ಸೀಜರ್ ಫ್ರೆಡೆರಿಕ್ ಇಟಾಲಿಯ ವೇನಿಸ್‌ ಪಟ್ಟಣದ ನಿವಾಸಿ. ಕ್ರಿ.ಶ. ೧೫೬೩ರಲ್ಲಿ ಪ್ರಪಂಚದ ಪೂರ್ವ ಭಾಗಗಳನ್ನು ನೋಡಬೇಕೆಂಬ ಆಸೆಯಿಂದ, ಕೆಲವು ವ್ಯಾಪಾರದ ಸರಂಜಾಮುಗಳೊಡನೆ ಜಾಕೊಮೊ ವಟಿಕಾ ಎಂಬುವನ ಹಡಗಿನಲ್ಲಿ ಸೈಪ್ರೆಸ್ ತಲುಪಿದ. ನಂತರ ಆರ‌್ಮೆನಿಯಾ ಮತ್ತು ಮೂರ್ ವರ್ತಕರ ಪರಿಚಯಮಾಡಿಕೊಂಡು ಯೂಫ್ರೆಟೀಸ್  ನದಿಯ ಬೀರ್ ಪಟ್ಟಣದ ಮೂಲಕ ಬ್ಯಾಬಿಲೋನ್ ನಗರ ತಲುಪಿದ. ಅರೇಬಿಯದ  ಬಸೋರಾ ಹಾಗೂ ಓರ‌್ಮಾಸ್ ನಗರವನ್ನು ಸಂದರ್ಶಿಸಿ ಮುಂದೆ ಗೋವಾಕ್ಕೆ ತಲುಪಿದ. ಹಾಗೆ ದಾರಿಯಲ್ಲಿ ಬರುವ ದಿಯು, ಕಾಂಬಿಯಾ (ಕ್ಯಾಂಬೆ) ರಾಜ್ಯದಲ್ಲಿರುವ ಸಣ್ಣ ದ್ವೀಪ. ಅಲ್ಲಿ ದೊರಕುವ ಸಂಬಾರದ ವಸ್ತು, ಹತ್ತಿ ಬಟ್ಟೆ, ರೇಷ್ಮೆವಸ್ತ್ರ, ಔಷಧಿ ಮತ್ತು ಅಮೂಲ್ಯವಾದ ಹರಳುಗಳ ಬಗೆಗೆ ತಿಳಿಸಿದ್ದಾನೆ. ಗೋವಾ, ಪೋರ್ಚು ಗಲ್ಲರ ರಾಜಧಾನಿ, ಇದು ಸುಂದರವಾದ ನಗರ, ಪೋರ್ಚುಗಲ್ಲಿನಿಂದ ಗೋವಾಕ್ಕೆ ದೊಡ್ಡ ಹಡಗುಗಳು ಬಂದು ಕೆಲದಿನಗಳು ತಂಗಿ ಮುಂದೆ ಹೋಗುತ್ತವೆ. ಬಿಸಾಪೊರ್ (ಬಿಜಾಪುರ)ದ ದಿಯೂಲ್‌ಖಾನ (ಅಲಿ ಅದಿಲ್ ಷಾ) ಕ್ರಿ.ಶ. ೧೫೭೦ರಲ್ಲಿ ಗೋವೆಯ ಮುತ್ತಿಗೆ ಹಾಕಿ, ಸಂಧಿ ನಡೆದ ಬಗ್ಗೆ ತಿಳಿಸಿದ್ದಾನೆ. ಈತ ಕ್ರಿ.ಶ. ೧೫೬೭ರಲ್ಲಿ ಬಿಜೇನಗರ (ವಿಜಯನಗರ)ಕ್ಕೆ ಬಂದ.

ನಾನು ಕ್ರಿ.ಶ. ೧೫೬೭ರಲ್ಲಿ ಗೋವಾದಿಂದ ಬಿಜೆನೇಗರ್ (ವಿಜಯನಗರ) ಎಂಬ ನಗರಕ್ಕೆ ಹೋದೆ. ಇದು ನರಸಿಂಗ ರಾಜ್ಯದ ರಾಜಧಾನಿ. ಗೋವಾದಿಂದ ಎಂಟು ದಿನಗಳ ಪ್ರಯಾಣ. ಮುನ್ನೂರು ಅರೇಬಿಯಾ ಕುದುರೆಗಳನ್ನು ಹೊಡೆದುಕೊಂಡು ಹೊರಟಿದ್ದ ಇನ್ನಿಬ್ಬರು ವರ್ತಕರ ಜೊತೆ ಪ್ರಯಾಣ ಹೊರಟೆ. ಬಿಜೆನೇಗರದ ಕುದುರೆಗಳು ಸಣ್ಣ. ಈ ಕಾರಣ ಅರೇಬಿಯಾ ಕುದುರೆಗಳಿಗೆ ಒಳ್ಳೆ ಗಿರಾಕಿ. ಕುದುರೆಗಳಿಗೆ ಹೆಚ್ಚು ಬೆಲೆ ಬರುವಂತೆ ಮಾರಲೇಬೇಕು, ಏಕೆಂದರೆ ಇವನ್ನು ಪರ್ಷಿಯಾದಿಂದ ಓರ್ಮಾಸಿಗೆ ಸಾಗಿಸಿ, ಅಲ್ಲಿಂದ ಗೋವಾಕ್ಕೆ ತಂದು, ಗೋವಾದಲ್ಲಿ ಪ್ರತಿ ಕುದುರೆಗೆ ಇನ್ನೂರುನಲವತ್ತು ಪಗೋಡಾ ಸುಂಕ ಕೊಟ್ಟು ಬಿಜೆನೇಗರಕ್ಕೆ ತರಬೇಕು. ಇಲ್ಲಿ ಒಂದೊಂದು ಕುದುರೆಗೆ ೩೦೦, ೪೦೦, ೫೦೦, ಕೆಲವು ವೇಳೆ ೧೦೦೦ ಡಕಟ್‌ಗಳು ಬೆಲೆ ಸಿಕ್ಕುತ್ತದೆ.

