ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಅರಣ್ಯ ಮತ್ತು ಅರಣ್ಯ ಜೀವನದ ಹೊರತಾಗಿ ಅಯೋಧ್ಯೆ ಎಂಬ ನಗರ ಎಲ್ಲಿಯೂ ಅಷ್ಟು ಮುಖ್ಯವಾಗಿ ಪರಿಗಣಿತವಾಗದಿರುವುದು. ವಾಲ್ಮೀಕಿ ರಾಮಾಯಣದ ಅಯೋಧ್ಯೆಯ ವರ್ಣನೆಯನ್ನು ನೋಡಬೇಕು. “ಪುರಾತನ ಕಾಲದಲ್ಲಿ ಒಂದು ರಾಜಧಾನಿಯನ್ನಾಗಿ ಅಯೋಧ್ಯೆಯನ್ನು ಮನು ಕಟ್ಟಿದನಂತೆ. ಅವನ ತರುವಾಯ ಬಂದ ಆ ವಂಶದ ರಾಜರು ಅದನ್ನು ವಿಸ್ತರಿಸಿದರು. ಇನ್ನಷ್ಟು ಚಂದಗೊಳಿಸಿದರು. ರಾಜಧಾನಿಯಲ್ಲಿ ನಡೆಯುತ್ತಿದ್ದ ನಗರ ಜೀವನ, ಅಲ್ಲಿನ ಬದುಕು….. ಹೇಗೆ ಸುಖವ್ಯವಸ್ಥೆಗೊಂಡಿದ್ದಿತು ಎಂಬುದರ ಸುಂದರ ವರ್ಣನೆ ಅಲ್ಲಿ ದೊರಕುತ್ತದೆ. ಬದುಕಿನ ಧಾರಾಳ, ಮನೋಹರತೆ, ಅನೇಕ ಮಟ್ಟಗಳಲ್ಲಿ ಜೀವನಕ್ಕಿದ್ದ ಅವಕಾಶಗಳು, ಜನರ ಕಸುಬು ಉದ್ಯೋಗಗಳು ಇವುಗಳ ಚೆಲುವಾದ ವರ್ಣನೆಗಳು ಬರುತ್ತವೆ. ಸಾವಿರಾರು ವರ್ಷಗಳ ಮೇಲೆ ಅದನ್ನು ಓದಿದವರಿಗೆ ಈಗಿನ್ನು ನಮ್ಮ ಊರು ಅಷ್ಟು ಚೆನ್ನಾಗಿ ಸುರಚಿತವಾಗಿ ಆಳಿಕೆಗೊಂಡು ಸುಖಸಂಪತ್ತುಗಳಿಂದ ಕೂಡಿ ಅಯೋಧ್ಯೆಯಂತೆ ಇರುವ ಹಾಗಿದ್ದರೆ ! ರಾಮನು ಮದುವೆಯಾದ ಒಂದು ವರ್ಷಕಾಲ ಸುಮಾರು ಅರಸು ಕುಮಾರರು ತಮ್ಮ ಮಡದಿಯರೊಡನೆ ತಮ್ಮ ಬೇರೆ ಬೇರೆ ಮಹಲುಗಳಲ್ಲಿ ಸುಖವಾಗಿದ್ದರು. ಸೀತೆಗೆ ಕೂಡ ರಾಮನ ಅರಮನೆಯಲ್ಲಿ ಸ್ಥಾಯಿಯಾದ ನೆಲೆಯಿದ್ದಿತು ಎಂಬುದನ್ನು ‘ನಿತ್ಯಂ ಹೃದಿ ಸಮರ್ಪಿತಃ’ ಎಂದು ಅವಳೇ ತಿಳಿಸುತ್ತಾಳೆ. ಆದರೆ ಅರಮನೆಯ ಪರಿಸ್ಥಿಗಳು ಬೇರೆಯಾಗಿದ್ದವು. ರಾಜನ ಮೂವರು ರಾಣಿಯರಿಗೂ ಅವರ ಸಿಬ್ಬಂದಿಯವರಿಗೂ ನಡುವೆ ಬೆಳೆ ಸಂಬಂಧಗಳಲ್ಲಿ ವಿರಸವಿತ್ತು”.

[1]

