) ಸಾವಿತ್ರಿ:    

ಹಾಲು ವೃಕ್ಷಕ್ಕೆ ಹಾಲು ಬಳ್ಳಿ ಹಬ್ಬಿದಂತೆ ಸತ್ಯವಾನ ಸಾವಿತ್ರಿಯರು ಜೊತೆಗೂಡಿ, ಮೂಡಣ ಗಂಗೆಗೆ ಸ್ನಾನಕ್ಕಾಗಿ ಹೋಗುತ್ತಾರೆ. ಇಬ್ಬರೂ ಮೂಡಣ ಗಂಗೆಯಲ್ಲಿ ಸ್ನಾನ ಮಾಡಿ, ತಮ್ಮರಮನೆಗೆ ಬರುತ್ತಾರೆರ. ಸತ್ಯವಾದ ಹೆಂಡತಿಯನ್ನು ಕುರಿತು, “ಕಾಡಿನಲ್ಲಿ ಕಟ್ಟಿಸಿದ ದೆವಾಲಯದ ಕಲ್ಲು ಕಂಬ ಬಾಗಿದೆ, ಅದಕ್ಕೊಂದು ಕಂಬ ತರಬೇಕಾಗಿದೆ. ಊಟಕ್ಕೆ ಅನುಮಾಡು” ಎನ್ನುತ್ತಾನೆ. ಆಗ ಸಾವಿತ್ರಿ, “ನಿನ್ನೆಯೊಬ್ಬ ಮಹತ್ತಿಬಿದ್ದ ಸುದ್ಧಿಯನ್ನು, ನಿನ್ನೆ ಜೋಯಿಸರು ಹೇಳಿದ್ದರು. ದೇವರೇ ನನಗೇಕೋ ಹೆದರಿಕೆ, ನಾನು ನಿಮ್ಮ ಜೊತೆಯಲ್ಲಿ ಕಾಡಿಗೆ ಬರುತ್ತೇನೆ. ಎನ್ನುತ್ತಾಳೆ. ಸತ್ಯವಾನನು ಕಾಡಿನ ಭೀಕರತೆಯನ್ನು ಸಾವಿತ್ರಿಯ ಮುಂದೆ ವರ್ಣಿಸಿ, ಅವಳ ಅರಣ್ಯ ಪ್ರವಾಸವನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಸಾವಿತ್ರಿ ಹಠತೊಟ್ಟು ಗಂಡನ ಜೊತೆಗೆಯಲ್ಲಿ ಅರಣ್ಯಕ್ಕೆ ಹೊರಡುತ್ತಾಳೆ. ಸತ್ಯವಾನ ಕಾಡಿನ ಭೀಕರ ಹಾಗೂ ಶಂಕರ ದೃಶ್ಯಗಳನ್ನು ತೋರಿಸುತ್ತಾ ನಡೆದು ನಡೆದು ಕಾಡಿನ ಅಲದಕಟ್ಟೆಯಡಿ ಬರುತ್ತಾನೆ. ಅದರ ನೆರಳಿನಲ್ಲಿ ಇಬ್ಬರು ವಿಶ್ರಮಿಸುತ್ತಾರೆ.

ಸತ್ಯವಾನನು ಒಂದು ಅತ್ತಿಯ ಮರವನ್ನು ಹತ್ತಿ, ಅದರ  ಕಿರು ಟೊಂಗೆಯನ್ನು ಕಡಿಯುತ್ತಾನೆ. ಆ ಹೆಣೆ ಅವನ ಬೆನ್ನಿಗೆ ಬಡಿದು ನೆಲಕ್ಕೆ ಬೀಳುತ್ತದೆ. ಮತ್ತೊಂದನ್ನ ಕಡಿದಾಗ ಅದು ಅವನ ಕಣ್ಣಿಗೆ ಬಡಿದು, ಸತ್ಯವಾನನ ಕಣ್ಣಿಗೆ ಕತ್ತಲು ಕವಿಯುತ್ತದೆ. ಆಗ ಸತ್ಯವಾನ ಸಾವಿತ್ರಿಯೂ ನಳಿತೋಳಿನ ಸಹಾಯ ಪಡೆದು, ಮರವಿಳಿಯುತ್ತಿರುವಾಗಲೇ ಅವಳ ತೋಳ ಮೇಲೆಯೇ ಮೋಕ್ಷ ಪಡೆಯುತ್ತಾನೆ.

