ಅಧ್ಯಾಯ ೨೦

ಈ ಮೊದಲೆ ಹೇಳಿರುವಂತೆ ತನ್ನ ಬೇನೆಯಿಂದ ರಾಜಾ ಕ್ರಿಸ್ನರಾವ್ ಸಾಯುವ ಪೂರ್ವದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಜೀವದಿಂದುಳಿಯುವ ಆಸೆಯಿಲ್ಲದೆ ಮೃತ್ಯುಪತ್ರ ಮಾಡಿದ. ತನ್ನನ್ನು ರಾಜನನ್ನಾಗಿ ಮಾಡಿದ ಸಮಯಕ್ಕೆ ಬಸಬಲರಾವ್‌ನ ಮಗನಾಗಿದ್ದ ತನ್ನ ಸೋದರಳಿಯ ನೊಂದಿಗೆ ಚಾಂದೆಗರಿ (ಚಂದ್ರಗಿರಿ) ದುರ್ಗದಲ್ಲಿ ಬಂಧಿಸಿಡಲು ಕಳಿಸಲಾಗಿದ್ದ ತನ್ನ ಮೂವರು ಸಹೋದರರಲ್ಲಿ ಈಗ ಆಳುತ್ತಿರುವ ಅಚೆತರಾವ್‌ನನ್ನು (ಅಚ್ಯುತರಾವ್) ರಾಜನನ್ನಾಗಿ ಮಾಡಬೇಕೆಂದು ಮೃತ್ಯುಪತ್ರದಲ್ಲಿ ಹೇಳಿದ್ದ. ಏಕೆಂದರೆ, ಅವನಿಗೆ ಸಿಂಹಾಸನವೇರಲು ಯೋಗ್ಯ ವಯಸ್ಸಿನ ಮಗನಿಲ್ಲದೆ ಹದಿನೆಂಟು ತಿಂಗಳಿನವನೊಬ್ಬ ಮಾತ್ರವಿದ್ದು ಅಚೆತ್‌ರಾವನೆ ಉಳಿದವರಿಗಿಂತ ತಕ್ಕವನೆಂದು ಅವನಿಗೆ ತೋರಿತು. ಅವನ ಮರಣಾನಂತರ ಸಾಲ್ವಣೆ ಮಂತ್ರಿಯಾಗಿ, ಚಾಂದೆಗರಿ ದುರ್ಗದಲ್ಲಿ ಬಂದಿಯಾಗಿದ್ದ ರಾಜಾ ಅಚಿತ್‌ರಾವ್ ಬರುವವರೆಗೆ ಆಡಳಿತ ನಿರ್ವಹಿಸಿದ. ಅದೂ ಅಲ್ಲದೆ, ಅಚಿತ್‌ರಾವ್ ಬಿಳಗಾವ್ (ಬೆಳಗಾಂವಿ) ಅನ್ನು ವಶಪಡಿಸಿಕೊಳ್ಳಬೇಕೆಂದೂ ಇಡಲ್‌ಕಾವ್‌ನ ವಿರುದ್ಧ ಯುದ್ಧ ಮಾಡಬೇಕೆಂದೂ ಮೃತ್ಯುಪತ್ರದಲ್ಲಿ ಹೇಳಲಾಗಿತ್ತು.

ಆ ರಾಜಾ ಚೈತರಾವ್ ಸಿಂಹಾಸನವೇರಿದ ಮೇಲೆ ವ್ಯಸನ ಮತ್ತು ದಬ್ಬಾಳಿಕೆಯಲ್ಲಿ ಮುಳುಗಿದ. ಅವನು ಪ್ರಾಮಾಣಿಕನಲ್ಲ ಮತ್ತು ಅದರಿಂದಾಗಿ ಜನರು ಮತ್ತು ದಳವಾಯಿಗಳು ಅವನ ಕೆಟ್ಟ ಜೀವನ ಮತ್ತು ಹವ್ಯಾಸಗಳಿಂದ ಬಹಳ ಬೇಸತ್ತಿದ್ದಾರೆ. ಏಕೆಂದರೆ, ಬಹಳ ದುರಾಚಾರಿಗಳು ಮತ್ತು ಹಿಂಸಕರಾದ ತನ್ನ ಇಬ್ಬರು ಮೈದುನರು

[1] ಬಯಸಿದುದನ್ನು ಮಾಡುವುದನ್ನು ಬಿಟ್ಟರೆ ಅವನು ಬೇರೇನನ್ನೂ ಮಾಡಿಲ್ಲ. ಈ ಕಾರಣಕ್ಕಾಗಿ ಅವನು ವಜನವಿಲ್ಲದವನೆಂದೂ ಅರಿತು ಮತ್ತು ರಾಜನು ಯುದ್ಧ ಪ್ರವೃತ್ತಿಯವನಲ್ಲವಾದ್ದರಿಂದ ತಾನು ಸುಲಭವಾಗಿ ಯಶಸ್ವಿಯಾಗಬಹುದೆಂದು ನಂಬಿ ಇಡಲ್‌ಕಾವ್ ಅವನ ಮೇಲೆ ಯುದ್ಧ ಮಾಡಲು ನಿರ್ಧರಿಸಿದ. ಆದುದರಿಂದ, ಅವನು ತನ್ನ ಬಲಗಳನ್ನು ಸಜ್ಜುಗೊಳಿಸಿ ರಾಜನ ಪ್ರದೇಶದ ಮೇಲೆ ಆಕ್ರಮಣ ಮಾಡುತ್ತ ಬಿಸ್ನಗ ನಗರದ ಒಂದು ಹರದಾರಿ ಅಂತರದೊಳಗೆ ಬಂದ ಇಡಲ್‌ಕಾವ್‌ನೊಂದಿಗೆ ಕೇವಲ ೧೨,೦೦೦ ಕಾಲಾಳು ಮತ್ತು ೩೦,೦೦೦ ಕುದುರೆಗಳಿದ್ದುದರಿಂದ ಅಷ್ಟೊಂದು ದೊಡ್ಡ ಪಡೆಗಳು ಮತ್ತು ಶಕ್ತಿಯೊಂದಿಗೆ ನಗರದಲ್ಲಿದ್ದ ಚೇತರಾವ್ ಯುದ್ಧ ಮಾಡುವ ಮನಸ್ಸು ಮಾಡಿದ್ದರೆ ಅವನನ್ನು ಸುಲಭವಾಗಿ ಸೆರೆಹಿಡಿಯಬಹುದಿತ್ತು. ಆದರೂ ಸಹ ಈ ಚಿಕ್ಕ ಬಲದೊಂದಿಗೆ ಇಡಲ್‌ಕಾವ್ ಬಿಸ್ನಗದಿಂದ ಒಂದು ಹರದಾರಿಯ ಮೇಲೆ ನಾಗಲಾಪುರ ಪ್ರವೇಶಿಸಿ ಅದನ್ನು ನೆಲಸಮಗೊಳಿಸಿದ. ರಾಜ ಅವನ ವಿರುದ್ಧ ದಂಡೆತ್ತಿ ಹೋಗಲು ಪ್ರಯತ್ನಿಸಲಿಲ್ಲ. ಯುದ್ಧ ಮಾಡಲು ಅವನಲ್ಲಿ ಧೈರ್ಯವೂ ಇರಲಿಲ್ಲ. ಕೆಲವು ದಳವಾಯಿಗಳು, ಒಳ್ಳೆಯ ಅಶ್ವಾಳುಗಳು ಮಾತ್ರ ಸಣ್ಣ ಕಾದಾಟಗಳನ್ನು ಮಾಡಿದರು. ಇವರು ಅವನ ಉಪಸ್ಥಿತಿ ಇಷ್ಟು ಅಲ್ಪ ಕಾರ್ಯಕ್ಕೆ ಅನವಶ್ಯಕವೆಂದು ಹೇಳಿ ಮತ್ತು ಆಕ್ರಮಣ ಮಾಡಲು ಮಹಾಪ್ರಭು ಅಪ್ಪಣೆ ನೀಡಬೇಕೆಂದು ಕೋರಿ ರಾಜನೊಂದಿಗೆ ಮಾತಾಡಿದರು. ಆದರೆ, ರಾಜ ಗಾಬರಿಯಾಗಿದ್ದ ಮತ್ತು ತನ್ನ ಮೈದುನರ ಸಲಹೆಯಂತೆ (ಅದನ್ನವರು ಧಾರಾಳವಾಗಿ ಕೊಡುತ್ತಿದ್ದರು) ಇಡಲ್‌ಕಾವ್‌ನಲ್ಲಿಗೆ ಕಳಿಸಿ ಶಾಂತಿ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ. ಇಡಲ್‌ಕಾವ್‌ನಿಗೆ ಖುಷಿಯಾಯಿತು. ರಾಜ ಪ್ರತಿಯೊಂದು ವರ್ಷವೂ ೧,೦೦,೦೦೦ ಪರ್ದಾಒ ಬೆಲೆಯುಳ್ಳ ಹತ್ತು ಲಕ್ಷ ಸುವರ್ಣ ಪರ್ದಾಒಗಳನ್ನು ಕೊಡಬೇಕು ಮತ್ತು ಕ್ರಿಸ್ನರಾವ್ ತನ್ನಿಂದ ಕಿತ್ತುಕೊಂಡಿದ್ದ ಮತ್ತು ೧,೫೦,೦೦೦ ಪರ್ದಾಒಗಳ ಭೂಕಂದಾಯವುಳ್ಳ ರಾಚೊಲ್ ನಗರವನ್ನೂ ಬಿಟ್ಟುಕೊಡಬೇಕು. ಹಾಗೂ ಏನಿಲ್ಲೆಂದರೂ ಒಂದು ಲಕ್ಷ ಬೆಲೆ ಬಾಳುವ ರತ್ನಾಭರಣಗಳನ್ನು ಕೊಡಬೇಕೆಂದು ಷರತ್ತಿನ ಮೇಲೆ ಒಂದು ನೂರು ವರ್ಷ ಬಾಳಲಿದ್ದ ಶಾಂತಿ ಒಪ್ಪಂದವನ್ನು ಅವನೊಂದಿಗೆ ಮಾಡಿಕೊಂಡ. ರಾಜ ಈ ಕರಾರುಗಳನ್ನು ಒಪ್ಪಿಕೊಂಡ ಮತ್ತು ಇಡಲ್‌ಕಾವ್ ಇಷ್ಟು ಹಣದಿಂದ ಸಂತುಷ್ಟನಾಗಿ ಮರಳಿದ. ಇದೆಲ್ಲವನ್ನು ಮಾಡಿದ ಮೇಲೆ ರಾಜ ಅವರಿಗೆ ೧೩೦ ಮ್ಯಾಂಗೆಲಿನಿಸ್[2] ತೂಕದ ವಜ್ರದ ಹರಳನ್ನು, ಪೂರ್ಣ ಒಂದು ಲಕ್ಷ ಬೆಲೆಯುಳ್ಳ ಅಂತಹವೆ ಇತರ ಹದಿನೈದರೊಂದಿಗೆ ಕಳಿಸಿದ. ಈ ಹಣವನ್ನು ಅವನು ಕ್ಷಿಪ್ರ ತರುವಾಯದಲ್ಲಿಯೆ ವಸೂಲು ಮಾಡಿ ತನ್ನ ಬೊಕ್ಕಸಕ್ಕೆ ಸೇರಿಸಿಕೊಂಡ. ಅದನ್ನು ತನ್ನ ದಳವಾಯಿಗಳು ಮತ್ತು ಜನರಿಂದ ಎಷ್ಟು ನಿರ್ದಯವಾಗಿ ಕಿತ್ತುಕೊಂಡನೆಂದರೆ ಆರು ತಿಂಗಳಲ್ಲಿ ವಸೂಲು ಮಾಡಿ ಎಲ್ಲವನ್ನು ತನ್ನ ಬೊಕ್ಕಸಕ್ಕೆ ಸೇರಿಸಿಕೊಂಡನೆಂದು ಹೇಳಲಾಗುತ್ತದೆ.

