ಉತ್ತಮ ಸಂಸ್ಕಾರವಂತರ ಕುಟುಂಬದಲ್ಲಿ ಸಂಗೀತಮಯ ಪರಿಸರದಲ್ಲಿ ಮೈಸೂರಿನಲ್ಲಿ ೩೦-೧೧-೧೯೩೦ ಜನಿಸಿದವರು ಪ್ರಸನ್ನಕುಮಾರಿ. ತಂದೆ, ತಾಯಿ, ಸೋದರತ್ತೆ ಹಾಗೂ ಪತಿ ಸತ್ಯಂ ಇವರುಗಳ ಉತ್ತೇಜನದಿಂದ ಪ್ರಸನ್ನಕುಮಾರಿಯವರ ಕಲಾ ಕುಸುಮ ಅರಳಿತು. ಬಿ.ಎಂ. ಶಿವಪ್ಪ, ರಂಗಶೆಟ್ಟರು, ಚಿಂತಲಪಲ್ಲಿ ಕೃಷ್ಣಮೂರ್ತಿ, ಚಂದ್ರಸಿಂಗ್‌, ಪಲ್ಲವಿ ಚಂದ್ರಪ್ಪ ಮತ್ತು ಬೆಳಕವಾಡಿ ವರದರಾಜ ಅಯ್ಯಂಗಾರ್ ಅವರುಗಳು ಮಾರ್ಗದರ್ಶನ ನೀಡಿ ಶಿಕ್ಷಣವಿತ್ತು ಬೆಳೆಸಿದ ಫಲವೇ ಶ್ರೀಮತಿಯವರು ನಾಡಿನ ಮುಂಚೂಣಿಯ ಗಾಯಕಿಯಾಗಿ ನಾಡಿನಲ್ಲೂ ಹೊರ ನಾಡುಗಳಲ್ಲೂ ಸಂಗೀತದ ರಸ ಪ್ರವಾಹವನ್ನೇ ಹರಿಸುವಂತಾಯಿತು.

ಮದರಾಸಿಗೆ ತೆರಳಿ ರಾಜಗೋಪಾಲ ಅಯ್ಯರ್ ಅವರಿಂದಲೂ ಕೆಲಕಾಲ ಶಿಕ್ಷಣ ಪಡೆದ ಪ್ರಸನ್ನಕುಮಾರಿ ಸರಕಾರದಿಂದಲೂ, ಇತರ ಪ್ರಮುಖ ಪ್ರದರ್ಶನ ಕೇಂದ್ರಗಳಿಂದಲೂ ಬಂಗಾರದ ಪದಕಗಳನ್ನು ಗಳಿಸಿದ್ದರು. ರಾಜ್ಯ ಸರ್ಕಾರವು ನಡೆಸುವ ಸಂಗೀತ ಪರೀಕ್ಷೆಗಳಲ್ಲಿ ವಿದ್ವತ್‌ ದರ್ಜೆಗೆ ಪರೀಕ್ಷಕರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದರು. ಬೆಂಗಳೂರು ಗಾಂಧಿನಗರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಆಕಾಶವಾಣಿಯ ಕಲಾವಿದರಾಗಿಯೂ ಸುಮಾರು ನಲವತ್ತೈದು ವರ್ಷಗಳು ಗಾಯನ ಮಾಡಿದರು.

ಉತ್ತಮ ಶಿಕ್ಷಕಿಯಾದ, ಬೋಧಕಿಯಾದ ಇವರಿಂದ ಮಾರ್ಗದರ್ಶನ ಪಡೆದು ಧನ್ಯರಾದ ಸಂಗೀತ ವಿದ್ಯಾರ್ಥಿಗಳು ಅನೇಕ. ಹೊರ ನಾಡುಗಳಿಂದಲೂ ಆಹ್ವಾನಿತರಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಘನತೆ ಇವರದು. ಹಾಗೆಯೇ ಇವರಿಗೆ ಪ್ರಾಪ್ತವಾದ ಗೌರವ ಪ್ರಶಸ್ತಿಗಳೂ ಅನೇಕ. ‘ಮಧುರ ಗಾನವಾಣಿ’, ‘ಗಾನ ಚಂದ್ರಿಕೆ’, ‘ಕಲಾ ಸರಸ್ವತಿ’, ‘ನಾದ ಕಲಾ ಭೂಷಣಿ’, ‘ಸ್ವರ ಭೂಷಣಿ’ ಮುಂತಾದ ಪ್ರಶಸ್ತಿಗಳ ಮಾಲಿಕೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಸಹ ಸೇರಿತು.

ಬದುಕಿನ ಕೊನೆಯವರೆಗೂ ಸಂಗೀತವನ್ನೇ ಉಸಿರಾಗಿ ಹೊಂದಿ, ಆರಾಧಿಸಿದ ಪ್ರಸನ್ನಕುಮಾರಿಯವರ ಜೀವಜ್ಯೋತಿ ೨೦೦೪ರಲ್ಲಿ ದೇವಿ ಶಾರದೆಯ ಅಡಿ ಸೇರಿತು.