ಸಾವಿತ್ರಿ ಎಳ್ಳಿಯ ಎಲೆಯ ಮೇಲೆ ಗಂಡನನ್ನು ಮಲಗಿಸಿ ಗೋಳಿಟ್ಟಳು. ಯಮನು ತನ್ನ ದೂತರನ್ನು ಕರೆದು ಸತ್ಯವಾನನ ಪ್ರಾಣ ತರಲು ಆಜ್ಞಾಪಿಸುತ್ತಾನೆ. ಯಮದೂತರು ಬಂದು ಸತ್ಯವಾನನ ಪ್ರಾಣವನ್ನೆಳೆಯುತ್ತಾರೆ. ಸಾವಿತ್ರಿ ಯಮದೂತರಿಗೆ ಸತ್ಯವಾನನ ಪ್ರಾಣಾಪಹರಣ ಮಾಡಲು ಬಿಡುವುದಿಲ್ಲ. “ಯಮರಾಯನು ಒಂದೊಮ್ಮೆ ಬಂದರೂ ಅವನಿಗೂ ಸತ್ಯವಾನನ ಪ್ರಾಣವನ್ನೊಪ್ಪಿಸಲಾರೆ” ಎನ್ನುತ್ತಾಳೆ. ಯಮದೂತರು ಯಮರಾಯನಿಗೆ ಈ ವಿಷಯ ತಿಳಿಸುತ್ತಾರೆ. ಆಗ ಯಮರಾಯನೇ ಸ್ವತಃ ಸಾವಿತ್ರಿಯೆಡೆಗೆ ಬರುತ್ತಾನೆ. ಸಾವಿತ್ರಿ ಯಮರಾಯನ ಪಾದ ತೊಳೆದು ಪಾದಕ್ಕೆ ನಮಸ್ಕರಿಸಿದಳು. ಯಮರಾಯನು, “ಮಗಳೇ ಅಯುಷ್ಯವಂತಳಾಗು. ನಿನ್ನ ಬಂಗಾರದೋಲೆ ಸ್ಥಿರವಾಗಲಿ,”  ಎಂದು ಹರಸುತ್ತಾನೆ. ಯಮರಾಯನ ಮತನ್ನು ಸಾವಿತ್ರ ಸೆರಗಿಗೆ ಗಂಟಿಕ್ಕಿಕೊಳ್ಳುತ್ತಾಳೆ. ಇದನ್ನು ಗಮನಿಸಿದ ಯಮರಾಯ “ಯಾಕಾಗಿ ಸೆರಗಿಗೆ ಗಂಟಿಕ್ಕುತ್ತಿರುವೆ? ” ಎಂದು ಪ್ರಶ್ನಿಸುತ್ತಾನೆ. ಆಗ ಸಾವಿತ್ರಿ ನೀವು ನನಗೆ ಕೊಟ್ಟವರ ಸ್ಥರವಾಗಲಿ  ಎಂದು ಮೇಲ್ಸೆರಗಿಗೆ ಗಂಟಿಕ್ಕಿದ್ದೇನೆ” ಎಂದು ಹೇಳಿ, ಸಾವಿತ್ರಿ, ಸತ್ಯವಾನನ ಕಳೆಬರಕ್ಕೆ “ಮುಸ್ಕಿನ ಸೊಪ್ಪು” ಮುರಿದು ಮರೆಮಾಡುವಳು. ಸುತ್ತ ಮುತ್ತಲಿನ ಹಕ್ಕಿ ಪಕ್ಕಿಗಳಿಗೆ ಸತ್ಯವಾನನ ಕಳೇಬರವನ್ನು ಮುಟ್ಟಕೂಡದೆಂದು ಪ್ರಾರ್ಥಿಸಿ, ಯಮರಾಯನ ಬೆನ್ನು ಹತ್ತುವಳು.

ಯಮರಾಯ ಯಮನಕೊಂಡದಲ್ಲಿಯ ರೌದ್ರ ಸನ್ನಿವೇಶಗಳನ್ನು ಸಾವಿತ್ರಿಗೆ ತೋರಿಸಿ ಅವಳಿಗೆ ಹೆದರಿಕೆ ಬಂದು ಹಿಂತಿರುಗಿ ಹೋಗುವಂತೆ ಪ್ರಯತ್ನಿಸುವನು. ಯಮರಾಯನು ತೋರಿದ  ಭೀಕರ ದೃಶ್ಯಕ್ಕೆ ಬೆದರದೆ ಸಾವಿತ್ರಿ ಅವನನ್ನು ಹಿಂಬಾಲಿಸುವಳು.

ಯಮರಾಯ ತನ್ನರಮನೆಗೆ ಹೋಗಿ, ತನ್ನರಸಿಯರನ್ನು ಕುರಿತು, “ಕಾಡಿನಲ್ಲೊಂದು ಹೆಣ್ಣು ನಿಮ್ಮೆಲ್ಲರನ್ನೂ ಬಯ್ದು ಕಳಿಸಿದ್ದಾಳೆ” ಎನ್ನುತ್ತಾನೆ. ಆಗ ಯಮರಾಯನ ಮಡದಿಯರು,. “ನಮ್ಮನ್ನು ಬಯ್ಯುವವರು ನಮ್ಮ ಮುಂದೆ ಬಂದರೆ ಅವರ ಮುಂದಲೆ ಹಿಡಿದು ಎಳೆಯುತ್ತಿದ್ದೇವು. ನಾವು ಕೂಡ್ರುವ ಸಾಲು ಮಂಚಕ್ಕೆ ಅವರನ್ನು ಬಡಿಯುತ್ತಿದ್ದೇವು” ಎನ್ನುತ್ತಾರೆ. ಅವನ ಮಾತಿಗೆ ಯಮರಾಯ ನಕ್ಕು, ಕಣ್ಸನ್ನೆಯಲ್ಲಿ ಸಾವಿತ್ರಿಯನ್ನು ಕರೆದು, “ಎಲೇ ಹೆಣ್ಣೆ, ನೀನು ಗೋಕರ್ಣಕ್ಕೆ ಹೋಗು, ಗುಡಿಸಲನ್ನು ಕಟ್ಟಿಕೋ, ನಿನ್ನ ಕಾಜಿನ ಬಳೆಯನ್ನು ಒಡೆದುಕೋ, ಪಟ್ಟೆಯನ್ನು ಬಿಡು, ದಟ್ಟಿಯನ್ನು ಉಡು, ನೀನು ಹಚ್ಚಿದ ಶ್ರೀಗಂಧ ವನ್ನು ಅಳಿಸಿ ಹಾಕು. ನಿನ್ನ ಗಂಡ ಕಾಡಿನಲ್ಲಿ ಸತ್ತುಹೋದನು” ಎನ್ನುತ್ತಾನೆ. ಈ ಮಾತು ಕೇಳಿ ಸಾವಿತ್ರಿ, “ಈ ಮಾತನ್ನು ನಿನ್ನ ಮಡದಿಯರಿಗೆ ಹೇಳಿಕೊಡು” ಎಂದು ಸಿಡಿನುಡಿಯುತ್ತಾಳೆ. ಅವನ ದಿಟ್ಟತನದ ಮಾತು ಕೇಳಿ, ಯಮರಾಯನ ಹೆಂಡಿರು, “ನಿಮಗೆ ಹೆದರದೆ ಈ ನಾರಿ ನಮಗಂಜುವಳೆ?” ಎಂದು ತಲೆತಗ್ಗಿಸಿ ತಮ್ಮರಮನೆ ಮಾಳಿಗೆ ಸೇರುತ್ತಾರೆ.

