್ರಾನಿಕಾ ದ ಡಾಮ್ ಮ್ಯಾನುಎಲ್, ಕೊಯಿಂಬ್ರಾ ಆವೃತ್ತಿ, ೧೭೯೦, ಸಂ-೧, ಭಾಗ-೪, ಪು. ೫೩೨ ; ಆಲ್ಗನ್ಸ್ ಡಾಕ್ಯೂಮೆಂಟೊಜ್ ವೆದೊ ಆರ್ಕೈವೊ ನಾಶಿಒನಲ್ ದ ತೊರ್ ದೊ ಟುಂಬೊ, ಲಿಸ್ಬನ್, ೧೮೯೨, ಪು. ೪೪೫-೪೪೬).

ಕ್ರಿ.ಶ. ೧೫೨೧ರಲ್ಲಿ ಮಾರ್ಚ್ ತಿಂಗಳು ಕಳೆದ ಮೇಲೆ ಗೋವಾದ ಮಂಡಲಾಧಿಪತಿಯಾದ್ದ ಡಾಮ್‌ಡಿಯೊಗೊ ಲೊಪ್ಸ್ ದ ಸಿಕ್ವೈರಾ ಎಂಪು ಸಮುದ್ರದ ದಂಡಯಾತ್ರೆಯಿಂದ ಹಿಂತಿರು ಗಿದಾಗ ಒಂದು ಸಮಯದಲ್ಲಿ, ಆ ಸ್ಥಳ ಇಡಿ ಹಡಗುಪಡೆಗೆ ಸಾಕಾಗುವಷ್ಟು ಲಂಗರುನೆಲೆ ಹೊಂದಿದ್ದರಿಂದ ಗೋವಾದ ಹತ್ತಿರವಿದ್ದ ಮಾದ್ರೆಫಾಬಾದಲ್ಲಿ ದುರ್ಗವನ್ನು ಕಟ್ಟಲು ಅವನ ಸಲಹೆಗಾರರು ಅವನಿಗೆ ಒತ್ತಿಹೇಳಿದರು. (ಕೊರಿಯೊ, ಲೆಂಡಸ್ ದ ಇಂಡಿಯಾ, ೨, ಪು. ೬೨೨). ಕೊರಿಯಾ ಹೀಗೆ ಮುಂದುವರಿಯುತ್ತಾನೆ :“ಆದರೆ ಮಂಲಾಧಿಪತಿ Cotiaದಲ್ಲಿ ಆ್ಯಂಟೊನಿಯೊ ಕೊರಿಯಾ ಮತ್ತು ತನ್ನ ಪ್ರಧಾನ ಹಡಗು ಚಾಲಕ ಪೆರೊ ದ ಕೊಯಿಂಬ್ರಾರನ್ನು ಮಾದ್ರೆಫಾಬಾದಲ್ಲಿನ ನದಿಯನ್ನು ಪರಿವೀಕ್ಷಿಸಲು ಮತ್ತು ಅಡ್ಡಗಟ್ಟೆಯ ಮೇಲಿನ ನೀರನ್ನು ಅಳೆಯಲೊಸುಗ ಮತ್ತು ಅದನ್ನು ಚೆನ್ನಾಗಿ ಬಲ್ಲ ನಿರ್ಮಾಣಕಾರ್ಯಗಳ ಮೇಲ್ವಿಚಾರಕ ಮ್ಯಾನುಎಲ್ ದ ಪೊಂಟಿ ಮತ್ತು ಅವನ ಸಹೋದರ ಜೊಆಒ ದ ಲಾ ಪೊಂಟಿಯರನ್ನು ಭೂಮಿನ್ನು ಪರಿವೀಕ್ಷಿಸಿ ಕಲ್ಲು ದೊರೆಯುವುದೊ ಮತ್ತು ನಿರ್ಮಾಣ ಕಾರ್ಯಕ್ಕೆ ಸುಣ್ಣ ಮಾಡಬಹುದೊ ಹೇಗೆಂದು ಎಲ್ಲದರ ಬಗೆಗೆ ಖಚಿತ ಸಂಗತಿ ತಂದು ಹೇಳಲೋಸುಗ ಕಳಿಸುವುದು ಉಚಿತವೆಂದು ಬಗೆದ”.

ಈ ಮನುಷ್ಯ ಮ್ಯಾಸ್ಕರೆನ್ಹಸ್ ಜೊತೆಗೆ ಟೆಟುಆನ್‌ಗೆ ಹೋದವನೆ ಆಗಿದ್ದ ಪಕ್ಷದಲ್ಲಿ ಬಹಳ ಮಾಡಿ ಅವನು ಮಾದ್ರೆಫಾಬಾಕ್ಕೆ ಹೋದಾಗ ಭಾರತದಲ್ಲಿ ಇದ್ದು ಬಹಳ ದಿನವಾಗಿರಲಿಕ್ಕಿಲ್ಲ. ಚರಿತ್ರೆಗಾರ ಪ್ಯಾಸ್ ಅದನ್ನು ಕಟ್ಟುತ್ತಿರುವಾಗ ನೋಡಿದ್ದ ಮತ್ತು ನೂನಿಜ್ ಗ್ರಂಥಪಾಠದಲ್ಲಿ ಉಲ್ಲೇಖಿಸಿದ ಕೃಷ್ಣದೇವರಾಯನ ದೊಡ್ಡ ಕೆರೆಯನ್ನು ಕ್ರಿ.ಶ. ೧೫೨೧ರ ಶರತ್ಕಾಲದವರೆಗಂತೂ ಆರಂಭಿಸಲಾಗಿರಲಿಲ್ಲವೆಂಬುದನ್ನು ಇದು ತೋರಿಸುತ್ತದೆ. ಹಾಗಿದ್ದರೆ, ಪ್ಯಾಸ್ ವಿಜಯನಗರದ ವರ್ಣನೆಯನ್ನು ಆ ತಾರೀಖು (೧೫೨೨ ಎನ್ನಿ)ಮುಗಿಯುವವರೆಗೆ ಬರೆಯಲಿಲ್ಲ.

[8]      ಸುಮಾರು ೩೧/೨ ಡೆನಾರಿಯಸ್ (ಪೆನಿ). ಒಂದು ವಿಂಟೆಮ್‌ಗೆ ಸುಮಾರು ೧೭/೨೦ ಡೆ.