ಬಿಜೇನೇಗರ್ ನಗರವನ್ನು ಕ್ರಿ.ಶ. ೧೫೬೫ರಲ್ಲಿ (ತಾಳೀಕೋಟೆ ಯುದ್ಧದಲ್ಲಿ) ಮೂರರ ಶಕ್ತಿವಂತರಾದ ನಾಲ್ಕು ರಾಜರು ಧ್ವಂಸಮಾಡಿದರು. ಶಕ್ತಿಗಿಂತ ಹೆಚ್ಚಾಗಿ ಮೋಸದಿಂದ ಈ ನಗರವನ್ನು ವಶಪಡಿಸಿಕೊಂಡರು ಎಂದು ಹೇಳಬೇಕು. ಬಿಜೆನೇಗರ್ ರಾಜನ ಬಳಿ ಇದ್ದ ಇಬ್ಬರು ಮೂರ ದಳವಾಯಿಗಳು ತಮ್ಮ ಅಧೀನದಲ್ಲಿದ್ದ ಎಪ್ಪತ್ತು ಎಂಬತ್ತು ಸಾವಿರ ಸೈನ್ಯ ಸಮೇತ ಮೂರ ರಾಜರುಗಳ ಕಡೆ ಸೇರಿಕೊಂಡು ಬಿಟ್ಟರು. ಶತ್ರು ಸೈನ್ಯವನ್ನು ಲೆಕ್ಕಕ್ಕೆ ತಾರದೆ ಬಿಜೆನೇಗರದ ರಾಜ ನಗರವನ್ನು ಬಿಟ್ಟು ಹೊರಗಡೆ ಬಂದು ಬಯಲಿನಲ್ಲಿ ಯುದ್ಧ ಆರಂಭಿಸಿದನು. ಆದರೆ ಯುದ್ಧ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯಲಿಲ್ಲ. ಏಕೆಂದರೆ, ಆ ಇಬ್ಬರು ರಾಜದ್ರೋಹಿ ದಳವಾಯಿಗಳು ತಮ್ಮ ದಳ ಸಮೇತ ತಮ್ಮ ರಾಜನ ಸೈನ್ಯದ ಮೇಲೆಯೇ ಬಿದ್ದರು.

[1]

ಇಲ್ಲಿಗೆ ಮೂವತ್ತು ವರ್ಷಗಳಿಂದ ಬಿಜೆನೇಗರ್ ರಾಜ್ಯವನ್ನು ಮೂರು ಸಹೋದರರು ಆಳುತ್ತಾ ಬಂದಿದ್ದರು. ನಿಜವಾದ ಹಕ್ಕುದಾರನನ್ನು ಸೆರೆಮನೆಯಲ್ಲಿಟ್ಟು ಈ ಮೂವರು ಕ್ರೂರವಾಗಿ ರಾಜ್ಯ ಆಳಿದ್ದರು. ವರ್ಷಕ್ಕೊಮ್ಮೆ ನಿಜವಾದ ರಾಜನನ್ನು ಜನಗಳಿಗೆ ತೋರಿಸಿ ತಾವು ಮನಬಂದಂತೆ ದರ್ಬಾರು ಮಾಡುತ್ತಿದ್ದರು. ಈ ಸಹೋದರರುಗಳು ಸೆರೆಮನೆಯಲ್ಲಿ ಇಡಲ್ಪಟ್ಟ ರಾಜನ ತಂದೆಯ ಕೆಳಗೆ ದಳವಾಯಿಗಳಾಗಿದ್ದವರು. ತಂದೆ ಸತ್ತಾಗ ಚಿಕ್ಕ ವಯಸ್ಸಿನವನಾದ ಮಗನನ್ನು ಸೆರೆಮನೆಗೆ ಹಾಕಿ ಈ ಮೂವರು ತಾವೇ ರಾಜ್ಯ ಆಳಲಾರಂಭಿಸಿದರು. ಇವರಲ್ಲಿ ಮುಖ್ಯನಾದವನು ರಾಮರಾಜಿಯೋ (ರಾಮರಾಯ). ಇವನು ಸಿಂಹಾಸನದ ಮೇಲೆ ಕುಳಿತುಕೊಂಡು ರಾಜನೆಂದು ಮೆರೆದ. ಎರಡನೆಯವನು ತೆಮಿರಾಜಿಯೋ (ತಿರುಮಲ). ನಿತ್ಯದ ಆಡಳಿತವನ್ನು ಇವನು ನೋಡಿಕೊಳ್ಳುತ್ತಿದ್ದ. ಮೂರನೆಯವನು ಬೆನ್‌ಗಾತ್ರೇ (ವೆಂಕಟಾದ್ರಿ). ಇವನು ಸೈನ್ಯದ ಮುಖ್ಯ ದಳಪತಿಯಾಗಿದ್ದ.

ಈ ಮೂವರು ಯುದ್ಧರಂಗಕ್ಕೆ ಹೋದರೂ ಮೊದಲನೆಯವನ ಮತ್ತು ಕೊನೆಯವನ ಸುದ್ದಿ ಗೊತ್ತಾಗಲೇ ಇಲ್ಲ; ಸತ್ತರೋ ಇಲ್ಲವೋ ತಿಳಿಯಲಿಲ್ಲ. ತೆಮಿರಾಜಿಯೋ ಮಾತ್ರ ಒಂದು ಕಣ್ಣು ಕಳೆದುಕೊಂಡು ಯುದ್ಧರಂಗದಿಂದ ಓಡಿಹೋದ. ಈ ಸುದ್ದಿ ರಾಣೀವಾಸಕ್ಕೆ ತಿಳಿಯಿತೋ ಇಲ್ಲವೋ ಅವರೆಲ್ಲ ಸೆರೆಮನೆಯಲ್ಲಿದ್ದ ನಿಜವಾದ ರಾಜನ ಸಮೇತ ನಗರದಿಂದ ಪಲಾಯನ ಮಾಡಿದರು. ಮೂರರ ನಾಲ್ಕು ರಾಜರು ವೈಭವದಿಂದ ನಗರವನ್ನು ಪ್ರವೇಶಿಸಿ, ಆರು ತಿಂಗಳು ಇದ್ದು, ಊರನ್ನೆಲ್ಲ ಶೋಧಿಸಿ, ಭಂಡಾರವನ್ನು ಕೊಳ್ಳೆಹೋಡೆದರು. ಆಮೇಲೆ ತಮ್ಮ ಸ್ವಸ್ಥಳಗಳಿಗೆ ಹಿಂದಿರುಗಿದರು. ಏಕೆಂದರೆ ಇವರ ರಾಜ್ಯಗಳಿಂದ ಇಷ್ಟು ದೂರದಲ್ಲಿದ್ದ ಮತ್ತು ಇಷ್ಟು ದೊಡ್ಡದಾದ ರಾಜ್ಯವನ್ನು ಆಳುವುದು ಅವರ ಕೈಯ್ಯಿಂದ ಆಗಲಿಲ್ಲ.[2]