ವಾಲ್ಮೀಕಿ ಅಯೋಧ್ಯೆಯ ಬಗ್ಗೆ ಎಷ್ಟೇ ಸುಂದರವಾಗಿ ವರ್ಣಿಸಿದರೂ ನಮ್ಮ ಬುಡಕಟ್ಟು ಕಥೆಗಾರರಿಗೆ ಅದರ ಗೊಡವೆಯೇ ಬೇಡ. ತಾವು ನೋಡಿರದ ಲೋಕವೊಂದರ ಸುಳ್ಳು ವರ್ಣನೆ ಅವರಿಗೆ ಬೇಕಿಲ್ಲ. ತಮ್ಮ ಕಲ್ಪನಾ ಲೋಕದಿಂದ ಪವಾಡಗಳನ್ನು ಸೃಷ್ಟಿ ಮಾಡಬಲ್ಲರೇ ಹೊರತು ಅವರ ಅರಮನೆಗಳ ವೈಭವೋಪೇತ ಜೀವನವನ್ನಂತೂ ಅಲ್ಲ. ಆದರೆ ವಾಲ್ಮೀಕಿ ವರ್ಣಿಸಿರುವ ಅಯೋಧ್ಯೆಯಾದರೂ ಸತ್ಯವಾದದ್ದೇ? ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಪ್ರೊ.ಎಚ್.ಡಿ.ಸಂಕಾಲಿಯಾ ಅವರ ಪ್ರಕಾರ ಸದ್ಯದ ರಾಮಾಯಣದಲ್ಲಿ ಕಂಡುಬರುವ ಅಯೋಧ್ಯೆಯ ವರ್ಣನೆ ಖಂಡಿತ ಆನಂತರ ಸೇರಿಸಿದ್ದಿರಬಹುದು. “ಉತ್ತರಪ್ರದೇಶ ಹಾಗೂ ಬಿಹಾರಗಳಲ್ಲಿ ದೊರೆತ ಪುರಾತತ್ವ ಶಾಸ್ತ್ರೀಯ ಆಧಾರಗಳ ಹಿನ್ನೆಲೆಯಲ್ಲಿ ನೋಡಿದಾಗ ಕ್ರಿ.ಪೂ. ನಾಲ್ಕನೇ ಶತಮಾನಕ್ಕೆ ಮೊದಲೇ ಅಯೋಧ್ಯೆಯು ಇಟ್ಟಿಗೆಗಳಿಂದ ನಿರ್ಮಿತವಾಗಿದ್ದಿರಬಹುದೆಂಬ ರಾಮಾಯಣದ ವರ್ಣನೆಯನ್ನು ಅನುಮೋದಿಸಲು ಸಾಧ್ಯವಾಗದು. ಅರಮನೆಗಳನ್ನು ಹೇಗೆ ಸಜ್ಜುಗೊಳಿಸುತ್ತಿದ್ದರೆಂಬ ಅಂಶವನ್ನು ಪರಿಶೀಲಿಸಿದಾಗ ಕೂಡ ಇದೇ ಬಗೆಯ ನಿರ್ಣಯಕ್ಕೆ ಬರಬಹುದು. ಮುತ್ತು, ರತ್ನ, ವಜ್ರ ವೈಢೂರ್ಯಗಳ ಆಭರಣಗಳ ಜೊತೆಗೆ ಹಿರಣ್ಯ ಮತ್ತು ಸುವರ್ಣದ ಆಭರಣಗಳನ್ನು ಸ್ತ್ರೀಪುರುಷರು ಧರಿಸುತ್ತಿದ್ದರು. ಕುಶಾನ ಮತ್ತು ರೋಮನ್ ಸಾಮ್ರಾಜ್ಯಗಳ ಸ್ಥಾಪನೆಯ ಬಳಿಕ ರೋಮ್‌ನೊಂದಿಗೆ ಭೂ ಹಾಗೂ ಜಲಸಂಪರ್ಕಗಳು, ವಾಣಿಜ್ಯ ವ್ಯವಹಾರಗಳು ಕುದುರಿದ ಬಳಿಕ ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಇಂಥ ಒಂದು ಸಮೃದ್ಧ ರಾಜ್ಯದ ಸ್ಥಾಪನೆಯಾಯಿತು. ನಗರದ ಮೇರೆಗಳು, ಅರಮನೆಗಳ ಕಟ್ಟಡ, ಪೀಠಗಳು, ಸಾರಿಗೆ ಸಾಧನಗಳು ಇವೇ ಮುಂತಾದ ಭೌತ ವಸ್ತುಗಳ ವರ್ಣನೆ ಅತ್ಯಂತ ಅಭಿವೃದ್ದಿ ಹೊಂದಿದ ಸ್ಥಿತಿಗೆ ದ್ಯೋತಕ. ಈ ವರ್ಣನೆ ಇತಿಹಾಸ ಯುಗದ ಆರಂಭ ಘಟ್ಟದಲ್ಲಿ ಅಂದರೆ ಕ್ರಿ.ಪೂ. ೨೫೦ ಮತ್ತು ಕ್ರಿ.ಶ.೨೫೦ರ ನಡುವೆ ಇದ್ದ ಪಟ್ಟಣ ನಗರಗಳನ್ನು ನೆನಪಿಗೆ ತರುವಂತಿದೆ.”[2] ನಾಗಾರ್ಜುನಕೊಂಡದಂಥ ಸಮಕಾಲೀನ ನಗರ ವೈಭವವನ್ನು ಕಂಡಿದ್ದ ಒಬ್ಬ ಕವಿ ಆ ನಂತರ ಈ ವರ್ಣನೆಯನ್ನು ಮಾಡಿ ಅಯೋಧ್ಯೆಯ ಜೊತೆಗೆ ಸಮೀಕರಿಸಿರಲೂಬಹುದು ಎಂದು ಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಅಭಿಪ್ರಾಯ ಪಡುತ್ತಾರೆ.[3]

ನಮ್ಮ ಈ ರಾಮಾಯಣದಲ್ಲಿ ರಾಮಸೀತೆಯರ ಲಗ್ನ ಮಾತ್ರ ನಡೆಯುತ್ತದೆಯೇ ಹೊರತು, ಒಟ್ಟು ನಾಲ್ಕು ಜನ ಅಣ್ಣ ತಮ್ಮಂದಿರ ಸಮೂಹ ಲಗ್ನವಲ್ಲ. ದಶರಥ ಮತ್ತು ಅವನ ರಾಣಿಯರು ಇಲ್ಲಿ ಬರಲು ಸಾಧ್ಯವೇ ಇಲ್ಲ. ಯಾಕೆಂದರೆ ದಶರಥ ಈಗಾಗಲೇ ತೀರಿಕೊಂಡಿದ್ದಾನೆ! ಆದರೆ ಇದಕ್ಕೆ ಮೊದಲೇ ಅಯೋಧ್ಯೆ ಮತ್ತು ಅಲ್ಲಿನ ರಾಜ್ಯಭಾರಕ್ಕೆ ಸಂಬಂಧಿಸಿದ ವಿಚಾರ ಗೊಂಡರ ರಾಮಾಯಣದಲ್ಲೂ ಬರುತ್ತದೆ. ಭರತ ಮತ್ತು ಶತೃಜ್ಞರು ರಾಮನನ್ನು ಹುಡುಕಿ ಬಂದು, ರಾಮ ಹಿಂದಕ್ಕೆ ಬರಲು ಒಪ್ಪದೇ ಇದ್ದಾಗ, ಅವನ ಕಾಡೋವಿ ಅಂದರೆ ಪಾದುಕೆಗಳನ್ನು ಪಡೆದು ಅವರು ಹಿಂತಿರುಗಿದರು. ಹಿಂತಿರುಗುವಾಗ ಅವರು ರಾಮನಿಗೆ ಷರತ್ತೊಂದನ್ನು ಹಾಕಿದರು. ಹನ್ನೆರಡು ವರ್ಷಗಳೊಳಗಾಗಿ ಬರದಿದ್ದಲ್ಲಿ ‘ಕೊಂಡ ತೆಗೆದು, ಕೆಂಡ ಮಾಡಿ ಅದರಲ್ಲಿ ಹಾರುತ್ತೇವೆ’ ಎಂದು ಹೇಳಿ ಹಿಂತಿರುಗಿದ್ದರು. ಅವರು ರಾಜ್ಯ ತಲುಪಿ ಸುಖದಿಂದ ರಾಜ್ಯವಾಳಿಕೊಂಡು ಇದ್ದರು. ಭರತನ ರಾಜ್ಯಭಾರ ಹೇಗಿತ್ತು ಎಂದರೆ:

ಸುಖದಲ್ಲು ಕಾಲ ಕಳಿವಂಗಾ ತಾನ
ಅರುಮನೆಯಲ್ಲವರೆ ಉಳುವವರಾ
ಒಕ್ಕುಲು ಮಕ್ಕೂಳು ಸಲಿಕೊಂಡಾ ತಾನ
ಆಳೂ ಮಕ್ಕೂಳು ಕಟ್ಟಿಕೊಂಡಾ

