ವಾನರ ಬುಡಕಟ್ಟುಗಳ ಸ್ನೇಹವೇನೋ ಆಯಿತು. ಈಗ ರಾಕ್ಷಸರ ವಿಚಾರಕ್ಕೆ ಬರೋಣ. ನಾನೀಗಾಗಲೇ ಹೇಳಿದಂತೆ ರಾವಣನ ಸೋದರರು ಎನ್ನಲಾದ ಖರದೂಷಣರ ಮೂಲಕ ಹಾಗೂ ಶೂರ್ಪನಖಿಯ ಘಟನೆಯ ಮೂಲಕ ರಾಕ್ಷಸರ ನಿಕಟ ಪರಿಚಯ ರಾಮ ಲಕ್ಷ್ಮಣರಿಗೆ ಆಗಿದೆ. ಸೀತೆಯನ್ನು ಅಪಹರಿಸಿರುವವನು ರಾವಣ ಎಂದು ಗೊತ್ತಾದ ಮೇಲಂತೂ ಅವನ ಮೇಲೆ ಯುದ್ಧಕ್ಕೆ ಹೋಗುವುದು ಅನಿವಾರ್ಯವಾಗಿದೆ. ರಾಜ್ಯ ವಿಸ್ತರಣೆಯ ಕಾಯಕವನ್ನು ಕೈಗೊಂಡು ಬಂದ ರಾಮ ಲಕ್ಷ್ಮಣರಿಗೆ ಇದೇ ಬೇಕಾಗಿತ್ತು ಕೂಡ. ಗೆಳೆಯ ಸುಗ್ರೀವನ ಸೈನ್ಯದಲ್ಲಿ ಬಲಾಢ್ಯನೆನಿಸಿದ ಹನುಮಂತ ತನ್ನೆಲ್ಲ ಸಾಹಸದೊಡನೆ ಲಂಕೆಗೆ ಹಾರಿದ್ದಾನೆ. ಮೂಲ ರಾಮಾಯಣದಲ್ಲಿ ಲಂಕೆಯ ಬಾಗಿಲಲ್ಲೆ ಲಂಕಿಣಿ ಎಂಬ ರಾಕ್ಷಸಿ ಬೃಹದಾಕಾರವಾಗಿ ಅಡ್ಡಡ್ಡ ಬಿದ್ದಿರುತ್ತಿದ್ದಳು. ಆದರೆ, ಗೊಂಡರ ರಾಮಾಯಣದಲ್ಲಿ ಲಂಕಿಣಿಯ ಬದಲು ಕುಂಭಕರ್ಣನೇ ಬೃಹದಾಕಾರವಾಗಿ ಮಲಗಿದ್ದಾನೆ. ಅವನು ಜೋರಾಗಿ ಉಸಿರಾಡುತ್ತಿದ್ದಾನೆ. ಅದನ್ನು ಪರೀಕ್ಷಿಸಲು ಹೋದ ಹನುಮಂತ, ಆ ಬಲವಾದ ಉಸಿರಿನ ಸೆಳೆತಕ್ಕೆ ಸಿಕ್ಕಿ ತಾನೂ ಮೂಗಿನಲ್ಲಿ ಹೋಗಿ ಸಿಕ್ಕಿಕೊಳ್ಳುತ್ತಾನೆ. ತ್ತೆನಲ್ಲಾ ಎಂದು ರಾಮನನ್ನು ನೆನೆಸಿಕೊಳ್ಳುತ್ತಿರು ವಷ್ಟರಲ್ಲಿ, ಕುಂಭಕರ್ಣ ಬಲವಾಗಿ ಸೀನುತ್ತಾನೆ. ಆಗ ಹನುಮಂತ ಹನ್ನೆರಡು ಮುಡಿಗೆದ್ದೆ ತಲೆಗಡುಗೆ ಹೋಗಿ ಬಿದ್ದನಂತೆ! ಈ ಕಲ್ಪನೆಯೇ ತುಂಬ ಚೆನ್ನಾಗಿದೆ. ಲಂಕೆ ಎಂದ ಮೇಲೆ ಅದು ನೀರಿನ ಜಾಗ. ಗದ್ದೆ ಬಯಲು ಕಲ್ಪಿಸಿಕೊಂಡರೇ ಆಹ್ಲಾದಕರ. ಅಂಥ ವಿಶಾಲ ಗದ್ದೆಗಳನ್ನೊಳಗೊಂಡ ಹನ್ನೆರಡು ಮುಡಿ ಗದ್ದೆಗಳ ಆಚೆ ಹನುಮಂತ ಬಿದ್ದನಂತೆ! ಇದು ಉತ್ಪ್ರೇಕ್ಷೆ ಎಂಬುದೇನೋ ನಿಜ. ಹಾಗೆ ನೋಡಿದರೆ ಇಡೀ ಕಾವ್ಯವೇ ಉತ್ಪ್ರೇಕ್ಷೆ ತಾನೆ! ಆದರೂ ಈ ಉತ್ಪ್ರೇಕ್ಷೆಯ ಮೂಲಕವೇ ಮತ್ತೊಂದು ವಾಸ್ತವಕ್ಕೆ ನಾವು ಮರಳೋಣ. ಅದು ಅಯೋಧ್ಯೆಯ ರಾಜರು ಲಂಕೆಯ ಪ್ರಾಚೀನ ಪದ್ಧತಿಯ ಕೃಷಿಕರನ್ನು ಗೆದ್ದ ವಾಸ್ತವತೆಯ ಬಗೆ.

