ಪ್ರೀತಿ ಎಂದರೇನು-ಎಂದು
ನೀನು ನನ್ನ ಕೇಳಿದೆ
ನಾನು ಮಿಡುಕಿ ತಡಕಾಡಿದೆ
ಉತ್ತರ ಕೊಡಲಾರದೆ.

ಪ್ರೀತಿ ಎಂದರೇನು ಹೇಳಿ-
ಆಕಾಶವ ಕೇಳಿದೆ.
ಸೂರ್ಯ ಚಂದ್ರ ಚಿಕ್ಕೆ ಬಳಗ
ಮಾತಾಡದೆ ತಿರುಗಿವೆ.

ಹೊಳೆಗಳೆಲ್ಲ ಕಡಲಿಗೋಡಿ
ಅಪ್ಪಿಕೊಂಡು ಕರಗಿವೆ.
ಮೋಡವೆಲ್ಲ ಕೆಳಗೆ ಸುರಿದು
ನೆಲಕೆ ಮುತ್ತನೊತ್ತಿವೆ.

ಸಿಂಗಾರದ ಹೂವ ಮುಡಿದು
ಮರಗಿಡಗಳು ನಿಂತಿವೆ.
ಬಂಗಾರದ ರಂಗನೆರಚಿ
ಬೈಗು ಬೆಳಗು ಆಡಿವೆ.

ತಾಯಿ ಕೊಟ್ಟ ಮೊಲೆ ಹಾಲಿನ
ರುಚಿಯಲಿ ಮಗು ಬೆಚ್ಚಗೆ,
ಗಂಡು ಹೆಣ್ಣಿನಪ್ಪುಗೆಯಲಿ
ಸುತ್ತ ಎಲ್ಲ ಹಚ್ಚಗೆ.

ಯಾರೂನೂ ಕೊಡಲೊಲ್ಲರು
ನನ್ನ ತೊಡಕಿಗುತ್ತರ
ನೂರು ಕಣ್ಣ ಬೆಳಕಾಡಿವೆ
ನನ್ನ ಎದೆಯ ಹತ್ತಿರ.

‘ಪ್ರೀತಿ ಎಂದರೇನು ಹೇಳಿ’
ಎಂಥ ಪ್ರಶ್ನೆ ನಿನ್ನದೆ?
ಹತ್ತಿರ ಬಾ ಹೇಳುತೇನೆ
ಇಳಿದು ನೋಡು ನನ್ನೆದೆ.