ಯಮರಾಯ ಸಾವಿತ್ರಿಗೆ ಅಮೃತ ಗಿಂಡಿಯನ್ನು ಕೊಡುತ್ತಾನೆ. ಸಾವಿತ್ರಿ ಅದನ್ನು ತೆಗೆದುಕೊಡು ಅಲ್ಲಿಂದ ಹಿಂದಿರುಗುತ್ತಾಳೆ. ಬರುವಾಗ ಯಮನ ಕೊಂಡದಲ್ಲಿ ಮಿಡುಕಾಡುತ್ತಿರುವವರನ್ನು ನೋಡಿ, ಕರುಣೆ ಮೂಡಿ, ಸಾವಿತ್ರಿ ಮೇಲಿಷ್ಟು ಅಮೃತವನ್ನು ಚಿಮುಕಿಸುವಳು. ಅವರೆಲ್ಲ ಸಾವಿತ್ರಿಯ ಬೆನ್ನು ಹತ್ತಿ ಬರುತ್ತಾರೆ. ಇದನ್ನು ನೋಡಿದ ಯಮರಾಯ ತನ್ನ ಪಟ್ಟಣ ಹಾಳಾಗುವುದೆಂದು ಗಾಬರಿಗೊಳ್ಳುತ್ತಾನೆ. ಸಾವಿತ್ರಿಯೆಡೆ ಬಂದು ಅವಳಿಗೆ ಕೊಟ್ಟ ಅಮೃತ ಗಿಂಡಿ, ಕಸಿಯುತ್ತಾನೆ. ಆಗ ಸಾವಿತ್ರಿ ತನ್ನ ಸೆಳ್ಳುಗುರಲ್ಲಿಒಂದು ಹನಿ ಅಮೃತವನ್ನು ಅಡಗಿಸಿಕೊಂಡು, ಸತ್ಯವಾನನಿದ್ದಲ್ಲಿ ಬರುತ್ತಾಳೆ. ಅವನ ಮೇಲೆ ಮುಚ್ಚಿದ ಸೊಪ್ಪನ್ನು ಬದಿಗೆ ಸರಿಸಿ, ಸತ್ಯವಾನನ ಮೇಲೆ ತನ್ನ ಸೆಳ್ಳೂಗುರಿನಲ್ಲಿ ಅಡಗಿಸಿ ತಂದ ಅಮೃತವನ್ನು ಸಿಂಪಡಿಸುತ್ತಾಳೆ. ಸತ್ಯವಾನ ಮೈಮುರಿದದ್ದು ಕುಳಿತುಕೊಳ್ಳುತ್ತಾನೆ.