ಲಂಕೆಗೆ ಹೋಲಿಸಿಕೊಂಡರೆ ವಾನರರ ಕಿಷ್ಕಿಂದೆ ತುಂಬಾ ಹಿಂದುಳಿದಿತ್ತು ಎಂಬುದು ವಿದ್ವಾಂಸರ ಅಭಿಪ್ರಾಯ. ಇಡೀ ಕಿಷ್ಕಿಂದೆಯನ್ನೆ ಒಂದು ಗುಹೆ ಎಂದು ಕರೆಯಲಾಗುತ್ತಿತ್ತು. ಕಾಡಿನಲ್ಲಿ ಲಭ್ಯವಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವುಗಳ ಮೂಲಕವೆ ಜೀವನ ಮಾಡುವುದು ಅವರ ಪದ್ಧತಿ. ಅಂದರೆ ಇವರಿಗೆ ಸ್ವತಃ ಬೆಳೆಯುವ ವಿಧಾನಗಳು ಗೊತ್ತಿರಲಿಲ್ಲ. ಕೃಷಿಯ ಉಪಕರಣಗಳ ವಿಚಾರವೂ ಎಲ್ಲಿಯೂ ಬರುವುದಿಲ್ಲ. ಹೀಗಾಗಿ ಹಣ್ಣು ಹಂಪಲು, ಗೆಡ್ಡೆ ಗೆಣಸು ಇವರ ಪ್ರಮುಖ ಆಹಾರವಾಗಿತ್ತು. ನಿಶೆ ಏರುವಂಥ ಮಾದಕ ಪಾನೀಯಗಳನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದರು ಎಂದೂ ತಿಳಿದು ಬರುತ್ತದೆ. ಯುದ್ಧ ಮಾಡುವ ಶಸ್ತ್ರಗಳ ವಿಚಾರದಲ್ಲೂ ಅಷ್ಟೆ. ಅವರಿಗೆ ಕಲ್ಲು, ಮರ ಇಂಥ ಪ್ರಾಕೃತಿಕ ವಸ್ತುಗಳೇ ಆಯುಧಗಳು.

ಆದರೆ ಲಂಕಾ, ಕಿಷ್ಕಿಂಧೆಯಷ್ಟು ಹಿಂದುಳಿದ ಪ್ರದೇಶವಾಗಿರಲಿಲ್ಲ. ರಾಮಾಯಣಗಳ ಉಲ್ಲೇಖದ ಪ್ರಕಾರವೇ ಅಲ್ಲಿ ಸೆಣಬಿನ ಉತ್ಪನ್ನಗಳು ಕಾಣಿಸಿಕೊಳ್ಳುತ್ತವೆ. ಅನೇಕ ವಿಧವಾದ ಆಹಾರ ಧಾನ್ಯಗಳೂ, ವಿವಿಧ ಬಗೆಯ ಮಾಂಸಾಹಾರಗಳು, ಖಾದ್ಯ ಪದಾರ್ಥಗಳೂ ಉಲ್ಲೇಖಿತವಾಗುತ್ತವೆ. ವಾಲ್ಮೀಕಿಯ ಪ್ರಕಾರ ಹನುಮಂತ ನೋಡಿದ ಲಂಕೆ ಹಾಗೂ ರಾವಣನ ಅರಮನೆ ಹೇಗಿತ್ತೆಂದರೆ:

“ಗಿರಿಯ ನೆತ್ತಿಯ ಮೇಲೆ ಬಿಳಿಯ ಕಟ್ಟಡಗಳಿಂದ ಕೂಡಿ ಸುಂದರವಾಗಿದ್ದ, ಆಕಾಶದಲ್ಲಿ ಸಂಚರಿಸುತ್ತಿದೆಯೋ ಎಂಬಂತಿದ್ದ ವಿಶ್ವಕರ್ಮ ನಿರ್ಮಿಸಿದ, ಲಂಕೆಯಲ್ಲಿ ರಾಕ್ಷಸ ರಾಜ ಆಳುತ್ತಿದ್ದ. ಆಗಸದಲ್ಲಿ ತೇಲುವಂತಿದ್ದ ಆ ಲಂಕಾ ನಗರವನ್ನು ಹನುಮಂತನು ಕಂಡನು. ಮಹಾ ವೀರರಾದ ಸಾವಿರಾರು ಮಂದಿ ರಾಕ್ಷಸರಿಂದ ರಕ್ಷಿತವಾದ ರಾಕ್ಷಸ ರಾಜನ ಆ ಮನೆಯನ್ನು ವಾನರನು ರಹಸ್ಯವಾಗಿ ಪ್ರವೇಶಿಸಿದನು. ಹಲವಾರು ಉಪ್ಪರಿಗೆಗಳಿಂದಲೂ ನೂರಾರು ಶ್ರೇಷ್ಠ ಸ್ತ್ರೀಯರಿಂದಲೂ ದೊಡ್ಡ ಕೋಣೆಗಳಿಂದಲೂ ಕೂಡಿದ ಆ ಮಹಾಗೃಹವನ್ನು ಅವನು ಹೊಕ್ಕನು.”

[1]

“ಆ ಸ್ಥಳದ ಸಂಪತ್ತು ವೈಭವವೂ ಹನುಮಂತನ ಮನಸ್ಸಿಗೆ ತಟ್ಟಿ ಅದು ದೇವಲೋಕದಂತಿದೆ ಅನಿಸುತ್ತದೆ. ಸುಮಾರು ನಡುರಾತ್ರಿಯ ಸಮಯ. ದೊಡ್ಡ ಹಜಾರದಲ್ಲಿ ಸಾವಿರಾರು ಚೆಲುವೆಯರು ನಯವಾದ ತೆಳುಬಟ್ಟೆಗಳನ್ನೂ ಆಭರಣಗಳನ್ನೂ ಧರಿಸಿ ಮಲಗಿದ್ದರು. ಸ್ವಲ್ಪ ಮುಂಚೆ ಭೋಗ ಸಂಭೋಗಗಳಲ್ಲಿ ತೊಡಗಿದ್ದು ‘ಪಾನನಿದ್ರಾವಶಂಗತಂ’ ಪಾನಮತ್ತರಾಗಿ ನಿದ್ರೆ ಮಾಡುತ್ತಿದ್ದರು. ಕೆಲವರು ಧರಿಸಿದ್ದ ಮುತ್ತಿನ ಸರಗಳು ಅವರ ಕೊರಳಿಂದ ಜಾರಿ ಬಿದ್ದಿದ್ದವು. ಚಿನ್ನದ ಮತ್ತು ರತ್ನಖಚಿತವಾದ ಡಾಬುಗಳು ಸಡಿಲವಾಗಿ ಬಿದ್ದಿದ್ದವು…. ಸ್ವಲ್ಪ ಮುಂದೆ ಹೋಗಲು ಎಲ್ಲ ಬಗೆಯ ಪಾನಗಳಿದ್ದವು; ಬಗೆಬಗೆಯ ಭೋಜ್ಯಗಳು, ಅನೇಕ ಮಾಂಸದ್ರವ್ಯಗಳು, ಜಿಂಕೆ, ಎಮ್ಮೆ, ಕಾಟಿ, ನವಿಲು, ಬಗೆಬಗೆಯ ಪಕ್ಷಿಗಳು, ಹಂದಿಯ ಮಾಂಸ ಇತ್ಯಾದಿಗಳ ಆಮಿಷಗಳಿದ್ದವು. ಸಾಮೂಹಿಕ ನರ್ತನಗಳಿಗೆ, ಗಾಯನಕ್ಕೆ ವಿಲಾಸಗಳಿಗೆ ಬಂದಿದ್ದ ಎಲ್ಲರೂ ಅವನ್ನು ಬಳಸಿದಂತಿತ್ತು. ಈ ಎಲ್ಲದರಲ್ಲಿಯೂ ತೃಪ್ತಿ, ಪ್ರೀತಿ, ಸಂತಸ ಕಾಣುತ್ತಿತ್ತು.”[2]

