ಗಾಯನ ಸಮಾಜ

 

 

ನಗರದ ಪ್ರಮುಖ ಭಾಗದಲ್ಲಿ ಉತ್ತಮವಾದ ಬೆಳಕು – ಧ್ವನಿ ವ್ಯವಸ್ಥೆಗಳಿಂದಲೂ ಆಸನಗಳಿಂದಲೂ ಸುಸಜ್ಜಿತವಾಗಿರುವ ಗಾಯನ ಸಮಾಜ ನಮ್ಮ ರಾಷ್ಟ್ರದಲ್ಲಿಯೇ ಅತ್ಯಂತ ಹಿರಿಯ ಸಂಸ್ಥೆ ಸ್ವಂತ ಕಟ್ಟಡದ ಸೌಲಭ್ಯವಿಲ್ಲದಿದ್ದಾಗ ಗಾಯನ ಸಮಾಜದ ಕಾರ್ಯಕ್ರಮಗಳು ಪಕ್ಕದ ಆವರಣದಲ್ಲಿರುವ ಥಿಯೋ ಸಾಫಿಕಲ್ ಸೊಸೈಟಿ ಆಫ್ ಇಂಡಿಯ ಸಭಾಂಗಣದಲ್ಲಿ ನಡೆಯುತ್ತಿತ್ತು. ದೇಶದ ನಾನಾ ರಾಜ್ಯಗಳ ಪ್ರಸಿದ್ಧ ವಿದ್ವಾಂಸರಿಗೆ ವೇದಿಕೆಯನ್ನೊದಗಿಸಿರುವ ಸಂಸ್ಥೆ ಇದು. ಆರಂಭದಿಂದಲೂ ಸಾಮಾನ್ಯವಾಗಿ ತಿಂಗಳಿಗೆ ಒಂದು ಕಾರ್ಯಕ್ರಮವಂತೆ ಕಾರ್ಯ ನಿರ್ವಹಿಸುತ್ತಿದ್ದ ಸಮಾಜ ಮೂವತ್ತೆಂಟು ವರ್ಷಗಳ ಹಿಂದೆ ವಾರ್ಷಿಕ ಸಮ್ಮೇಳನವನ್ನು ನಡೆಸುವ ನಿರ್ಧಾರ ಮಾಡಿತು.

ಈ ವಾರ್ಷಿಕ ಸಮ್ಮೇಳನಗಳಲ್ಲಿ ಸಮ್ಮೆಳನಾಧ್ಯಕ್ಷರಿಗೆ “ಸಂಗೀತ ಕಲಾರತ್ನ” ಎಂದು ಬಿರುದು ನೀಡಿ ಗೌರವಿಸಲು ಆರಂಭಿಸಿದರು. ಪ್ರಾತಃಕಾಲದ ವಿದ್ವತ್ ಗೋಷ್ಠಿಯಲ್ಲಿ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಬೋಧಪ್ರದವಾದ ಕಲಾಪಗಳು ಸಂಜೆಯಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮಗಳು ನಡೆಯುತ್ತವೆ. ಯುವ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಸ್ಪಧಾತ್ಮಕ ಸಂಗೀತ ಕಚೇರಿಗಳು ಅನೇಕ ಸಂಗೀತ ವಿಭಾಗಗಳನ್ನು ಸ್ಪರ್ಧೆಗಳು ಏರ್ಪಡುತ್ತವೆ. ಕೆಲವು ವರ್ಷಗಳಿಂದ ವಿವಿಧ ಕಲಾ ಪ್ರಕಾರಗಳಲ್ಲಿ ಹಿರಿಯರಾಗಿರುವವರನ್ನು ಗುರುತಿಸಿ ’ವರ್ಷದ ಕಲಾವಿದ’ರೆಂದು ಸನ್ಮಾನಿಸಲಾಗುತ್ತಿದೆ.

ಜನ್ಮಶತಾಬ್ದಿ ವಾಗ್ಗೇಯಕಾರರ ದಿನಾಚರಣೆ ಮುಂತಾದ ವಿಶೇಷ ಕಾರ್ಯಕ್ರಮಗಳನ್ನೂ ಸಮಾಜವು ನಡೆಸುತ್ತದೆ. ಹಲವಾರು ವರ್ಷಗಳಿಂದ ಪ್ರಕಟವಾಗುತ್ತಿರುವ “ಗಾಯನ ಸಾಮ್ರಾಜ್ಯ” ಮಾಸ ಪತ್ರಿಕೆ ಉತ್ತಮ ಲೇಖನಗಳಿಂದಲೂ, ಅಪರೂಪದ ಚಿತ್ರಗಳಿಂದಲೂ ಕೂಡಿರುತ್ತದೆ. ತನ್ನದೇ ಆದ ಗ್ರಂಥಾಲಯ, ಧ್ವನಿಸುರುಳಿಗಳ ಸಂಗ್ರಹವನ್ನು ಸಂಸ್ಥೆ ಹೊಂದಿದೆ.

೨೦೦೪-೦೫ ರ ಸಾಲಿನಲ್ಲಿ ಸಮಾಜದ ಶತಮಾನೋತ್ಸವವು ಅತಿ ವೈಭವದಿಂದ ಆಚರಿಸಲ್ಪಟ್ಟಿತು. ಇದರ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಹೆಚ್ಚಾಗಿ ನಡೆದುವು.

ಸಮ್ಮೆಂಗುಡಿ ಶ್ರೀನಿವಾಸ ಐಯ್ಯರ್ ಅವರನ್ನು ಕುರಿತಾದ ಸಾಕ್ಷ್ಯ ಚಿತ್ರವನ್ನು ಸಮಾಜವು ಹೊರತಂದಿತು. ಸಮಾಜದ ಸಾಧನೆ ಹಿರಿಮೆಗಳನ್ನು ಆಧರಿಸಿದ ಸಾಕ್ಷ್ಯ ಚಿತ್ರವು ದೂರದರ್ಶನದಿಂದ ಪ್ರಸಾರವಾಗಿದ್ದು ಸಂಗೀತ ಪ್ರೇಮಿಗಳ ಮೆಚ್ಚುಗೆ ಪಡೆದಿದೆ.

ಹೀಗೆ ನಮ್ಮ ನಾಡಿನ-ದೇಶದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎತ್ತರದ ಸ್ಥಾನ ಗಳಿಸಿರುವ ಸರ್ಕಾರದ ಮನ್ನಣೆಯನ್ನು ಹೊಂದಿರುವ ಗಾಯನ ಸಮಾಜವು ೧೯೯೮-೯೯ರ ಸಾಲಿನ ರಾಜ್ಯ ಸಂಗೀತ -ನೃತ್ಯ ಅಕಾಡೆಮಿಯ ಪುರಸ್ಕಾರವನ್ನು ಪಡೆದಿದೆ. ಸಮಾಜದ ಕಾರ್ಯಕ್ರಮಗಳು ಮಾತ್ರವಲ್ಲದೆ ಇತರ ಅನೇಕ ಸಂಸ್ಥೆಗಳ ಹಲವು ರೀತಿಯ ಸಾಂಸ್ಕರತಿಕ ಕಾರ್ಯಕ್ರಮಗಳೂ ನಡೆಯುವ ಗಾಯನ ಸಮಾಜದ ಸಭಾಂಗಣ ಸರಸ್ವತಿಯ ಆವಾಸ ಸ್ಥಾನವಾಗಿದೆ.