ಅಧ್ಯಾಯ ೧

ಹನ್ನೆರಡು ನೂರಾ ಮುವತ್ತೆನೆಯ

[1] ವರ್ಷದಲ್ಲಿ ಭಾರತದ ಈ ಭಾಗಗಳನ್ನು ಹಿಂದೆಂದಿಗಿಂತ ದೊಡ್ಡ ಅರಸ ಆಳಿದ. ಇವನು ದಿಲ್ಲಿಯ[2] ರಾಜ.ಅವನು ಶಸ್ತರ ಹಾಗೂ ಸೈನಿಕರ ಬಲದಿಂದ ಅನೇಕ ವರ್ಷಗಳವರೆಗೆ ಕ್ಯಾಂಬೆ ಮೇಲೆ ಯುದ್ಧ ಮಾದಡಿ ಆ ಅವಧಿಯಲ್ಲಿ ಕ್ಯಾಂಬೆಗೆ[3] ಸೇರಿದ ಗುಜರಾತ ನಾಡನ್ನು ವಶಪಡಿಸಿಕೊಂಡು ಅದನ್ನು ನಾಶಮಾಡಿದ ಮತ್ತು ಕೊನೆಗೆ ಅದರ ಪ್ರಭುವಾದ.

ಇದನ್ನು ತೆಗೆದುಕೊಂಡ ಮೇಲೆ ಈಗಾಗಲೆ ಪಡೆದ ವಿಜಯದಿಂದ ತೃಪ್ತನಾಗದೆ ಅವನು ಕಾಲಾಳು ಮತ್ತು ಅಶ್ವಾಳುಗಳ ದೊಡ್ಡ ಸೈನ್ಯ ಸಿದ್ಧಪಡಿಸಿದನು ಮತ್ತು ಬಿಸ್ನಗದ ರಾಜನ ಮೇಲೆ ಯುದ್ಧ ಮಾಡಲು ನಿರ್ಧರಿಸಿದನು. ತನಗಿದ್ದ ಅನೇಕ ಶತ್ರುಗಳಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ತನ್ನ ನಾಡು ಮತ್ತು ದುರ್ಗಗಳಲ್ಲಿ ತನ್ನ ದಳಪತಿಗಳನ್ನು ಬಿಟ್ಟುಬಂದ. ಏಕೆಂದರೆ ಈ ರಾಜ[4] ಬೆಂಗಲ್ಲದೊಂದಿಗೆ ಮತ್ತು ಶೇಖ್ ಇಸ್ಮಾಯಿಲ್[5] ದೇಶದ ಗಡಿಗಳಲ್ಲಿ  ತುರ್ಕಮನ್‌ರೊಂದಿಗೆ ಯುದ್ಧದಲ್ಲಿದ್ದ. ಈ ಜನರು ತಿಳಿಬಣ್ಣದವರೂ ಭೀಮಕಾಯಕರೂ ಆಗಿರುವರು; ದಿಲ್ಲಿಯ ಈ ರಾಜ ಕ್ಯಾಂಬೆಯ ಮೇಲೆ ಯುದ್ಧ ಮಾಡಲು ಅವರ ನಾಡಿನಲ್ಲಿದ್ದ ಅನೇಕ ಕುದುರೆಗಳನ್ನು ಬಳಸಿ ಅದನ್ನು ನಾಶಪಡಿಸಿದ ಕುದುರೆಗಳು ಅವರ ದೇಶದಲ್ಲಿನವು. ನಾಡನ್ನು ವಶಪಡಿಸಿಕೊಂಡು ತಾನದರ ಪ್ರಭುವಾದ ಮೆಲೂ ಅವನಲ್ಲಿನ್ನೂ ಎಂಟುನೂರು ಸಾವಿರದಷ್ಟು ಅಶ್ವಾಳುಗಳು ಉಳಿದರು. ಅವರೊಂದಿಗೆ ಅವನು ಬಿಸ್ನಗಕ್ಕೆ ಮುನ್ನಡೆದ. ಕಾಲಾಳುಗಳ ಸಂಖ್ಯೆಯ ಬಗೆಗೆ ಇಲ್ಲಿ ಏನನ್ನೂ ಹೇಳಲಾಗಿಲ್ಲ. ಏಕೆಂದರೆ, ಅವುಗಳನ್ನು ಯಾರೂ ಎಣಿಸಿಲ್ಲ.

ಬಿಸ್ನಗದ ರಾಜನ ಮೇಲೆ ಯುದ್ಧ ಮಾಡಲು ಮತ್ತು ಅವನನ್ನು ತನ್ನ ಅಧಿಪತ್ಯಕ್ಕೊಳ ಪಡಿಸಲು ನಿರ್ಧರಿಸಿ ಅವನು ತಾನು ಹೊಸದಾಗಿ ಗೆದ್ದಿದ್ದ ನಾಡುಗಳಿಂದ ಹೊರಬಿದ್ದು ಆ ಸಮಯಕ್ಕೆ ಬಹಳವಿದ್ದ ಬಿಸ್ನಗ ರಾಜನ ನಾಡುಗಳನ್ನು ಪ್ರವೇಶಿಸಿದ. ಕ್ಯಾಂಬೆ ರಾಜ್ಯ ಬಿಟ್ಟು ಬಂದು ಅವನು ಅದರ ಪ್ರದೇಶಗಳು ಈಗ ಇದಲ್‌ಸಾಒ[6]ನಿಗೆ ಸೇರಿದ ಬಲ್ಲಾಗೇಟ್[7] ಮೇಲೆ ದಾಳಿ ಮಾಡಿ ಯುದ್ಧ ಮಾಡಲಾರಂಭಿಸಿದ. ಅವನು ಅನೇಕ ಪಟ್ಟಣಗಳನ್ನು ಮತ್ತು ಊರುಗಳನ್ನು ಯಾವ ರೀತಿಯ ವಶಪಡಿಸಿಕೊಂಡ ಮತ್ತು ವಶಪಡಿಸಿದನೆಂದರೆ ಆ ನಾಡಿನ ಜನರು ತಮ್ಮ ದೇಹಗಳನ್ನು ಮತ್ತು ಆಸ್ತಿಯನ್ನು ಅವನಿಗೆ ಶರಣಾಗತಗೊಳಿಸಿದರು. ಆದಾಗ್ಯೂ ಅವರ ಆಯುಧಗಳನ್ನು ಅವರಿಗೇ ಬಿಟ್ಟ. ಏಕೆಂದರೆ, ಅವರು ಅವುಗಳನ್ನು ಒಯ್ಯುವುದನ್ನು ತಪ್ಪಿಸಲು ಅವನಿಗೆ ಸಾಧ್ಯವಿರಲಿಲ್ಲ.

ಬಲ್ಲಾಗೇಟ್‌ನ ಪ್ರಾಂತಕ್ಕೆಲ್ಲ ತಾನು ಅಧಿಪತಿಯಾದ ಮೇಲೆ ಅವನು ದುರೀ[8] ನದಿಯನ್ನು ದಾಟಿದ. ಅದು ಬಲ್ಲಾಗೇಟ್ ಹಾಗೂ ಬಿಸ್ನಗದ ರಾಜನ ಪ್ರದೇಶಗಳ ಗಡಿರೇಖೆಯಾಗಿದೆ. ತನ್ನ ಸಾಗುವಿಕೆಯನ್ನು ವಿರೋಧಿಸಲು ಯಾರೂ ಇಲ್ಲದಂತೆ ಅವನು ಆ ನದಿಯನ್ನು ಹರಗೋಲುಗಳಲ್ಲಿ ದಾಟಿದ. ಆ ಸಮಯದವರೆಗೆ (ನಂತರದ) ಬಿಸ್ನಗ ರಾಜ್ಯದಲ್ಲೆಲ್ಲ ನಾಗುಂಡಿಮ್[9] ಹೊರತು ಬೇರೆಲ್ಲೂ ಜನವಸತಿ ಇರಲಿಲ್ಲ. ಅದು ಭದ್ರವಾಗಿದ್ದುದರಿಂದ, ಅವನ ಲಿಸ್ಬನ್ ಆಗಿದ್ದ ಅದನ್ನು ಬಿಟ್ಟರೆ ಅವನಿಗೆ ಬೇರೆ ದುರ್ಗ ಇಲ್ಲದುದರಿಂದ ಬಿಸ್ನಗದ ರಾಜ[10] ಆಗ ಅದರಲ್ಲಿ ತನ್ನ ವಿನಾಶಕ್ಕೆ ಕಾಯ್ದಿದ್ದ.

ದಿಲ್ಲಿಯ ರಾಜ ಹರಗೋಲುಗಳಲ್ಲಿ[11] ದಾಟಿದ. ನದಿಯಿಂದ ಆ ನಗರಕ್ಕೆ ಇಪ್ಪತ್ತೈದು ಹರದಾರಿಗಳು ಇದ್ದು ಎಲ್ಲ ಬಯಲುಸೀಮೆ. ಅವನು ಅವುಗಳಲ್ಲಿ ತನ್ನ ಠಾಣೆ ಹೂಡಲು ಒಳ್ಳೆಯದೆಂದು ಭಾವಿಸಿದ. ನದಿಯುದ್ದಕ್ಕೂ ಬಯಲಿನಲ್ಲಿನ ನೀರನ್ನು ತನ್ನ ಜನರು ಕುಡಿಯಲೆಂದು ಅಲ್ಲಿ ತನ್ನ ಠಾಣೆ ಹೂಡುವುದೊಳಿತೆಂದು ಅವನಿಗೆ ತೋರಿತು. ಬೇಸಿಗೆ ಋತುವಿನಿಂದಾಗಿ ಆ ಸಮಯದಲ್ಲಿ ಅಲ್ಲಿ ನೀರಿನ ಬರವಿತ್ತು. ಬಯಲಿನಲ್ಲಿ ಇದ್ದ ಕೆಲವೇ ಚಿಕ್ಕ ಕೆರೆಗಳ ನೀರು ಅವನ ಸೈನಿಕರಿಗೆ, ಕುದುರೆಗಳು ಮತ್ತು ಆನೆಗಳಿಗೆ ಬತ್ತದಂತುಳಿದು ಹತ್ತು ದಿನಗಳವರೆಗೆ ಸಾಲುವಂತಿರಲಿಲ್ಲ. ಆ ಕಾರಣದಿಂದ, ತಾನು ತಂದಂಥ ದೊಡ್ಡ ಸೈನ್ಯಕ್ಕೆ ಸಾಕಾಗುವಷ್ಟು ಮಳೆ, ಹೊಲಗಳಲ್ಲಿ ಮತ್ತು ಕೆರೆಗಳಲ್ಲಿ ಬೀಳುವವರೆಗೆ ಅವನು ಕೆಲವು ದಿನ ನದಿಯ ದಂಡೆಯ ಮೇಲೆ ಬಿಡಾರ ಬಿಟ್ಟ. ಸಮಯ ಬಂದಾಗ ಅವನು ತನ್ನ ಠಾಣೆ ಎಬ್ಬಿಸಿ ಆ ನಾಗುಂಡಿಯ ನಗರ ಕಣ್ಣಿಗೆ ಬೀಳುವಂತೆ ತನ್ನ ವ್ಯೆಹವನ್ನು ನಿಲ್ಲಿಸಿದ.

ಮತ್ತು ಬಿಸ್ನಗದ ರಾಜ ಅವನ ಮಹಾಬಲವನ್ನು ಮತ್ತು ಅವನು ತನ್ನೊಂದಿಗೆ ಎಷ್ಟು ಸೈನಿಕರನ್ನು ಕರೆತಂದಿದ್ದನೆಂಬುದನ್ನು ಕಂಡು ಪ್ರವೇಶಿಸಲು ಕಠಿಣವಾಗಿದ್ದ ನಗರವನ್ನು ತ್ಯಜಿಸಲು ನಿರ್ಧರಿಸಿದ. ಅದಕ್ಕೆ ಹೊಂದಿಕೊಂಡೆ ನಾಗುಂಡಿ ಎಂಬ ನದಿ ಆಗಲೂ ಇತ್ತು ಮತ್ತು ಈಗಲೂ ಇದೆ. ಆದುದರಿಂದ ನಗರಕ್ಕೆ ನಾಗುಂಡಿ ಎಂಬ ಹೆಸರು ಮತ್ತು ನಗರಕ್ಕೆ ಅದರಿಂದಲೆ ಆ ಹೆಸರು ಬಂದಿದೆಯೆಂದು ಹೇಳುತ್ತಾರೆ. ಮತ್ತು ಅವನು ನದಿತೀರದ ಮೇಲಿದ್ದ ಮತ್ತು ಬಹಳಷ್ಟು ಆಹಾರ ಧಾನ್ಯ ಮತ್ತು ನೀರು ಇರುವ ಕ್ರಿನಮಾಟ ಎಂಬ ಹೆಸರಿನ ದುರ್ಗಕ್ಕೆ ಪಲಾಯನಗೈದ. ಆದರೆ ಅಲ್ಲಿ ತನ್ನ ಜೊತೆಗಿದ್ದ ಐವತ್ತು ಸಾವಿರ ಜನರ ಜೀವನಾಧಾರಕ್ಕೆ ಸಾಕಾಗುವಷ್ಟಿರಲಿಲ್ಲ. ಆದುದರಿಂದ ರಾಜ ಐದು ಸಾವಿರ ಜನರನ್ನು ಅವರ ಸರಂಜಾಮಿನೊಂದಿಗೆ ಆಯ್ದು ಆ ದುರ್ಗದಲ್ಲಿ ಆಶ್ರಯ ಪಡೆದ. ಮಿಕ್ಕವರಿಗೆ ತನ್ನ ರಾಜ್ಯದ ಇನ್ನೊಂದು ಭಾಗದಲ್ಲಿದ್ದ ಇನ್ನೊಂದು ದುರ್ಗಕ್ಕೆ ಹೋಗಲು ಆಜ್ಞೆಯಿತ್ತ.

ತನ್ನ ಆಹಾರ ಸಾಮಗ್ರಿಗಳ ಬಗೆಗೆ ಕ್ರಮ ತೆಗೆದುಕೊಂಡನಂತರ ದುರ್ಗದಲ್ಲಿ ಆಶ್ರಯಿತನಾದ ಅವನಿಗೆ ತನ್ನೊಂದಿಗೆ ಇದುವರೆಗಾಗಲೆ[12] ಹನ್ನೆರಡು ವರ್ಷ ಯುದ್ಧದಲ್ಲಿ ತೊಡಗಿದ್ದ ದಿಲ್ಲಿಯ ರಾಜನ ಸೈನಿಕರಿಂದ ಎಲ್ಲ ಕಡೆಯಿಂದಲೂ ಮುತ್ತಿಗೆ ಬಿತ್ತು. ಈ ಮುತ್ತಿಗೆಗಾಗಿ ಅಲ್ಪ ಕಾಲ ವ್ಯಯವಾಯಿತು. ಏಕೆಂದರೆ ದುರ್ಗದೊಳಗಿದ್ದ ಜನರು ಅಸಂಖ್ಯರಾಗಿದ್ದು ಅಲ್ಪಕಾಲದಲ್ಲಿಯೆ ತಮ್ಮ ಆಹಾರ ಸಾಮಗ್ರಿಗಳನ್ನು ಮುಗಿಸಿದ್ದರು.

ಆಗ ಬಿಸ್ನಗದ ರಾಜ ತನ್ನೊಂದಿಗೆ ದುರ್ಗದಲ್ಲಿದ್ದವರನ್ನು ಮುಗಿಸದೆ ಜಾಗ ಕಿತ್ತುವದಿಲ್ಲೆಂಬ ರಾಜನ ಸೈನಿಕರ ನಿರ್ಧಾರ ಕಂಡು ಅವರೆಲ್ಲರನ್ನುದ್ದೇಶಿಸಿ ಭಾಷಣ ಮಾಡಿದ. ತನ್ನದೇ ರಾಜ್ಯಗಗಳಲ್ಲಿ[13] ದಿಲ್ಲಿಯ ಸೈನಿಕರ ರಾಜ ಮಾಡಿದ ನಾಶವನ್ನು ಮತ್ತು ಅದರಿಂದ ತೃಪ್ತನಾಗದೆ ಹೇಗೆ ಈ ದುರ್ಗವನ್ನು ಮುತ್ತಿರುವನೆಂಬುದನ್ನು ಅವರೆದುರು ಬಿಚ್ಚಿಟ್ಟ. ಆದುದರಿಂದ ತಮಗೆ ಮರಣವನ್ನು ಬಿಟ್ಟು ಎದುರು ನೋಡಲು ಏನೂ ಇಲ್ಲ, ಏಕೆಂದರೆ ಈಗಾಗಲೆ ದುರ್ಗದಲ್ಲಿ ನೀರಿಲ್ಲ ಮತ್ತು ತಿನ್ನಲು ಏನೂ ಇಲ್ಲ ಎಂದು ನುಡಿದ. ಮತ್ತು ನಾಗುಂದಿ ನಗರದಲ್ಲಿರುವ ಐವತ್ತು ಸಾವಿರ ಜನರಲ್ಲೇ ತನ್ನ ಸಂಗಾತಿಗಳು ಮತ್ತು ನಿಜವಾದ ಮಿತ್ರರೆಂದು ಆಯ್ಕೆ ಮಾಡಿದ್ದಾಗಿ (ತಿಳಿಸಿ) ಅವರು ಜೀವನದಲ್ಲಿ ಅವನಿಗೆ ತೋರಿದ ನಿಷ್ಠೆಯನ್ನೆ ಮರಣದಲ್ಲಿಯೂ ಬದ್ಧರಾಗುವಂತೆ ಅವರಲ್ಲಿ ಮೊರೆಯಿಟ್ಟ. ಏಕೆಂದರೆ, ಆ ದಿನ ಅವನು ದಿಲ್ಲಿಯ ರಾಜನಿಗೆ ಯುದ್ಧ ಕೊಡಬಯಸಿದ್ದ. ತನ್ನ ರಾಜ್ಯ ಮತ್ತು ಪ್ರಭುತ್ವಗಳಲ್ಲಿ ಈ ದುರ್ಗ ಮತ್ತು ಅದರೊಳಗಿನ ಜನ ಬಿಟ್ಟು ಇನ್ನೇನೂ ಉಳಿದಿಲ್ಲ ಎಂದು ಹೇಳಿದ. ಆದುದರಿಂದ, ಶಸ್ತ್ರ ಧರಿಸಿ ತನ್ನೊಂದಿಗೆ ಯುದ್ಧದಲ್ಲಿ ಅಸುನೀಗಿ ತಮ್ಮೆಲ್ಲ ಭೂಮಿಗಳನ್ನೆಲ್ಲ ದೋಚಿದ್ದ ಶತ್ರುವಿಗೆ ತಮ್ಮ ಪ್ರಾಣಗಳನ್ನು ಅರ್ಪಿಸುವಂತೆ ಕೇಳಿಕೊಂಡ.