ಆದುದರಿಂದ, ದಳವಾಯಿಗಳು ಮತ್ತು ಸೈನಿಕರು, ಅವನು ಶಾಂತಿ ಒಪ್ಪಂದ ಮಾಡಿಕೊಂಡುದಕ್ಕಾಗಿಯೂ ಮತ್ತು ಅವರೆಲ್ಲರ ಇಚ್ಛೆಗೆ ವಿರುದ್ಧವಾಗಿ ಈ ಧನ ಮೊತ್ತವನ್ನು ಕಿತ್ತಕೊಂಡುದಕ್ಕಾಗಿಯೂ ಬಹಳ ಅಸಂತುಷ್ಟರಾಗಿ ಬಾಳಿದ್ದಾರೆ ಮತ್ತು ಈ ರಾಜ್ಯ ಎಂದಾದರೂ ವಿನಾಶಕ್ಕೆ ತಳ್ಳಲ್ಪಟ್ಟರೆ ಅದು ರಾಜಾ ಚಿತರಾವ್‌ನ ಜೀವಮಾನದಲ್ಲಿಯೆ ಸಂಭವಿಸುವುದೆಂದು ಭಾವಿಸಿದ್ದರು. ಏಕೆಂದರೆ, ಅವನು ತನ್ನ ರಾಜ್ಯದ ಪ್ರಮುಖ ಜನರನ್ನು ನಾಶಪಡಿಸಿದ್ದ ಅವರ ಮಕ್ಕಳನ್ನು ಕೊಂಡಿದ್ದ ಮತ್ತು ಅವರ ವಸ್ತುಗಳನ್ನು ವಶಪಡಿಸಿಕೊಂಡಿದ್ದ. ತಾನು ಪ್ರಭಾವಕ್ಕೊಳಾಗಿದ್ದ ಮೈದುನರ ಕೆಟ್ಟ ಸಲಹೆ ಇದಕ್ಕೆಲ್ಲ ಕಾರಣ.

ಅವನು ಒಂದು ರಾತ್ರಿ ಸೆರೆಹಿಡಿದ ಕ್ರಿಸ್ನಾರಾನಾರ್ಕ್ ಎಂಬವನ ಬಗೆಗೆ ಹೇಳುವೆ. ಅವನು ರಾಜನಿಗೆ ಶರಣಾಗತನಾಗುವ ಮೊದಲು ಎರಡುನೂರರಷ್ಟಿದ್ದ ತನ್ನೆಲ್ಲ ಹೆಂಡಂದಿರನ್ನು ಕೊಂದ ಮತ್ತು ಆ ಮೇಲೆ ರಾಜನೆದುರಿನಲ್ಲಿ ವಿಷದಿಂದ ತನ್ನನ್ನು ಕೊಂದುಕೊಂಡ. ಇದೇಕೆಂದರೆ ರಾಜ ಅವನೆದುರಿಗೇ ಅವನ ಮಗನನ್ನು ಕೊಲ್ಲಬಯಸಿದ್ದ. ಎಲ್ಲವೂ ಬಂಗಾರ ಮತ್ತು ಬೆಳ್ಳಿಯಿಂದ ಅಲಂಕೃತವಾದ ದಳವಾಯಿಗಳ ಶಸ್ತ್ರಾಸ್ತ್ರಗಳ, ಅಂದರೆ ಕಠಾರಿಗಳು, ಕತ್ತಿಗಳು, ಭಲ್ಲೆಗಳು, ಸಮರಕೊಡಲಿಗಳು ಮತ್ತು ಇತರ ವಸ್ತುಗಳ, ಮಾರಾಟದಿಂದ ರಾಜ ೩೦೦೦ ಪರ್ದಾಒಗಳಿಗಿಂತ ಹೆಚ್ಚು ಸಂಪಾದಿಸಿದ. ಈ ರೀತಿ ರಾಜ್ಯ ತನ್ನ ಪ್ರಮುಖರು ಮತ್ತು ತನ್ನನ್ನು ಪೋಷಿಸುವವರನ್ನು ಕಳೆದುಕೊಂಡಿತು. ಆದುದರಿಂದಲೆ, ಇಡಲ್‌ಕಾವ್ ಅದನ್ನು ಅಷ್ಟು ನಿಕೃಷ್ಟವಾಗಿ ಕಾಣುತ್ತ ಅದರ ಮೇಲೆ ಪ್ರತಿದಿನ ಸಾವಿರ ಅಪಮಾನಗಳನ್ನು ಮತ್ತು ಬೇಡಿಕೆಗಳನ್ನು ಹೇರುತ್ತಿದ್ದಾನೆ. ಅವನು ತೀರ ಕಡಿಮೆ ಚಾರಿತ್ರ್ಯಬಲವುಳ್ಳವನು ಮತ್ತು ತನ್ನ ರಾಜ್ಯದ ಮತ್ತು ದೇಶದ ಹಿತಕ್ಕೆ ಸಂಬಂಧಿಸಿದ ಸಂಗತಿಗಳನ್ನು ಅತಿ ನಿರ್ಲಕ್ಷ್ಯ ಮಾಡುವ ವ್ಯಕ್ತಿ ಎಂದು ಅವರು ಭಾವಿಸಿದ್ದನ್ನು ಬಿಟ್ಟರೆ ಈ ರಾಜನ ಬಗೆಗೆ ಹೆಚ್ಚಿಗೆ ಹೇಳುವುದು ಏನೂ ಇಲ್ಲ.

 ಅಧ್ಯಾಯ ೨೧

 ಅವರು ಬಳಸುವ ವಸ್ತುಗಳೂ ಸೇರಿದಂತೆ ಈ ಮನೆಯ ಎಲ್ಲಾ ಸೇವಾ ಉಪಕರಣಗಳು, ಅಂದರೆ ಬಾನೆಗಳು ಮತ್ತು ಬೋಗುಣಿಗಳು, ಸ್ಟೂಲುಗಳು, ಹೂಜಿಗಳು ಮತ್ತು ಅಂಥ ಇನ್ನಿತರ ಪಾತ್ರೆಗಳು, ಬೆಳ್ಳಿ ಬಂಗಾರದವುಗಳು. ಅವನ ಹೆಂಡಂದಿರು ಮಲಗುವ ಮಂಚಗಳು[3] ಬೆಳ್ಳಿಯ ತಗಡುಗಳಿಂದ ಆಚ್ಛಾದಿಸಲಾಗಿರುತ್ತವೆ ಮತ್ತು ಅಲಂಕೃತವಾಗಿರುತ್ತವೆ. ಪ್ರತಿ ಹೆಂಡತಿಗೂ ಮಲಗಲು ತನ್ನದೇ ಹಾಸಿಗೆಯುಂಟು ಮತ್ತು ರಾಜನದು ತಗಡಿನಿಂದ ಆಚ್ಛಾದಿಸಲ್ಪಟ್ಟು ಅಸ್ತರಿ ಹಾಕಲ್ಪಟ್ಟಿರುತ್ತದೆ. ಅದರ ಎಲ್ಲ ಕಾಲುಗಳೂ ಬಂಗಾರದವಿವೆ. ಅದರ ಗಾದಿ ರೇಷ್ಮೆಯದಿದ್ದು ಅದರ ತಲೆದಿಂಬಿನ ಅಂಚುಗಳಲ್ಲಿ ದೊಡ್ಡ ಸಣ್ಣ ಮುತ್ತು ಗಳನ್ನು ಹೆಣೆಯಲಾಗಿರುತ್ತದೆ. ಅದಕ್ಕೆ ಕಾಲಿಗೆ ಅದೇ ಮಾದರಿಯ ನಾಲ್ಕು ದಿಂಬುಗಳಿದ್ದು ಮೇಲೆ ರೇಷ್ಮೆ ಅರಿವೆ ಬಿಟ್ಟರೆ ಬೇರೆ ಮಗ್ಗಲು ಹಾಸಿಗೆ ಇಲ್ಲ. ಅವನು ಯಾವಾಗಲೂ ತನ್ನೊಂದಿಗೆ ಬೆಳ್ಳಿಯ ಚೌಕಟ್ಟಿನೊಂದಿಗೆ[4] ಸೊಳ್ಳೇ ಪರದೆಗಳನ್ನು ಒಯ್ಯುತ್ತಾನೆ. ಮತ್ತು ಅವನಿಗೆ ಕಬ್ಬಿಣದ ತುಂಡುಗಳಿಂದ ಮಾಡಿದ ಮನೆಯಿದ್ದು ಅದರಲ್ಲಿ ಅವನು ರಣರಂಗಕ್ಕೆ ಹೋದಂತಹ ಸಮಯಕ್ಕಾಗಿ ಒಂದು ದೊಡ್ಡ ಮಂಚವಿದೆ.