ಮಹಾಭಾರತದ ಅರಣ್ಯ ಪರ್ವತದಲ್ಲಿ ಬರುವ ಸಾವಿತ್ರಿ ಸತ್ಯವಾನರ ಕಥೆಯ ಉತ್ತರ ಭಾಗ ಮಾತ್ರಜಾನಪದ ಮನೋಧರ್ಮಕ್ಕನುಗುಣವಾಗಿ ಹಕೆಲವು ಹೊಸ ಅಶಯಗಳೊಂದಿಗೆ ಈ ಹಾಡಿನಲ್ಲಿ ಉಕ್ತವಾಗಿದೆ.  ಸಾವಿತ್ರಿಯ ಪತಿ ಪ್ರೇಮ, ಅತ್ತೇ ಮಾವಂದಿರಲ್ಲಿಯ ನಿಷ್ಠೆ ಮುಂತಾದುವೆಲ್ಲ ಹಾಡಿನಲ್ಲಿ ಉಕ್ತವಾಗಿದೆ. ಸಾವಿತ್ರಿಯ ದಿಟ್ಟತನವನ್ನು ತೋರ್ಪಡಿಸುವ ಯಮರಾಯನ ಮಡದಿಯರ ಮುಂದೆ ಅವಳು ಕೊಡುವ ಉತ್ತರವಾಗಲಿ ಅವಳ ಭೂತಾನುಕಂಪೆಯನ್ನು ಸಾದರ ಪಡಿಸುವ-ಯಮರಾಯನ ಕುಂಡೇದಲ್ಲಿಯ ಪಾಪಿಗಳನ್ನು ಬದುಕಿಸುವ ಘಟನೆಯಾಗಲಿ ಮೂಲ ಭಾರತದಲ್ಲಿ ಇಲ್ಲ. ಜಾನಪದರು ಮಾಡಿಒಂಡು ಈ ಹೊಸ ಬದಲಾವಣೆಗಳು ಸಾವಿತ್ರಿ ಇಲ್ಲವೆ ಯಮನ ವ್ಯಕ್ತಿತ್ವದ ಘನತೆಯನ್ನು ಪೋಷಿಸುವ ಘಟನೆಗಳಾಗಿ ಬರುವುದಿಲ್ಲ.ಯಮನ ಕುಂಡದಲ್ಲಿಯಪಾಪಿಗಳ ಮೇಲೆ ಕರುಣೆಯನ್ನು ತೋರಿಸಲು ಹೊರಟ ಸಾವಿತ್ರಿ, ತನ್ನ ಮೂಲ ಉದ್ದೇಶವನ್ನು ಮರೆತು, ಬೇರಡೆ ಗಮನ ಹರಿಸಿ, ತನ್ನ ಪತಿಯನ್ನು ಬದುಕಿಸುವಲ್ಲಿ ವಿಲಂಬಿಸುವುದು ವಿಚಿತ್ರವಾಗಿ ಕಾಣುತ್ತದೆ.  ಯಮರಾಯನ ಕಣ್ಣು ತಪ್ಪಿಸಿ , ಅಮೃತವನ್ನು ಗಂಡನಿಗಾಗಿ ಸೆಳ್ಳುಗುರಿನಲ್ಲಿ ಕದ್ದಿಟ್ಟು ಕೊಳ್ಳುವುದು, ಸಾವಿತ್ರಿಯ ಹಿರಿಯ ವ್ಯಕ್ತಿತ್ವಕ್ಕೆ ಶೋಭಿಸುವುದಿಲ್ಲ. ಸಾವಿತ್ರಿಗೆ ಕೊಟ್ಟ ಅಮೃತ ಗಿಂಡಿಯನ್ನು ಯಮರಾಯ ಕಸಿದು, ಪುನಃ ತನ್ನಲ್ಲಿಟ್ಟುಕೊಳ್ಳುವುದು ಯಮರಾಯನ ಘನತೆಗೆ ಒಪ್ಪುವುದಿಲ್ಲ. ಒಟ್ಟಿನಲ್ಲಿ ಸಾವಿತ್ರಿ  ಹಾಡಿನ ಮಾರ್ಪಾಡುಗಳು ಸಾವಿತ್ರಿಯ ಇಲ್ಲವೇ ಯಮರಾಯನ ಘನತೆಯನ್ನು ಹೆಚ್ಚಿಸದೇ ಅವರ ವ್ಯಕ್ತಿತ್ವಕ್ಕೆ ಎಳೆದ ಗರಿ ಗೆರೆಗಳಾಗಿವೆಯೆಂದೇ ಹೇಳಬೇಕಾಗುತ್ತದೆ.

ಇಲ್ಲಿ ನಿರೂಪಿಸಲಾದ ಗಾಮೊಕ್ಕಲ ಮಹಾಭಾರತ ಕಥೆಗಳ ಸ್ವರೂಪವನ್ನು  ನೋಡಿದರೆ, ಇವು ವ್ಯಾಸ ಭಾರತದಿಂದ ಭಿನ್ನವಾಗಿರುವ ಇನ್ನೊಂದು ಸಂಪ್ರದಾಯಕ್ಕೆ ಸೇರಿದ ಮಹಾಭಾರತದಿಂದ ಪ್ರೇರಣೆ ಪೋಷಣೆಗಳನ್ನು ಪಡೆದಂತಿವೆ.  ಇಲ್ಲಿ ಮಹಾಭಾರತದ ಪಾತ್ರಗಳು ತಮ್ಮ ಮೂಲ ಗುಣಧರ್ಮಗಳನ್ನು ಕಳೆದು ಕೊಂಡು ಬೇರೆಯ ಸ್ವರೂಪದಲ್ಲಿಯೇ ನಿಲ್ಲುತ್ತವೆ. ಮಹಾಭಾರತದ ನಾಯಕ ಮಣಿಯಾದ ಶ್ರೀ ಕೃಷ್ಣ, ಇಲ್ಲಿ ನಾರಾಯಣದೇವನೆಂಬ ಹೆಸರಿನಲ್ಲಿ ಕುತಂತ್ರಿಯೂ ಕಠೋರಮತಿಯೂ ಆಗಿ ಗೋಚರಿಸುತ್ತಾನೆ. ದುರ್ಯೊಧನನ ದುಷ್ಟ ಕೂಟದಲ್ಲೊಬ್ಬನಾದ ಕರ್ಣನು, ಧರ್ಮ ಬೀರುವೂ, ಸಾತ್ವಿಕನೂ, ಸತೀಧರ್ಮ ರಕ್ಷಕನೂ ಆಗಿ ಇಲ್ಲಿ ಮಾರ್ಪಾಡಾಗಿದ್ದಾನೆ. ಮಹಾಭಾರತದ ಖಲ ಪಾತ್ರಗಳಾದ ಕರ್ಣಾದಿ ಗಳ ಉದಾತ್ತೀಕರಣಕ್ಕೆ ಕನ್ನಡ ಕವಿಗಳು ಕವಿಗಳು ಜಾನಪದಿಂದಲೂ ಪ್ರೇರಣೆ ಪಡೆದಿರಬಹುದೇ?

