ಲೊಡೊವಿಕೊ ದಿ ವರ್ತೆಮಾ(Lodovico di Varthema)ನ ಸ್ವಂತ ಜೀವನದ ಬಗ್ಗೆ ಈತನ ಪ್ರವಾಸ ಕಥನದಲ್ಲಿ ಅಲ್ಲಿ ಇಲ್ಲಿ ಬರುವ ಕೆಲವು ಮಾತುಗಳನ್ನು ಬಿಟ್ಟರೆ, ಬೇರಾವ ಸಾಮಗ್ರಿಗಳೂ ದೊರೆತಿಲ್ಲ. ಈತನೆ ಅದರಲ್ಲಿ ಒಂದೆಡೆ ಹೇಳಿರುವಂತೆ ವರ್ತೆಮಾ ಇಟಲಿ ದೇಶದ ಬೊಲೊಗ್ನದವನು. ತಂದೆ ಒಬ್ಬ ವೈದ್ಯ. ತಂದೆಯಿಂದ ಮಗನೂ ಅಷ್ಟಿಷ್ಟು ವೈದ್ಯ ತಿಳಿದುಕೊಂಡಿದ್ದನೆಂದು ಗೊತ್ತಾಗುತ್ತದೆ. ಫಿರಂಗಿಗಳನ್ನು ಎರಕ ಹೊಯ್ಯುವ ಕೆಲಸ ನನಗೆ ಬರುತ್ತದೆ ಎಂದು ಒಮ್ಮೆ ಹೇಳಿಕೊಂಡಿ ರುವುದರಿಂದ ಈತ ಮೊದಲಿಗೆ ಸೈನಿಕ ವೃತ್ತಿಯಲ್ಲಿ ಇದ್ದಿರಲೂಬಹುದು; ಅಥವಾ ಆ ಕಲೆಯನ್ನು ಕಲಿತಿರಲೂಬಹುದು. ಇನ್ನೊಂದು ಸ್ವಂತ ವಿಚಾರವನ್ನು ಈತ ಅಪ್ಪಿತಪ್ಪಿ ಹೇಳಿಬಿಡುತ್ತಾನೆ. ಅದೇನೆಂದರೆ, ತನಗೆ ಮದುವೆಯಾಗಿತ್ತು ಮತ್ತು ಕೆಲವು ಮಕ್ಕಳಿದ್ದರು ಎಂದು.

ವರ್ತೆಮಾ ತನ್ನ ಪ್ರವಾಸ ಕಥನವನ್ನು ಫೆಡೆರಿಕೊ ದಿ ಮೊಂಟಿಫೆಲ್ಟ್ರೋ (Federico di Montefeltro) ಎಂಬ ಯುರ‌್ಬಿನೋ (Urbino) ಡ್ಯೂಕನ ನಾಲ್ಕನೆಯ ಮಗಳೂ. ಅಲ್ಬಿ (Albi) ಮತ್ತು ತಗ್ಲಿಯಕೊಜ್ಜ (Tagliacozza) ಎಂಬ ಊರುಗಳ ಡ್ಯೂಕನ ಹೆಂಡತಿಯೂ ಆದ ಅಗ್ನೇಸಿನಾ (Agnesina) ಎಂಬುವಳಿಗೆ ಅರ್ಪಿಸುತ್ತಾನೆ. ಅಗ್ನೇಸಿನಾ ಆಕೆಯ ತಾಯಿಯಂತೆ ಪ್ರತಿಭಾವಂತಳೂ. ಸಾಹಿತ್ಯಿಕ ಆಸಕ್ತಿಯುಳ್ಳವಳೂ ಆಗಿದ್ದಳೆಂದು ಗೊತ್ತಾಗುತ್ತದೆ. ಆಕೆಗೆ ತನ್ನ ಪ್ರವಾಸ ಕಥನವನ್ನು ಅರ್ಪಿಸುವಾಗ ವರ್ತೆಮಾ ಈ ಕೆಳಗಿನ ಮಾತುಗಳನ್ನು ಹೇಳುತ್ತಾನೆ. ಇದರಿಂದ ಈತನ ಪ್ರವಾಸದ ಉದ್ದೇಶ ಅಷ್ಟಿಷ್ಟು ಗೊತ್ತಾಗುತ್ತದೆ.

