ಕವಿಯ ಜೀವನ, ಕೃತಿ ಕಾಲ:

ಗಂಗಿಗೌರೀ ಸಂವಾದವು ಒಂದು ಸುಂದರ ಹಾಡುಗಬ್ಬ. ಇದನ್ನು ರಚಿಸಿದ ಕವಿ ಶಿವಗಂಗೆಯ ಹಿರಿಯ ಸಿಂಹಾಸನದ ಗುರುಸಂಗಮೇಶ್ವರನ ಕರಕಮಲಸಂಜಾತನಾದ ತರುಳಚರಪತಿ. ಈ ಮಾತನ್ನು ಕವಿ ತನ್ನ ಕೃತಿಯ ಕೊನೆಯಲ್ಲಿ ಸ್ಪಷ್ಟಗೊಳಿಸಿದ್ದಾನೆ.

ಧರೆಗೆ ಕೈಲಾಸವೆನಿಪ ಶಿವಗಂಗೆ ನವರತ್ನ ಖಚಿತವಾದ
ಹಿರಿಯ ಸಿಂಹಾಸನದ ಗುರುಸಂಗಮೇಶ್ವರನ ಕರಕಮಲದಲ್ಲಿ ಜನಿಸಿದ
ಗಿರಿಜೆಗಂಗೆಯ ಜಗಳವ ಕೇಳಲೆಂದೊರೆದೆ ಶಿವಶರಣಜನಕೆ
ಗುರುಚರಣಕಮಲಸೇವಾನುಸೇವಕನಾದ ತರುಳಚರಪತಿ ಪೇಳ್ದನು || ೧

ಧರೆಗೆ ಕೈಲಾಸವೆನಿಸಿ ಮೆರೆಯುತ್ತಿದೆ ಶಿವಗಂಗೆ. ಅದು ಮೊದಲಿನಿಂದಲೂ ಶೈವರ ಪವಿತ್ರ ಸ್ಥಳ. ಶಿವನು ಗಂಗೆಯನ್ನು ಬರಮಾಡಿಕೊಂಡು ಅಲ್ಲಿಯೇ ನೆಲೆಸಿರುವದರಿಂದ ಆ ಸ್ಥಳವನ್ನು ಶಿವಗಂಗೆಯೆಂದು ಕರೆಯಲಾಗಿದೆ. ಶಿವಗಂಗೆಯ ಮಠ ವಿರಕ್ತ ಮಠ. ಅಲ್ಲಿರುವ ಪೀಠ ನವರತ್ನ ಖಚಿತವಾಗಿದ್ದು ಪೂರ್ವಕಾಲದಿಂದಲೂ ಹೆಸರು ವಾಸಿಯಾಗಿದೆ. ಅದು ಗುರುಶಿಷ್ಯ ಪರಂಪರೆಯನ್ನು ಪಾಲಿಸಿಕೊಂಡು ಬಂದಿದೆ. ಈ ಪರಂಪರೆಯಲ್ಲಿ ಗುರುಸಂಗಮೇಶ್ವರ ಬಹು  ಪ್ರಖ್ಯಾತಿ ಪಡೆದವರು. ಅವರು ಈ ಪೀಠ ಪರಂಪರೆಯಲ್ಲಿ ಎಷ್ಟನೆಯವರೆಂಬುದು ಸಧ್ಯಕ್ಕೆ ತಿಳಿಯದು; ಅವರ ಮಹಿಮಾತಿಶಯವೂ ಹೊಳೆಯದು. ಆದರೆ ಆ ಗುರುವಿನಲ್ಲಿ ತರುಳಚರಪತಿಗೆ ಮಹಾಭಕ್ತಿ. ಈತನು ಕೃತಿಯುದ್ಧಕ್ಕೂ ಸಂದರ್ಭಾನುಸಾರವಾಗಿ ಗುರುಸಂಗಮೇಶ್ವರನನ್ನು ಭಯಭಕ್ತಿಯಿಂದ ಸ್ಮರಿಸಿದ್ದಾನೆ. ಇದಲ್ಲದೆ ಶ್ರೀ ಬಸವಣ್ಣನವರ ಗುರುವೂ ಸಂಗಮೇಶ್ವರ. ಬಸವಣ್ಣನೇ ಈ ಕಥೆಯನ್ನು ಕೇಳುವವ. ಕಥೆ ಹೇಳತಕ್ಕವಳು ಅವನ ಮಡದಿ ನೀಲಾಂಬಿಕೆ. ಹೀಗಾಗಿ ಸಂಗಮೇಶ್ವರನ ಹೆಸರು ಕೃತಿಯಲ್ಲಿ ಮೇಲಿಂದ ಮೇಲೆ ಬರುವುದಕ್ಕೆ ಮತ್ತೊಂದು ಕಾರಣವಾಗಿದೆ. ಈ ಕೃತಿಯ ಕರ್ತೃ, ತರುಳಚರಪತಿ ಶಿವಶರಣರು ಈ ಕೃತಿಯನ್ನು ಕೇಳಲೆಂದು ಬರೆದಿದ್ದಾನೆ. ಈ ಕವಿಯ ಆಳ ನಿಶ್ಚಿತವಾಗಿ ತಿಳಿಯದು. ಕವಿಚರಿತ್ರೆ ಬರೆದ ಆರ್. ನರಸಿಂಹಾಚಾರರು ಈ ಕವಿಯ ಕಾಲವನ್ನು ಕ್ರಿ.ಶ. ಸು. ೧೭೦೦ ಎಂದು ಊಹಿಸಿದ್ದಾರೆ. ಅದನ್ನೇ ಸಧ್ಯಕ್ಕೆ ಇಟ್ಟುಕೊಳ್ಳಬಹುದು.

ಜನಪದ ಸಾಹಿತ್ಯದಲ್ಲಿ ಗಂಗಿಗೌರಿಯರ ಸಂವಾದವು ಹಲವಾರು ರೂಪದಲ್ಲಿ ತಲೆದೋರಿದೆ. ತ್ರಿಪದಿ, ಹಾಡು, ಕೋಲಾಟ, ದುಂದುಮೆ, ಡೊಳ್ಳೀನಪದ – ಹೀಗೆ ವಿವಿಧ ರೂಪತಾಳಿ ಬಂದಿರುವುದು ಈ ಕಥೆಯ ಮೇಲ್ಮೆಯನ್ನೂ ಜನಾನುರಾಗವನ್ನೂ ಸೂಚಿಸುತ್ತದೆ. ಗಂಗಿಗೌರೀ ಸಂವಾದ ದಂತಹ ಜನಪದ ಮಹಾಕಾವ್ಯಕ್ಕೂ ವಸ್ತುವಾಗುವ ಭಾಗ್ಯ ಪಡೆದಿದೆ. ಶ್ರುತಿ ವೇದ ಶಾಸ್ತ್ರಗಳಲ್ಲಿ ಈ ಕಥೆಯನ್ನು ಸಂದರ್ಭಾನುಸಾರವಾಗಿ ಎತ್ತಿಕೊಂಡು ಸಮರ್ಥಿಸಲಾಗಿದೆ. ಬ್ರಹ್ಮಾಂಡ ಪುರಾಣದಲ್ಲಂತೂ ಈ ಕಥೆಗೆ ಮಹಾಪೂರವೇ ಬಂದಿದೆ. ಇದನ್ನೆಲ್ಲ ಗಮನಿಸಿದರೆ ಗಂಗಿ ಗೌರಿಯರ ಸಂವಾದಕಥೆ ಪಂಡಿತಪಾಮರರೆಲ್ಲರಿಗೂ ಅಚ್ಚುಮೆಚ್ಚಿನದೆಂಬುದು ಸ್ಪಷ್ಟವಾಗುತ್ತದೆ.

ಶಿವನು ಗಂಗಿಗೌರಿಯರ ಜಗಳವನ್ನು ಹರ್ಷದಿಂದ ಕೇಳಿಬಲ್ಲ, ನೋಡಿ ಬಲ್ಲ. ಅವರ ಜಗಳಕ್ಕೆ ಕಾರಣನಾಗಿ, ಅವರ ಮಧ್ಯದಲ್ಲಿಯೇ ನಿಂತು ಸವತಿಮತ್ಸರದ ಆಗು ಹೋಗುಗಳನ್ನು, ಸಿಹಿಕಹಿಗಳನ್ನು ಅನುಭವಿಸಿಯೂ ಬಲ್ಲ. ಶಿವಗಂಗೆಯಲ್ಲಿ ನೆಲೆನಿಂತ ಶಿವನು ಈ ಜಗಳದ ಕಥೆಯ ಸ್ವಾರಸ್ಯವನ್ನು ಯತಿಮಹಾಮುನಿಗಳಿಗೆ ತಿಳಿಸಿ ಹೇಳಿದನಂತೆ. ಅಂದಿನಿಂದ ಈ ಕಥೆ ಸುತ್ತೆಲ್ಲ ಪ್ರಸಾರಗೊಂಡಿತು. ಹನ್ನೆರಡನೆಯ ಶತಮಾನದಲ್ಲಿ ಬಾಳಿದ ಶ್ರೀ ಬಸವಣ್ಣನವರು ಗಂಗಿಗೌರಿಯರ ಸಂವಾದವನ್ನು ಕೇಳಲು ಮನಸ್ಸು ಮಾಡಿದರಂತೆ. ಬಸವಣ್ಣನವರಿಗೂ ಇಬ್ಬರು ಹೆಂಡಿರು – ನೀಲಾಂಬಿಕೆ, ಗಂಗಾಂಭಿಕೆ. ಈ ಸವತಿಮಕ್ಕಳಲ್ಲಿ ಮತ್ಸರ ತೋರಿದ್ದರೂ ತೋರಿರಬಹುದು, ಗಂಗಾಂಬಿಕೆ ಆ ಮತ್ಸರದ ಬೀಜವನ್ನು ಊರಿದಳೋ ಏನೋ? ನೀಲಾಂಬಿಕೆ ತಿಳಿದವಳು. ಗಂಗಿಗೌರಿಯರ ಜಗಳದ ಕಥೆಯನ್ನು ಶಿವನಿಗೆ ಹೇಳಿದುದು ಗಂಗಾಂಭಿಕೆಗೆ ತಿಳಿಯಲೆಂದೂ ಇರಬಹುದಾಗಿದೆ. ಇಲ್ಲವೆ ಶಿವನಲ್ಲಿ ಭಕ್ತಿಯನ್ನಿಟ್ಟಿ ಬಸವಣ್ಣನು ಭಕ್ತಿಯ ಕಥೆಯನ್ನು ಕೇಳಿ, ತನ್ನ ಭಕ್ತಿ ಭಂಡಾರವನ್ನು ತುಂಬಿಕೊಳ್ಳಲೆಂದು ಮನಸ್ಸು ಮಾಡಿರುವುದೂ ಸಹಜವಾಗಿದೆ. ಅದೇನೆ ಇರಲಿ; ಈ ಕಥೆ ಜೋಡುಹೆಂಡಿರನ್ನು ಮದುವೆಯಾದವರ ಮನೆಯಲ್ಲಿ ಪ್ರತಿನಿತ್ಯ ನಡೆಯಬಹುದಾದ ಕಥೆ. ಸ್ವಾರಸ್ಯಪೂರ್ಣವಾದ ಕಥೆ. ಅದು ಸರ್ವರಿಗೂ ತಿಳಿಯಲೆಂದು ತರುಳಚರಪತಿ ಹಾಡುಗಬ್ಬದ ರೂಪದಲ್ಲಿ ಹೃದಯಂಗಮವಾಗಿ ಬಿತ್ತರಿಸಿದ್ದಾನೆ.

