ಅಧ್ಯಾಯ ೫

ಕ್ರಿಸ್ನಾರಾವ್ ಪಟ್ಟಕ್ಕೆ ಬಂದು ರಾಜ್ಯಾದ್ಯಂತ ತನ್ನ ಆಜ್ಞೆ ಪಾಲಿಸಲ್ಪಟ್ಟ ಕೂಡಲೆ ತನ್ನ ಸಹೋದರ ಬಸಬಲರಾವ್

[1]ನ ಮಂತ್ರಿಯಾಗಿದ್ದ ಸಾಲ್ವತಿನನೆ ಇವನ ಮಂತ್ರಿಯೂ ಆಗಿದ್ದ ತನ್ನ ಭ್ರಾತ್ರೇಯನಾಗಿದ್ದ ಸಹೋದರ ಬಸಬಲರಾವ್‌ನ ಮಗನನ್ನು ತನ್ನ ಮೂವರು ಸಹೋದರರೊಂದಿಗೆ ಚಾಒದೆಗರಿ ಎಂಬ ದುರ್ಗಕ್ಕೆ ಕಳಿಸಿದ. ಆ ಭ್ರಾತ್ರೇಯ ತಾನು ಸಾಯುವವರೆಗೆ ಅಲ್ಲಿದ್ದ. ರಾಜ ತನ್ನ ಸುರಕ್ಷಿತತೆಗೋಸ್ಕರ ಹೀಗೆ ಮಾಡಿದ ನಂತರ ಹೊರಗೆ ಹೋಗದೆ ರಾಜ್ಯದ ವ್ಯವಹಾರಗಳನ್ನು ತಿಳಿದುಕೊಳ್ಳುತ್ತ ಮತ್ತು ಗತ ರಾಜರ ಮೃತ್ಯುಪತ್ರಗಳನ್ನು ನೋಡುತ್ತ ಒಂದೂವರೆ ವರ್ಷ ಬಿಸ್ನಗ ನಗರದಲ್ಲಿಯೆ ಇದ್ದ. ಇವುಗಳಲ್ಲಿ ಅವನಿಗೆ ತನ್ನ ತಂದೆ ನರಸನಾಯಿಕ ಮಂತ್ರಿಯಾಗಿದ್ದ ನರಸಿಂಗ ರಾಜನದೊಂದು ದೊರೆಯಿತು. ಅದರಲ್ಲಿ ರಾಜ ಹೀಗೆ ಇಚ್ಛಿಸಿದ್ದ : ತನ್ನ ಮಕ್ಕಳಾಗಲಿ (ಅಥವಾ ತಾನು ಶಸ್ತ್ರ ಬಲದಿಂದ ಗೆದ್ದಿದ್ದ ಈ ರಾಜ್ಯದ ಅಧಿಕಾರಕ್ಕೆ ಬಂದ ಯಾವನೆ ಆಗಲಿ) ತನ್ನ ಮರಣ ಕಾಲಕ್ಕೆ ತನ್ನ ವಿರುದ್ಧ ಬಂಡೆದ್ದಿದ್ದ ಮತ್ತು ಸಮಯವಿಲ್ಲದುದರಿಂದ ತಾನೆ ಅವುಗಳನ್ನು ವಶಪಡಿಸಿ ಕೊಳ್ಳಲಾಗದ ಮೂರು ದುರ್ಗಗಳನ್ನು ವಶಪಡಿಸಿಕೊಳ್ಳಬೇಕು; ಅವುಗಳಲ್ಲೊಂದನ್ನು ರಾಚೋಲ್[2] ಮತ್ತು ಮೆದೆಗುಲ್ಲಾ[3] ಎಂದು ಕರೆಯಲಾಗುತ್ತದೆ.

ಈ ಮೃತ್ಯು ಪತ್ರವನ್ನು ಮತ್ತು ತನ್ನ ಪೂರ್ವಿಕರು ತಮ್ಮ ಮೇಲೆ ವಿಧಿಸಲಾಗಿದ್ದುದರ ಬಗೆಗೆ ಎಷ್ಟು ಕೆಟ್ಟದಾಗಿ ನಡೆದುಕೊಂಡಿದ್ದರೆಂಬುದನ್ನು ಕಂಡು ಕ್ರಿಸ್ನರಾವ್ ಕೂಡಲೆ ಸೈನ್ಯಗಳನ್ನು ಸಿದ್ಧಗೊಳಿಸಲು ಮತ್ತು ಈ ಊರುಗಳ ಮೇಲೆ ದಂಡೆತ್ತಿ ಹೋಗಲು ನಿರ್ಧರಿಸಿದ. ಈ ದುರ್ಗಗಗಳಲ್ಲೊಂದು ಒದಿಗೈರ್ ಆಗಿತ್ತು ಮತ್ತು ಅದು ಒರ್ಯಾ ರಾಜನಿಗೆ ಸೇರಿಸ ಬಹುದಾಗಿತ್ತು ಮತ್ತು ಪ್ರಥಮವಾಗಿ ಅದರ ಮೇಲೇರಿ ಹೋಗಲು ನಿರ್ಧರಿಸಿ ಅವನು ಮೂವತ್ನಾಲ್ಕು ಸಾವಿರ ಕಾಲಾಳುಗಳು ಮತ್ತು ಎಂಟನೂರು ಆನೆಗಳ ಸೈನ್ಯ ಜಮಾಯಿಸಿದ ಮತ್ತು ಅದರೊಂದಿಗೆ ದಿಗರಿ[4] ನಗರಕ್ಕೆ ಬಂದ. ಅದರಲ್ಲಿ ಹತ್ತು ಸಾವಿರ ಕಾಲಾಳು ಮತ್ತು ನಾಲ್ಕು ನೂರು ಕುದುರೆಗಳು ಇದ್ದವು. ಏಕೆಂದರೆ, ದುರ್ಗ ಬಹಳ ಗಟ್ಟಿಯಾಗಿದ್ದುದರಿಂದ ಮತ್ತು ಉಪವಾಸ ಬೀಳಿಸದ ಹೊರತು ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದುದ ರಿಂದ ಅದಕ್ಕೆ ಹೆಚ್ಚು ಸೈನ್ಯದ ಅವಶ್ಯಕತೆ ಇರಲಿಲ್ಲ.

ರಾಜ ಅದನ್ನು ಒಂದೂವರೆ ವರ್ಷ ಮುತ್ತಿದ. ಆ ದುರ್ಗದ ಗೋಪುರಗಳನ್ನು ತನ್ನ ಸೈನಿಕರು ತಲುಪುವಂತೆ ಮಾರ್ಗ ರಚಿಸಲೋಸುಗ ಅನೇಕ ದೈತ್ಯ ಕಲ್ಲುಬಂಡೆಗಳನ್ನು ಒಡೆಯಿಸಿ ಗುಡ್ಡಗಾಡಿನಲ್ಲಿ ಅನೇಕ ರಸ್ತೆಗಳನ್ನು ಮಾಡಿದ. ಆ ಕಾಲಕ್ಕೆ ಆ ಸ್ಥಳ ಎಷ್ಟು ಗಟ್ಟಿಯಾಗಿತ್ತೆಂದರೆ ಒಬ್ಬೊಬ್ಬರಾಗಿ ಮಾತ್ರ ಹಾಯುವಂತಹ ಅತಿ ಇಕ್ಕಟ್ಟಿನ ದಾರಿಯೊಂದನ್ನು ಬಿಟ್ಟರೆ ಅದನ್ನು  ಪ್ರವೇಶಿಸಲಾಗುತ್ತಿರಲಿಲ್ಲ; ಮತ್ತು ತಾನು ದುರ್ಗಕ್ಕೆ ಹತ್ತಿರ ಬರಲು ಸಾಧ್ಯವಾಗುವಂತೆ ಅವನು ಆ ಜಾಗದಲ್ಲೊಂದು ಮತ್ತು ಇತರ ಅನೇಕ ರಸ್ತೆಗಳನ್ನೂ ನಿರ್ಮಿಸಿದ.

ಅದನ್ನವನು ಶಸ್ತ್ರಬಲದಿಂದ ವಶಪಡಿಸಿಕೊಂಡ ಮತ್ತು ಅದರಲ್ಲಿದ್ದ ಒರಿಯ ರಾಜನ ಕಕ್ಕಿಯನ್ನು ಸೆರೆಹಿಡಿದು ಅವಳಿಗೆ ತಾನು ತೋರಬಹುದಾದ ಸೌಜನ್ಯದೊಂದಿಗೆ ಮತ್ತು ಅವಳಿಗೆ ಸ್ವಾತಂತ್ರ್ಯ ಇತ್ತು ಅವಳನ್ನು ಬಂದಿಯಾಗಿ ಕೊಂಡೊಯ್ಯಲಾಯಿತು. ಮತ್ತು ಅವನು ಅವಳನ್ನು ತನ್ನ ಜೊತೆಗೇ ಕರೆದೊಯ್ದ.

ಇದಾದ ನಂತರ ಅವನು ಸಾಲ್ವತಿನಿಯನ್ನು ಕರೆದು ತಾನು ರಾಜಾ ನರಸಿಂಗ ಮೃತ್ಯು ಪತ್ರದಲ್ಲಿ ತನ್ನ ಮೇಲೆ ವಿಧಿಸಿದುದನ್ನು ಎಷ್ಟು ಚೆನ್ನಾಗಿ ಸಾಧಿಸಿರುವೆನೆಂಬುದನ್ನು ನೋಡಲು ಹೇಳಿದ ಮತ್ತು ಇಂಥ ಚಿಕ್ಕ ವಿಜಯದಿಂದ ತಾನಿನ್ನೂ ತೃಪ್ತನಾಗಿಲ್ಲವೆಂದೂ ತಾನು ಒರಿಯಾ ರಾಜ್ಯದೊಳಗೆ ಒಂದುನೂರು ಗಾವುದ ಮುನ್ನುಗ್ಗಬಯಸಿರುವುದಾಗಿಯೂ ಹೇಳಿದ; ಆಹಾರ ಸಾಮಗ್ರಿಗಳನ್ನು ಸಿದ್ಧಗೊಳಿಸಲು ಮತ್ತು ಸೈನ್ಯಗಳಿಗೆ ಪೂರ್ಣವೇತನ ನೀಡಲು ಅವನಿಗೆ ಆಜ್ಞೆಯಿತ್ತ.

ಈ ದುರ್ಗವನ್ನು ತೆಗೆದುಕೊಂಡ ನಂತರ ಅವನು ಹೊರಟು ಒರಿಯಾ ರಾಜ್ಯದ ಮುಖ್ಯ ನಗರಗಳಲ್ಲೊಂದಾಗಿದ್ದ ಕೊಂಡೊವಿ[5]ಯ ಮೇಲೆ ಏರಿಹೋಗಿ ಅದನ್ನು ಮುತ್ತಿದ; ಇದನ್ನು ತಿಳಿದ ಒರಿಯಾ ರಾಜ ತನ್ನ ಪ್ರದೇಶಗಳನ್ನು ಸಂರಕ್ಷಿಸಲು ಅವನನ್ನು ಎದುರಿಸಲು ಬಂದ ಮತ್ತು ತನ್ನೊಂದಿಗೆ ಒಂದು ಸಾವಿರ ಮುನ್ನೂರು ಆನೆಗಳು, ಇಪ್ಪತ್ತು ಸಾವಿರ ಆಶ್ವಾರೋಹಿಗಳು ಮತ್ತು ಐನೂರು ಸಾವಿರ ಕಾಲಾಳುಗಳನ್ನು ತಂದ. ಒರಿಯಾದ ರಾಜನ ಬರವನ್ನು ತಿಳಿದ ಕ್ರಿಸ್ನಾರಾವ್ ತಾನು ನಗರದ ಮೇಲೆ ಆಕ್ರಮಣ ಮಾಡುವುದಕ್ಕಿಂತ ಹೆಚ್ಚಾಗಿ ರಾಜ ಮತ್ತು ಅವನ ಸೈನ್ಯದೊಂದಿಗೆ ಯುದ್ಧ ಮಾಡಬಯಸಿರುವುದಾಗಿ ಮತ್ತು ಅದನ್ನು ವಶಪಡಿಸಿಕೊಳ್ಳಲು ನಂತರ ಬೇಕಾದಷ್ಟು ಸಮಯವಿರುವುದೆಂದು ಹೇಳಿ ನಗರವನ್ನು ಆಕ್ರಮಿಸದೆ ನಡೆದ. ನಗರದ ಜನರು ಕರಾವಳಿಗೆ ಓಡಿಹೋಗಲು ಯತ್ನಿಸಿದರೆ ಅದನ್ನು ತಡೆಯಲು ಬಲವನ್ನು ಹಿಂದೆ ಬಿಟ್ಟು ಅವನು ಅದಕ್ಕಿಂತ ನಾಲ್ಕು ಹರದಾರಿ ಮುಂದೆ ಸಾಗಿದ. ಅವನು ಗಡುವಿನಿಂದ ದಾಟುವ ಒಂದು ದೊಡ್ಡ ಉಪ್ಪು ನೀರಿನ ನದಿಗೆ[6] ಬಂದಾಗ ನದಿಯ ಆ ಬದಿಗೆ ಒರಿಯಾದ ರಾಜ ತನ್ನ ಸೈನ್ಯದೊಂದಿಗೆ ನಿಂತಿದ್ದ. ರಾಜಾ ಕ್ರಿಸ್ನಾರಾವ್ ನದಿಯ ಈಚೆಗೆ ತನ್ನ ಸೈನ್ಯ ನಿಲ್ಲಿಸಿದ ಮತ್ತು ತನ್ನೊಂದಿಗೆ ಯುದ್ಧ ಮಾಡಲಿಚ್ಛಿಸುವುದಾದರೆ ತಾನು ನದಿಯಿಂದ ಎರಡು ಗಾವುದ ಸರಿಯುವದಾಗಿಯೂ ಅದರಿಂದ ಅವನು ಒರಿಯಾದ ರಾಜ ನದಿಯನ್ನು ಪೀಡೆಗೊಳಪಡದೆ ದಾಟಬಹುದಾಗಿಯೂ ಮತ್ತು ನದಿಯನ್ನು ದಾಟಿದ ತಕ್ಷಣ ತಾನು ಯುದ್ಧ ಹೂಡುವುದಾಗಿಯೂ ಸಂದೇಶ ಕಳಿಸಿದ. ಆ ಸಂದೇಶಕ್ಕೆ (ಒರಿಯಾದ ರಾಜ) ಉತ್ತರ ಕೊಡಲಿಲ್ಲ. ಅಷ್ಟೆ ಅಲ್ಲ, ಯುದ್ಧ ಮಾಡಲು ಸಿದ್ಧನಾದ. ಅವನ ನಿರ್ಧಾರ ಕಂಡು ರಾಜ ಕ್ರಿಸ್ನರಾವ್ ತನ್ನೆಲ್ಲ ಬಲ ಹಾಗೂ ಆನೆಗಳೊಂದಿಗೆ ನದಿ ದಾಟಿದ ಮತ್ತು ನದಿ ದಾಟುವಾಗ ಎರಡೂ ಬದಿಗಳಲ್ಲಿ ಬಹಳ ಹೋರಾಟಗಳಾದವು ಮತ್ತು ಅನೇಕರು ಕೊಲ್ಲಲ್ಪಟ್ಟರು. ಆದರೂ ಸಹ. ರಾಜಾ ಕ್ರಿಸ್ನರಾವ್ ನದಿ ದಾಟಿದ ಮತ್ತು ತೀರದಲ್ಲಿ ಎಷ್ಟೊಂದು ಕಲಿತನದಿಂದ ಕಾದಿದನೆಂದರೆ ಒರಿಯಾದ ರಾಜನನ್ನು ಸೋಲಿಸಿ ಓಡಿಸಿದ. ಆ ವಿಜಯದಲ್ಲಿ ಅವನು ಅನೇಕ ಕುದುರೆಗಳನ್ನು ಮತ್ತು ಆನೆಗಳನ್ನು ವಶಪಡಿಸಿಕೊಂಡ.

