ಸಂಸ್ಕೃತಿಯ ವಿಕಾಸದ ವಿವಿಧ ಹಂತಗಳಲ್ಲಿ “ಕೃಷಿ’ಯೂ ಒಂದು. ಶಿಲಾಯುಗದಲ್ಲಿ ಬೇಟೆಯ ಮೂಲಕ ಆಹಾರವನ್ನು ಪೂರೈಸಿಕೊಳ್ಳುತ್ತಿದ್ದ ಮಾನವರು ಮುಂದೆ ಪಶುಸಾಕಣೆಯನ್ನು ಕೈಗೊಂಡರು. ಪಶುಗಳ ಸಗಣಿ ಭೂಮಿಯ ಮೇಲೆ ಶೇಖರವಾಗತೊಡಗಿದಂತೆ ಭೂಮಿಯ ಫಲವತ್ತತೆಯನ್ನು ಕಂಡುಕೊಂಡು “ಕೃಷಿ’ ಪದ್ಧತಿಯನ್ನು ಪ್ರಾರಂಭಿಸಿದರು. ಇದರ ಫಲವಾಗಿ ಅವರಿಗೆ ಕೃಷಿಗೆ ಸಂಬಂಧಿಸಿದ ಸಕಲವೂ ದೈವ ಸ್ವರೂಪವಾಗಿ ಕಂಡಿತು. ಅವನ್ನು ಆರಾಧಿಸುವುದರ ಮೂಲಕ ಮೊದಲಗೊಂಡು ಸ್ತುತಿಸುವ ಮಾತುಗಳು ರೂಪುಗೊಂಡಿರಬೇಕು. ಅಂಥ ಮಾತುಗಳಿಗೆ ನಾದ, ಲಯದ ಚೌಕಟ್ಟು ದೊರೆತಾಗ ಅವು ಕೃಷಿ ಸಾಹಿತ್ಯ ಅರ್ಥಾತ್ ಕೃಷಿಗೆ ಸಂಬಂಧಿಸಿದ ಜನಪದ ಗೀತೆ, ಲಾವಣಿ, ಒಗಟು, ಐತಿಹ್ಯಗಳು ಬೆಳೆದುಬಂದಂತೆ  ಕಂಡುಬರುತ್ತದೆ. ಇವೆಲ್ಲ ಮಾನವನ ಬದುಕಿನ ಭಾಗಗಳೇ ಆಗಿವೆ. ಹಾಗಾಗಿ ಕೃಷಿಯ ಅಧ್ಯಯನ ಸಂಸ್ಕೃತಿಯ ಅಧ್ಯಯನವೇ ಆಗಿದೆ.

ಪಶು ಸಾಕಣೆಯನ್ನು ಕೈಗೊಂಡು ಒಂದೆಡೆ ವಾಸ್ತವ್ಯ ಹೂಡಿದ ಮನುಷ್ಯ ನೆಲದ ಒಡಲಿನಿಂದ ಉತ್ಪನ್ನಗಳನ್ನು ಪಡೆಯುವ ಚಿಂತನೆಯಲ್ಲಿ ತೊಡಗುವ ಮೂಲಕ ವಿಜ್ಞಾನಿಯಂತೆ ಶೋಧಕನಾಗಿ ಗೋಚರವಾದ. ಅಂದರೆ ನೆಲವನ್ನು ಯಾವಾಗ ಉಳುಮೆ ಮಾಡಬೇಕು ಅದಕ್ಕೆ ಯಾವಾಗ ಬೀಜ ಬಿತ್ತಬೇಕು ಅಥವಾ ನಾಟಿ ಮಾಡಬೇಕು ಎಂಬುದನ್ನು ಆಲೋಚಿಸಿದ. ಅಲ್ಲದೆ ಕೃಷಿಗೆ ಬೇಕಾದ ಸಾಮಗ್ರಿಗಳನ್ನು, ಅವನ್ನ ಸಿದ್ಧಪಡಿಸಿಕೊಳ್ಳಬೇಕಾದ ಸಂದರ್ಭ, ಬೆಳೆಯ ಕಟಾವು, ಕಣಮಾಡುವಿಕೆ, ದವಸ ಧಾನ್ಯಗಳ ಸಂಗ್ರಹ, ಮೇವು ಸಂಗ್ರಹಣೆ ಇತ್ಯಾದಿಗಳ ಬಗೆಗೆ ಸದಾ ಚಿಂತಿಸುತ್ತ ನಿರಂತರ ಪ್ರಯೋಗಶೀಲನಾದದ್ದು ಗಮನಾರ್ಹ ಸಂಗತಿ. ಆದ್ದರಿಂದಲೇ ಕೃಷಿ ಮತ್ತು ಕೃಷಿಯನ್ನವಲಂಬಿಸಿರು ವುದರ ಬಗೆಗೆ ತಿಳಿಯಬೇಕಾದದ್ದು ತೀರಾ ಅನಿವಾರ್ಯ.

ಕೃಷಿಕರು ಕೃಷಿ ಸಂಬಂಧಿತ ಹಾಡು ಆಚರಣೆಗಳಲ್ಲಿ ತಮ್ಮ ಕೃತಜ್ಞತಾಭಾವವನ್ನು ವ್ಯಕ್ತಗೊಳಿಸಲು ವಾಗ್ರೂಪವನ್ನು ಬಳಸಿದ್ದಾರೆ. ಕೆಲವೊಮ್ಮೆ ಇವು ವ್ಯಕ್ತಿಯೊಬ್ಬನ ಸೃಷ್ಟಿಯಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ತಲುಪುವಲ್ಲಿ ಅಲ್ಪಸ್ವಲ್ಪ ಬದಲಾವಣೆಗೊಂಡು ಬಳಕೆಯಾಗುತ್ತು ಹೋದಂತೆ ಹ್ರಸ್ವವಾಗುತ್ತಲೊ, ವಿಸ್ತೃತಗೊಳ್ಳುತ್ತಲೋ ಮೂಲದ ಚೌಕಟ್ಟಿನ ಮಾದರಿಯಲ್ಲಿ ಹೊಸತಾಗಿ ಸ್ಪಷ್ಟಗೊಳ್ಳುತ್ತಲೊ ಪ್ರಾದೇಶಿಕ ಭಿನ್ನತೆಯನ್ನು ಪಡೆದುಕೊಂಡಿರಬೇಕು.

ಭಾರತದಂಥ ದೇಶದಲ್ಲಿ ಇಂಥ ಸಾಹಿತ್ಯಕ್ಕೆ ಮೊದಲು ಅಷ್ಟೊಂದು ಪ್ರಾಧಾನ್ಯತೆ ದೊರಕಲಿಲ್ಲ. ಪಾಶ್ಚಾತ್ಯರಲ್ಲಿ ಇದರ ಬಗೆಗೆ ವಿಶೇಷವಾದ ಒಲವು, ಆಸಕ್ತಿ ಮೂಡಿ ವೈಜ್ಞಾನಿಕ ಅಧ್ಯಯನ ಮೊದಲುಗೊಂಡಾಗ ಅಂಥ ಸಾಹಿತ್ಯ ತಮ್ಮಲ್ಲಿಯೂ ಇದೆ ಎಂಬುದನ್ನು ಗಮನಿಸಿದವರು ಗ್ರಹಿಸಿದವರು, ಅದರತ್ತ ಆಸಕ್ತರಾದರು. ಇಂದಿಗೂ ಅಂಥ ಸಾಹಿತ್ಯವನ್ನು “ಪಾಶ್ಯಾತ್ಯ ಅಧ್ಯಯನ ಮಾದರಿ’ಗಳಲ್ಲೆ ವಿಚಾರ ಮಾಡಲಾಗುತ್ತಿದೆ. ನಮ್ಮಲ್ಲಿ ಇಂಥ ಸಾಹಿತ್ಯಾಧ್ಯಯನಕ್ಕೆ ಈ ನೆಲದ ಸಿದ್ಧಾಂತಗಳನ್ನು ರೂಪಿಸಿ ಅಧ್ಯಯನ ಮಾಡುವ ವಿಧಾನ ಜರೂರಾಗಿ ರೂಪಗೊಳಿಸಿಕೊಳ್ಳಬೇಕಾಗಿದೆ.