ಓದಿಯೋ ಅಥವಾ ಊಹಿಸಿಯೋ ನನ್ನ ಆಸೆಯನ್ನು ಪೂರ್ತಿ ಮಾಡಿಕೊಳ್ಳುವಷ್ಟು ಸೂಕ್ಷ್ಮಬುದ್ದಿಯವನಲ್ಲದ ಕಾರಣ ನಾನೇ ಈಜಿಪ್ಟ್, ಸಿರಿಯಾ, ಅರೇಬಿಯಾ ಮರುಭೂಮಿ ಮತ್ತು ಫೆಲಿಕ್ಸ್ ಪರ್ಷಿಯಾ, ಇಂಡಿಯಾ ಹಾಗೂ ಇಥಿಯೋಪಿಯೋಗಳನ್ನು ಸ್ವತಃ ಕಂಡು, ಅಲ್ಲಿಯ ಜನರು ಎಂಥವರೆಂಬುದನ್ನು ಅರಿತು, ಖಗಮೃಗ ಹಾಗೂ ಸಸ್ಯವರ್ಗಗಳ ವೈವಿಧ್ಯತೆಯನ್ನು ತಿಳಿಯಬೇಕೆಂದು ಮನಸ್ಸುಮಾಡಿದೆ. ಹತ್ತು ಜನರು ಹೇಳುವುದನ್ನು ಕೇಳುವುದಕ್ಕಿಂತ ಒಂದು ಬಾರಿ ಕಣ್ಣಿನಿಂದ ನೋಡುವುದು ಉತ್ತಮವಲ್ಲವೆ!.

ವರ್ತೆಮಾ ಯೂರೋಪನ್ನು ಕ್ರಿ.ಶ. ೧೫೦೨ ರ ಕೊನೆಯಲ್ಲಿ ಬಿಟ್ಟು ಕೈರೊ, ಅಲೆಪ್ಪೊ, ದಮಸ್ಕಸ್, ಅರೇಬಿಯಾ ಮುಖಾಂತರ ಇಂಡಿಯಾಕ್ಕೆ ಬಂದ. ಇಂಡಿಯಾದ ಸಮುದ್ರತೀರದ ಸ್ಥಳಗಳನ್ನಲ್ಲದೆ ಬಿಜಾಪುರ ಮತ್ತು ವಿಜಯನಗರಗಳನ್ನು ಸಂದರ್ಶಿಸಿ, ಚೋಳಮಂಡಲ ತೀರದ ಪುಲಿಕಾಟಿಗೆ ಹೋಗಿ, ಅಲ್ಲಿಂದ ತರ್ನಸ್ಸರಿ ಮತ್ತು ಬಂಗಾಳಗಳಿಗೆ ಸಾಗಿ, ಪೆಗೂಗೆ ಮುಂದುವರಿದು, ಅಲ್ಲಿಂದ ಮಲಕ್ಕಾ, ಸುಮಾತ್ರ, ಬೋರ್ನಿಯೋ, ಜಾವಾ ದ್ವೀಪಗಳನ್ನು ಸುತ್ತಾಡಿ ಚೋಳಮಂಡಲ ತೀರಕ್ಕೆ ಹಿಂದಿರುಗಿ, ಕಲ್ಲಿಕೋಟೆಗೆ ಬಂದ. ಅಲ್ಲಿಂದ ಹೊರಟು, ಗುಡ್‌ಹೋಪ್ ಭೂಶಿರವನ್ನು ಬಳಸಿ, ಪೋರ್ಚುಗಲ್ಲಿನ ಲಿಸ್ಬನ್ ತಲುಪಿದ. ಅಲ್ಲಿಯ ರಾಜನನ್ನು ಕಂಡು ಆತನು ಇತ್ತ ನೈಟ್‌ಹುಡ್ ಬಿರುದನ್ನು ಸ್ವೀಕರಿಸಿ ರೋಮಿಗೆ ಹಿಂದಿರುಗಿದ. ೧೫೦೭ನೆಯ ಡಿಸೆಂಬರ್ ೬ ರಂದು ಕೊನೆಯದಾಗಿ ವರ್ತೆಮಾ ಇಂಡಿಯಾ ತೀರದ ಕನ್ನಾನೂರನ್ನು ಬಿಟ್ಟು ಸ್ವದೇಶಕ್ಕೆ ತೆರಳಿದ್ದರಿಂದ ಆತನ ಪ್ರವಾಸದ ಒಟ್ಟು ಕಾಲ ಸುಮಾರು ಐದೂವರೆ ವರ್ಷಗಳು ಮಾತ್ರ.