ಮಹಾಭಾರತದಲ್ಲಿಯ ಅನೇಕ ಪಾತ್ರಗಳ ಹೆಸರು ಜಾನಪದ ಜಾಯಮಾನಕ್ಕನುಗುಣವಾಗಿ, ಇಲ್ಲಿ ತದ್ಭವವಾಗಿವೆ. ಮಹಾಭಾರತದಲ್ಲಿಲ್ಲದ ಕೆಲವು ಹೊಸ ಪಾತ್ರಗಳು ಗಾಮೊಕ್ಕಲ ಭಾರದಲ್ಲಿ ಸೇರ್ಪಡೆಯಾಗಿವೆ. ಕೆಲವೆಡೆ ಒಬ್ಬ್ ಹೆಸರನ್ನು ಇನ್ನೊಬ್ಬರಿಗೆ ವರ್ಗಾಯಿಸಲಾಗಿದೆ. ಕೆಲವರ ಹೆಂಡಿರ ಹೆಸರೂ ಬದಲಾಗಿ ಹೋಗಿವೆ. ಜಾನಪದರು ವ್ಯಕ್ತಿಯ ಹೆಸರಿನ ಕಡೆಗೆ ಗಮನವೀಯದೆ ಕಥೆಯ ನಿಟ್ಟೋಟದ ಕಡಗೆ ಗಮನ ಹರಿಸಿದಂತಿದೆ.

ಈ ಒಕ್ಕಲು ಮಕ್ಕಳು ಮಹಾಭಾರತದ ಯಾವುದೋ ಘಟನೆಯನ್ನು ತೆಗೆದುಕೊಂಡು, ತಮ್ಮ ಮನೋಧರ್ಮಕ್ಕನುಗುಣವಾಗಿ, ಅದರಲ್ಲಿ ಹೊಸ ಆಶಯಗಳನ್ನು ಸೇರಿಸಿ, ತಮ್ಮಲ್ಲಿಯ ಜನಪ್ರೀಯ ರೂಢಿ, ನಂಬಿಕೆ. ಸಂಪ್ರದಾಯಗಳನ್ನೆಲ್ಲ ಮೇಳವಿಸಿ, ಜನಸಾಮಾನ್ಯರಿಗೆ ಸುಲಭ ಗ್ರಾಹ್ಯವಾಗುವ ರೀತಿಯಲ್ಲಿ ಕಥೆ ಕಟ್ಟಿಯೋ ಪರಂಪರಾಗತವಾಗಿ ಬಂದ ಜಾನಪದ ಮೂಲಕಥೆಯನ್ನೇ ತಮಗನುಕೂಲ ಕಂಡ ರೀತಿಯಲ್ಲಿ ಮಾರ್ಪಡಿಸಿಕೊಂಡು ಹಾಡಿಯೇ ಜನಸಾಮಾನ್ಯರನ್ನು ರಂಜಿಸಿದಂತಿದೆ,.

ಇಲ್ಲಿಯ ಕಥೆಗಳಲ್ಲಿ ಮೇಲಿಂದ ಮೇಲೆ ವರ್ಣನಾ ಭಾಗಗಳು ಪುನರಾವರ್ತನೆಯಾಗುತ್ತವೆ. ಸ್ನಾನ, ಉಡಿಗೆ, ತೊಡಿಗೆ, ವಿವಾಹ ಕಾರ್ಯ ಮುಂತಾದವುಗಳಿಗೆ ಸಂಬಂಧಿಸಿದ ವರ್ಣನೆಗಳನ್ನು ಇದಕ್ಕೆ ನಿದರ್ಶನಗಳಾಗಿ ನಮೂದಿಸಬಹುದು. ಪುನರುಕ್ತಿಗೊಂಡ ಈ ವರ್ಣನೆಗಳು ಘಟನೆಗಳ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಚಿತ್ರವತ್ತಾಗಿಸುವಲ್ಲಿ ಸಾಫಲ್ಯ ಪಡೆಯುತ್ತವೆ. ಆದರೂ ಕೆಲವೊಮ್ಮೆ ಪುನರಾವರ್ತಿ ಬೇಸರಿಕೆ ಹಿಡಿಸುತ್ತವೆ. ಹೀಗಿದ್ದರೂ ಈ ಪುನರಾವೃತ್ತಿ ಜಾನಪದರಿಗೆ ಅನಿವಾರ್ಯವೆನ್ನುವ ರೀತಿಯಲ್ಲಿ ಮೇಲಿಂದ ಮೇಲೆ ಬಂದೇ ಬರುತ್ತದೆ.  ಯಾವುದೋ ಜನಪ್ರೀಯ ನುಡಿಗಟ್ಟು ಇಲ್ಲವೆ ಜನಪ್ರೀಯ ಸಂಪ್ರದಾಯ. ಜನತೆಯ ಸ್ಮೃತಿ ಪಟಲದಿಂದ ಅಳಿಸಿಹೋಗಬಾರದೆಂಬ ಹೇತುವಿನಿಂದ ಇಂತಹ ಪುನರಾವರ್ತನೆಗಳನ್ನು ಜಾನಪದರು ಬೇಕೆಂತ್ತಲೇ ಉಳಿಸಿಕೊಂಡು ಬಂದರು. ಅವನ್ನು ಸಹಿಸಿ ಸಂತೋಷ ಪಟ್ಟರು. ಇದರಿಂದಾಗಿ ಈ ಜನಪ್ರೀಯ ಸಂಪ್ರದಾಯಗಳು ಜನಮನದಲ್ಲಿ ಭದ್ರವಾಗಿ ಬೇರು ಬಿಟ್ಟವು.