ನಾವು ಜಾಗತೀಕರಣಕ್ಕೆ ಎಷ್ಟೇ ಬಿಚ್ಚಿಕೊಂಡರೂ ನಮ್ಮೊಳಗಿನ ದನಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಭೂಮಿಯ ಹದ, ಎದೆಯ ಹದ ಕೃಷಿಕರ ಪಾಡು ಹಾಡಾಗಿ ಹರಿದಿದೆ. ಆ ಹಾಡುಗಳಲ್ಲಿ ಲಯವಿರುವಂತೆ ಜೀವನದ ಲಯವೂ ಅಂತರ್ಗತವಾಗಿರುತ್ತದೆ. ಕೃಷಿಕರ ಬದುಕಿನ ಏಳುಬೀಳುಗಳು ಹಾಡಿನಲ್ಲಿ ಸಹಜವಾಗಿಯೇ ದಾಖಲಾಗಿಬಿಡುತ್ತವೆ. ಅಂಥ ಹಾಡುಗಳ ಅಧ್ಯಯನವೆಂದರೆ ಕೇವಲ ಸಾಹಿತ್ಯದ ಅಧ್ಯಯನವಲ್ಲ; ಒಂದು ಸಂಸ್ಕೃತಿಯ ಅಧ್ಯಯನ. ಆ ಮೂಲಕ ಕೃಷಿ ಸಂಸ್ಕೃತಿಯನ್ನು ಪುನರ್ ಸೃಷ್ಟಿಸಲು ಸಾಧ್ಯ. ಅವರು ಬಳಸುವ ಭಾಷೆಯನ್ನು ಅಧ್ಯಯನ ಮಾಡಲು ಆಧುನಿಕರ ಶಬ್ಬಕೋಶಗಳು ಪೂರ್ಣವಾಗಿ ನೆರವಾಗಲಾರವು. ಆ ವೃತ್ತಿಗೆ ಸಂಬಂಧಿಸಿದ ಶಬ್ದ ಬಳಕೆಗೆ ಅರ್ಥವನ್ನು ಹುಡುಕಬೇಕಾದವರು ಜೀವಂತ ಶಬ್ದಗಳ ಪುಟಗಳನ್ನು ನೋಡಬೇಕು. ಇದು ಮೇಲಿಂದ ಮೇಲೆ ಹಲವಾರು ಪುಸ್ತಕಗಳನ್ನು ತಡಕಾಡುವುದರಿಂದ ಆಗದ ಕೆಲಸ, ಕ್ಷೇತ್ರಕಾರ್ಯ ನಡೆಸಬೇಕು. ರೈತರ ನೆನಪಿನ ಕಣಜಗಳಲ್ಲಿ ಹೆಕ್ಕಿ ತೆಗೆಯಬೇಕಾದ ಕಾರ್ಯ. ಇದಕ್ಕೆ ಸಾಕಷ್ಟು ಶ್ರಮ, ತಾಳ್ಮೆ, ಕುಶಲತೆ ಇರಬೇಕು. ಕೃಷಿಕರು ಒಂದು ಶಬ್ದವನ್ನು ಎಲ್ಲ ಸಂದರ್ಭದಲ್ಲೂ ಒಂದೇ ಅರ್ಥದಲ್ಲಿ ಬಳಸುವುದಿಲ್ಲ. ಒಂದು ಶಬ್ದಕ್ಕೆ ಹಲವು ಅರ್ಥ ಮಗ್ಗುಲುಗಳಿದ್ದು ಅವರು ಬಳಸುವ ಸಂದರ್ಭ ಸನ್ನಿವೇಶವನ್ನು ಆಧರಿಸಿಯೇ ಆ ಶಬ್ದಗಳ ಬಹುಮುಖೀ ಅರ್ಥಗಳನ್ನು ತಿಳಿಯಬೇಕಾಗುತ್ತದೆ.

ಇಂಥ ಹಾಡುಗಳು ಸಾಮಾನ್ಯವಾಗಿ ಕೃಷಿಕರು ತಮ್ಮ ಕೆಲಸಕಾರ್ಯಗಳ ಏಕತಾನತೆಯಿಂದ ಬಿಡಿಸಿಕೊಳ್ಳಲು ಸೃಷ್ಟಿ ಮಾಡಿಕೊಂಡಿರಬೇಕು. ಅವರ ಬೇಸರವನ್ನು ದೂರವಿಡಲು ಹಾಡಿರಬಹುದು. ಸಾಮೂಹಿಕವಾಗಿ ಇಂಥ ಹಾಡುಗಳನ್ನು ಹಾಡುವಾಗ ಉದಾಹರಣೆಗೆ ನಾಟಿ ಹಾಕುವ ಸಂದರ್ಭದಲ್ಲಿ ಪ್ರಧಾನ ಗಾಯಕರೊಬ್ಬರಿದ್ದು ಉಳಿದವರು ಸೊಲ್ಲು ಕೊಡುತ್ತಿರುತ್ತಾರೆ. ಸಾಮೂಹಿಕವಾಗಿ ಪಾಲ್ಗೊಳ್ಳುವಿಕೆಯಲ್ಲಿ ಸಹಕಾರತತ್ವ ಬಿಂಬಿತವಾಗುತ್ತದೆ. ಇದೆಲ್ಲವೂ ಬುದ್ಧಿವಂತಿಕೆಯಲ್ಲಿ ಮೂಡಿಬಂದುದಲ್ಲ. ಭಾವನಾತ್ಮಕತೆಯ ಪಾಲು ಹೆಚ್ಚಿರುತ್ತದೆ. ಅಕ್ಷರವಂಚಿತ ಜನ ಸಮುದಾಯದಲ್ಲಿ ಸುಪ್ತ ಕಾವ್ಯ ಜಗತ್ತು ಅಡಗಿರುತ್ತದೆ. ಅದಕ್ಕೆ ಸ್ಫೂರ್ತಿ ಸಿಕ್ಕಾಗ ಅಂದರೆ ಕಾರ್ಯನಿರತರಾದಾಗ ತಾನಾಗಿಯೇ ಹಾಡು ಅರಳುತ್ತದೆ.