ಇವರು ಹೋದಮೇಲೆ ತೆಮಿರಾಜಿಯೋ (ತಿರುಮಲ) ಬಿಜನೇಗರಕ್ಕೆ ಹಿಂದಿರುಗಿ ಜನರನ್ನು ಪುನರ್ವಸತಿ ಮಾಡಲಾರಂಭಿಸಿದನು. ಗೋವಾದಲ್ಲಿದ್ದ ವರ್ತಕರಿಗೆ ಕುದುರೆಗಳಿದ್ದರೆ ತೆಗೆದುಕೊಂಡು ಬರಬೇಕೆಂದೂ, ಅವಕ್ಕೆ ಒಳ್ಳೆಯ ಬೆಲೆ ಕೊಡುವುದಾಗಿಯೂ ಹೇಳಿ ಕಳುಹಿಸಿದ. ಈ ಕಾರಣವೇ ಮೇಲೆ ತಿಳಿಸಿದ ಇಬ್ಬರು ವರ್ತಕರು ಕುದುರೆಗಳ ಸಮೇತ ಬಿಜನೇಗರಕ್ಕೆ ಹೊರಟಿದ್ದರು. ಯುದ್ಧದಲ್ಲಿ ತೆಗೆದುಕೊಂಡಿದ್ದ ಕುದುರೆಗಳಿದ್ದರೆ ಅವಕ್ಕೂ ಕೇಳಿದಷ್ಟು ಬೆಲೆ ಕೊಡುವುದಾಗಿ ರಾಜ ತಿಳಿಸಿದ. ಅಲ್ಲದೆ ಕುದುರೆಗಳನ್ನು ತರುವವರಿಗೆ ದಾರಿಯಲ್ಲಿ ಎಲ್ಲಾ ರಕ್ಷಣೆಗಳನ್ನು ಒದಗಿಸುವುದಾಗಿ ಭರವಸೆ ಕೊಟ್ಟನು. ವರ್ತಕರು ಅನೇಕ ಕುದುರೆಗಳನ್ನು ಬಿಜನೇಗರಕ್ಕೆ ತಂದರು. ಅವನ್ನು ತರುವವರೆಗೂ ರಾಜ ಒಳ್ಳೆಯ ಮಾತುಗಳನ್ನಾಡುತ್ತಿದ್ದು, ಆಮೇಲೆ ವರ್ತಕರಿಗೆ ಏನೂ ಕೊಡದೆ ನಗರದಿಂದ ಹೊರಟು ಹೋಗುವಂತೆ ಹೇಳಿದ. ವರ್ತಕರು ತಮಗಾದ ನಿರಾಶೆಯಿಂದ ಹುಚ್ಚರಂತೆ ಅತ್ತೂ ಅತ್ತೂ ಸಾಕಾದರು.

ನನ್ನ ಕೆಲಸವನ್ನೆಲ್ಲಾ ಕೇವಲ ಒಂದು ತಿಂಗಳಲ್ಲಿ ಮುಗಿಸಬಹುದಾಗಿದ್ದರೂ ನಾನು ಏಳು ತಿಂಗಳ ಕಾಲ ಬಿಜನೇಗರದಲ್ಲಿ ಇದ್ದೆ. ಏಕೆಂದರೆ ಕಳ್ಳಕಾಕರ ಕಾಟ ಇಲ್ಲದಾಗ ಪ್ರಯಾಣ ಮಾಡಬೇಕಾಗಿತ್ತು. ದಾರಿಯಲ್ಲಿ ಕಳ್ಳಕಾಕರು ಆಡಿದ್ದೇ ಆಟವಾಗಿತ್ತು.