ಇದು ನಮ್ಮ ಬುಡಕಟ್ಟು ಕಥೆಗಾರರ ಆಶಯ. ಯಾವ ರಾಜನೇ ಬಂದರೂ ದುಡಿಯುವ ಸಮುದಾಯಕ್ಕೆ ಸೇರಿದ ಅನ್ನ ಹಾಕುವ ಒಕ್ಕಲು ಮಕ್ಕಳು ಮತ್ತು ಆಳು ಮಕ್ಕಳನ್ನು ಸಲಹುವುದು ಅವನ ಕರ್ತವ್ಯ. ಇದು ಕಥೆಗಾರನ ಆದರ್ಶವಿರಬಹುದು. ಆದರೆ ಅಂದಿನ ದಿನಗಳಲ್ಲಿ ಈ ಶೂದ್ರ ಸಮುದಾಯದ ಬಾಳು ಹೇಗಿತ್ತು ಎಂಬುದನ್ನು ವಾಲ್ಮೀಕಿ ರಾಮಾಯಣದ ಮೂಲಕವೇ ಗಮನಿಸುವುದು ಒಳ್ಳೆಯದು. “ರಾಮ ವನವಾಸಕ್ಕೆ ಹೋದ ನಂತರ ಅಯೋಧ್ಯೆಯನ್ನು ತಲುಪಿದ ಭರತ, ದುಃಖತಪ್ತಳಾಗಿರುವ ಕೌಸಲ್ಯೆಯ ಬಳಿ ಬಂದು ತನ್ನ ನಿರ್ದೋಷಿತ್ವನ್ನು ಹೀಗೆ ಹೇಳಿಕೊಳ್ಳುತ್ತಾನೆ. ತಾಯಿ, ನಾನು ಈ ಪಾತಕದಲ್ಲಿ ಭಾಗಿಯಾಗಿಲ್ಲ, ಹಾಗೆ ಭಾಗಿಯಾದವನಾಗಿದ್ದರೆ ನೀಚ ಕುಲಗಳಿಗೆ ಸೇವೆ ಮಾಡಿದ ಪಾಪ ತಗಲುತ್ತದೆ”.[4] ಈ ರೀತಿಯಲ್ಲಿ ಶೂದ್ರರ ಸೇವೆ ಮಾಡಬಾರದೆಂಬ ಅಭಿಪ್ರಾಯಗಳು ಅನೇಕ ಸಂದರ್ಭಗಳಲ್ಲಿ ಶಿಷ್ಟ ರಾಮಾಯಣದ ತುಂಬ ಕೇಳಿ ಬರುತ್ತವೆ. ಶ್ರವಣ ಮತ್ತು ಶಂಬೂಕರನ್ನು ಮತ್ತೆ ಇಲ್ಲಿ ನೆನಪಿಸಿಕೊಳ್ಳಬಹುದು ಕೂಡ.

ಸೀತೆಯನ್ನು ಲಗ್ನ ಮಾಡಿಕೊಂಡು ಸೀದಾ ಗೋರಾರಣ್ಯಕ್ಕೆ ಹಿಂತಿರುಗಿದ ರಾಮ ಲಕ್ಷ್ಮಣರು ಅವರ ಪಾಡಿಗೆ ಅವರು ಸುಖವಾಗೇನೋ ಇದ್ದರು. ಆದರೆ ಮೂರು ದಿನವಾದರೂ ಸೀತೆಯನ್ನು ಆಳುತ್ತೇನೆ ಎಂದು ಪ್ರತಿಜ್ಞೆಗೈದಿದ್ದ ರಾವಣ ಸುಮ್ಮನಿರಬೇಕಲ್ಲ?

ಲಂಕಾ ಪಟ್ನದ ರವಣಾನು
ತಂಗಿ ಕೂಡೊಂದು ನುಡಿತನಿಯಾ
ರೂಪ ನೀನೆ ಬಿಡುಬೇಕಾ
ಸೂಳಿ ಸುಂಗಾರುನೆ ತಾಳುಬೇಕಾ
ರಾಮುಗು ಮಳ್ಳೊಂದೆ ಮಾಡಬೇಕಾ
ರಾಮುಗು ಲಗ್ಗಿನ ಆಗುಬೇಕಾ
ರಾಮುನು ಸೀತಿ ನಾನು ಆಳುಬೇಕಾ

ಅಣ್ಣನ ಮಾತಿನಂತೆ ರಾಮನನ್ನು ಮಳ್ಳು ಮಾಡಲು ಸೂಳಿ ಸುಂಗಾರದ ರೂಪ ತಾಳಿ ಬಂದ ಸೂರ್ಪನಖಿಯನ್ನು ರಾಮ ತಿರಸ್ಕರಿಸಿ ತನ್ನ ತಮ್ಮನಾದ ಲಕ್ಷ್ಮಣನಲ್ಲಿಗೆ ಹೋಗುವಂತೆ ಹೇಳಿದ್ದಲ್ಲದೆ ಅವಳ ಬೆನ್ನ ಮೇಲೆ ಹೀಗೆ ಬರೆಯುತ್ತಾನೆ

ಅವ್ಳ ಮೂಗು ಮೊಲಿನೇ ಕೊಯ್ಯಬೇಕಾ
ಮೂಗು ಮೊಲಿನೊಂದೆ ಕೊಯ್ಯಬೇಕಾ
ಗಿನ್ನು
ಮಾನು ಭಂಗನೆ ಕಳಿಬೇಕಾ
ಕೋಪಾದಲ್ಲವಳ ಬಿಡಬೇಕಾ