ಜನಪದರ ಹಾಡುಗಳನ್ನು ಅಧ್ಯಯನ ಮಾಡತೊಡಗಿದಾಗ ಮುಖ್ಯವಾಗಿ ನಮ್ಮ ಗಮನಕ್ಕೆ ಬರುವುದೆಂದರೆ ಅವರು ನಿರ್ವಹಿಸುತ್ತಿರುವ ಕಾಯಕಕ್ಕೆ ಅನುಗುಣವಾಗಿ ದನಿಯಲ್ಲಿ ಏರಿಳಿತಗಳು ಕೇಳಿಬರುತ್ತವೆ. ಆ ಸಂದರ್ಭದಲ್ಲಿ ಅವರು ಮಾನಸಿಕವಾಗಿ ತೋರುವ ಪ್ರತಿಕ್ರಿಯೆಗೆ ಅನುಗುಣವಾಗಿ  ಅಕ್ಷರಗಳು, ಶಬ್ದಗಳು ಬಳಕೆಯಾಗಿರುತ್ತವೆಂಬುದನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗೂ ಗ್ರಾಹ್ಯವಾಗುತ್ತದೆ. ಇಂಥ ಹಾಡುಗಳಲ್ಲೂ ಗಂಡಸರ ಹಾಡುಗಳು, ಹೆಂಗಸರ ಹಾಡುಗಳಿರುತ್ತವೆ. ಗಾಡಿ ಹೊಡೆಯುವಾಗ, ಕಪಿಲೆ ಹೊಡೆಯುವಾಗ ಹುಣಸೆಕಾಯಿ ಕೀಳುವಾಗ ಕೇಳಿಬರುವ ಹಾಡುಗಳು ಗಂಡಸಿನ ದನಿಯವಾಗಿದ್ದರೆ, ಬೀಸುವ, ಕುಟ್ಟುವ ಹಾಡುಗಳು ಸ್ತ್ರೀಯರ ಕಂಠದಿಂದ ಹೊರಬಂದವುಗಳಾಗಿರುತ್ತವೆ. ಶ್ರಮ ವಿಭಜನೆಯನ್ನು ಗುರುತಿಸುವ ರೀತಿಯಲ್ಲೆ ಇವನ್ನು ಗುರುತಿಸಬಹುದಾಗಿದೆ. ಜನಪದರಲ್ಲಿ ಬದುಕುವ ರೀತಿ ಹಾಗೂ ಸೃಜನಶೀಲ ಕ್ರಿಯೆ ಬೇರೆ ಬೇರೆಯಾಗಿರುವುದಿಲ್ಲ. ಎದ್ದ ತಕ್ಷಣ ಆ ದಿನಕ್ಕೆ ಬೇಕಾದ ಹಿಟ್ಟಿನ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಬೆಳಗಾದೊಡನೆಯೇ ರಾಗಿಕಲ್ಲಿಗೆ ಕೈಹಾಕಬೇಕಾಗುತ್ತದೆ. ಆ ಕಾಯಕದ ಜೊತೆಯಲ್ಲಿಯೇ ರಾಗಿಕಲ್ಲು ಪದಗಳು ಸೃಷ್ಟಿಗೊಳ್ಳುತ್ತವೆ. ರಾಗಿಕಲ್ಲು ಕೇವಲ ಕಲ್ಲಾಗಿರದೆ ಕಲ್ಲಮ್ಮ ದೇವತೆಯಾಗಿ ಕಾಣಿಸುತ್ತದೆ. ಜನಪದರಿಗೆ ಬದುಕಿನ ಬಗೆಗೆ ಪ್ರೀತಿ ಇರುವುದರಿಂದಲೇ ಎಲ್ಲ ವಸ್ತುಗಳ ಬಗೆಗೂ ಪ್ರೀತಿ ವಿಶ್ವಾಸ, ಗೌರವ. ಹಾಡುಗಳನ್ನು ಹಾಡಿದರೆ ಸಸ್ಯಗಳು ಬೇಗ ಬೆಳವಣಿಗೆಯಾಗುತ್ತವೆಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಪ್ರಸ್ತುತಪಡಿಸಿವೆ.

ಕೆಲವರ ಪಾಲಿಗೆ ಮಣ್ಣು ಕಲ್ಲಾಗಿ ಮಾತ್ರ ಕಾಣುವ ಭೂಮಿ ಕೃಷಿಕರ ಪಾಲಿಗೆ ತಾಯಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ/ಎಳ್ಳು ಜೀರಿಗೆ ಬೆಳೆಯೋಳ/ಭೂಮಿತಾಯ/ಎದ್ದೊಂದು ಗಳಿಗೇ ನೆನೆದೇನ’ – ಆಕೆ ಕೇವಲ ಮಾನವರಿಗೆ ಮಾತ್ರ ತಾಯಲ್ಲ. ಸಕಲ ಜೀವರಾಶಿಗಳಿಗೂ ಆಶ್ರಯದಾತೆ, ಅನ್ನದಾತೆ. ಸಕಲ ಜೀವರಾಶಿಗಳ ಚಟುವಟಿಕೆಗಳೂ ಈ ಭೂಮಿಯ ಮೇಲೆ ನಡೆಯುವುದು. ಕೃಷಿಕರು ಹಿಡಿಬಿತ್ತಿದರೆ ಖಂಡುಗ ಮರಳಿ ಕೊಡುವ ಭೂಮ್ತಾಯಿ ಕ್ಷಮೆ-ಕರುಣೆಗೆ ಮತ್ತೊಂದು ಹೆಸರು., ಮಣ್ಣನ್ನು ನಂಬಿ ಬದುಕುವವರಿಗೆ ಲೋಕದಲ್ಲಿ ಬೆಲೆಯಾದುದು ಮಣ್ಣೇ. ಇದಕ್ಕೆ ಮುಖ್ಯ ಕಾರಣ ಅವರು ಇದರೊಂದಿಗೆ ಬೆಳೆಸಿಕೊಂಡಿರುವ ಭಾವನಾತ್ಮಕ ಸಂಬಂಧ, ಆರ್ಥಿಕ ಸುರಕ್ಷತೆ ಸಹ ಭೂಮಿಯಿಂದಲೆ ಅವರಿಗೆ ದೊರೆತಿದೆ. ಅವರು ಬೆಳೆದ ದವಸ ಧಾನ್ಯ ತಮಗೆ ಮಾತ್ರ ಎಂದು ಎಂದೂ ಭಾವಿಸಿದವರಲ್ಲ. ಲೋಕಕ್ಕೇ ಅನ್ನದಾತರು ಅವರು. ಕೃಷಿಯಲ್ಲಿ ದೊರೆಯುವ ಹುಲ್ಲು, ಸಪ್ಪೆಯನ್ನು ತಾವು ಸಾಕಿದ ಜೀವರಾಶಿಗಳಿಗೆ ಆಹಾರವಾಗಿ ಬಳಸುತ್ತಾರೆ. ಅವರ ಬಯಕೆಗಳನ್ನು ಪೂರೈಸುವ ಭೂಮಿತಾಯಿ ಪ್ರಾತಃಸ್ಮರಣೀಯಳು ಎಂದು ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯೂ ಕಾಣದು.

ಕೃಷಿಗೆ ಭೂಮಿತಾಯಿಯಷ್ಟೇ ನೀರಿಗೂ ಮಹತ್ವವಿದೆ. ಕೃಷಿಕರ ಪಾಲಿಗೆ ಅದು ಬರಿಯ ನೀರಲ್ಲ ಗರತಿ ಗಂಗಮ್ಮ. ಇದು ಕೇವಲ ಜೀವಾಧಾರಕ ವಸ್ತುವಲ್ಲ. ಮೈಮನದ ಮೈಲಿಗೆಯನ್ನು ತೊಡೆದುಹಾಕುವ ಪಾಪನಾಶಿನಿ. ಅವರು ಗಂಗೆಯನ್ನೂ ಪೂಜಿಸುತ್ತಾರೆ. ಮಳೆರಾಯ ಹೊನ್ನ ಸುರಿಸುತ್ತಾನೆ. ಭೂಮಿತಾಯಿ ಬಂಗಾರ ಬೆಳೆಸುತ್ತಾಳೆ. ಮಳೆ ಸಕಾಲಕ್ಕೆ ಬಾರದೆ ಹೋದರೆ ಕಂಗಾಲಾಗುತ್ತಾರೆ. ಮಳೆರಾಯನನ್ನು ಮೊರೆ ಹೋಗುತ್ತಾರೆ. ’ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ. ಉಂಬೋ ಮಕ್ಕಳ ಕಂಬಕೆ ಕಟ್ಟಿ ಹುಯ್ಯೋ ಹುಯ್ಯೋ ಮಳೆರಾಯ ….” ಎಂದು ಬೇಡುತ್ತಾರೆ. ಮಳೆ-ಬೆಳೆ ಸರಿಯಾಗಿ ಆದಾಗ ಹಬ್ಬ ಹರಿದಿನಗಳು ವಿವಿಧ ಆಚರಣೆ ಸಂಪ್ರದಾಯಗಳು ಸಾಂಗವಾಗಿ ಜರುಗುತ್ತವೆ. ಬೆಳ್ದಿಂಗಳಪ್ಪನ ಪೂಜೆ ಆ ಸಂಬಂಧವಾಗಿ ತಿಂಗಳುಮಾವನ ಪದಗಳು ಕೇಳಿಬರುತ್ತವೆ. ಇದರಲ್ಲಿ ಮನರಂಜನೆ ಮುಖ್ಯವಾಗಿದ್ದರೂ ಮಳೆ ಬರುತ್ತದೆಂಬ ನಂಬಿಕೆ, ಹಳ್ಳಿಗೆ ಒಳ್ಳೆಯದಾಗುತ್ತದೆಂಬ ಭಾವನೆ ಬಲವಾಗಿದೆ. ಮಳೆಯಪ್ಪ, ಮಳೆರಾಜ ಸಾಲ ತರಲು ಹೋಗುವವನು ಎಂಬ ಕಲ್ಪನೆಗಳಿವೆ. ಆತನಿಗೂ ಮನುಷ್ಯನಿಗಿರುವಂತೆ ಸಂಸಾರವಿದೆ. ಕೋಪ ಬಂದಾಗ ದೂರ ಸರಿಯುತ್ತಾನೆ. ಆಗ ಆತನನ್ನೂ ಒಲಿಸಿಕೊಳ್ಳಲು ನಾನಾ ರೀತಿಯ ಆಚರಣೆಗಳು ಜರುಗುತ್ತವೆ. ಉತ್ತರ ಕರ್ನಾಟಕದಲ್ಲಿ ಗುರ್ಚಿ ಹೊರುವ ಸಂಪ್ರದಾಯವಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಮಳೆರಾಯನನ್ನು ಮಾಡುವುದಿದೆ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕೊಂತಿಪೂಜೆ ಪ್ರಮುಖವಾಗಿ ನಡೆಯುತ್ತದೆ.