ಈ ಮೇಲಿನ ಉಲ್ಲೇಖಗಳನ್ನು ನೀಡಲು ಕಾರಣವಿದೆ. ಇತಿಹಾಸ ಶಾಸ್ತ್ರಜ್ಞರ ಪ್ರಕಾರ ಭೂಮಿಯನ್ನು ಉಳುವ ಮೂಲಕ ವ್ಯವಸಾಯ ಮಾಡುವ ಪದ್ಧತಿ ಅವರಿಗೆ ಗೊತ್ತಿದ್ದಂತಿಲ್ಲ. ಆದರೆ ಕೆತ್ತು ಬೇಸಾಯ ಅಥವಾ ಇನ್ನಾವುದೇ ರೀತಿಯ ನಿಸರ್ಗ ಬೇಸಾಯ ಮಾಡುತ್ತಿದ್ದರೆ ಎಂಬುದು ತಿಳಿದುಬಂದಿಲ್ಲ. ಮೇಲ್ಕಾಣಿಸಿದ ಉಲ್ಲೇಖದಲ್ಲಿನ ವೈಭವೋಪೇತವಾದ ರಾವಣನ ಜೀವನ ಉತ್ಪ್ರೇಕ್ಷೆಯಿಂದ ಕೂಡಿದ್ದು ಎಂದು ನಾವು ಪರಿಗಣಿಸಬಹುದಾದರೂ, ಇತಿಹಾಸಕಾರರೇ ಹೇಳುವಂತೆ ಅಲ್ಲಿ ಯಥೇಚ್ಛ ಖನಿಜ ಸಂಪತ್ತು ದೊರೆಯುತ್ತಿತ್ತು. ತಾಮ್ರ, ಚಿನ್ನ, ಬೆಳ್ಳಿ, ಕಬ್ಬಿಣ, ಇತ್ಯಾದಿಯಾಗಿ ಸಿಗುತ್ತಿದ್ದ ಆ ಸಂಪತ್ತನ್ನು  ಬೇರೆ ಪ್ರಾಂತ್ಯಗಳಿಗೆ ಸರಬರಾಜು ಮಾಡುತ್ತಿದ್ದರೇ ಇಲ್ಲವೇ ಗೊತ್ತಿಲ್ಲ. ಆದರೆ ವಾಲ್ಮೀಕಿ ರಾಮಾಯಣದ ವರ್ಣನೆಯಲ್ಲಿ ಬರುವ ಅಡುಗೆ ಪಾತ್ರೆಗಳು ಹಾಗೂ ಮಧ್ಯದ ಮಧು ಪಾತ್ರೆಗಳು ಇತ್ಯಾದಿಗಳನ್ನು ಗಮನಿಸುವಾಗ ಕ್ರಿಸ್ತಪೂರ್ವದ ರೋಮನ್ ಸಾಮ್ರಾಜ್ಯದ ಸಂಪರ್ಕವಿತ್ತೇ ಎಂಬ ಸಂಶಯ ಬರುವುದೂ ಉಂಟು ಅಥವಾ ರೋಮ್ ಜೊತೆಗಿನ ವ್ಯಾಪಾರ ವ್ಯವಹಾರ ಆರಂಭವಾದ ನಂತರದ ತಿಳುವಳಿಕೆಯಿಂದ ಆನಂತರದ ಕಾಲಘಟ್ಟದಲ್ಲಿ ರಾಮಾಯಣಕ್ಕೆ ಈ ವಿವರಗಳು ಸೇರ್ಪಡೆಯೂ ಆಗಿರಬಹುದು ಎಂಬ ಅಭಿಪ್ರಾಯವೂ ಇದೆ.