ರಾಜ ಇದನ್ನು ಮಾಡಿದ ನಂತರ ತನ್ನ ಬಲವನ್ನು ಇನ್ನೂ ಅನುಭವಿಸಿರದ ದುರ್ಗಕ್ಕೆ ಹಿಂತಿರುಗುವುದಾಗಿ ತನ್ನ ಮಂತ್ರಿ ಸಾಲ್ವತಿನಿಯನಿಗೆ ಹೇಳಿದ. ಅವನು ಅದರತ್ತ ನಡೆದು ಅಲ್ಲಿ ಅದಕ್ಕೆ ಮುತ್ತಿಗೆ ಹಾಕಿ ಎರಡು ತಿಂಗಳು ನಿಂತು ಅದನ್ನು ವಶಪಡಿಸಿಕೊಂಡ.

ಅವನು ಅದರ ಹತೋಟಿಯನ್ನು ಸಾಲ್ವತಿನಿಯನಿಗೆ ಒಪ್ಪಿಸಿದ. ಅವನಾದರೊ ಒರಿಯಾ ರಾಜ್ಯದುದ್ದಕ್ಕೂ ರಾಜನೊಂದಿಗೆ ಮುಂದೆ ಸಾಗುವ ಉದ್ದೇಶದಿಂದ ತನ್ನ ಸೈನ್ಯದಲ್ಲಿದ್ದ ಸಹೋದರರಲ್ಲೊಬ್ಬನನ್ನು ದಳವಾಯಿಯಾಗಿ ಹಿಂದೆ ಬಿಟ್ಟ. ರಾಜ ಒರಿಯಾದ ರಾಜನನ್ನು ಬೆನ್ನಟ್ಟಿ ಇನ್ನೊಮ್ಮೆ ನದಿ ದಾಟಿ ಅವನನ್ನು ನಿರೀಕ್ಷಿಸಲು ಯಾವುದೆ ಕಾರಣವಿಲ್ಲದಿದ್ದ ನಾಡನ್ನು ವಶಪಡಿಸಿಕೊಳ್ಳುತ್ತ ನಾಶಪಡಿಸುತ್ತ ಕೊಂಡಪಲ್ಲಿ[7]ರ್ ಎಂಬ ನಗರ ತಲುಪಿದ. ಅದು ರಾಜ್ಯದ ಪ್ರಮುಖ ನಗರವಾದುದರಿಂದ ರಾಜ್ಯದ ಎಲ್ಲ ಮುಖ್ಯಸ್ಥರು ಅಲ್ಲಿದ್ದರು. ಅವನು ಅದಕ್ಕೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಳ್ಳಲಾರದೆ ಮೂರು ತಿಂಗಳು ಅಲ್ಲಿ ಉಳಿದ, ಮತ್ತು ಕೊನೆಗೆ ಅವನು ಅದನ್ನು ಶಸ್ತ್ರ ಬಲಕ್ಕಿಂತ ಹೆಚ್ಚಾಗಿ ಸಂಖ್ಯಾಬಲದಿಂದ ವಶಪಡಿಸಿಕೊಂಡ. ಆ ದುರ್ಗದಲ್ಲಿ ಅವನು ಬಂದಿಗಳನ್ನಾಗಿಸಿದವರಲ್ಲಿ ಅನೇಕರು ಉಚ್ಚ ದರ್ಜೆಯವರಿದ್ದರು. ಅವರಲ್ಲಿ ರಾಜನ ಪತ್ನಿಯೊಬ್ಬಳು, ರಾಜಕುಮಾರನಾಗಿದ್ದ ಅವನ ಪುತ್ರನೊಬ್ಬ ಮತ್ತು ರಾಜ್ಯದ ಏಳು ಪ್ರಮುಖ ದಳವಾಯಿಗಳಿದ್ದರು. ಅವರೆಲ್ಲರನ್ನೂ ಅವನು ರಸ್ತೆ ಮೂಲಕ ಬಿಸ್ನಗಕ್ಕೆ ಕಳುಹಿದ.

ಅವನು ರಾಜ್ಯದೊಳಗೆ ಮುಂದೆ ಒಂದು ಹರದಾರಿ ನಡೆದ. ಅವನ ಮುನ್ನಡೆಯನ್ನು ತಡೆಯಲು ಅವನು ಬಹಳ ದೊಡ್ಡ ನಗರವಾಗಿದ್ದ ಸಿಮಂದರಿ[8] ತಲುಪುವವರೆಗೆ ಯಾರೂ ಇರಲಿಲ್ಲ. ಅಲ್ಲಿ ಅವನು ಒರಿಯಾದ ರಾಜನಿಗಾಗಿ ಕಾಯುತ್ತ ಆರು ತಿಂಗಳು ನಿಂತ. ತಾನು ಅವನಿಗಾಗಿ ರಣರಂಗದಲ್ಲಿ ಕಾದಿರುವುದಾಗಿ ಅನೇಕ ಸಂದೇಶಗಳನ್ನು ಕಳಿಸಿದರೂ ಅವನು ಬರಲಿಲ್ಲ. ಈ ನಗರದಲ್ಲಿ ಅವನು ಅನೇಕ ಕಾರ್ಯಗಳನ್ನು ಮಾಡಿದ, ದೇವಾಲಯಗಳಿಗೆ ದಾನ ನೀಡಿದ ಮತ್ತು ಅಲ್ಲಿ ಒಂದು ಭವ್ಯ ದೇವಾಲಯ ಕಟ್ಟಿಸಿ ಅದಕ್ಕೆ ಬಹಳ ಆದಾಯ ಕೊಡಮಾಡಿದ. “ಬಹುಶಃ ಈ ಅಕ್ಷರಗಳು ಸವೆದಾಗ ಒರಿಯಾದ ರಾಜ ಬಿಸ್ನಗದ ರಾಜನೊಂದಿಗೆ ಯುದ್ಧ ಮಾಡಿಯಾನು, ಒರಿಯಾದ ರಾಜ ಅವುಗಳನ್ನು ಅಳಿಸಿದರೆ ಅವನ ಪತ್ನಿಯನ್ನು ಬಿಸ್ನಗ ರಾಜನ ಕುದುರೆಗಳಿಗೆ ನಾಲು ಕಟ್ಟುವ ಕಮ್ಮಾರನಿಗೆ ಕೊಡಲಾಗುವುದು” ಎಂದು ಸಾರುವ ಶಾಸನವನ್ನು ಆ ದೇವಾಲಯದ ಮೇಲೆ ಕೆತ್ತುವಂತೆ ಆಜ್ಞೆಯಿತ್ತ.

ಹೀಗೆ ಮಾಡಿದ ನಂತರ ಅವನು ಬಹುತೇಕ ಭೂಮಿಗಳನ್ನು ದೇವಾಲಯಗಳಿಗೆ ಬಿಟ್ಟು ಮರಳಿದ ಮತ್ತು ಬಿಸ್ನಗಕ್ಕೆ ಬಂದು ಕೆಲವು ದಿನ ವಿಶ್ರಮಿಸಿದ. ಮೊದಲ ದುರ್ಗದಲ್ಲಿ ಬಂದಿಯಾಗಿ ಪಡೆದಿದ್ದ ಒರಿಯಾ ರಾಜನ ಪುತ್ರನನ್ನು ಕರೆಕಳಿಸಿದ. ಅವನು ಚುರುಕು ಮನುಷ್ಯನೂ ಕತ್ತಿ ಮತ್ತು ಕಠಾರಿ ಎರಡರಲ್ಲಿಯೂ ಪ್ರವೀಣನೆಂದು ಜನರು ಹೇಳುತ್ತಿರುವುದ ರಿಂದ ಅವನು ವರಸೆ ಮಾಡುವುದನ್ನು ನೋಡಲು ಸಂತೋಪಡುವುದಾಗಿ ತಿಳಿಸಿದ.

ಮಹಾರಾಜ ಕರೆಸಿದುದರಿಂದ ತನಗೆ ಸಾಧ್ಯವಿದ್ದುದನ್ನು ಮಾಡುವುದಾಗಿಯೂ ಮರುದಿನಕ್ಕೆ ಅದನ್ನು ಮುಂದೂಡಬೇಕೆಂದು ಆ ತರುಣ ಕೇಳಿಕೊಂಡ ಮರುದಿನ ಬಂದಾಗ ರಾಜನು ಅವನನ್ನು ಕರೆಕಳಿಸಿದ. ಮತ್ತು ಅವನೊಂದಿಗೆ ವರಸೆ ಮಾಡಲು ಆ ಕಾಲಕ್ಕೆ ಆ ಕಲೆಯಲ್ಲಿ ಅತ್ಯಂತ ಪ್ರವೀಣನಾದ ತನ್ನ ಮನುಷ್ಯನೊಬ್ಬನನ್ನು  ಕರೆಕಳಿಸಿದ. ಒರಿಯಾ ರಾಜನ ಮಗ ಅವನನ್ನು ನೋಡಿದಾಗ ರಾಜನ ಪುತ್ರನ ಬದಲು ಸಾಮಾನ್ಯ ಮನುಷ್ಯನೊಬ್ಬನನ್ನು ತನ್ನೊಂದಿಗೆ ವರಸೆ ಮಾಡಲು ಕರೆಸಿದುದರಿಂದ ರಾಜನೊಂದಿಗೆ ಕೋಪಾವಿಷ್ಠನಾಗಿ ಅವನು ರಾಜನನ್ನು ಉದ್ದೇಶೀಸಿ ಹೀಗೆ ಕೂಗಿದ : “ರಾಜರಕ್ತದವನಲ್ಲ ದವನನ್ನು ಮುಟ್ಟಿ ನನ್ನ ಕೈಗಳನ್ನು ಹೊಲಸು ಮಾಡಿಕೊಳ್ಳುವುದನ್ನು ದೇವರು ತಪ್ಪಿಸಲಿ”. ಹೀಗೆಂದವನೆ ತನ್ನನ್ನು ತಾನೇ ಕೊಂದುಕೊಂಡ. ಅವನ ತಂದೆ ತನ್ನ ಮಗ ಸತ್ತ ಬಗೆಯನ್ನು ಕೇಳಿ, ತನ್ನ ಮಗ ಸತ್ತಿರುವುದರಿಂದ ರಾಜನ ವಶದಲ್ಲಿದ್ದ ತನ್ನ ಪತ್ನಿಯ ಬಿಡುಗಡೆ ಪಡೆಯಬಹುದೆಂದು (ಕೋರಿ) ಸಾಲ್ವತಿನಿಯನಿಗೆ ಬರೆದ. ಅದಕ್ಕೆ ಅವನು ರಾಜನೊಂದಿಗೆ ತನ್ನ ಮಗಳ ವಿವಾಹ ಮಾಡಬೇಕೆಂದು ಮತ್ತು ಅನಂತರ ರಾಜ ಅವನ ಮಡದಿ, ಭೂಮಿಗಳನ್ನು ಮರಳಿ ಕೊಡುವುದಾಗಿ (ಅಥವಾ ಭೂಮಿಗಳನ್ನು ಮಾತ್ರ ಇಟ್ಟುಕೊಳ್ಳುವನು) ಉತ್ತರಿಸಿದ. ಈ ಸಲಹೆಯನ್ನು ಅವನು ಒಪ್ಪಿದ ಮತ್ತು ತನ್ನ ಮಗಳ ವಿವಾಹ ಏರ್ಪಡಿಸಲು ಬಿಸ್ನಗಕ್ಕೆ ರಾಯಭಾರಿಗಳನ್ನು ಕಳಿಸಿದ. ಇದರಿಂದ ರಾಜಾ ಕ್ರಿಸ್ನರಾವ್ ಬಲು ಸಂತುಷ್ಟನಾದ ಒರಿಯಾದ ರಾಜ (ಈ ವಿಷಯದಲ್ಲಿ) ಅವನ ಇಚ್ಛೆಯನ್ನರಿತಾಗ ತನ್ನ ಮಗಳನ್ನು ಅವನಲ್ಲಿಗೆ ಕಳಿಸಿಕೊಟ್ಟ ಮತ್ತು ಅವಳ ಆಗಮನದಿಂದ ಅವರು ಮಿತ್ರರಾದರು. ಕ್ರಿಸ್ನರಾವ್ ನದಿಯಾಚೆಗಿನ ಪ್ರದೇಶಗಳನ್ನು ಹಿಂತಿರುಗಿಸಿ ಈಚೆಗಿನವನ್ನು ತನಗೇ ಇಟ್ಟುಕೊಂಡ.