ಅವನಿಗೆ ಐನೂರು ಹೆಂಡಂದಿರು ಮತ್ತು ಅವನಿಗೆ ಬೇಕಾದಷ್ಟು ಕಡಿಮೆ ಅಲ್ಲವೆ ಹೆಚ್ಚು ಇದ್ದು ಅವರೊಂದಿಗೆ ಅವನು ಮಲಗುತ್ತಾನೆ. ಮತ್ತು ಇವರೆಲ್ಲ ಅವನ ಮರಣಕಾಲಕ್ಕೆ ಅಗ್ನಿ ಪ್ರವೇಶಿಸುತ್ತಾರೆ. ಅವನು ಯಾವುದೆ ಊರಿಗೆ ಪಯಣಿಸುವಾಗ ತನಗೆ ಅತಿ ಪ್ರೀತಿಯವರಾದ ಇಪ್ಪತ್ತೈದು ಅಥಾವ ಮೂವತ್ತು ಹೆಂಡಂದಿರನ್ನು ತನ್ನೊಂದಿಗೆ ಕರೆದೊಯ್ಯುವನು. ಪ್ರತಿಯೊಬ್ಬಳು ಕೋಲುಗಳುಳ್ಳ ತನ್ನ ಮೇಣೆಯಲ್ಲಿ ಕುಳಿತು ಅವನೊಂದಿಗೆ ಹೋಗುವರು. ಪ್ರಧಾನ ಹೆಂಡತಿಯ ಮೇಣೆ ಸಣ್ಣ ಮುತ್ತು ಮತ್ತು ಮುತ್ತುಗಳಿಂದ, ದೊಡ್ಡ ಮತ್ತು ಭಾರಿ ಗೊಂಡೆಗಳನ್ನು ಹೆಣೆದ ಅರುಣ ವರ್ಣದ ಬಟ್ಟೆಯಿಂದ ಆಚ್ಛಾದಿತವಾಗಿರುತ್ತದೆ ಮತ್ತು ಕೋಲು ಬಂಗಾರದಿಂದ ಅಲಂಕೃತವಾಗಿರುತ್ತದೆ. ಇತರ ಹೆಂಡಂದಿರ ಮೇಣೆಗಳು ಬೆಳ್ಳಿಯಿಂದ ಮಾತ್ರ ಅಂಲಕೃತವಾಗಿರುತ್ತದೆ. ಆದರೆ, ತನಗಾಗಿಯೆ ಇರುವ ಇನ್ನೊಂದು ಮೇಣೆ ಯಾವಾಗಲೂ ಬಲಬದಿಗೆ ಹೋಗುತ್ತದೆ ಮತ್ತು ಅದೇ ರೀತಿ ಬಂಗಾರದಿಂದ ಅಲಂಕೃತವಾಗಿರುತ್ತದೆ. ಮಗನೊ ಮಗಳೊ ಅವನೊಂದಿಗೆ ಹೋಗುವುದಿದ್ದಾಗ ಅವನಿ/ಳಿಗಾಗಿ ಅವನು ಬಂಗಾರದ ಕುಂದಣವಿಟ್ಟ ಇನ್ನೊಂದು ದಂತದಿಂದ ಮಾಡಿದ ಮಂಚ ಒಯ್ಯುವನು. ಅವನು ರಣರಂಗದಲ್ಲಿರುವಾಗ ಅವನು ಎಲ್ಲಿಯೆ ಬೀಡು ಬಿಟ್ಟಿರಲಿಲ್ಲ. ಅಲ್ಲಿ ಅವನಿಗಾಗಿ ಕಲ್ಲು ಅರಲಿನ ಮನೆ ಕಟ್ಟಲಾಗುತ್ತದೆ. ಏಕೆಂದರೆ, ಅವನು ಡೇರೆಯಲ್ಲಿ ವಾಸಿಸುವುದಿಲ್ಲ ಮತ್ತು ಅವನು ಇವುಗಳನ್ನು ಯಾವಾಗಲೂ ಅರಿವೆಗಳಿಂದ ಅಲಂಕೃತಗೊಳಿಸಿರುತ್ತಾನೆ.

ದ್ವಾರದೊಳಗೆ ಅವನ ಅರಮನೆಯಲ್ಲಿ ಪೂರ್ಣ ಐದು ಅಥವಾ ಆರೂ ನೂರು ಸಂಖ್ಯೆಯಷ್ಟಿರುವ ಸ್ತ್ರೀಯರೂ, ಬೀಜವೊಡೆದ ಗಂಡಸರು ಮತ್ತು ಸೇವಕರು ಅವನ ಸೇವೆಗೈಯ್ಯುತ್ತಾರೆ. ದ್ವಾರದೊಳಗೆ ರಾಜನಿಗಿದ್ದಂತೆಯೆ ರಾಜನ ಈ ಹೆಂಡಂದಿರಿಗೂ, ತಮ್ಮ ಸೇವೆಗೆ, ಪ್ರತಿಯೊಬ್ಬಳಿಗೂ ತನ್ನದೇ, ತಮ್ಮವೆ ಅಧಿಕಾರಿಗಳಿರುತ್ತಾರೆ. ಆದರೆ ಇವರೆಲ್ಲ ಸ್ತ್ರೀಯರು, ರಾಜನ ಅರಮನೆಗಳು ದೊಡ್ಡವಿದ್ದು ವಿಶಾಲ ಕೋಣೆಗಳುಳ್ಳವುಗಳಾಗಿವೆ. ಅವುಗಳಿಗೆ ಮಠಗಳಲ್ಲಿರುವಂತಹ ಏಕಾಂತ ಕೋಣೆಗಳಿದ್ದು ಅವುಗಳೊಂದಿಗೆ ಚಿಕ್ಕ ಕೋಣೆಗಳಿವೆ. ಪ್ರತಿಯೊಂದರಲ್ಲಿ ಅವನ ಹೆಂಡಂದಿರಲ್ಲೊಬ್ಬಳು ಮತ್ತು ಅವಳೊಂದಿಗೆ ಅವಳ ಪರಿಚಾರಿಕೆ ಇರುವಳು ಮತ್ತು ರಾಜ ವಿಶ್ರಾಂತಿಗಾಗಿ ಹೋಗುವಾಗ ಅವನು ಈ ಏಕಾಂತ ಕೋಣೆಗಳ ಮೂಲಕ ಹೋಗುತ್ತಾನೆ. ಅವನ ಹೆಂಡಂದಿರು ಬಾಗಿಲಲ್ಲಿ ನಿಂತು ಅವನನ್ನು ಒಳಗೆ ಕರೆಯುತ್ತಾರೆ. ಆದರೆ ಇವರು ಪ್ರಧಾನ ಹೆಂಡಂದಿರಾಗಿರದೆ ನಾಡಿನ ದಳವಾಯಿಗಳ ಮತ್ತು ಮನ್ನೆಯರ ಮಕ್ಕಳು. ಅರಮನೆಯ ದ್ವಾರದೊಳಗೆ ಇನ್ನೂರು ಹಿಂಡುವ ಆಕಳುಗಳಿದ್ದು ಅವುಗಳ ಹಾಲಿನಿಂದ ಈ ಸ್ತ್ರೀಯರಿಗೆ ತಿನ್ನಲು ಬೆಣ್ಣೆಯನ್ನು ಮಾಡುತ್ತಾರೆಂದು ಹೇಳಲಾಗುತ್ತದೆ.

ತನ್ನ ಆಹಾರಕ್ಕಾಗಿ ರಾಜ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಏಕೆಂದರೆ, ಮನ್ನೆಯರು ಪ್ರತಿದಿನ ಅದನ್ನು ಅವನ ಮನೆಗೆ ಕಳಿಸುತ್ತಾರೆ ; ಅಕ್ಕಿ, ಗೋಧಿ ಮತ್ತು ಮಾಂಸ ಮತ್ತು ಕೋಳಿಗಳು ಮತ್ತು ಅವುಗಳೊಂದಿಗೆ ಇತರ ಎಲ್ಲ ಅವಶ್ಯಕ ಸಾಮಾನುಗಳು. ಅಡಿಗೆ ಮನೆಯಲ್ಲಿ ಸುಮಾರು ಇನ್ನೂರು ಪ್ರಧಾನ ಅಧಿಕಾರಿಗಳು ಇರುತ್ತಾರೆ. ಈಗ ಈ ರಾಜನ ರಕ್ಷಣಾ ಪಡೆಯ ದಳವಾಯಿಗಳಾಗಿರುವವರಲ್ಲಿ ಒಬ್ಬ ಪೆಡನಾಯಿಕ್ ಮತ್ತು ಇನ್ನೊಬ್ಬ ಅಜನಾಯಿಕ್ ಎಂದರು ಕರೆಯಲ್ಪಡುತ್ತಾರೆ. ಅವರು ಸೈನಿಕರ ದಳವಾಯಿಗಳೂ ಆಗಿರುವವರು. ಈ ದ್ವಾರಪಾಲಕರು ನಾಲ್ಕು ಅಥವಾ ಐದು ದ್ವಾರಗಳಿಗಿಂತ ಒಳಗೆ ಹೋಗುವುದಿಲ್ಲ. ಏಕೆಂದರೆ ಅವುಗಳಿಗಿಂತ ಒಳಕ್ಕೆ ಬೀಜವೊಡೆದ ಗಂಡಸರು ಮತ್ತು ಹೆಂಗಸರನ್ನು ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ.