ಇನ್ನು ನರ್ತನ, ಗಾಯನ, ವಿಲಾಸದಲ್ಲಿ ಭಾಗಿಯಾದ ಮಹಿಳೆಯರ ವರ್ಣನೆಗಳಿಗೂ ಆಗಿನ ಲಂಕಾ ಪ್ರಾಂತ್ಯದಲ್ಲಿ ಇದ್ದ ಸ್ವಚ್ಛಂದತೆಗೂ ಸಾಮ್ಯವಿದೆ. ರೋಮಿಲಾ ಥಾಪರ್ ಅವರ ಪ್ರಕಾರ ಶ್ರೀಲಂಕಾದಲ್ಲಿ ಯಾವುದೇ ರೀತಿಯ ಜಾತಿ ವ್ಯವಸ್ಥೆ ಇರಲಿಲ್ಲ. ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯವಿತ್ತು. ಅಯೋಧ್ಯೆಗಿಂತ ಹೆಚ್ಚಿನ ಸ್ವಾತಂತ್ರ್ಯ ಪಡೆದ ಹಾಗೂ ಸ್ವಾಭಿಮಾನಿಯಾದ ಮಹಿಳೆಯರು ಅಲ್ಲಿದ್ದರು. ಹೊಡೆದಾಟ ಅಥವಾ ಯುದ್ಧಗಳಲ್ಲಿಯೂ ಅವರು ಭಾಗವಹಿಸುವುದು ಸರ್ವೇಸಾಮಾನ್ಯವಾಗಿತ್ತು. ಹಾಗೆಯೇ ಮದುವೆಯಾದ ಹೆಣ್ಣೊಬ್ಬಳನ್ನು ಅಪಹರಿಸುವುದು ಅವರ ಸಮಾಜದಲ್ಲಿ ತಪ್ಪಿನ ಕೆಲಸವೇನು ಆಗಿರಲಿಲ್ಲ. ಇಡೀ ಸಮಾಜದ ರಚನೆಯೇ ಬುಡಕಟ್ಟಿನ ಎಲ್ಲ ಲಕ್ಷಣಗಳನ್ನು ಪಡೆದಿತ್ತಲ್ಲದೆ, ಆ ಪರಂಪರೆಯ ಪಾತಳಿಯಲ್ಲೇ ರಚನೆಗೊಂಡಿತ್ತು. ವ್ಯಾಪಾರಿಗಳು ಮತ್ತು ಕುಶಲ ಕೆಲಸಗಾರರ ಬಗ್ಗೆಯೂ ಅಷ್ಟಿಷ್ಟು ಮಾಹಿತಿಗಳು ದೊರಕುತ್ತವೆ. ಒಟ್ಟಾರೆ ಲಂಕಾದಲ್ಲಿ ಸಂಪತ್ತಿಗೆ ಯಾವ ಕೊರತೆಯೂ ಇರಲಿಲ್ಲ. ಮುತ್ತು, ರತ್ನಗಳು, ಚಿನ್ನ ಮತ್ತು ಬೆಳ್ಳಿಯೇ ಮುಂತಾದ ಬೆಲೆ ಬಾಳುವ ಖನಿಜ ಸಂಪತ್ತಿನಲ್ಲಿ ಅಯೋಧ್ಯೆಗಿಂತ ಎಷ್ಟೋ ಮುಂದಿತ್ತು.[3] ರಾಮನ ದಕ್ಷಿಣ ಪರ್ಯಟನೆ ಖಂಡಿತವಾಗಿಯೂ ಇಂಥ ಸಮೃದ್ಧವಾದ ಖನಿಜದ ನಾಡಿಗೆ ವಾಣಿಜ್ಯೋದ್ದೇಶದ ಮಾರ್ಗವೂ ಆಗಿತ್ತೆಂಬುದರಲ್ಲಿ ಅನುಮಾನವಿಲ್ಲ ಎಂಬುದು ಡಿ.ಡಿ.ಕೋಸಾಂಬಿಯವರ ಅಭಿಪ್ರಾಯ ಕೂಡ. ಈ ಎಲ್ಲ ಅಂಶಗಳು ರಾಮನ ರಾಜ್ಯ ವಿಸ್ತರಣೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ.[4] ಇಷ್ಟಾಗಿಯೂ ಲಂಕೆ ಎಂಬುದು ಒಂದು ಬುಡಕಟ್ಟಿನ ರೀತಿಯಲ್ಲಿ ಸಂರಚನೆಗೊಂಡ ಒಂದು ಸಮಾಜವಾಗಿತ್ತೆಂದೂ ಅದರ ನಾಯಕನಾದ ರಾವಣ ಸ್ವಚ್ಛಂದ ಸಮಾಜವೊಂದರ ಅಧಿಪತಿಯಾಗಿ ಮತ್ತಾರೂ ಆಕ್ರಮಣ ಮಾಡದಂತೆ ಬಲಾಢ್ಯನಾಗಿ ಅಧಿಕಾರ ನಡೆಸುತ್ತಿದ್ದನೆಂದೂ ‘ರಾಕ್ಷಸ’ರು ಎಂದು ನಾವು ಕರೆಯುವ ಸ್ವಲ್ಪ ಒರಟುತನದ ಮಹಾ ಪರಾಕ್ರಮಿಗಳೆನಿಸಿದ ಜನರನ್ನು ತನ್ನ ರಕ್ಷಣೆಗಾಗಿ ಇಟ್ಟುಕೊಂಡಿದ್ದನೆಂದೂ ಸಾಧಿಸಬಹುದಾದ ವಾಲಿ ಮತ್ತು ಸುಗ್ರೀವರಲ್ಲಿದ್ದಂತೆ ಅಲ್ಲಿಯೂ ಅಣ್ಣ ತಮ್ಮಂದಿರ ನಡುವೆ ಭಿನ್ನಾಭಿಪ್ರಾಯವಿದೆ. ಸೀತೆಯ ಅಪಹರಣವನ್ನು ವಿರೋಧಿಸಿದ ಕಾರಣಕ್ಕಾಗಿ ವಿಭೀಷಣನಿಗೂ ರಾವಣನಿಗೂ ಮನಸ್ತಾಪ ಉಂಟಾಯಿತೆಂಬ ಕಾವ್ರೋನಾವು ಒಪ್ಪಬಹುದಾದರೂ, ಅಧಿಕಾರದ ಆಸೆಯಿದ್ದ ವಿಭೀಷಣ, ರಾಮನ ಸಹಾಯದಿಂದ ಅದು ದೊರಕುತ್ತದೆ ಎಂಬುದು ಖಚಿತವಾದಾಗ ರಾಮನ ಬೆನ್ನಿಗೆ ಬೀಳುತ್ತಾನೆ ಎಂಬುದೂ ಅಷ್ಟೇ ವ್ಯವಹಾರಿಕ ಸತ್ಯ.

ಗೊಂಡರ ರಾಮಾಯಣದ ಪ್ರಕಾರ ರಾಮನ ಮೇಲೆ ಮೊದಲು ವಿಭೀಷಣನೇ ಯುದ್ಧಕ್ಕೆ ಹೋಗುತ್ತಾನೆ. ಸೋಲನ್ನು ಅನುಭವಿಸಿ ಹಿಂದೆ ಬಂದು, ರಾಮನನ್ನು ಸೋಲಿಸಲು ಸಾಧ್ಯವಿಲ್ಲ, ಅವನು ಬಲಶಾಲಿ, ಯುದ್ಧಬೇಡ ಎಂದು ಹೇಳುತ್ತಾನೆ. ಆಗ ರಾವಣ ಅವನನ್ನು ದೂಷಿಸುತ್ತಾನೆ. ವಿಭೀಷಣ ರಾವಣನ ಪಕ್ಷ ತೊರೆಯುತ್ತಾನೆ. ಈ ಪ್ರಸಂಗ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ.

ರಾಮನನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ವಿಭೀಷಣನು ಬಂದದ್ದಾದರೂ ಯಾಕೆ? ರಾವಣನ ಸೈನ್ಯದ ನೇತೃತ್ವ ವಹಿಸಿ ಮೊದಲಿಗೆ ಯದ್ಧಕ್ಕೆ ಹೋದ ವಿಭೀಷಣನಿಗೆ ರಾಮನಲ್ಲಿರುವ ಆಧುನಿಕ ಶಸ್ತ್ರಾಸ್ತ್ರಗಳ ಪರಿಚಯವಾಗುತ್ತದೆ. ರಾಮನಲ್ಲಿದ್ದ ‘ಸಂಯುಕ್ತ ಸ್ವರೂಪದ ಬಿಲ್ಲು’ ಇವತ್ತಿಗೆ ಅಣುಬಾಂಬು ಎಷ್ಟು ಅಪಾಯಕಾರಿಯೋ ಹಾಗೆ, ಆವತ್ತಿಗೆ ಅದೇ ದೊಡ್ಡ ವಿನಾಶಕಾರಿ. ಇತಿಹಾಸ ತಜ್ಞರ ಪ್ರಕಾರ ರಾಕ್ಷಸರಿಗೆ ಈ ಸಂಯುಕ್ತ ಬಿಲ್ಲಿನ ತಯಾರಿಕೆ ಗೊತ್ತಿರಲಿಲ್ಲ. ಸಾಧಾರಣ ಬಿಲ್ಲಿನ ಉಪಯೋಗ ಗೊತ್ತಿತ್ತು. ಆದರೆ ರಾಮಲಕ್ಷ್ಮಣರ ಬಿಲ್ಲು ಹಾಗಲ್ಲ. ಚೂಪು ಮಾಡಿಸಿ, ಬಿಲ್ಲಿನ ದಾರಗಳನ್ನು ಚರ್ಮದ ಎಳೆಗಳಿಂದ ಬಿಗಿದು, ಒಂದಕ್ಕಿಂತ ಹಲವು ಸೂತ್ರಗಳಿಂದ ಸಜ್ಜುಗೊಂಡ ಆ ಬಿಲ್ಲು ಏನನ್ನು ಬೇಕಾದರು ಭೇದಿಸುವ ಅಸಾಧಾರಣ ಗುಣ ಹೊಂದಿರುತ್ತದೆ. ಈ ಸಂದರ್ಭದಲ್ಲಿ ಸಂಕಾಲಿಯಾ ಅವರ ಅಭಿಪ್ರಾಯಗಳನ್ನು ನೋಡೋಣ. “ರಾವಣನ ಸೋದರರೆಂದು ಬಣ್ಣಿಸಲಾದ ಖರದೂಷಣರು ಮೊದಲ ಸುತ್ತಿನ ಕಾಳಗ ನಡೆಯಿಸಿದರು. ಆದರೆ ಈ ಇಬ್ಬರು ಸೋದರರು ಮತ್ತು ಅವರ ಹದಿನಾಲ್ಕು ಸಾವಿರ ಸೈನ್ಯವನ್ನು ರಾಮನೊಬ್ಬನೆ ಸಂಹರಿಸಿದನು. ಅತಿಶಯೋಕ್ತಿ ಮತ್ತು ಪೌರಾಣಿಕ ಅಂಶಗಳನ್ನು ಪ್ರತ್ಯೇಕಿಸಿ ನೋಡಿದರೆ ಮರದ ಮತ್ತು ಕಲ್ಲಿನ ಯುದ್ಧ ಸಾಮಗ್ರಿಗಳನ್ನು ಹೊಂದಿದ ಮೂಲ ನಿವಾಸಿಗಳು ರಾಮನಿಗೆ ಸಾಟಿಯಲ್ಲ. ಮೊದಲ ಹದಿನಾಲ್ಕು ಸಾವಿರ ರಾಕ್ಷಸರು ಶೂಲ ಹಿಡಿದು ಹೋರಾಡಿದರು. ಹದಿನಾಲ್ಕು ಸಾವಿರದಷ್ಟು ದೊಡ್ಡ ಸೈನ್ಯ ಅನೇಕ ಬಗೆಯ ಆಯುಧಗಳನ್ನು ಉಪಯೋಗಿಸಿದರೂ, ಬಿಲ್ಲು ಬಾಣಗಳನ್ನು ಬಳಸಲಿಲ್ಲ, ಹೆಚ್ಚೇಕೆ? ದೂಷಣನೂ ಕೂಡ ಹಳೆಯ ಆಯುಧವನ್ನೇ ಹಿಡಿದು ಹೋರಾಡಿದ. ಧನುರ್ಧಾರಿಯಾಗಿ ಹೋರಾಡಿದವನು ಖರನೊಬ್ಬನೇ ಎನ್ನಲಾಗಿದೆ. ರಾಮನ ಆ “ಸಂಯುಕ್ತ ಧನುಸ್ಸಿಗೆ” ಹೋಲಿಸಿದರೆ ಇದು ಅತ್ಯಂತ ಸರಳವಾಗಿರಬೇಕು. ಸಂಯುಕ್ತ ಧನಸ್ಸು ಎಂದರೆ ಒಂದಕ್ಕಿಂತ ಹೆಚ್ಚು ವಸ್ತುಗಳಿಂದ ಮಾಡಲ್ಪಟ್ಟ ಧನಸ್ಸು ಎಂದರ್ಥ. ಧನುಸ್ಸಿನ ಮಧ್ಯಭಾಗ ಮತ್ತು ಎರಡು ತುದಿಗಳನ್ನು ತಾಮ್ರದ ತಗಡು ಮತ್ತು ಪ್ರಾಣಿಯ ಚರ್ಮ ಸೇರಿಸಿ ಬಿಗಿಗೊಳಿಸಲಾಗುತ್ತದೆ. ಇಂಥ ಧನಸ್ಸುಗಳು ಮೊಟ್ಟ ಮೊದಲು ಕ್ರಿ.ಪೂ. ೩೦೦೦ದಲ್ಲಿ ಪಶ್ಚಿಮ ಏಷ್ಯಾದಲ್ಲಿ ತಯಾರಾದವು.”[5]

ಈ ಹಿಂದೆಯೇ ಖರದೂಷಣರ ಮೇಲೆ ರಾಮ ಯುದ್ಧಮಾಡಿ ಹೇಗೆ ಹದಿನಾಲ್ಕು ಸಾವಿರ ಜನರನ್ನು ಕೊಂದ ಎಂಬುದೂ ವಿಭೀಷಣನಿಗೆ ಗೊತ್ತಿರುತ್ತದೆ. ಆದರೂ ರಾವಣನ ಆಜ್ಞಾನುಸಾರ ಅವನು ಯುದ್ಧಕ್ಕೆ ಹೋಗುತ್ತಾನೆ. ಮತ್ತೊಮ್ಮೆ ರಾಮನ ಶಕ್ತಿಯನ್ನು ಕಣ್ಣಾರೆ ಕಂಡವನಾಗಿ ಭಯದಿಂದಲೇ ‘ರಾಮನನ್ನು ಜಯಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾನೆ. ಬಹುಶಃ ವಿಭೀಷಣನ ಪುಕ್ಕಲುತನವನ್ನು ಅರಿತ ರಾಮಲಕ್ಷ್ಮಣರು ಗೆದ್ದ ನಂತರ ಅವನಿಗೇ ರಾಜ್ಯ ಕೊಡುವುದಾಗಿ ಹೇಳಿ, ರಾವಣನ ಒಳಗಿನ ಎಲ್ಲ ರಹಸ್ಯಗಳನ್ನು  ವಿಭೀಷಣನಿಂದಲೇ ತಿಳಿದುಕೊಳ್ಳುತ್ತಾರೆ.

