ಅಧ್ಯಾಯ ೮

ರಾಜನ ಡೇರೆ ಮುಳ್ಳುಗಳ ದೊಡ್ಡ ಬೇಲಿಯಿಂದ ಸುತ್ತುವರಿಸಲ್ಪಟ್ಟಿದ್ದು ಒಂದೇ ಕಡೆಗೆ ಪ್ರವೇಶವಿತ್ತು ಮತ್ತು ಬಾಗಿಲಲ್ಲಿ ರಕ್ಷಕರು ನಿಲ್ಲುತ್ತಿದ್ದರು. ಈ ಬೇಲಿಯೊಳಗಡೆ ಅವನ ಮೈ ತೊಳೆಯುವ ಮತ್ತು ಅವನು ತನ್ನೊಂದಿಗೆ ಯಾವಾಗಲೂ ಒಯ್ಯುವ ವಿಗ್ರಹದ ಜವಾಬ್ದಾರಿ ಹೊತ್ತ ಬ್ರಾಹ್ಮಣನು ಮತ್ತು ರಾಜನ ಸ್ವಂತ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಅವನ ಕೋಣೆಯಲ್ಲಿ ಯಾವಾಗಲೂ ನೋಡಸಿಗುವ ಬೀಜವೊಡೆದ ಗಂಡಸರು ಇರುವರು. ಈ ವೃತ್ತದ ಸುತ್ತಲೂ ನಿಶ್ಚಿತ ಸ್ಥಾನಗಳಲ್ಲಿ ರಾತ್ರಿಯಿಡಿ ಕಾವಲು ಇರುವ ರಕ್ಷಕರು ಇರುವವರು; ಈ ರಕ್ಷಕರ ದಳದೊಂದಿಗೆ ಕುಟುಂಬದ ಅಧಿಕಾರಿಗಳಿಗೆ ಬಿಡದಿ ಒದಗಿಸಲಾಗಿದೆ; ಮತ್ತು ಅಲ್ಲಿಂದ ಮುಂಚೂಣಿಯವರೆಗೆ ಪ್ರತಿಯೊಬ್ಬನಿಗೂ ವಹಿಸಿಕೊಟ್ಟಂತೆ ಮತ್ತು ಅಜ್ಞಾಪಿಸಿದಂತೆ ನಿಗದಿಪಡಿಸಿದ ತಮ್ಮ ತಮ್ಮ ಸ್ಥಳಗಳಲ್ಲಿ ಎಲ್ಲ ದಳವಾಯಿಗಳಿದ್ದರು. ಇವರೆಲ್ಲ ಜನರ ಹೊರಗಡೆ ತಮ್ಮವೆ ಬಿಡಾರಗಳಲ್ಲಿ ನಾನು ಈಗಾಗಲೆ ಹೇಳಿರುವ ಅಗ್ರಚಾರರು ಇರುವವರು. ಶಿಬಿರದಲ್ಲಿ ಇಡಿ ರಾತ್ರಿ ಗಸ್ತಿ ತಿರುಗುತ್ತ ಯಾರಾದರೂ ಗುಪ್ತಚಾರರು ಸಿಕ್ಕರೆ ಹಿಡಿಯುವುದೆ ಅವರ ಕರ್ತವ್ಯ. ಆ ಬದಿಗೆ ಅಗಸರು (ಅವರು ಬಟ್ಟೆಗಳನ್ನು ಒಗೆಯುವವರು) ತಮ್ಮದೆ ಬಿಡಾರದಲ್ಲಿ ಇದ್ದರು ಮತ್ತು ಅವರು ಬಟ್ಟೆ ಚೆನ್ನಾಗಿ ಒಗೆಯುವ ಸ್ಥಳಕ್ಕೆ ಹತ್ತಿದಲ್ಲಿದ್ದರು.

ಇಡಿ ಬಿಡಾರ ನಿಯಮಿತ ಓಣಿಗಳಲ್ಲಿ ವಿಭಜಿತವಾಗಿತ್ತು. ಪ್ರತಿಯೊಬ್ಬ ದಳವಾಯಿಯ ಪಡೆಗೆ ತನ್ನದೆ ಮಾರುಕಟ್ಟೆಯಿತ್ತು. ಅಲ್ಲಿ ಕುರಿ, ಕೋಳಿ, ಆಡು, ಹಂದಿ, ಮೊಲ, ಕವುಜಗ ಮತ್ತು ಇತರ ಹಕ್ಕಿಗಳು ಮುಂತಾದವುಗಳ ಮಾಂಸ ಯಥೇಚ್ಛವಾಗಿ ದೊರೆಯುತ್ತಿತ್ತು ; ಎಷ್ಟು ಯಥೇಚ್ಛೆವೆಂದರೆ ನೀವು ಬಿಸ್ನಗದ ನಗದಲ್ಲಿದ್ದಂತೆಯೆ ಭಾಸವಾಗುತ್ತಿತ್ತು ಮತ್ತು ಅಕ್ಕಿ, ಕಾಳು, ಮುಸುಕಿನ ಜೋಳ, ಅವರೆ ಮತ್ತು ಅವರು ತಿನ್ನುವ ಇತರ ಕಾಳುಗಳ ಅನೇಕಾನೇಕ ಜಾತಿಗಳು ದೊರಕುತ್ತಿದ್ದವು. ಅವಶ್ಯಕತೆಗಳಾದ ಈ ವಸ್ತುಗಳಲ್ಲದೆ ಇನ್ನೊಂದು (ಮಾರುಕಟ್ಟೆ) ಇತ್ತು. ಅಲ್ಲಿ ನಿಮಗೆ ಬೇಕಾದ ಎಲ್ಲವೂ ಬೇಕಾದಷ್ಟು ಸಿಗುತ್ತಿತ್ತು. ಏಕೆಂದರೆ, ಈ ಮಾರುಕಟ್ಟೆಗಳಲ್ಲಿ ಅವರು ನಮ್ಮ ಪ್ರದೇಶಗಳಲ್ಲಿ ವೃತ್ತಿನಿರತ ತಿರುಗುವ್ಯಾಪಾರಿಗಳು ಮಾರುವ ವಸ್ತುಗಳನ್ನು ಮಾರುತ್ತಾರೆ. ಅವರ ಓಣಿಗಳಲ್ಲಿ ಕುಶಲಕರ್ಮಿಗಳೂ ದುಡಿಯುತ್ತಿದ್ದರು. ಹೀಗಾಗಿ, ಅಲ್ಲಿ ಬಂಗಾರದ ಒಡವೆಗಳು ಮತ್ತು ಥಳಕಿನ ಆಭರಣಗಳನ್ನು ಮಾಡಲಾಗುತ್ತಿದ್ದುದನ್ನು ಮತ್ತು ಎಲ್ಲ ತರಹದ ಮಾಣಿಕ್ಯಗಳು ಮತ್ತು ವಜ್ರಗಳು ಮತ್ತು ಮುತ್ತುಗಳು ಇತರ ಎಲ್ಲ ತರಹದ ಬೆಲೆಯುಳ್ಳ ಹರಳುಗಳೊಂದಿಗೆ ಮಾರಾಟಕ್ಕಿದ್ದುದನ್ನು ನೋಡಬಹುದು. ಬಟ್ಟೆಯ ವ್ಯಾಪಾರಿಗಳನ್ನೂ ಕಾಣಹುದಿತ್ತು ಮತ್ತು ಇವರು ಅಸಂಖ್ಯ ರಾಗಿದ್ದರು. ಏಕೆಂದರೆ, ಅದು ಅಷ್ಟೊಂದು ಜನರಿಗೆ ಬೇಕಾದ ವಸ್ತುವಾಗಿತ್ತು ಮತ್ತು ಬಟ್ಟೆಗಳು ಅರಳೆಯವಾಗಿದ್ದವು. ಅಪಾರ ವಿಫುಲತೆಯಲ್ಲಿ ಹುಲ್ಲು ಮತ್ತು ಒಣಹುಲ್ಲು ಕೂಡ ಕಾಣಸಿಗುತ್ತಿತ್ತು. ನಂಬಿಕೆ ಹುಟ್ಟಿಸುವಂತೆ ಅದನ್ನು ಯಾರಾದರೂ ವರ್ಣಿಸಬಹುದೆ ಎಂಬುದನ್ನು ನಾನರಿಯೆ ಏಕೆಂದರೆ, ರಾಚೊಲ್ ಅಷ್ಟೊಂದು ಬಂಜೆ ಮತ್ತು ಮರುಳುಮಯ ಪ್ರದೇಶವಾಗಿತ್ತು. ಅಲ್ಲಿ ಪ್ರತಿಯೊಂದು ವಿಫುಲವಾಗಿ ದೊರಕುವುದೊಂದು ರಹಸ್ಯ. ಮೂವತ್ತೆರಡು ಸಾವಿರದ ನಾನೂರು ಕುದುರೆಗಳು ಮತ್ತು ಐದುನೂರ ಐವತ್ತೊಂದು ಆನೆಗಳಿಗೆ

[1] ಪ್ರತಿದಿನ ಎಷ್ಟು ಹುಲ್ಲು ಮತ್ತು ಒಣಹುಲ್ಲು ಬೇಕಾಗುವುದೆಂಬುದನ್ನು ಯಾರಾದರೂ ಊಹಿಸಬಹುದು. ಇದರಲ್ಲಿ ಎಲ್ಲ ಪೂರೈಕೆಗಳನ್ನು ಮತ್ತು ಡೇರೆ ಮೊದಲಾದ ಇತರ ಅನೇಕ ಹೊರೆಗಳನ್ನು ಹೊರುವ ಹೆಸರಗತ್ತೆಗಳು ಮತ್ತು ಅಧಿಕ ಸಂಖ್ಯೆಯಲ್ಲಿದ್ದ ಎತ್ತುಗಳನ್ನು ಸೇರಿಸಿಲ್ಲ. ನಿಜಕ್ಕೂ ತಾನು ನೋಡಿದುದರ ಅರ್ಥ ಗ್ರಹಿಸಿದ ಯಾರೂ ಯುದ್ಧ ನಡೆಯುತ್ತಿದೆಯೆಂದು ಕಲ್ಪಿಸಿಕೊಳ್ಳಲು ಶಕ್ಯವಿಲ್ಲ. ಬದಲು, ತಾನು ಸಮೃದ್ಧ ನಗರವೊಂದರಲ್ಲಿರುವೆನೆಂದು ಭಾವಿಸಿಯಾನು. ಅಬ್ಬಾ! ಅವರು ಬಳಸುವ ನಗಾರಿಗಳು, ತುತ್ತೂರಿಗಳು ಮತ್ತು ಇತರ ಸಂಗೀತವಾದ್ಯಗಳ ಸಂಖ್ಯೆಯೊ! ತಾವು ಯುದ್ಧ ಆರಂಭಿಸುವ ಸಂಕೇತವಾಗಿ ಅವರು ಸಂಗೀತ ನುಡಿಸಿದಾಗ ಆಕಾಶ ಕಳಚಿ ಬೀಳುತ್ತದೇನೊ ಎಂಬಂತೆ ಭಾಸವಾಗುತ್ತಿತ್ತು. ಮತ್ತು ಇವರು ಇಂಥ ಭಯಂಕರ ಸಪ್ಪಳ ಮಾಡುತ್ತಿದ್ದಾಗ ಯಾವುದೇ ಹಕ್ಕಿ ಹಾರುತ್ತ ಬಂದುದಾದರೆ ಬಿಡಾರವನ್ನು ದಾಟಲಾರದ ಭಯದಿಂದ ಅದು ಕೆಳಗೆ ಬೀಳುತ್ತಿತ್ತು. ಅವರು ಅದನ್ನು, ಮುಖ್ಯತಃ ಗಿಡಗಗಳನ್ನು, ತಮ್ಮ ಕೈಯಲ್ಲಿ ಹಿಡಿಯುತ್ತಿದ್ದರು, ಅಂಥ ಅನೇಕವನ್ನು ಹಿಡಿಯುತ್ತಿದ್ದರು.

ಮುಗಿಸಲಾರೆನೆಂಬ ಭಯದಿಂದ ನಾನು ಇದರ ಬಗೆಗೆ ಹೆಚ್ಚು ಹೇಳದೆ ನಿಲ್ಲಿಸುತ್ತೇನೆ. ಮತ್ತು ಯುದ್ಧದ ಬಗೆಗೆ ಹೇಳಲಾರಂಭಿಸುವೆ.