ರಾಜ ಕುದುರೆಯೇರಿ ಹೊರ ನಡೆದಾಗ ಅವನೊಂದಿಗೆ ಸಾಮಾನ್ಯವಾಗಿ ಅವನ ರಕ್ಷಣಾ ದಳದ ಇನ್ನೂರು ಅಶ್ವಾಳುಗಳು ಹೋಗುತ್ತಾರೆ. ಅವರಿಗೆ ಅವನು ಸಂಬಳ ಕೊಡುತ್ತಾನೆ. ಮತ್ತು ಒಂದು ನೂರು ಆನೆಗಳು. ಇದೂ ಅಲ್ಲದೆ ಯಾವಾಗಲೂ ತಮ್ಮ ಸೈನಿಕರೊಂದಿಗೆ ಹಾಜರಿರುವ ನಲವತ್ತು ಅಥವಾ ಐವತ್ತು ಮಂದಿ ದಳವಾಯಿಗಳು, ಅವನು ತನ್ನೊಂದಿಗೆ ಗುರಾಣಿಯುಳ್ಳ ಎರಡು ಸಾವಿರ ಜನರನ್ನು ಕರೆದೊಯ್ಯುತ್ತಾನೆ. ಅವರೆಲ್ಲ ಒಳ್ಳೆಯ  ಸ್ಥಾನದಲ್ಲಿದ್ದವರಾಗಿದ್ದು ಇಕ್ಕೆಲಗಳಲ್ಲಿ ಕ್ರಮವಾಗಿ ಅಣಿಗೊಳಿಸಲ್ಪಟ್ಟಿರುವರು. ಮುಂದೆ, ದ್ವಾರಪಾಲಕರಂತೆ ಕೈಯಲ್ಲಿ ಬೆತ್ತ ಹಿಡಿದ ಸುಮಾರು ಮೂವತ್ತು ಅಶ್ವಾಳುಗಳೊಂದಿಗೆ ಪ್ರಧಾನ ದಂಡನಾಯಕ ಹೋಗುತ್ತಾನೆ. ಪ್ರಧಾನ ದಂಡನಾಯಕ ಭಿನ್ನ ದಂಡವನ್ನು ಹಿಡಿದಿರುತ್ತಾನೆ. ಈಗ ರಾಜನ ಪ್ರಧಾನ ದಂಡನಾಯಕನಾಗಿರುವವನು ಚಿನಪನಾಯಿಕ್ ಎಂಬುವನು. ಹಿಂಚೂಣಿಯಲ್ಲಿ ಎರಡು ಅಶ್ವಾಳುಗಳೊಂದಿಗೆ ಕುದುರೆಗಳ ಮುಖ್ಯಸ್ಥ ಹೋಗುತ್ತಾನೆ. ಅಶ್ವಪಡೆಯ ಹಿಂದೆ ಒಂದು ನೂರು ಆನೆಗಳು ಹೋಗುತ್ತವೆ. ಮತ್ತು ಅವುಗಳ ಬೆನ್ನ ಮೇಲೆ ಉಚ್ಚ ದರ್ಜೆಯ ವ್ಯಕ್ತಿಗಳು ಕುಳಿತುಕೊಂಡಿರುತ್ತಾರೆ. ಅವನ ಮುಂದೆ ಜೀನು ತೊಡಿಸಿದ ಹನ್ನೆರಡು ಯುದ್ಧಾಶ್ವಗಳಿರುತ್ತವೆ ಮತ್ತು ಈ ಕುದುರೆಗಳ ಮುಂದೆ ರಾಜನ ಮೈಗಾವಲುಗಾಗಿಯೆ ಐದು ಆನೆಗಳು ನಡೆಯುತ್ತವೆ. ಈ ಆನೆಗಳ ಮುಂದೆ ಧ್ವಜಪಟ ಕೈಯಲ್ಲಿ ಹಿಡಿದ ಇಪ್ಪತ್ತೈದು ಅಶ್ವಾಳುಗಳು ನಗಾರಿ ಮತ್ತು ಕಹಳೆ ಮತ್ತು ಇತರ ಸಂಗೀತದೊಂದಿಗೆ ಎಷ್ಟೊಂದು ಗಟ್ಟಿಯಾಗಿ ಬಾರಿಸುತ್ತ ನಡೆದಿರುತ್ತಾರೆಂದರೆ ನಿಮಗೆ ಬೇರೆ ಏನೂ ಕೇಳಿಸುವುದಿಲ್ಲ. ಇವುಗಳ ಮುಂದೆ ಬದಿಗಳಲ್ಲಿ ಮನುಷ್ಯರು ಹೊತ್ತ ದೊಡ್ಡನಗಾರಿ ಹೊರಟಿರುತ್ತದೆ ಮತ್ತು ಅದನ್ನು ಅವರು ಆಗಾಗ ಬಡಿಯುತ್ತ ಹೋಗುವರು. ಅದರ ಸಪ್ಪಳ ಬಹಳ ದೂರದವರೆಗೆ ಕೇಳಿಸುತ್ತದೆ. ಈ ನಗಾರಿಗೆ ಅವರು ‘ಪಿಚ’ ಎಂದು ಕರೆಯುತ್ತಾರೆ. ರಾಜನು ಕುದುರೆ ಹತ್ತಿದ ನಂತರ ಅವನು ಇನ್ನೂರು ಅಶ್ವಾಳುಗಳನ್ನು ಮತ್ತು ನೂರು ಆನೆಗಳನ್ನು ಮತ್ತು ರಕ್ಷಣಾ ಪಡೆಯ ಗುರಾಣಿಧಾರಕರನ್ನು ಎಣಿಸುತ್ತಾನೆ. ಯಾವನೆ ತಪ್ಪಿಸಿರಲಿ ಉಗ್ರವಾಗಿ ಶಿಕ್ಷಿಸಿ ಅವನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

—-
(
ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

ಅಧ್ಯಾಯ ೨೨

ಮನ್ನೆಯರು ಪ್ರತಿದಿನ ರಾಜನಿಗೆ ಸಲ್ಲಿಸುವ ಸಲಾಮ್ ಇಂತಿದೆ : ಬೆಳಿಗ್ಗೆ ಹತ್ತು ಅಥವಾ ಹನ್ನೊಂದು ಘಂಟೆಗೆ ಮನ್ನೆಯವರು ಅರಮನೆಗೆ ಹೋಗುತ್ತಾರೆ. ಆ ವೇಳೆ ಅವನು ತನ್ನ ಹೆಂಡಂದಿರ ನಿವಾಸಗಳೊಳಗಿನಿಂದ ಬರುತ್ತಾನೆ ಮತ್ತು ಅವನು ತನ್ನ ಆಸನದಲ್ಲಿ ಕುಳಿತ ಮೇಲೆ ಮನ್ನೆಯವರಿಗೆ ಬಾಗಿಲು ತೆರೆಯಲಾಗುತ್ತದೆ. ಪ್ರತಿಯೊಬ್ಬ ಮನ್ನೆಯ ತಾನೆ ಬಂದು ಶಿರ ಬಾಗುತ್ತಾನೆ ಮತ್ತು ತನ್ನ ಕೈಗಳನ್ನು ಮೇಲೆತ್ತುತ್ತಾನೆ. ಅವರು “ಸಲಾಮ್” ಎನ್ನುವುದು ಇದನ್ನೇ, ರಾಜನೊಂದಿಗೆ ಸುಮಾರು ಹತ್ತು ಹನ್ನೆರಡು ಮಂದಿ ಇರುತ್ತಾರೆ. ಅವರ ಕರ್ತವ್ಯವೆಂದರೆ ಪ್ರತಿಯೊಬ್ಬ ದಳವಾಯಿ ಪ್ರವೇಶಿಸುತ್ತಲೇ, “ಮಹಾಪ್ರಭು, ನೋಡಿರಿ, ನಿಮ್ಮ ಇಂಥಿಂಥ ದಳವಾಯಿ ನಿಮಗೆ ಸಲಾಮ್ ಮಾಡುತ್ತಿದ್ದಾನೆ” ಎಂದು ಹೇಳುವುದು.

ಬಿಸ್ನಗದ ರಾಜರು ಯಾವಾಗಲೂ ಪ್ರದರ್ಶನಕ್ಕಾಗಿ ತಮ್ಮ ಲಾಯಗಳಲ್ಲಿ ಅನೇಕ ಕುದುರೆಗಳನ್ನು, ಮತ್ತು ಅವರು ಯಾವಾಗಲೂ ಎಂಟು ಅಥವಾ ಒಂಭೈನೂರು ಕುದುರೆಗಳನ್ನು ಮತ್ತು ನಾಲ್ಕೈದು ನೂರು ಆನೆಗಳನ್ನು ಹೊಂದಿರುತ್ತಿದ್ದರು. ಅವುಗಳಿಂದಾಗಿ ಮತ್ತು ಅವುಗಳನ್ನು ನೋಡಿಕೊಳ್ಳಲು ಬೇಕಾಗುವ ಮಂದಿಯಿಂದಾಗಿ ಬಹಳ ಖರ್ಚು ತಗಲುತ್ತಿತ್ತು; ಈಗ ಬರುವ ರಾಜ (ಅಚ್ಯುತರಾಯ) ತನ್ನ ಲಾಯಗಳಲ್ಲಿ ಏಳುನೂರಕ್ಕೂ ಮಿಕ್ಕ ಕುದುರೆಗಳು ಮತ್ತು ನಾನೂರು ಆನೆಗಳನ್ನು ಹೊಂದಿದ್ದಾನೆ. ಅವುಗಳಿಗಾಗಿ, ಮತ್ತು ಅವುಗಳ ಚಾಕರಿಗಾಗಿ ಊಟ ಹಾಕಲಿಕ್ಕೋಸ್ಕರ ಪ್ರತಿ ದಿನ ಎರಡು ಸಾವಿರ ಸುವರ್ಣ ಪರ್ದಾಒಗಳನ್ನು ಖರ್ಚು ಮಾಡುತ್ತಾನೆ. ರಾಜ ವೇತನ ನೀಡುವ ಆಶ್ವಾಳುಗಳು ಆರು ಸಾವಿರ ಇರುವರು ಮತ್ತು ಅವರೆಲ್ಲ ಲಾಯಗಳ ಸಿಬ್ಬಂದಿಯೆಂದು ಪರಿಗಣಿತರಾಗುವರು; ಅವರ ಸೇವೆ ಮಾಡುವವರಿಗೆ ಪ್ರತಿ ವರ್ಷ, ಕೆಲವರಿಗೆ ಒಂದು ಸಾವಿರ, ಕೆಲವರಿಗೆ ಐದುನೂರು ಕೆಲವರಿಗೆ ಮುನ್ನೂರು ಪರ್ದಾಒಗಳನ್ನು ಕೊಡಲಾಗುತ್ತದೆ, ಕಡಿಮೆ ವೇತನವಿದ್ದವರು ಯಾರೂ ಒಂದನೂರಕ್ಕಿಂತ  ಕಡಿಮೆ ಪಡೆಯುವುದಿಲ್ಲ. ಈ ಆರು ಸಾವಿರದಲ್ಲಿ ಇನ್ನೂರು ಜನ ರಾಜನೊಂದಿಗೆ ಕುದುರೆಯೇರಿ ಹೋಗಲೇಬೇಕು.