ಹಿಂದಿರುಗಿದವನು ತನ್ನ ಪ್ರವಾಸ ಕಥನವನ್ನು ಬರೆಯುವುದರಲ್ಲಿ ತೊಡಗಿದ. ಇಟಾಲಿಯನ್ ಭಾಷೆಯಲ್ಲಿ ಈ ಕಥನವನ್ನು ಬರೆದ. ಅದು ೧೫೧೦ರಲ್ಲಿ ಪ್ರಕಟವಾಯಿತು. ಈ ಮೂಲ ಗ್ರಂಥ ಬ್ರಿಟಿಷ್ ಮ್ಯೂಸಿಯಂನಲ್ಲಿ ಈಗಲೂ ಇದೆಯಂತೆ.

ಈತ ತನ್ನ ಅರ್ಪಣೆಯಲ್ಲಿ ಹೇಳಿಕೊಂಡಂತೆ ಇಟಲಿಗೆ ಹಿಂದಿರುಗಿದ ನಂತರ ಮತ್ತೊಮ್ಮೆ ಪ್ರವಾಸ ಕೈಗೊಂಡನೇ ಇಲ್ಲವೆ? ಎಂಬುದು ಗೊತ್ತಾಗುವುದಿಲ್ಲ. ಇವನ ಪ್ರವಾಸ ಕಥನ ಲಿಸ್ಬನ್‌ನಲ್ಲಿ ರಾಜನಿಂದ ಬೀಳ್ಕೊಂಡು ರೋಮ್ ನಗರಕ್ಕೆ ಬಂದೆ ಎಂದು ತಟಕ್ಕನೆ ಕೊನೆಗೊಳ್ಳುತ್ತದೆ. ಅಷ್ಟೇ ಅಲ್ಲ, ಅವನ ಮುಂದಿನ ಬಾಳಿನ ಕಥೆಯೇನಾಯಿತೆಂಬುದೂ ತಿಳಿಯುವುದಿಲ್ಲ.

ಪ್ರಪಂಚದ ನಾನಾ ರಾಜ್ಯಗಳನ್ನು ನೋಡುವಾಸೆ ಬೇರೆಯವರಿಗೆ ಹೇಗೆ ಮೂಡಿತೋ ಹಾಗೆ ಈತನಿಗೂ ಮೂಡಿತು. ಈಜಿಪ್ಟಿನ ಅಲೆಕ್ಸಾಂಡ್ರಿಯಾ ತಲಪಿ ಮುಂದೆ ಕೈರೋ ಮುಟ್ಟಿದ. ತ್ರಿಪೊಲಿ, ಅಲೆಪ್ಪಿ, ಮೆಕ್ಕಾ, ಏಡನ್, ಓರ್ಮಸ್, ಹೇರತ್ ಮುಖಾಂತರ, ಇಂಡಿಯಾದ ಕ್ಯಾಂಬೆ ತಲುಪಿದನು. ಕ್ಯಾಂಬೆ ನಗರದಿಂದ ಚಾಲ್ ಎಂಬ ನಗರಕ್ಕೆ ಬಂದ. ಅಲ್ಲಿಂದ ಗೋವಾ ಮುಖಾಂತರ ಬಿಜಾಪುರ ಅನಂತರ ನರಸಿಂಗನ ರಾಜ್ಯದ ಭಟ್ಕಳ ತಲುಪಿದ.