ಗಾಮೋಕ್ಕಲ ಮಹಾಭಾರತದಲ್ಲಿ ವ್ಯಾಸ ಭಾರತದಲ್ಲಿಯ ಯುದ್ಧ ಹೋರಾಟಗಳ ಭೀಕರ ವರ್ಣನೆಯಿಲ್ಲ. ವೀರರ ಪೌರುಷದ ಚೀತ್ಕಾರ, ಖಡ್ಗಗಳ ಠಣತ್ಕರ, ಗಾಯಾಳುಗಳು, ರೋಧನವಿಲ್ಲ,. ವೇದ, ವೇದಾಂತ ತತ್ವಗಳ ಮಣ ಭಾರವಿಲ್ಲ. ಇಲ್ಲಿ ಕಾಣುವುದು ಜಾನಪದರ ರೂಢಿ ಸಂಪ್ರದಾಯಗಳ ಪ್ರದರ್ಶನ ಶಾಲೆಯನ್ನು ಅವರ ಕೌಟುಂಬಿಕ ಜೀವನದ ಸುಂದರ ಕಳುವನ್ನು: ಮಾನವ ಸಹಜವಾದ ರಾಗ ದ್ವೇಷಗಳ ತುಮುಲವನ್ನು , ಆದರೆ ತುಮುಲದಲ್ಲಿ ರಕ್ತಪಾತ ತೀರ ಕಡಿಮೆ.

) ಗ್ರಂಥದಲ್ಲಿ ಒಡಮೂಡಿದ ಸಂಪ್ರದಾಯ ನಂಬಿಕೆಗಳು:          

ಉತ್ತರ ಕನ್ನಡ ಜಿಲ್ಹೆಯ ಶಿಷ್ಯ ಸಂಪ್ರದಾಯಗಳಾದ ಕೈಕಾಲು ಮುಖ ತೊಳೆದು, ಆಸರೆ “ಕುಡಿಯುವುದು, ವೀಳ್ಯದೆಲೆ ಮೆಲ್ಲುವುದು, ಮಿಂದು ಮುಡಿವುಟ್ಟು ದೇವತಾರ್ಚನೆ ಮಾಡುವುದು, ಊಟ ಮಾಡಿ ವೀಳ್ಯ ಹಾಕುವುದು, ಗಂಡಿನೂಟ ವಾಧ ಮೇಲೆಯೇ ಹೆಣ್ಣು ಊಟ ಮಾಡಿ ಎಂಜಲು ಮೈಲಿಗೆ ತೆಗೆಯುವುದು. ಗಂಡ ಮುಂದೆ ಹೆಂಡತಿ ಹಿಂದೆ ನಡೆಯುವುದು, ಸಹೋದರಿ ಮುಂದೆ ಸಹೋದರ ಹಿಂದೆ ನಡೆಯುವುದು ಮುಂತಾದವೆಲ್ಲ ಇಲ್ಲಿಯ ಹಾಡುಗಳಲ್ಲಿ ಉಕ್ತವಾಗಿವೆ.

ಸೋದರ ಮಾವನ ಮಗಳನ್ನು ಮದುವೆಯಾಗವುದು, ಇಲ್ಲಿ ಮಾಮೂಲಾಗಿ ನಡೆದು ಬಂದ ಆಚರಣೆ. ಸೋದರದ ಹೆಣ್ಣನ್ನು ಅಧಿಕಾರವಾಣಿಯಿಂದ ಕೆಳಿ ಕೊಡದಿದ್ದಲ್ಲಿ, ಬಲಾತ್ಕಾರವಾಗಿ ಪಡೆಯುವ, ಅಪಹರಿಸುವ ಪದ್ಧತಿ ಇದ್ದಿರಬೇಕು. ಮದುವೆಯ ಸಂಪ್ರದಾಯದಲ್ಲಿ  ಹೆಣ್ಣನ್ನು ಅಪಹರಿಸುವ ಚಡಂಗವು ಹಲವರಲ್ಲಿ ಬಳಕೆಯಿದ್ದುದನ್ನು ನಾವಿಲ್ಲಿ ನೆನೆಯಬಹುದು.

ಮದುವೆಯ ಕಾಲಕ್ಕೆ ಗಂಡಿಗೆ ಪನ್ನೆ ಮಾಡುವಂತೆ ಹೆಣ್ಣಿಗೂ ಪನ್ನೆ ಮಾಡುವ ರೂಢಿ ಪ್ರಚಲಿತವಿದ್ದಂತಿದೆ.