ಇದರಿಂದ ಎಲ್ಲರೂ ತೃಪ್ತರೂ ಸಂತೋಷಭರಿತರೂ ಆಗಿ ಅಲ್ಪಕಾಲದಲ್ಲಿಯೆ ಎಲ್ಲರೂ ಶಸ್ತ್ರಸಜ್ಜಿತರಾದರು. ಅವರು ಹಾಗೆ ಸಿದ್ಧರಾದ ಮೇಲೆ ರಾಜ ಇನ್ನೊಂದು ಭಾಷಣಗೈಯ್ಯುತ್ತಾ “ನಾವು ಯುದ್ಧ ಸೇರುವ ಮುನ್ನ ನಮ್ಮ ಪುತ್ರರು, ಪುತ್ರಿಯರು ಮತ್ತು ಪತ್ನಿಯರೊಂದಿಗೆ ಇನ್ನೊಂದು ಯುದ್ಧ ಮಾಡಬೇಕು. ಏಕೆಂದರೆ, ಅವರನ್ನು ವೈರಿ ತನ್ನ ಉಪಭೋಗಕ್ಕೆ ಒಯ್ಯಲು ಬಿಡುವುದು ಒಳಿತಲ್ಲ. ಮತ್ತು ನನ್ನ ಪತ್ನಿ ಮತ್ತು ಪುತ್ರರೊಂದಿಗೆ ವಿಚಾರಿಸಿಕೊಳ್ಳುವಲ್ಲಿ ನಾನೇ ಮೊದಲಿಗನಾಗುವೆ” ಎಂದು ಹೇಳಿದ. ಈ ಸಮಯಕ್ಕೆ ಅವರೆಲ್ಲ ದುರ್ಗದ ಮುಂದಿರುವ ವಿಶಾಲ ಬಯಲು ಸ್ಥಳದಲ್ಲಿ ನಿಂತಿದ್ದರು. ಮತ್ತು ಅಲ್ಲಿಯೆ ರಾಜನ ಕೈಯಿಂದ ಅವನ ಐವತ್ತಕ್ಕೂ ಅಧಿಕ ಪತ್ನಿಯರು, ಕೆಲವು ಪುತ್ರರು ಮತ್ತು ಚಿಕ್ಕ ಪುತ್ರಿಯರು ಹತರಾದರು. ಹೆಂಡರು ಮತ್ತು ಯುದ್ಧ ಮಾಡಲಾರದ ಮಕ್ಕಳಿದ್ದ ಎಲ್ಲರೂ ತಮ್ಮವೇ ಕೈಗಳಿಂದ ಹಾಗೆಯೆ ಮಾಡಿದರು.

ಎಲ್ಲರೂ ಅಸಹ್ಯಪಟ್ಟ ಈ ಶೋಭನಪ್ರಸ್ತ ಸಮಾರಂಭ ಮುಗಿದ ಮೇಲೆ ಅವರು ದುರ್ಗದ ದ್ವಾರಗಳನ್ನು ತೆರೆದರು. ತಕ್ಷಣ ವೈರಿಗಳು ಒಳನುಗ್ಗಿ ಒಂದು ಮನೆಗೆ ಹಿಂದೆ ಸರಿದ ಆರು ವೃದ್ಧರನ್ನುಳಿದು ಎಲ್ಲರನ್ನೂ ಕೊಂದರು. ಇವರನ್ನೂ ಸೆರೆಹಿಡಿದು (ದಿಲ್ಲಿಯ) ರಾಜನ ಮುಂದೆ ತಂದು ನಿಲ್ಲಿಸಿದರು. ರಾಜ ಅವರಾರು ಮತ್ತು ಹೇಗೆ ಪಾರಾದರೆಂದು ಕೇಳಲಾಗಿ ಅವರು ಯಾರೆಂಬುದನ್ನು ಹೇಳಲಾಯಿತು. ಅದರಿಂದ ರಾಜ ಅತೀವ ಸಂಸತಗೊಂಡ.  ಏಕೆಂದರೆ ಅವರಲ್ಲೊಬ್ಬ ರಾಜ್ಯದ ಮಂತ್ರಿ, ಇನ್ನೊಬ್ಬ ಭಂಡಾರಿ ಮತ್ತು ಇತರರು ಅದರಲ್ಲಿ ಉನ್ನತಾಧಿಕಾರಿಗಳಾಗಿದ್ದರು. ರಾಜ ಅವರನ್ನು ಬಿಸ್ನಗ ರಾಜನ ನಿಧಿಗಳ ಬಗ್ಗೆ ಪ್ರಶ್ನೆ ಮಾಡಿದ ಮತ್ತು ದುರ್ಗದ ನೆಲಮನೆಗಳಲ್ಲಿ ಹೂಳಲಾಗಿದ್ದ ಸಂಪತ್ತನ್ನು ಅವನ ವಶಕ್ಕೊಪ್ಪಿಸಲಾಯಿತು. ಅಲ್ಲದೆ, ಅವನಿಗೆ ಅವರು ಆಗಿನ ಬಿಸ್ನಗ ರಾಜನ ಆದಾಯಗಳ ಬಗೆಗೂ ಮಾಹಿತಿ ನೀಡಿದರು. ರಾಜನಿಗೆ ಎಲ್ಲ ತಿಳಿದ ಮೇಲೆ ಅವನು ಅವುಗಳನ್ನು ತನ್ನ ದಳಪತಿಯೊಬ್ಬನ ವಶಕ್ಕೊಪ್ಪಿಸಿದನು ಮತ್ತು ಇನ್ನೊಬ್ಬ ದಳಪತಿಯ ವಶಕ್ಕೆ ಮೃತ ದೇಹಗಳನ್ನೊಪ್ಪಿಸಿ ಅವುಗಳನ್ನು ಸುಡುವಂತೆ ಆಜ್ಞಾಪಿಸಿದನು. ಆ ಆರು ಜನರ ಬಿನ್ನಹದ ಮೇರೆಗೆ ರಾಜನ ದೇಹವನ್ನು ಒಳ್ಳೆಯ ಗೌರವಯುತವಾಗಿ ನಾಗುಂದಿ ನಗರಕ್ಕೆ ಸಾಗಿಸಲಾಯಿತು. ಅಂದಿನಿಂದ ಮುಂದೆ ಆ ಊರು ರಾಜರ ಸ್ಮಶಾನವಾಯಿತು. ಅವರಲ್ಲಿ ಇಂದಿಗೂ ಈ ರಾಜನನ್ನು ಸಂತನೆಂದು ಪೂಜಿಸುತ್ತಾರೆ.

 

ಅಧ್ಯಾಯ ೨

ರಾಜ ತನ್ನೆಲ್ಲ ಇಚ್ಛೆಗಳನ್ನು ಈಡೇರಿಸಿಕೊಂಡ ಬಳಿಕ ತನ್ನ ವಿರುದ್ಧ ದಂಗೆಯೆದ್ದ ಕೆಲವು ಗ್ರಾಮ ಮತ್ತು ಪಟ್ಟಣಗಳನ್ನು ನಾಶಪಡಿಸಲು ಮತ್ತು ಸಂರಕ್ಷಣೆ ಬೇಡಿದವರಿಗೆ ಅದನ್ನು ಕೊಡಲು ಆಜ್ಞಾಪಿಸಿದ. ಆ ರಾಜ್ಯದ ಮೇಲೆ ಆಗಲೆ ಹನ್ನೆರಡು ವರ್ಷ[14] ಯುದ್ಧ ಮಾಡಿದ್ದು (ಹಿಂದೂ) ರಾಜನ ಮರಣಾನಂತರ ಅವನು ಆ ದುರ್ಗದಲ್ಲಿ ಎರಡು ವರ್ಷ ನಿಂತ. ಅವನು ಐನೂರು ಹರಿದಾರಿಗಿಂತ ದೂರವಿದ್ದ ತನ್ನ ಮನೆಯಿಂದ ಬಹುದೂರವಾಗಿದ್ದ. ಮತ್ತು ಅವನ ಪಡೆಗಳೆಲ್ಲ ಚದುರಿದ್ದು ಅವನು ಈ ಮೊದಲು ಪಡೆದಿದ್ದ ನಾಡೆಲ್ಲ ಅವನ ವಿರುದ್ಧ ದಂಗೆಯೆದ್ದ ಸುದ್ದಿ ಬಂತು. ಇದು ತಿಳಿದ ಕೂಡಲೆ ರಾಜ ರಾಜ್ಯದಲ್ಲಿಯೆ ಅತಿ ಭದ್ರವಾಗಿದ್ದ ಈ ದುರ್ಗದಲ್ಲಿ ಎಂಥ ಪರಿಸ್ಥಿತಿಯಲ್ಲೂ ಅದರ ಸಂರಕ್ಷಣೆಗಾಗಿ ಸಾಕಷ್ಟು ಆಹಾರ ಸಾಮಗ್ರಿ ಬಿಟ್ಟು ತನ್ನ ಜನರನ್ನು ಕೂಡಿಹಾಕಲು ಕಳಿಸಿದ. ಅವನು ರಾಜ್ಯದ ದಳಪತಿ ಮತ್ತು ಮಂಡಲಾಧಿಪತಿಯಾಗಿ ಎನಿಬಿಕ್ವಿಮೆಲಿ[15] ಎಂಬ ಮೂರನನ್ನು, ಅವನೊಂದಿಗೆ ಅನೇಕ ಸೈನಿಕರನ್ನು ಬಿಟ್ಟು ನಡೆದ. ಎಲ್ಲರೂ ತೃಪ್ತರಾಗುವಂತೆ ಧಾರಾಳ ಕಾಣಿಕೆಗಳನ್ನು ಮತ್ತು ಭೂಮಿಗಳನ್ನು ನೀಡಿ ಅವರಲ್ಲಿ ಪ್ರತಿಯೊಬ್ಬನಿಗೂ ಪ್ರತ್ಯೇಕವಾಗಿ ಬಹಳ ಪ್ರೀತಿ ತೋರಿದ. ಅವರು ಕೂಡಲೆ ತಮ್ಮ ದೇಶಕ್ಕೆ ಹಿಂದಿರುಗುವ ಆಸೆ ಕೈಬಿಟ್ಟು ಅಲ್ಲಿಯೆ ತಮ್ಮ ಮನೆಗಳನ್ನು ಮಾಡಿಕೊಂಡರು.

 

ಅಧ್ಯಾಯ ೩

ರಾಜ ತನಗೆ ಬಂದ ಸುದ್ದಿಯ ಪರಿಣಾಮವಾಗಿ ಬಿಸ್ನಗ ರಾಜ್ಯವನ್ನು ಮೆಲಿಕ್ವಿನಿಬಿಯ ಅಧಿಪತ್ಯದಲ್ಲಿ ಬಿಟ್ಟು ತನ್ನ ರಾಜ್ಯಕ್ಕೆ ತೆರಳಿದ. ಅವನು ಹೊರ ನಡೆದದ್ದು ದೇಶದ ತುಂಬ ಗೊತ್ತಾದಾಗ ಗುಡ್ಡಗಳಿಗೆ ಓಡಿ ಪಾರಾಗಿದ್ದವರು ತಮ್ಮ ಮನಸ್ಸಿನ ವಿರುದ್ಧ ಮತ್ತು ಭೀತಿಯಿಂದ ತಮ್ಮ ನಗರಗಳಿಗೆ ಮತ್ತು ಗ್ರಾಮಗಳಿಗೆ ನಿಷ್ಠೆಯ ಆಣೆ ಮಾಡಿದ್ದ ಇತರರೊಂದಿಗೆ ದಳಪತಿ ಮಿಲೀಕ್ ನೆಬಿ ವಿರುದ್ಧ ದಂಗೆಯೆದ್ದರು ಮತ್ತು ಅವನಲ್ಲಿಗೆ ಆಹಾರ ಸಾಮಗ್ರಿಗಳನ್ನು ಹೋಗಗೊಡದಂತೆ ದುರ್ಗವನ್ನು ಮುತ್ತಿದರು.  ತಮ್ಮ ಮೇಲೆ ಹೇರಲಾದ ಕರಗಳನ್ನೂ ಸಂದಾಯ ಮಾಡಲಿಲ್ಲ. ಈ ದೇಶದಲ್ಲಿ ಎಷ್ಟು ಕಡಿಮೆ ಲಾಭವಿದೆ ಯೆಂಬುದನ್ನು, ತನ್ನ ಆಜ್ಡೆಯನ್ನು ಎಷ್ಟು ನಿಷ್ಕೃಷ್ಟವಾಗಿ  ಪಾಲಿಸುತ್ತಾರೆಂಬುದನ್ನು, ತನ್ನ ಪ್ರಭುವಾದ ರಾಜನಿಂದ ಕಳಿಸಲ್ಪಟ್ಟ ಸಹಾಯ ಎಷ್ಟು ದೂರವಿದೆಯೆಂಬುದನ್ನು ಅರಿತ ಮೆಲಿಕ್ವಿನಿಬಿ ರಾಜನಲ್ಲಿಗೆ ಶೀಘ್ರ ಕಳಿಸಿಕೊಟ್ಟು ಹೇಗೆ ನಾಡೆಲ್ಲ ತನ್ನ ವಿರುದ್ಧ ದಂಗೆಯೆದ್ದಿದೆ, ಹೇಗೆ ಪ್ರತಿಯೊಬ್ಬನೂ ತನಗಿಷ್ಟ ಬಂದುದರ  ಪ್ರಭುವಾಗಿದ್ದಾನೆ, ತನ್ನ ಪಕ್ಷದಲ್ಲಿ ಯಾರೂ ಇಲ್ಲ ಎಂಬುದನ್ನು ಮತ್ತು ಮಹಾಪ್ರಭುಗಳು ಇಂಥ ಸ್ಥಿತಿಯಲ್ಲಿ ಏನು ಮಾಡಿದರೆ ಒಳಿತೆಂಬುದನ್ನು ನಿರ್ಣಯಿಸಬೇಕೆಂದು ನಿವೇದಿಸಿದ. ರಾಜ ಈ ಸುದ್ದಿ ಕೇಳಿದಾಗ ಮಂತ್ರಾಲೋಚಿಸಿದ. ತನ್ನ ರಾಜ್ಯದ ವರಿಷ್ಠರಿಗೆ ಬಿಸ್ನಗ ರಾಜ್ಯದಲ್ಲಿ ತನ್ನ ದಳಪತಿ ಹಾಗೂ ಮಂಡಲಾಧಿಪತಿಯಾಗಿದ್ದ ಮೆಲಿನೆಬಿಕ್ವಿಯಿಂದ ಬಂದ ಪತ್ರ ಮತ್ತು ಸಂದೇಶದ ಬಗೆಗೆ, ಅನ ಆಜ್ಞೆಯನ್ನು ಆ ದೇಶದ ದೊರೆಗಳು ಎಷ್ಟು ನಿಕೃಷ್ಟವಾಗಿ ಪಾಲಿಸುತ್ತಿದ್ದರೆಂಬ ಬಗೆಗೆ, ಯಾವುದೆ ಅಧಿಕಾರ ಪಡೆದಾಕ್ಷಣ ಹೇಗೆ ಪ್ರತಿಯೊಬ್ಬನೂ ತಾನು ಇಷ್ಟಪಟ್ಟವರ ಮೇಲೆ ರಾಜ ಮತ್ತು ಪ್ರಭುವಾಗುತ್ತಿದ್ದನೆಂಬ ಬಗೆಗೆ, ಅವರಲ್ಲಿ ನ್ಯಾಯವೆ ಉಳಿಯ ದಂತಾಗಿರದ ಬಗೆಗೆ, ಅವರು ಯಾರ ಆಜ್ಞಾಧಾರಕರೂ ಆಗಬಯಸದ ಬಗೆಗೆ ಅರುಹಿದ. ಅವರಿಗೆ ಅತ್ಯುತ್ತಮವೆಂದು ತೋರುವುದಾವುದು ಮತ್ತು ಇಂಥ ಪರಿಸ್ಥಿತಿಯಲ್ಲಿ ಇಷ್ಟೊಂದು ಸುಂದರ ಹಾಗೂ ಶ್ರೀಮಂತವಾದ, ಅದರ ಸ್ವಾಧೀನಕ್ಕಾಗಿ ಎಷ್ಟೊಂದು ಶ್ರಮ, ಹಣ ಮತ್ತು ತಮ್ಮ ಜನರ ಪ್ರಾಣತೆತ್ತಬೇಕಾದ ಪ್ರದೇಶವನ್ನು ತಾನು ಕಳೆದುಕೊಳ್ಳದಿರಲು ತಾವು ಏನು ಮಾಡಬೇಕು ಮತ್ತು ಮಾಡಬಲ್ಲರು ಎಂದು ಅವರನ್ನು (ಕೇಳಿದ)? ರಾಜ ತನ್ನ ಸೆರೆಯಾಳಾಗಿದ್ದ ಆರು ಜನರನ್ನು ಕರೆಯಿಸಿ ಆ ಸಮಯದಲ್ಲಿ ಬಿಸ್ನಗ ರಾಜನಿಗೆ ಹತ್ತಿರದ ಸಂಬಂಧಿ ಅಥವಾ ಯಾವುದೆ ರೀತಿಯಲ್ಲಿ ಸಂಬಂಧಿಯಾಗಿದ್ದವನು ಯಾರೆಂಬುದನ್ನು ತಿಳಿದುಕೊಳ್ಳಬೇಕೆದು ಎಲ್ಲ ಸಮಾಲೋಚಕರು ನಿರ್ಣಯಿಸಿದರು. ಹೀಗೆ ಪ್ರಶ್ನಿಸಲಾಗಿ, ತಾನು ಸೆರೆಹಿಡಿದಿದ್ದ ಆರು ಜನರಲ್ಲಿ ಒಬ್ಬನನ್ನು ಬಿಟ್ಟರೆ ರಾಜ್ಯ ಪಡೆಯುವ ಹಕ್ಕು ಯಾರಿಗೂ ಇಲ್ಲವೆಂದು ಮತ್ತು ಬಿಸ್ನಗದ ವಿನಾಶದ ಕಾಲಕ್ಕೆ ಆ ರಾಜ್ಯದ ಮಂತ್ರಿ ಯಾಗಿದ್ದವನೆ ಇವನು ಎಂದು ಕಂಡುಬಂತು. ಅವನು ರಾಜನಿಗೆ ರಕ್ತಸಂಬಂಧಿಯಾಗಿರಲಿಲ್ಲ. ಪ್ರಮುಖ ನ್ಯಾಯ ನಿರ್ಣಾಯಕ ಮಾತ್ರ. ಆದರೆ, ಮಹಾಪ್ರಭು ಅವನಿಗೇ ರಾಜ್ಯ ಕೊಡುವುದು ಒಳಿತು ಎಂದು ತೋರುತ್ತದೆ. ಈ ಸಲಹೆ ರಾಜನಿಗೆ ಮತ್ತು ಅವರೆಲ್ಲರಿಗೆ ಮೆಚ್ಚಿಕೆಯಾಯಿತು.

ಕೂಡಲೆ ಆರು ಸೆರೆಯಾಳುಗಳನ್ನು ಬಿಡುಗಡೆ ಮಾಡಿ ಸ್ವತಂತ್ರಗೊಳಿಸಲಾಯಿತು. ಅವರಿಗೆ ಅನೇಕ ರೀತಿಯ ಪ್ರೀತಿ ಗೌರವ ನೀಡಲಾಯಿತು. ಮತ್ತು ಮಂಡಲಾಧಿಪತಿಯನ್ನು ರಾಜನ ಸ್ಥಾನಕ್ಕೆ ಹಾಗೂ ಭಂಡಾರಿಯನ್ನು ಮಂಡಲಾಧಿಪತಿಯ ಸ್ಥಾನಕ್ಕೆ ಏರಿಸಲಾಯಿತು.[16] ಮತ್ತು ಅವನು ಅವರಿಂದ ಮಾಂಡಲಿಕರಾಗಿ ವಿಧೇಯತೆಯಿಂದ ಇರುವ ಪ್ರಮಾಣ ಹಾಗೂ ವಚನಗಳನ್ನು ತೆಗೆದುಕೊಂಡು ಅವರಿಗೆ ಅಪಾಯ ಮಾಡಬಯಸುವ ಯಾರಿಂದಲೂ ಸಂರಕ್ಷಿಸಲು ಬಹಳ ಅನುಯಾಯಿಗಳೊಂದಿಗೆ ಅವರನ್ನು ಕೂಡಲೆ ಹೊರಡಿಸಿ ತಮ್ಮ ನಾಡಿಗೆ ಕಳಿಸಿಕೊಡಲಾಯಿತು. ಈ ಆರು ಜನರು ಹೀಗೆ ನಾಗುಂದಿ ನಗರಕ್ಕೆ ತಮ್ಮ ಪ್ರಯಾಣ ಮುಗಿಸಿದಾಗ ಅವರು ಕಂಡದ್ದು ಹಾಳಾದ ಮನೆಗಳ ಮೇಲ್ಪಾಯಗಳನ್ನು ಮತ್ತು ಕೆಲವು ಬಡಜನರು ವಾಸಿಸಿದ್ದ ಸ್ಥಳಗಳನ್ನು ಮಾತ್ರ.