—-
(
ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

ಅಧ್ಯಾಯ ೬

ಒರಿಯಾದ ರಾಜನೊಂದಿಗೆ ಶಾಂತಿ ಏರ್ಪಡಿಸಿ, ಒರಿಯಾ ರಾಜನ ಮಗಳೊಂದಿಗೆ ವಿವಾಹ ಮಾಡಿಕೊಂಡು, ಮತ್ತು ಮೇಲೆ ಹೇಳಿದಂತೆ ಅವನಿಗೆ ಅವನ ಹೆಂಡತಿಯನ್ನೂ ನದಿಯಾಚೆಗಿನ ಪ್ರದೇಶಗಳನ್ನೂ ಮರಳಿ ಕೊಟ್ಟ ನಂತರ ದೊಡ್ಡ ಸೈನ್ಯ ಸನ್ನದ್ಧಗೊಳಿಸಿ ಐವತ್ತು ವರ್ಷಗಳವರೆಗೆ ಬಂಡೆದ್ದಿದ್ದ ದೊರೆಯ ಪ್ರದೇಶವಾಗಿದ್ದ ಕಾತೂರ್[9]ನ ಮೇಲೆ ಆಕ್ರಮಣ ಮಾಡಲು ಸಿದ್ಧತೆ ಮಾಡಿದ. ಈ ಪ್ರದೇಶ ಕೋರಮಂಡಲದ ಕಡೆಗೆ ಇದೆ. ಅವನು ಅದರ ಮೇಲೇರಿ ಹೋದ ಮತ್ತು ಆ ನಾಡಿನ ದೊರೆ ಇದ್ದ ಪ್ರಮುಖ ನಗರಗಳಲ್ಲೊಂದಕ್ಕೆ ಮುತ್ತಿಗೆ ಹಾಕಿದ. ಅದಕ್ಕೆ… ಎಂದು ಹೆಸರಿದ್ದು[10] ಅದು ನೀರಿನಿಂದ ಆವೃತವಾಗಿದೆ.

ಕ್ರಿಸ್ನರಾವ್ ಈ ನಗರವನ್ನು ಆಕ್ರಮಣ ಮಾಡಿದಾಗ ಚಳಿಗಾಲವಾಗಿತ್ತು. ಆದುದರಿಂದ ನದಿ ಎಷ್ಟೊಂದು ಏರಿತ್ತು ಮತ್ತು ಎಷ್ಟೊಂದು ಪ್ರವಾಹವಿತ್ತೆಂದರೆ ರಾಜ ಆ ನಗರಕ್ಕೆ ಯಾವ ಹಾನಿಯನ್ನೂ ಮಾಡಲಾಗಲಿಲ್ಲ. ಇದನ್ನು ಕಂಡ ಕ್ರಿಸ್ನರಾವ್ ತನ್ನ ಇಚ್ಛೆ ಈಡೇರದೆ ಸಮಯ ಸರಿಯುತ್ತಿರುವುದನ್ನು ಮನಗಂಡು ತನ್ನ ಇಚ್ಛೆ ಪೂರ್ತಿಗೊಳ್ಳಲು ಅಡ್ಡಿಯಾಗಿದ್ದ ಪ್ರಧಾನ (ನದಿ)ಯ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗಲೋಸುಗ ಅದಕ್ಕೆ ಅನೇಕ ಹರಿಗಳನ್ನು ಕೊರೆಯುವಂತೆ ತನ್ನ ಸೈನಿಕರಿಗೆ ಆಜ್ಞೆಯಿತ್ತ. ಅವನಲ್ಲಿ ಅನೇಕ ಸೈನಿಕರಿದ್ದುದ ರಿಂದ ಇದನ್ನು ಅಲ್ಪಸಮಯದಲ್ಲಿ ಮಾಡಲಾಯಿತು. (ಹೊಸ) ಜಲಮಾರ್ಗಗಗಳು ಪೂರ್ತಿಯಾಗಿ ನೀರು ಹೋಗಬೇಕಾಗಿದ್ದಲ್ಲಿ ಜೋಡಿಸಲಾದ ನಂತರ ನದಿಯಲ್ಲಿ ಅನೇಕ ಮುಖಗಳನ್ನು ತೆರೆಯಿಸಿದ. ನೀರು ಬಹು ಬೇಗ ಹರಿದುಹೋಗಿ ತಳ ಕಾಣುವಂತಾಯಿತು. ನೀರು  ಎಷ್ಟೊಂದು ಆಳ ಕಡಿಮೆಯಾಯಿತೆಂದರೆ ಅವನು ನಗರದ ಗೋಡೆಗಳನ್ನು ತಲುಪಲು ಶಕ್ತನಾದ. ಮತ್ತು ಹೀಗೆ ಐವತ್ತು ಪ್ರತ್ಯೇಕ ತಳಗಳಲ್ಲಿ ನದಿಯನ್ನು ತಿರುಗಿಸಲಾಯಿತು. ನಗರದೊಳಗೆ ಒಂದು ನೂರು ಸಾವಿರ ಕಾಲಾಳುಗಳು ಮತ್ತು ಮೂರು ಸಾವಿರ ಅಶ್ವಾರೋಹಿಗಳಿದ್ದು ತಮ್ಮನ್ನು ಅವರು ಸಂರಕ್ಷಿಸಿಕೊಂಡರು ಮತ್ತು ಚೆನ್ನಾಗಿ ಕಾದಿದರು. ಆದರೆ, ಕೆಲವೆ ದಿನಗಳಲ್ಲಿ ಕ್ರಿಸ್ನರಾವ್ ಪ್ರವೇಶಿಸಿ ಎಲ್ಲರನ್ನೂ ಕೊಲ್ಲುವುದನ್ನು ತಡೆಯ ಲಾಗಲಿಲ್ಲ. ಈ ನಗರದಲ್ಲಿ ಅವನು ವಿಫುಲ ನಿಧಿಗಳನ್ನು ಪಡೆದುದಲ್ಲದೆ ಒಂದು ದಶಲಕ್ಷ ಆರು ಸಾವಿರ ಸುವರ್ಣ ಪರ್ದಾಒಗಳ ನಗದು ಹಣ ಪಡೆದ. ಮೇಲಾಗಿ, ಅನೇಕ ರತ್ನಗಳನ್ನು, ಅಶ್ವಗಳನ್ನು ಮತ್ತು ಆನೆಗಳನ್ನು ಪಡೆದ. ಈ ಪ್ರದೇಶದ ಸ್ವಾಧೀನವನ್ನು ಪೂರ್ಣಗೊಳಿಸಿದ ನಂತರ ಕ್ರಿಸ್ನರಾವ್ ಅದನ್ನು ತನ್ನ ಅನೇಕ ದಳವಾಯಿಗಳಲ್ಲಿ ವಿಭಜಿಸಿ ಪ್ರತಿಯೊಬ್ಬನಿಗೂ ಅಗತ್ಯವಾದಷ್ಟನ್ನು ಕೊಟ್ಟ. ಆ ನಗರದಲ್ಲಿದ್ದ. ಪ್ರಮುಖ ಮತ್ತು ಆ ಪ್ರದೇಶದ ದೊರೆ ಯಾಗಿದ್ದವನನ್ನು ಸೆರೆಹಿಡಿದು ಬಿಸ್ನಗಕ್ಕೆ ಒಯ್ಯಲಾಯಿತು. ಅವನು ಅಲ್ಲಿ ರಾಜನ ಸೆರೆಮನೆಯಲ್ಲಿ ಸತ್ತ.

ರಾಜ ಆ ಪ್ರದೇಶವನ್ನು ನೆಲೆಗೊಳಿಸಿದ ನಂತರ ಬಿಸ್ನಗಕ್ಕೆ ಬಂದು ಅಲ್ಲಿಂದ ಕೊಂಡೊವಿ ನಗರಕ್ಕೆ ಸಾಲ್ವತಿನಿಯನನ್ನು ಕಳಿಸಿದ. ಏಕೆಂದರೆ, ಅವನು ಅದರ ಪ್ರಧಾನಾಧಿಕಾರಿಯನ್ನು ಪ್ರದೇಶ ಮತ್ತು ಆಡಳಿತವನ್ನು ನೇರವಾಗಿ ನೋಡಿಕೊಳ್ಳಲು ತನ್ನ ತಮ್ಮನನ್ನು ಅಲ್ಲಿರಿಸಿದ್ದ. ರಾಜ ಒರಿಯಾದಿಂದ ಹಿಂತಿರುಗಿದ ಮೇಲೆ ಅಲ್ಲಿಗೆ ಎಂದೂ ಹೋಗಲಿಲ್ಲ.

ಕೊಂಡೊವಿಗೆ ಪಯಣ ಬೆಳೆಸಿದ ಸಾಲ್ವತಿನಿಯ ಅದನ್ನು ತಲುಪುವ ಮಾರ್ಗದಲ್ಲಿ ಅವನನ್ನು ಅಡ್ಡಗಟ್ಟಿದ ಮದಾರ್ಮೆಲುಕೊ ಎಂಬ ಮಹಮ್ಮದೀಯ ಎದುರಾದ. ಅವನು ಈ ಬದಿಯ[11] ರಾಜನ ದಳವಾಯಿಯಾಗಿದ್ದು ಅರವತ್ತು ಸಾವಿರ ಸೈನಿಕರೊಂದಿಗೆ ದಾರಿ ಕಾಯುತ್ತಿದ್ದ. ಸಾಲ್ವತಿನಿಯನೊಂದಿಗೆ ಎರಡು ನೂರು ಸಾವಿರ ಸೈನಿಕರಿದ್ದರು ಮತ್ತು ಅವನಿಗೆ ಅವನ ಅಂಜಿಕೆ ಇರಲಿಲ್ಲ; ಇವರೊಂದಿಗೆ ಅವನ ಮೇಲೆ ಸಾಗಿ ಅವನನ್ನು ಸೋಲಿಸಿ ಸೆರೆಹಿಡಿದ ಮತ್ತು ಅವನನ್ನೂ ಅವನ ಹೆಂಡತಿಯನ್ನೂ, ಮಗನನ್ನು ಕುದುರೆ ಆನೆಗಳನ್ನೂ, ವಿಫುಲ ಧನವನ್ನೂ, ರತ್ನಗಳ ಸಂಗ್ರಹವನ್ನೂ ವಶಕ್ಕೆ ತೆಗೆದುಕೊಂಡು ಎಲ್ಲವನ್ನೂ ರಾಜಾ ಕ್ರಿಸ್ನರಾವ್‌ಗೆ ಕಳಿಸಿಕೊಟ್ಟ. ರಾಜ (ಬಂಧಿಗಳನ್ನು) ಸೆರೆಮನೆಯಲ್ಲಿಡಲು ಆಜ್ಞಾಪಿಸಿದ ಮತ್ತು ಅವರು ಅಲ್ಲಿಯೆ ಸತ್ತರು. ಮತ್ತು ಸಾಲ್ವತಿನಿಯ ತನ್ನ ಪ್ರದೇಶಕ್ಕೆ ನಡೆದ ಮತ್ತು ಅಲ್ಲಿ ಕೆಲವು ತಿಂಗಳು ಇದ್ದು ಆಡಳಿತವನ್ನು ನೋಡಿಕೊಂಡು ವ್ಯಾಜ್ಯ ಕ್ಕೊಳಪಟ್ಟ ಸಂಗತಿಗಳನ್ನು ಬಗೆಹರಿಸಿ ಬಿಸ್ನಗದ ರಾಜನಲ್ಲಿಗೆ ಹಿಂತಿರುಗಿದಾಗ ರಾಜ ಅವನನ್ನು ರಾಜ್ಯದಲ್ಲಿ ಅತಿ ಪ್ರಮುಖ ವ್ಯಕ್ತಿಯಾದುದರಿಂದ ಚೆನ್ನಾಗಿ ಬರಮಾಡಿಕೊಂಡ.