ಕಥಾಸಾರ

ಕವಿ, ತರುಳಚರಪತಿ ಇಡೀ ಕಾವ್ಯದ ಸಾರವನ್ನು ಈ ಕೆಳಗಿನ ಪದ್ಯಗಳಲ್ಲಿ ಬಿತ್ತರಿಸಿದ್ದಾನೆ :

ಅಂಬರದ ಗಂಗೆಯನು ಬೊಂಬೆರೂಪನೆ ಮಾಡಿ
ಅಂಬಿಗ ಶರಣನಾತ್ಮಜಳೆನಿಸುವ
ಕುಂಭಿನಿಗೆ ಚೋದ್ಯವೆನಿಸುವ ಶಿವ ಗಂಗೆಯನು
ಹಂಬಲಿಸಿ ತಂದೆ ಹರುಷಾಬ್ದಿ ಕಥೆಯ |
ಆಕಾಶಗಂಗೆಯನು ಏಕರೂಪನೆ ಮಾಡಿ
ಸಾಕಾರ ರತ್ನ ಗಿರಿಯೊಳಿರಿಸುತ
ಓಂಕಾರರೂಪ ಶಿವ ಜೋಗಿರೂಪನೆ ತಾಳಿ ಬೇಕೆಂದು ತಂದೆ ಶ್ರೀಗಂಗೆ ಕಥೆಯ ||

ಕೈಲಾಸದಲ್ಲಿ ಒಡ್ಡೋಲಗ ನೆರೆದಿದೆ. ಶಿವನು ಸಭೆಯ ಮಧ್ಯದಲ್ಲಿ ವಿರಾಜಮಾನನಾಗಿದ್ದಾನೆ. ಅವನ ತೊಡೆಯ ಮೇಲೆ ಗೌರಿ ಮಂಡಿಸಿದ್ದಾಳೆ. ದೇವಾನು ದೇವತೆಗಳಿಂದ ಸಭೆ ಕಿಕ್ಕಿರಿದು ತುಂಬಿದೆ. ಸಭೆಯ ಕಾರ್ಯಕಲಾಪಗಳು ನಿತ್ಯದಂತೆ ನಡೆಯುತ್ತವೆ. ಶಿವನಿಗೆ ಒಮ್ಮಿಂದೊಮ್ಮಲೆ ಏನೋ, ಯಾವುದೋ ನೆನಪಾಗುತ್ತದೆ. ಗಿರಿಜೆಗೆ ಮಕ್ಕಳಾಗಲಿಲ್ಲವೆಂದು ಮರುಗಿ ಅವಳನ್ನು ಅರಮನೆಗೆ ಕಳಿಸುವನು. ಮಕ್ಕಳಾಗುವುದು ಹೇಗೆ? ಮತ್ತೊಬ್ಬ ಮಡದಿಯನ್ನು ತಂದರೆ ಆ ಕೊರತೆ ಪೂರೈಸಬಹುದೆಂದು  ಯೋಚಿಸುವನು. ಕೂಡಲೇ ಸಭೆಯನ್ನು ವಿಸರ್ಜಿಸಿ,  ಬಲ್ಲಿದ ನಾರದನೊಬ್ಬನನ್ನೇ ಕರೆದುಕೊಂಡು, ಮನದ ಇಂಗಿತವನ್ನು ಯಾರಿಗೂ ತಿಳುಹದೆ ತ್ರಿಲೋಕ ಸಂಚಾರ ಕೈಕೊಳ್ಳುವನು. ಅಲಂಕಾರ ಮಾಡಿಕೊಂಡು ಜನವಶ್ಯ, ರಾಜವಶ್ಯಗಳೆಂಬ ಬೂದಿಯನ್ನು ಕೊನೆಯುಗುರಿನಲ್ಲಿ ಅಳವಡಿಸಿಕೊಂಡು ಶುಭ ಮುಹೂರ್ತದಲ್ಲಿ ಹೊರಪಯಣ ಮಾಡುವನು. ಶಿವ ಮತ್ತು ನಾರದರು ಈಗ ಧರಿಸಿದುದು ಅದೃಶ್ಯವೇಷ; ಅನ್ಯರು ಗುರುತಿಸದ ವೇಷ; ಮಲೆಯಾಳ ಜೋಗಿಗಳ ವೇಷ.

ಶಿವನ ಪಯಣ ಸುದೀರ್ಘವಾದುದು. ಅವರಿಬ್ಬರೂ ತಿಟ್ಟ ಹತ್ತಿ, ಬೆಟ್ಟ ಇಳಿಯುವರು. ಹದಿನಾಲ್ಕು ಲೋಕಗಳಲ್ಲಿರುವ ಬನಬನಗಳನ್ನು ಸುತ್ತುವರು. ಲೋಕಲೋಕಗಳಲ್ಲಿರುವ ಸರೋವರಗಳನ್ನು ಕಾಣುವರು. ಪ್ರಯಾಣದ ಪ್ರಯಾಸ ಮಿತಿಮೀರಿತು. ಶಿವನಂತೂ ಬಲವಳಿದು ಬಳಲುವನು. ಬಳಲಿ ಬಾಯಾರಿದ ನಮಗೆ ಗುಟುಕು ನೀರು ಹಾಕುವ ಲಲನೆಯರು ಇಲ್ಲಿಲ್ಲ, ಮನೆಗೆ ಮರಳುವುದೇ ಉಚಿತ ಎನ್ನುವುದು ಶಿವನ ಚಡಪಡಿಕೆ. ವನವನಗಳಲ್ಲಿ ಹರಿಯುತ್ತಿರುವ ನದಿಗಳ ತೀರಗಳಲ್ಲಿ ಕುಳಿತು ನಿನ್ನನ್ನೇ ಧ್ಯಾನಿಸುತ್ತಿರುವ ಮುನಿಗಳ ಭಕ್ತಿಯನ್ನು ಸ್ವೀಕರಿಸದೆ ಮನೆಗೆ ತಿರುಗುವುದು ಉಚಿತವಲ್ಲ ಎನ್ನುವರು ನಾರದನ ವಾದ. ಶಿವನು ಭಕ್ತಲೋಲನೆಂಬುದು ನಿಜ. ಆದರೆ ಆಗ ಶಿವನಿಗೆ ಬೇಕಾಗಿದ್ದುದು ಭಕ್ತರ ಭಕ್ತಿಯಲ್ಲ, ಕನ್ಯಾಪ್ರೇಮ. ಅದಕ್ಕಾಗಿಯೇ ಅವನು ಅನ್ನುವುದು ನಮ್ಮನ್ನು ಉಪಚರಿಸುವ ಕನ್ಯಾಮಣಿಗಳು  ಈ ವನದಲ್ಲಿ ಇಲ್ಲ’ ಎಂದು ಹಾಗೆಯೇ ಅವರಿಬ್ಬರೂ ಮುಂದೆ ನಡೆದು ಗಿರಿಗಂಹ್ವರಗಳನ್ನು ಸುತ್ತಿ ಬಳಲಿ, ಬೆಂಡಾಗಿ ಶೃಂಗಾರತೋಟಕ್ಕೆ ಬರುವರು.