ತನ್ನ ಸ್ವಂತ ಕುಟುಂಬಕ್ಕೆ ಸೇರಿದವರ ಶೀಲದ ಬಗ್ಗೆ ಸದಾ ಎಚ್ಚರದಿಂದಿರುವ ಆರ್ಯ ಸತ್ಕುಲ ಸಂಜಾತನೆನಿಸಿದ ರಾಮ ತನ್ನ ವೈರಿ ಪಡೆಯ ಹೆಂಗಸಿನ ಬಗ್ಗೆ ಕ್ರೌರ್ಯದಿಂದ ನಡೆದುಕೊಂಡಿದ್ದಾನೆಂಬುದನ್ನು ಗಮನಿಸಬೇಕಾಗುತ್ತದೆ. ಮೂಲ ರಾಮಾಯಣದಲ್ಲಿ ಮೂಗು ಮತ್ತು ಕಿವಿಯನ್ನು ಕೊಯ್ಯುವ ಪ್ರಸ್ತಾಪವಿದ್ದರೆ, ಇಲ್ಲಿ ಅವಳ ಮೂಗು ಮತ್ತು ಮೊಲೆಗಳನ್ನು ಕೊಯ್ಯುವ ಮೂಲಕ ಅತ್ಯಂತ ತುಚ್ಛ ಕಾರ್ಯವನ್ನು ಎಸಗಿದ್ದಾನೆ. ಅಷ್ಟೇ ಅಲ್ಲ, ಮಾನಭಂಗವನ್ನು ಮಾಡುವಂತೆ ಲಕ್ಷ್ಮಣನಿಗೆ ಆಜ್ಞಾಪಿಸಿದ್ದಾನೆ. ಲಕ್ಷ್ಮಣ ಮಾನಭಂಗ ಮಾಡಿದನೇ ಇಲ್ಲವೇ ಎನ್ನುವ ಪ್ರಸ್ತಾಪ ಇಲ್ಲವಾದರೂ ಮೂಗು ಮೊಲೆಯನ್ನು ಕೊಯ್ದು, ಅವಳನ್ನು ಕೋಪಾವಿಷ್ಟಳಾಗುವಂತೆ ಮಾಡಿ ಕಳಿಸುತ್ತಾನೆ. ಅಂದರೆ ಮುಂದಿನ ದ್ವೇಷಕ್ಕೆ ಇನ್ನಷ್ಟು ಪ್ರಚೋದನೆಯನ್ನೇ ಅವರಿಬ್ಬರೂ ಮಾಡುತ್ತಾರೆ. ಕಷ್ಟಗಳನ್ನು ತಾವೇ ಆಹ್ವಾನಿಸಿಕೊಳ್ಳುತ್ತಾರೆ. ರಾವಣನಿಗೂ ಇಷ್ಟೇ ಬೇಕಾಗಿತ್ತು. ಅವನು ಮಾವ ಮಾರೀಚನನ್ನು ಕರೆದು ‘ಮಾಯದ ಮುರುಗ’ನ ರೂಪ ತಾಳಿ ‘ನವುಲ ಕುಣತ’ ಕುಣಿದು ಸೀತೆಯ ಮನಸ್ಸು ಸೆಳೆಯಬೇಕು ಎಂದು ಆಜ್ಞಾಪಿಸುತ್ತಾನೆ. ಮಾರೀಚ ಅದೇ ಪ್ರಕಾರ ಸುಂದರ ಮೃಗವಾಗಿ ಸುಳಿದಾಡುತ್ತಾನೆ. ಗೊಂಡರ ರಾಮಾಯಣದಲ್ಲಿ ಸೀತೆಯ ಅಭೀಪ್ಸೆಯ ಮೂಲಕ ಅತ್ಯಂತ ವಿಶಿಷ್ಟವಾದ ಜೀವನ ವಿಧಾನವೊಂದು ಇಲ್ಲಿ ಪ್ರಕಟಗೊಳ್ಳುತ್ತದೆ. ಮೂಲ ರಾಮಾಯಣ ದಲ್ಲಿ ಆ ಸುಂದರ ಮೃಗವನ್ನು ನೋಡಿದ ಸೀತೆ ಅದನ್ನು ತಂದು ಕೊಡಲೇಬೇಕೆಂದು ಹಠ ಮಾಡುತ್ತಾಳೆ. ಅದು ರಾಕ್ಷಸರ ಮಾಯೆ, ಯಾವ ಕಾರಣಕ್ಕೂ ಬೇಡವೆಂದು ರಾಮ ಬುದ್ದಿವಾದ ಹೇಳಿದಾಗ ಅದನ್ನು ಕೊಂದಾದರೂ ತರುವಂತೆ ಕೇಳಿಕೊಳ್ಳುತ್ತಾಳೆ. ಮಧ್ಯ ಭಾರತದ ಭಿಲ್ಸ್ ಮತ್ತು ಸಂತಾಲರ ರಾಮಾಯಣದಲ್ಲಿ ಸೀತೆ ಆ ಸುಂದರ ಜಿಂಕೆಯ ಮಾಂಸವನ್ನು ಬಯಸುತ್ತಾಳೆ. ಅದರ ರುಚಿಯನ್ನು ನೆನೆದು ಅಂಥ ಸೊಗಸಾದ ಜಿಂಕೆಯ ಮಾಂಸ ತನಗೆ ಬೇಕೇಬೇಕು ಎಂದು ಹಠ ಹಿಡಿಯುತ್ತಾಳೆ. ಕಾಡಿನ ವಾಸಿಗಳಿಗೆ ಇದು ಅತ್ಯಂತ ಸಹಜ. ಆ ಸಹಜ ದಾರಿಯನ್ನೇ ಸಂತಾಲರ ಸೀತೆ ಹಿಡಿದಿದ್ದಾಳೆ[5] ಆದರೆ ನಮ್ಮ ಕನ್ನಡದ ಗೊಂಡರ ಸೀತೆ ಕೇವಲ ಜಿಂಕೆಯನ್ನು ಬಯಸುವವಳಲ್ಲ ಅಥವಾ ಸಂತಾಲರ ಸೀತೆಯಂತೆ ಕೇವಲ ಅದರ ಮಾಂಸ ಅಪೇಕ್ಷಿಸುವವಳೂ ಅಲ್ಲ. ಅವಳಿಗೆ ಬೇಕಾಗಿರುವುದು ಆ ಸುಂದರ ಜಿಂಕೆಯ ಚರ್ಮ. ಆ ಚರ್ಮದಿಂದ ಅವಳು ತನ್ನ ದೇಹಕ್ಕೊಪ್ಪುವ ಸುಂದರ ಕುಬಸ ಹೊಲೆದುಕೊಳ್ಳಬೇಕಾಗಿದೆ.!

ಜಿಂಕೆಯ ಚರ್ಮದಿಂದ ಕುಬುಸ ಹೊಲೆದುಕೊಳ್ಳುವ ಅದಮ್ಯ ಆಸೆ ವ್ಯಕ್ತಪಡಿಸುತ್ತಿರುವ ಸೀತೆ ರಾಮನ ಯಾವ ಉಪದೇಶಕ್ಕೂ ಕಿವಿಗೊಡುವುದಿಲ್ಲ. ಅಷ್ಟೇ ಅಲ್ಲ, ಮಾತೃಪ್ರಧಾನ ಕುಟುಂಬದ ದಕ್ಷ ಹೆಣ್ಣುಮಗಳ, ಸ್ಪಚ್ಛಂದವಾಗಿ ಬದುಕುವ ಬುಡಕಟ್ಟು ಸಮಾಜದ ನಿರ್ಭೀತ ಹೆಣ್ಣುಮಗಳೊಬ್ಬಳ ನಿರಾತಂಕ ವರ್ತನೆಯನ್ನು ತೋರುತ್ತಾಳೆ.

ಅದರ ಚಮ್ಮಾನೆ ತೆಗೆದಿದುರಾ
ನನಗೊಂದು ಕುಬುಸ ಮಾಡದಿದುರಾ
ರಾಮಸ್ವಾಮಿಯೇ ಪತಿಯಲ್ಲಾ
ನನ್ನ ಪತಿಯೊಂದೆ ನೀವಲ್ಲಾ
ನಿಮ್ಮ ಮಾತೊಂದೆ ಕೇಳುವುದಿಲ್ಲಾ

ತನ್ನ ಇಷ್ಟವನ್ನು ಪೂರೈಸದ ಗಂಡ ಇದ್ದರೆಷ್ಟು, ಬಿಟ್ಟರೆಷ್ಟು. ನನ್ನ ಸುಖಾಕಾಂಕ್ಷೆಗಳನ್ನು ಈಡೇರಿಸಲಾರದ ನೀನು ಪತಿಯೇ ಅಲ್ಲ ಎಂಬ ಬಿರುನುಡಿಗಳನ್ನು  ಆಡುತ್ತಾಳೆ. ಒಟ್ಟಾರೆ ಸೀತೆಯ ಈ ಆಸೆ ಮತ್ತು ಕುಬುಸದ ಬಗೆಗಿನ ತೀವ್ರಾಸಕ್ತಿಯ ಈ ಭಾಗ ಆದಿಮ ಸಮಾಜಗಳ  ವಸ್ತ್ರ ವಿನ್ಯಾಸದ ಬಗ್ಗೆಯೂ ಬೆಳಕು ಚಲ್ಲುತ್ತದೆ.