 

ಅಧ್ಯಾಯ ೭

ಸಾಲ್ವತಿನಿಯ ಆಗಮಿಸಿ ರಾಜ ಅವನನ್ನು ಚೆನ್ನಾಗಿ ಬರಮಾಡಿಕೊಳ್ಳಲಾದ ಮೇಲೆ ಮತ್ತು ಕೆಲವು ದಿನ ನಂತರ, ತನ್ನ ಪೂರ್ವಜ ರಾಜರಿಂದ ಇಡಲ್‌ಕಾವ್ ವಶಪಡಿಸಿಕೊಂಡಿದ್ದ ಬಲಿಷ್ಠವಾದ ಹಾಗೂ ಅವನ ಪ್ರಮುಖ ನಗರಗಳಲ್ಲೊಂದಾದ ರಾಯಚೂರನ್ನು ಸ್ವಾಧೀನ ಪಡಿಸಿಕೊಳ್ಳುವುದು ರಾಜ ನರಸಿಂಗನ ಮೃತ್ಯು ಪತ್ರದಲ್ಲಿನ ಇಚ್ಛೆಗಳಲ್ಲೊಂದಾಗಿದ್ದುದರಿಂದ ತಾನು ಅದನ್ನು ಈಡೇರಿಸಬಯಸಿರುವುದಾಗಿ ಸಾಲ್ವತಿನಿಯನಿಗೆ ಹೇಳಿದ. ನಲವತ್ತು ವರ್ಷಗಳಿಂದಲೂ ಎರಡೂ ಬಣಗಳ ಮಧ್ಯೆ ಶಾಂತಿ ಇರುತ್ತಿರುವುದರಿಂದ ಅದನ್ನು ಹೇಗೆ ಭಂಗ ಮಾಡಬೇಕೆಂದು ತನಗೆ ತಿಳಿಯದೆಂದ. ಆದರೆ, ಸಾಲ್ವತಿನಿಯ ಹೇಳಿದುದು ಹೀಗೆ : ಕೆಲವು ಕರಾರಿಗೊಳಪಟ್ಟು ಶಾಂತಿ ಮಾಡಿಕೊಳ್ಳಲಾಗಿರುವುದರಿಂದ – ಬಣದಲ್ಲಿ ಯಾವುದೆ ಜಮೀನುದಾರರು ಇಲ್ಲವೆ ಬಂಡೆದ್ದ ದಳವಾಯಿಗಳು ಇಲ್ಲವೆ ಇತರ ಕೇಡಿಗಳಿಗೆ ಆಶ್ರಯ ನೀಡಲಾಗಿದ್ದರೆ ಅವರನ್ನು ಒಪ್ಪಿಸಬೇಕೆಂದು ಬೇಡಿಕೆ ಇಟ್ಟಾಗ ಅವರನ್ನು ಕೂಡಲೆ ಬಿಟ್ಟು ಕೊಡಬೇಕೆಂಬುದು ಆ ಕರಾರುಗಳಲ್ಲೊಂದು ಈಗ ಶಾಂತಿ ಮುರಿಯಲು ಬಲವಾದ ಕಾರಣವುಂಟು; ಏಕೆಂದರೆ,  ಮಹಾರಾಜರ ಹಲವಾರು ಜಮೀನುದಾರರು ಮತ್ತು ಸಾಲಗಾರರು ಇಡಲ್‌ಕಾವ್‌ನ ರಾಜ್ಯಕ್ಕೆ ಓಡಿ ಹೋಗಿರುವರು. ಆದುದರಿಂದ, ರಾಜ ಈ ವ್ಯಕ್ತಿಗಳನ್ನು ಒಪ್ಪಿಸುವಂತೆ ಹೇಳಿಕಳಿಸಬೇಕು ಮತ್ತು ಅವರನ್ನು ಒಪ್ಪಿಸಲು ನಿರಾಕರಿಸಿದರೆ ಶಾಂತಿ ಮುರಿಯಲು ಒಳ್ಳೆಯ ಕಾರಣವಾಗುವುದೆಂದು ಅವನು ಸಲಹೆಯಿತ್ತ. ಅನೇಕರು ಈ ಸಲಹೆಗೆ ಬೆಂಬಲ ನೀಡಲಿಲ್ಲ. ಈ ಹೊತ್ತಿಗೆ ಏನಾಯಿತೆಂದರೆ (ಬಿಸ್ನಗದ) ರಾಜ ನಲವತ್ತು ಸಾವಿರ ಪರ್ದಾಒಗಳನ್ನು ಕೊಟ್ಟು ಸೈದ್ ಮರ್ಕರ್‌ನನ್ನು ಕುದುರೆ ಕೊಳ್ಳಲು ಗೋವಾಕ್ಕೆ ಕಳಿಸಿದ. ಈ ಸೈದ ಮರ್ಕರ್ ಮೂರನಾಗಿದ್ದು ಅವನಿಗೆ ಈಗಾಗಲೆ ಒಪ್ಪಿಸಲಾಗಿದ್ದ ಅನೇಕ ವ್ಯವಹಾರಗಳಿಂದಾಗಿ ಬಿಸ್ನಗದ ರಾಜ ಅವನಲ್ಲಿ ವಿಶ್ವಾಸವಿಟ್ಟಿದ್ದ; ಈ ಮನುಷ್ಯ ಮೂರರು ವಾಸವಾಗಿದ್ದ ಪೊಂಡಾ ಎಂಬ ಗೋವಾದಿಂದ ಎರಡು ಹರದಾರಿ ದೂರವಿರುವ ಸ್ಥಳಕ್ಕೆ ಬಂದಾಗ ತನ್ನೊಂದಿಗಿದ್ದ ಎಲ್ಲ ಸಂಪತ್ತಿನೊಂದಿಗೆ ಆ ಪೊಂಡಾದಿಂದ ಇಡಲ್‌ಕಾವ್‌ನಲ್ಲಿಗೆ ಓಡಿಹೋದ. ಅವನು ಅಲ್ಲಿಗೆ ತಲುಪಿದ ಕೂಡಲೆ ಇಡಲ್‌ಕಾವ್ ಅವನಿಗೆ ಒಂದು ಪತ್ರ ಬರೆದನೆಂದು ಹೇಳುತ್ತಾರೆ. ಸೈದ್ ಎಲ್ಲ ಧನದೊಂದಿಗೆ ಗೈದ ಪಲಾಯನದ ಸುದ್ದಿಯನ್ನು ರಾಜನಿಗೆ ಹೇಳಿದಾಕ್ಷಣ ಇಡಲ್‌ಕಾವ್ ತನ್ನ ಮಿತ್ರನಾದುದರಿಂದ ಅವನಲ್ಲಿದ್ದ ಎಲ್ಲ ಧನದೊಂದಿಗೆ ಆ ಮನುಷ್ಯನನ್ನು  ವಾಪಸು ಕಳಿಸಲು ಬರೆಯುವುದಾಗಿ ಹೇಳಿದ. ಆಮೇಲೆ ರಾಜ ಒಂದು ಪತ್ರ ಬರೆಯಿಸಿದ. ಅದರಲ್ಲಿ ಅವನು ಯಾವುದೂ ಅಲುಗಾಡಿಸಲಾರದಂಥ ಮೈತ್ರಿ ಇಷ್ಟೊಂದು ವರ್ಷ ಇದ್ದುದನ್ನು ಉಲ್ಲೇಖಿಸುತ್ತ ತಮ್ಮ ಮಧ್ಯೆ ಸುದೀರ್ಘ ಕಾಲ ಇದ್ದ ಶಾಂತಿಯನ್ನು ಒಡೆಯಲು ದ್ರೋಹಿಯೊಬ್ಬ ಕಾರಣೀಭೂತನಾಗಲಾರನೆಂದು ಆಶಿಸಿ ಅವನು ಕೂಡಲೆ ಸೈದ್‌ನನ್ನು ವಾಪಸುಕಳಿಸಬೇಕೆಂದು ಕೇಳಿದ.

ಪತ್ರವನ್ನು ಇಡಲ್‌ಕಾವ್‌ನಿಗೆ ಓದಿ ಹೇಳಿದ ತಕ್ಷಣ ಅವನು ತನ್ನ ಕಾಝಿಗಳನ್ನು ಮತ್ತು ಮಂತ್ರಾಲೋಚನೆ ಸಭೆಯವರನ್ನು ಕರೆಕಳಿಸಿದ ಮತ್ತು ರಾಜನಿಂದ ಬಂದ ಪತ್ರವನ್ನು ಓದಲು ಅವರಿಗೆ ಹೇಳಿದ. ಅದರ ಬಗೆಗೆ ಅನೇಕ ಸಲಹೆಗಳನ್ನು ಮಾಡಲಾಯಿತು. ಎಲ್ಲದರ ಕೊನೆಗೆ ಅವನು ಅವನನ್ನು (ಸೈದ್‌ನನ್ನು) ಅವನಲ್ಲಿಗೆ (ಬಿಸ್ನಗದ ರಾಜ) ಕಳಿಸಿಕೊಡ ಬಾರದೆಂದು ಒಪ್ಪಿತವಾಯಿತು. ಏಕೆಂದರೆ, ಅವನು (ಸೈದ್) ಧರ್ಮದಲ್ಲಿ ಪಂಡಿತನು ಮತ್ತು ಮಾಫುಂದೊ[12]ನಿಗೆ ಸಂಬಂಧಿಕನೆಂದು ಅವರು ಹೇಳಿದರು. ಇಡಲ್‌ಕಾವ್ ತನ್ನ ಕ್ರಮವನ್ನು ಮರೆಮಾಚಲು, ಅವನು ತನ್ನ ಹತ್ತಿರವಿಲ್ಲ ಮತ್ತು ಅವನ ಬಗೆಗೆ ತನಗೇನೂ ತಿಳಿಯದೆಂದು ತೋರಿಸಲೋಸುಗ ಆ ಸೈದ್‌ನಿಗೆ ದಾಬುಲ್ ಅನ್ನು ನೀಡಿದ. ಆ ದಾಬುಲ್ ಪಟ್ಟಣದಿಂದ ಸೈದ್ ಓಡಿಹೋದ : ಅವನ ಬಗೆಗೆ ಹೆಚ್ಚಿಗೆ ಏನೂ ಅವರಿಗೆ ತಿಳಿದಿರಲಿಲ್ಲ. ರಾಜನಿಂದ ಬಂದಿದ್ದವರು ಇಡಲ್‌ಕಾವ್‌ನ ಉತ್ತರ ಪಡೆದು ಮರಳಿದಾಗ ರಾಜ ಅದರಿಂದ ಬಹಳ ಕೋಪಗೊಂಡ ಮತ್ತು ಶಾಂತಿ ಮುರಿದುಬಿತ್ತೆಂದು ಭಾವಿಸಿದ. ಅವನು ಕೂಡಲೆ ತನ್ನೆದುರು ಬಂದು ಸೇರುವಂತೆ ತನ್ನ ಮಂತ್ರಾಲೋಚನ ಮಂಡಳಿಯ ಮಹಾಪ್ರಭುಗಳಿಗೆಲ್ಲ ಅಜ್ಞಾಪಿಸಿದ. ಮತ್ತು ಎಲ್ಲರಿಗೂ ಕೇಳುವಂತೆ ಪತ್ರವನ್ನು ಗಟ್ಟಿಯಾಗಿ ಓದಿಸಿದ. ತಾನು ಪೂರ್ಣ ಸೇಡು ತೀರಿಸಿಕೊಳ್ಳಲು ನಿರ್ಧರಿಸಿರುವುದರಿಂದ ಅದನ್ನು ಓದಲಾದ ತಕ್ಷಣ ಅವನು ಅವರಿಗೆ ಹೆಚ್ಚಿನ ಗಲಿಬಿಲಿಯಿಲ್ಲದೆ ಸನ್ನದ್ಧರಾಗಲು ಹೇಳಿದ. ಆದರೆ, ಇಷ್ಟು ಚಿಕ್ಕ ಧನಮೊತ್ತಕ್ಕಾಗಿ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದಲ್ಲವೆಂದೂ, ಪ್ರಪಂಚದಾದ್ಯಂತ ಏನು ಮಾತಾಡಿಕೊಂಡಾರೆಂಬುದನ್ನು ಗಮನಿಸಬೇಕೆಂದೂ, ಇಷ್ಟು ಸಣ್ಣ ಕಾರಣಕ್ಕಾಗಿ ಇಷ್ಟು ಸುದೀರ್ಘ ಕಾಲದ ಶಾಂತಿಯನ್ನು ಮುರಿಯಲು ಪಣ ತೊಟ್ಟಿರುವುದಾದರೆ ಯಾವುದೆ ಮೂರನಲ್ಲಿ ಎಂದೂ ನಿಷ್ಠೆ ಎನ್ನುವುದು ಇದ್ದಿರಲಾರದೆಂಬುದನ್ನು ನೆನಪಿಸಿಕೊಳ್ಳಬೇಕೆಂದೂ, ಸೈದ್ ಗೈದುದರಲ್ಲಿ ಇತರರೂ ಬಾಧ್ಯಸ್ಥರೆಂದೂ, ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹೂಡಿದ ಯುದ್ಧಕ್ಕೆ ಸೈದ್ ಬರುವ ಧಾರ್ಷ್ಟ್ಯ ತೋರಿಸಿದ್ದಾದರೆ[13] ಅವನೊಂದಿಗೆ ಇದ್ದವರೆಲ್ಲ ಸಾಯುವುದು ಒಳಿತೆಂದೂ, ಆದರೆ ಸೈದ್ ಸೈನ್ಯದಿಂದ ತುಂಬ ದೂರವುಳಿಯುವುದಾಗಿ ತಮಗೆ ಗೊತ್ತಿರುವುದೆಂದೂ[14] ಮಂತ್ರಾಲೋಚಕರು ರಾಜನಿಗೆ ಸಲಹೆಯಿತ್ತರು.