ಗೊಂಡರ ರಾಮಾಯಣದಲ್ಲಿ ಯುದ್ಧ ವೈಭವೀಕರಣವಿಲ್ಲದೆ ನಡೆಯುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ ನಾನೀಗಾಗಲೇ ಹೇಳಿದಂತೆ ಎರಡು ಗುಂಪುಗಳ ನಡುವಿನ ಹೊಡೆದಾಟದಂತೆ. ಹನುಮಂತ ಸಂಜೀವಿನಿ ಪರ್ವತ ತರುವ ಪ್ರಸಂಗವೊಂದನ್ನು ಬಿಟ್ಟರೆ ಇನ್ನಾವ ಪವಾಡಗಳೂ ಇಲ್ಲಿಲ್ಲ. ಹನುಮಂತ ಸಂಜೀವಿನಿ ತರುವುದೂ ಕಿಷ್ಕಿಂದೆಯಿಂದ ಮಾತ್ರ. ರಾಮ ಮತ್ತು ರಾವಣರ ಯುದ್ಧ ನಡೆಯುವಾಗ ಯಾರಿಗೂ ಸೋಲಾಗುವುದಿಲ್ಲ. ಆ ಸಂದರ್ಭದಲ್ಲಿ ರಾವಣನ ಎದೆಯ ಭಾಗದಲ್ಲಿರುವ ಅಮೃತಗಿಂಡಿ ಕಳಸಕ್ಕೆ ಬಾಣ ಬಿಟ್ಟರೆ ಅವನು ಸಾಯುತ್ತಾನೆ ಎಂಬ ಕುರುಹನ್ನು ವಿಭೀಷಣನೇ ನೀಡುತ್ತಾನೆ. ಅದರಂತೆ ರಾಮ ಬಾಣ ಬಿಡುತ್ತಾನೆ. ರಾವಣ ತಕ್ಷಣ ಸತ್ತು ಬೀಳುತ್ತಾನೆ. ಮೂಲ ರಾಮಾಯಣದ ಯುದ್ಧಕಾಂಡ ಅನೇಕಾನೇಕ ಪವಾಡ ಸದೃಶ ಘಟನೆಗಳ ಸಂಗಮ. ಒಂದೊಂದು ಯುದ್ಧವೂ ಅಷ್ಟರ ಮಟ್ಟಿಗೆ ವೈಭವೀಕರಣ ಗೊಂಡಿದೆ. ಗೊಂಡರ ರಾಮಾಯಣದಲ್ಲಿ ಸೀತೆಯ ಅಗ್ನಿಪ್ರವೇಶದ ಪ್ರಸಂಗ ಬರುವುದೇ ಇಲ್ಲ. ರಾವಣನ ಸಾವಿನ ನಂತರ, ತಕ್ಷಣವೇ ಅಯೋಧ್ಯಗೆ ಸೀತೆಯ ಜೊತೆಗೂಡಿ ನಡೆಯುತ್ತಾರೆ. ಅಲ್ಲಿ ಭರತ, ಶತೃಜ್ಞರು ಇನ್ನು ಒಂದು ದಿನ ತಡಮಾಡಿದ್ದರೂ ಕೊಂಡಕ್ಕೆ ಬಿದ್ದು ಆಹುತಿಯಾಗುತ್ತಿದ್ದರು ಎಂಬುದೇ ಈ ತಕ್ಷಣದ ಪ್ರಯಾಣಕ್ಕೆ ಕಾರಣ. ಆದರೆ ಮೂಲ ರಾಮಾಯಣದ ಸೀತೆಯ ಅಗ್ನಿ ಪ್ರವೇಶದ ಪ್ರಸಂಗವನ್ನು ನಾವು ನೋಡುುದು ಅಗತ್ಯವಾಗಿದೆ. ಯಾಕೆಂದರೆ ರಾಮನಿಗೆ ಸೀತೆಯ ಪ್ರೀತಿಗಿಂತ ಮುಖ್ಯವಾಗಿದ್ದುದು ರಾವಣನ ಸೋಲು, ಆ ಮೂಲಕ ಅವನ ರಾಜ್ಯ. ರಾಮನ ಈ ರಾಜ್ಯಾಕಾಂಕ್ಷೆಯನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಯುದ್ಧಕಾಂಡದ ಆ ಕೊನೆಯ ಪ್ರಸಂಗ.

“ವಿಭೀಷಣನು ಸೀತೆಯನ್ನು ರಾಮನೆದುರಿಗೆ ಕೊಂಡೊಯ್ದ. ಅವನ ಹಿಂದೆ ಹೋಗಿ, ತನ್ನ ಮೇಲು ಹೊದಿಕೆಯಿಂದ ತನ್ನ ಮುಖವನ್ನು ಮುಚ್ಚಿಕೊಂಡು, ಅಷ್ಟು ದೊಡ್ಡ ಗುಂಪಿನ ನಡುವೆ ಸಿಗ್ಗು ಪಡುತ್ತಿರುವಳಂತೆ ಅಳತೊಡಗಿದಳು. ಆರ್ಯಪುತ್ರ ಎಂಬ ಒಂದೇ ಒಂದು ಮಾತನ್ನಾಡಿ ಮುಂದೇನನ್ನೂ ನುಡಿಯಲಾರದವಳಾದಳು. ಕಟ್ಟ ಕಡೆಗೆ ತನ್ನ ಗಂಡನ ಮುಖವನ್ನು ನೋಡಲು ಆಯಿತೆಂದು ಅವಳ ಹೃದಯದಲ್ಲಿ ಸಂತೋಷವಾಗಿತ್ತು. ಆದರೆ ಆಕೆಯ ಕಿವಿಗೆ ಬಿದ್ದುದು ದಾರುಣವಾದ ಅಗ್ನಿಪ್ರಪಾತ. ಸೀತೆಯನ್ನು ಕಂಡ ರಾಮನಿಗೆ ಕ್ರೋಧಾವೇಶ ಹುಟ್ಟಿದಂತಾಗುತ್ತದೆ; ಹುಬ್ಬುಗಂಟಿಕ್ಕಿದವು; ಕಣ್ಣು ಬೇರೆಡೆ ನೋಡಿದವು. ವಾನರರು ರಾಕ್ಷಸರ ನಡುವೆ ಸೀತೆ ನಿಂತಿದ್ದಾಗ ಕ್ರೂರವಾದ ಈ ಮಾತುಗಳನ್ನು ಹೇಳಿದ; ‘ನಿನಗೋಸ್ಕರ ನಾನು ಈ ಯಾವುದನ್ನೂ ಮಾಡಿಲ್ಲ. ಕಣ್ಣು ಬೇನೆ ಇರುವವರೆಗೆ ದೀಪ ಹೇಗೆ ತೊಂದರೆ ಪಡಿಸುವುದೋ ಹಾಗೆ ನಿನ್ನನ್ನು ಕಂಡು ನನಗಾಗಿದೆ’. ಆದುದರಿಂದ