ಅಧ್ಯಾಯ ೯

ನಾನು ಹೇಳಿದಂತೆ ರಾಜ ರಾಚೋಲ್ ನಗರದ ಮುತ್ತಿಗೆಯಲ್ಲಿರುವಾಗ ಇಡಲ್‌ಕಾವ್ ಉತ್ತರ ಬದಿಗೆ ನದಿಯ ಬಳಿ ಬಂದು ಅಲ್ಲಿ ತನ್ನ ಶಿಬಿರ ಹೂಡಿದ್ದನೆಂಬ ಖಚಿತ ಸುದ್ದಿ ಬಂತು. ಆದುದರಿಂದ, ವೈರಿಯ ಮೆಲೆ ಕಣ್ಣಿಡಲು ಅವನು ಏನು ಮಾಡುತ್ತಿರುವನೆಂಬುದನ್ನು ಕಂಡು ಅವನ ಪ್ರತಿಯೊಂದು ಚಲನವಲನದ ಸುದ್ದಿ ಕಳುಹಲು ಗೂಢಚಾರರನ್ನು ರಾಜ ಕಳಿಸಿದನು. ಈ ಸುದ್ದಿಯ ಬರುವಿಕೆಯಿಂದ ಶಿಬಿರದಲ್ಲಿ, ಮುಖ್ಯತಃ ಸಂದೇಹಕ್ಕೆ ಕೊರತೆಯಿರದ ಸಾಮಾನ್ಯ ಯೋಧರಲ್ಲಿ, ಕೋಲಾಹಲ ಉಂಟಾಯಿತು ಮತ್ತು ಅವರು ಮೂರರು ಹುಟ್ಟಿಸಿದ ಹಳೆಯ ಕಾಲದ ಭೀತಿಯಿಂದ ಇನ್ನೂ ಬಾಧಿತರಾಗಿದ್ದರು. ರಾಜ ಏನು ಮಾಡುತ್ತಿರುವನೆಂದು ಮತ್ತು ತಾನು ಮುಂದೆ ಹೋಗಿ ಅವನ ಶಿಬಿರದಲ್ಲಿಯೆ ಅವನ ಮೇಲೆ ಬೀಳಲೊ ಹೇಗೆಂಬುದನ್ನು ನೋಡಲೋಸುಗ ಇಡಲ್‌ಕಾವ್ ಅಲ್ಲಿ ಕೆಲವು ದಿನ ನಿಂತನು. ಏಕೆಂದರೆ, ತನ್ನ ಆಗಮನ ತಿಳಿದ ಕೂಡಲೆ ರಾಜ ಕೂಡಲೆ ತನ್ನ ಮೇಲೆ ಏರಿ ಬರುವನೆಂದು ಅವನು ಮತ್ತು ಅವನ ಜನರು ಭಾವಿಸಿದರು. ಮತ್ತಾವುದೆ ಸ್ಥಳಕ್ಕಿಂತ ತಾನಿದ್ದ ಸ್ಥಳ ನದಿಯ ಸಹಾಯದಿಂದ ರಾಜನ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಉತ್ತಮವಾದುದೆಂದು ಅವರು ನಿರ್ಧರಿಸಿದರು. ಏಕೆಂದರೆ, ತೀರ ಸಮೀಪದಲ್ಲಿದ್ದ ಗಡು ಬಿಟ್ಟರೆ ಇನ್ನೊಂದಿರಲಿಲ್ಲ; ಮತ್ತು ಇದನ್ನು ಯಾರೂ, ಏನೆ ಆದರೂ, ತಾವು ತಿಳಿದಂತೆ ತಮ್ಮ ದೃಷ್ಟಿಯಲ್ಲಿ ಕೇವಲ ಕಪ್ಪಾದ ಜನ, ವಶಪಡಿಸಿಕೊಳ್ಳದಂತೆ ಅವರು ಚೆನ್ನಾಗಿ ಕಾಯಬಯಸಿದ್ದರು.

ವೈರಿ ನದಿಯ ದಡದ ಮೇಲಿರುವನೆಂದು ತಿಳಿದಾಗ್ಯು ರಾಜ ಯಾವ ಚಲನೆಯನ್ನೂ ಮಾಡಲಿಲ್ಲ. ಅಷ್ಟೆ ಅಲ್ಲ, ಏನನ್ನೂ ಮಾಡಲಿಲ್ಲ ಮತ್ತು ಇಡಲ್‌ಕಾವ್ ಅವನು ಮುಂದುವರಿಯದಿದ್ದುದನ್ನು ಕಂಡು ತನ್ನ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಮತ್ತು ಈ ಸಭೆಯಲ್ಲಿ ನೀಡಿದ ಸಲಹೆ ಭಿನ್ನ ಭಿನ್ನವಾಗಿತ್ತು. ಏಕೆಂದರೆ, ರಾಜ ಚಲಿಸದಿದ್ದುದರ ಬಗೆಗೆ ಪ್ರತಿಯೊಬ್ಬನೂ ತನ್ನದೆ ಅಭಿಪ್ರಾಯ ತಾಳಿದ್ದ. ರಾಜ ಹಾಗೇಕೆ ಮಾಡಿದನೆಂದರೆ ಅವನು ತನ್ನ ವೈರಿ ಯಾವ ಲೆಕ್ಕವೂ ಅಲ್ಲವೆಂದು ಪರಿಗಣಿಸಿದ್ದ ಮತ್ತು ತನ್ನ ಜನರಿಗೆ ತನ್ನ ಬಲ ಎಷ್ಟ ದೊಡ್ಡದೆಂದು ತೋರಿಸಬಯಸಿದ್ದ ಎಂದು ಅನೆಕರು ಅಂದರು. ಅವನು ತಾವು ನದಿ ದಾಟುವುದನ್ನೆ ಕಾಯ್ದು ತಮ್ಮ ಮೇಲೆ ಕೂಡಲೆ ಬೀಳಬೇಕೆಂದೆ ಕಾಯುತ್ತಿದ್ದನೆಂದು ಅವರು ಹೇಳಿದರು. ಹೀಗೆ ಅಭಿಪ್ರಾಯಪಟ್ಟ ಪ್ರಮುಖ ವ್ಯಕ್ತಿಯೆಂದರೆ ಅಮ್‌ಕೊಸ್ಟಾಮ್.[2] ಡಾಮ್ ಗುಟೆರ್ ಗೋವಾದ[3] ದಳವಾಯಿಯಾಗಿದ್ದಾಗ ಅವನು ಪೊಂಡಾದ ದಳವಾಯಿ ಯಾಗಿದ್ದ. ಉಳಿದವರು ಹಾಗಲ್ಲವೆಂದರು. ಆದರೆ, ರಾಜ ಮೂರರು ಹಿಂದೂಗಳ ಮೇಲೆ ಪಡೆದ ಅನೇಕ ವಿಜಯಗಳ ಗತ ಸಂದರ್ಭಗಳನ್ನು ನೆನಸಿಕೊಂಡು ಹೆದರಿದ್ದನೆಂದೂ ಮತ್ತು ಆ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಪಳಗಿದ ಯೋಧರನ್ನು ತನ್ನೊಂದಿಗೆ ಕರೆತಂದಿದ್ದನೆಂದೂ ಹೇಳಿದರು. ಮುನ್ನುಗ್ಗಿ ನದಿ ದಾಟಬೇಕೆಂಬುದೆ ಇವರ ಸಲಹೆಯಾಗಿತ್ತು. ಇಡಲ್‌ಕಾವ್ ತನ್ನ ದೌರ್ಬಲ್ಯ ತೋರ್ಪಡಿಸುವುದು ಉಚಿತವಲ್ಲವೆಂದೂ ತಾನಿದ್ದಲ್ಲಿಯೆ ಹೆಚ್ಚು ಕಾಲ ಇದ್ದರೆ ಅವನಿಗೆ ಪ್ರಯೋಜನ ಕಡಿಮೆ ಮತ್ತು ವೈರಿಗೂ ಹೆಚ್ಚು ಹಾನಿ ಮಾಡಲು ಶಕ್ಯವಿಲ್ಲವೆಂದೂ (ಅವರು ಹೇಳಿದರು) ಮತ್ತು ಹಿಂದೂಗಳಷ್ಟು ಸಂಖ್ಯೆ ತಮ್ಮದಿರದಿದ್ದರೂ ಅವರೊಂದಿಗೆ ಮಾಡಿದ ಹಿಂದಿನ ಯುದ್ಧಗಳ ಸ್ಮರಣೆಯ ಪ್ರಯೋಜನ ಅವರಿಗಿತ್ತು.[4] ಕೊನೆಗೆ ಇಡಲ್‌ಕಾವ್ ಅವರು ತಮ್ಮ ಬಲಗಳನ್ನು ಒಟ್ಟುಗೂಡಿಸಲು ಆಜ್ಞೆಯಿತ್ತ ಮತ್ತು ಅದು ಮುಗಿದ ಮೇಲೆ ಏನು ಮಾಡುವುದು ಅತ್ಯುತ್ತಮವಾದುದೆಂಬುದನ್ನು ತಾನು ನಿರ್ಧರಿಸುವುದಾಗಿ ಹೇಳಿದ. ಒಟ್ಟು ಗೂಡಿಸಲ್ಪಟ್ಟಾಗ ತನ್ನಲ್ಲಿ ನೂರಿಪ್ಪತ್ತು ಸಾವಿರ ಕಾಲಾಳು, ಬಿಲ್ಲುಗಾರರು ಮತ್ತು ತುಬಾಕಿದಾರರು, ಗುರಾಣಿದಾರರು ಮತ್ತು ಭಲ್ಲೆಗಾರರು, ಹದಿನೆಂಟು ಸಾವಿರ ಅಶ್ವಾಳು ಮತ್ತು ನೂರೈವತ್ತು ಆನೆಗಳಿದ್ದುದನ್ನು ತಿಳಿದ; ಒಟ್ಟುಗೂಡಿಸುವುದು ಮುಗಿದ ಮೇಲೆ ಮತ್ತು ತನ್ನ ಬಲಗಳನ್ನು ತಾನೆ ಖುದ್ದಾಗಿ ನೋಡಿದ ಮೇಲೆ ಹಾಗೂ ತನ್ನಲ್ಲಿದ್ದ ಫಿರಂಗಿಯ ದೊಡ್ಡ ಪಡೆಯನ್ನೂ ನೋಡಿ ತನ್ನ ಫಿರಂಗಿದಳದ ಸಹಾಯದಿಂದ ತಾನು ಕೂಡಲೆ ನದಿ ದಾಟಿ ಆಕ್ರಮಣಕ್ಕೆ ಮುಂದುವರಿಯಬಯಸಿರುವುದರಿಂದ ಅವರಿಗೆ ಸನ್ನದ್ಧರಾಗಲು ಅವನು ಹೇಳಿದ. ಏಕೆಂದರೆ ಆಚೆಯ ಬದಿಯಲ್ಲಿ ನಿಂತು ತನ್ನ ಸೈನಗಳನ್ನು ರಾಜನ ಶಿಬಿರದ ಮೇಲೆ ಆಕ್ರಮಣ ಮಾಡಲು ಕಳಿಸುವುದು ಉತ್ತಮ ಮಾರ್ಗ ಮತ್ತು ಹಾಗೆ ಮಾಡುವ ಮೂಲಕ ತಾನು ಸೋಲುವುದಿಲ್ಲ ಹಾಗೂ ರಾಚೋಲ್ ಅನ್ನು ಕಳೆದುಕೊಳ್ಳುವುದಿಲ್ಲ ಎಂದು ಇಡಲ್‌ಕಾವ್ ನಂಬಿದ್ದ.[5]

ಈ ಅತ್ಯಾಶೆಯ ನಿರ್ಧಾರದಿಂದ ಅವನು ಗಡುವನ್ನು ದಾಟಿ ರಾಜನ ಶಿಬಿರದಿಂದ ಮೂರು ಹರದಾರಿಗೂ ಒಳಕ್ಕೆ ಮುನ್ನಡೆದ, ಮತ್ತು ದೊಡ್ಡ ಕಂದಕಗಳನ್ನು ತೋಡಿಸಿ ತನ್ನ ಶಿಬಿರ ಬಲಗೊಳ್ಳುವಂತೆ ಮಾಡಿದ. ತನ್ನ ಸೈನ್ಯ ನಿಲ್ಲುವ ಸ್ಥಾನಗಳ ಕ್ರಮವನ್ನು ಮತ್ತು ವೈರಿ ಆಕ್ರಮಣಗೈದಾಗ ಅವರು ವರ್ತಿಸಬೇಕಿದ್ದ ರೀತಿಯನ್ನು ವ್ಯವಸ್ಥೆಗೊಳಿಸಿದ. ನೀರಿನ ಸಲುವಾಗಿ ಅವನ ಶಿಬಿರ ನದಿಯುದ್ದಕ್ಕೂ ಚಾಚಿತು. ವೈರಿಯಿಂದಾಗಿ ಅದರೊಂದಿಗಿನ ಸಂಪರ್ಕ ಕಡಿಯಬಾರದೆಂಬುದೂ ಉದ್ದೇಶವಾಗಿತ್ತು.

ಇಡಲ್‌ಕಾವ್ ನದಿ ದಾಟಿರುವನೆಂಬ ಸುದ್ದಿಯನ್ನು ರಾಜನಿಗೆ ತರಲಾದೊಡನೆ ಅವನು ಎಲ್ಲರೂ ಸನ್ನದ್ಧರಾಗುವಂತೆ ಆದರೆ ವೈರಿ ಏನು ಮಾಡುವನೆಂಬುದನ್ನು ತಾನು ನೋಡುವವರೆಗೆ  ಯಾವ ಚಲನೆಯನ್ನೂ ಮಾಡಕೂಡದೆಂದು ಆಜ್ಞೆಯಿತ್ತ. ಮತ್ತು ವೈರಿ ತನ್ನ ಶಿಬಿರ ಹೂಡಿ ತನ್ನ ನೆಲೆ ಭದ್ರಗೊಳಿಸಿರುವನೆಂಬ ಹೆಚ್ಚಿನ ಸುದ್ದಿ ತರಲಾಗಿ ಅವನು ತನ್ನೆಲ್ಲ ಬಲಗಳ ಸಾಮೂಹಿಕ ಮುನ್ನಡೆಗೆ ಆಜ್ಞೆಯಿತ್ತ. ಅವನು ತನ್ನ ಸೈನ್ಯವನ್ನು ಏಳು ವಿಭಾಗಗಳಾಗಿ ವಿಭಜಿಸಿದ. ರಾಜನ ಮಾವ ಮತ್ತು ದೊಡ್ಡ ದೊರೆಯಾಗಿದ್ದ ಕೊಮಾರಬೆರ್ಯ ಮುಂಚೂಣಿಯ(ಸೇನಾಪಟ್ಟ)ನ್ನು ಬೇಡಿದ; ಅವನು ಸೆರಿಂಗ್‌ಪಟಾಒದ ರಾಜ ಮತ್ತು ಒಂದು ದೊಡ್ಡ ರಾಜ್ಯದ ಪ್ರಭು. ಅವನು ತನ್ನೊಂದಿಗೆ ಮೂವತ್ತೆರಡು ಬೆಳೆದ ಮಕ್ಕಳನ್ನು ತಂದ. ತನ್ನ ಶಿಬಿರವನ್ನು ಇಡಲ್‌ಕಾವ್‌ನಿಂದ ಒಂದು ಹರದಾರಿ ದೂರ ನೆಲೆಗೊಳಿಸಲು ರಾಜ ಅವನಿಗೆ ಹೇಳಿದ. ಮತ್ತು ವೈರಿಯೊಂದಿಗೆ ಆ ಸಮಯಕ್ಕೆ ಯುದ್ಧ ಹೂಡುವ ಉದ್ದೇಶವಿದ್ದುದರಿಂದ ಎಲ್ಲರೂ ನಸುಕಿನಲ್ಲಿ ಶಸ್ತ್ರ ಧರಿಸಿಲು ಆಜ್ಞೆಯಿತ್ತ. ಆದರೆ ಅವನ ಮಂತ್ರಾಲೋಚನೆ ಸಭೆಯವರು ಅಂದು ಶುಕ್ರವಾರವಾದುದರಿಂದ ಅದು ಅಶುಭವೆಂದೂ ಅವನು ಆಕ್ರಮಣ ಮಾಡಬಾರದೆಂದು ಬೇಡಿಕೊಂಡರು ಮತ್ತು ತಾವು ಶುಭದಿನವೆಂದು ತಿಳಿದ ಶನಿವಾರದವರೆಗೆ ಆಕ್ರಮಣ ಮಾಡಬಾರದೆಂದು ಕೇಳಿಕೊಂಡರು.