ಆದಾಗ್ಯೂ, ಯುದ್ಧ ಮಾಡುವ ತನ್ನ ನಿರ್ಧಾರದಿಂದ ರಾಜ ವಿಚಲಿತನಾಗದುದನ್ನು ಕಂಡು ಮಂತ್ರಾಲೋಚಕರು ಅವನಿಗೆ ಹೀಗೆ ಸಲಹೆಯಿತ್ತರು : “ಸ್ವಾಮಿ, ಆ ದಾರಿಯ ಮೂಲಕ (ದಾಬುಲ್) ಯುದ್ಧಕ್ಕೆ ಹೋಗದೆ ಹಿಂದೆ ಈ ರಾಜ್ಯದ ಭಾಗವಾಗಿದ್ದ ಆದರೆ, ಈಗ ಇಡಲ್‌ಕಾವ್‌ನಿಗೆ ಸೇರಿದ ರಾಚೋಲ್ ಮೇಲೆ ಸಾಗಿರಿ; ಆಗ  ಇಡಲ್‌ಕಾವ್ ಅದನ್ನು ರಕ್ಷಿಸಲು ಧಾವಿಸಿ ಬರದೆ ಗತ್ಯಂತರವಿಲ್ಲ ಮತ್ತು ಈ ರೀತಿ ನೀವು ಒಬ್ಬನ ಮತ್ತು ಇನ್ನೊಬ್ಬನ ಮೇಲೂ ಸೇಡು ತೀರಿಸಿಕೊಳ್ಳುವಿರಿ”. ಈ ಸಲಹೆ ಸರಿಯೆಂದು ಭಾವಿಸಿ ರಾಜ ಮಾದ್ರೆಮಲುಕೊ, ಮತ್ತು ಡೆಮೆಲಿನೊ, ಮತ್ತು ದೆಸ್ತುರ್ವಿರಿದೊ[15] ಮತ್ತು ಇನ್ನಿತರ ಉನ್ನತ ದೊರೆಗಳಿಗೆ ಪತ್ರ ಬರೆದು ಇಡಲ್‌ಕಾವ್‌ನ ಬಗೆಗೆ ಏನು ಘಟಿಸಿತ್ತೆಂಬುದನ್ನು ಮತ್ತು ಹೇಗೆ ತಾನು ಅವನೊಂದಿಗೆ ಯುದ್ಧ ಮಾಡಲು ನಿರ್ಧರಿಸಿದುದನ್ನು ತಿಳಿಸಿದ. ಅವನು ಸರಿಯಾಗಿಯೆ ನಡೆದುಕೊಳ್ಳುತ್ತಿರುವುದಾಗಿ ಮತ್ತು ತಮಗೆ ಶಕ್ಯವಿದ್ದಷ್ಟು ಅವನಿಗೆ ಸಹಾಯ ಮಾಡುವುದಾಗಿ ಆ ದೊರೆಗಳಿಂದ ಉತ್ತರ ಬಂದವು. ಝೆಮೆಲುಕೊನಿಗಾದರೊ ಹರಿಕಾರರು ಈ ಉತ್ತರ ಮುಟ್ಟಿಸಿದಾಗ ಇಡಲ್‌ಕಾವ್‌ನನ್ನು ಮದುವೆಯಾಗಿದ್ದ ತನ್ನ ಸಹೋದರಿಯ ನೆರವಿಗೆ ಕೆಲವು ಸೈನಿಕರನ್ನು ಕಳಿಸದಿರಲು ಯಾವ ನೆಪವೂ ದೊರೆಯಲಿಲ್ಲ.

ರಾಜ ಆ ದೊರೆಗಳಿಗೆ ಪತ್ರ ಕಳಿಸಿದುದು ಜಾಣ್ಮೆಯ ಕೆಲಸವಾಗಿತ್ತು. ಏಕೆಂದರೆ, ಅವರನ್ನು ತನ್ನ ಪಕ್ಷಕ್ಕೆ ಸೆಳೆದುಕೊಳ್ಳಲೋಸುಗ ತಾನು ಏನು ಮಾಡ ಹೊರಟಿರುವ ನೆಂಬುದನ್ನು ಅವರಿಗೆ ತಿಳಿಸಿದನು. ಸೈನಿಕರ ವಿಷಯದಲ್ಲಂತೂ ಅವನಿಗೆ ಅವಶ್ಯಕತೆ ಯಿರಲಿಲ್ಲ. ಕನಿಷ್ಠ ಪಕ್ಷ ಅವರ ಸಮ್ಮತಿಯಾದರೂ ಇರಲೆಂದು ಹಾಗೆ ಮಾಡಿದ. ಏಕೆಂದರೆ, ಅವರು ಇಡಲ್‌ಕಾವ್‌ನನ್ನು ಕೂಡಿಕೊಂಡಿದ್ದರೆ ತಾನು (ರಾಜ) ಈಗ ಮಾಡಿದಂತೆ ಅವನನ್ನು ಗೆಲ್ಲಲಾಗುತ್ತಿರಲಿಲ್ಲ. ಆದರೆ, ಅವನು ಅವರೆಲ್ಲರಿಗಿಂತ ಬಲಿಷ್ಠ ದೊರೆಯಾಗಿದ್ದುದರಿಂದ ಇಡಲ್‌ಕಾವ್‌ನನ್ನು ಅವರೆಲ್ಲ ದ್ವೇಷಿಸುತ್ತಿದ್ದುದರಿಂದ (ಏಕೆಂದರೆ, ಮೂರರ ಮಧ್ಯೆ ವಿಶ್ವಾಸವಿರುವುದಿಲ್ಲ ಮತ್ತು ಅವರು ನಾಯಿಗಳಂತೆ ಒಬ್ಬರನ್ನೊಬ್ಬರು ಕಚ್ಚುತ್ತಾರೆ ಮತ್ತು ಒಬ್ಬರು ಇನ್ನೊಬ್ಬರು ನಾಶವಾಗುವುದನ್ನು ಇಷ್ಟಪಡುತ್ತಾರೆ). ನೀವು ಮುಂದೆ ನೋಡಲಿರು ವಂತೆ ಒಂದು ಸಾವಿರ ಐನೂರ ಇಪ್ಪತ್ತೆರಡನೆಯ ಇಸ್ವಿ ಮೇಲೆ ತಿಂಗಳಲ್ಲಿ ಅಮವಾಸ್ಯೆಯ ದಿನ[16] ಅವನನ್ನು ಗೆಲ್ಲಲಾಯಿತು.

ರಾಜ ಪ್ರಾರ್ಥನೆ ಸಲ್ಲಿಸಿ ತ್ನ ದೇವತೆಗಳಿಗೆ ಬಲಿ ನೀಡಿದ ನಂತರ ತನ್ನೆಲ್ಲ ಸೈನಿಕರೊಂದಿಗೆ ಬಿಸ್ನಗದಿಂದ ಹೊರಟ, ಮತ್ತು ಅವರು ಕೆಳಗೆ ವಿವರಿಸಿದ ಕ್ರಮದಲ್ಲಿ ಸಾಗಿದರು. ರಕ್ಷಣಾ ಪಡೆಯ ಮುಖ್ಯಸ್ಥ ಮೂವತ್ತು ಸಾವಿರ ಕಾಲಾಳುಗಳ – ಬಿಲ್ಲುಗಾರರು, ಗುರಾಣಿಯವರು, ಮತ್ತು ತುಬಾಕಿಯವರು, ಮತ್ತು ಭಲ್ಲೆಯವರು ಮತ್ತು ಒಂದು ಸಾವಿರ ಅಶ್ವಾಳುಗಳು ಮತ್ತು ತನ್ನ ಆನೆಗಳ ಮುಂಚೂಣಿಯ ನಾಯಕತ್ವ ವಹಿಸಿದ. ಅವನ ಹಿಂದೆ ಐವತ್ತು ಸಾವಿರ ಕಾಲಾಳು ಮತ್ತು ಎರಡು ಸಾವಿರ ಅಶ್ವ ಮತ್ತು ಇಪ್ಪತ್ತು ಆನೆಗಳೊಂದಿಗೆ ತ್ರಿಂಬಿಕರ ನಡೆದ. ಅವನ ಹಿಂದೆ ತಿಮಪನಾಯಿಕ ನಡೆದ; ಅವನೊಂದಿಗೆ ಅರವತ್ತು ಸಾವಿರ ಕಾಲಾಳು ಮತ್ತು ಮೂರು ಸಾವಿರದ ಐನೂರು ಅಶ್ವಗಳು ಮತ್ತು ಮೂವತ್ತು ಆನೆಗಳು ಇದ್ದವು; ಅವನ ಹಿಂದೆ ಒಂದು ನೂರು ಸಾವಿರ ಕಾಲಾಳು ಮತ್ತು ಐದು ಸಾವಿರ ಅಶ್ವಗಳು ಮತ್ತು ಐವತ್ತು ಆನೆಗಳೊಂದಿಗೆ ಅದಪನಾಯಿಕ ನಡೆದ. ಅವನ ಹಿಂದೆ ಕೊಂಡಮಾರ[17]ನಿದ್ದ ಮತ್ತು ಅವನೊಂದಿಗೆ ನೂರಿಪ್ಪತ್ತು ಸಾವಿರ ಕಾಲಾಳು ಮತ್ತು ಐದು ಸಾವಿರ ಅಶ್ವಗಳು ಮತ್ತು ಐವತ್ತು ಆನೆಗಳಿದ್ದವು; ಅವನ ಹಿಂದೆ ಬಿಸ್ನಗ ನಗರದ ಅಧಿಪತಿಯಾದ ಒಗೆಮ್‌ದ್ರಹೊ[18] ತನ್ನ ಬಲಗಳೊಂದಿಗೆ. ಅವನೊಂದಿಗೆ ಒಂದು ಸಾವಿರ ಅಶ್ವಾಳು ಮತ್ತು ಮೂವತ್ತು ಸಾವಿರ ಕಾಲಾಳು ಮತ್ತು ಹತ್ತು ಆನೆಗಳುಳ್ಳ ಅವನ ದಳವಾಯಿಗಳಲೊಬ್ಬನಿದ್ದ. ಅವನ ಹಿಂದೆ ರಾಜನಿಗೆ ಪ್ರಿಯರಾದ ಮೂವರು ಬೀಜವೊಡೆದ ಗಂಡಸರು, ಅವರು ನಲವತ್ತು ಸಾವಿರ ಕಾಲಾಳು ಮತ್ತು ಒಂದು ಸಾವಿರ ಅಶ್ವಾಳು ಮತ್ತು ಹದಿನೈದು ಆನೆಗಳನ್ನು ಪಡೆದಿದ್ದರು. ರಾಜನ ಅಡಿಕೆಯ ಸೇವೆಯಲ್ಲಿದ್ದ ಯುವಪರಿಚಾರಕ[19]ನೊಂದಿಗೆ ಹದಿನೈದು ಸಾವಿರ ಕಾಲಾಳು ಮತ್ತು ಎರಡುನೂರು ಅಶ್ವಾಳುಗಳಿದ್ದು ಆನೆಗಳಿರಲಿಲ್ಲ. ಕೊಮಾರಬರ್ಕ[20]ನೊಂದಿಗೆ ಎಂಟು ಸಾವಿರ ಕಾಲಾಳು ಮತ್ತು ನಾನೂರು ಅಶ್ವಾಳು ಮತ್ತು ಇಪ್ಪತ್ತು ಆನೆಗಳಿದ್ದವು. ಬೆಂಗಾಪುರದ ದೊರೆಯ ಜನ ಅಸಂಖ್ಯರಾಗಿದ್ದ ಡೋಮರ ಜನರೊಂದಿಗೆ ಬೇರೆ ಮಾರ್ಗದಿಂದ ಬಂದರು; ಮತ್ತು ಇದೇ ರೀತಿ ಹತ್ತು ಹನ್ನೆರಡು ಸಾವಿರ ಯೋಧರುಳ್ಳ ಇತರ ದಳವಾಯಿಗಳೂ ನಡೆದರು. ಅವರ ಹೆಸರುಗಳು ನನಗೆ ಗೊತ್ತಿರದ್ದರಿಂದ ನಾನಿಲ್ಲಿ ಹೇಳುವುದಿಲ್ಲ. ರಾಜ ತನ್ನ ರಕ್ಷಣಾಪಡೆಯಿಂದ ತನ್ನ ರಾಜ್ಯ ದಲ್ಲಿಯೆ ಅತ್ಯುತ್ತಮವಾಗಿದ್ದ ಆರು ಸಾವಿರ ಅಶ್ವಾಳು ಮತ್ತು ನಲವತ್ತು ಸಾವಿರ ಕಾಲಾಳುಗಳನ್ನು ತೆಗೆದುಕೊಂಡು ಹೊರಟ ; ಗುರಾಣಿಗಳುಳ್ಳವರು, ಬಿಲ್ಲುಗಾರರು ಮತ್ತು ಮೂನ್ನೂರು ಆನೆಗಳು.