ಅಲ್ಪ ಕಾಲದಲ್ಲಿಯೆ ದೇವರಾವ್[17] (ಏಕೆಂದರೆ ಅವನನ್ನು ಹಾಗೆಯೆ ಕರೆಯ ಲಾಗುತ್ತಿದ್ದುದು)ನ ಆಗಮನ ಮತ್ತು ಅವನನ್ನು ರಾಜನನ್ನಾಗಿ ಉನ್ನತೀಕರಿಸಲಾಗಿದೆ ಎಂಬುದು ನಾಡಿನಲ್ಲೆಲ್ಲ ಗೊತ್ತಾಯಿತು. ತಮ್ಮ ಧರ್ಮದವನಲ್ಲದ ಪ್ರಭುವಿಗೆ ಅಧೀನರಾದುದರ ಬಗೆಗೆ ತೀವ್ರವಾಗಿ ಭಾವನೆ ತಾಳಿದ್ದ ಜನರಿಗೆಲ್ಲ ಅದು ಒಳ್ಳೆಯ ತೃಪ್ತಿ ನೀಡಿತ್ತು. ಮತ್ತು ಇದುವರೆಗೆ ಆಳಿದವರೆಲ್ಲ ಈ ವ್ಯಕ್ತಿಯ ಸಂತತಿಯೆ. ಅವರು ಅವನಿಗಾಗಿ ಮಹೋತ್ಸವಗಳನ್ನು ಆಚರಿಸಿದರು, ಹಿಂದಿನ ರಾಜರು ವಶಪಡಿಸಿಕೊಂಡಿದ್ದ ಆದರೆ ತಮಗೆ ಸೋತಿದ್ದ ಭೂಮಿಗಳನ್ನು ಅವನಿಗೆ ಬಿಟ್ಟುಕೊಟ್ಟರು ಮತ್ತು ರಾಜನೆಂದು ಅವನಿಗೆ ವಿಧೇಯತೆ ತೋರಿದರು. ದಳಪತಿ ಮೆಲಿಕ್ವಿನಿಬಿ ಇದನ್ನು ತಿಳಿದಾಗ ಸಂತೋಷ ಮತ್ತು ತೃಪ್ತಿಪಟ್ಟ ಮತ್ತು ತನ್ನ ಪ್ರಭುವಾಗಿದ್ದ ರಾಜ ಆಜ್ಞಾಪಿಸಿದಂತೆ ದುರ್ಗ ಮತ್ತು ರಾಜ್ಯ ಅವನಿಗೆ ಬಿಟ್ಟುಕೊಟ್ಟ. ಮತ್ತು ನಾಡನ್ನು ಅದರ ಯೋಗ್ಯ ಒಡೆಯನಿಗೆ ಬಿಟ್ಟುಕೊಟ್ಟು ಅತ್ಯಂತ ಶೀಘ್ರವಾಗಿ ತನ್ನನ್ನು ಸಿದ್ಧಗೊಳಿಸಿಕೊಂಡು ತೆರಳಿದ. ಅವನು ಹೋದ ಮೇಲೆ ತನ್ನ ಆಳ್ವಿಕೆಯನ್ನು  ಪ್ರವೇಶಿಸಿದ ರಾಜಾ ದೇವರಾವ್ ಜನರನ್ನು ಮತ್ತು ದಂಗೆಯೆದ್ದಿದ್ದವರನ್ನು ಸಾಂತ್ವನಗೊಳಿಸಲು ಮತ್ತು ಅವರನ್ನು ಸುರಕ್ಷಿತಗೊಳಿಸಲು ಯತ್ನಿಸಿದ. ಅವರ ವಿಶ್ವಾಸಗಳಿಸಲು ಅವನು ಅವರಿಗೆ ಅನೇಕ ಉಪಕಾರಗಳನ್ನು ಮಾಡಿದ ಮತ್ತು ಅವರ ದುರ್ಗಗಳಿಗೆ ಮತ್ತು ನಗರಗಳಿಗೆ ಪಯಣಿಸಿದ. ಇಂಥ ಕೆಲಸಕ್ಕೆ ಸೈನ್ಯ ಅಥವಾ ಬಲ ತನ್ನಲ್ಲಿರದ್ದರಿಂದ ಹಾಗೂ ಯುದ್ಧ ಮಾಡಲು ಯಾವುದೆ ಕಾರಣವಿರದ್ದರಿಂದ ಮತ್ತು ತಾನು ಬಹಳ ಮುದುಕನಾಗಿದ್ದುದರಿಂದಲೂ ಅವುಗಳನ್ನು ಮರಳಿ ಪಡೆಯಲು ತನಗೆ ಸಾಧ್ಯವಿಲ್ಲೆನ್ನುವುದು ಗೊತ್ತಿದ್ದುದರಿಂದ ಅವನು ಕಳೆದುಹೋಗಿದ್ದ ನಾಡುಗಳ ಆಸೆ ಬಿಟ್ಟ.

 ಅಧ್ಯಾಯ ೪

ರಾಜ ಆಗಿಂದಾಗ ತನ್ನ ರೂಢಿಯಂತೆ ಬೇಟೆಗಾಗಿ ಒಂದು ದಿನ ನಾಗುಂದಿಮ್‌ನ ನದಿಯ ಆಚೆಗಿನ ಪರ್ವತಕ್ಕೆ ಹೋದ. ಅಲ್ಲಿ ಈಗ ಬಿಸ್ನಗ ನಗರವಿದೆ. ಆಗ ಅದು ಬಹಳ ಬೇಟೆ ಜರುಗುವ ನಿರ್ಜನ ಸ್ಥಳವಾಗಿದ್ದು ರಾಜ ಅದನ್ನು ತನ್ನ ಮನರಂಜನೆಗಾಗಿ ಕಾಯ್ದಿರಿಸಿ ಕೊಂಡಿದ್ದ. ಆ ದಿನ ಅವನು ತನ್ನ ನಾಯಿಗಳು ಹಾಗೂ ಬೇಟೆಯ ಸಲಕರಣೆಗಳೊಂದಿಗೆ ಇದ್ದಾಗ ಅವನೆದುರಿಗೆ ಒಂದು ಮೊಲ ಎದ್ದು ಬಂತು. ಅದು ನಾಯಿಗಳಿಂದ ದೂರ ಓಡುವ ಬದಲು ಅವುಗಳತ್ತ ಧಾವಿಸಿ ಅವುಗಳನ್ನೆಲ್ಲ ಕಚ್ಚಿತು. ಅದು ಅವುಗಳಿಗೆ ಎಷ್ಟೊಂದು ಅಪಾಯ ಮಾಡಿತೆಂದರೆ ಅವಾವೂ ಅದರ ಸಮೀಪ ಹೋಗುವ ಧೈರ್ಯ ಮಾಡಲಿಲ್ಲ.[18] ರಾಜ ಇಂಥ ಒಂದು ದುರ್ಬಲ ಪ್ರಾಣಿ ಈಗಾಗಲೆ ತನಗಾಗಿ ಒಂದು ಹುಲಿ ಮತ್ತು ಒಂದು ಸಿಂಹವನ್ನು ಹಿಡಿದಿದ್ದ ನಾಯಿಗಳನ್ನು ಕಚ್ಚುತ್ತಿರುವುದನ್ನು ಕಂಡು ಆಶ್ಚರ್ಯಚಕಿತನಾಗಿ ಅದು ನಿಜವಾಗಿಯೂ ಮೊಲವಾಗಿರದೆ ಯಾವುದೊ ಅದ್ಭುತವಿರಬೇಕೆಂದು ತೀರ್ಮಾನಿಸಿದ ಮತ್ತು ಅವನು ಕೂಡಲೆ ನಾಗುಂದಿಮ್ ನಗರಕ್ಕೆ ಹಿಂತಿರುಗಿದ.

ನದಿಗೆ ಬಂದು ತೀರದ ಗುಂಟ ನಡೆದಾಡುತ್ತಿದ್ದ ಸನ್ಯಾಸಿಯನ್ನು ಭೇಟಿಯಾದ. ಅವರೆಲ್ಲರಲ್ಲಿ ಪೂಜ್ಯನಾದ ಅವನಿಗೆ ಮೊಲದ ಬಗೆಗೆ ನಡೆದುದನ್ನು ಹೇಳಿದ. ಸ್ಯನ್ಯಾಸಿ ಅದನ್ನು ಕೇಳಿ ಆಶ್ಚರ್ಯಪಟ್ಟು ತನ್ನೊಂದಿಗೆ ವಾಪಸು ನಡೆದು ಇಂಥ ಅದ್ಭುತ ಘಟನೆ ಜರುಗಿದ ಸ್ಥಳವನ್ನು ತನಗೆ ತೋರಿಸಬೇಕೆಂದು ರಾಜನಿಗೆ ಹೇಳಿದ. ಅಲ್ಲಿಗೆ ಹೋಗಿ ನೋಡಲಾಗಿ, ರಾಜ ಆ ಸ್ಥಳದಲ್ಲಿ ತಾನು ವಾಸಿಸುವ ಮನೆಗಳನ್ನು ಕಟ್ಟಿ ಒಂದು ನಗರ ಸ್ಥಾಪಿಸಬೇಕೆಂದು ಸನ್ಯಾಸಿ ಹೇಳಿದ. ಏಕೆಂದರೆ, ಆ ನಗರ ಪ್ರಪಂಚದಲ್ಲಿಯೆ ಅತ್ಯಂತ ಬಲಿಷ್ಠ ನಗರವಾಗುವುದು, ಅದನ್ನು ಅವನ ವೈರಿಗಳು ಎಂದೂ ವಶಪಡಿಸಿಕೊಳ್ಳಲಾರರು ಎಂದು ಸನ್ಯಾಸಿ ವಿವರಿಸಿದ. ರಾಜ ಹಾಗೆಯೇ ಮಾಡಿದ ಮತ್ತು ಅಂದೇ ತನ್ನ ಮನೆಗಳನ್ನು ಕಟ್ಟಿಸಲಾರಂಭಿಸಿದ ಮತ್ತು ನಗರದ ಸುತ್ತ ಗೋಡೆ ಕಟ್ಟಿಸಿದ ಮತ್ತು ಅದಾದ ಮೇಲೆ ಅವನು ನಾಗುಂದಿಮ್ ಬಿಟ್ಟು ಹೊಸ ನಗರವನ್ನು ಶೀಘ್ರವಾಗಿ ಜನರಿಂದ ತುಂಬಿದ. ಅದಕ್ಕೆ ಅವನು ವಿದ್ಯಾಜುನ ಎಂದು ಹೆಸರಿಟ್ಟ. ಏಕೆಂದರೆ, ಅದನ್ನು ಕಟ್ಟಿಸಲು ಹೇಳಿದ ಸನ್ಯಾಸಿಯ ಹೆಸರೂ ಅದೇ ಆಗಿತ್ತು.[19] ಆದರೆ, ಕಾಲಕ್ರಮೇಣ ಆ ಹೆಸರು ಅಪಭ್ರಂಶಗೊಂಡು ಈಗ ಬಿಸ್ನಗ ಎಂದು ಕರೆಯಲ್ಪಡುತ್ತಿದೆ. ಮತ್ತು ಆ ಸನ್ಯಾಸಿ ತೀರಿಕೊಂಡ ಮೇಲೆ ಅವನ ಗೌರವಾರ್ಥ ಒಂದು ಭವ್ಯ ದೇವಾಲಯ[20] ಕಟ್ಟಿಸಿ ಅದಕ್ಕೆ ವಿಫುಲ ಆದಾಯ ನೀಡಿದ. ಅಂದಿನಿಂದಲೂ ಅವನ ಸ್ಮರಣಾರ್ಥವಾಗಿ ಬಿಸ್ನಗದ ರಾಜರು ತಾವು ರಾಜರಾದ ದಿನ ತಮ್ಮ ಮನೆ ಪ್ರವೇಶಿಸುವ ಮೊದಲು ಈ ದೇವಾಲಯವನ್ನು ಪ್ರವೇಶಿಸಬೇಕು ಮತ್ತು ಅವರು ಅಲ್ಲಿ ಪ್ರಾರ್ಥನೆ ಸಲ್ಲಿಸುವರು ಮತ್ತು ಪ್ರತಿವರ್ಷ ಅನೇಕ ಉತ್ಸವಗಳನ್ನು ಆಚರಿಸುವರು.

ಈ ರಾಜ ದೇಹೊರಾವ್ ಏಳು ವರ್ಷ ಆಳಿದ ಮತ್ತು ತಾನು ಸಂಪೂರ್ಣವಾಗಿ ಶಾಂತತೆಯಲ್ಲಿ ಬಿಟ್ಟುಹೋದ ರಾಜ್ಯವನ್ನು ಶಾಂತಗೊಳಿಸುವುದನ್ನು ಬಿಟ್ಟರೆ ಬೇರೆ ಏನನ್ನು ಮಾಡಲಿಲ್ಲ.

ಅವನ ಮರಣಾನಂತರ ಬುಕಾರಾವ್[21] ಎಂಬವನೊಬ್ಬ ರಾಜ್ಯದ ಉತ್ತರಾಧಿಕಾರಿಯಾದ. ಅವನು ಅನೇಕ ನಾಡುಗಳನ್ನು ಗೆದ್ದುಕೊಂಡ. ಅವುಗಳಾದರೊ ಆ ರಾಜ್ಯದ ವಿನಾಶ ಕಾಲಕ್ಕೆ ಬಂಡುಕೋರರಾಗುಳಿದವು. ಅವನು ಅವುಗಳನ್ನು ವಶಪಡಿಸಿಕೊಂಡು ತನ್ನ ಅಧಿಕಾರ ಹಾಗೂ ಪ್ರಭುತ್ವಕ್ಕೆ ಆಧೀನಪಡಿಸಿದ. ಅವನು ಬಹಳ ವಿಶಾಲವಾದ ಒರಿಯಾ ರಾಜ್ಯವನ್ನು ವಶಪಡಿಸಿಕೊಂಡ. ಅದು ಬೆಂಗಲ್ಲನ್ನು ಮುಟ್ಟುತ್ತದೆ. ಅವನಿಗೆ ಗೌರವ ತೋರುವಷ್ಟೆ ಭಯಪಡುತ್ತ ಅವನ ರಾಜ್ಯದಲ್ಲಿ ಎಲ್ಲರೂ ಅವನ ಆಜ್ಞೆ ಪಾಲಿಸುತ್ತ ಅವನು ಮೂವತ್ತೇಳು ವರ್ಷ ಆಳಿದನು.

ಆ ರಾಜಾ ಬುಕಾರಾವನ ಮರಣಾನಂತರ ಪುರಿಯೋರೆ ದೇವರಾವ್[22] ಎಂಬ ಅವನ ಮಗ ಪಟ್ಟಕ್ಕೆ ಬಂದ. ಕನ್ನಡದಲ್ಲಿ ಅದರರ್ಥ “ಬಲಶಾಲಿ ಪ್ರಭು” ಎಂದಿದೆ. ಅವನು ಪರ್ದಾಒಗಳ ಹಣವನ್ನು ಟಂಕಿಸಿದ. ಅದನ್ನು ಇಂದಿಗೂ “ಪುರೊರೆ ದೇವರಾವ್” ಎಂದು ಕರೆಯುತ್ತಾರೆ. ಮತ್ತು ಅಂದಿನಿಂದ ಮುಂದಕ್ಕೆ ಅವುಗಳನ್ನು ಮಾಡಿದ ರಾಜರ ಹೆಸರಿನಿಂದ ನಾಣ್ಯಗಳನ್ನು ಕರೆಯುವುದು ಪದ್ಧತಿಯಾಯಿತು. ಇದರಿಂದಾಗಿಯೆ ಬಿಸ್ನಗ ರಾಜ್ಯದಲ್ಲಿ ಪರ್ದಾಒಗಳ ಇಷ್ಟೊಂದು ಹೆಸರುಗಳಿವೆ. ಈ ರಾಜ ತನ್ನ ತಂದೆ ಬಿಟ್ಟು ಹೋಗಿದ್ದಷ್ಟೆ ರಾಜ್ಯವನ್ನು ತನ್ನ ಮರಣಕಾಲಕ್ಕೆ ಬಿಟ್ಟು ಹೋದನಲ್ಲದೆ ಬೇರೇನೂ ಮಾಡಲಿಲ್ಲ.

ಈ ರಾಜನಿಗೆ ಅಜರಾವ್[23] ಎಂಬ ಒಬ್ಬ ಮಗನಿದ್ದ ಅವನು ಅವನ ಮರಣಾನಂತರ ಉತ್ತರಾಧಿಕಾರಿಯಾದ. ತಾನು ಆಳಿದ ನಲವತ್ತುಮೂರು ವರ್ಷಗಳಲ್ಲಿ ಅವನು ಮೂರರೊಂದಿಗೆ ಸದಾ ಯುದ್ಧದಲ್ಲಿ ತೊಡಗಿದ್ದ. ಅವನು ಈ ರಾಜ್ಯದ ಪ್ರಥಮ ವಿನಾಶ ಕಾಲಕ್ಕೆ ಬಂಡೆದ್ದಿದ್ದ ಗೋವಾ, ಚೌಲ್. ದಾಬುಲ್, ಸೈಲ್ಲಾಒ[24], ಮತ್ತು ಚಾರಮೆಂಡೆಲ್[25]ದ ಎಲ್ಲ ಪ್ರದೇಶವನ್ನು ವಶಪಡಿಸಿಕೊಂಡ ಮತ್ತು ಅವನು ಇಲ್ಲಿ ದಾಖಲಿಸಲಾಗಿರದ ಅನೇಕ ಕೆಲಸಗಳನ್ನು ಮಾಡಿದ.

ಈ ರಾಜ ಬಿಸ್ನಗ ನಗರದಲ್ಲಿ ಅನೇಕ ಗೋಡೆಗಳನ್ನು ಗೋಪುಗಳನ್ನು ಕಟ್ಟಿಸಿದ ಮತ್ತು ಅದರ ಸುತ್ತ ಹೊಸದಾಗಿ ಗೋಡೆ ಕಟ್ಟಿಸಿದ. ಆಗ ನಗರ ನಿರುಪಯುಕ್ತವಾಗಿತ್ತು. ಏಕೆಂದರೆ ದೂರವಿರುವ ನಾಗುಂದಿಮ್‌ದ ನೀರನ್ನು ಬಿಟ್ಟರೆ ತೋಟ ಮತ್ತು ಹಣ್ಣು ತೋಟಗಳನ್ನು ಬೆಳೆಸಲು ಬೇಕಾದ ನೀರು ಅಲ್ಲಿರಲಿಲ್ಲ. ಆ ಪ್ರದೇಶದಲ್ಲಿದ್ದ ನೀರೆಲ್ಲ ಸವುಳು ಇದ್ದುದರಿಂದ ಏನನ್ನೂ ಬೆಳೆಯಗೊಡದಂತಹುದು. ಈ ನಗರವನ್ನು ಬೆಳೆಸುವ ಮತ್ತು ರಾಜ್ಯದಲ್ಲಿಯೆ ಅತ್ಯುತ್ತಮವಾಗಿಸುವ ಇಚ್ಛೆಯುಳ್ಳ ರಾಜ, ನಗರದಲ್ಲಿ ತಂದರೆ ಬಹಳ ಲಾಭವಾಗುವುದೆಂದು ನಂಬಿ ಐದು ಹರದಾರಿ ದೂರವಿದ್ದ ದೊಡ್ಡ ನದಿಯನ್ನು ನಗರಕ್ಕೆ ತರಲು ನಿರ್ಧರಿಸಿದ. ಮತ್ತು ನದಿಗೆ ದೊಡ್ಡ ಬಂಡೆಗಳಿಂದ ಒಡ್ಡುಕಟ್ಟಿ ಅವನು ಹಾಗೆಯೆ ಮಾಡಿದ ಮತ್ತು ಒಂದು ಕತೆಯಂತೆ ಅವನು ಅದರೊಳಗೆ ಎಂಥ ದೊಡ್ಡ ಕಲ್ಲು ಎಸೆದನೆಂದರೆ ರಾಜನ ಇಷ್ಟದಂತೆ ನದಿ ಹರಿಯುವಂತೆ ಮಾಡಲು ಅದೊಂದೆ ಸಾಕಾಯಿತು. ರಾಜ್ಯದಲ್ಲಿದ್ದ ಅನೇಕ ಆನೆಗಳಿಂದ ಅದನ್ನು ಅಲ್ಲಿಗೆ ಎಳೆತರಲಾಗಿತ್ತು. ಹೀಗೆ ತರಲಾದ ನೀರನ್ನು ಅವನು ತನಗೆ ಮನಸ್ಸಿಗೆ ಬಂದ ನಗರದ ಭಾಗಗಳಿಗೆ ಒಯ್ದ. ಈ ನೀರು ನಗರಕ್ಕೆ ಎಷ್ಟೊಂದು ಉಪಯುಕ್ತ ವಾಯಿತೆಂದರೆ ಅದು ಅವನ ಆದಾಯವನ್ನು ಮೂನ್ನೂರುಐವತ್ತು ಸಾವಿರ ಪರ್ದಾಒಗಳಿ ಗಿಂತಲೂ ಹೆಚ್ಚಿಸಿತು. ಈ ನೀರಿನ ಸಹಾಯದಿಂದ ನಗರದ ಸುತ್ತ ಬಹಳ ತೋಟಗಳು, ಹಣ್ಣಿನ ತೋಟಗಳು, ಗಿಡಗಳ ತೋಪುಗಳು ಮತ್ತು ದ್ರಾಕ್ಷಿಯ ತೋಟಗಳನ್ನು ಬೆಳೆಯ ಲಾಯಿತು. ಈ ನಾಡಿನಲ್ಲಿ ಅವು ವಿಫುಲವಾಗಿವೆ. ಈ ನಾಡಿನಲ್ಲಿ ಒಳ್ಳೆಯ ಫಲ ನೀಡುವ ಲಿಂಬಿ, ಕಿತ್ತಳೆ, ಗುಲಾಬಿ ಮತ್ತು ಇತರ ಗಿಡಗಳನ್ನು ನೆಡಲಾಗಿದೆ. ನದಿಯನ್ನು ಹೀಗೆ ತಿರುಗಿಸಲು ರಾಜ ತನ್ನ ತಂದೆಯಿಂದ ಬಂದ ದೊಡ್ಡ ಮೊತ್ತದಲ್ಲಿದ್ದ ಎಲ್ಲ ಸಂಪತ್ತನ್ನು ವ್ಯಯ ಮಾಡಿದನೆಂದು ಹೇಳಲಾಗುತ್ತದೆ.