ಡೆಕನ್ ರಾಜನಿಗೂ ನರಸಿಂಗದ (ವಿಜಯನಗರದ)

[1] ರಾಜನಿಗೂ ಯಾವಾಗಲೂ ಯುದ್ಧ. ಈತ ತನ್ನ ಸೈನ್ಯದಲ್ಲಿ ಹೆಚ್ಚಾಗಿ ಪರದೇಶದವರನ್ನೂ ಬಿಳಿಯರನ್ನೂ ನೇಮಿಸಿಕೊಂಡಿದ್ದಾನೆ. ಕ್ರೈಸ್ತರನ್ನು ಈತ ಬಹಳ ದ್ವೇಷಿಸುತ್ತಾನೆ.[2]

ಡೆಕ್ಕನಿನಿಂದ ಹೊರಟು ನಾನು ಬತಕಲ (ಭಟ್ಕಳ)ಕ್ಕೆ ಹೋದೆ. ಇದು ಇಂಡಿಯಾದ ಬಹು ಸೊಗಸಾದ ನಗರ. ಇಲ್ಲಿಯ ರಾಜ ಪೇಗನ್ (ಹಿಂದೂ); ನರಸಿಂಗನಿಗೆ ಅಧೀನ. ಊರಿನ ಸುತ್ತಲೂ ಕೋಟೆ ಇದೆ. ಇಲ್ಲಿ ಅನೇಕ ಮೂರ ವರ್ತಕರು ನೆಲೆಸಿದ್ದಾರೆ. ಅಕ್ಕಿ ಮತ್ತು ಸಕ್ಕರೆ ಹೇರಳವಾಗಿ ಸಿಕ್ಕುತ್ತವೆ. ಮುಂದೆ ಕ್ಯಾಲಿಕಟ್‌ನಲ್ಲಿ ಕಂಡ ತೆಂಗಿನಕಾಯಿ ಮತ್ತು ತೆಂಗಿನ ಮರಗಳನ್ನು ಮೊಟ್ಟಮೊದಲು ಕಂಡದ್ದು ಇಲ್ಲಿ. ಮೂರರನ್ನು ಬಿಟ್ಟರೆ ಇಲ್ಲಿಯ ಜನರೆಲ್ಲ ವಿಗ್ರಹಾರಾಧಕರು.

ಇಲ್ಲಿಂದ ಹೊರಟು ನಾನು ಅಂಜೇದೀಪ (ಅಂಜಲಿದ್ವೀಪ) ಎಂಬ ದ್ವೀಪಕ್ಕೆ ಹೋದೆ. ಅಲ್ಲಿಂದ ಒಂದು ದಿನ ಪ್ರಯಾಣ ಮಾಡಿ ಕೊಂಟಕೋಲಾ (ಅಂಕೋಲಾ)ಕ್ಕೆ ಹೋದೆ. ಇಲ್ಲಿಯ ಪೇಗನ್ ರಾಜ ಅಷ್ಟೇನೂ ಶ್ರೀಮಂತನಲ್ಲ. ಈತ ಬತಕಳ ರಾಜನಿಗೆ ಅಧೀನ. ಇಲ್ಲಿ ದನದ ಮಾಂಸ, ಅಕ್ಕಿ ಮತ್ತು ಹಣ್ಣು ಹೇರಳವಾಗಿ ಸಿಕ್ಕುತ್ತವೆ. ಮೂರ್ ವರ್ತಕರೂ ಇಲ್ಲಿದ್ದಾರೆ.

ಎರಡು ದಿನಗಳ ಕಾಲ ಪ್ರಯಾಣ ಮಾಡಿ ನಾನು ಒನೂರಿಗೆ (ಹೊನ್ನಾವರ) ಬಂದೆ. ಇಲ್ಲಿಯ ರಾಜ ಪೇಗನ್; ನರಸಿಂಗ ರಾಜನಿಗೆ ಅಧೀನ. ಒಳ್ಳೆಯವನು. ಏಳೆಂಟು ಹಡಗುಗಳನ್ನು ಇಟ್ಟುಕೊಂಡಿದ್ದಾನೆ. ಇವನು ಪೋರ್ಚುಗಲ್ ರಾಜನ ಅಚ್ಚುಮೆಚ್ಚಿನ ಸ್ನೇಹಿತ. ಈತ ಸೊಂಟಕ್ಕೆ ಸುತ್ತಿದ ವಸ್ತ್ರವಲ್ಲದ ಬೇರೆ ಬಟ್ಟೆ ಹಾಕಿರಲಿಲ್ಲ. ಗೋಮಾಂಸ ಇಲ್ಲಿಯೂ ಸಿಕ್ಕುತ್ತದೆ. ಇಲ್ಲಿಯ ಹವೆ ಬಹಳ ಸೊಗಸಾಗಿದೆ.