ಎಲ್ಲರೂ ಚೆನ್ನಾಗಿ ಶಸ್ತ್ರಸಜ್ಜಿತರಾಗಿದ್ದರು, ಪ್ರತಿಯೊಬ್ಬನೂ ತನ್ನದೆ ರೀತಿಯಲ್ಲಿ; ಬಿಲ್ಲುಗಾರರು ಮತ್ತು ತುಬಾಕಿದಾರರು ತಮ್ಮ ರಜಾಯಿ ಕಪನಿಗಳಿಂದ ಮತ್ತು ಗುರಾಣಿದಾರರು ತಮ್ಮ ಟೊಂಕಗಳಲ್ಲಿ ಕತ್ತಿಗಳು ಮತ್ತು ಕಠಾರಿಗಳೊಂದಿಗೆ. ಗುರಾಣಿಗಳು ಎಷ್ಟು ದೊಡ್ಡವಿವೆಯೆಂದರೆ ಸಂಪೂರ್ಣ ಮರೆಮಾಡಿದ ದೇಹವನ್ನು ಸಂರಕ್ಷಿಸಲು ಚಿಲಕತ್ತಿನ ಅವಶ್ಯಕತೆಯಿಲ್ಲ ; ಕುದುರೆಗಳು ಸಂಪೂರ್ಣ ಜೂಲಗಳಲ್ಲಿ ಮತ್ತು ಅಶ್ವಾಳುಗಳು ರಜಾಯಿ ಅಂಗಿಗಳಲ್ಲಿ ಮತ್ತು ತಮ್ಮ ಕೈಗಳಲ್ಲಿ ಆಯುಧಗಳೊಂದಿಗೆ ಮತ್ತು ತಮ್ಮ ತಲೆಯ ಮೇಲೆ ತಮ್ಮ ಅಂಗಿಗಳಂತಹವೆ ಅರಳೆಯ ರಜಾಯಿಯ ತುರಾಯಿಗಳೊಂದಿಗೆ, ಯುದ್ಧದ ಆನೆಗಳು ತಮ್ಮ ಅಂಬಾರಿಗಳೊಂದಿಗೆ ಹೋಗುತ್ತವೆ. ಅವುಗಳಲ್ಲಿ ಕುಳಿತು ನಾಲ್ವರು ನಾಲ್ಕೂ ಬದಿಗೆ ಕಾದುತ್ತಾರೆ. ಆನೆಗಳನ್ನು ಸಂಪೂರ್ಣವಾಗಿ ಜೂಲಗಳಿಂದ ಹೊಚ್ಚಲಾಗಿ ರುತ್ತದೆ ಮತ್ತು ಅವುಗಳ ಕೋರೆಗಳಿಗೆ ಬಹಳ ಸಾಣಿ ಹಿಡಿದ ಮತ್ತು ಹರಿತಗೊಳಿಸಿದ ಚೂರಿಗಳನ್ನು ಕಟ್ಟಲಾಗಿರುತ್ತದೆ. ಅವುಗಳಿಂದ ಅವು ಬಹಳ ಹಾನಿ ಮಾಡುತ್ತವೆ. ಹಲವು ತೋಪುಗಳನ್ನು ಒಯ್ಯಲಾಗಿತ್ತು. ನಾನಿಲ್ಲಿ ಅಸಂಖ್ಯರಾಗಿದ್ದ ಅಗಸರ ಬಗೆಗಾಗಲಿ ಸೈನ್ಯ ದೊಡನೆ ಬಂದ ವೇಶ್ಯೆಯರ ಬಗೆಗಾಗಲಿ ಹೇಳುವುದಿಲ್ಲ; ರಾಜನ ಪಯಣದಲ್ಲಿ ಅವನೊಂದಿಗೆ ಅವರು ಇಪ್ಪತ್ತು ಸಾವಿರ ಇದ್ದರು. ಇಷ್ಟು ದೊಡ್ಡ ಸಂಖ್ಯೆಯ ಜನರು ಒಯ್ಯುವ ಸಾಮಾನು ಸರಂಜಾಮನ್ನು ಯಾರಾದರೂ ಕಲ್ಪಿಸಿಕೊಳ್ಳಬಹುದು. ರಾಜನೊಂದಿಗೆ ಹಿಂಗಡೆಯಲ್ಲಿ ಆದರೆ ಯಾವಾಗಲೂ ಅವನ ಮುಂದೆ ರಸ್ತೆಯ ಮೇಲೆ ಹತ್ತು ಹನ್ನೆರಡು ಸಾವಿರದಷ್ಟು ಜನ ತಮ್ಮ ಪಕಾಲಿಗಳೊಂದಿಗೆ ನೀರನ್ನರಸಿ ಹೋಗುತ್ತಾರೆ ಮತ್ತು ಯಾರಿಗೆ ನೀರು ತಂದುಕೊಡಲು ಯಾರೂ ಇರುವುದಿಲ್ಲವೊ ಅವರಿಗೆ ನೀರುಣಿಸಲೋಸುಗ ರಸ್ತೆಗುಂಟ ಇರುತ್ತಾರೆ; ನೀರಡಿಕೆಯಿಂದ ಯಾರೂ ಸಾಯಬಾರದೆಂದು ಹೀಗೆ ಮಾಡಲಾಗುತ್ತದೆ. ಇದೆಲ್ಲಾ ಜನಸಮುದಾಯದ ಮೂರು ನಾಲ್ಕು ಹರದಾರಿ ಮುಂದೆ, ಅಗ್ರಚಾರರಂತಿದ್ದ ಸುಮಾರು ಐವತ್ತು ಸಾವಿರ ಜನ ಹೋಗುತ್ತಾರೆ. ಅವರು ಮುಂದಿರುವ ಪ್ರದೇಶವನ್ನು ರಹಸ್ಯಾನ್ವೇಷಣ ಮಾಡಬೇಕು ಮತ್ತು ಯಾವಾಗಲೂ ಅಷ್ಟು ಅಂತರ ಕಾಯ್ದುಕೊಳ್ಳಬೇಕು ; ಮತ್ತು ಅವರ ಇಕ್ಕೆಲಗಳಲ್ಲಿ ಆ ನಾಡಿನ ಅಶ್ವದಳದ ಎರಡು ಸಾವಿರ ಕುದುರೆಗಿರುತ್ತವೆ. ಇವರೆಲ್ಲ ಬಿಲ್ಲು ಗಾರರಿದ್ದು ಯಾವಾಗಲೂ ಅಗ್ರಚಾರರಿಗಿಂತ ಮುಂದೆ ಅವರ ಇಕ್ಕೆಲಗಳಲ್ಲಿ ನಡೆದಿರುತ್ತಾರೆ.

ನಾನು ಹೇಳಿರುವ ಈ ಕ್ರಮದಲ್ಲಿ ಅವರು ಬಿಸ್ನಗ ನಗರದಿಂದ ತೆರಳಿದರು, ಮತ್ತು ಅವರೊಂದಿಗೆ ಇತರ ಅನೇಕರೊಂದಿಗೆ ಅಧಿಕ ಸಂಖ್ಯೆಯ ವರ್ತಕರು ಇದ್ದರು. ಅವರು ಎಲ್ಲ ಪೂರೈಕೆಗಳೊಂದಿಗೆ ಆಗಲೆ ಮುಂದೆ ಸಾಗಿದ್ದರು ; ಇದರಿಂದಾಗಿ ನೀವು ಎಲ್ಲಿಯೆ ಇರಲಿ ನಿಮಗೆ ಬೇಕಾದುದೆಲ್ಲ ತಕ್ಷಣ ಸಿಗುತ್ತದೆ. ಪ್ರತಿ ದಳವಾಯಿ ತನ್ನದೆ ವರ್ತಕರನ್ನು ಹೊಂದಿರುತ್ತಾನೆ. ಅವರು ಅವನೆಲ್ಲ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಬೇಕು. ಮತ್ತು ಅದೇ ರೀತಿಯಲ್ಲಿ ಅವರು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಾರೆ.

ರಾಜನ ಪದ್ಧತಿಯಂತೆ, ಅವನು ಒರಗಿ ನಿದ್ದೆಗೈಯ್ಯಬಯಸಿದಾಗ, ಅವರು ಅವನಿಗಾಗಿ ಪೊದೆ ಮತ್ತು ಮುಳ್ಳುಗಳ ಬೇಲಿ ನಿರ್ಮಿಸಿ ಅದರ ಹಿಂದೆ ಅವನ ಡೇರೆ ನಿಲ್ಲಿಸುತ್ತಾರೆ. ಈ ಮಾರ್ಗದುದ್ದಕ್ಕೂ ಹೀಗೆ ಮಾಡಲಾಯಿತು. ಆ ಮಾರ್ಗದಲ್ಲಿ ಒಂದು ಅದ್ಭುತ ದೃಶ್ಯ ಕಂಡಿತು. ಅದೆಂದರೆ, ಒಂದು ನದಿ ದಾಟಲು ಅವರು ಅದನ್ನು ತಲುಪಿದಾಗ ಅದು ಅರ್ಧ ಮೊಣಕಾಲವರೆಗೆ ಬಂತು. ಅರ್ಧ ಜನ ದಾಟುವಷ್ಟರಲ್ಲಿ ಅದು ಒಂದೂ ಹನಿ ನೀರಿಲ್ಲದಂತೆ ಸಂಪೂರ್ಣ ಒಣಗಿತು ಮತ್ತು ಸ್ವಲ್ಪ ನೀರು ಹುಡುಕಲೊಸುಗ ಅವರು ಅದರ ಮಳಲಿನಲ್ಲಿ ತಗ್ಗು ತೋಡತೊಡಗಿದರು. ಈ ಕ್ರಮದಲ್ಲಿ ರಾಜ ಮೊಲ್ಲಬಂಡಿಮ್[21] ಪಟ್ಟಣ ತಲುಪುವವರೆಗೆ ಸಾಗಿದ. ಅದು ರಾಚೋಲದಿಂದ ಒಂದು ಹರದಾರಿ ದೂರವಿದೆ. ಜನರಿಗೆ ಸೇನಾ ಪಯಣದ ನಂತರ ವಿಶ್ರಾಂತಿ ನೀಡಲೆಂದು ಅವನು ಅಲ್ಲಿ ಬಿಡಾರ ಹೂಡಿದ. ರಾಜನು ಮೊಲ್ಲಬಂಡಿಮ್ ನಗದಲ್ಲಿದ್ದುಕೊಂಡು ರಾಚೋಲ್‌ನ ಮುತ್ತಿಗೆಗೆ ಅಗತ್ಯವಿದ್ದ ಎಲ್ಲವನ್ನೂ ಹವಣಿಸುತ್ತಿದ್ದಾಗ ಬಿಸ್ನಗ ರಾಜನ ಜನರು ಮತ್ತು ಡೋಮಾರದ ಜನರು ಮತ್ತು ಅಸಂಖ್ಯ ಜನರೊಡಗೂಡಿದ ಇನ್ನೂ ಅನೇಕ ದಳವಾಯಿಗಳು ಅವನಲ್ಲಿಗೆ ಬಂದರು. ಅವರು ಬಂದು ಸೇರಿ ಎಲ್ಲವನ್ನೂ ಕ್ರಮಗೊಳಿಸಿದ ಕೂಡಲೆ ಬ್ರಾಹ್ಮಣರು ತಮ್ಮ ಆಚರಣೆಗಳನ್ನು ಮತ್ತು ಯಜ್ಞಗಳನ್ನು ಮುಗಿಸಿದ ಮೇಲೆ ಅವರು ರಾಜನಿಗೆ ಈಗ ಸಮಯ ಯೋಗ್ಯವಾಗಿರುವುದೆಂದು, ದೇವಾಲಯಗಳು ಅವನಿಗೆ ವಿಜಯಸೂಚನೆಯನ್ನು ಕೊಟ್ಟಿರುವುವೆಂದು ಮತ್ತು ಅವನು ಮುಂದೆ ಸಾಗಬೇಕೆಂದು ಹೇಳಿದರು.

