ಮಾರ್ಗ ಮತ್ತು ದೇಶಿ:

ಕನ್ನಡ ಸಾಹಿತ್ಯದಲ್ಲಿ ಮೊದಲಿನಿಂದಲೂ ಮಾರ್ಗ ಮತ್ತು ದೇಶಿ-ಕಾವ್ಯಗಳು ಬಳಕೆಯಲ್ಲಿವೆ. ಪಂಡಿತರು ಮೆಚ್ಚಿಕೊಂಡುದು ಮಾರ್ಗೀಯ ಸಾಹಿತ್ಯ; ಪಾಮರರ ಸ್ವತ್ತಾಗಿರುವುದು ದೇಶೀಯ ಸಾಹಿತ್ಯ. ಯಾವುದೇ ದೇಶದ ಸಾಹಿತ್ಯವನ್ನು ಗಮನಿಸಿದರೂ ಮೊದಲು ಹುಟ್ಟಿದುದು ದೇಶಿ; ನಂತರ ದೇಶಿಯನ್ನು ಆಧರಿಸಿ ವಿಶಿಷ್ಟ ರೀತಿಯಲ್ಲಿ ಬೆಳೆದುದು ಮಾರ್ಗ ದೇಶಿಯ ವಸ್ತು, ಧಾಟಿ ರೀತಿ, ನೀತಿ ಶಿಷ್ಟ ಸಾಹಿತ್ಯಕ್ಕೆ ಹರಿದು ಬರುವಾಗ ಶಾಸ್ತ್ರದ ಕಟ್ಟಿಗೆ ಒಳಪಟ್ಟು ಹೊಸ ತಿರುವನ್ನು ಹೊಂದುತ್ತವೆ; ಆಗ ಅದು ಮಾರ್ಗೀಯ ಕಾವ್ಯವೆನಿಸಿಕೊಳ್ಳುವುದು. ಈ ರೀತಿಯಲ್ಲಿ ಕನ್ನಡದ ಜನ ಪದ ಕಾವ್ಯ ಶಿಷ್ಟ ಸಾಹಿತ್ಯದ ಪಟ್ಟಕ್ಕೇರಿದುದನ್ನು ಅರಿಯುತ್ತೇವೆ. ಷಟ್ಪದಿ, ಸಾಂಗತ್ಯ ತ್ರಿಪದಿ ಮುಂತಾದ ಜನಪದ ಮಟ್ಟುಗಳು ಕಾಲಾಂತರದಲ್ಲಿ ಶಿಷ್ಟ ಸಾಹಿತ್ಯದ ಪಟ್ಟಕ್ಕೇರಿವೆ. ಈ ರೀತಿ ವ್ಯತ್ಯಾಸ ಹೊಂದಿದ ಅನೇಕ ಕಾವ್ಯ ಪ್ರಕಾರಗಳು ಕನ್ನಡದಲ್ಲಿ ಇದ್ದುದನ್ನು ನೃಪತುಂಗನು,

ನುಡಿಗೆಲ್ಲಂ ಸಲ್ಲದ ಕ
ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ |
ಗಡಿನ ನೆಗಳ್ತಿಯ ಕಬ್ಬದೊ
ಳೋಡಂಬಡಂ ಮಾಡಿದರ್ ಪುರಾತನ ಕವಿಗಳೆ ೧ ||

ಚತ್ತಾಣ, ಬೆದಂಡೆ ಕಾವ್ಯಗಳು ಮೊದಮೊದಲು ಜನಪದ ಕಾವ್ಯಗಳು ನಂತರ ಶಾಸ್ತ್ರ ಸಮ್ಮತವಾದ ಪದ್ಯಬಂಧಗಳಾದವು. ಸರ್ಗಬಂಧ ಮಹಾಕಾವ್ಯಗಳೆನಿಸಿಕೊಂಡವು. ಈ ವಿಷಯ ಉದಯಾದಿತ್ಯನ ಉದಯಾದಿತ್ಯಾಲಂಕಾರದಲ್ಲಿ ಸ್ಪಷ್ಟವಾಗಿ ಹೇಳಿದೆ :