ಜನಪದರು ತಮ್ಮ ಕೃಷಿಕಾಯಕದ ಪರಿಭಾಷೆಯಲ್ಲೇ ಅಲೌಕಿಕತೆಯನ್ನು ಒಗ್ಗೂಡಿಸಿಬಿಡುತ್ತಾರೆ. “ನಾರಾಯಣ ನಿನ್ನ ನಾಮದ ಬೀಜವ/ನಾನೆಲ್ಲಿ ಬಿತ್ತಿ ಬೆಳೆಯಲಿ ನಿನ ನಾಮ/ನಾಲಗೆ ಮೇಲೆ ಬೆಳೆದೇನು’ – ಇಲ್ಲಿ ಬಳಕೆಯಾಗಿರುವ ’ಬೀಜ’, “ಬಿತ್ತು’, “ಬೆಳೆ’ ಶಬ್ಧಗಳು ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ಇದರಂತೆಯೆ ಕೃಷಿಯು ಉತ್ಕೃಷ್ಟವಾಗಿರಬೇಕೆಂಬುದು ಅವರ ಮಹದಾಸೆ.

ಭೂಮಿಯನ್ನು ಕೃಷಿಗೆ ಹದಗೊಳಿಸಿಕೊಳ್ಳಲು ಹೊಲಕ್ಕೆ ಗೊಬ್ಬರ ಹಾಕುತ್ತಾರೆ. ಈ ಕ್ರಿಯೆಯನ್ನು ಅವರು ತಾಯಿ ಮಕ್ಕಳ ಸಂಬಂಧವಾಗಿಯೆ ನೋಡುತ್ತಾರೆ.

ಹೊಸ ಬಂಡಿಯ ಮೇಲೆ ಹಸುವಿನ ಗೊಬ್ಬರ ತಂದು
ಹಸಿದ ಭೂದೇವಿಗೆ ಹಾಕಿ | ಹಸಿದ
ಮಕ್ಕಳ ಕಾಯವ್ವ ನನ ತಂದೆಯೇ ||

ಹಸಿದ ಭೂದೇವಿಗೆ ಊಟ ಹಾಕಿದಂತೆ ಗೊಬ್ಬರ ಹಾಕುವುದನ್ನು ಕಂಡಿರುವ ಅವರಲ್ಲಿ ಅಂತಃಕರಣವೆ ಅನಾವರಣಗೊಂಡಿದೆ. ಅದನ್ನು ಉಂಡು ತರೋದೆ ಭೂದೇವಿ. ಮಣ್ಣಿನ ಮಕ್ಕಳಾದ ಕೃಷಿಕರಿಗೆ ಅನ್ನ ನೀಡುತ್ತಾಳೆಂಬ ನಂಬಿಕೆ ಅವರದು. ಭೂಮಿತಾಯಿಯ ಹಸಿವನ್ನು ತಣಿಸುವ ಶಕ್ತಿ ಗೊಬ್ಬರದಲ್ಲಿದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಇದೊಂದು ಪವಿತ್ರವಾದ ಕೆಲಸ ಎಂದೇ ಭಾವಿಸಿದ್ದಾರೆ.

ಕಸವ ಹೊಡೆಯುವ ಕೈ ಕಸ್ತೂರಿ ನಾತಾವ
ಬಸವಣ್ಣ ನಿನ್ನ ಸಗಣೀಯ ಬಳಿದ ಕೈ
ಎಸಳ ಯಾಲಕ್ಕಿ ಗೊನಿನಾತ

ಗೊಬ್ಬರದ ಮೂಲವಸ್ತು ಯಾವುದು? ಸಗಣಿ, ಕಸ. ಅದನ್ನು ಬಳಿಯುವಾಗ ಅವರಿಗೆ ಮುಜುಗರವೂ ಇಲ್ಲ. ಕೈ ವಾಸನೆಯಾಗುತ್ತದೆಂಬ ಕಿರಿಕಿರಿಯೂ ಇಲ್ಲ. ಗೊಬ್ಬರ ಕೊಡುವ ಹಸುವನ್ನು ’ಬಸವಣ್ಣ’ ಎಂದು ಭಾವಿಸಿದ್ದಾರೆ. ಸಗಣಿ ಮುಟ್ಟಿದ ಕೈಯೂ ಪರಿಮಳದ ವಾಸನೆಯನ್ನು ಪಡೆದುಕೊಳ್ಳುತ್ತದೆ, ಹೀಗೆ ಕೃಷಿ ಮಾಡಿದ ಹೊಲದಲ್ಲಿ ಬೆಳೆದ ಧಾನ್ಯವನ್ನು ತಂದು ಕಣದಲ್ಲಿ ರಾಶಿ ಮಾಡಿದ ಕಾಳು ತನಗಾಗಿ ಮಾತ್ರವಲ್ಲ  ಎಲ್ಲರಿಗಾಗಿ –

ಬಂಗಾರದ ಕೊಳಗ ಬಲಗೈಲಿ ತಕ್ಕೊಂಡು
ಬತ್ತ ಅಳೆದನೋ ಬಡವರಿಗೆ | ಅಣ್ಣಯ್ಯ
ರಾಶಿ ಅಳೆಯೋದು ಬೆಳಗಾದೊ

ಎಂಥ ಸಮೃದ್ಧವಾದ ಬೆಳೆ. ಅದನ್ನು ತಾನೊಬ್ಬನೇ ಉಂಡು ಸುಖಿಸಬೇಕೆಂಬ ಸ್ವಾರ್ಥ ಅವರದಲ್ಲ. ಇತರರಿಗೂ ಕೊಟ್ಟು ಉಣ್ಣಬೇಕು. ಎಂಥ ಉದಾತ್ತವಾದ ಭಾವನೆ, ಅದೂ ಬಡವರಿಗೆ. ಅಂಥ ಘನರಾಶಿಯನ್ನು ಅಳೆಯುವುದರೊಳಗೆ ಬೆಳಗಾಯಿತು ಎನ್ನುವುದರಲ್ಲಿ ಎಂಥ ಅರ್ಥವಿದೆ. ರಾಶಿಯ ಸಮೃದ್ಧಿಯನ್ನು ತಿಳಿಸುವುದರೊಂದಿಗೆ “ಬೆಳಗು’ ಶಬ್ಧ ಉದಾತ್ತವಾದ ಚಿಂತನೆಗಳನ್ನು ತಿಳಿಸುತ್ತದೆ. ಇದನ್ನೇ ತಾನೆ ವೈದಿಕರು ’ತಮಸೋಮ ಜ್ಯೋತಿರ್ಗಮಯಾ’ ಎಂದು ಹೇಳಿರುವುದು. ವೇದಶಾಸ್ತ್ರ ಪುರಾಣಗಳ ಸಕಲ ಸಾರವನ್ನು ಕೃಷಿ ಸಂಬಂಧಿತ ಹಾಡುಗಳಲ್ಲಿ ಕಾಣಲು ಸಾಧ್ಯವಿದೆ.