ಶೃಂಗಾರ ತೋಟದಲ್ಲೊಂದು ಮಲ್ಲಿಗೆಯ ಮಂಟಪ. ಅಲ್ಲೊಂದು ಬಂಗಾರದ ಬೊಂಬೆ, ಅದು ಶಿವಪೂಜೆಗಾಗಿ ಕುಸುಮಗಳನ್ನು ಎತ್ತುತ್ತಿದೆ. ಅವಳನ್ನು ಕಂಡು ಗೌರೀಪತಿ ಮನೆಮರೆತ; ತನ್ನನ್ನೂ ಮರೆತ. ಅವಳ ಕೊನರು ಕೊಬ್ಬು ಚಲ್ವಿಕೆ ನೋಡಿ ಮನಸೋತ ಮೈಸೋತ. ಹತ್ತಿರದಲ್ಲಿದ್ದ ನಾರದನಿಗೆ ’ನಮ್ಮ ಗಿರಿಜೆ ಇವಳ ಕೊನೆಯ ಉಗುರನ್ನೂ ಹೋಲಲಾರಳು;’ ಎಂದ. ಶಿವನ ಮಾತಿನ ಇಂಗಿತವನ್ನರಿತು ’ಹುಲಿ ಹಾದಿಬಿಟ್ಟಿತೆಂದು ಮನದಲ್ಲಿಯೇ ಯೋಚಿಸಿದ. ಧೈರ್ಯ ತಂದುಕೊಂಡು ಶಿವನಿಗೆ ’ಸ್ವಾಮೀ, ಇವಳು ಅಡವಿಯ ಕಾಡಹೆಣ್ಣು,, ಒನಸು ಮಾಡುತ್ತ ಬೆಡಗು ಬೀರುತ್ತ ತಿರುಗುವ ಹೆಣ್ಣು ! ಇವಳು ನಮ್ಮ ಗಿರಿಜಾದೇವಿಯ ಕಾಲತುದಿಯನ್ನೂ ಹೋಲಳು’ ಎಂದು ಗಟ್ಟಿಯಾಗಿ ಹೇಳಿದ.  ಆರಂಕುಶವಿಟ್ಟರೂ ಹಿಂದೆ ಸರಿಯದ ಮನದಾತುರ ಶಿವನದು. ’ನಾರದಾ, ನಾನು ಈರೇಳು ಭುವನಗಳನ್ನು ಸುತ್ತಿದ್ದೇನೆ. ಇಂತಹ ಚಲ್ವಿಕೆಯ ಚನ್ನೆಯನ್ನು ನಾನೆಲ್ಲಿಯೂ ಕಾಣಲಿಲ್ಲ. ಇವಳನ್ನು ಪಡೆಯಲು ವ್ರತಧಾರಿಯೇ ಬೇಕು; ಜಗದ ಪಾಪಿಗೆ ಇವಳು ದೊರೆಯಳು’ ಎಂದು ತನ್ನ ಮನದ ಇಂಗಿತವನ್ನು ಸ್ಪಷ್ಟಗೊಳಿಸಿದ. ಇದ್ದುದನ್ನು ಇದ್ದಂತೆ ಹೇಳುವ ಸ್ವಭಾವ ನಾರದನದು. ಆಗ ಅವನು ಶಿವನಿಗೆ ’ಕಣ್ಣು ಗೆಟ್ಟು ನುಡಿಯುವುದು ಸರ್ವಥಾ ಸಲ್ಲದು; ಸ್ವಾಮಿ, ಸುಟ್ಟಸುಣ್ಣ ಮಾರುವರ ಮಗಳಿವಳು. ತಣ್ಣೀರಲ್ಲಿ ಹುಟ್ಟಿ ಬೆಳೆದವಳು. ಮುಕ್ಕಣ್ಣನೆನಿಸಿಕೊಂಡ ತಮಗೆ ಸಲ್ಲಳು’ ಎಂದು ವಾದ ಮಾಡಿದ. ಸದಾಶಿವನಿಗೆ ಅದರದೇ ಧ್ಯಾನವೆನ್ನುವಂತೆ ಶಿವನು ನಾರದನಿಗೆ ’ನೀನಿನ್ನೂ ಹಸುಳೆ ; ಇವಳ ಮಹಿಮೆ ನಿನಗೆ ತಿಳಿಯದು; ಇವಳು ನನ್ನ ಜೀವರತ್ನ, ಇವಳ ದರ್ಶನಮಾತ್ರದಲ್ಲಿಯೇ ನನ್ನ ಬಳಲಿಕೆ, ಬಾಯಾರಿಕೆ ದೂರವಾದವು’ ಎಂದು ತನ್ನ ಮನದೊಲವನ್ನೇ ಮುಂದಿಟ್ಟ. ನಾರದನು ಹಿಂಜರಿಯದೆ ’ದೇವಾ, ನೀವು ಬಳಲಿ ಬಾಡಿ ಕಣ್ಣುಗೆಟ್ಟಿರಿ ಇವಳೊಬ್ಬ ಮಹಿಳೆಯೆಂದು ಒಪ್ಪಿಬಿಟ್ಟಿರಿ; ಇವಳ ನಿಜದ ನಿಲವು ನಿಮಗೆ ತಿಳಿಯದು; ಇವಳು ಕಪ್ಪೆ, ಏಡಿ ಬಾಯಾಡಿಸುವವರ ಮಗಳು, ಕಪ್ಪು ಕುಲದವಳು. ಇವಳು ಖೋಡಿಯೆಂದು ಬಗೆದು, ತಂದೆತಾಯಿಗಳು ಇವಳನ್ನು ಕಾಡಿಗೆ ಅಟ್ಟಿದ್ದಾರೆ’ ಎಂದು ವಾದಿಸಿದ.  ಅವನ ಮಾತಿಗೆ ಸಿಟ್ಟಿಗೆದ್ದ ಶಿವನು ’ ನಾರದಾ, ನೀನೊಬ್ಬ ಶತದಡ್ಡ, ಇವಳ ಮಹಿಮೆ ನಿನಗೆ ತಿಳಿಯದು. ಇವಳು ನಿಜವಾಗಿಯೂ ದೊಡ್ಡವರ ಮಗಳು. ದೊಡ್ಡದು ಎಂದಿದ್ದರೂ ದೊಡ್ಡದು. ಇವಳ ದೊಡ್ಡಿ ತೋಟ, ಖಾಸಭಾಗ, ಪೂಜಾಮಂದಿರಗಳನ್ನೇ ನೋಡಿದರೆ ಸಾಕು, ಇವಳ ದೊಡ್ಡಸ್ತಿಕೆಗೆ ಇದೇ ಸಾಕ್ಷಿ. ದೊಡ್ಡವರ ದೊಡ್ಡಸ್ತಿಕೆ ಅವರವರ ದೊಡ್ಡಿಯಲ್ಲಿರುತ್ತದೆ. ನಿನಗೆ ಗೊತ್ತಿಲ್ಲ ಎಂದು ಗದರಿಸಿದನು. ನಾರದನು ಧೈರ್ಯ ಮಾಡಿ ’ಜಗದೊಡೆಯ, ಇವಳು ಹುಟ್ಟಿದ ವೇಳೆಯೇ ಸರಿಯಾಗಿದ್ದಿಲ್ಲ. ಇವಳು ಪಟ್ಟುಗುಡುಮ ಪರದೇಶಿ; ಅದಕ್ಕೆಂದೇ ಇವಳ ತಾಯಿ ಇವಳನ್ನು ಅಡವಿಗೆ ಅಟ್ಟಿದಳು. ಅಂದಿನಿಂದ ಅಡವಿಯಲ್ಲಿಯೆ ಇದ್ದು ಕಾಟಗಾರರನ್ನು ಕೂಡಿಕೊಂಡು ಬೇಟೆಯಾಡಿ ಜೀವಿಸುತ್ತಿದ್ದಾಳೆ. ಅವಳ ಬೇಟೆಯ ರೀತಿನೀತಿಯನ್ನು ಮನಸ್ಸಿದ್ದರೆ ಈ ಕಡೆ ಕೂತು ಕೆಲಹೊತ್ತು ನೋಡಿರಿ’ ಎಂದು ಬಿನ್ನವಿಸಿಕೊಂಡನು.

ಅಲ್ಪ ವೇಳೆಯಲ್ಲಿಯೇ ಕಾಟಕರೆಲ್ಲ ಕೂಡಿ, ಈಟಿ ಚಾಟಿಗಳನ್ನು ಹಿಡಿದುಕೊಂಡು ಆರ್ಭಟಿಸುತ್ತ ಬೇಟೆಗೆ ಅನುವಾದರು. ಆ ಬೇಡಪಡೆಯನ್ನು ಕಂಡು, ಗಂಗೆ ಚಲುವ ಚಲ್ಲಣವುಟ್ಟು, ಗುಲಗಂಜಿ ದಂಡೆತೊಟ್ಟು, ಅಲಂಕೃತಳಾಗಿ ಕೈಯಲ್ಲಿ ಕೈದುಹಿಡಿದು ಬೇಟೆಗೆ ಬಂದಳು. ’ಅಬ್ಬಾ! ಅವಳ ಠೀವಿಯನ್ನು ಬಣ್ಣಿಸಲು ರವಿ ಇರಲಿ, ಕವಿ ಇರಲಿ;ಸಾಧ್ಯವಿಲ್ಲ!! ಮಾರ ಮನ್ಮಥನ ಬಿಲ್ಲು’ ಕಣ್ಣೆಂಬ ಕಾರಮಿಂಚಿನ ಬಿಲ್ಲು ಅವಳ ಬಾಣದ ಸೆಳೆತಕ್ಕೆ ಪಶುಪಕ್ಷಿ ಭೂಮಿಗೆ ಎತಗಿದವು. ನಂತರ, ಜಲಚರ ಪ್ರಾಣಿಗಳ ಬೇಟೆ. ನಾವೆಯೇರಿ ಬಲೆಬೀಸಿ ಪ್ರಾಣಿಗಳ ಪ್ರಾಣವನ್ನೇ ಹೀರಿದಳು. ಇದೆಲ್ಲವನ್ನು ಶಿವನ ಸಮೀಪದಲ್ಲಿಯೇ ಕುಳಿತು ಅವಳನ್ನೇ ನೋಡುತ್ತಿದ್ದ. ಅವನ ಕಣ್ಣು ಅವಳಲ್ಲಿಯೇ ಕೀಲಿಸಿದ್ದವು. ಆಗ ನಾರದನು ಶಿವನನ್ನು ಎಚ್ಚರಿಸಿ ’ದೇವಾ, ಇಷ್ಟೊಂದು ಪ್ರಾಣಿಗಳನ್ನು ಕೊಂದು ಶಿವಪೂಜೆ ಮಾಡಿದರೆ ಪಾಪ ನಿರ್ಲೇಪವಾದೀತೆ?’ ಎಂದು ಪ್ರಶ್ನೆ ಹಾಕಿದ. ನಾರದನ ಮಾತಿನ ಅರ್ಥ ಶಿವನಿಗೆ ಹೊಳೆಯಲಿಲ್ಲ. ಕಾಮತತ್ವವು ನೀತಿತತ್ವವನ್ನು ಮೆಟ್ಟಿ ನಿಂತರೆ ಮುಂದೇನು ಗತಿ? ಶಿವನು ನಾರದನನ್ನು ಗಮನಿಸಿದೆ ಜಲಜಕುಲದ ಸ್ತ್ರೀ ಇದ್ದಲ್ಲಿಗೆ ಓಡಿಬಂದು ನಿಂತ. ನಾರದನೂ ಅವನ ಬೆನ್ನ ಬಳಿಯಲ್ಲಿಯೇ ಸಾಗಿದ. ಕೋಟಿಕಾಮರನ್ನು ನಿವಾಳಿಸಿ ಒಗೆವ ಸುಂದರ ಶಿವ ಆ ಮಾನಿನಿಯನ್ನು ಮಾತಾಡಿಸತೊಡಗಿದ; ಅವರಿಬ್ಬರಲ್ಲಿ ಸಂಭಾಷಣೆ ಸುರುವಾಯಿತು :

