ಹೂವಿನ ದಳಗಳ ತುಂಬಾ, ಅಮ್ಮಾ
ಯಾಕಿಷ್ಟೊಂದು ಧೂಳು?
ನಿನ್ನ ಹೆರಳಿಗೂ ದೇವರ ಮುಡಿಗೂ
ಹೇಗೆ ಮುಡಿಸಲೇ ಹೇಳು?

ಸುತ್ತಲು ಕಾಣುವ ಗಿಡಮರವೆಲ್ಲಾ
ಯಾಕಿಷ್ಟೊಂದು ಬೋಳು?
ಹಾಡುವ ಹಕ್ಕಿಗೆ ಅಲೆಯುವ ದುಂಬಿಗೆ
ಸ್ಥಳವಿನ್ನೆಲ್ಲಿದೆ ಹೇಳು?

ಜುಳು ಜುಳು ಹರಿಯುವ ಹೊಳೆ-ಹಳ್ಳಗಳ
ನೀರ‍್ಯಾಕಿಷ್ಟು ಕೊಳಕು?
ಈಜುವ ಮೀನಿಗೆ, ದಾಹದ ಬಾಯಿಗೆ
ಇಲ್ಲವೆ ಬದುಕುವ ಹಕ್ಕು?

ಹಗಲೂ ಇರುಳೂ ಯಾಕಿಷ್ಟೊಂದು
ಸಾವಿರ ಗಾಲಿಗಳುರುಳು?
ಈ ಗದ್ದಲದೊಳು ಕೇಳಿಸದಾಗಿದೆ
ನಿನ್ನ ಜೋಗುಳದ ಕೊರಳು.