ಈ ರಾಜ ತನ್ನ ಮರಣ ಕಾಲಕ್ಕೆ ವಿಸರಾವ್[26] ಎಂಬ ಮಗನನ್ನು ಬಿಟ್ಟು ಹೋದ. ಅವನು ತನ್ನ ತಂದೆಯ ಮರಣಾನಂತರ ಉತ್ತರಾಧಿಕಾರಿಯಾದ. ಅವನು ಆರು ವರ್ಷ ಬಾಳಿದ ಮತ್ತು ಆ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವುದನ್ನೂ ಮಾಡಲಿಲ್ಲ.

ತನ್ನ ಮರಣಕಾಲಕ್ಕೆ ಅವನು ದೇವರಾವ್ ಎಂಬ ಮಗನನ್ನು ಬಿಟ್ಟು ಹೋದ. ಅವನು ಇಪ್ಪತ್ತೈದು ವರ್ಷ ಆಳಿದ. ಅವನು ದೊಡ್ಡ ಸಂಪತ್ತು ಸಂಗ್ರಹಿಸಲು ನಿರ್ಧರಿಸಿದ. ಆದರೆ, ಸತತ ಯುದ್ಧದಿಂದಾಗಿ, ಬೆಲೆಯುಳ್ಳ ಹರಳುಗಳನ್ನು ಬಿಟ್ಟು ಎಂಟನೂರೈವತ್ತು ದಶಲಕ್ಷದಷ್ಟು ಬಂಗಾರಕ್ಕಿಂತ ಹೆಚ್ಚು ಸಂಗ್ರಹಿಸಲಾಗಲಿಲ್ಲ. ಅವನ ಕಾಲದಲ್ಲಿ ಕೌಲಾಒ[27], ಸಿಲಾಒ, ಪಾಲಿಯಕೇಟ್[28], ಪೆಗು, ತಾನಾಸರಿ[29] ಮತ್ತು ಇತರ ಅನೇಕ ರಾಜ್ಯಗಳು ಅವನಿಗೆ ಕಪ್ಪ ಕೊಡುತ್ತಿದ್ದವೆಂಬುದನ್ನು ನೋಡಿದರೆ ಇದು ದೊಡ್ಡ ಮೊತ್ತವೇನಲ್ಲ.

ತನ್ನ ಮರಣಕಾಲಕ್ಕೆ ಈ ರಾಜ ಬಿಟ್ಟು ಹೋದ ಪೀಣರಾವ್[30] ಎಂಬ ಮಗ ರಾಜ್ಯದ ಉತ್ತರಾಧಿಕಾರಿಯಾಗಿ ಹನ್ನೆರಡು ವರ್ಷ ಆಳಿದ ಮತ್ತು ದೊಡ್ಡ ಜ್ಯೋತಿಷಿಯಾಗಿದ್ದ. ಅವನಿಗೆ ಸಾಹಿತ್ಯದ ಒಲವು ಬಹಳವಿದ್ದು ಹಲವಾರು ಗ್ರಂಥ ರಚಿಸಿದ ಮತ್ತು ತನ್ನ ನಾಡು ಮತ್ತು ರಾಜ್ಯದಲ್ಲಿ ಕಟ್ಟಳೆಗಳನ್ನು (ಜಾರಿಗೆ ತಂದ). ಅವನ ಆಳಿಕೆಯಿರುವವರೆಗೆ ಅವನು ಇಪ್ಪತ್ತು ಮಂತ್ರಿಗಳನ್ನು ಹೊಂದಿದ್ದ. ಈ (ಜನರಲ್ಲಿ) ಹುದ್ದೆಯಲ್ಲಿ (ಸಾಮಾನ್ಯವಾಗಿ) ಒಬ್ಬ ಮಾತ್ರ ಇರುತ್ತಾನೆ. ಈ ರಾಜ ಬಹಳ ಜಾಣನಿದ್ದ, ತನ್ನ ಎಲ್ಲ ಕರ್ತವ್ಯಗಳಲ್ಲಿ ಪಾರಂಗತನಿದ್ದ ಮತ್ತು ಎಂಥ ಪ್ರತಿಭೆ ಮತ್ತು ಗುಣಗಳನ್ನು ಪಡೆದಿದ್ದನೆಂದರೆ ಅವರು ಅವನನ್ನು ಪೀಣರಾವ್ ಎಂದು ಕರೆದರು. ಹಾಗೆಂದರೆ, ಅವರಲ್ಲಿನ ಕನ್ನಡ ಭಾಷೆಯಲ್ಲಿ ಬಹಳ ಬುದ್ದಿವಂತ ಎಂದರ್ಥ. ಈ ರಾಜನನ್ನು ದ್ರೋಹದಿಂದ ಅವನ ಸೋದರಳಿಯನೆ ಕೊಂದ. ರಾಜನೇ ತನ್ನ ಮನೆಯಲ್ಲಿಯೆ ಮಗನಂತೆ ಬೆಳೆಸಿದ್ದ ಅವನು ರಾಜನ ಮರಣಕ್ಕೆ ಕಾರಣನಾದ.[31] ಸೋದರಳಿಯ ಲಗ್ನವಾಗಲು ನಿರ್ಧರಿಸಿದ ಮತ್ತು ತನ್ನ ಲಗ್ನದ ಉತ್ಸವಗಳಲ್ಲಿ ಸ್ವತಃ ರಾಜನ ಮಗ ಉಪಸ್ಥಿತನಿದ್ದು ಮರ್ಯಾದೆ ಮಾಡುವಂತೆ ಆಜ್ಞೆ ಮಾಡಬೇಕೆಂದು ತನ್ನ ಸೋದರಮಾವನಾದ ರಾಜನನ್ನು ಪ್ರಾರ್ಥಿಸಿದ. ಅವನಿಗಾಗಿ ಪಡೆದ ಪ್ರೀತಿಗಾಗಿ ಮತ್ತು ಅವನನ್ನು ಗೌರವಿಸುವ ಸಂತೋಷಕ್ಕಾಗಿ ತನ್ನ ಮಗನಿಗೆ ಪರಿವಾರದೊಂದಿಗೆ ಅಣಿಯಾಗಲು ರಾಜ ಅಪ್ಪಣೆಯಿತ್ತ ಮತ್ತು ತನ್ನ ಸೋದರಳಿಯನ ಲಗ್ನದಲ್ಲಿ ಉಪಸ್ಥಿತನಿರಲು ಮತ್ತು ಗೌರವಿಸಲು ಮತ್ತು ತನ್ನ ಆಸ್ಥಾನದ ಮಂತ್ರಿಗಳು ಮತ್ತು ದಳಪತಿಗಳೊಂದಿಗೆ ಕಳುಹಿಸಿದ. ಎಲ್ಲವನ್ನೂ ಸಿದ್ಧವಾಗಿರಿಸಿಕೊಂಡ ಸೋದರಳಿಯ ಅವರೆಲ್ಲ ತನ್ನ ಮನೆಯಲ್ಲಿ ಭೋಜನಕ್ಕೆ ಕುಳಿತಾಗ ಈ ಕೃತ್ಯಕ್ಕಾಗಿಯೆ ತಯಾರಾಗಿ ನಿಲ್ಲಿಸಿದ್ದ ಜನರಿಂದ ಕಠಾರಿಗಳಿಂದ ಇರಿಯಿಸಿ ಕೊಲ್ಲಿಸಿದ. ಯಾರಿಗೂ ಸಂಶಯ ಬಾರದಂತೆ ಇದನ್ನು ಮಾಡ ಲಾಯಿತು. ಏಕೆಂದರೆ ಅಲ್ಲಿರುವ ಪದ್ಧತಿಯೆಂದರೆ ತಿನ್ನಲು ಕುಡಿಯಲು ಇರುವ ಎಲ್ಲವನ್ನೂ ಇಟ್ಟು ಊಟಕ್ಕೆ ಕುಳಿತವರಿಗೆ ಬಡಿಸಲು ಅಲ್ಲಿ ಯಾರೂ ಇರುವುದಿಲ್ಲ. ಊಟ ಮಾಡುವವರನ್ನು ಬಿಟ್ಟರೆ ಹೊರಗಡೆಯೂ ಯಾರೂ ಇರುವುದಿಲ್ಲ. ಅವರು ಮಾತ್ರ ಭೋಜನಕ್ಕೆ ಕುಳಿತಿದ್ದುದರಿಂದ ಅವರೊಂದಿಗೆ ತರಲಾಗಿದ್ದ ಜನರಿಗೆ ಏನು ಸಂಭವಿಸಿತೆಂದು ತಿಳಿಯಲಿಲ್ಲ, ಮತ್ತು ಅವನು ರಾಜನ ಮಗನನ್ನು ಎಲ್ಲ ಮುಖ್ಯರೊಂದಿಗೆ ಕೊಂದ ಬಳಿಕ ಮಂತ್ರಿಯು[32] ರಾಜನಿಗೆ ಕಾಣಿಕೆ ನೀಡಲೆಂಬಂತೆ ಕುದುರೆಯೇರಿ ಹೊರಟ. ಅರಮನೆಯ ದ್ವಾರ ತಲುಪಿದಾಕ್ಷಣ ತಾನು ಬಂದಿರುವುದಾಗಿಯೂ ಮತ್ತು ಪದ್ಧತಿಯಂತೆ ಕಾಣಿಕೆ ತಂದಿರುವುದಾಗಿಯೂ ರಾಜನಲ್ಲಿಗೆ ಹೇಳಿಕಳಿಸಿದ. ಆಗ ವಿಶ್ರಮಿಸುತ್ತಿದ್ದ ಮತ್ತು ತನ್ನ ಪತ್ನಿಯರೊಂದಿಗೆ ಉಲ್ಲಾಸಗೈಯುತ್ತಿದ್ದ ರಾಜ ಅವನಿಗೆ ಒಳಗೆ ಬರಹೇಳಿದ. ರಾಜ ನಿಂತಲ್ಲಿಗೆ ಬಂದಾಕ್ಷಣ ಅವನು ವಿಷದಲ್ಲಿ ಅದ್ದಿದ ಕಠಾರಿ ಇಡಲಾಗಿದ್ದ ಸುವರ್ಣ ಪಾತ್ರೆಯನ್ನು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಿದ. ಅದರಿಂದಲೆ ಅವನನ್ನು ಅನೇಕ ಕಡೆ ಗಾಯಗೊಳಿಸಿದ. ಕತ್ತಿ ಮತ್ತು ಕಠಾರಿ ಬಳಕೆಯಲ್ಲಿ ತನ್ನ ರಾಜ್ಯದಲ್ಲಿ ಯಾರಿಗಿಂತಲೂ ಉತ್ತಮನಾಗಿದ್ದ ರಾಜ ತನ್ನ ಮೇಲೆ ಗುರಿಯಿಟ್ಟಿ ತಿವಿತಗಳನ್ನು ತನ್ನ ದೇಹದ ತಿರುಚು ತಿರುವುಗಳಿಂದ ತಪ್ಪಿಸಿಕೊಂಡು ಅವನಿಂದ ಬಿಡಿಸಿಕೊಂಡ ಮತ್ತು  ತನ್ನಲ್ಲಿದ್ದ ಗಿಡ್ಡ ಕತ್ತಿಯಿಂದ ಅವನನ್ನು ಕೊಂದ. ಆದಾದ ಮೇಲೆ ಕುದುರೆಗೆ ಜೀನು ಹಾಕಲು ಆಜ್ಞಾಪಿಸಿ ಅದನ್ನೇರಿ ಸೋದರಳಿಯನ ರುಂಡವನ್ನು ಕೈಯಲ್ಲಿ ಹಿಡಿದು ನಡೆದ. ದ್ರೋಹ ಮಾಡಿರಬಹುದು ತನ್ನ ಮಗ ಸತ್ತಿರಬಹುದೆಂದು ಶಂಕಿಸಿ ರಾಜ ಅವನ ಮನೆದಾರಿ ಹಿಡಿದ. ಮತ್ತು ಅಲ್ಲಿಗೆ ಬಂದಾಕ್ಷಣ ದ್ರೋಹವನ್ನು ಮತ್ತು ಸೋದರಳಿಯ ಎಂಥ ದುಷ್ಟ ಕೃತ್ಯ ಎಸಗಿದ್ದನೆಂಬುದನ್ನು ಪ್ರತ್ಯಕ್ಷ ಕಂಡ. ತನ್ನ ಮಗ ಮತ್ತು ಪ್ರಮುಖ ದಳಪತಿಗಳು ಹತರಾದುದನ್ನು ಕಂಡು ಮತ್ತು ದ್ರೋಹಿ ಶಕ್ತಿಯಿದ್ದರೆ ತನ್ನ ಮೇಲೂ ಮೇಲುಗೈ ಪಡೆಯಬಹುದಿತ್ತೆಂದು ಮನಗಂಡು ರಾಜ ಬಹಳ ಸಿಟ್ಟಿಗೆದ್ದು ಈ ದ್ರೋಹಕ್ಕೆ ಕಾರಣರಾದ ಎಲ್ಲರಿಗೆ ಮತ್ತು ಕಾರಣರಲ್ಲದ ಅನೇಕರಿಗೆ ಭಯಾನಕ ಶಿಕ್ಷೆ ವಿಧಿಸಲು ತನ್ನ ಜನರಿಗೆ ಆಜ್ಞೆಯಿತ್ತ. ಸ್ವತಃ ತಾನು ವಿಷಾಯುಕ್ತ ಗಾಯಗಳಿಂದ ತೀವ್ರವಾಗಿ ಬಳಲಿ ಆರು ತಿಂಗಳು ಮಾತ್ರ ಬದುಕಿದ. ಅವುಗಳ ಕೊನೆಗೆ, ಕಠಾರಿಯಲ್ಲಿದ್ದ ವಿಷದಿಂದಾಗಿ ತೀರಿಕೊಂಡ.

ಅವನ ಮರಣಾನಂತರ ಹಿಂದೆ ಉಳಿದ ಅವನ ಮಗ ರಾಜ್ಯದ ಉತ್ತರಾಧಿಕಾರಿಯಾದ ಮತ್ತು ಅವನ ಹೆಸರು…. ಆಗಿತ್ತು.[33] ಮತ್ತು ಈ ರಾಜ ಆಳಲಾರಂಭಿಸಿದ ಕೂಡಲೆ ತನ್ನ ಮನೆತನದ ಎಲ್ಲ ಭಂಡಾರಿಗಳು, ಮಂತ್ರಿಗಳು ಮತ್ತು ಕರಣಿಕರನ್ನು ಕರೆಕಳಿಸಿ ತನ್ನ ರಾಜ್ಯದ ಆದಾಯವೆಷ್ಟು ಎಂದು ವಿಚಾರಿಸಿ ಪ್ರತಿವರ್ಷ ಎಷ್ಟು ಆದಾಯ ಬರುತ್ತದೆಂದು ತಿಳಿದುಕೊಂಡ. ಮತ್ತು ಘನತೆವೆತ್ತ ಅವನಿಗೆ ಹದಿಮೂರು ಲಕ್ಷ ಸುವರ್ಣಗಳು ಬರುತ್ತಿದ್ದವು. ಈ ರಾಜ ತನ್ನ ಆದಾಯದ ಐದರಲ್ಲೊಂದು ಪಾಲು ದೇವಾಲಯಗಳಿಗೆ ದತ್ತಿ ನೀಡಿದ. ಈ ದೇವಾಲಯಗಳಿರುವ ನಾಡಿನಲ್ಲಿ ಬ್ರಾಹ್ಮಣರ ಅಂದರೆ ಪುರೋಹಿತರ ಕಾನೂನು ಒಂದು ಬಿಟ್ಟರೆ ಬೇರಾವ ಕಾನೂನು ಸಾಧ್ಯವಿಲ್ಲ. ಹೀಗಾಗಿ, ಜನ ಕಷ್ಟ ಅನುಭವಿಸುತ್ತಾರೆ.