ರಾವಣ ಸೀತೆಯನ್ನು ಹೊತ್ತೊಯ್ಯುತ್ತಾನೆ. ಜಟಾಯಿಯ ಯುದ್ಧವೂ ನಡೆಯುತ್ತದೆ. ಏಳು ಸಮುದ್ರ ದಾಟಿ ಲಂಕೆಯನ್ನು ಸೇರುವ ರಾವಣ ಅಲ್ಲಿನ ಮಾವಿನ ತೋಪಿನಲ್ಲಿ ಕ್ಷೇತ್ರವೊಂದನ್ನು ಕಟ್ಟಿಸಿ ಸೀತೆಯನ್ನು ಅಲ್ಲಿಡುತ್ತಾನೆ. ಅಶೋಕ ವನದ ಬದಲು ಮಾವಿನ ತೋಪಿನ ಕಲ್ಪನೆಯೂ ಅಷ್ಟೇ ಸಹಜವಾಗಿದೆ.

ಇತ್ತ ‘ಆ ಲಕ್ಷ್ಮಣಾ’ ಎಂದು ಕೂಗಿದ ರಾಮನನ್ನು ಹುಡುಕಿ ಲಕ್ಷ್ಣಣ ಹೋಗುತ್ತಾನೆ. ಇದು ರಾಕ್ಷಸಮಾಯೆ ಎಂಬುದು ಇಬ್ಬರಿಗೂ ತಿಳಿಯುತ್ತದೆ. ಸೀತೆಯನ್ನು  ಯಾಕೆ ಬಿಟ್ಟು ಬಂದೆ ಎಂದು ರಾಮ ಲಕ್ಷ್ಮಣನ ಮೇಲೆ ಸಿಟ್ಟು ಮಾಡುತ್ತಾನೆ. ಈ ಸಂದರ್ಭವನ್ನು ವರ್ಣಿಸುವಾಗ ನಮ್ಮ ಕಥೆಗಾರ ತಿಮ್ಮಪ್ಪನ ಬಾಯಿಂದ ಅಪರೂಪದ ಆಂಗ್ಲ ಪದವೊಂದು ನುಸುಳಿ ಬಂದಿದೆ. ಬಹುಶಃ ಇಡೀ ಕಾವ್ಯದಲ್ಲಿ ಬಳಕೆಯಾಗಿರುವ ಏಕೈಕ ಆಂಗ್ಲ ಪದ ಇದಾಗಿದೆ. ಸೀತೆ ತನ್ನನ್ನು ಹೇಗೆ ಜರಿದಳು ಎಂಬುದನ್ನು ಲಕ್ಷ್ಮಣ ರಾಮನಿಗೆ ವಿವರಿಸುವಾಗ ನುಸುಳಿರುವ ಪದ ಇದು

ರಾಮಾ ಸ್ತಾರು ಸಾಯಲಿ ಎಂದು
ನನ್ನ ನೀನೇನು ಆಳಬೇಕಾ
ಆಳುವ ಮನಸು ನಿನಗೇನಾ
ಅಂದಳು ನನಗೀಗ ಜರಿದಿದುಳು
ಇನಸಟ್ಟು ನನಗೆ ಮಾಡಿದಳು

ಇನ್ ಸಲ್ಟ್ (ಅವಹೇಳನ) ಎಂಬ ಪದ ನಮ್ಮ ತಿಮ್ಮಪ್ಪನ ಬಾಯಲ್ಲಿ ‘ಇನಸಟ್ಟು’ ಆಗಿ ಹೊರಬಿದ್ದಿದೆ. ಪರಭಾಷಾ ಪ್ರಭಾವದ ಮೂಲಕ ಅಪರಿಚಿತ ಪದಗಳು ಹೇಗೆ ಕನ್ನಡೀಕರಣಗೊಳ್ಳುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.

* * *

ಮುಂದಿನ ಲೋಕ ವಾನರರಿಗೆ ಸಂಬಂಧಿಸಿದ್ದು. ರಾಮಾಯಣ ಮಹಾಕಾವ್ಯದ ಮೊದಲ ಹಂತವಾದ ಮಾನವ ಲೋಕ, ಎರಡನೇ ಹಂತದ ವಾನರ ಲೋಕ ಹಾಗೂ ಮೂರನೇ ಹಂತದ ರಾಕ್ಷಸ ಲೋಕಗಳು ವಿಚಾರಾರ್ಹವಾದ ಸಂಗತಿಗಳಾಗಿವೆ. ಉತ್ತರದ ವಿಶಾಲ ನದೀ ಮುಖಜ ಭೂಮಿಗಳಲ್ಲಿ ಆ ಕಾಲಕ್ಕೆ ಮುಂದುವರಿದ ರೀತಿಯ ಬೇಸಾಯ ಕ್ರಮವನ್ನು ಅನುಸರಿಸಿ, ಬದುಕಿನಲ್ಲೂ ನಾಗರೀಕತೆಯನ್ನು ರೂಢಿಸಿಕೊಂಡು ಬದುಕುತ್ತಿದ್ದ ಆರ್ಯರು ತಮ್ಮ ಬೇಸಾಯದ ಉದ್ದೇಶದಿಂದಲೇ ಕೃಷಿ ಪ್ರದೇಶಗಳನ್ನು ವಿಸ್ತರಿಸತೊಡಗಿದರು. ಹೀಗೆ ವಿಸ್ತರಿಸುತ್ತಾ ಬರುತ್ತಿದ್ದಂತೆ ಪಾಳೇಪಟ್ಟುಗಳು ಜನಪದಗಳಾಗಿಯೂ ಜನಪದಗಳು ರಾಜ್ಯಗಳಾಗಿಯೂ ಪರಿವರ್ತಿತವಾಗುತ್ತಾ ಬಂದವು. ಆ ಕಾಲಕ್ಕೆ ಪ್ರಚಲಿತದಲ್ಲಿದ್ದ ಅಯೋಧ್ಯ, ಕೋಶಲ, ಮಿಥಿಲ, ಮಗಧ ಗಾಂಧಾರ, ಗಿರಿವ್ರಜ, ಕೈಕೇಯ, ಕಾಂಬೋಜ ಮುಂತಾದ ಜನಪದಗಳನ್ನು ವಿಸ್ತರಿಸಿ ರಾಜ್ಯಗಳನ್ನಾಗಿ ಪರಿವರ್ತಿಸುತ್ತಿದ್ದ ಪದ್ಧತಿ ಕಂಡು ಬರುತ್ತದೆ.

