ಇಷ್ಟಗಲ ಬಾಗಿಲನು ತೆರೆದು ನಡೆದನೆ ಅವನು
ಈಗೆಲ್ಲಿಗೆ ?

ಇಂದಿಗೂ ಕಂದದಿವೆ ಎಂದೊ ಮುಡಿಸಿದ ದೀಪ.
ಶಿಲ್ಪಶಾಲೆಯ ತುಂಬ, ಮುಗಿದ, ಅರೆಮುಗಿದ,
ಮುಗಿಯದ ಮತ್ತೆ ಮುರಿದೆಸೆದ ನೂರಾರು ರೂಪ !
ಬೆಂಕಿಯುಳಿ ಕಡೆದು ನಿಲಿಸಿದೆ ಇದೆಕೊ, ತಂಪಾಗಿ,
ಚಿಗುರು ಹೂ ಪಕಳೆಗಳ ದೀಪಾವಳಿಯ ತೂಗಿ
ಕೊಂಬೆ ಕೊಂಬೆಯಲಿ.

ನೀಲಿಯ ವೀಣೆ ಮಿಡಿಯುತಿದೆ ನೂರಾರು
ಮೇಘರಾಗಗಳನ್ನು ; ಗಾಳಿಗೋವಳಿಗ
ಜಗ್ಗುವನು ಮುಗಿಲ ಕೆಚ್ಚಲುಗಳನು ; ಹಾಲು
ಧಾರಾಕಾರ ಹಸಿರು ಗದ್ದೆಯ ಸಸಿಗೆ.
ಹೀಗೆಯೆ ಸಾಗುತ್ತಲಿದೆ ಈ ಸೋಜಿಗದ ಮೆರವಣಿಗೆ !
ಆದರೂ-
ಇಷ್ಟಗಲ ಬಾಗಿಲನು ತೆರೆದು ನಡೆದನು ಎಲ್ಲಿ,
ಈ ಹೊತ್ತಿನಲ್ಲಿ !
*     *     *

ಇಷ್ಟಗಲ ಬಾಗಿಲನು ತೆರೆದು ಬಂದನೆ ಇವನು-
ಯಾ ಹೊತ್ತಿನಲ್ಲಿ !
ಕಣ್ಣು ಕಾಣದ ಕದವ ತಳ್ಳಿ ಬಂದ
ಈ ಅಂಬೆಗಾಲಿನ ಕಂದ !

ಈ ನದಿಯ ಮೂಲವನು ನೀನು ಕಂಡೆಯ ಚಿಣ್ಣ ?
ಹೊನ್ನ ತೀರ್ಥದಿ ಮಿಂದ ಮೈಗೆ ಬೆರಗಿನ ಬಣ್ಣ !
ಇವ ತೆರೆದ ಬಾಗಿಲಿಂದೊಳಗೆ ನುಗ್ಗಿತು ಹಿಗ್ಗು ;
ವಾತ್ಸಲ್ಯವೀಣೆಯಲಿ ಬೆಳಕು ಬೆರಳಾಡಿಸಿತು.
ತೆರೆದ ತಾವರೆಗೊಳದಿ ಮೆಲುಗಾಳಿಯಾಡಿತ್ತು
ಎಲ್ಲ ಪ್ರಶ್ನೆಗು ಅದೇ ಒಂದೆ ಉತ್ತರವಾಯ್ತು !