ಇಲ್ಲಿಗೆ ಹತ್ತಿರದಲ್ಲಿ ಮಂಗಳೋರ್ (ಮಂಗಳೂರು) ಎಂಬ ಊರಿದೆ. ಮಂಗಳೋರ್‌ನಿಂದ ಐವತ್ತು ಅರುವತ್ತು ಹಡಗುಗಳಷ್ಟು ಅಕ್ಕಿ ರವಾನೆಯಾಗುತ್ತದೆ. ಇಲ್ಲಿಯ ಜನರ ನಡೆ ನುಡಿ, ಉಡುಪು ಮುಂತಾದುವೆಲ್ಲ ಒನೋರಿನವರಂತೆಯೇ ಇವೆ.

ಮಂಗಳೋರ್‌ನಿಂದ ಹೊರಟ ನಾವು ಕನೊನೋರಿಗೆ (ಕನ್ನಾನೂರು) ಹೋದೆವು. ಇಲ್ಲಿ ಪೋರ್ಚುಗಲ್ ರಾಜನಿಗೆ ಸೇರಿದ ಭದ್ರವಾದ ಕೋಟೆಯಿದೆ. ಇಲ್ಲಿಯ ರಾಜ ಪೋರ್ಚುಗಲ್ ರಾಜನ ಗಾಢಸ್ನೇಹಿತ. ಪರ್ಷಿಯಾದಿಂದ ತಂದ ಕುದುರೆಗಳನ್ನು ಈ ಬಂದರಿನಲ್ಲಿ ಇಳಿಸುತ್ತಾರೆ. ಪ್ರತಿಯೊಂದು ಕುದುರೆಗೆ ಇಪ್ಪತ್ತೈದು ಡೆಕಟುಗಳಷ್ಟು ಸುಂಕ ಕೊಡಬೇಕು. ಹೀಗೆ ಸುಂಕ ತೀರಿಸಿದ ಮೇಲೆ ಕುದುರೆಗಳನ್ನು ನರಸಿಂಗನ ರಾಜ್ಯಕ್ಕೆ ರವಾನಿಸುತ್ತಾರೆ. ಇಲ್ಲಿಯ ಜನ ಅಕ್ಕಿ, ಮೀನು, ಮಾಂಸ ಮತ್ತು ತೆಂಗಿನಕಾಯಿ ತಿನ್ನುತ್ತಾರೆ. ರೊಟ್ಟಿ ಇಲ್ಲ. ಮೆಣಸು, ಶುಂಠಿ ಮುಂತಾದ ಸಂಬಾರ ವಸ್ತುಗಳನ್ನು ಇಲ್ಲಿ ನೋಡಬಹುದು. ರಾಜನ ಬಳಿ ೫೦,೦೦೦ ನಾಯೆರಿಗಳಿದ್ದಾರೆ. ಇವರು ಸೊಂಟಕ್ಕೆ ಸುತ್ತಿದ ಬಟ್ಟೆಯಲ್ಲದೆ ಬೇರೇನೂ ತೊಡುವುದಿಲ್ಲ. ವರ್ಷಂಪ್ರತಿ ಇಲ್ಲಿಗೆ ೨೦೦ ಹಡಗುಗಳು ಬರುತ್ತವೆ.