ಈ ರಾಜನ ಮರಣಾನಂತರ ವೆರುಪಾಕರಾವ್[34] ಎಂಬ ಮಗ ಉತ್ತರಾಧಿಕಾರಿಯಾದ. ಆಳುವಷ್ಟು ಕಾಲವೂ ದುಶ್ಚಟಗಳಿಗೆ ಬಲಿಯಾಗಿ ಅವನು ಸ್ತ್ರೀಯರನ್ನು ಬಿಟ್ಟು ಬೆರಾವುದಕ್ಕೂ ಗಮನಹರಿಸಲಿಲ್ಲ, ಕುಡಿತದಲ್ಲೆ ಮೈಮರೆತ, ಮನೋಲ್ಲಾಸದಲ್ಲಿ ಮುಳುಗಿದ ಮತ್ತು ತನ್ನ ದಳಪತಿಗಾಗಲಿ ತನ್ನ ಜನರಿಗಾಗಲಿ ಎಂದೂ ದರ್ಶನ ನೀಡಲಿಲ್ಲ. ಹೀಗಾಗಿ ಅಲ್ಪ ಕಾಲದಲ್ಲಿಯೆ ಅವನ ಪೂರ್ವಜರು ಗೆದ್ದು ಬಿಟ್ಟು ಹೋಗಿದ್ದುದನ್ನು ಕಳೆದುಕೊಂಡ. ಈ ರಾಜನ ಚಟಗಳು ಮತ್ತು ಜೀವನವನ್ನು ಕಂಡ ರಾಜ್ಯದ ಮನ್ನೆಯರಲ್ಲಿ ಪ್ರತಿಯೊಬ್ಬನೂ ಬಂಡೆದ್ದು ತಾನು ಪಡೆದುದನ್ನು ಹಿಡಿದುಕೊಂಡ. ಇದರಿಂದಾಗಿ, ತನ್ನ ಕಾಲದಲ್ಲಿ ರಾಜ ಗೋವಾ, ಚೌಲ್, ದಾಬುಲ್ ಮತ್ತು ರಾಜ್ಯದ ಇತರ ಪ್ರಮುಖ ಪ್ರದೇಶಗಳನ್ನು ಕಳೆದುಕೊಂಡ. ಈ ರಾಜ ಕೇವಲ ಕುಡಿತಕೋರತನದಲ್ಲಿ ತನ್ನ ದಳಪತಿಗಳಲ್ಲನೇಕರನ್ನು ಕೊಂದ. ಒಂದು ರಾತ್ರಿ ತನ್ನ ದಳಪತಿಗಳಲ್ಲೊಬ್ಬ ತನ್ನ ಕೋಣೆಯನ್ನು ಪ್ರವೇಶಿಸಿದಂತೆ ಕನಸು ಕಂಡದ್ದಕ್ಕಾಗಿ ಮರುದಿನ ಅವನನ್ನು ಕರೆಯಿಸಿ ಅವನು ತನ್ನನ್ನು ಕೊಲ್ಲಲು ತನ್ನ ಕೋಣೆಯನ್ನು ಪ್ರವೇಶಿಸಿದಂತೆ ಕನಸು ಬಿದ್ದಿತ್ತೆಂದು ಹೇಳಿದ ಮತ್ತು ಅಷ್ಟು ಮಾತ್ರಕ್ಕೆ ಅವನನ್ನು ಕೊಲ್ಲಿಸಿದ. ಈ ರಾಜನಿಗೆ ಇಬ್ಬರು ಬೆಳೆದ ಪುತ್ರರಿದ್ದರು. ತಮ್ಮ ತಂದೆಯ ದುಷ್ಟತನ ಹಾಗೂ ತನ್ನ ರಾಜ್ಯ ಕಳೆದುಕೊಂಡ ಬಗೆಯನ್ನು ಕಂಡು ಅವರು ಅವನನ್ನು ಕೊಲ್ಲಲು ನಿರ್ಧರಿಸಿದರು. ವಾರಸುದಾರನಾದ ಹಿರಿಯ ಮಗ ನಿಜಕ್ಕೂ ಹಾಗೆಯೆ ಮಾಡಿದ. ಅವನು ತಂದೆಯನ್ನು ಕೊಂದ ಮೇಲೆ ಅವನನ್ನು ರಾಜನನ್ನಾಗಿ ಮಾಡಲು ಅರಿಕೆ ಮಾಡಿಕೊಳ್ಳಲಾಗಿ ಅವನು ಹೀಗೆಂದ : “ಈ ರಾಜ್ಯ ಹಕ್ಕಿನಿಂದ ನನ್ನದಿರಬಹುದಾದರೂ ಅದು ನನಗೆ ಬೇಕಿಲ್ಲ. ಏಕೆಂದರೆ, ನಾನು ನನ್ನ ತಂದೆಯನ್ನು ಕೊಂದೆ ಮತ್ತು ತನ್ಮೂಲಕ ಮಾಡಬಾರದುದನ್ನು ಮಾಡಿರುವೆ ಮತ್ತು ಘೋರ ಪಾಪಗೈದಿರುವೆ. ಆದುದರಿಂದ ಇಂಥ ಅಪಾತ್ರ ಮಗ ರಾಜ್ಯದ ಉತ್ತರಾಧಿಕಾರಿಯಾಗುವುದು ತರವಲ್ಲ. ನನ್ನ ತಮ್ಮ ತನ್ನ ತಂದೆಯ ರಕ್ತದಿಂದ ತನ್ನ ಕೈಗಳನ್ನು ಕಲುಷಿತಗೊಳಿಸಿಕೊಳ್ಳಲಿಲ್ಲವಾದ್ದರಿಂದ ಅವನನ್ನೆ ತೆಗೆದುಕೊಳ್ಳಿರಿ ಮತ್ತು ಅವನೆ ಆಳಲಿ”. ಹಾಗೆಯೆ ಮಾಡಲಾಗಿ ತಮ್ಮನನ್ನು ಪಟ್ಟಕ್ಕೆ ತರಲಾಯಿತು. ಮತ್ತು ಅವರು ಅವನಿಗೆ ರಾಜ್ಯ ಒಪ್ಪಿಸಿಯಾದ ಮೇಲೆ ಅವನ ಮಂತ್ರಿ ಹಾಗೂ ದಳಪತಿಗಳು ಅವನು ತನ್ನ ಅಣ್ಣನನ್ನು ಕೊಲ್ಲುವಂತೆ ಉಪದೇಶಿಸಿದರು. ಏಕೆಂದರೆ, ತಂದೆಯನ್ನು ಕೊಂದಿದ್ದ ಅವನು ಬಯಸಿದರೆ ತಮ್ಮನನ್ನು  ಕೊಲ್ಲಬಹುದು. ಹೀಗೆ ಆಗಲೂ ಬಹುದೆಂದು ರಾಜನಿಗೆ ತೋರಿದ್ದರಿಂದ ಅವನು ಅಣ್ಣನನ್ನು ಕೊಲ್ಲಲು ನಿರ್ಧರಿಸಿ ಇದನ್ನು ಕೂಡಲೆ ಜಾರಿಗೊಳಿಸಿದನು ಮತ್ತು ಅವನನ್ನು ತನ್ನ ಕೈಯಿಂದಲೆ ಕೊಂದನು. ಈ ರೀತಿ ಈ ಮನುಷ್ಯ ಇಂಥ ಕುಕೃತ್ಯ ಎಸಗುವವರು ಕಾಣುವ ಗತಿಯನ್ನೆ ಕಂಡ. ಈ ರಾಜನ ಹೆಸರು ಪಾದೆಯರಾವ್ ಮತ್ತು ಇದನ್ನು ಮಾಡಿಯಾದ ಮೇಲೆ ಅವನೂ ತನ್ನ ತಂದೆಯ ವ್ಯಸನಗಳಿಗೇ ಶರಣಾದ. ತಾನು ಸಂತೋಷಿಸುವ ದುರ್ವ್ಯಸನಗಳನ್ನು ಬಿಟ್ಟರೆ ತನ್ನ ರಾಜ್ಯದ ಬಗೆಗೆ ಏನನ್ನೂ ಅರಿಯಬಯಸದ, ತನ್ನ ಸ್ತ್ರೀಯರಿಗೆ ಅರ್ಪಿತನಾದ ಅವನು ಬಹುಮಟ್ಟಿಗೆ ನಗರದಲ್ಲಿಯೆ ಇದ್ದನು.

ಅವನಿಗೆ ಒಂದು ರೀತಿಯಲ್ಲಿ ಸಂಬಂಧಿಕನಾಗಿದ್ದ ನರಸಿಂಗುಆ[35] ಎಂಬ ಅವನ ದಳಪತಿಯೊಬ್ಬ ಇನ್ನೂ ಎಲ್ಲವೂ ಕಳೆದುಹೋಗಿರದಿದ್ದರೂ ಅವನ ಜೀವನಕ್ರಮ ಕಂಡು, ಅವನು ಜೀವಂತವಿದ್ದು ಆಳುವುದು ರಾಜ್ಯಕ್ಕೆ ಎಷ್ಟು ಕೆಡು ಎಂದು ಅರಿತು ಅವನ ಮೇಲೆ ದಾಳಿಯಿಟ್ಟು ಅವನ ನಾಡುಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ. ಆ ಯೋಜನೆಯನ್ನು ಅವನು ತಕ್ಷಣ ಕಾರ್ಯಗತಗೊಳಿಸಿದ.

ಆದುದರಿಂದ, ಸರಿಯಾಗಿ ಆಳುವ ರಾಜ ತಮ್ಮ ಮೇಲೆ ಇರದಿರುವುದು ಎಷ್ಟು ಕೆಟ್ಟದ್ದು, ಅವನ ಜೀವನಕ್ರಮ ನೋಡಿದರೆ ರಾಜ ತನ್ನ ದುರಾಡಳಿತದಿಂದ ತಂದೆ ಕಳೆದು ಕೊಂಡುದಕ್ಕಿಂತಲೂ ಹೆಚ್ಚು ಕಳೆದುಕೊಂಡರೆ ಆಶ್ಚರ್ಯವಲ್ಲ ಎಂದು ವಿವರಿಸಿ ಅವನು ರಾಜ್ಯದ ದಳಪತಿಗಳಿಗೆ ಮತ್ತು ಪಾಳೆಯಗಾರರಿಗೆ ಪತ್ರ ಬರೆದ.

ಅವರ ಸದಿಚ್ಛೆ ಗಳಿಸಲೋಸುಗ ಅವನು ಅವರೆಲ್ಲರಿಗೆ ದೊಡ್ಡ ಕಾಣಿಕೆಗಳನ್ನು ನೀಡಿದ ಮತ್ತು ಹೀಗೆ ಬಹಳ ಜನರನ್ನು ತನ್ನಡೆಗೆ ಸೆಳೆದುಕೊಂಡಾಗ ರಾಜನಿದ್ದ ಬಿಸ್ನಗ ನಗರದ ಮೇಲೆ ದಾಳಿಯಿಡಲು ಸಿದ್ಧತೆ ಮಾಡಿದ. ಈ ದಳಪತಿ ನರಸಿಂಗುಆನ ಬಂಡು, ಅವನು ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ಸಮೀಪ ಬರುತ್ತಿದ್ದ ಬಗೆ, ಅನೇಕ ಜನರು ಅವನೊಂದಿಗೆ ಕೂಡಿಕೊಳ್ಳುತ್ತಿದ್ದ ಬಗೆ ತಿಳಿಸಿದಾಗ ಅವನಿಗೆ ತಾನು ಅನುಭವಿಸಿದ ನಷ್ಟದ ಪರಿವೆ ಇದ್ದಂತೆ ತೋರಲಿಲ್ಲ. ಅವನು ಅದಕ್ಕೆ ಲಕ್ಷ್ಯ ಕೊಡಲಿಲ್ಲ, ಸಿದ್ಧತೆ ಮಾಡಿಕೊಳ್ಳಲೂ ಇಲ್ಲ. ಅದಕ್ಕೆ ಬದಲಾಗಿ, ಆ ಸುದ್ದಿ ತಂದಿದ್ದವನನ್ನೆ ಕೆಟ್ಟ ರೀತಿಯಲ್ಲಿ ನೋಡಿಕೊಂಡ, ಹಾಗಾಗಿ, ಈ ನರಸಿಂಗುಆನ ಸೈನ್ಯದ ದಳಪತಿಯೊಬ್ಬ ಬಿಸ್ನಗದ ದ್ವಾರ ತಲುಪಿದಾಗ ಅದನ್ನು ರಕ್ಷಿಸಲು ಒಬ್ಬ ಮನುಷ್ಯನೂ ಇರಲಿಲ್ಲ. ಮತ್ತು ರಾಜನಿಗೆ ಅವನ ಆಗಮನದ ಬಗೆಗೆ ಹೇಳಿದಾಗ ಅವನು ಅದು ಸಾಧ್ಯವಿರದ್ದು ಎಂದೇ ಅಂದ. ಆಮೇಲೆ ಅವನು ಅರಮನೆ ಪ್ರವೇಶೀಸಿ ಕೆಲವು ಸ್ತ್ರೀಯರನ್ನು ಕೊಲ್ಲುತ್ತ ಅವನ ಕೋಣೆಯ ಬಾಗಿಲುಗಳಿಗೇ ಬಂದ. ಕೊನೆಗೆ ರಾಜ ನಂಬಿದನು ಮತ್ತು ಅಪಾಯ ಎಷ್ಟು ದೊಡ್ಡದೆಂದು ಈಗ ಕಂಡು ಇನ್ನೊಂದು ಬದಿಯ ದ್ವಾರಗಳ ಮೂಲಕ ಓಡಿಹೋಗಲು ನಿರ್ಧರಿಸಿದ ಮತ್ತು ಹೀಗೆ ಅವನು ತನ್ನ ನಗರ ಮತ್ತು ಅರಮನೆಗಳನ್ನು ಬಿಟ್ಟು ಓಡಿದ.

ರಾಜ ಓಡಿಹೋದುದನ್ನು ತಿಳಿದಾಗ ದಳಪತಿ ಅವನನ್ನು ಬೆನ್ನಟ್ಟುವ ತೊಂದರೆ ತೆಗೆದುಕೊಳ್ಳದೆ ನಗರವನ್ನು ಹಾಗೂ ಅದರಲ್ಲಿ ದೊರೆತ ಸಂಪತ್ತನ್ನು ವಶಪಡಿಸಿಕೊಂಡ. ಮತ್ತು ಅದನ್ನು ತಿಳಿಸಲೋಸುಗ ತನ್ನ ಪ್ರಭು ನರಸಿಂಗನಿಗೆ ಹೇಳಿಕಳಿಸಿದ. ಅದಾದ ನಂತರ ನರಸಿಂಗನನ್ನು ರಾಜಪದವಿಗೇರಿಸಲಾಯಿತು. ಮತ್ತು ಅವನು ಬಹಳ ಬಲಶಾಲಿ ಹಾಗೂ ಜನರಿಂದ ಪ್ರೀತಿಸಲ್ಪಟ್ಟವನಾದುದರಿಂದ ಅಂದಿನಿಂದ ಈ ಬಿಸ್ನಗ ರಾಜ್ಯವನ್ನು ನರಸಿಂಗನ ರಾಜ್ಯ ಎಂದು ಕರೆಯಲಾಯಿತು.

ಅವನನ್ನು ರಾಜಪದವಿಗೇರಿಸಿ ವಿಧೆಯತೆ ತೋರಿದ ನಂತರ ಅವನು ಬಿಸ್ನಗಕ್ಕೆ ಬಂದು ಅಲ್ಲಿ ಅನೇಕ ನ್ಯಾಯಕಾರ್ಯಗಳನ್ನು ಮಾಡಿದ. ಹಕ್ಕಿಗೆ ವ್ಯತಿರಿಕ್ತವಾಗಿ ಯಾರ್ಯಾರು ರಾಜನಿಂದ ಪ್ರದೇಶಗಳನ್ನು ಕಿತ್ತುಕೊಂಡಿದ್ದರೊ ಅವರಿಂದ ಅವನು ಅವನ್ನು  ವಶಪಡಿಸಿಕೊಂಡ. ಈ ರಾಜ ನಲವತ್ತು ನಾಲ್ಕು ವರ್ಷ ಆಳಿದ ಮತ್ತು ತನ್ನ ಮರಣಕಾಲಕ್ಕೆ ಇಡಿ ರಾಜ್ಯವನ್ನು ಶಾಂತಿಯಲ್ಲಿ ಬಿಟ್ಟು ಹೋದ ಮತ್ತು ತನ್ನ ಪೂರ್ವಾಧಿಕಾರಿ ರಾಜರು ಕಳೆದುಕೊಂಡಿದ್ದ ಎಲ್ಲ ಪ್ರಾಂತಗಳನ್ನೂ ಮರಳಿ ಪಡೆದ. ಅವನು ಒರೊಮುಝ್ ಮತ್ತು ಅದೀಮ್[36]ಗಳಿಂದ ತನ್ನ ರಾಜ್ಯದೊಳಗೆ ಕುದುರೆಗಳನ್ನು ತರುವಂತೆ ಮಾಡಿದ ಮತ್ತು ಕುದುರೆಗಳಿಗಾಗಿ ಅವರು ಕೇಳಿದಷ್ಟು ಕೊಡುವ ಮೂಲಕ ವರ್ತಕರಿಗೆ ಬಹಳ ಲಾಭ ಮಾಡಿಕೊಡುತ್ತಿದ್ದ. ಅವುಗಳು ಸತ್ತಿರಲಿ ಜೀವಂತವಾಗಿರಲಿ ಸಾವಿರ ಪರ್ದಾಒಗಳಿಗೆ ಮೂರರಂತೆ ಕೊಂಡುಕೊಳ್ಳುತ್ತಿದ್ದ ಮತ್ತು ಸಮುದ್ರದಲ್ಲಿ ಸತ್ತವುಗಳ ಬಾಲವನ್ನು ಮಾತ್ರ ಅವರು ಅವನಲ್ಲಿಗೆ ತರುತ್ತಿದ್ದರು ಮತ್ತು ಅವನು ಅದಕ್ಕೆ ಅದು ಜೀವಂತವಾಗಿದ್ದಂತೆಯೆ ಹಣ ತೆರುತ್ತಿದ್ದ.

ಆ ರಾಜನ ಮರಣಕಾಲಕ್ಕೆ ಅವನ ಆಳಿಕೆಯ ವಿರುದ್ಧ ಬಂಡೆದ್ದ ಮೂರು ದುರ್ಗಗಳಿದ್ದವು ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಅವನಿಗೆ ಆಗಲಿಲ್ಲ. ಅವಾವುವೆಂದರೆ ರಾಚೋಲ, ಒದೆಗರಿ ಮತ್ತು ಕೊನಡೊಲ್ಲಿ.[37] ಅವುಗಳು ವಿಶಾಲ ಮತ್ತು ಶ್ರೀಮಂತ ಪ್ರದೇಶಗಳನ್ನು ಹೊಂದಿದ್ದ ರಾಜ್ಯದ ಮುಖ್ಯ ದುರ್ಗಗಳಾಗಿವೆ. ಅವನು ಮರಣಕಾಲಕ್ಕೆ ಇಬ್ಬರು ಪುತ್ರರನ್ನು ಮತ್ತು ತರುವಾಯ ಬಿಸ್ನಗದ ರಾಜನಾದವನ ತಂದೆಯಾದ ನರಸೇನಕ ಎಂಬ ರಾಜ್ಯದ ರಾಜಪ್ರತಿನಿಧಿಯನ್ನು ಹಿಂದೆ ಬಿಟ್ಟು ಹೋದ.[38] ಈ ರಾಜ(ನರಸಿಂಗ) ಮರಣಕ್ಕೆ ಮುಂಚೆ ತನ್ನ ಮಂತ್ರಿ ನರಸೇನಕನನ್ನು ಕರೆಕಳಿಸಿ ಅವನೊಂದಿಗೆ ಸಂಭಾಷಣೆ ನಡೆಸಿದ ಮತ್ತು ರಾಜಪುತ್ರರು ಆಳುವ ವಯಸ್ಸಿಗೆ ಬರುವವರೆಗೆ ಅವನು ರಾಜ್ಯವಾಳುವಂತೆ ಮೃತ್ಯುಪತ್ರದಲ್ಲಿ ಉಲ್ಲೇಖಿಸುವುದಾಗಿ ಹೇಳಿದ. ಎಲ್ಲ ರಾಜಸಂಪತ್ತೂ ತನ್ನದು ಮಾತ್ರವೆಂದೂ ಹೇಳಿದ ಮತ್ತು ಖಡ್ಗದ ಮೊನಚಿನಿಂದಲೆ ನರಸಿಂಗದ ಈ ರಾಜ್ಯವನ್ನು ತಾನು ಗೆದ್ದುದನ್ನು ಅವನಿಗೆ ನೆನಪಿಸಿದ. ಈಗ ವಶಪಡಿಸಿಕೊಳ್ಳಬೇಕಾದ ಮೂರು ದುರ್ಗಗಳು ಮಾತ್ರ ಉಳಿದಿವೆ. ಆದರೆ ತನಗೆ ಅವುಗಳನ್ನು ವಶಪಡಿಸಿಕೊಳ್ಳುವ ಸಮಯ ಮೀರಿದೆ ಎಂದು ಸೇರಿಸಿದ. ರಾಜ್ಯವನ್ನು ಚೆನ್ನಾಗಿ ಕಾಪಾಡಬೇಕು ಮತ್ತು ತನ್ನ ರಾಜಕುಮಾರರಲ್ಲಿ ಅತ್ಯಂತ ಸಮರ್ಥನಾದವನಿಗೆ ಅದನ್ನು ಬಿಟ್ಟುಕೊಡಬೇಕು ಎಂದು ರಾಜ ಅವನನ್ನು ಕೇಳಿಕೊಂಡ. ರಾಜನ ಮರಣಾನಂತರ ಈ ನರಸೇನಕ ರಾಜಪ್ರತಿನಿಧಿಯಾಗಿ ಉಳಿದು ಕೂಡಲೆ ರಾಜಕುಮಾರನನ್ನು ರಾಜಪದವಿಗೇರಿಸಿದ ಮತ್ತು ದೇಶದ ಎಲ್ಲ ಸಂಪತ್ತನ್ನು, ಆದಾಯವನ್ನು ಮತ್ತು ಆಡಳಿತವನ್ನು ತನ್ನ ಕೈಯಲ್ಲಿಯೆ ಇಟ್ಟುಕೊಂಡ.