ಅವರನ್ನು ತಮ್ಮ ರಾಜ್ಯದಲ್ಲಿ ಹೊಂದಿದ್ದರಿಂದ ಮತ್ತು ಅವರಿಗೆ ಸಂಬಳ ನೀಡಲು ವಿಫುಲ ಸಂಪತ್ತು ಇರುದರಿಂದ ಈ ನಾಡಿನ ರಾಜರು ಬೇಕಾದಷ್ಟು ಸೈನಿಕರನ್ನು ಜಮಾಯಿಸಬಲ್ಲರು. ಈ ರಾಜಾ ಚಿತರಾವ್‌ನಲ್ಲಿ ಮನ್ನೆಯರು ಸಂಬಳ ನೀಡುವ ಕಾಲಾಳುಗಳಿದ್ದಾರೆ ಮತ್ತು ಅವರು ಕಡ್ಡಾಯವಾಗಿ ಆರು ಲಕ್ಷ, ಅಂದರೆ ಆರುನೂರು ಸಾವಿರ ಸೈನಿಕರನ್ನು ಮತ್ತು ಇಪ್ಪತ್ನಾಲ್ಕು ಸಾವಿರ ಕುದುರೆಗಳನ್ನು ಸಲಹಬೇಕಾಗುತ್ತದೆ. ಅವರನ್ನು ಅದೇ ಮನ್ನೆಯವರು ತಮ್ಮಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಮನ್ನೆಯವರು ರಾಜನಿಂದ ಎಲ್ಲ ಜಮೀನನ್ನು ಹಿಡಿದಿರುವ ಗೇಣಿದಾರರಂತೆ ಇದ್ದಾರೆ, ಮತ್ತು ಇವರೆಲ್ಲ ಜನರನ್ನು ಇಟ್ಟುಕೊಂಡದಷ್ಟೇ ಅಲ್ಲದೆ ಖರ್ಚನ್ನೂ ಕೊಡಬೇಕಾಗುತ್ತದೆ : ಅವರು ಅವನಿಗೆ ಪ್ರತಿ ವರ್ಷ ರಾಜ ತೆರಿಗೆಯಾಗಿ ಆರು ಲಕ್ಷಗಳ ಗೇಣಿ ಕೊಡಬೇಕು. ಹೊಲಗಳು ನೂರಾ ಇಪ್ಪತ್ತು ಲಕ್ಷ ನೀಡುವುದಾಗಿ ಹೇಳಲಾಗುತ್ತಿದ್ದು ಅದರಲ್ಲಿ ಅರವತ್ತನ್ನು ಅವರು ರಾಜನಿಗೆ ಕೊಡಬೇಕು ಮತ್ತು ಮಿಕ್ಕಿದ್ದನ್ನು ಅವರು ತಾವು ಸಲಹಬೇಕಾದರೆ ಸೈನಿಕರ ಮತ್ತು ಆನೆಗಳ ಖರ್ಚಿಗಾಗಿ ಇಟ್ಟುಕೊಳ್ಳುವರು. ಈ ಕಾರಣದಿಂದಾಗಿ ಜಮೀನುಗಳನ್ನು ಹಿಡಿದುಕೊಂಡವರು ಪೀಡಕರಾಗಿದ್ದುದರಿಂದ ಸಾಮಾನ್ಯ ಜನ ಬಹಳ ಕಷ್ಟ ಅನುಭವಿಸುತ್ತಾರೆ. ರಾಜ ಪ್ರತಿ ವರ್ಷ ಹೊಂದಿರುವ ಈ ಅರವತ್ತು ಲಕ್ಷಗಳ ಆದಾಯದಲ್ಲಿ ಅವನು ಇಪ್ಪತ್ತೈದು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಉಪಭೋಗಿಸುವುದಿಲ್ಲ. ಏಕೆಂದರೆ, ಮಿಕ್ಕಿದ್ದು ಅವನ ಕುದುರೆಗಳು, ಆನೆಗಳು, ಮತ್ತು ಕಾಲಾಳುಗಳ ಮೇಲೆ ಮತ್ತು ಆಶ್ವಾಳುಗಳ ಮೇಲೆ ಖರ್ಚಾಗುತ್ತದೆ. ಅದೆಲ್ಲದರ ಖರ್ಚನ್ನು ಅವನು ನೋಡಿಕೊಳ್ಳಬೇಕಾಗುತ್ತದೆ.

ಹೀಗೆ ಅವನ ಗೇಣಿದಾರರಂತಿರುವ ಎಲ್ಲ ದಳವಾಯಿಗಳು ಅವನ ಉತ್ಸವಗಳ ಹಾಗೂ ದೇವಾಲಯಗಳಿಗೆ ದಾನ ಕಾಲಕ್ಕೆ ಯಾವಾಗಲೂ ಆಸ್ಥಾನಕ್ಕೆ ಬರಲೇಬೇಕು. ಇವರಲ್ಲಿ ರಾಜ ತನ್ನ ಸುತ್ತ ಯಾವಾಗಲೂ ಇಟ್ಟುಕೊಂಡಿರುವ ಮತ್ತು ತನ್ನ ಆಸ್ಥಾನದಲ್ಲಿ  ಅವನ ಜತೆಗಿರುವವರೆ ಇನ್ನೂರಕ್ಕಿಂತ  ಹೆಚ್ಚಿಗಿರುವರು. ಇವರು ರಾಜನೊಂದಿಗೆ ಉಪಸ್ಥಿತರಿರಲೇ ಬೇಕು ಮತ್ತು ತಮ್ಮ ಅವಶ್ಯ ಕರ್ತ್ಯವ್ಯವಾಗಿರುವಂತೆ ಸಂಪೂರ್ಣ ಸಂಖ್ಯೆಯ ಸೈನಿಕರನ್ನು ಸಲಹಲೇಬೇಕು. ಏಕೆಂದರೆ, ಅವರಲ್ಲಿ ಸಂಖ್ಯೆ ಕಡಿಮೆಯಿದ್ದುದು ಅವನಿಗೆ ಗೊತ್ತಾದರೆ ಅವರನ್ನು ಉಗ್ರವಾಗಿ ಶಿಕ್ಷಿಸಲಾಗುತ್ತದೆ ಮತ್ತು ಅವರ ಜಾಯದಾದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಮನ್ನೆಯರು ನಗರಗಳಲ್ಲಿ ಇಲ್ಲವೆ ಪಟ್ಟಣಗಳಲ್ಲಿ ನೆಲೆಸುವುದನ್ನು ಸಹಿಸಿಕೊಳ್ಳ ಲಾಗುವುದಿಲ್ಲ. ಏಕೆಂದರೆ, ಅಲ್ಲಿದ್ದರೆ ಅವರು ತನ್ನ ಕೈನಿಲುಕಿಗೆ ಎಟಕರು. ಅವರು ಅಲ್ಲಿಗೆ ಕೆಲವೊಮ್ಮೆ ಮಾತ್ರ ಹೋಗುತ್ತಾರೆ. ಆದರೆ, ಅವನ ಅಧೀನದಲ್ಲಿದ್ದ ರಾಜರಿಗೆ ಒಂದು ರಿಯಾಯಿತಿ ನೀಡಲಾಗುತ್ತದೆ. ಅದೆಂದರೆ, ಅವರನ್ನು ಕರೆಯಿಸಲಾ ದಾಗಲ್ಲದೆ ಅವರು ಆಸ್ಥಾನಕ್ಕೆ ಹೋಗರು, ಮತ್ತು ತಮ್ಮವೆ ನಗರಗಳಿಂದ ಅವರು ತಮ್ಮ ಗೇಣಿ ಮತ್ತು ಕಪ್ಪ ಕಾಣಿಕೆಗಳನ್ನು ಅವನಿಗೆ ಕಳಿಸಿಕೊಡಬಹುದು ; ಆದರೂ ಸಹ ಬೆಂಗಾಪೂರದ ರಾಜ ಯಾವಾಗಲೂ ಠಾಣ್ಯದಲ್ಲಿ ಇರಲೇಬೇಕು. ಮತ್ತು ಅವನು ವರ್ಷದಲ್ಲಿ  ಎರಡು ಸಲ ಆಸ್ಥಾನಕ್ಕೆ ಹೋಗುತ್ತಾನೆ.

ಈ ಬೆಂಗಾಪೂರದ ರಾಜನಲ್ಲದೆ ಅಧೀನರಾಗಿದ್ದ ಇತರ ರಾಜರೆಂದರೆ ಇವರು : ಗ್ಯಾಸೊಪದ ರಾಜ, ಮತ್ತು ಬಕಾನೊರದ ರಾಜ, ಕಾಲೆಕುದ ರಾಜ ಮತ್ತು ಬಟೆಕಲದ ರಾಜ. ಇವರು ಬಿಸ್ನಗದ ಆಸ್ಥಾನಕ್ಕೆ ಬಂದಾಗ ರಾಜನಿಂದಾಗಲಿ ಅಥವಾ ಇತರ ಮನ್ನೆಯರಿಂದಾಗಲಿ ಉಳಿದ ದಳವಾಯಿಗಳಿಗಿಂತ ಹೆಚ್ಚಿನ ಮರ್ಯಾದೆ ನೀಡಲಾಗುವುದಿಲ್ಲ.

ಈ ಬಿಸ್ನಗದ ರಾಜ್ಯದ ದಳವಾಯಿಗಳು ಮತ್ತು ದೊರೆಗಳು, ಆಸ್ಥಾನದಲ್ಲಿದ್ದವರೂ, ಪ್ರತಿಯೊಬ್ಬನೂ ತನ್ನ ಕಾರ್ಯದರ್ಶಿಯನ್ನು ಹೊಂದಿರುತ್ತಾನೆ ; ಅವನು ಅವನಿಗೆ ಬರೆಯಲೋಸುಗ ಮತ್ತು ರಾಜ ಏನು ಮಾಡುತ್ತಿರುವನೆಂದು ತಿಳಿಸಲೋಸುಗ ಅರಮನೆಗೆ ಹೋಗುತ್ತಾನೆ. ಏನೇ ನಡೆದರೂ ಕ್ಷಿಪ್ರದಲ್ಲಿಯೇ ತಮಗೆ ಗೊತ್ತಾಗುವಂತೆ ಅವರು ವ್ಯವಸ್ಥೆ ಮಾಡಿಕೊಂಡಿರುತ್ತಾರೆ, ಮತ್ತು ದಿನ ರಾತ್ರಿ ಅವರು ಯಾವಾಗಲೂ ಅರಮನೆಯಲ್ಲಿ ಇರುತ್ತಾರೆ. ರಾಜನೂ ತನ್ನ ಅರಮನೆ ಬಿಟ್ಟು ಹೋಗುವಾಗ ತನಗಾಗಿಯೆ ಕಾರ್ಯದರ್ಶಿ ಗಳನ್ನು ಕರೆದೊಯ್ಯುತ್ತಾನೆ. ಅವರು ರಾಜ ಹೇಳಿದುದನ್ನೆಲ್ಲ, ಮತ್ತು ಅವನು ನೀಡುವ ಅನುಗ್ರಹಗಳನ್ನು, ಮತ್ತು ಅವನ  ನಿರ್ಧಾರವೇನಿತ್ತು ಎಂಬುದನ್ನು ಬರೆದಿಡುತ್ತಾರೆ; ಈ ಜನರಿಗೆ ಸುವಾರ್ತಾ ಲೇಖಕರಿಗೆ ಸಮನಾದ ಮಾನ್ಯತೆಯನ್ನು ನೀಡಲಾಗುತ್ತದೆ. ಏಕೆಂದರೆ, ರಾಜ ಯಾವಾಗಲೆ ಮಾತನಾಡಲಿ ಅದರಲ್ಲಿ ದಾಖಲೆ ಯೋಗ್ಯವಾದುದು ಇರಲೇಬೇಕೆಂದು ಮತ್ತು ಅವುಗಳ ಸ್ಮರಣೆಗಾಗಿ ಇಂಥ ದಾಖಲೆ ಅವಶ್ಯಕವೆಂದೂ ಅವರೆನ್ನುತ್ತಾರೆ. ಹೀಗಾಗಿ, ಅವನು ನೀಡುವ ಅನುಗ್ರಹ ಅಥವಾ ಅಪ್ಪಣೆಗಳಿಗೆ ಯಾವುದೇ ಲಿಖಿತ ಅಧ್ಯಯನಗಳನ್ನು ಹೊರಡಿಸ ಲಾಗುವುದಿಲ್ಲ. ಅಥವಾ ಸನ್ನದುಗಳನ್ನು ನೀಡಲಾಗುವುದಿಲ್ಲ. ಆದರೆ, ಅವನು ಯಾರ ಮೇಲಾದರೂ ಅನುಗ್ರಹ ನೀಡಿದಾಗ ಈ ಕಾರ್ಯದರ್ಶಿಗಳ ದಾಖಲೆ ಪುಸ್ತಕಗಳಲ್ಲಿ ಬರೆದಿಡಲ್ಪಡುತ್ತದೆ. ಆದರೆ, ಆನುಗ್ರಹ ಪಡೆಯುವವನಿಗೆ ರಾಜ ತನ್ನ ಮಂತ್ರಿ ಇಟ್ಟು ಕೊಂಡಿರುವ ತನ್ನ ಉಂಗುರಗಳಲ್ಲೊಂದರ ಮುದ್ರೆಯನ್ನೂ ಮೇಣದ ಮೇಲೆ ಮೂಡಿಸಿ ಕೊಡುತ್ತಾನೆ ಮತ್ತು ಮುದ್ರೆಗಳು ಸ್ವಾಮ್ಯಪತ್ರಗಳಿದ್ದಂತೆಯೆ.