ನಾನಿದ್ದ ಏಳು ತಿಂಗಳ ಕಾಲದಲ್ಲಿ ಜೆಂಟೈಲರು ಮಾಡುತ್ತಿದ್ದ ಅನೇಕ ವಿಚಿತ್ರ ಹಾಗೂ ಅಮಾನುಷ ಕೃತ್ಯಗಳನ್ನು ಕಂಡೆ. ಗಣ್ಯರಾದ ಗಂಡಸರಾಗಲೀ ಹೆಂಗಸರಾಗಲೀ ಸತ್ತರೆ ಇಲ್ಲಿ ಸುಡುತ್ತಾರೆ. ಮದುವೆಯಾದ ಗಂಡಸು ಸತ್ತರೆ ಅವನ ಹೆಂಡತಿ ಚಿತೆಯಲ್ಲಿ ಬಿದ್ದು ಸಾಯುತ್ತಾಳೆ. ಗಂಡ ಸತ್ತಮೇಲೆ ಹೆಂಡತಿ ಒಂದು ಅಥವಾ ಮೂರು ತಿಂಗಳ ನಂತರ ಚಿತೆಯಲ್ಲಿ ಬೀಳುವುದಕ್ಕೆ ಸಿದ್ಧಳಾಗುತ್ತಾಳೆ. ನಿರ್ದಿಷ್ಟವಾದ ದಿನ ಬಂದಾಗ ಬಹಳ ಹೊತ್ತಿಗೆ ಮುಂಚೆ ಎದ್ದು ಕುದುರೆಯ ಮೇಲೋ, ಆನೆಯ ಮೇಲೋ, ಅಥವಾ ಎಂಟು ಜನ ಹೊತ್ತ ಪಲ್ಲಕ್ಕಿಯ ಮೇಲೋ ಕುಳಿತು ಚಿತೆಯ ಸ್ಥಳಕ್ಕೆ ಹೊರಡುತ್ತಾಳೆ. ಆಕೆ ವಧುವಿನಂತೆ ಅಲಂಕಾರ ಮಾಡಿಕೊಂಡಿರುತ್ತಾಳೆ. ತಲೆ ಕೂದಲನ್ನು ಇಳಿಯ ಬಿಟ್ಟಿರುತ್ತಾಳೆ. ತನ್ನ ಯೋಗ್ಯತೆಗನುಸಾರವಾಗಿ ಒಡವೆ ವಸ್ತ್ರಗಳನ್ನು ಹಾಕಿಕೊಂಡಿರುತ್ತಾಳೆ. ಊರಿನಲ್ಲೆಲ್ಲಾ ಆಕೆಯ ಮೆರವಣಿಗೆಯಾಗುತ್ತದೆ. ವೆನೀಸ್‌ನಲ್ಲಿ ಮದುವೆಗೆ ಹೊರಟ ಹೆಣ್ಣಿನ ಮೆರವಣಿಗೆಯಂತೆ. ಆಕೆಯ ಎಡಗೈಯಲ್ಲಿ ಕನ್ನಡಿ, ಬಲಗೈಯಲ್ಲಿ ಒಂದು ಬಾಣ ಇರುತ್ತದೆ. ಮೆರವಣಿಗೆ ಯಾಗುವಾಗ ಆಕೆ ಹಾಡುತ್ತಾ ಇರುತ್ತಾಳೆ – ತಾನು ತನ್ನ ನಲ್ಲನೊಡನೆ ಚಿರನಿದ್ರೆಮಾಡಲು ಹೋಗುತ್ತಿರುವೆನೆಂದು. ಆಕೆಯ ನೆಂಟರಿಷ್ಟರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಮಧ್ಯಾಹ್ನ ಒಂದು ಅಥವಾ ಎರಡು ಗಂಟೆ ಹೊತ್ತಿಗೆ ಎಲ್ಲರೂ ಊರ ಹೊರಗಿರುವ ನಿಗೊಂದಿನ್ ಎಂಬ ನದಿಯ ದಡ ಸೇರುತ್ತಾರೆ. ಅದು ವಿಧವೆಯರನ್ನು ಸುಡುವ ಸ್ಥಳ. ಅಲ್ಲಿ ಚಿತೆಗೆ ಬೇಕಾದ ಕಟ್ಟಿಗೆ ಮುಂತಾದುವುಗಳು ಸಿದ್ಧವಾಗಿರುತ್ತವೆ. ಬಂದವರೆಲ್ಲರಿಗೂ ಊಟದ ವ್ಯವಸ್ಥೆ ಆಗಿರುತ್ತೆ. ಚಿತೆಗೆ ಬೀಳುವ ವಿಧವೆಯೂ ಸಂತೋಷದಿಂದ ಊಟ ಮಾಡುತ್ತಾಳೆ. ಊಟವಾದ ಮೇಲೆ ಎಲ್ಲರೂ ಹಾಡುತ್ತಾ ಕುಣಿಯುತ್ತಾ ಸ್ವಲ್ಪ ಹೊತ್ತು ಕಾಲಕಳೆಯುತ್ತಾರೆ. ಆಮೇಲೆ ಚಿತೆಯನ್ನು ಸಿದ್ಧಮಾಡುತ್ತಾರೆ. ವಿಧವೆ ತನ್ನ ಗಂಡನ ಹತ್ತಿರದ ಸಂಬಂಧಿಯೊಬ್ಬನ ಕೈ ಹಿಡಿದು ನದಿಯ ಬಳಿಗೆ ಹೋಗುತ್ತಾಳೆ. ಅಲ್ಲಿ ತನ್ನ ಒಡವೆ ವಸ್ತ್ರಗಳನ್ನೆಲ್ಲಾ ಕಳಚಿ, ತನ್ನ ತಂದೆ ತಾಯಿಗಳಿಗೂ ನೆಂಟರಿಷ್ಟರಿಗೂ ಕೊಟ್ಟು, ಒಂದು ಬಟ್ಟೆಯನ್ನು ಸುತ್ತಿಕೊಂಡು ನದಿಯಲ್ಲಿ ಸ್ನಾನಮಾಡಿ, ಹದಿನಾಲ್ಕು ಮೊಳ ಉದ್ದದ ಅರಶಿನದ ಬಟ್ಟೆಯನ್ನು ಉಟ್ಟುಕೊಳ್ಳುತ್ತಾಳೆ. ಪುನಃ ಗಂಡನ ಕಡೆಯವನ ಕೈಹಿಡಿದುಕೊಂಡು ಚಿತೆಯ ಬಳಿಗೆ ಬರುತ್ತಾಳೆ. ಚಿತೆಯ ಬಳಿ ಇರುವ ವೇದಿಕೆಯ ಮೇಲೆ ನಿಂತು ಮಕ್ಕಳಿಗೂ ನೆಂಟರಿಷ್ಟರಿಗೂ ಬುದ್ದಿಮಾತು ಹೇಳುತ್ತಾಳೆ. ಕೆಲವು ವೇಳೆ ಚಿತೆಯ ಸುತ್ತ ತಟ್ಟಿ ಕಟ್ಟಿರುತ್ತಾರೆ – ಬೆಂಕಿಯ ಜ್ವಾಲೆ ಕಾಣಿಸದಿರಲೆಂದು. ಕೆಲವು ಹೆಂಗಸರು ಈ ತಟ್ಟಿಯನ್ನು ಕಿತ್ತು ಹಾಕುತ್ತಾರೆ, ತಾವು ಬೆಂಕಿಗೆ ಹೆದರುವುದಿಲ್ಲ ಎಂಬುದನ್ನು ತೋರಿಸಲು. ಆ ದಡ್ಡಳಾದ ವಿಧವೆ ತನ್ನ ಮಕ್ಕಳು ಮರಿಗಳಿಗೂ ನೆಂಟರಿಷ್ಟರಿಗೂ ಹೇಳಬೇಕಾದ್ದನ್ನೆಲ್ಲಾ ಹೇಳಿದಮೇಲೆ, ಬೇರೊಬ್ಬ ಹೆಂಗಸು ಆಕೆಯ ತಲೆಯಮೇಲೆ ಒಂದು ಗಡಿಗೆ ಎಣ್ಣೆಯನ್ನು ಸುರಿಯುತ್ತಾಳೆ. ಬರಿದಾದ ಗಡಿಗೆಯನ್ನು ಬೆಂಕಿಗೆ ಬಿಸಾಡುತ್ತಾಳೆ. ಹಾಗೆ ಬಿಸಾಡಿದ ಕೂಡಲೇ ವಿಧವೆ ಚಿತೆಗೆ ಹಾರಿಬಿಡುತ್ತಾಳೆ. ನೆರೆದವರು ಅತ್ತು ಕರೆದು ಗೊಳೋ ಅನ್ನುತ್ತಾರೆ. ಆ ಅಳುವನ್ನು ಗಂಡಸಾದವನು ಕೇಳಲಿಕ್ಕಾಗುವುದಿಲ್ಲ.

ಈ ರೀತಿ ಅನೇಕ ಜನ ಚಿತೆಯಲ್ಲಿ ಬೀಳುವುದನ್ನು ನಾನು ನೋಡಿದ್ದೇನೆ. ಏಕೆಂದರೆ ನನ್ನ ಬಿಡಾರ ನದಿಗೆ ಹೋಗುವ ಹೆಬ್ಬಾಗಿಲಿನ ಬಳಿಯೇ ಇತ್ತು.

ದೊಡ್ಡ ಮನುಷ್ಯನೊಬ್ಬ ಸತ್ತಾಗ ಅವನ ಹೆಂಡತಿಯೂ, ಅವನು ಇಟ್ಟುಕೊಂಡಿದ್ದ ದಾಸಿಯರೂ ಒಟ್ಟಿಗೆ ಅವನ ಚಿತೆಯಲ್ಲಿ ಬಿದ್ದು ಸಾಯುತ್ತಾರೆ.