ರಾಜ ರಾಚೋಲ್ ಬಿಟ್ಟಾಗ ಒಳಗಿದ್ದವರು ಒಂದು ದ್ವಾರ ತೆರೆದರು, ಮತ್ತು ಒಳಗಿದ್ದ ಬೀಜವೊಡೆದ ಗಂಡಸಾಗಿದ್ದ ದಳವಾಯಿಯೊಬ್ಬ ಇನ್ನೂರು ಕುದುರೆ, ಕೆಲವು ಕಾಲಾಳು ಮತ್ತು ಆನೆಗಳೊಂದಿಗೆ ದಾಳಿ ಮಾಡಿದ. ಅವನು ರಾಜನ ಪಾರ್ಶ್ವಕ್ಕಿದ್ದ ನದಿದಂಡೆಗುಂಟ  ಮಾತ್ರವೆ ಹೋಗುತ್ತಿದ್ದ. ಪ್ರತಿಯೊಬ್ಬನೂ ತನ್ನದೆ ಅಭಿಪ್ರಾಯ ತಾಳಿದ್ದರಿಂದ ಇದರ ಉದ್ದೇಶವನ್ನು ಯಾರೂ ಊಹಿಸಲಾಗಲಿಲ್ಲ. ಏನಾಗುತ್ತಿದೆಯೆಂಬುದನ್ನು ಮತ್ತು ಯುದ್ಧದ ಕೊನೆ ಏನಾಗಬಹುದೆಂದು ಅರಿಯಲು ರಾಜನ ಶಿಬಿರದಲ್ಲಿ ಯಾವಾಗಲೂ ತನ್ನ ಗೂಢಚಾರರನ್ನಿಟ್ಟಿದ. ರಾಜ ಅಲ್ಲಿಗೆ ಬಂದು ನಿಂತ ಕೂಡಲೆ ತಾನೂ ಹಾಗೆಯೆ ಮಾಡಿದ. ಎರಡೂ ಸೈನ್ಯಗಳು ಪರಸ್ಪರ ವೈರಿಗೆ ತೀರ ಹತ್ತಿರವಿದ್ದುದರಿಂದ ತಮ್ಮ ತಮ್ಮ ಶಸ್ತ್ರಗಳನ್ನು ಬದಿಗಿರಿಸದೆ ಇಡಿ ರಾತ್ರಿ ಕಣ್ಣಿಟ್ಟು ನೋಡಿದರು.

ಶನಿವಾರದ ಬೆಳಗು ಹರಿಯುತ್ತಿರುವುದನ್ನು ನೋಡಿ ರಾಜನ ಶಿಬಿರದಲ್ಲಿನ ನಗಾರಿಗಳು, ಕಹಳೆಗಳು ಮತ್ತು ಇತರ ಸಂಗೀತ ಮೊಳಗಲಾರಂಭಿಸಿ ಯೋಧರೆಲ್ಲ ಕೂಗಲಾರಂಭಿಸಿದುದ ರಿಂದ ಆಕಾಶವೆ ಕಳಚಿ ಭೂಮಿಗೆ ಬೀಳುವಂತೆ ಎನಿಸಿತು. ಆಮೇಲೆ ಕುದುರೆಗಳ ಕೆನೆತ ಮತ್ತು ಉತ್ಸಾಹ ಮತ್ತು ಆನೆಗಳ ಘೀಳಿಡುವಿಕೆ ಹೇಗಿತ್ತೆಂಬುದನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ಅದನ್ನು ಸರಳ ಸತ್ಯವಾಗಿ ಹೇಳಿದರೂ ಅದನ್ನು ಕೇಳಿದವರ ಎದೆಯಲ್ಲಿ ಹುಟ್ಟಿದ ಮಹಾ ಭೀತಿ ನಡುಕಗಳನ್ನು ನಂಬುವುದು ಕಷ್ಟ. ಅದು ಎಷ್ಟಾಗಿತ್ತೆಂದರೆ ಸದ್ದು ಹುಟ್ಟಿಸಿದ ಜನರೇ ನಡುಗಿದರು. ಮತ್ತು ವೈರಿಗಳೂ ಸಹ ಕಡಿಮೆ ಸದ್ದು ಮಾಡಲಿಲ್ಲ. ನೀವು ಏನಾದರೂ ಕೇಳಿದರೆ ನಿಮ್ಮ ಮಾತು ನಿಮಗೇ ಕೇಳಿಸುತ್ತಿರಲಿಲ್ಲವಾದುದರಿಂದ ನೀವು ಸಂಜ್ಞೆಯಿಂದಲೆ ಮಾತಾಡಬೇಕಿತ್ತು. ಏಕೆಂದರೆ, ಇನ್ನಾವ ರೀತಿಯಲ್ಲೂ ನೀವು ತಿಳಿಯಪಡಿಸುವುದು ಶಕ್ಯವಿರಲಿಲ್ಲ. ಶಿಬಿರದಲ್ಲಿನ ಎಲ್ಲರೂ ಯುದ್ಧರಂಗಕ್ಕೆ ಹೋದಾಗ ಸೂರ್ಯೋದಯವಾಗಿ ಎರಡು ಘಂಟೆಯಾಗಿತ್ತು. ಮತ್ತು ಬಲವಾಗಿ ಪೆಟ್ಟು ಹಾಕಿ ಒಬ್ಬ ವೈರಿಯನ್ನೂ ಜೀವಂತ ಉಳಿಸ ಬಾರದೆಂದು ಆಜ್ಞೆಯಿತ್ತು ರಾಜ ತನ್ನೆರಡು ಮುಂಭಾಗದ ಸೈನ್ಯ ವಿಭಾಗಗಳು ಮುಂದುವರಿಯಲು ಆಜ್ಞೆಯಿತ್ತ. ಮತ್ತು  ತಕ್ಷಣ ಹಾಗೆ ಮಾಡಲಾಯಿತು. ಅವರು ವೈರಿಯ ಮೇಲೆ ಎಷ್ಟೊದು ರಭಸದಿಂದ ನುಗ್ಗಿದರೆಂದರೆ ರಾಜನ ಅನೇಕ ಸೈನಿಕರು, ಮೂರರು ರಣರಂಗದಲ್ಲಿ ನಿರ್ಮಿಸಿಕೊಂಡಿದ್ದ ಕುಣಿಗಳ ದಂಡೆಗಳನ್ನೆ ತಲುಪಿದರು. ರಾಜ ತನ್ನೆಲ್ಲ ಬಲಗಳೊಂದಿಗೆ ತಮ್ಮೆಲ್ಲರ ಮೇಲೆ ಏಕಕಾಲಕ್ಕೆ ಯುದ್ಧ ಹೂಡುವನೆಂದು ನಿರೀಕ್ಷಿಸಿದ್ದರೆಂಬಂತೆ ಮೂರರು ವ್ಯೆಹ ರಚಿಸಿದ್ದರು ಮತ್ತು ಇಡಲ್‌ಕಾವ್ ಮತ್ತು ಅವನ ಅಧಿಕಾರಿಗಳಿಗೆ ಹಾಗೆ ಅನಿಸಿತು. ಮತ್ತು ಆ ಕಾರಣದಿಂದ, ಅವರ ಪ್ರಮುಖ ದಂಡಿನ ಸಾಹಸಮಯತೆಯಿಂದಾಗಿ ತನ್ನ ಜನ ಅವರ ಪಂಕ್ತಿಗಳಲ್ಲಿ ಅನಿವಾರ್ಯವಾಗಿಯೆ ಬಹಳ ಹತ್ಯೆಗೈಯುವ ಸಮಯಕ್ಕಾಗಿ ಕಾಯುವಂತೆ ತನ್ನ ಫಿರಂಗಿದಳವನ್ನೆಲ್ಲ ಸನ್ನದ್ಧವಾಗಿರಿಸಿದ್ದ. ಆಗ ತನ್ನ ಫಿರಂಗಿದಳ ಮುನ್ನಡೆಸಿ ಅವರನ್ನೆಲ್ಲ ನಾಶಮಾಡಲು ಉದ್ದೇಶಿಸಿದ್ದ. ಆದರೆ, ಅವರ ಆಕ್ರಮಣದ ರೀತಿಯನ್ನು ನೋಡಿದಾಕ್ಷಣ ಇಡಲ್‌ಕಾವ್ ತಮ್ಮ ಸುರಕ್ಷಿತತೆಗೆ ಅತ್ಯುತ್ತಮವೆಂದು ಕಂಡ ಯೋಜನೆಯನ್ನು  ಕೈಬಿಡಬೇಕಾಯಿತು. ಮತ್ತು ಗುಂಡಿನ ದಾಳಿ ಆರಂಭಿಸಲು ತನ್ನ ಎಲ್ಲ ಫಿರಂಗಿದಳಕ್ಕೆ ಅವನು ಆಜ್ಞೆಯಿತ್ತ. ಗುಂಡುಗಳ ಸುರಿತ ಬಹಳವಾಗಿದ್ದು ಅನೇಕ ಕುದುರೆ, ಕಾಲಾಳು, ಮತ್ತು ಆನೆಗಳನ್ನು ಕೊಂದು ವೈರಿಗೆ ಬಹಳ ನಷ್ಟ ಮಾಡಿ ರಾಜನ ಸೈನ್ಯ ಹಿಂದೆ ಸರಿಯುವಂತೆ ಮಾಡಿತು. ತಮ್ಮ ವೈರಿಗಳು ರಣರಂಗ ಬಿಡುತ್ತಿರುವುದನ್ನು ಕಾಣುತ್ತಲೆ ಮೂರರೆಲ್ಲರೂ ಅವರ ಮೇಲೆ ದಾಳಿಯಿಟ್ಟ ಪರಿಣಾಮವಾಗಿ ಜೀನಿನಲ್ಲಾಗಲಿ ವೈರಿಗೆ ಮುಖ ತೋರಲಾಗಲಿ ನರಪಿಳ್ಳೆಯೂ ಉಳಿದಿರಲಿಲ್ಲ; ಆದರೆ, ರಾಜನ ಎಲ್ಲ ಸೈನಿಕರು ಓಡತೊಡಗಿದರು ಮತ್ತು ಮೂರರು ಅವರನ್ನು ಕೊಲ್ಲುತ್ತ ಅರ್ಧ ಹರದಾರಿ ಬೆನ್ನಟ್ಟಿದರು. ತನ್ನ ಸೈನಿಕರು ಓಡುತ್ತಿರುವ ರೀತಿಯನ್ನು ನೋಡಿದಾಗ ರಾಜ ಅವರು ದೇಶದ್ರೋಹಿಗಳೆಂದೂ ಮತ್ತು ತನ್ನೊಂದಿಗೆ ಯಾರಿರುವರೆಂದು ನೋಡು ವುದಾಗಿಯೂ ಮತ್ತು ಅವರೆಲ್ಲ ಸಾಯುವುದು ಇದ್ದುದೆ ಆದುದರಿಂದ ಅವರು ಪರಂಪರೆಯಂತೆ ತಮ್ಮ ವಿಧಿಯನ್ನು ಧೈರ್ಯದಿಂದ ಎದುರಿಸಬೇಕೆಂದೂ ಕೂಗಿದ. “ನನ್ನೊಂದಿಗೆ ಯಾರಿರುವಿರಿ?” ಎಂದು ಅವನು ಕೂಗಿದ. ತಕ್ಷಣ ಅವನೊಂದಿಗೆ ಇರಲು ಸಿದ್ಧವಿದ್ದ ಎಲ್ಲ ದೊರೆಗಳು ಮತ್ತು ದಳವಾಯಿಗಳು ಅವನ ಸುತ್ತ ನೆರೆದರು, ಮತ್ತು ಪ್ರಪಂಚದಲ್ಲಿಯೆ ಅತಿ ದೊಡ್ಡ ಪ್ರಭುವನ್ನು ಕೊಂದಿರುವೆನೆಂದು ಇಡಲ್‌ಕಾವ್ ಹೆಮ್ಮೆ ಪಡುವ ದಿನ ಬಂದಿದೆ, ಆದರೆ ಅವನು ಅವನನ್ನು ಸೋಲಿಸಿದನೆಂದು ಜಂಬಪಡಲು ಸಾಧ್ಯವಿಲ್ಲ ಎಂದು ರಾಜ ಹೇಳಿದ. ಆಮೇಲೆ ಅವನು ತನ್ನ ಮರಣದ ಸಂಕೇತವಾಗಿ ರಾಣಿಯರಿಗೆ ಅದನ್ನು ತೋರಿಸಲೋಸುಗ ಮತ್ತು ಪದ್ಧತಿಯಂತೆ ಅವರು ಅಗ್ನಿಪ್ರವೇಶ ಮಾಡಲೋಸುಗ ತನ್ನ ಬೆರಳಿನಿಂದ ಒಂದು ಉಂಗುರವನ್ನು ತೆಗೆದು ತನ್ನ ಯುವಕ ಪರಿಚರನೊಬ್ಬನಿಗೆ ಕೊಟ್ಟ. ಆ ಮೇಲೆ ಕುದುರೆಯೇರಿ ಉಳಿದಿದ್ದ ಸೈನ್ಯ ವಿಭಾಗಗಳೊಂದಿಗೆ ಮುನ್ನುಗ್ಗುತ್ತ ಓಡಿಬಂದಿದ್ದ ಪ್ರತಿಯೊಬ್ಬನನ್ನೂ ಕರುಣೆಯಿಲ್ಲದೆ ಕೊಲ್ಲಲು ಆಜ್ಞಾಪಿಸಿದ. ತಮ್ಮ ಬಾಂಧವರಿಂದ ಎಂಥ ಸ್ವಾಗತ ದೊರೆಯಿತೆಂದು ಕಂಡ ಅವರು ತಿರುಗಿ ವೈರಿಯ ಮೇಲೆ ಬೀಳದೆ ಗತ್ಯಂತರವಿರಲಿಲ್ಲ. ಮತ್ತು ಅವರ ಆಕ್ರಮಣ ಎಂಥದಿತ್ತೆಂದರೆ ಮೂರರ ಲೊಬ್ಬನೂ ಅವರಿಗೆ ಮುಖಾಮುಖಿ ಯಾಗಿರಲಿಲ್ಲ. ಏಕೆಂದರೆ, ಮೂರರು ಅವರನ್ನು ಬಹಳ ಅಸ್ತವ್ಯಸ್ತವಾಗಿ ಬೆನ್ನಟ್ಟಲ್ಪಟ್ಟಿದ್ದ ಜನರಂತೆ ಎದುರಿಸಿದರು. ಮೂರರಲ್ಲಾದ ಗೊಂದಲ ಮತ್ತು ಅವರ ಪಂಕ್ತಿಗಳಲ್ಲಾದ ಹಾವಳಿ ಎಷ್ಟು ದೊಡ್ಡದಾಗಿತ್ತೆಂದರೆ ಅವರು ಅಷ್ಟು ಚೆನ್ನಾಗಿ ಭದ್ರಪಡಿಸಿಕೊಂಡಿದ್ದ ಮತು್ತ ಬೇಲಿ ಕಟ್ಟಿಕೊಂಡಿದ್ದ ತಮ್ಮ ಶಿಬಿರವನ್ನು ಸಂರಕ್ಷಿಸಿ ಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ, ಸ್ಥಿಮಿತ ಕಳೆದುಕೊಂಡವರಂತೆ ಅವರು ತಮ್ಮ ಜೀವ ಉಳಿಸಿಕೊಳ್ಳಲೋಸುಗ ನದಿಯಲ್ಲಿ ಧುಮುಕಿದರು. ಅವರನ್ನು ಬೆನ್ನಟಿ ರಾಜನ ಅಸಂಖ್ಯ ಯೋಧರು ಮತ್ತು ಆನೆಗಳು ಬಂದವು. ಅವು ಲೆಕ್ಕವಿಲ್ಲದಷ್ಟು ಹಾನಿ ಮಾಡಿದವು. ಏಕೆಂದರೆ ಅವು ತಮ್ಮ ಸೊಂಡಿಲಿನಿಂದ ಜನರನ್ನು ಹಿಡಿದು ತುಂಡು ತುಂಡಾಗಿ ಸೀಳಿದವು ಮತ್ತು ಅಂಬಾರಿಯಲ್ಲಿದ್ದವರು ಎಣಿಕೆಯಿಲ್ಲದಷ್ಟು ಜನರನ್ನು ಕೊಂದರು.