ಆ ಸಮಯದಲ್ಲಿ ಅವನಿಗೆ ಕೆಡುಕು ಬಯಸುವ ದಳಪತಿಯೊಬ್ಬ ನರಸೇನಕನೆ ಹತ್ಯೆಗೈಯಲು ಆಜ್ಞೆಯಿತ್ತಿದ್ದನೆಂದು ಅನಂತರ ಹೇಳುವ ಉದ್ದೇಶದಿಂದ ರಾಜಕುಮಾರನನ್ನು ಕೊಲ್ಲಲು ನಿರ್ಧರಿಸಿದ. ಏಕೆಂದರೆ ನರಸೇನಕ ರಾಜ್ಯದ ಆಡಳಿತ ವಹಿಸಿಕೊಡಲಾಗಿದ್ದ ಮಂತ್ರಿಯಾಗಿದ್ದುದರಿಂದ ಈ ದ್ರೋಹಕೃತ್ಯಕ್ಕಾಗಿ ನರಸೇನಕನನ್ನು ಮರಣಕ್ಕೀಡು ಮಾಡಲಾಗುವುದೆಂದು ಅವನು ಬಗೆದ. ಅವನು ಕೂಡಲೆ ಆ ಉದ್ದೇಶಕ್ಕಾಗಿ ಆಮಿಷ  ನೀಡಿದ್ದ ಬಾಲಸೇವಕನೊಬ್ಬ ಒಂದು ರಾತ್ರಿ ರಾಜಕುಮಾರನನ್ನು ಕೊಂದ. ಅವನು ಸತ್ತನೆಂದು ಕೇಳಿದ ಮತ್ತು ತಾನೇ ಅವನನ್ನು ಕೊಲ್ಲಲು ಕಳಿಸಿಕೊಟ್ಟವನೆಂದು (ಭಾವಿಸಲಾಗಿದ್ದುದನ್ನು) ತಿಳಿದ ಕೂಡಲೆ ನರಸೇನಕ ರಾಜನ ಇನ್ನೊಬ್ಬ ಸಹೋದರನನ್ನು ರಾಜನ ಸ್ಥಾನಕ್ಕೇರಿಸಿದ. ಈ ದಳಪತಿಯನ್ನು ಇದ್ದಕ್ಕಿಂತ ಹೆಚ್ಚು ಶಿಕ್ಷಿಸಲು ತಾಮರಾವ್ ಎಂಬ ಹೆಸರಿನ ಈ ತಮ್ಮನನ್ನು  ರಾಜನ ಸ್ಥಾನಕ್ಕೇರಿಸುವವರೆಗೆ ಅವನಿಗೆ ಶಕ್ಯವಿದ್ದಿಲ್ಲ. ಏಕೆಂದರೆ, ಆ ದಳಪತಿಗೆ ಅನೇಕ ಸಂಬಂಧಿಗಳಿದ್ದರು. ಅವನು (ನರಸೇನಕ) ಒಂದು ದಿನ ನಗರದಲ್ಲಿ ತಮ್ಮ ಎಲ್ಲ ಮನೆ ಮಾರು ಬಿಟ್ಟು ಬೇಟೆಗೆ ಹೋಗುವುದಾಗಿ ಹೇಳಿ ಬಿಸ್ನಗ ನಗರದಿಂದ ನಾಗುಂದಿಮ್ ಕಡೆಗೆ ಹೊರಟ. ಮತ್ತು ಈ ನಾಗುಂದಿಮ್ ನಗರಕ್ಕೆ ಆಗಮಿಸಿದ ನಂತರ ಆ ಸ್ಥಳದಿಂದ ಇಪ್ಪತ್ನಾಲ್ಕು ಹರದಾರಿ ದೂರವಿರುವ ಪೆನಗುಂದಿಮ್[1] ಎಂಬ ಇನ್ನೊಂದು ನಗರಕ್ಕೆ ಹೋದ. ಅಲ್ಲಿ ಕೂಡಲೆ ದೊಡ್ಡ ಪಡೆಗಳನ್ನು, ಅನೇಕ ಕುದುರೆಗಳನ್ನು ಮತ್ತು ಆನೆಗಳನ್ನು ಸಿದ್ಧಗೊಳಿಸಿದ ಮತ್ತು ಅದಾದ ಮೇಲೆ ತಾನು ಹೋದ ಉದ್ದೇಶವನ್ನು ರಾಜಾ ತಾಮರಾವ್‌ನಿಗೆ ಹೇಳಿಕಳಿಸಿದ. ತಿಮರ್ಸಾ[2] ಎಂಬ ಹೆಸರಿನ ಆ ದಳಪತಿ ತನ್ನ ಸಹೋದರನಾಗಿದ್ದ ರಾಜನನ್ನು ಕೊಲ್ಲುವ ಮೂಲಕ ಮಾಡಿದ ದ್ರೋಹವನ್ನು ಮತ್ತು ಅವನ ಮರಣದಿಂದಾಗಿ ತಾನು ರಾಜಕುಮಾರ ರಾಜ್ಯದ ಉತ್ತರಾಧಿಕಾರಿಯಾದುದನ್ನು ವಿವರಿಸಿದನು. ಅವನ ತಂದೆ ರಾಜ್ಯವನ್ನು ಮತ್ತು ಅವನ ಹಾಗೂ ಸಹೋದರನ ಯೋಗಕ್ಷೇಮವನ್ನು ತನಗೆ ಒಪ್ಪಿಸಿದುದರಿಂದ ದ್ರೋಹಿಯಾದ ಅವನೊಂದಿಗೆ ತಾನೂ ಅದೇ ರೀತಿ ಮಾಡುವುದಾಗಿಯೂ ತಿಳಿಸಿದ. ಮತ್ತು ಆ ಕಾರಣಕ್ಕಾಗಿ ಅವನನ್ನು ಶಿಕ್ಷಿಸುವುದು ಅಗತ್ಯವಿದೆಯೆಂದು ಆಗ್ರಹಪಡಿಸಿದ. ಆದರೆ, ತಾನು ಅವನಿಂದಲೆ ರಾಜನಾದುದರಿಂದ ರಾಜ ಆ ಸಮಯಕ್ಕೆ ಆ ದಳಪತಿಗೆ ಬಲು ಪ್ರೀತಿ ತೋರುತ್ತಿದ್ದನು ಮತ್ತು ಅವನನ್ನು ಶಿಕ್ಷಿಸುವ ಬದಲು ಅವನಿಗೆ ಅನುಗ್ರಹ ತೋರಿದ ಮತ್ತು ಮಂತ್ರಿಯ ವಿರುದ್ಧ ಅವನ ಪಕ್ಷವಹಿಸಿದ. ಇದನ್ನು ಕಂಡು ನರಸೇನಕ ದೊಡ್ಡ ಪಡೆಗಳೊಂದಿಗೆ ಅವನ ವಿರುದ್ಧ ಸಾಗಿದ ಮತ್ತು ಅವನನ್ನು ಮುತ್ತಿದ, ನಾಲ್ಕೈದು ದಿನ ಅವನನ್ನು ಬೆದರಿಸಿದ. ಕೊನೆಗೆ, ಅವನ ನಿರ್ಧಾರ ಕಂಡು ರಾಜ ತೀಮರ್ಸಾನನ್ನು ಕೊಲ್ಲುವಂತೆ ಆಜ್ಞೆಯಿತ್ತ. ಅದಾದ ನಂತರ ಅವನು (ರಾಜ) (ದ್ರೋಹಿಯ) ರುಂಡವನ್ನು ತೋರಿಸಲು ಮಂತ್ರಿಗೆ ಕಳಿಸಲಾಗಿ ಅವನು ಹಿಗ್ಗಿದ. ನರಸೇನಕ ತನ್ನ ಎಲ್ಲ ಸೈನಿಕರನ್ನು ಬರ್ಖಾಸ್ತು ಮಾಡಿ ನಗರವನ್ನು ಪ್ರವೇಶಿಸಿದ. ಅಲ್ಲಿ ನ್ಯಾಯವಂತ ವ್ಯಕ್ತಿಯೆಂದು ಅವನನ್ನು ಪ್ರೀತಿಸುತ್ತಿದ್ದ ಎಲ್ಲ ಜನರು ಅವನನ್ನು ಆದರದಿಂದ ಬರಮಾಡಿಕೊಂಡರು.

ಕೆಲವು ದಿನಗಳು ಮತ್ತು ವರ್ಷಗಳು ಕಳೆದನಂತರ, ರಾಜನ ವಯಸ್ಸು ಎಷ್ಟು ಚಿಕ್ಕದೆಂದು ಕಂಡು ನರಸೇನಕ ಅವನನ್ನು ಸುರಕ್ಷಿತವಾಗಿರಿಸಲು ಬಹಳ ಜನ ರಕ್ಷಕರೊಂದಿಗೆ ಪೆನಗುಂದಿ ನಗರದಲ್ಲಿ ಇಡಲು, ಅವನ ಆಹಾರ ಮತ್ತು ಖರ್ಚಿಗಾಗಿ ಪ್ರತಿ ವರ್ಷ ೨೦,೦೦೦ ಸುವರ್ಣ ಕ್ರೂಜೆಡೊಗಳನ್ನು ಕೊಡಲು ಮತ್ತು ತನ್ನ ಪ್ರಭುವಾಗಿದ್ದ ರಾಜ ಅದನ್ನು ತನಗೆ ಒಪ್ಪಿಸಿದ್ದರಿಂದ ರಾಜ್ಯವನ್ನು ತಾನೇ ಆಳಲು ನಿರ್ಧರಿಸಿದ. ಇದನ್ನು ಮಾಡಿದ ಮೇಲೆ, ತಾನು ಬಿಸ್ನಗಕ್ಕೆ ಹೋಗಿ ರಾಜ್ಯಕ್ಕೆ ಹಿತವಾಗುವಂತಹ ಕೆಲವು ಕಾರ್ಯಗಳನ್ನು ಮಾಡಬಯಸಿರುವುದಾಗಿ ರಾಜನಿಗೆ ಹೇಳಿದ. ಈಗ ತಾನೇ ತನ್ನ ಯಜಮಾನನಾಗುವೆನು ಮತ್ತು ಅವನ ನಿಯಂತ್ರಣಕ್ಕೆ ಅಷ್ಟೊಂದಾಗಿ ಒಳಪಡೆನು ಎಂದು ಅವನಿಗೆ ಹೇಳಿದ. ಅಲ್ಲಿಂದ ಹೊರಟ ಬಿಸ್ನಗಕ್ಕೆ ಬಂದ ಮೇಲೆ ನರಸೇನಕ ತಾನು ಯೋಜಿಸಿದ್ದಂತೆ ಅವನ ರಕ್ಷಣೆಗಾಗಿ ೨೦,೦೦೦ ಜನರನ್ನು ಕಳಿಸಿದ. ಅವರ ದಳಪತಿಯಾಗಿ ತಿಮಪನರ್ಕ್ ಎಂಬ ತಾನು ಬಹಳ ವಿಶ್ವಾಸವಿಟ್ಟವನನ್ನು ಕಳಿಸಿದ. ಅವನು ರಾಜನನ್ನು ನಗರ ಬಿಡಲು ಕೊಡಬಾರದೆಂದು, ದ್ರೋಹದಿಂದ ಅವನನ್ನು ಜಾಗುರೂಕತೆಯಿಂದ ಕಾಪಾಡಬೇಕೆಂದೂ (ಅವನಿಗೆ ಆಜ್ಞೆಯಿತ್ತ).

ಇದನ್ನು ಮಾಡಿದ ಮೇಲೆ ನರಸೇನಕ ಬಂಡೆದ್ದಿದ್ದ ಹಲವಾರು ಊರುಗಳ ಮೇಲೆ ದಾಳಿಯಿಟ್ಟು ಅವುಗಳನ್ನು ವಶಪಡಿಸಿಕೊಂಡ ಮತ್ತು ಧ್ವಂಸ ಮಾಡಿದ. ಆ ಸಮಯಕ್ಕೆ, ಅವನು ಆಳಲು ಯೋಗ್ಯನಲ್ಲದುದರಿಂದ ರಾಜನನ್ನು ಕೊಲ್ಲಬೇಕೆಂದು ಕೆಲವು ದಳಪತಿಗಳು ಸೂಚಿಸಿದರು. ಆದರೆ ನರಸೇನಕ ಇದಕ್ಕೆ ಏನನ್ನೂ ಹೇಳಲಿಲ್ಲ. ಹಾಗಿದ್ದರೂ, ಕೆಲವು ದಿನಗಳ ನಂತರ ಅವರು ತನ್ನೊಂದಿಗೆ ಮಾತಾಡಿದ್ದ ದ್ರೋಹದ ಬಗೆಗೆ, ಅದು ಹೇಗೆ ತನ್ನ ದೊಡ್ಡಸ್ತಿಕೆಯನ್ನು ಹೆಚ್ಚಿಸುತ್ತದೆಂಬ ಮತ್ತು ತಾನು (ಕೇವಲ) ಮಂತ್ರಿಯಾಗಿದ್ದ ರಾಜ್ಯದ ಅಧಿಪತಿಯನ್ನಾಗಿ ಹೆಚ್ಚು ಸುಲಭವಾಗಿ ಮಾಡುವ ಬಗೆಗೆ ಆಲೋಚಿಸಿ ಒಂದು ದಿನ ತನಗೆ ಮೇಲಿಂದ ಮೇಲೆ ಸೂಚಿಸಿದ್ದ ಅದೇ ದಳಪತಿಗಳನ್ನು ಕರೆದು ರಾಜನ ಮರಣದಲ್ಲಿ ತನ್ನ ಕೈವಾಡವಿದೆಯೆಂದು ಗೊತ್ತಾಗದಂತೆ ಅವನನ್ನು ಕೊಲ್ಲುವ ಉಪಾಯದ ಬಗೆಗೆ ಅವರನ್ನು ಕೇಳಿದ. ಆಗ ಒಬ್ಬನು ಅವನಿಗೆ ಹೇಳುವುದೇನೆಂದರೆ ಒಂದು ಒಳ್ಳೆಯ ಹಾದಿಯೆಂದರೆ ಅವನು (ಮಂತ್ರಿ) ಅವನೊಂದಿಗೆ ಸಿಟ್ಟಿಗೆದ್ದಂತೆ ತೋರಬೇಕು ಮತ್ತು ಅವನನ್ನು ತನ್ನಲ್ಲಿಗೆ ಬರಲು ಆಜ್ಞಾಪಿಸಬೇಕು ಈ ಆಜ್ಞೆಯನ್ನು ಅವನು ಪಾಲಿಸುವುದಿಲ್ಲ ಮತ್ತು ಈ ಅವಿಧೇಯತೆಯ ಕೃತಿಗಾಗಿ ಯಾವುದಾದರೂ ಶಿಕ್ಷೆ ಕೂಡುವಂತೆ ಅವನು (ಮಂತ್ರಿ) ವಿಧಿಸಬೆಕು; ಈ ಉದ್ರೇಕವಾದ ಮೇಲೆ ತಾನು ನಗರನ್ನು ಬಿಟ್ಟು ಪೆನಗುಂಡಿಗೆ ಹೋಗಿ ರಾಜನನ್ನು ಮಂತ್ರಿಯ ವಿರುದ್ಧ ಪ್ರಚೋದಿಸುವೆನು; ತಾನು ರಾಜನ ವಿಶ್ವಾಸ ಸಂಪಾದಿಸಿದ ಮೇಲೆ ಅವನು ಅವಿಧೇಯನಾಗುವಂತೆ ಅವನ ವಿರುದ್ಧ ಸಂಚು ಹೂಡುವೆನು; ಮತ್ತು ರಾಜನಿಗೆ ಹೆಚ್ಚಿನ ಪ್ರೋನೀಡುವ ಸಲುವಾಗಿ ದಳಪತಿಗಳಿಂದ ಬಂದಿರುವುವೆಂಬಂತೆ ಖೊಟ್ಟಿ ಪತ್ರಗಳನ್ನು ತಯಾರಿಸುವೆನು. ಅವುಗಳೆಲ್ಲೆಲ್ಲ ಅದೇ ಸಲಹೆ ಇರುವುದು, ಅಂದರೆ ಅವನು ಸ್ವತಂತ್ರನಾಗಿರುವುದಕ್ಕಿಂತ ಹೆಚ್ಚಾಗಿ ಸೆರೆಯಾಳಾಗಿರುವ ನಗರವನ್ನು ಬಿಡಬೇಕು ಎಂಬುದು; ಮತ್ತು ತಾನು ಮಾತ್ರವೆ ರಾಜ ಮತ್ತು ಪ್ರಭು. ಆದರೂ ಸಹ ರಾಜ್ಯ ತನ್ನ ಸಾಮಂತನಾದ ನರಸೇನಕನ ಅಧಿಕಾರದಲ್ಲಿ ಇದೆ. ಅವನು ರಾಜ್ಯದಲ್ಲಿ ತನ್ನನ್ನು ಬಲಿಷ್ಠನನ್ನಾಗಿ ಮಾಡಿಕೊಂಡು ಅವನನ್ನು (ರಾಜನನ್ನು) ಬಂದಿಯಾಗಿರಿಸಿ ಬಂಡೆದ್ದಿದ್ದಾನೆ. ಗುಪ್ತವಾಗಿ ನಗರ ಬಿಟ್ಟು ಆ ಪತ್ರ ಬಂದ ದಳಪತಿಗೆ ಸೇರಿದ ದುರ್ಗಕ್ಕೆ ಹೋಗಿ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಅನುಯಾಯಿಗಳನ್ನು ಕೂಡಿಸಿ ಸಿದ್ಧತೆ ಮಾಡಿಕೊಳ್ಳಬೇಕೆಂದು ರಾಜನನ್ನು ತಾನು ಆಗ್ರಹಪಡಿಸುವುದಾಗಿ ಹೇಳಿದ. ಮತ್ತು ಮನ್ನೆಯರು ಹಾಗೂ ದಳಪತಿಗಳು ಅವನ ಇಚ್ಛೆ ಮತ್ತು ನಿರ್ಧಾರವನ್ನು ತಿಳಿದ ಬಳಿಕ ಅವರು ಅದಕ್ಕನುಗುಣವಾಗಿಯೆ ನಡೆದುಕೊಳ್ಳುವರು ಮತ್ತು ಅವನಿಗೆ ನೆರವಾಗುವರು ಮತ್ತು ಅವನಿಗೆ (ನರಸೇನಕನಿಗೆ) ತನ್ನನ್ನು (ರಾಜನನ್ನು) ಈಗ ಇಡಲಾಗಿದ್ದ ಸೆರೆಮನೆಯನ್ನೆ ಕೊಡಲಾಗುವುದು ಎಂದೂ ಹೇಳುವುದಾಗಿ ತಿಳಿಸಿದ. ಹೀಗೆ ಅವನು ರಾಜನಾಗುವನು. ರಾಜನನ್ನು ಇದಕ್ಕಾಗಿ ಮನವೊಲಿಸಿದ ನಂತರ ಅವನನ್ನು (ನಗರ ಬಿಡುವಂತೆ) ಮಾಡಿ ಅವನು ಹೊರಗೆ ಹೋಗುವಾಗ ಕೊಲ್ಲುವುದಾಗಿಯೂ ಈ ರೀತಿ ನರಸೇನಕ ರಾಜನಾಗುವನೆಂದೂ (ದಳಪತಿ ಮುಂದುವರಿದು ಹೇಳಿದ).