ನಾವು ಇಲ್ಲಿ ಕೆಲವು ದಿನಗಳಿದ್ದು, ನರಸಿಂಗನ ರಾಜ್ಯದ ಕಡೆಗೆ ಪ್ರಯಾಣ ಮಾಡಿದೆವು. ಹದಿನೈದು ದಿನಗಳು ಒಳಭೂಭಾಗದಲ್ಲಿ ಪ್ರಯಾಣ ಮಾಡಿ, ಬಿಸೆನಗರ್ (ವಿಜಯನಗರ) ಎಂಬ ನಗರವನ್ನು ತಲುಪಿದೆವು. ನಗರ ಬಹಳ ದೊಡ್ಡದು. ಸುತ್ತಲೂ ಭದ್ರವಾದ ಕೋಟೆ ಇದೆ. ಏಳು ಮೈಲು ಸುತ್ತಳತೆಯ ಮೂರು ಕೋಟೆಗೋಡೆಗಳಿವೆ. ಇಲ್ಲಿ ಭಾರೀ ವ್ಯಾಪಾರ ನಡೆಯುತ್ತದೆ. ಬಹು ಫಲವತ್ತಾದ ಭೂಮಿ. ರುಚುರುಚಿಯಾದುದೆಲ್ಲ ಇಲ್ಲಿ ಸಿಕ್ಕುತ್ತವೆ. ನಾನಿಲ್ಲಿಯವರೆಗೆ ಕಂಡ ಸ್ಥಳಗಳಲ್ಲೆಲ್ಲಾ ಬಹು ಒಳ್ಳೆಯ ಹವೆಯ ಊರೆಂದರೆ ಇದೇ. ಎರಡನೆಯ ಸ್ವರ್ಗವೋ ಎನ್ನುವಂತಿದೆ ಈ ನಗರ. ರಾಜ ಪೇಗನ್. ಪ್ರಜೆಗಳೆಲ್ಲ ವಿಗ್ರಹಾರಾಧಕರು. ಬಹುಶಕ್ತಿವಂತನಾದ ಈ ರಾಜನ ಬಳಿ ೪೦,೦೦೦ ಕುದುರೆಗಳಿವೆ. ಒಂದು ಕುದುರೆಗೆ ೩೦೦ ರಿಂದ ೫೦೦ ಪರ್ದಾಯಿಗಳ ಬೆಲೆಯಾಗುತ್ತದೆ ಎಂಬುದನ್ನು ಮರೆಯಬಾರದು. ಕೆಲವು ೮೦೦ ಪರ್ದಾಯ್‌ಗಳಷ್ಟು ಬೆಲೆ ಆಗುವುದುಂಟು. ಅಲ್ಲದೆ, ಇಲ್ಲಿ ೪೦೦ ಆನೆಗಳೂ, ಒಂಟೆಗಳೂ ಇವೆ. ಕನೊನೋರ್‌ನಲ್ಲಿ ಆನೆಗಳು ಸಮುದ್ರದಿಂದ ಹಡಗೊಂದನ್ನು ಭೂಮಿಗೆ ಎಳೆದು ತಂದುದನ್ನು ನಾನು ಕಣ್ಣಾರ ಕಂಡಿದ್ದೇನೆ. ಬಹಳ ಸೂಕ್ಷ್ಮಬುದ್ದಿಯ ಆನೆಗಳು ಯುದ್ಧದಲ್ಲಿಬಹಳ ಉಪಯೋಗವಾಗುತ್ತವೆ. ಗಂಡಾನೆಗಳು ಗುಟ್ಟಾದ ಸ್ಥಳದಲ್ಲಿ ನೀರಿನೊಳಕ್ಕೆ ಹೋಗಿ ಹೆಣ್ಣಾನೆಯನ್ನು ಕೂಡುತ್ತವೆ.