ಈ ಬಿಸ್ನಗದ ರಾಜರು ಎಲ್ಲ ತರಹದ ಭಕ್ಷ್ಯ ತಿನ್ನುತ್ತಾರೆ, ಆದರೆ, ಎತ್ತು ಅಥವಾ ಆಕಳಿನ ಮಾಂಸ ತಿನ್ನುವುದಿಲ್ಲ. ಅವುಗಳನ್ನು ಅವರು ಪೂಜಿಸುವುದರಿಂದ ಈ ವಿಧರ್ಮೀಯರ ದೇಶದಲ್ಲಿ ಎಲ್ಲೂ ಅವುಗಳನ್ನೆಂದೂ ಕೊಲ್ಲುವುದಿಲ್ಲ. ಅವರು, ಕುರಿಯಮಾಂಸ, ಹಂದಿಯ ಮಾಂಸ, ಚಿಗರಿಯ ಮಾಂಸ, ಕವುಜಗ ಹಕ್ಕಿಗಳು, ಮೊಲಗಳು, ಪಾರಿವಾಳಗಳು, ಲಾವಕ್ಕಿಗಳು ಮತ್ತು ಎಲ್ಲ ತರಹದ ಹಕ್ಕಿಗಳನ್ನು ತಿನ್ನುತ್ತಾರೆ; ಗುಬ್ಬಿಗಳು, ಇಲಿಗಳು, ಬೆಕ್ಕುಗಳು, ಮತ್ತು ಉಡಗಳನ್ನೂ ಸಹ ತಿನ್ನುತ್ತಾರೆ. ಅವೆಲ್ಲ ಬಿಸ್ನಗ ನಗರದ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ.

ಪ್ರತಿಯೊಬ್ಬನೂ ತಾನು ಏನೂ ಕೊಳ್ಳುತ್ತಿರುವೆನೆಂಬುದನ್ನು ಅರಿಯಲೋಸುಗ ಪ್ರತಿಯೊಂದೂ ಸಜೀವವಾಗಿ ಮಾರಲ್ಪಡಬೇಕು. ಇದು ಬೇಟೆಯ ಪ್ರಾಣಿಯ ವಿಷಯದಲ್ಲಂತೂ ನಿಜ[1], ಮತ್ತು ಅಧಿಕ ಪ್ರಮಾಣದಲ್ಲಿ ನದಿಯ ಮೀನುಗಳೂ ಇರುತ್ತವೆ. ಮಾರುಕಟ್ಟೆಗಳು ದ್ರಾಕ್ಷಿ, ಕಿತ್ತಳೆ, ಲಿಂಬೆ, ದಾಲಿಂಬ, ಹಲಸು, ಮತ್ತು ಎಲ್ಲವೂ ಬಹಳ ಹಗ್ಗವಾಗಿರುತ್ತವೆ. ಮಾರುಕಟ್ಟೆಗಳಲ್ಲಿ ಒಂದು ಪರ್ದಾವ್‌ಗೆ ಹನ್ನೆರಡು ಸಜೀವ ಕುರಿಗಳನ್ನು ಮತ್ತು ಗುಡ್ಡಗಾಡಿನಲ್ಲಿ ಹದಿನಾಲ್ಕು ಅಥವಾ ಹದಿನೈದನ್ನು ಕೊಡುತ್ತಾರೆಂದು ಹೇಳಲಾಗುತ್ತದೆ. ರಾಜನಿಗೆ ಬಹಳ ವಿಶ್ವಾಸವುಳ್ಳ ಮನುಷ್ಯನೊಬ್ಬನ ಕೈಯಲ್ಲಿ ಆವರಣ ಹಾಕಲ್ಪಟ್ಟಿದ್ದ ಚಿಲುಮೆಯಿಂದ ತರಲಾದ ನೀರನ್ನು ರಾಜ ಕುಡಿಯುತ್ತಾನೆ ; ಮತ್ತು ನೀರನ್ನು ಎತ್ತುವ  ಪಾತ್ರೆಗಳು ಮುಚ್ಚಿಕೊಂಡು ಮತ್ತು ಮುದ್ರೆಯೊತ್ತಿಕೊಂಡು ಬರುತ್ತವೆ. ಹೀಗೆ ಅವರು ಅದನ್ನು ರಾಜನ ಸೇವೆಯಲ್ಲಿರುವ ಸ್ತ್ರೀಯರಿಗೆ ಕೊಡುತ್ತಾರೆ, ಮತ್ತು ಅವರು ಅದನ್ನು ಒಳಗಡೆಗೆ ಇತರ ಸ್ತ್ರೀಯರಾದ ರಾಜನ ಹೆಂಡಂದಿರೆ ಒಯ್ದು ಕೊಡುತ್ತಾರೆ.

ಈ ಬಿಸ್ನಗದ ಮನ್ನೆಯೊಬ್ಬನಿಗೆ ನೀಡುವ ಅತಿ ದೊಡ್ಡ ಗೌರವದ ಕುರುಹು ಎಂದರೆ ಕೆಲವೊಂದು ಆಕುಳಗಳ ಬಿಳಿ ಬಾಲಗಳಿಂದ[2]  ಮಾಡಿದ ಚೌರಿಗಳು ; ಅವನು ಅವರಿಗೆ ಕಡಗಗಳನ್ನೂ ಕೊಡುತ್ತಾನೆ. ಮನ್ನೆಯ ಪಡೆಯುವ ಪ್ರತಿಯೊಂದನ್ನೂ ನೆಲದ ಮೇಲಿಡಲಾಗುತ್ತದೆ. ಅವನು ಯಾರಿಗಾದರೂ ತನ್ನ ಪಾದ ಚುಂಬಿಸಲು ಅನುಮತಿ ನೀಡಿದರೆ ಅದು ಕೂಡ ರಾಜ ನೀಡುವ ದೊಡ್ಡ ಗೌರವವೆ. ಏಕೆಂದರೆ, ಅವನು ತನ್ನ ಕೈಗಳನ್ನು ಚುಂಬಿಸಲು ಯಾರಿಗೂ ಕೊಡುವುದಿಲ್ಲ. ತನ್ನ ದಳವಾಯಿಗಳನ್ನು ಅಥವಾ ತಾನು ಒಳ್ಳೆಯ ಸೇವೆ ಸ್ವೀಕರಿಸಿದ ಇಲ್ಲವೆ ಸ್ವೀಕರಿಸಬಯಸುವ ವ್ಯಕ್ತಿಗಳನ್ನು ಸಂತುಷ್ಟಗೊಳಿಸಲಿಚ್ಛಿಸಿದಾಗ ಅವರ ಸ್ವಂತ ಉಪಯೋಗಕ್ಕಾಗಿ ಗೌರವಾರ್ಥ ಉತ್ತರೀಯಗಳನ್ನು ಕೊಡುತ್ತಾನೆ. ಅದೊಂದು ದೊಡ್ಡ ಗೌರವ; ಮತ್ತು ಪ್ರತಿವರ್ಷ ದಳವಾಯಿಗಳು ಅವನಿಗೆ ಭೂಕಂದಾಯಗಳನ್ನು ಕೊಡಲು ಬಂದಾಗ ಇದನ್ನು ಅವರಿಗೆ ಮಾಡುತ್ತಾನೆ. ಇದು ಸೆಪ್ಟಂಬರ್ ತಿಂಗಳಲ್ಲಿ ನಡೆಯುತ್ತದೆ. ಆಗ ಒಂಬತ್ತು ದಿನ ಅವರು ದೊಡ್ಡ ಉತ್ಸವಗಳನ್ನು ಏರ್ಪಡಿಸುತ್ತಾರೆ. ಮೇರಿ ಕನ್ನಿಕೆ ತನ್ನ ಪುತ್ರನನ್ನು ಗರ್ಭದಲ್ಲಿ ಧರಿಸಿದ ಒಂಬತ್ತು ತಿಂಗಳ ಗೌರವಾರ್ಥ ಅವರು ಅದನ್ನು ಮಾಡುತ್ತಾರೆಂದು ಕೆಲವರೆನ್ನುತ್ತಾರೆ ; ದಳವಾಯಿಗಳು ರಾಜನಿಗೆ ಭೂಕಂದಾಯಗಳನ್ನು ಕೊಡಲು ಈ ಸಮಯಕ್ಕೆ ಬರುವುದರಿಂದಲೇ ಇದನ್ನು ಮಾಡಲಾ ಗುತ್ತದೆಂದು ಇನ್ನು ಕೆಲವರು  ಅನ್ನುತ್ತಾರೆ. ಆ ಉತ್ಸವಗಳು ಕೆಳಗಿನಂತೆ ಜರುಗುತ್ತವೆ:

ಮೊದಲ ದಿನ ಅರಮನೆಯ ಮುಂದಿನ ಜಾಗದಲ್ಲಿ ಅವರು ಒಂಬತ್ತು ಮಂಡಪ ನಿರ್ಮಿಸುತ್ತಾರೆ. ಈ ಒಂಬತ್ತು ಮಂಡಪಗಳನ್ನು ರಾಜ್ಯದ ಒಂಬತ್ತು ಪ್ರಧಾನ ದಳವಾಯಿಗಳು ಮಾಡುತ್ತಾರೆ. ಅವುಗಳು ಬಹಳ ಎತ್ತರವಾಗಿರುತ್ತವೆ. ಅವುಗಳಲ್ಲಿ ಬೆಲೆಯುಳ್ಳ ಬಟ್ಟೆ ಇಳಿಬಿಡಲಾಗುತ್ತದೆ ಮತ್ತು ಅನೇಕ ನೃತ್ಯಗಾರ್ತಿಯರೂ ಅನೇಕ ವಿವಿಧ ಸಾಧನಗಳೂ ಇರುತ್ತವೆ.  ಈ ಒಂಬತ್ತಲ್ಲದ ಪ್ರತಿಯೊಬ್ಬ ದಳವಾಯಿಯೂ ತನ್ನೊಂದು ಮಂಡಪ ನಿರ್ಮಿಸಲೇಬೇಕು, ಮತ್ತು ಅವರು ಇವುಗಳನ್ನು ರಾಜನಿಗೆ ತೋರಿಸಲು ಬರುತ್ತಾರೆ. ಪ್ರತಿಯೊಬ್ಬನೂ ತನ್ನದೆ ಸಾಧನ ಹೊಂದಿರುತ್ತಾನೆ ಮತ್ತು ಅವರೆಲ್ಲ ಹೀಗೆ ಉತ್ಸವದ ಒಂಬತ್ತು ದಿನಗಳ ಕಾಲಕ್ಕೆ ಬರುತ್ತಾರೆ. ನಗರದ ಅಧಿಕಾರಿಗಳು ನಮ್ಮ ಉತ್ಸವಗಳಲ್ಲಿ ಯಂತೆಯೆ ಪ್ರತಿ ರಾತ್ರಿ ತಮ್ಮ ಸಾಧನಗಳೊಂಂದಿಗೆ ಬರಲೇಬೇಕು, ಮತ್ತು ಈ ಒಂಬತ್ತು ದಿನಗಳಲ್ಲಿ ಅವರು ಪ್ರಾಣಿಗಳನ್ನು ಕೊಂದು ಬಲಿ ಕೊಡುತ್ತಾರೆ. ಮೊದಲ ದಿನ ಅವರು ಒಂಬತ್ತು ಕೋಣಗಳು ಒಂಬತ್ತು ಕುರಿಗಳು ಮತ್ತು ಒಂಬತ್ತು ಆಡುಗಳನ್ನು ಕೊಲ್ಲುತ್ತಾರೆ, ಅಂದಿನಿಂದ ಮುಂದೆ ಅವರು ಯಾವಾಗಲೂ ಸಂಖ್ಯೆ ದ್ವಿಗುಣಗೊಳಿಸುತ್ತ ಪ್ರತಿ ದಿನ ಹೆಚ್ಚೆಚ್ಚು ಕೊಲ್ಲುತ್ತಾರೆ. ಈ ಪ್ರಾಣಿಗಳ ವಧೆ ಮುಕ್ತಾಯಗೊಂಡಾಗ ರಾಜನ ಒಂಬತ್ತು ಕುದುರೆಗಳು ಮತ್ತು ಒಂಬತ್ತು ಆನೆಗಳು ಬರುತ್ತವೆ. ಇವು ಹೂವುಗಳಿಂದ-ಗುಲಾಬಿಗಳಿಂದ-ಆಚ್ಛಾದಿತವಾಗಿ ಮತ್ತು ಬೆಲೆಯುಳ್ಳ ಸಜ್ಜುಗಳಿಂದೊಡಗೂಡಿ ರಾಜನ ಮುಂದೆ ಬರುತ್ತವೆ. ಅವುಗಳ ಮುಂದೆ ಅನೇಕ ಪರಿಚಾರಕರಿಂದೊಡಗೂಡಿ ಪ್ರಧಾನ ಅಶ್ವಪತಿ ಹೋಗುತ್ತಾನೆ. ಮತ್ತು ಅವರು ರಾಜನಿಗೆ ಸಲಾಮ್ ಮಾಡುತ್ತಾರೆ. ಅವರು ಸಲಾಮ್ ಮಾಡುವುದು ಮುಗಿದಾಗ ಒಳಗಿನಿಂದ ಪುರೋಹಿತರು ಬರುತ್ತಾರೆ, ಅವರು ಅನ್ನ ಮತ್ತು ಇತರ ಬೇಯಿಸಿದ ಭಕ್ಷ್ಯಗಳು, ಮತ್ತು ನೀರು, ಮತ್ತು ಬೆಂಕಿ, ಮತ್ತು ಅನೇಕ ವಿಧದ ಪರಿಮಳಗಳನ್ನುತರುತ್ತಾರೆ, ಅವರು ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು (ನಮ್ಮ ಪಾದ್ರಿಗಳು ಪವಿತ್ರ ಜಲ ಸಿಂಪಡಿಸು ವಂತೆಯೆ) ಕುದುರೆಗಳು ಮತ್ತು ಆನೆಗಳು ಮೇಲೆ ನೀರು ಸಿಂಪಡಿಸುತ್ತಾರೆ ಅವುಗಳಿಗೆ ಗುಲಾಬಿ ದಂಡೆಗಳನ್ನು ತೊಡಿಸುತ್ತಾರೆ. ಬಂಗಾರ ಮತ್ತು ಬೆಲೆಯುಳ್ಳ ಹರಳುಗಳ ಸಿಂಹಾಸನದ ಮೇಲೆ ಆಸೀನನಾದ ರಾಜನ ಸಮ್ಮುಖದಲ್ಲಿ ಇದನ್ನು ಮಾಡಲಾಗುತ್ತದೆ; ಅವನು ಈಗೊಮ್ಮೆ ಬಿಟ್ಟರೆ ಎಂದೂ ಇದರ ಮೇಲೆ ಕುಳ್ಳಿರುವುದಿಲ್ಲ. ಮತ್ತು ಈಗ ಆಳುತ್ತಿರುವ ರಾಜ ಅದರ ಮೇಲೆ ಕುಳಿತುಕೊಳ್ಳುವುದಿಲ್ಲ. ಏಕೆಂದರೆ, ಅದರ ಮೇಲೆ ಯಾರೇ ಕುಳಿತುಕೊಳ್ಳಲಿ ಅವನು ಸತ್ಯನಿಷ್ಠನಾದ, ಸಂಪೂರ್ಣ ಸತ್ಯ ನುಡಿಯುವ ವ್ಯಕ್ತಿಯಾಗಿರಬೇಕು, ಮತ್ತು ಈ ರಾಜ ಎಂದೂ ಹಾಗೆ ಮಾಡುವುದಿಲ್ಲ. ಇದೆಲ್ಲ ನಡೆಯುತ್ತಿರುವಾಗ ಪೂರ್ಣ ಒಂದು ಸಾವಿರ ಸ್ತ್ರೀಯರು ಅವನ ಮುಂದೆ ನೃತ್ಯಗೈಯುತ್ತ ಭಂಗಿಯಲ್ಲಿ ನಡೆಯುತ್ತ ರಾಜನ ಬದಿಗೆ ಹಾಯ್ದು ಹೋಗುತ್ತಾರೆ. ಮಾಡಲಾದ ಎಲ್ಲ ಸಾಧನಗಳನ್ನು ನೋಡಿದ ಮೇಲೆ ತಮ್ಮ ರೇಷ್ಮೆ ಸಜ್ಜುಗಳಿಂದ ಆಚ್ಛಾದಿತವಾದ ಮತ್ತು ತಮ್ಮ ತಲೆಯ ಮೇಲೆ ಬಂಗಾರದ ಮತ್ತು ಬೆಲೆಯುಳ್ಳ ಹರಳುಗಳ ಬಹಳ ಅಲಂಕಾರಗಳಿಂದೊಡಗೂಡಿದ ರಾಜನ ಎಲ್ಲಾ ಕುದುರೆಗಳು ಮತ್ತು ಆಮೇಲೆ ಎಲ್ಲ ಆನೆಗಳು ಮತ್ತು ಎತ್ತುಗಳ ನೊಗಗಳು[3] ದಾಟಿಹೋಗಿ ಅರಮನೆಯ ಮುಂದಿನ ಕಣದಲ್ಲಿ ಬಂದು ನಿಲ್ಲುತ್ತವೆ. ಇವುಗಳನ್ನು ನೋಡಿಯಾದ ನಂತರ ರಾಜ ಹೆಂಡಂದಿರಲ್ಲಿ ಅತ್ಯಂತ ಸುಂದರವಾದ ಮುವತ್ತಾರು ಮಂದಿ ಬಂಗಾರ ಮತ್ತು ಮುತ್ತುಗಳ ಕುಶಲಕಾರ್ಯಗಳಿಂದ ಅಲಂಕೃತರಾಗಿ ಬರುತ್ತಾರೆ. ಪ್ರತಿಯೊಬ್ಬಳ ಕೈಗಳಲ್ಲಿ ಅದರೊಳಗೆ ಎಣ್ಣೆದೀಪ ಉರಿಯುವ ಪಾತ್ರೆ ಇರುತ್ತದೆ. ಈ ಸ್ತ್ರೀಯರೊಂದಿಗೆ ಬಂಗಾರದ ತುದಿಗಳ ಬೆತ್ತ ಮತ್ತು ಉರಿಯುವ ಪಂಜು ಹಿಡಿದ ಎಲ್ಲ ಪರಿಚಾರಿಕೆಯರು ಮತ್ತು ರಾಜನ ಇತರ ಹೆಂಡಂದಿರು ಬರುತ್ತಾರೆ. ಆಮೇಲೆ ಇವರು ರಾಜನೊಂದಿಗೆ ಒಳಗೆ ಹೋಗುತ್ತಾರೆ. ಈ ಸ್ತ್ರೀಯರು ಬಂಗಾರ ಮತ್ತು ಬೆಲೆಯುಳ್ಳ ಹರಳುಗಳಿಂದ ಎಷ್ಟೊಂದು ಸಿಂಗರಿಸಿಕೊಂಡಿ ರುತ್ತಾರೆಂದರೆ ಅವರಿಗೆ ನಡೆಯುವುದು ಕಷ್ಟಕರವಾಗಿರುತ್ತದೆ.

ಈ ರೀತಿ ಈ ಒಂಬತ್ತು ದಿನಗಳ ಕಾಲದಲ್ಲಿ ರಾಜನಿಗೆ ಸಂತೋಷ ನೀಡುವ ಎಲ್ಲ ವಸ್ತುಗಳಿಗಾಗಿ ಅವರು ಹುಡುಕುತ್ತಿರಬೇಕಾಗುತ್ತದೆ.