ಸೈನ್ಯಗಳು ವೈರಿಯನ್ನು ಬೆನ್ನಟ್ಟುತ್ತ ರಾಜ ನದಿ ತಲುಪುವರೆಗೆ ಮುಂದೆ ನಡೆದವು. ಅಲ್ಲಿ ಸತ್ತವರಿಗೆ ಲೆಕ್ಕವಿಲ್ಲ ಇಲ್ಲಿ ನೋಡಿದರೆ ಶಿಬಿರ ಬಿಟ್ಟು ಬಂದಿದ್ದ ಸ್ತ್ರೀಯರು ಮತ್ತು ಬಾಲಕರು, ಅಲ್ಲಿ ನೋಡಿದರೆ, ನದಿಯಲ್ಲಿ ಬಹಳ ನೀರಿದ್ದುದರಿಂದ ಒಂದಕ್ಕೊಂದು ಅಂಟಿಕೊಂಡಿದ್ದರೂ ಪಾರಾಗಲಾರದ ಕುದುರೆಗಳು ಮತ್ತು ಸವಾರರು ಮತ್ತು ರಾಜನ ಸೈನ್ಯಗಳು ದಂಡೆ ಮೇಲೆ ನಿಂತುಕೊಂಡು ಯಾವುದೆ ಮನುಷ್ಯ ಕಾಣಿಸಿಕೊಳ್ಳಲಿ ಕೊಲ್ಲು ತ್ತಿದ್ದರು, ಮತ್ತು ನದಿಯ ದಂಡೆ ಏರಲು ಪ್ರಯತ್ನಿಸಿ ಸಾಧ್ಯವಾಗದೆ ಕುದುರೆಗಳು ಸವಾರರ ಮೇಲೆ ಬಿದ್ದು ಎರಡೂ ಪಾರಾಗದಂತಾಯಿತು, ಮತ್ತು ಆನೆಗಳು ಪ್ರವಾಹವನ್ನು ಪ್ರವೇಶಿಸಿದವು ಮತ್ತು ಅವುಗಳ ಹಿಡಿತಕ್ಕೆ ಸಿಕ್ಕವರು ಕ್ರೂರವಾಗಿ ಕೊಲ್ಲಲ್ಪಟ್ಟರು. ನಡೆದುದನ್ನು ಕಂಡು ರಾಜನ ಮನಸ್ಸು ಕರಗಿ ತನ್ನ ಸೈನಿಕರಿಗೆ ಸರಿಯಲು ಹೇಳಿದ. ಸಾಯಲು ಅರ್ಹರಲ್ಲದ ಅಥವಾ ಏನೂ ತಪ್ಪು ಮಾಡದ ಅನೇಕರು ಸತ್ತರೆಂದು ಕೊರಗಿದ. ಆ ಆಜ್ಞೆಯನ್ನು ಎಲ್ಲ ದಳವಾಯಿಗಳೂ ಕೂಡಲೆ ಪಾಲಿಸಿ ತಮ್ಮ ಎಲ್ಲ ಪಡೆಗಳನ್ನು ಹಿಂದೆ ಸರಿಸಿದರು.

ಆಮೇಲೆ ರಾಜ ಇಡಲ್‌ಕಾವ್‌ನ ಶಿಬಿರಕ್ಕೆ ನಡೆದು ಅವನ ಡೇರೆಯಲ್ಲಿ ವಿಶ್ರಾಂತಿ ಪಡೆದ. ಆದರೆ ಅವನ ದಳವಾಯಿಗಳಲ್ಲನೇಕರು ಅವನು ಹೀಗೆ ವಿಶ್ರಾಂತಿ ಪಡೆಯುವುದರ ವಿರುದ್ಧ ಮಾತಾಡುತ್ತ, ಅವನು ತನ್ನೆಲ್ಲ ವೈರಿಗಳ ವಿನಾಶವನ್ನು ಪೂರ್ತಿಗೊಳಿಸುವುದೆಲೇಸೆಂದು  ಮತ್ತು ತಾನು ಸ್ವತಃ ಇದನ್ನು ಮಾಡಲಿಚ್ಛಿಸದಿದ್ದರೆ ತಮ್ಮಲ್ಲಿ ಕೆಲವರಿಗೆ ಅದನ್ನು ಮಾಡಲಾದರೂ ಆಜ್ಞಾಪಿಸಿಬೇಕೆಂದು ಮತ್ತು ಬೆಳಕು ಇರುವವರೆಗೆ ಬೆನ್ನಟ್ಟುವುದನ್ನು ನಿಲ್ಲಿಸುವುದು ಬುದ್ದಿವಂತಿಕೆಯಲ್ಲವೆಂದರು. ಅದಕ್ಕೆ ರಾಜ, ತಪ್ಪಿಲ್ಲದ ಅನೇಕರು ಸತ್ತಿದ್ದಾರೆ, ಇಡಲ್‌ಕಾವ್ ತನಗೆ ಅನ್ಯಾಯ ಮಾಡಿದ್ದರೆ ಅವನು ಆಗಲೆ ದುಃಖ ಅನುಭವಿಸಿದ್ದಾನೆ, ಮತ್ತು ಮೇಲಾಗಿ, ವಶಪಡಿಸಿಕೊಳ್ಳಬೇಕಿದ್ದ ರಾಚೋಲ್ ಹಿಂದೆ ಉಳಿದಿರುವುದರಿಂದ ತಾವು ಮುಂದೆ ಹೋಗುವುದು ಉಚಿತವಲ್ಲವೆಂದು, ಅದಕ್ಕೆ ಬದಲು ತಾವು ಅದರ ಸ್ವಾಧೀನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ತನಗೆನಿಸುತ್ತದೆಂದ. ಮತ್ತು ಅದಕ್ಕಾಗಿ ಇನ್ನು ಮುಂದೆ ಮುತ್ತಿಗೆಯನ್ನು ಹೊಸ ಮತ್ತು ಉತ್ತಮ ರೀತಿಯಲ್ಲಿ ಮಾಡಬೇಕೆಂದನು. ಇಡಲ್‌ಕಾವ್ ಅಷ್ಟೊಂದು ಜನರನ್ನು ಮತ್ತು ಮರ್ಯಾದೆಯನ್ನು ಮತ್ತು, ಹಾಗೆ ನೋಡಿದರೆ. ತನ್ನ ಎಲ್ಲ ಬಲವನ್ನೂ ಕಳೆದುಕೊಂಡಿದ್ದರಿಂದ ಅವನು ಇನ್ನು ಬದುಕಬಯಸಲಾರನೆಂದೂ ಮತ್ತು ರಣರಂಗದಲ್ಲಿಯೆ ಅವನು ಸತ್ತಿರಬೇಕೆಂದೂ ರಾಜ ಉದ್ದಕ್ಕೂ ನಂಬಿದ. ಇದು ನಿಜವಲ್ಲವೆಂದು ಇಡಲ್‌ಕಾವ್ ಯುದ್ಧವನ್ನೆ ಪ್ರವೆಶಿಸಿರಲಿಲ್ಲವೆಂಬುದನ್ನು ನೋಡಿದಾಗ ಗೊತ್ತಾಗುತ್ತದೆ. ಅವನು ಆ ಸಮಯದಲ್ಲೆಲ್ಲ ಈಗ ತನ್ನನ್ನು ಅಸದಕಾವ್ ಮತ್ತು ಬೆಳಗಾಂವಿಯ ದೊರೆ ಎಂದು ಕರೆದುಕೊಳ್ಳುತ್ತಿದ್ದ ಸೆಫಾಲರಿಮ್[6]ನ ರಕ್ಷಣೆಯಲ್ಲಿದ್ದ. ಅವನು ಆಗಲಿರುವುದಕ್ಕೆ ಭಯಗೊಂಡು ಇಡಲ್‌ಕಾವ್ ತನ್ನನ್ನು ತನ್ನೆಲ್ಲ ಸೈನ್ಯದೊಂದಿಗೆ ಮೈಗಾವಲಿಗೆ ಆಯ್ಕೆ ಮಾಡುವಂತೆ ಯುಕ್ತಿ ಮಾಡಿದ. ಅವರಲ್ಲಿ ನಾನೂರು ಅಶ್ವಾಳುಗಳಿದ್ದರು. ಸೈನಿಕರು ಹೇಗೆ ಓಡಿಹೋಗುತ್ತಿರುವರೆಂಬುದನ್ನು ಮತ್ತು ಅವರು ಹೇಗೆ ಸಂಪೂರ್ಣವಾಗಿ ಸೋಲಿಸಲ್ಪಟ್ಟಿರುವರೆಂಬುದನ್ನು ನೋಡಿದಾಗ ಅವನು ಇಡಲ್‌ಕಾವ್‌ನಿಗೆ “ಖಾವಂದರೆ, ನೀವು ಜೀವಂತವಿರಬಯಸಿದರೆ ನನ್ನ ಹಿಂದೆ ಬನ್ನಿ” ಎಂದು. ಮತ್ತು ಇಡಲ್‌ಕಾವ್ ಒಂದು ಆನೆಯ ಮೇಲೆ ಆಶ್ರಯ ಪಡೆದು ತನ್ನ ಶಿಬಿರವನ್ನು ಮತ್ತು ತನ್ನಲ್ಲಿದ್ದ ಎಲ್ಲವನ್ನೂ ತೊರೆದು ಅವನನ್ನು ಹಿಂಬಾಲಿಸಿದ. ಅಸದಕಾವ್ ಅವನು ಭೂಮಾರ್ಗದಿಂದ ಪಯಣ ಬೆಳೆಸಬೇಕೆಂದು ಇಚ್ಛಿಸಿದ್ದರಿಂದ ಗಡುವು ಹುಡುಕಲು ಅವನು ಕಾಳಜಿ ವಹಿಸಲಿಲ್ಲ, ಆದರೆ ದಕ್ಷಿಣಕ್ಕಿರುವ ಬೆಟ್ಟದ ಸಾಲುಗಳನ್ನು ಬಳಸಿ ಆ ಮಾರ್ಗವಾಗಿ ಹೋದ.[7]