ಜನಪದರ ಹಾಡುಗಳಲ್ಲಿ ಬರವಣಿಗೆ ರೂಪದ ಶಿಷ್ಟಪದ ರಚನೆಗೆ ಸಮಾನಾಂತರವಾಗಿ ಜನಪದ ಸಾಹಿತ್ಯ ರೂಪುಗೊಳ್ಳುತ್ತಿತ್ತು ಎನ್ನುವುದನ್ನು ಕೂಡ ಗಮನಿಸಬಹುದು. ಇದು ಅರಿವಿಲ್ಲದೆ ನಡೆದಿರಬಹುದಾದರೂ ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಸಂಸ್ಕೃತಿಯೊಂದು ಸದ್ದಿಲ್ಲದೆ ರೂಪುಗೊಳ್ಳುತ್ತಿರು ವುದನ್ನು ಗುರುತಿಸಬಹುದು. ಇವು ಪ್ರಾದೇಶಿಕತೆಯಿಂದ ಭಿನ್ನತೆಯನ್ನು ಪಡೆದುಕೊಂಡಿದ್ದರೂ ಮೂಲ ಆಶಯ ಒಂದೇ ಆಗಿರುತ್ತದೆ.

ಕೃಷಿಕರಿಗೆ ಹಸು, ಎತ್ತು, ಎಮ್ಮೆ ಸರ್ವಸ್ವ. ಎತ್ತನ್ನು ಬಸವಣ್ಣನೆಂದೇ ಸಂಬೋದಿಸುತ್ತಾರೆ. ಜಗತ್ತಿನ ಮೂಲ ಬಸವಣ್ಣನೇ ಎಂದು ನಂಬಿ ಆತನ ಹುಟ್ಟಿನ ಮೂಲವನ್ನೇ ಸ್ಮರಿಸುತ್ತಾರೆ.

ಭೂಮಿ ಹುಟ್ಟಿದ ಮೊದಲು | ಭೂಮಿ ಕಟ್ಟಿದ ಮೊದಲು
ಭೂಪ ಹುಟ್ಟಿದ ಬಸವಯ್ಯ | ಮ್ಯಾಗಿನ
ಶಿವಗೇಳು ದಿನಕೆ ಹಿರಿಯನ

ಸಂಕ್ರಾಂತಿ ಹಬ್ಬದಲ್ಲಿ ಕಾಮನ ಹಬ್ಬದಲ್ಲಿ ಎತ್ತುಗಳನ್ನು ಪೂಜಿಸುತ್ತಾರೆ. ಕಷ್ಟದಲ್ಲಿ ಅವು ನಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆಯೂ ಇದೆ. ತಂಬೂರಿ ಸಂಪ್ರದಾಯದವರು ಹಾಡಿರುವ “ನಿಂಗಣ್ಣಗೌಡ’ ಎಂಬ ಕಥನಕಾವ್ಯದಲ್ಲಿ ಅಣ್ಣ ತಮ್ಮಂದಿರಿಗೆ ಸಂಬಂಧಿಸಿದ ಸಂಗತಿ ಇದೆ. ಶೆಟ್ಟಣ್ಣಗೌಡ, ನಿಂಗಣ್ಣಗೌಡ ಅಣ್ಣ ತಮ್ಮಂದಿರು. ಅಣ್ಣ ವ್ಯಾಪಾರದ ಸಲುವಾಗಿ ದೂರದ ಊರಿಗೆ ಹೋದಾಗ ಆತನ ಹೆಂಡತಿ ಹೊನ್ನಾದೇವಿ ಮೈದುನನನ್ನು ಕೂಡಲು ಪ್ರಯತ್ನಿಸುತ್ತಾಳೆ. ಮೈದುನ ನಿಂಗಣ್ಣಗೌಡ ಹೊನ್ನಾದೇವಿಯ ಬಯಕೆಗೆ ಸ್ಪಂದಿಸುವುದಿಲ್ಲ. ಸೇಡನ್ನ ತೀರಿಸಿಕೊಳ್ಳಲು ಆಕೆ ತನ್ನ ಗಂಡ ಬಂದಾಗ “ನಿಂಗಣ್ಣಗೌಡ ನನ್ನನ್ನ ಕೆಣಕಿದ’ ಎಂದು ಸುಳ್ಳು ಹೇಳುತ್ತಾಳೆ. ಕೋಪಗೊಂಡ ಅಣ್ಣ ತಮ್ಮನನ್ನು ಸಾಯಿಸಿ ರುಂಡವನ್ನು ಹಾಳುಬಾವಿಗೆ ಮುಂಡವನ್ನು ನೀರು ಬಾವಿಗೆ ಹಾಕುತ್ತಾನೆ. ಆಗ ನಿಂಗಣ್ಣಗೌಡ ಸಾಕಿದ ಎರಡು ಎತ್ತುಗಳು ರುಂಡ ಮುಂಡವನ್ನು ಎತ್ತಿಕೊಂಡು ಬರುತ್ತವೆ. ಚಿಕ್ಕ ಬೆಳ್ಳಿ, ದೊಡ್ಡ ಬೆಳ್ಳಿ ಎಂಬ ಎರಡು ಎತ್ತುಗಳ ಶೋಕ ಮತ್ತು ಗೌರವವನ್ನು ಕಂಡ ಶಿವ ಪ್ರತ್ಯಕ್ಷವಾಗಿ ನಿಂಗಣ್ಣಗೌಡನನ್ನು ಬದುಕಿಸಿ ಆತನನ್ನು ಮತ್ತು ಎತ್ತುಗಳನ್ನು ರತ್ನಗಲ್ಲಿಗೆ ಕಳಿಸುತ್ತಾನೆ. ಅಣ್ಣ ತಮ್ಮನನ್ನು ಕೊಂದ ತಪ್ಪಿಗಾಗಿ ಕೊರಗಿ ಬಡವನಾಗಿ ಕಟ್ಟಿಗೆ ಮಾರಾಟ ಮಾಡುತ್ತ ಹೆಂಡತಿಯೊಂದಿಗೆ ರತ್ನಗಲ್ಲಿಗೆ ಬರುತ್ತಾನೆ. ಆಗ ಎತ್ತುಗಳು ಹೊನ್ನಾಲದೇವಿಯನ್ನು ಸಾಯಿಸುತ್ತವೆ. ನಿಂಗಣ್ಣಗೌಡ ಆಗ ಮಧ್ಯೆ ಪ್ರವೇಶಿಸಿ ಅಣ್ಣನನ್ನು ಉಳಿಸಿ ಪದ್ಮಾವತಿ ಪಟ್ಟಣದ ಶೂರಸೇನ ರಾಜನ ಮಗಳನು ತಂದು ಮದುವೆ ಮಾಡಿಸಿ ಅಣ್ಣನಿಗೆ ಪಟ್ಟಕಟ್ಟಿ ತಾನು ಮಂತ್ರಿಯಾಗುತ್ತಾನೆ. ಜನಪದ ಕತೆಗಳಲ್ಲಿ ನಿರಪರಾಧಿ ಸಾಯುವುದೇ ಇಲ್ಲ. ಇಲ್ಲಿ ನಿಂಗಣ್ಣಗೌಡ ನಿರಪರಾಧಿ. ಅವನನ್ನು ಬದುಕಿಸಲು ಹಾತೊರೆಯುವುದು ಎರಡು ಎತ್ತುಗಳು. ಅವು ಬೇಸಾಯದ ಅವಿಭಾಜ್ಯ ಅಂಗಗಳು. ಹಾಗಾಗಿ ಮನುಷ್ಯ ಅವನ್ನು ಪ್ರೀತಿಸುತ್ತಾನೆ. ಪರಸ್ಪರ ಪ್ರೀತಿ ವಿಶ್ವಾಸ ಎಂಥ ಅಪಾಯವನ್ನು ಬೇಕಾದರೂ ಎದುರಿಸಬಲ್ಲದು ಎಂಬುದನ್ನು ಇದು ಸಮರ್ಥಿಸುತ್ತದೆ.