ಈ ಉತ್ಸವಗಳಿಗಾಗಿ ರಾಜ ಒಂದು ಸಾವಿರ ಕುಸ್ತಿಯಾಳುಗಳನ್ನು ಹೊಂದಿರುವನು. ಅವರು ರಾಜನ ಮುಂದೆ ಕುಸ್ತಿ ಆಡುತ್ತಾರೆ. ಆದರೆ ನಮ್ಮ ಶೈಲಿಯಲ್ಲಲ್ಲ. ಏಕೆಂದರೆ, ಅವರು ಹೊಡೆಯಲೋಸುಗ ತಮ್ಮ ಕೈಯಲ್ಲಿ ಧರಿಸಿರುವ ಚೂಪು ಚುದಿಯುಳ್ಳ ಚಿಕ್ಕ ಚಕ್ರಗಳಿಂದ[4] ಒಬ್ಬರಿನ್ನೊಬ್ಬರನ್ನು ಹೊಡೆಯುತ್ತಾರೆ ಮತ್ತು ಘಾಸಿಗೊಳಿಸುತ್ತಾರೆ. ಎಲ್ಲಕ್ಕೂ ಹೆಚ್ಚು ಘಾಸಿಗೊಂಡವನು ಹೋಗಿ ರಾಜನು ಈ ಕುಸ್ತಿಯಾಳುಗಳಿಗೆ ಕೊಡುವಂತಹ ರೇಷ್ಮೆ ಬಟ್ಟೆಯ ರೂಪದಲ್ಲಿನ ಬಹುಮಾನವನ್ನು ಪಡೆಯುತ್ತಾನೆ.[5] ಅವರ ಮೇಲೊಬ್ಬ ದಳವಾಯಿ ಇರುವನು, ಮತ್ತು ಅವರ ರಾಜ್ಯದಲ್ಲಿ ಬೇರೆ ಯಾವ ಸೇವೆಯನ್ನೂ ಮಾಡುವುದಿಲ್ಲ.[1]       E Ysto ho Coanto a Cuca.ಪ್ರಸ್ತುತದಲ್ಲಿ ದಕ್ಷಿಣ ಭಾರತದಲ್ಲಿ ಕಾಡು ಪಕ್ಷಿಗಳನ್ನು, ಸಾಮಾನ್ಯವಾಗಿ ಕಣ್ಣುಗಳನ್ನು ಹೊಲಿದು, ಸಜೀವವಾಗಿ ಮಾರಲಾಗುತ್ತದೆ.

[2]       ಗುಡಿಗಳಲ್ಲಿ ಮೂರ್ತಿಗಳ ಸೇವೆಯಲ್ಲಿ ಇಲ್ಲವೆ ಮನ್ನೆಯರ ಅರಮನೆಗಳಲ್ಲಿ ಬಳಸಲಾಗುವ ಯಾಕ್-ಬಾಲ ಜವಿಗಳನ್ನು ಇದು ಸ್ಪಷ್ಟವಾಗಿಯೆ ಸೂಚಿಸುತ್ತದೆ. ಇಂದು ಸಮಾರಂಭ ಸಂದರ್ಭಗಳಲ್ಲಿ ಪಾರಮ್ಯಕ್ಕೆ ಹಕ್ಕುಳ್ಳ ಅಥವಾ ಸ್ವತಂತ್ರ ಪ್ರಭುಗಳ ವಂಶಾವಳಿಗೆ   ಸೇರಿದವನೆಂದು ಸಾಧಿಸುವ ಯಾವನೆ ಪಾಳೆಯಗಾರ ಅಥವಾ ದೊರೆ ತನ್ನ ಘನತೆಯನ್ನು ಕೆಲವು ಲಾಂಛನಗಳ ಬಳಕೆಯ ಮೂಲಕ ಸಾರುತ್ತಾನೆ. ಇವುಗಳಳ್ಲಿ ಯಾಕ್-ಬಾಲ ಚೌರಿ ಒಂದು. ಅದೊಂದು ಅತ್ಯಂತ ಲಾವಣ್ಯಮಯ ಆಭೂಷಣಗಳಲ್ಲೊಂದು. ಮೃದು ಬಿಳಿ ಕೂದಲುಗಳನ್ನು ಹಿತ್ತಾಳೆ ಇಲ್ಲವೆ ಬೆಳ್ಳಿಯ ಹಿಡಿಕೆಯಲ್ಲಿ ಕೂಡಿಸಲಾಗಿರುತ್ತದೆ ಮತ್ತು ಪರಿಚಾರಕ ಅದನ್ನು ನಿಧಾನವಾಗಿ ಬೀಸುತ್ತಾನೆ. ಅದರ ವಾಸ್ತವಿಕ ಉದ್ದೇಶ ನೊಣಗಳನ್ನು ದೂರವಿರಿಸುವುದಾಗಿತ್ತು.

[3]       Juntas.ಇದರರ್ಥ ಸಂದೇಹಾಸ್ಪದವಾಗಿದೆ, ಆದರೆ ಸಂಭವನೀಯವಾಗಿ ಎತ್ತುಗಳ ನೊಗಗಳಿಗೆ ಇಲ್ಲಿ ಪ್ರಸ್ತಾಪವಿದೆ. ಪ್ರವಾಸ ವಾಹನಗಳಿಗೆ ಕಟ್ಟಿದಾಗ. ಕನ್ನಡ ನಾಡಿನಲ್ಲಿ ಇವುಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ ಮತ್ತು ಬಟ್ಟೆ ಹೊದಿಸಲಾಗುತ್ತದೆ.

[4]       Rodas de bicos ಇವುಗಳನ್ನು ಬಹುಶಃ ಇಂಗ್ಲೆಂಡಿನಲ್ಲಿ, ಪರಿಚಿತವಿರುವಂತಹ ಗೆಣ್ಣುಕಾಪುಗಳಿರಬಹುದು.

[5]       ಮುಕ್ತ ಅನುವಾದ. ಮೂಲ ಹೀಗಿದೆ : de maneira que o que fica de baixo d outor mais ferido vay, leva a fogoca, que he huu Pacharim,” ಇತ್ಯಾದಿ, ಸೋತವರಿಗೆ ಬಹುಮಾನ ನೀಡುವುದು ವಿಲಕ್ಷಣವಾಗಿ ತೋರುತ್ತದೆ. Leva a fogaca ಇದರ ಅಕ್ಷರಶ;ಅರ್ಥ “ಬೆಣ್ಣೆ ತಿನ್ನುತ್ತಾನೆ.”[1]      ಇವರಿಬ್ಬರೂ ಬಹುಶಃ ಬಲಿಷ್ಠ ಸಹೋದರರಾದ ರಾಮ, ತಿರುಮಲ ಮತ್ತು ವೆಂಕಟಾದ್ರಿಯಲ್ಲಿ ಇಬ್ಬರಾಗಿರಬಹುದು. ಇವರಲ್ಲಿ ಮೊದಲಿಬ್ಬರು ಕೃಷ್ಣದೇವನ ಇಬ್ಬರು ಪುತ್ರಿಯನ್ನು ಲಗ್ನವಾದರು. ಹಾಗಿದ್ದ ಪಕ್ಷದಲ್ಲಿ ಅವರು ರಾಜಾ ಅಚ್ಯುತನ ಪ್ರತ್ಯಕ್ಷ ಮೈದುನರಾಗಿರದೆ ತನ್ನ ಸಹೋದರನಾಗಿದ್ದ ಮೃತ ರಾಜನ ಮೈದುನರಾಗಿದ್ದರು.

[2]      ಒಂದು ಮ್ಯಾಂಗೆಲಿನ್ ಎಂದರೆ ಹೆಚ್ಚು ಕಡಿಮೆ ಒಂದು ಕ್ಯಾರಟ್‌ಗೆ ಸಮ. ಆದರೆ ಪ್ರತ್ಯಕ್ಷ ವ್ಯತ್ಯಾಸ ಒಂದು ಐದಾಂಶ. ೪ ಮ್ಯಾಂಗೆಲಿನ್ =೫ ಕ್ಯಾರೆಟ್, ಆದುದರಿಂದ, ೧೩೦ ಮ್ಯಾಂಗೆಲಿನ್ = ೧೬೨ ಕ್ಯಾರೆಟ್. ಕೊಹಿನೂರು, ಇಂಗ್ಲೆಂಡಿಗೆ ತರಲಾದಾಗ, ೧೮೬ ಕ್ಯಾರಟ್ ತೂಕವುಳ್ಳದ್ದಿತ್ತು.

[3]      ಇಲ್ಲಿ ಬಳಸಲಾದ ಶಬ್ದ catre ಆಗಿದೆ. ಹಗುರವಾದ ಮಂಚ, ಬಿಡಾರ ಮಂಚ ಎಂಬರ್ಥ ನೀಡುವ ಆಧುನಿಕ ದಕ್ಷಿಣ ಭಾರತೀಯ ‘cot’ ಶಬ್ದದ ಮೂಲ ಇದಾಗಿರಬಹುದು.

[4]      Arquelha de prata. Arqueltha ಎಂದರೆ ಸೊಳ್ಳೆ ಪರದೆ. ಸ್ಪಷ್ಟವಾಗಿಯೆ ಸೊಳ್ಳೆಪರದೆಯನ್ನು ಬೆಳ್ಳಿಯಿಂದ ಮಾಡಲು ಶಕ್ಯವಿಲ್ಲದ್ದರಿಂದ, ಇಲ್ಲಿ ಬಹುಶಃ ಅದರ ಆಸರೆಗಳನ್ನು ಸೂಚಿಸಲಾಗಿದೆ. ನನಗೆ ಬರೆದ ಒಂದು ಪತ್ರದಲ್ಲಿ ಸೆನ್ಹೊರ್ ಲೋಪ್ಸ್ ಅದರರ್ಥ ವಿತಾನದ ಮೇಲ್ಭಾಗ ‘le ciel du lit’ ಅಥವಾ ಪರದೆಗಳನ್ನು ಎತ್ತಿ ಹಿಡಿಯುವ ಚೌಕಟ್ಟು ಎಂದು ಸೂಚಿಸುತ್ತಾನೆ. Arquelha, arco(‘ಬಿಲ್ಲು’ಇಲ್ಲವೆ ‘ಕಮಾನು’)ದ ಪುಟ್ಟ ಶಬ್ದ. ಈ ಪ್ರಕರಣದಲ್ಲಿ, ಅದು ಮಹಮ್ಮದೀಯ ಶೈಲಿಯಲ್ಲಿ ಮಾಡಲ್ಪಟ್ಟ ವಿತಾನದ ಗುಮ್ಮಟ್ಟದ ಒಳಮೈ ಎಂಬರ್ಥ ನೀಡಬಹುದು. ಮತ್ತು ಪರದೆಗಳು ಸೊಳ್ಳೆ ಪರದೆ ಬಟ್ಟೆಯಾಗಿರದೆ ರೇಷ್ಮೆ ಅಥವಾ ಜರತಾರಿ ಬಟ್ಟೆಯವಾಗಿದ್ದಿರಬಹುದು.