ಆ ಕಾಲದಲ್ಲಿ ವನವಾಸ ಎಂದರೆ ಅದೊಂದು ರಾಜ್ಯ ವಿಸ್ತರಿಸುವ ಪ್ರಕ್ರಿಯೆಯೂ ಆಗಿತ್ತು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ರಾಜರು ತಮ್ಮ ಮಕ್ಕಳುಗಳನ್ನು ದೇಶಭ್ರಷ್ಟರನ್ನಾಗಿಸಿ, ಅಥವಾ ರಾಜ್ಯತ್ಯಾಗ ಮಾಡಿಸಿ ಬಲವಂತವಾಗಿಯಾದರೂ ಅವರನ್ನು ಹೊರಗೆ ಕಳಿಸಿ ತಮ್ಮ ಆಡಳಿತದ ಭೂಮಿಯನ್ನು ವಿಸ್ತರಿಸುತ್ತಿದ್ದರು. ಈ ದೃಷ್ಟಿಯಿಂದ ಈ ಹಿಂದೆ ನೋಡಿದ ನಮ್ಮ ಬುಡಕಟ್ಟುಗಳು ಹೇಳುವ ದಶರಥನ ಕಥೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬಹುದು. “ಇದ್ದಕ್ಕಿದ್ದಂತೆ ದಶರಥ ತನ್ನ ಕೋಟೆಯ ಬಾಗಿಲಿನಲ್ಲಿ ನಿಂತು ಸಾರುತ್ತಾನೆ. ‘ಇಂದಿನಿಂದ ರಾಮ ಲಕ್ಷ್ಮಣರು ದೇಶಾಂತರ ಹೋಗುತ್ತಾರೆ. ಭರತನಿಗೆ ಪಟ್ಟ  ಕಟ್ಟಲಾಗುತ್ತದೆ” ಎಂದು.

ಇನ್ನೊಂದು ಅಭಿಪ್ರಾಯದ ಪ್ರಕಾರ ರಾಜ ತಾನು ತನ್ನ ಅವಧಿಯಲ್ಲಿ ಸಂಪಾದಿಸಿದ ಆಸ್ತಿಪಾಸ್ತಿ ಹಾಗೂ ಧನಕನಕ ಸಂಪತ್ತು ತನ್ನೆಲ್ಲ ಮಕ್ಕಳಿಗೆ ಸಾಲದಾದಾಗ, ಅವರವರೊಳಗೆ ಆಸ್ತಿಯ ಬಗೆಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಮಹತ್ವಾಕಾಂಕ್ಷಿಗಳಾದ ರಾಜಕುಮಾರರು ತಾವೇ ಸ್ವತಃ ರಾಜ್ಯ ಬಿಟ್ಟು, ಅಥವಾ ಹಿರಿಯರ ಆಕಾಂಕ್ಷೆಯಂತೆ ರಾಜ್ಯತ್ಯಾಗ ಮಾಡಿ ತಮ್ಮದೇ ಆದ ಯುದ್ಧ ಮತ್ತು ಸಾಹಸಗಳ ಮೂಲಕ ಹೊಸ ಭಾಗಗಳನ್ನು ಸಂಪಾದಿಸಿ ಪ್ರತ್ಯೇಕ ಜನಪದ ಅಥವಾ ರಾಜ್ಯಗಳನ್ನು ಕಟ್ಟುತ್ತಿದ್ದರು. ಈ ಸಂದರ್ಭದಲ್ಲಿ ಪ್ರಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಅವರ ಅಭಿಪ್ರಾಯ ಗಳನ್ನು ಅವಶ್ಯವಾಗಿ ಗಮನಿಸಬೇಕು.[6]

ಆ ಕಾಲವನ್ನು ಪ್ರತಿನಿಧಿಸುವಂತಹ ಲಭ್ಯವಿರುವ ಬೌದ್ಧ ಸಾಹಿತ್ಯದ ಆಕರಗಳ ಪ್ರಕಾರ ‘ವನವಾಸ’ ಎಂಬುದು ಕ್ಷತ್ರಿಯರಲ್ಲಿ ಅತ್ಯಂತ ಸಾಮಾನ್ಯವಾದ ಒಂದು ಸಂಪ್ರದಾಯ ವಾಗಿತ್ತು. ಈಗಾಗಲೇ ಸಂಸ್ಥಾಪಿತವಾಗಿರುವ ಹಿರಿಯ ಸಾಮ್ರಾಜ್ಯಗಳ ಕಿರಿಯ ಶಾಖೆಗಳಂತೆ  ಹೊಸದಾಗಿ ಸೃಷ್ಟಿಗೊಳ್ಳುತ್ತಿದ್ದ ಈ ವಿಸ್ತರಣಾ ಪ್ರದೇಶಗಳ ಉದ್ದೇಶವೇ ಹೊಸ ಅರಣ್ಯ ಭೂಮಿಯನ್ನು ಸಾಗುವಳಿಗೆ ಮಾರ್ಪಡಿಸುವ ಇರಾದೆಯಿಂದ ಕೂಡಿರುತ್ತಿತ್ತು. ಹೀಗೆ ವನವಾಸ ಅಥವಾ ರಾಜ್ಯತ್ಯಾಗವೆಂಬ ಪರಿಕಲ್ಪನೆಯ ಮೂಲಕ ವಿಸ್ತರಣೆಗೊಳ್ಳುತ್ತಿದ್ದ ಭೂ ಪ್ರದೇಶವನ್ನು ‘ಜನಪದ’ ಎಂದು ಕರೆದು ಅದಕ್ಕೊಂದು ರಾಜಧಾನಿಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಆ ನಂತರ ಈ ವನವಾಸ ಎಂಬುದು ಒಂದು ಪುರಾಣವಾಗಿ ಮಾರ್ಪಟ್ಟದ್ದು ನಮ್ಮ ಕಾವ್ಯಗಳ ಮೂಲಕ ಮಾತ್ರ. ಈ ರೀತಿಯ ವಿಸ್ತರಣೆ ಕೇವಲ ರಾಮನೊಬ್ಬನಿಗೆ ಮಾತ್ರ ಮೀಸಲಾದುದೇನೂ ಅಲ್ಲ. ರಾಮ ಅಯೋಧ್ಯೆಯಿಂದ ಹೊರಟು ಮತ್ತೆ ಅಯೋಧ್ಯೆಗೆ ಸೇರುವವರಿಗಿನ ಕ್ರಿಯೆಯನ್ನು ಒಂದು ದೊಡ್ಡ ವಿಸ್ತರಣೆ ಎಂದು ಪರಿಗಣಿಸಿ ಅದಷ್ಟಕ್ಕೇ ಈ ಕ್ರಿಯೆ ನಿಂತಿತು ಎಂದು ಹೇಳುವ ಹಾಗಿಲ್ಲ. ರಾಮನ ಮಗನಾದ ಕುಶ ಕೂಡ ಇಂಥದೇ ಪ್ರಕ್ರಿಯೆಯ ಮೂಲಕ ಪ್ರತ್ಯೇಕ ರಾಜ್ಯವೊಂದನ್ನು ಕಟ್ಟಿ ‘ಕುಶಸ್ಥಲೀ’ ಎಂಬ ರಾಜಧಾನಿಯ ಮೂಲಕ ರಾಜ್ಯಭಾರ ಮಾಡಿದ ಎಂಬುದನ್ನು ಇಲ್ಲಿ ಗಮನಿಸಬೇಕು. ಇದೇ ಸಂದರ್ಭದಲ್ಲಿ ದಕ್ಷಿಣ ಕೋಶಲ ಮತ್ತು ಉತ್ತರ ಕೋಶಲ ಎಂಬ ವಿಂಗಡನೆಯನ್ನು ಗಮನಿಸಿದಾಗ ಉತ್ತರ ಕೋಶಲದ ಸ್ಥಾಪನೆಯ ನಂತರ, ಅದರ ಮುಂದುವರಿಕೆಯಾಗಿ ದಕ್ಷಿಣ ಕೋಶಲ ಸ್ಥಾಪನೆಯಾಗಿರುವುದನ್ನು ಯಾರಾದರೂ ಊಹಿಸಬಹುದು.