ಕನ್ನಡದೊಳ್ ಚಂಪೂಕೃತಿ
ಸನ್ನುತತರ ವಚನಕಾವ್ಯಮೆನಿಕುಂ ಚತ್ತಾ|
ಣಂ ನೆಳಿ ವೈದಂಡಕಮೆನೆ
ಸನ್ನುತಿಯಂ ಸರ್ಗಬಂಧಕೃತಿ ತಳೆದಿರ್ಕುಂ೨ ||

ಚಂಪೂಕೃತಿ ವಚನಕಾವ್ಯ; ಆದರೆ ಚತ್ತಾಣ ಮತ್ತು ಬೆದಂಡೆಗಬ್ಬಗಳು ಅದರಿಂದ ಭಿನ್ನವೆಂಬುದು ಇಲ್ಲಿ ಸ್ಪಷ್ಟವಾಗಿದೆ. ಚತ್ತಾಣದ ಲಕ್ಷಣವನ್ನು ನೋಡಿದರೆ ಅದಕ್ಕೂ ಚಂಪೂವಿಗೂ ಹತ್ತಿರದ ಸಂಬಂಧವಿದ್ದುದು ಕಂಡು ಬರುವುದು. ಚತ್ತಾಣವನ್ನು ಕುರಿತು ನೃಪತುಂಗನು

ಕಂದಂಗಳ್ ಪಲವಾಗಿರೆ
ಸುಂದರವೃತ್ತಂಗಳಕ್ಕರಂ ಚೌಪದಿ ಮ |
ತ್ತಂದಲ್ ಗೀತಿಕೆ ತಿವಿದಿಗ
ಳಂದಂಬೆತ್ತೆಸೆಯೆ ಪೇಳೊಡದು ಚತ್ತಾಣಂ ||

ಎಂದು ವ್ಯಾಖ್ಯಾನಿಸಿದ್ದಾನೆ. ಚತ್ತಾಣದಲ್ಲಿ ಗದ್ಯಭಾಗವೊಂದಿದ್ದರೆ ಇದೇ ಚಂಪೂಕಾವ್ಯವೆನಿಸುತ್ತಿತ್ತು. ಲಕ್ಷಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಚತ್ತಾಣವು ಹಾಡುಗಬ್ಬವಾಗಿ ಬಹುಕಾಲ ಉಳಿಯದೆ ಮಾರ್ಗದತ್ತ ಸರಿದಿರಬೇಕೆನಿಸುವುದು.

ಬೆದಂಡೆಗಬ್ಬ ಮಾತ್ರ ಶುದ್ಧ ಹಾಡುಗಬ್ಬ. ಅದು ಬರಿ ಹಾಡುಗಳನ್ನೇ ಒಳಗೊಂಡುದು; ಗೇಯಗುಣವೇ ಅದರ ಪ್ರಧಾನ ಲಕ್ಷಣ. ವೈದಂಡಿಗೆಯೊಡನೆ ಶ್ರುತಿಗೊಡಿಸಿ ಈ ಕಬ್ಬವನ್ನು ಹಾಡುವುದರಿಂದಲೇ ಈ ವೈದಂಡಿಕಬೆದಂಡೆ ಎಂಬ ಹೆಸರು ಬಂತೆಂದು ಪಂಡಿತರು ಹೇಳುವಲ್ಲಿ ಔಚಿತ್ಯವಿದೆ. ವೈದಂಡಿಗೆಯೊಡನೆ ಇತರ ವಾಧ್ಯಗಳಾದ ವೀಣೆ, ಕೊಳಲು ಸೇರಬಹುದಾಗಿದೆ. ಬೆದಂಡೆಯ ಲಕ್ಷಣವನ್ನು ನೃಪತುಂಗನು ಹೀಗೆ ಹೇಳಿದ್ದಾನೆ :