ನಾನು ಕಂಡು ಕೇಳಿದ ರಾಜರುಗಳಲ್ಲೆಲ್ಲಾ ನರಸಿಂಗರಾಜನೇ[3] ಅತ್ಯಂತ ಶ್ರೀಮಂತನೆಂದು ಹೇಳಬೇಕು. ಇವನ ಬ್ರಾಹ್ಮಣರು ಅಂದರೆ ಪುರೋಹಿತರು ಹೇಳುವ ಪ್ರಕಾರ ಈತನ ಆದಾಯ ದಿನಕ್ಕೆ ೧೨,೦೦೦ ಪರ್ದಾಯ್‌ಗಳು. ಈ ರಾಜ ಯಾವಾಗಲೂ ಹಲವಾರು ಮೂರ ಮತ್ತು ಪೇಗನ್ ರಾಜರುಗಳೊಡನೆ ಯುದ್ಧದಲ್ಲಿ ತೊಡಗಿರುತ್ತಾನೆ. ಕ್ಯಾಲಿಕಟ್‌ನಲ್ಲಿ ಪೂಜಿಸುವಂತೆ ಈ ರಾಜ ಮತ್ತು ಈತನ ಪ್ರಜೆಗಳು ದೆವ್ವವನ್ನು ಪೂಜಿಸುತ್ತಾರೆ (ಭೂತೋಪಾಸನೆಯೆ?). ಜನಸಾಮಾನ್ಯರೆಲ್ಲ ಸೊಂಟಕ್ಕೆ ಸುತ್ತಿದ ಬಟ್ಟೆ ಬಿಟ್ಟರೆ ಬೆತ್ತಲೆ. ರಾಜನ ಪಟ್ಟದ ಕುದುರೆಗೆ ತೊಡಗಿಸಿದ ಆಭರಣಗಳ ಬೆಲೆ ಹೇಳತೀರದು. ಆ ಆಭರಣಗಳ ಬೆಲೆ ನಮ್ಮ ನಗರಗಳ ಬೆಲೆಯಷ್ಟಾಗುತ್ತದೆ. ಚಿನ್ನದ ‘ಪರ್ದಾಯ್’, ಬೆಳ್ಳಿಯ ‘ತಾರೆ’ ಮತ್ತು ಚಿನ್ನದ ಸಣ್ಣ ನಾಣ್ಯವಾದ ‘ಫನಂ’ ಇವು ಇಲ್ಲಿಯ ನಾಣ್ಯಗಳು. ‘ಕಾಸ್’ (ಕಾಸು) ಎಂಬ ಸಣ್ಣ ನಾಣ್ಯವೂ ಉಂಟು. ಒಂದು ತಾರೆಗೆ ೧೬ ಕಾಸ್‌ಗಳು.

ನರಸಿಂಗನ ರಾಜ್ಯದಲ್ಲಿ ಎಲ್ಲಿ ಅಂದರೆ ಅಲ್ಲಿಗೆ ಕ್ಷೇಮವಾಗಿ ಹೋಗಬಹುದು. ಆದರೆ ಅಲ್ಲಲ್ಲಿ ಸಿಂಹಗಳ (ಹುಲಿಗಳ?) ಕಾಟವುಂಟು. ನರಸಿಂಗರಾಜ ಕ್ರೈಸ್ತರ ಸ್ನೇಹಿತ. ಅದರಲ್ಲಿಯೂ ಪೋರ್ಚುಗಲ್ ರಾಜನಮೇಲೆ ಹೆಚ್ಚು ಸ್ನೇಹ. ತನ್ನ ರಾಜ್ಯಕ್ಕೆ ಬಂದ ಕ್ರೈಸ್ತರಿಗೆ ಬಹಳ ಮರ್ಯಾದೆ ತೋರಿಸುತ್ತಾನೆ.

ನಾವು ಈ ಭವ್ಯನಗರದಲ್ಲಿ ಹಲವಾರು ದಿನಗಳಿದ್ದು, ಕನೊನೋರಿಗೆ ಹಿಂದಿರುಗಿ, ತೊರ್ಮಪಟಣ (ಧರ್ಮಪಟಂ), ಪಂಡರಣಿ (Pandarani) ಮುಖಾಂತರ ಕ್ಯಾಲಿಕಟ್ಟಿಗೆ ಬಂದೆವು.

