‘ಅಪ್ಪ, ಯಾಕಪ್ಪ ಹೆಬ್ಬೆರಳೇ ಇಲ್ಲ ನಿನ್ನ
ಬಲಗೈಯ್ಯಲ್ಲಿ?’ ಒಂದು ದಿನ ಕುತೂಹಲಕ್ಕೆ
ಕೇಳಿತು ಮಗು ಏಕಲವ್ಯನನ್ನು. ‘ನನ್ನ ದೇವ-
ರಿಗೆ ನೈವೇದ್ಯವಾಯಿತು ಮಗೂ, ಅದಕ್ಕೆ

ಆ ಬೆರಳಿಲ್ಲ, ಅಷ್ಟೆ.’ ‘ದೇವರಿಗೆ? ಅದಿನ್ನೆಂಥ
ದೇವರಪ್ಪ ನಿನ್ನ ಹೆಬ್ಬೆರಳನ್ನೆ ಕೇಳಬೇಕಾದರೆ ?
ಛೀ, ತೆಗೆ, ಬಲು ಕೆಟ್ಟದಿರಬೇಕು ಆ ನಿನ್ನ ದೇವರು
ಕೊಡುವಾಗ ಏನೂ ಅನ್ನಿಸಲಿಲ್ಲವೇ ನಿನಗೆ?’

‘ಹಾಗೆನ್ನಬಾರದು ಮಗೂ, ದೇವರೆಂದರೆ ದೇವರೆ’,
‘ಹೌದಪ್ಪ ಹೌದು, ಬೆರಳಿನ ಬದಲು ನಿನ್ನನ್ನೆ
ಕೇಳಲಿಲ್ಲವಲ್ಲ, ಅದರಿಂದ ನಿಜವಾಗಿಯೂ
ಒಳ್ಳೆಯದಿದ್ದರೂ ಇದ್ದೀತು ಆ ನಿನ್ನ ದೇವರು’.

ಹೇಗೆ ಹೇಳುವುದು ಈ ಮಗುವಿಗೆ, ನಾನು ಕೊಟ್ಟದ್ದು
ಬರೀ ಬೆರಳನ್ನಲ್ಲ, ಇಡಿಯಾಗಿ ನನ್ನನ್ನೆ
ಎಂದು. ಇಷ್ಟರಮೇಲೆ ನಾನು ಕೊಟ್ಟದ್ದೆಷ್ಟು, ಬಿಟ್ಟ-
ದ್ದೆಷ್ಟು ಅರ್ಥವೇ ಆಗಿಲ್ಲ ಈವರೆಗೆ ನನಗೆ.