ವಿಲ್‌ಡ್ಯೂರೆಂಟ್‌ನ ಪ್ರಕಾರ ವಿಜ್ಞಾನದ ಮೂಲವೇ ಕೃಷಿ. ಅದು ಕಲೆಯೂ ಹೌದು. ಭೂಮಿಯನ್ನು ಕೃಷಿಕ ಉತ್ಪಾದನಾ ಮೂಲವಾದುದಷ್ಟೇ ಅಲ್ಲ ಅದು ಸುಂದರವಾಗಿರುವಂತೆಯೂ ನೋಡಿಕೊಂಡಿದ್ದಾನೆ. ಉಳುಮೆ, ಬಿತ್ತನೆ, ಕಳೆ ಕೀಳುವುದು – ಮುಂತಾದ ಹಲವು ಹಂತಗಳಲ್ಲಿ ಅದರ ಸೌಂದರ್ಯವನ್ನು ಕಾಪಾಡಿಕೊಂಡೇ ಬಂದಿದ್ದಾನೆ. ಅದರ ಭಾಗವಾಗಿ ಹಾಡಿ, ಕುಣಿದು ಕುಪ್ಪಳಿಸಿದ್ದಾನೆ. ಹಾಗಾಗಿ ದಕ್ಷಿಣ ಕರ್ನಾಟಕದ ಹಾಡುಗಳಲ್ಲಿ ಸಹಜವಾಗಿ ಮಳೆ, ಬೆಳೆ, ಬೇಸಾಯದ ಉಪಕರಣಗಳು, ಪಶುಪಾಲನಾ ಸಂಗತಿಗಳು ಮೇಲಿಂದ ಮೇಲೆ ಬರುತ್ತವೆ. ಮಳೆಯನ್ನು ಆಧರಿಸಿದ  ವ್ಯವಸಾಯ ಪ್ರದೇಶಗಳಲ್ಲಿ ಬೆಳೆಯುವ ಹಾರಕ, ಸಾವೆ, ನವಣೆ, ಗೋಧಿ, ರಾಗಿ, ಕೊರಲೆ, ಸಜ್ಜೆ, ಜೋಳ – ಮುಂತಾದ ಆಹಾರದ ಬೆಳೆಗಳು ತೊಗರಿ, ಅವರೆ, ಹಲಸಂದಿ, ಹೆಸರು, ಉದ್ದು, ಕಡಲೆ, ಹುರುಳಿ – ಮುಂತಾದ ದ್ವಿದಳ ಧಾನ್ಯಗಳು ಸಾಸುವೆ, ಮೆಣಸಿನಗಿಡ, ಕೊತ್ತಂಬರಿ, ಮೆಂತ್ಯ ಮುಂತಾದ  ಸಾಂಬಾರ ಬೆಳೆಗಳು ಔಡಲ, ಎಳ್ಳು, ಕುಸುವೆ ಮುಂತಾದ ಎಣ್ಣೆ ಬೆಳೆಗಳು ಹತ್ತಿ, ಶೇಂಗಾ, ಈರುಳ್ಳಿ, ಜೋಳ ಮುಂತಾದ ವಾಣಿಜ್ಯ ಬೆಳೆಗಳು – ಇವುಗಳ ಉಲ್ಲೇಖ ಪ್ರಾಸಂಗಿಕವಾಗಿ ಇಲ್ಲಿಯ ಬೇಸಾಯದ ಹಾಡುಗಳಲ್ಲಿ ಬರುತ್ತದೆ. ಭತ್ತ, ಕಬ್ಬು, ಬಾಳೆ, ತೆಂಗು ಅಡಿಕೆ, ಎಲೆಬಳ್ಳಿ ಇವುಗಳು ಹಾಡುಗಳಲ್ಲಿ ಹೇರಳವಾಗಿ ಕಂಗೊಳಿಸುತ್ತವೆ. ನೇಗಿಲು, ನೊಗ, ಕುಂಟೆ, ಕೂರಿಗೆ ಮುಂತಾದ ಕೃಷಿ ಸಾಮಗ್ರಿಗಳು, ಕೃಷಿಗೆ ನೆರವಾಗುವ ಆಯಗಾರರು, ಕಣಜ, ವಾಡೇವುಗಳಂತಹ ಧಾನ್ಯ ಸಂರಕ್ಷಿಸುವ ತಾಣಗಳು, ಕೃಷಿಗೆ ಸಂಬಂಧಿಸಿದ ಹಬ್ಬಗಳು – ಇವೆಲ್ಲ ಜನಪದ ಹಾಡುಗಳಿಗಗೆ ಸಮೃದ್ಧವಾದ ವಸ್ತುಗಳಾಗಿವೆ. ಸಕಲ ರೀತಿಯ ಸಂಸ್ಕೃತಿಗಳಿಗೆ ಕೃಷಿ ಸಂಸ್ಕೃತಿಯೇ ಮೂಲ. ನೆಲ ಸಂಸ್ಕೃತಿಯೇ ಅದಕ್ಕೆ ಮೂಲವಾದುದು. ಕೃಷಿಕರು ಋತುಮಾನಗಳ ವ್ಯತ್ಯಾಸಗಳನ್ನು ಭಯಭಕ್ತಿಯಿಂದ ಕಾಯುವುದುಂಟು ನೃತ್ಯ ಮತ್ತು ಗೀತೆಗಳಿಂದ ಅವನ್ನ ಆಚರಿಸುವುದಿದೆ. ಮೋಡ ಮತ್ತು ಮಳೆಗಳನ್ನು ಪ್ರಣಯ ಕ್ರಿಯೆಯ ಸಾಂಪ್ರದಾಯಿಕ ಸಂಕೇತವಾಗಿ ನಂಬುವುದಿದೆ. ಮಳೆ ಮತ್ತು ಬಿರುಗಾಳಿ ಲೈಂಗಿಕತೆಯ ಹಂಬಲವನ್ನು ಉದ್ದೀಪಿಸುವ ಸಂಕೇತವಾಗಿಯೂ ಬಳಕೆಗೊಂಡಿದೆ. ಬತ್ತದಗದ್ದೆಗಳು, ಹುಲ್ಲು ಮಾಳಿಗೆಗಳು, ನದಿದಡಗಳು, ಬಾವಿ ಕೊಳಗಳ ಪಕ್ಕಗಳು, ಕಾಡು ಪ್ರದೇಶ – ಇವೆಲ್ಲ ಪ್ರಣಯಿಗಳು ಸಂಪರ್ಕಿಸುವ ತಾಣಗಳಾಗಿವೆ. ಕಾಯಕದ ಭಾಗವಾಗಿ ಬರುವ ಹೋಳಿಹುಣ್ಣಿಮೆಯಂಥ ಹಬ್ಬಗಳು ಪ್ರಣಯ ಪ್ರಚೋದನೆಯ ಸಂಕೇತಗಳಾಗಿವೆ. ಆದ್ದರಿಂದ ಕೃಷಿ ಜಾನಪದದ ಅಧ್ಯಯನವೆಂದರೆ ಮಾನವನ ಬೆಳವಣಿಗೆಯ ಇತಿಹಾಸದ ಅಧ್ಯಯನವೇ ಆಗಿದೆ. ಅದೊಂದು ಸಾಂಸ್ಕೃತಿಕ ಮಾನವಶಾಸ್ತ್ರದ ಅಧ್ಯಯನ. ಇದು ಪರಂಪರಾಗತವಾಗಿ ರೂಢಿಗೆ ಬಂದಿರುವಂಥದ್ದು. ಜನಪದರು ಭೂಮಿಯನ್ನು ತಾಯಿ ಎಂದು ಭಾವಿಸಿ ಯಾವ ನೆಲಕ್ಕೆ ಯಾವ ರೀತಿಯ ಬೀಜವನ್ನು ಬಿತ್ತಬೇಕು, ಹೇಗೆ ಆರೈಕೆ ಮಾಡಬೇಕು. ಎಂಥ ಬೆಳೆಯನ್ನು ತೆಗೆಯಬೇಕು. ಅದರ ದಾಸ್ತಾನು ಹೇಗೆ ಮಾಡಬೇಕು. ಬೀಜ ಸಂರಕ್ಷಣೆ’ ಹೇಗೆ – ಇವೆಲ್ಲ ಅನುಭವದಿಂದ ತಿಳಿದುಕೊಂಡು ಪಾಲಿಸುತ್ತ ಬಂದರು. ಆದರೆ ಇಂಥ ಸಾಂಪ್ರದಾಯಿಕ ಕೃಷಿ ಪದ್ಧತಿ ಇವತ್ತೂ ಕಣ್ಣರೆಯಾಗುತ್ತಿದೆ. ಎಲ್ಲವೂ ಬದಲಾವಣೆಗೊಳ್ಳುತ್ತಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೇಲೆ ಆಧುನಿಕ ಕೃಷಿ ವಿಜ್ಞಾನದ ಪ್ರಭಾವ ಜಾಸ್ತಿಯಾಗುತ್ತಿರುವುದರಿಂದ ಆಮೂಲಾಗ್ರವಾಗಿ ಬದಲಾವಣೆಗೊಳ್ಳುತ್ತಿದೆ. ಪರಿಸರದ ಅಸಮತೋಲನೆಗೂ ಆಧುನಿಕ ಕೃಷಿವಿಜ್ಞಾನ ಕಾರಣವಾಗಿದೆ.