ಇನ್ನೂರು ಅಶ್ವಾಳು, ಆನೆಗಳು ಮತ್ತು ಕಾಲಾಳುಗಲೊಂದಿಗೆ ರಾಚೋಲಿನಿಂದ ಹೊರಕ್ಕೆ ದಾಳಿ ಮಾಡಿದ ದಳವಾಯಿಗೆ ಏನಾಯಿತೆಂದು ಕೇಳಿದರೆ ನಾನು ಹೇಳುವುದೇನೆಂದರೆ ಅವನು ರಣರಂಗದಲ್ಲಾಗುತ್ತಿದ್ದುದರ ಬಗೆಗೆ ಸಂಪರ್ಕವಿಟ್ಟುಕೊಂಡಿದ್ದ ; ಇಡಲ್‌ಕಾವ್ ಸೋತಿರುವ ನೆಂದು ಕೇಳಿದಾಕ್ಷಣ ಅವನು ದುರ್ಗದಲ್ಲಿ ಆಶ್ರಯ ಪಡೆಯಲೋಸುಗ ಹಿಂದೆ ತಿರುಗಿದನು. ಅವನು ಮತ್ತು ದುರ್ಗದಲ್ಲಿನ ಇನ್ನೊಬ್ಬ ದಳವಾಯಿಯ ನಡುವೆ ವೈಮನಸ್ಸು ಇದ್ದುದರಿಂದ ಒಳಗಿದ್ದವರಿಗೆ ಅವನನ್ನು ಬರಮಾಡಿಕೊಳ್ಳುವ ಮನಸ್ಸಿರಲಿಲ್ಲ. ತನಗೆ ಪ್ರವೇಶ ನೀಡುತ್ತಿಲ್ಲವೆಂದು ಕಂಡುಕೊಂಡ ಅವನು ತನ್ನನ್ನು ಉಳಿಸಿಕೊಳ್ಳುವುದು ಹೇಗೆಂದು ವಿಚಾರ ಮಾಡಲೇಬೇಕಾಯಿತು.ಮತ್ತು ಅವನು ದೂರ ಕೆಳಗಡೆಯಿದ್ದ ಇನ್ನೊಂದು ಗಡುವಿನ ಮೂಲಕ ನದಿ ದಾಟಿ ತನ್ನನ್ನು ಉಳಿಸಿಕೊಂಡ. ಒಳಗಿದ್ದವನು ನಗರವನ್ನು ಈಗ ತಾನೇ ಪಡೆಯಬಹುದು ಮತ್ತು ತನ್ಮೂಲಕ ತಾನು ಶ್ರೀಮಂತನಾಗುವೆನು ಎಂದು ಬಗೆದನು ಮತ್ತು ಆ ಕಾರಣಕ್ಕಾಗಿ ಆ ದಳವಾಯಿಯನ್ನ ಒಳಗೆ ಬರಗೊಡಲಿಲ್ಲ ಎಂದು ಅನೇಕರು ನಂಬಿದರು.

 

ಅಧ್ಯಾಯ ೧೦

ರಾಜ ಹೀಗೆ ಶಿಬಿರದಲ್ಲಿದ್ದು ಮೂರರ ಆಳಿದುಳಿದ ಕೊಳ್ಳೆಯನ್ನು ಸಂಗ್ರಹಿಸಲು ಆಜ್ಞಾಪಿಸಿದನು, ಮತ್ತು ಸೆರೆ ಸಿಕ್ಕ ಐವರು ದಳವಾಯಿಗಳು (ಅತ್ಯುನ್ನತ ಹುದ್ದೆಯವರು ಮೃತರಲ್ಲಿದ್ದರು) ದೊರೆತರು. ಅವರಲ್ಲಿ ಇಡಲ್‌ಕಾವ್‌ನ ಎಲ್ಲ ಸೇನೆಗಳ ಮಹಾದಂಡ ನಾಯಕನಾಗಿದ್ದ ಸಲಾಬತ್‌ಕಾವ್ (ಸಲಾಬತ್‌ಖಾನ) ಅತಿ ಪ್ರಮುಖನು. ಯುದ್ಧದಲ್ಲಿ ತನ್ನ ಮೈಗಾವಲಿಗಾಗಿ ಅವನು ಮೂರರೊಂದಿಗಿದ್ದ ಸ್ವಪಕ್ಷ ದ್ರೋಹಿಗಳಾಗಿದ್ದ ಪೋರ್ತುಗೀಜರಲ್ಲಿ ಐನೂರು ಜನರನ್ನು ಇರಿಸಿಕೊಂಡಿದ್ದ. ಈ ಸಲಾಬತ್‌ಕಾವ್ ತನ್ನ ಸೈನ್ಯ ಸೋತುದನ್ನು ಕಂಡಾಕ್ಷಣ ಯೋಧರ ತಂಡವನ್ನು ಕೂಡಿಸಿ ವ್ಯೆಹ ರಚಿಸಲೆತ್ನಿಸಿದ, ಆದರೆ ಅದು ಕೈಗೂಡಲಿಲ್ಲ. ಏಕೆಂದರೆ, ತನ್ನನ್ನು ಉಳಿಸಿಕೊಳ್ಳುವುದನ್ನು ಬಿಟ್ಟು ಬೇರೆ ಯಾವುದನ್ನೂ ಯೋಚಿಸುವ ಒಬ್ಬನೂ ಅವರಲ್ಲಿರಲಿಲ್ಲ. ಮತ್ತು ಸೋಲುವುದಕ್ಕಿಂತ ಸಾಯುವುದೆ ಮೇಲೆಂದು ಬಗೆದು ಅವನು ರಾಜನ ಸೇನೆಯ ಮೇಲೆ ಬಿದ್ದು ಅವರನ್ನು ಕೊಚ್ಚಿ ಹಾಕುತ್ತ ಎಂಥ ಅದ್ಭುತ ಕಾರ್ಯಗಳನ್ನು ಮಾಡಿದನೆಂದರೆ ಮುಂದೆ ಎಂದಿಗೂ ಅವನು ಮತ್ತು ಅವನ ಪೋರ್ತುಗೀಜರು ನೆನಪಿನಲ್ಲಿ ಉಳಿದರು. ಅವರ ಭಯಂಕರ ಹೊಡೆತಗಳು ಮತ್ತು ಅವರ ಕಾರ್ಯಗಳು ಎಷ್ಟು ಭೀತಿ ಹುಟ್ಟಿಸಿದವೆಂದರೆ ಅವರನ್ನು ಮುಂದೆ ಹೋಗಗೊಡಲಾಯಿತು ಮತ್ತು ಸೈನ್ಯದೊಳಗೆ ಅವರು ಎಷ್ಟು ನುಗ್ಗಿದರೆಂದರೆ ರಾಜನ ಅಂಗರಕ್ಷಕ ಪಡೆಯ ಸಮೀಪಕ್ಕೆ ತಲುಪಿದರು. ಅಲ್ಲಿ ಸಲಾಬತ್‌ಕಾವ್‌ನ ಕುದುರೆಯನ್ನು ಕೊಲ್ಲಲಾಯಿತು. ಅವನಿಗೆ ರಕ್ಷಣೆ ಒದಗಿಸಲು ಪೋರ್ತುಗೀಜರು ಸಾಹಸಕಾರ್ಯ ಮಾಡುತ್ತ ಎಷ್ಟೊಂದು ಜನರನ್ನು ಕೊಂದರೆಂದರೆ ಅವರು ತಮ್ಮ ಹಿಂದೆ ವಿಶಾಲ ರಸ್ತೆಯನ್ನು ಬಿಟ್ಟರು. ಅದನ್ನು ಪ್ರವೇಶಿಸಲು ಯಾರೂ ಧೈರ್ಯ ಮಾಡಲಿಲ್ಲ ಮತ್ತು ಅವರು ಎಷ್ಟು ಚೆನ್ನಾಗಿ ಕಾದಿದರೆಂದರೆ ಅವರು ಸಲಾಬತ್‌ಕಾವ್‌ನಿಗಾಗಿ ಇನ್ನೊಂದು ಕುದುರೆ ಒದಗಿಸಿದರು. ಅವನು ಅದನ್ನೇರಿದ ತಕ್ಷಣ ಕುರಿಗಳ ಮಧ್ಯೆ ರೋಷತಪ್ತ ತೋಳನೇ ಆದನು; ಆದರೆ, ಆಗಲೆ ಅವರು ಎಷ್ಟೊದು ದಣಿದಿದ್ದರು ಮತ್ತು ಎಲ್ಲೆಡೆ ಗಾಯಗೊಂಡಿದ್ದರು ಮತ್ತು ವೈರಿಗಳಿಂದ ಸುತ್ತುವರಿಯಲ್ಪಟ್ಟಿದ್ದರೆಂದರೆ ಅವರ ಮೆಲೆ ಎಲ್ಲ ಕಡೆಗಳಿಂದಲೂ ಆಕ್ರಮಣ ಮಾಡಲಾಯಿತು. ಕೊನೆಗೆ ಸಲಾಬತ್‌ಕಾವ್ ಮತ್ತು ಅವನೊಂದಿಗೆ ಅವನ ಕುದುರೆ ನೆಲಕ್ಕುರುಳಿತು. ಮತ್ತು ಅವನನ್ನು ರಕ್ಷಿಸಲೆತ್ನಿಸಿದ ಎಲ್ಲ ಪೋರ್ತುಗೀಜರು ಒಬ್ಬನೂ ಪಾರಾಗದಂತೆ ಕೊಲ್ಲಲ್ಪಟ್ಟಿದ್ದರಿಂದ ಮತ್ತು ಅವನೂ ಅನೇಕ ಕಡೆ ಗಾಯಗೊಂಡಿದ್ದರಿಂದ ಅವನನ್ನು ಸೆರೆಹಿಡಿಯಲಾಯಿತು.

ಲೂಟಿಯ ಮೊತ್ತ ಒರ್ಮುಜ್‌ದ ನಾನೂರು ಕುದುರೆಗಳು, ಮತ್ತು ಒಂದು ನೂರು ಆನೆಗಳು, ಚಿಕ್ಕವುಗಳಲ್ಲದೆ ನಾನೂರು ಭಾರಿ ತೋಪುಗಳು ಆಗಿತ್ತು. ಅವುಗಳನ್ನೊಯ್ಯುವ ಫಿರಂಗಿ ಗಾಡಿಗಳ ಸಂಖ್ಯೆ ಒಂಬೈನೂರಾಗಿತ್ತು, ಮತ್ತು ಅನೇಕ ಡೇರೆಗಳು ಮತ್ತು ಮಂಡಪಗಳೂ ಸೇರಿದ್ದವು. ಹೇಸರಗತ್ತೆ ಮತ್ತು ಎತ್ತು ಇತರ ಪ್ರಾಣಿಗಳ ಲೆಕ್ಕವನ್ನು ನಾನು ಮಾಡುವುದಿಲ್ಲ. ಏಕೆಂದರೆ, ಅವುಗಳ ಲೆಕ್ಕವಿಲ್ಲದಷ್ಟಿದ್ದವು, ಹಾಗೆಯೆ, ಪುರುಷರು ಮತ್ತು ಬಾಲಕರದಾಗಲಿ ರಾಜ ಬಿಡುಗಡೆ ಮಾಡಲು ಆಜ್ಞಾಪಿಸಿದ ಕೆಲವು ಸ್ತ್ರೀಯರದಾಗಲಿ ಸಂಖ್ಯೆಗಳು ಎಣಿಕೆಯಿಲ್ಲದವುಗಳು.

ಎಲ್ಲ ಮೃತರನ್ನೂ ಅಗ್ನಿಗರ್ಪಿಸುವವರೆಗೆ ಮತ್ತು ಅವರಿಗೆ ಸಾಂಪ್ರದಾಯಿಕ ಗೌರವ ನೀಡುವವರೆಗೆ ರಾಜ ಇಲ್ಲಿ ಇದ್ದ. ಮತ್ತು ಇಲ್ಲಿ ತನ್ನ ಕಡೆ ಸತ್ತವರ ಆತ್ಮಗಳಿಗೋಸ್ಕರ ಬಹಳ ದಾನವಿತ್ತ. ಇವರ ಸಂಖ್ಯೆ ಹದಿನಾರು ಸಾವಿರಕ್ಕೂ ಹೆಚ್ಚಿತ್ತು. ಈ ಕೆಲಸಗಳನ್ನು ಮಾಡಿ ಅವನು ಪುನಃ ರಾಚೊಲ್ ಕಡೆಗೆ ತಿರುಗಿದ ಮತ್ತು ಮೊದಲು ಮಾಡಿದಂತೆಯೆ ತನ್ನ ಶಿಬಿರ ನೆಲೆಸಿದ.