ಅಯೋಧ್ಯಾ ಕಾಂಡದಲ್ಲಿ ಬರುವ ತೋಟಗಳು, ಉದ್ಯಾನಗಳು, ಕೃಷಿ ಭೂಮಿ ಮತ್ತು ವಿವಿಧ ಕೃಷಿ ಚಟುವಟಿಕೆಗಳನ್ನು ಗಮನಿಸಿದರೆ ಆ ಕಾಲಕ್ಕೆ ಪ್ರಮುಖವೆನಿಸಿದ್ದ ವ್ಯವಸಾಯ ಭೂಮಿಯ ಅವಶ್ಯಕತೆ ಮನದಟ್ಟಾಗದೆ ಇರದು. ರಾಮನ ತಾಯಿಯಾದ ಕೌಸಲ್ಯೆಗೆ ಅವಳ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಒಂದು ಸಾವಿರ ಹಳ್ಳಿಗಳು ಮುಖ್ಯವಾಗಿ ಇಂಥ ಕೃಷಿ ಚಟುವಟಿಕೆಯ ಪ್ರದೇಶಗಳನ್ನೇ ಒಳಗೊಂಡಿದ್ದವು ಎಂಬುದನ್ನು ನೋಡುವಾಗ ಮೇಲಿನ ಮಾತಿಗೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ.

ರಾಮಾಯಣವನ್ನು ಒಂದು ಪುರಾಣ ಕಾವ್ಯ ಎಂಬುದನ್ನು ಮರೆತು ಅಲ್ಲಿ ಬರುವ ವಿವಿ ಪಾತ್ರಗಳ ನಡುವಿನ ವೈಯಕ್ತಿಕ ಪ್ರೀತಿ ಅಥವಾ ದ್ವೇಷಗಳ ಮೂಲಕವೂ ಅವರ ಸಾಮ್ರಾಜ್ಯ ವಿಸ್ತರಣೆಯ ಆಶಯಗಳನ್ನು ನಾವು ವಿಶ್ಲೇಷಿಸಬಹುದು. ದಂಡಕಾರಣ್ಯದ ಹಾದಿಯ ಮಧ್ಯೆ ಮರವೊಂದರ ಕೆಳಗೆ ವಿಶ್ರಮಿಸುತ್ತಾ ಆಹಾರಕ್ಕಾಗಿ ರಾಮ ಲಕ್ಷ್ಮಣರು ಹಂದಿಯೊಂದನ್ನು, ಹೋತವೊಂದನ್ನು ಬಾಣಬಿಟ್ಟು ಬೇಟೆಯಾಡಿದ ನಂತರ ಅಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ರಾಮ ತನ್ನ ರಾಜ್ಯತ್ಯಾಗದ ದುರದೃಷ್ಟಕ್ಕಾಗಿ ದುಃಖಿಸುತ್ತಾ ಹೀಗೆ ಹೇಳುತ್ತಾನೆ. “ದಶರಥ ಇಂತಹ ಕಷ್ಟ ತಂದಿಟ್ಟ ನೀಚ, ಕಾಮುಕ, ಮಗನನ್ನು ದಾರುಣ ಸಂಕಷ್ಟಕ್ಕೆ ಈಡು ಮಾಡಿದ. ಭರತ ರಾಜನಾಗಿ ಮೆರೆಯುತ್ತಿದ್ದಾನೆ. ಕೈಕೆಗೆ ಅಧಿಕಾರ ಬಂತು. ಸಿರಿಸಂಪದಗಳಲ್ಲಿ ಮುಳಗಿ ತೇಲುತ್ತಿರುವ ಕೈಕೆಗೆ ಸೊಕ್ಕು ಬರದಿರುತ್ತದೆಯೇ?” (ಅಯೋಧ್ಯಾಕಾಂಡ)