ಭಾರತದ್ದು ಬೀಜ ಸಂಸ್ಕೃತಿ, ರೈತ ತಾನು ಬೆಳೆದ ಬೆಳೆಯಿಂದ ಬೀಜ ಮಾಡಿ ಅದರಿಂದ ಮತ್ತೆ ಬೆಳೆ ತೆಗೆಯುವ ಕ್ರಮ ಇಲ್ಲಿಯದು, ಸ್ವಯಂಪೂರ್ಣವಾದ ಈ ಬೀಜ ಸಂಸ್ಕೃತಿಯ ಜಾಗದಲ್ಲಿ ಹೈಬ್ರಿಡ್ ಸಂಸ್ಕೃತಿ ಜಾರಿಗೆ ಬಂದಿದೆ. ಅಂತರರಾಷ್ಟ್ರೀಯ ಕಂಪನಿಗಳು ಬೀಜವನ್ನು ಕೊಂಡುಕೊಳ್ಳತೊಡಗಿ, ಅವುಗಳಿಗೆ ತಕ್ಕಂತೆ ಹೈಬ್ರಿಡ್ ಗೊಬ್ಬರ, ರಾಸಾಯನಿಕಗಳನ್ನು ಔಷಧಿಗಳನ್ನು ಪೂರೈಸುತ್ತಿವೆ. ಇದರಿಂದ ಹಳ್ಳಿಗಾಡಿನ ಸ್ವಾವಲಂಬನೆಯನ್ನು ಹಾಗೂ ಕೃಷಿಕರ ಹಕ್ಕನ್ನು ಕಸಿದುಕೊಂಡಂತಾಗಿದೆ. ಬಿತ್ತನೆ ಬೀಜದಿಂದ ಹಿಡಿದು ಮಾರಾಟ ಮಾಡುವವರೆಗೆ ರೈತ ಪರಾವಲಂಬಿಯಾಗಿದ್ದಾನೆ, ಭಯಪೀಡಿತನಾಗಿದ್ದಾನೆ. ರಕ್ಷಣೆ ಇಲ್ಲದವನಾಗಿದ್ದಾನೆ. ಅಂತರರಾಷ್ಟ್ರೀಯ ಜಾಲಕ್ಕೆ ಸಿಲುಕಿ ಅದಕ್ಕೆ ಮುಖಾಮುಖಿಯಾಗಲು ಸಾಧ್ಯವಾಗದೆ ಆತ್ಮಹತ್ಯೆಯ ದಾರಿ ಹಿಡಿದಿರುವುದು ಶೋಚನೀಯ ಸಂಗತಿ. ಡಬ್ಲ್ಯೂ.ಟಿ.ಓ., ಐ.ಎಮ್.ಎಫ್., ಗ್ಯಾಟ್ ಒಪ್ಪಂದಗಳು ಭಾರತದ ಗ್ರಾಮ ಪರಿಸರವನ್ನು ನಾಶಮಾಡಿರುವುದಂತೂ ಖಂಡಿತ.

ಜಾಗತೀಕರಣದ ಕರಿನೆರಳಿನಲ್ಲಿ ಕೃಷಿಕರ ಬದುಕು ನಲುಗುತ್ತಿದೆ. ಅವನೊಬ್ಬ ಫೀನಿಕ್ಸ್. ಸತ್ತು ಸತ್ತು ಹುಟ್ಟುತ್ತಿರುತ್ತಾನೆ. ಅದೆಂಥ ವಿಚಿತ್ರವಾದ ಬದುಕು. ಆಳುವ ಮಂದಿಯ ಕಣ್ಣಿಗೆ ಅವನೊಂದು ಓಟು ಮಾತ್ರ. ಕೃಷಿಕರು ಸಾಲಬಾಧೆ ತಡೆಯಲಾರದೆ ಸಾವಿಗೆ ಶರಣಾಗುತ್ತಿದ್ದಾರೆಂಬುದನ್ನು ಓದಿದಾಗ, ಕೇಳಿದಗ, ನೋಡಿದಾಗ ಕರುಳು ಕಿತ್ತು ಬರುತ್ತದೆ. ಇಂಥ ವಿಚಾರಗಳನ್ನು ನಾವು ಗಂಭೀರವಾಗಿ ಯೋಚಿಸಲು ಸಾಧ್ಯವಾದಾಗ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾದಾಗ ಮಾತ್ರ ನಾವು ಮನುಷ್ಯರಾಗುತ್ತೇವೆ. ಇಲ್ಲವಾದರೆ ಬುದ್ಧಿವಂತರು ಮಾತ್ರವಾಗುತ್ತೇವೆ. ಹೃದಯವಂತರಲ್ಲ.