ಶಿವ : ಮಲ್ಲಿಗೆಯ ಮುಡಿಯವಳೆ, ಮನ್ಮಥನರಗಿಳಿಯೆ, ನಲ್ಲನಾಯಕರುಂಟೆ ನಿನಗೆ? ಬೇಟೆಯಾಡುವಾಗ ಹುಲಿ ಕರಡಿ ನಿನ್ನನ್ನು ಕೊಲ್ಲದೆ ಬಿಟ್ಟಾವೆ? ಮತ್ಸ್ಯ ಕೂರ್ಮಗಳು ನಿನ್ನನ್ನು ಹರಿದು ತಿನ್ನವೆ? ಪುರುಷನಿಲ್ಲದ ನಾರಿ ನೀನು. ನೀನೆನ್ನ ವರಿಸಿದರೆ ನಿನಗೆ ಬರುವ ಕಂಟಕಗಳನ್ನು ಪರಿಹರಿಸಬಲ್ಲೆನು.

ಗಂಗೆ : (ಸಿಟ್ಟಿನಿಂದ) ನೀನೆಲ್ಲಿಯ ಮುನಿಯೋ ? ನೀನೆಂಥ ಸನ್ಯಾಸಿಯೋ ? ತಿಂದುಂಬ ಜೋಗಿ ನೀನು. ಪರಸತಿಯರನ್ನು ನೋಡಿ ಮಾತಾಡಿಸುವುದು ನಿನ್ನ ಧರ್ಮವೆ? ಕಾಮಕ್ರೋಧಗಳನ್ನು ಸುಡುವುದು ಯೋಗಿಯ ಧರ್ಮ; ಪರಸ್ತ್ರೀಗೆ ಅಳುಪುವುದು ಅಧರ್ಮ. ಜೀಗಿಮೂಳಾ, ಸುಮ್ಮನೆ ಹೋಗು.

ಶಿವ : (ವಿನಯದಿಂದ ) ಮಾನಿನಿ, ಅನ್ಯಥಾ ಭಾವಿಸಬೇಡ. ಅಡವಿಯ ಕಾಡು ಮೃಗಗಳು ನಿನ್ನ ಪ್ರಾಣವನ್ನು ಹೀರಬಹುದೆಂದು ಭಾವಿಸಿ, ಪ್ರಾಣವಲ್ಲಭನ ಕೈಹಿಡಿಯಲು ಹೇಳಿದೆ. ಅಷ್ಟೆ.

ಗಂಗೆ : ಹುಚ್ಚಮುನಿಯೇ, ಕಚ್ಚುವ ಮೃಗಗಳೇ ನನ್ನ ಪರಿವಾರ. ಅವುಗಳ ಬೆದರಿಕೆ ನನಗಿಲ್ಲ. ನುಚ್ಚುನುಡಿಯ ದೇವರನ್ನು ನಾ ಪೂಜಿಸುವುದಿಲ್ಲ. ಕಿಚ್ಚು ಗಣ್ಣನೇ ನನ್ನ ದೈವ, ಪ್ರಾಣ, ಅವನೇ ಗತಿ, ಮತಿ.

ಶಿವ : ಈ ಕಾಲದಲ್ಲಿ ಶಿವನನ್ನು ನಂಬಿ ಬಾಳಿದವರುಂಟೆ? ಅವನನ್ನು ಪೂಜಿಸಿ ಒಲಿಸಿಕೊಂಡವರುಂಟೆ? ಸುಮ್ಮನೆ ಅವನನ್ನು ನಂಬಿ ಕೆಡಬೇಡ. ನನ್ನನ್ನೇ ಮದುವೆಯಾಗು. ಸಾಮಾನ್ಯ ಜೋಗಿ ನಾನಲ್ಲ; ಗುರುವಿನ ಗುರು. ಮಲೆಯಾಳ ಜೋಗಿಗಳಿಗೆ ಗುರು.

ಗಂಗೆ : ಜೋಗಿ. ನಿನ್ನ ಚಾಳುಮಾತಿಗೆ ಬೆಲೆ ಕೊಡಲಾರೆ. ಶಿವನೇ ನನ್ನ ದೈವ, ಮನದೈವ. ಅವನೇ ನನ್ನ ಪ್ರಾಣದೊಲ್ಲಭ. ಅವನ ಪಾರಮ್ಯವನ್ನು ಅರಿಯಬೇಕಿದ್ದರೆ ಇದೋ ಕೇಳು ಒರಳಕ್ಕಿ ಪದ ! ಶಿವಭಕ್ತರು ಕುಟ್ಟುವಾಗಲೂ ಶಿವಮಹಿಮೆ ಹಾಡುವರು.

(ಒರಳಕ್ಕಿಯ ಪದ ಕೇಳಿಸತೊಡಗಿತು)

ಶಿವ : ಎಲೆ ಹೆಣ್ಣೆ, ನೀನು ಸಾಮಾನ್ಯ ಸ್ತ್ರೀಯಲ್ಲವೆಂಬುದು ತಿಳಿಯಿತು. ನಿನ್ನ ಸಾಹಸಗಳನ್ನು ಅರ್ತಿಯಿಂದ ಕೇಳಿ ಮೆಚ್ಚಿಕೊಂಡೆವು. ನಿನ್ನ ಕಾಯ, ಜೀವವನ್ನು ಸಲಹಿದವರು ಯಾರೆಂಬುದನ್ನು ತಿಳಿಸಬಲ್ಲೆಯಾ?

ಗಂಗೆ : ಎಲೆ ಜೋಗಿ, ನನಗೆ ಎಳ್ಳಷ್ಟು ನೋವಾಗದಂತೆ ನೋಡಿಕೊಂಡ ತಂದೆ ತಾಯಿ, ಬಂಧು – ಬಳಗ ಈ ಗಿರಿಯಡಿಯಲ್ಲಿಯೇ ವಾಸಿಸುತ್ತಿದ್ದಾರೆ. ಹುಸಿ, ಮೋಸ ಕಂಡರೆ ನನಗಾಗದು. ನಾನು ನಿರಾಭಾರಿ, ನಿರ್ಮಳಾಂಗಿ; ಅಂಬಿಗರ ಮಗಳು. ನನ್ನ ತಾಯಿತಂದೆ ಮಹಾತಪಶ್ಚರ್ಯಮಾಡಿ ನನ್ನನ್ನು ಪಡೆದರು. ಅವರ ತಪಕ್ಕೆ ಮೆಚ್ಚಿದ ಬಸವಣ್ಣನು ತನ್ನ ಗಂಗೆದೊಗಲಿಂದ ನನ್ನನ್ನು ಪಡೆದು, ನನ್ನ ಮಾತಾಪಿತರಿಗೆ ಕೊಟ್ಟನು. ಆದ್ದರಿಂದಲೇ ನನಗೆ ಗಂಗೆಯೆಂದು ಹೆಸರಾಯಿತು. ನಾನು ಬಸವಣ್ಣನ ಬಿಂದು ನಾದ ಕಲೆಗಳಿಂದ ಜನಿಸಿದವಳು. ಲೋಕ ಕಲ್ಯಾಣಕ್ಕಾಗಿ ಅವತರಿಸಿದವಳು. ವೇದ ಶ್ರುತಿ ಪುರಾಣಗಳು ನನ್ನನ್ನು ಗಂಗಾಮಾತೆಯೆಂದು ಸಂಬೋಧಿಸಿ ಮನವಾರೆ ಹೊಗಳಿವೆ. ಮನುಮುನಿಗಳು, ದೇವಕನ್ನೆಯರು ನನ್ನನ್ನು ಮಿಸುನಿಯ ತೊಟ್ಟಿಲಲ್ಲಿಟ್ಟು ಹಾಡಿದ ಜೋಗುಳವೇ ಸಾಕ್ಷಿ :

ಬಣ್ಣದ ತೊಟ್ಟಿಲಿಗೆ ರನ್ನದ ಸರಪಳಿಯು
ಸಣ್ಣ ಬಣ್ಣಗಳ ಹಾಸಿ ಮಲಗಿಸಿ
ಹೆಣ್ಣು ಜಾತಿಗಳೆಲ್ಲ ತೂಗುತ ನೋಡಿ | ಮೂರು
ಕಣ್ಣುಳ್ಳ ಶಿವನ ಮಡದೆಂದು ಪಾಡಿ ಜೋಜೋ ||

