ತಣ್ಣಗೆ ಕೊರೆವ ಬೀದಿ, ಬಿದ್ದಿಹುದು ಉದ್ದಕೂ ಕಪ್ಪಾಗಿ,
ಸಾಲು ದೀಪದ ಬೆಳಕು ಬೆನ್ನ ಸವರಿರಲಾಗಿ
ಮೂಕವಾಗಿ !

ಮಾತು-ಎಲ್ಲೋ ದೂರದಲಿ ಒಡೆದ ಬೂದಿಯ ಮುಗಿಲ
ಬಿರುಕು ತುಟಿಯೊಳಗೆರಡು ಗೊಣಗು ಚಿಕ್ಕೆ.
ದಿಬ್ಬಣಕೆ ಬಂದು ನಿಂತಿವೆ ಇಲ್ಲಿ,
ಬಯಲ ಗುಡಿಸುತ ನಿಂತ ಪೊರಕೆ ಮರಗಳ ಸಾಲು
ಸುಮ್ಮನೆಯೆ ಸುರಿಯುತಿದೆ ತುಂಬುದಿಂಗಳ ಹಾಲು !

ಇಲ್ಲಿ ಬಿದ್ದಿವೆ
ಕಾಲುದಾರಿಯ ಮೆಲೆ ರಾಶಿರಾಶಿಯ ತರಗು
ಉದುರಿದೆಲೆಗಳ ಕೆದರಿ ಮೂಸುತಿದೆ ಬಿಳಿ ಮಂಜು
ಕೊರೆವ ಮೂಗನು ಚಾಚಿ !

ಅಯ್ಯೊ ಏನನ್ಯಾಯ-
ದಿನದಿನವು ಆ ಅದೇ ಸೂರ್ಯಚಂದಿರ ಚಿಕ್ಕೆಗಳ ಜಾತ್ರೆ ಬಾನಿನ ತುಂಬ ;
ಮಾಗಿ ಬರದೇ ಅಲ್ಲಿ, ಇಲ್ಲಿ ಬಂದಂತೆ ?
ತಾರೆಯೆಲೆ ಹಣ್ಣಾಗಿ ಕಳಚಿ ಬೀಳದೇ ನೀಲಿಯ ಮರದ
ಹರೆಹರೆಯಿಂದ,
ಮೂಡದೇ ಹೊಸ ಚಿಗುರು ಬೆಳಕು ?
ನಮಗೇಕೆ, ನಮಗಷ್ಟೆ ಏಕೆ ಋತು ಋತುವಿಗೂ ಮಾಗಿ
ಕೊಳೆವ ಬದುಕು ?

ತರಗೆಲೆಯ ಪ್ರಶ್ನೆಗೆ ಬೆದರಿ ನಡುಗಿ ನಿಂತಿತು ಗಾಳಿ !
ನಿಶ್ಚಿಂತವಾಗಿತ್ತು ಇರುಳು, ಏನಾದರೂ ಬೆಳಗಾಗಿಯೇ ಆಗುವುದು.
ಮತ್ತೆ ಕೂಗಿಯೇ ಕೂಗುವುದು ಕೋಳಿ ;

ತಣ್ಣಗೆ ಕೊರೆವ ಬೀದಿ ಮಲಗಿತ್ತು
ಕಡೆಯ ಉತ್ತರವಾಗಿ, ಮೂಕವಾಗಿ.
ದುಂಡು ಚಂದ್ರನ ತಂದು ಕಂಬ ಕಂಬದ ತುದಿಗೆ
ಕೀಲಿಸಿದ ಹಾಗಿದ್ದ ದಾರಿಯ ದೀಪ
ತೂಗಡಿಸಿತ್ತು – ಮೌನವಾಗಿ