ಇನ್ನೊಂದು ರೀತಿಯಲ್ಲಿ ಹೆಂಗಸರು ತಮ್ಮ ಪ್ರಾಣತ್ಯಾಗ ಮಾಡುವುದನ್ನು ನಾನು ನೋಡಿದ್ದೇನೆ. ಸತ್ತ ಗಂಡನ ಶವವನ್ನು ಚಕ್ಕಲುಬೊಕ್ಕಲಾಗಿ ಕುಳ್ಳಿರಿಸುತ್ತಾರೆ. ಅವನ ಹೆಂಡತಿ ಬಂದು ಅವನ ಕುತ್ತಿಗೆಯನ್ನು ತಬ್ಬಿಕೊಂಡು ಕುಳಿತುಕೊಳ್ಳುತ್ತಾಳೆ. ಗಾರೆಯವರು ಸುತ್ತಲೂ ಗೋಡೆ ಕಟ್ಟುತ್ತಾರೆ. ಇನ್ನೇನು ಗೋಡೆಯನ್ನು ಮುಚ್ಚಬೇಕು, ಅಷ್ಟರಲ್ಲಿ ಗಂಡಸೊಬ್ಬನು ಬಂದು ಆಕೆಯ ಕುತ್ತಿಗೆಯನ್ನು ಹಿಸುಕಿ ಸಾಯಿಸಿಬಿಡುತ್ತಾನೆ. ಆಮೇಲೆ ಗೋಡೆಯನ್ನು ಮುಚ್ಚಿ ಇಬ್ಬರನ್ನೂ ಸಮಾಧಿ ಮಾಡುತ್ತಾರೆ.

ಇಷ್ಟಲ್ಲದೆ, ಇವರಲ್ಲಿ ಇನ್ನೂ ಅನೇಕ ಅನಾಗರೀಕ ಕೃತ್ಯಗಳಿವೆ. ಅವನ್ನೆಲ್ಲಾ ಇಲ್ಲಿ ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಈ ರೀತಿ ಏತಕ್ಕೆ ಮಾಡುವಿರೆಂದು ನಾನು ಜನರನ್ನು  ವಿಚಾರಿಸದಾಗ, ಇದು ತಮ್ಮ ಪುರಾತನ ಪದ್ಧತಿಯೆಂದು ಅವರು ಹೇಳಿದರು. ಹಿಂದಿನ ಕಾಲದಲ್ಲಿ ಹೆಂಡತಿಗೆ ಗಂಡ ಆಗದೇ ಇದ್ದರೆ ವಿಷಕೊಟ್ಟು ಸಾಯಿಸಿ ಪರಪುರುಷರ ಸಂಗ ಮಾಡುತ್ತಿದ್ದರಂತೆ. ಇದನ್ನು ತಪ್ಪಿಸಲು ಈ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರಂತೆ. ಹೀಗೆ ಮಾಡಿದಾಗಿನಿಂದ ಹೆಂಡತಿಯರು ಗಂಡಂದಿರ ಬಗ್ಗೆ ಸರಿಯಾಗಿ ನಡೆದು ಕೊಳ್ಳುತ್ತಿರುವರೆಂದು ಹೇಳಿದರು. ಏಕೆಂದರೆ, ಗಂಡ ಸತ್ತರೆ ಹೆಂಡತಿಗೂ ಅದೇ ಗತಿಯಾಗು ತ್ತದೆ.

ಯುದ್ಧದಲ್ಲಿ ಸೋತು ಹೋದ ಕಾರಣ ಬಿಜನೇಗರದ ರಾಜ ಕ್ರಿ.ಶ. ೧೫೬೭ ರಲ್ಲಿ ತನ್ನ ರಾಜಧಾನಿಯನ್ನು ಎಂಟು ದಿನ ಪ್ರಯಾಣದಷ್ಟು ದೂರದಲ್ಲಿರುವ ಪೆನುಗೊಂಡೆಗೆ ಬದಲಾಯಿಸಿದನು.

ಬಿಜನೇಗರಕ್ಕೆ ಆರು ದಿನ ಪ್ರಯಾಣದಷ್ಟು ದೂರದಲ್ಲಿ ವಜ್ರಗಳು ಸಿಕ್ಕುವ ಒಂದು ಸ್ಥಳವಿದೆಯಂತೆ. ನಾನು ಅದನ್ನು ನೋಡಿಲ್ಲ. ಜನ ಹೇಳುತ್ತಾರೆ ಆ ಊರಿಗೆ ಬಲವಾದ ಕೋಟೆ ಇದೆ ಎಂದು. ಅಲ್ಲಿ ಸಿಕ್ಕುವ ದೊಡ್ಡ ದೊಡ್ಡ ವಜ್ರಗಳು ರಾಜನಿಗೆ ಸೇರುತ್ತಿದ್ದುವಂತೆ. ಆದರೆ ಈಗ ಅಲ್ಲಿಯ ಪ್ರಕ್ಷುಬ್ಧ ಪರಿಸ್ಥಿತಿಯ ಕಾರಣ ವಜ್ರಗಳನ್ನು ತೆಗೆಯುತ್ತಿಲ್ಲ. ಈ ಪರಿಸ್ಥಿತಿಗೆ ಕಾರಣ ತೆಮೆರಾಜಿಯೋ ಸೆರೆಮನೆಯಲ್ಲಿದ್ದ ರಾಜನನ್ನು ಕೊಲ್ಲಿಸಿದ್ದು. ರಾಜನ ಕೊಲೆಯಾದುದನ್ನು ರಾಜ್ಯದ ಶ್ರೀಮಂತ ಸರದಾರರುಗಳು ಸಹಿಸಲಿಲ್ಲ. ಅವರೆಲ್ಲ ದಂಗೆ ಎದ್ದರು. ಎಲ್ಲೆಲ್ಲೂ ಪಾಳೆಯಪಟ್ಟುಗಳು ಹುಟ್ಟಿಕೊಂಡವು.