ಸಿಲೋನಿನ ರಾಜರುಗಳೆಲ್ಲ ನರಸಿಂಗ ರಾಜನಿಗೆ ಪೊಗದಿ ಸಲ್ಲಿಸುತ್ತಾರೆ. ಮುಖ್ಯ ಭೂಭಾಗದಿಂದ ಇಲ್ಲಿಗೆ ಅಕ್ಕಿ ಬರುವುದೇ ಇದಕ್ಕೆ ಕಾರಣ. ಇಲ್ಲಿಯ ಜನರು ನಮ್ಮವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಸಿಲೋನಿನಿಂದ ಹೊರಟು ಮೂರು ದಿನಗಳ ಸಮುದ್ರಯಾನ ಮಾಡಿ ನಾವು ನರಸಿಂಗ ರಾಜ್ಯಕ್ಕೆ ಸೇರಿದ ಪುಲಿಕಾಟ್ ಎಂಬಲ್ಲಿಗೆ ಹೋದೆವು. ಇಲ್ಲಿ ಭಾರಿ ವ್ಯಾಪಾರ ನಡೆಯುತ್ತದೆ. ಸಿಲೋನ್ ಮತ್ತು ಪೆಗಳಾಗಳಿಂದ ಆಭರಣಗಳು ಬರುತ್ತವೆ. ನಾವು ಇಲ್ಲಿ ಒಬ್ಬ ವರ್ತಕನ ಮನೆಯಲ್ಲಿ ಬಿಡಾರ ಹೂಡಿ ನಮ್ಮ ಬಳಿ ವ್ಯಾಪಾರಕ್ಕಾಗಿ ಹವಳ, ಕೇಸರಿ, ಚಿತ್ತಾರದ ಮಕಮಲ್ ಬಟ್ಟೆ ಮತ್ತು ಚಾಕುಗಳು ಇದೆಯೆಂದು ಹೇಳಿದೆವು. ಇಲ್ಲಿಯ ರಾಜನಿಗೂ ತರ್ನಸ್ಸೆರಿ (ತನ್ನಸೇರಿಂ) ರಾಜನಿಗೂ ಯುದ್ಧವಾಗುತ್ತಿರುತ್ತದೆ. ಆದುದರಿಂದ ನಾವು ಬಹಳ ದಿನ ತಂಗಲಿಲ್ಲ. ಕೆಲವು ದಿನಗಳಿದ್ದು, ಸಾವಿರ ಮೈಲು ಪ್ರಯಾಣ ಮಾಡಿ ತರ್ಮಸ್ಸೆರಿ ತಲುಪಿದೆವು. ತರ್ಮಸ್ಸೆರಿಯ ರಾಜ ಪೆಗನ್. ಇವನಿಗೂ ನರಸಿಂಗ ರಾಜ ಮತ್ತು ಬಂಘಲ್ಲಾದ (ಬಂಗಾಳದ) ರಾಜನಿಗೂ ಆಗಾಗ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಇಲ್ಲಿಂದ ಮುಂದೆ ನಾವು ಬಂಘ್ಹೆಲ್ಲಾ (ಬಂಗಾಳಕ್ಕೆ) ಹೋಗಬೇಕೆಂದು ನಿರ್ಧರಿಸಿದೆವು.[1]      ಸಾಳುವ ನರಸಿಂಹನು ಚಕ್ರವರ್ತಿಯಾದ ಕಾಲದಿಂದ ವಿಜಯನಗರ ರಾಜ್ಯಕ್ಕೆ ನರಸಿಂಹ ಎಂದು ಹೆಸರಾಯಿತು. ನರಸಿಂಹ ಎನ್ನುವ ಬದಲು ಪ್ರವಾಸಿಗಳ ಸಾಮಾನ್ಯವಾಗಿ ನರಸಿಂಗ ಎಂದು ಕರೆಯುತ್ತಿದ್ದುದೇ ವಾಡಿಕೆ.

[2]      ೧೫೧೦ರಲ್ಲಿ ಗೋವೆಯನ್ನು ಆಕ್ರಮಿಸಿದ ಪೋರ್ಚುಗೀಸರನ್ನು ಅದಿಲ್‌ಷಾ ಓಡಿಸಿದ ವಿಚಾರ ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಆಮೇಲೆ ಅದೇ ವರ್ಷ ಗೋವೆ ಪೋರ್ಚುಗೀಸರ ವಶವಾಯಿತು.

[3]      ವರ್ತೆಮಾ ಬಂದಾಗ ಸಾಳುವ ನರಸಿಂಹನೋ ಅಥವಾ ವೀರನರಸಿಂಹನೋ ಚಕ್ರವರ್ತಿಯಾಗಿದ್ದಿರಬೇಕು.