ಶಿವ : ಸಾಗರ ಗುಣದ ಸನ್ಮಾನಿಯೇ ನೀ ಕೇಳು : ನಾನು ಜಗದೊಡೆಯ. ನಾಗಲೋಕಗಳನ್ನು ಸುತ್ತಾಡಿಕೊಂಡು ಇಲ್ಲಿಗೆ ಬಂದೆ. ದೇವಾನುದೇವತೆಗಳು ನಮ್ಮ ಸೇವಕರು. ನಮ್ಮ ಸಂಪತ್ತು ಅಗಣಿತ. ಅದನ್ನೆಲ್ಲ ಹುಣಸೆಯ ಬೀಜ ಮಾಡಿ ಮಾನವರಿಗೆ ಬಿಟ್ಟುಕೊಟ್ಟೆವು. ಯೋಗಿಜೋಗಿಗಳು ನಿತ್ಯದಲ್ಲಿ ನಮ್ಮ ಮನೆಯ ಬಾಗಿಲು ಕಾಯುತ್ತಿದ್ದಾರೆ. ಮೇರುಗಿರಿಯಲ್ಲಿರುವ ನಮ್ಮ ಮಠವನ್ನು ಕಂಡವರಿಲ್ಲ. ಆರುಶಾಸ್ತ್ರ, ನಾಲ್ಕುವೇದ ಅದನ್ನು ಕಾಣಲರಿಯವು. ನಾನು ಸಂಚಾರದಲ್ಲಿದ್ದಾಗ ಇಂದ್ರ ಹರಿ ಬ್ರಹ್ಮರು ನನ್ನನ್ನು ಬರಮಾಡಿಕೊಂಡು ಪೂಜೆ ಮಾಡಿದರು. ಹೀಗೆ ಸರ್ವರ ಭಕ್ತಿ ಪೂಜೆಯನ್ನು ಕೈಕೊಂಡು ಈ ಕಡೆಗೆ ಹೊರಟಾಗ, ಹಿಮಗಿರಿ ರಾಜನ ಮಗಳು, ಪಾರ್ವತಿ ನಮ್ಮನ್ನು ನಿಲ್ಲಿಸಿಕೊಂಡು ತನ್ನ ತನುಮನಗಳನ್ನೇ ಧಾರೆಯೆರೆದಳು. ಭಯಭಕ್ತಿಯಿಂದ ನಮ್ಮನ್ನು ಪೂಜಿಸಿ ಅಮೃತಾನ್ನ ಉಣಬಡಿಸಿದಳು ಅವಳು ನಿಜವಾಗಿ ಪುಣ್ಯಸ್ತ್ರೀ ; ಪೆಣ್ಣು ಕುಲಕೆ ರನ್ನ ಮಣಿ. ಆದರೇನು? ಅವಳು ನಮ್ಮನ್ನು ನೋಡಿ ಮನದಲ್ಲಿ ಕಳವಳಿಸಿದವಳು. ಅವಳ ಕೊಳಕು ಮನ ನಮಗೆ ಹಿಡಿಸಲಿಲ್ಲ. ನಮ್ಮ ಘನತೆಗೆ ಕುಂದುಬರಬಹುದೆಂದು ಭಾವಿಸಿ, ಅಲ್ಲಿ ನಿಲ್ಲದೆ ಮರ್ತ್ಯಕ್ಕೆ ಸುಳಿದೆವು. ನಿನ್ನ ಸ್ಥಳ ನಮ್ಮನ್ನು ಆಕರ್ಷಿಸಿತು. ನಿನ್ನ ಸ್ಥಳವಷ್ಟೇ ಅಲ್ಲ; ನಿನ್ನ ನೋಟ ಸ್ವಲ್ಪ ನಮ್ಮನ್ನು ಆಕರ್ಷಿಸಿತು. ನಿನ್ನ ಸ್ಥಳವಷ್ಟೇ ಅಲ್ಲ ನಿನ್ನ ನೋಟದಲ್ಲಿ ಯಾವ ಬೆಡಗು ಇದೆಯೋ ಏನೋ? ನಿನ್ನ ಕಡೆಗಣ್ಣ ನೋಟಕ್ಕೆ ನಮ್ಮ ಮನದ ಬಿಗುವು ಸಡಿಲಿತು. ನಿನ್ನ ಕಡು ಚಲ್ವ ನುಡಿಗೆ ನಮ್ಮ ಹೃದಯ ಸಾಗರ ಬಿರುಕು ಬಿಟ್ಟಿತು. ಲಲನೆಯರ ಮೋಹಕ್ಕೆ ನಾವೆಂದೂ ಬಿದ್ದವರಲ್ಲ. ಹಲವು ವಿದ್ಯೆಗಳನ್ನು ಕಲಿತು ಬಲವಂತರನ್ನೂ ಚಲವಂತರನ್ನೂ ನುಚ್ಚುನುಡಿ ಮಾಡಿದ ಮಹಾಯೋಗಿಗಳು ನಾವು. ಆದರೆ ನಿನ್ನ ಮುಂದೆ ಯಾವ ವಿದ್ಯೆಯೂ ನಾಟಲಿಲ್ಲ. ನಿನ್ನನ್ನು ಕಂಡೊಡನೆ ಸರ್ವವಿದ್ಯೆಗಳು ಮೂಲಿಗೆ ಬಿದ್ದವು. ನಿಜವಾಗಿ ನಿನ್ನ ಮಹಿಮೆ ದೊಡ್ಡದು. ನೀನೆಂಥ ತಪಸ್ಸು ಮಾಡಿರುವಿಯೋ ಏನೋ? ನಾನು ನಿನ್ನ ಬಲೆಗೆ ಬಿದ್ದೆ. ಆಗಲಿ, ಆಗುವುದೆಲ್ಲ ಸುಖಕ್ಕಾಗಿ. ಮಾನಿನಿ, ಸತಿಸುತರು ಎನಗಿಲ್ಲ. ಮನೆಯಲ್ಲಿ ನಾನೊಬ್ಬನೇ. ನೀನೊಲಿದು ಬಂದರೆ ಇಬ್ಬರು. ನಾನಂತೂ ದೇಶಗಳನ್ನು ಸುತ್ತಿ ಬೇಸತ್ತಿದ್ದೇನೆ. ಸನ್ಯಾಸಿ ಶಿವನ ಮಾರ್ಗಗಳನ್ನು ಅರಿಯುವುದು, ಬಣ್ಣಿಸುವುದು ಆದಿಶೇಷನಿಗೂ ಅಸಾಧ್ಯ. ಸುಟ್ಟರೂ ಸುಡದಷ್ಟು ಸಂಪತ್ತು ನಮ್ಮಲ್ಲಿ. ಅದನ್ನು ಉಂಡು ತಣಿಯಲು ಕೂಸುಕುನ್ನಿಗಳಿಲ್ಲ. ಯಾರೂ ಇಲ್ಲದ ನಮ್ಮ ಮಠ ಹಾಳು ಸುರಿಯುತ್ತಿದೆ. ಶ್ರೀಗಂಗೆ, ನೀನೊಲಿದು ಬಂದರೆ ನಾವಿಬ್ಬರೂ ಸುಖದಿಂದ ಇರಬಹುದು. ನಿನ್ನನ್ನು ಹೂ ಮಾಡಿ ಸಲಹುತ್ತೇನೆ. ಈ ಮಾತು ಸತ್ಯ, ನಿನ್ನಾಣೆ; ಕೆಂಡಗಣ್ಣಿನ ಶಿವನಾಣೆ.

ಶಿವನ ಮಾತುಕೇಳಿ ಗಂಗೆಯ ಬಾಯಲ್ಲಿ ನೀರೂರಿತು. ಆಗ ಶಿವನ ಯಾರಿಗೂ ಗೊತ್ತಾಗದಂತೆ ಅವಳ ತಲೆಯ ಮೇಲೆ ಮಲೆಯಾಳ ಬೂದಿಯನ್ನು ಸಿಂಪಡಿಸಿದ. ಅದರಿಂದ ಅವಳ ಜ್ಞಾನಜ್ಯೋತಿ ಮಂದವಾಯಿತು. ತನ್ನ ಬಾಲ್ಯದ ಭಕ್ತಿಗೆ ಶಿವನೊಲಿದನೆಂದು ಜೋಗಿಯ ಪಾದಕ್ಕೆ ಎರಗಿದಳು. ಅವನ ಪಾದ ಪೂಜೆ ಮಾಡಿ ತನ್ನ ಭಕ್ತಿಯನ್ನು ಪ್ರಕಟಿಸಿದಳು. ಆಗ ಶಿವನು ಇವಳನ್ನು ಬಿಟ್ಟರೆ ಮಹಾಪಾಪವೆಂದು ನಾರದನಿಗೆ ಹೇಳಿ, ಗಂಗೆಯನ್ನು ತನ್ನ ಜಡೆಯಲ್ಲಿ ಅಡಗಿಸಿಕೊಂಡನು. ಇದು ಗೌರಿಗೆ ತಿಳಿಯಬಾರದೆಂದು ಗಂಗೆ ಮುಚ್ಚುವಂತೆ ಜಡೆಸುತ್ತಿಕೊಂಡನು. ಈ ವಿಷಯ ಗುಪ್ತವಾಗಿರಲೆಂದು ನಾರದನಿಗೆ ಸೊನ್ನೆಯಿಂದ ತಿಳಿಸಿದನು.