ಹಸಿರು ಅವರ ಉಸಿರು. ಅದನ್ನು ಈಗಾಗಲೆ ಕಿತ್ತುಕೊಳ್ಳುವ ಜಾಗತೀಕರಣ ವ್ಯವಸ್ಥೆ ರೂಪುಗೊಂಡಿದೆ. ಅವರು ಬೆಳೆದ ಬೆಳೆಗೆ ಬೆಲೆ ನಿರ್ಧರಿಸುವವರು ಅವರಲ್ಲ, ಮಾರುಕಟ್ಟೆಯ ದಳ್ಳಾಳಿಗಳು, ಇದರಿಂದ ಮೆಣಸಿನಕಾಯಿ, ಟಮೋಟಾ, ಹತ್ತಿ ಮೊದಲಾದುವನ್ನು ಬೀದಿಗೆ ಚೆಲ್ಲಿ ತಮ್ಮ ಕರುಳ ಆಕ್ರಂದನವನ್ನು ತೋರಿಸುತ್ತಿದ್ದಾರೆ. ಸರ್ಕಾರ ಆಗಾಗ ಪರಿಹಾರದ ಮಾತನಾಡುತ್ತಿದೆಯಾದರೂ ಅದು ಫಲಾನುಭವಿಗಳಿಗೆ ದಕ್ಕುತ್ತಿಲ್ಲ ! “ರೈತರಿಗೆ ಸಾಲ ಬಡ್ಡಿ ಮನ್ನ’ ಎಂಬ ತಂತ್ರದ ಹಿಂದಿನ ಚಿತಾವಣೆ ಕೆಲವರದು. ಈಗಾಗಲೆ ಸಾಲ ಪಡೆದು ಬಡ್ಡಿ ಕಟ್ಟಲಾಗದ ಅಸಹಾಯಕರಿಗೆ ಮತ್ತೆ ಸಾಲ ಕೊಟ್ಟಂತೆ ಮಾಡಿ ಹಳೆಯ ಸಾಲವನ್ನು ಮುರಿದುಕೊಂಡು ಪುಡಿಗಾಸನ್ನೂ ಅವನಿಗಿತ್ತು ಹೊಸಸಾಲದ ಸಂಪೂರ್ಣ ಮೊತ್ತಕ್ಕೆ ಅವನನ್ನು ಹೊಣೆಗಾರನನ್ನಾಗಿ ಮಾಡಲಾಗುತ್ತಿದೆ. “ಸಾಲ ವಸೂಲಿಯಲ್ಲಿ ಮಹತ್ತರ ಸಾಧನೆ’ ಎಂದು ಮಾಧ್ಯಮಗಳಲ್ಲಿ ಘೋಷಿಸಿಕೊಳ್ಳಲಾಗುತ್ತಿದೆ. ಅದನ್ನೂ ಗಂಭೀರವಾಗಿ ಗಣಿಸುತ್ತಲೇ ಕೃಷಿ ಹಾಡುಗಳ ಬಗ್ಗೆ ಆಲೋಚಿಸಬೇಕಾಗುತ್ತದೆ. ಅವರ ಪಾಡು ಹಾಡಾಗಿದೆ. ಕೃಷಿ ಹಾಡುಗಳು ಮುಗಿದು ಹೋದುವೆ ? ಖಂಡಿತ ಇಲ್ಲ. ಬೆವರಿನ ಜೊತೆಗೆ ಹನಿ ಹನಿಯಾಗಿ ಹೊರಹೊಮ್ಮುತ್ತಿವೆ. ಸುಖ ದುಃಖಗಳಿಗೆ ಹಿಗ್ಗದೆ ಕುಗ್ಗದೆ ಸಮಚಿತ್ತವನ್ನು ಕೃಷಿಕರು ಕಾಪಾಡಿಕೊಂಡು ಬಂದಿದ್ದಾರೆ. ಇಂದಿಗೂ ಗ್ರಾಮಗಳಲ್ಲಿ ಕೃಷಿ ಸಂದರ್ಭದಲ್ಲಿ ಹಾಡುಗಳು ಕೇಳಿಬರುತ್ತಿವೆ. ಅವರಿಗೆ ಅವರದೇ ಆದ ಸಾಹಿತ್ಯವಿದೆ. ಅದೂ ಸಹ ಕಾಲಕಾಲಕ್ಕೆ ಮರುಹುಟ್ಟು ಪಡೆದುಕೊಳ್ಳುತ್ತಿದೆ. ಕೃಷಿ ಇರುವವರೆಗೆ ಕೃಷಿಕರ ಹಾಡು ಇಂಗುವುದಿಲ್ಲ. ಕಲಿತ ಹಾಡಿನ ಋಣವ ಹಾಡಿ ತೀರಿಸಬೇಕೆಂಬ ಬಯಕೆ ಅವರದು. ಹಾಗೆ ಹಾಡದಿದ್ದರೆ ಎದೆಯೊಳಗೆ ಅವು ಹಾಗೆಯೇ ಇಂಗಿ ಹೋಗುತ್ತವೆಂಬ ಎಚ್ಚರ ಕೂಡ ಅವರಿಗಿದೆ. ಆದ್ದರಿಂದಲೇ ಹಾಡು ಹರಿಯುತ್ತಲೇ ಇವೆ. ನಾವು ಕೇಳುತ್ತಲೇ ಇದ್ದೇವೆ. ಇದುವೇ ಜೀವನ.

ಕೃಷಿಗೆ ಸಂಬಂಧಿಸಿದ ಯಾವುದೇ ಸಂಗತಿಯನ್ನು ಒಳಗೊಂಡಿದ್ದರೂ ಅಂಥ ಹಾಡುಗಳನ್ನು ಇಲ್ಲಿ ಸೇರಿಸಲಾಗಿದೆ. ರಾಗಿಕಲ್ಲು, ಭೂಮಿ, ಮಳೆ, ಗಾಳಿ, ದನ ಕರು, ಗೊಬ್ಬರ ಬೀಜ ಬಿತ್ತನೆ, ಬೆಳೆ, ಕೊಯ್ಲು – ಮುಂತಾದ ಆಶಯಗಳಿರುವ ಹಾಡುಗಳನ್ನು ಇಲ್ಲಿ ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ಕೃಷಿಯ ಭಾಗವಾಗಿ ಜರುಗುವ ಆಚರಣೆ, ಅದರ ಭಾಗವಾಗಿ ಹೊರಬರುವ ಹಾಡುಗಳೂ ಇದರಲ್ಲಿರುವುದರಿಂದ ಒಟ್ಟು ನೆಲ ಸಂಸ್ಕೃತಿಯೇ ಹಾಡುಗಳಲ್ಲಿ ಬಿಂಬಿತವಾದಂತಾಗಿದೆ. ಭೂಮಿ ಮಗಳು ಕೊಂತ್ಯಮ್ಮನ ಪರ್ವ, ಕೊಂತಿಪದಗಳು, ತಿಂಗಳುಮಾವನ ಪದ, ಪಾಂಡವರ ಅವರೆ ಪರ್ವ, ಅರ್ಜುನನಿಂದ ಒಕ್ಕಲಿಗರು ಹೆಸರು ಪಡೆದ ಪರ್ವ, ಭೀಮಣ್ಣ ಮುದ್ದೇಗೌಡರ ದರಕಾಸ್ ಭೂಮೀಲಿ ಗೇದ ಪರ್ವ, ಬಿತ್ತುವಹಾಡು, ಮೊಳಕೆಹಾಡು, ಗೊಬ್ಬೀಯಾಳೊ, ತಿಪ್ಪೇಸ್ವಾಮಿ, ಎತ್ತಪ್ಪನ ಗೀತೆ – ಈ ಹಾಡುಗಳೆಲ್ಲ ಉತ್ತರ ಕರ್ನಾಟಕದ ಬೇಸಾಯದ ಹಾಡುಗಳಿಗಿಂತ ಭಿನ್ನವೆಂತಲೂ ದಕ್ಷಿಣ ಕರ್ನಾಟಕದ ಬೇಸಾಯದ ಹಾಡುಗಳಲ್ಲಿಯೇ ತುಂಬ  ವಿಶಿಷ್ಟವಾದುವಾಗಿಯೂ ಕಂಗೊಳಿಸಿರುವುದು ಈ ಸಂಕಲನದ ವೈಶಿಷ್ಟ್ಯವಾಗಿದೆ.

ಒಟ್ಟಾರೆ ನೆಲ ಸಂಸ್ಕೃತಿಯನ್ನು ಒಳಗೊಂಡ ಇಂಥ ಹಾಡುಗಳ ಸಂಕಲನವನ್ನು ಸಂಪಾದಿಸಿಕೊಡುವ ಜವಾಬ್ದಾರಿಯನ್ನು ನೀಡಿದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಾಲಯದ ಅಧಿಕಾರಿಗಳಿಗೆ, ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳ ಪ್ರಕಟಣಾ ಯೋಜನೆಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಯೋಜನೆಯ ಸಮನ್ವಯಕಾರರಾದ ಆತ್ಮೀಯ ಡಾ. ಚಕ್ಕೆರೆ ಶಿವಶಂಕರ್ ಅವರಿಗೆ ನನ್ನ ಕೃತಜ್ಞತೆಗಳು.

– ಡಾ|| ಜಿ.ಆರ್. ತಿಪ್ಪೇಸ್ವಾಮಿ
ರೀಡರ್,
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸ ಗಂಗೋತ್ರಿ, ಮೈಸೂರು – ೬.