ರಾಜನ ಈ ಮರುಳುವಿಕೆಯ ಕಾಲದಲ್ಲಿ ಕ್ರಿಸ್ಟೊವಾಒ ದ ಫಿಗೈರೆಡೊ ಅವನನ್ನು ಕಾಣಲು ಅಲ್ಲಿಗೆ ಬಂದ. ಅವನು ಆ ಸಮಯದಲ್ಲಿ ಕುದುರೆಗಳೊಂದಿಗೆ ಬಿಸ್ನಗ ನಗರದಲ್ಲಿದ್ದ ಮತ್ತು ಅವನು ತನ್ನೊಂದಿಗೆ ಇಪ್ಪತ್ತು ಪೋರ್ತುಗೀಜ ತುಬಾಕಿದಾರರನ್ನು ಕರೆತಂದ. ತಾನೂ ಸಹ ಒಂದು ತುಬಾಕಿ ಹಿಡಿದುಕೊಂಡಿದ್ದ. ಅವನ ಸಹವಾಸದಲ್ಲಿ ಬಹಳ ಸಂತೋಷಗೊಂಡ ರಾಜ ಅವನು ಯುದ್ಧವನ್ನೂ ತನ್ನ ಮಹಾಬಲವನ್ನೂ ನೋಡುತ್ತಾನೆಂದು ಹರ್ಷಪಟ್ಟ. ಇಡಲ್‌ಕಾವ್‌ನಿಂದ ಪಡೆದ ಕೆಲವು ಡೇರೆಗಳನ್ನು ಅವನಿಗೆ ಕೊಡಬೇಕೆಂದೂ ಮತ್ತು ಅವನಿಗೆ ಇರಲು ತನ್ನ ವಸತಿಗಳಿಗೆ ಹತ್ತಿರವೇ ಏರ್ಪಡಿಸಬೇಕೆಂದೂ ಅವನು ಅಜ್ಞಾಪಿಸಿದ. ಒಂದು ದಿನ ಕ್ರಿಸ್ಟೊವಾಒ ದ ಫಿಗೈರೆಡೊ ತಾನು ಹೊರಟು ನಗರವನ್ನು ವೀಕ್ಷಿಸ ಬಯಸಿರುವುದಾಗಿ ರಾಜನಿಗೆ ತಿಳಿಸಿದ. ಆದರೆ, ಅವನಿಗೆ ಯಾವ ಅಪಾಯವೂ ಆಗಬಾರದೆಂದು ಬಯಸಿದ ರಾಜ ಅವನು ಅದನ್ನು ಬಯಸಬಾರದೆಂದು ಹೇಳಿದ. ಆದರೆ, ಯುದ್ಧವೇ ಪೋರ್ತುಗೀಜರ ಕೆಲಸವಾದುದರಿಂದ ಇದು ಅವನು ತನಗೆ ನೀಡಬಹುದಾದ, ಅರ್ಥಾತ್ ಮಹಾರಾಜ ತಾನು ಹೋಗಿ ಮೂರರನ್ನು ನೋಡಲು ಅನುಮತಿ ನೀಡುವುದು, ಇತಿ ದೊಡ್ಡ ಅನುಗ್ರಹವೆಂದು ಕ್ರಿಸ್ಟೊವಾಒ ದ ಫಿಗೈರೆಡೊ ಉತ್ತರವಿತ್ತ. ಆದುದರಿಂದ, ರಾಜ ಅವನಿಗೆ ಅನುಮತಿ ನೀಡಿ ಅವನೊಂದಿಗೆ ಕೆಲವು ಯೋಧರನ್ನು ಕಳಿಸಿದ. ಕ್ರಿಸ್ಟೊವಾಒ ದ ಫಿಗೈರೆಡೊ ಗೋಡೆಗಳ ಮುಂದಣ ಕಂದಕಕ್ಕೆ ತೀರ ಸಮೀಪ ಹೋದ. ತನ್ನನ್ನು ಸಾಧ್ಯವಾದಷ್ಟು ಮರೆಯಾಗಿರಿಸಿಕೊಂಡು ಮೂರರು ಗೋಡೆಯ ಮೇಲೆ ಎಷ್ಟೊಂದು ಭಯವಿಲ್ಲದೆ ತಮ್ಮನ್ನು ತೆರೆದಿಟ್ಟುಕೊಂಡಿದ್ದನ್ನು ಕಂಡು ತನ್ನೊಂದಿಗೆ ತಂದಿದ್ದ ತುಬಾಕಿದಾರರೊಂದಿಗೆ ಅವರ ಮೇಲೆ ಯಾವ ರೀತಿ ಗುಂಡು ಹಾರಿಸಲಾರಂಭಿಸಿದನೆಂದರೆ ಅವನು ಅನೇಕರನ್ನು ಕೊಂದನು. ಮೂರರು ಅಜಾಗರೂಕರೂ ಭಯದಿಂದ ದೂರವಿರುವವರೂ ಅಲ್ಲಿಯವರೆಗೆ ಬಂದೂಕು ಅಥವಾ ಅಂಥ ಇತರ ಆಯುಧಗಳಿಂದ ಜನರನ್ನು ಕೊಂದುದನ್ನು ನೋಡಿರದವರೂ ಆಗಿದ್ದರು. ಆದುದರಿಂದ ಅವರು (ಈಗ) ಗೋಡೆಯನ್ನು ಬಿಡತೊಡಗಿದರು. ರಾಜನ ಸೈನಿಕರು ಅದನ್ನು ಸುರಕ್ಷಿತವಾಗಿ ತಲುಪಲು ಅವಕಾಶ ಕಂಡುಕೊಂಡರು, ಮತ್ತು ಅವರು ಕಟ್ಟಡದ ಬಹುಭಾಗವನ್ನು ಕೆಡವತೊಡಗಿದರು. ಈ ಬದಿಗೆ ಎಷ್ಟೊಂದು ಜನರು ಸೇರಿದ್ದರೆಂದರೆ ಕ್ರಿಸ್ಟೊವಾಒ ದ ಫಿಗೈರೆಡೊ ತನ್ನ ಪೋರ್ತುಗೀಜರೊಂದಿಗೆ ನಗರದೊಳಗೆ ಪ್ರವೇಶಿಸಿರುವನೆಂದು ಅನ್ನುತ್ತ ಇಡಿ ಶಿಬಿರದಲ್ಲಿ ಕೋಲಾಹಲ ಉಂಟಾಗಿತ್ತು. ಇದನ್ನು ರಾಜನಿಗೆ ಹೇಳಲಾಯಿತು. ಆ ಇನ್ನೊಂದು ಯುದ್ಧದ ದಿನ ಹೇಗೆ ಪೋರ್ತುಗೀಜರು ಬಂದಿದ್ದರೆಂಬುದು ನೆನಪಿಗೆ ಬರುವವರೆಗೆ ನಗರ ದೊಳಗಿದ್ದವರಿಗೆ ಏನು ನಡೆದಿದೆಯೆಂಬುದಾಗಲಿ ಈ ಜನರು ರಾಜನ ಸೇವೆಯಲ್ಲಿ ಹೇಗೆ ನಿರತರಾದರೆಂಬುದಾಗಲಿ ಗೊತ್ತಾಗಲಿಲ್ಲ. ಆಗ ಅವರು ತಮ್ಮ ಸೋಲು ಕಟ್ಟಿಟ್ಟದೆಂದು ಪರಿಗಣಿಸಿದರು. ಏಕೆಂದರೆ, ಆ ಜನರ ಸಹಾಯದಿಂದ ರಾಜನ ಜನ ಭಯವಿಲ್ಲದೆ ಗೋಡೆಗೆ ಬಂದರು. ಅದು ಆಗಲೆ ಅನೇಕ ಕಡೆ ಹಾನಿಗೊಳಗಾಗಿತ್ತು. ಏಕೆಂದರೆ, ನಗರದ ಫಿರಂಗಿಗಳು ಎಷ್ಟು ಎತ್ತರದಲ್ಲಿದ್ದವೆಂದರೆ ಅವು ಗೋಡೆಯಡಿ ಇರುವ ಜನರಿಗೆ ಯಾವ ಹಾನಿಯನ್ನೂ ಉಂಟುಮಾಡಲು ಶಕ್ಯವಿರಲಿಲ್ಲ. ಗೋಡೆ ಕೂಡ ಒಳಗೆ ಮಣ್ಣಿನಿಂದ ತುಂಬಲ್ಪಟ್ಟಿತ್ತು ಮತ್ತು ಬಿರುಕಗಳಲ್ಲಿ ಫಿರಂಗಿಗಳಿರಲಿಲ್ಲ. ಅಲ್ಲಿಯವರೆಗೆ ಅವರು ಕೆಲ ನಗರವಾಸಿಗಳನ್ನು ಕೊಂದಿದ್ದರು. ಮಿಕ್ಕವರಿಗೆ ಕಲ್ಲುಗಳನ್ನು ಪೂರೈಸಲಾಗಿದ್ದು ಅವುಗಳನ್ನು ಅವರು ಗೋಡೆಯ ಮೇಲಿಂದ ತುಬಾಕಿಗಳು ಮತ್ತು ಬಾಣಗಳೊಂದಿಗೆ ದಾಳಿಗಾರರ ಮೆಲೆ ಎಸೆದರು. ಆದುದರಿಂದ, ರಾಜನ ಜನ ಗೋಡೆ ತಲುಪಲು ಶಕ್ಯವಾದರೂ ಕೂಡ ಅವರು ಗಾಯ ಗೊಂಡಿದ್ದುದಂತೂ ನಿಜ. ಆದರೆ, ಪೋರ್ತುಗೀಜರೊಂದಿಗೆ ಕ್ರಿಸ್ಟೊವಾಒ (ಫಿರಂಗಿಯರು, ಪ್ರ್ಯಾಂಕರು ಅಥವಾ ಯುರೋಪಿಯನ್ನರು)ದ ಫಿಗೈರೆಡೊ ವೈರಿಗಳು ಗೋಡೆಯ ಮೇಲೆ ಬಾರದಂತೆ ತಡೆದುದರಿಂದ ಹಿಂದೂಗಳು ಅದನ್ನು ಅನಾಯಾಸವಾಗಿ ತಲುಪಲು ಶಕ್ತರಾದರು.

ಇಲ್ಲಿ ರಾಜನ ದಳವಾಯಿಗಳು ಅವನ ಜೊತೆಗೆ ಒಂದು ದಿನವಾದರೂ ಮೂರರ ಮೇಲೆ ಆಕ್ರಮಣ ಮಾಡಲು ಅನುಮತಿ ನೀಡಬೇಕೆಂದು ಕ್ರಿಸ್ಟೊವಾಒ ದ ಫಿಗೈರೆಡೊನನ್ನು ವಿನಂತಿಸಿಕೊಂಡರು, ಮತ್ತು ಅವನು ಅವರಲ್ಲಿ ಅಧಿಕ ಗೌರವಾನ್ವಿತರಾದವರನ್ನು ಸಂತುಷ್ಟಗೊಳಿಸಲೊಸುಗ ಆ ದಿನಗಳಂದು ಅವರೊಂದಿಗೆ ನಡೆದ. ಒಂದು ದಿನ ಅವನು ತನ್ನ ತುಬಾಕಿದಾರರನ್ನು ಮೂರು ತಂಡಗಳಾಗಿ ವಿಭಜಿಸಿ, ಕಾಣಿಸಿಕೊಂಡ ಮೂರರಲ್ಲಿ ಅನೇಕರನ್ನು ಕೊಲ್ಲತೊಡಗಿದುದನ್ನು ನೋಡಿ ಯಾರೂ ಕಾಣಿಸಿಕೊಳ್ಳಲು ಧೈರ್ಯ ಮಾಡಲಿಲ್ಲ. ಆಗ ಮೂರು ತಂಡಗಳಲ್ಲಿದ್ದ ರಾಜನ ಸೈನಿಕರು ಅನೇಕ ಗುದ್ದಲಿ ಹಾರೆಗಳೊಂದಿಗೆ ಗೋಡೆಯ ಮೇಲೆ ಪ್ರಹಾರ ಮಾಡತೊಡಗಿದರು. ಮತ್ತು ಉಳಿದವರು ತಮ್ಮ ಮಟ್ಟಿಗೆ ತಾವೆ ಆಕ್ರಮಣ ಮಾಡಬೇಕೆಂದು ಅವನು ಹೇಳಿ ಕಳಿಸಿದ. ಇದರ ಪಂಕ್ತಿಯನ್ನು ತ್ಯಜಿಸಲಾರಂಭಿಸಿದರು. ಸ್ತ್ರೀಯರು ಮತ್ತು ಮಕ್ಕಳು ದುರ್ಗದಲ್ಲಿ ಆಶ್ರಯ ಪಡೆದರು. ತನ್ನ ಜನರಲ್ಲಿ ಹರಡಿದ ಹತಾಶೆಯನ್ನು ಕಂಡ ನಗರದ ದಳವಾಯಿ ಹುರಿದುಂಬಿಸುವ ಮಾತುಗಳಿಂದ ಅವರನ್ನು ಮರಳಿಸಲು ಯತ್ನಿಸಿದ ಮತ್ತು ಅವರಲ್ಲಿ ಕೆಲವರೊಂದಿಗೆ ತಾನು ಕಂಡ ಬಹಳ ಒತ್ತಡ ಹೇರಲ್ಪಟ್ಟಿದ್ದ ಗೋಡೆಭಾಗಕ್ಕೆ ಬಂದು ಅವರು ಗೋಡೆಗೆ ವಾಪಸು ಬರಬೇಕೆಂದು ಭಯಪಡಬಾರದೆಂದೂ ಮೊರೆಯಿಟ್ಟ. ಸಹಾಯ ಮಾಡುತ್ತಿದ್ದ ಫ್ರ್ಯಾಂಕರು ಆ ಸ್ಥಳದಲ್ಲಿಇರುವವರೆಂದೂ ಯಾರಾದರೂ ಕಂಡಾಕ್ಷಣ ಅವನು ಮೃತನಾಗುವನೆಂದೂ ಅವನಿಗೆ ಕೆಲವರು ಉತ್ತರಿಸಿದರು. ಅವನು ಪೋರ್ತುಗೀಜರು ಎಲ್ಲಿರುವರೆಂಬುದನ್ನು ಸ್ವತಃ ನೋಡಬಯಸಿ ಒಂದು ಜೇರುಗಂಡಿಯಿಂದ ತನ್ನ ದೇಹವನ್ನು ಮುಂದೆ ಬಾಗಿಸಿದಾಗ ಅವನ ಹಣೆಯ ಮಧ್ಯದಲ್ಲಿ ನೆಟ್ಟ ತುಬಾಕಿ ಗುಂಡಿನಿಂದ ಸತ್ತ. ಅವನನ್ನು ಕ್ರಿಸ್ಟೊವಾಒ ದ ಫಿಗೈರೆಡೊ ಕೊಂದನೆಂದು ಮೂರರೆಂದರು ಮತ್ತು ಅವರು ಅವನನ್ನು ಗಮನಿಸಿದರು. ದಳವಾಯಿ ಹೀಗೆ ಸತ್ತ ಕೂಡಲೆ ನಗರದಲ್ಲಿ ಬಹಳ ರೋದನವಾಯಿತು ಮತ್ತು ಗೋಡೆಯನ್ನು ತ್ಯಜಿಸಲಾದುದರಿಂದ ರಾಜನ ಶಿಬಿರದ ಜನರಿಗೆ ತಮಗೆ ಇಷ್ಟಬಂದಂತೆ ಅದನ್ನೊಡೆಯಲು ಬಿಡಲಾಯಿತು. ಅವರು ಒಳಗೆ ಎದ್ದ ರೋದನವನ್ನು ಗಮನಿಸಿದರು ಮತ್ತು ಗೋಡೆಯನ್ನು ರಕ್ಷಿಸಲು ಯಾರೂ ಇಲ್ಲದುದನ್ನು ನೋಡಿದರು. ಆದುದರಿಂದ ಅವರು ಏನು ಆಗುತ್ತದೆಂದು ನೋಡಲು ಹಿಂದೆ ಸರಿದರಲ್ಲದೆ ಆ ದಿನ ಯುದ್ಧ ನಿಲ್ಲಿಸಿದರು.