ಶಿವನು ನೇರವಾಗಿ ನಾರದನನ್ನೊಳಗೊಂಡು ತನ್ನ ಮಠಕ್ಕೆ ಮರಳಿದ. ಬರುವುದೇ ತಡ; ಮನೆಯಲ್ಲಿ ಗೌರಿಯಿಂದ ಸುಸ್ವಾಗತ. ಅವಳು ಪತಿಯ ಪಾದ ತೊಳೆದು ಸೇವೆ ಸಲ್ಲಿಸುವಾಗ ಏನೋ ಸಂಶಯ ಅವಳ ತಲೆಯಲ್ಲಿ ಸುಳಿಯಿತು. ಅವಳು ಶಿವನನ್ನು ಸಾವಕಾಶ ಕೇಳಿದಳು : ’ಶಿವನೇ, ಈ ನಾರದನ ಬೆನ್ನು ಹತ್ತಿ ಅದಾವ ರಾಜ್ಯಗಳಲ್ಲಿ ಸಂಚಾರ ಮಾಡಿದಿರೋ ಏನೋ? ನಿಮ್ಮ ಶರೀರ ಕೃಷವಾಗಿದೆ; ಸಿರಿಮೊಗ ಕಂದಿದೆ. ನಿಮಗೆ ಯಾವ ಪೀಡೆ ಅಂಟಿತೋ ಏನೊ? ಬಹುತರವಾಗಿ ಆ ಪೀಡೆ ತಮ್ಮ ಜಡೆಯೊಳಗೆ ಪ್ರವೇಶ ಮಾಡಿದಂತೆ ಕಾಣುತ್ತದೆ. ಇದು ಸಾಮಾನ್ಯ ಪೀಡೆಯಲ್ಲ – ಹೆಣ್ಣು ಪೀಡೆ. ಈ ಪೀಡೆ ಬರುವಂತೆ ಮಾಡಿದವನು ಈ ಹಾಳು ಮುಖದ ನಾರದ. ಮಂತ್ರಮಾಟದಿಂದ ಭೂತಬಿಡಿಸುವ ವೈದ್ಯನಿಗೆ ತಲೆಯೆಲ್ಲ ಕಣ್ಣಾಗಬೇಕು. ನಮ್ಮ ಸುಖದ ಸಂಸಾರಕ್ಕೆ ಕಲಹಕಂಟಕ ಬಂತು. ಬಂದುದನ್ನು ಅನುಭೋಗಿಸಲೇಬೇಕು. ತಾವು ಒಳಮನೆ ಸೇರಿದರೆ ಸಕಲ ಉಪಚಾರ ಮಾಡಿ, ಬಂದ ಪೀಡೆಯನ್ನು ಕಳೆಯಬಲ್ಲೆ. ತಲೆಗೆ ಸಂಪಿಗೆ ಎಣ್ಣೆ ಉಣಿಸುವುದೇ ಇದಕ್ಕೆ ತಕ್ಕ ಮದ್ದು. ಮೇಲೆ ಸುಡುಸುಡುವ ನೀರು ಎರೆದರೆ ತಲೆಗೆ ತಂಪು’ ಎಂದು ಮರುಕದ ಕಟಕಿಯನ್ನಾಡಿದಳು. ಶಿವನಿಗೆ ಅವಳ ಮಾತಿನ ಜಾಡು ತಿಳಿಯಿತು. ತನ್ನ ಮನದಲ್ಲಿಯೇ ’ ಈ ಕಳವಿನ ಗುಟ್ಟು ಇವಳಿಗೆ ಹೇಗೆ ಹೊಳೆಯಿತು? ಬಹುತರವಾಗಿ  ಈ ನಾರದನೇ ಇವಳಿಗೆ  ಸೂಚ್ಯವಾಗಿ ತಿಳಿಸಿರಬೇಕು. ಮೊದಲೇ ಆತ ಚಾಡಿಕೋರ. ಏನೇ ಇರಲಿ; ಗಂಗೆಗೌರಿಯರ ಸವತಿಮತ್ಸರವನ್ನು ಕಾಣಬೇಕೆಂದು ಮನಸ್ಸು ಮಾಡಿದ. ಆದರೂ ತಿಳಿಸಿಹೇಳಬೇಕೆಂದು ಭಾವಿಸಿ’ ಗಿರಿಜೆ, ದೇಶಕೋಶಗಳನ್ನು ತಿರುಗುವಾಗ ನಾನೊಂದು ಮಲ್ಲಿಗೆಯ ಮೊಗ್ಗನ್ನು ಮುಡಿಯಲ್ಲಿ ಧರಿಸಿಕೊಂಡು ಬಂದೆ’ ಅದು ಸಾಮಾನ್ಯ ಹೂವಲ್ಲ; ಪರಶಿವನ ಬಾಗಿಸಂದರಳು – ಮೀಸಲಳಿಯದ ಹೂ’ ಎಂದು ಮರೆಮಾಚಿ ಸತ್ಯವನ್ನೇ ನುಡಿದ. ಗಿರಿಜೆ ಬುದ್ಧಿವಂತೆ! ಇದ್ದುದನ್ನು ಕಣ್ಣಾರೆ ಕಾಣುವ ಮನಸ್ಸು ಅವಳದು. ಆಗ ಅವಳಲ್ಲಿ ಮತ್ಸರದ ಸರ್ಪ ಹೆಡೆಬಿಚ್ಚತೊಡಗಿತು. ಕಲಹದ ಬಾಗಿಲು ತೆರೆಯಿತು. ತಲೆಯ ಮೇಲೆ ಗಂಗೆಯನ್ನಿಟ್ಟುಕೊಂಡ, ತೊಡೆಯ ಮೇಲೆ ಗೌರಿಯನ್ನಿಟ್ಟುಕೊಂಡ ಶಿವನು ಅವರಿಬ್ಬರ ಮಧ್ಯದಲ್ಲಿದ್ದು ನಗುತ್ತಲೇ ಅವರಿಬ್ಬರ ಜಗಳ ಕೇಳಿದ. ಗೌರಿಗೆ ಗಂಗೆಯ ಗತ್ತು ಗೊತ್ತಾಯಿತು. ಅವಳನ್ನು ಹೇಗಾದರೂ ಮಾಡಿ ಮನೆ ಬಿಡಿಸಬೇಕೆಂದು ತಂತ್ರ ಹೂಡಿದಳು. ನೇರವಾಗಿ :

ತಲೆಯೊಳಿದ್ದು ನೋಡುವವಳು ಇವಳ್ಯಾರೆ
ಕುಲವ ಹೇಳಿ ಎನ್ನ ಕೂಡ ದನಿದೋರೆ
ಹೊಲೆಯ ಮಾದಿಗರ ಮಗಳೆ ಎಲೆ ಹೇಳೆ | ನಿನಗೆ
ಬಲಿಯಕೊಟ್ಟು ಉಣ್ಣಿಸುವೆನು ಇಳಿಬಾರೆ ||

ಎಂದು ಬಯ್ದು, ಬಯಲಿಗೆ ಬರಲು ಗಂಗೆಗೆ ಆಹ್ವಾನ ನೀಡಿದಳು. ಇಬ್ಬರಿಗೂ ಬಾಯಿಗೆ ಬಾಯಿ ಕೈಗೆ ಕೈ ಹತ್ತಿತ್ತು. ಒಬ್ಬರ ಹುಳಕನ್ನು ಇನ್ನೊಬ್ಬರು ತೆಗೆದು ಆಡಿಕೊಳ್ಳತೊಡಗಿದರು. ಗಂಗೆ ಕಬ್ಬೇರವಳು, ಗೌರಿ ವಿಪ್ರಕುಲದವಳು. ಅವರು ಪರಸ್ಪರವಾಗಿ ತಳಬುಡಗಳನ್ನು ಕಿತ್ತು ತಿರಸ್ಕರಿಸಿ ನುಡಿದುದಲ್ಲದೆ ಶಿವನ್ನನ್ನೂ ಪಾತಾಳಕ್ಕಿಳಿಸುವಂತೆ ಕಾದಾಡಿದರು. ಗೌರಿಯು ಶಿವನ ತೊಡೆಯಿಂದಿಳಿದು ಹುಲಿಯಂತೆ ಗರ್ಜನೆಮಾಡಿದಾಗ ಭೂಮಿ ನಡುಗಿತು. ಸಪ್ತಸಮುದ್ರಗಳು ಧೀಂಕೆಟ್ಟು ಹರಿದವು. ಪಾಪ! ಗಂಗೆಗೆ ಅಳುವದೊಂದೇ ಕಾಯಕವಾಯಿತು. ಗಂಗೆ ಶಿವನಲ್ಲಿ ಮೊರೆಯಿಟ್ಟಳು. ಅಳುಮೋರೆಯ ಅವಳು ಶಿವನಿಗೆ ’ಏನೇನೋ ಸುಳ್ಳು ಹೇಳಿ ನನ್ನನ್ನು ಇಲ್ಲಿಗೆ ತಂದಿರಿ; ಈ ಮಾರಿಯ ಕೈಯಲ್ಲಿ ಕೊಟ್ಟಿರಿ; ಗಿಳಿ ಹಿಡಿದುತಂದು ಬೆಕ್ಕಿನ ಬಾಯಲ್ಲಿ ತುರುಕಿದಂತಾಯ್ತು ನನ್ನ ಗತಿ’ ಎಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ಬಂದ ದಾರಿಗೆ ಸುಂಕವಿಲ್ಲವೆಂದು ತಿರುಗಿ ಹೊರಡುವ ಮನಸ್ಸು ಮಾಡಿದಳು. ಇವರಿಬ್ಬರ ಜಗಳ ಕೇಳುವ ಶಿವನಿಗೆ ಮುಗುಳ್ನಗೆ. ಅವನು ಅವರಿಬ್ಬರನ್ನೂ ಕೂಡಿಸುವ ಯೋಚನೆ ಮಾಡಿದ. ಅಳುವ ಗಂಗೆಯ ಕಣ್ಣೀರನ್ನೊರಸಿ ಸಮಾಧಾನ ಹೇಳಿದ.