ಕಂದಮುಮಮಳಿನ ವೃತ್ತಮು
ಮೊಂದೊಂದೆಡೆಗೊಂದು ಜಾತಿಜಾಣೆಸೆಯ ಬೆಡಂ |
ಗೊಂದಿವಳೊಳಮರೆ ಪೇಳಲ್
ಸುಂದರರೂಪಿಂ ಬೆದಂಡೆಗಬ್ಬಮದಕ್ಕುಂ ೧ |
ಒಂದೊಂದು ಕಡೆ ಕಂದ ಬಂದು, ಅಮಳಿನ ವೃತ್ತಗಳು ಕಾವ್ಯದಲ್ಲಿ ಸೇರಿರಬೇಕು. ಅವುಗಳ ಮಧ್ಯಮಧ್ಯದಲ್ಲಿ ಜಾತಿಯ ಛಂದಸ್ಸು ಪ್ರಾಧಾನ್ಯ ಪಡೆಯಬೇಕು. ಜಾತಿಯೆಂದರೆ ಅಚ್ಚಗನ್ನಡದ ಮಟ್ಟುಗಳು. ಷಟ್ಪದಿ, ಸಾಂಗತ್ಯ, ತ್ರಿಪದಿ, ಅಕ್ಕರ ಮುಂತಾದವು. ಈ ಹಾಡುಗಳ ಸಂಖ್ಯಾಪ್ರಮಾಣ ಹೆಚ್ಚುಕಡಮೆ ಇರಬಹುದಾಗಿದೆ. ನಾಗವರ್ಮನು

ಸಂದಿಸಿರೆ ಕಂದಮುಂ ಪೆಳಿ
ತೊಂದಳಿಕೆಯ ವೃತ್ತಜಾತಿಯುಂ ಪದಮವು ತ |
ಳ್ತೊಂದಿರೆ ಪನ್ನೆರಡುವರಂ
ಸಂದುದು ಮೆಲ್ವಾಡೆನಿಕ್ಕುಮದು ಕನ್ನಡದೊಳ್ ||
ಪದಿನಯ್ದು ಮಿರ್ಪತಯ್ದು
ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೊಳ್ |
ಪುದಿದೊದವಿ ನೆಗಳ್ವೊಡಂತದು
ಸದಲಂಕಾರಂ ರಸಾಸ್ಪದಂ ಪಾಡಕ್ಕುಂ ||
ಪಾಡುಗಳಿಂದಂ ತಳೆಸಲೆ
ಮಾಡಿದುದಂ ಪಾಡುಗಬ್ಬಮೆಂದು ಬುಧರ್ಕೊಂ |
ಡಾಡುವರದಳಿಂ ದಲ್ ಮೇ
ಲ್ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ೨||

ಅಳಿಕೆಯವೃತ್ತಜಾತಿಯ ಪದಗಳು ಹನ್ನೆರಡು ಇದ್ದರೆ ಮೇಲ್ವಾಡು ಆಗುತ್ತದೆ. ಯಥಾಸಂಭವವಾಗಿ ಹದಿನೈದು ಇಲ್ಲವೆ ಇಪ್ಪತ್ತೈದು ಪದಗಳು ಪ್ರಬಂಧದ ಮೈಯಲ್ಲಿ ಬಂದರೆ ಪಾಡು ಎನಿಸಿಕೊಳ್ಳುವುದು. ಈ ಮೇಲ್ವಾಡು ಪಾಡುಗಳನ್ನೊಳಗೊಂಡುದೇ ಪಾಡುಗಬ್ಬ, ಬೆದಂಡೆಗಬ್ಬವೆಂದು ಪ್ರಸಿದ್ಧಿ ಹೊಂದುವುದು.