ಆಗ ಅವರು ರಾಜಸೇವೆಯಲ್ಲಿದ್ದ ಮೂರರನ್ನು ಮುಂಚೂಣಿಗೆ ಮಾರ್ಗ ತೋರಲು ಕಳಿಸಿದನು. ರಕ್ಷಣಾದಳದ ಅಧಿಪತಿ ಕಾಮಾನಾಯಕ, ರಾಚೋಲ್ ನಗರದ ಕಂದಕಗಳಿಗೆ ತೀರ ಹತ್ತಿರದಲ್ಲಿ ಬಿಡಾರ ಹೂಡಿದ ಮತ್ತು ಇತ್ತ ಆಜ್ಞೆಗನುಸಾರವಾಗಿ ಪ್ರತಿಯೊಬ್ಬ ದಳವಾಯಿ ತನ್ನ ಜನರನ್ನು ನಿಲ್ಲಿಸಿದ. ನಗರದ ಜನರು ಅವರನ್ನು ತಮ್ಮಲ್ಲಿದ್ದ ಭಾರಿ ತೋಪುಗಳಿಂದ, ಬಂದೂಕುಗಳಿಂದ ಹೊಡೆದರು, ಅನೇಕ ಗುಂಡುಗಳಿಂದ ಮತ್ತು ಅನೇಕ ಬಾಣಗಳು ಮತ್ತು ತುಬಾಕಿ ಗುಂಡುಗಳಿಂದ ಎದುರುಗೊಂಡರು. ಅದರಿಂದಾಗಿ, ಕಂದಕಗಳಿಗೆ ತೀರ ಹತ್ತಿರ ಬಂದಿದ್ದ ದಾಳಿಗಾರರು ಭಾರಿ ನಷ್ಟ ಅನುಭವಿಸಿದರು ಮತ್ತು ಹಿಂದೆ ಸರಿಯಲು ಇಚ್ಛಿಸಿದ್ದರು. ತಾನು ಬೇಗ ನಗರದೊಳಗೆ ಪ್ರವೇಶ ಪಡೆಯುವಂತಿರದಿದ್ದರೆ ತಾನು ಅವರನ್ನು ಅಲ್ಲಿಗೆ ಕಳಿಸುತ್ತಿರಲಿಲ್ಲ, ಹಾಗಾಗದಿದ್ದ ಪಕ್ಷದಲ್ಲಿ ಅವರೆಲ್ಲ ಸಾಯಬೇಕು ಎಂದು ಹೇಳುತ್ತ ರಾಜ ಅವರು ಹಿಂದೆ ಸರಿಯಲು ಅನುಮತಿ ನೀಡಲಿಲ್ಲ. ಹೀಗಾಗಿ, ಅವನ ಸೈನಿಕರು ನಗರದ ಮೇಲೆ ಆಕ್ರಮಣ ಮಾಡಲೇಬೇಕಾಯಿತು ಮತ್ತು ಅವರು ಅನೇಕ ಧೀರ ಮತ್ತು ಗಂಭೀರ ಕದನಗಳಲ್ಲಿ ಹಾಗೆಯೆ ಮಡಿದರು. ಇವುಗಳಲ್ಲಿ ಅವರಲ್ಲನೇಕರು ಅಸುನೀಗಿದರು. ಏಕೆಂದರೆ, ಭದ್ರ ಸ್ಥಾನದಲ್ಲಿದ್ದ ನಗರದೊಳಗಿನವರಿಗೆ ತಮ್ಮ ರಕ್ಷಣೆಗಾಗಿ ಏನೆಲ್ಲ ಮಾಡಬೇಕೆಂದು ಚೆನ್ನಾಗಿ ಗೊತ್ತಿತ್ತು. ಅದೇ ಸಮಯಕ್ಕೆ ರಾಜನ ಪಡೆಗಳು ನಗರದ ಮೇಲಿನ ದಾಳಿಯನ್ನು ನಿಲ್ಲಿಸಲಿಲ್ಲ. ಸತ್ತ ಸೈನಿಕರ ಸಂಖ್ಯೆಯನ್ನು ಗಮನಿಸಿ ದಾಳಿ ಎಷ್ಟು ದುರ್ಬಲವಾಗಿ ನಡೆದಿತ್ತೆಂದು ಅರಿತ ದಳವಾಯಿಗಳು ಧಾರಾಳವಾದ ಕಾಣಿಕೆಗಳು ಮತ್ತು ಯುಕ್ತಿಗಳನ್ನು ಆಶ್ರಯಿಸಿದರು. ಅದು ಹೀಗೆ : ಅವರು (ಸೈನಿಕರಿಂದ) ಗೋಡೆಗಳಿಂದ ಗೋಪುರಗಳಿಂದ ಕಿತ್ತುತಂದ ಹರಳುಗಳನ್ನು ಕೊಂಡುಕೊಳ್ಳತೊಡಗಿದರು ಮತ್ತು ಹರಳಿನ ಮೌಲ್ಯದನ್ವಯ ಹಣ ನೀಡತೊಡಗಿದರು. ಹರಳುಗಳು ಹತ್ತು, ಇಪ್ಪತ್ತು, ಮೂವತ್ತು, ನಲವತ್ತು ಮತ್ತು ಐವತ್ತು ಫನಮ್[22] ಕಿಮ್ಮತ್ತಿನವು ಇದ್ದವು. ಈ ಯುಕ್ತಿಯಿಂದ ಅವರು ಅನೇಕ ಕಡೆ ಗೋಡೆಯನ್ನು ಕೆಡವಲು ಉಪಾಯ ಮಾಡಿದರು ಮತ್ತು ಅದರಲ್ಲಿದ್ದ ಸೈನಿಕರು ಎಂಥ ಆಯ್ದ ಜನರು ಮತ್ತು ಯುದ್ಧದ ರೂಢಿಯಿದ್ದವರು ಆಗಿದ್ದರೆಂದರೆ ಅವರು ರಾಜನ ಅನೇಕ ಸೈನಿಕರನ್ನು ಕೊಂದರು. ಆದರೂ ಸಹ ಅವರು ಯುದ್ಧ ನಿಲ್ಲಿಸಲಿಲ್ಲ. ಆದರೆ, ದಳವಾಯಿಗಳು ಕೊಡುತ್ತಿದ್ದುದರ ಆಶೆಗಾಗಿ ಅವರು ಪ್ರತಿದಿನ ಮತ್ತು ಪ್ರತಿ ಆಕ್ರಮಣಕ್ಕೂ ಅಧಿಕ ಧೀರರಾದರು. ಏಕೆಂದರೆ, ಅವರನ್ನು ಈ ಮುಂಚೆ ಆವರಿಸಿದ್ದ ಮೃತ್ಯುಭಯವನ್ನು ಅವರಿಂದ ದೂರ ಮಾಡಲು ಹಣ ಶಕ್ತವಾಯಿತು. ಗೋಡೆಯ ಅಡಿಯಿಂದ ಪ್ರತಿ ಹೆಣವನ್ನೂ ಎಳೆದೊಗೆಯಲೂ ಅವರು ಏನಾದರೂ ಕೊಡುತ್ತಿದ್ದರು. ಆದುದರಿಂದ ಇಡಲ್‌ಕಾವ್ ಹೆಚ್ಚಿಗೆ ಸೈನ್ಯ ತರುವವರೆಗೆ ಯುದ್ಧ ಮೂರು ತಿಂಗಳ ಕಾಲ ತಳ್ಳಿಕೊಂಡು ಹೋಯಿತು.

ಈಗ ನಾನು ಪರಿಸ್ಥಿತಿಯ ಬಗೆಗೆ ಮತ್ತು ನಗರದ ಬಗೆಗೆ ಮತ್ತು ಅದರಲ್ಲಿದ್ದ ಜನರ ಬಗೆಗೆ ನೀವು ಹೆಚ್ಚು ತಿಳಿಯಬೇಕೆಂದು ಬಯಸುತ್ತೇವೆ. ಈ ರಾಚೋಲ್ ನಗರ ಎರಡು ದೊಡ್ಡ ನದಿಗಳ ಮಧ್ಯೆ ಮತ್ತು ತೀರ ಚಿಕ್ಕವನ್ನು ಬಿಟ್ಟರೆ ಗಿಡಗಳೆ ಇಲ್ಲದ ಮತ್ತು ದೊಡ್ಡ ಬಂಡೆಗಳಿರುವ ವಿಶಾಲ ಬಯಲಿನ ನಡುವೆ ಇದೆ. ಪ್ರತಿ ನದಿಯಿಂದ ನಗರ ಮೂರು ಹರದಾರಿ ದೂರವಿದೆ. ಇವೆರಡು ನದಿಗಳಲ್ಲೊಂದು ಉತ್ತರ ಗಡಿಯಾಗಿದೆ, ಮತ್ತು ಅದರಾಚೆಗಿನ ಪ್ರದೇಶ ಇಡಲ್‌ಕಾವ್‌ನಿಗೆ ಸೇರಿದೆ, ಮತ್ತು ಇನ್ನೊಂದು ದಕ್ಷಿಣದ ಗಡಿಯಾಗಿದ್ದು ನರಸಿಂಗನ ಗಡಿಯಾಗಿದೆ. ಬಯಲು ಇವೆರಡು ನದಿಗಳ ಮಧ್ಯೆ ಇದೆ ಮತ್ತು ಅದರೊಳಗೆ ದೊಡ್ಡ ಸರೋವರಗಳು ಮತ್ತು ಬಾವಿಗಳು ಮತ್ತು ನಗರ ಸ್ಥಾಪಿತ ವಾಗಿರುವೆಡೆ ಕೆಲವು ಚಿಕ್ಕ ಹೊಳೆಗಳಿವೆ ಮತ್ತು ಸ್ತ್ರೀಯ ಸ್ತನದಂತೆ ಕಾಣುವ ಮತ್ತು ಪ್ರಾಕೃತಿಕವಾಗಿ ರಚಿತವಾಗಿರುವ ಗುಡ್ಡವೊಂದಿದೆ. ಸುಣ್ಣ ರಹಿತವಾದ ಗಟ್ಟಿ ಕಲ್ಲುಕಟ್ಟಡದ ಭದ್ರ ಗೋಡೆಗಳ ಮೂರು ಸುತ್ತುಗಳನ್ನು ನಗರ ಹೊಂದಿದೆ : ಗೋಡೆಗಳನ್ನು ಅರಲಿನಿಂದ ತುಂಬಲಾಗಿದೆ ಮತ್ತು ಅದರ ಅತ್ಯುನ್ನತ ತುದಿಗೆ ಬಲು ಎತ್ತರ ಮತ್ತು ಗಟ್ಟಿಯಾದ ಬರುಜಿನಂತಿರುವ ದುರ್ಗವಿದೆ ; ದುರ್ಗ ನಿಂತಿರುವ ತುದಿಯ ಮೇಲೆ ಇಡಿ ವರ್ಷ ಹರಿಯುವ ನೀರಿನ ಚಿಲುಮೆಯಿದೆ. ಇಷ್ಟು ಎತ್ತರದ ಸ್ಥಳದಲ್ಲಿರುವ ಅದು ಹೇಗೊ ಎಂದೂ ನೀರು ಬತ್ತದಿರುವುದು ಒಂದು ರಹಸ್ಯಗರ್ಭಿತ ಘಟನೆಯೆಂದು ಗ್ರಹಿಸಲಾಗುತ್ತದೆ. ಈ ಚಿಲುಮೆ ಯಲ್ಲದೆ ಅಲ್ಲಿ ನೀರಿನ ಹಲವಾರು ಕೆರೆಬಾವಿಗಳುಂಟು. ಹಾಗಾಗಿ ನೀರಿನ ಕೊರತೆಯಿಂದ ಸೋಲಿಸಲ್ಪಡುವ ಭಯ ನಾಗರಿಕರಿಗೆ ಇರಲಿಲ್ಲ; ಮತ್ತು ನಗರದಲ್ಲಿ ಐದು ವರ್ಷ ಸಾಲುವ ಪೂರೈಕೆಗಳಿದ್ದವು. ಅಲ್ಲಿ ಕಾವಲುದಂಡಾಗಿ ಎಂಟು ಸಾವಿರ ಯೋಧರು ಮತ್ತು ನಾನೂರು ಅಶ್ವಾಳು ಮತ್ತು ಇಪ್ಪತ್ತು ಆನೆಗಳು, ಮತ್ತು ಭಾರಿ ಕಲ್ಲುಗಳನ್ನೆಸೆದು ಬಹಳ ಹಾನಿ ಉಂಟು ಮಾಡುವ ಮೂವತ್ತು ಕವಣೆಯಂತ್ರಗಳು ಇದ್ದವು. ಗೋಡೆಗಳ ಮೇಲಿರುವ ಬರುಜುಗಳು ಎಷ್ಟು ಸಮೀಪವಿವೆಯೆಂದರೆ ಒಂದರಲ್ಲಿ ಆಡಿದ ಮಾತುಗಳು ಇನ್ನೊಂದರಲ್ಲಿ ಕೇಳಿಸುತ್ತವೆ. ಇವುಗಳ ನಡುವೆ ಮತ್ತು ಸುತ್ತಲೂ ಚಿಕ್ಕವುಗಳನ್ನು ಬಿಟ್ಟು ಇನ್ನೂರು ದೊಡ್ಡ ತೋಪುಗಳ ಫಿರಂಗಿದಳ ನಿಲ್ಲಿಸಲಾಗಿದೆ. ನಗರದಲ್ಲಿನ ಯೋಧರಿಗೆ ರಾಜನ ಪಡೆಗಳು ಬಂದುದು ತಿಳಿದ ಕೂಡಲೆ ಮತ್ತು ಕೆಲವು ಸೈನಿಕರೊಂದಿಗೆ ಆಗಮಿಸಿದ ಇಡಲ್‌ಕಾವ್‌ನ ದಳವಾಯಿಯೊಬ್ಬನನ್ನು ಬರಮಾಡಿಕೊಂಡ ನಂತರ ದ್ವಾರಗಳನ್ನು ಕಲ್ಲುಗಚ್ಚುಗಳಿಂದ ಮುಚ್ಚಲಾಯಿತು. ಪ್ರಮುಖ ಕದನ ಜರುಗುವುದು ಪೂರ್ವ ಬದಿಯಲ್ಲಿ. ಏಕೆಂದರೆ, ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಅದು ದೊಡ್ಡ ಕಲ್ಲುಬಂಡೆಗಳ ಮೇಲೆ ನಿಂತಿದ್ದು ಬಹಳ ಭದ್ರವಾಗಿದೆ ಮತ್ತು ನಗರವನ್ನು ಎಲ್ಲ ಬದಿಗಳಿಂದ ಮುತ್ತಲಾಗಿದ್ದು ರಾಜನ ಠಾಣ್ಯ ಪೂರ್ವ ಬದಿಗಿತ್ತು ಮತ್ತು ಹಾಗೆಯೆ ಆಕ್ರಮಣಬಲವೂ.[1]       ಬಹುಶಃ ‘ಬಸವರಾಯ’, ಆದರೆ ಆ ಹೆಸರು ಹೊಂದಿದ ಯಾವ ಕೃಷ್ಣದೇವನ ಸಹೋದರನೂ ಇದುವರೆಗೆ ತಿಳಿದುಬಂದಿಲ್ಲ.

[2]       ರಾಯಚೂರು.

[3]       ಮುದಕಲ್.

[4]       ಉದಯಗಿರಿ.