ಅಧ್ಯಾಯ ೧೧

ಮರುದಿನ, ಅಂದರೆ ಇಡಲ್‌ಕಾವ್ ಸೋಲಿಸಲ್ಪಟ್ಟ ಯುದ್ಧ ನಡೆದು ಇಪ್ಪತ್ತು ದಿನಗಳಾದ ಬಳಿಕ ನಗರದ ಜನ ದ್ವಾರವೊಂದನ್ನು ತೆರೆದು ತಮ್ಮ ಮುಂದೆ ಶ್ವೇತ ಧ್ವಜವೊಂದನ್ನು ಹಿಡಿದು ತಮ್ಮ ಕೈಗಳನ್ನು ಮೇಲೆತ್ತಿಕೊಂಡು ರಾಜನನ್ನು ಬೇಡಿಕೊಳ್ಳುತ್ತ ರಾಜನ ಶಿಬಿರದತ್ತ ನಡೆದರು.

ರಾಜನಿಗೆ ಅವರ ಆಗಮನವನ್ನು ತಿಳಿಸಲಾಗಿ ಅವರನ್ನು ಬರಮಾಡಿಕೊಳ್ಳಲು ಅವನು ತನ್ನ ಮಂತ್ರಿ ಸೊಲೆಸ್ಟೆಮಾ  ಸಾಳುವ ತಿಮ್ಮನಿಗೆ ಆಜ್ಞೆ ಮಾಡಿದ; ಮತ್ತು ಅವನು  ಅವರನ್ನು ಬರಮಾಡಿಕೊಳ್ಳಲು ಹೊರಬಂದಾಗ ಅವರು ರಾಜನ ಕೈಯಿಂದ ದಯೆ ಅನುಭವಿಸುವೆವೆಂದು ಆಶಿಸತೊಡಗಿದರು.

ಹೀಗೆ ಅವರು ಅವನಿದ್ದೆಡೆ ಬಂದರು ಮತ್ತು ಅಲ್ಲಿ ಅವರು ಅವನ ಮುಂದೆ ಬಹಳ ನರಳುವಿಕೆ ಹಾಗೂ ಕಣ್ಣೀರುಗಳೊಂದಿಗೆ ಸಾಷ್ಟಾಂಗ ಹಾಕಿ ಅವನ ಕರುಣೆ ಮತ್ತು ಔದಾರ್ಯಕ್ಕಾಗಿ ಬೇಡಿಕೊಂಡರು.

ರಾಜ ಅವರಿಗೆ ಎದ್ದೇಳಲು ಹೇಳಿ ಅವರೆಲ್ಲರ ಪ್ರಾಣ ಹಾಗೂ ಆಸ್ತಿಗಳನ್ನು ಉಳಿಸು ವುದಾಗಿಯೂ ಅವರು ಯಾವುದೆ ಭಯವಿಲ್ಲದೆ ನಗರಕ್ಕೆ ಹಿಂತಿರುಗಬೇಕೆಂದೂ ಮರುದಿನ ತಾನು ನಗರ ಪ್ರವೇಶಿಸುವುದಾಗಿಯೂ ಹೇಳಿದ ಮತ್ತು ತನ್ನ ದಳವಾಯಿಯೊಬ್ಬನಿಗೆ ನಗರವನ್ನು ವಶಕ್ಕೆ ತೆಗೆದುಕೊಳ್ಳಲು ಆಜ್ಞಾಪಿಸಿದ.

ಮೂರರು ಈ ರೀತಿ ರಾಜನ ಹತ್ತಿರವಿದ್ದಾಗ (ಸೈನಿಕರು ನೋಡುತ್ತ ನಿಂತಿರಲು) ಕ್ರಿಸ್ಟೊವಾಒ ದ ಫಿಗೈರೆಡೊನನ್ನು ಕಂಡರು. ನಗರದ ವಿಜಯ ಮತ್ತು ಸಾಧೀನಕ್ಕೆ ಆ ವಿದೇಶೀಯ ಕಾರಣನೆಂದೂ ಅವನು ತಮ್ಮ ದಳವಾಯಿಯನ್ನು ಕೊಂದನೆಂದೂ ಮತ್ತು ಅವನು ತನ್ನ ಜನರೊಂದಿಗೆ ಅನೇಕ ಮೂರರನ್ನು ಕೊಂದುದರಿಂದ ನಗರದ ಪತನವಾಯಿತೆಂದೂ ರಾಜನಿಗೆ ಹೇಳಿದರು. ರಾಜ ಕ್ರಿಸ್ಟೊವಾಒ ದ ಫಿಗೈರೆಡೊನತ್ತ ದೃಷ್ಟಿ ಬೀರಿ, ತಲೆದೂಗಿ ಜನರತ್ತ ತಿರುಗಿ ಒಬ್ಬ ಒಳ್ಳೆಯ ಮನುಷ್ಯನಿಂದ ಎಂಥ ದೊಡ್ಡ ಕಾರ್ಯಗಳು ಜರುಗಬಹುದೆಂಬುದನ್ನು ಗಮನಿಸಬೇಕೆಂದು ಹೇಳಿದ. ಆ ಮೇಲೆ ಅವನು ತನ್ನ ಡೇರೆಗೆ ಮತ್ತು ನಗರದ ಜನರು ನಗರಕ್ಕೆ ಮರಳಿದರು. ರಾಜನ ಸೈನಿಕರು ಸಂತೋಷೋತ್ಸವ ಆಚರಿಸಿದರು.

ಅಧ್ಯಾಯ ೧೨

ಮರುದಿನ ಬೆಳಗಾದ ಕೂಡಲೆ ತನ್ನ ದಿನನಿತ್ಯದ ಮತ್ತು ವಿಜಯದ ನಂತರ ಅವರ ಪದ್ಧತಿಯಾಗಿರುವಂತೆ ದೇವರಿಗೆ ಕೃತಜ್ಞತೆ ಅರ್ಪಿಸುವ ಇತರ ಪ್ರಾರ್ಥನೆಗಳನ್ನು (ನಿಜಕ್ಕೂ ಅವರು ಪ್ರಾರ್ಥಿಸುವ ಮುಖ್ಯ ವಿಷಯವೆಂದರೆ ಇಂಥ ವಿಷಯಗಳೇ) ಸಲ್ಲಿಸಿದ ನಂತರ ಇತರ  ಮಹಾ ಪ್ರಭುಗಳು ಮತ್ತು ತನ್ನ ದಳವಾಯಿಗಳೊಂದಿಗೆ ಅಶ್ವಾರೂಢನಾಗಿ ತನ್ನ ಮೈಗಾವಲಿನವರೊಂದಿಗೆ ನಗರದ ಹಾದಿ ಹಿಡಿದ. ಅಲ್ಲಿ ನಾಗರಿಕರು ಅವನ ಆಗಮನಕ್ಕಾಗಿ ಕಾದು ನಿಂತಿದ್ದರು. ಅವರು ತಮ್ಮ ನಿಜವಾದ ಭಾವನೆಗಳು ಪ್ರಮಾಣೀಕರಿಸುವುದಕ್ಕಿಂತ ಅಧಿಕ ಸಂತಸದ ಮುಖಚರ್ಯೆ ಹೊಂದಿ ಧೈರ್ಯಗೊಳ್ಳುತ್ತಲೂ ಜಯಕಾರ ಹಾಕುತ್ತ ಅವನನ್ನು ಹಿಂಬಾಲಿಸಿದರು. “ಇಷ್ಟು ವರ್ಷಗಳ ತರುವಾಯ ನಮ್ಮನ್ನು ಉಳಿಸಲು ನಿಮ್ಮನ್ನು ಕಳಿಸಿದ ದೇವರು ದೊಡ್ಡವನು” ಎಂದು ಅವರು ಜಯಕಾರ ಮಾಡುತ್ತ ಇವು ಮತ್ತು ಇತರ ಅಂಥ ಮಾತುಗಳಿಂದ ತಮ್ಮನ್ನು ಉಳಿಸಬೇಕೆಂದು ಮತ್ತು ತಮ್ಮ ಮೇಲೆ ದಯೆ ತೋರಬೇಕೆಂದು ಬೇಡಿಕೊಂಡರು. ಹೀಗೆ ದುರ್ಗಕ್ಕೆ ತೀರ ಸಮೀಪವಾಗಿ ಅವನು ನಗರದ ಅತ್ಯಂತ ಗೌರವಾನ್ವಿತ ಜನರನ್ನು ಕರೆಕಳಿಸಿದನು. ತಾನು ಅವರ ಎಲ್ಲ ಆಸ್ತಿಯನ್ನು ಉಳಿಸುವುದಾಗಿಯೂ ಅವರು ಅದರ ಮತ್ತು ತಮ್ಮ ಸುರಕ್ಷಿತತೆ ಎರಡರ ಬಗೆಗೂ ತಮಗಿಷ್ಟಬಂದಂತೆ ಸ್ವತಂತ್ರವಾಗಿ ನಡೆದುಕೊಳ್ಳಬಹುದೆಂದೂ ನಗರದಲ್ಲಿರಬಯಸುವವರು ಮೊದಲಿನಂತೆಯೆ ತಮ್ಮ ಹಳೆಯ ರಾಜ್ಯದಲ್ಲಿ ಉಳಿಯಬಹುದೆಂದೂ ಮತ್ತು ಬಿಟ್ಟು ಹೋಗಬಯಸುವವರು ಕೂಡಲೆ ತಮ್ಮ ಎಲ್ಲ ವಸ್ತುಗಳೊಂದಿಗೆ ಹಾಗೆ ಮಾಡಬಹುದೆಂದೂ ರಾಜ ಅವನರನ್ನುದ್ದೇಶಿಸಿ ಹೇಳಿದ. ಅವರೆಲ್ಲ ಆಕಾಶದತ್ತ ಕೈಯೆತ್ತಿ ತಮ್ಮೊಂದಿಗೆ ಇಂಥ ಮೃದು ವರ್ತನೆಗಾಗಿ ಕೃತಜ್ಞತೆಯಿಂದ ಸಾಷ್ಟಾಂಗ ಹಾಕಿದರು. ರಾಜ ಈ ರೀತಿ ನಿರತನಾದಾಗ ಅವನ ಸೈನಿಕರು ನಗರವನ್ನು ಲೂಟಿ ಮಾಡುತ್ತಿದ್ದಾರೆಂದು ಹೇಳಲು ಅಲ್ಲಿಗೆ ಕೆಲವರು ಬಂದರು. ಅವನು ಅದನ್ನು ತಡೆಯಲು ಕೂಡಲೆ ಕ್ರಮ ಕೈಗೊಂಡ ಮತ್ತು ಪ್ರತಿಯೊಂದನ್ನೂ ಅದರ ಒಡೆಯನಿಗೆ ಮರಳಿಸಲಾಯಿತು. ಆದರೆ ಇಂಥ ಪ್ರಸಂಗಗಳಲ್ಲಿ ಸೋತವರು ತಮಗೆ ಸ್ವಾತಂತ್ರ್ಯ ಸಿಕ್ಕರೆ ಸಾಕೆಂದು ಸಂತುಷ್ಟಗೊಂಡು ತಮಗೆ ಏನಾದರೂ ಮರಳಿ ಬರಬಹುದೆಂದು ಆಶೆ ಇಟ್ಟುಕೊಂಡಿರದಿದ್ದುದರಿಂದ ವಿಫುಲ ಲೂಟಿ ನಡೆದವು ; ಇವುಗಳಲ್ಲಿ ಕೆಲವು ನಂತರ ರಾಜನ ಕಿವಿ ತಲುಪಿದಾಗ ಅವನು ಹಾಗೆ ಮಾಡಿದವರನ್ನು ಚೆನ್ನಾಗಿ ದಂಡಿಸಿದನು.