ಬೆದಂಡೆಗಬ್ಬದಲ್ಲಿ ’ಸದಲಂಕಾರಂ ರಸಾಸ್ಪದಂ’ ಎನಿಸುವ ಹಾಡುಗಳು ಅಂತರ್ಗತವಾಗಿರಬೇಕಾದುದು ಅಗತ್ಯ. ಉಪಮಾ, ರೂಪಕ, ಉತ್ಪ್ರೇಕ್ಷೆ ಮುಂತಾದ ಅಲಂಕಾರಗಳು ಹಾಡಿನಲ್ಲಿದ್ದರೆ ಶೈಲಿಗೆ ಪುಷ್ಟಿ ದೊರೆಯುವುದರಲ್ಲಿ ಸಂಶಯವಿಲ್ಲ. ಬೆದಂಡೆಗಬ್ಬದ ಮುಖ್ಯರಸ ಶೃಂಗಾರ. ಅದು ಒಮ್ಮೊಮ್ಮೆ ಅಶ್ಲೀಲಕ್ಕೂ ಇಳಿಯಬಹುದು. ಆದರೂ ಬೆದಂಡೆಗಬ್ಬವು ಸರ್ವರ ಮೆಚ್ಚುಗೆಗೆ ಪಾತ್ರವಾಗಿ ಬೆಳೆದು ಬಂದುದನ್ನು ಕಾಣುತ್ತೇವೆ.

ಗಂಗಿಗೌರೀ ಸಂವಾದವು ಮೇಲೆ ಹೇಳಿದ ಬೆದಂಡೆ ಗಬ್ಬದ ಎಲ್ಲ ಲಕ್ಷಣಗಳನ್ನೂ ಒಳಗೊಂಡ ಒಂದು ಉತ್ತಮ ಹಾಡುಗಬ್ಬ.ನಿಯಮದಂತೆ ಈ ಕಾವ್ಯದಲ್ಲಿ ಕಂದಗಳು ಬಂದಿವೆ. ಆದರೆ ಮಾತ್ರಾಗಣಕ್ಕೆ ಹೊಂದಿಕೊಂಡಿರುವ ರೂಢಿಯ ಕಂದ ಅವಲ್ಲ. ಅವು ಅಂಶಗಣಕ್ಕೆ ಹೊಂದಿಕೊಂಡಿರುವುದು ಒಂದು ವಿಶೇಷ. ಅಳಿಕೆಯ ವೃತ್ತ ಜಾತಿಯೆಂದರೆ ಈ ಕಾವ್ಯದಲ್ಲಿ ಬಂದಿರುವ ಪದನು, ವಚನಗಳು. ಜಾತಿ ಛಂದಸ್ಸೆಂದರೆ ಸಾಂಗತ್ಯ, ಇಷ್ಟೇ ಅಲ್ಲದೆ ಸುವ್ವಿ ಹಾಡು, ಒರಳಕ್ಕಿಯಪದ, ಜೋಗಿಪದ, ಜೋಗುಳ ಪದ ಮುಂತಾದ ಜನಪದ ಮಟ್ಟುಗಳು ಇದರಲ್ಲಿ ಸೇರಿವೆ. ಕೊನೆಗೊಂದು ಮಂಗಳಾರತಿಯ ಪದವಿದೆ. ಅದರಿಂದ ಕಾವ್ಯಕ್ಕೆ ಮಂಗಳ ಉಂಟಾಗಿದೆ. ತರುಳ ಚರಪತಿ ತನ್ನ ಕಾವ್ಯ ಬಂಧವನ್ನು ಹೀಗೆ ವಿವರಿಸಿದ್ದಾನೆ.