ತದ್ಕಚ್ಛಹ್ಯಭ್ಯನುಜ್ಞಾತಾ ಯಥೇಷ್ಟಂ ಜನಕಾತ್ಮಜೇ
ಏತಾ ದಶದಿಶೋ ಭದ್ರೇ ಕಾರ್ಯಮಸ್ತಿ ನಮೇ ತ್ವಯಾ

ಹತ್ತು ದಿಕ್ಕುಗಳೂ ನಿನಗೆ ತೆರೆದಿವೆ; ನಿನ್ನ ಇಷ್ಟ ಬಂದ ಕಡೆ ಹೋಗು; ನನ್ನ ಅಪ್ಪಣೆ ಇದೆ. ನನಗೆ ನಿನ್ನ ಅಗತ್ಯವಿಲ್ಲ ಎಂದನು.

             ನಾಸ್ತಿ ಮೇ ತ್ವಯ್ಯಭಿಷ್ಟಂಗೋ ಯಥೇಷ್ಟಂ ಗಮ್ಯತಾಮಿತಃ

ನೀನು ಯಾರ ಜೊತೆಯಲ್ಲಾದರೂ ಹೋಗಿರು. ಇಷ್ಟ ಬಂದ ಹಾಗೆ, ಲಕ್ಷ್ಮಣನೋ ಭರತನೋ ಸುಗ್ರೀವನೋ ವಿಭೀಷಣನೋ ಯಾರ ಜೊತೆಯಲ್ಲಾದರೂ ಸಂಸಾರ ಮಾಡಿಕೊಂಡಿರು. ಅವರ ಯಾರ ಜೊತೆಯಲ್ಲಾದರೂ ಬದುಕು ಎಂದ. ಕೋಪದಿಂದ ರಾಘವನು ಆಡಿದ ಈ ಮಾತುಗಳ ಕಾಠಿಣ್ಯ ಆ ಸ್ಥಿತಿಯಲ್ಲಿ ಬಡ ಹೆಂಗಸಿಗೆ ಧಕ್ಕೆ ಬಡಿದಂತಾಗುತ್ತದೆ.

…ಓ ವೀರಾ, ಈಗ ನೀನು ಹೇಳುತ್ತಿರುವ ಮಾತುಗಳು ಎಂಥವು? ನಿನ್ನ ಯೋಗ್ಯತೆಗಾಗಲೀ ನನ್ನದಕ್ಕಾಗಲೀ ತಕ್ಕುವಲ್ಲ. ಕೇಳಲು ಕಿವಿಗೆ ಕಷ್ಟ. ಒರಟು ಗ್ರಾಮ್ಯನು ಇನ್ನೊಬ್ಬ ಗ್ರಾಮ್ಯನಿಗೆ ಆಡುವಂಥವು….”[6]

ಈ ಪ್ರಸಂಗಕ್ಕೆ ಹೆಚ್ಚಿನ ತರ್ಕ ಬೇಕಿಲ್ಲ. ಯಾರಾದರೂ ಇಲ್ಲಿ ಅರ್ಥೈಸಿಕೊಳ್ಳಬಹುದು. ರಾಮನಿಗೆ ಸೀತೆ ಮುಖ್ಯಳೋ ಇಲ್ಲವೇ ರಾವಣನ ರಾಜ್ಯ ಮುಖ್ಯವೋ ಎಂದು. ಈ ಸಂದರ್ಭದಲ್ಲಿ ಡಾ.ರಾಮ ಮನೋಹರ ಲೋಹಿಯಾ ಅವರು ಹೇಳುವ ಒಂದು ಮಾತನ್ನು ನೆನಪಿಗೆ ತಂದುಕೊಳ್ಳಬಹುದು. “ರಾಮನದು ಸೀಮಿತ ವ್ಯಕ್ತಿತ್ವ, ಕೃಷ್ಣನದು ಸಮೃದ್ಧ ವ್ಯಕ್ತಿತ್ವ. ಸೀಮಿತ ವ್ಯಕ್ತಿತ್ವದವನು ಕ್ರೂರಿಯಾಗುವ ಅಪಾಯಗಳಿರುತ್ತವೆ. ಹಾಗೆಯೇ ಸಮೃದ್ಧ ವ್ಯಕ್ತಿತ್ವದವನು ಅನೈತಿಕವಾಗುವ ಅಪಾಯಗಳಿರುತ್ತವೆ.”[7]