ಭರತನು ತನ್ನ ಅಣ್ಣನಾದ ರಾಮನನ್ನು ಮತ್ತೆ ಹಿಂದಕ್ಕೆ ಬರುವಂತೆ ಮನವೊಲಿಸಲು ತನ್ನ ‘ಸೈನ್ಯದ ಸಮೇತ’ ಚಿತ್ರಕೂಟಕ್ಕೆ ಬರುತ್ತಿದ್ದಾನೆ. ಆ ಗದ್ದಲ ಕೇಳಿ ಅಲ್ಲಿ ಬರುತ್ತಿರುವವರು ಯಾರು ನೋಡು ಎಂದು ಲಕ್ಷ್ಮಣನಿಗೆ ರಾಮ ಹೇಳುತ್ತಾನೆ. ಮರವೊಂದನ್ನು ಹತ್ತಿ ಅದನ್ನು ನೋಡಿದ ಲಕ್ಷ್ಮಣನ ಪ್ರತಿಕ್ರಿಯೆ ನೋಡಿ “ಇನ್ನಾರು ಬರುತ್ತಿದ್ದಾರೆ, ಕೈಕೆಯ ಮಗ ನಮ್ಮೊಂದಿಗೆ ಯುದ್ಧಕ್ಕೆ ಬರುತ್ತಿದ್ದಾನೆ. ರಾಜ್ಯವನ್ನೆಲ್ಲಾ ಆಕ್ರಮಿಸಿದರೂ ತೃಪ್ತಿ ಇಲ್ಲ. ಕೊಲ್ಲುತ್ತೇನೋ ಭರತ, ನಿನ್ನ ತಾಯಿ, ಬಂಧು, ಸ್ನೇಹಿತರನ್ನೆಲ್ಲಾ ಕೊಲ್ಲುತ್ತೇನೆ”. (ಅಯೋಧ್ಯಾ ಕಾಂಡ ೬೯) ‘ಲಕ್ಷ್ಮಣನ ವರ್ತನೆ ತಂದೆಯ ಮಾತುಳಿಸಲು ತ್ಯಾಗಮಯಿಗಳಾಗಿ ಅರಣ್ಯವಾಸಕ್ಕೆ ತೆರಳಿದ ಸತ್ಪುರುಷನಂತಿಲ್ಲ. ಸದ್ಯಕ್ಕೆ ರಾಜ್ಯಭ್ರಷ್ಟನಾಗಿ, ಸಮಯಕ್ಕಾಗಿ ಕಾದು ತಲೆ ಮರೆಸಿಕೊಂಡಿರುವ ಕೂಟದ ಸದಸ್ಯನಂತೆ ಅರಚಾಡುತ್ತಿದ್ದಾನೆ. ರಾಜ್ಯತ್ಯಾಗಕ್ಕೆ ಮೊದಲು ರಾಮ ಲಕ್ಷ್ಮಣ ಭರತ ಶತೃಜ್ಞರ ನಡುವೆ ವೈಮನಸ್ಯವಿದ್ದ ಉಲ್ಲೇಖವಿಲ್ಲ ಅಥವಾ ಭರತ ಹಿಂದಿನಿಂದಲೇ ಸ್ವಾರ್ಥಿಯೂ, ಆಕ್ರಮಣಕಾರಿಯೂ ಆಗಿ ತೊಂದರೆ ಕೊಡುತ್ತಾ ಬಂದ ಸ್ವಭಾವದ ಬಗ್ಗೆಯಾದರೂ ಪ್ರಸ್ತಾಪವಿಲ್ಲ. ಕೈಕೆ ರಾಜ್ಯಾಧಿಕಾರದ ವರವನ್ನು ಕೇಳಿದಾಗಲೂ ಭರತ ಹಾಜರಿರಲಿಲ್ಲ. ಆ ಸಂದರ್ಭದಲ್ಲಿ ಭರತನ ನಿಲುವೇನು ಎಂಬ ಬಗ್ಗೆ ಕವಿ ಬರೆದಿಲ್ಲ. ಹೀಗಿರುವಾಗ ಕೈಕೆಯ ಮಗ ಬರುತ್ತಿದ್ದಾನೆ ಎಂದೊಡನೆ ತಮ್ಮೊಂದಿಗೆ ಯುದ್ಧಕ್ಕೇ ಬರುತ್ತಿದ್ದಾನೆ ಎಂದು ಲಕ್ಷ್ಮಣ ಯಾಕೆ ಭಾವಿಸಬೇಕು, ಅವನ ತಾಯಿ ಬಂಧು ಬಳಗವನ್ನೆಲ್ಲಾ ಕೊಲ್ಲುತ್ತೇನೆ ಎಂದು ಯಾಕೆ ಲಕ್ಷ್ಮಣ ಮಾತನಾಡುತ್ತಿರುವುದು? ದಾಯಾದಿ ಕಲಹದಿಂದ ರಾಜ್ಯಭ್ರಷ್ಟನಾಗಿ ಬಂದಿರುವ ರಾಮಕಥೆಯೊಂದರ ಪಾತ್ರವಾಗಿ”[7]

ರಾಮನ ಪಟ್ಟಾಭಿಷೇಕ ಪ್ರಕರಣವೂ ಅಷ್ಟೆ. ಭರತ ಅಯೋಧ್ಯೆಯಲ್ಲಿ ಇರುವುದೇ ಇಲ್ಲ. ಕೇವಲ ಮೂರು ದಿನಗಳಲ್ಲಿ ಪಟ್ಟಾಭಿಷೇಕ ಆಗಬೇಕು ಎಂದು ದಶರಥ ನಿಶ್ಚಯಿಸುತ್ತಾನೆ. ತುಂಬ ಗಡಿಬಿಡಿಯಲ್ಲಿ ಪಟ್ಟಾಭಿಷೇಕದ ಸಿದ್ಧತೆಗಳು ನಡೆಯುತ್ತವೆ. ಆದರೆ ಕೊನೆಗೂ ಅದು ಕೈಗೂಡುವುದಿಲ್ಲ ಎಂಬ ಮಾತು ಬೇರೆ. ಅಂಥ ಒಂದು ಮಹತ್ವದ ಕಾರ್ಯಕ್ರಮಕ್ಕೆ ಭರತನನ್ನು ಕರೆಸುವ ಪ್ರಯತ್ನವನ್ನೂ ಮಾಡುವುದಿಲ್ಲ, ಬದಲಾಗಿ ದಶರಥನೇ ತನ್ನ ಅನುಮಾನವನ್ನು ವ್ಯಕ್ತಪಡಿಸಿ ಅವನು ಬರುವಷ್ಟರಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಮುಗಿಸಿಬಿಡಬೇಕು ಎಂಬ ಇರಾದೆಯಲ್ಲಿ ಇರುತ್ತಾನೆ.

ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟಿದ್ದುದೇ ನಿಜವಾಗಿದ್ದ ಪಕ್ಷದಲ್ಲಿ ರಾಮ ಲಕ್ಷ್ಮಣರು ಸದಾ ಧನುರ್ಧಾರಿಗಳಾಗಿ ಇರಬೇಕಾಗಿದ್ದ ಅವಶ್ಯಕತೆ ಇರಲಿಲ್ಲ. ಕೇವಲ ಧನಸ್ಸು ಅಷ್ಟೇ ಅಲ್ಲ, ಇನ್ನೂ ಹಲವು ಬಗೆಯ ಆಯುಧಗಳೂ ಅವರಲ್ಲಿದ್ದವು ಎಂಬುದಕ್ಕೆ, ಹಾಗೂ ಆ ಮೂಲಕ ಅವರು ಕಾಡಿನಲ್ಲಿ ಅನೇಕ ರೀತಿಯ ಹಿಂಸೆಗಳನ್ನೂ ಮಾಡುತ್ತಿದ್ದರೆಂಬುದಕ್ಕೆ ಸೀತೆ ಹೇಳುವ ಈ ಮಾತುಗಳನ್ನೇ ಗಮನಿಸೋಣ


[1]      ವಾಲ್ಮೀಕಿ ರಾಮಾಯಣ :ವಿ.ಸೀತಾರಾಮಯ್ಯ, ಪುಟ ೧೭

[2]      H.D. Sankalia : The Ramayana in Historical Perspective ಅನು :ಮಹಾಬಲೇಶ್ವರರಾವ್

[3]      Romila Thapar : Exile and Kingdom (Some thoughts on Ramayana)

[4]      ಬಂಜೆಗೆರೆ ಜಯಪ್ರಕಾಶ್ :ಇದೇ ರಾಮಾಯಣ, ಪುಟ ೨

[5]      Romakatha in Tribal and Folk Tradition of India : K.S. Singh, BirendraNath Data

[6]      Romila Thapar : Exile and Kingdom

[7]      ಬಂಜಗೆರೆ ಜಯಪ್ರಕಾಶ್ :ಇದೇ ರಾಮಾಯಣ