ಸುತ್ತ ಗಿಡಬಳ್ಳಿಗಳ ತುಟಿಯೊಳಗೆ ಮಿನುಗಿತ್ತು
ಮೊದಲ ಮೊಲೆ ಹಾಲು ;
ಬಾನ ನೀಲಿಗೆ ತುಡಿವ ನೆಲದ ಬಯಕೆಯ ಬುಗ್ಗೆ
ಹಸುರಾಗಿ ಚಿಮ್ಮಿರಲು, ಕೊಂಬೆದೊಟ್ಟಿಲ ತುಂಬ
ಉಯ್ಯಾಲೆಯಾಡಿತ್ತು ಹಕ್ಕಿಗೊರಳು !
ಬಂದ ಕಂದನ ಜೊತೆಗೆ ಬದುಕಿದನು ತಂಪಾಗಿ,
ಚಿಕ್ಕೆ, ಚಂದಿರ, ಬುಗುರಿ ಚಂಡಾಟಗಳ
ಸಂಗದಲಿ ನೆಮ್ಮದಿಯಾಗಿ,
ಎಲ್ಲಿಂದಲೋ ಏನೊ ಬೀಳತೊಡಗಿತು ನೆರಳು
ಮಣ್ಣಿನುರುಳು.
ಬೆಳೆಬೆಳೆದು ಬಳಬಳಸಿ ಬಂತು ಗ್ರಹಣದ ಮಾಟ,
ಬಣ್ಣ್ಣದೆಲೆಗಳು ಉದುರಿ, ಸೊರಗಿತ್ತು ಚಂದ್ರನ ತೋಟ.
ಬಿದ್ದ ನೆರಳಿನ ತುಂಬ ರೈಲು ಮೋಟರು ಮಿಲ್ಲುಗಳ
ಧೂಳು ಹೊಗೆ ; ಮಾದಕದ ಬಿಸಿ ಗಾಳಿ ; ರೇಡಿಯೋ ಕಿರುಚು ;
ಝಣರೆನುವ ಬಳೆಯ ದನಿ ; ಮೀನು ಮೈನುಣುಪುಗಳ
ಜಾರು ಬಂಡೆಯ ದಾರಿ – ಕಪ್ಪು ಕೊಳಕೆ !
*     *     *
ಇಷ್ಟಗಲ ಬಾಗಿಲನು ತೆರೆದು ಬಂದಿತು ಪ್ರಶ್ನೆ ;
ಕತ್ತಲಿನ ಕೊಳದಲ್ಲಿ ಇಳಿದ ಮಿಂಚಿನ ಮೀನು !
ಕಾಳಿಂದಿ ಮಡುವಿನ ನಿದ್ದೆ ಕಲಕಿತು ; ನಾಗದಪ್ಪುಗೆಯಿಂದ
ಮೇಲೆದ್ದು ಕೇಳಿದೆ :
‘ಏನು ? ಏನಾಗಬೇಕು’ ?
‘ಮೂರು ಅಡಿ, ಮೂರೇ ಮೂರು ಅಡಿ ನೆಲವ ನೀಡುವೆಯೇನು,
ಮೂರೇ ಮೂರು ಅಡಿ ?’

‘ಅಷ್ಟೆ ತಾನೇ, ತೆಗೆದುಕೋ, ಕಲಕದಿರು ಮತ್ತೆ’.
ನುಡಿದದ್ದೆ ತಡ ಮೆಟ್ಟಿತ್ತು ಮಂದರ ಪಾದ ;
ಹೆಡೆಹೆಡೆಯ ತುಳಿತುಳಿದು ನಡೆಸಿತ್ತು
ತಾಂಡವವ.
‘ಸಾಕೊ ಪಾಪೀ ಸಾಕು, ನಡೆ ; ಕೊಟ್ಟ ದಾನವ ಮರಳಿ
ಪಡೆಯುವೆ ನಾನು ಓ ವಿಲಯಮೂರ್ತಿ.
ಇರಲಿ, ಆ ಬಲಿಚಕ್ರವರ್ತಿಗೇ ಇರಲಿ
ನೀ ತುಳಿದ ಅಮರ ಕೀರ್ತಿ.

ಬಂದ ಝಂಝಾವಾತ ತಗ್ಗಿತು ; ಒಣಗಿದೆಲೆಗಳ ಕಾಡು
ತರತರನೆ ನಡುಗಿತ್ತು ; ಖಾಂಡವ ದಹನ ಸಾಗಿತ್ತು
ಶತಮಾನಗಳ ಕಾಲ.
ಮಾಗಿ ಮಂಜಿನ ಹಾಲು ಸೋನೆಯಲಿ ಸಾಗಿತ್ತು
ವೈದ್ಯ ಶುಶ್ರೂಷೆ !
*     *     *
ಇಷ್ಟಗಲ ಬಾಗಿಲನು ತೆರೆದು ಹೊರಟನು ಇವನು.
ಯಾರಿಗೂ ಹೇಳದೆಯೆ ನಟ್ಟನಡುರಾತ್ರಿಯಲಿ ದೂರದೂರ
ಎಲ್ಲಿ ಹೋದರು ಅದೇ ಹಳೆಯ ಕೊಳಗಳ ಪಾಚಿ !
ಎಷ್ಟೊಂದು ತಳ್ಳಿದರು ಬಂದೇ ಬರುತ್ತಲಿದೆ ಈ ಪಾಚಿ,
ಹಸುರು ನಾಲಿಗೆ ಚಾಚಿ !
ತಳ್ಳುವುದು, ಹೀಗೆಯೇ ತಳ್ಳುತ್ತಲಿರುವುದೇ
ಕಡೆತನಕ ?
‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈಹಿಡಿದು ನಡೆಸೆನ್ನನು’
‘ನನ್ನ ದಾರಿಯ ನಾನೆ ನೋಡಿ ಹಿಡಿದೆನು -ಇನ್ನು,
ಕೈ ಹಿಡಿದು ನಡೆಸು ನೀನು.’