ಶಿವನು ಅವರಿಬ್ಬರೂ ಕೂಡಿಯಿರುವುದು ಹಿತವೆಂದು ಎಷ್ಟು ಹೇಳಿದರೂ ಅವರು ಒಪ್ಪುವಂತೆ ಕಾಣಲಿಲ್ಲ. ಗೌರಿಯಂತೂ ಗಂಭೀರ ಮುದ್ರೆ ತಾಳಿ ಮೌನವಾಗಿಯೇ ಇದ್ದಳು.  ಕೂಡಿಬಾಳುವುದು ಸಾಧ್ಯವಿದ್ದರೂ ಗೌರಿಯ ಆಕ್ರೋಶಕ್ಕೆ ಅಂಜಿ, ಗಂಗೆ ಆಕಾಶದಲ್ಲೊಂದು ಬಿಡಾರ ಹೂಡಿ ಇರಬಯಸಿದಳು. ವೀರಭದ್ರ ಭದ್ರಕಾಳಿಯರನ್ನು ಜೋಪಾನ ಮಾಡುವ ಹೊಣೆ ಹೊತ್ತಳು. ಅವಳ ಮಾತಿಗೆ ಶಿವ ಸುಮ್ಮನೆ ನಗುತ್ತಲಿದ್ದ. ಗಣಪತಿ ಗೌರಿಯ ಪಾಲಿಗೆಂದು ಶಿವನು ತೀರ್ಮಾನಿಸಿದ.

ಗಣಪತಿ ಮಹಾಬುದ್ಧಿವಂತ. ಸವತಿ ಮಕ್ಕಳಲ್ಲಿ ಹುಟ್ಟಿದ ಜಗಳವನ್ನು ಚಿವುಟಿ ಹಾಕಲು ಉಪಾಯ ಹುಡುಕಿದ. ಶಿವನೇ ಸರ್ವೋತ್ತಮನೆಂಬುದು ಅವರಿಗೆ ತಿಳಿದರೆ, ಕದನದ ಮೂಲಬೇರು ನಾಶವಾಗುವುದೆಂದು ಬಗೆದು ಪ್ರವಚನ ಪ್ರಾರಂಭಿಸಿದ. ದೇವಾನುದೇವತೆಗಳು ಶ್ರೋತೃಗಳಾದವರು. ತ್ರಿಮೂರ್ತಿಗಳಾದ ಹರಿ, ಹರ, ಬ್ರಹ್ಮ ಇವರಲ್ಲಿ ತಾರತಮ್ಯ ಮಾಡಿ ಮೇಲೆ ಕೆಳಗೆ ಹೊಯ್ದಾಡಿಸಿದ ಕಥೆ ಹಳೆಯದು. ವಿಷ್ಣುವಿನ ಹೊಕ್ಕಳಲ್ಲಿ ಬ್ರಹ್ಮ ಹುಟ್ಟಿದ, ವಿಷ್ಣು ಶಿವನ ಪಾದಪೂಜೆ ಮಾಡಿದ. ಹೀಗಿದ್ದಲ್ಲಿ ಇದ್ದ ಮೂವರಲ್ಲಿ ದೊಡ್ಡವರಾರು? ವ್ಯಾಸರು ಶಿವನನ್ನು ಸ್ತುತಿಸಿ ಕಳಕೊಂಡ ತನ್ನ ಕೈಗಳನ್ನು ಪುನಃ ಪಡೆದದ್ದು ಸುಳ್ಳೆ? ಆದ್ದರಿಂದ ಒಣ ಹೆಮ್ಮೆ ತರವಲ್ಲ. ಅಹಂಭಾವ ವಿನಾಶಕ್ಕೆ ಮೂಲ. ಶಿವನೇ ಸರ್ವೋತ್ತಮ, ಸರ್ವಶ್ರೇಷ್ಠ ಎಂಬುದನ್ನು ಗಣೇಶ ಆಧಾರ ಸಹಿತ ಸಿದ್ಧಪಡಿಸಿ ಹೇಳಿದ. ಇದನ್ನು ಕೇಳಿದ ಗಂಗೆಗೌರಿಯರು ಶಿವನ ಮುಂದೆ ತಾವೆಷ್ಟರವರೆಂದು ಭಾವಿಸಿ ಜಗಳ ನಿಲ್ಲಿಸಿದರು. ಮುನಿಸಂದೋಹವು ಗಣಪತಿಯ ಜಾಣ್ಮೆಗೆ ತಲೆದೂಗಿ ಶಿವನನ್ನು ಮನವಾರೆ ಹೊಗಳತೊಡಗಿತು.

ಶಿವನೇ ಸರ್ವೋತ್ತಮನೆಂಬುದಕ್ಕೆ ಅನೇಕ ಸಾಕ್ಷ್ಯಗಳನ್ನು ನೀಡಬಹುದು. ಅವುಗಳಲ್ಲಿ ದಕ್ಷಬ್ರಹ್ಮನ ಕಥೆ ದೊಡ್ಡದು. ಅಹಂಕಾರ, ಮಮಕಾರವನ್ನು ಕಂಡರೆ ಶಿವನಿಗೆ ಆಗದು. ಅಂತವರನ್ನು ಆತ ಸವರಿಬಿಡಬಲ್ಲ.  ದಕ್ಷನ ಅಹಂಕಾರ ಮಿತಿ ಮೀರಿತ್ತೆಂದು ಗಣೇಶ ಹೀಗೆ ಬಣ್ಣಿಸಿದ : ದಕ್ಷ ಅನೇಕ ಹೆಣ್ಣುಮಕ್ಕಳ ತಂದೆ. ಅವರನ್ನೆಲ್ಲ ದೇವಾನುದೇವತೆಗಳಿಗೆ ಮದುವೆ ಮಾಡಿ ಮಾವನೆನಿಸಿಕೊಂಡ. ಅಹಂಕಾರ ಅಳತೆಮೀರಿ ಬೆಳೆಯತೊಡಗಿತು. ಅಳಿಯಂದಿರಿಂದ ಯೋಗ್ಯ ಸನ್ಮಾನ ಹೊಂದುವ ಹುಚ್ಚು ಹಿಡಿಯಿತು. ಸರ್ವರಿಂದ ಸನ್ಮಾನ ಹೊಂದಿ ಮದವೇರಿದ ಮುದ್ದಾನೆಯಂತೆ ದಕ್ಷ ಶಿವನ ಒಡ್ಡೋಲಗಕ್ಕೆ ಸಾಗಿ ಬಂದ. ಸಭಾಮಂದಿರವನ್ನು ಪ್ರವೇಶಿಸಿದ ಅಹಂಕಾರಿಗೆ ಬುದ್ಧಿಗಲಿಸಬೇಕೆಂದು ಶಿವನು ಮನಸ್ಸು ಮಾಡಿ ಅವನ ಕಡೆಗೆ ದೃಷ್ಟಿಯನ್ನು ಬೀರಲಿಲ್ಲ. ಶಿವನೇ ಸುಮ್ಮನಿದ್ದಾಗ ತಾನೇಕೆ ಮಾತಾಡಿಸಬೇಕೆಂದು ಶಿವೆಯೂ ಸುಮ್ಮನಿದ್ದಳು. ದಕ್ಷಬ್ರಹ್ಮ ಮೊದಲೇ ಮುಂಗೋಪಿ. ತನಗೆ ಅವಮಾನ ಮಾಡಿದ ಬಡಗೊರವನ ಕೋಡು ಕೊರೆಯದೆ ಬಿಡೆನೆಂದು ಪ್ರತಿಜ್ಞೆ ಮಾಡಿ ತನ್ನ ಮಂದಿರಕ್ಕೆ ಮರಳಿದ.