ಅಣ್ಣ ತಂದೆ ಮಡದಿಯ ಮೇಲೆ ಅರ್ಧ ಅಧಿಕಾರ ತಮ್ಮನಿಗೂ   ಇದ್ದ ಹಾಗಿದೆ. “ಹಿತ್ತಲ ಕಡೆಯ ಸವತೆಯ ಕಾಯಿಯ ಹೇಗೆ ನೆಟ್ಟವರಿಗೆ ಅರ್ಧ ನೆರೆಯವರಿಗೆವೋ ಹಾಗೆಯೇ ಅಣ್ಣ ತಂದ ಹೆಣ್ಣು ಅಣ್ಣನಿಗರ್ಧ ತಮ್ಮನಿಗರ್ಧ”. ಈ ಸಂಪ್ರದಾಯ ಇಂದಿಗೂ ಕೆಲವೆಡೆ ಹಾಲಕ್ಕಿ ಒಕ್ಕಲಿಗರಲ್ಲಿ ಕ್ವಚಿತ್ತಾಗಿ ರೂಢಿಯಲ್ಲಿದೆ. ಈ ಸಂಪ್ರದಾಯ ಹಿಂದಕ್ಕೆ ಗಾಮೊಕ್ಕಲಿಗರಲ್ಲಿಯೂ ಬಳಕೆಯಲ್ಲಿರಬೇಕು.

ಮೈದುನ ಅತ್ತಿಗೆಯನ್ನು ಮುಟ್ಟಲು ನಿಷೇಧವಿಲ್ಲ. ಆದರೆ ಭಾವನು ಮೈದುನಿಯನ್ನು ಮುಟ್ಟುವುದು ಮಾತ್ರ ನಿಶಿದ್ಧ ಕ್ರಮವಾಗಿತ್ತು. ವಧು-ವರರ ಹೆಸರು ಹೇಳುವ ರೂಢಿಯಿರಲಿಲ್ಲ. ಹಾಗೆ ಹೆಸರು  ಹೇಳಿದರೆ ಗಂಡನ ಆಯುಷ್ಯ ಕ್ಷೀಣಿಸುವುದೆಂಬ ನಂಬಿಕೆ ಬಲವತ್ತರವಾಗಿತ್ತು.

ಕೋಳಿ ಕೂಗಿದ ಮೇಲೆ ಹೆಂಡಿರ ಜೊತೆಯಲ್ಲಿ ಹಾಸಿಗೆಯ ಮೇಲೆ ಮಲಗುವುದು ನಿಷಿದ್ಧವಾಗಿತ್ತು.

ಗಂಡ ಸತ್ತ ಮೇಲೆ ಹೆಂಡತಿ ತನ್ನ ಮೈದುನನ್ನು ಮದುವೆಯಾಗುವ ಸಂಪ್ರದಾಯ ಹಿಂದಕ್ಕೆ ಬಳಕೆಯಲ್ಲಿದ್ದಂತಿದೆ. ಅಭಿಮನ್ಯು ಸತ್ತಾಗ ನಾರಾಯಣ ದೇವ ಸೀಗ್ರರನ್ನು ಕುಜರಿತು, “ನಿಮ್ಮವಿಧವೆ ಅತ್ತಿಗೆಯನ್ನು ವರಿಸುವಿರೇನು? ಎಂದು ಪ್ರಶ್ನಿಸಿದ ಸನ್ನಿವೇಶವನ್ನು ಇಲ್ಲಿ ನೆನೆಯಬೇಕು.

ಸತಿ  ಹೋಗುವ ಪದ್ದತಿಯ ಸುಳಿಯು ಇಲ್ಲಿಯಹಾಡಿನಲ್ಲಿದೆ. ಸತಿ ಹೋಗುವ ಹೆಣ್ಣು ಮುತ್ತೈದೆಯೆಂತೆ ಸಿಂಗರಿಕಸಿಕೊಂಡು, ಸಹಗಮನಕ್ಕೆ ಅಣಿಯಾಗುತ್ತಿದ್ದಳು. ಸಹಗಮನಕ್ಕೆ ಹೊರಡುವಾಗ,ಸತಿಗೆ, ಪ್ರೀಯವಾದ ವಸ್ತು ವಾಹನಾದಿಗಳನ್ನು ಒಯ್ಯುವ ವಾಡಿಕೆಯಿತ್ತು.

ಹಾಣೆಯಾಟ, ಸೋಡಿಯಟ, ಪಗಡೆಯಾಟಗಳು, ಜನಪ್ರೀಯ ಮನರಂಜನೆಯ ಆಟಗಳಾಗಿದ್ದವು. ಹೆಣ್ಣೂ ಗಂಡುಗಳೂ ಒಟ್ಟಿಗೆ ಕುಳಿತು ಪಗಡೆಯಾಡುವ ರೂಢಿಯಿತ್ತು. ಅನೇಕ ವೇಳೆ ಈ ಪಗಡೆಯಾಟದಲ್ಲಿ ಮೋಸ ವಂಚನೆಗಳು  ನಡೆದು ಪರಸ್ಪರ ತ್ವೇಷಕ್ಕೆ ಕಾರಣವಾಗುತ್ತಿತ್ತು.

ಗಿಳಿಗಳನ್ನು ಸಂದೇಶವಾಹಕಗಳಾಗಿ ಬಳಸಲಾಗುತ್ತಿತ್ತು. ಕೇದಬೆಯ ಗರಿಗಳ ಮೇಲೆ ಬರೆದು, ಗಿಳಿಗಳ ಮುಖಾಂತರ ಮುಟ್ಟಿಸುತ್ತಿದ್ದ ಸಂಗತಿ ಇಲ್ಲಿಯ ಕಥೆಗಳಲ್ಲಿ ಮೇಲಿಂದ ಮೆಲೆ ಬರುತ್ತದೆ.