ಬಿಜನೇಗರ ಪೂರ್ತಿ ನಾಶವಾಗಿಲ್ಲ. ಮನೆಗಳಿನ್ನೂ ಹಾಗೆಯೇ ಉಳಿದಿವೆ. ಆದರೆ ಅವುಗಳಲ್ಲಿ ಹುಲಿ ಮುಂತಾದ ಕಾಡುಪ್ರಾಣಗಳು ಸೇರಿಕೊಂಡಿವೆಯೆಂದು ನನಗೆ ತಿಳಿದುಬಂದಿದೆ. ಮನೆಗಳನ್ನು ಮಣ್ಣಿನಿಂದ ಕಟ್ಟಿದ್ದಾರೆ. ಮೂರು ಜನ ಸಹೋದರರ ಅರಮನೆಗಳನ್ನೂ ದೇವಸ್ಥಾನಗಳನ್ನೂ ಕಲ್ಲು ಮತ್ತು ಗಾರೆಗಳಿಂದ ಕಟ್ಟಿದ್ದಾರೆ. ಉಳಿದ ಮನೆಗಳು ಸರಳವಾಗಿವೆ. ನಾನು ಎಷ್ಟೋ ರಾಜರ ಆಸ್ಥಾನಗಳನ್ನು ನೋಡಿದ್ದೇನೆ. ಆದರೆ ಬಿಜನೇಗರದ ರಾಜನ ಆಸ್ಥಾನವನ್ನು ಮೀರಿಸುವುದನ್ನು ನಾನೆಲ್ಲಿಯೂ ನೋಡಿಲ್ಲ. ನಗರದಲ್ಲಿ ಕಳ್ಳಕಾಕರ ಭಯವಿಲ್ಲ. ಏಕೆಂದರೆ ಪೋರ್ಚುಗಲ್ ವರ್ತಕರು ಸೆಕೆ ತಡೆಯಲಾರದೆ ಬೀದಿಗಳಲ್ಲಿ ಅಥವಾ ಜಗಲಿಗಳ ಮೇಲೆ ಭಯವಿಲ್ಲದೆ ಮಲಗಿಕೊಳ್ಳುತ್ತಾರೆ.[3]

ಎರಡು (ಏಳು) ತಿಂಗಳು ನಾನು ಇಲ್ಲಿ ಇದ್ದಮೇಲೆ ಇಬ್ಬರು ವರ್ತಕರ ಸಮೇತ ಗೋವಾಕ್ಕೆ ಹಿಂದಿರುಗಬೇಕೆಂದು ಮನಸ್ಸು ಮಾಡಿದೆ. ಅವರು ಎರಡು ಪಲ್ಲಕ್ಕಿಗಳಲ್ಲಿ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಪಲ್ಲಕ್ಕಿಗಳು ಪ್ರಯಾಣಕ್ಕೆ ಬಹಳ ಅನುಕೂಲ ವಾಗಿರುತ್ತವೆ. ಒಂದು ಪಲ್ಲಕ್ಕಿ ಹೊರಲು ಎಂಟು ಜನ ಇರುತ್ತಾರೆ. ಸರದಿಯ ಮೇಲೆ ನಾಲ್ಕು ನಾಲ್ಕು ಜನ ಹೊರುತ್ತಾರೆ. ನಾನು ಎರಡು ಎತ್ತುಗಳನ್ನು ಕೊಂಡುಕೊಂಡೆ: ಒಂದು ನನ್ನ ಸವಾರಿಗೆ; ಇನ್ನೊಂದು ಸಾಮಾನು ಸರಂಜಾಮ ಮತ್ತು ಆಹಾರದ ವಸ್ತುಗಳನ್ನು ಹೊರುವುದಕ್ಕೆ. ಈ ದೇಶದಲ್ಲಿ ಸವಾರಿಗೆ ಸಬರ ಬಿಗಿದ ಎತ್ತುಗಳನ್ನು ಉಪಯೋಗಿಸುತ್ತಾರೆ. ಇದು ಕುಳಿತುಕೊಳ್ಳುವುದಕ್ಕೆ ಅನುಕೂಲವಾಗಿರುತ್ತದೆ.

ಬಿಜನೇಗರಿಂದ ಗೋವಾಕ್ಕೆ ಬೇಸಗೆಕಾಲದಲ್ಲಿ ಎಂಟು ದಿನಗಳ ಪ್ರಯಾಣ. ಆದರೆ ನಾವು ಮಳೆಗಾಲದಲ್ಲಿ, ಅಂದರೆ ಜುಲೈ ತಿಂಗಳಲ್ಲಿ, ಹೊರಟಿದ್ದರಿಂದ ಸಮುದ್ರ ತೀರದಲ್ಲಿರುವ ಅಂಕೋಲಾ ಮುಟ್ಟಲು ಹದಿನೈದು ದಿನಗಳಾದುವು. ಎಂಟು ದಿನ ಪ್ರಯಾಣ ಮಾಡುವಷ್ಟರಲ್ಲಿ ನನ್ನ ಎರಡು ಎತ್ತುಗಳನ್ನೂ ಕಳೆದುಕೊಂಡೆ. ನನ್ನ ಆಹಾರ ಮತ್ತು ಸಾಮಾನುಗಳನ್ನು ಹೊತ್ತ ಎತ್ತು ಬಹಳ ಬಡಕಲಾಗಿ ಮುಂದೆ ಕಾಲೇ ಇಡಲಿಲ್ಲ. ಇನ್ನೊಂದನ್ನು ಒಂದು ನದಿಯ ಬಳಿ ಸಣ್ಣ ಸೇತುವೆ ದಾಟುವಾಗ ಮೇಯಲು ಬಿಟ್ಟಿ. ಆಗ ಅದು ನೀರಿನಲ್ಲಿ ಈಜಿಕೊಂಡು ನದಿಯ ಮಧ್ಯೆ ಇದ್ದ ಕುದುರಿನಲ್ಲಿ ಹುಲ್ಲು ಮೇಯಲು ಹೋಯಿತು. ಹೋದದ್ದು ಹುಲ್ಲು ಮೇಯುತ್ತಾ ಅಲ್ಲೇ ನಿಂತು ಬಿಟ್ಟಿತು. ನಾನು ಅಲ್ಲಿಗೆ ಹೋಗುವುದು ಆಗಲಿಲ್ಲ. ಆದ್ದರಿಂದ ಅದನ್ನು ಅಲ್ಲಿಯೇ ಬಿಟ್ಟು ಬಿಟ್ಟೆ.