ಬಂದೊಡನೆ ದೊಡ್ಡದೊಂದು ಯಜ್ಞ ಹೂಡಿದ. ಶಿವನೊಬ್ಬನನ್ನು ಬಿಟ್ಟು ದೇವಾನುದೇವತೆಗಳಿಗೆ ಆಮಂತ್ರಣ ಕೊಟ್ಟ. ಯಜ್ಞ ಮಂಟಪದಲ್ಲಿ ವಿಷ್ಣುವಿಗೆ ಅಗ್ರ ಸ್ಥಾನ ನೀಡಿ ಯಜ್ಞ ಪ್ರಾರಂಭಿಸಿದ. ನೆರೆದ ಬ್ರಾಹ್ಮಣರಿಗೆ ಭೂರಿಭೋಜನ, ಭಾರೀ ದಕ್ಷಿಣೆ ಕೊಟ್ಟು ತೃಪ್ತಿ ಪಡಿಸಿದ. ಕೂಡಿದವರೆಲ್ಲರೂ ದಕ್ಷನನ್ನು ಹಾಡಿ ಹರಸಿದರು; ಜೊತೆಗೆ ಶಿವನ ಹೆಂಡತಿ ರಂಡೆಯಾಗಲೆಂದು ಜಪಿಸಿದರು. ಈ ವಿಷಯ ಹೇಗೋ ದಾಕ್ಷಾಯಣಿಯ ಕಿವಿಗೆ ಮುಟ್ಟಿತು. ಆಗ ಅವಳು ಶಿವನ ಅಪ್ಪಣೆಯನ್ನು ಪಡೆದು ಗಣಪನನ್ನೊಳಗೊಂಡು ದಕ್ಷನ ಯಜ್ಞ ಮಂಟಪಕ್ಕೆ ಬಂದಳು. ಅವಳನ್ನು ದಕ್ಷ ಮಾತಾಡಿಸಲಿಲ್ಲ. ಕಣ್ಣೆತ್ತಿ ಸಹ ನೋಡಲಿಲ್ಲ. ಆಗ ಅವಳ ಕೋಪ ಭುಗಿಲೆಂದು ಉರಿಯಿತು. ಶಿವನನ್ನು ಉಪೇಕ್ಷಿಸಿ ಯಜ್ಞಕ್ಕೆ ಕೈ ಹಾಕಿದ ತನ್ನ ತಂದೆಗೆ ಬುದ್ಧಿವಾದ ಮಾಡಿದಳು. ಆ ಮಾತು ದಕ್ಷನ ಕಿವಿಗೆ ಕೂರಲಗಿನಂತೆ ನಾಟಿತು. ’ಕರೆಯದೆ ಬಂದಿರುವ ನಾಯಿ ನೀನು; ನನ್ನ ಮಗಳಲ್ಲ. ತೊಲಗಾಚೆ’ ಎಂದು ದಕ್ಷ ಆರ್ಭಟಿಸಿದ. ದಾಕ್ಷಾಯಣಿಗೆ ಅಪಮಾನವೆನಿಸಿತು. ಅವಳು ಶಿವನನ್ನೇ ನೆನೆಯುತ್ತ ಅಗ್ನಿ ಕುಂಡದಲ್ಲಿ ಜಿಗಿದು ಅವಿತುಕೊಂಡಳು. ಅವಳ ಮುದ್ದಿನ ಕುಮಾರ ಗಣಪತಿ ಮುಂದೆ ಬಂದು ಅಜ್ಜ ದಕ್ಷಬ್ರಹ್ಮನಿಗೆ ಪರಿಪರಿಯಾಗಿ ತಿಳಿಹೇಳಿದ. ಆ ಪೋರನ ಮಾತಿಗೆ ದಕ್ಷ ದುಗ್ಗಾಣಿಯ ಬೆಲೆಯನ್ನೂ ಕೊಡಲಿಲ್ಲ. ’ಗೂಡುಹೊಟ್ಟೆಯ ಮೂಳ, ನಿನಗೇಕೆ ಈ ಹಿರಿಯತನ. ಚಿಕ್ಕಂದಿನಿಂದಲೂ ನಮ್ಮ ಮನೆಯಲ್ಲಿದ್ದು ಹೇರುಕಡಲೆ, ಪೆಂಟೆಬೆಲ್ಲ ತಿಂದು ಬೆಳೆದ ಹೊಟ್ಟೆಬಾಕ ನೀನು’ ಎಂದು ಆತನನ್ನು ಗದ್ದರಿಸಿದ. ನಂತರ ಪ್ರಳಯಾಗ್ನಿಯನ್ನೇ ಕೈಲಾಸದ ಮೇಲೆ ಸೂರೆ ಮಾಡಿದ. ಕೈಲಾಸದಲ್ಲಿದ್ದ ಯೋಗಿಗಳು ಗಾಲು ಮೇಲಾಗಿ ಗೋಳೊ ಎಂದು ಅತ್ತರು. ಅವರ ರೋಧನ ಧ್ವನಿಯನ್ನು ಕೇಳಿದ ಶಿವನು ಸಿಟ್ಟಾಗಿ ಸಿಡಿಲಮರಿಯಾದ. ಅವನ ಉರಿಗಣ್ಣು ಛಿಟಲ್ ಛಿಟಲ್ ಎಂದು ಬಿರಿಯತೊಡಗಿತು. ಅದರ ಉದರದಿಂದ ವೀರಭದ್ರ ಉದಿಸಿದ. ಶಿವನಾಜ್ಞೆಯಂತೆ ದಕ್ಷನನ್ನು ಸುಟ್ಟು ಸೂರೆಗೈಯಲು ಶಸ್ತ್ರಾಸ್ತ್ರ ಧರಿಸಿ ಮುನ್ನಡೆದ. ಅವನ ವಾಮಭಾಗದ ಭದ್ರಕಾಳಿ ಭೂಮಿಯಾಕಾಶಗಳನ್ನೇ ನುಂಗಿಬಿಡುವೆನೆಂದು ಸ್ವಾಮಿಯ ಬೆನ್ನ ಬಳಿ ಸುಳಿದಳು. ಗಣಗಳ ಸಮೂಹ ಆರ್ಭಟಿಸಿ ನಡೆಯಿತು. ಶರಭಾವತಾರಿ, ವೀರಭದ್ರನು ಆರ್ಭಟಿಸುತ್ತ ಬಂದು ದಕ್ಷನ ಯಜ್ಞ ಕುಂಡಕ್ಕೆ ಮುತ್ತಿಗೆ ಹಾಕಿದನು.

ವೀರಭದ್ರನೊಡನೆ ಚೌಡಿ ಮೇಳಯಸಿದರೆ ಕೇಳುವುದೇನು? ಪವನಹುತರಂತೆ ಜೋಡಿಯಾಗಿ ಬಂದು ದಕ್ಷನನ್ನು ತಡವಿದರು. ದಕ್ಷನ ಆರ್ಭಟೆ ಭುಗಿಲೆಂದು  ಚಿಮ್ಮಿತು. ದಕ್ಷ ವೀರಭದ್ರರ ನಡುವೆ ಕಾಳಗ ನಡೆಯಿತು. ವೀರಭದ್ರನ ಏರಾಟಕ್ಕೆ ದಕ್ಷ ಮಂಡೆಗಾಲೂರಿದ. ದಕ್ಷನ ರುಂಡ ಅಷ್ಟರಲ್ಲಿಯೇ ನಭೋಮಂಡಲಕ್ಕೆ ಹಾರುವದರಲ್ಲಿತ್ತು; ತಕ್ಷಣ ಹಾರಿಯೇ ಹೋಯಿತು. ಯಜ್ಞ ಕುಂಡದಲ್ಲಿ ಅಡಗಿ ಕುಳಿತು ಮಗನ ಪರಾಕ್ರಮವನ್ನು ಈಕ್ಷಿಸುತ್ತಿದ್ದ ದಾಕ್ಷಾಯಣಿ ಚಂಗನೆ ಹೊರಗೆ ಬಂದು ತನ್ನನ್ನು ಹಡೆದ ತಂದೆಯನ್ನು ಕಾಪಾಡಬೇಕು ಎಂದು ವೀರಭದ್ರನಿಗೆ ಅರಿಕೆ ಮಾಡಿದಳು. ತಾಯಿಯ ಅಪ್ಪಣೆಯಂತೆ ದಕ್ಷನಿಗೊಂದು ಕುರಿದಲೆ ಹಚ್ಚಿ ಕಾಪಾಡಿದ. ಹಾಗೆಯೇ ಹಾರಾಡುತ್ತ ಬಂದು ಶಿವನ ದರ್ಶನ ಪಡೆದ. ಶಿವನು ಮಗನನ್ನು ನೋಡಿ ಮುಂಡಾಡಿ ಕೊಂಡಾಡಿದ. ಸರ್ವರೂ ಮಂಗಳಕೆ ಮಂಗಳವೆಂಬಂತೆ ಮಂಗಳಾರತಿ ಎತ್ತಿದರು. ಆ ಮೇಲೆ ದಾಕ್ಷಾಯಣಿ ಪರ್ವತರಾಜನ ಉದರಲ್ಲಿ ಜನಿಸಿ ತಪಶ್ಚರ್ಯ ಮಾಡಿ ಶಿವನನ್ನು ವರಿಸಿದಳು; ಶಿವನ ತೊಡೆಯೇರಿದಳು.

ಗಣಪನಿಂದ ಈ ಕಥೆಗಳನ್ನು ಕೇಳಿದ ಗಂಗೆಗೆ ಶಿವಗೌರಿಯರ ಮಹಿಮೆ ತಿಳಿಯಿತು. ಅವಳು ಗೌರಿಗೆ ತಲೆಬಾಗಿದಳು. ಅಂದಿನಿಂದ ಗಂಗೆಗೌರಿಯರು ಹೊಂದಿಕೊಂಡು ಶಿವನೊಡನೆ ಇರತೊಡಗಿದರು. ಗೌರಿ ಶಿವನ ಕ್ರಿಯಾಶಕ್ತಿಯಾದರೆ ಗಂಗೆ ಅವನ ಜ್ಞಾನಶಕ್ತಿಯಾಗಿ ಮೆರೆದಳು. ಅವರಿಬ್ಬರೂ ಅಭೇದಭಾವದಿಂದ, ಭಯಭಕ್ತಿಯಿಂದ ಶಿವನ ಪಾದಸೇವೆ ಮಾಡುತ್ತ ಸುಖದಿಂದ ಇರತೊಡಗಿದರು. ಇವರು ಅಕ್ಕರೆಯಿಂದ ವರ್ತಿಸುವುದನ್ನು ಕಂಡ ಶಿವನು ನಸುನಕ್ಕ. ಮಡದಿಯರಿಬ್ಬರನ್ನೂ ಮುಕ್ತಿ ಮಂದಿರದಲ್ಲಿಟ್ಟು ಕಾಪಾಡಿದ.

ಗಂಗಿಗೌರಿಯರ ಸಂವಾದವನ್ನು ನೀಲಲೋಚನೆಯ ಮುಖದಿಂದ ಕೇಳಿದ ಬಸವಣ್ಣ ಸಂತುಷ್ಟನಾದ. ನೀಲಾಂಬಿಕೆ, ಗಂಗಾಬಿಕೆಯರೊಡನೆ ಮಹಾಮನೆಯಲ್ಲಿ ಲಿಂಗಾರ್ಚನೆ ಮಾಡುತ್ತ ಸುಖದಿಂದ ಬಾಳತೊಡಗಿದ. ಇದು ಗಂಗಿಗೌರಿಯರ ಸಂವಾದದ ಸಾರ; ಬಸವಣ್ಣ ನೀಲ್ಲಮ್ಮರ ಬಾಳಿನ ತತ್ವವಿಚಾರ; ಹೇಳಿಕೇಳಿದವರಿಗೆ ಮುಕ್ತಿಯ ಆಗರ.