ಈ ದ್ರೋಹದ ಬಗೆಗೆ ಮತ್ತು ಈ ದಳಪತಿ ಯೋಜಿಸಿದ ದುಷ್ಕೃತ್ಯದ ಬಗೆಗೆ ಕೇಳಿ ನರಸೇನಕ ಬಲು ಸಂತಸಪಟ್ಟ ಮತ್ತು ಅವನಿಗೆ ಬಹಳ ಅನುಗ್ರಹ ತೋರಿದ. ಕೆಲ ದಿನಗಳ ನಂತರ ಆ ದಳಪತಿ ಓಡಿಹೋದಂತೆ ನಟಿಸಿ ನರಸೇನಕನಲ್ಲಿಂದ ಅದೃಶ್ಯನಾದ. ಅವನು ಪೆನಗುಂದಿಗೆ ಬಂದ. ಕೆಲವು ದಿನಗಳಲ್ಲಿಯೆ ಅಲ್ಲಿ ಅವನ ಆಗಮನ ಗೊತ್ತಾಯಿತು. ಯೋಜಿತವಾಗಿದ್ದ ಎಲ್ಲ ಕೆಲಸಗಳನ್ನು ಪ್ರಾರಂಭಿಸಿ ಕೈಗೆತ್ತಿಕೊಂಡು. ಅವನು ಪ್ರತಿ ದಿನ ರಾಜನಿಗೆ ಒಂದೊಂದು ದುರ್ಗದ ದಳಪತಿಯಿಂದ ಬಂದ ಪತ್ರ ತೋರಿಸಿದ. ಹೀಗೆ ತೋರಿಸಲಾದ ಪತ್ರಗಳಲ್ಲಿನ ಸಂಚುಗಳನ್ನು ಅರ್ಥೈಸಿಕೊಂಡು ರಾಜ ಉತ್ತರಿಸಿದುದು ಹೀಗೆ : ಆಲೋಚನೆ ಮತ್ತು ಸಲಹೆಗಳೇನೊ ಉತ್ತಮವೆಂದು ತೋರುತ್ತವೆ; ಆದರೆ, ರಾಜ್ಯದ ಮಂತ್ರಿಯಾಗಿದ್ದುದಲ್ಲದೆ ತನ್ನ ಮೇಲೆ ತಕ್ಷಣ ಯುದ್ಧ ಮಾಡಬಹುದಾದಂತೆ ಎಲ್ಲ ಕುದುರೆ, ಆನೆ ಮತ್ತು ಬೊಕ್ಕಸ (ಸ್ವಾಧೀನಲ್ಲಿ) ಇದ್ದ ನರಸೇನಕನ ಬಲವನ್ನು ತಾನು ಹೇಗೆ ಎದುರಿಸಬಲ್ಲೇನು? “ನೀವು ಹೇಳುವುದು ನಿಜ, ಸ್ವಾಮಿ. ಆದರೂ ನಿಮ್ಮನ್ನು ರಾಜನನ್ನಾಗಿ ಮಾಡಿದ ಎಲ್ಲ ದಳಪತಿಗಳು ಅವನನ್ನು ಬಹಳ ದ್ವೇಷಿಸುತ್ತಾರೆ ಮತ್ತು ನಿಮ್ಮನ್ನು (ಅದುವರೆಗೆ ಸ್ವತಂತ್ರವಾಗಿದ್ದ ಮತ್ತು ಅವನು ಅಲ್ಲಿಗೆ ಓಡಿಹೋಗಲು ರಾಜನಿಗೆ ಸಲಹೆಯಿತ್ತಿದ್ದ ದುರ್ಗವಾಗಿದ್ದ) ಚಾಒದಗರಿಯಲ್ಲಿ ನೋಡಿದಾಕ್ಷಣ ಅವರೆಲ್ಲ ನಿಮ್ಮ ನೆರವಿಗೆ ಹಾರಿಬರುತ್ತಾರೆ. ಏಕೆಂದರೆ, ಅದನ್ನು ಅವರು ನ್ಯಾಯವಾದ ಉದ್ದೇಶವೆಂದು ಮನ್ನಿಸುತ್ತಾರೆ” ಎಂದು ದ್ರೋಹಿ ಉತ್ತರಿಸಿದ. ಅದಕ್ಕೆ ರಾಜ ಹೀಗೆ ನುಡಿದ “ಹಾಗಿದ್ದರೆ, ನನ್ನ ನಿರ್ಗಮನ ಕಾವಲುಗಾರರಿಗೆ ಮತ್ತು ಈ ನಗರದಲ್ಲಿ ನನ್ನನ್ನು ಸುತ್ತುವರಿದಿರುವ ೨೦,೦೦೦ ಜನರಿಗೆ ಗೊತ್ತಾಗದಂತೆ ನಾನು ಈ ಸ್ಥಳವನ್ನು ಬಿಡುವ ಯಾವ ಸೂಚನೆಯನ್ನು ನೀನು ಮಾಡುವಿ?” ಅದಕ್ಕೆ ಅವನೆಂದ : “ಸ್ವಾಮಿ, ನಾನು ನಿಮಗೆ ಒಳ್ಳೆಯ ಯೋಜನೆಯನ್ನು ತಿಳಿಯಪಡಿಸುವೆ. ನೀನು ಮತ್ತು ನಾನು ಈ ನಿಮ್ಮ ಉದ್ಯಾನದಿಂದ ಮತ್ತು ಅಲ್ಲಿಂದ ನನಗೆ ಚೆನ್ನಾಗಿ ಪರಿಚಿತವಿರುವ ಈ ನಗರ (ಗೋಡೆ)ದಲ್ಲಿರುವ ಹಿಂಬಾಗಿಲಿನಿಂದ ಹೊರಟು ಹೋಗೋಣ. ನಿಮ್ಮ ಪರಿವಾರವಿಲ್ಲದೆ ನೀವೊಬ್ಬರೆ ಇರುವುದನ್ನು ನೋಡಿ ನೀವು ರಾಜನೆಂದು ಕಾವಲುಗಾರರಿಗೆ ತಿಳಿಯುವುದಿಲ್ಲ. ಹೀಗೆ ನಾವು ನಗರದ ಹೊರಭಾಗಕ್ಕೆ ಸಾವುವೆವು. ಅಲ್ಲಿ ನಾನು ನಿಮಗೆ ಒಳ್ಳೆಯದೆನಿಸುವಲ್ಲಿ ನಮ್ಮನ್ನು ಒಯ್ಯಲು ಕುದುರೆಗಳನ್ನು ಸಿದ್ಧವಾಗಿರಿಸಿರುತ್ತೇನೆ”. ಇದೆಲ್ಲ ರಾಜನನ್ನು ಬಹಳ ಸಂತೋಷಗೊಳಿಸಿತು ಮತ್ತು ಅವನು ಎಲ್ಲವನ್ನೂ ಅವನ ಕೈಗೊಪ್ಪಿಸಿದ. ತನ್ನ ಎಲ್ಲ ಇಚ್ಛೆ ನೆರವೇರಿದುದನ್ನು ಕಂಡು, ದಳಪತಿಯು ರಾಜನು ಯಾವುದರ ಮೂಲಕ ಓಡಿಹೋಗಬೇಕೆಂದು ತಾನು ಬಯಸಿದ್ದನೊ ಮತ್ತು ಯಾವುದು ರಾಜ ಮನೆಗಳ ಹತ್ತಿರವಿತ್ತೊ (ಏಕೆಂದರೆ, ಉದ್ಯಾನದಲ್ಲಿ ರಾಜ ಆಗಾಗ ತನ್ನ ಹೆಂಡತಿಯ ರೊಂದಿಗೆ ರಮಿಸಲು ಹೋಗುತ್ತಿದ್ದ. ಆ ಭಾಗದಲ್ಲಿ ಉದ್ಯಾನದಲ್ಲಿ ೩೦೦ ಸಶಸ್ತ್ರ ಜನರ ತುಕಡಿ ಕಾವಲಿತ್ತು) ಆ ಉದ್ಯಾನ ಭಾಗದಲ್ಲಿ ಕಾವಲಿದ್ದ ಜನರೊಂದಿಗೆ ಮಾತಾಡಿದ. ಈ ಜನರಿಗೆ ಹೀಗೆ ಹೇಳಿದ “ಇಂತಿಂಥ ಘಂಟೆಗೆ ನಾನು ಇಲ್ಲಿ ಒಬ್ಬನೊಡನೆ ಹೋಗುತ್ತಿ ರುವುದನ್ನು ನೀವು ಕಂಡರೆ ಅವನನ್ನು ಕೊಲ್ಲಿರಿ. ಏಕೆಂದರೆ, ಅವನು ಅದಕ್ಕೆ ಅರ್ಹನಿದ್ದಾನೆ ಮತ್ತು ನಾನು ನಿನಗೆ ಇನಾಮು ಕೊಡುವೆ”. ಅದು ಅವನಿಗೆ ತಾವು ಮಾಡುವ ಅಲ್ಪ ಸೇವೆಯೆಂದು ಅವರೆಲ್ಲರೂ ನುಡಿದರು. ಆ ದಿನ ಕಳೆದ ಮೇಲೆ ದ್ರೋಹಿ ರಾಜನಲ್ಲಿಗೆ ಹೋಗಿ ಹೀಗೆಂದ : “ಸ್ವಾಮಿ, ಇಂದು ನೀವು ಮಾಡಲೇಬೇಕಾದುದನ್ನು ನಾಳೆಗೆ ಮುಂದೂಡ ಬೇಡಿರಿ. ಏಕೆಂದರೆ, ನಾನು ನಿಮ್ಮ ಪಾರಾಗುವಿಕೆಗೆ ಕುದುರೆಗಳನ್ನು ಸಿದ್ಧವಾಗಿರಿಸಿದ್ದೇನೆ ಮತ್ತು ನಿಮ್ಮ ನಿರ್ಗಮನದ ಬಗೆಗೆ ನಿಮ್ಮ ಸ್ತ್ರೀಯರಿಗಾಗಲಿ ಯಾವುದೇ ವ್ಯಕ್ತಿಗಾಗಲಿ ಗೊತ್ತಾಗದಂತೆ ನಿಮ್ಮನ್ನು ಕರೆದೊಯ್ಯಲು ಯೋಜಿಸಿರುವೆ. ನಾನು ನಿಮಗಾಗಿ ಕಾಯುತ್ತಿರುವ ಉದ್ಯಾನಕ್ಕೆ ಬನ್ನಿ, ಸ್ವಾಮಿ”. ಅವನ ಮಾತುಗಳು ಒಳ್ಳೆಯವು ಇವೆ ಮತ್ತು ತಾನು ಹಾಗೆಯೆ ಮಾಡುವೆ ಎಂದು ರಾಜ ಉತ್ತರಿಸಿದ. ರಾತ್ರಿ ಆ ಸಮಯ ಬಂದ ಕೂಡಲೆ ರಾಜ ಜಾಗರೂಕತೆಯಿಂದ ಹೊರಟ ಮತ್ತು ಅವನಿಗಾಗಿ ಕೆಲ ಸಮಯ ಕಾಯ್ದಿದ್ದವನು ಇನ್ನೂ ಹೆಚ್ಚು ಜಾಗರೂಕನಾಗಿದ್ದ. ಮತ್ತು ಅವನು ಸಶಸ್ತ್ರ ಕಾವಲುಗಾರರಿಗೆ ಸಂಜ್ಞೆ ಮಾಡಿದ ಮತ್ತು ಅವನು ರಾಜನ ಮೇಲೆ ಬಿದ್ದರು ಮತ್ತು ಅವನನ್ನು ಕೊಂದರು ಮತ್ತು ತಕ್ಷಣ ಅದೇ ಉದ್ಯಾನದ ಒಂದು ಗಿಡದ ಬುಡದಲ್ಲಿ ಹೂಳಿದರು. ಅವರಿಗೆ ತಾವು ಯಾರನ್ನು ಕೊಂದಿದ್ದೇವೆಂದು ತಿಳಿಯದಂತೆ ಇದನ್ನು ಸಾಧಿಸಿದ ಮೇಲೆ ದ್ರೋಹಿ ಅವರಿಗೆ ತನ್ನ ಧನ್ಯವಾದ ಹೇಳಿದ ಮತ್ತು ನಗರವನ್ನು ಬಿಡುವ ಸಿದ್ಧತೆ ಮಾಡಿಕೊಳ್ಳಲು ಹಾಗೂ ಅಲ್ಲಿ ಮಾತಿಗೆ ಅವಕಾಶವಾಗದಿರಲೆಂದು ಕೂಡ ಪ್ರವಾಸಿಗೃಹಕ್ಕೆ ಹಿಂತಿರುಗಿದ. ಮತ್ತು ಮರುದಿನ ಬೆಳಿಗ್ಗೆ ರಾಜನಿಲ್ಲದುದು ಪತ್ತೆಯಾಯಿತು. ಮತ್ತು ನಗರವೆಲ್ಲ ಹುಡುಕಿದರೂ ಯಾವ ಸುದ್ದಿಯೂ ತಿಳಿಯದಿದ್ದಾಗ ಎಲ್ಲ ಜನರು ಅವನು ಎಲ್ಲಿಗೊ ಓಡಿಹೋಗಿದ್ದಾನೆ ಮತ್ತು ಅಲ್ಲಿಂದ ನರಸೇನಕನ ಮೇಲೆ ಯುದ್ಧ ಮಾಡುತ್ತಾನೆ ಎಂದು ಬಗೆದರು. ಮತ್ತು ನರಸೇನಕನಿಗೆ ಸುದ್ದಿಯನ್ನು ನೇರವಾಗಿ ತಲುಪಿಸಲಾಯಿತು ಮತ್ತು ಬಹಳ ದುಃಖ ನಟಿಸಿದ ಅವನು ರಾಜನ ಮರಣದಿಂದ ರಾಜ್ಯ ಕ್ಷೋಭೆಯಲ್ಲಿ ಮುಳುಗಿದರೆ ಇರಲಿ ಎಂದು ತನ್ನೆಲ್ಲ ಕುದುರೆಗಳನ್ನು ಮತ್ತು ಆನೆಗಳನ್ನು ಅಣಿಗೊಳಿಸಿದ. ಏಕೆಂದರೆ, ರಾಜ ಮಾಯವಾಗಿದ್ದಾನೆಂಬುದೊಂದನ್ನು ಬಿಟ್ಟರೆ ಸಂಗತಿ ಏನೆಂಬುದು ಅವನಿಗಿನ್ನೂ ಖಚಿತವಾಗಿ ತಿಳಿದಿರಲಿಲ್ಲ. ಮತ್ತು ನಂತರ ರಾಜನನ್ನು ಕೊಂದ ಮನುಷ್ಯ ಬಂದ ಮತ್ತು ಅದನ್ನು ಹೇಗೆ ಮಾಡಲಾಯಿತು ಮತ್ತು ಅವನನ್ನು ಕೊಂದವರಿಗೂ ಅವನಾರೆಂಬುದು ತಿಳಿಯದಂತೆ ಅವನನ್ನು ಹೇಗೆ ಕೊಲ್ಲಲಾಯಿತ್ತೆಂಬುದನ್ನು ಹೇಳಿದ. ಮತ್ತು ನರಸೇನಕ ಅವನಿಗೆ ಬೆಲೆಯುಳ್ಳ ಬಹುಮಾನಗಳನ್ನು ನೀಡಿದ. ಮತ್ತು ರಾಜನ ಸುದ್ದಿಯೂ ಇರದ್ದರಿಂದ ಮತ್ತು ಅವನು ಎಲ್ಲವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದರಿಂದ ನರಸಿಂಗ ರಾಜ್ಯದಲ್ಲೆಲ್ಲ ಅವನನ್ನು ರಾಜನನ್ನಾಗಿ ಮಾಡಲಾಯಿತು.

ಈ ರಾಜ ಮರಣಕಾಲಕ್ಕೆ ಐದು ಪುತ್ರರನ್ನು ಬಿಟ್ಟು ಹೋದ. ಒಬ್ಬನ ಹೆಸರು ಬಸಬಲರಾವ್, ಇನ್ನೊಬ್ಬನದು ಕ್ರಿಸ್ಮಾರಾವ್, ಮತ್ತೊಬ್ಬನದು ತೇತಾರಾವ್, ಮಗುದೊಬ್ಬನದು ರಾಮಿಗುಪ, ಇನ್ನೂ ಒಬ್ಬನದು ಔಮಿಸ್ಯುಯ.[3]

ಮತ್ತು ಈ ಬಸಬಲರಾವ ತನ್ನ ತಂದೆ ನರಸೇನಕನ ಮರಣಕಾಲಕ್ಕೆ ರಾಜ್ಯದ ಉತ್ತರಾಧಿಕಾರಿಯಾದ ಮತ್ತು ಆರುವರ್ಷ ಆಳಿದ. ಆ ಅವಧಿಯಲ್ಲಿ ಅವನು ಸದಾ ಯುದ್ಧನಿರತನಾಗಿದ್ದ. ಏಕೆಂದರೆ, ಅವನ ತಂದೆ ತೀರಿಕೊಂಡ ಕೂಡಲೆ ಇಡಿ ನಾಡು ಅದರ ದಳವಾಯಿಗಳ ನೇತೃತ್ವದಲ್ಲಿ ಬಂಡೆದ್ದಿತು. ಅವರನ್ನು ಆ ರಾಜ ಅಲ್ಪ ಕಾಲದಲ್ಲಿಯೇ ನಾಶಪಡಿಸಿದ ಮತ್ತು ಅವರ ಪ್ರದೇಶಗಳನ್ನು ವಶಪಡಿಸಿಕೊಂಡ ತನ್ನ ಆಳಿಕೆಯಡಿ ಆಡಗಿಸಿದ. ಈ ಆರು ವರ್ಷಗಳ ಅವಧಿಯಲ್ಲಿ ರಾಜ್ಯವನ್ನು ಮೊದಲ ಸ್ಥಿತಿಗೆ ತರಲು ರಾಜ ಎಂಟು ದಶಲಕ್ಷ ಸುವರ್ಣ ಪರ್ದಾಒಗಳನ್ನು ವ್ಯಯಿಸಿದ, ರಾಜ ಬಿಸ್ನಗ ನಗರದಲ್ಲಿ ಅನಾರೋಗ್ಯದಿಂದ ತೀರಿಕೊಂಡ. ತೀರಿಕೊಳ್ಳುವ ಮುಂಚೆ ತನ್ನ ಮಂತ್ರಿ ಸಾಳ್ವತಿಮಿಯನನ್ನು[4] ಕರೆಯಿಸಿ ತನ್ನ (ರಾಜನ) ಎಂಟು ವರ್ಷದ ಮಗನನ್ನು ರಾಜನನ್ನಾಗಿ (ಅವನು ಅದಕ್ಕೆ ತಕ್ಕ ವಯಸ್ಸಿನವ ನಾಗಿರದಿದ್ದರೂ ಮತ್ತು ರಾಜ್ಯ ಅವನ ಸಹೋದರ ಕ್ರಿಸ್ನರಾವ್‌ನಿಗೆ ಸೇರಬೇಕಾದುದಾಗಿದ್ದರೂ) ಮಾಡುವಂತೆ ಆಜ್ಞಾಪಿಸಿದ. ಮತ್ತು ತಾನು ಸತ್ತ ಬಳಿಕ ರಾಜ್ಯದಲ್ಲಿ ಮತಭೇದ ಇರಬಾರದೆಂದು ಕ್ರಿಸ್ನರಾವ್‌ನ ಕಣ್ಣು ಕಿತ್ತು ತನಗೆ ತಂದು ತೋರಿಸಬೇಕೆಂದು ಆಜ್ಞಾಪಿಸಿದ. ಸಾಲ್ವಟಿನ ಹಾಗೆಯೆ ಮಾಡುವುದಾಗಿ ಹೇಳಿ ಹೊರಟು ಕ್ರಿಸ್ನರಾವ್‌ನನ್ನು ಕರೆಕಳಿಸಿ ಅವನನ್ನು ಓರೇಗೆ ಒಂದು ಲಾಯಕ್ಕೆ ಕರೆದೊಯ್ದು ಹೇಗೆ ಅವನ ಸಹೋದರ ಕಣ್ಣು ಕೀಳಿಸಿ ತನ್ನ ಮಗನನ್ನು ರಾಜನನ್ನಾಗಿ ಮಾಡಲು ಆಜ್ಞಾಪಿಸಿದನೆಂಬುದನ್ನು ಹೇಳಿದ. ಇದನ್ನು ಕೇಳಿದ ಕ್ರಿಸ್ನರಾವ್ ರಾಜ್ಯ ಹಕ್ಕಿನಿಂದ ತನಗೆ ಬರಬೇಕಿದ್ದರೂ ತಾನು ರಾಜನಾಗಲಿ ರಾಜ್ಯದಲ್ಲಿ ಇನ್ನೇನಾಗಲಿ ಆಗಬಯಸುವುದಿಲ್ಲೆಂದೂ ಈ ಪ್ರಪಂಚದಲ್ಲಿ ತಾನು ಜೋಗಿಯಾಗಿ ಕಾಲ ಕಳೆಯಬಯಸಿರುವುದಾಗಿಯೂ ತಾನು ತನ್ನ ಸಹೋದರ ಕಣ್ಣು ಕೀಳುವಂತಹದೇನನ್ನೂ ಮಾಡಿಲ್ಲದಿದ್ದುದರಿಂದ ಹಾಗೆ ಮಾಡಬಾರದೆಂದೂ ಕೇಳಿಕೊಂಡ. ಇದನ್ನು ಕೇಳಿದ ಸಾಳುವತಿನ ಕ್ರಿಸ್ನರಾವ್ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟವನಿದ್ದುದರಿಂದ, ಮತ್ತು ನೀವು ಮುಂದೆ ನೋಡಲಿರುವಂತೆ, ಕೇವಲ ಎಂಟು ವರ್ಷದವನಾಗಿದ್ದ ಬುಸಬಲರಾವನ ಮಗನಿಗಿಂತ ರಾಜನಾಗಲು ಹೆಚ್ಚು ಯೋಗ್ಯನಾದುದರಿಂದ ಒಂದು ಆಡನ್ನು ತರುವಂತೆ ಆಜ್ಞೆಯಿತ್ತ. ಅದರ ಕಣ್ಣುಕಿತ್ತು ಅವುಗಳನ್ನು ತೋರಿಸಲು ತನ್ನ ಜೀವನದ ಕೊನೆಯ ಗಳಿಗೆಯಲ್ಲಿದ್ದ ರಾಜನಲ್ಲಿಗೆ ಬಂದ. ಅವುಗಳನ್ನು ಅವನಿಗೆ ತೋರಿಸಿದ ಮತ್ತು ರಾಜ ಸತ್ತ ಕೂಡಲೆ ದಿವಂಗತ ರಾಜ ಕಣ್ಣು ಕೀಳಿಸಲು ಆಜ್ಞಾಪಿಸಿದ್ದ ಕ್ರಿಸ್ನರಾವ್‌ನನ್ನು ರಾಜನನ್ನಾಗಿಸಿದ.