ಮಳೆ ವಿಪರೀತ ಬೀಳುತ್ತಿತ್ತು. ಬಹಳ ಕಷ್ಟದಿಂದ ಏಳು ದಿವಸ ನಡೆದೆ. ಅಕಸ್ಮಾತ್ ಮುಂದೆ ದಾರಿಯಲ್ಲಿ ಫಲ್ಯಿನರು (ಪಲ್ಲಕ್ಕಿ ಹೊರುವವರು) ಸಿಕ್ಕಿದರು. ನನ್ನ ಬಟ್ಟೆಬರೆ ಮತ್ತು ಗ್ರಾಸವನ್ನು ಹೊರಲು ಕೂಲಿ ಗೊತ್ತುಮಾಡಿದೆ. ದಾರಿಯಲ್ಲಿ ಬಹಳ ತಾಪತ್ರಯವಾಯಿತು. ದಿನವೂ ನಮ್ಮನ್ನು ಸೆರೆಮನೆಗೆ ಹಾಕುತ್ತಿದ್ದರು. ಏಕೆಂದರೆ ರಾಜ್ಯದಲ್ಲಿ ಅನಾಯಕತ್ವ ಮಿತಿ ಮೀರಿತ್ತು. ಪ್ರತಿ ದಿನ ಬೆಳಗ್ಗೆ ತಲಾ ನಾಲ್ಕು ಐದು ಪಗೀಸ್ (ಪಗಾರ್= ಪ್ರತಿಫಲ) ರಸ್ಕತ್ (ರುಷುವತ್?) ಕೊಟ್ಟು ಮುಂದಿನ ಪ್ರಯಾಣ ಮಾಡಬೇಕಾಗಿತ್ತು.

ಇನ್ನೊಂದು ತಾಪತ್ರಯವೆಂದರೆ ಪ್ರತಿದಿನ ನಾವು ಒಬ್ಬೊಬ್ಬ ರಾಜ್ಯಪಾಲನ ರಾಜ್ಯವನ್ನು ಪ್ರವೇಶಿಸುತ್ತಿದ್ದುದು. ಈ ರಾಜ್ಯಪಾಲರೆಲ್ಲ ಬಿಜೆನೇಗರನ ರಾಜನಿಗೆ ಅಧೀನರಾದರೂ, ಪ್ರತಿಯೊಬ್ಬನೂ ತನ್ನದೇ ಆದ ತಾಮ್ರದ ನಾಣ್ಯ ಚಲಾವಣೆಯಲ್ಲಿ ತಂದಿದ್ದನು. ಹೀಗಾಗಿ ನಾವು ನೆನ್ನೆ ದಿವಸ ತೆಗೆದುಕೊಂಡ ನಾಣ್ಯ ಈ ದಿನ ಚಲಾವಣೆಯಲ್ಲಿರುತ್ತಿರಲಿಲ್ಲ. ಅಂತೂ ದೇವರ ದಯೆಯಿಂದ ಸುಖವಾಗಿ ನಾವು ಅಂಕೋಲಾ ತಲುಪಿದೆವು. ಇದು ಬಿಜೆನೇಗರ್ ರಾಜನಿಗೆ ಅಧೀನಳಾದ ಗರ್ಸೊಪಂ (ಗೇರುಸೊಪ್ಪೆ) ರಾಣಿಗೆ ಸೇರಿದ ನಾಡಾಗಿತ್ತು.

ಪ್ರತಿವರ್ಷ ಗೋವಾದಿಂದ ಬಿಜೆನೇಗರಕ್ಕೆ ಹೋಗುತ್ತಿದ್ದ ವಸ್ತುಗಳೆಂದರೆ : ಅರೇಬಿಯಾ ಕುದುರೆಗಳು, ವೆಲ್ವೆಟ್ ಬಟ್ಟೆಗಲು, ಡಮಸ್ಕ್ ಮತ್ತು ಸಾಟಿನ್ ಬಟ್ಟೆಗಳು, ಪೋರ್ಚುಗಲ್ಲಿನ ಒಂದು ತರ ಟಫೆಟಾ ರೇಷ್ಮೆ, ಚೀನಾ ಸಣ್ಣ ಪುಟ್ಟ ವಸ್ತುಗಳು, ಕೇಸರಿ ಮತ್ತು ಕೆಂಪು ಬಟ್ಟೆಗಳು. ಬಿಜೆನೇಗರದಿಂದ ತುರ್ಕಿಗೆ ಒಡವೆಗಳು ಮತ್ತು ಚಿನ್ನದ ಪಗೋಡಗಳು ಹೋಗುತ್ತಿದ್ದುವು. ಬಿಜೆನೇಗರಲ್ಲಿ ಉಪಯೋಗಿಸುತ್ತಿದ್ದ ಬಟ್ಟೆಗಳೆಂದರೆ ವೆಲ್ವೆಟ್, ಸ್ಯಾಟಿನ್, ಡಮಾಸ್ಕ್ ಕೇಸರಿ ಅಥವಾ ಬಿಳೀ ಬಂಬಾಸ್ಟ ಬಟ್ಟೆಗಳು. ಈ ಕೇಸರಿ ಅಥವಾ ಬಿಳೀ ಬಟ್ಟೆಯನ್ನು ಜನರು ಅವರವರ ಸ್ಥಾನಮಾನಕ್ಕೆ ತಕ್ಕಂತೆ ತಲೆಗೆ ಉದ್ದವಾದ ಪೇಟ ಸುತ್ತಲು ಉಪಯೋಗಿಸುತ್ತಿದ್ದರು. ಈ ಪೇಟಗಳಿಗೆ ಕೊಲಯೇ (ಕುಲಾಯಿ) ಎಂದು ಹೆಸರು. ಇದನ್ನು ವೆಲ್ಟೆಟ್, ಸ್ಯಾಟಿನ್ ಮತ್ತು ಡಮಾಸ್ಕ್ ಬಟ್ಟೆಯಿಂದ ಅಥವಾ ಕೇಸರಿ ಬಟ್ಟೆಯಿಂದ ಮಾಡುತ್ತಾರೆ. ಜನರು ತುರುಕರಂತೆ ಶರಾಯಿಗಳನ್ನು ಧರಿಸುತ್ತಾರೆ. ಕಾಲಿಗೆ ಅಸ್ಪರ್ಫ್ ಎಂಬ ಎತ್ತರವಾದ ಪಾದರಕ್ಷೆಗಳನ್ನೂ, ಕಿವಿಗಳಿಗೆ ತೂಕವಾದ ಚಿನ್ನದ ಆಭರಣಗಳನ್ನೂ ಧರಿಸುತ್ತಾರೆ.

