ಬಿಂಕದಿ ನುಡಿವಳು ಮಥುರಾಪುರನಾರಿ :
“ಓ ನೀನಾರೇ ಗೋಪ ಕುಮಾರೀ,
ಚಕ್ರವರ್ತಿ ಶ್ರೀ ಕೃಷ್ಣನನೀ ತೆರ
ಹರಕು ಬಟ್ಟೆಯೊಳೆ ನೋಡುವೆನೆನ್ನುವ
ಹಳ್ಳಿ ಗಮಾರಿ?
ಸಪ್ತ ದ್ವಾರಗಳ ಪಹರೆಯಾಚೆಗಿದೆ
ಕೃಷ್ಣನಿವಾಸ !
ಎಂದು ಬಂದೆ ನೀ, ನಿನಗೆಷ್ಟು ಧೈರ್ಯವೇ,
ಕಾಪಿನರಮನೆಯ ನೀನೆಂತು ನುಗ್ಗುವೇ,
ಓ, ಬಿಡು, ನಿನಗಿಲ್ಲ ಪ್ರವೇಶ.”

ಗದ್ಗದದೊಳು ನುಡಿವಳು ಗೋಪಕುಮಾರಿ :
“ಓ ಪ್ರಿಯತಮ ಕೃಷ್ಣಾ
ಗೋಪೀ ಜನಮನ ಹಾರೀ,
ದಯಮಾಡಿಸು ಎಲ್ಲಿಹೆ ನೀ
ಸುಂದರ ಮೊಗದೋರಿ.
ಓ ಗೋಪೀ ಜನ ವಲ್ಲಭ -ಮಥುರಾಪುರವಾಸ
ಓ ರಾಧಾ ಪ್ರಿಯತಮ ಬಾರಾ-ಹೃದಯ ನಿವಾಸ.
ಓ ಬಾರಾ, ಲಜ್ಜಾ ಭಯ ದೂರ,
ಬಾರಾ, ಗೋಪೀಜನಜೀವನಧನ
ಸಂರಕ್ಷಣ ಚತುರ !”