ಕೃಷಿಯನ್ನೇ ಪ್ರಧಾನವಾಗಿ ಪರಿಗಣಿಸಿದ್ದಂಥ ದೊರೆಗಳು, ಇನ್ನೂ ಕೃಷಿಯ ಹಂತವನ್ನೂ ಮುಟ್ಟದ ಕೇವಲ ಆಹಾರ ಸಂಗ್ರಾಹಕರಾಗಿದ್ದ ವಾನರರನ್ನು ಸ್ನೇಹದಿಂದ ಗೆದ್ದದ್ದು ರಾಮಾಯಣದ ಮೊದಲ ಘಟ್ಟವಾದರೆ, ಅಯೋಧ್ಯೆಗೆ ಇರಬಹುದಾಗಿದ್ದ ಎಲ್ಲ ಸಾಧ್ಯತೆಗಳನ್ನೂ ಪಡೆದು ಶಸ್ತ್ರನೈಪುಣ್ಯದಲ್ಲಿ ಮಾತ್ರ ಹಿಂದುಳಿದವರಾಗಿ ಸ್ವಾಭಿಮಾನದಿಂದ ಆರ್ಯರ ರಾಜ್ಯವಿಸ್ತರಣೆಯನ್ನು ವಿರೋಧಿಸುತ್ತಿದ್ದ ರಾಕ್ಷಸರನ್ನು ಗೆದ್ದದ್ದು ಎರಡನೇ ಘಟ್ಟ. ಹೀಗೆ ಸಣ್ಣ ಪ್ರಮಾಣದಲ್ಲಿ ಘಟಿಸಿರಬಹುದಾದ ಯುದ್ಧ, ಘನ ಉದ್ದೇಶ ಇಟ್ಟುಕೊಂಡು ಹಮ್ಮಿಕೊಳ್ಳಲಾದ ರಾಜ್ಯ ವಿಸ್ತರಣೆ, ಮುಂದೆ ಅನೇಕ ರೀತಿಯ ಸಾಮಾಜಿಕ ಹಾಗೂ ರಾಜಕೀಯ ಮಾರ್ಪಾಟುಗಳಿಗೆ ಕಾರಣವಾಯಿತು. ರಾಮಾಯಣದ ಕಾಲಕ್ಕಾಗಲೇ ವರ್ಣಾಶ್ರಮ ಧರ್ಮದ ವ್ಯವಸ್ಥೆ ಒಂದು ರೂಪ ಪಡೆದುಕೊಂಡಿತ್ತು. ಅದು ಕೇವಲ ಉತ್ತರದಲ್ಲಿ ಒಂದು ಸಾಂಸ್ಥಿಕ ರೂಪ ಪಡೆದಿತ್ತು. ರಾಮನ ರಾಜ್ಯವಿಸ್ತರಣೆಯ ನಂತರ ದಕ್ಷಿಣಕ್ಕೂ ಅದು ಪಸರಿಸಿತು. ಖ್ಯಾತ ಚಿಂತಕ ಡಿ.ಡಿ.ಕೋಸಂಬಿ ಅವರ ಪ್ರಕಾರ “ಊಳಿಗಮಾನ್ಯ ವ್ಯವಸ್ಥೆ ವಿಸ್ತಾರಗೊಂಡದ್ದು ಆರಂಭದಲ್ಲಿ, ಮಗಧ, ಕೋಸಲ ಮೊದಲಾದ ಪ್ರಥಮ ಸಾಮ್ರಾಜ್ಯಗಳ ಕಾಲದಲ್ಲಿ, ಆ ರಾಜ್ಯಗಳ ನೆರೆಹೊರೆಯಲ್ಲಿದ್ದ ಇನ್ನೂ ರಾಜ್ಯವ್ಯವಸ್ಥೆ ರೂಪುಗೊಳ್ಳದ ದೆಸೆಯಲ್ಲಿದ್ದ ಸಂದರ್ಭದಲ್ಲಿ ಆ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಗಣ ಸಂಘಗಳ  ದಾಳಿ, ಆ ಜನರನ್ನು ತಂದು ಬಲವಂತವಾಗಿ ಶ್ರಮಪಡಬೇಕಾದ ವರ್ಣಗಳೊಳಕ್ಕೆ ಸೇರಿಸಿ ಅವರು ಓಡಿ ಹೋಗದಂತೆ ನಿರ್ಬಂದಧ ವ್ಯವಸ್ಥೆಯನ್ನು ನಿರ್ಮಿಸಲಾಗಿತ್ತು.”

ಹೀಗಾದ ನಂತರ ‘ಕೃಷಿಗೆ ಅತ್ಯಗತ್ಯವಾದ ನಾಲ್ಕು ಕೆಲಸಗಳನ್ನು ನಿರ್ವಹಿಸಬೇಕಾದ ಅವಶ್ಯಕತೆಯಿಂದ ವರ್ಣಾಶ್ರಮದ ಶ್ರಮ ವಿಭಜನೆ ರೂಪುಗೊಂಡಿತು. ಧರ್ಮಕಾರ್ಯಗಳನ್ನು ನಿರ್ವಹಿಸುವುದಕ್ಕೆ ಪುರೋಹಿತ ವರ್ಗ, ಕೃಷಿ ಕ್ಷೇತ್ರಗಳ ಕಾವಲು ಹಾಗೂ ನೆರೆಯ ಬುಡಕಟ್ಟುಗಳ ದಾಳಿಯಿಂದ ಸಮುದಾಯವನ್ನು ರಕ್ಷಿಸಲು ಕ್ಷತ್ರಿಯ ವರ್ಗ, ವ್ಯಾಪಾರಕ್ಕೆ ವೈಶ್ಯವರ್ಗ, ಇತರೆ ದೈಹಿಕ ಶ್ರಮದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಕೃಷಿಕ್ಷೇತ್ರಗಳನ್ನು ಸಿದ್ಧಪಡಿಸುವುದಕ್ಕೆ ಬೇಕಾದ ಶೂದ್ರ ವರ್ಗ. ಹೀಗೆ ಕೃಷಿ ವಿಸ್ತರಣೆ ಎಂದರೆ ಬೇರೆ ಬೇರೆ ಪದ್ಧತಿಗಳಲ್ಲಿ ಬದುಕುತ್ತಿದ್ದ ಜನರನ್ನು ಊಳಿಗಮಾನ್ಯತೆಯ ವರ್ಣ ವ್ಯವಸ್ಥೆಯೊಳಕ್ಕೆ ತಂದು ನಿರ್ಬಂಧಿಸುವುದಾಗಿತ್ತು. ಇದೇ ರೀತಿಯಲ್ಲಿ ಒಂದು ಸಾಮ್ರಾಜ್ಯದ ಅಕ್ಕಪಕ್ಕದಲ್ಲಿರುವ ಬುಡಕಟ್ಟು ಸಮಾಜಗಳನ್ನು ಆವರಿಸುತ್ತಾ ವ್ಯವಸಾಯ ಪ್ರಧಾನವಾದ ಸಾಮ್ರಾಜ್ಯ ವ್ಯವಸ್ಥೆ ವಿಸ್ತರಿಸುತ್ತಾ ಬಂತು. ಇದು ರಾಮನಿಗಷ್ಟೇ ಸೀಮಿತವಾಗಿರಲಿಲ್ಲ. ಮೌರ್ಯರ ಸಾಮ್ರಾಟನೆನಿಸಿದ ಅಶೋಕನೂ ಇದೇ ಕೆಲಸ ಮಾಡಿದ. ಸಮುದ್ರ ಗುಪ್ರ ಕೂಡ ಬುಡಕಟ್ಟು ನಾಯಕ