[5]       ಕೊಂಡವೀಡು

[6]       ಈ ನದಿ ಯಾವುದೆಂದು ನನಗೆ ತಿಳಿಯದು. ನನಗೆ ತಿಳಿದಂತೆ ಕೊಂಡವೀಡಿನ ಹನ್ನೆರಡು ಮೈಲು ಅಥವಾ ಸುತ್ತಮುತ್ತ ಯಾವ ನದಿಯೂ ಇಲ್ಲ.

[7]       ಕೊಂಡಪಲ್ಲೆ.

[8]       ರಾಜಮಂದ್ರಿ, ಮೊದಲ ಅಕ್ಷರ ಆಕಸ್ಮಿಕವಾಗಿ, ಬಹುಶಃ ಲಿಪಿಕಾರನಿಂದ ಬಿಡಲಾಗಿದೆ.

[9]       ಈ ಪ್ರದೇಶವನ್ನು ಗುರುತಿಸಲು ನಾನು ಅಸಮರ್ಥನಾಗಿದ್ದೇನೆ. ನಗರದ ವರ್ಣನೆ ಉತ್ತರ ಆರ್ಕಾಟ್‌ನಲ್ಲಿರುವ ವೆಲ್ಲೊರನ್ನು ಸೂಚಿಸುತ್ತದೆ. ಅಲ್ಲಿರುವ ಉತ್ತಮ ಹಳೆಯ ಕೋಟೆ ಆಳವಾದ ಕಂದಕದಿಂದ ಸುತ್ತುವರಿಯಲ್ಪಟ್ಟಿದೆ. ಸಂಪ್ರದಾಯದನ್ವಯ ಈ ಸ್ಥಳವನ್ನು ಕೃಷ್ಣದೇವರಾಯ ರೆಡ್ಡಿ ದೊರೆಯೊಬ್ಬನಿಂದ ವಶಪಡಿಸಿಕೊಂಡ.

[10]      ಮೂಲಕೃತಿಯಲ್ಲಿ ಖಾಲಿ ಇದೆ.

[11]      ಎಲ್ರೆ ಡಾಕ್ವೆಮ್, ಇದು “ಈ ಬದಿಗಿನ ರಾಜ”ಅಥವಾ “ದಕ್ಖನದ ರಾಜ”ಎಂದು ಆಗಿರ ಬಹುದು. ಮೊದಲಿನದು ಹೆಚ್ಚು ಸಮಂಜಸವಾಗಿ ತೋರುತ್ತದೆ ಮತ್ತು ಉಲ್ಲೇಖ. ಗೋಲ್ಕೊಂಡದ ಸುಲ್ತಾನ ಖುಲಿ ಕುತುಬ್ ಶಾಹನ ಸೈನ್ಯಕ್ಕೆ ಇದೆ ಎಂದು ನನಗೆನಿಸುತ್ತದೆ.

(ಈ ಕಾಲದ ವ್ಯವಹಾರಗಳ ಬಗೆಗೆ ಮೇಲೆ ನೀಡಿದ  ಮಹಮ್ಮದೀಯ ವೃತ್ತಾಂತ ನೋಡಿ :ಪುಟ ೧೪೧-೧೪೪, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[12]      ಮುಹಮ್ಮದ ಮಾಹೊಮತ್ ಅರ್ಥಾತ್  ಅವನು ಪ್ರವಾದಿಯ ವಂಶಸ್ಥನಾಗಿದ್ದ.

[13]      ಗ್ರಂಥಪಾಠ ಇಲ್ಲಿ ಅಸ್ಪಷ್ಟವಾಗಿದೆ.

[14]      “ಸೈದ ಮರ್ಕರ್”ವ್ಯವಹಾರದ ಬಗೆಗೆ ಬ್ಯಾರೊಸ್‌ನ ಕಥನ ಕೆಳಗಿನಂತಿದೆ : ವಿಜಯನಗರ ಮತ್ತು ಬಿಜಾಪುರ ನಡುವಣ ಶಾಂತಿ ಒಡಂಬಡಿಕೆಯ ಷರತ್ತುಗಳನ್ನು ಅಪರಾಧಿಗಳನ್ನು ಮತ್ತು ಸಾಲಗಾರರನ್ನು ಪರಸ್ಪರರ ವಶಕ್ಕೊಪ್ಪಿಸುವುದು ಅವುಗಳಲ್ಲೊಂದಾಗಿತ್ತು. ಉಲ್ಲೇಖಿಸಿದ ನಂತರ ಅವನು ಹೀಗೆ ಬರೆಯುತ್ತಾನೆ :

“ಈ ಬಲೆಯಲ್ಲಿ ಇಡಲ್‌ಕಾವ್‌ನನ್ನು ಹಿಡಿಯಬಹುದೆಂದು ಅರಿತು ಕ್ರಿಸ್ನರಾವ್ ತನ್ನ ಸೇವೆಯಲ್ಲಿ ಅನೇಕ ವರ್ಷಗಳಿದ್ದ ಸೈದ್ ಮರ್ಕರ್ ಎಂಬ ಮೂರನನ್ನು ಕರೆದು ಗೋವಾಕ್ಕೆ ಹೋಗಿ ಪರ್ಶಿಯಾದಿಂದ ಬಂದಿದ್ದವರಿಂದ ಕುದುರೆಗಳನ್ನು ಕೊಳ್ಳಲೋಸುಗ ನಲವತ್ತು ಸಾವಿರ ಪರ್ದಾಒಗಳನ್ನು ತೆಗೆದುಕೊಂಡು ಹೋಗಲು ಆಜ್ಞೆಯಿತ್ತ. ಕ್ರಿಸ್ನರಾವ್ ನಮ್ಮ ದಳವಾಯಿಗೆ ಪತ್ರಗಳನ್ನು ಬರೆದ…, ಆ ವ್ಯವಹಾರ ಎಲ್ಲರಿಗೂ ವ್ಯಾಪಕವಾಗಿ ಗೊತ್ತಾಗಲೆಂಬ ಉದ್ದೇಶದಿಂದ ತನ್ನ ವಶದಲ್ಲಿದ್ದ ದೊಡ್ಡ ಧನಮೊತ್ತದಿಂದ ಪ್ರಲೋಭನಗೊಂಡೋ ಅತವಾ ಹಿಡಲ್‌ಕಾವ್‌ನಿಂದ ಕಳಿಸಲಾಗಿತ್ತೆಂದು ಹೇಳಲಾದ ಪತ್ರದಿಂದ ಪ್ರಭಾವಿತನಾಗಿಯೋ ಗೋವಾದಿಂದ ಮೂರು ಹರದಾರಿ ದೂರವಿರುವ ಪೊಂಡಾ ಎಂಬ ಠಾಣೆದಾರಿಗೆ ಬಂದಾಗ ಅಲ್ಲಿಂದ ಹಿಡಲ್‌ಕಾವ್‌ನಲ್ಲಿಗೆ ಓಡಿಹೋದ. ಅವನು ಆಗಮಿಸಿದ ತಕ್ಷಣ ಹಿಡಲ್‌ಕಾವ್ ಅವನು ಮಾಹಮದ್ ವಂಶದ ಆದರಣೀಯ ವ್ಯಕ್ತಿಯಾದುದರಿಂದ ಅವನಿಗೆ ತಾನು ಠಾಣೆದಾರಿ ಕೊಡಮಾಡಿರುವುದಾಗಿ ಹೇಳಿ ಅವನನ್ನು ಚೌರ್‌ಗೆ ಕಳಿಸಿದ…., ಆದರೆ, ಕೆಲವು ದಿನಗಳಲ್ಲಿ ಅವನು ಅಲ್ಲಿಂದ ಕಾಣೆಯಾದ ಮತ್ತು ಅವನಿಂದ ನಲವತ್ತು ಸಾವಿರ ಪರ್ದಾಒಗಳನ್ನು ತೆಗೆದುಕೊಂಡನಂತರ ರಾಜ ಅವನ ಕೊಲೆ ಮಾಡುವಂತೆ ಆಜ್ಞೆಯಿತ್ತನೆಂದು ಹೇಳಲಾಗುತ್ತದೆ”.

[15]      ‘ಮಾದ್ರೆ’ಎಂದರೆ ಬಿರಾರ್‌ದ ಸುಲ್ತಾನ ಇಮಾದ್ ‘ವಿರಿದೊ’ ಎಂದರೆ ಬೀದರಿನ ಬರೀದ್‌ಶಾಹ. ಕೆಳಗೆ ಉಲ್ಲೇಖಿಸಲಾಗಿರುವಂತೆ ಡೆಮೆಲಿನೊ ಅಥವಾ ದೆಸ್ತುರ್ ಗಳಲ್ಲಿ ಮೊದಲನೆಯದು ‘ಝೆಮೆಲುಕೊ’ನ ಬದಲು ಲಿಪಿಕಾರ ಬಳಸಿದ ತಪ್ಪು ಆಗಿರದಿದ್ದ ಪಕ್ಷದಲ್ಲಿ ನಾನು ಅವುಗಳನ್ನು ಸ್ಪಷ್ಟಪಡಿಸಲಾರೆ. ಹಾಗಿದ್ದ ಪಕ್ಷದಲ್ಲಿ ಅದು ನಿಜಕ್ಕೂ ನಿಜಾಮ ಶಾಹನನ್ನು ಸೂಚಿಸುತ್ತದೆ. ಹಲವಾರು ಪೋರ್ತುಗೀಜ ಚರಿತ್ರಕಾರರು ತಮ್ಮ ವೃತ್ತಾಂತಗಳಲ್ಲಿ ‘ನಿಜಾಮ’ ಶಬ್ದದ ಪ್ರಥಮ ಅಕ್ಷರ ಬಿಟ್ಟುಬಿಡುತ್ತಾರೆ. ಕೆಳಗೆ ಪು. ೩೮೮ರಲ್ಲಿ ಆ ಹೆಸರುಗಳು “ಮಾದ್ರೆಮಲುಕೊ” “ಝೆಮೆಲುಕೊ” “ಡೆಸ್ಟುಯಿ” ಮತ್ತು “ವಿರಿದೊ” ಎಂದು ಕೂಡಲಾಗಿದೆ ; ಮತ್ತು ಆದುದರಿಂದ ‘ಡೆಸ್ಟುರ್’ ಮತ್ತು ‘ಡೆಸ್ಟುಯಿ’ ಅಂದರೆ ಆ ಕಾಲಕ್ಕೆ ಗೋಲ್ಕೊಂಡದ ಕುತುಬ್‌ಶಾಹನಾಗಿದ್ದ ಸುಲ್ತಾನ ಖುಲಿ ೩೭೦ನೆಯ ಪುಟದ ಮೇಲೆ ‘ದೇಸ್ಕರ್’ ಎಂಬ ರೂಪಾಂತರ ದೊರಕುತ್ತದೆ. (ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[16]      ಈ ದಿನಾಂಕದ ಪೂರ್ಣ ಚರ್ಚೆಗೆ ಪು. ೧೫೨ ನೋಡಿರಿ: ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[17]      ಅವನ ಹೆಸರು ಕಾಮಾನಾಯಕ್. ಪು. ೩೮೪, ಟಿಪ್ಪಣಿ ನೋಡಿರಿ: ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[18]      ಬಹುಶಃ ಮಂತ್ರಿ ಸಾಳುವ ತಿಮ್ಮನ ಸಹೋದರನಾಗಿದ್ದ ಗಂಡರಾಜ.

[19]      ಸಾಮ್ರಾಜ್ಯದ ಪತನದ ನಂತರ ಸ್ವತಂತ್ರ ಸಾರ್ವಭೌಮರ ವಂಶವಾಗಿ ಸ್ಥಾಪಿತವಾದ ಮದುರಾದ ಮಹಾಸಾಮಂತರು, ಬ್ಯಾರಡೋಸ್ ಹೇಳುವಂತೆ “ಅಡಿಕೆಯ ಯುವ ಪರಿಚಾರಕನಿಂದ” ಇಳಿದು ಬಂದಿದ್ದರು.

[20]      Comarberea ದಲ್ಲಿನ ಎರಡನೆಯ c ಬದಲಾಗಿ ತಪ್ಪಾಗಿ ಬಿದ್ದಿದೆಯೆಂದು ಮತ್ತು Comarberea ಮೈಸೂರಿನ ಕುಮಾರ ವೀರಯ್ಯನನ್ನು ಸಂಕೇತಿಸುತ್ತದೆಂದು ನನಗೆನಿಸುತ್ತದೆ. ಮುಂದೆ ನೂನಿಜ್ ಆ ಹೆಸರನ್ನು Comarberya ಎಂದು ಬರೆದಿದ್ದಾನೆ.

[21]      ರಾಯಚೂರಿಗೆ ಹತ್ತಿರವಿರುವ, ಈಗ ಕರೆಯುತ್ತಿರುವಂತೆ, ಮಲ್ಲಿಯಾಬಾದ ನೂನಿಜ್ ಕೊಟ್ಟ ಹೆಸರಾಗಿರುವ “ಮಲ್ಲಿಯ ಬಂಡ” ಬಹುಶಃ ಹಿಂದೂ ಹೆಸರಿರಬೇಕೆಂದು ನಾನು ಭಾವಿಸುವೆ. ಅದು ‘ಬಂಡೆ’ ಶಬ್ದದಿಂದ ಬಂದಿರಬೇಕು. ಮುಸಲ್ಮಾನರು ಅದಕ್ಕೆ “ಮಲ್ಲಿಯಾ ಬಾದ” ಎಂಬ ಹೆಸರನ್ನು ಕೊಟ್ಟರು.

[22]      ಚಿಕ್ಕ ತಾಮ್ರದ ನಾಣ್ಯ.