 

—-
ಆಕರ: ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ (ಸಂಪುಟ-೨), ೧೯೬೬, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪುಟ ೪೫೮-೪೬೪.[1]      ಇದು ಹೆಸರಾದ ತಾಳೀಕೋಟೆ ಯುದ್ಧ. ಬಿಜಾಪುರದ ಅದಿಲ್ ಷಾ, ಅಹಮದ್ ನಗರದ ಹುಸೇನ್ ಷಾ, ಗೋಲ್ಕೊಂಡದ ಇಬ್ರಾಹಿಂ ಕುತುಬ್ ಷಾ ಮತ್ತು ಬಿದರ್ ಮತ್ತು ಗುಲ್ಬರ್ಗದ ನವಾಬರು – ಇವರೆಲ್ಲ ಒಟ್ಟಿಗೆ ಸೇರಿ ವಿಜಯನಗರವನ್ನು ಧ್ವಂಸ ಮಾಡುವುದಕ್ಕೆ ಹೊರಟರು. ಅತ್ತ ವಿಜಯನಗರ ಈ ಧಾಳಿಯನ್ನು ಮೊದಲು ಅಸಡ್ಡೆಯಿಂದ ಕಂಡಿತು. ಆದರೆ ಆಮೇಲೆ ಶತ್ರುವನ್ನು ಎದುರಿಸಿತು. ವಿಜಯನಗರದ ಒಂಬತ್ತು ಲಕ್ಷ ಕಾಲ್ದಳ, ನಲವತ್ತೈದು ಸಾವಿರ ಅಶ್ವದಳ ಮತ್ತು ಎರಡು ಸಾವಿರ ಹಸ್ತಿದಳ ರಾಮರಾಯನ ನೇತೃತ್ವದಲ್ಲಿ ಯುದ್ಧಕ್ಕೆ ಹೊರಟಿತು. ಯುದ್ಧದಲ್ಲಿ ರಾಮರಾಯ ಸೆರೆಸಿಕ್ಕಿದನು. ಅವನ ತಲೆ ಕಡಿದು ಒಂದು ಉದ್ದನೆಯ ಗಳುವಿಗೆ ಸಿಕ್ಕಿಸಿ ವಿಜಯನಗರದ ಸೈನ್ಯಕ್ಕೆಲ್ಲಾ ಕಾಣುವಂತೆ ತೋರಿಸಲಾಯಿತು. ತಮ್ಮ ನಾಯಕ ತೀರಿಹೋದದ್ದನ್ನು ಕಂಡ ಸೈನಿಕರು ಯುದ್ಧರಂಗದಿಂದ ಓಡಿಹೋದರು. ಓಡಿಹೋಗುತ್ತಿದ್ದ ಸೈನಿಕರನ್ನು ಶತ್ರು ಸೈನ್ಯ ಹಿಂಬಾಲಿಸಿ ಕಗ್ಗೊಲೆ ಮಾಡಿತು. ಈ ಕಗ್ಗೊಲೆ ಎಷ್ಟು ಕ್ರೂರವಾಗಿತ್ತೆಂದರೆ ಅಲ್ಲಿ ಹರಿಯುತ್ತಿದ್ದ ನದಿಯ ನೀರೂ ಕೆಂಪಾಗಿ ಹರಿಯಿತು. ಹೀಗೆ ಒಂದು ಲಕ್ಷ ಸೈನಿಕರು ಕೊಲ್ಲಲ್ಪಟ್ಟರೆಂದು ಹೇಳುತ್ತಾರೆ. ಶತ್ರುಗಳು ನಗರಕ್ಕೆ ನುಗ್ಗಿ ಕೊಳ್ಳೆ ಹೊಡೆದರು. ಶತ್ರು ಸೈನ್ಯದ ಪ್ರತಿಯೊಬ್ಬ ಸೈನಿಕನೂ ತಾನು ಕೊಳ್ಳೆಹೊಡೆದ ಚಿನ್ನ, ಒಡವೆ, ವಸ್ತ್ರ, ಗುಡಾರ, ಕುದುರೆ, ಗುಲಾಮರು ಮುಂತಾದವುಗಳಿಂದ ಬೆಳಕು ಹರಿಯುವುದರೊಳಗೆ ಆಗರ್ಭ ಶ್ರೀಮಂತನಾಗಿ ಬಿಟ್ಟನಂತೆ. ಭವ್ಯವಾಗಿ ಮೆರೆದ ವಿಜಯನಗರ ಕಣ್ಣುಮುಚ್ಚಿ ತೆರೆಯುವುದರೊಳಗೆ ನಾಶವಾಗಿ ಹೋಯಿತು. ಈ ನಾಶದಿಂದ ವಿಜಯನರ ಮತ್ತೆ ಚೇತರಿಸಿಕೊಳ್ಳಲಿಲ್ಲ.

[2]      ಇದು ಸದಾಶಿವರಾಯನ ಕಾಲ ಅಂದರೆ (ಕ್ರಿ.ಶ. ೧೫೪೨ ರಿಂದ ಕ್ರಿ.ಶ. ೧೫೬೫)ರವರೆಗೆ. ಇವನು ಹೆಸರಿಗೆ ಮಾತ್ರ ರಾಜನಾಗಿದ್ದನು. ನಿಜವಾದ ಅಧಿಕಾರ ಕೃಷ್ಣದೇವರಾಯನ ಅಳಿಯ ರಾಮರಾಯ ಮತ್ತು ಅವನ ಇಬ್ಬರು ತಮ್ಮಂದಿರಾದ ವೆಂಕಟಾದ್ರಿ ಮತ್ತು ತಿರುಮಲ ಇವರ ಕೈಯಲ್ಲಿತ್ತು.

[3]      ವಿಜಯನಗರದ ನಾಶವಾದ ಮೇಲೆ ತಿರುಮಲ ರಾಜ್ಯ ಆಳಲು ಪ್ರಯತ್ನಪಟ್ಟ. ನಿಜವಾದ ರಾಜನಾದ ಸದಾಶಿವರಾಯ ಪೆನುಗೊಂಡೆಯಲ್ಲಿ ತನ್ನ ರಾಣೀವಾಸದ ಸಮೇತ ಖೈದಿಯಾಗಿಯೇ ಇದ್ದ. ೧೫೬೮ ನಲ್ಲಿ ಇವನನ್ನು ತಿರುಮಲ ಕೊಲೆಮಾಡಿ ತಾನೇ ರಾಜನೆಂದು ಪೋಷಣೆ ಮಾಡಿಕೊಂಡ. ಇಲ್ಲಿಂದ ವಿಜಯನಗರದ ಮೂರನೇ ಸಂತತಿ ಪ್ರಾರಂಭವಾಯಿತು. ಅಂತೆಯೇ ಅದರ ಅವನತಿಯೂ ಆರಂಭವಾಯಿತು. ಆಮೇಲೆ ವಿಜಯನಗರ ಹಿಂದಿನ ಸ್ಥಿತಿಗೆ ಬರಲೇ ಇಲ್ಲ.