ದೇವರನ್ನು ಅತ್ಯಂತ ನಿಕಟವರ್ತಿಯಾಗಿ ಈ ಜನ ಕಾಣಬಲ್ಲರು. ತಮ್ಮ ಅಭಿಷ್ಟೆ ನೆರವೇರಿದಾಗ ದೇವರನ್ನು ಹೊತ್ತು ಮೆರವಣಿಗೆ ಮಾಡಬಲ್ಲರು.ನೆರವೇರದಾಗ ಅವನನನ್ನು ಕಿತ್ತು ಸಮುದ್ರಕ್ಕೆ ಹಾಕುವ ಬೆದರಿಕೆಯನ್ನೂ ಈ ಜನಹಾಕಬಲ್ಲರು. ಅದರ ಈ ಬೆದರಿಕೆ ಕೇವಲ ತೊರಿಕೆಯ ಬೆದರಿಕೆ, ಪ್ರೀತಿಯ ಬೆದರಿಕೆ, ದುರ್ಯೊಧನ, “ಗಣ್ಯನಾಥನನ್ನು ಕುಟ್ಟುತ್ತೇವೆ. ಕಿತ್ತು ಸಮುದ್ರಕ್ಕೆ ಒಗೆಯುತ್ತೇನೆ ” ಎನ್ನುವಲ್ಲಿ ದೇವರ ವಿಷಯದಲ್ಲಿ ಜಾನಪದ ಮನೋಧರ್ಮ ವ್ಯಕ್ತವಾಗಿದೆ.

ಇಂದಿನ ವೈಜ್ಞಾನಿಕ ದೃಷ್ಟಿಗೆ ಕೇವಲ ಮೂಢನಂಬಿಕೆಗಳಾಗಿ ಅರ್ಥರಹಿತವಾಗಿ ಕಾಣುವ ಶಕುನ, ಸ್ವಪ್ನಗಳಲ್ಲಿ ವಿಶೇಷ ನಂಬಿಕೆ ಇಲ್ಲಿಯ ಕಥೆಗಳಲ್ಲಿ ವ್ಯಕ್ತವಾಗಿದೆ. ಈ ಜನ ಅವನ್ನು ನಂಬುತ್ತಿದ್ದರು. ಈ ಸ್ವಪ್ನ ಶಕುನಗಳು, ಮುಂದಾಗುವ ಶುಭವನ್ನೋ ಅಶುಬನ್ನೋ ಪೂರ್ವಭಾವಿಯಾಗಿ ತಿಳಿಸುವ ಸಾಧನೆಗಳೆಂದು ಇವರ ನಂಬಿಕೆ.

) ಕೊನೆ ಮಾತು:       

ಇಲ್ಲಿಯ ಪ್ರತಿಯೊಂದು ಕಥೆಯೂ ಸ್ವಯಂ ಪೂರ್ಣವಾಗಿದೆ. ಸ್ವತಂತ್ರವಾಗಿದೆ. ಈ ಕಥಾಪುಂಜದಲ್ಲಿಯ ಅನೇಕ ಕಥೆಗಳು ಖಂಡಕಾವ್ಯ ವ್ಯಾಪ್ತಿಯನ್ನು ಪಡೆದಿವೆ.  ಮಹಾಭಾರತವು ಕೂಡ ಇದೇ ಬಗೆಯಲ್ಲಿ ಅನೇಕ  ಖಂಡ ಕಾವ್ಯಗಳ ಪುಂಜವಾಗಿದ್ದು, ಶತಮಾನಗುರುಳಿದ ಮೇಲೆ ಮಹಾಕವಿ ಹಿಂದೆ ಊಹಿಸಲಾಗಿದೆ. ಇಂದು ಜಾನಪದ ಪ್ರಚಲಿತವಿರುವ ಈ ಕಥಾಪುಂಜಗಳೆಲ್ಲ ಒಂದೆಡೆ ಸಂಕಲಿತವಾಗಿ ಮುಂದೊಬ್ಬ ಪ್ರತಿಭಾಶಾಲಿ ಕವಿಬ್ರಹ್ಮನ ಕೈಯಲ್ಲಿ ವಿನೂತನ ಮಹಾಕೃತಿಯಾಗಿ ಪಡಿಮೂಡ ಬೇಕಾದ ಕಾಲ ಬರಬೇಕಾಗಿದೆ. ಕನ್ನಡ ನಾಡಿನ ಜಾನಪದರೆದೆಯಲ್ಲಿ ರಾರಾಜಿಸುವ ಈ ಖಂಡ ಕಥೆಗಳೆಲ್ಲ ಕನ್ನಡ ವ್ಯಾಸನೊಬ್ಬನ ಮಹಾ ಪ್ರತಿಭೆಯಲ್ಲಿ ಪುನರ್ ಸೃಷ್ಟಿಗೊಂಡು, ಅಖಂಡ ಜಾನಪದ ಭಾರತವೊಂದು ಮೈದಾಳಿ ಬರಬೇಕಾಗಿದೆ. ಆ ನಿಟ್ಟಿನಲ್ಲಿ ನನ್ನ ಈ ಚಿಕ್ಕಕೃತಿ ನೆರವಾಗಲೆಂದು ಹಾರೈಸುತ್ತೇನೆ.

ಡಾ|| ಎನ್.ಆರ್.ನಾಯಕ್
ಶ್ರೀಧರ್ಮಸ್ಥಳ  ಮಂಜುನಾಥೇಶ್ವರ
ಕಾಲೇಜು ಹೊನ್ನಾವರ .ಉ.ಕ.
೩-೮-೧೯೮೧.