 (ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)[1]      ಪೆನ್ನಕೊಂಡ.

[2]      ‘ತೆಮರಸಿಯಾ’, ಇವನಿಗೂ ಅದೇ ಹೆಸರಿದ್ದರೂ ಇವನು ಅಲ್ಲಿ ಪ್ರಸ್ತಾಪಿಸಿದ ವ್ಯಕ್ತಿಯಲ್ಲ, ಪು. ೨೭೦ ಮತ್ತು ಟಿಪ್ಪಣಿ ೨೭, ಪುಟ ೩೦೬, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[3]      ಶಾಸನಗಳು ಇಂಥ ಹೆಸರುಳ್ಳ ಯಾವ ಪುತ್ರರ ಹೆಸರನ್ನೂ ನೀಡುವುದಿಲ್ಲ. ‘ಕ್ರಿಸ್ಮಾರಾವ್’ಬಹುಶಃ ಪ್ರಥಮ ನರಸ ಅಥವಾ ನರಸಿಂಹನ ಮಗನೂ ಹೆಚ್ಚಾಗಿ ವೀರ ನರಸಿಂಗನೆಂದೂ ಕರೆಯಲ್ಪಡುತ್ತಿದ್ದ ಎರಡನೆಯ ನರಸನ ಸಹೋದರನೂ ಆದ ಕ್ರಿಷ್ಣರಾವ್‌ನನ್ನು ಸಂಕೇತಿಸುತ್ತದೆ.

[4]      ಸಾಳುವ ತಿಮ್ಮ. ಇವನು ಸಾಳುವ ಎಂಬ ಮನೆತನದ ಹೆಸರುಳ್ಳ ಹೊಸ ರಾಜಮನೆತನಕ್ಕೆ ಸೇರಿದುದು ಸ್ಪಷ್ಟವಾಗಿದೆ. ಅವನು ಕೃಷ್ಣದೇವರಾಯನ ಪ್ರಭಾವಶಾಲಿ ಮಂತ್ರಿಯಾಗಿದ್ದ. ಆದರೆ ಅಪಮಾನಿತನಾಗಿ ಬಂಧಿತನಾಗಿ ಮತ್ತು ಕಣ್ಣು ಕೀಳಿಸಿಕೊಂಡು ಸತ್ತ ಈ ಕಾಲದ ಶಾಸನಗಳಲ್ಲಿ ಅವನು ಸದಾ ಉಲ್ಲೇಖಿತನಾಗಿದ್ದಾನೆ.[1]       ದಿನಾಂಕ ೧೩೩೦ ಆಗಬೇಕು. ನೂನಿಜ್ ಇಲ್ಲಿ ಒಂದು ಶತಮಾನ ತಪ್ಪಾಗಿದ್ದಾನೆ, ಪು. ೭, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[2]      ದಿಲ್ಲಿ.

[3]      ವಿದೇಶಿಯರಲ್ಲಿ ಇದು ಸಾಮಾನ್ಯ ತಪ್ಪು. ಸರಿಯಾಗಿ ಹೇಳಬೇಕಾದರೆ ಗುಜರಾತಿಗೇ ಕ್ಯಾಂಬೆ ಸೇರಿದೆ.

[4]      ದಿಲ್ಲಿಯ ಮಹಮ್ಮದ ತುಘಲಕ್

[5]      ಪರ್ಶಿಯಾ.

[6]      ಇದು ಬಿಜಾಪುರದ ಆದಿಲ್ ಖಾನ್ ಅಥವಾ ಆದಿಲ್ ಶಾಹನ್ ಪೋತುಗೀಜ ಭಾಷಾಂತರ “ಇಡಲ್‌ಕ್ಷಾ”ಈ ಕೊನೆಯ ಪದವಿಯನ್ನು ಬಿಂಬಿಸುತ್ತದೆ.

[7]      ಅಂದರೆ ಬಾಲಾಘಾಟ ಅಥವಾ ಘಾಟುಗಳ ಮೇಲಿನ ಪ್ರಾಂತ. “ಬಾಲಾಗೇಟ್ ಮತ್ತು ಡೆಕನ್ ಎಂಬ ಮೇಲಣ ಉನ್ನತ ಭೂಮಿ ಬಹಳ ಸಮತಟ್ಟು ಮತ್ತು ಕಟ್ಟಲು ಚೆನ್ನಾಗಿದೆ ಮತ್ತು ಜನವತಿಯಿದ್ದು ಹಲವಾರು ರಾಜರು ಮತ್ತು ಮಂಡಲಾಧಿಪತಿಗಳಲ್ಲಿ ಹಂಚಲಾಗಿದೆ”. (ಲಿನ್‌ಸ್ಕೊಟೆನ್, ೧.೬೫)ಕೊರಿಯಾ, ಭಾರತದ ಈ ಪ್ರದೇಶವನ್ನು “ಬಿಸ್ನಗ, ಬಾಲಾಗೇಟ್ ಮತ್ತು ಕ್ಯಾಂಬೆ”ಗಳಾಗಿ ವಿಭಜಿಸುತ್ತಾನೆ.

[8]      ಈ ವರ್ಣನೆ ಮಲಪ್ರಭಾ ನದಿಗೆ ಚೆನ್ನಾಗಿ ಅನ್ವಯಿಸುತ್ತದೆ ಮತ್ತು ‘ದುರೀ’ಧಾರವಾಡವನ್ನು  ಬಿಂಬಿಸುತ್ತದೆ.

[9]      ಆನೆಗುಂದಿ.

[10]     ಅವನು ಆ ಕಾಲಕ್ಕೆ ಆನೆಗುಂದಿಯ ದೊರೆ ಅಥವಾ ರಾಜ ಮಾತ್ರನಾಗಿದ್ದ, ವಿಜಯನಗರ ಇನ್ನೂ ಸಂಸ್ಥಾಪಿತವಾಗಿರಲಿಲ್ಲ.

[11]     ಈ ಹರಗೋಲುಗಳನ್ನು ಪ್ಯಾಸ್ ವರ್ಣಿಸಿದ್ದಾನೆ, ಪು. ೨೫೯, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[12]     ನಮಗೆ ಗೊತ್ತಿರುವ ವಿಶೇಷ ಯುದ್ಧವ್ಯಾವುದೂ ಆನೆಗುಂದಿಯೊಂದಿಗೆ ಜರುಗಲಿಲ್ಲ. ಆದರೆ, ಆ ಸ್ಥಳದ ರಾಜ ಒಂದೆಡೆ ಹಿಂದೂ ಹೊಯ್ಸಳ ಬಲ್ಲಾಳರು ಮತ್ತು ವಾರಂಗಲ್ಲಿನ ರಾಜರು ಮತ್ತು ಗುಜರಾತ ಮತ್ತು ಇನ್ನೊಂದೆಡೆ ದಿಲ್ಲಿಯ ಮಹಮ್ಮದೀಯ ದಾಳಿಗಾರರ ನಡುವೆ ನಡೆದ ಯುದ್ಧದಲ್ಲಿ ತಾನು ಸ್ವತಃ ಭಾಗಿಯಾಗದಿದ್ದರೂ ಆದರಿಂದ ಅವನು ಪ್ರತ್ಯಕ್ಷವಾಗಿ ಬಾಧಿತನಾಗಿರುವ ಸಾಧ್ಯತೆ ಬಹಳವಿದೆ.

[13]          “ಅವನ ರಾಜ್ಯಗಳು”ಮಹಮ್ಮದ ತುಘಲಕ್‌ನ ಪ್ರಾಂತಗಳಿಗೆ ಸಂಬಂಧಿಸಿದೆ. ಅವನ ಬರ್ಬರತೆಗಳು ವಿಶಾಲ ಪ್ರದೇಶಗಳನ್ನು ಧ್ವಂಸ ಹಾಗೂ ನಿರ್ಜನವಾಗಿಸುವಲ್ಲಿ ಪರಿಣಮಿ ಸಿದವು, ಪು. ೧೩, ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[14]     ಟಿಪ್ಪಣಿ ನೋಡಿರಿ : ಪುಟ ೨೯೪, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[15]     ಮುಂದೆ ‘ಮೆಲಿಕ್ವಿನಿಬಿ’ಮತ್ತು ‘ಮೆಲಿಕ್ ನೆಬೆ’ಎಂದು ಬರೆಯಲಾಗಿದೆ. ಅದು ರಾಜನ ಪ್ರತಿನಿಧಿ ‘ಮಲಿಕ್ ನಾಯಿಬ್’ಗಾಗಿ ಬಳಸಿದ್ದು ಸ್ಪಷ್ಟ.

[16]     ಹಿಂದೆ ಪುಟ ೧೯ ಮತ್ತು ಮುಂದಿನ ಪುಟಗಳು, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[17]     ದೇವರಾಯ, ಹರಿಹರ ದೇವರಾಯ, ಬುಕ್ಕದೇವರಾಯ, ಕೃಷ್ಣದೇವರಾಯ ಇತ್ಯಾದಿ ಹೀಗೆ ಇದು ವಿಜಯನಗರ ರಾಜರ ಸಾಮಾನ್ಯ ಉಪಾಧಿಯಾಗಿತ್ತು. ಈ ಪ್ರಥಮ ರಾಜನಿಗೆ ನೂನಿಜ್ ಯಾವ ಅಂಕಿತನಾಮವನ್ನೂ ಕೊಟ್ಟಿಲ್ಲ. ಅಂಕಿತ ನಾಮವನ್ನು ಪೀಠಿಕೆಯಾಗಿ ಸೇರಿಸದ ಒಂದನೆಯ ದೇವರಾಯ ಮತ್ತು ಎರಡನೆಯ ದೇವರಾಯ ಎಂಬ ಹೆಸರುಗಳಿಂದ ಚರಿತ್ರೆಗೆ ಗೊತ್ತಿರುವ ಇಬ್ಬರು ರಾಜರು ತರುವಾಯದಲ್ಲಿ ಆಗಿಹೋದರು.

[18]     ಇದೇ ಕತೆಯನ್ನು ದಕ್ಷಿಣ ಭಾರತದ ಅನೇಕಾನೇಕ ರಾಜರು ಮತ್ತು ಪಾಳೆಯಗಾರರ ಬಗೆಗೆ ಹೇಳಲಾಗುತ್ತದೆ. “ತಾಝಕರತ್-ಉಲ್-ಮುಲುತ್”(ಇಂ.ಆ್ಯಂ. ಮೇ ೧೮೯೯, ಪು. ೧೨೯)ಕೂಡ ಬಾಹಮನಿ ಸುಲತಾನ ಅಹಮದ್ ಶಾಹ (೧೪೨೨-೩೫)ನ ಬಗೆಗೆ ಅದನ್ನು ಹೇಳುತ್ತ ಅವನು ಬೀದರನ್ನು ರಾಜಧಾನಿ ಮಾಡಿಕೊಳ್ಳಲು ಪ್ರೇರೇಪಿಸಿದ್ದು ಬೇಟೆಯಾಡಲ್ಪಟ್ಟ ಮೊಲದ ವರ್ತನೆಯೆಂದು ಆರೋಪಿಸುತ್ತದೆ.

[19]     ಇವನು ವಿದ್ಯಾರಣ್ಯ ಎಂಬ ಅಡ್ಡ ಹೆಸರಿದ್ದ ಶೃಂಗೇರಿಯ ಮಹಾಗುರು ಮಾಧವಾಚಾರ್ಯ. ನಗರದ ಹೆಸರಿನ ಈ ವ್ಯತ್ಪತ್ತಿ ಸಾಮಾನ್ಯವಾಗಿರುವುದಾದರೂ ಅದು ತಪ್ಪೆಂದು ನಂಬಲಾಗುತ್ತಿದೆ.

[20]     ಹಂಪೆಯಲ್ಲಿನ ವಿಶಾಲವಾದ ವಿರೂಪಾಕ್ಷ ದೇವಾಲಯ.

[21]     ಬುಕ್ಕರಾಯ.

[22]     “ಪುರಿಯೋರೆ”ಬಹುಶಃ “ಹರಿಹರ”ವನ್ನು ಪ್ರತಿನಿಧಿಸುತ್ತದೆ. ಈ ರಾಜ ಪರ್ದಾಒ ಅಥವಾ ಪಗೋಡಾಗಳನ್ನು ಟಂಕಿಸುವಲ್ಲಿ ಮೊದಲಿಗನಲ್ಲ. ಒಂದನೆಯ ಬುಕ್ಕನ ಪಗೋಡಾ ಗೊತ್ತಿದೆ (ಇಂ.ಆ್ಯಂ. ಪು. ೩೦೨).

[23]     ಇದನ್ನು ಈಗ ಸದ್ಯ ಜೋಡಿಸಬಹುದಾದ ಯಾವ ಹೆಸರೂ ಈ ರಾಜವಂಶದಲ್ಲಿಲ್ಲ,  ಪು. ೫೪, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[24]     ಸಿಲೋನ.

[25]     ಕೊರೊಮಂಡಲ ಪು. ೩೦೪, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[26]     ವಿಜಯರಾವ್.

[27]     ಕ್ವಿಲಾನ್.

[28]     ಮದ್ರಾಸದ ಹತ್ತಿರ ಪುಲಿಕಟ್ ತರುವಾಯದ ವರ್ಷಗಳಲ್ಲಿ ಇದು ವಿಜಯನಗರದ ಮಹತ್ವದ ಪ್ರಾಂತಗಳಲ್ಲೊಂದಾಗಿತ್ತು.

[29]     ತೆನಸ್ಸರಿಮ್

[30]     ಪೀಣ =ತೆಲುಗಿನಲ್ಲಿ ಚಿಣ್ಣ, ಕನ್ನಡದಲ್ಲಿ ಚಿಕ್ಕ ಮತ್ತು ‘ಸಣ್ಣ’ಎಂದು ಅರ್ಥ. ಪೀಣರಾಯ ಅಥವಾ ಚಿಕ್ಕರಾಯ ಯುವರಾಜನಿಗೆ ಅನ್ವಯಿಸಿದ ಬಿರುದಾಗಿತ್ತು, ನೂನಿಜ್ ಕೊಟ್ಟಿರುವ ವ್ಯತ್ಪತ್ತಿ ಸ್ಪಷ್ಟವಾಗಿ ತಪ್ಪಾಗಿದೆ, ಪು. ೨೪೩, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[31]     ಅದೇ ಕತೆಯನ್ನು ಹೇಳುವ ಅಬ್ದುಲ್ ರಜಾಕ್ ಘಟನೆ ಜರುಗಿದ ಕಾಲವನ್ನು, “ತಾನು ಕಾಲಿಕತ್‌ನಲ್ಲಿದ್ದಾಗ”, ನವೆಂಬರ್ ೧೪೪೨ ಮತ್ತು ಏಪ್ರಿಲ್ ೧೪೪೫ ಕ್ರಿ.ಶ.ದ ಮಧ್ಯೆ ಎಂದು ನಿರ್ಧರಿಸುತ್ತಾನೆ.

[32]     ದಿನಚರಿಯಲ್ಲಿ ಹೇಳಿದ ಇಪ್ಪತ್ತು ಮಂತ್ರಿಗಳಲ್ಲಿ ಸೋದರಳಿಯನೂ ಒಬ್ಬನಾಗಿದ್ದನೆಂದು ಸೂಚಿಸುವಂತೆ ತೋರುತ್ತದೆ.

[33]     ಮೂಲದಲ್ಲಿ ಹೀಗೆಯೆ ಇದೆ.

[34]     ವಿರೂಪಾಕ್ಷರಾಯ.

[35]     ನರಸಿಂಹ. ಅವನು ಸ್ಪಷ್ಟವಾಗಿಯೆ ಪೂರ್ವ ಕರಾವಳಿಯತ್ತ ರಾಜಧಾನಿಯ ಪೂರ್ವಕ್ಕೆ ವಿಶಾಲ ಪ್ರದೇಶಗಳನ್ನು ಪಡೆದಿದ್ದ. ರಾಜನೊಂದಿಗೆ ಅವನ ಸಂಬಂಧ ಎಂದಿಗೂ ಸಂದೇಹದ ವಸ್ತುವಾಗಿದೆ.

[36]     ಪರ್ಶಿಯಾ (ಒರ್ಮುಝ)ಮತ್ತು ಏಡನ್ ವರ್ತಕರು ಅರಬರು.

[37]     ರಾಚೋಲ ಅಂದರೆ ರಾಯಚೂರು, ಒದೆಗರಿ -ಉದಯಗಿರಿ, ಕೊನಡೊಲ್ಲಿ -ಕೊಂಡವೀಡು ದ್ರುಗ್(ದುರ್ಗ)ಕ್ಕೆ ಊಲ್ಗಿ ಎಂದು ಬಳಸಲಾಗಿದೆ.

[38]     ಎರಡನೆಯ ನರಸನ ವೃತ್ತಾಂತ ಮತ್ತು ಕೌಟುಂಬಿಕ ಸಂಬಂಧ, ಶಾಸನಗಳ ಅಧ್ಯಯನದಿಂದ ದೊರೆತ ಸಂಗತಿಗಳಿಂದ ಪೂರ್ಣ ಭಿನ್ನವಾಗಿದೆ. ಅದರ ಪ್ರಕಾರ, ಎರಡನೆಯ ನರಸ ಮೊದಲನೆಯ ನರಸ ಅಥವಾ ನರಸಿಂಹನ ಹಿರಿಯ ಮಗನಾಗಿದ್ದ ಮತ್ತು ಕೃಷ್ಣದೇವರಾಯ ಕಿರಿಯ ಮಗನಾಗಿದ್ದ.