ಅಲ್ಪ ಕಾಲದಲ್ಲಿಯೆ ಇಡಲ್‌ಕಾವ್‌ನ ಸೋಲು ಭಾರತಾದ್ಯಂತ ಮತ್ತು ಅವನು ಈ ಪ್ರದೇಶಗಳ ಮಹಾಪ್ರಭುವಾಗಿದ್ದುದರಿಂದ ಒಳಪ್ರದೇಶದ ಇತರ ಭಾಗಗಳಲ್ಲೂ ಜಾಹೀರಾಯಿತು. ಝೆಮೆಲುಕೊ, ಮಾದ್ರೆಮಲುಕೊ, ಡೆಸ್ತುಯ್ ಮತ್ತು ವಿರಿದೊರಿಗೆ ಮತ್ತು ದಖಿಮ್[1] ರಾಜನ ಗುಲಾಮರಂತಿದ್ದ ಇತರ ದೊರೆಗಳಿಗೂ ತಲುಪಿದ ಕೂಡಲೆ ಅವರು ಅವನನ್ನು ದ್ವೇಷಿಸುತ್ತಿದ್ದುದರಿಂದ ಸ್ವಲ್ಪ ಮಟ್ಟಿಗೆ ಅವರು ಸಂತೋಷಪಟ್ಟರಾದರೂ ಮತ್ತೊಂದು ಕಡೆ ತಮ್ಮ ಸುರಕ್ಷಿತತೆಗಾಗಿ ಅವರು ಭಯಪಡತೊಡಗಿದರು. ಆದುದರಿಂದ ಅವರೆಲ್ಲ ದೂತರನ್ನು ಕಳಿಸಲು ಏರ್ಪಾಡು ಮಾಡಿದರು ಮತ್ತು ಆ ದೂತರು ಬಂದಾಗ ರಾಜ ಇನ್ನೂ ರಾಚೊಲ್ ನಗರದೊಳಗೆ ಇದ್ದ. ರಾಜ ಇಷ್ಟು ಭದ್ರ ನಗರವನ್ನು ವಶಪಡಿಸಿಕೊಂಡುದಕ್ಕೆ ಅವರು ಅಚ್ಚರಿಪಟ್ಟರಾದರೂ ಅವನ ಶಕ್ತಿ ಎಷ್ಟು ದೊಡ್ಡದು ಮತ್ತು ಸೈನಿಕರು ಎಷ್ಟು ಅಸಂಖ್ಯ ಎಂಬುದನ್ನು ನೋಡಿ ಇನ್ನೂ ಹೆಚ್ಚು ಅಚ್ಚರಿಪಟ್ಟರು. ಅವನಿದ್ದಲ್ಲಿಗೆ ಬಂದು ತಾವು ತಂದಿದ್ದ ಪತ್ರಗಳನ್ನು ಕೊಟ್ಟರು ಮತ್ತು ಅವುಗಳನ್ನು ಕೂಡಲೇ ಓದಲಾಯಿತು. ಇವುಗಳಲ್ಲಿ ರಾಜ ತಾನು ಮಾಡಿರುವಂತೆ ಇಡಲ್‌ಕಾವ್‌ನನ್ನು ಸೋಲಿಸಿರುವುದರಿಂದ ತೃಪ್ತನಾಗಿ ಹೆಚ್ಚಿನ ಯುದ್ಧ ಮಾಡಬಾರದೆಂದು ಆ ದೊರೆಗಳು ಹೇಳಿದ್ದರು. ಇಡಲ್‌ಕಾವ್‌ನಿಂದ ತಾನು ತೆಗೆದುಕೊಂಡುದನ್ನು ಅವನಿಗೆ ಹಿಂತಿರುಗಿಸ ಬೇಕೆಂದೂ ಮತ್ತು ಹಾಗೆ ಮಾಡಿದರೆ ಅವನು ಏನೇ ಆಜ್ಞೆಯಿತ್ತರೂ ತಾವು ಅದನ್ನು ಯಾವಾಗಲೂ ಪಾಲಿಸುವುದಾಗಿಯೂ ಅವರು ರಾಜನ ಔದಾರ್ಯಕ್ಕೆ ಅರಿಕೆ ಮಾಡಿಕೊಂಡರು. ಆದರೆ, ಅವನಿಗೆ ಹಾಗೆ ಮಾಡಲು ಮನಸ್ಸಿಲ್ಲದುದಾದರೆ ತಾವು ಅವನಿಗೆ ಎದುರುಬೀಳದೆ ಗತ್ಯಂತರವಿಲ್ಲ ಮತ್ತು ಕೂಡಲೆ ಇಡಲ್‌ಕಾವ್‌ನನ್ನು ಸೇರಿ ಅವನು ಕಳೆದುಕೊಂಡುದನ್ನು ಅವನಿಗಾಗಿ ಕ್ಷಿಪ್ರವಾಗಿ ಮರಳಿ ಪಡೆಯುವೆವೆಂಬುದನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು ಹೇಳಿದ್ದರು. ಪತ್ರಗಳಲ್ಲಿದ್ದುದೇನೆಂಬುದನ್ನು ನೋಡಿದ ರಾಜ ಕೆಳಕಂಡ ರೀತಿಯಲ್ಲಿ ಅವರೆಲ್ಲರಿಗೂ ಒಂದೇ ಪತ್ರದ ಮೂಲಕ ಉತ್ತರಿಸಿದ. ಮಾನ್ಯರಾದ ಮಾದ್ರೆಮಲುಕೊ, ಝಮೆಲುಕೊ, ದೇಸ್ಕರ ಮತ್ತು ದಖಿಮ್ ರಾಜ್ಯದ ಉಳಿದೆಲ್ಲರಿಗೆ, ನಾನು ನಿಮ್ಮ ಪತ್ರಗಳನ್ನು ನೋಡಿರುವೆ ಮತ್ತು ನೀವು ಹೇಳಿ ಕಳಿಸುದುದಕ್ಕೆ ತುಂಬ ಋಣಿಯಾಗಿರುವೆ. ಇಡಲ್‌ಕಾವ್‌ನ ಬಗೆಗಾದರೊ ನಾನು ಅವನಿಗೆ ಮಾಡಿದುದಕ್ಕೆ ಮತ್ತು ಅವನಿಂದ ಪಡೆದುದಕ್ಕೆ ಅವನು ತೀರ ತಕ್ಕವನಾಗಿದ್ದಾನೆ; ಅದನ್ನು ಅವನಿಗೆ ಹಿಂತಿರುಗಿಸುವ ಬಗೆಗಾದರೊ ಅದು ಯೋಗ್ಯ ವಾದುದಲ್ಲವೆಂದು ತೋರುತ್ತದೆ ಮತ್ತು ನಾನು ಹಾಗೆ ಮಾಡುವುದೂ ಇಲ್ಲ. ನಾನು ನೀವು ಕೇಳಿದಂತೆ ಮಾಡದಿದ್ದರೆ ನೀವೆಲ್ಲ ಅವನ ಸಹಾಯಾರ್ಥವಾಗಿ ನನಗೆ ಎದುರುಬೀಳುವಿರೆಂಬ ಹೇಳಿಕೆಯ ಬಗೆಗಾದರೊ ನೀವು ಇಲ್ಲಿಗೆ ಬರುವ ಶ್ರಮ ವಹಿಸುವುದು ಬೇಡ. ಏಕೆಂದರೆ, ನೀವು ನಿಮ್ಮ ನೆಲಗಳಲ್ಲಿಯೆ ಕಾಯುವ ಧೈರ್ಯ ಮಾಡುವಿರಾದರೆ ನಾನೇ ನಿಮ್ಮನ್ನು ಹುಡುಕಿಕೊಂಡು ಬರುವೆ : ಇದೇ ನಾನು ನಿಮಗೆ ಕಳಿಸುವ ಉತ್ತರ”. ಅವನು ದೂತರಿಗೆ ಅನೇಕ ಕಾಣಿಕೆಗಳನ್ನು ಕೊಡುವಂತೆ ಆಜ್ಞಾಪಿಸಿ ಅವರಿಗೆ ತನ್ನ ಪತ್ರವಿತ್ತು ಕಳಿಸಿಕೊಟ್ಟ.[1]      ರೇ ದಖಿಮ್ ಅಂದರೆ ದಕ್ಖನದ ರಾಜ. ಇದು ಸ್ಪಷ್ಟವಾಗಿಯೆ ಬಹಮನಿ ರಾಜನನ್ನು ಸೂಚಿಸುತ್ತದೆ. ಇಡಿ ನಾಡು ದಂಗೆಯಿಂದ ಐದು ಸ್ವತಂತ್ರ ರಾಜ್ಯಗಳಲ್ಲಿ ಒಡೆದು ಹೋಗಿದ್ದರೂ ಅವನನ್ನು ಇನ್ನೂ ನಾಮಮಾತ್ರದ ಸಾರ್ವಭೌಮನೆಂದು ಪರಿಗಣಿಸಲಾಗಿತ್ತು. ಇದರ ಹಿಂದೆ ಬರುವ ಹೆಸರುಗಳಿಗಾಗಿ ಪು. ೩೨೫ರ ಟಿಪ್ಪಣಿ ನೋಡಿರಿ :ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಸದಾನಂದ ಕನವಳ್ಳಿ (ಅನು).

[1]       ಮೇಲೆ ನಮೂದಿಸಲಾದ ಬೇರೆ ಬೇರೆ ಸಾಲುಗಳ ಒಟ್ಟು ಅಶ್ವದಳ ಮತ್ತು ಆನೆಗಳು ಅನುಕ್ರಮವಾಗಿ ೩೨,೬೦೦ ಮತ್ತು ೫೫೧ ಆಗುತ್ತವೆ.

[2]       ಅಂಕೊಸ್ಟಾವ್ ಎಂದು ಬ್ಯಾರೊಸ್ ಹೇಳಿದರೆ ಅಂಕೆಸ್ಕಾವ್ ಎಂದು ಕೊರಿಯಾ ಹೇಳಿದ್ದಾನೆ. ಎರಡನೆಯ ಪ್ರತ್ಯಯ ಅತ್ಯಂತ ಸಹಜವಾದುದೆಂದು ತೋರುತ್ತದೆ. ಖಾನ್‌ಗೆ ಬದಲಾಗಿ ಕಾವ್. ಆ ಹೆಸರು ಅಂಕುಶ್ ಖಾನ ಎಂದು ಇದ್ದಂತೆ ತೋರುತ್ತದೆ. ಪೊಂಡಾ ಗೋವಾದ ಹತ್ತಿರವಿದೆ.

[3]       ಡಾಮ್ ಗುಟೆರ್‌ದ ಮಾನ್‌ರಾಯ್ ಪೋರ್ತುಗಾಲದಿಂದ ಭಾರತಕ್ಕೆ ಕ್ರಿ.ಶ. ೧೫೧೫ರಲ್ಲಿ ಒಂದು ನೌಕಾಪಡೆಯ ಅಧಿಪತಿಯಾಗಿ ಯಾನ ಬೆಳೆಸಿದ (ಅಲ್ಬುಕರ್ಕ್, ಹ್ಯಾಕ್ಲುಟ್ ಆವೃತ್ತಿ iv. ೧೯೪). ಕ್ರಿ.ಶ. ೧೫೧೬ರಲ್ಲಿ ಫೆಬ್ರುವರಿ ಮತ್ತು ಸೆಪ್ಟಂಬರ್ ತಿಂಗಳ ಮಧ್ಯೆ ಕೆಂಪು ಸಮುದ್ರದಲ್ಲಿದ್ದ ಮಂಡಲಾಧಿಪತಿ ಲೊಪೊ ಸೊ ಆರಿಸ್‌ನ ಅನುಪಸ್ಥಿತಿಯಲ್ಲಿ ಅವನು ಗೋವಾದ ಅಧಿಪತಿಯಾಗಿದ್ದ ಮತ್ತು ಆ ಅವಧಿಯಲ್ಲಿ ಪೊಂಡಾದಲ್ಲಿ ಅಂಕುಶ್ ಖಾನನ ನೇತೃತ್ವದಲ್ಲಿನ ಬಿಜಾಪುರದ ಪಡೆಗಳ ಮೇಲೆ ಸ್ವಲ್ಪಮಟ್ಟಿನ ಯಶಸ್ಸಿನೊಂದಿಗೆ ಆಕ್ರಮಣ ಮಾಡಿದ (ಬ್ಯಾರೊಸ್, ಡೆಕಡಾ iii. 1.i.c.೮)ಒಸಾರಿಯೊ (ಗಿಬ್ಸ್ ಅನುವಾದ ii ೨೭೫)ದ ಮಾನ್‌ರಾಯ್‌ನನ್ನು ಬಹಳ ಕ್ರೂರ ಹಾಗೂ ಸ್ವೇಚ್ಛೆಯ ಸ್ವಭಾವದವನೆಂದು ಚಿತ್ರಿಸಿದ್ದಾನೆ. ಮಂಡಲಾಧಿಪತಿಯ ಸೋದರಮಗಳೊಂದಿಗೆ ಅವನ ವಿವಾಹವಾಗಿತ್ತು.

[4]       ಅರ್ಥಾತ್, ತಮ್ಮ ಪ್ರತಿಷ್ಠೆ ಹಿಂದೂಗಳಿಗಿಂತ ತಮಗೆ ದೊಡ್ಡ ನೈತಿಕ ಹಿರಿಮೆಯನ್ನು ಒದಗಿಸುವುದೆಂದು ಅವರು ನಂಬಿದ್ದರು.

[5]       ಈ ಉದ್ಧೃತ ಭಾಗ ಅಸ್ಪಷ್ಟವಿದೆ.

[6]       “ಸುಫೊ ಲಾರ್ಜಿ”, ಬ್ಯಾರೊಸ್, ಡೆಕಡಾ iii. 1. iv. ಅಧ್ಯಾಯ ೫, ಅಸದಖಾನನ ಯುಕ್ತಿಪ್ರೇಮ ಅಂದಿನ ಪೋರ್ತುಗೀಜರಲ್ಲಿ ಜನಜನಿತವಾಗಿತ್ತು.

[7]       ಯಾವ ಬೆಟ್ಟಸಾಲುಗಳು ಸೂಚಿತವಾಗಿವೆಯೆಂಬುದನ್ನು ತಿಳಿಯುವುದು ಸ್ವಾರಸ್ಯಕರವಾಗ ಬಹುದು.