ಸಂಗತ್ಯ ವಚನ ಪದದಿ ಬಸವಯ್ಯ ಶಿವನು | ಮೂ
ರಂಗದಲ್ಲಿ ಕೃತಿಯ ಕೇಳು ಬಸವಯ್ಯ | ೧
ವಚನ ಪದದಿ ಸಂಗತ್ಯದಲ್ಲಿ ಬಸವಯ್ಯ | ಗುರುವು
ರಚಿಸಿ ಪೇಳ್ದ ಶ್ರುತಿಸಂಗತಿಯ ಬಸವಯ್ಯ || ೨
ಸಾಂಗತ್ಯ, ವಚನ, ಪದಗಳು ಮೂರಂದವಾಗಿ ಈ ಕೃತಿಯಲ್ಲಿ ಬಂದಿರುವುದನ್ನು ತಿಳಿಸಿದ್ದಾನೆ. ವಚನವೆಂದರೂ ಹಾಡುಗಳೇ ಆಗಿವೆ.

ಗಂಗಿಗೌರಿಯರ ಕಥೆ ಜನಸಾಮಾನ್ಯರ ಅನುಭವದ ಕಥೆ. ಗಂಗಿಗೌರಿ ದೇವಲೋಕದವರಾಗಿರಬಹುದು; ಕಾವ್ಯವನ್ನು ಓದುತ್ತ ಹೋದಂತೆ ಅವರು ನಮ್ಮ ನಿಮ್ಮವರೇ ಆಗಿಬಿಡುವರು. ಅವರು ಜಗಳಾಡುವುದಂತೂ ಯಾರಿಗೂ ಹೊಸದಲ್ಲ. ಜೋಡು ಹೆಂಡರನ್ನು ಮಾಡಿಕೊಂಡವನ ಮನೆಯಲ್ಲಿ ನಡೆಯುವ ನಿತ್ಯ ಕಲಹ, ಸವತಿಮಕ್ಕಳಾದ ಗಂಗೆಗೌರಿಯರು ನಿತ್ಯ ಜೀವನದಿಂದ ಎತ್ತಿಕೊಂಡ ಪಾತ್ರಗಳಾಗಿವೆ. ಜೀವ ಕಳೆಯಿಂದೊಡಗೂಡಿ ಬೆಳಗುವರು. ಕಥೆಯನ್ನು ಒಬ್ಬರಬಾಯಿಂದ ಇನ್ನೊಬ್ಬರು ಕೇಳುವಂತಾಗಿ ಕಥೆಗೆ ಚಮತ್ಕಾರ ಉಂಟಾಗಿದೆ. ಈ ಕಾವ್ಯದ ಜೀವಜೀವಾಳ ಶೃಂಗಾರ. ’ಬಂಗಾರ ಪುತ್ಥಳಿ ಗಂಗೆಯ ಶಿವ ತಂದ ಶೃಂಗಾರ ಕಥೆಯೆಂದು ಕವಿಯೇ ಹೇಳಿದ್ದಾನೆ. ಅಷ್ಟೇ ಅಲ್ಲದೆ ಶಿವನು ಗಂಗೆಯನ್ನು ಕಾಣುವುದು ಶೃಂಗಾರ ತೋಟದಲ್ಲಿ ಶಿವಗಂಗೆಯರ ಸಂಭಾಷಣೆಯಲ್ಲಿ ಶೃಂಗಾರ ರಸದ ಝಳುಕಿದೆ. ಹೀಗಾಗಿ ಕಾವ್ಯವು ಶೃಂಗಾರದ ಮಡುವಾಗಿ ಶೋಭಿಸುತ್ತದೆ.

ಶೈಲಿ :

ಗಂಗಿಗೌರೀ ಸಂವಾದದ ಶೈಲಿ ಸರಳವಾಗಿದ್ದು ಹೃದಯಂಗಮವಾಗಿದೆ. ಜನಪದದ ಶೈಲಿಯೇ ಈ ಕಾವ್ಯದ ಶೈಲಿಯೆಂದರೂ ಅತಿಶಯೋಕ್ತಿಯಾಗಲಾರದು. ಜನತೆಯ ಆಡುನುಡಿ, ಪಡೆನುಡಿ, ನಾಣ್ಣುಡಿಗಳು ಅತಿ ಸಹಜವಾಗಿ ಈ ಕಾವ್ಯದ ಶೈಲಿಯಲ್ಲಿ ಬೆರೆತುಕೊಂಡು ಬರುತ್ತವೆ. ಕೆಲವನ್ನು ಇಲ್ಲಿ ಗಮನಿಸಬಹುದು:

೧. ಪರದೇಸಿ ಮುನಿ ಕೇಳು ತಿರಿದುಂಬ ಜೋಗಿ ನೀ
ಪರಸತಿಯರ ನೋಡ ಸಲ್ಲ
ವಿರಸಮಾತುಗಳಿಂದ ಸರಸವನಾಡಲು
ಸಿರಸವನುಳುಹಿಕೊ ಜೋಗಿ ||

೨. ಪಿಡಿನಡುವಿನ ಬಾಲೆ ನುಡಿ ಗಿಳಿಕೋಗಿಲೆ
ಸಡಗರ ರೂಪಸಂಪನ್ನೆ
ಅಡಗಿಯ ಮೃಗಸಿಂಹಯ ಕೆಡವಿ ಕೊಂದಾವೆ ನಿನ್ನ
ಒಡೆಯಾನ ಮಾಡಿಕೊ ಎನ್ನ ||

೩. ಮಿಂಡಿ ನೀ ಹರೆಯಾದ ಹೆಣ್ಣೆ ಪ್ರಾಯದ
ಗಂಡರಿಲ್ಲದ ಜೀವ ಸಲ್ಲ ||

೪. ಕಂಕುಳ ಸೀರೆಯ ಹೊಲತಿ ನೀ ಹೋಗೆಂದು
ಜಂಕಿಸಿ ಜರಿವಳು ಎನ್ನ ||

೫. ಅನ್ನದೈವವೆ ದೈವ ಇನ್ನು ದೈವಗಳಿಲ್ಲ ಕುನ್ನಿ ಮಾನವ ಕೇಳೆಲೊ |

ಈ ಕಾವ್ಯದ ಭಾಷೆ ಎಳೆಯರಿಗೂ ವೃದ್ಧರಿಗೂ ತಿಳಿಯುವ ಭಾಷೆ. ತಿಳಿಗನ್ನಡ ಭಾಷೆ:

ಹಳಗನ್ನಡಗಳಲ್ಲವಿನ್ನು ಬಸವಯ್ಯ | ಗೋಪ್ಯ
ಒಳಗನ್ನಡಗಳಲ್ಲವಿನ್ನು ಬಸವಯ್ಯ
ಎಳೆಯ ಬಾಲ ನಗುವಂತಿನ್ನು ಬಸವಯ್ಯ | ಎನ್ನ
ತಿಳಿಗನ್ನಡವ ಲಾಲಿಸಿನ್ನು ಬಸವಯ್ಯ ||

ಈ ಬಗೆಯ ಕಾವ್ಯ ಕನ್ನಡದಲ್ಲಿ ಇಂದಿನವರೆಗೂ ದೊರೆತಿರಲಿಲ್ಲ. ಬೆದಂಡೆಗೆ ಲಕ್ಷಣ ದೊರೆತಿತ್ತು. ಲಕ್ಷ್ಯವೇ ಸಿಕ್ಕಿರಲಿಲ್ಲ. ಆ ದೃಷ್ಟಿಯಿಂದಲೂ ಈ ಕೃತಿ ಮಹತ್ವ ಪೂರ್ಣವಾದುದೆಂದು ಭಾವಿಸಿದ್ದೇನೆ. ಸಹೃದಯರು ಈ ಕೃತಿಯನ್ನು ಅರ್ತಿಯಿಂದ ಬರಮಾಡಿಕೊಳ್ಳುವರೆಂದು ಹಾರೈಸುತ್ತೇನೆ.

ಸಂಪಾದಕರು